ಪ್ರಸನ್ನರ ಕತೆಗಳು ಆಧುನಿಕ ಬದುಕಿನ ಸಂವೇದನೆಗಳನ್ನೂ ದಾಖಲಿಸುತ್ತವೆ. ವಿಜ್ಞಾನ, ತಂತ್ರಜ್ಞಾನದ ಅನೇಕ ಸಂಗತಿಗಳು ಕತೆಯಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಕತೆಗಳು ವರದಿಯಾಗಬಾರದು. ಸಾಹಿತ್ಯ ಕೃತಿಗಳಾಗಬೇಕು. ಸಂದೇಶವನ್ನು ರವಾನಿಸಬೇಕು. ಸಮಾಜದ ಪ್ರಗತಿಗೆ ಬೆಳಕಿಂಡಿಗಳನ್ನು ತೆರೆಯಬೇಕು ಎಂದು ನಂಬಿದವನು ನಾನು. ಕೆಲವು ಕತೆಗಳು ಆ ಕೆಲಸವನ್ನು ಪೂರೈಸಿವೆ. ವಿಜ್ಞಾನ, ದೇಶ-ವಿದೇಶಗಳ ವಸುಗಳು ಕತೆಯಾಗುತ್ತಿರುವುದು ವಿಶೇಷ. ಆದರೆ ಮೌಢ್ಯವನ್ನು ಬಿತ್ತಬಾರದು. ಈ ನೆಲೆಯಲ್ಲಿ ಕತೆಗಾರರು ಗಮನಿಸಲಿ. ಕೆಲವೆಡೆ ಕತೆಯ ಶಿಲ್ಪ ಕೆಡದಂತೆ ನಿಗಾ ವಹಿಸಬೇಕಿದೆ. ಭಾಷೆ-ಭಾವಗಳು ಒಂದಾದರೆ ಕತೆಗಳು ಓದುಗನನ್ನು ಮುಟ್ಟುತ್ತವೆ.
ಡಾ. ಪ್ರಸನ್ನ ಸಂತೇಕಡೂರು ಕಾದಂಬರಿ “ಸು” ಕುರಿತು ಡಾ. ಮಹೇಂದ್ರಮೂರ್ತಿ ದೇವನೂರು ಬರಹ
`ಸು’ ಕಾದಂಬರಿ, `ಮಾಯಾಪಂಜರ’ ಕಥಾಸಂಕಲನಗಳ ಮೂಲಕ ಸಾಹಿತ್ಯದಲ್ಲಿ ಹೆಜ್ಜೆಗುರುತುಗಳನ್ನು ಮೂಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿರುವ ಪ್ರಸನ್ನ ಸಂತೇಕಡೂರು ಅವರ ಮತ್ತೊಂದು ಕಥಾಸಂಕಲನ `ಬಾಲಕ ಮತ್ತು ಕಾರಂತಜ್ಜ’ ಅನೇಕ ಕಾರಣಗಳಿಂದ ಮಹತ್ವ ಪಡೆದಿದೆ. ನಿರೂಪಕರ ಬಾಲ್ಯದ ಅನುಭವಗಳು ಕತೆಯಲ್ಲಿ ಮೈದಾಳಿ ಆತ್ಮಕತೆಯ ಅನೇಕ ತುಣುಕುಗಳು ಇಣುಕಿ ನೋಡಿವೆ. ಎಂಟು ಕತೆಗಳಿರುವ ಈ ಸಂಕಲನ ಓದುಗರ ಮನೋವಲಯವನ್ನು ಹಿಗ್ಗಿಸುವ ಪ್ರಯತ್ನದಲ್ಲಿದೆ. ಪ್ರಸನ್ನ ಅವರು ಕತೆಯ ವಸ್ತುಗಳಿಗೆ ವರ್ತಮಾನ ಕಾಲದ ತಮ್ಮ ಅನುಭವಗಳನ್ನು ಆಶ್ರಯಿಸಿ, ಕಾವು ಕೊಟ್ಟು ಬೆಳೆಸಿದ್ದಾರೆ. ತಂತ್ರ, ಶೈಲಿ, ಭಾಷೆ, ಅಭಿವ್ಯಕ್ತಿ ವಿಧಾನಗಳು ಆಸಕ್ತಿದಾಯಕವಾಗಿವೆ.
