ಆ ಕಾಲಘಟ್ಟ ಬಂಗಾಳದ ಮಟ್ಟಿಗೆ ಅದೊಂಥರಾ ವಿಚಿತ್ರ ಪರಿಸ್ಥಿತಿ. ಅತ್ಯಂತ ವಿದ್ಯಾವಂತ, ಬುದ್ಧಿವಂತರಾದ ಜನಸಮುದಾಯ. ಆದರೆ ಅಷ್ಟೇ ಕರ್ಮಠ ಆಚರಣೆಗಳಿಂದ ಜರ್ಜರಿತವಾಗುತ್ತಾ ಇದ್ದ ಸಮುದಾಯ. ಅತ್ತ ಶ್ರೀಮಂತ ಜಮೀನುದಾರರು ಮತ್ತು ಬಡ ಕೂಲಿ ಕಾರ್ಮಿಕರು ಹಾಗೂ ಗೇಣಿದಾರರು. ಧನಾತ್ಮಕ ಮತ್ತು ಋಣಾತ್ಮಕ ಎರಡೂ ಅಂಶಗಳಲ್ಲಿ ಅತಿರೇಕದ ತುದಿಗಳಲ್ಲಿದ್ದ ಸಮಾಜ. ಇದನ್ನು ಸುಧಾರಿಸಲು ದೊಡ್ಡ ಸಂಖ್ಯೆಯಲ್ಲೇ ಹುಟ್ಟಿಬಂದ ಸುಧಾರಣಾವಾದಿಗಳು. ಆಂಗ್ಲ ಶಿಕ್ಷಣದಿಂದ ಬಹಳ ಕ್ಷಿಪ್ರವಾಗಿ ಪ್ರಸರಣಗೊಂಡ ಪಾಶ್ಚಾತ್ಯ ಜ್ಞಾನ. ಆಂಗ್ಲರು ಕೂಡಾ ಪ್ರಭಾವಿತಗೊಳ್ಳುವಷ್ಟರ ಮಟ್ಟಿಗಿನ ಬುದ್ಧಿಮತ್ತೆ. ಹೀಗೆ ಅನೇಕ ಮಹತ್ವದ ಅಂಶಗಳು ಮತ್ತು ವೈರುಧ್ಯಗಳು ಎರಡೂ ಇದ್ದಾಗ ಬಂದ ಆ ಕತೆಗಳು ನಿಜಕ್ಕೂ ಅದ್ಭುತ ಸೃಷ್ಟಿಗಳೇ ಆಗಿವೆ.
ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ
ನನಗೆ ಸಿಕ್ಕ ಬಂಗಾಳಿಗಳು ಮಾತ್ರ ಹಾಗೋ ಅಥವಾ ಬಂಗಾಳಿಗಳೆಲ್ಲಾ ಹಾಗೆಯೋ ಗೊತ್ತಿಲ್ಲ. ನನ್ನ ಬಂಗಾಳಿ ಮಿತ್ರರುಗಳಿಗೆ ಮುಖ್ಯವಾಗಿ ಮೂರು ವಿಷಯಗಳಲ್ಲಿ ತೀರಲಾರದಷ್ಟು ಗೀಳಿರುತ್ತದೆ. ಗೀಳು ಅಂದಾಕ್ಷಣ ಋಣಾತ್ಮಕ ಅರ್ಥದಲ್ಲಿ ನೋಡಬೇಡಿ. ಇದೊಂತರಾ ಒಳ್ಳೆಯ ಗೀಳು. ಒಂದು ಮೀನು, ಇನ್ನೊಂದು ಅಡುಗೆ ಮತ್ತೆ ಓದು. ಇಲ್ಲಿ ಬಂಗಾಳವೆಂದರೆ ನಮ್ಮ ಪಶ್ಚಿಮ ಬಂಗಾಳ ಮಾತ್ರವಲ್ಲ. ಪೂರ್ವ ಬಂಗಾಳ ಅಥವಾ ಬಾಂಗ್ಲಾದೇಶ ಸಹಿತವಾದ ಅಖಂಡ ಬಂಗಾಳ. ಪಶ್ಚಿಮ ಬಂಗಾಳದವರು ಪೂರ್ವದವರನ್ನು ದಡ್ಡರು, ದುಂದುವೆಚ್ಚ ಮಾಡುವವರೆಂದು ಬೈದುಕೊಳ್ಳುವುದು. ಪೂರ್ವ ಬಂಗಾಳಿಗಳು ಪಶ್ಚಿಮದವರನ್ನು ಜಿಪುಣರು ಮತ್ತು ತಾವೇ ಮಹಾ ಬುದ್ಧಿವಂತರಂತೆ ಆಡುತ್ತಾರೆ ಅಂತ ಬೈದುಕೊಳ್ಳುವುದು ಸಾಮಾನ್ಯವಾದರೂ ಇವತ್ತಿಗೂ ಅವರಿಗೆ ತಾವು ಒಂದೇ ಅನ್ನುವ ಭಾವವಿರುವುದನ್ನು ಗಮನಿಸಿದ್ದೇನೆ. ಹೆಚ್ಚುಕಮ್ಮಿ ಒಂದೇ ಸಂಸ್ಕೃತಿಯುಳ್ಳ ಒಂದು ಪ್ರದೇಶ ಎರಡು ದೇಶಗಳ ನಡುವೆ ಹೀಗೆ ಹಂಚಿಹೋಗಿರುವುದು ಬಹಳ ಕಮ್ಮಿ. ಪಂಜಾಬ್ ಉದಾಹರಣೆಯಾಗಿ ಕೊಡಬಹುದಾದರೂ ಈಗಿನ ಪಾಕಿಸ್ತಾನದ ಪಂಜಾಬ್ ಮತ್ತು ನಮ್ಮ ಪಂಜಾಬ್ ನಡುವೆ ಅಷ್ಟು ಗಾಢವಾದ ಸಂಬಂಧ ಕಾಣುತ್ತಿಲ್ಲ.
ಈ ಎರಡೂ ಬಂಗಾಳಿಗಳಲ್ಲೂ ಓದಿನ ಆಸಕ್ತಿಯುಳ್ಳವರು ಬಹಳ. ಅವರಲ್ಲಿ ನಿಮ್ಮಿಷ್ಟದ ಬರಹಗಾರ ಯಾರೆಂದು ಕೇಳಿದರೆ ಹೆಚ್ಚಿನವರ ಟಾಗೋರ್ (ಅವರದೇ ಶೈಲಿಯಲ್ಲೆ ಹೇಳಬೇಕೆಂದರೆ ‘ರಬೀಂದ್ರೋನಾಥ್ ಟಾಗೋರ್) ಅವರ ಕಾಲದಿಂದ ಹೇಳಲು ಮೊದಲ್ಗೊಳ್ಳುತ್ತಾರೆ. ನಾನು ಕೇಳಿದ ಹೆಚ್ಚಿನವರು ಅವರ ನೆಚ್ಚಿನ ಬರಹಗಾರರಲ್ಲಿ ಟಾಗೋರ್ ಹೆಸರನ್ನು ಹೇಳದೇ ಹೋಗಿಲ್ಲ. ಅವಿಭಜಿತ ಬಂಗಾಳದಲ್ಲಿ ಇಂದಿಗೂ ಕೂಡಾ ಟಾಗೋರ್ ಪ್ರಭಾವ ಎಷ್ಟು ದಟ್ಟವಾಗಿದೆ ಎಂದು ಈ ಮೂಲಕ ತಿಳಿಯಬಹುದು. ದುರದೃಷ್ಟವಶಾತ್ ನನಗಿನ್ನೂ ಬಂಗಾಳ ನೋಡುವ ಮತ್ತು ಅಲ್ಲಿ ತಿರುಗುವ ಅವಕಾಶ ಸಿಕ್ಕಿಲ್ಲ. ಅದಕ್ಕೆ ಅಲ್ಲಿನ ಬಗ್ಗೆ ನನ್ನ ತಿಳುವಳಿಕೆ ಬಹಳ ಸೀಮಿತ.
