ಹಿಂದಿನ ಕಾಲದಲ್ಲಿ ಬಹುತೇಕ ಜನರು ಅನಕ್ಷರಸ್ಥರಾಗಿದ್ದರು. ಆದರೆ ಅಕ್ಷರ ಜ್ಞಾನ ಇಲ್ಲದವರೂ ಸಹ ಸಾಂಪ್ರದಾಯಿಕವಾದ ಮಹಾಕಾವ್ಯಗಳ ಕಥಾನಕವನ್ನು ಅರ್ಥಮಾಡಿಕೊಂಡಿದ್ದರು. ಬುದ್ಧನ ಜಾತಕ ಕಥೆಗಳ ಪರಿಚಯ ಬಹುತೇಕರಿಗಿತ್ತು. ರೀವಾಂಗ್ ಪ್ರೆಂಗ್ ಎಂಬ ಜಾನಪದ ಕಥೆಗಳನ್ನೂ ಸಹ ಅರಿತುಕೊಂಡವರಿದ್ದಾರೆ. ಪಾಶ್ಚಿಮಾತ್ಯ ಸಾಹಿತ್ಯ ಜಗತ್ತಿಗೆ ಕಾಂಬೋಡಿಯಾ ತೆರೆದುಕೊಂಡದ್ದು ತೀರಾ ತಡವಾಗಿ. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಸಾಂಪ್ರದಾಯಿಕ ಸಾಹಿತ್ಯವು ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವಕ್ಕೆ ಒಳಗಾಯಿತು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಕಾಂಬೋಡಿಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ
ಕಾಂಬೋಡಿಯಾ ರಾಷ್ಟ್ರವು ಒಂದು ಕಾಲಕ್ಕೆ ಫ್ರಾನ್ಸ್ ವಸಾಹತಾಗಿತ್ತು. ಅದು ಸ್ವಾತಂತ್ರ್ಯ ಗಳಿಸಿಕೊಂಡದ್ದು 1953ರ ನವೆಂಬರ್ 9ರಂದು. ಕಾಂಬೋಡಿಯನ್ ರಿಯಲ್ ಎನ್ನುವುದು ಇಲ್ಲಿಯ ಅಧಿಕೃತ ಕರೆನ್ಸಿಯಾಗಿದೆ. ಕಾಂಬೋಡಿಯಾದ ಇತಿಹಾಸವನ್ನು ಗಮನಿಸಿಕೊಂಡಾಗ ಅದರೊಳಗಡೆ ಕ್ರೂರವಾದ ಸತ್ಯವೊಂದು ಅಡಗಿಕೊಂಡಿದೆ. 1975ರಿಂದ 1979ರ ಮಧ್ಯೆ ಕಾಂಬೋಡಿಯಾದಲ್ಲಿ ಖಮೇರ್ ರೂಜ಼್ ಆಳ್ವಿಕೆ ಇತ್ತು. ಈ ಅವಧಿಯು ತೀರಾ ಹಿಂಸಾತ್ಮಕವಾಗಿತ್ತು. ಆಡಳಿತದ ವಿರುದ್ಧ ಧ್ವನಿ ಎತ್ತಿದ ಸುಮಾರು ಇಪ್ಪತ್ತು ಲಕ್ಷ ಜನರು ಕ್ರೂರವಾಗಿ ಕೊಲ್ಲಲ್ಪಟ್ಟರು. ದಂಗೆ ಎದ್ದವರನ್ನು ಕೊಲ್ಲುವುದಕ್ಕಾಗಿಯೇ ಸ್ಥಳವೊಂದನ್ನು ಗೊತ್ತುಪಡಿಸಲಾಗಿತ್ತು. ಇದನ್ನು ಕಿಲ್ಲಿಂಗ್ ಫೀಲ್ಡ್ ಎಂದು ಕರೆಯಲಾಗುತ್ತಿತ್ತು. ಹೀಗೆ ಸಾಮೂಹಿಕ ಹತ್ಯೆ ನಡೆದ ಕಾರಣದಿಂದಲೇ ಕಾಂಬೋಡಿಯಾದ ಅರುವತ್ತೈದು ಶೇಕಡಾ ಜನರು ಯುವಜನತೆಯೇ ಆಗುವಂತಾಯಿತು. ಈ ನಾಲ್ಕು ವರ್ಷಗಳಲ್ಲಿ ನಡೆದ ನರಮೇಧವು ಕಾಂಬೋಡಿಯಾದ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆ ಎನಿಸಿಕೊಂಡಿದೆ.
ಬೌದ್ಧ ಧರ್ಮ ಇಲ್ಲಿಯ ಅಧಿಕೃತ ಧರ್ಮ. ಇರುವ ಜನರಲ್ಲಿ ತೊಂಬತ್ತೈದು ಶೇಕಡಾಕ್ಕಿಂತ ಹೆಚ್ಚಿನವರು ಬೌದ್ಧ ಧರ್ಮದ ಅನುಯಾಯಿಗಳು. ಅಮೋಕ್ ಎನ್ನುವುದು ಕಾಂಬೋಡಿಯಾದ ರಾಷ್ಟ್ರೀಯ ಭಕ್ಷ್ಯ. ಬಾಳೆ ಎಲೆಯಲ್ಲಿ ಮೇಲೋಗರವನ್ನಿಟ್ಟು ಹಬೆಯಲ್ಲಿ ಬೇಯಿಸಿ ಇದನ್ನು ತಯಾರಿಸಲಾಗುತ್ತದೆ. ಕೀಟಗಳನ್ನು ತಿನ್ನುವ ಅಭ್ಯಾಸವನ್ನು ಕಾಂಬೋಡಿಯನ್ನರು ಇಟ್ಟುಕೊಂಡಿದ್ದಾರೆ. ಬೇಯಿಸಿದ ಕೀಟಗಳು ಅವರ ಪಾಲಿಗೆ ವಿಶಿಷ್ಟ ಖಾದ್ಯಗಳೆನಿಸಿವೆ.
