Advertisement
ಕಿಶೋರ್‌ ಕುಮಾರ್‌ ಎಲ್ಲಿ ಹೋದ್ರು?: ಎಚ್. ಗೋಪಾಲಕೃಷ್ಣ ಸರಣಿ

ಕಿಶೋರ್‌ ಕುಮಾರ್‌ ಎಲ್ಲಿ ಹೋದ್ರು?: ಎಚ್. ಗೋಪಾಲಕೃಷ್ಣ ಸರಣಿ

ಆಗತಾನೇ ಅಡಿಗರ ಕವನಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಶುರು ಮಾಡಿದ್ದೆ. ಅವರ ಮತ್ತು ಇತರ ಕವಿಗಳ ಹಲವು ಪದ್ಯಗಳ ಆರಂಭಿಕ ಸಾಲು ನೆನಪಿನಲ್ಲಿ ಇತ್ತು. ಕಟ್ಟುವೆವು ನಾವು ಹೊಸ ನಾಡೊಂದನು…., ನಾನು ಮಾಯವಾದಿಯಾಗಿ ಬಂದೆ, ಇದು ನಮ್ಮ ಮನೆಯ ಕಥೆ, ಕಾಲವ ನಾನು ನಿಂತೆ, ಮರಳಿನಿಂದ ಎಣ್ಣೆ ಹಿಂಡುವ ಗಾಣ ಮೊದಲಾದ ಸಾಲುಗಳು ತಲೆಯಲ್ಲಿ ಆಳವಾಗಿ ಹುದುಗಿತ್ತು…… ಇವು ಅಲ್ಪ ಸಲ್ಪ ಬದಲಾವಣೆ ಒಂದಿಗೆ ಪೇಪರಿನ ಮೇಲೆ ಮೂಡಿದವು…
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೊಂದನೆಯ ಕಂತು ನಿಮ್ಮ ಓದಿಗೆ

ಕಳೆದ ಸಂಚಿಕೆಯಲ್ಲಿ ತುರ್ತು ಪರಿಸ್ಥಿತಿ ಬಗ್ಗೆ ಹೇಳಿದ್ದೆ. ನಂತರ ಮೊರಾರ್ಜಿ ದೇಸಾಯಿ ಅವರ ಸ್ವಮೂತ್ರ ಚಿಕಿತ್ಸೆ ಬಗ್ಗೆ ಒಂದು ಜೋಕು ಹೇಳಿ ಮುಕ್ತಾಯ ಹಾಡಿದ್ದೆ..

….ಮೊರಾರ್ಜಿ ದೇಸಾಯಿ ಅವರು ಈ ಸ್ವ ಮೂತ್ರ ಚಿಕಿತ್ಸೆ ಮಾಡಿಕೊಳ್ಳುತ್ತಾರೆ ಎಂದು ಅತಿ ಪ್ರಚಾರ ಪಡೆಯಿತು. ಈ ಅಭ್ಯಾಸದ ಮೇಲೆ ನಮ್ಮ ಮಾಧ್ಯಮಗಳು ಹಲವು ಅತಿ ರಂಜಿತ ಬರಹಗಳನ್ನು ಪ್ರಕಟಿಸಿದವು. ಮೊರಾರ್ಜಿ ದೇಸಾಯಿ ಅವರು ಫಾರಿನ್ ಟೂರು ಹೋದಾಗ ಹೇಗೆ ಈ ಪಾನ ಕಾರ್ಯ ನಡೆಸಿದರು ಎನ್ನುವ ಹಲವು ವಿಡಂಬನೆಯ ಬರಹಗಳು ಅಚ್ಚು ಕಂಡವು. ಅಮೆರಿಕದ ಅಧ್ಯಕ್ಷರ ಜತೆ ನಡೆದ ಒಂದು ಸಂವಾದದಲ್ಲಿ ಇವರ ಕೈಲಿ ಒಂದು ಗಾಜಿನ ಲೋಟ ಇರುತ್ತೆ, ಅಮೆರಿಕದ ಅಧ್ಯಕ್ಷರ ಕೈಲೂ ಅದೇ ರೀತಿಯ ಒಂದು ಲೋಟ ಇರುತ್ತೆ. ಇಬ್ಬರೂ ಮಾತು ಆಡಬೇಕಾದರೆ ಮೇಜಿನ ಮೇಲಿನ ಲೋಟ ಅದಲ್ ಬದಲು ಆಗುತ್ತೆ. ಅಮೆರಿಕದ ಅಧ್ಯಕ್ಷರು ಒಂದು ಗುಟುಕು ಹೀರಿ ವಯಕ ಅನ್ನಲು ಬಾತ್ ರೂಮಿಗೆ ಓಡುತ್ತಾರೆ. ಮೊರಾರ್ಜಿದೇಸಾಯಿ ಅವರು (ಪಾಪ )ನನ್ನ ಇಂದಿನ ಡ್ರಿಂಕ್ ಮಿಸ್ ಆಯಿತು ಎಂದು ಬೇಜಾರಿನಿಂದ ಅವರ ಸೂಟ್‌ಗೆ (ಅಂದರೆ ತಾರಾ ಹೋಟೆಲಿನ ಐಶಾರಾಮಿ ನಿವಾಸ) ಬೇಸರದಿಂದ ನಡೆಯುತ್ತಾರೆ. ಇಂತಹ ವ್ಯಂಗ್ಯ ತುಂಬಿದ ಮೊನಚಾದ ಹಾಸ್ಯ ಲೇಖನಗಳು ಅಸಂಖ್ಯಾತ, ಹೆಚ್ಚಾಗಿ ಇಂಗ್ಲಿಷ್ ಭಾಷೆಯ ಪತ್ರಿಕೆಯಲ್ಲಿ ಬಂದವು. ಕೆಲವರಿಗೆ ಇದು ತಲೆ ಹಗೂರ ಮಾಡಿಕೊಳ್ಳುವ ಒಂದು ಸಾಧನ ಆದರೆ ಸರ್ಕಾರಕ್ಕೆ ಭಾರಿ ಇರುಸು ಮುರಿಸಿನ ಸಂಗತಿ. ಆದರೆ ಬಿಸಿ ತುಪ್ಪ ಉಗುಳುವ ಹಾಗಿಲ್ಲ, ನುಂಗುವ ಹಾಗೂ ಇಲ್ಲ.

ಸರ್ಕಾರದ ಅಂಗ ಪಕ್ಷಗಳ ನಡುವೆ ಕಿತ್ತಾಟ ನಡೆಯುತ್ತಲೇ ಇತ್ತು. ಕೊನೆಗೆ ಇದು ವಿಕೋಪಕ್ಕೆ ಹೋಗಿ ದೇಶದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಬಿದ್ದು ಹೋಯಿತು. ಜನತಾ ಸರ್ಕಾರದ ಪ್ರಮುಖ ಅನಿಸಿ ಕೊಂಡಿದ್ದ ಮತ್ತು ಒಂದು ಒಳ್ಳೆಯ ಇಲಾಖೆ ಹೊಂದಿದ್ದ ಜಾರ್ಜ್ ಫರ್ನಾಂಡಿಸ್ ಅವರೇ ಸರ್ಕಾರದ ಸೆಟೆದು ನಿಂತರು. ಇಂದಿರಾ ಗಾಂಧಿ ಅವರು ಈ ಸರ್ಕಾರವನ್ನು ಕಿಚಡಿ ಸರ್ಕಾರ ಎಂದು ಕರೆದಿದ್ದು ಅನ್ವರ್ಥ ಆಯಿತು!

ಈಗ ಮುಂದೆ..

ನಾಗರಿಕರ ಸುಮಾರು ಹಕ್ಕುಗಳು ನಿರ್ಬಂಧಿತವಾಗಿ ಹೆಚ್ಚೂ ಕಮ್ಮಿ ಎಲ್ಲರೂ ನಾಲಿಗೆ ಕತ್ತರಿಸಿಕೊಂಡ ಹಾಗಾಗಿದ್ದರು. ಅಭಿವ್ಯಕ್ತಿ ಸ್ವಾತಂತ್ರ ಸಂಪೂರ್ಣ ಮೊಟಕುಗೊಂಡಿತ್ತು ಹಾಗೂ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ವಿರೋಧಿಗಳು ನಾಡಿನ ಉದ್ದಗಲಕ್ಕೂ ಇದ್ದ ಜೈಲು ಪಾಲಾಗಿದ್ದರು. ಒಟ್ಟಿನಲ್ಲಿ ದೇಶ ಒಂದು ರೀತಿಯ ಬೂದಿ ಮುಚ್ಚಿದ ಕೆಂಡ ಎಂದು ಹೇಳುವ ಹಾಗಿತ್ತು. ಯಾವಾಗ ಆಸ್ಫೋಟ ಆಗುತ್ತದೆ ಎಂದು ತಿಳಿಯದ ಹಾಗಿತ್ತು.