ಟಾಗೋರ್ ಅವರಿಗೆ ಕರ್ನಾಟಕದ ಸಂಪರ್ಕವಿದ್ದ ಬಗ್ಗೆ ಎಷ್ಟು ಜನಕ್ಕೆ ತಿಳಿದಿದೆಯೋ ಗೊತ್ತಿಲ್ಲ. ಕಾರವಾರದಲ್ಲಿ ಟಾಗೋರ್ ಅವರ ಹೆಸರಿನ ಕಡಲತೀರವಿದೆ. ಅದು ಬರೀ ಅವರ ನೆನಪಿಗೆ ಇಟ್ಟಿದ್ದಲ್ಲ. ಅವರು ಅವರ ಹದಿಹರೆಯದಲ್ಲಿ ಕಾರವಾರದಲ್ಲಿ ಕೆಲ ಸಮಯ ಕಳೆದಿದ್ದರು. ಅವರ ಅಣ್ಣ ಸತ್ಯೇಂದ್ರನಾಥ ಟಾಗೋರ್ ಕಾರವಾರದ ಜಿಲ್ಲಾ ನ್ಯಾಯಾಧೀಶರಾಗಿದ್ದ ಸಂದರ್ಭದಲ್ಲಿ ರವೀಂದ್ರನಾಥ ಟಾಗೋರ್ ಇಲ್ಲಿ ಕೆಲ ಸಮಯ ತಂಗಿದ್ದರು. ಆಗ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿದ್ದರು. ಅವರ ಕೆಲ ಮಹತ್ವದ ಕೃತಿಗಳಿಗೆ ಇದು ಸ್ಪೂರ್ತಿಯನ್ನು ಕೊಟ್ಟಿತು ಎಂಬುದಾಗಿ ಓದಿದ್ದೇನೆ.
ಹೆಚ್ಚಿನವರಿಗೆ ತಿಳಿದಿರುವಂತೆ ನೋಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯರೆಂದರೆ ಇವರೇ. 1913ರಲ್ಲಿ ತಮ್ಮ ಗೀತಾಂಜಲಿ ಅನ್ನುವ ಕೃತಿಗೆ ನೋಬೆಲ್ ಪ್ರಶಸ್ತಿ ಪಡೆದರು. ಹಾಗೆಯೇ ನಮ್ಮ ಮತ್ತು ಬಾಂಗ್ಲಾದೇಶಗಳೆರಡರ ರಾಷ್ಟ್ರಗೀತೆಗಳು ಕೂಡಾ ಇವರ ರಚನೆಗಳೇ, ಇದು ಎರಡು ದೇಶಗಳ ರಾಷ್ಟ್ರಗೀತೆಗಳ ಒಬ್ಬರೇ ಬರೆದಿರುವ ಏಕೈಕ ಉದಾಹರಣೆ (ಶ್ರೀಲಂಕಾದ ರಾಷ್ಟ್ರಗೀತೆಯಾದ ‘ಅಪ ಶ್ರೀಲಂಕಾ ಮಾತಾ’ ಬರೆದ ಆನಂದ ಸಮರಕೂನ್ ಅವರು ಟಾಗೋರರಿಂದ ಬಹಳ ಆಳವಾದ ಪ್ರಭಾವಕ್ಕೆ ಒಳಗಾಗಿದ್ದರು ಅನ್ನುವ ಅಭಿಪ್ರಾಯವಿದೆ). ನನಗೆ ಅವರ ಕೃತಿಗಳನ್ನು ಓದುವ ಆಸೆಯಿದ್ದರೂ ಕೂಡಾ ಎಲ್ಲೂ ಸಿಕ್ಕಿರಲಿಲ್ಲ. ಅವರ ಪ್ರಸಿದ್ಧ ನಾಟಕವೊಂದನ್ನು ‘ಪಂಜರಶಾಲೆ’ ಅನ್ನುವ ಹೆಸರಿನಲ್ಲಿ ಬಿ.