ನೀರವ ರಾತ್ರಿಗಳಲ್ಲಿ ನನ್ನಲ್ಲಿ ಆಗಾಗ ಒಂಟಿತನ ಹೆಡೆಯಾಡಿಸುವುದೂ ಉಂಟು. ಮಾತುಗಳು ಜಾರಿ ನನ್ನನ್ನು ಮೌನ ಕವಚಿಕೊಂಡಾಗ ಸಹಜವಾಗಿಯೇ ಮುಗಿಲು ದಿಟ್ಟಿಸುತ್ತೇನೆ. ಅಂತೆಯೇ ಈಗೀಗ ಚಂದ್ರನನ್ನು ದಿಟ್ಟಿಸುತ್ತಾ ಚುಕ್ಕಿಗಳೆಣಿಸುವ ಅಭ್ಯಾಸ ಶುರುವಾಗಿದೆ ನನಗೆ. ಆಗ ಚಂದಿರನ ಮೊಗದಲ್ಲಿ ಪ್ರತಿಫಲಿಸುವ ಅವಳಂತದೇ ನಗು ಕಾಣುತ್ತದೆ. ನಗೆಯುಕ್ಕಿಸುತ್ತಿರುವುದು ಚಂದ್ರನೋ ಇಲ್ಲ ಅವಳೋ… ಹೀಗೂ ಒಮ್ಮೊಮ್ಮೆ ಗೊಂದಲವಾಗುವುದು.
ಶ್ರೀಧರ ಪತ್ತಾರ ಬರಹ ನಿಮ್ಮ ಓದಿಗೆ
ಈ ಕಾಡ ಗೂಡಿಗೆ ಬದುಕರಿಸಿ ಬಂದವನು ನಾನು. ನಾನೀಗ ನಾಡಿನಿಂದ ಕಾಡಮಡಿಲಿಗೆ ಬಿದ್ದ ಮಗುವಿನಂತೆಯೇ. ಈ ಕಾಡ ನಿಗೂಢತೆಯೊಳಗೆ ಸೇರಿಹೋದ ನಾನು ಗಿಡ ಮರ ಪ್ರಾಣಿ ಪಕ್ಷಿಗಳನ್ನು ನೋಡುತ್ತ ಅವುಗಳ ಸದ್ದುಗದ್ದಲದಲ್ಲಿ ನನ್ನನ್ನೇ ನಾ ಮರೆತವನು. ಇಲ್ಲಿನ ಇಡೀ ಪ್ರಕೃತಿ ಸೌಂದರ್ಯಕ್ಕೆ, ವಿಹಂಗಮ ನೋಟಕ್ಕೆ ಮಾರುಹೋದವನು. ವಿಶೇಷವಾಗಿ ಪ್ರತಿ ಬೆಳುದಿಂಗಳು ನನ್ನೊಳಗೆ ಬೆರಗು ಮತ್ತು ರೋಮಾಂಚನ ಮೂಡಿಸಿವೆ.
ಕಾಲ ಮಾಗಿದಂತೆ, ನಾವು ಮಾಗಿ ಹಳತಾದರೂ, ಅಪ್ಯಾಯಮಾನವಾಗಿ ಬೆಳುದಿಂಗಳ ಸೂಸುವ ಚೆಂದಮಾಮ ಎಂದೆಂದೂ ಚಿರಯೌವ್ವನಿಗ. ಅವನು ಮಾಸದ ಹೊಳಪಿನ ಬಣ್ಣದ ಸುರಿಮಳೆ. ಈ ಕುರಿತು ನಾನು ಬರೆದ ಕವಿತೆಗಳದೆಷ್ಟೋ..?
