ಸೋನ್‌ ಮಾರ್ಗ ಪ್ರದೇಶದ ಕಡೆ ಹೋಗುವಾಗ ಭಾರಿ ಪ್ರಮಾಣದ ಹಿಮ ಬಿದ್ದ ಕಾರಣ ನಮ್ಮ ವಾಹನ ಮುಂದೆ ಸಾಗದ ಸ್ಥಿತಿಯುಂಟಾಯಿತು. ನಂತರ ಹಿಮದಲ್ಲಿ ಮುನ್ನುಗ್ಗುವ ಬೇರೆ ವಾಹನಗಳನ್ನು ಬಾಡಿಗೆ ಪಡೆಯಲಾಯಿತು. ಎತ್ತ ನೋಡಿದಡತ್ತ ಹಿಮ. ಸುತ್ತೆಲ್ಲ ಹಿಮ ಪರ್ವತಗಳು. ಆ ಪ್ರದೇಶದ ಕುರಿಗಾಯಿಗಳ ಪುಟ್ಟ ಪುಟ್ಟ ಮನೆಗಳೆಲ್ಲ ಹಿಮದ ರಾಶಿಯ ಹಾಗೆ ಕಾಣುತ್ತಿದ್ದವು. ಹಿಮ ಬೀಳುವ ಋತುವಿನಲ್ಲಿ ಆ ಕುರಿಗಾರರು ತಮ್ಮ ಕುರಿಗಳೊಂದಿಗೆ ಬೇರೆಡೆ ಹೋಗಿ ವಾಸಿಸುವರು. ಇದೆಂಥ ಪರಿಶ್ರಮದ ಬದುಕು! ಹೊಟ್ಟೆಪಾಡಿಗಾಗಿ ಜೀವ ಸವೆಸುವವರಿಗೆ ಯಾವ ಧರ್ಮ? ಯಾವ ದರ್ಶನ?
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 77ನೇ ಕಂತು ನಿಮ್ಮ ಓದಿಗೆ

ಕೊರೊನಾ ಪ್ರಾರಂಭವಾದಾಗ ವರ್ಷವಿಡೀ ಮನೆಯಲ್ಲೇ ಉಳಿದೆ. ವರ್ಷದ ನಂತರ ವಿಮಾನ ಹಾರಾಟ ಶುರುವಾದವು. ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ. ಸುರೇಶ್ ಅವರು ಕಾಶ್ಮೀರ ಪ್ರವಾಸದ ವ್ಯವಸ್ಥೆ ಮಾಡಿದರು. ಕೊರೊನಾ ಕಿರಿಕಿರಿಯಿಂದಾಗಿ ಕಾಶ್ಮೀರ ಪ್ರವಾಸದಲ್ಲಿ ಭಾಗಿಯಾಗುವ ಮನಸ್ಸಿಲ್ಲದಿದ್ದರೂ ಒತ್ತಾಯದ ಕಾರಣ ಒಪ್ಪಿಕೊಳ್ಳಬೇಕಾಯಿತು.

ಈ ಪ್ರವಾಸದಲ್ಲಿ ೨೦ಕ್ಕೂ ಹೆಚ್ಚು ಜನರಿದ್ದರು. ಹೆಚ್ಚಾಗಿ ಕುಟುಂಬ ಸಮೇತ ಬಂದವರೇ ಆಗಿದ್ದರು. ಬೆಂಗಳೂರಿನಿಂದ ದೆಹಲಿಗೆ ಹೋಗಿ, ಅಲ್ಲಿಂದ ಶ್ರೀನಗರಕ್ಕೆ ಇನ್ನೊಂದು ವಿಮಾನ ಹಿಡಿಯಬೇಕಿತ್ತು. ಶ್ರೀನಗರ ತಲಪುವುದರೊಳಗೆ ಮಧ್ಯಾಹ್ನವಾಗಿತ್ತು. ಕಾಶ್ಮೀರ ಗಡಿ ಬಂದಕೂಡಲೆ ಪರ್ವತಶ್ರೇಣಿಯ ರುದ್ರರಮಣೀಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತ ಭಾವಪರವಶನಾದೆ. ವಿಮಾನದ ಕಿಟಕಿಯ ಮೂಲಕ ತದೇಕಚಿತ್ತನಾಗಿ ನೋಡುತ್ತಲೇ ಇದ್ದೆ. ಅದೆಂಥ ಪ್ರಕೃತಿಯ ಲೀಲೆ! ಹಸಿರು ವನಸಿರಿಯಿಂದ ಕೂಡಿದ ಬೆಟ್ಟ ಸಾಲಿನಲ್ಲಿ ನೀಲಿ ಛಾಯೆಯ ಹೊದಿಕೆ. ಮೇಲೆ ಬೆಳ್ಳಿಮೋಡಗಳ ರಾಶಿ. ಭಾರಿಗಾತ್ರದ ಅನಕೊಂಡಾ ಸರ್ಪದಂತೆ ಆ ಬಿಸಿಲಲ್ಲಿ ಎದ್ದುಕಾಣುವ ಅಂಕುಡೊಂಕಾದ ರಸ್ತೆ. ರಸ್ತೆಗುಂಟ ಹೊಳೆಯುವ ಲೈಟ್ ಕಂಬಗಳು. ಕೊನೆಯಲ್ಲಿ ಕಾಣುವ ಬಿ.ಎಸ್.ಎಫ್. ಕ್ಯಾಂಪ್ ಮೊದಲಾದವು ಆ ಭವ್ಯ ನಿಸರ್ಗದ ಕೂಸುಗಳಂತೆ ಕಂಡವು.

ಆ ವಿಮಾನದ ದೂರ, ಎತ್ತರ, ನೋಡುತ್ತಿರುವ ಸಮಯ ಮತ್ತು ನೋಡುವ ದೃಷ್ಟಿಕೋನಕ್ಕೆ ಪೂರಕವಾದ ಸೃಷ್ಟಿಯಿಂದಾಗಿ ಪ್ರಕೃತಿ ಸೌಂದರ್ಯದ ಸಾಕ್ಷಾತ್ಕಾರವೇ ಆಯಿತು. ಇಂಥ ಅನಿರೀಕ್ಷಿತ ಕ್ಷಣ ನನ್ನ ಬದುಕಿನಲ್ಲಿ ಬರುವುದಾಗಿ ಎಂದೂ ನಿರೀಕ್ಷಿಸಿರಲಿಲ್ಲ. ಬಹುಶಃ ನನಗಾದ ಅನುಭವ ಆ ಕಾಶ್ಮೀರಿಗಳಿಗೂ ಆಗಿಲ್ಲ ಎಂಬುದು ನನ್ನ ದೃಢವಾದ ಅನಿಸಿಕೆ.

