ಮಗುವಿನ ಮುಗ್ಧತೆಯ ಸಂಪಾದಿಸುವವರೆಗೂ ಈ ಸಾಧನೆಯ ಯಾನ ನಿರಂತರವಾಗಿ ಮುಂದುವರಿಯುತ್ತಿರಬೇಕು. ಲೋಕದ ಉಪಾಧಿಗಳ ಅಂಟಿನಿಂದ ಬಿಡುಗಡೆಯಾಗುವ ಹಾದಿಯಲ್ಲಿ ಈ ಕವಿ ದಿಟ್ಟ ಹೆಜ್ಜೆ ಇರಿಸಿದ್ದಾನೆ ಎಂಬುದು ಖುಷಿಯ ಸಂಗತಿ. ಅಲ್ಲಲ್ಲಿ ಹಳಹಳಿಕೆಯ ಧ್ವನಿಯೂ, ತಿರಸ್ಕಾರ ಭಾವವೂ, ಆಕ್ರೋಶವೂ ವ್ಯಕ್ತವಾಗಿದೆಯಾದರೂ ಅವರ ತಾತ್ವಿಕ ಹಾದಿಗೆ ಅವು ತೊಡಕಾಗಿ ಉಳಿದಿಲ್ಲ. ನಿರ್ವಾಣನಾಗುವುದರಲ್ಲಿ ಅದಮ್ಯ ಸುಖವಿದೆ ಎಂದು ಸಾರುವ ಅವರ ಕವಿತೆಗಳು ಈ ಸಂಕಲನಕ್ಕೆ ಇಟ್ಟ ಹೆಸರಿಗೆ ಅನ್ವರ್ಥವಾಗಿವೆ.
ಜಿ.ಆರ್. ರೇವಣಸಿದ್ದಪ್ಪನವರ ‘ಬಾಳನೌಕೆಗೆ ಬೆಳಕಿನ ದೀಪ’ ಕವನ ಸಂಕಲನಕ್ಕೆ ಡಾ. ಲೋಕೇಶ್ ಅಗಸನಕಟ್ಟೆ ಬರೆದ ಮುನ್ನುಡಿ
ಕವಿತೆ ಯಾಕಾಗಿ ಮತ್ತು ಯಾವಾಗ ಎಂಬ ಪ್ರಶ್ನೆಗಳನ್ನು ಕಾವ್ಯಮೀಮಾಂಸೆ ಸಾವಿರಾರು ವರ್ಷಗಳಿಂದ ಕೇಳುತ್ತಲೇ ಬಂದಿದೆ ಮತ್ತು ಅದಕ್ಕೆ ಸಮಾನಾಂತರವಾಗಿ ಕಾಲಧರ್ಮದ ನೆಲೆಯಲ್ಲಿ ಉತ್ತರಗಳನ್ನೂ ಅದು ಕಂಡುಕೊಂಡಿದೆ. ಈ ಉತ್ತರ ಸಾಪೇಕ್ಷ ಹಾಗೂ ಕಾಲಧರ್ಮ. ‘ಅದು’ ಎಂದರೆ ‘ಇದು’ ಎಂದು ಖಚಿತವಾಗಿ ಯಾರೂ ಹೇಳಲಾಗದ್ದನ್ನು ನಾವು ಒಪ್ಪಿಕೊಂಡೇ ಮುಂದುವರಿಯುತ್ತಲೇ ಬಂದಿದ್ದೇವೆ. ಇದು ನಿಗೂಢ ಪರತತ್ವವನ್ನು ಕುರಿತ ಮಾತೂ ಹೌದು. ಕಾವ್ಯವೂ ನಿಗೂಢವೇ. ಆದುದರಿಂದಲೇ ಅದು ಸೂಕ್ಷ್ಮದೇಹಿ. ಭಾವನೆಗೆ ನಿಲುಕಿಯೂ ನಿಲುಕದಂತದ್ದು. ಅದು ಅನುಭವಕ್ಕೆ ಮಾತ್ರ ನಿಲುಕುವಂತದ್ದು. ಇಂಥಾ ಅನುಭಾವವನ್ನು ಪದಗಳಲ್ಲಿ ಹಿಡಿಯುವುದೂ ಆ ಕ್ಷಣದ ಸತ್ಯ ಮಾತ್ರವೇ ವಿನಾ ಅದು ಶಾಶ್ವತವೂ ಅಲ್ಲ, ಸರ್ವಗ್ರಾಹಿಯೂ ಅಲ್ಲ. ಅವರವರ ಸಂಸ್ಕಾರ ಸಾಮರ್ಥ್ಯಕ್ಕೆ ದಕ್ಕಿದ್ದಷ್ಟೇ ಪುಣ್ಯಫಲ.
ಪ್ರತಿ ಓದು ಕೂಡ ಇಂಥಾ ಪ್ರಶ್ನೆಗಳನ್ನು ನನ್ನಲ್ಲಿ ಎತ್ತುತ್ತಲೇ ಅದರಲ್ಲಿ ನನಗೆ ದಕ್ಕಿದ್ದೆಷ್ಟು.., ಅದು ನನ್ನೊಳಗಿನ ಅರಿವಿನ ಪರದೆಯ ಸರಿಸಿದ್ದೆಷ್ಟು ಎಂದು ಕೇಳಿಕೊಳ್ಳುತ್ತೇನೆ. ಬಹಳ ಬಾರಿ ಈ ಬಗೆಯ ಓದು ನಿರಾಸೆಯನ್ನೂ ಖುಷಿಯನ್ನೂ ಬೆರಗನ್ನೂ ಹುಟ್ಟಿಸಿದ್ದಿದೆ. ಅಂಥಾ ಕ್ಷಣಗಳಲ್ಲಿ ಆ ಬರವಣಿಗೆಯ ಬರಹಗಾರನನ್ನು ಮೆಚ್ಚಿದ್ದೂ, ಕರುಣೆಯಿಂದ ನೋಡಿದ್ದೂ ಇದೆ. ಇದು ನನ್ನ ಮಿತಿಯೂ ಇದ್ದಿರಬಹುದೆಂಬ ಎಚ್ಚರವೂ ನನಗೆ ಇದ್ದೆ ಇದೆ; ಅದು ಸತ್ಯ ಕೂಡ. ಈ ಮಾತು ಈ ಸಂಕಲನದ ಪದ್ಯಗಳ ಕುರಿತೂ ಹೌದು.
ಜಿ.ಆರ್. ರೇವಣಸಿದ್ದಪ್ಪನವರ ಇಲ್ಲಿನ ಕವಿತೆಗಳನ್ನು ಓದುತ್ತಾ ಹೋದಂತೆ ಸಾಮಾನ್ಯತೆಯಿಂದ ಅಸಾಮಾನ್ಯತೆಗೆ, ಅಮಾನವೀಯ ನೆಲೆಯಿಂದ ಮಾನವೀಯತೆಯ ನೆಲೆಗೆ ಏರುವ ಸಾಧಾರಣೀಕೃತವಾದ ಅನುಭಾವವೊಂದನ್ನು ಪ್ರತಿ ಕವಿತೆಯ ಪ್ರಭಾವಳಿಯಾಗಿ ರೂಪಿಸುವ ಕುಶಲತೆಯೊಂದು ನನಗೆ ಎದುರಾಗಿದೆ. ಇದು ಬುದ್ದಿ ಪೂರ್ವಕವಾದ ಪ್ರಕ್ರಿಯೆಯೋ ಅಥವ ಅದೊಂದು ಸಹಜ ನಡಿಗೆಯೋ ಎಂದು ಪ್ರತಿ ಪದ್ಯದ ಓದಿನ ನಂತರ ನಿಂತು ಧ್ಯಾನಿಸಿದ್ದೇನೆ. ಅದು ಅವರು ಲೋಕವನ್ನು ಮುಗ್ಧಭಾವದ ನೆಲೆಯಲ್ಲಿ ನಿಂತು ನೋಡಿದಾಗ ಅವರೊಳಗೆ ಪ್ರಕ್ಷುಬ್ಧ ಅಲೆಯನ್ನು ಎಬ್ಬಿಸಿದ್ದ ಕ್ರಿಯೆಗೆ ಪ್ರತಿಕ್ರಿಯಾರೂಪವಾದುದು ಎಂದು ಅನ್ನಿಸಿದೆ. ಆದರೆ ಅದು ಕೇವಲ ಪ್ರತಿಕ್ರಿಯೆ ಮಾತ್ರವಾಗದೆ ಪ್ರಕ್ರಿಯಾತ್ಮಕವಾದ ಚಲನೆಯನ್ನು ಹೊಂದಿರುವುದರಿಂದ ಇಡೀ ಸಂಕಲನದಲ್ಲಿ ಒಂದು ಸಾತತ್ಯತೆ ಒದಗಿ ಬಂದಿದೆ. ಇಲ್ಲಿ ಹೆಸರಿಗೆ ಹಲವು ಪದ್ಯಗಳಿದ್ದರೂ ಅದು ಒಂದೇ ಪದ್ಯದಂತೆ, ಧ್ವನಿಯಂತೆ ಭಾವಿತವಾಗುವುದು ಈ ಸಂಕಲನದ ಧನಾತ್ಮಕ ಅಂಶ.
