ಮೊದಲು ಯಾರೆಲ್ಲ ಹೋಗುವವರೆಂದು ಪಟ್ಟಿಯಾಗಬೇಕು, ನಾಟಕದ ಟಿಕೇಟಿಗೆ ಹಣದ ಹೊಂದಿಕೆಯಾಗಬೇಕು, ಹುಡುಗಿಯರ ಅಣಿಯಾದ ದಿನ ಊರ ಹುಡುಗಿಯರಿಗೆ ಹಬ್ಬ. ತೋಟದ ತುಂಬೆಲ್ಲ ಅಲೆದು ಅಬ್ಬಲಿಗೆ ಹೂವನ್ನಾಯ್ದು ಕಟ್ಟುವ ಸಂಭ್ರಮವೇನು? ನಾಟಕ ನೋಡುವಾಗ ತಿನ್ನಲೆಂದು ಶೇಂಗಾ ಹುರಿಯುವ ಸಡಗರವೇನು? ಅತ್ತರಿನೆಣ್ಣೆಯನ್ನು ಪೂಸಿ ತಲೆಬಾಚುವ ಸಂಭ್ರಮವೇನು? ಮರಳಿಬರುವಾಗ ದಾರಿಬೆಳಕಿಗೆಂದು ತೆಂಗಿನ ಗರಿಗಳನ್ನು ಒಟ್ಟುಗೂಡಿಸಿ ಸೂಡಿ ಮಾಡುವ ಗಡಿಬಿಡಿಯೇನು? ಅಂದು ಇಡಿಯ ಹೊಳೆಸಾಲೇ ಒಂದು ನಾಟಕದಂತೆಯೇ ಚಲನಶೀಲವಾಗಿಬಿಡುವುದು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹತ್ತನೆಯ ಕಂತು ನಿಮ್ಮ ಓದಿಗೆ

ನೀಲಿ ಆ ದಿನ ಶಾಲೆಯಿಂದ ಜಿಗಿಯುತ್ತಾ ಬರುವಾಗ ಎಂದಿನಂತೆ ಹಗ್ಗದಲ್ಲಿ ನೇತಾಡುತ್ತಿದ್ದ ಅವಳ ಮನೆಯಂಗಿ ಕಾಣೆಯಾಗಿತ್ತು. ಆಚೀಚೆಗೆ ಹುಡುಕಾಡಿ ಅಮ್ಮನಲ್ಲಿ ಹೋಗಿ ಕೇಳಿದಳು. ಅಮ್ಮ ಅಲ್ಲೇ ಬುಟ್ಟಿ ನೇಯುತ್ತಿದ್ದ ಅಪ್ಪನ ಮುಖ ನೋಡಿದಳು. ಅಪ್ಪ ಅವಳನ್ನು ಹತ್ತಿರ ಕರೆದು, “ಇವತ್ತು ಕುರ್ ಕುರ್ ಮಾವ ಬಂದಿದ್ದ. ಸುಮ್ನೆ ಅವ್ನ ಹತ್ರ ಕಣಿ ಕೇಳ್ದೆ. ನಿಂಗೇನೋ ಗ್ರಾಚಾರ ಇದೆ ಅಂದ. ಪರಿಹಾರಕ್ಕೆಂದು ನಿನ್ನ ವಸ್ತ್ರ ಕೇಳಿದ. ಕೊಟ್ಟುಬಿಟ್ಟೆ. ಸಧ್ಯಕ್ಕೆ ಅಮ್ಮನ ಪೆಟ್ಟಿಗೆಯಲ್ಲಿರುವ ಹೊಸ ಅಂಗಿ ಹಾಕಿಕೋ. ಪೇಟೆಗೆ ಹೋದಾಗ ಇನ್ನೊಂದು ಅಂಗಿ ತರುವೆ.” ಎಂದು ತಪ್ಪೊಪ್ಪಿಗೆಯ ಧಾಟಿಯಲ್ಲಿ ಹೇಳಿದರು. ಅಪ್ಪನ ಈ ಕೆಲಸದಿಂದಾಗಿ ಅಮ್ಮ ಮುನಿಸಿಕೊಂಡಿದ್ದಾಳೆಂದು ನೀಲಿಗೆ ಅರಿವಾಯಿತು. ಹೊಸ ಅಂಗಿಯೊಂದು ಬರುತ್ತಿದೆಯೆಂದು ಖುಶಿಪಡುವುದೋ ಅಥವಾ ಈಗ ಹಾಕಿಕೊಳ್ಳಲು ಅಂಗಿಯಿಲ್ಲವೆಂದು ಚಿಂತಿಸುವುದೋ ತಿಳಿಯದೇ ಗೊಂದಲಕ್ಕೀಡಾದಳು.