ರಾಷ್ಟ್ರದ ಧ್ವಜವೊಂದರಲ್ಲಿ ಕಟ್ಟಡದ ಚಿತ್ರ ಇದೆ ಎಂದಾದರೆ ಅದು ಕಾಂಬೋಡಿಯಾದ ರಾಷ್ಟ್ರಧ್ವಜದಲ್ಲಿ ಮಾತ್ರ. ಈ ಧ್ವಜವು ಕೆಂಪು ಮತ್ತು ನೀಲಿ ಬಣ್ಣದ್ದಾಗಿದೆ. ಅಂಕೋರ್ ವಾಟ್ ಕಟ್ಟಡದ ಚಿತ್ರವನ್ನು ಇದರಲ್ಲಿ ಕಾಣಬಹುದು. ಕಟ್ಟಡದ ಚಿತ್ರವಿರುವ ಪ್ರಪಂಚದ ಏಕೈಕ ರಾಷ್ಟ್ರಧ್ವಜ ಎಂಬ ಹಿರಿಮೆ ಇದಕ್ಕೆ ಸಂದಿದೆ. ವಿಶ್ವದ ಅತೀ ದೊಡ್ಡ ಧಾರ್ಮಿಕ ಸ್ಮಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಂಕೋರ್ ವಾಟ್ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಇಲ್ಲಿಗೆ ಪ್ರತೀ ವರ್ಷ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಾರೆ. ಚಕಿತತೆಯನ್ನು ಮೂಡಿಸುವ ರೀತಿಯಲ್ಲಿ ಅಂಕೋರ್ ವಾಟ್ ವಾಸ್ತುಶಿಲ್ಪವಿದೆ. ಇದು ನಿರ್ಮಿಸಲ್ಪಟ್ಟದ್ದು ಕ್ರಿ.ಶ. 802ರಿಂದ ಕ್ರಿ.ಶ. 1220ರ ನಡುವೆ. ಖಮೇರ್ ನಾಗರಿಕತೆಯಿಂದ ನಿರ್ಮಿಸಲ್ಪಟ್ಟಿದೆ. ಖಮೇರ್ ರಾಜರುಗಳು ಇದನ್ನೇ ನೆಲೆಯಾಗಿಟ್ಟುಕೊಂಡು ವಿಯೆಟ್ನಾಂ, ಚೀನಾ ಮತ್ತು ಬಂಗಾಳ ಕೊಲ್ಲಿಗೆ ಪಸರಿಸಿದ ವಿಶಾಲ ಸಾಮ್ರಾಜ್ಯವನ್ನು ಆಳಿದ್ದಾರೆ. ಒಂದು ಕಾಲಕ್ಕೆ ಧಾರ್ಮಿಕ ಮತ್ತು ಆಡಳಿತಾತ್ಮಕ ನೆಲೆಯಲ್ಲಿ ಮಹಾನಗರವಾಗಿದ್ದ ರಚನೆಗಳು ಇಂದಿಗೂ ಉಳಿದುಕೊಂಡಿವೆ.
ಕಾಂಬೋಡಿಯಾಕ್ಕೆ ಬರುವ ಪ್ರವಾಸಿಗರು ಅಂಕೋರ್ ವಾಟ್‌ನ್ನು ನೋಡುವ ಇಚ್ಛೆಯನ್ನು ಎದೆಯೊಳಗಿರಿಸಿಕೊಂಡೇ ಬರುತ್ತಾರೆ. ಇದು ಕಾಂಬೋಡಿಯಾಕ್ಕೆ ಜಾಗತಿಕ ಗುರುತಿಸುವಿಕೆಯೊಂದನ್ನು ತಂದುಕೊಟ್ಟಿದೆ. ಖಮೇರ್ ರಾಜಪ್ರಭುತ್ವದ ಅವಧಿಯ ಶ್ರೇಷ್ಠ ವಾಸ್ತುಶಿಲ್ಪ ಸಾಧನೆಯಾಗಿ ಇದನ್ನು ಪರಿಗಣಿಸಬಹುದು. ಮೇಲ್ಮೈಯಲ್ಲಿ ಕಂಡುಬರುವ ಸೂಕ್ಷ್ಮವಾದ ಕಲ್ಲಿನ ಕೆತ್ತನೆಗಳು ವಾಸ್ತುಶಿಲ್ಪಿಗಳ ಪರಿಶ್ರಮವನ್ನು ಸಾರಿ ಸಾರಿ ಹೇಳುತ್ತಿವೆ. ಸುಮಾರು 1700ರಷ್ಟು ಅಪ್ಸರೆಯರ ಕೆತ್ತನೆ ಇಲ್ಲಿನ ಗೋಡೆಗಳಲ್ಲಿದೆ. ಗೋಡೆಗಳ ಉದ್ದಕ್ಕೂ ಹಲವು ಕಥಾನಕಗಳು ಕೆತ್ತಲ್ಪಟ್ಟಿವೆ. ಇಷ್ಟು ಸುದೀರ್ಘವಾದ ಚಿತ್ರಣ ಪ್ರಪಂಚದ ಬೇರೆಲ್ಲೂ ಕಂಡುಬರುವುದಿಲ್ಲ. ಭಾರತೀಯರ ಪಾಲಿಗೆ ವಿಶಿಷ್ಟವೆನಿಸುವ ಸಂಗತಿಯೆಂದರೆ, ಕ್ಷೀರ ಸಾಗರ ಮಥನ ಸೇರಿದಂತೆ ಹಿಂದೂ ಪೌರಾಣಿಕ ಕಥೆಗಳನ್ನೂ ಸಹ ಇಲ್ಲಿ ಚಿತ್ರಿಸಲಾಗಿದೆ. ಆಗ್ನೇಯ ಏಷ್ಯಾದ ಅತೀ ದೊಡ್ಡ ಸಿಹಿನೀರಿನ ಸರೋವರ ಟೋನ್ಲೆ ಸ್ಯಾಪ್. ಇದು ಇರುವುದು ಕಾಂಬೋಡಿಯಾದಲ್ಲಿ. ಸರೋವರದ ಗಾತ್ರವು ಋತುಮಾನಕ್ಕೆ ಅನುಸಾರವಾಗಿ ಬದಲಾಗುತ್ತದೆ. ಈ ಸರೋವರವು ಹರಿಯುವ ದಿಕ್ಕು ವರ್ಷಕ್ಕೆ ಎರಡು ಸಲ ಮಾರ್ಪಾಡಾಗುತ್ತದೆ. ಕಾಂಬೋಡಿಯಾವು ಅನೇಕ ಜೀವ ಪ್ರಭೇದಗಳಿಗೆ ನೆಲೆಯಾಗಿದೆ. ಇಲ್ಲಿನ ಮೆಕಾಂಗ್ ನದಿಯಲ್ಲಿ ಅನೇಕ ವಿಶಿಷ್ಟ ಜೀವಿಗಳು ಕಾಣಸಿಗುತ್ತವೆ. ದೈತ್ಯ ಗಾತ್ರದ ಏಷ್ಯನ್ ಸಾಫ್ಟ್ಶೆಲ್ ಆಮೆ, ಐರಾವಡ್ಡಿ ಡಾಲ್ಫಿನ್‌ಗಳು ಇಲ್ಲಿವೆ. ಹೀಗೆ ಕಂಡುಬರುವ ಜೀವಿಗಳಲ್ಲಿ ಕೆಲವು ಅಳಿವಿನಂಚಿನಲ್ಲಿರುವ ಪ್ರಭೇದಗಳು ಎನಿಸಿಕೊಂಡಿವೆ.
ಹೊಸ ವರ್ಷವನ್ನು ವಿಜೃಂಭಣೆಯಿಂದ ಸ್ವಾಗತಿಸುವ ಪರಿಪಾಠ ಕಾಂಬೋಡಿಯಾದ ಜನರದ್ದು. ನೂತನ ವರ್ಷವನ್ನು ಸ್ವಾಗತಿಸುವ ಆಚರಣೆಯನ್ನು ಕಾಂಬೋಡಿಯಾದಲ್ಲಿ ‘ಚೌಲ್ ಚ್ನಾಮ್ ಥ್ಮೆ’ ಎಂದು ಕರೆಯಲಾಗುತ್ತದೆ. ಅಂದರೆ ಹೊಸ ವರ್ಷವನ್ನು ಪ್ರವೇಶಿಸಿ ಎಂದರ್ಥ. ಒಂದು ಇರುಳಿಗೆ ಇದನ್ನು ಆಚರಿಸಿ ಸುಮ್ಮನಾಗುವ ಜಾಯಮಾನ ಇಲ್ಲಿನವರದ್ದಲ್ಲ. ಅವರ ಪಾಲಿಗೆ ಇದು ಬರೋಬ್ಬರಿ ಮೂರು ದಿನಗಳ ಆಚರಣೆ. ವಿಶೇಷವೆಂದರೆ ಕಾಂಬೋಡಿಯನ್ನರ ಹೊಸ ವರ್ಷ ಆರಂಭವಾಗುವುದು ಏಪ್ರಿಲ್ ತಿಂಗಳಿನಲ್ಲಿ. ಹಿಂದಿನ ಕಾಲಘಟ್ಟದ ರೀತಿಯಲ್ಲಿಯೇ ಅವರು ಹೊಸ ವರ್ಷ ಶುರುವಾಗುವ ತಿಂಗಳನ್ನು ಪರಿಗಣಿಸುತ್ತಾರೆ. ಮೂರು ದಿನಗಳ ಆಚರಣೆಯ ಸಮಯದಲ್ಲಿ ಅವರು ಕೆಲಸ ಮಾಡುವುದಿಲ್ಲ. ಕುಟುಂಬದವರ ಜೊತೆ ಕಾಲ ಕಳೆಯುತ್ತಾರೆ. ಸಾಂಪ್ರದಾಯಿಕವಾದ ಆಟಗಳನ್ನು ಆಡುತ್ತಾರೆ.