ಗೋಪಾಲಕೃಷ್ಣ ಅಡಿಗರ ಮಾತು ‘ಇರುವುದೆಲ್ಲವ ಬಿಟ್ಟು ಇರದುದರೆಡೆ ಸಾಗುವ…’ ಒಂದು ಪ್ರಯತ್ನದ ಆಶಯದಂತೆ ಇಲ್ಲಿಯ ಕವಿತೆಗಳನ್ನು ನಿರ್ವಚಿಸಲಾಗಿದೆ. ಅಂದರೆ ಲೋಕವನ್ನು ಅದು ಇರುವ ಹಾಗೆಯೇ ಗ್ರಹಿಸುವ, ಮತ್ತು ಅದರ ವ್ಯವಹಾರಗಳ ಮಿತಿಗಳನ್ನು ಗುರುತಿಸುತ್ತಾ ಅದರಾಚೆಗೆ ದಾಟಿಕೊಳ್ಳುವ ಒಂದು ಆಶಯವನ್ನು, ತುಡಿತವನ್ನು ಇಲ್ಲಿನ ಬಹುತೇಕ ಪದ್ಯಗಳು ಮಾಡುತ್ತವೆ. ಗೃಹೀತಗಳಾಚೆ ಹೋಗಬೇಕೆನ್ನುವ ವಾಂಛೆಯು ರಚನೆಗಳನ್ನು ನಿರಚನಗೊಳಿಸಲೇಬೇಕೆನ್ನುವ ಬೌದ್ಧಮೀಮಾಂಸೆಯ ತಾತ್ವಿಕತೆಗೆ ತೀರಾ ಹತ್ತಿರವಾದುದು. ಇದೆಲ್ಲವನ್ನು ನಿರ್ವಹಿಸುವಾಗ ಆಪ್ತತೆಯಿಂದ ಗೆಳೆಯನಂತೆ ಮಾತಾಡುವ ‘ಮಿತ್ರಸಂಹಿತೆ’ ಭಾವಸ್ಥಿತಿಯನ್ನು ಇವರ ಪದ್ಯಗಳು ಹೊಂದಿರುವುದರಿಂದ ಸಹ್ಯ ಓದಿಗೆ; ಹೃದ್ಯ ಸಂವೇದನೆಗೆ ಕಾರಣೀಭೂತವಾಗುತ್ತವೆ. ಇದು ಕವಿಯೊಬ್ಬನ ನಿಜದ ನಡಿಗೆಯನ್ನು ಪ್ರಕಟಿಸುವಂತಾದ್ದು. ಆದುದರಿಂದ ಈ ಪದ್ಯಗಳ ಪಿಸುದನಿಯನ್ನು ಆಲಿಸಿ ಮುನ್ನಡೆದಾಗ ಓದು ಸಾರ್ಥಕವೆನ್ನಿಸುತ್ತದೆ.
ಹತ್ತಿರ ಸೆಳೆದೂ
ದೂರ ನಿಲ್ಲುವ,
ದೂರ ಸರಿದೂ
ಹತ್ತಿರವಾಗುವ,
ಮೋಡಿಯೀಗ
ಸಾಕೆನಿಸಿದೆ
(ಇರುವುದೊಂದೇ ಭೂಮಿಯ ಮೇಲೆ)
ಒಳಗೂ ಬೆಂಕಿ;
ಹೊರಗೂ ಬೆಂಕಿ;
ನಡುವೆ ಆತ್ಮದ ಆರ್ತನಾದ.
(ಬೆಂಕಿ)
ಈ ಹೊತ್ತು
ನಾನು ಜೀವಂತವಾಗಿದ್ದೇನೆ.
ನಿಮ್ಮ ನಾಗರಿಕತೆಯ
ಗಂಧವಿಲ್ಲದ
ನಾನೋರ್ವ ಮನುಷ್ಯ ಮಾತ್ರ.
(ಕೋರಿಕೆ)
ಲೋಕದ ದಂದುಗ ಮತ್ತು ಅದರ ಮಿತಿಗಳನ್ನು ಅತಿ ಸೂಕ್ಷ್ಮವಾಗಿ ಗ್ರಹಿಸುತ್ತ ಸೋತಭಾವದಲ್ಲಿ ವ್ಯಕ್ತವಾಗುವ ಭಾವವೇ ವ್ಯಕ್ತಿಯನ್ನು ದೃಢಗೊಳಿಸುವ ನಿರ್ಧಾರವಾಗಿ ಬದಲಾಗುವುದು ಧನಾತ್ಮಕ ಅಂಶವೇ. ತನ್ನೊಳಗಿನ ತಾಕಲಾಟಗಳು ಮನುಷ್ಯನನ್ನು ಅರಿವಿನ ಎತ್ತರಕ್ಕೆ ಕೊಂಡೊಯ್ಯುವ ಸೋಪಾನವಾದಾಗಲೇ ನಿಜ ಬದುಕಿನ ದರ್ಶನವಾಗುವುದು. ಆ ನಂಬುಗೆ ಕವಿಯಲ್ಲಿ ಗಾಢವಾಗಿರುವುದರಿಂದಲೇ ಲೋಕದ ಜಂಜಡತೆಯಿಂದ ದೂರ ನಿಲ್ಲುವ ‘ಕೇವಲ ಮನುಷ್ಯನಾಗುವ’ ನಿರ್ವಾಣದ ಮಾತುಗಳನ್ನು ಆಡುತ್ತಾನೆ.
