ಈಗ ಮತ್ತೊಮ್ಮೆ ನಡೆದ ಸಂಗತಿಗಳನ್ನೆಲ್ಲ ಕಣ್ಣ ಮುಂದೆ ತಂದುಕೊಳ್ಳುವಾಗ, ಇಂಥದ್ದೊಂದು ನಾಟಕೀಯ ಅಂತ್ಯಕ್ಕೆ ಸಾಕ್ಷಿಯಾದ ನನ್ನ ಮನಸ್ಸಿನ ತುಂಬ ನೋವು. ಕಿ.ರಂ. ಜೂನ್ ತಿಂಗಳ ೨೬ನೇ ತಾರೀಖು ಭೂಮಿ ಹುಣ್ಣಿಮೆಯ ಸಂಜೆ ಮಧುರಚೆನ್ನರ ಕಾವ್ಯದ ಕುರಿತು ಮಾತನಾಡಲು ‘ಸಾಹಿತ್ಯ ಸಂಜೆ’ಗೆ ಬಂದಿದ್ದರು. ತುಂಬಾ ವಿಭಿನ್ನವಾಗಿ ಮಧುರಚೆನ್ನರ ಬಗ್ಗೆ ಮಾತನಾಡಿದ್ದರು. ಪ್ರತಿ ಸಲವೂ ಹೊಸ ರೀತಿಯಲ್ಲಿ ಹೊಸ ದೃಷ್ಟಿಯಿಂದ ಸದಾ ಜೀವಂತವಿರುವ ಕವಿಗಳ ಬಗ್ಗೆ ಮಾತನಾಡುವುದು ಸರಿಯೆಂದು ಅವರು ಭಾವಿಸಿದ್ದರು. ಅವತ್ತಿನ ಸಭೆಯಲ್ಲೇ ಆಗಸ್ಟ್ ತಿಂಗಳ ಶ್ರಾವಣದಲ್ಲಿ ಬೇಂದ್ರೆ ಕುರಿತು ಸರಣಿ ಉಪನ್ಯಾಸ ನೀಡಬೇಕೆಂದು ಕೋರಿ ಒತ್ತಾಯದಲ್ಲಿ ಒಪ್ಪಿಸಿಯೂಬಿಟ್ಟೆ. ಕಿ.ರಂ. ಅದನ್ನ ಒಪ್ಪಿದ್ದರೂ ಪೂರ್ತಿ ಮನಸ್ಸಿನಿಂದ ಹೂಂ ಅಂದಿರಲಿಲ್ಲ. ಆದರೂ ನಾನು ಮಾತ್ರ ಯಾವತ್ತಿನ ಉತ್ಸಾಹದಲ್ಲೇ ತಯಾರಿ ನಡೆಸಿದೆ. ತಮಗೆ ಪರಮ ಪ್ರಿಯಕವಿಯಾದ ಬೇಂದ್ರೆ ಬಗ್ಗೆ ಮಾತನಾಡಲು ಅವರು ಬರದೇ ಇರಲಾರರು, ಜೊತೆಗೆ ಅವರಿಗೂ ನಾಲ್ಕು ಉಪನ್ಯಾಸಗಳನ್ನು ಕೊಡುವುದು ಇಷ್ಟದ ವಿಷಯವೇ. ಅವರು ತಯಾರಿ, ಓದುವುದು, ಇತರೆ ಕೆಲಸಗಳು ಅಂತೆಲ್ಲಾ ಹೇಳಿದರೂ ಗಟ್ಟಿಯಾಗಿ ಒಲ್ಲೆ ಎನ್ನಲು ಅವರಿಗೂ ಆಗಿರಲಿಲ್ಲ.
ಸಾಹಿತ್ಯ ಸಂಜೆಯ ಬಲು ದೊಡ್ಡ ಲಾಭ ನನ್ನದು. ಕಾರ್ಯಕ್ರಮ ನಡೆಯುವ ಪ್ರತಿ ಶನಿವಾರವೂ ಆಯಾ ಲೇಖಕರ ಬಗ್ಗೆ ಓದುವುದು, ತಯಾರಿ ನಡೆಸುವುದು ನನಗೊಂದು ಹಿತವಾದ ನೋವು. ಈ ಸಲ ಬೇಂದ್ರೆ ಕವನ ಸಂಕಲನಗಳನ್ನು ಫೋಟೋಗಳನ್ನೆಲ್ಲ ಗುಡ್ಡೆಹಾಕಿಕೊಂಡು ಅದ್ಭುತವಾದ ಇಪ್ಪತ್ತೈದು ಪೋಸ್ಟರ್ ಗಳು ತಯಾರಾದವು. ಅವುಗಳಲ್ಲಿ ಬೇಂದ್ರೆಯ ಅಪರೂಪದ ಕೆಲ ಸಾಲುಗಳು ಅದರ ಜೊತೆಗೆ ಬಂದವರಿಗೆಲ್ಲಾ ಒಂದು ಬೇಂದ್ರೆ ಫೋಟೋ, ಬೇಂದ್ರೆ ಪುಸ್ತಕಗಳು, ಬ್ಯಾಕ್ ಡ್ರಾಪ್ ಪ್ರತಿಯೊಂದೂ ಬೇಂದ್ರೆಮಯಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸಿದೆ. ಯಶಸ್ವಿಯೂ ಆದೆ.
ಪರಿಚಾರಕ ಪ್ರಶಸ್ತಿ ಸಮಾರಂಭದಲ್ಲಿ ಸಿಕ್ಕ ಕಿ.ರಂ. ಸಿಗರೇಟು ಸೇದುತ್ತ ‘ನೀವು ಅವತ್ತು ತಮಾಷೆಗೆ ಹೇಳಿದಿರಿ ಅಂದುಕೊಂಡಿದ್ದೆ. ಈಚೆಗೆ ನನ್ನ ಆರೋಗ್ಯ ಅಷ್ಟು ಸರಿಯಿಲ್ಲ. ನಾಲಗೆಗೆ ರುಚಿ ಹತ್ತಲ್ಲ. ಯಾಕೋ ಒಂಥರಾ ಇದೆ’ ಅಂದ್ರು, ನೆಪ ಹೇಳಬಹುದು ಅನ್ನಿಸಿ, ‘ಸರ್, ನೀವಲ್ಲದೆ ಬೇಂದ್ರೆ ಬಗ್ಗೆ ಇನ್ಯಾರ್ ಮಾತಾಡ್ಬೇಕು’ ಅಂದೆ. ‘ಅವೆಲ್ಲ ಬಿಡಿ’ ಅಂದು ನಕ್ಕು ಮತ್ತೊಂದು ದಂ ಎಳೆದು ಅಷ್ಟೊತ್ತಿಗೆ ಪ್ರಶಸ್ತಿ ಪಡೆದಿದ್ದ ಅವರನ್ನು ಅಭಿನಂದಿಸಲು ಮತ್ಯಾರ‍್ಯಾರೋ ಮುತ್ತಿಕೊಂಡರು. ನಾನು ಈ ಕಾರ್ಯಕ್ರಮದ ಕರಪತ್ರವನ್ನು ಅಲ್ಲಿ ನೆರೆದವರಿಗೆಲ್ಲ ಹಂಚಲು ಅಲ್ಲಿಂದ ಜಾರಿದೆ. ಆ ಬಗ್ಗೆ ಕೇಳಿದ, ಓದಿದ ಗೆಳೆಯರೆಲ್ಲ ತಂತಮ್ಮಲ್ಲೇ ಯಾವತ್ತು ಬರಬೇಕು ಅಂತ ನಿರ್ಧರಿಸಿಕೊಂಡ್ರು. ಕೆಲವರು ‘ನಮಗೂ ಸೀಟು ರಿಸರ್ವ್ ಮಾಡ್ತೀರಾ?’ ಅಂದ್ರು. ‘ಇಲ್ಲ, ಇದು ಹಳ್ಳಿ ಬಸ್ ಇದ್ದಾಗೆ. ಮುಂಚಿಗೇ ಬಂದ್ ಟವೆಲು ಹಾಸಬೇಕು’ ಅಂತ ತಮಾಷೆ ಮಾಡಿದೆ. ಜಾಸ್ತಿ ಜನ ಬರುವ ನಿರೀಕ್ಷೆ ಇದ್ದೇ ಇತ್ತು. ಹೆಚ್ಚುವರಿ ಕುರ್ಚಿಗಳು, ಮುಂದೆ ಕೂರವವರಿಗೆ ಜಮಖಾನೆ, ಹೊರಗಡೆಗೂ ಸ್ಪೀಕರ್ ಎಲ್ಲಾ ಸಿದ್ಧಗೊಂಡಿತ್ತು. ಇಷ್ಟು ವರ್ಷಗಳಾದ್ರೂ ನೂರಾರು ಕಾರ್ಯಕ್ರಮ ಆಯೋಜಿಸಿ ಅನುಭವವಿದ್ದರೂ, ಪ್ರತಿ ಕಾರ್ಯಕ್ರಮವೂ ಆರಂಭಗೊಂಡು ಮುಗಿಯುವ ತನಕ ಒಂದು ವಿಚಿತ್ರ ಆತಂಕ. ಬರಬೇಕಾದವರು ತಡವಾಗಿ ಬಂದರೆ ಅಸಾಧ್ಯ ಚಡಪಡಿಕೆ.
