ಅಮೆರಿಕಕ್ಕೆ ಹೋಲಿಸಿದರೆ ಅಷ್ಟೊಂದು ಸಂಪತ್ತು, ಸಿರಿತನವಿಲ್ಲದಿದ್ದರೂ ಅದೇ ಮಟ್ಟದ ಶ್ರದ್ಧೆ ಮತ್ತು ಆಸಕ್ತಿಗಳನ್ನು ಇಟ್ಟುಕೊಂಡೆ ಬ್ರಿಟನ್ನಿನ ಕನ್ನಡ ಸಂಘಗಳು ಭಾರತೀಯ ಹಬ್ಬಗಳ ಜೊತೆ ಭಾಷೆ-ಸಂಸ್ಕೃತಿಯನ್ನೂ ಸೇರಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಿ ಮಿಂಚುತ್ತವೆ. ಈ ಹಿರಿಯಕ್ಕಂದಿರ ಹಿಂದೆ ಸೇರುವುದು ಮತ್ತೆಲ್ಲಾ ದೇಶಗಳ ಕನ್ನಡ ಸಂಘಗಳು ಮತ್ತು ಅವುಗಳ ಆಚರಣೆಗಳು. ಈ ದೇಶಗಳಲ್ಲಿ ಇರುವ ಕನ್ನಡಿಗರ ಸಂಖ್ಯೆಯೂ ಕಡಿಮೆ. ತಂತಮ್ಮ ಮಟ್ಟದಲ್ಲಿ ಅವು ಆಚರಿಸುವ ಕನ್ನಡ ಸಮಾರಂಭಗಳು ಚಿಕ್ಕ ಮತ್ತು ಚೊಕ್ಕ, ಪ್ರಶಂಸನೀಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ

ಪ್ರಿಯ ಓದುಗರೆ,

ಏಪ್ರಿಲ್ ತಿಂಗಳು ಬಂದಿದೆ. ಭಾರತದ ಬೇಸಿಗೆಯಲ್ಲಿ ವಸಂತ ಋತುವಿನ ಚೆಲ್ಲಾಟ ಮುಂದುವರೆದಿದೆ. ಯುಗಾದಿ ಹಬ್ಬಕ್ಕೆ ಕರೆಯೋಲೆಯದು. ನಮ್ಮ ಆಸ್ಟ್ರೇಲಿಯಾದಲ್ಲಿ ಶರತ್ಕಾಲದ ತಂಪು ಹೆಚ್ಚುತ್ತಿದೆ. ಈಸ್ಟರ್ ಹಬ್ಬವು ಮುಗಿದಿದ್ದರೂ ಹಾಟ್ ಕ್ರಾಸ್ ಬನ್ಸ್ ಜೊತೆಗೆ ಚಾಕೊಲೇಟ್ ತಿನ್ನುವುದು ಕಡಿಮೆಯಾಗಿಲ್ಲ. ಭೂಮಧ್ಯೆರೇಖೆಯ ಆಚೆ ಕಡೆ ಇರುವ ಅಂದರೆ ಉತ್ತರ ಧ್ರುವದಲ್ಲಿ ಪವಡಿಸಿರುವ ಭಾರತದ ತವರಿನಲ್ಲಿ ಹೊಸವರ್ಷದ ಆಗಮನಕ್ಕೆ ತಯ್ಯಾರಿ ನಡೆದಿದ್ದರೆ ಈಚೆ ಕಡೆ ಇರುವ ದಕ್ಷಿಣ ಧ್ರುವದ ಈ ದೇಶದಲ್ಲಿ ನಾವು ಮುಂದಿನ ತಿಂಗಳು ಕಾಲಿಡಲಿರುವ ಚಳಿಗಾಲವನ್ನು ಕುರಿತು ಮಾತನಾಡುತ್ತಿದ್ದೀವಿ. ಆದರೇನು, ಭಾರತೀಯರಲ್ಲಿ ಅದರಲ್ಲೂ ಕನ್ನಡಿಗರಲ್ಲಿ ಯುಗಾದಿಯ ಉತ್ಸಾಹಕ್ಕೇನೂ ಕುಂದಿಲ್ಲ. ಇದೊಂದು ತರಹದ ವಿರುದ್ಧ ಧ್ರುವಗಳ ನಡುವೆ ಇರುವ ಚುಂಬಕ ಸೆಳೆತದಂತೆ. ಉತ್ತರದಿಂದ ದಕ್ಷಿಣಕ್ಕೆ ಹರಿದು ಬರುತ್ತಿರುವ ಜೀವಧಾರೆಯಂತೆ ನಮ್ಮನ್ನೆಲ್ಲಾ ಬಂಧಿಸಿರುವ ಎಂದೆಂದಿಗೂ ಇರುವ ಮೋಡಿ. ಈ ಮಾತು ಹೇಳುತ್ತಿರುವಾಗ ಈ ಮಹನೀಯರನ್ನು ಸ್ಮರಿಸದೆ ಇರಲಾದೀತೆ?! ನಮ್ಮ ನೆಚ್ಚಿನ ವರಕವಿ ದ.ರಾ.ಬೇಂದ್ರೆಯವರ ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಹಾಡು ಮರೆಯುವುದುಂಟೇ!