ಸಂಕಲನದ ಮೊದಲ ಕತೆ `ಬಾಲಕ ಮತ್ತು ಕಾರಂತಜ್ಜ’ದಲ್ಲಿ ಕತೆಗಾರರ ಆತ್ಮಕತೆಯೇ ಬಿಚ್ಚಿದೆ. ಕನ್ನಡದ ಅಪರೂಪದ ಬಹುಮುಖ ಪ್ರತಿಭೆ ಶಿವರಾಮ ಕಾರಂತರ ಬದುಕಿನ ವಿವರಗಳು ಮರುಮೈಪಡೆದಿರುವುದು ವಿಶೇಷ. ಬಾಲಕರ ಕಣ್ಣಿನಲ್ಲಿ ಕಾರಂತರ ಮರು ವ್ಯಾಖ್ಯಾನವಿದೆ. ಮಾದಿಗರ ರಂಗನ ಶ್ರಮಮೂಲ ಸಂಸ್ಕೃತಿಯ ಬದುಕು ಅನಾವರಣಗೊಂಡಿದೆ. ರಂಗನಲ್ಲಿ `ಚೋಮ’ನೇ ಕಾಣುತ್ತಾನೆ. ಕಾರಂತರ ಭಾಷಣ, ಬಾಲಕನ ಪ್ರಶ್ನೆಗಳಿಗೆ ಉತ್ತರಿಸುವುದು, ಪುಸ್ತಕಗಳನ್ನು ನೀಡಿದ್ದು ಕಾರಂತರ ಮಹವ್ಯಕ್ತಿತ್ವದ ದರ್ಶನ ಮಾಡಿಸುತ್ತದೆ. ಕಾರಂತರೊಂದಿಗೆ ಫೋಟೋ ತೆಗೆಸಿಕೊಳ್ಳಲಾಗದ ಬಾಲಕನ ಬಡತನ ಚಿಂತನೆಗೆ ಒಳಗು ಮಾಡಿದೆ. ಬಡವರ ನಗುವಿನ ಶಕ್ತಿಯ ಮಹತ್ವನ್ನು ಕತೆ ಸಾರಿದೆ. ಇದೇ ಬಾಲಕ ಪಶ್ಚಿಮದಲ್ಲಿ ಉದ್ಯೋಗಿಯಾಗಿ ಆರ್ಥಿಕ ಸಬಲನಾಗಿ ಕೊನೆಗೆ ಮರಳಿ ತಾಯ್ನಾಡಿಗೆ ಬಂದು ಬದುಕು ಕಂಡುಕೊಂಡಿದ್ದು ಸಾರ್ಥಕವೆಂಬಂತೆ ಕತೆ ನಿರೂಪಿಸಿದೆ.
ಈ ಕತೆಯ `ರಂಗ’ನಂತೆಯೇ `ಹಾಲಜ್ಜಿ’ ಕತೆಯ ಹಾಲಜ್ಜಿ ಕೂಡ ಶ್ರಮಮೂಲ ಸಂಸ್ಕೃತಿಯಾಕೆ. ಹಿರಿಯ ಜೀವಿ ಹಾಲಜ್ಜಿ ಪ್ರಕೃತಿ ಜೀವಿ. ದೈವಭಕ್ತೆ, ಜಾನಪದ ಸಿರಿ. ಆಕೆಯ ಜ್ಞಾನವನ್ನು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೇ ಕೊಳ್ಳೆ ಹೊಡೆಯುತ್ತಾರೆ. ಗ್ರಾಮಚರಿತ್ರೆ ಆಕೆಗೆ ಅಂಗೈಯಷ್ಟೇ ಸುಲಭ. ಆಧುನಿಕತೆ ದೇಸೀತನವನ್ನು ಹೇಗೆ ಹಾಳು ಮಾಡಿತು ಎಂಬುದನ್ನು ಕತೆ ತುಂಬಾ ಮನೋಜ್ಞವಾಗಿ ಚಿತ್ರಿಸಿದೆ. ಹಳೆಯ ತಲೆಮಾರಿನ ಅಜ್ಜಿ ಹೊಸ ತಲೆಮಾರಿನ ಸಂವೇದನೆಗಳಿಗೆ ಮುಖಾಮುಖಿಯಾಗುವಲ್ಲಿ ಸೋಲುತ್ತಾಳೆ. ಹಾಲಜ್ಜಿ, ನೂರಾರು ವರ್ಷಗಳ ಚರಿತ್ರೆಯ ಮಾವಿನ ಮರದ ಕೊನೆಯಾಗುವುದು ಪರಂಪರೆಯ ವಿನಾಶದಂತಿದೆ. ಪರೋಪಕಾರಿ ಹಾಲಜ್ಜಿ ತಾನಿದ್ದ ತೋಟವನ್ನು ಮಾಲೀಕರು ಮಾರುತ್ತಾರೆಂದು ಕೇಳಿದ ಬಳಿಕ ಕೊನೆಯಾಗುವುದು ಆಕೆಯ ಕೃಷಿ ಪ್ರಧಾನವನ್ನು ತಿಳಿಸಿದೆ. ಆಧುನಿಕತೆ ಕೃಷಿ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವುದನ್ನು ಕತೆ ತಿಳಿಸಿದೆ. ಸಮಾಜ ಬದಲಾಗಬೇಕು ನಿಜ. ಆದರೆ ಅದರ ಹೆಸರಿನಲ್ಲಿ ಮುಳುವಾಗಬಾರದೆಂಬ ಸಂದೇಶ ಕತೆಯದು. ಮಾರಿಹಬ್ಬಗಳ ಆಚರಣೆಯ ಹಿಂದಿರುವ ಸಾಂಸ್ಕೃತಿಕ ವಿವರಗಳು ಚೇತೋಹಾರಿಯಾಗಿ ಚಿತ್ರತಗೊಂಡಿವೆ. ಈ ಕತೆಯಲ್ಲಿ ಹಾಲಜ್ಜಿಯ ಗೆಳತಿ ಚೋವ್ಕ್ಲಿಬಾಯಿ ಮಕ್ಕಳಿದ್ದರೂ ಭಿಕ್ಷುಕಿಯಾಗಿ ಬದುಕುತ್ತಿರುವ ಚಿತ್ರವಿದೆ. ಆಧುನಿಕತೆ ತಂದೊಡ್ಡಿರುವ ಅನೇಕ ಸವಾಲು ಸಮಸ್ಯೆಗಳನ್ನು ಕತೆ ವ್ಯಕ್ತಪಡಿಸಿದೆ.
ಸ್ತ್ರೀವಾದ ನೆಲೆಯಲ್ಲಿ ಚಿಂತನೆಯಲ್ಲಿರುವ ಕತೆ `ಅಭಿಮಾನಿ’ ಅಭಿಮಾನಿಯ ರೂಪದಲ್ಲಿ ಭೇಟಿಯಾದ ಹೆಣ್ಣೊಬ್ಬಳು ನಿರೂಪಕನನ್ನು ಕೇಳುವ ಪ್ರಶ್ನೆಗಳು ಪ್ರಾಮಾಣಿಕವಾಗಿವೆ. ಪುರುಷ ಪ್ರಧಾನ ವ್ಯವಸ್ಥೆಯನ್ನು ನೆನಪಿಸುತ್ತದೆ. ಕನಸಿನ ಕತೆಯಾದ ಇಲ್ಲಿ ಹಳೆಯ ಪ್ರೇಯಸಿಯೇ ಅಭಿಮಾನಿಯಾಗಿ ಬಂದಿರುತ್ತಾಳೆ. ಕೃತಿಗಿಂತ ವ್ಯಕ್ತಿತ್ವ ಮುಖ್ಯ ಎಂಬುದನ್ನು ಕತೆ ಸಾರಿದೆ. ಸ್ತ್ರೀ ಕೇಂದ್ರಿತ ನೆಲೆಯಲ್ಲಿ ಅಭಿವ್ಯಕ್ತಿಗೊಂಡಿರುವ ಮತ್ತೊಂದು ಕತೆ `ಕಾಲಚಕ್ರ’ವಾಗಿದೆ. ಕತೆಯ ನಾಯಕ ತನ್ನ ಮನೆಯ ನೀರು, ಚರಂಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಮಹಾಪೌರರನ್ನು ಭೇಟಿಯಾಗಿ ಅನುಕೂಲ ಪಡೆಯುವುದರೊಂದಿಗೆ ಕತೆಯ ತಿರುವು ಬೇರೆಯಾಗುತ್ತದೆ. ಆ ಮೇಯರ್ ತಮ್ಮ ಸಹಪಾಠಿಯೇ ಆಗಿದ್ದು, ತುಂಬಾ ದಡ್ಡಿ, ಡುಮ್ಮಿ, ಗೊಣ್ಣೆ ಹುಡುಗಿಯಾಗಿದ್ದು ನೆನೆದು ಆಕೆ ಪರಿಶ್ರಮದಿಂದ ಸಾಧಕಿಯಾದ ಬಗೆಯನ್ನು ಕತೆ ಚೆನ್ನಾಗಿ ಸಾಧಿಸಿದೆ. ಪೂರ್ವದಲ್ಲಿ ನಿರೂಪಕರು ತಿರಸ್ಕರಿಸಿದ ಆಕೆಯೊಂದಿಗೆ ಲಾಂಗ್‌ಡ್ರೈವ್ ಮಾಡಿದ್ದು ಗಮನ ಸೆಳೆಯುತ್ತದೆ. ಆಧುನಿಕ ಸಂವೇದನೆಗಳು ಪ್ರವೇಶ ಪಡೆದಿವೆ. ಪಠ್ಯದ ಬದುಕು, ಸಾರ್ವಜನಿಕ ಬದುಕು ಬೇರೆ ಬೇರೆ ಎಂಬುದನ್ನು ಕತೆ ನವಿರಾಗಿ ಅಷ್ಟೇ ಸಮರ್ಥವಾಗಿ ಚಿತ್ರಿಸಿದೆ.
ಅನಾದಿಕಾಲದಿಂದ ಆಧುನಿಕ ಕಾಲದವರೆಗೂ ಮನುಷ್ಯ ತುಂಬಾ ತಲೆಕೆಡಿಸಿಕೊಂಡಿರುವುದು ವಂಶದ ಬಗ್ಗೆ. ರಕ್ತ ಕಲಬೆರಕೆಯಾಗದಂತೆ ಮನುಷ್ಯ ತಡೆಗೋಡೆಗಳನ್ನು ಹಾಕಿ ಸುತ್ತಗಾವಲು ಇಟ್ಟುಕೊಂಡೇ ಸಾಗಿ ಬಂದಿದ್ದಾನೆ. ಈ ಸಂಕಲನದ `ಸ್ವಾರ್ಥವಂಶವಾಹಿನಿ’ ವಿಜ್ಞಾನದ ಹಿನ್ನೆಲೆಯಲ್ಲಿರುವ ಕಥಾನಕ. ನಿರೂಪಕರು ಪುಸ್ತಕದ ಅಂಗಡಿಗೆ ಭೇಟಿ ಕೊಟ್ಟಾಗ ಅಂಗಡಿಯವನ ಮಾತುಗಳು ರಾಜಕಾರಣದತ್ತ ತಿರುಗುತ್ತದೆ. ಇಂದಿನ ರಾಜಕಾರಣಿಗಳ ಸ್ವಾರ್ಥ, ಸ್ವಜನಪಕ್ಷಪಾತ, ಹಿಂಸೆ, ಕ್ರೌರ್ಯ, ಭ್ರಷ್ಟಾಚಾರ, ಸಣ್ಣತನ, ದರೋಡೆಗಳೇ ಪ್ರಧಾನವಾಗುತ್ತಿರುವುದರ ಚರ್ಚೆಯಿದೆ. ಸ್ವಾತಂತ್ರ್ಯದ ಆರಂಭದ ರಾಜಕಾರಣಕ್ಕೂ ಇತ್ತೀಚೆಗಿನ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಕತೆ ನೆನಪಿಸುವಂತೆ ಮಾಡುತ್ತದೆ. ಕತೆಯು ರಿಚರ್ಡ್ ಡಾಕಿನ್ಸ್‌ನ `The Selfish Gene’ ಕೃತಿಯಲ್ಲಿ ಪ್ರತಿಪಾದಿತವಾಗಿರುವ ವಂಶವಾಹಿನಿ ಬಗ್ಗೆ ವಿಶ್ಲೇಷಿಸುತ್ತದೆ. ಅದರೊಟ್ಟಿಗೆ ರಾಜವಂಶಾವಳಿಯ ಶಾಸನ, ಕಡಜನ ಕತೆ, ಮಗಳ ಪ್ರತಿರೂಪಗಳು ಸ್ಥಾನ ಪಡೆದಿವೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಸಂಶೋಧನೆಗಳಿಂದ ಮನುಷ್ಯನ ಬದುಕು ಬದಲಾಗುತ್ತಿರುವುದನ್ನು `ಜೀವದ ದಾರ’ ಕತೆ ಹೇಳುತ್ತದೆ. ಅಂಡಾಣು, ವೀರ್ಯಾಣು ದಾನಗಳು ಬಂದದ್ದನ್ನು ಕತೆ ನಿರೂಪಿಸಿದೆ.