ಪ್ರತಿದಿವಸ ಇಂದಿರಾಗಾಂಧಿ ಅವರ ಮನೆಯ ಮುಂದೆ ಅವರನ್ನು ಬೆಂಬಲಿಸಿ ಸಭೆಗಳು ನಡೆಯುತ್ತಿದ್ದವು. ಇದನ್ನು ಕಾಂಗ್ರೆಸ್ ಪಕ್ಷ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ಏರ್ಪಡಿಸುತ್ತಿದ್ದವು. ಲಾರಿ ಡ್ರೈವರ್ ಸಂಘ, ಆಟೋರಿಕ್ಷಾ ಚಾಲಕ ಸಂಘ, ಕಿಸಾನ್ ಸಂಘ, ಫುಟ್ ಪಾತ್ ವರ್ತಕರ ಸಂಘ… ಹೀಗೆ ಹಲವು ಸಾವಿರ ಸಂಘಗಳ ಬ್ಯಾನರ್ ಅಡಿಯಲ್ಲಿ ಈ ಸಭೆಗಳು ಇಂದಿರಾ ಗಾಂಧಿ ಅವರಿಗೆ ಬೆಂಬಲ ಘೋಷಿಸುತ್ತಾ ಇದ್ದವು. ಬೆಂಗಳೂರಿನಿಂದ ಸಹ ಕೆಲವು ಗುಂಪು ಈ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಹೋಗಿದ್ದವು. ಜತೆಗೆ ಉತ್ತರ ಭಾರತದ ಪುಣ್ಯಕ್ಷೇತ್ರಗಳ ವಿಹಾರವೂ ಪ್ಯಾಕೇಜ್ ಟೂರ್! ನನಗೆ ಗೊತ್ತಿದ್ದ ಸುಮಾರು ಸ್ನೇಹಿತರು ಈ ಪ್ಯಾಕೇಜ್ ಟೂರ್‌ನ ಫಲಾನುಭವಿಗಳು! ಎರಡು ಮೂರು ಬಾರಿ ನನಗೂ ದೆಹಲಿ ಪ್ರವಾಸ ಯೋಗ ಈ ಸಮಯದಲ್ಲಿ ಆಹ್ವಾನದ ಮೂಲಕ ಬಂದಿತ್ತು. ಅವರದ್ದೇ ಖರ್ಚು, ಪರ್ಚು, ಕೈಗಿಷ್ಟು ದುಡ್ಡು ಮತ್ತು ಅಲ್ಲಿ ಊಟ ತಿಂಡಿ. ಯಾವ ತರಹದ ಊಟ ಬೇಕೋ ಅದು ವೆಜ್ಜು ನಾನ್ ವೆಜ್.. ಹೀಗೆ. ನಾನೋ ಪ್ರತಿಷ್ಠೆ ನನ್ನಮಗ. ದೇಶ ಉಳಿಸಬೇಕು ಅನ್ನುವ ಪಂಥದವನು. ಇದಕ್ಕೆ, ಇಂತಹ ಆಮಿಷಕ್ಕೆ ಯೀಲ್ಡ್ ಆಗ್ತೀನಾ? ಬೇಡ ನಾನು ಇಂತಹದ್ದಕ್ಕೆ ಬರೋಲ್ಲ ಅಂತ ರೇಗಿ ಓಡಿಸಿಬಿಟ್ಟಿದ್ದೆ ಆಹ್ವಾನಿಸಲು ಬಂದ ಗುಂಪನ್ನು!

ಆಮೇಲೆ ಸುಮಾರು ದಿವಸ ನಾನು ನನ್ನ ವಿಧಿಯನ್ನು ಬೈದಿದ್ದೇನೆ, ಊರು ಸುತ್ತುವ ಅದೂ ಯಾರದೋ ದುಡ್ಡಿನಲ್ಲಿ ಊರು ಸುತ್ತುವ ಅವಕಾಶ ಕಳಕೊಂಡೆ ಅಂತ….

ಸರ್ಕಾರದ ಬೇಹುಗಾರಿಕೆ ಅಂಗ ನಾಗರಿಕರಲ್ಲಿ ಹೆಚ್ಚುತ್ತಿದ್ದ ಸರ್ಕಾರೀ ವಿರೋಧಿ ಧೋರಣೆ ಮತ್ತು ಸಂತೋಷವನ್ನು ಆಳುವ ಜನಕ್ಕೆ ಮನದಟ್ಟು ಮಾಡುವಲ್ಲಿ ವಿಫಲವಾದವು ಎಂದೇ ಹೇಳಬೇಕು. ಚುನಾವಣೆ ನಡೆದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುತ್ತದೆ ಎನ್ನುವ ರಹಸ್ಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಹೇಗಿದ್ದರೂ ನಮಗೆ ಬಹುಮತ ಬರುತ್ತೆ, ಅದರಿಂದ ನಮ್ಮನ್ನು ಯಾರೂ ತುರ್ತುಪರಿಸ್ಥಿತಿ ದಿವಸಗಳಲ್ಲಿ ಅತಿರೇಕಗಳಿಗೆ ಪ್ರಶ್ನಿಸುವ ಗಟ್ಟಿ ಧ್ವನಿ ಹೊಂದಿರುವುದಿಲ್ಲ ಎನ್ನುವ ಟೇಕ್ ಇಟ್‌ ಈಸಿ ಮಾನಸಿಕ ಸ್ಥಿತಿ ಚುನಾವಣೆ ನಡೆಸುವ ಘೋಷಿಸುವ ಮಟ್ಟಕ್ಕೆ ಕಾಂಗ್ರೆಸ್ ಸರ್ಕಾರವನ್ನು ಮುಂದೂಡಿತ್ತು ಎಂದೇ ಹೇಳಬೇಕು. ಅದರಂತೆ ಚುನಾವಣೆ ಘೋಷಣೆ ಆಯಿತು.

ಆರನೇ ಲೋಕಸಭೆಯ ಸದಸ್ಯರ ಆಯ್ಕೆಗೆ 16ರಿಂದ 20 ಮಾರ್ಚ್, 1977ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತು. ಚುನಾವಣೆ ನಡೆಯಿತು ಮತ್ತು ತುರ್ತು ಸ್ಥಿತಿ ಕೊನೆಗೊಂಡಿತು. ಜೈಲಿನಲ್ಲಿದ್ದ ಕಾಂಗ್ರೆಸ್ ಪಕ್ಷದ ವಿರೋಧೀ ಬಣದ ರಾಜಕಾರಣಿಗಳು ಮತ್ತು ಕಾಂಗ್ರೆಸ್ ತತ್ವಗಳನ್ನು ವಿರೋಧಿಸುತ್ತಿದ್ದ ನಾಗರಿಕರೂ ಬಿಡುಗಡೆ ಹೊಂದಿದರು. ದೇಶದಲ್ಲಿ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿ ಕೊನೆ ಆಯಿತು ಮತ್ತು ಹೊಸಾ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಇಂದಿರಾಗಾಂಧಿ ಅವರೂ ಸೇರಿದ ಹಾಗೆ ಅವರ ಸಂಪುಟದ ಬಹುತೇಕ ಸಚಿವರು ಚುನಾವಣೆಯಲ್ಲಿ ಸೋತಿದ್ದರು ಮತ್ತು ಹಲವು ನಾಯಕರು ವಿರೋಧಿ ಬಣದಿಂದ ಗೆದ್ದಿದ್ದರು. ಸಂಜಯ ಗಾಂಧಿ ಮುಂದಿನ ಬಿಂಬಿತ ಪ್ರಧಾನಿ ಸಹ ಚುನಾವಣೆಯಲ್ಲಿ ಸೋತಿದ್ದರು.