ಮನುಷ್ಯನ ವರ್ತನೆ ಈತನಿಗೆ ಅಪರಿಚಿತವೇನಲ್ಲ. ಏಕೆಂದರೆ ಈತನೊಬ್ಬ ಸೂಕ್ಷ್ಮ ಸಂವೇದನೆಯ ಸೃಜನಶೀಲ ವ್ಯಕ್ತಿ. ಅದಕ್ಕೆಂದೆ ಈತ ಹೇಳುತ್ತಾನೆ
ಈಗೀಗ
ಹೃದಯತುಂಬಿ
ಬರಮಾಡಿಕೊಳ್ಳುವುದು
ಆಸಹಜವಾಗಿದೆ!
(ಈಗೀಗ)
ಶ್ರೇಷ್ಠ ನಿಕೃಷ್ಟ
ಚಿಕ್ಕದು ದೊಡ್ಡವುಗಳೆಲ್ಲ
ಕರಗಿಹೋಗಿರುವಾಗ
ಈ ನಾನು ಅಷ್ಟೇ ತಾನೇ?
(ಕೋರಿಕೆ)
ತನ್ನೊಳಗೇ ನಡೆಸುವ ಆತ್ಮ ಸಂವಾದದಂತೆ ಕಾಣುವ ಈ ಮಾತುಗಳಲ್ಲಿ ‘ನಾನು’ ಎನ್ನುವುದು ಕರಗಿ ಹೋಗದೆ ಇರುವತನಕ ಈ ಲೋಕದ ವ್ಯಾಮೋಹ ತೀರುವುದಿಲ್ಲ. ನಾನು, ನನ್ನದು, ನಮ್ಮವರು ಎಂಬ ಭಾವ ಅಳಿದಾಗಲೇ ನಿಜದ ಸುಖ ಕಂಡುಕೊಳ್ಳಲು ಸಾಧ್ಯ. ಇಲ್ಲವೆಂದರೆ ದಿನವೂ ದುಃಖಿಸುತ್ತಾ, ಹತಾಶನಾಗುತ್ತ ಹೋಗುವುದೇ ಬದುಕಿನ ರೀತಿಯಾಗಿ ಬಿಡುತ್ತದೆ. ಅದಕ್ಕೆ ತಾನೇ ಅಂದುಕೊಳ್ಳುತ್ತಾನೆ…
ಎಷ್ಟಂತ ಹನಿಯ ಹನಿಸಿ
ಕಣ್ಣ ಕಡಾಯಿಯ
ಬತ್ತಿಸಿಕೊಳ್ಳುವೆ?
(ಇನ್ನಿಲ್ಲವಾದಾಗ)
ಇದ್ದೂ ಇಲ್ಲದಂತೆ
ಇಲ್ಲದೆಯೂ ಇರುವಂತೆ
(ಇನ್ನಿಲ್ಲವಾದಾಗ)
ನಿರ್ಲಿಪ್ತ ಭಾವಸ್ಥಿತಿಗೇರುವ ತನಕ ಇದಕ್ಕೆ ಬಿಡುಗಡೆಯಿಲ್ಲ ಎಂಬ ಅರಿವನ್ನು ಕಂಡುಕೊಳ್ಳುವ ಕವಿಗೆ ಇದು ಕಷ್ಟದ ದಾರಿಯೆಂಬುದೂ ತಿಳಿಯದಿಲ್ಲ. ಅದು ಸರಾಗವಾಗಿ ನಡೆಯಲ್ಲ,
ಮತ್ತೆ ಮತ್ತೆ ಚಲಿಸುತ್ತೇನೆ.
ಓಡುತ್ತಿಲ್ಲ ನಾನು;
ತೆವಳುತ್ತಲೂ ಇಲ್ಲ;
ನಡೆಯುತ್ತಿದ್ದೇನೆ,
ನನ್ನದೇ ವೇಗದಲ್ಲಿ.
ನಡೆಯುತ್ತಲೇ ಇರುತ್ತೇನೆ,
ಗಮ್ಯವ ಸೇರುವ ತನಕ
ಇಲ್ಲಾ ಕಾಲುಗಳು ಸೋಲುವ ತನಕ.
(ಎಲ್ಲಿಂದಲೋ ಬಂದವನು)
ಅದಮ್ಯವಾದ ಈ ನಂಬುಗೆಯ ಹಾದಿಯಲ್ಲಿ ವಿವೇಚನಾಯುತವಾಗಿ, ಸಂಯಮದಿಂದ ಬದುಕಿನ ನಡೆಯನ್ನು ಗಮನಿಸುವ ಪ್ರಯತ್ನ ಮುಂದಿನದು. ಅಲ್ಲೂ ಪರಂಪರೆಯ ವಿವೇಚನೆಯೊಂದಿಗೆ ಹೊರಡುವಂತಾದ್ದು.
ಹಾಗೆ ಬಂದುದು,
ಇಂತು ನಿಂದುದು,
ಇಲ್ಲಿಗೇ ಅಂತ ಕಾಣುವುದೇ?
