ಅಣೋ, ನನ್ ಪ್ರೀತಿಸ್ತಾ ಇರೋ ಹುಡುಗಿ ತೋರಿಸ್ತೀನಿ.’ ಎಂದು ಫೋನಿನಲ್ಲಿ ವಿ ಪ್ಯಾಟರ್ನ್ ಹಾಕಿ ಲಾಕ್ ತೆರೆದು ‘ಇವಳೇ ನೋಡಣೋ’ ಎಂದು ತೋರಿಸಿದ. ನಾನೆ ಪೂರ್ವಗ್ರಹದಿಂದ  ‘ನಿಜಕ್ಕೂ ಪ್ರೀತಿಸ್ತಾ ಇದ್ಯೇನೋ? ಅಥವಾ ಫ್ರೆಂಡ್ಸ್ ವಿಥ್ ಬೆನಿಫಿಟ್ಸ?’ ಅಂತ ಕೇಳಿದೆ. ಅದಕ್ಕವನು ತುಂಬಾ ಕ್ಲಾರಿಟಿಯಿಂದ ‘ನನಗೆ ಅವಳಿಷ್ಟ. ಅವಳಿಗೆ ನಾನಿಷ್ಟ. ಮದ್ವೆ ಯಾಕಗಬಾರದು? ಆದ್ರೆ ನಾನು ನಮ್ಮನೇಲಿ ಒಪ್ಪಿಸೋ ಜವಾಬ್ದಾರಿಯನ್ನು ಅವಳಿಗೆ ಬಿಟ್ಟುಬಿಟ್ಟಿದೀನಿ. ನಮ್ಮನೇಲಿ ಒಪ್ಪಲಿಲ್ಲ ಅಂದ್ರೆ ಮದ್ವೆ ಆಗಕೆ ಆಗಲ್ಲ ಅಂತಾನೂ ಹೇಳಿದೀನಿ. ಸುಮ್ನೆ ಮನೇಲಿ ಒಪ್ಪಲಿಲ್ಲ ಅಂದ್ರೆ ಎಲ್ಲರನ್ನು ಬೇಜಾರು ಮಾಡಿ ಯಾಕೆ ಅವೆಲ್ಲ ಗೋಳು.’ ಎಂದು ತುಂಬಾ ನಿಖರವಾಗಿ ಹೇಳಿದ. ನಾನು ನನ್ನ ಮನಸ್ಸಿನಲ್ಲಿ ‘ಎಲಾ ಚಾಲಾಕಿ!’ ಎಂದುಕೊಂಡೆ. ದಾದಾಪೀರ್‌ ಜೈಮನ್‌ ಬರೆಯುವ ಜಂಕ್ಷನ್‌ ಪಾಯಿಂಟ್‌ ಅಂಕಣದಲ್ಲಿ ಹೊಸ ಬರಹ

 

ಈ ಬದುಕಿನ ಪ್ರಯಾಣಗಳಲ್ಲಿ ನಾವು ಕೆಲವು ಮಂದಿ ವಿಶಿಷ್ಟ ವ್ಯಕ್ತಿಗಳನ್ನು ಭೇಟಿಯಾಗುತ್ತಿರುತ್ತೇವೆ. ಅವರು ನಮ್ಮೆದುರು ಆಗಾಗ ಕಾಣಿಸಿಕೊಳ್ಳುತ್ತಾರೆ. ಅವರಿಲ್ಲದಿದ್ದರೂ ನಮ್ಮ ಬದುಕಿಗೆ ಯಾವ ವ್ಯತ್ಯಾಸವೂ ಆಗುವುದಿಲ್ಲ. ಅವರ ಜೊತೆಗೆ ಬದುಕುವುದು ನಮಗೆ ಅನಿವಾರ್ಯವೂ ಆಗಿರುವುದಿಲ್ಲ. ಆದರೂ ನಮಗೆ ಅವರ ಬಗ್ಗೆ ವಿಶೇಷ ಕುತೂಹಲವಿರುತ್ತದೆ. ಪ್ರತಿ ಬಾರಿ ಅವರು ನಮ್ಮನ್ನು ಭೇಟಿಯಾದಾಗಲೂ ಅವರು ಹೊಸತೆ ಆಗಿ ಕಾಣುತ್ತಾರೆ. ನಾವು ಅವರನ್ನು ನೋಡುವ ನೋಟಕ್ರಮಕ್ಕೆ ಹೊಸತೇನನ್ನೋ ಸೇರಿಸುತ್ತಾರೆ. ನಮ್ಮ ಗ್ರಹಿಕೆಗಳನ್ನೇ ಅದಲು ಬದಲು ಮಾಡುತ್ತಾರೆ. ಅದರ ಬಗ್ಗೆ ಯೋಚಿಸುವಂತೆ ಮಾಡುತ್ತಾರೆ. ನಾನು ಭೇಟಿಯಾದ ಈ ತರದ ವಿಶೇಷ ವ್ಯಕ್ತಿಯ ಬಗ್ಗೆ ನಾನೀಗ ಹೇಳಹೊರಟಿರುವೆ.