ಕಾಡಿನಲ್ಲಿ ಚಂದ್ರಮನನ್ನು ನೋಡೋದೆ ಚೆಂದ. ಅತ್ತ ಆಗಸದಲ್ಲಿ ಬೆಳ್ಳಿ ತಟ್ಟೆಯಂತೆ ಹೊಳೆವ ಚಂದ್ರ. ಇತ್ತ ಕಾಡೆಂಬೋ ಕಾಡು ಬೆಳ್ನೊರೆಯ ಹಾಲಲ್ಲಿ ಅದ್ದಿ ತೆಗೆದಂತೆ… ನಾನೋ ಈ ವಿಹಂಗಮ ದೃಶ್ಯ ಕಾವ್ಯಕ್ಕೆ ಸಾಕ್ಷಿಭೂತನು, ಈ ಸುದೈವ ಎಷ್ಟು ಜನಕ್ಕೆ ದಕ್ಕುವುದು. ಪ್ರತಿ ಪೌರ್ಣಿಮೆಗೂ ಬೆಳಕಿನ ಹಬ್ಬವೇ. ಹಾಗಾದರೆ ಅದೆಷ್ಟೊಂದು ಹಬ್ಬಗಳ ಸಗ್ಗದ ಸುಖ ದಕ್ಕಿಸಿಕೊಂಡಿರುವೆ ನಾನು…! ಈ ಬಗ್ಗೆ ನನಗೆ ಬಹಳ ಖುಶಿಯಿದೆ.
ಅಂದು ನಾವು ಎಳವೆಯಲ್ಲಿದ್ದಾಗ ಅಮ್ಮ ರಚ್ಚೆಹಿಡಿದು ಅಳುವ ತಮ್ಮನನ್ನೋ, ತಂಗಿಯನ್ನೋ ಹಿಡಿದೆತ್ತಿಕೊಂಡು ಅಂಗಳದಲ್ಲಿ ಕೂರಿಸಿ ಆಗಸದಲಿ ಹೊಳೆವ ಚಂದಿರನ ತೋರಿಸುತ್ತ ಚಂದಮಾಮ ಬಾ… ಚಕ್ಕುಲಿ ಮಾಮಾ…ಬಾ.., ಬಟ್ಟಲು ತುಂಬಾ ಬಾರಿಹಣ್ಣು ತುಂಬಿಕೊಂಡು ನನ್ನ ಕಂದನಿಗೆ ಕೊಡುಬಾ… ಎಂದು ಶುಶ್ರಾವ್ಯವಾಗಿ ಲಾಲಿ ಹಾಡಿ ರಮಿಸುವಾಗ…. ತತ್‌ಕ್ಷಣವೇ ಕಂದಮ್ಮ ಅಳುನಿಲ್ಲಿಸಿ ತನ್ನ ಹೊಳೆವ ಕಂಗಳನು ಅರಳಿಸಿಕೊಂಡು, ಪುಟ್ಟ ಕೈಗಳನೆತ್ತಿ ಅಮ್ಮನನ್ನು ಅನುಕರಿಸುತ್ತಿತ್ತು. ಆ ಮಗು ಕೇಕೆ ಹಾಕಿ ನಗುತ್ತಾ… ಚಂದಮಾಮಾ ಬಾ…, ಚಕ್ಕುಲಿ ಮಾಮಾ ಬಾ… ಎಂದು ತೊದಲು ನುಡಿವಾಗ ನಿಜಕ್ಕೂ ಚಂದ್ರಮ ನಸುನಗುತ್ತಿದ್ದ. ದೂರ ದಿಗಂತದಲ್ಲಿದ್ದುಕೊಂಡೆ ಮಗುವಿಗೆ ಅಭಯ ನೀಡುತ್ತಿದ್ದ. ಅದೇ ಖುಷಿಯಲ್ಲಿ ಮತ್ತಷ್ಟೂ ಹಾಲ್ಬೆಳದಿಂಗಳನು ಚೆಲ್ಲುತ್ತಿದ್ದ ಭುವಿಯ ತುಂಬಾ.