ವಿ. ಕಾರಂತರು ಅನುವಾದಿಸಿ ನಾಟಕ ಆಡಿಸಿದ್ದರು. ಅದನ್ನು ನಾನು ಓದಿದ ಮೂಡುಬಿದಿರೆಯ ಆಳ್ವಾಸಿನ ಪಿಯುಸಿ ವಿದ್ಯಾರ್ಥಿಗಳ ಮೂಲಕ ಜೀವನ್ ರಾಮ್ ಅವರು ನಿರ್ದೇಶಿಸಿ ರಂಗಕ್ಕೆ ತಂದಿದ್ದರು. ಟಾಗೋರ್ ಅವರ ಸಾಮರ್ಥ್ಯದ ಪರಿಚಯ ಗೊತ್ತಾಗಲು ಅದು ಸಾಕಾಗಿತ್ತು. ಇತ್ತೀಚೆಗೆ ಮೈಸೂರಿನ ಅರಿವು ಶಾಲೆಗೆ ಹೋದಾಗ ಅಲ್ಲಿನ ಮಕ್ಕಳು ಅದನ್ನು ಓದುತ್ತಿದ್ದುದನ್ನು ನೋಡಿ ಖುಷಿಪಟ್ಟಿದ್ದೆ. ಅದು ಬಿಟ್ಟರೆ, ಎರಡು ವರುಷಗಳ ಹಿಂದೆ ಮೈಸೂರಿನ ಸಪ್ನಾಗೆ ಹೋದಾಗ ಅವರ ‘The Postmaster’ Selected short storiesʼ ಅನ್ನುವ ಕಥಾ ಸಂಕಲನ ಕಂಡಿತು. ಟಾಗೋರರು ಬಂಗಾಳಿಯಲ್ಲಿ ಬರೆದ ಈ ಕೃತಿಯನ್ನು ವಿಲಿಯಂ ರೇಡೀಸ್ ಅವರು ಆಂಗ್ಲಾನುವಾದ ಮಾಡಿದ್ದಾರೆ.
ಎಷ್ಟೇ ಅದ್ಭುತವಾಗಿದ್ದರೂ ನನಗೆ ಇಂಗ್ಲಿಷ್ ಪುಸ್ತಕಗಳ ಓದು ಕನ್ನಡ ಪುಸ್ತಕಗಳನ್ನು ಓದಿದಷ್ಟು ವೇಗವಾಗಿ ಸಾಗುವುದಿಲ್ಲ. ಅದಕ್ಕೆ ಅಲ್ಲಿರುವ 3೦ ಕತೆಗಳಲ್ಲಿ ಅರ್ಧದಷ್ಟು ಕಥೆಗಳನ್ನು ಮಾತ್ರ ಓದಿಯಾಗಿದ್ದು. ಹಾಗಾಗಲು ನನ್ನ ಆಲಸಿತನವೂ ಇಲ್ಲಿ ತಕ್ಕಮಟ್ಟಿಗೆ ಕಾರಣವೆನ್ನುವುದು ನಿಜವಾದರೂ ಕೂಡಾ ಅವರ ಒಂದೊಂದು ಕತೆಯನ್ನು ಓದಿದರೆ ಸುಧಾರಿಸಿಕೊಳ್ಳಲು ಎರಡು ದಿನ ಬೇಕು ಅನ್ನುವುದು ಕೂಡಾ ಸತ್ಯ.