(ಇರುವುದೊಂದೇ ಭೂಮಿಯ ಮೇಲೆ)
ಅಂಟು ಆರಿ,
ನಂಟು ಕಳಚಿ,
ಸೂಕ್ಷ್ಮದೇಹಿಯಾದರಿಲ್ಲ
(ಇರುವುದೊಂದೇ ಭೂಮಿಯ ಮೇಲೆ)
ಗೃಹೀತಗಳಾಚೆ ಹೋಗಬೇಕೆನ್ನುವ ವಾಂಛೆಯು ರಚನೆಗಳನ್ನು ನಿರಚನಗೊಳಿಸಲೇಬೇಕೆನ್ನುವ ಬೌದ್ಧಮೀಮಾಂಸೆಯ ತಾತ್ವಿಕತೆಗೆ ತೀರಾ ಹತ್ತಿರವಾದುದು. ಇದೆಲ್ಲವನ್ನು ನಿರ್ವಹಿಸುವಾಗ ಆಪ್ತತೆಯಿಂದ ಗೆಳೆಯನಂತೆ ಮಾತಾಡುವ ‘ಮಿತ್ರಸಂಹಿತೆ’ ಭಾವಸ್ಥಿತಿಯನ್ನು ಇವರ ಪದ್ಯಗಳು ಹೊಂದಿರುವುದರಿಂದ ಸಹ್ಯ ಓದಿಗೆ; ಹೃದ್ಯ ಸಂವೇದನೆಗೆ ಕಾರಣೀಭೂತವಾಗುತ್ತವೆ.
ತತ್ಕಾಲಿನತೆಯನ್ನೇ ಪರಮವೆಂಬ ಮಾಯಕ ಕನ್ನಡಿಯ ಮುಂದೆ ನಿಂತು ನಟಿಸುವುದರಾಚೆಗೆ, ಬಿಂಬರಹಿತರಾಗಿ-ನಿರಾಕಾರ-ಸ್ಥಿತಿ ತಲುಪಬೇಕಾದ ಗಮ್ಯವನ್ನು ಶ್ರಮಣ ಪರಂಪರೆಗಳೂ ಸೇರಿದಂತೆ ಭಾರತೀಯ ತತ್ವಚಿಂತನೆಗಳು ಮುಂದಿರಿಸಿರುವ ಅರಿವು ಈ ಕವಿತೆಯ ನಾಯಕನಿಗೆ ಬಂದಿರುವಂತಾದ್ದೆ. ಮತ್ತು ಸಕಲ ಚರಾಚರಗಳಲ್ಲಿ ಸಾಮ್ಯ ದೃಷ್ಟಿಗತವಾಗುವವರೆಗೂ ಈ ಪಯಣ ಕೊನೆಗೊಳ್ಳಲಾರದೆಂಬ ಅರಿವು ಬಂದು ಹೋಗುವುದು ಅನೇಕ ಬಾರಿ.
ದೇವರ ಕುಲುಮೆಯಲ್ಲಿ
ಸೃಜಿಸಿದ
ಅಗಣಿತ ಜೀವಿಗಳಲ್ಲಿ
ನಾಯಿಯೂ ಒಂದು;
ಮನುಷ್ಯನೂ ಹೌದು!
(ನಾಯಿಪಾಡು)
ಇದೆಲ್ಲವೂ ಸಾಧ್ಯವಾಗುವುದು ತನ್ನದೇ ಅರಿವಿನ ಮಾರ್ಗದಲ್ಲಿ, ಬೆಳಕಿನ ಹಾದಿಯಲ್ಲಿ ಮುನ್ನಡೆದಾಗ. ಯಾರದೋ ಮಾತು, ಹೇಳಿಕೆಗಳೂ ನನ್ನ ‘ಬಾಳನೌಕೆಗೆ ಬೆಳಕಾಗದು.’ ತಾನೇ ತನ್ನ ಹಾದಿಯ ದಾತಾರನಾದಾಗ ಮಾತ್ರ ಸಾಧ್ಯ ಎನ್ನುವ ತಿಳುವಳಿಕೆಯ ಬೆಳಕಿನಲ್ಲಿ ಈ ನಾಯಕ ಹೆಜ್ಜೆ ಇರಿಸುತ್ತಾನೆ. ಬೇರೆಯವರ ಹಾದಿಯ ಅನುಕರಿಸಬಹುದು ಆದರೆ, ಅದು ತಾನೇ ಕೈಗೊಳ್ಳುವ, ತನ್ನ ಅರಿವಿನಿಂದಲೇ ಮೂಡಿದ ನಿಲುವಾಗಿರುವುದಿಲ್ಲ…
ಪಲಾಯನಗೈಯಬಹುದು
ಸಿದ್ಧಾರ್ಥ ಮಧ್ಯ ರಾತ್ರಿಯಲ್ಲಿ
ಎದ್ದು ಹೋದಂತೆ
(ಪಲಾಯನ)
ಸಿದ್ಧಾರ್ಥ ತಥಾಗತನಾಗುವ ಮೊದಲು ತಾನು ಕಂಡುಕೊಂಡ ಹಾದಿ ಇದು. ಇದು ತನಗೂ ಅನ್ವಯವಾಗುವುದು ಯಾವಾಗ ಎಂದರೆ, ‘ಸ್ವತಃ ಬುದ್ಧನಾಗದೆ’
ನಮ್ಮನಮ್ಮ
ಬುದ್ಧರು, ಬಸವರು, ಅಂಬೇಡ್ಕರ್ಗಳು,
ಗಾಂಧಿಗಳು
ತಮ್ಮತಮ್ಮಲ್ಲೇ
ಘರ್ಷಣೆಗಿಳಿದಾಗ
ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ,
ನಿಜಕ್ಕೂ
ಹೋಗುತ್ತಾರೆ!