ಅವನ ಹೆಸರು ಕನಕ ಅಲಿಯಾಸ್ ಕಮಿಷನ್ ಕನಕ. ವಯಸ್ಸು ಸುಮಾರು ಇಪ್ಪತ್ತಮೂರು ಇಪ್ಪತ್ತನಾಲ್ಕು ಇರಬಹುದು. ಬಂಗಾರ ಬಣ್ಣದ ಹೊಳಪು ಕಣ್ಣುಗಳ ತೆಳ್ಳನೆ ದೇಹದ ಸುಮಾರು ಐದು ಅಡಿ ಎತ್ತರದ ಗುಂಗುರು ಗೂದಲಿನ ಹುಡುಗ. ಈ ಹುಡುಗ ನನ್ನ ರೂಮ್ಮೇಟಿನ ಜೀವದ ಗೆಳೆಯ. ಬೆಂಗಳೂರಿನ ಕಾಲೇಜೊಂದರಲ್ಲಿ ಎಂ. ಬಿ. ಎ ಓದುತ್ತಿದ್ದಾನೆ. ಕನ್ನಡ, ಇಂಗ್ಲೀಷ್, ತೆಲುಗು, ಹಿಂದಿ ಮತ್ತು ತಮಿಳು ಸೇರಿದಂತೆ ಇನ್ನೂ ಮೂರು ಭಾಷೆಗಳು ಬರುತ್ತವೆ. ಬಹಳ ಚಾಲಾಕಿ ಹಾಗೆ ಹೀಗೆ ಎನ್ನುವ ಅಂಬೋಣಗಳನ್ನು ನನ್ನ ರೂಮ್ಮೇಟಿನ ಬಳಿ ಕೇಳಿದ್ದ ನನಗೆ ಅವನನ್ನು ಭೇಟಿ ಮಾಡುವ ಸುಯೋಗ ಒಂದು ಶುಭ ಭಾನುವಾರದಂದು ಅನಿರೀಕ್ಷಿತವಾಗಿ ಬಂದೊದಗಿತ್ತು.

ಅವನು ಕಾಲೇಜ್ ಟ್ರಿಪ್ಪಿಗೆ ಅಂತ ಗೋವಾಗೆ ಹೊರಟಿದ್ದ. ಅವನಿಗೊಂದಿಷ್ಟು ಬಟ್ಟೆಗಳನ್ನು ಶಾಪಿಂಗ್ ಮಾಡುವುದಿತ್ತು. ನನ್ನ ರೂಮ್ಮೇಟ್ ಅಂದೇ ಬೇರೆ ಯಾವುದೋ ಕೆಲಸದ ಮೇಲೆ ಎಲ್ಲೋ ಹೋಗುವವನಿದ್ದ. ‘ಭೈ, ಇವಂಗೆ ಶಾಪಿಂಗೆ ಯಾರೂ ಜೊತೆ ಇಲ್ಲ. ನೀವು ಸ್ವಲ್ಪ ಹೋಗ್ ಬನ್ನಿ ಭೈ. ಬಟ್ಟೆ ಸೆಲೆಕ್ಷನ್ನಿಗೆ ಹೆಲ್ಪ್ ಬೇಕಂತೆ.’ ಅಂತಂದ. ನನಗಾಗ ಯಾವುದೇ ಕೆಲಸ ಇಲ್ಲದ್ದರಿಂದ ಹೊರಟೆ. ಅವನು ಬೆಂಗಳೂರಿನ ಯಾವುದೋ ಸಂಪಂಗಿರಾಮನಗರದ ಬಳಿಯ ಯಾವುದೋ ಗಲ್ಲಿಯ ಮೂಲೆಯಲ್ಲಿರುವ ಒಂದು ಅಂಗಡಿಗೆ ಎರಡು ಮೂರು ಬಸ್ಸು ಹತ್ತಿಳಿಸಿ ಕರೆದುಕೊಂಡು ಹೋದ. ಅಲ್ಲಿ ಬಟ್ಟೆಗಳ ಮೂರು ಮತ್ತೊಂದು ಬ್ರಾಂಡುಗಳು ಸೋವಿ ಎನ್ನುವಂತೆ ಮಾರುತ್ತಿದ್ದರು. ನಾನು