ನಾನು ಕೇಳಿದ ಹೆಚ್ಚಿನವರು ಅವರ ನೆಚ್ಚಿನ ಬರಹಗಾರರಲ್ಲಿ ಟಾಗೋರ್ ಹೆಸರನ್ನು ಹೇಳದೇ ಹೋಗಿಲ್ಲ. ಅವಿಭಜಿತ ಬಂಗಾಳದಲ್ಲಿ ಇಂದಿಗೂ ಕೂಡಾ ಟಾಗೋರ್ ಪ್ರಭಾವ ಎಷ್ಟು ದಟ್ಟವಾಗಿದೆ ಎಂದು ಈ ಮೂಲಕ ತಿಳಿಯಬಹುದು. ದುರದೃಷ್ಟವಶಾತ್ ನನಗಿನ್ನೂ ಬಂಗಾಳ ನೋಡುವ ಮತ್ತು ಅಲ್ಲಿ ತಿರುಗುವ ಅವಕಾಶ ಸಿಕ್ಕಿಲ್ಲ. ಅದಕ್ಕೆ ಅಲ್ಲಿನ ಬಗ್ಗೆ ನನ್ನ ತಿಳುವಳಿಕೆ ಬಹಳ ಸೀಮಿತ.
ಅವರು ಬಂಗಾಳಿ ಜನಮಾನಸದಲ್ಲಿ ಮಾಡಿರುವ ಪ್ರಭಾವ ಸುಮ್ಮನೇ ಬಂದಿದ್ದಲ್ಲ. ಅವರ ಒಂದೊಂದು ಕತೆಗಳೂ ಒಂದೊಂದು ಕಾದಂಬರಿಗಳಿಗಾಗುವಷ್ಟು ವಿಷಯವನ್ನು ತುಂಬಿಕೊಂಡಿವೆ. ಒಂದೊಂದು ಸಾಲುಗಳು ಕೂಡಾ ಕತೆಯೊಳಗೆ ಮತ್ತಷ್ಟು ಆಳಕ್ಕೆ ಇಳಿಯುವಂತೆ ಪ್ರೇರೇಪಿಸುತ್ತವೆ. ಪಾತ್ರಗಳ ಮಧ್ಯೆ ನಾವು ಕಳೆದು ಹೋಗುವಂತೆ ಮಾಡುವ ಸಾಮರ್ಥ್ಯ ಅವರ ಕತೆಗಳಿಗೆ ಇವೆ. ಆ ಕಾಲದ ಬಂಗಾಳಿ ಕುಟುಂಬಗಳ ವಿಶೇಷವಾಗಿ ಬ್ರಾಹ್ಮಣ ಅಥವಾ ಕಾಯಸ್ಥ ಸಮುದಾಯಗಳ ಮಧ್ಯಮ/ಮೇಲ್ಮಧ್ಯಮ ವರ್ಗದ ಜನಜೀವನವನ್ನು ಬಹಳ ಆಳವಾಗಿ ವಿಶ್ಲೇಷಿಸುತ್ತಾರೆ.
ಆ ಕಾಲಘಟ್ಟ ಬಂಗಾಳದ ಮಟ್ಟಿಗೆ ಅದೊಂಥರಾ ವಿಚಿತ್ರ ಪರಿಸ್ಥಿತಿ. ಅತ್ಯಂತ ವಿದ್ಯಾವಂತ, ಬುದ್ಧಿವಂತರಾದ ಜನಸಮುದಾಯ. ಆದರೆ ಅಷ್ಟೇ ಕರ್ಮಠ ಆಚರಣೆಗಳಿಂದ ಜರ್ಜರಿತವಾಗುತ್ತಾ ಇದ್ದ ಸಮುದಾಯ. ಅತ್ತ ಶ್ರೀಮಂತ ಜಮೀನುದಾರರು ಮತ್ತು ಬಡ ಕೂಲಿ ಕಾರ್ಮಿಕರು ಹಾಗೂ ಗೇಣಿದಾರರು. ಧನಾತ್ಮಕ ಮತ್ತು ಋಣಾತ್ಮಕ ಎರಡೂ ಅಂಶಗಳಲ್ಲಿ ಅತಿರೇಕದ ತುದಿಗಳಲ್ಲಿದ್ದ ಸಮಾಜ. ಇದನ್ನು ಸುಧಾರಿಸಲು ದೊಡ್ಡ ಸಂಖ್ಯೆಯಲ್ಲೇ ಹುಟ್ಟಿಬಂದ ಸುಧಾರಣಾವಾದಿಗಳು. ಈ ಮಧ್ಯೆ ಬ್ರಿಟೀಷರ ಆಗಮನದಿಂದ ಪಾಶ್ಚಾತ್ಯ ಪ್ರಪಂಚದ ಸಂಪರ್ಕವನ್ನು ಮೊಟ್ಟಮೊದಲಿಗೆ ಪೂರ್ಣ ಪ್ರಮಾಣದಲ್ಲಿ ಪಡೆದುಕೊಂಡ ಸೌಲಭ್ಯ. ಆಂಗ್ಲ ಶಿಕ್ಷಣದಿಂದ ಬಹಳ ಕ್ಷಿಪ್ರವಾಗಿ ಪ್ರಸರಣಗೊಂಡ ಪಾಶ್ಚಾತ್ಯ ಜ್ಞಾನ. ಆಂಗ್ಲರು ಕೂಡಾ ಪ್ರಭಾವಿತಗೊಳ್ಳುವಷ್ಟರ ಮಟ್ಟಿಗಿನ ಬುದ್ಧಿಮತ್ತೆ. ಹೀಗೆ ಅನೇಕ ಮಹತ್ವದ ಅಂಶಗಳು ಮತ್ತು ವೈರುಧ್ಯಗಳು ಎರಡೂ ಇದ್ದಾಗ ಬಂದ ಆ ಕತೆಗಳು ನಿಜಕ್ಕೂ ಅದ್ಭುತ ಸೃಷ್ಟಿಗಳೇ ಆಗಿವೆ.
ಮೊದಲ ಕತೆಯಾದ ‘The Living and the Dead’ ತೆಗೆದುಕೊಳ್ಳಿ. ಜಮೀನ್ದಾರನೊಬ್ಬನ ವಿಧವೆ ನಾದಿನಿ (ಅಣ್ಣನ ಅಥವಾ ತಮ್ಮನ ಹೆಂಡತಿ). ಚಿಕ್ಕಮ್ಮನ್ನು ತಾಯಿಗಿಂತ ಹಚ್ಚಿಕೊಂಡ ಜಮೀನ್ದಾರನ ಮಗ. ಒಂದು ದಿನ ಯಾವುದೋ ಕಾರಣಕ್ಕೆ ಹೃದಯಸ್ಥಂಬನವಾಗಿ ಮನೆಯವರು ಸತ್ತರೆಂದೇ ತಿಳಿಯುತ್ತಾರೆ. ಅವಳ ಶವಸಂಸ್ಕಾರಕ್ಕೆ ನಾಲ್ಕು ಜನರನ್ನು ಜಮೀನುದಾರ ಕಳಿಸುತ್ತಾನೆ. ಅವರೆಲ್ಲೋ ಆಚೆ ಹೋದಾಗ ಸ್ಮಶಾನದಲ್ಲಿ ಆಕೆಗೆ ಪ್ರಜ್ಞೆ ಬಂದು ತಾನು ಸತ್ತು ಭೂತವಾಗಿದ್ದೇನೆಂದೇ ತಿಳಿಯುತ್ತಾಳೆ. ಕತೆ ಸಾಗುತ್ತಾ ಅವಳಿಗೊಬ್ಬ ದಯಾಳು ವ್ಯಕ್ತಿ ಸಿಗುತ್ತಾನೆ. ಈ ಕಡೆ ಅವಳನ್ನು ಹಚ್ಚಿಕೊಂಡ ಬಾವನ ಮಗ ಅವಳ ನೆನಪಿನಲ್ಲೇ ಕೊರಗುತ್ತಿರುತ್ತಾನೆ. ಕೊನೆಗೆ ಅವಳು ತನ್ನ ಮನೆಗೆ ಹೋದಾಗ ಅವಳನ್ನು ಭೂತವೆಂದೇ ತಿಳಿಯುತ್ತಾರೆ. ಅವಳೆಷ್ಟು ಹೇಳಿದರೂ ನಂಬುವ ಸ್ಥಿತಿಯಲ್ಲಿ ಇರುವುದಿಲ್ಲ. ಆಮೇಲೆ ಅವಳು ಇನ್ನೊಮ್ಮೆ ಸತ್ತೇ ಬದುಕಿದ್ದೆನೆಂದು ತೋರಿಸುವಂತಾಗುತ್ತದೆ. ಇದು