ಕಾಂಬೋಡಿಯಾದ ಹೆಸರು ಆಗಾಗ ಬದಲಾವಣೆ ಆಗುತ್ತಲೇ ಬಂದಿದೆ. ಆಳುವ ಸರ್ಕಾರ ಬದಲಾದಾಗಲೆಲ್ಲ ದೇಶವು ಹೊಸ ಹೊಸ ಹೆಸರನ್ನು ಪಡೆದುಕೊಂಡಿದೆ. 1953ರಿಂದ 1970ರವರೆಗೆ ಇದನ್ನು ಕಾಂಬೋಡಿಯಾ ಸಾಮ್ರಾಜ್ಯ ಎಂದು ಕರೆಯಲಾಗುತ್ತಿತ್ತು. ಮುಂದಿನ ಐದು ವರ್ಷ ಖಮೇರ್ ಗಣರಾಜ್ಯ ಎನಿಸಿಕೊಂಡಿತು. ಆ ಬಳಿಕ ಖಮೇರ್ ರೂಜ್ ಆಳ್ವಿಕೆಯ ವೇಳೆಗೆ ಇದು ಪಡೆದುಕೊಂಡಿದ್ದ ಹೆಸರು ಡೆಮಾಕ್ರಟಿಕ್ ಕಂಪುಚಿಯಾ. ನಂತರದ ಹತ್ತು ವರ್ಷಗಳ ಕಾಲ, ಅಂದರೆ 1979ರಿಂದ 1989ರವರೆಗೆ, ಪೀಪಲ್ಸ್ ರಿಪಬ್ಲಿಕ್ ಆಫ್ ಕಂಪುಚಿಯಾ ಎಂಬ ಹೆಸರನ್ನು ಹೊತ್ತುನಿಂತಿತು. ಈ ಹೆಸರು ದೊರಕಿದ್ದು ವಿಯೆಟ್ನಾಮ್ ಪ್ರಾಯೋಜಿತ ಸರ್ಕಾರದ ಮೂಲಕ. ಆ ಬಳಿಕದ ಐದು ವರ್ಷ ಇದು ಕಾಂಬೋಡಿಯಾ ರಾಜ್ಯವಾಯಿತು. 1993ರಲ್ಲಿ ನೊರೊಡೊಮ್ ಸಿಹಾನೌಕ್ ಎನ್ನುವವರು ನಾಯಕತ್ವ ವಹಿಸಿಕೊಂಡಾಗ ರಾಜಪ್ರಭುತ್ವ ಮತ್ತೆ ಸ್ಥಾಪನೆಯಾಯಿತು. ಆಗ ಕಾಂಬೋಡಿಯಾ ಸಾಮ್ರಾಜ್ಯ ಎಂಬ ಮೂಲ ಹೆಸರೇ ಉಳಿದುಕೊಂಡಿತು.
ಕಾಂಬೋಡಿಯಾದಲ್ಲಿ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳ ಜನರ ಮಧ್ಯೆ ಅತಿಯಾದ ವ್ಯತ್ಯಾಸವೇನೂ ಕಂಡುಬರುವುದಿಲ್ಲ. ಅವರ ಜೀವನಶೈಲಿಯಲ್ಲಿ ಸಾಕಷ್ಟು ಸಾಮ್ಯತೆಗಳು ಗೋಚರವಾಗುತ್ತವೆ. 1970ರ ದಶಕದಲ್ಲಿ ಪಟ್ಟಣ ಪ್ರದೇಶದಲ್ಲಿ ಬದುಕುತ್ತಿದ್ದ ಸುಮಾರು ಇಪ್ಪತ್ತು ಲಕ್ಷ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು. ಇದರಿಂದಾಗಿ ನಗರದ ಸಂಸ್ಕೃತಿ ಹಳ್ಳಿಗಳನ್ನು ಪ್ರವೇಶಿಸುವಂತಾಯಿತು. ನಗರ ತೊರೆದಿದ್ದ ಹಲವರು 1979ರ ನಂತರ ಮತ್ತೆ ನಗರಗಳಿಗೆ ಬಂದು ವಾಸಿಸಲಾರಂಭಿಸಿದರು. ಇದರಿಂದಾಗಿ ಗ್ರಾಮೀಣ ಸಂಸ್ಕೃತಿ ನಗರ ಸಂಸ್ಕೃತಿಯ ಜೊತೆಗೆ ಬೆರೆಯುವುದಕ್ಕೆ ಅವಕಾಶ ಒದಗಿಬಂತು. 1990ರ ನಂತರ ಹಳ್ಳಿ ಮನೆಗಳಲ್ಲಿಯೂ ದೂರದರ್ಶನಗಳು ಬಂದದ್ದರಿಂದಾಗಿ ಜನರ ಜೀವನಶೈಲಿಯಲ್ಲಿ ಗಮನಾರ್ಹವಾದ ಮಾರ್ಪಾಡು ಸಂಭವಿಸುವುದಕ್ಕೆ ಹೆಚ್ಚೇನೂ ಸಮಯ ಬೇಕಾಗಲಿಲ್ಲ. ಜಾಗತೀಕರಣದಿಂದಾಗಿ ಗ್ರಾಮೀಣ ಸಂಸ್ಕೃತಿಯಲ್ಲಿ ಉಂಟಾಗುವ ಮಹತ್ವದ ಪಲ್ಲಟಗಳನ್ನು ಕಾಂಬೋಡಿಯಾ ಅನುಭವಿಸಿದೆ. ಹಳ್ಳಿ ಮತ್ತು ನಗರಗಳ ಮಧ್ಯೆ ಕೆಲವು ವ್ಯತ್ಯಾಸಗಳು ಇರುವುದನ್ನು ಅಲ್ಲಗಳೆಯುವಂತಿಲ್ಲ. ನಗರ ಪ್ರದೇಶಗಳ ಜೀವನ ಗತಿಯಲ್ಲಿರುವ ವೇಗ ಹಳ್ಳಿ ಬದುಕಿನಲ್ಲಿ ಕಾಣಸಿಗುವುದಿಲ್ಲ. ಹಳ್ಳಿಯಲ್ಲಿರುವ ಬಡತನ ನಗರಗಳಲ್ಲಿಲ್ಲ. ನಗರದಲ್ಲಿ ಬದುಕುತ್ತಿರುವ ಹೆಚ್ಚಿನವರು ಸರ್ಕಾರಿ ಉದ್ಯೋಗಿಗಳು. ಉದ್ಯಮಿಗಳಾಗಿ ಗುರುತಿಸಿಕೊಂಡವರು. ಬಹುತೇಕರು ಸೇವಾ ವಲಯದಲ್ಲಿ ದುಡಿಯುತ್ತಿರುವವರು. ಇವರಿಗೆ ಒಳ್ಳೆಯ ಸಂಬಳ ಇರುವುದರಿಂದ ಇವರ ಜೀವನಮಟ್ಟ ಉತ್ತಮವಾಗಿದೆ. ಐಷಾರಾಮಿಯಾದ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಹಳ್ಳಿಯ ಜನರಿಗೆ ಈ ಬಗೆಯ ತೃಪ್ತಿದಾಯಕವಾದ ಜೀವನ ಇಲ್ಲ ಎನ್ನುವುದು ವಾಸ್ತವ ಸತ್ಯ. ಸಾಂಸ್ಕೃತಿಕ ನೆಲೆಯಲ್ಲಿ ಕಾಣುವ ಸಾಮ್ಯತೆ ಆರ್ಥಿಕತೆಗೆ ಬಂದಾಗ ಕಾಣಸಿಗುವುದಿಲ್ಲ.