(ರಾಜನಾರಾಯಣ್)

ಹಾಗೆ ಗೆದ್ದವರಲ್ಲಿ ಇಂದಿರಾಗಾಂಧಿ ಅವರ ವಿರುದ್ಧ ಗೆದ್ದಿದ್ದ ರಾಜನಾರಾಯಣ್, ಜಾರ್ಜ್ ಫರ್ನಾಂಡಿಸ್ ಮುಂತಾದವರು ಮುಂದಿನ ಮಂತ್ರಿ ಮಂಡಲದಲ್ಲಿ ಕೊಂಚ ಹೆಚ್ಚು ಆಯಕಟ್ಟಿನ ಹುದ್ದೆ ಪಡೆದರು. ರಾಜ ನಾರಾಯಣ್ ಅಂತೂ ತಮ್ಮ ವಿಶಿಷ್ಟ ವೇಷ ಮತ್ತು ಮ್ಯಾನರಿಸಂನಿಂದ ಒಬ್ಬ ವಿದೂಷಕನ ಪಟ್ಟ ಪಡೆದರು. ಹಲವು ವಿಭಿನ್ನ ಧ್ಯೇಯ ಮತ್ತು ಉದ್ದೇಶದ ಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸಿ ಗೆದ್ದಿದ್ದವು. ಇದರ ಪರಿಣಾಮ ಎಂದರೆ ಎಲ್ಲಾ ಪಕ್ಷಗಳು ತಮ್ಮ ಭಾಗ ಪಡೆಯಲು (to get their share of flesh..!) ಪರಸ್ಪರ ಚರ್ಚೆಗೆ ತೋಳು ಏರಿಸಿದವು. ಸಾಕಷ್ಟು ಕಚ್ಚಾಟ ಮತ್ತು ವಿರಸದ ನಂತರ ಮೊರಾರ್ಜಿ ದೇಸಾಯಿ ಅವರು ಸ್ವತಂತ್ರ ಭಾರತದ ನಾಲ್ಕನೇ ಪ್ರಧಾನಿಯಾಗಿ ಪಟ್ಟ ಗಿಟ್ಟಿಸಿಕೊಂಡರು. ಆಗ ಅವರಿಗೆ ಎಂಬತ್ತೆರಡು ವರ್ಷ ವಯಸ್ಸು! ಇವರ ಸರ್ಕಾರ ಎರಡು ವರ್ಷ ನಾಲ್ಕು ತಿಂಗಳು ಅಧಿಕಾರದಲ್ಲಿತ್ತು.

ಕಿಚಡಿ ಸರ್ಕಾರದ ಕಿತ್ತಾಟದಲ್ಲಿ ಮೊರಾರ್ಜಿ ಅವರು ಅಧಿಕಾರ ಬಿಡಬೇಕಾಯಿತು. ನಂತರ ಚರಣ್ ಸಿಂಗ್ ಜುಲೈ 79ರಿಂದ ಜನವರಿ 80ರವರೆಗೆ ಪ್ರಧಾನಿ ಆಗಿದ್ದರು.

ಅಂದಿನ ಕೆಲವು ಲಘು ಪ್ರಸಂಗಗಳನ್ನು ಹೇಳಿ ಮುಂದುವರೆಯುತ್ತೇನೆ.

ರಾಜನಾರಾಯಣ ವಿದೇಶ ಪ್ರವಾಸ ಹೋಗಿದ್ದರು. ಅಲ್ಲಿ ಯಾವುದೋ ಫ್ಯಾಕ್ಟರಿ ವಿಸಿಟ್. ಅಲ್ಲಿ ಯಾವುದೋ ಮೇಷಿನಿಂಗ್ ಕೆಲಸ ಆಗುತ್ತಿತ್ತು. ಹೆಚ್ಚು ಶಾಖ ತಡೆಯಲು ಕೂಲೆಂಟ್ ಎನ್ನುವ ಕೆಮಿಕಲ್, ಮೆಶೀನಿನ ಮೇಲೆ ಬೀಳುತ್ತಿರುತ್ತೆ. ಅದರ ಬಣ್ಣ ಹಾಲಿನಂತೆ ಬಿಳುಪು. ರಾಜನಾರಾಯಣ ಅಂತ ಮೆಶೀನ್ ಭಾರತಕ್ಕೆ ತರಿಸೋಣ, ಅಷ್ಟೊಂದು ಹಾಲು ಬರುತ್ತೆ ಅಂದರು ಅಂತ ಒಂದು ಸುದ್ದಿ ತುಂಬಾ ಪ್ರಚಲಿತವಾಗಿತ್ತು.

ಇಂದಿರಾ ಗಾಂಧಿ ಅವರ ಇಪ್ಪತ್ತು ಅಂಶದ ಕಾರ್ಯಕ್ರಮದ ಜಾರಿ ಬಗ್ಗೆ ಸರ್ಕಾರ ಹಲವು ಕ್ರಮ ಜಾರಿಮಾಡಿತ್ತು. ಸಂಜಯ್ ಗಾಂಧಿ ಅವರು ಈ ಇಪ್ಪತ್ತು ಅಂಶಕ್ಕೆ ಮತ್ತೆ ನಾಲ್ಕು ಪಾಯಿಂಟ್ ಸೇರಿಸಿದರು. ಇದು ತಮಾಷೆಯಾಗಿ 420 ಕಾರ್ಯಕ್ರಮ (4+20) ಎಂದು ಜನರ ಮಧ್ಯೆ ಹರಿಯಿತು! 420 ಅಂದರೆ ದಗಲ ಬಾಜಿಗಳಿಗೆ ನಿಕ್ ನೇಮ್ ಅದು. ಅಂಶದ ಕಾರ್ಯಕ್ರಮಗಳು ಹೀಗೆ ಫೋರ್ ಟ್ವೆಂಟಿ ಕಾರ್ಯಕ್ರಮ ಅನಿಸಿಕೊಳ್ಳುವುದು ಸರಿಯಲ್ಲ ಅಂತ ಕಾಂಗ್ರೆಸಿನ ಬುದ್ಧಿಜೀವಿಗಳಿಗೆ ಮನದಟ್ಟು ಆಯಿತು. ನಂತರ ನಾಲ್ಕು ಅಂಶಗಳಿಗೆ ಮತ್ತೊಂದು ಅಂಶ ಸೇರಿಸಿ ಇದು ಇಪ್ಪತ್ತೈದು ಅಂಶಗಳ ರಿವೈಸ್ಡ್ ಕಾರ್ಯಕ್ರಮ ಆಯಿತು. ಇಪ್ಪತ್ತು ಅಂಶವನ್ನು ಇಪ್ಪತ್ತೈದು ಅಂಶಗಳು ಟೇಕ್ ಓವರ್ ಮಾಡಿದವು! ಈ ಲಘು ಪ್ರಸಂಗವನ್ನು ಬ್ಯಾಂಕಿಂಗ್ ಕ್ಷೇತ್ರದಲ್ಲಿನ ನನ್ನ ಗೆಳೆಯರಾದ ಪ್ರಕಾಶ್ ಮತ್ತು ವೆಂಕಟೇಶ್ ಪ್ರಸಾದ್ ನೆನೆಸಿಕೊಂಡರು.

ತುರ್ತು ಪರಿಸ್ಥಿತಿ ಸಮಯದಲ್ಲಿ ಇಪ್ಪತ್ತು ಅಂಶದ(ಅಥವಾ ಇಪ್ಪತ್ತೈದು ಅಂಶ) ಕಾರ್ಯಕ್ರಮಕ್ಕೆ ಬೆಂಬಲ ನೀಡಿ ಹಿಂದಿ ಭಾಷೆಯ ಪ್ರಸಿದ್ಧ ಹಿನ್ನೆಲೆ ಗಾಯಕ ಕಿಶೋರ್ ಕುಮಾರ್ ಅವರಿಗೆ ಹಾಡು ಹಾಡುವಂತೆ ಕಾಂಗ್ರೆಸ್ ಪಕ್ಷದವರು ಸೂಚಿಸಿದ್ದರು. ಚಿತ್ರ ವಲಯದಲ್ಲಿ ಆಗಲೇ ಕಿಶೋರ್ ಕುಮಾರ್ ಎಬಡ ತಬಡ ಎಂದು ಹೆಸರಾಗಿದ್ದ. ಎಂತಹ ಹಾಡನ್ನು ಬೇಕಾದರೂ ಅವನ ವಿಶಿಷ್ಟ ರೀತಿಯಿಂದ ಜನಾನುರಾಗಿ ಮಾಡುತ್ತಿದ್ದ. ವೇದಿಕೆಯ ಮೇಲೆ ಹಾಡು ಹಾಡುತ್ತಾ ಆತ ಮಾಡುತ್ತಿದ್ದ ಡ್ಯಾನ್ಸ್‌ಗಳು ಹಾಗೂ ಅವನ ಹಾಡುವಿಕೆಯಲ್ಲಿ ತೂರಿಸುತ್ತಿದ್ದ yodling ಮತ್ತು falseto ರೂಪಗಳಿಂದ ಅತ್ಯಂತ ವಿಶಿಷ್ಟನಾಗಿದ್ದ. ಆತನ ಹಾಡುಗಳು ಅತಿ ಆಕರ್ಷಣೆಯ ಸಂಗತಿಗಳು ಆಗಿದ್ದವು. ವೇದಿಕೆ ಮೇಲೆ ಕೊಂಚ ಎಕ್ಸೆಂಟ್ರಿಕ್ ಆಗಿ ವರ್ತಿಸುತ್ತಿದ್ದ. ಸಹಜವಾಗಿ ಕಿಶೋರ್ ಕುಮಾರ್ ಸರ್ಕಾರದ ಇಪ್ಪತ್ತು ಅಂಶದ ಪರವಾಗಿ ಪ್ರಚಾರ ಮಾಡಿದರೆ ಸರ್ಕಾರಕ್ಕೆ ಬೆಂಬಲ ಹೆಚ್ಚುತ್ತದೆ ಎಂದು ಕಾಂಗ್ರೆಸ್ ಪಕ್ಷದ ಥಿಂಕ್ ಟ್ಯಾಂಕ್ ಲೆಕ್ಕ ಹಾಕಿತ್ತು ಮತ್ತು ಇದನ್ನು ಸಾಧಿಸಲು ಕಿಶೋರ್ ಕುಮಾರ್‌ನ ಬೆನ್ನು ಹತ್ತಿತ್ತು.