ಚಂದಿರ ಈ ಕಾಡು ಕಂಡು ನನ್ನಂತೆಯೇ ಬೆರಗುಗೊಂಡವನು. ನಾಡು ಬಿಟ್ಟು ಕಾಡಧ್ಯಾನದಿ ನಮ್ಮ ಬೆಂಬತ್ತಿ ಬಂದಿರುವನೇನೋ ಎಂದು ಅದೆಷ್ಟೋ ಬಾರಿ ಯೋಚಿಸಿದ್ದೇನೆ. ಅಂತೆಯೇ ಕಾಡು ಸುತ್ತುವ ನಮ್ಮ ಮೇಲೆ ಅವನದು ತೀರ ಮಮತೆಯ ನೋಟ. ನಾವು ಮತ್ತೇ ಮತ್ತೇ ಮಕ್ಕಳಾಗಿ ಅವನನ್ನು ಹಂಬಲದಿಂದ ಕಣ್ಣರಳಿಸಿ ದಿಟ್ಟಿಸುವ ಘಳಿಗೆಗಳು ತೀರ ರಸಭರಿತವಾದವುಗಳು. ಅವೆಂದೂ ಮುಗಿಯದ ಸುಮಧುರ ಹಾಡುಗಳು. ಅದೆಷ್ಟೋ ಬಾರಿ ರಾತ್ರಿಯಲ್ಲಿ ಕಾಡು ಸುತ್ತುವಾಗ ಚಂದಿರ ಬೆಳಕಿನ ಮೋಂಬತ್ತಿ ಹಚ್ಚಿರುತ್ತಾನೆ. ಅಬ್ಬಾ ಕತ್ತಲ ರಾತ್ರಿಯಲ್ಲಿ ಈ ಬೆಳಕಾದರೂ ದಿಕ್ಸೂಚಿಯಾಯಿತಲ್ಲ ಎಂದು ಒಂಟಿ ಸಲಗದ ಏಟಿನಿಂದ ತಪ್ಪಿಸಿಕೊಂಡು ನಿರುಮ್ಮಳದ ನಿಟ್ಟುಸಿರು ಬಿಟ್ಟಾಗ ತಂತಾನೇ ನನ್ನ ಬಾಯಿಂದ ಬಂದ ಮಾತಿದು.
ನಾಡು ಗಾಢ ನಿದ್ರೆಯಲ್ಲಿ ಮೈಮರೆತಿರುವಾಗ ಸದಾ ಎಚ್ಚರವಿರುವ ಕಾಡು ಎರಡು ಕೈಗಳಿಂದ ಬೆಳದಿಂಗಳನ್ನು ಬಾಚಿಕೊಳ್ಳುತ್ತದೆ. ಲಂಟಾನಾ ಪೊದೆಯೊಳಗೆ ಅವಿತ ಕಡವೆಯೊಂದು ಘಂಟಾನಾದ ಮೊಳಗಿಸುತ್ತದೆ. ಕಾಟಿಯೊಂದು ಕಾಲು ಕೆದರಿ ಗುಟುರು ಹಾಕುತ್ತದೆ. ಸಲಗಗಳ ಘೀಳಿಗೆ ಕಾಡೆಂಬೋ ಕಾಡು ಪ್ರತಿಧ್ವನಿಸುತ್ತದೆ. ಇನ್ನೂ ಹುಲಿ ಗರ್ಜಿಸಿದರಂತೂ ಮುಗಿಯಿತು, ಮೆಲ್ಲಮೆಲ್ಲನೇ ಹೆಜ್ಜೆ ಇಡುತ ನದಿ ನೀರಿಗಿಳಿಯುತ್ತಿರುವ ಜಿಂಕೆ ಸಾರಂಗಗಳು ಎದೆಯೊಡೆದುಕೊಂಡಂತೆ ಚಂಗನೇ ನೆಗೆದು ಓಟಕ್ಕಿಳಿಯುತ್ತವೆ. ಪೌರ್ಣಿಮೆ ರಾತ್ರಿಗಳ ಚಲನಶೀಲ ಕಾಡೊಡಲಿನ ಪ್ರತಿ ಕದಲಿಕೆಗೂ ಚಂದಿರ ಸಾಕ್ಷಿ. ಅವನು ಸೂಸುವ ಬೆಳದಿಂಗಳು ತೀರಾ ವಿಶೇಷವಾದುದು. ಬೆಳ್ಳಿಬೆಳಕ ಸೂಸುತ್ತ, ಸ್ವಚ್ಛಂದವಾಗಿ ತಿರುಗುವ ಚಂದ್ರಮನೀಗ ಅದೆಷ್ಟು ನಿರುಮ್ಮಳ..!. ಮೋಸ, ವಂಚನೆ, ಅನ್ಯಾಯ, ಅನೀತಿಗಳನ್ನು ಜೀರ್ಣಿಸಿಕೊಳ್ಳುತ್ತ ಮಗ್ಗಲು ಬದಲಿಸುವ ಆ ನಾಡಿನ ಕರಾಳ ರಾತ್ರಿಗಳಿಗಂಟಿದ ಕಳಂಕದಿಂದ ಬಲೂ ದೂರ. ಕಾಡಿನಂತೆ ನಾಡಿನ ಸೂತಕವಂಟಿಸಿಕೊಳ್ಳದ ಈ ಬೆಳದಿಂಗಳು ನಿತ್ಯ ನಿರ್ಮಲವಾದದ್ದು. ಬೆಳದಿಂಗಳಿನಂಗಳದಲ್ಲಿ ಚಂದ್ರಮನೊಂದಿಗೆ ಮಾತಿಗಿಳಿದು ಮೈಮರೆಯಬೇಕೆಂಬ ಅಪೇಕ್ಷೆಯಾಗುತ್ತದೆ ಒಮ್ಮೊಮ್ಮೆ. ಆಗ ಸ್ವಗತದಲ್ಲಿ ಹೀಗೆಂದು ಮನಸಾರೆ ಉಲಿಯುತ್ತೇನೆ.
ಕವಿಯೊಬ್ಬರು ಹೀಗೆ ಬರೆಯುತ್ತಾರೆ. “ಕಾಡಮಲ್ಲಿಗೆಯೊಂದು ಕಾಡಿನಲಿ ನರಳುತಿದೆ, ಬಾಡಿ ಹೋಗುವ ಮುನ್ನ ಕೀಳುವವರಾರೆಂದು”. ಆದರೆ ಬೆಳದಿಂಗಳಿರುಳಲ್ಲಿ ಅದೆಷ್ಟು ಕಾಡಮಲ್ಲಿಗೆಗಳು ಬಿರಿದು ತಂಗಾಳಿಗೆ ಮೈಚೆಲ್ಲಿ ಸುತ್ತಮುತ್ತಲೆಲ್ಲಾ ತಮ್ಮ ಕಂಪು ಹರಡುವುದಿಲ್ಲ… ಆ ಕಂಪಿಗೆ ಉಲ್ಲಸಿತಗೊಂಡು ಬೆಳಕಿನ ವೈಭವದಲ್ಲಿ ಅದೆಷ್ಟು ನಿಶಾಚರಿ ದುಂಬಿಗಳು ಮಧು ಹೀರಲು ಆ ಸುಮಗಳೆಡೆ ಬರುವುದಿಲ್ಲ…. ಅಂತೂ ಮಧುವುಂಡು ಝೇಂಕರಿಸುತ್ತ ಒಂದುಗೂಡುವ ದುಂಬಿಗಳ ಕಂಡು ವನಸುಮ ನಗೆ ಬೀರುತ್ತದೆ. ಮರಗಳ ಮರೆಯಲಿ ಅವಿತ ತುಂಟ ಚಂದಿರ ಬಾಯ್ಮೇಲೆ ಬೆರಳಿಟ್ಟುಕೊಂಡು ಮುಸಿಮುಸಿ ನಗುತ್ತಾನೆ. ಆಗ ಖಂಡಿತವಾಗಿಯೂ ಆ ಹೂವಿನಾಸೆ ಈಡೇರಿದಂತೆ. ಹೂವಿನೊಂದಿಗೆ ಕಾಡಮಲ್ಲಿಗೆಯ ಕಂಡು ಮರುಕಗೊಂಡ ಹೂಮನದ ಕವಿಯ ತಲ್ಲಣವೂ ದೂರಾದಂತೆ. ಸಾರ್ಥಕ್ಯದ ಸಂತಸದಲ್ಲಿ ತೊನೆದಾಡುವ ಹೂವಿನ ಗಂಧ ಕಾಡ ತುಂಬಿ ತುಳುಕುತ್ತದೆ. ಈ ಸುವಾಸನೆಯಿಂದ ಚಂದ್ರ ಉನ್ಮತ್ತಗೊಂಡು ಸಂತೋಷದ ಪರಾಕಾಷ್ಠೆಗೆ ತಲುಪುತ್ತಾನೆ. ಹಾಗಾದಾಗೊಮ್ಮೆ ನನ್ನಲ್ಲೊಂದು ಹೊಸ ಕವಿತೆ ಹುಟ್ಟುತ್ತದೆ.