ಐದು ಗಂಟೆಯಿಂದಲೇ ಜಮಾಯಿಸಲು ಆರಂಭಿಸಿದ ಜನ ಐದೂ ಇಪ್ಪತ್ತರ ಹೊತ್ತಿಗೆ ಸಭಾಂಗಣ ತುಂಬಿ, ಹೊರಗೂ ತುಳುಕುತ್ತಿದ್ದರು. ಬೇಂದ್ರೆ ಹಾಡುಗಳ ‘ಶ್ರಾವಣ’ ಸಿ.ಡಿ. ಹಿನ್ನೆಲೆಯಲ್ಲಿ ಉಲಿಯುತ್ತಿದ್ದರೂ ಬಾಲ ಸುಟ್ಟ ಬೆಕ್ಕಿನ ಹಾಗೆ ನಾನು ಅಲ್ಲಿಂದಿಲ್ಲಿ ಕಿ.ರಂ. ಬರುವಿಕೆಗೆ ಚಡಪಡಿಸುತ್ತಿದ್ದೆ.
ಕಾರ್ಯಕ್ರಮದ ಸಮಯವಾಗುತ್ತಿದ್ದಂತೆ ಜನರು ಸೇರುತ್ತಲೇ ಇದ್ದರು. ಎಲ್ಲವೂ ಸರಿಯಾಗಿ ಸಿದ್ಧಗೊಂಡ ಭಾವದಲ್ಲಿ ಎದುರು ಸಿಕ್ಕ ಮನುಚಕ್ರವರ್ತಿ ಅವರಿಗೆ, ‘ವಿ ಆರ್ ರೆಡಿ ಫಾರ್ ದ ಷೋ’ ಅಂದೆ. ಅವರು ಮಾರ್ಮಿಕವಾಗಿ ಮುಗುಳ್ನಕ್ಕರು. ಈಗ ಬರೆಯುವ ಹೊತ್ತಿಗೆ ಆ ಮಾತಿಗೆ ಸೇರಿಕೊಂಡ ಅರ್ಥಗಳು ಆ ಷೋ ನಡೆದ ಬಗೆ, ಅದರ ಮುಕ್ತಾಯ, ಛೇ… ಎಂಥಾ ವಿಪರ್ಯಾಸ.
ಸರಿಯಾದ ಸಮಯಕ್ಕೆ ಎಂದಿನಂತೆ ಆಟೋದಿಂದ ಇಳಿದ ಕಿ.ರಂ. ಅವರನ್ನು ನಾನು, ವಿಜಯಮ್ಮ ಬರಮಾಡಿಕೊಂಡೆವು. ತುಂಬಾ ಬಳಲಿದಂತಿದ್ದ ಅವರ ಮುಖದಲ್ಲಿ ಯಾವತ್ತಿನ ಗೆಲುವಿರಲಿಲ್ಲ. ಇವತ್ತು ಇಲ್ಲಿಗೆ ಮಾತಾಡಲು ಬರುವುದೇ ಅನುಮಾನವಿತ್ತು ಅಂದರು. ಜೊತೆಗಿದ್ದ ರಂಗನಾಥ್, ‘ಅವರಿಗೆ ಗ್ಯಾಸ್ಟ್ರಿಕ್ ತೊಂದರೆಯಿಂದ ಉಸಿರುಗಟ್ಟಿತ್ತು… ತುಂಬಾ ಒದ್ದಾಡುತ್ತಿದ್ದರು. ಬೆಳಗಿನಿಂದ ಏನೂ ತಿಂದಿಲ್ಲ’ ಅಂದರು. ನಮಗೆ ತೀರಾ ಕೆಡುಕೆನಿಸಿತು. ಕಾಫಿ ತರಿಸಿ, ತಕ್ಷಣ ಇಡ್ಲಿ, ಜ್ಯೂಸ್ ತರಿಸಲು ವ್ಯವಸ್ಥೆ ಮಾಡಿದೆ. ಮೈಕಿನ ಮುಂದೆ ನಿಂತು ಚಡಪಡಿಸುತ್ತಿದ್ದ ಸಭೆಗೆ ಇನ್ನು ಕೆಲ ನಿಮಿಷದಲ್ಲಿ ಕಾರ್ಯಕ್ರಮ ಶುರುವಾಗುವುದಾಗಿ ಹೇಳಿದೆ, ಮನಸ್ಸಿನಲ್ಲಿ ಹೆಂಡತಿ ಸತ್ತ ನಂತರ ಕಿ.ರಂ. ಆರೋಗ್ಯಕ್ಕೆ ಸಿಕ್ಕಬೇಕಾದ ಗಮನ ಅಗತ್ಯವಾಗಿದ್ದ ಕಾಳಜಿ ಸಿಗದಿದ್ದರ ಬಗ್ಗೆ ಯಾಕೋ ತುಂಬಾ ಬೇಜಾರಾಯ್ತು. ವೃದ್ಧಾಪ್ಯದಲ್ಲಿ ಒಂಟಿ ಹಕ್ಕಿಗಳ ಕಷ್ಟದ ಬಗ್ಗೆ ಮನಸ್ಸು ವಿಷಾದಗೊಂಡಿತು. ಜೊತೆಗೆ ಇಂಥ ಸ್ಥಿತಿಯಲ್ಲಿ ಇವರಿಗೆ ಉಪನ್ಯಾಸದ ಕೆಲಸ ಹಚ್ಚುವುದು ತಪ್ಪಲ್ಲವೇ ಅನ್ನುವ ದ್ವಂದ್ವ. ಹಿಂದಿನ ವಾರ ಗೌರಿ ತಮ್ಮ ತಂದೆ ಲಂಕೇಶ್ ಬಗ್ಗೆ ಮಾತನಾಡುತ್ತ ತುಂಬಾ ಭಾವುಕಗೊಂಡು ಕಣ್ಣೀರು ಹಾಕಿದ್ದಾಗಲೂ ನಾವು ಅವರನ್ನು ಮಾತನಾಡುವಂತೆ ಮಾಡಿ ತಪ್ಪು ಮಾಡಿದ್ದೀವಾ ಅನ್ನುವ ಆತಂಕ ಕಾಡಿತ್ತು. ಅದನ್ನು ಸಭೆಯಲ್ಲಿ ಹೇಳಿಯೂ ಇದ್ದೆ. ಮಕ್ಕಳ ಹಾಗೆ ಹಟ ಮಾಡುತ್ತಿದ್ದ ಕಿ.ರಂ. ತಂದ ಎರಡರಲ್ಲಿ ಒಂದೇ ಇಡ್ಲಿ ತಿಂದರು. ಎಷ್ಟು ಬಲವಂತ ಮಾಡಿದರೂ ಜ್ಯೂಸು ಬೇಡವೆಂದು ಸಭೆಗೆ ಹೊರಟೇಬಿಟ್ಟರು. ಏನೂ ಮಾತನಾಡದೆ ಸಭೆಗೆ ಕಿ.ರಂ.ರನ್ನು ಸ್ವಾಗತಿಸಿ ಭಾಷಣಕ್ಕೆ ಅನುವು ಮಾಡಿಕೊಟ್ಟೆ. ಮೊದಲಿಗೆ ಸುರೇಂದ್ರನಾಥ್ ‘ಜೋಗಿ’ ಪದ್ಯ ಓದಿದ ನಂತರ ಕಿ.