ಅದೆಂಥ ಸಾಕ್ಷಾತ್ಕಾರವೆಂದರೆ, ಇನ್ನು ಮೃತ್ಯು ಎದುರಾದರೂ ಪರವಾಗಿಲ್ಲ ಎಂಬ ಭಾವ ಮೂಡಿತು. (ಪ್ರವಾಸ ಮುಗಿಸಿ ವಾಪಸ್ ಬರುವಾಗ ಆ ದೃಶ್ಯ ನೋಡುವ ಸಲುವಾಗಿ ಕಿಟಕಿಗೆ ಮುಖ ಮಾಡಿ ಕುಳಿತೆ. ಆದರೆ ಸಮಯದ ಹೊರತು ಪಡಿಸಿ ಎಲ್ಲವೂ ಅದೇ ಇದ್ದರೂ ಮೊದಲಿನ ಅನುಭವವಾಗಲಿಲ್ಲ!)

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಇಳಿದಾಗ ಕೊರೊನಾ ಚೆಕ್ ಮಾಡುವ ತಂಡ ಕ್ರಿಯಾಶೀಲವಾಗಿತ್ತು. ಚೆಕ್ ಮಾಡುವಾಗ ಪೊಸಿಟಿವ್ ಬಂದರೆ ನೇರವಾಗಿ ಸರ್ಕಾರಿ ಆಸ್ಪತ್ರೆಯ ಐ.ಸಿ. ಯೂನಿಟ್ ಸೇರುವ ಪರಿಸ್ಥಿತಿ ಬರಬಹುದೇ ಎಂಬ ದುಗುಡ ಶುರುವಾಯಿತು.

ಪೊಸಿಟಿವ್ ಬಂದ ಕೆಲವರನ್ನು ದೂರ ನಿಲ್ಲಿಸಲಾಗಿತ್ತು. ಸದ್ಯ ನಮ್ಮ ಗ್ರೂಪಿನ ಎಲ್ಲರೂ ಪಾರಾದೆವು. ನಮಗಾಗಿ ಕಾಯುತ್ತಿದ್ದ ವಾಹನ ಹತ್ತಿದಾಗ ಸಮಯ ಎರಡೂವರೆ ಆಗಿತ್ತು. ಬಿಸಿಲು ಕೂಡ ಸಾಕಷ್ಟಿತ್ತು. ನೇರವಾಗಿ ಹೊಟೇಲ್‌ಗೆ ಹೋದರೂ ಊಟದ ವ್ಯವಸ್ಥೆಯಾಗಲು ಒಂದು ಗಂಟೆಯಾದರೂ ಬೇಕು. ಮೊದಲೇ ವ್ಯವಸ್ಥೆ ಆಗಿದ್ದಂತೆ ಎಲ್ಲರಿಗೂ ಚಕ್ಕುಲಿಯ ಪ್ಯಾಕೆಟ್ ವಿತರಣೆ ಮಾಡಲಾಯಿತು.

ಸ್ವಲ್ಪ ದೂರ ಹೋದಮೇಲೆ ತಪಾಸಣೆಗಾಗಿ ವಾಹನ ನಿಂತಿತು. ಯಾವುದೋ ದೇವಲೋಕದಿಂದ ಬಂದಹಾಗೆ ಕಾಣುತ್ತಿದ್ದ ಮಕ್ಕಳು ಚೇಷ್ಟೆ ಮಾಡುತ್ತ ನಿಂತಿದ್ದರು. ಆ ಮುಗ್ಧ ಸುಂದರ ಮುಖಗಳನ್ನು ನೋಡುತ್ತ ಚಕ್ಕುಲಿಯ ಪ್ಯಾಕೆಟ್ ಹರಿಯತೊಡಗಿದೆ. ಒಬ್ಬ ಹುಡುಗ ಹೊಟ್ಟೆಯ ಮೇಲೆ ಕೈ ಹಿಡಿದುಕೊಂಡು ನಿಂತ. ಅವರ ಬಗ್ಗೆಯೆ ಯೋಚಿಸುತ್ತಿದ್ದ ನನಗೆ ಏನೊಂದು ಅರ್ಥವಾಗಲಿಲ್ಲ. ನನ್ನ ಮುಂದಿನ ಸೀಟಿನಲ್ಲಿ ಕುಳಿತ ಮಹಿಳೆ “ಆತನಿಗೆ ಹಸಿವು” ಎಂದರು. ಕೂಡಲೆ ಚಕ್ಕುಲಿಯ ಪ್ಯಾಕೆಟನ್ನು ಕೊಟ್ಟೆ. ಕಣ್ಣಿನ ಮೂಲಕ ಕೃತಜ್ಞತಾ ಭಾವ ವ್ಯಕ್ತಪಡಿಸಿದ ಆತ, ಎಲ್ಲ ಜೊತೆಗಾರರಿಗೆ ಹಂಚಿ ಉಳಿದದ್ದನ್ನು ತಿನ್ನತೊಡಗಿದ. ನನ್ನ ಜೇಬಿನಲ್ಲಿದ್ದ ಒಂದಿಷ್ಟು ನೋಟುಗಳನ್ನು ಆತನಿಗೆ ಕೊಟ್ಟೆ. ಆತ ಎಲ್ಲ ಗೆಳೆಯರನ್ನು ಸೇರಿಸಿ, ಆ ಹಣ ಹಿಡಿದು ಏನೋ ಹೇಳುತ್ತಿದ್ದ. ನಮ್ಮ ವಾಹನ ಮುಂದೆ ಸಾಗಿತು.