ನೀರವ ರಾತ್ರಿಗಳಲ್ಲಿ ನನ್ನಲ್ಲಿ ಆಗಾಗ ಒಂಟಿತನ ಹೆಡೆಯಾಡಿಸುವುದೂ ಉಂಟು. ಮಾತುಗಳು ಜಾರಿ ನನ್ನನ್ನು ಮೌನ ಕವಚಿಕೊಂಡಾಗ ಸಹಜವಾಗಿಯೇ ಮುಗಿಲು ದಿಟ್ಟಿಸುತ್ತೇನೆ. ಅಂತೆಯೇ ಈಗೀಗ ಚಂದ್ರನನ್ನು ದಿಟ್ಟಿಸುತ್ತಾ ಚುಕ್ಕಿಗಳೆಣಿಸುವ ಅಭ್ಯಾಸ ಶುರುವಾಗಿದೆ ನನಗೆ. ಆಗ ಚಂದಿರನ ಮೊಗದಲ್ಲಿ ಪ್ರತಿಫಲಿಸುವ ಅವಳಂತದೇ ನಗು ಕಾಣುತ್ತದೆ. ನಗೆಯುಕ್ಕಿಸುತ್ತಿರುವುದು ಚಂದ್ರನೋ ಇಲ್ಲ ಅವಳೋ… ಹೀಗೂ ಒಮ್ಮೊಮ್ಮೆ ಗೊಂದಲವಾಗುವುದು. “ಯಾರೂ ಇಲ್ಲದ ಜಾಗೆಯಲ್ಲಿ ನೀನು ನನಗೆ ಅಕ್ಕರೆಯಲಿ ಕೈತುತ್ತು ಉಣ್ಣಿಸಬೇಕು” ಅಂದೊಮ್ಮೆ ಎದುರು ನಿಂತು ನನ್ನವಳು ತನ್ನ ಹೆಬ್ಬಯಕೆಯನ್ನು ವ್ಯಕ್ತಪಡಿಸಿದ್ದಳು. ಆಗ ಅವಳ ಎರಡೂ ಕಂಗಳಲಿ ಪುಟ್ಟ ಚಂದಿರ ಮಿನುಗುತ್ತಿದ್ದ. ನಾನು “ನನ್ನ ಸಿಹಿ ಮುತ್ತುಗಳು ಬೇಡವೇ ಕೈತುತ್ತಿನೊಂದಿಗೆ” ಎಂದಿದ್ದೆ ನಸುನಕ್ಕು. ನಾಚಿ ನೀರಾದವಳ ಕೆನ್ನೆ ಕೆಂಪೇರಿತ್ತು ಇಳಿಸಂಜೆಯ ಪಡುವಣದಂತೆ. ಆ ಮಧುರ ಕ್ಷಣಕ್ಕೆ ಸಕಾಲವಿದು. ಇಲ್ಲಿ ನಾನೇ ನಾನು. ಮುಗಿಲಾಗಸ ವ್ಯಾಪಿಸಿ ನಗುಬೀರುವ ಬೆಳಕು, ಮರಗಿಡಗಳ ಮೈ ಸವರಿ ಸುಂಯ್ ಎಂದು ಸೂಸುವ ತಂಗಾಳಿ, ದೂರದಲ್ಲೆಲ್ಲೋ ತನ್ನ ಸಂಗಾತಿಗಾಗಿ ಹಾತೊರೆವ ಮಯೂರದ ನಿವೇದನೆಯ ಕೂಗು. ನನ್ನೊಳಗೆ ಬಯಕೆಗಳು ಗರಿಗೆದರಿ ಬಳಿ ಬಂದವಳ ಬರಸೆಳೆದು ಬಿಗಿದಪ್ಪಿ ಕೋಮಲ ಕೆನ್ನೆಗೆರಡು ಮುತ್ತಿಡಬೇಕೆನ್ನಿಸುತ್ತದೆ….. ಆಹಾ…. ಹಾಗಾದರೆ ಎಷ್ಟು ಚೆನ್ನ. ನೋಡಿದವರಿಗೆ ಖಂಡಿತ ಹೊಟ್ಟೆಕಿಚ್ಚು..!