ರಂ. ತಮ್ಮ ಯಾವತ್ತಿನ ಹಿಂದೂಸ್ಥಾನಿ ಸಂಗೀತದ ಶೈಲಿಯ ಭಾಷಣವನ್ನು ಸಣ್ಣದಾಗಿನ ತಮ್ಮ ಧ್ವನಿಯಲ್ಲಿ ಆರಂಭಿಸಿದರು: ‘ಬೇಂದ್ರೆ, ಕಾರಂತ, ಕುವೆಂಪು, ಅಡಿಗ ಇಂಥ ಜೀನಿಯಸ್ ಗಳು ಭಾಷೆಯ ಸಾಧ್ಯತೆಗಳನ್ನು ವಿಸ್ತರಿಸಿದರು. ನಾವು ಅವರ ಬರಹಗಳ ಎದುರು ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನಿಟ್ಟರೂ ಮತ್ತೆ ಮತ್ತೆ ನಮ್ಮನ್ನು ಹೊಸ ರೀತಿಯಲ್ಲಿ ಈ ಲೇಖಕರು ಆಹ್ವಾನಿಸುತ್ತಾರೆ. ಜೊತೆಗೆ ನಮ್ಮನ್ನು ಓದಿ ಅಂತ ಇವತ್ತಿನ ಹಲವರು ಹೇಳಿಕೊಳ್ಳುವ ಹಾಗೆ ಇವರ‍್ಯಾರೂ ಕೇಳುವುದಿಲ್ಲ. ಲೋಕ ನೋಡುವ ಹೊಸ ಶಕ್ತಿ ಇಂಥ ಜೀನಿಯಸ್ ಗಳಲ್ಲಿದೆ. ಅವರ ನೆನಪುಗಳ ಒಡನಾಟ ಬರೀ ಮೇಲುಸ್ತರದ ನೆನಪುಗಳಲ್ಲ. ಬೇಂದ್ರೆ, ಮಧುರಚೆನ್ನರ ಸ್ನೇಹ, ಬೇಂದ್ರೆ-ಬಿಎಂಶ್ರೀ ಮುಂತಾದವರ ಸ್ನೇಹ ಬೇರೆಯದೇ ಭಿನ್ನ ನೆಲೆಗಳಲ್ಲಿ ನಮ್ಮ ಭಾಷೆಗೆ ಕಸುವುಕೊಟ್ಟ ವಿಷಯಗಳು. ಕಾಲವೆನ್ನುವುದು ನಾವು ಮಾಡಿಕೊಳ್ಳೋ ವಿಭಜನೆ. ಬೇಂದ್ರೆಯ ಜೋಗಿ ಕವಿತೆ ತನ್ನ ಅರ್ಥ ಸಾಧ್ಯತೆ ಮೂಲಕ ಎಲ್ಲ ಕಾಲಕ್ಕೂ ಪ್ರಸ್ತುತ ವಾಗುತ್ತದೆ. ಅದೇ ಆ ಕವಿತೆಯ ಗುಣ. ಅರ್ಥವೆನ್ನುವುದು ಸಿಕ್ಕಿಬಿಟ್ಟರೆ ಅದು ಕವಿತೆ ಹೇಗಾಗುತ್ತದೆ. ಅದಕ್ಕೇ ಕವಿಯೊಬ್ಬ ಒಂದು ಕಾಲದವನಲ್ಲ ಅವನು ಎಲ್ಲ ಕಾಲದವನು. ಎಲ್ಲಾ ಕಾಲಕ್ಕೂ ಸಲ್ಲುವವನು. ಬೇಂದ್ರೆ ಗುರುವಿಲ್ಲದ ಚೈತನ್ಯ ಅಥವಾ ಯಾರನ್ನ ಬೇಕಾದರೂ ಗುರುವಾಗಿ ಸ್ವೀಕರಿಸಬಲ್ಲವರಾಗಿದ್ದರು. ಬೇಂದ್ರೆಗೆ ಅನಂತ ವಿಶ್ವವೇ ಒಂದು ತತ್ವ. ಅಂಥ ವಿಶ್ವವನ್ನು ಪರಿಭಾವಿಸುವ ಬೇಂದ್ರೆಯ ಕೃತಿಗಳಲ್ಲಿ ಮೈ ಪಡೆದಿದೆ ಬೇಂದ್ರೆಯವರ ಆರಂಭಿಕ ಕವಿತೆ ‘ಪ್ರಳಯ ಸೃಷ್ಟಿಯಲ್ಲೇ’ ಈ ವಿಶ್ವತತ್ವ ಮೈತಳೆದಿದೆ. ಮನಸ್ಸಿನಲ್ಲಿ ಆಕಾರ ಬರುತ್ತದೆ, ಹೋಗುತ್ತದೆ. ಒಂದು ಹೋಗದೆ ಮತ್ತೊಂದು ಬಾರದು. ಲಯವಾಗದೇ ಮತ್ತೊಂದು ಉದಯವಾಗುವುದಿಲ್ಲ. ಕ್ಷಣಾಲಯದಲ್ಲೇ ಕ್ಷಣದ ಉದಯ. ಶಾಲಗ್ರಾಮ ಶಿಲೆ ನಿರಾಕಾರದಿಂದ ಕೊಳಲ ಕೃಷ್ಣಮೂರ್ತಿಯ ಆಕಾರದೆಡೆಗೆ ಅದರಿಂದ ಸೋಗೆ ನವಿಲಂತೆ ನರ್ತಿಸಿ, ಸಿದ್ಧಿ ಪಡೆಯುವ ಮನಸೆ ಮಂಗಲಧಾಮ. ಉಳಿದ ಪ್ರಲಯಕ್ಕಿಂತ ಮನದೊಳಗಿನ ಪ್ರಲಯ ಬಲುದೊಡ್ಡದು. ನಾವು ನಮಗೆ ಕಂಡ ಲೋಕಾನುಭವದ ಸ್ಪಷ್ಟೀಕರಣಕ್ಕೆ ಕವಿತೆ ಬರೆಯುತ್ತೇವೆ. ಅದು ಕಾವ್ಯಾನುಭವವಲ್ಲ. ನಾವು ಕಂಡದ್ದನ್ನು ಸೃಷ್ಟೀಕರಿಸಕ್ಕೆ ಕಾವ್ಯದ ಬೆಂಬಲ ಯಾಕೆ ಬೇಕು…’
ಹೀಗೆ ‘ಜೋಗಿ’, ‘ಏಳು ಕನ್ನಿಕೆಯರು’, ‘ರಾತ್ರಿಗೀತ’, ‘ಉದಯಗೀತ’ ಮುಂತಾದ ಕವಿತೆಗಳನ್ನು ಸೋದಾಹರಣ್ ಆಗಿ ತಮ್ಮದೇ ದಾಟಿಯಲ್ಲಿ ಓದಿದ ಕಿ.ರಂ. ಎಲ್ಲರನ್ನೂ ಗಾರುಡಿಯ ಮೋಡಿಗೆ ಒಳಪಡಿಸಿದರು. ಕೊನೆಗೆ — ‘ನಾನು ನಿಮ್ಮೆಲ್ಲರ ಎದುರು ಲೌಡ್ ರೀಡಿಂಗ್ ಮಾಡುತ್ತಿರುವೆ. ನೀವು ನನ್ನನ್ನು ಓವರ್ ಹಿಯರ್ ಮಾಡ್ತಾ ಇದ್ದೀರಿ ಅನ್ನಿಸುತ್ತೆ. ಯಾಕೆಂದರೆ, ಕವಿತೆಗೆ ನಿಮ್ಮ ನಿಮ್ಮದೇ ಆದ ವ್ಯಾಖ್ಯೆ, ಅರ್ಥೈಸುವಿಕೆ ನೀವು ಕಂಡುಕೊಳ್ತೀರಿ.’ ಅಂದು ನಕ್ಕರು. ಶುರುವಿನಲ್ಲಿದ್ದ ಆಯಾಸ ಮಾಯವಾಗಿ ಅವರ ಮುಖದಲ್ಲಿ ನಗು, ನಿರಾಳತೆ. ‘ಕವಿತೆ ಥೆರಪಿಕ್ ಆಗಿಯೂ ಕೆಲಸ ಮಾಡುತ್ತೆ. ನಾನು ಆರೋಗ್ಯವಂತನಾದಂತೆ ಅನ್ನಿಸುತ್ತಿದೆ’ ಅಂತ ನಗಿಸಿದರು.