ಈ ಸ್ವರ್ಗದ ಮಕ್ಕಳ ಹಸಿವಿನ ಸಂಕಟ ನನ್ನನ್ನು ದಿಗಿಲುಗೊಳಿಸಿತ್ತು. ಇನ್ನೊಂದು ಕಡೆ ವಾಹನ ನಿಂತಾಗ ಯುವತಿಯೊಬ್ಬಳು ಸ್ಟೈಲಿಶ್ ಆಗಿ ಇದ್ದ ಹಾಗೆ ಭಾಸವಾಯಿತು. ಅವಳು ಬ್ಯೂಟಿ ಪಾರ್ಲರ್‌ನಿಂದ ಬಂದ ಹಾಗೆ ಅನಿಸಿತು. ಆಮೇಲೆ ಗೊತ್ತಾಯಿತು. ಅವಳ ಬಣ್ಣವೇ ಹಾಗೆ ಎಂದು. ಇದೆಲ್ಲ ಕಾಶ್ಮೀರಲ್ಲಿ ನನ್ನ ಮೊದಲ ಅನುಭವ. ನಂತರ ಅರಿವಿಗೆ ಬಂತು, ಕಾಶ್ಮೀರದ ಬಡ ಮಕ್ಕಳು ಮತ್ತು ಬಾಲೆಯರು ಕೂಡ ಸೌಂದರ್ಯದಲ್ಲಿ ಶ್ರೀಮಂತರು ಎಂದು.

ಹೋಟೆಲೊಂದರ ಮುಂದೆ ವಾಹನ ನಿಂತಿತು. ಒಂದಿಷ್ಟು ತಿಂದು ಹೊರಬರುವುದರೊಳಗಾಗಿ ಸಾಯಂಕಾಲ ೪ ಗಂಟೆ ಆಗಿತ್ತು. ವಾಹನ, ೧೮ ಚದರ ಕಿಲೋಮೀಟರ್ ವಿಸ್ತೀರ್ಣದ ದಾಲ್ ಸರೋವರದ ಕಡೆಗೆ ಹೊರಟಿತು. ನಾಲ್ಕೈದು ವರ್ಣರಂಜಿತ ಬೋಟ್ (ಶಿಕಾರ )ಗಳಲ್ಲಿ ಲಗೇಜ್ ಸಮೇತ ಕುಳಿತೆವು.

ಸರೋವರದಲ್ಲಿ ಸ್ವಲ್ಪ ಸುತ್ತಾಡಿದ ನಂತರ ಬೋಟ್ ಹೌಸ್‌ಗೆ ಹೋಗಿ ಅಲ್ಲೇ ರಾತ್ರಿ ಕಳೆಯಬೇಕಿತ್ತು. ಕೊರೊನಾದಿಂದಾಗಿ ಸರೋವರದಲ್ಲಿ ನಾವೆಗಳು ಇಳಿಯದ ಕಾರಣ ನೀರು ಅಷ್ಟೇನು ಸ್ವಚ್ಛ ಕಾಣುತ್ತಿರಲಿಲ್ಲ.

ಎಲ್ಲ ನಾವೆಗಳ ಸುತ್ತ, ಸಣ್ಣ ವ್ಯಾಪಾರಿಗಳು ತಮ್ಮ ಚಿಕ್ಕ ನಾವೆಯಲ್ಲಿ ಬರುತ್ತಿದ್ದರು. ಸಾದಾ ಆದರೆ ವರ್ಣಮಯವಾದ ಸರ ಮತ್ತು ಬೆಂಡೋಲೆಗಳನ್ನು ಮಾರುವವರು ಬಂದಾಗ ಅವರ ಮೃದು ಮಾತುಗಳು ಮತ್ತು ದಯನೀಯ ಸ್ಥಿತಿ ಕಂಡು ಸ್ವಲ್ಪ ಕೊಂಡೆ. ಬೋಟಿನಲ್ಲಿ ಇದ್ದ ಇತರರು ಕೂಡ ಕೊಂಡರು. ಉದ್ಯೋಗವಿಲ್ಲದೆ ವರ್ಷ ಕಳೆದ ಅವರು ಎಷ್ಟೇ ಕಡಿಮೆ ಬೆಲೆಗೆ ಕೇಳಿದರೂ ಕೊಡುವ ಸ್ಥಿತಿಯಲ್ಲಿ ಇದ್ದರು. ನಮ್ಮ ಜನ ಕೂಡ ಇಂಥದೇ ಅವಕಾಶಕ್ಕೆ ಕಾಯುತ್ತಾರೆ ಎಂಬುದು ನಂತರದ ದಿನಗಳಲ್ಲಿ ಕೂಡ ಅರಿವಿಗೆ ಬಂದಿತು.

ಅಲ್ಲಿಯ ಚಳಿಗೆ ಅವರು ವಿಶಿಷ್ಟವಾದ ಕಷಾಯ ಮಾಡುತ್ತಾರೆ. ಜನ ಅದನ್ನು ಚಹಾದ ಹಾಗೆ ಕುಡಿಯುತ್ತಾರೆ. ಪುಟ್ಟ ನಾವೆಗಳೊಂದಿಗೆ ಅಂಥ ಕಷಾಯ ಮಾರುವವರೂ ಬರುತ್ತಾರೆ. ಇದೆಲ್ಲ ಹೊಸ ಅನುಭವ.

ವಿಶಾಲವಾದ ಮತ್ತು ಉದ್ದನೆಯ ದಾಲ್ ಸರೋವರದಲ್ಲಿ ಸುತ್ತಾಡಿದೆವು. ಅದರೊಳಗೇ ಇರುವ ಮಾರಾಟ ಮಳಿಗೆಗಳಿಗೂ ಭೇಟಿ ಕೊಟ್ಟೆವು. ಕೊನೆಗೆ ಬೋಟ್ ಹೌಸ್ ಸೇರಿದಾಗ ರಾತ್ರಿಯಾಗಿತ್ತು.