ನೀಲಿಯ ಅಪ್ಪ ಈ ಕುರ್ ಕುರ್ ಮಾವನ ಬಹುದೊಡ್ಡ ಅಭಿಮಾನಿ. ವರ್ಷಕ್ಕೆ ಒಂದೋ ಎರಡೋ ಬಾರಿ ಹೊಳೆಸಾಲಿಗೆ ಬರುವ ಅಪರೂಪದ ಅತಿಥಿ ಇವನು. ತಲೆಯ ಮೇಲೆ ಕೂದಲನ್ನು ಎತ್ತಿ ಕಟ್ಟಿಕೊಂಡು, ಕೈಯ್ಯಲ್ಲೊಂದು ತಂಬೂರಿಯಂತಹ ವಾದ್ಯವನ್ನು ಹಿಡಿದುಕೊಂಡು ಮನೆಯೆದುರು ನಿಂತು ರಾಗವಾಗಿ, “ಕುರ್ ಮಾವಡ, ಕೊಂಡ ದೇವಡಾ, ಮಂಜುನಾಥಡ, ವಿಶ್ವನಾಥಡ” ಎಂದು ಹಾಡುತ್ತ ಎದುರು ಸಿಕ್ಕವರ ಹಣೆಬರಹವನ್ನು ಓದಿ ಹೇಳುವವನು. ಮನೆಯಲ್ಲಿ ಯಾರಿಗಾದರೂ ಪುರುಸೊತ್ತು ಇದೆಯೆಂದರೆ ಅವನೆದುರು ಕುಳಿತು ಕಣಿ ಕೇಳುವರು. ಅವರ ಜೀವನದ ಹಿಂದಿನ-ಮುಂದಿನ ಕುರುಹುಗಳನ್ನೆಲ್ಲ ಹಾಡಿನಂತೆಯೇ ರಾಗವಾಗಿ ಹೇಳುತ್ತ ಹೋಗುವಾಗ ಎದುರು ಕುಳಿತವರು ನಂಬಿ ಅಹುದಹುದು ಎನ್ನುವಂತಿರುತ್ತದೆ ಅವನ ಮಾತುಗಳು. ಹಲವು ಬದುಕಿನ ಕಷ್ಟ ಸುಖಗಳನ್ನು ಕಂಡರುಹುವ ಅವನ ಮಾತುಗಳಲ್ಲಿ ಅಲ್ಲಲ್ಲಿ ಸತ್ಯದ ಗೆರೆಗಳನ್ನು ಹುಡುಕಿಕೊಳ್ಳುತ್ತಾ ಕೇಳುಗರು ತಲೆದೂಗಿದರೆಂದರೆ ಕುರ್ ಕುರ್ ಮಾವನಿಗೆ ಅದೆಂತಹ ಸಂಭ್ರಮ. ಮುಂದೆ ಆ ಮನೆಯಲ್ಲಿ ಘಟಿಸಲಿರುವ ಶುಭದ ಮುನ್ಸೂಚನೆಯನ್ನು ನೀಡಿ ತನ್ನ ಕಣಿ ಹೇಳುವ ಕಾರ್ಯಕ್ಕೆ ವಿರಾಮ ನೀಡುವನು. ತನ್ನ ಮಾತಿನ ಮೋಡಿ ಕಳೆದುಹೋಗುವ ಮುನ್ನ ಸುತ್ತೆಲ್ಲ ಕಣ್ಣಾಡಿಸಿ ಕಣ್ಣಿಗೆ ಬೀಳುವ ಸಣ್ಣ ಪುಟ್ಟ ವಸ್ತುಗಳನ್ನು