(ಕಿಶೋರ್ ಕುಮಾರ್)

ಕಿಶೋರ್ ಕುಮಾರ್ ಸರ್ಕಾರದ ಸಲಹೆಗೆ ಒಪ್ಪಲಿಲ್ಲ ಮತ್ತು ತುರ್ತು ಪರಿಸ್ಥಿತಿ ಬೆಂಬಲಕ್ಕೂ ನಿಲ್ಲಲಿಲ್ಲ. ಸಹಜವಾಗಿ ಆಳುವವರ ಕೆಂಗಣ್ಣಿಗೆ ಈತ ಗುರಿಯಾದ. ಜೈಲಿಗೆ ಕಳಿಸಲು ಅವನ ಮೇಲೆ ಯಾವ ರೀತಿಯ ದೇಶದ್ರೋಹಿ ಆಪಾದನೆಯನ್ನು ಮಾಡುವ ಹಾಗಿಲ್ಲದ ಸಭ್ಯ ಅವನು ಮತ್ತು ಅತ್ಯಂತ ಬೇಡಿಕೆಯಲ್ಲಿದ್ದ ನಟ ಕಂ ಹಾಡುಗಾರ. ಅಂತಹ ವ್ಯಕ್ತಿಯನ್ನು ಬಂಧಿಸಿ ಜೈಲಿಗೆ ದೂಡಿದರೆ ಚಿತ್ರ ರಂಗದ ವಿರೋಧ ಕಟ್ಟಿ ಕೊಳ್ಳಬೇಕು. ಅದರಿಂದ ಪಕ್ಷದ ನೇತಾರರು ಒಂದು ವಯಾ ಮೀಡಿಯ ತಂತ್ರ ಹುಡುಕಿದರು. ಆಗ ಅಂದರೆ ೧೯೭೫ ನಲ್ಲಿ ಆಲ್ ಇಂಡಿಯಾ ರೇಡಿಯೋ ಆಕಾಶವಾಣಿ ಸರ್ಕಾರದ ಸ್ವಾಮ್ಯದಲ್ಲಿತ್ತು. ಬೇರೆ ಆಕಾಶವಾಣಿಗಳು ಯಾವುದೂ ಇರಲಿಲ್ಲ. ಖಾಸಗಿ ವಾಹಿನಿಗಳ ಕಲ್ಪನೆಯೇ ಆಗ ಹುಟ್ಟಿರಲಿಲ್ಲ. ದೂರದರ್ಶನವಂತೂ ಗೊತ್ತೇ ಇರಲಿಲ್ಲ. ಹೊರದೇಶಕ್ಕೆ ಹೋಗಿಬಂದವರು ಅಲ್ಲಿನ ಟೀವಿಗಳ ಬಗ್ಗೆ ಹೇಳಿದರೆ ಕಣ್ಣು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆವು. ಇನ್ನು ಖಾಸಗಿ ಚಾನಲ್‌ಗಳು ಗೊತ್ತಿರಲಿಲ್ಲ ಮತ್ತು ಅವುಗಳ ಯೋಚನೆ ಸಹ ಮನಸಿನಲ್ಲಿ ಹಾದಿರಲಿಲ್ಲ. ದೇಶದ ಜನಕ್ಕೆ ಮನರಂಜನೆ ಅಂದರೆ ಆಲ್ ಇಂಡಿಯಾ ರೇಡಿಯೋ ಮತ್ತು ಆಲ್ ಇಂಡಿಯಾ ರೇಡಿಯೋ ಒಂದೇ. ತಮಿಳರು ವಾನುಲಿ ಅಂದರೆ ನಾವು ಡಿಂಗರಿಂಗರು ಆಕಾಶವಾಣಿ ಎನ್ನುತ್ತಿದ್ದೆವು. ಆಕಾಶವಾಣಿ ಪದಕ್ಕೂ ನಮಗೂ ಒಂದು ರೀತಿ ಸೆಂಟಿಮೆಂಟಲ್ ಅಟ್ಯಾಚ್ಮೆಂಟ್ ಇತ್ತು. ಅಂದ ಹಾಗೆ ಆಕಾಶವಾಣಿ ಎನ್ನುವ ಪದ ಕೊಟ್ಟಿದ್ದೇ ಕನ್ನಡದ ಬಾನುಲಿ ಕೇಂದ್ರ. ಕನ್ನಡದ ಹಾಸ್ಯ ಸಾಹಿತಿ ಶ್ರೀ ನಾ. ಕಸ್ತೂರಿ ಅವರು ಆಕಾಶವಾಣಿ ಎನ್ನುವ ಪದ ಹುಟ್ಟು ಹಾಕಿದ್ದು ಈಗ ಇತಿಹಾಸ. ಭಾರತದ ಮೊದಲ ರೇಡಿಯೋ ಕೇಂದ್ರ ಮೈಸೂರಿನಲ್ಲಿ ಗೋಪಾಲಸ್ವಾಮಿ ಅವರು ಖಾಸಗಿಯಾಗಿ ಶುರು ಮಾಡಿದ್ದರು. ಶ್ರೀ ಕಸ್ತೂರಿ ಅವರು ಅದರಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಈ ಪದ ಹುಟ್ಟಿ ಸರ್ವವ್ಯಾಪಿ ಆಯಿತು. ಆಕಾಶವಾಣಿ ನಿಲಯವನ್ನು ನಂತರ ಭಾರತ ಸರ್ಕಾರ ತೆಗೆದುಕೊಂಡಿತು. ಇದು ಚರಿತ್ರೆಯ ಒಂದು ಭಾಗ. ಆಕಾಶವಾಣಿ ಅಗಾಧವಾಗಿ ಬೆಳೆಯಿತು ಮತ್ತು ಕೇಂದ್ರ ಸರ್ಕಾರದ ಒಂದು ಅಂಗವಾಗಿ, ಸರ್ಕಾರೀ ಸ್ವಾಮ್ಯದಲ್ಲಿ ಅದು ಈಗಲೂ ಕಾರ್ಯ ನಿರ್ವಹಿಸುತ್ತಿದೆ. ಖಾಸಗಿ ರೇಡಿಯೋ ಕೇಂದ್ರಗಳು ಬಂದನಂತರ ಮೂಲ ಆಕಾಶವಾಣಿಯ ಪ್ರಭಾವ ಕೊಂಚ ತಗ್ಗಿದೆ ಎಂದು ಕೆಲವರ ಅಭಿಪ್ರಾಯ. ಆದರೆ ಆಲ್ ಇಂಡಿಯಾ ರೇಡಿಯೋಗೆ ಇರುವ ಶ್ರೋತೃ ವ್ಯಾಪ್ತಿ ಅಗಾಧವಾದದ್ದು.

ಕಿಶೋರ್ ಕುಮಾರ್ ವಿಷಯ ಹೇಳುತ್ತಾ ಆಕಾಶವಾಣಿ ಹೆಸರಿಗೆ ಹಾರಿದೆನಾ… ಕಿಶೋರ್ ಕುಮಾರನ ಹಾಡುಗಳನ್ನು ರೇಡಿಯೋದಲ್ಲಿ ಪ್ರಸಾರ ಮಾಡುವುದನ್ನು ಏಕಾ ಏಕಿ ನಿಲ್ಲಿಸಿಬಿಟ್ಟರು! ಕಿಶೋರ್ ಕುಮಾರ್‌ನ ಹಾಡುಗಳನ್ನು ಬಹಳ ಇಷ್ಟಪಟ್ಟು ಕೇಳುತ್ತಿದ್ದ ನಮಗೆ ಮೊದಲು ಒಂದೆರೆಡು ತಿಂಗಳು ಅವನು ಬ್ಯಾನ್ ಆಗಿರುವ ಸಂಗತಿ ಗೊತ್ತಾಗಲೇ ಇಲ್ಲ. ನಂತರ ಅವನ ಹಾಡು ರೇಡಿಯೋದಲ್ಲಿ ಬರ್ತಿಲ್ಲ ಎನ್ನುವುದು ತಿಳಿಯಿತು. ಅವನು ಆಕಾಶವಾಣಿಯಿಂದ ಬ್ಯಾನ್ ಆಗಿದ್ದಾನೆ ಎನ್ನುವ ಸುದ್ದಿ ವಿಸ್ಪರಿಂಗ್ ಕಾಂಪೇನ್ ಆಯಿತು ಮತ್ತು ಇದು ನಿಜ ಎನ್ನುವುದು ತುರ್ತು ಪರಿಸ್ಥಿತಿ ನಂತರ ತಿಳಿಯಿತು.