ವರ್ಷದಿಂದ ಜನಸಂಪರ್ಕವಿಲ್ಲದೆ ಬೋಟ್ ಹೌಸ್ ಮತ್ತು ಬೆಡ್ ಮುಂತಾದವು ಮುಗ್ಗಲು ವಾಸನೆ ಬೀರುತ್ತಿದ್ದವು. ನನಗಂತೂ ಆ ಚಳಿಯಲ್ಲಿ ರಾತ್ರಿ ಕಳೆಯುವುದೇ ಸಮಸ್ಯೆಯಾಯಿತು. ಬಿಸಿನೀರಿನ ವ್ಯವಸ್ಥೆ ಕೂಡ ಸರಿಯಾಗಿ ಇರಲಿಲ್ಲ. ಎಲ್ಲವೂ ಅಸ್ತವ್ಯಸ್ತ. ಈ ಬೋಟ್ ಹೌಸ್ ಮಾಲಿಕರು ಗಿರಾಕಿಗಳಿಲ್ಲದೆ ಒಂದು ವರ್ಷ ಕಳೆದದ್ದೇ ಸಖೇದಾಶ್ಚರ್ಯಕರವಾದುದು. ಪ್ರವಾಸೋದ್ಯಮದ ಮೇಲೆಯೆ ಬದುಕುವ ಕಾಶ್ಮೀರಿಗಳು ವರ್ಷ ಕಾಲ ಹಾಗೆ ಬದುಕಿದ್ದೇ ಒಂದು ಪವಾಡ. ಅವರೆಲ್ಲರ ಬಗ್ಗೆ ಮನಸ್ಸಿನಲ್ಲೇ ಸಾಂತ್ವನ ಹೇಳುತ್ತ ಹೇಗೋ ಮಲಗಿದೆ.

ಬೆಳಿಗ್ಗೆ ಎದ್ದು ಹೊರಗಡೆ ಬಂದಾಗ ಕೆಲ ಗೆಳೆಯರು ಬೋಟುಗಳು ಬಂದು ನಿಲ್ಲುವ ಕಟ್ಟಿಗೆ ಜಟ್ಟಿಯ ಮೇಲೆ ನಿಂತು ಸೃಷ್ಟಿಯ ಸೌಂದರ್ಯವನ್ನು ಸವಿಯುತ್ತಿದ್ದರು. ಅದಾಗಲೆ ಕೆಲ ಕಾಶ್ಮೀರಿ ಯುವಕರು ವ್ಯಾಪಾರಿ ನಾವೆಗಳಲ್ಲಿ ಬಣ್ಣಬಣ್ಣದ ಹೂಗಳನ್ನು ಮತ್ತು ಅಂಥ ಹೂವುಗಳ ಬೀಜದ ಪಾಕೆಟ್‌ಗಳನ್ನು ಮಾರಲು ತಂದಿದ್ದರು. ಅವುಗಳ ಖರೀದಿಯೂ ಆಯಿತು.

ಬೋಟ್ ಹೌಸ್ ಅನುಭವಕ್ಕಾಗಿ ಒಂದು ರಾತ್ರಿ ಕಳೆಯಬೇಕಿತ್ತು. ಬೆಳಿಗ್ಗೆ ತ್ರಿತಾರಾ ಹೊಟೆಲಲ್ಲಿ ವ್ಯವಸ್ಥೆ. ಅಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳಿದ್ದವು. ರೂಂ ಹೀಟರ್ ಕೂಡ ಇದ್ದುದರಿಂದ ಚಳಿಯಾಗಲಿಲ್ಲ. ಚೆನ್ನಾಗಿ ನಿದ್ರೆ ಬಂತು.
ಮರುದಿನ ಗುಲ್ ಮಾರ್ಗಕ್ಕೆ ಹೋದೆವು.

ಗುಲ್ ಮಾರ್ಗಕ್ಕೆ ಹೋಗುವಾಗ ಮಾರ್ಗಮಧ್ಯೆ ಒಂದು ಕಡೆ ನಿಂತು ಬಾಡಿಗೆ ಗಂ ಬೂಟ್, ಓವರ್ ಕೋಟ್‌ಗಳನ್ನು ಧರಿಸಿ ಮುನ್ನಡೆಯಬೇಕು. ಆ ಓವರ್ ಕೋಟ್ ಮತ್ತು ಗಂ ಬೂಟುಗಳು ಕೂಡ ಮುಗ್ಗಲು ವಾಸನೆಯಿಂದ ಕೂಡಿದ್ದವು. ಒಂದು ವರ್ಷದಿಂದ ಕಾಶ್ಮೀರಕ್ಕೆ ಬರಲು ಕಾಯ್ದವರ ಮಧ್ಯೆ ನಾವು ಸಿಕ್ಕಿ ಬಿದ್ದಿದ್ದೆವು.

ಗುಲ್ ಮಾರ್ಗ ತಲುಪಿದ ಮೇಲೆ ಒಂದೆಡೆ ವಾಹನ ನಿಂತ ನಂತರ, ಹಿಮದ ಮೇಲೆ ಎಳೆಯುವ ಹಲಗೆಯಂಥ ವಾಹನ ಎಂಬೋ ವಾಹನದ ಮೇಲೆ ಕುಳಿತು ಹೋಗಬೇಕು. ಕೂಲಿಗಳು ಹಗ್ಗ ಕಟ್ಟಿ ಅದನ್ನು ಎಳೆದುಕೊಂಡು ಹೋಗುವಾಗ ಎಲ್ಲಿ ಬೀಳಿಸುವರೋ ಎಂಬ ಭಾವನೆ ಸಹಜವಾಗೇ ಮೂಡುವುದು. ನನ್ನಂಥವರಿಗೆ ಅದೊಂದು ಹಿಂಸೆಯ ಪಯಣ.

ಗುಲ್ ಮಾರ್ಗದ ವಿಶಾಲ ಪ್ರದೇಶದ ಮಧ್ಯೆ ತಿಂಡಿತಿನಿಸು ಮತ್ತು ಹಣ್ಣುಹಂಪಲುಗಳ ಟೆಂಟ್‌ಗಳು. ಸುತ್ತೆಲ್ಲ ಹಿಮಾಚ್ಛಾದಿತ ಪರ್ವತಗಳು. ಅಲ್ಲಿಂದ ಮತ್ತೆ ವಾಪಸ್ ಬರುವಾಗ ಆ ಹಲಗೆ ವಾಹನವನ್ನೇ ಅವಲಂಬಿಸಬೇಕು. ನಮ್ಮನ್ನು ಹಲಗೆಯ ಮೇಲೆ ಕೂಡಿಸಿ ಎಳೆಯುವ ಆ ಕಷ್ಟ ಜೀವಿಗಳ ಬದುಕು ಅಯೋಮಯವಾದಂಥ ಸಮಯವದು. ಸ್ವಲ್ಪವಾದರೂ ಹೆಚ್ಚಿಗೆ ಕೂಲಿ ಕೊಡಬೇಕು ಎಂದು ಅವರು ಕಣ್ಣುಗಳ ಮೂಲಕ ಮಾತನಾಡುತ್ತಲೇ ಇರುತ್ತಾರೆ.