ಹೇಳುತ್ತಿರೋದು ಪೀಟರ್ ಇಂಗ್ಲೆಂಡ್ ನ ಪೀಟರ್ ನ್ಯೂಯರ್ಕ್ ಅಂತ ಮಾರುವ ತರದ್ದಲ್ಲ. ಇದೆಲ್ಲಾ ಕದ್ದ ಮಾಲುಗಳೋ ಅಥವಾ ಅದ್ಯಾವ ಡೀಲುಗಳು ಅಂಗಡಿಯವರ ನಡುವೆ ಇತ್ತೋ ಕಾಣೆ. ಒಂದು ಕ್ಷಣ ನನಗೇ ದಂಗಾಗಿ ಹೋಯಿತು. ಐದು ಸಾವಿರಕ್ಕೆ ಸುಮಾರು ಇಪ್ಪತ್ತು ಬಟ್ಟೆ ಅದೂ ಬ್ರಾಂಡೆಡ್ ಬಟ್ಟೆಗಳು ಬಂದಿದ್ದವು. ಹಾಗೆ ತನಗೆ ಬೇಕಾದ್ದು ನೇರವಲ್ಲದಿದ್ದರೆ ಮತ್ತೆ ಹೇಗೋ ಸಿಗುತ್ತಲೇ ಇರುತ್ತದೆ. ಅದನ್ನ ಹುಡುಕಿ ತೆಗೆವ ಜಾಣನ ಹಾಗೆ ಆ ಹುಡುಗ ಕಾಣಿಸಿದ್ದ.

ಒಮ್ಮೆ ಶನಿವಾರದ ಸಂಜೆ ಬಿಯರ್ ಬಾಕ್ಸ್ ಎಂ. ಆರ್. ಪಿ ಅಂಗಡಿಯಲ್ಲಿ ಸ್ಪಿರಿಟ್ ಶಾಪಿಂಗಿಗೆ ಹೋದಾಗ ಅಲ್ಲಿ ಕನಕ ಮತ್ತೆ ಕಂಡ. ಹೊಸದಾಗಿ ಬಂದ ಬಿಯರ್ ಬ್ರ್ಯಾಂಡುಗಳನ್ನು ಜನರಿಗೆ ಮಾರುವಲ್ಲಿ ಮನವೊಲಿಸುವ ಕೆಲಸ. ಅದನ್ನು ಬ್ರಾಂಡಿನವರೇ ವಹಿಸುತ್ತಿದ್ದರು. ದಿನಕ್ಕೆ ಇಷ್ಟು ಮಾರಿದರೆ ಇಷ್ಟಿಷ್ಟು ಎನ್ನುವ ಡೀಲಿಂಗ್ ಇರುತ್ತಿತ್ತು. ಬೆಕ್ಸ್ ಐಸ್ ಮುಂತಾದ ಹಲವು ಹೊಸ ಬಿಯರುಗಳು ನಮಗೆ ಪರಿಚಯವಾಗುತ್ತಿದ್ದುದೆ ಕನಕನಿಂದ. ಬಿಯರ್ ಬಾಕ್ಸಿಗೆ ಬರುತ್ತಿದ್ದ ಹೊಸ ಎನರ್ಜಿ ಡ್ರಿಂಕಿನಿಂದ ಹಿಡಿದು ವೈನು, ರಂ, ವಿಸ್ಕಿಯ ಅದೆಷ್ಟೋ ಹೆಸರುಗಳನ್ನು ಮತ್ತು ಅದು ಹೇಗೆ ಕಿಕ್ ಕೊಡುತ್ತದೆ, ಅದರ ರುಚಿ ಹೇಗಿರುತ್ತದೆ, ಕುಡಿದ ಮರುದಿನ ಅದೆಷ್ಟು ಹೊತ್ತು ಹ್ಯಾಂಗೋವರ್ ಇರುತ್ತದೆ ಎನ್ನುವುದನ್ನು ಲೀಲಾಜಾಲವಾಗಿ ಹೇಳುತ್ತಿದ್ದ. ನಾನೂ ಒಂದಷ್ಟು ದಿನ ಹೆಸರು ನೆನಪಿಟ್ಟುಕೊಳ್ಳೋ ಪ್ರಯತ್ನ ಮಾಡಿದೆನಾದರೂ ಸೋತೆ. ಅವನು