ಬಹಳ ಸ್ಥೂಲವಾಗಿ ಹೇಳಿದ್ದು. ನಾನು ಇದನ್ನು ಸರಿಯಾಗಿ ನರೇಟ್ ಮಾಡಿರದಿರಬಹುದು. ಆದರೆ ಕತೆಯನ್ನು ಓದಿದಾಗ ಬಹಳ ಕಾಡುತ್ತದೆ. ಒಂತರಾ ವಿಚಿತ್ರವಾದ ಮೌನಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಕನಸಿನಲ್ಲೂ ಪಾತ್ರಗಳು ಬಂದು ಕಾಡುವಂತಾಗುತ್ತದೆ.
ಈ ಕತೆ ಮಾತ್ರವಲ್ಲ ಈ ಪುಸ್ತಕದಲ್ಲಿ ನಾನು ಓದಿದ ಹದಿನೇಳು ಕತೆಗಳಲ್ಲಿ ಹೆಚ್ಚಿನವು ಗಾಢವಾದ ವಿಷಾದದ ಭಾವವನ್ನು ಹೊಂದಿವೆ ಮತ್ತು ವಿಷಾದದಲ್ಲೇ ಕೊನೆಯಾಗುತ್ತವೆ. ಒಮ್ಮೊಮ್ಮೆಯಂತೂ ಯಾಕಾದರೂ ಈ ಕತೆ ಓದಿದೆ ನಾನು? ಅನ್ನುವಷ್ಟು ರೇಜಿಗೆ ಹುಟ್ಟಿಸುತ್ತದೆ. ಆದರೆ ಓದಿ ದಿನ ಕಳೆದಮೇಲೆ ಮತ್ತೊಂದು ಕತೆ ಓದಬೇಕೆಂಬ ತುಡಿತ ಉಂಟಾಗುತ್ತದೆ. ಅಪರೂಪಕ್ಕೆ ಎಲ್ಲಾದರೂ ಸುಖಾಂತ್ಯವುಳ್ಳ ಕತೆ ಬಂದರೆ ಅಬ್ಬಾ ಅನ್ನಿಸುತ್ತದೆ. ಸಾಹಿತ್ಯದಲ್ಲಿ ಅಷ್ಟೇನೂ ಆಸಕ್ತಿಯಿಲ್ಲದ ದೀಪ್ತಿಗೆ ಒಮ್ಮೆ ಈ ಪುಸ್ತಕ ಓದೆಂದು ಸ್ವಲ್ಪ ಒತ್ತಾಯಪೂರ್ವಕವಾಗಿಯೇ ಕೊಟ್ಟಿದ್ದೆ. ಮೂರ್ನಾಲ್ಕು ಕತೆಗಳನ್ನು ಓದಿದ ಅವಳು ನನ್ನ ಮನಸ್ಸು ಹುಚ್ಚು ಹಿಡಿಯುವಂತೆ ಆಗುತ್ತದೆ ಈ ಕತೆಗಳ ಓದಿದರೆ, ನನಗಿನ್ನು ಇದನ್ನು ಓದಲು ಸಾಧ್ಯವೇ ಇಲ್ಲ ಎಂದಳು. ನಾನು ಹದಿನೇಳು ಕತೆಗಳ ಓದಿ ಮತ್ತೆ ಮುಂದುವರೆಸಲು ಮರೆತೇಬಿಟ್ಟಿದ್ದೆ. ಆದರೆ ಈ ಪಾಕ್ಷಿಕದಲ್ಲಿ ಯಾವ ಪುಸ್ತಕದ ಬಗ್ಗೆ ಬರೆಯಲಿ ಎಂದು ಯೋಚಿಸುತ್ತಾ ಇರುವಾಗ ಇದು ಕಂಡಿತು. ಪೂರ್ಣ ಓದುತ್ತೇನೆ ಅನ್ನುವಲ್ಲಿ ಯಾವ ಅನುಮಾನವೂ ಇಲ್ಲ. ವಾರಕ್ಕೊಂದಾದರೂ ಕತೆ ಮುಗಿಸಬೇಕೆಂದಿದ್ದೇನೆ.