ವಾಹನದ ಬಳಿ ಬಂದಾಗ ಸೂರ್ಯಾಸ್ತವಾಗಿತ್ತು. ಸ್ವಲ್ಪ ತಿಂಡಿ ತಿಂದು ಚಹಾ ಕುಡಿಯಲು ಜೊತೆಗಿದ್ದ ನಿವೃತ್ತ ಅಧಿಕಾರಿ ನಿರಂಜನರ ಜೊತೆ ಸ್ವಲ್ಪ ದೊಡ್ಡದಾದ ಕಾಕಾ ಅಂಗಡಿಯಂಥ ಹೋಟೆಲ್‌ಗೆ ಹೋದೆ. ಅಲ್ಲಿ ಇಬ್ಬರು ತರುಣ ಬಿ.ಎಸ್.ಎಫ್. ಸೈನಿಕರು ಚಹಾ ಕುಡಿಯಲು ಬಂದರು. ನಮಗಾಗಿ ನಿರಂಜನ ಆರ್ಡರ್ ಮಾಡಿದ ತಿಂಡಿಯನ್ನು ಅವರಿಗೂ ಮಾಡಿದರು. ಅವರನ್ನು ನಾವು ಬಹಳ ಆತ್ಮೀಯತೆಯಿಂದ ಮಾತನಾಡಿಸಿದೆವು. ಅವರು ಕೃತಜ್ಞತಾ ಭಾವ ವ್ಯಕ್ತಪಡಿಸಿದರು. ನಾವು ಎದ್ದು ಹೋಗುವಾಗ, ನಾನು ಒಬ್ಬ ಸೈನಿಕನ ಹೆಸರು ಕೇಳಿದೆ. ಹೆಸರು ಹೇಳಿದ ಆತ ನನ್ನ ಹೆಸರು ಕೇಳಿದ. ನಾನು ನನ್ನ ಹೆಸರು ಹೇಳಿದಾಗ ಆತ ವಿನೀತ ಭಾವದಿಂದ ನನ್ನನ್ನು ನೋಡಿದ. ನಿಮಗೆ ಒಳ್ಳೆಯದಾಗಲಿ ಎಂದು ಬೆನ್ನು ತಟ್ಟಿ ಹೊರ ಬಂದೆ.

ಕಾಶ್ಮೀರಿ ಮುಸ್ಲಿಮರು ಅನೇಕ ರೀತಿಯ ಸಂಕಷ್ಟಗಳಿಗೆ ಒಳಗಾಗಿದ್ದಾರೆ. ಅವರೊಳಗೆ ಬಹುಜನರಾಗಿರುವ ಬಡವರ ಗೋಳಂತೂ ಹೇಳಲಸಾಧ್ಯವಾಗಿದೆ. ಉಗ್ರಗಾಮಿಗಳ ಹಾವಳಿ, ಎಲ್ಲೆಡೆ ಸೈನಿಕರ ಕಾವಲು, ಅನಿರೀಕ್ಷಿತ ಸ್ಫೋಟ, ಗುಂಡಿನ ದಾಳಿ, ಸೈನಿಕರು ಮತ್ತು ಉಗ್ರರ ಮಧ್ಯೆ ಗುಂಡಿನ ಚಕಮಕಿ, ಭಾರೀ ಮಳೆಯಿಂದಾಗಿ ಇಡೀ ನಗರ ಜಲಾವೃತವಾಗುವ ಪ್ರಸಂಗ, ಏತನ್ಮಧ್ಯೆ ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಮರ ಮಧ್ಯೆ ಸೃಷ್ಟಿಸಿದ ಕೃತ್ರಿಮ ಸಂಶಯ, ಪದೆ ಪದೆ ಕರ್ಫ್ಯೂ ಘೋಷಣೆ, ಉತ್ಪನ್ನಗಳ ಮಾರಾಟಕ್ಕೆ ತೊಂದರೆ, ಪ್ರವಾಸಿಗರು ಬರದಂಥ ವಾತಾವರಣ. ಉಗ್ರಗಾಮಿಗಳು ಬಡವರ ಮಕ್ಕಳನ್ನು ಎಳೆದುಕೊಂಡು ಹೋಗಿ ತಮ್ಮ ಪಾಳೆಯಕ್ಕೆ ಸೇರಿಸಿಕೊಳ್ಳುವುದು ಮುಂತಾದ ಸಂಕಷ್ಟಗಳಿಂದಾಗಿ ಬಡವರು ಅಸಹಾಯಕರಾಗಿ ಬದುಕುತ್ತಿದ್ದಾರೆ. ಅವರನ್ನು ನೋಡಿದರೆ, ಯಾವ ಪಕ್ಷದವರೂ ಅವರ ಬಗ್ಗೆ ಕಾಳಜಿವಹಿಸಿದ್ದು ಕಂಡುಬರುವುದಿಲ್ಲ. ಗುಲ್ ಮಾರ್ಗದಿಂದ ವಾಪಸ್ಸಾಗುವಾಗ ಸ್ವಲ್ಪ ರಾತ್ರಿಯಾಗಿತ್ತು. ಗಂ ಬೂಟ್ ಮತ್ತು ಓವರ್ ಕೋಟ್ ವಾಪಸ್ ಮಾಡಿದೆವು.