ಒಂದು ದಿನ ಹೀಗೆ ಮಾತಾಡುವಾಗ ‘ಅಣೋ, ಅಲ್ಲಿ ಎಂತೆಂತ ಶ್ರೀಮಂತರು ಬರ್ತಾರಣೋ. ಅವರನ್ನು ನೋಡ್ತಾ ಇದ್ರೆ ನಾವು ಕೂಡ ದುಡ್ಡ್ ಮಾಡಿ ಅವ್ರನ್ಗೆ ಆಗ್ಬೇಕು ಅನಿಸ್ತಾ ಇರತ್ತೆ. ಜನ ನೋಡೀನೇ ಅಲ್ವಾ ಪ್ರಪಂಚ ಹೆಂಗಿದೆ ಅಂತ ಗೊತ್ತಾಗದು!’ ಎನ್ನುವ ಫಿಲಾಸಫಿಯನ್ನೂ ಸೇರಿಸುತ್ತಿದ್ದ. ಕನಕ ಆಗ ನನಗೆ ಸ್ಪಿರಿಟ್ ಕನಕನಾಗಿ ಕಾಣಿಸಿದ್ದ.

ಅಂದಹಾಗೆ ಅವನಿಗೆ ಎಲ್ಲರೂ ಕಮಿಷನ್ ಕನಕ ಅಂತ ಯಾಕೆ ಕರೆಯುತ್ತಿದ್ದರು ಎಂದರೆ ಅವನು ಅವರ ಕಾಲೇಜಿನಲ್ಲಿ ಸಣ್ಣ ಲೆವೆಲ್ಲಲ್ಲಿ ಬಡ್ಡಿ ವ್ಯವಹಾರ ಕೂಡ ಮಾಡುತ್ತಿದ್ದ. ಆ ಜಾಲವನ್ನು ನಮ್ಮ ನಮ್ಮ ಪೀಜಿಯವರೆಗೂ ವಿಸ್ತರಿಸಿದ್ದ. ಪೀಜಿಗೆ ಹೊಸಬರನ್ನು ನಾನು ತಂದು ಸೇರಿಸ್ತೀನಿ. ಪ್ರತಿಯೊಬ್ಬ ಹೊಸಬ ಬಂದಾಗು ಇಷ್ಟು ಕಮಿಷನ್ ಕೊಡ್ಬೇಕು ಎಂದು ಮಾತು ಮಾಡಿಟ್ಟುಕೊಂಡಿದ್ದ.  ಒಂದು ಪ್ರತಿಷ್ಠಿತ ಕಂಪನಿಯ ಎಚ್. ಆರ್ ಒಬ್ಬನನ್ನು ಪರಿಚಯ ಮಾಡಿಕೊಂಡು ಸಂದರ್ಶನದಲ್ಲಿ ಎರಡೆ ಪ್ರಶ್ನೆಗಳನ್ನು ಕೇಳಿ ಸೆಲೆಕ್ಟ್ ಆಗೊತರ ಮಾಡಿ ಅವನ ಸ್ನೇಹಿತನೊಬ್ಬನಿಗೆ ಹತ್ತು ಸಾವಿರ ಕಮಿಷನ್ ಪೀಕಿದ್ದ ಸುದ್ದಿಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ಡಿಗ್ರಿ ಹುಡುಗರ ಪ್ರಾಜೆಕ್ಟಗಳನ್ನು ಥೀಸಿಸ್ಸುಗಳ ಡೀಲ್ ಪಡೆದು ನೆಟ್ಟಿನಲ್ಲಿ ಕದ್ದು ಹೆಸರು ಬದಲಾಯಿಸಿ ಕೊಟ್ಟು ಹಣ ಮಾಡುವ ಕಲೆಯೂ ಅವನಿಗೆ ಕರಗತವಾಗಿತ್ತು. ಕನಕ ಪ್ರತಿ ಬಾರಿ ಭೇಟಿಯಾದಾಗಲು ಅವನ ವ್ಯಕ್ತಿತ್ವದ ಮತ್ತೇನೋ ಒಂದು ತಿಳಿಯುತ್ತಿತ್ತು.

ಅವನು ಅವರ ಕಾಲೇಜಿನಲ್ಲಿ ಸಣ್ಣ ಲೆವೆಲ್ಲಲ್ಲಿ ಬಡ್ಡಿ ವ್ಯವಹಾರ ಕೂಡ ಮಾಡುತ್ತಿದ್ದ. ಆ ಜಾಲವನ್ನು ನಮ್ಮ ನಮ್ಮ ಪೀಜಿಯವರೆಗೂ ವಿಸ್ತರಿಸಿದ್ದ. ಪೀಜಿಗೆ ಹೊಸಬರನ್ನು ನಾನು ತಂದು ಸೇರಿಸ್ತೀನಿ. ಪ್ರತಿಯೊಬ್ಬ ಹೊಸಬ ಬಂದಾಗು ಇಷ್ಟು ಕಮಿಷನ್ ಕೊಡ್ಬೇಕು ಎಂದು ಮಾತು ಮಾಡಿಟ್ಟುಕೊಂಡಿದ್ದ. 

ಮತ್ತೊಮ್ಮೆ ಯಾವುದೋ ವಿಷಯದ ಉಲ್ಲೇಖದಲ್ಲಿ ಅವನ ಹೆಸರು ಕೇಳಿ ಗಾಬರಿಯೂ ಆಯಿತು. ‘ಕನಕ ಬಡ್ಡಿ ಮಗ ಯಾವ ಲೆವೆಲ್ಲಿಗೆ ಇಳಿದಿದ್ದಾನೆ ಅಂದ್ರೆ ಎದುರುಗಡೆ ಇರೋ ಪೊಲೀಸ್ ಸ್ಟೇಷನ್ ಪೋಲಿಸಿಗೆ ಒಂದೊಳ್ಳೆ ಹುಡ್ಗಿ ಡೀಲ್ ಮಾಡಿಕೊಟ್ಟು ಓಯೋ ಬುಕ್ ಮಾಡಿ ಕೊಟ್ಟು ಕಮಿಷನ್ ಪೀಕಿದಾನೆ. ಪೊಲೀಸರನ್ನು ಬುಟ್ಟಿಗೆ ಹಾಕ್ಯoಡ. ಏನ್ ತಲೆ ಭೈ ಅವಂದು. ಧೈರ್ಯ ಮೆಚ್ಚುಬೇಕಾ ಮತ್ತ!’ ಎಂದು ನನ್ನ ರೂಮ್ಮೇಟ್ ಆಶ್ಚರ್ಯಚಕಿತನಾಗಿ ಹೇಳಿದ್ದ.