(ಬುದ್ಧ, ಬಸವ…..)
ಬರಿದೇ ಬಾಯಚಪಲಕ್ಕೆ ತತ್ವಾರಾಧನೆ, ಭಜನೆಮಾಡುತ್ತಾ ನಿಲ್ಲದೆ ಇವೆಲ್ಲ ಬಂಧನಗಳ ಕಳಚುವ ಪ್ರಕ್ರಿಯೆ ತನ್ನೊಳಗೇ ಮಥಿಸಿದಾಗ ತನ್ನ ದಾರಿಗೆ ಹೊಸ ಪರಿದಿಯೊಂದು ಅನಾವರಣವಾಗುತ್ತದೆ – ಎಂಬ ಚಿಂತನೆ ಕವಿಯ ನಡೆಯ ಸಾರ್ಥಕತೆಯನ್ನು ಸೂಚಿಸುತ್ತದೆ.
ಅಂತಿಮವಾಗಿ ಯಾವ ಬರವಣಿಗೆಯಾಗಲಿ, ಬದುಕಾಗಲಿ ಅದು ತನ್ನನ್ನು ತಾನು ಕಂಡುಕೊಂಡು ಹಾಗೆ ಮುನ್ನಡೆಯುವ ಒಂದು ಕ್ರಿಯೆ. ಅದು ಸಾರ್ಥಕ. ಈ ಎಚ್ಚರ ಇಡೀ ಸಂಕಲನದುದ್ದಕ್ಕೂ ಮೈಚಾಚಿಕೊಂಡಿದೆ.’ಸಾಗರ’ ‘ಅಯೋಮಯ’ ‘ಪ್ರಕೃತಿ’ ‘ಅಪರಿಚಿತರು’ ‘ಮಗುವಾದರೂ ಆಗದೇ?’ ‘ಯಂತ್ರಜೀವಿ’ ‘ಬೆಂಕಿ’ ‘ಎಳೆಗಾಯಿ’ – ಪದ್ಯಗಳನ್ನು ಈ ಹಿನ್ನೆಲೆಯಲ್ಲಿ ಎದುರಾಗಬಹುದು.
ಮನುಷ್ಯನಾದರೆ ಸಾಲದೇ?
ಮಗುವಾದರೂ ಆಗದೇ?
(ಮಗುವಾದರೂ ಆಗದೇ?)
ಮಗುವಿನ ಮುಗ್ಧತೆಯ ಸಂಪಾದಿಸುವವರೆಗೂ ಈ ಸಾಧನೆಯ ಯಾನ ನಿರಂತರವಾಗಿ ಮುಂದುವರಿಯುತ್ತಿರಬೇಕು. ಲೋಕದ ಉಪಾಧಿಗಳ ಅಂಟಿನಿಂದ ಬಿಡುಗಡೆಯಾಗುವ ಹಾದಿಯಲ್ಲಿ ಈ ಕವಿ ದಿಟ್ಟ ಹೆಜ್ಜೆ ಇರಿಸಿದ್ದಾನೆ ಎಂಬುದು ಖುಷಿಯ ಸಂಗತಿ. ಅಲ್ಲಲ್ಲಿ ಹಳಹಳಿಕೆಯ ಧ್ವನಿಯೂ, ತಿರಸ್ಕಾರ ಭಾವವೂ, ಆಕ್ರೋಶವೂ ವ್ಯಕ್ತವಾಗಿದೆಯಾದರೂ ಅವರ ತಾತ್ವಿಕ ಹಾದಿಗೆ ಅವು ತೊಡಕಾಗಿ ಉಳಿದಿಲ್ಲ. ನಿರ್ವಾಣನಾಗುವುದರಲ್ಲಿ ಅದಮ್ಯ ಸುಖವಿದೆ ಎಂದು ಸಾರುವ ಅವರ ಕವಿತೆಗಳು ಈ ಸಂಕಲನಕ್ಕೆ ಇಟ್ಟ ಹೆಸರಿಗೆ ಅನ್ವರ್ಥವಾಗಿವೆ.
ಒಬ್ಬರ
ಕೈಕುಲುಕುವುದು
ಆಲಂಗಿಸುವುದು
ಹಗುರಾಗುವುದು
ಎಷ್ಟು ಸಲೀಸು!