ಆದರೆ ಹೊರಗೆ ಬಂದವರು ದಣಿವಿನಿಂದ ಸಿಗರೇಟು ಹಚ್ಚಿದರು. ಥಳಥಳ ಅಂತ ಬೆವರಲಾರಂಭಿಸಿದರು. ಅವರ ಸ್ಥಿತಿಯ ಬಗ್ಗೆ ಆತಂಕವಾಗತೊಡಗಿ, ಆದಷ್ಟು ಬೇಗ ಅವರನ್ನು ಡಾಕ್ಟರ ಬಳಿಗೆ ಕರೆದೊಯ್ಯುವ ಮಾತಾಡಿದಾಗಲೂ ಒಪ್ಪಲಿಲ್ಲ. ಕೊನೆಗೆ ಕಾರಿನಲ್ಲಿ ಬೀಳ್ಕೊಟ್ಟಾಗಲೂ ಕಿ.ರಂ. ಇಲ್ಲಿರಲಿಲ್ಲ. ಮನಸ್ಸಿಗೆ ಯಾಕೋ ತುಂಬ ಅನುಮಾನ ಮಧ್ಯಾಹ್ನದ ಅನಾರೋಗ್ಯದ ಲಕ್ಷಣಗಳನ್ನು ತಳುಕು ಹಾಕಿ ನೋಡಿದರೆ ಇದು ಬರೀ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನಿಸುತ್ತಿರಲಿಲ್ಲ. ಆದ್ರೂ ಹಠ… ಮನೆಗೆ ಹೋಗಿ ಮಗಳಿಗೆ ಅಡುಗೆ ಮಾಡಲು ಹೇಳಿ, ಕುಸಿದಿದ್ದಾರೆ. ಆಸ್ಪತ್ರೆಗೆ ಕರೆದೊಯ್ದಾಗ ಮತ್ತೆ ಎಚ್ಚರಗೊಂಡು ಶೇಖರ್ ಆಸ್ಪತ್ರೆ ಬೇಡ, ಬೆಂಗಳೂರು ಆಸ್ಪತ್ರೆಗೆ ಹೋಗೋಣ ಅಂತ ಹೊರಟಿದ್ದಾರೆ. ದಾರಿಯಲ್ಲೇ ಅವರ ಉಸಿರು ನಿಂತು ಹೋಗಿದೆ. ತಲುಪುವ ಮೊದಲೇ ಕಿ.ರಂ. ತಮ್ಮ ಕಾವ್ಯಯಾನ ಮುಗಿಸಿಬಿದ್ದಿದ್ದಾರೆ.
ಕಾರ್ಯಕ್ರಮದ ಯಶಸ್ವಿಯಾದ ಬಗ್ಗೆ, ಚೆನ್ನಾಗಿ ಸಾಗಿದ್ದರ ಬಗ್ಗೆ ಸಮಾಧಾನ, ಖುಷಿ ಒಂದು ಕಡೆ. ಕಿ.ರಂ. ಆರೋಗ್ಯದ ಬಗ್ಗೆ ಆತಂಕ ಮತ್ತೊಂದು ಕಡೆ. ಎಲ್ಲಾ ಹೊತ್ತುಕೊಂಡು ಮನೆ ಸೇರಿದೆ. ಕೆಲ ಹೊತ್ತಿನಲ್ಲೇ ಸುದ್ದಿ ಅಪ್ಪಳಿಸಿತ್ತು. ಕಿ.ರಂ. ಮಾರ್ಚುರಿಯಲ್ಲಿ ಮಾತಿಲ್ಲದೆ ಇಹಲೋಕದ ಯಾತ್ರೆ ಮುಗಿಸಿ ಮಲಗಿದ್ದರು. ಸಂಜೆ ಸಿಕ್ಕವರು, ಅನೇಕ ಕಿ.ರಂ. ಶಿಷ್ಯರು, ಅಭಿಮಾನಿಗಳು ಈ ಛಳಿಯ ರಾತ್ರೆಯಲ್ಲೂ ಸಿಕ್ಕರು. ಕೆಲವೇ ಘಂಟೆಗಳಲ್ಲಿ ಘಟಿಸಿದ ಈ ನಾಟಕೀಯ ಸಾವಿನ ಬಗ್ಗೆ ಎಲ್ಲರೂ ತತ್ತರಿಸಿದ್ದರು. ಯಥಾಪ್ರಕಾರ ಟೀವಿಯವರು, ಪೇಪರಿನವರು… ಹೀಗೆ ಅನೇಕರು ಮುತ್ತತೊಡಗಿದರು. ನಾನು ನಿಧಾನವಾಗಿ ಅಲ್ಲಿಂದ ಕಳಚಿಕೊಂಡೆ. ರಾತ್ರಿಯಿಡೀ ರೆಪ್ಪೆಗಳು ಮುಚ್ಚಿಕೊಳ್ಳಲು ಒಪ್ಪಲಿಲ್ಲ. ಕಿ.ರಂ. ಬಗ್ಗೆ ಕೋಪ ಬಂತು. ನಮ್ಮ ಕಾರ್ಯಕ್ರಮಕ್ಕೆ ಬರುವ ಬದಲು, ಡಾಕ್ಟರ್ ಹತ್ತಿರ ಹೋಗಿದ್ದರೆ ಬದುಕುತ್ತಿದ್ದರಾ. ಯಾವಾಗಲೂ ಹಾಗೆ, ಸಾವಿನ ಎದುರು ನಮ್ಮ ತರ್ಕಗಳನ್ನು ನಿಲ್ಲಿಸಿ, ಅದರ ಗಹನತೆ ಎಟುಕಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಮ್ಮದು. ಆದರೆ, ಅದರ ಕೆಲಸ ಅದರದ್ದು. ಓಶೋ ಹೇಳುತ್ತಾನೆ- ‘ಸಾವು, ಬದುಕೆನ್ನುವ ವೃತ್ತದ ಪೂರ್ಣತೆ, ಪರಿಪೂರ್ಣತೆ ನಾವು ಬದುಕುವುದು ಸಾಯಲು ನಮ್ಮ ಬದುಕುವ ರೀತಿಯೇ ಸಾಯುವ ರೀತಿಯೂ ಹೌದು.’ ಇಂಥದ್ದೊಂದು ಘಟನೆಗೆ ಸಾಕ್ಷಿಯಾದ ನನಗೆ ಕಿ.ರಂ. ಅವರ ಸಾವು ಒಂದು ಪರಿಪೂರ್ಣ ವೃತ್ತದಂತೆ ಭಾಸವಾಗುತ್ತದೆ. ಬನಶಂಕರಿ ಕ್ರಿಮೆಟೋರಿಯಂನಲ್ಲಿ ಅವರ ಅಂತ್ಯಸಂಸ್ಕಾರಕ್ಕೆ ಜನವೋ ಜನ. ಎಷ್ಟೊಂದು ಜನ ಅವತ್ತು ಸತ್ತವರು, ಅವರ ಜೊತೆಗೆ ಬಂದವರು ನಿಲ್ಲಲೂ ಜಾಗವಿರಲಿಲ್ಲ. ಯಾರೋ ಇಟ್ಟ ಎಡೆ ತಿನ್ನಲು ಕಾಗೆ, ಮೈನಾ, ಪಾರಿವಾಳ ಎಲ್ಲವೂ ಬಂದಿದ್ದವು. ಲೋಕದ ವ್ಯಾಪಾರಗಳ ಗೊಡವೆ ಇಲ್ಲದೆ, ಅವು ನಮ್ಮ ಹಿರಿಯರ ಆತ್ಮಗಳ ಹಾಗೆ ನೆಮ್ಮದಿಯಿಂದ ಭುಂಜಿಸುತ್ತಿದ್ದವು. ಅವುಗಳಲ್ಲಿ ಕೆಲವು ಎತ್ತರದ ಕಮಾನಿನ ಮೇಲೆ ಬಿಸಿಲು ಕಾಸಿಕೊಂಡು ಸಾಲುಗಟ್ಟಿ ಕುಳಿತಿದ್ದವು- ಥೇಟು ಕಿ.ರಂ. ಶಿಷ್ಯರ ಹಾಗೆ. ಆ ಕ್ಷಣವಂತೂ ಥೇಟು ಕಿ.ರಂ. ಹಾಗೆ.