ಮರುದಿನ ಸೋನ್ ಮಾರ್ಗದ ಕಡೆಗೆ ಹೋಗುವಾಗ ಸಿಂಧೂ ನದಿ ನೋಡಿ ರೋಮಾಂಚನವಾಯಿತು. ಐದು ಸಾವಿರ ವರ್ಷಗಳ ಹಿಂದೆ ಸಿಂಧೂಕಣಿವೆಯ ನಾಗರಿಕತೆಗೆ ಕಾರಣವಾದ ಈ ನದಿ ಮಳೆಗಾಲದಲ್ಲಿ ಯಾವರೀತಿ ಮೈದುಂಬಿ ಹರಿಯಬಹುದೆಂದು ಕಲ್ಪಿಸಿದೆ. ಸಟ್ಲಜ್, ಝೇಲಂ, ರಾವಿ, ಚೇನಾಬ್ ಮುಂತಾದ ಆರು ಉಪನದಿಗಳನ್ನು ಹೊಂದಿರುವ ಇದು ಪಾರ್ಸಿಗಳ ಧರ್ಮಗ್ರಂಥ ಝೆಂದಾ ಅವೆಸ್ತಾದಲ್ಲಿ ಹಪ್ತಹಿಂದ್ (ಸಪ್ತಸಿಂಧೂ) ಎನಿಸಿಕೊಂಡಿದೆ. ಹಿಂದೂ ಶಬ್ದಕ್ಕೆ ಸಿಂಧೂ ನದಿಯೇ ಮೂಲಾಧಾರ. ಹಿಂದೂ ಎಂಬುದು ಸಿಂಧೂ ನಾಗರೀಕತೆಗೆ ಮತ್ತು ಪ್ರಾದೇಶಿಕತೆಗೆ ಸಂಬಂಧಿಸಿದ್ದು. ಈಗ ಅದು ಯಾವ ಅವತಾರ ತಾಳಿದೆ?

ಈ ಸ್ವರ್ಗದ ಮಕ್ಕಳ ಹಸಿವಿನ ಸಂಕಟ ನನ್ನನ್ನು ದಿಗಿಲುಗೊಳಿಸಿತ್ತು. ಇನ್ನೊಂದು ಕಡೆ ವಾಹನ ನಿಂತಾಗ ಯುವತಿಯೊಬ್ಬಳು ಸ್ಟೈಲಿಶ್ ಆಗಿ ಇದ್ದ ಹಾಗೆ ಭಾಸವಾಯಿತು. ಅವಳು ಬ್ಯೂಟಿ ಪಾರ್ಲರ್‌ನಿಂದ ಬಂದ ಹಾಗೆ ಅನಿಸಿತು. ಆಮೇಲೆ ಗೊತ್ತಾಯಿತು. ಅವಳ ಬಣ್ಣವೇ ಹಾಗೆ ಎಂದು. ಇದೆಲ್ಲ ಕಾಶ್ಮೀರಲ್ಲಿ ನನ್ನ ಮೊದಲ ಅನುಭವ.

ಸೋನ್‌ ಮಾರ್ಗ ಪ್ರದೇಶದ ಕಡೆ ಹೋಗುವಾಗ ಭಾರಿ ಪ್ರಮಾಣದ ಹಿಮ ಬಿದ್ದ ಕಾರಣ ನಮ್ಮ ವಾಹನ ಮುಂದೆ ಸಾಗದ ಸ್ಥಿತಿಯುಂಟಾಯಿತು. ನಂತರ ಹಿಮದಲ್ಲಿ ಮುನ್ನುಗ್ಗುವ ಬೇರೆ ವಾಹನಗಳನ್ನು ಬಾಡಿಗೆ ಪಡೆಯಲಾಯಿತು. ಎತ್ತ ನೋಡಿದಡತ್ತ ಹಿಮ. ಸುತ್ತೆಲ್ಲ ಹಿಮ ಪರ್ವತಗಳು. ಆ ಪ್ರದೇಶದ ಕುರಿಗಾಯಿಗಳ ಪುಟ್ಟ ಪುಟ್ಟ ಮನೆಗಳೆಲ್ಲ ಹಿಮದ ರಾಶಿಯ ಹಾಗೆ ಕಾಣುತ್ತಿದ್ದವು. ಹಿಮ ಬೀಳುವ ಋತುವಿನಲ್ಲಿ ಆ ಕುರಿಗಾರರು ತಮ್ಮ ಕುರಿಗಳೊಂದಿಗೆ ಬೇರೆಡೆ ಹೋಗಿ ವಾಸಿಸುವರು. ಇದೆಂಥ ಪರಿಶ್ರಮದ ಬದುಕು! ಹೊಟ್ಟೆಪಾಡಿಗಾಗಿ ಜೀವ ಸವೆಸುವವರಿಗೆ ಯಾವ ಧರ್ಮ? ಯಾವ ದರ್ಶನ?

ನಾವು ಸೋನ್‌ ಮಾರ್ಗದಿಂದ ವಾಪಸಾಗುವಾಗ ಹೋಟೆಲೊಂದರಲ್ಲಿ ಊಟ ಮಾಡಿದೆವು. ಅಂದೇ ರಾತ್ರಿ ಆ ಹೋಟೆಲ್ ಹಿಮಾಚ್ಛಾದಿತವಾಗಿ ಪ್ರವಾಸಿಗರು ಇಡೀ ರಾತ್ರಿ ಸಿಕ್ಕಿಹಾಕಿಕೊಂಡಿದ್ದು ನಂತರ ಸುದ್ದಿಯಾಯಿತು.

ಶಂಕರಾಚಾರ್ಯರು ಬೆಟ್ಟದ ಮೇಲೆ ಸ್ಥಾಪಿಸಿದ ಶಿವಾಲಯಕ್ಕೆ ಮರುದಿನ ಹೋಗುವಾಗ ಜಿಟಿ ಜಿಟಿ ಮಳೆ ಶುರುವಾಗಿತ್ತು. ಆ ಸುರಕ್ಷಿತ ಪ್ರದೇಶಕ್ಕೆ ಹೋಗಲು ಬಹಳಷ್ಟು ಕಡೆ ವಾಹನ ತಪಾಸಣೆಗಾಗಿ ನಿಲ್ಲಬೇಕಾಯಿತು. ಕೊನೆಗೂ ಗಮ್ಯ ಸ್ಥಾನ ತಲುಪಿದೆವು.

ಬಹಳಷ್ಟು ಮೆಟ್ಟಿಲುಗಳನ್ನು ಹತ್ತುವುದು ಕಷ್ಟದ ಕೆಲಸವೆನಿಸಿದರೂ ಹೋಗಬೇಕೆನಿಸಿತು. ಆ ಮೆಟ್ಟಿಲುಗಳನ್ನು ಹತ್ತುವಾಗ ಹಿಮ ಬೀಳತೊಡಗಿತು. ಕೊಡೆ ಇಲ್ಲದ ಕಾರಣಕ್ಕೆ ತೊಯ್ಸಿಕೊಳ್ಳಬೇಕಾಯಿತು. ಬೆಟ್ಟದ ಮೇಲೆ ಹೋಗಿ ಕೆಳಗೆ ಬರುವುದರೊಳಗಾಗಿ ತೊಯ್ದು ಹೋಗಿದ್ದೆ.