ಅವಿವಾಹಿತನಾಗಿದ್ದ ನಿರೂಪಕ ವೀರ್ಯದಾನ ಮಾಡಿದ ಹೆಣ್ಣನ್ನೇ ಮದುವೆಯಾಗಿ, ಮಕ್ಕಳನ್ನು ಪಡೆಯುವಲ್ಲಿ ವಿಫಲನಾಗುತ್ತಾನೆ. ಆ ಹೆಣ್ಣು ಕರಿಯನೊಬ್ಬನನ್ನು ಕೂಡಿ ಹೆಣ್ಣುಮಗು ಪಡೆದು ತಂದೆಯ ಹೆಸರು ಕೇಳಿದಾಗ ಕಥಾನಾಯಕ ಪಲಾಯನ ಮಾಡುತ್ತಾನೆ. ಆಧುನಿಕತೆ ಮನಷ್ಯನ ದಾಂಪತ್ಯದಲ್ಲಿ ತಂದಿಟ್ಟಿರುವ ಎಡವಟ್ಟುಗಳನ್ನು ಕತೆ ಹೇಳಿದೆ. ದಾಂಪತ್ಯದಲ್ಲಿ `ಕಾಮ’ವೇ ಪ್ರಧಾನವೆಂಬುದನ್ನು ಸಾರಿದೆ. ಮನುಷ್ಯನ ಅಸ್ಮಿತೆಯ ಪ್ರಶ್ನೆ ಕತೆಯಲ್ಲಿದೆ. ಬಾಂಬೆಗೆ ಹೋದವನು ಮತ್ತೆ ಮರಳಿ ಗೂಡಿಗೆ ಸೇರುವ ನಾಯಕ ಪಾತ್ರ ಅನಾಥ ಪ್ರಜ್ಞೆಯಲ್ಲಿದೆ.
ಆಧ್ಯಾತ್ಮದ ಹಿನ್ನೆಲೆಯಲ್ಲಿ ರಚಿತವಾಗಿರುವ ಕತೆ `ಗೀತಾಂಜಲಿ’. ಈ ಕತೆಯೂ ಬಾಲ್ಯದ ಸ್ಮೃತಿಗಳಿಂದಲೇ ಆರಂಭವಾಗಿ ತಾನು ನೋಡಿದ ಸಿನಿಮಾವೊಂದರ `ನಟಿ’ಯನ್ನು ಬಯಸಿ, ಆಕೆಯ ಧ್ಯಾನವನ್ನೇ ಮಾಡುತ್ತಿರುವಾಗ, ಮದುವೆಯಾದ ಮೇಲೆ ಅರವಿಂದರ ಆಶ್ರಮದಲ್ಲಿ ಮೇಲ್ವಿಚಾರಕಿಯಾಗಿದ್ದ ಆಕೆ ಸಿಕ್ಕಿದ್ದು, ನಿರೂಪಕ ಹೊರದೇಶದಲ್ಲಿ ಸಮಸ್ಯೆಗಳಲ್ಲಿದ್ದಾಗ ಯಾರೋ ಸಹಾಯ ಮಾಡಿದ್ದು, ಇದಕ್ಕೆಲ್ಲ ಅರವಿಂದರ ಕೃತಿಯೇ ಕಾರಣವೆಂದು ಭಾವಿಸುವ ಮನಸ್ಥಿತಿ ಇಲ್ಲಿಯದು. ಪಾಂಡಿಚೇರಿಯ ಪ್ರವಾಸ ಅನುಭವಗಳಿವೆ. ಅರವಿಂದರ ವಿಚಾರಗಳೊಂದಿಗೆ ಜೀವನ ಬೆಸೆಯಲಾಗಿದೆ. ಆಸ್ತಿಕರಿಗೆ ಪ್ರಿಯವಾಗಬಹುದಾಗ ಕತೆಯಿದು. ಹಣೆಬರಹದಂತಹ ಮೌಢ್ಯವನ್ನು ಒಪ್ಪಿ ಪವಾಡಗಳನ್ನು ಒಪ್ಪಿದೆ. ಅಧ್ಯಾತ್ಮವೇ ಹಾಗೆ. ಹೇಳಿದರೆ ಕಷ್ಟ, ಹೇಳದಿದ್ದರೆ ನಷ್ಟ ಎಂಬಂತೆ.