ಬೌದ್ಧ ಸಂಪ್ರದಾಯವನ್ನು ಆಧರಿಸಿಕೊಂಡ ಕಾಂಬೋಡಿಯಾದಲ್ಲಿ ಸಂಗೀತಕ್ಕೆ ವಿಶೇಷವಾದ ಆದ್ಯತೆ ಹಿಂದಿನ ಕಾಲದಿಂದಲೂ ಇತ್ತು. ಬೌದ್ಧ ದೇವಾಲಯಗಳಲ್ಲಿ ವರ್ಷವಿಡೀ ನಡೆಯುವ ಅನೇಕ ಆಚರಣೆಗಳಲ್ಲಿ, ಹಬ್ಬಗಳಲ್ಲಿ ಸಂಗೀತಕ್ಕೆ ಸೂಕ್ತ ಸ್ಥಾನಮಾನ ನೀಡಲಾಗಿತ್ತು. ಇಲ್ಲಿಯ ಸಾಂಪ್ರದಾಯಿಕ ಸಂಗೀತ ಕಛೇರಿಗಳಲ್ಲಿ ಹಲವು ರೀತಿಯ ವಾದ್ಯಗಳನ್ನು ಬಳಸಲಾಗುತ್ತಿತ್ತು. ಕೊಳಲುಗಳು, ರೀಡ್ ವಾದ್ಯಗಳು, ಲೂಟ್‌ಗಳು, ಜಿಥರ್‌ಗಳು, ಝೈಲೋಫೋನ್‌ಗಳು, ಮೆಟಾಲೋಫೋನ್‌ಗಳು, ಕಾಂಗ್ ವಾಂಗ್ ಗಾಂಗ್, ವಿವಿಧ ಗಾತ್ರದ ಡ್ರಮ್‌ಗಳು ಇವೆಲ್ಲವೂ ಸಹ ಕಾಂಬೋಡಿಯಾದ ಸಂಗೀತ ಪ್ರದರ್ಶನದಲ್ಲಿವೆ. ಇಷ್ಟೂ ವಾದ್ಯಗಳಲ್ಲಿ ಝೈಲೋಫೋನ್‌ಗೆ ಹೆಚ್ಚು ಆದ್ಯತೆ ನೀಡಲಾಗುತ್ತಿತ್ತು. ನೃತ್ಯ ಮತ್ತು ನಾಟಕಗಳೂ ಸಹ ಕಾಂಬೋಡಿಯಾದ ಜನರ ಪಾಲಿಗೆ ವಿಶಿಷ್ಟ ಅಭಿವ್ಯಕ್ತಿ ಮಾಧ್ಯಮಗಳು.
ದಿ ನಾಮ್ ಪೆನ್ ಎನ್ನುವ ಪ್ರದೇಶದಲ್ಲಿರುವ ರಾಯಲ್ ಬ್ಯಾಲೆಟ್ ಹೆಸರಿನ ತಂಡವು ಶಾಸ್ತ್ರೀಯ ನೃತ್ಯಗಳನ್ನು ಪ್ರದರ್ಶಿಸುತ್ತದೆ. ಅಪ್ಸರಾ ನೃತ್ಯವನ್ನು ಪ್ರಸ್ತುತಪಡಿಸುತ್ತದೆ. ರೀಮ್‌ಕರ್ ಮಹಾಕಾವ್ಯದ ಕಥಾನಕವನ್ನು ನೃತ್ಯರೂಪದಲ್ಲಿ ಜನರೆದುರು ಅಭಿವ್ಯಕ್ತಿಸುತ್ತದೆ. ಇಂತಹ ನೃತ್ಯ ನಾಟಕದ ವಿಶಿಷ್ಟ ರೂಪವನ್ನು ಅಂಕೋರ್‌ನ ಪುರಾತನ ನೃತ್ಯಗಳಿಂದ ಪಡೆದುಕೊಳ್ಳಲಾಗಿದೆ. ನಿರ್ದಿಷ್ಟ ರೂಪವನ್ನು ಪಡೆದುಕೊಳ್ಳುವುದರ ಹಿಂದೆ ಸುಮಾರು ಇನ್ನೂರು ವರ್ಷಗಳ ನಿರಂತರ ಪರಿಶ್ರಮವಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಕೆಲವು ಅಲೆಮಾರಿ ತಂಡಗಳು ಜಾನಪದ ನೃತ್ಯಗಳನ್ನು ಪ್ರದರ್ಶಿಸುತ್ತವೆ. ನಾಟಕಗಳನ್ನು ಪ್ರಸ್ತುತಪಡಿಸುತ್ತವೆ. ಬೇರೆ ಬೇರೆ ಉತ್ಸವಗಳು ಮತ್ತು ಮದುವೆಗಳಲ್ಲಿ ಇಂತಹ ತಂಡಗಳ ಪ್ರದರ್ಶನ ಇರುತ್ತದೆ. 1980ರ ವೇಳೆಗೆ ಕಾಂಬೋಡಿಯಾದಲ್ಲಿ ಅತೀ ಕಡಿಮೆ ಸಂಖ್ಯೆಯ ಬ್ಯಾಲೆ ನೃತ್ಯಪಟುಗಳು ಉಳಿದಿದ್ದರು. ಇವರನ್ನು ಒಟ್ಟುಗೂಡಿಸಿಯೇ ಬ್ಯಾಲೆ ನೃತ್ಯಪ್ರಕಾರವನ್ನು ಬೆಳೆಸುವ ಪ್ರಯತ್ನ ನಡೆಸಲಾಗಿದೆ. ನೊರೊಡೊಮ್ ಸಿಹಾನೌಕ್ ಅವರು ಕಾಂಬೋಡಿಯಾದ ರಾಜನಾಗಿದ್ದರು. ಇವರ ಮಗಳಾಗಿದ್ದ ಬೋಫಾ ದೇವಿ ಅವರು ಪ್ರಸಿದ್ಧ ನೃತ್ಯಗಾರ್ತಿಯಾಗಿದ್ದರು. ಆ ಬಳಿಕ ಸಂಸ್ಕೃತಿ ಸಚಿವೆಯಾದರು. ಈ ಅವಧಿಯಲ್ಲಿ ಅವರು ಶಾಸ್ತ್ರೀಯ ನೃತ್ಯಗಳು ಮತ್ತೆ ಗತಕಾಲದ ವೈಭವವನ್ನು ಗಳಿಸಿಕೊಳ್ಳಲು ಅಗತ್ಯವಾದ ಬೆಂಬಲವನ್ನು ನೀಡಿದರು. ರಾಯಲ್ ಯುನಿವರ್ಸಿಟಿ ಆಫ್ ಫೈನ್ ಆರ್ಟ್ಸ್ ಎಂಬ ಸಂಸ್ಥೆಯು ಶಾಸ್ತ್ರೀಯ ಶೈಲಿಯ ಸಂಗೀತ ಮತ್ತು ನೃತ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಕೊಡುಗೆ ಸಲ್ಲಿಸಿದೆ. ಶಾಸ್ತ್ರೀಯ ಕಲೆಗಳು ಇಂದಿನ ಜನರನ್ನು ಅಷ್ಟಾಗಿ ಆಕರ್ಷಿಸುತ್ತಿಲ್ಲ ಎನ್ನುವುದು ಸತ್ಯ.
ಕಾಂಬೋಡಿಯಾದ ಸಾಹಿತ್ಯ ಪರಂಪರೆ ಸುದೀರ್ಘವಾಗಿದೆ. ಭಾರತೀಯ ಮತ್ತು ಥಾಯ್ ಸಾಹಿತ್ಯ ಪ್ರಕಾರಗಳು ಪ್ರಭಾವ ಬೀರಿವೆ. ಹಿಂದಿನ ಕಾಲದಲ್ಲಿ ಬಹುತೇಕ ಜನರು ಅನಕ್ಷರಸ್ಥರಾಗಿದ್ದರು. ಆದರೆ ಅಕ್ಷರ ಜ್ಞಾನ ಇಲ್ಲದವರೂ ಸಹ ಸಾಂಪ್ರದಾಯಿಕವಾದ ಮಹಾಕಾವ್ಯಗಳ ಕಥಾನಕವನ್ನು ಅರ್ಥಮಾಡಿಕೊಂಡಿದ್ದರು. ಬುದ್ಧನ ಜಾತಕ ಕಥೆಗಳ ಪರಿಚಯ ಬಹುತೇಕರಿಗಿತ್ತು. ರೀವಾಂಗ್ ಪ್ರೆಂಗ್ ಎಂಬ ಜಾನಪದ ಕಥೆಗಳನ್ನೂ ಸಹ ಅರಿತುಕೊಂಡವರಿದ್ದಾರೆ. ಪಾಶ್ಚಿಮಾತ್ಯ ಸಾಹಿತ್ಯ ಜಗತ್ತಿಗೆ ಕಾಂಬೋಡಿಯಾ ತೆರೆದುಕೊಂಡದ್ದು ತೀರಾ ತಡವಾಗಿ. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಸಾಂಪ್ರದಾಯಿಕ ಸಾಹಿತ್ಯವು ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವಕ್ಕೆ ಒಳಗಾಯಿತು. ಇದೇ ಸಮಯದಲ್ಲಿ ಯುವಜನತೆ ನಗರಗಳಲ್ಲಿ ನೆಲೆ ಕಂಡುಕೊಳ್ಳುವುದಕ್ಕೆ ಆರಂಭಿಸಿದ್ದರು. ಇಂಥವರು ಸಾಹಿತ್ಯದ ಕುರಿತಾದ ಅಭಿರುಚಿಯನ್ನು ಮೂಡಿಸಿಕೊಂಡರು. ಕವನ, ಕಾದಂಬರಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂಥಾದದ್ದು 1960-70ರ ದಶಕದಲ್ಲಿ. ಈ ಕಾಲಘಟ್ಟದಲ್ಲಿ ವರ್ಷಕ್ಕೆ ಸುಮಾರು ಐವತ್ತು ಕಾದಂಬರಿಗಳು ಪ್ರಕಟಗೊಂಡವು. ಇವುಗಳಲ್ಲಿ ಬಹುತೇಕ ಕಾದಂಬರಿಗಳು ಓದುಗರ ಮೆಚ್ಚುಗೆಗೆ ಪಾತ್ರವಾದವು. ಇದು ಅಂದಿನ ಸಂದರ್ಭದಲ್ಲಿ ಕಾಂಬೋಡಿಯಾದ ಸಾಹಿತ್ಯ ಕ್ಷೇತ್ರದ ಪಾಲಿಗೆ ಬಹುದೊಡ್ಡ ಭರವಸೆಯಾಗಿತ್ತು. ಆದರೆ ಈ ಬಗೆಯ ಸಾಹಿತ್ಯ ಪ್ರಕ್ರಿಯೆಗೆ ಆಡಳಿತಾರೂಢ ಪಕ್ಷದಿಂದ ಬಲವಾದ ವಿರೋಧ ವ್ಯಕ್ತಗೊಳ್ಳಲಾರಂಭಿಸಿತು. ಎಲ್ಲಾ ರೀತಿಯ ಬರವಣಿಗೆಗಳನ್ನು ಡೆಮಾಕ್ರಟಿಕ್ ಕಂಪುಚಿಯ ಅಧಿಕಾರಿಗಳು ನಿಷೇಧಿಸಿದರು. ಇದನ್ನು ಒಪ್ಪಿಕೊಳ್ಳದ ಬರಹಗಾರರನ್ನು ಕೊಲ್ಲಲಾಯಿತು. ದೇಶದಿಂದ ಹೊರಹಾಕಲಾಯಿತು. ಹಲವು ಪುಸ್ತಕಗಳನ್ನು ಸುಟ್ಟುಹಾಕಲಾಯಿತು. ಇದರಿಂದಾಗಿ ಮೌಲಿಕವಾದ ಸಾಹಿತ್ಯ ರಚನೆಗಳು ಇನ್ನಿಲ್ಲವಾದವು.
1979ರ ನಂತರ ಬಂದ ವಿಯೆಟ್ನಾಂ ಬೆಂಬಲಿತ ಸರ್ಕಾರದ ಅವಧಿಯಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂಬ ಆಶಯ ಬರಹಗಾರರಲ್ಲಿತ್ತು. ಆದರೆ ನೂತನ ಸರ್ಕಾರವು ಕಾಗದಗಳ ವಿತರಣೆಯನ್ನು ನಿಯಂತ್ರಿಸಿತು. ಇದರಿಂದಾಗಿ ಪುಸ್ತಕಗಳ ಮುದ್ರಣ ಪರಿಣಾಮಕಾರಿಯಾಗಿ ನಡೆಯಲಿಲ್ಲ. ಸಾಹಿತ್ಯವನ್ನು ಸರ್ಕಾರದ ಪ್ರಚಾರಕ್ಕಾಗಿ ಬಳಸಿಕೊಂಡಿತು. ಇದರಿಂದಾಗಿ ಸಾಹಿತ್ಯ ರಚನೆಯ ಉದ್ದೇಶವೇ ದಿಕ್ಕುತಪ್ಪುವಂತಾಯಿತು. ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೊಡೆತ ಬಿತ್ತು. ಹೀಗೆ ಹಿನ್ನೆಲೆಗೆ ಸರಿದ ಕಾಂಬೋಡಿಯನ್ ಸಾಹಿತ್ಯ ಪ್ರಸ್ತುತ ಕಾಲಘಟ್ಟದಲ್ಲಿಯೂ ಸಹ ಅಷ್ಟಾಗಿ ಚೇತರಿಕೆಯನ್ನು ಕಂಡಿಲ್ಲ. ಅಲ್ಲಿನ ಪುಸ್ತಕದ ಅಂಗಡಿಗಳಲ್ಲಿ ನಿಘಂಟುಗಳು, ಶಾಲಾ ಪಠ್ಯಪುಸ್ತಕಗಳು, ಮಕ್ಕಳ ಕಥಾ ಪುಸ್ತಗಳು ಮಾತ್ರವೇ ಸಿಗುತ್ತವೆ. ಗಂಭೀರವಾದ, ವೈಚಾರಿಕವಾದ ಕೃತಿಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಇದರಿಂದಾಗಿ ಈಗ ಬಹುತೇಕ ಕಾಂಬೋಡಿಯನ್ ಬರಹಗಾರರು ಅಮೇರಿಕಾ, ಕೆನಡಾ, ಯುರೋಪ್ ದೇಶಗಳಲ್ಲಿ ಬದುಕುತ್ತಿದ್ದಾರೆ. ಅಲ್ಲಿದ್ದುಕೊಂಡೇ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಮೊದಲಿನಿಂದಲೂ ಸಹ ಕಾಂಬೋಡಿಯಾದಲ್ಲಿ ಫುಟ್‌ಬಾಲ್ ಜನಪ್ರಿಯವಾದ ಕ್ರೀಡೆ. ಆದರೆ ಖಮೇರ್ ರೂಜ್ ಆಡಳಿತಾವಧಿಯಲ್ಲಿ ಅದೆಷ್ಟೋ ಆಟಗಾರರು ದೇಶವನ್ನು ತೊರೆದಿದ್ದಾರೆ. ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ಬಳಿಕ ರಾಷ್ಟ್ರೀಯ ಫುಟ್‌ಬಾಲ್ ತಂಡವನ್ನು ಮತ್ತೆ ರಚಿಸಲಾಗಿದೆ. ಜರ್ಮನಿಯ ಕೋಚ್‌ಗಳ ಮೂಲಕ ತರಬೇತಿ ಕೊಡಿಸಲಾಗಿದೆ. ಖಮೇರ್ ಕಿಕ್ ಬಾಕ್ಸಿಂಗ್ ಇಲ್ಲಿಯ ಮತ್ತೊಂದು ಕ್ರೀಡಾ ವಿಶೇಷವಾಗಿದ್ದು, ಇದು ಸಾಂಪ್ರದಾಯಿಕ ಸಂಗೀತವನ್ನು ಹಿನ್ನೆಲೆಯಾಗಿಟ್ಟುಕೊಂಡು ಪಕ್ಕವಾದ್ಯಗಳನ್ನು ಜೊತೆಗೂಡಿಸಿಕೊಂಡು ಪ್ರದರ್ಶಿಸುವ ಸಮರಕಲೆಯಾಗಿದೆ. ಟೆನ್ನಿಸ್, ಬ್ಯಾಡ್ಮಿಂಟನ್ ಮತ್ತು ಸೈಕ್ಲಿಂಗ್ ಸಹ ಇಲ್ಲಿ ಪ್ರಸಿದ್ಧಿ ಪಡೆದಿದೆ. ಎರಡು ಸಲ ಒಲಿಂಪಿಕ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕಾಂಬೋಡಿಯಾ ಆ ಬಳಿಕ ಹಲವು ವರ್ಷ ಪಾಲು ಪಡೆದಿರಲಿಲ್ಲ. ಯುದ್ಧ ಮತ್ತು ನಾಗರಿಕ ಕಲಹಗಳು ದೇಶದಲ್ಲಿ ನಡೆಯುತ್ತಿದ್ದುದರಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ 1996ರಲ್ಲಿ ಮತ್ತೆ ಒಲಿಂಪಿಕ್‌ಗೆ ಮರಳಿದ ಕಾಂಬೋಡಿಯಾ ನಿರಂತರವಾಗಿ ಅದರಲ್ಲಿ ತೊಡಗಿಸಿಕೊಳ್ಳುತ್ತಲೇ ಬಂದಿದೆ.
ಖಮೇರ್ ಜನಾಂಗದವರು ಕಾಂಬೋಡಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದೇಶದ ಸಂಸ್ಕೃತಿಯನ್ನು ರೂಪಿಸುವ ನೆಲೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಜನಾಂಗವಿದು. ಚೈನೀಸ್, ವಿಯೆಟ್ನಾಮೀಸ್, ಚಾಮ್- ಮಲಯ, ಲಾವೋಟೀಸ್ ಜನಾಂಗಕ್ಕೆ ಸೇರಿದವರು ಇಲ್ಲಿ ಅಲ್ಪಸಂಖ್ಯಾತರೆನಿಸಿಕೊಂಡಿದ್ದಾರೆ. ಮೆಕಾಂಗ್ ನದಿ ಮತ್ತು ಟೋನ್ಲೆ ಸ್ಯಾಪ್ ಸರೋವರದ ಸುತ್ತಲಿನ ಪ್ರದೇಶಗಳಲ್ಲಿ, ಬಯಲು ಪ್ರದೇಶಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಖಮೇರ್ ಜನಾಂಗದವರು ನೆಲೆನಿಂತಿದ್ದಾರೆ. ಜನಾಂಗೀಯ ಅಲ್ಪಸಂಖ್ಯಾತರಲ್ಲಿ ಚೀನೀಯರು ಮುಖ್ಯರಾಗಿದ್ದಾರೆ. ಅವರು ದೇಶದ ಆರ್ಥಿಕತೆಯನ್ನು ನಿಭಾಯಿಸುವ ನೆಲೆಯಲ್ಲಿ ಪ್ರಮುಖರೆನಿಸಿಕೊಂಡಿದ್ದಾರೆ. 1970ರ ಕಾಲಘಟ್ಟದಲ್ಲಿ ಚೀನೀಯರನ್ನು ಎಲ್ಲಾ ರೀತಿಯ ಅವಕಾಶಗಳಿಂದ ವಂಚಿಸಲಾಗಿತ್ತು. ಐದು ವರ್ಷದ ನಂತರ ಈ ಜನಾಂಗ ಮತ್ತೆ ಚೇತರಿಕೆ ಕಂಡಿತು. ವಿಯೆಟ್ನಾಮೀಸ್ ಜನಾಂಗದವರಿಗೆ ಚೀನೀಯರಷ್ಟು ಸ್ಥಾನಮಾನಗಳು ದೊರೆಯಲಿಲ್ಲ. 1970ರ ಕಾಲಕ್ಕೆ ಇವರು ಕಾಂಬೋಡಿಯಾದಿಂದ ವಿಯೆಟ್ನಾಮ್‌ಗೆ ಪಲಾಯನ ಮಾಡಿದ್ದರು. ಹತ್ತು ವರ್ಷಗಳ ನಂತರ ಇವರಲ್ಲಿ ಕೆಲವರು ಮರಳಿ ಬಂದರು. ಇವರು ಕಾಂಬೋಡಿಯಾದಲ್ಲಿ ಇದ್ದರೂ ಸಹ ಇಲ್ಲಿನ ಖಮೇರ್ ಜನಾಂಗದ ಜೊತೆಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿಲ್ಲ.

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.