ಕಿರಂ ಎಂಬ ಕಾರಣಪುರುಷ : ಸತ್ಯಮೂರ್ತಿ ಬರಹ
ನಿದ್ದೆ ಎಂಬ ನಿಜ ಹಾದರಗಿತ್ತಿ
ಬುದ್ಧಿ ಇಲ್ಲವೆ ನಿನಗೆ?’….
ಅಬ್ಬರಿಸಿ ಬಂದ ವಾಗ್ದಾಳಿಗೆ ಅರ್ಧ ಎಚ್ಚರ… ಅರ್ಧ ನಿದ್ದೆ. ಒಂದು ಕ್ಷಣ ಯಾವ ಲೋಕದಲ್ಲಿದ್ದೇವೆ ಎಂಬ ಅರಿವಿಲ್ಲ… ಕಣ್ಣು ಒರೆಸಿಕೊಂಡು ಕೂತೆ. ಎದುರು ಕಿ.ರಂ. ಕೂತಿದ್ದರು. ನೆನಪಾಯಿತು. ರನ್ನನ ಗದಾಯುದ್ಧದಲ್ಲಿ ದುರ್ಯೋಧನನನ್ನು ಕೆಣಕುವ ಅತಿ ಮುಖ್ಯ ಘಟ್ಟದಲ್ಲಿ ನನಗೆ ನಿದ್ದೆ ಬಂದಿತ್ತು. ಅಂಥ ರೋಮಾಂಚಕ ಕ್ಷಣವನ್ನು, ಕಾವ್ಯದ ಉತ್ಕಟ ಅನುಭವದ ಆ ಸಮಯದಲ್ಲಿ ನಿದ್ದೆ ಹೋದ ನನ್ನನ್ನು ಶರೀಫ ಸಾಹೇಬರ ಪದ್ಯದ ಮೂಲಕ ಎಚ್ಚರಿಸಿದ್ದರು.
ಸರಿಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತಿದು. ಆಗ ಟಿವಿ ಇರಲಿಲ್ಲ. ಕಂಪ್ಯೂಟರ್ ಮಾತೇ ಇಲ್ಲ. ಪಂಪ, ರನ್ನ, ಕುವೆಂಪು, ಬೇಂದ್ರೆ, ಅಡಿಗ, ಕುಮಾರವ್ಯಾಸನಿಂದ ಹಿಡಿದು ಶೇಕ್ಸ್ ಪಿಯರ್, ಮಿಲ್ಟನ್, ಡಾಂಟೇವರೆಗೆ ಎಲ್ಲರ ಸಾಹಿತ್ಯಕ್ಕೂ ಕಿ.ರಂ. ಆಡಿಯೋ ವಿಷುವಲ್ ವ್ಯಕ್ತಿ. ಬರೀ ಕಾವ್ಯ ಓದಿ ಕತೆ ತಿಳಿಯುವ ಕೆಲಸವಲ್ಲ. ಕಾವ್ಯ ಕಟ್ಟಿದ ಅದ್ಭುತವನ್ನು ಅದರ ಎಲ್ಲ ಸೂಕ್ಷ್ಮಗಳೊಂದಿಗೆ ವಿವರಿಸುವ ತವಕ ಕಿ.ರಂ.ಗೆ.
ಆಗ ನಾನು…
ಆದರೆ ಅವರೇನೋ ಕಾವ್ಯಜೀವಿ. ಆದರೆ ಆಗತಾನೇ ಎಸ್ಎಸ್ಎಲ್ಸಿ ಮುಗಿಸಿ ಪಿಯುಸಿಗೆ ಬಂದವನು ನಾನು. ಆಗುಂಬೆಯ ಹತ್ತಿರದ ಹಳ್ಳಿಯಿಂದ ಬಂದ ನನ್ನನ್ನು ಬೆಂಗಳೂರು ಗಾಂಧಾರಿಯನ್ನಾಗಿಸಿತ್ತು. ಓಡಾಡುವ ಸಾವಿರಾರು ಜನರಲ್ಲಿ ಪರಿಚಿತರು ಯಾರಾದರೂ ಇರುವರೇ ಎಂದು ಹುಡುಕಿ ಹುಡುಕಿ ನಿರಾಶನಾಗಿದ್ದೆ. ನ್ಯಾಷನಲ್ ಕಾಲೇಜು ಸೇರಿದ್ದೆ. ಉಳಿದುಕೊಳ್ಳುವ ವ್ಯವಸ್ಥೆ ಇರಲಿಲ್ಲ. ಹಳ್ಳಿಗಾಡಿನ ಹುಡುಗ, ಅದರಲ್ಲೂ ಸೋಷಲಿಸ್ಟ್ ಹಿನ್ನೆಲೆಯಿಂದ ಬಂದ ಪ್ರಭಾವ, ಗೋಪಾಲಗೌಡ, ಕೋಣಂದೂರು ಲಿಂಗಪ್ಪನವರ ಕ್ಷೇತ್ರದವನು… ಕಿ.ರಂ. ಮನೆಯಲ್ಲಿ ಆಶ್ರಯ.
ಆಗತಾನೇ ಕಿ.ರಂ. ಮದುವೆ ಆಗಿತ್ತು. ನಾಗಸಂದ್ರ ಸರ್ಕಲ್ ಬಳಿಯ ಅವರ ಮನೆಯಲ್ಲಿ ನನ್ನ ವಾಸ್ತವ್ಯ. ಒಂದು ರೀತಿಯಲ್ಲಿ ಮನೆ ಮಗನಂತೆ, ತಮ್ಮನಂತೆ… ಇನ್ನೊಂದು ರೀತಿಯಲ್ಲಿ ಶಿಷ್ಯ ಬಾಂಧವ್ಯ. ಆದರೆ ಕಿ.ರಂ. ಶಿಷ್ಯವೃತ್ತಿ ಸಾಧಾರಣವಾದುದಲ್ಲ. ಕಾವ್ಯದ ಗುಂಗು ಹಿಡಿಯಿತೆಂದರೆ ಮಧ್ಯರಾತ್ರಿಯಾದರೂ ಸರಿ, ಬೆಳಗಿನ ಜಾವ ಕಳೆದರೂ ಸರಿ… ಹದಿನೈದು-ಹದಿನಾರರ ಹರೆಯದಲ್ಲಿದ್ದ ನನಗೆ ನಿದ್ದೆರಹಿತ ವ್ಯಕ್ತಿಯ ಸಹವಾಸ. ನಿದ್ದೆ ತಡೆಯಲು ಮಾಡದ ಪ್ರಯತ್ನಗಳಿಲ್ಲ. ಆಗಾಗ್ಗೆ ಮುಖಕ್ಕೆ ನೀರು ಬಡಿದುಕೊಳ್ಳುವುದು, ಸಣ್ಣಗೆ ಒಂದೆರಡು ರೌಂಡ್ ವಾಕಿಂಗ್… ಉಹ್ಞೂಂ… ಏನು ಮಾಡಿದರೂ ನಿದ್ದೆಯನ್ನು ತಡೆಗಟ್ಟಲು ಸಾಧ್ಯವೇ ಆಗುತ್ತಿರಲಿಲ್ಲ. ಯಾಕೆಂದರೆ ಕಿ.ರಂ.ಗೆ ಕಾವ್ಯದ ಗುಂಗು ಯಾವತ್ತೋ ಬರುತ್ತಿದ್ದುದಲ್ಲ. ಅದು ನಿತ್ಯ ನಿರಂತರ ಪ್ರವಾಹ… ಆ ಪ್ರವಾಹಕ್ಕೆ ಹಗಲು-ರಾತ್ರಿ ಇರುತ್ತಿರಲಿಲ್ಲ. `ನಿದ್ದೆ ಮಾಡಿ ಉದ್ಧಾರ ಆದವನು ಯಾರಯ್ಯ?’ ಎಂದು ಚಾಟಿ ಏಟು ಬೇರೆ.