ಈ ಸಂಕಲನದ ಕೊನೆಯ ಕತೆ `ಕರುಣಾಳು ಬಾ ಬೆಳಕೆ’ದಲ್ಲಿ ಬರುವ ಬುದ್ಧನ ತತ್ವಗಳು ಬೆಳಕಿಗೆ ಬಂದಿವೆ. ವೇಶ್ಯಾ ಸಮಸ್ಯೆ, ಚರಿತ್ರೆಯ ವಸ್ತುಗಳ ವ್ಯಾಪಾರ, ಜೀವನದ ನಶ್ವರತೆಗಳನ್ನು ಕತೆ ಕಡೆದಿದೆ. ವ್ಯಾಪಾರಿಯ ಪ್ರಾಮಾಣಿಕತೆ ಮಾದರಿಯಾಗಿದೆ. ಸಂಕೇತಗಳೂ ಈ ಕತೆಯ ಭಾಗವಾಗಿವೆ. ಟಿ.ವಿ., ಪತ್ರಿಕೆಗಳ ಸುದ್ದಿಗಳಿಗೆ ಪ್ರತಿಕ್ರಿಯೆಗಳು ಇಲ್ಲಿವೆ.
ಪ್ರಸನ್ನರ ಕತೆಗಳು ಆಧುನಿಕ ಬದುಕಿನ ಸಂವೇದನೆಗಳನ್ನೂ ದಾಖಲಿಸುತ್ತವೆ. ವಿಜ್ಞಾನ, ತಂತ್ರಜ್ಞಾನದ ಅನೇಕ ಸಂಗತಿಗಳು ಕತೆಯಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಕತೆಗಳು ವರದಿಯಾಗಬಾರದು. ಸಾಹಿತ್ಯ ಕೃತಿಗಳಾಗಬೇಕು. ಸಂದೇಶವನ್ನು ರವಾನಿಸಬೇಕು. ಸಮಾಜದ ಪ್ರಗತಿಗೆ ಬೆಳಕಿಂಡಿಗಳನ್ನು ತೆರೆಯಬೇಕು ಎಂದು ನಂಬಿದವನು ನಾನು. ಕೆಲವು ಕತೆಗಳು ಆ ಕೆಲಸವನ್ನು ಪೂರೈಸಿವೆ. ವಿಜ್ಞಾನ, ದೇಶ-ವಿದೇಶಗಳ ವಸುಗಳು ಕತೆಯಾಗುತ್ತಿರುವುದು ವಿಶೇಷ. ಆದರೆ ಮೌಢ್ಯವನ್ನು ಬಿತ್ತಬಾರದು. ಈ ನೆಲೆಯಲ್ಲಿ ಕತೆಗಾರರು ಗಮನಿಸಲಿ. ಕೆಲವೆಡೆ ಕತೆಯ ಶಿಲ್ಪ ಕೆಡದಂತೆ ನಿಗಾ ವಹಿಸಬೇಕಿದೆ. ಭಾಷೆ-ಭಾವಗಳು ಒಂದಾದರೆ ಕತೆಗಳು ಓದುಗನನ್ನು ಮುಟ್ಟುತ್ತವೆ.
ಪ್ರಸನ್ನರ ಕತೆಗಳು ಭಿನ್ನ ನೆಲೆಗಳಲ್ಲಿ ಬದುಕನ್ನು ಗ್ರಹಿಸಿವೆ. ಅವರ ಕತೆಗಳು ಓದುವವರನ್ನು ಗೆಲ್ಲುವ ಸಾಮರ್ಥ್ಯ ಹೊಂದಿವೆ. ಕನ್ನಡದಲ್ಲಿ ಚಿಂತನೆಗೆ ಹಚ್ಚುವ ಕತೆಗಳನ್ನು ಪ್ರಸನ್ನ ಅವರು ಬರೆಯಲಿ. ಭದ್ರವಾದ ಛಾಪನ್ನು ಮೂಡಿಸಲೆಂದು ಆಶಿಸುತ್ತೇನೆ.