ಇನಾಮಾಗಿ ಕೇಳುವನು. ಅವನಲ್ಲಿ ಕಣಿಕೇಳುವುದೆಂದರೆ ನೀಲಿಯ ಅಪ್ಪನಿಗೆ ಅದೆಂಥದ್ದೋ ಖುಶಿ. ಇಂದು ಬಂದ ಕುರ್ ಮಾವನಲ್ಲಿ ಕಣಿ ಕೇಳಿದಾಗ ನಿಮ್ಮ ಮನೆದೀಪವಾದ ಮಗಳಿಗೆ ನೀರಿನಿಂದ ಚೂರು ಅವಘಡವಿದೆಯೆಂದು ತಿಳಿಸಿ ಅದರ ಪರಿಹಾರಕ್ಕಾಗಿ ಅಲ್ಲಿಯೇ ಬಳ್ಳಿಯಲ್ಲಿ ನೇತುಬಿದ್ದಿದ್ದ ನೀಲಿಯ ಅಂಗಿಯನ್ನು ಕೇಳಿದ್ದ. ಅವನ ಮಾತಿನ ಮೋಡಿಯಲ್ಲಿ ಸಿಲುಕಿದ್ದ ಅಪ್ಪ ಹಿಂದೆ ಮುಂದೆ ನೋಡದೇ ಅಂಗಿಯನ್ನು ಅವನಿಗೆ ಕೊಟ್ಟಿದ್ದ. ಅಡುಗೆ ಮನೆಯಿಂದಲೇ ಇದೆಲ್ಲವನ್ನು ಗಮನಿಸುತ್ತಿದ್ದ ಅಮ್ಮ ದಿನದಂತೆಯೇ ಕುರ್ ಮಾವನಿಗೆ ಚಾ ಅವಲಕ್ಕಿ ತಂದಿಡುವ ಹೊತ್ತಿಗಾಗಲೇ ನೀಲಿಯ ಅಂಗಿ ಅವನ ಜೋಳಿಗೆ ಸೇರಿಯಾಗಿತ್ತು.

ಹೊಳೆಸಾಲಿನಲ್ಲಿ ಎಲ್ಲರಿಗೂ ಇರುವುದು ಒಂದು ಶಾಲೆಯ ಅಂಗಿ, ಇನ್ನೊಂದು ಮನೆಯ ಅಂಗಿ ಹಾಗೂ ಪೆಟ್ಟಿಗೆಯಲ್ಲೊಂದು ಹೊಸಅಂಗಿ ಮಾತ್ರವೇ ಆಗಿದ್ದರಿಂದ ನೀಲಿಗೀಗ ಒಂದು ಅಂಗಿಯ ಕೊರತೆಯಾಗಿತ್ತು. ಅಷ್ಟಾದರೂ ಆ ಕುರ್ ಕುರ್ ಮಾವ ಬರುವ ಹೊತ್ತಿಗೆ ತಾನೂ ಮನೆಯಲ್ಲಿದ್ದರೆ ಎಷ್ಟು ಚಂದವಿತ್ತು ಎಂಬ ಆಸೆಯೂ ಅವಳಲ್ಲಿ ಬಂದುಹೋಯಿತು. ಹೊಳೆಸಾಲಿನಲ್ಲಿ ಹೊಸ ಮುಖಗಳು ಕಾಣುವುದೇ ಅಪರೂಪವಾದ್ದರಿಂದ ಯಾರಾದರೂ ಬಂದರೆಂದರೆ ಮಕ್ಕಳಿಗಂತೂ ಖುಶಿಯೋ ಖುಶಿ. ಹೀಗೆ ವರ್ಷದಲ್ಲಿ ಒಮ್ಮೆ ಬರುವವರೆಂದರೆ ಕರಡಿಯನ್ನಾಡಿಸುವವರು