ಬಹುಶಃ ಅದು ನನ್ನ ಜೀವನದ ಅತ್ಯುತ್ತಮ ಕಾಲ ಅನ್ನಬಹುದು. ಯಾಕೆಂದರೆ ಕಿ.ರಂ. ಅಂಥವರ ಮನೆಯಲ್ಲಿ ಇಂಥ ಸದವಕಾಶ ಬೇಕೆಂದರೂ ಯಾರಿಗೂ ಸಿಗುವಂಥದಲ್ಲ. ಎಷ್ಟೋ ಸಲ ನನ್ನ ನಿದ್ದೆಯ ಸಂಕಟವನ್ನು ನೋಡಲಾಗದೆ ಅವರ ಪತ್ನಿ ದಿ. ವಿಜಯಲಕ್ಷ್ಮಿ ಬಂದು ಕಿ.ರಂ. ಅವರನ್ನ ತರಾಟೆಗೆ ತೆಗೆದುಕೊಂಡಿದ್ದೂ ಇದೆ. ಒಂದೊಂದು ದಿನ ಈ ರಾತ್ರಿ ಬಚಾವಾದದ್ದೂ ಇದೆ. ಆದರೆ ರನ್ನನ ಮರುದಿನ ಪಂಪ ಬರಲೇಬೇಕಲ್ಲವೇ? ಯಾರೂ ಸಿಗದಿದ್ದರೆ ಅಡಿಗರಂತೂ ಇದ್ದೇ ಇರುತ್ತಿದ್ದರು.
ಇನ್ನೂ ನೆನಪಿದೆ
ನನಗಿನ್ನೂ ನೆನಪಿದೆ. ಗಾಂಧಿ ಬಜಾರಿನ ಸರ್ಕಲ್ ಇದೆಯಲ್ಲ, ಅಲ್ಲಿ ಸರ್ಕಲ್ ಲಂಚ್ ಹೋಂ ಅನ್ನುವ ಹೋಟೆಲ್ ಇತ್ತು. ಅದು ನವ್ಯ ಸಾಹಿತಿಗಳ ಅಡ್ಡೆ. ಗೋಪಾಲಕೃಷ್ಣ ಅಡಿಗರ ನೇತೃತ್ವದಲ್ಲಿ ರಾಶಿ ಸಿಗರೇಟಿನ ಮಧ್ಯೆ ತಾರಕ ಸ್ವರೂಪದಲ್ಲಿ ಕಾವ್ಯದ ಚಿಂತೆ ನಿರಂತರವಾಗಿ ನಡೆಯುತ್ತಿತ್ತು. ಲಂಕೇಶ್, ವೈ.ಎನ್ಕೆ, ಸುಮತೀಂದ್ರ ನಾಡಿಗ್, ಕಿ.ರಂ., ನಿಸಾರ್, ಶೂದ್ರ ಮುಂತಾದ ನವ್ಯಪರಂಪರೆಯ ಹಿರಿಯರ ಜೊತೆ ರಾಮಚಂದ್ರದೇವ, ಅಗ್ರಹಾರ ಕೃಷ್ಣಮೂರ್ತಿ, ಡಿ.ವಿ. ರಾಜಶೇಖರ್ ಮುಂತಾದ ಕಿರಿಯ ಸಾಹಿತ್ಯಾಸಕ್ತರೂ ಅಲ್ಲಿ ಸೇರುತ್ತಿದ್ದರು. ಆ ಹೋಟೆಲ್ ಎದುರೇ ವಿದ್ಯಾರ್ಥಿ ಭವನ್. ಡಿ.ವಿ.ಜಿ. ಯವರನ್ನೊಳಗೊಂಡ ನವೋದಯದ ಪರಂಪರೆಗೆ ವಿದ್ಯಾರ್ಥಿ ಭವನ ಬೆಣ್ಣೆ ಮಸಾಲೆ ಜೊತೆ ಆಸ್ವಾದಿಸುವ ತಾಣವಾಗಿತ್ತು. ಒಂದೆಡೆ ಸಿಗರೇಟಿನ ಹೊಗೆಯ ನಡುವೆ ಕಾಫಿ… ಇನ್ನೊಂದೆಡೆ ಘಮಘಮಿಸುವ ಮಸಾಲೆ ದೋಸೆ! ನವ್ಯ-ನವೋದಯ ಹೋಟೆಲ್ ವಿಚಾರದಲ್ಲೂ ಎದುರು ಬದುರಾಗಿ ನಿಂತಿದ್ದವು!
ಕಿ.ರಂ. ಬರಹಗಾರರಲ್ಲ. ಆದರೆ ಬರಹಗಾರರಿಗೂ ಇಲ್ಲದ ಅತಿದೊಡ್ಡ ಶಕ್ತಿ ಕಿ.ರಂ.ಗಿತ್ತು. ಯಾಕೆಂದರೆ ಕುಮಾರವ್ಯಾಸನ ಸಾಹಿತ್ಯದಿಂದ ಮೊದಲ್ಗೊಂಡು ಅಗ್ರಹಾರನ ಬೆಳದಿಂಗ್ಳಪ್ಪನ ಪೂಜೆವರೆಗೆ ಅಧಿಕಾರಯುತವಾಗಿ, ಸಾಹಿತ್ಯದ ಎಲ್ಲ ಆಯಾಮಗಳನ್ನೂ ಹೇಳಬಲ್ಲಂಥವರು ಕಿ.ರಂ. ಒಬ್ಬರೇ. ಅಡಿಗರೆಂದರೆ ಹುಚ್ಚು, ಬೇಂದ್ರೆ ಎಂದರೆ ಅತಿಪ್ರೀತಿ, ಕುವೆಂಪು ಬಗ್ಗೆ ಅಪ್ರತಿಮ ಗೌರವ, ಲಂಕೇಶ್, ಅನಂತಮೂರ್ತಿಯವರನ್ನು ಕಂಡರೆ ನವ್ಯದ ದಂಡನಾಯಕರನ್ನು ಕಂಡರೆ ಆಗುವಂಥ ಭಯಭಕ್ತಿ. ಒಟ್ಟಿನಲ್ಲಿ ಕವಿಗಳೆಂದರೆ ಸಾಕು! ಕಿ.ರಂ. ತಮ್ಮ ತಮ್ಮನ ಮದುವೆಗೆ ಕೆ.ಎಸ್. ನರಸಿಂಹಸ್ವಾಮಿಯವರನ್ನು ಕರೆಸಿದ್ದರು.
ಜಾಯಮಾನ
ಆದರೆ ಯಾರ ಹಂಗಿಗೂ ಕಿ.ರಂ. ಸಿಗುವ ಜಾಯಮಾನದ ವ್ಯಕ್ತಿಯಲ್ಲ. ಅವರ ಮನೆಯೆಂದರೆ ಅದೊಂದು ಕಾವ್ಯ ಚಿಂತನೆಯ ದೀಪಾವಳಿಯ ಜಗಲಿ. ಅಲ್ಲಿ ನವೋದಯ, ನವ್ಯ, ಬಂಡಾಯ, ದಲಿತ… ಎಲ್ಲ ವೈವಿಧ್ಯಗಳ ಪಟಾಕಿ ಸಿಡಿಯುತ್ತಲೇ ಇರಬೇಕು. ಆದರೆ ಕಾವ್ಯ ಓದದ ಮೈಗಳ್ಳರಿಗೆ, ಯಾವುದೋ ಒಂದೆರಡು ಪುಸ್ತಕ ಓದಿ, ಒಂದೆರಡು ಪದ್ಯ ಬರೆದು, ಲೇಬಲ್ ಹಚ್ಚಿಕೊಂಡು ಬಂದವರಿಗೆ ಬಿರುಸಿನ ಪಟಾಕಿಯಂಥ ಮಾತು ಕಾದಿರುತ್ತಿತ್ತು. `ಮೊದಲು ಓದಿಕೊಂಡು ಬಾರಯ್ಯಾ. ಆಮೇಲೆ ಮಾತನಾಡು’ ಎಂದು ತಣ್ಣಗೆ ಹೊರಗಟ್ಟುತ್ತಿದ್ದರು.