ನಮ್ಮ ಕೊನೆಯ ಪ್ರವಾಸ ಪಹಲ್ ಗಾಂವ್ ಆಗಿತ್ತು. ಅಮರನಾಥಗೆ ಹೋಗುವವರೆಲ್ಲಾ ಪಹಲಗಾಂವ್ ಮೂಲಕವೇ ಹೋಗಬೇಕು.

ಶ್ರೀನಗರದಿಂದ ಪಹಲ್ ಗಾಂವ್‌ಗೆ ಬಂದು ಹೋಟೆಲ್ ತಲಪುವಾಗ ಸೂರ್ಯಾಸ್ತವಾಗಿತ್ತು. ಬೆಳಿಗ್ಗೆ ಉಪಹಾರ ಮುಗಿಸಿಕೊಂಡು ಹೊರಗೆ ಬರುವಾಗ ಹೋಟೆಲ್ ಆವರಣದಲ್ಲಿ ಕುದುರೆಗಳು ನಿಂತಿದ್ದವು. ನಾವೆಲ್ಲ ಒಂದೊಂದು ಕುದುರೆಯ ಮೇಲೆ ಕುಳಿತು ಪ್ರದೇಶವೊಂದಕ್ಕೆ ಹೋಗಬೇಕಿತ್ತು. ಅದಕ್ಕೆ ಛೋಟಾ ಸ್ವಿಟ್ಜರ್ಲೆಂಡ್ ಎಂದು ಸಲ್ಮಾನ್ ಖಾನ್ ಕರೆದ ನಂತರ ಎಲ್ಲರೂ ಹಳೆ ಹೆಸರು ಬಿಟ್ಟು ಹೊಸ ಹೆಸರಿನಿಂದಲೇ ಕರೆಯುತ್ತಾರೆ.

ಕುದುರೆ ಮೇಲೆ ಕುದುರೆ ಮಾಲೀಕನ ಸಹಾಯದಿಂದ ಕುಳಿತೆ. ಕುದುರೆಯೂ ಕುದುರೆ ಮಾಲೀಕನೂ ಬಡಕಲಾಗಿದ್ದರು. ಅನಾರೋಗ್ಯದಿಂದ ಅಲ್ಲ. ಅರೆಹೊಟ್ಟೆಯಿಂದ. ಕುದುರೆ ಮೇಲೆ ಜೀವನ ಸಾಗಿಸುವವರು ಒಂದು ವರ್ಷ ಪ್ರವಾಸೋದ್ಯಮ ಬಂದಾದರೆ ಅದು ಹೇಗೆ ಚೆನ್ನಾಗಿ ಬದುಕಲು ಸಾಧ್ಯ?

ಆ ಕುದುರೆ ಮೇಲೆ ನಾ ಕುಳಿತ ನಂತರ ಆತ ಕುದುರೆ ಜೊತೆ ನಡೆಯತೊಡಗಿದ. ಪೈನ್ ಮರಗಳ ಮಧ್ಯದ ದಾರಿಯಲ್ಲಿ ಸಾಗಿದ ನಂತರ ಕಡಿದಾದ ದಾರಿ ಪ್ರಾರಂಭವಾಯಿತು. ಆ ಏರು ಇಳಕಲಿನ ದಾರಿ ಮಧ್ಯೆ ಮಧ್ಯೆ ಭಯಂಕರವಾಗಿತ್ತು. ದಾರಿಯುದ್ದಕ್ಕೂ ಆತ ಸಮಯಸಿಕ್ಕಾಗಲೆಲ್ಲ ಪರೋಕ್ಷವಾಗಿ ತನ್ನಂಥವರ ಬದುಕಿನ ನೋವನ್ನು ತೋಡಿಕೊಳ್ಳುತ್ತಿದ್ದ. ನನ್ನ ಸಹಾನುಭೂತಿಗಾಗಿ ಆತನ ಮನಸ್ಸು ಹಾತೊರೆಯುತ್ತಿತ್ತು. ಒಂದಿಷ್ಟು ಬಕ್ಷೀಸು ಸಿಗಬಹುದೆಂಬ ಭಾವ ಆತನಲ್ಲಿತ್ತು. ಮನುಷ್ಯನ ಅಸಹಾಯಕತೆಯನ್ನು ನೋಡಿ ಮನಸ್ಸು ಮರುಗುತ್ತಿತ್ತು.

ಕಡಿದಾದ ದಾರಿಯಲ್ಲಿ ಆ ಬಡಕಲು ಕುದುರೆಗಳು ನಿಖರವಾಗಿ ಹೋಗುವ ಚಾಕಚಕ್ಯತೆ ಆಶ್ಚರ್ಯವೆನಿಸಿತು. ಯಾವುದೇ ರೇಸಿನ ಕುದುರೆ ಕೂಡ ಹೀಗೆ ಹೋಗಲು ಸಾಧ್ಯವಿಲ್ಲ. ಕುದುರೆ ಕಾಲು ತಪ್ಪಿದರೆ, ಅದರ ಮೇಲೆ ಕುಳಿತವರು ಪ್ರಪಾತಕ್ಕೆ ಹೋಗುವುದು ಗ್ಯಾರಂಟಿ. ಅಂತೂ ಆ ಪ್ರದೇಶಕ್ಕೆ ಬಂದು ತಲಪುವುದರೊಳಗಾಗಿ ಸಾಕು ಸಾಕಾಗಿತ್ತು.

ಅದೊಂದು ಅಗಾಧವಾದ ಪ್ರಾಕೃತಿಕ ಸೌಂದರ್ಯದ ಪ್ರದೇಶ. ಸುತ್ತೆಲ್ಲ ಕತ್ತೆತ್ತಿ ನೋಡುವಷ್ಟು ಎತ್ತರದ ಹಿಮವತ್ ಪರ್ವತಗಳು. ಎದುರಿಗೆ ಕಾಣುವ ಪರ್ವತ ದಾಟಿ ಹಿಂದೆ ಹೋದರೆ ಕಾರ್ಗಿಲ್. ಇಂಥ ಹಿಮಪರ್ವತಗಳನ್ನು ಅದು ಹೇಗೆ ದಾಟುತ್ತಾರೋ ಗೊತ್ತಿಲ್ಲ.