ನನಗೆ ಆಗ ಅಂದರೆ ೧೯೭೬ ರಲ್ಲಿ ಬೀರೂರಿನಲ್ಲಿದ್ದ ನಮ್ಮಣ್ಣನಿಗೆ ಬರೆದ ಒಂದು ಕಾಗದಕ್ಕೆ ಅವನು ಬರೆದ ಮಾರುತ್ತರದ ಇನ್ಲಾಂಡ್ ಲೆಟರ್ ಮೊನ್ನೆ ಸಿಕ್ಕಿತು. “ಕಿಶೋರ್ ಕುಮಾರ್ ಹಾಡು ಬ್ಯಾನ್ ಆಗಿದೆಯಾ ಛೇ……. ಪತ್ರದಲ್ಲಿ ಈ ರೀತಿಯ ರಾಜಕೀಯ ಸಂಗತಿಗಳನ್ನೂ ಸಹ ಚರ್ಚೆ ಮಾಡ್ತಿರಾ ಅಂತ ಡಾಕ್ಟರ್ ಗಿರಿಯಪ್ಪ ಕೇಳಿದರು…..”

ಅವನ ಮಾರುತ್ತರದಲ್ಲಿ ಮೇಲಿನಂತೆ ಬರೆದಿದ್ದ.

ಆಗ ಪತ್ರ ಬರೆದ ನಮ್ಮಣ್ಣ ಈಗಿಲ್ಲ, ಕಿಶೋರ್ ಕುಮಾರ್ ಸಹ ಇಲ್ಲ.. ಕಿಶೋರ್ ಕುಮಾರನ ಹಾಡುಗಳು ಇನ್ನೂ ಹಲವು ಶತಮಾನಗಳ ಕಾಲ ಆದರೂ ಇರುತ್ತೆ. ಆದರೆ ತುರ್ತು ಸ್ಥಿತಿ ಯ ಅಂದಿನ ನೆನಪು ಇನ್ನೂ ಹಸಿರು ಹಸಿರು..

ಇಂದಿರಾ ಗಾಂಧಿ ಅವರು ಚುನಾವಣೆಯಲ್ಲಿ ಪರಾಭವಗೊಂಡ ಸುದ್ದಿ ರೇಡಿಯೋದಲ್ಲಿ ಪ್ರಸಾರ ಆಯ್ತು. ಅಂದು ಅದರ ಮಾರನೇ ದಿವಸ, ಅದರ ಮಾರನೇ ದಿವಸ.. ಹೀಗೆ ಸುಮಾರು ಒಂದುವಾರವೋ ಎರಡು ವಾರವೋ ಕಿಶೋರ್ ಕುಮಾರನ ಹಾಡು ರೇಡಿಯೋದಲ್ಲಿ ಮತ್ತೆ ಮತ್ತೆ ಮೊಳಗಿ ಬಿಟ್ಟಿತು. ಎರಡು ವರ್ಷಕ್ಕೂ ಹೆಚ್ಚು ಸಮಯ ಅವನ ಹಾಡು ಕೇಳದೇ ಸಮಯ ಕಳೆದಿದ್ದ ಕಿಶೋರ್ ಕುಮಾರನ ಫ್ಯಾನ್‌ಗಳು ಅಂದರೆ ಭಕ್ತರು (ಈಗ ಭಕ್ತ ಎನ್ನುವ ಪದದ ಅರ್ಥ ಹೆಚ್ಚು ವಿಸ್ತಾರ ಹೊಂದಿದೆ. ಆಗ ಫ್ಯಾನ್ ಗಳನ್ನು ಮಾತ್ರ ಭಕ್ತ ಎನ್ನುತ್ತಿದ್ದೆವು. ಸಾಮಾಜಿಕ ಜಾಲದ ಆಳ ಮತ್ತು ಹರಿವು ದೊಡ್ಡದಾಗುತ್ತಾ ಬಂದ ಹಾಗೆ ಮೋದಿಯನ್ನು ಮೆಚ್ಚುವ ಒಂದೇ ಒಂದು ಸಾಲು ನೀವು ಜಾಲದಲ್ಲಿ ಪೋಸ್ಟ್ ಮಾಡಿ, ನಿಮ್ಮನ್ನು ಮೋದಿ ಭಕ್ತ ಎಂದು ಪರಿಗಣಿಸಲಾಗುತ್ತದೆ! ಮೋದಿಯನ್ನು ಮೆಚ್ಚುವವರು ಹೊಗಳುವವರು ಭಕ್ತ, ಅಂಧ ಭಕ್ತ ಎಂದು ಮೋದಿ ವಿರೋಧಿಗಳಿಂದ ಕರೆಸಿಕೊಳ್ಳುತ್ತಾರೆ…! ಮೋದಿ ಭಕ್ತರು ತಮ್ಮನ್ನು ಹೀಗೆ ಕರೆದವರನ್ನು ಗುಲಾಮ್ಸ್ ಎಂದೂ ಜಾಹಿರ್ ಎಂದೂ ಕರೆಯುತ್ತಾರೆ! ಇದು ನಾನು ಸಾಮಾಜಿಕ ಜಾಲದಲ್ಲಿ ಹೆಚ್ಚು ತೊಡಗಿಸಿಕೊಂಡ ನಂತರ ಗಳಿಸಿದ ಜ್ಞಾನ!) ಅಷ್ಟೂ ದಿವಸ ಅವನ ಹಾಡನ್ನು ಮತ್ತೆ ಮತ್ತೆ ಕೇಳಿ ಅವನ ಜತೆಗೆ ಹಾಡಿ ಖುಷಿ ಪಟ್ಟರು. ಮೊನ್ನೆ ಕಿಶೋರ್ ಕುಮಾರ್‌ನ ಮಗ ಅಮಿತ್ ಕುಮಾರ್ (ಹೆಸರು ಇದೇ ಏನೋ ಅಥವಾ ಬೇರೇನೋ ಗೊತ್ತಿಲ್ಲ) ನ ಒಂದು ಸಂದರ್ಶನ ಯು ಟ್ಯೂಬ್‌ನಲ್ಲಿ ನೋಡುತ್ತಿದ್ದೆ. ಅದರಲ್ಲಿ ಅವನು ಸಂಗೀತಗಾರ ತಂದೆ ಮಗ ಎಸ್ ಡಿ ಬರ್ಮನ್ ಮತ್ತು ಆರ್ ಡಿ ಬರ್ಮನ್ ಅವರ ಬಗ್ಗೆ ಹೇಳುತ್ತಾ ಹಿರಿಯ ಬರ್ಮನ್ ಅವರ ನಡೆ ನುಡಿ ಇಮಿಟೇಟ್ ಮಾಡಿದ. ದೊಡ್ಡ ಬರ್ಮನ್ ಹೇಗೆ ಡ್ಯಾನ್ಸ್ ಮಾಡುತ್ತಲೇ ನಡೆದರು, ಹೇಗೆ ಹಾಡು ಹೇಳಿದರು…. ಎನ್ನುವುದನ್ನು ತೋರಿಸಿದ. ಬರ್ಮನ್ ಅವರ ಒಂದೋ ಎರಡೋ ಹಾಡು ನನ್ನ ಕಾಲೇಜು ದಿವಸದಲ್ಲಿ ಕೇಳಿದ್ದು ಈಗಲೂ ನನಗೆ ಅಚ್ಚು ಮೆಚ್ಚು. ಬಂಧಿನಿ ಚಿತ್ರದ್ದು ಒಂದು, ಗೈಡ್ ಚಿತ್ರದ ವೋಹ ಕೌನ್ ಹೈ ತೇರಾ ಮುಸಾಫಿರ್… ಈ ಹಾಡು! ನನ್ನ ಪಿಯೂಸಿ ಮಿತ್ರ ಶ್ರೀ ನಂದಕುಮಾರ್ ವೋಹ ಕೌನ್ ಹೈ ತೇರಾ ಹಾಡನ್ನು ದಿವಸಕ್ಕೆ ಅದೆಷ್ಟು ಸಲ ಗುನುಗುತ್ತಾ ಇದ್ದದ್ದು ಕೇಳಿದೀನೋ. ಅಂದಹಾಗೆ ಶ್ರೀ ನಂದಕುಮಾರ್ ಈಗ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು.