ವರಕವಿ ಬೇಂದ್ರೆಯವರು ತೀರಿಕೊಂಡದ್ದು 81ರ ದೀಪಾವಳಿಯಂದು. ನಾನು ಕಿ.ರಂ. ಅಂದು ಅಭಿನಯ ತರಂಗದ ನಾಟಕವೊಂದರ ತಾಲೀಮು ನೋಡಿ ಹಿಂದಿರುಗುವಾಗ ಬೇಂದ್ರೆ ನಿಧನರಾದ ಸುದ್ದಿ ಬಂತು. ಕಿ.ರಂ. ಮನೆಗೆ ಬರುವಾಗ ಆಗಲೇ ಹಲವರು ಸಾಹಿತ್ಯಾಸಕ್ತರು ಕಿ.ರಂ. ಮನೆ ಬಳಿ ಕಾದಿದ್ದರು. ಅವತ್ತು ಇಡೀ ರಾತ್ರಿ ಬೇಂದ್ರೆ ಕಾವ್ಯವಾಚನ, ಚರ್ಚೆ. ತುತ್ತಿನ ಚೀಲ, ಕುರುಡು ಕಾಂಚಾಣ, ಶ್ರಾವಣ, ರಾಗರತಿ, ಪಾತರಗಿತ್ತಿ… ಒಂದಲ್ಲ… ಎರಡಲ್ಲ… ಬೇಂದ್ರೆಯವರ ಕಾವ್ಯವಾಚನ ಮುಂದಿನ ಆರು ತಿಂಗಳು ನಿರಂತರವಾಗಿ ನಡೆದೇ ಇತ್ತು. ಇವತ್ತಿಗೂ ಬೇಂದ್ರೆಯವರೇ ವಾಚಿಸಿದ `ಮಕ್ಕಳಿವರೇನಮ್ಮ… ಮೂವತ್ಮೂರು ಕೋಟಿ’ ಎಂಬ ಕ್ಯಾಸೆಟ್ ಇರುವುದು ಕಿ.ರಂ. ಮನೆಯಲ್ಲಿ ಮಾತ್ರ ಎಂದು ಕಾಣುತ್ತದೆ. ಹಾಗೆ ಎಂ.ಎಸ್.ಐ.ಎಲ್.ನವರು ತಂದ ಬೇಂದ್ರೆ ಹಾಡುಗಳಿಗೆ ಸ್ವತಃ ಬೇಂದ್ರೆಯವರೇ ನಿರೂಪಣೆ ನೀಡಿದ ಅಪರೂಪದ ಧ್ವನಿಮುದ್ರಿಕೆ ಕಿ.ರಂ. ಬಳಿಯಿದೆ.
ಕಿ.ರಂ. ಬರೆದದ್ದು ಕಮ್ಮಿ… ಆದರೆ ಬರೆಸಿದ್ದು ಜಾಸ್ತಿ. ಬರೆಯುವ ಆಸಕ್ತಿಯ ಎಂಥವರೇ ಬರಲಿ, ಅವರಿಂದ ಜುಲುಮೆ ಮಾಡಿ ಬರೆಸುವ ಶಕ್ತಿ ಕಿ.ರಂ.ಗಿತ್ತು. ಚೆನ್ನಾಗಿಲ್ಲದಿದ್ದರೆ ಹಗುರವಾಗಿ ಟೀಕಿಸುತ್ತಿದ್ದರು. ಆದರೆ ಆ ಬರಹದಲ್ಲಿ ಒಂದಷ್ಟು ಬೆಳಕು ಕಂಡರೂ ಸಾಕು, ಆತನನ್ನು ಅಥವಾ ಆಕೆಯನ್ನು ಈ ಶತಮಾನದ ಉತ್ತಮ ಕವಿ ಎನ್ನುವಂತೆ ನಿರ್ಭಿಡೆಯಾಗಿ ಹೊಗಳುತ್ತಿದ್ದರು. ಎಷ್ಟೋ ಪುಸ್ತಕಗಳಿಗೆ ಅವರೇ ಕೈಯಿಂದ ಹಣ ಹಾಕಿ ಮುದ್ರಣದ ಭಾಗ್ಯ ಒದಗಿಸಿದ್ದೂ ಇದೆ.
ಮಿನಿ ಸೆಂಟ್ರಲ್ ಲೈಬ್ರರಿ
ಕಿ.ರಂ. ಮನೆಯನ್ನು ಅಂದರೆ ಆಗಿನ ಮನೆಯನ್ನು ಕೊಂಚ ವಿವರಿಸಿದರೆ ನಿಮಗರ್ಥವಾಗಬಹುದು. ಹೆಚ್ಚು ಕಡಿಮೆ ಮಿನಿ ಸೆಂಟ್ರಲ್ ಲೈಬ್ರರಿಯಂಥ ಮನೆ. ಎಲ್ಲೇ ಕೈಕಾಲು ಆಡಿಸಿದರೂ ಅಲ್ಲೊಂದು ಪುಸ್ತಕ. ಪುಸ್ತಕಗಳನ್ನು ಜೋಡಿಸಿ ಇಟ್ಟಿದ್ದೇ ಕಮ್ಮಿ. ಮಲಗುವ ಮಂಚದಿಂದ ಹಿಡಿದು, ಟಾಯ್ಲೆಟ್ವರೆಗೂ ಈ ಪುಸ್ತಕಗಳದೇ ನೋಟ.
ಇಂಥ ಪುಸ್ತಕ ಪ್ರೀತಿಯ ಕಿ.ರಂ. ಅವರನ್ನು ಒಮ್ಮೆ ಒಬ್ಬ ಅವರ ಮನೆಯಲ್ಲಿ `ಬರ್ನ್ ಯುವರ್ ಬ್ಲಡಿ ಬುಕ್ಸ್ ಐ ಸೇ’ ಅಂದೇ ಬಿಟ್ಟ. ಮನೆಯಲ್ಲಿ ಅಲ್ಲಲ್ಲಿ ರಾಶಿ ರಾಶಿ ಬಿದ್ದಿದ್ದ ಪುಸ್ತಕ ಕಂಡು ಅಸಹ್ಯದಿಂದ ಹಾಗಂದಿದ್ದ. ಎರಡೇ ನಿಮಿಷದಲ್ಲಿ ಮನೆ ಕುರುಕ್ಷೇತ್ರವಾಯಿತು. ಕುಸ್ತಿ ಮುಗಿಸಿ ಆತ ಹೋಗುವಾಗ ನಮಗೆ ಬೆದರಿಕೆ ಹಾಕಿ ಹೋಗಿದ್ದ. ಪೊಲೀಸ್ ಕರೆಸಿ ನಮ್ಮಿಬ್ಬರನ್ನೂ ಜೈಲಿಗೆ ಕಳಿಸುವ ಧಮಕಿ ಕೊಟ್ಟಿದ್ದ. ಆಗ ತುರ್ತುಪರಿಸ್ಥಿತಿಯ ಕಾಲ. ಭೂಗತ ಕರಪತ್ರಗಳು, ಪತ್ರಿಕೆಗಳು ಆಗ ಕಿ.ರಂ. ಮನೆಗೆ ಬಂದು ಅಲ್ಲಿಂದ ಸಹಚಿಂತಕರ ಮನೆಗೆ ವಿಲೇವಾರಿಯಾಗುತ್ತಿದ್ದವು. ಇದೊಂದು ಭಯ ನಮ್ಮನ್ನು ಕಾಡಿತ್ತು. ರಾತ್ರೋರಾತ್ರಿ ಅಂಥ ಪತ್ರಿಕೆ, ಕರಪತ್ರಗಳೆಲ್ಲವನ್ನೂ ಗಂಟುಮೂಟೆ ಕಟ್ಟಿ ಸಾಗಿಸುವ ಹೊತ್ತಿಗೆ ಬೆಳಕಾಗಿತ್ತು.