ಈ ಪುಸ್ತಕದಲ್ಲಿ ಬರುವ ಎಲ್ಲಾ ಕತೆಗಳನ್ನು ಟಾಗೋರರು ಬರೆದಿದ್ದು ೧೮೯೦ ರ ದಶಕದಲ್ಲಿ. ಅವರು ಬರೆದ ಸುಮಾರು ೯೦ ಕತೆಗಳಲ್ಲಿ ೩೦ ಆಯ್ದ ಕತೆಗಳು ಈ ಸಂಕಲನದಲ್ಲಿವೆ. ಪ್ರಸಿದ್ಧ ಪ್ರಕಾಶನ ಸಂಸ್ಥೆ ಪೆಂಗ್ವಿನ್ ಇದನ್ನು ಪ್ರಕಟಿಸಿದೆ. ಬೆಲೆ ನಾನು ಕೊಂಡಾಗ ೩೫೦ ರೂಪಾಯಿಗಳು. ಖಂಡಿತವಾಗಿಯೂ ಸಂಗ್ರಹಯೋಗ್ಯವಾದ ಪುಸ್ತಕ.
ಟಾಗೋರರ ಎಷ್ಟು ಕೃತಿಗಳು ಕನ್ನಡಕ್ಕೆ ಬಂದಿವೆಯೋ ಗೊತ್ತಿಲ್ಲ. ಅವರ ಬಂಗಾಳಿ ಕೃತಿಗಳ ಆಂಗ್ಲಾನುವಾದದ ಕನ್ನಡ ಅನುವಾದ ಮಾಡೋದಕ್ಕಿಂತ ನೇರವಾಗಿ ಬಂಗಾಳಿಯಿಂದಲೇ ಕನ್ನಡಕ್ಕೆ ತಂದರೆ ಚನ್ನಾಗಿತ್ತು. ಎ ಆರ್ ಕೃಷ್ಣಶಾಸ್ತ್ರಿಯವರು ಕೆಲ ಕೃತಿಗಳನ್ನು ನೇರವಾಗಿ ಬಂಗಾಳಿಯಿಂದ ಅನುವಾದಿಸಿದ್ದಾರೆ ಎಂದು ಕೇಳಿದ್ದೆ. ಆದರೆ ಟಾಗೋರರ ಕೃತಿಗಳ ಅನುವಾದಿಸಿದ್ದಾರೋ ಅಂತ ಗೊತ್ತಿಲ್ಲ. ಬಂಗಾಳಿಯಿಂದ ನೇರವಾಗಿ ಕನ್ನಡಾನುವಾದಗೊಂಡ ಕೃತಿಗಳಿಗಳ ಬಗ್ಗೆ ಗೊತ್ತಿದ್ದರೆ ಓದುಗರು ತಿಳಿಯಪಡಿಸಿ.
ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡು. ಸದ್ಯ ಮೈಸೂರಿನಲ್ಲಿ ವಾಸ. ಓದು, ತಿರುಗಾಟ, ಚದುರಂಗ ಇತ್ಯಾದಿ ಇಷ್ಟದ ಆಸಕ್ತಿಗಳು. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.