ಹೀಗೆ ಬೆಳದಿಂಗಳು ಮೈಚೆಲ್ಲಿದಾಗೆಲ್ಲ ನನಗವಳು ನೆನಪಾಗುತ್ತಾಳೆ, ಅದುಮಿಟ್ಟ ಅವೆಷ್ಟೋ ಮನದ ಮರೆಯ ಅವ್ಯಕ್ತ ಬಯಕೆಗಳು ಖುಷಿಗಾಗಿ ಕಾತರಿಸುತ್ತವೆ. ಚಂದಿರನ ನೆರಳಲ್ಲಿ ಪ್ರೀತಿ ಅರಳಿ ಹೂವಾಗಿದೆ; ಪ್ರೀತಿಯ ಪ್ರತಿ ಮಾತು ಎದೆ ಬಿರಿಯೇ ಹಾಡಾಗಿದೆ. ಎಂಬ ನನ್ನ ಕವಿತೆಯ ಸಾಲುಗಳು ಆಗಲೇ ಹುಟ್ಟಿದ್ದು. ಆಗಸದಲ್ಲಿ ಚಂದ್ರ ಚುಕ್ಕಿಗಳ ಹಿನ್ನೆಲೆಯಲ್ಲಿ ಪ್ರೀತಿ ಮಿನುಗಿದಂತ ಭಾವ, ಅದು ಬಣ್ಣದ ಬೆಳಕು ಚೆಲ್ಲುತ್ತಿದ್ದರೆ ಇಡೀ ಕಾಡು ಬೆಳಕಿನಲ್ಲಿ ಝಗಮಗಿಸುವುದು. ಕಾಡೊಡಲಿನಲಿ ಕುಳಿತು ಬೆರಗುಗಣ್ಣಿನಿಂದ ಈ ಎಲ್ಲವನ್ನು ತದೇಕಚಿತ್ತನಾಗಿ ದಿಟ್ಟಿಸುತ್ತಾ ಕುಳಿತರೆ ನಟ್ಟಿರುಳು ಅವುಡುಗಚ್ಚಿ ಮಗ್ಗಲು ಬದಲಿಸಿದರೂ ಗೊತ್ತಾಗುವುದಿಲ್ಲ.