(ಅಪರಿಚಿತರು)
ಇಂತಹ ಸಂಕಲನ ನೀಡಿದ ಜಿ.ಆರ್. ರೇವಣಸಿದ್ದಪ್ಪನವರ ಕಾವ್ಯಯಾನ ಇನ್ನಷ್ಟು ಕಾಣ್ಕೆಗಳನ್ನು ನೀಡಲೆಂದು ಆಶಿಸುತ್ತೇನೆ.
ಡಾ.ಲೋಕೇಶ್ ಅಗಸನಕಟ್ಟೆ
ಜಿ.ಆರ್. ರೇವಣಸಿದ್ದಪ್ಪನವರ ಕೆಲವು ಕವಿತೆಗಳು
ಇನ್ನಿಲ್ಲವಾದಾಗ
ಇಂದು,ನಾಳೆ,
ಇಲ್ಲಾ ನಾಳಿದ್ದು,
ಈ ಕ್ಷಣ,ಮರುಕ್ಷಣ,
ಅಥವಾ
ಆ ಒಂದು ಕ್ಷಣ
ನಾನು ಇಲ್ಲವಾದಾಗ
ಎಲ್ಲಾ ಇರುವಂತೆ
ಎಲ್ಲವೂ ಸಾಂಗವಾಗಿ
ಸಾಗುತ್ತವೆ.
ಲೋಕದ ಮೋಟಾರು
ಯಾರೊಬ್ಬರ ಉಸಿರು
ಹೋದಾಗಲೂ
ಪಂಕ್ಚರ್ ಆಗುವುದಿಲ್ಲ;
ಯಾರೊಬ್ಬರ ಕಣ್ಣೀರಿಗೂ
ಪ್ರವಾಹವಾಗುವ ಶಕ್ತಿಯಿಲ್ಲ;
ಯಾರೊಬ್ಬರ ನಿಟ್ಟುಸಿರು
ಬಿರುಗಾಳಿ ಎಬ್ಬಿಸುವುದಿಲ್ಲ;
ಯಾರೊಬ್ಬರ ಹೃದಯ
ಛಿದ್ರವಾಗಿ
ಭೂಕಂಪನವಾಗುವುದಿಲ್ಲ.
ಗತಿಸಿದವರಿಗೆ
ಬದುಕಿದವರು
ಸಾಥ್ ಕೊಡುವಂತಿದ್ದರೆ
ಪಂಚಭೂತಗಳೂ
ಗುದ್ದು ಸೇರುತ್ತಿದ್ದವು.
ಎಷ್ಟಂತ ಹನಿಯ ಹನಿಸಿ
ಕಣ್ಣ ಕಡಾಯಿಯ
ಬತ್ತಿಸಿಕೊಳ್ಳುವೆ?
ಎದೆ ನಗಾರಿಯ
ಎನಿತು ಬಡಿದು
ರೋಧಿಸುವೇ?
ಎಷ್ಟು ಕಾಲ
ನಿನ್ನೊಳಗಿನ
ನನ್ನ ನೆನಪಿನ ಗಿಡಕ್ಕೆ
ನೀರೆರೆದು
ಹಸಿರಾಗಿಡುವೆ?
ಸತ್ತವರಿಗೆಲ್ಲಾ
ಸ್ಮಾರಕ ಕಟ್ಟಿಸುವಂತಿದ್ದರೆ
ಬದುಕುವವರಿಗೆ
ಜಾಗವೇ ಇರುತ್ತಿರಲಿಲ್ಲ.
ತನುತೊರೆದವನ
ಆಸೆ ನಿರಾಸೆ
ನೋವು ನಲಿವು
ದುಗುಡ ದುಮ್ಮಾನ
ಅವನೊಂದಿಗೇ
ಮಸಣ ಸೇರಿ
ಇರುವವರ
ಆಡಿಸುತ್ತವೆ
ಇನ್ನಿಲ್ಲದಂತೆ.
ಇದ್ದೂ ಇಲ್ಲದಂತೆ
ಇಲ್ಲದೆಯೂ ಇರುವಂತೆ
ಭಾಸವಾಗುವ
ಮಾಯಕ ಜಗದಿ
ಅಂತೆಯೇ
ಒಪ್ಪಿಕೊಂಡು
ಅಪ್ಪಿಕೊಂಡು
ಮುಪ್ಪುರಿಗೊಳ್ಳಬೇಕು.
ಜ್ಯೋತಿರ್ವರ್ಷಗಳ ದೂರದಲ್ಲಿ
ಇರುವುದ
ಅರುಹುಹರಿಲ್ಲ;
ಜ್ಯೋತಿರ್ವರ್ಷಗಳು
ಉರುಳುರುಳಿ ಪೋಗಲು
ಏನಿರ್ಪುದೋ ಬಲ್ಲವರಿಲ್ಲ;
ಇಂದಿರುವುದೇನೋ ಒಂದು
ಆ ಒಂದರೊಳಗೊಂದಾಗಿ
ಬಾಳಬೇಕು ಎಂದೂ.
***
ಇವಳು ಸುಳಿದಾಗ
ಇವಳು ಸುಳಿದಾಗ
ಕಾಮ ಕೆರಳುವುದಿಲ್ಲ;
ಮೋಹ ಸೆಳೆಯುವುದಿಲ್ಲ;
ಕೈಮುಗಿಯಬೇಕೆಂಬ ಭಾವ.