ಅದರ ಜೊತೆಗೇ ಈ ಕವನವೂ ನನ್ನನ್ನು ಕಾಡುತ್ತಿದೆ. ಅಚ್ಚಳಿಯದ, ಅಜರಾಮರ ಕನ್ನಡ ಗಾಯಕರಾದ ನಮ್ಮ ಪಿ.ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ ಅವರು ‘ಶರಪಂಜರ’ ಚಲನಚಿತ್ರಕ್ಕೆಂದು ಹಾಡಿದ ಈ ಕವನವು ಕಿವಿಯಲ್ಲಿ ಗುಣಗುಣಿಸುತ್ತಿದೆ.

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ…
ಭೂವನ ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸೆಯಿಸಿತು …

ಹೀಗೊಂದು ಚುಂಬಕ ಗಾಳಿಯು ಕೊಡುವ ಚೈತನ್ಯದಿಂದಲೇ ತವರನ್ನು ಬಿಟ್ಟು ಪರದೇಶದಲ್ಲಿ ಬದುಕುತ್ತಿರುವ ಮೊದಲ ಪೀಳಿಗೆಯ ಪರದೇಶಿಗಳು ಉಸಿರಾಡುತ್ತಿರುವುದು. ಆ ಧ್ರುವದಿಂದ ಈ ಧ್ರುವಕ್ಕೆ ಹರಿಯುತ್ತಿರುವ ಜೀವನೋತ್ಸಾಹದ ಒಸಗೆ ಚಿಮ್ಮುತ್ತಿದೆ. ತವರಿನ ಪ್ರತಿ ಹಬ್ಬವನ್ನೂ ನೆನೆನೆನೆದು ಮನವು ಪುಳಕಿಸಿ ತಮ್ಮವರ ನೆನಪುಗಳು ಮರಳಿಸಿ ಪರದೇಶದಲ್ಲಿ ಅವು ಕೋಟಿ ಕೋಟಿ ಹೊಸ ಬಾಂಧವ್ಯಗಳನ್ನು ಹುಟ್ಟುಹಾಕುತ್ತವೆ. ಇದನ್ನು ಸಾದೃತ ಪಡಿಸುವಂತೆ ಭಾರತದಿಂದ ವಲಸೆ ಬಂದು ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕನ್ನಡಿಗರು ಮುಂದಿನ ವಾರಾಂತ್ಯದಲ್ಲಿ ತಂತಮ್ಮ ರಾಜ್ಯಗಳಲ್ಲಿ, ಪ್ರಾಂತ್ಯಗಳಲ್ಲಿ ಇರುವ ಕನ್ನಡ ಸಂಘಗಳ ಮೂಲಕ ಯುಗಾದಿ ಸ್ನೇಹಸಮ್ಮೇಳನವನ್ನು ಆಚರಿಸುತ್ತಿದ್ದಾರೆ.