ಒಮ್ಮೊಮ್ಮೆ ಯಾವುದರ ಪರಿವಿಲ್ಲದೇ ಮೈಮರೆತ ನಮ್ಮನ್ನು ಎಚ್ಚರಿಸಲೆಂದೋ, ಇಲ್ಲ ಅಪಾಯದ ಮುನ್ಸೂಚನೆ ಅರಿತ ಹುಲಿ ಗುಟುರು ಹಾಕುತ್ತದೆ. ಬಾಯಗಲಿಸಿ ದಶದಿಕ್ಕುಗಳು ಪ್ರತಿಧ್ವನಿಸುವಂತೆ ಗರ್ಜಿಸುತ್ತದೆ. ನಾವು ಆ ಕ್ಷಣಕ್ಕೆ ಬೆಚ್ಚಿಬಿದ್ದರೂ ಅಭಯದ ನೆರಳು ನಮ್ಮ ಮೇಲಿದ್ದಂತೆ. “ಹುಲಿ ಕಾಡಿಗಾಸರೇ, ಅಂತೇ ಕಾಡು ಹುಲಿಗಾಸರೆ”. ಆ ಕತ್ತಲ ರಾತ್ರಿಗಳಲಿ ತನ್ನ ಸಂಗಾತಿ ಅರಸುತ್ತಾ ಹುಲಿರಾಯನ ಅಲೆದಾಟವೆಷ್ಟು. ಕತ್ತಲೆಯಲ್ಲಿ ಆಹಾರ ಸಿಗದೇ ಬಳಲಿದ ಆ ವ್ಯಾಘ್ರಕ್ಕೆ ಬೆಳದಿಂಗಳೇ ದಾರಿದೀಪ. ನಡುರಾತ್ರಿಯಲ್ಲಿ ಅದು ಚಂದ್ರನನ್ನು ಬೆನ್ನತ್ತಿಸಿಕೊಂಡು ಮೈಲುಗಟ್ಟಲೆ ತಿರುಗುತ್ತದೆ ಯಾವ ಅಳುಕಿಲ್ಲದೇ. ತಿರುಗಿ ತಿರುಗಿ ಸುಸ್ತಾಗಿ ಇನ್ನೇನೂ ಅಂದಿನ ಊಟ ತಪ್ಪಿತೆಂದುಕೊಳ್ಳುವಾಗಲೇ ಎಲ್ಲೋ ಪೊದೆಯಲ್ಲಿ ಮಲಗಿ ನಿದ್ರೆ ಹೊಡೆಯುತ್ತಿದ್ದ ಕಡವೆಯೋ, ಜಿಂಕೆಯೋ, ಇಲ್ಲ ಕಾಡುಕುರಿಯ ಆಯುಷ್ಯ ಮುಗಿದಿರುತ್ತದೆ. ಹೊಟ್ಟೆ ಹಸಿವೆ ಹಿಂಗಿಸಿಕೊಂಡು ಹುಲಿ ಗುಟುರು ಹಾಕಿ ಗರ್ಜಿಸಿದರೆ ಸುತ್ತಮುತ್ತಲ ಕಾಡೆಂಬೋ ಕಾಡು ಪ್ರತಿಧ್ವನಿಸುತ್ತದೆ. ಒಂದುಕ್ಷಣ ಚಂದ್ರಮನು ಆ ಸದ್ದಿಗೆ ಬೆಚ್ಚಿಬೀಳುವನು…!
ಇನ್ನೂ ಗಜರಾಜನಾದರೋ ದಿನದ ಹದಿನೆಂಟು ಗಂಟೆಯೂ ಹೊಟ್ಟೆ ತುಂಬಿಸಿಕೊಳ್ಳಬೇಕು. ಅದಕ್ಕಾಗಿ ಬೆಳದಿಂಗಳ ತಂಪಿನಲ್ಲಿ ಅದೆಷ್ಟು ನಡೆದರೂ ಅದರ ದೇಹ ದಣಿಯದು. ಹುರುಪುಗೊಂಡ ಗಜಪಡೆ ಯಾವುದೋ ಪೊದೆಯಲ್ಲಿ ಹುಲುಸಾಗಿ ಬೆಳೆದ ಬಿದಿರುಮೆಳೆಗಳ ಅರಸಿ ಇಲ್ಲವೇ, ದೂರದಲ್ಲೆಲ್ಲೋ ಅಪರೂಪಕ್ಕೆಂಬಂತೆ ಬೆಳೆದ ಹಲಸಿನ ಕಳಿತ ಹಣ್ಣಿನ ವಾಸನೆಯ ಚುಂಗು