ಕಿಶೋರ್ ಕುಮಾರನ ಮಗನ ವಿಡಿಯೋ ನೋಡಿ ಎಷ್ಟು ಸಂತೋಷ ಆಯಿತು ಅಂದರೆ ಅದನ್ನ ಐದಾರು ಸಲ ನೋಡಿದೆ. ತಂದೆಗೆ ತಕ್ಕ ಮಗ ಅನಿಸಿತು. ಕಿಶೋರ್ ಕುಮಾರ್‌ನ ಹಾಡು ಕುಣಿತದ ದೃಶ್ಯ ಇಂದಿಗೂ ಮನಸೆಳೆಯುತ್ತದೆ. ಮತ್ತೊಂದು ನೆನಪು ಅಂದರೆ ಅವನ Padosan ಚಿತ್ರ,Do Dooni Char ಎನ್ನುವ ಚಿತ್ರ. ಈ ದೋ ದುಣಿ ಚಾರ್ ಬೇರೆ ಬೇರೆ ಹೆಸರಿನಲ್ಲಿ ಹಿಂದಿಯಲ್ಲೇ ಮೂರೋ ನಾಲ್ಕೋ ಅವತಾರ ತಾಳಿತ್ತು. ಮೂಲ ಚಿತ್ರದಲ್ಲಿ ಅಸಿತ್ ಸೇನ್ ಮತ್ತು ಕಿಶೋರ್ ಕುಮಾರ್ ನಟಿಸಿದ್ದರು. ಇದು ಉಲ್ಟಾ ಪಲ್ಟಾ ಆಗಿ ಕನ್ನಡದಲ್ಲೂ ಬಂದಿತು. ನನ್ನ ಇಬ್ಬರು ಸ್ನೇಹಿತರು ವಸಂತ ಕುಮಾರ್ ಮತ್ತು ಚಂದ್ರಶೇಖರ್ ಇಬ್ಬರೂ ಕಿಶೋರ್ ಭಕ್ತರು. ಅದರಲ್ಲಿ ವಸಂತ ಸ್ವಲ್ಪ ಹೆಚ್ಚು ಭಕ್ತ. ಚಂದ್ರು ವಾಲಿಕೆ ಮುಖೇಶ್ ಕಡೆಗೆ ಹೆಚ್ಚು. ಇಬ್ಬರೂ ಗುಂಪಿನಲ್ಲಿದ್ದರೆ ನಮಗೆ ಕಿಶೋರ್ ಮತ್ತು ಮುಖೇಶ್ ತುಂಬಾ ಹತ್ತಿರ ಹತ್ತಿರ. ವಸಂತಕುಮಾರ್ ಒಂದು ಪುಸ್ತಕ ಯಾವಾಗಲೂ ಇಟ್ಟುಕೊಂಡಿರುತ್ತಾನೆ. ಅದರಲ್ಲಿ ಕಿಶೋರ್ ಹಾಡುಗಳು ಅಕ್ಷರ ರೂಪದಲ್ಲಿ ಇರುತ್ತೆ.. ಮಧ್ಯ ರಾತ್ರಿ ಎಬ್ಬಿಸಿ ಒಂದು ಹಾಡು, ಕಿಶೋರ್‌ದೂ ಅಂದರೆ ಸಾಕು ಕಿಶೋರ್ ನಿಮ್ಮ ಮುಂದೆ ಪ್ರತ್ಯಕ್ಷ. ಅದೇ ರೀತಿ ಚಂದ್ರು ಸಹ! ಕಳೆದ ವರ್ಷ ನಾವು ಎಪ್ಪತ್ತು ಪ್ಲಸ್ ಹುಡುಗರು ಸೇರಿದ್ದಾಗ ಮತ್ತೆ ಮುಖೇಶ್, ಕಿಶೋರ್ ಹಾಡುಗಳು ಕೇಳಿಸಿದ್ದು ಈ ಇಬ್ಬರು ಸ್ನೇಹಿತರು.

ತುರ್ತು ಪರಿಸ್ಥಿತಿಯ ಕತೆಗಳು ಪತ್ರಿಕೆಗಳಲ್ಲಿ ತುಂಬಾ ರೋಚಕವಾಗಿ ಬಂದವು. ದೆಹಲಿಯ ಒಂದು ಪ್ರದೇಶದಲ್ಲಿ (ಟರ್ಕ್ ಮೆನ್ ಗೇಟ್, ತುಘಲಕ್ ಗಾರ್ಡನ್..) ತುರ್ತು ಪರಿಸ್ಥಿತಿಯಲ್ಲಿ ನಡೆದ ಸ್ಲಂ ಕ್ಲಿಯರೆನ್ಸ್ ಕೆಲವು ಪತ್ರಿಕೆಗಳಲ್ಲಿ ಮತ್ತೆ ಮತ್ತೆ ಬಂತು. ಬಹುಶಃ ಮೊಟ್ಟ ಮೊದಲ ಬಾರಿಗೆ ಭಾರತದ ಅಲ್ಪ ಸಂಖ್ಯಾತರು ಕಾಂಗ್ರೆಸಿನ ಮೇಲೆ ಅದರಲ್ಲೂ ಸಂಜಯ ಗಾಂಧಿ ಮೇಲೆ ಅಸಾಧ್ಯ ಕೋಪಗೊಂಡಿದ್ದರು ಮತ್ತು ಚುನಾವಣೆಯಲ್ಲಿ ಈ ಕೋಪ anti congress ರೂಪ ಪಡೆಯಿತು.

ಚುನಾವಣೆಯಲ್ಲಿ ಜನತಾ ಪಕ್ಷ ಗೆದ್ದು ಅಧಿಕಾರ ಹಿಡಿದರೂ ಸಹ ಯಾವುದೇನೆನಪಿನಲ್ಲಿ ಉಳಿಯುವ ಹೇಳಿಕೊಳ್ಳುವ ಒಳ್ಳೆಯ ಕೆಲಸ ಆಗಲಿಲ್ಲ.

ರಾಜನಾರಾಯಣ ವಿದೇಶ ಪ್ರವಾಸ ಹೋಗಿದ್ದರು. ಅಲ್ಲಿ ಯಾವುದೋ ಫ್ಯಾಕ್ಟರಿ ವಿಸಿಟ್. ಅಲ್ಲಿ ಯಾವುದೋ ಮೇಷಿನಿಂಗ್ ಕೆಲಸ ಆಗುತ್ತಿತ್ತು. ಹೆಚ್ಚು ಶಾಖ ತಡೆಯಲು ಕೂಲೆಂಟ್ ಎನ್ನುವ ಕೆಮಿಕಲ್, ಮೆಶೀನಿನ ಮೇಲೆ ಬೀಳುತ್ತಿರುತ್ತೆ. ಅದರ ಬಣ್ಣ ಹಾಲಿನಂತೆ ಬಿಳುಪು. ರಾಜನಾರಾಯಣ ಅಂತ ಮೆಶೀನ್ ಭಾರತಕ್ಕೆ ತರಿಸೋಣ, ಅಷ್ಟೊಂದು ಹಾಲು ಬರುತ್ತೆ ಅಂದರು ಅಂತ ಒಂದು ಸುದ್ದಿ ತುಂಬಾ ಪ್ರಚಲಿತವಾಗಿತ್ತು.

1978ರಲ್ಲಿ ಇಂದಿರಾ ಗಾಂಧಿ ಅವರು ಪಾರ್ಲಿಮೆಂಟ್ ಪ್ರವೇಶಕ್ಕೆ ಒಂದು ಅತ್ಯಂತ ಸೇಫ್ ಜಾಗ ಹುಡುಕುತ್ತಿದ್ದರು. ಹಿಂದಿನ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಅವರು ಮತ್ತೆ ಅಂತಹ ಸೋಲು ಬೇಡವೆಂದು ನಿರ್ಧರಿಸಿದ್ದರು. ಇಡೀ ದೇಶವನ್ನು ಜಾಲಾಡಿ ಕೆಲವು ಅತ್ಯಂತ ಸುರಕ್ಷಿತ ಕ್ಷೇತ್ರವನ್ನು ಕಾಂಗ್ರೆಸ್ ಆಳುತ್ತಿದ್ದ ರಾಜ್ಯಗಳ ಬೇಹುಗಾರಿಕೆ ಇಲಾಖೆ ಮತ್ತು ರಾಜ್ಯ ಸರ್ಕಾರಗಳ ಸಿ ಐ ಡಿ ಇಲಾಖೆಗಳು ಪಟ್ಟಿಮಾಡಿದ್ದವು. ಹೀಗೆ ರಾಜ್ಯವಾರು ಮಾಡಿದ್ದ ಪಟ್ಟಿಯಲ್ಲಿ ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರ ಸಹ ಸೇರಿತ್ತು.