ಹೀಗೊಂದು ಸಾಂಘಿಕ ಆಚರಣೆಯ ಸಂದರ್ಭವನ್ನು ಆಯೋಜಿಸಬೇಕೆಂದರೆ ಅದಕ್ಕಾಗಿ ತಿಂಗಳಾನುಗಟ್ಟಲೆ ಮೊದಲೇ ಪೂರ್ವಸಿದ್ಧತೆ ನಡೆಸಬೇಕಾಗುತ್ತದೆ. ಆಚರಣೆಯ ಸ್ಥಳವನ್ನು ಗೊತ್ತುಮಾಡಿಕೊಂಡು ಬಾಡಿಗೆ ಕೊಟ್ಟು, ಅತಿಥಿಗಳನ್ನು ಆಹ್ವಾನಿಸಿ, ಸಂಘದ ಸದಸ್ಯರು ಬರಲು ಅವರನ್ನು ಪ್ರೋತ್ಸಾಹಿಸಿ, ಕಾರ್ಯಕ್ರಮಗಳನ್ನು ನಿಗದಿಮಾಡಿ, ಮತ್ತೆಲ್ಲಾ ನಡಾವಳಿಗಳನ್ನು ಆಲೋಚಿಸಬೇಕು. ಅದರ ಜೊತೆಗೆ ಊಟವೂ ಸೇರಿರಬೇಕಲ್ಲವೇ. ಇತ್ತೀಚೆಗೆ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಅದರಲ್ಲೂ ಕರ್ನಾಟಕದ ಬಾಳೆಎಲೆ ಊಟವು ಪ್ರಸಿದ್ಧವಾಗುತ್ತಿದೆ. ಸಿಡ್ನಿ ಮತ್ತು ಮೆಲ್ಬೋರ್ನ್ ಕನ್ನಡ ಸಂಘಗಳು ಅದನ್ನು ಪ್ರಚಾರ ಮಾಡಿದರೆ, ಅಲ್ಲಲ್ಲಿ ಮತ್ತಿತರ ಕನ್ನಡ ಸಂಘಗಳು ಒಬ್ಬಟ್ಟಿನೂಟದ ಆಕರ್ಷಣೆಯನ್ನು ಒಡ್ಡುತ್ತವೆ.

ಆಸ್ಟ್ರೇಲಿಯಾದ ಶರತ್ಕಾಲದಲ್ಲಿ ವರಕವಿ ಬೇಂದ್ರೆಯವರ ಕವಿವಾಣಿಯಂತೆ ಭೂವನ ಕುಸುಮಿಸುವುದೇನೋ ಸ್ವಲ್ಪ ಕಡಿಮೆಯೇ! ಆದರೆ, ಆಗಲೇ ಹೇಳಿದಂತೆ ಬಾಳೆಎಲೆ ಊಟ, ಒಬ್ಬಟ್ಟಿನೂಟ ಅಂದರೆ ತವರಿನ ಕೋಟಿ ನೆನಪುಗಳು ಮರಳಿಸಿ, ಮೈಮನಗಳನ್ನು ಪುಳಕಿಸಿ ಬಾಯಲ್ಲಿ ಲಾಲಾರಸ ಉಕ್ಕಿ ಕೋಟಿ ಮಧುರ ಭಾವನೆಗಳು ಹೊಸೆಯುತ್ತವೆ. ಇದಕ್ಕೆ ಇಂಬು ಕೊಡುವಂತೆ ಅಮೆರಿಕ, ಕೆನಡಾ, ಬ್ರಿಟನ್, ಯೂರೋಪಿಯನ್ ದೇಶಗಳಲ್ಲಿ ನೆಲೆಸಿರುವ ತಮ್ಮ ಒಡಹುಟ್ಟಿದವರು, ಬಂಧುಬಾಂಧವರ ಜೊತೆ ಅವರಲ್ಲಿ ಯುಗಾದಿ ಆಚರಣೆ ಹೇಗೆ ನಡೆದಿದೆ ಎನ್ನುವ ಚರ್ಚೆ ಸಾಗುತ್ತದೆ.