ಹಿಡಿದು ಕಾಡೆಲ್ಲ ಅಲೆಯುತ್ತದೆ. ಒಟ್ಟಿನಲ್ಲಿ ಈ ಕಾಡಿನ ಪ್ರತಿ ಗಿಡ ಮರ, ಪ್ರಾಣಿ ಪಕ್ಷಿ, ಕೀಟಗಳೆನ್ನದೆ ಎಲ್ಲೆಡೆಯೂ ಆ ರಾತ್ರಿಗಳಲ್ಲಿ ಸಂಚಲನ ಮೂಡುತ್ತದೆ; ಕಾಡು ರಂಗೇರುತ್ತದೆ. ಅಂತೆಯೇ ನಮಲ್ಲೂ ರಂಗು ಮೂಡಿ, ಮಧುರ ಭಾವನೆಗಳು ಗರಿಗೆದರುವವು. ಮನಸ್ಸು ಉಲ್ಲಸಿತಗೊಂಡು ಸದಾ ಇಂತಹದೇ ಬೆಳಕಿಗೆ ಕಾತರಿಸಿ ಅದರ ಧ್ಯಾನದಲ್ಲೇ ನಮ್ಮ ಮೈಮರೆಸುವುದು. ಬೆಳುದಿಂಗಳ ಕಾಂತಿ ಮೈಮನಸ್ಸನ್ನು ಬಿಡದೇ ತುಂಬಿಕೊಳ್ಳುವುದು. ಕಾಡಬೆಳುದಿಂಗಳು ಎಂದೆಂದೂ ಬತ್ತದ ಸಿಹಿಭಾವನೆಗಳ ಸೆಲೆಯೇ ಖಂಡಿತವಾಗಿಯೂ…!
ಶ್ರೀಧರ ಪತ್ತಾರ ವಿಜಯಪುರ ಜಿಲ್ಲೆಯವರು. ಪ್ರಸ್ತುತ ಬೆಳಗಾವಿ ಜಿಲ್ಲೆಯ ಖಾನಾಪೂರದಲ್ಲಿ ಬೀಟ್ ಫಾರೆಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದು ಕವನ ಸಂಕಲನ ಮತ್ತು ಒಂದು ಅನುಭವ ಕಥನ ಪ್ರಕಟಿಸಿದ್ದಾರೆ. ಇವರ ಕಥೆಗಳು ವಿವಿಧ
ಸ್ಪರ್ಧೆಗಳಲ್ಲಿ ಮೆಚ್ಚುಗೆ ಬಹುಮಾನ ಗಳಿಸಿವೆ.
Beautiful Writing..
To Understand the Mother Nature. That is Forest.
ಶ್ರೀಧರ, ಬೆಳದಿಂಗಳಲ್ಲಿ ಕಾಣುವ ಕಾಡಿನ ವರ್ಣನೆಯನ್ನು ಓದುತ್ತಲೇ ಇರಬೇಕು ಎನ್ನುವ ಹಾಗಿದೆ ನಿಮ್ಮ ಬರಹ. ಸಕಲ ಜೀವರಾಶಿಗಳನ್ನು ಒಳಗೊಂಡಿರುವ ಕಾಡಿನ ಅದ್ಭುತ ಲೋಕವನ್ನು ನಲ್ಲೆಯ ಜೊತೆಗಿನ ನವಿರಾದ ಪ್ರೀತಿಯೊಂದಿಗೆ ವರ್ಣಿಸಿರುವುದು ಓದಿನ ಖುಷಿ ಹೆಚ್ಚಿಸಿದೆ. ಕಾಡಿನ ಮಕ್ಕಳೇ ಆಗಿ, ಅಲ್ಲಿಯೇ ಬದುಕು ಕಟ್ಟಿಕೊಂಡಿರುವ ನಿಮ್ಮದು ಎಂದೆಂದಿಗೂ ಅತ್ಯಂತ ಸಂತೃಪ್ತಿಯ ಖುಷಿಯ ಜೀವನ . ಮತ್ತಷ್ಟು ಕಾಡಿನ ಕಥೆ ಮೂಡಿ ಬರಲಿ.