ಇವಳು ಮುಖಾಮುಖಿಯಾದಾಗ
ಮಾತು ಹೊರಡುವುದಿಲ್ಲ;
ಮನವು ಕಲಕುವುದಿಲ್ಲ;
ಮೌನದಾನಂದದನುಭವ.
ಇವಳು ಹಾಜರಾದಾಗ
ಕತ್ತಲು ಕವಿಯುವುದಿಲ್ಲ;
ಬೆಳಕು ಸರಿಯುವುದಿಲ್ಲ;
ಪರಂಜ್ಯೋತಿಯ ಭವ್ಯ ಪ್ರಸರಣ.
ಇವಳು ಪ್ರತ್ಯಕ್ಷವಾದಾಗ
ದೇಹ ಬಾಧಿಸುವುದಿಲ್ಲ;
ಪ್ರಪಂಚ ಕಾಡಿಸುವುದಿಲ್ಲ;
ಇದುವೆ ದಿವ್ಯ ಶಕ್ತಿಯ ಭವ್ಯ ಸನ್ನಿಧಾನ.
***
ಅಪರಿಚಿತರು
ಇವ ಬಾರಿನಲ್ಲಿ ಕುಳಿತು
ಬೀರು ಹೀರುತ್ತಿದ್ದ.
ಎದುರು ಕುಳಿತಿದ್ದ
ಅಪರಿಚಿತ ಕುಡುಕನೊಬ್ಬ
ಪರಿಚಿತ ನಗೆ ನಕ್ಕು
ಒಂದು ಸಿಗರೇಟಿಗೆ
ಬೇಡಿಕೆ ಇಟ್ಟ.
ಬೇಡಿದವನು
ಭಿಕಾರಿಯಾಗಿರಲಿಲ್ಲ.
ಬಾಲ್ಯದ ಸ್ನೇಹಿತನಿಗೆ
ಕೊಡುವಂತೆ
ಇವ ಅವಗೆ
ಸಿಗರೇಟೊಂದ ಕೊಟ್ಟು
ಪುಳಕಿತನಾದ.
ಸುರುಳಿಯಾಗಿ ತೇಲುತ್ತಿದ್ದ
ಹೊಗೆಯಂತೆ ಹರಿಯತೊಡಗಿತ್ತು
ಮಾತಿನ ಲಹರಿ ಈರ್ವರ ಮಧ್ಯೆ.
ಅವರ ಮಾತಿನಲ್ಲಿ
ಬಂದು ಹೋದರು
ಅವರವರ
ಹೆಂಡತಿ ಮಕ್ಕಳು
ಬಂಧು ಬಳಗ;
ಬಂದು ಹೋದವು
ವೃತ್ತಿ ಪ್ರವೃತ್ತಿ ಎಲ್ಲಾ.
ಕೊನೆಯ ಗುಟುಕು
ಕುಡಿದು ಇವನು ಮೇಲೆದ್ದಾಗ
ಅವನು ಮರೆಯಲಿಲ್ಲ
ಹುಷಾರಾಗಿ ಹೋಗಿರೆಂದು
ಹೇಳಲು
ಮತ್ತೆ ಸಿಗೋಣವೆಂದು
ಕೈಕುಲುಕಲು.
ಮಂದ ಬೆಳಕಿನಲ್ಲಿ
ಮನುಷ್ಯತ್ವ
ಹೇಗೆ ತೆರೆದುಕೊಳ್ಳುತ್ತದೆ ನೋಡಿ!
ಒಬ್ಬರ
ಕೈಕುಲುಕುವುದು
ಆಲಂಗಿಸುವುದು
ಹಗುರಾಗುವುದು
ಎಷ್ಟು ಸಲೀಸು!
ಒಮ್ಮೊಮ್ಮೆ
ಅಂದುಕೊಳ್ಳುತ್ತೇನೆ
ರಣರಂಗದಲ್ಲಿ
ಎದುರಾಗುವ ಅಪರಿಚಿತರು
ತಮ್ಮತಮ್ಮ
ಬಂದೂಕು ಬದಿಗಿಟ್ಟು
ಪರಸ್ಪರ
ಸುಖದುಃಖ
ವಿಚಾರಿಸುವಂತಾದರೆ
ಪಾಪಾಸ್ ಕಳ್ಳಿಯ ಜಾಗದಲ್ಲಿ
ಗುಲಾಬಿ ನಳನಳಿಸುತ್ತದೆ.
(ಕೃತಿ: ‘ಬಾಳನೌಕೆಗೆ ಬೆಳಕಿನ ದೀಪ'(ಕವನ ಸಂಕಲನ), ಲೇಖಕರು: ಜಿ.ಆರ್. ರೇವಣಸಿದ್ದಪ್ಪ, ಪ್ರಕಾಶನ ಯಶೋಧ ಪುಸ್ತಕ ಪ್ರಕಾಶನ)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