(ದೇವರಾಜ ಅರಸು)

ಆಗ ಕರ್ನಾಟಕದ ಮುಖ್ಯ ಮಂತ್ರಿ ಆಗಿದ್ದವರು ಶ್ರೀ ದೇವರಾಜ ಅರಸು ಅವರು. ಇಂದಿರಾ ಗಾಂಧಿ ಅವರ ಅತ್ಯಂತ ಕಟ್ಟಾ ಅಭಿಮಾನಿ. ಅರಸು ಇಂದಿರಾ ಗಾಂಧಿ ಅವರನ್ನು ಚಿಕ್ಕಮಗಳೂರಿನಿಂದ ಸ್ಪರ್ಧಿಸಲು ಆಹ್ವಾನ ನೀಡಿದರು. ಅವರಿಗೆ ಅನುಕೂಲ ಮಾಡಿಕೊಡಲು ಅಲ್ಲಿನ ಚುನಾಯಿತ ಸದಸ್ಯ ಶ್ರೀ ಚಂದ್ರೆಗೌಡ ಅವರು ಸ್ಥಾನ ತೆರವುಗೊಳಿಸಿದರು. ಹೀಗೆ ಖಾಲಿ ಆದ ಜಾಗಕ್ಕೆ ಇಂದಿರಾ ಗಾಂಧಿ ಅವರು ಚುನಾವಣೆ ಸ್ಪರ್ಧಿಸಲು ಬಂದರು.

ರಾಜ್ಯ ರಾಜಕೀಯದಲ್ಲಿ ಇದ್ದ ಆಗಿನ ವಿರೋಧ ಪಕ್ಷಗಳು ಶತಾಯ ಗತಾಯ ಇಂದಿರಾ ಗಾಂಧಿ ಅವರು ಇಲ್ಲಿ ಗೆಲ್ಲಬಾರದು ಎನ್ನುವ ನಿರ್ಧಾರ ತೆಗೆದುಕೊಂಡಿದ್ದರು. ಅವರ ವಿರುದ್ಧ ನಿಂತು ಅವರನ್ನು ಚುನಾವಣೆಯಲ್ಲಿ ಸೋಲಿಸಬಹುದಾದ ವರ್ಚಸ್ಸು ಇರುವ ಅಭ್ಯರ್ಥಿಗೆ ಶೋಧನೆ ನಡೆಯಿತು. ಸುಮಾರು ಅಭ್ಯರ್ಥಿಗಳ ಹೆಸರು ಪರಿಶೀಲಿಸಿದರು. ಒಂದು ಒಮ್ಮತದ ಮತ್ತು ಇಂದಿರಾ ಗಾಂಧಿ ಅವರ ವಿರುದ್ಧ ಗೆದ್ದೇ ಗೆಲ್ಲುವ ವಿಶ್ವಾಸ ಮೂಡಿಸಿದ್ದು ಕನ್ನಡದ ಮೇರುನಟ ರಾಜಕುಮಾರ್.

ರಾಜಕುಮಾರ್ ಅತ್ಯಂತ ಜನಪ್ರಿಯ ನಟ ಮತ್ತು ತನ್ನದೇ ಆದ ವಿಶಿಷ್ಟ ವರ್ಚಸ್ಸು ಹೊಂದಿದ್ದರು ಮತ್ತು ಕರ್ನಾಟಕದ ಜನತೆ ಅತ್ಯಂತ ಆಪ್ತವಾಗಿ ಪ್ರೀತಿಸುತ್ತಿದ್ದ, ಇಷ್ಟಪಡುತ್ತಿದ್ದ ಆರಾಧ್ಯ ದೈವ. ರಾಜಕುಮಾರ್ ಅವರ ಹೆಸರು ಪರಿಶೀಲಿಸಲು ವಿರೋಧ ಪಕ್ಷದ ನಾಯಕರಿಗೆ ನೆರವಾಗಿದ್ದು ತಮಿಳುನಾಡಿನ ರಾಜಕೀಯ.  ತಮಿಳುನಾಡಿನಲ್ಲಿ ಅಲ್ಲಿನ ಚಲನ ಚಿತ್ರಕ್ಕೆ ನೇರ ನಂಟು ಇರುವವರು ಇಡೀ ಚಿತ್ರರಂಗವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಚಿತ್ರ ಸಾಹಿತ್ಯದ ಮೂಲಕ ಹೆಸರು ಮಾಡಿದ್ದ ಕರುಣಾನಿಧಿ ಮುಖ್ಯಮಂತ್ರಿ ಆಗಿದ್ದರು, ನಂತರ ಕರುಣಾನಿಧಿ ಅವರನ್ನು ಮೀರಿ ಎಂ ಜಿ ಆರ್ ಮುಖ್ಯಮಂತ್ರಿ ಆಗಿದ್ದರು. ಅವರ ಇನ್ನಿತರ ಚಲನ ಚಿತ್ರ ಸಹೋದ್ಯೋಗಿಗಳು ತಮಿಳು ಚಿತ್ರರಂಗಕ್ಕೆ ಲಗ್ಗೆ ಇಟ್ಟಿದ್ದರು. ಈ ಎಲ್ಲಾ ಅಂಶಗಳೂ ರಾಜಕುಮಾರ್ ಅವರನ್ನು ಸುಲಭವಾಗಿ ಚುನಾವಣೆಗೆ ನಿಲ್ಲಲು ಒಪ್ಪಿಸಲು ನೆರವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕರಿಗೆ ಅಚಲವಾದ ನಂಬಿಕೆ ಇತ್ತು. ಇಂದಿರಾ ಗಾಂಧಿ ಅವರಿಗೆ ಇದು ವಾಟರ್ ಲೂ ಎಂದು ಕೆಲವು ನಾಯಕರು ಹಿಗ್ಗಿದ್ದರು ಸಹ. ನೆಪೋಲಿಯನ್ ಬೋನಾಪಾರ್ಟೆಯ ಕೊನೆಯ ಯುದ್ಧ ಈ ವಾಟರ್ ಲೂ ಯುದ್ಧ. ಅಲ್ಲಿ ಅವನು ಸೋತುಹೋದ ಮತ್ತು ಇಂಗ್ಲಿಷ್ ಭಾಷೆಗೆ ಒಂದು ಹೊಸ ನುಡಿಗಟ್ಟು ಹುಟ್ಟಿತು.

(ರಾಜಕುಮಾರ್)

ವಿರೋಧ ಪಕ್ಷದ ನಾಯಕರ ಗುಂಪು ರಾಜಕುಮಾರ್ ಅವರ ಬಳಿ ಮಾತುಕತೆಗೆ ತೆರಳಿದರು. ರಾಜಕುಮಾರ್ ಅವರಿಗೆ ಈ ಸುದ್ದಿ ಅಂದರೆ ರಾಜಕೀಯ ನಾಯಕರು ಅವರ ಮನೆಗೆ ಬರುವ ವಿಷಯ ಮೊದಲೇ ತಿಳಿದಿತ್ತು ಎಂದು ಕಾಣುತ್ತದೆ. ಜತೆಗೆ ಅವರ ಆಪ್ತರು ಮತ್ತು ಅವರ ಥಿಂಕ್ ಟ್ಯಾಂಕ್ ರಾಜಕೀಯ ಪ್ರವೇಶ ಮಾಡುವುದು ಬೇಡ ಎನ್ನುವ ಸಲಹೆ ನೀಡಿದ್ದರು. ರಾಜಕುಮಾರ್ ಅವರು ರಾಜಕೀಯ ನಾಯಕರು ಬಂದಾಗ ಅವರಿಗೆ ಸಿಗಲಿಲ್ಲ. ಅವರು ರಾಜಕೀಯ ಪ್ರವೇಶಿಸಲು ಆಸಕ್ತರಲ್ಲ ಎನ್ನುವ ಸೂಚನೆ ನೀಡಿದ್ದರು. ಆದರೆ ರಾಜಕೀಯ ನಾಯಕರು ತಮ್ಮ ಪ್ರಯತ್ನ ಮುಂದುವರೆಸಿದರು! ನಾಮಪತ್ರ ಸಲ್ಲಿಕೆಗೆ ಕೊನೆಯ ದಿವಸ ಬಂದರೂ ರಾಜಕುಮಾರ್ ಅವರು ರಾಜಕೀಯ ನಾಯಕರುಗಳ ಕೈಗೆ ಸಿಗಲಿಲ್ಲ. ಎಲ್ಲೋ ಬಚ್ಚಿಟ್ಟುಕೊಂಡಿದ್ದರಂತೆ, ಇದು ನಂತರ ಹಬ್ಬಿದ ಸುದ್ದಿ.

ಕೊನೆಗೆ ಬೇರೆ ದಾರಿ ಇಲ್ಲದೇ ಬಲವಂತವಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರನ್ನು ಇಂದಿರಾಗಾಂಧಿ ಅವರ ಎದುರಿಗೆ ಸ್ಪರ್ಧೆಗೆ ನಿಲ್ಲಿಸಲಾಯಿತು!

ಒಲ್ಲದ ಮನಸಿನಿಂದ ಪಾಟೀಲರು ನಾಮಪತ್ರ ಸಲ್ಲಿಸಿದರು. ಇಂದಿರಾ ಗಾಂಧಿ ಅವರನ್ನು ಶತಾಯ ಗತಾಯ ಸೋಲಿಸಬೇಕು ಎಂದು ಹಠ ತೊಟ್ಟಿದ್ದ ವಿರೋಧ ಪಕ್ಷದ ನಾಯಕರು ಎಲ್ಲಾ ರೀತಿಯ ಪ್ರಯತ್ನದ ಮೊರೆ ಹೊಕ್ಕರು. ಸ್ಥಳೀಯ ವೋಟರುಗಳ ವಿಶ್ವಾಸಗಳಿಸುವ ಪ್ರಯತ್ನ ಸಹ ನಡೆಯಿತು.

ಬೇರೆ ಬೇರೆ ಪಕ್ಷಗಳ ಯುವಜನತೆ ಚಿಕ್ಕಮಗಳೂರಿಗೆ ವೀರೇಂದ್ರ ಪಾಟೀಲರ ಪರ ಪ್ರಚಾರಕ್ಕೆ ತಂಡ ತಂಡ ಹೋದರು. ಇಲ್ಲಿ ಬೆಂಗಳೂರಿನಲ್ಲಿ ಪ್ರಚಾರ ಸಾಮಗ್ರಿಗಳು ತಯಾರಾದವು. ವಿರೋಧ ಪಕ್ಷದವರು ಹಮ್ಮಿಕೊಂಡಿದ್ದ ಹಲವು ಪ್ರಚಾರ ವಿಧಾನದಲ್ಲಿ ಇಲ್ಲಿಂದ ಕೈಬರಹದ ಪೋಸ್ಟರ್ ತಯಾರಿಸಿ ಚಿಕ್ಕಮಗಳೂರಿಗೆ ಕಳಿಸುವುದು ಸಹ ಒಂದು. ಕೆಂಪೇಗೌಡ ರಸ್ತೆಯ ಸ್ಟೇಟ್ಸ್ ಚಿತ್ರಮಂದಿರದ ಎದುರಿನಲ್ಲಿ ಪ್ರಭಾತ ಥಿಯೇಟರ್. ಅದೇ ರಸ್ತೆಯಲ್ಲಿ ಪ್ರಭಾತ್ ಥಿಯೇಟರ್ ಆಸು ಪಾಸಿನಲ್ಲಿ ಚೇಂಬರ್ ಆಫ್ ಕಾಮರ್ಸ್ ಬಿಲ್ಡಿಂಗ್. ಅಲ್ಲಿ ಈ ಚುನಾವಣಾ ಪೋಸ್ಟರ್ ರಚನೆ. ವ್ಯಾಪಕ ಪ್ರಚಾರ ಕೊಟ್ಟು ಈ ಪೋಸ್ಟರ್ ರಚನೆ ಕಾರ್ಯಕ್ರಮ ನಡೆಯಿತು. ಇದರಲ್ಲಿ ನಾನು ನನ್ನ ಗೆಳೆಯ ನಾಗರಾಜ್ ಭಾಗವಹಿಸಿದ್ದೆವು. ನಾಗರಾಜ ಬ್ಯಾಂಕ್ ಉದ್ಯೋಗಿ ಮತ್ತು ಇಂದಿರಾಗಾಂಧಿ ಅವರ ಬಗ್ಗೆ ತುಂಬಾ ಸಾಫ್ಟ್ ಕಾರ್ನರ್ ಇದ್ದವನು. ಅವರ ಇಪ್ಪತ್ತು ಅಂಶ ನಂತರದ ಐದು ಅಂಶ ಅವನಿಗೆ ಬಾಯಿ ಪಾಠ ಆಗಿತ್ತು. ನಡುರಾತ್ರಿ ಗಾಢ ನಿದ್ರೆಯಲ್ಲಿ ಆರನೇ ಪಾಯಿಂಟ್ ಯಾವುದು ಎಂದು ಕೇಳಿದರೂ ಥಟ್ಟನೆ ಹೇಳುತ್ತಿದ್ದ. ಬಹುಶಃ ಅವನಿಂದಲೇ ಥಟ್ ಅಂತ ಹೇಳಿ ಕಾರ್ಯಕ್ರಮ ಶುರು ಆಯಿತು ಅಂತ ನನ್ನ ಗುಮಾನಿ. ನಾನು ಸುಮ್ನೆ ನಿಂಜೊತೆ ಬರ್ತೀನಿ ಅಷ್ಟೇ ನನಗೆ ಪೋಸ್ಟರ್ ಬರೆಯೋಕ್ಕೆ ಬರಲ್ಲ… ಅಂತ ಹೇಳಿದೆ. ಜತೆಗೆ ಬಂದಿದ್ದ ನನಗೂ ಪೋಸ್ಟರ್ ಬರೆಯೋದು ಗೊತ್ತಿರಲಿಲ್ಲ. ಆದರೂ ಅದೇನೋ ಹುಮ್ಮಸ್ಸು ಮತ್ತು ಉತ್ಸಾಹ. ಡಿಕ್ಟೇಟರ್‌ನ ಸೋಲಿಸಬೇಕು ಅನ್ನುವ ಇಚ್ಛೆ! ಇಂದಿರಾಗಾಂಧಿ ಅವರನ್ನು ಡಿಕ್ಟೇಟರ್ ಎಂದು ವಿರೋಧ ಪಕ್ಷಗಳು ಬಿಂಬಿಸಿದ್ದವು. ಇಂದಿರಾ ಗಾಂಧಿ ಅಂದರೆ ಲೇಡಿ ಹಿಟ್ಲರ್ ಎಂದೇ ಆಗಿನ ಯುವಕರ ಭಾವನೆ…!

ಚೇಂಬರ್ ಆಫ್ ಕಾಮರ್ಸ್ ಬಿಲ್ಡಿಂಗ್‌ನ ಒಳ ಹೊಕ್ಕೆವು. ಆಗಲೇ ಸುಮಾರು ಯುವಕರು, ಮಧ್ಯ ವಯಸ್ಕರು ಮುದುಕರು ಎಂಬತ್ತು ವಯಸ್ಸಿನವರು ಸಹ ಸೇರಿದ್ದರು. ಪೇಂಟಿಂಗ್ ಮಾಡುವ ಉದ್ದನೆ ಬೋರ್ಡುಗಳು ಸ್ಟ್ಯಾಂಡ್ ಮೇಲೆ ಇರಿಸಿದ್ದರು. ಪಕ್ಕದ ಟೇಬಲ್ಲಿನ ಮೇಲೆ ನ್ಯೂಸ್ ಪ್ರಿಂಟ್ ಪೇಪರ್ ರಾಶಿ ರಾಶಿ ಬಿದ್ದಿದ್ದವು. ಅದರ ಪಕ್ಕ ಹಲವಾರು ಬಣ್ಣ ಬಣ್ಣಗಳ ದೊಡ್ಡ ಪೈಂಟು ಡಬ್ಬ.‌

ಆಗತಾನೇ ಅಡಿಗರ ಕವನಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಶುರು ಮಾಡಿದ್ದೆ. ಅವರ ಮತ್ತು ಇತರ ಕವಿಗಳ ಹಲವು ಪದ್ಯಗಳ ಆರಂಭಿಕ ಸಾಲು ನೆನಪಿನಲ್ಲಿ ಇತ್ತು. ಕಟ್ಟುವೆವು ನಾವು ಹೊಸ ನಾಡೊಂದನು…., ನಾನು ಮಾಯವಾದಿಯಾಗಿ ಬಂದೆ, ಇದು ನಮ್ಮ ಮನೆಯ ಕಥೆ, ಕಾಲವ ನಾನು ನಿಂತೆ, ಮರಳಿನಿಂದ ಎಣ್ಣೆ ಹಿಂಡುವ ಗಾಣ ಮೊದಲಾದ ಸಾಲುಗಳು ತಲೆಯಲ್ಲಿ ಆಳವಾಗಿ ಹುದುಗಿತ್ತು…… ಇವು ಅಲ್ಪ ಸಲ್ಪ ಬದಲಾವಣೆ ಒಂದಿಗೆ ಪೇಪರಿನ ಮೇಲೆ ಮೂಡಿದವು…

(ಇನ್ನೂ ಇದೆ….)

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

1 Comment

  1. H Gopalakrishna

    ಶ್ರೀ ಎನ್ ಟಿ ರಾಮರಾವ್ ಅವರು ಆಂಧ್ರ ಮುಖ್ಯಮಂತ್ರಿ ಆಗಿದ್ದು ನಂತರದ ದಿವಸದಲ್ಲಿ. ಈ ಲೋಪವನ್ನು ಗೆ ಪ್ರಕಾಶ್ ಹೇಳಿದರು. ಅವರಿಗೆ ಧನ್ಯವಾದ…..

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