ಕನ್ನಡ ಭಾಷೆ, ಸಂಸ್ಕೃತಿಗಳ ಆಚರಣೆಗಳು ಅತ್ಯಂತ ವಿಜೃಂಭಣೆಯಿಂದ ನಡೆಯುವುದು ಅಮೆರಿಕೆಯಲ್ಲಿ. ಅವುಗಳಲ್ಲಿ ‘ಕನಸುಗಳು ನನಸಾಗುವ’ ಅಮೆರಿಕೆಯ ಸಿರಿವಂತ ಕನ್ನಡಿಗರ ಸಂಪತ್ತು, ಶ್ರದ್ಧೆ, ಆಸಕ್ತಿಗಳು, ವೈವಿಧ್ಯತೆಗಳು ಎದ್ದು ಕಾಣುತ್ತದೆ. ಪಟ್ಟಿಯಲ್ಲಿ ನಂತರ ಬರುವುದು ಬ್ರಿಟನ್ ಕನ್ನಡ ಸಂಘಗಳು. ಈ ಎರಡೂ ದೇಶಗಳಲ್ಲಿ ಇರುವ ಕನ್ನಡಿಗರ ಸಂಖ್ಯೆ ಬೇರೆಲ್ಲಾ ದೇಶಗಳಿಗಿಂತಲೂ ಹೆಚ್ಚು. ಏಕೆಂದರೆ ವಿದ್ಯಾವಂತ, ವೃತ್ತಿಪರ ಮತ್ತು ವಿದ್ಯಾರ್ಥಿಗಳಾಗಿ ಹೋಗಿ ಅಲ್ಲಿ ನೆಲೆಸಿದವರು ಬಹಳಷ್ಟು ಜನ.

ಅಮೆರಿಕಕ್ಕೆ ಹೋಲಿಸಿದರೆ ಅಷ್ಟೊಂದು ಸಂಪತ್ತು, ಸಿರಿತನವಿಲ್ಲದಿದ್ದರೂ ಅದೇ ಮಟ್ಟದ ಶ್ರದ್ಧೆ ಮತ್ತು ಆಸಕ್ತಿಗಳನ್ನು ಇಟ್ಟುಕೊಂಡೆ ಬ್ರಿಟನ್ನಿನ ಕನ್ನಡ ಸಂಘಗಳು ಭಾರತೀಯ ಹಬ್ಬಗಳ ಜೊತೆ ಭಾಷೆ-ಸಂಸ್ಕೃತಿಯನ್ನೂ ಸೇರಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಿ ಮಿಂಚುತ್ತವೆ. ಈ ಹಿರಿಯಕ್ಕಂದಿರ ಹಿಂದೆ ಸೇರುವುದು ಮತ್ತೆಲ್ಲಾ ದೇಶಗಳ ಕನ್ನಡ ಸಂಘಗಳು ಮತ್ತು ಅವುಗಳ ಆಚರಣೆಗಳು. ಈ ದೇಶಗಳಲ್ಲಿ ಇರುವ ಕನ್ನಡಿಗರ ಸಂಖ್ಯೆಯೂ ಕಡಿಮೆ. ತಂತಮ್ಮ ಮಟ್ಟದಲ್ಲಿ ಅವು ಆಚರಿಸುವ ಕನ್ನಡ ಸಮಾರಂಭಗಳು ಚಿಕ್ಕ ಮತ್ತು ಚೊಕ್ಕ, ಪ್ರಶಂಸನೀಯ.