ಇದೆ ಕನಕ ಒಮ್ಮೆ ಒಂದು ಭಾನುವಾರದ ರಾತ್ರಿಯ ಬಾಡೂಟಕ್ಕೆ ಬಂದು ‘ಅಣೋ, ನನ್ ಪ್ರೀತಿಸ್ತಾ ಇರೋ ಹುಡುಗಿ ತೋರಿಸ್ತೀನಿ.’ ಎಂದು ಫೋನಿನಲ್ಲಿ ವಿ ಪ್ಯಾಟರ್ನ್ ಹಾಕಿ ಲಾಕ್ ತೆರೆದು ‘ಇವಳೇ ನೋಡಣೋ. ನೀನು ಆವತ್ತು ಕೊಡಿಸಿದ ಫ್ಲೋರಲ್ ಶರ್ಟ್ ಹಾಕಿದ್ದೆ ಬೀಚಲ್ಲಿ. ಅವಾಗಿಂದ ನಾನಂದ್ರೆ ಹುಚ್ಚು ಪ್ರೀತಿ ಅಂತೆ ನನ್ಮೇಲೆ!’ ಎಂದು ತೋರಿಸಿದ. ಹುಡುಗಿ ಲಕ್ಷಣವಾಗಿದ್ದಳು. ಇಬ್ಬರಿಗೂ ಅನುರೂಪದ ಜೋಡಿಯೂ ಆಗುತ್ತಿತ್ತು. ಆದರೆ ನಾನೆ ಪೂರ್ವಗ್ರಹದಿಂದ ಯೋಚಿಸಿ ‘ನಿಜಕ್ಕೂ ಪ್ರೀತಿಸ್ತಾ ಇದ್ಯೇನೋ? ಅಥವಾ ಫ್ರೆಂಡ್ಸ್ ವಿಥ್ ಬೆನಿಫಿಟ್ಸ?’ ಅಂತ ಕೇಳಿದೆ. ಅದಕ್ಕವನು ತುಂಬಾ ಕ್ಲಾರಿಟಿಯಿಂದ ‘ನನಗೆ ಅವಳಿಷ್ಟ. ಅವಳಿಗೆ ನಾನಿಷ್ಟ. ಮದ್ವೆ ಯಾಕಗಬಾರದು? ಆದ್ರೆ ನಾನು ನಮ್ಮನೇಲಿ ಒಪ್ಪಿಸೋ ಜವಾಬ್ದಾರಿಯನ್ನು ಅವಳಿಗೆ ಬಿಟ್ಟುಬಿಟ್ಟಿದೀನಿ. ನಮ್ಮನೇಲಿ ಒಪ್ಪಲಿಲ್ಲ ಅಂದ್ರೆ ಮದ್ವೆ ಆಗಕೆ ಆಗಲ್ಲ ಅಂತಾನೂ ಹೇಳಿದೀನಿ. ಸುಮ್ನೆ ಮನೇಲಿ ಒಪ್ಪಲಿಲ್ಲ ಅಂದ್ರೆ ಎಲ್ಲರನ್ನು ಬೇಜಾರು ಮಾಡಿ ಯಾಕೆ ಅವೆಲ್ಲ ಗೋಳು.’ ಎಂದು ತುಂಬಾ ನಿಖರವಾಗಿ ಹೇಳಿದ. ನಾನು ನನ್ನ ಮನಸ್ಸಿನಲ್ಲಿ ‘ಎಲಾ ಚಾಲಾಕಿ!’ ಎಂದುಕೊಂಡೆ.

ನಮ್ಮ ತಲೆಯಲ್ಲಿ ಈಗ ಹಲವಾರು ಕನಕರಿದ್ದಾರೆ. ಒಬ್ಬೊಬ್ಬ ಓದುಗನಿಗೂ ಒಬ್ಬೊಬ್ಬ ಕನಕ ಸಿಕ್ಕಿರಬಹುದು. ಅದಕ್ಕೂ ಮುಂಚೆ ಅಸಲಿಗೆ ನಮಗೆ ಏನು ಕಾಣಿಸುತ್ತದೆ? ನಮಗೆ ಅಸಲಿಗೆ ಕಾಣಿಸುವುದು ಬಿಂಬಗಳು ಮಾತ್ರವೇ ಅಲ್ಲವೇ. ಇಮೇಜಸ್. ಹೊರಗಿನ ಕಣ್ಣಿಗೆ ಅವು ವಿವಿಧ ಆಕಾರ ಪಡೆದುಕೊಳ್ಳುವ ನೆರಳಿನಂತೆ ಕಾಣಿಸುತ್ತವೆ. ಒಮ್ಮೆ ನೇರ, ಒಮ್ಮೆ ತಲೆಕೆಳಗಾಗಿ, ಒಮ್ಮೆ ಜೂಮಿಕೊಂಡು, ಮತ್ತೊಮ್ಮೆ ಸಾಸಿವೆ ಕಾಳಿನಷ್ಟು ಸಣ್ಣಗೆ. ನಮಗೆ ಕಾಣುವ ಮತ್ತೊಬ್ಬರ ಬಿಂಬ ನಾವು ಎಲ್ಲಿ ನಿಂತು ಹೇಗೆ ನೋಡುತ್ತಿದ್ದೇವೆ ಎಂಬುದನ್ನೂ ಕೂಡ ಅವಲಂಬಿಸಿರುತ್ತದೆ. ಕನಕನನ್ನು ಹೇಗೆ ನೋಡಬೇಕು? ಇಪ್ಪತ್ತುನಾಲ್ಕು ವರ್ಷ್ಕಕ್ಕೆ ಪ್ರಪಂಚದ ಇಷ್ಟೊಂದು ಭೀಭತ್ಸತೆಯಲ್ಲಿ ತಾನೂ ಒಂದು ಪಾತ್ರವಾಗುವಂತೆ ಮಾಡಿದ್ದು ಯಾವುದು? ಅವನೇ ಹೇಳಿದ್ದನಲ್ಲ ಹಿಂದೆ; ‘ಜನ ನೋಡೀನೇ ಅಲ್ವಾ ಪ್ರಪಂಚ ಹೆಂಗಿದೆ ಅಂತ ಗೊತ್ತಾಗದು!’ ಎನ್ನುವುದು ಅವನಿಗೆ ಅನ್ವಯಿಸಬಹುದು ಅಂತಲೂ ಅನಿಸುತ್ತದೆ. ಆದರೆ ನನಗೆ ಆಗಾಗ ಅನಿಸುತ್ತದೆ… ಬಿಯರ್ ಬಾಕ್ಸಲ್ಲಿ ಅಲ್ಲೆಲ್ಲೋ ಸ್ಪಿರಿಟ್ ಬಾಟಲಿಗಳ ನಡುವೆ ಕೂತು ಅಲ್ಲಿಗೆ ಬರುವ ಶ್ರೀಮಂತರನ್ನು ತಾನೂ ಅವರಂತೆ ಆಗಬೇಕು ಎಂದು ಆಸೆಗಣ್ಣಿನಿಂದ ಗಮನಿಸುತ್ತಾ ಇರುವ ಅದಕ್ಕಾಗಿ ಹೇಗೋ ಹಾದಿ ಹುಡುಕಿಕೊಳ್ಳುವೆ ಎಂದು ಯೋಜನೆ ಹೊಸೆಯುವ ಚಾಲಾಕಿ ಹುಡುಗನಾಗಿ ಕನಕ ಕಾಣುತ್ತಾನೆ… ಬಡತನವನ್ನು ಮುಚ್ಚಿಟ್ಟು ತನ್ನದೇ ದುಡ್ಡಿನಲ್ಲಿ ಫೀಸು ಕಟ್ಟಿಕೊಂಡು ಒಂದಿಷ್ಟು ಕಾಸು ಉಳಿಸುವುದಕ್ಕೆ ಸಂಜೆ ಕೆಲಸ ಮಾಡುವ ಹುಡುಗ. ಏನನ್ನಾದರು ಕೊಡಿ ನಾನು ಮಾರಿ ತೋರಿಸುತ್ತೇನೆ ಎನ್ನುವ ಹುಡುಗ.

ಎಂ. ಬಿ. ಎ ಮಾಡುತ್ತಿರುವ ಹುಡುಗನಿಗೆ ಈ ಪ್ರಪಂಚವೇ ಮಾರ್ಕೆಟ್ ಆಗಿ ಕಾಣಿಸುತ್ತದೆ ಎನಿಸುತ್ತದೆ. ಆದರೆ ಎಲ್ಲವನ್ನು ಮಾರಬಹುದು ಎನಿಸುವ ಗುಣ ಎಲ್ಲಿಂದ ಬಂತು? ಪ್ರಪಂಚವೇ ಇವನ ಕಿವಿಯಲ್ಲಿ ಪಿಸುಗುಟ್ಟಿತೆ? ಬದುಕು ಕೇವಲ olx ಜಾಹೀರಾತು ಅಲ್ಲವಲ್ಲ! ಮಾರಿಬಿಡಿ ಎನ್ನುವುದಕ್ಕೆ! ಆಗೆಲ್ಲಾ ‘ಛೆ, ಪ್ರಪಂಚ ಬರಿ ದುಡ್ಡಿನ ಮೇಲೆ ನಿಂತಿರಬಾರದಿತ್ತು.’ ಎನಿಸುತ್ತದೆ. ಕನಕ ಮುಂದೊಮ್ಮೆ ಕನ್ನಡಿಯ ಮುಂದೆ ನಿಂತುಕೊಂಡಾಗ ನಿಚ್ಚಳವಾಗಿ ಕಾಣುವ ಅವನದೇ ಬಿಂಬ ನೋಡಿಕೊಂಡು ಅವನು ಒಡೆದುಹೋಗುವುದಿಲ್ಲವೇ?