ಎಪ್ಪತ್ತರ ದಶಕದಲ್ಲಿ ಕಿ.ರಂ.`ಪ್ರತಿಷ್ಠಿತ ಶಕ್ತಿ ಮತ್ತು ಕನ್ನಡ ಸಾಹಿತ್ಯ’ ಎಂಬ ಕಿರುಪುಸ್ತಕ ಬರೆದಿದ್ದರು. ಇವತ್ತಿಗೂ ಅದು ಅತ್ಯಮೂಲ್ಯ ಕೃತಿ… `ನೀಗಿಕೊಂಡ ಸಂಸ’ `ಕನಕ’ ಅವರ ನಾಟಕಗಳು. ಈ ನಾಟಕಗಳನ್ನು ಕಿ.ರಂ. ಕೈಯಲ್ಲಿ ಬರೆಸುವ ಸಾಹಸ ಮಾಡಿದವರು ಕಿ.ರಂ. ಥರಹವೇ ವಿಕ್ಷಿಪ್ತ ವ್ಯಕ್ತಿತ್ವದ ರಂಗಕರ್ಮಿ ಸಿ.ಜಿ.ಕೆ!
ಸಂಪ್ರದಾಯಿ ಅಲ್ಲ
ಆದರೆ ಕಿ.ರಂ. ಬರೀ ಕಾವ್ಯದ ವ್ಯಕ್ತಿ ಮಾತ್ರ ಎಂದರೆ ಖಂಡಿತಾ ತಪ್ಪು. ಅಷ್ಟು ಮಾತ್ರವಲ್ಲ, ಅವರು ಎಂದೂ ಸಂಪ್ರದಾಯ ಶರಣರೂ ಅಲ್ಲ. ಹಳೆಗನ್ನಡದಿಂದ ಹಿಡಿದು, ಇವತ್ತು ಬರೆಯುವ ಬರಹಗಾರರವರೆಗೆ ಎಲ್ಲವನ್ನೂ ತಿಳಿಯುವ ಎಚ್ಚರ ಅವರಿಗಿದೆ; ಆಧುನಿಕ ಪತ್ರಿಕೋದ್ಯಮ ಗೊತ್ತಿದೆ; ಆಧುನಿಕ ವಿಜ್ಞಾನದ ಅವಿಷ್ಕಾರ ಬಗ್ಗೆ ಅರಿವಿದೆ; ನ್ಯೂಟನ್ನಿಂದ ಸ್ಟೀಫನ್ ಹಾಕಿಂಗ್ಸ್ನ ಕ್ವಾಂಟಮ್ ಥಿಯರಿವರೆಗೂ ಅವರು ಓದಿದ್ದಾರೆ. ಹಾಗೇ ಕೆರ್ರಿಪ್ಯಾಕರ್, ಲಿಲ್ಲಿ, ಥಾಮ್ಸನ್, ರಿಚರ್ಡ್ಸ್ ನಿಂದ ಹಿಡಿದು ಇಂದಿನ ಪ್ರಗ್ಯಾನ್ ಓಜಾವರೆಗೂ ಅವರು ಅರಿತಿದ್ದಾರೆ. ನಡಾಲ್, ಮರ್ರೆಯಿಂದ ಮಹೇಶ ಭೂಪತಿ ಸಾಧನೆಯವರೆಗೂ ವಿವರ ಸಿಗುವುದು ಕಿ.ರಂ. ಬಳಿ ಮಾತ್ರ. ಇದು ಅಂದಿನಿಂದ ಇಂದಿನವರೆಗೂ ನಿರಂತರವಾಹಿನಿಯಾಗಿ ಹರಿದು ಬಂದ ಉತ್ಸಾಹ, ಲವಲವಿಕೆ.
ಲಂಕೇಶ್, ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ನಂಜುಂಡಸ್ವಾಮಿ, ಶಾಮಣ್ಣ, ಅಗ್ರಹಾರ, ಸಿದ್ಧಲಿಂಗಯ್ಯ, ಎಚ್.ಎಸ್.ವಿ., ಶೂದ್ರ, ಡಿ.ಆರ್. ನಾಗರಾಜ್ ಅಲ್ಲದೆ ಖ್ಯಾತ ಛಾಯಾಗ್ರಾಹಕರು, ವಿಜ್ಞಾನಿಗಳು, ಡಾಕ್ಟರು, ಐಎಎಸ್ ಅಧಿಕಾರಿಗಳು- ಹೀಗೆ ಕಿ.ರಂ. ಮನೆಯಲ್ಲಿ ಸೇರುತ್ತಿದ್ದುದೇ ವಿಭಿನ್ನ ಕ್ಷೇತ್ರದ ವೈವಿಧ್ಯಮಯ ಜನರು… ಎಲ್ಲರೊಡನೆಯೂ ಆಯಾ ಕ್ಷೇತ್ರದ ಬಗ್ಗೆ ಮಾತಾಡುವಷ್ಟು ಪ್ರೌಢರು ಕಿ.ರಂ. ಅದು ಅಂದೂ ಇತ್ತು, ಇಂದೂ ಇದೆ. ಅದೇ ಅವರ ಆರೋಗ್ಯಕರ ಚಿಂತನೆಯ ಗುಟ್ಟು.
ಕಿ.ರಂ.ಗೆ ಸಾಹಿತ್ಯ ಅಕಾಡೆಮಿಯ ಗೌರವ ಕಡೆಗೂ ದಕ್ಕಿದೆ. ಎಂದೋ ಸಿಗಬೇಕಾಗಿತ್ತು ಎಂದು ನಾವೆಲ್ಲ ತುಸು ಬೇಸರಗೊಂಡರೆ, ಕಿ.ರಂ.ಗೆ ಕಡೆಗೂ ಸಿಕ್ಕಿತಲ್ಲ ಎಂದು ಸಂತಸಗೊಂಡವರೇ ಹೆಚ್ಚು. ಕಿ.ರಂ. ಅಭಿನಂದನೆಯ ಕಾರ್ಯಕ್ರಮದ ಸಲುವಾಗಿ ಅನಂತಮೂರ್ತಿಯವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ `ಪೇಪರ್ ನೋಡಿದಾಗ ಆಶ್ಚರ್ಯ ಆಯ್ತು ಕಣಯ್ಯ. ಕಿ.ರಂ.ಗೆ ಇನ್ನೂ ಈ ಗೌರವ ಸಿಕ್ಕಿರಲಿಲ್ಲ ಅನ್ನೋದೇ ವಿಚಿತ್ರ ಅಲ್ವಾ?’ ಅಂದರು.
ಹೌದು… ಕಿ.ರಂ. ಇರುವುದೇ ಹಾಗೆ… ಬೇಂದ್ರೆಯವರ ಪದ್ಯವನ್ನು ಅವರು ಯಾವಾಗಲೂ ಹೇಳುತ್ತಿರುತ್ತಾರೆ.
ಅನ್ನವಾಮಿಷವಾಗೆ ಗಂಟಲಿಗೆ ಗಾಳ
ತಿನ್ನುವವನೇ ತಿನಲು ಯತ್ನಿಸುವ ಕಾಳ…
ಕಿ.ರಂ. ಈ ಗೌರವ, ಪ್ರಶಸ್ತಿಗಳನ್ನು ಮೀರಿದವರು… ಅದು ಎಲ್ಲರಿಗೂ ಗೊತ್ತಿರುವ ಸತ್ಯ.
(ಚಿತ್ರಗಳು: ಲೇಖಕರವು)
ಡಿ. ವಿ. ಪ್ರಹ್ಲಾದ್ ಅವರು ಮೂಲತಃ ಬೆಂಗಳೂರಿನವರು. ‘ಡೀಮರ್’, ‘ನಾಳೆಯಿಂದ’, ‘ದಯಾ… ನೀ ಭವಾ… ನೀ’ – ಪ್ರಕಟಿತ ಕವನ ಸಂಕಲನ. ‘ಅನುದಿನವಿದ್ದು’ (ಅಗಲಿದ ಲೇಖಕರ ನೆನಪುಗಳ ಸಂಗ್ರಹ) ‘ಎ. ಕೆ. ರಾಮಾನುಜನ್ ಹೆಜ್ಜೆಗುರುತು’, ‘ಬಗೆ ತೆರೆದ ಬಾನು’ (ಸಾಹಿತಿಗಳ ಸಂದರ್ಶನ ಸಂಕಲನ), ‘ಮುಕ್ತ ಛಂದ’- ಶಾಂತಿನಾಥ ದೇಸಾಯಿ ವ್ಯಕ್ತಿ ಕುರಿತ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ. `ಸಂಚಯ’ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿದ್ದರು.