ಎಷ್ಟೇ ಚಿಕ್ಕದಾದರೂ, ದೊಡ್ಡದಾದರೂ, ಈ ಕನ್ನಡ ಆಚರಣೆ ಸಂದರ್ಭಗಳಲ್ಲಿ ಹಲವಾರು ತರಹದ ವಿನಿಮಯಗಳು ನಡೆಯುತ್ತವೆ. ಕಿರಿಯ ಪೀಳಿಗೆಯ ಯುವಕಯುವತಿಯರಲ್ಲಿ ಕುಡಿನೋಟ, ಕಿಡಿನೋಟಗಳು ಚೆಲ್ಲಾಡುತ್ತವೆ. ಅಲ್ಲಲ್ಲಿ ವಧುವರ ವಿಷಯಗಳ ಚರ್ಚೆಯಾಗುತ್ತದೆ. ಹೊಸ ಉದ್ಯೋಗಾವಕಾಶಗಳು, ಅವುಗಳ ಸಂಬಳ, ತೆರಿಗೆ, ಪಿಂಚಣಿ, ಆಸ್ತಿಪಾಸ್ತಿ ವಿಷಯ, ಆರೋಗ್ಯ, ಕ್ರಿಕೆಟ್, ಅಲ್ಲಿನ-ಇಲ್ಲಿನ ರಾಜಕೀಯ ಎಲ್ಲವೂ ಮಾತುಕತೆಯಲ್ಲಿ ಸೇರುತ್ತವೆ. ಸಿಕ್ಕಾಪಟ್ಟೆ ಕುತೂಹಲ ತರಿಸುವ ಕನ್ನಡಿಂಗ್ಲೀಷು, ಸಾಂಪ್ರದಾಯಕ ಭಾರತೀಯ ಪೋಷಾಕಿನಲ್ಲಿ ಹೆಣಗಾಡುವವರು, ಗೊಣಗಾಡುವವರು, ಮೆರೆದಾಡುವವರು, ಭಾರತೀಯ ಉಡುಪಿನಲ್ಲಿ ಮುದ್ದಾಗಿ ಕಾಣುವ ಮಕ್ಕಳು ಸ್ಥಳೀಯ ಶುದ್ಧ ಇಂಗ್ಲೀಷಿನಲ್ಲಿ ಮಾತನಾಡುತ್ತಾ … ಎಲ್ಲರೂ ಅವರವರಂತೆ ಸಡಗರಿಸುತ್ತಾರೆ, ಹೇಗೋ ಏನೋ ಪಾಲ್ಗೊಳ್ಳುತ್ತಾರೆ. ಮಾತಾಪಿತೃಗಳಲ್ಲಿ ಕೆಲವರು ಸೊಗಸಾಗಿ ಕನ್ನಡ ಮಾತನಾಡಿದರೆ ಹಲವರು ಅವರ ಮಕ್ಕಳ ರೀತಿ ಕನ್ನಡಿಂಗ್ಲೀಷಿಗೆ ಮೊರೆ ಹೋಗುತ್ತಾರೆ. ಸುಮಾರು ಜನ ಕನ್ನಡವನ್ನು ಓದಲು ತಿಣುಕುತ್ತಾರೆ. ಕನ್ನಡದಲ್ಲಿ ಬರೆಯುವುದು ಮರೆತೇಹೋಗಿದೆ ಎನ್ನುತ್ತಾರೆ. ಹೀಗೆ ಕನ್ನಡದ ಬಹುತನಗಳು ಅರಳುತ್ತಾ ಆಸಕ್ತಿ ಕೆರಳಿಸುತ್ತದೆ.

ಕೆಲ ದೇಶಗಳಲ್ಲಿ ಹೀಗೆ ಬಹುಸಂಸ್ಕೃತಿಗಳ ಹಬ್ಬಗಳನ್ನು ದೊಡ್ಡದಾಗಿ ಒಂದು ಸ್ನೇಹಸಮ್ಮೇಳನವನ್ನಾಗಿ ಆಚರಿಸಲು ಅಲ್ಲಿನ ಸರಕಾರಗಳು ಅನುದಾನವನ್ನು ಅಥವಾ ಸಹಾಯಧನವನ್ನು ಕೊಡುತ್ತವೆ. ಇದಲ್ಲದೆ ಭಾರತದ ರಾಜ್ಯಸರಕಾರಗಳು ಕೂಡ ಸಹಾಯಧನವನ್ನು ಕೊಡುತ್ತವೆ. ಉದಾಹರಣೆಗೆ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡುವ ಧನ ಸಹಾಯವು ಇಲ್ಲಿನ ಕನ್ನಡ ಸಂಘಗಳಿಗೆ ಬಹಳ ಉಪಯೋಗವಾಗುತ್ತದೆ. ಇಂತಹ ಅನುದಾನಗಳು ಮತ್ತು ಸಹಾಯಧನವಿಲ್ಲದೆ ದೊಡ್ಡದಾಗಿ ಸಾಂಘಿಕ ಸಮ್ಮೇಳನಗಳನ್ನು ಆಯೋಜಿಸಲು ಕಷ್ಟವಾಗುತ್ತದೆ.