ಪಹಲ್ ಗಾಂವ್‌ಗೆ ವಾಪಸ್ ಬಂದು ಮರುದಿನ ಅಮರನಾಥ ಮಾರ್ಗವಾಗಿ ಅರ್ಧ ದಾರಿಯವರೆಗೆ ಹೋದೆವು. ಅಲ್ಲಿನ ಹಿಮದಲ್ಲಿ ಎಳೆಯುವ ಹಲಗೆಗಳ ಮೇಲೆ ಆಸನ ಇದ್ದ ಕಾರಣ ಕಿರಿಕಿರಿಯಾಗಲಿಲ್ಲ. ಆ ಚಳಿಯಲ್ಲಿ ಯಾವುದೋ ಆಶ್ರಮದ ಭಕ್ತರೊಬ್ಬರು ಎಲ್ಲರಿಗೂ ಬಿಸಿಬಿಸಿ ಕಷಾಯದ ದಾಸೋಹ ಮಾಡುತ್ತಿದ್ದರು. ನಾನೂ ಕುಡಿದೆ. ಅಲ್ಲಿಂದ ಪಹಲ್ ಗಾಂವ್‌ಗೆ ವಾಪಸಾಗಿ ಊಟ ಮಾಡಿಕೊಂಡು ಶ್ರೀನಗರದ ದಾರಿ ಹಿಡಿದೆವು.

ಶ್ರೀನಗರ ಮುಂತಾದ ಕಡೆಗಳಲ್ಲಿ ಹೊತ್ತು ಮಾರುವವರು ಸಿಕ್ಕೇ ಸಿಗುತ್ತಾರೆ. ಡ್ರೈ ಫ್ರೂಟ್ಸ್, ಸಾಂಪ್ರದಾಯಿಕ ಆಭರಣ, ಸ್ವೆಟರ್, ಪಶ್ಮಿನಾ ಶಾಲು, ಕಾರ್ಪೆಟ್ ಮುಂತಾದವುಗಳನ್ನು ಪ್ರವಾಸಿಗರ ಬಳಿಯೇ ತರುತ್ತಾರೆ.

ಲಾಕ್ ಡೌನ್ ಆದಕಾರಣ ಪ್ರವಾಸೋದ್ಯಮ ಬಂದಾಗಿದ್ದರಿಂದ ಒಂದು ವರ್ಷದವರೆಗೆ ಮಾರಾಟವಾಗದ ವಸ್ತುಗಳು ಅವರ ಬಳಿಯೆ ಉಳಿದಿದ್ದವು. ಪ್ರವಾಸಿಗರು ಕೇಳಿದ ಬೆಲೆಗೆ ಮಾರಿ ಹೊಟ್ಟೆ ಹೊರೆದುಕೊಳ್ಳುವ ಕರುಣಾಜನಕ ಪರಿಸ್ಥಿತಿ ಅವರದಾಗಿತ್ತು.

ನಮ್ಮ ಗುಂಪಿನಲ್ಲಿದ್ದ ಶ್ರೀಮಂತ ಮಹಿಳೆಯೊಬ್ಬಳು ಕೊಸರಾಟ ಮಾಡಿ ೪೦೦ ರೂಪಾಯಿಗೆ ಲೆದರ್ ಕೋಟ್ ಕೊಂಡಳು. ಅದು ಏನಿಲ್ಲವೆಂದರೂ ಐದು ಸಾವಿರ ರೂಪಾಯಿ ಬೆಲೆಯುಳ್ಳದ್ದಾಗಿತ್ತು. ಆ ಅಸಹಾಯಕ ಪರಿಸ್ಥಿತಿ ನೋಡಿ ಜೀವ ಚಡಪಡಿಸಿತು.

ಒಬ್ಬಾತ ಉಲನ್ ಕ್ಯಾಪನ್ನು ೫೦ ರೂಪಾಯಿಗೆ ಮಾರುತ್ತಿದ್ದ. ನಾನು ಅಂಥದ್ದನ್ನು ಧಾರವಾಡದಲ್ಲಿ ೭೦೦ ರೂಪಾಯಿಗೆ ಕೊಂಡಿದ್ದೆ.

ನನಗೆ ಹಜರತ್ ಬಾಲ್, ಚರಾರೇ ಶರೀಫ್ ಮತ್ತು ಶ್ರೀನಗರ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡುವ ಬಯಕೆ ಇತ್ತು. ಆದರೆ ನಮ್ಮ ಗುಂಪಿನಲ್ಲಿ ಅಂಥ ಅಭಿರುಚಿಯವರು ಒಬ್ಬರೂ ಇಲ್ಲದ ಕಾರಣ ಸುಮ್ಮನಾಗಬೇಕಾಯಿತು.

ಕೊನೆಯ ದಿನ ಬೆಂಗಳೂರಿಗೆ ಬರುವ ವ್ಯವಸ್ಥೆಯಾಗಿತ್ತು. ಬೆಂಗಳೂರು ತಲುಪಿದಾಗ ರಾತ್ರಿಯಾಗಿತ್ತು. ಆ ರಾತ್ರಿ ಬೆಂಗಳೂರಲ್ಲಿ ಉಳಿದೆ. ಮರುದಿನ ರಾತ್ರಿ ಬೆಂಗಳೂರಿನಿಂದ ಧಾರವಾಡಕ್ಕೆ ಪ್ರಯಾಣ ಬೆಳೆಸಿದೆ. ಬೆಂಗಳೂರಲ್ಲೇ ಸಣ್ಣಗೆ ಪ್ರಾರಂಭವಾಗಿದ್ದ ಕೆಮ್ಮು ಧಾರವಾಡ ತಲುಪುವುದರೊಳಗಾಗಿ ಉಲ್ಬಣಗೊಂಡಿತ್ತು. ಆಸ್ಪತ್ರೆಗೆ ಹೋದೆ ಸಿ.ಟಿ. ಸ್ಕ್ಯಾನ್ ಮಾಡಿ, ಕೊರೊನಾ ಪೊಜಿಟಿವ್ ಎಂದರು. ಐ.ಸಿ.ಯು. ಸೇರಿದೆ.