ಕೆಲವು ವರ್ಷಗಳಿಂದ ಕರ್ನಾಟಕದ ಹೆಸರಾಂತ ದಿನಪತ್ರಿಕೆಗಳು ವಿಶೇಷವಾಗಿ ಹೊರನಾಡಿನ ಭಾರತೀಯರಿಗೆಂದೇ ವಾರಾಂತ್ಯ ಸಂಚಿಕೆಗಳನ್ನು ಪ್ರಕಟಿಸುತ್ತಿವೆ. ಇವು ಸಂಪೂರ್ಣವಾಗಿ ಆನ್ಲೈನ್ ಆಗಿರುವುದರಿಂದ ಭಾರತದಿಂದ ಹೊರಗೆ ವಾಸಿಸುವ ಎನ್ನಾರೈಗಳು ಈ ಆವೃತ್ತಿಗಳಿಗೆ ಬರೆಯಬಹುದು, ಓದಬಹುದು. ಇದರಿಂದಾಗಿರುವ ಬಹು ದೊಡ್ಡ ಪ್ರಯೋಜನವೆಂದರೆ ಇವು ವಿಶ್ವಕನ್ನಡಿಗರನ್ನು ಹತ್ತಿರ ತಂದು ಹೊಸ ಸ್ನೇಹಗಳನ್ನು ಹುಟ್ಟುಹಾಕಿದೆ. ಹೊರನಾಡಿನ ಕನ್ನಡಿಗರು ಮತ್ತು ಭಾರತದವರು ವಿಶ್ವದಾದ್ಯಂತ ಜೀವಂತವಿರುವ ಕನ್ನಡತನವನ್ನು ಕುರಿತು ಅರಿತುಕೊಳ್ಳಬಹುದಾಗಿದೆ. ಹೊರನಾಡಿನ ಕನ್ನಡಿಗರು ಪರಿಚಯಿಸುವ ಪ್ರಾದೇಶಿಕ ಸ್ಥಳಗಳು, ವಿಶೇಷ ಘಟನೆಗಳು, ಅಲ್ಲಿನ ಭಾಷೆ-ಸಂಸ್ಕೃತಿಗಳನ್ನು ಕೂಡ ಅರಿಯಬಹುದಾಗಿದೆ. ಇದು ಒಂದು ರೀತಿಯಲ್ಲಿ ಕಾಸೂ ಖರ್ಚಿಲ್ಲದ ಪ್ರಪಂಚ ಪರ್ಯಟನೆ!

ಶರತ್ಕಾಲವೋ, ವಸಂತವೋ… ಯುಗಾದಿ ಮರಳಿ ಬರುತ್ತಿದೆ. ಹೊಸ ಹರುಷ ತರುತ್ತಿದೆ. ಬೇವು-ಬೆಲ್ಲ ಸಮವಾಗಿರಲಿ. ವರಕವಿ ಬೇಂದ್ರೆಯವರ ಆಶಯದಂತೆ ನಮ್ಮ ಈ ಒಂದೇ ಒಂದು ಜನ್ಮದಲಿ ಮನುಜಪಥದ ಸ್ಮರಣೆಯಾಗಲಿ. ನಿಮಗೆಲ್ಲರಿಗೂ ಯುಗಾದಿಯ ಶುಭಾಶಯಗಳು.