ಮತ್ತು ಬಸವನಾಡಿಸುವವರು. ಮೂಗಿಗೆ ದಾರ ಹಾಕಿದ ಕರಡಿಯನ್ನು ನಡೆಸಿಕೊಂಡು ಬರುವವರು ಮನೆಯವರು ಒಂದಿಷ್ಟು ಧಾನ್ಯ ನೀಡುವ ಭರವಸೆ ಕೊಟ್ಟರೆ ಅದರ ಆಟವನ್ನು ಆಡಿಸಿ ತೋರಿಸುತ್ತಿದ್ದರು. ಮುಂಗಾಲನ್ನೆತ್ತಿ ಮನೆಯ ಯಜಮಾನನಿಗೆ ವಂದಿಸುವುದು, ಎರಡು ಕಾಲುಗಳಲ್ಲಿ ನಡೆಯುವುದು, ಮುಸಿ, ಮುಸಿ ಎನ್ನುತ್ತಾ ನಾಚಿಕೊಳ್ಳುವುದು ಮೊದಲಾದ ಕ್ರಿಯೆಗಳನ್ನು ಕರಡಿ ಮಾಡಿ ತೋರಿಸುವಾಗ ಮಕ್ಕಳೆಲ್ಲ ಸುತ್ತ ನಿಂತು ನೋಡಿ ಸಂಭ್ರಮಿಸುತ್ತಿದ್ದರು. ಅವರಲ್ಲಿ ಯಾರಾದರೂ ಕತ್ತಲೆಗೆ ಹೆದರುವ ಪುಕ್ಕಲುಗಳಿದ್ದರೆ ಕರಡಿಯ ರೋಮವೊಂದನ್ನು ಕೇಳಿ ಪಡೆದು ಅವರ ಕೊರಳಿನ ಸರಕ್ಕೆ ಕಟ್ಟುತ್ತಿದ್ದರು.

ಕರಡಿ ಜಾಂಬವಂತನ ವಂಶಜನಾದ್ದರಿಂದ ಅದರ ರೋಮ ರೋಮಗಳಲ್ಲಿ ಭೀಮಶಕ್ತಿಯಿದೆಯೆಂದು ಅವರೆಲ್ಲರೂ ನಂಬಿದ್ದರು. ಕರಡಿಗೆ ತಿನ್ನಲು ಹಲಸಿನ ಹಣ್ಣುಗಳನ್ನು ನೀಡುತ್ತಿದ್ದರು. ಕರಡಿಯದು ಒಂಟಿ ಕುಣಿತವಾದರೆ ಬಸವನಾಟದ ಗಮ್ಮತ್ತೇ ಬೇರೆ. ಮೈತುಂಬಿಕೊಂಡಿರುವ ಗೂಳಿ ಬಸವನನ್ನು ರಾಮನೆಂದು ಕರೆದರೆ ಅದರೊಟ್ಟಿಗೆ ಬರುವ ಸಪೂರ ದನವನ್ನು ಸೀತೆಯೆಂದು ಕರೆಯುತ್ತಿದ್ದರು. ಸುತ್ತ ನಾಲ್ಕಾರು ಮನೆಗಳಿರುವ ದೊಡ್ಡ ಅಂಗಳದಲ್ಲಿ ರಾಮ ಸೀತೆಯರ ಕಲ್ಯಾಣ ಮಹೋತ್ಸವವನ್ನು ವಾಲಗದೊಂದಿಗೆ ಅವರು ನೆರವೇರಿಸುತ್ತಿದ್ದರು. ಮೊದಲು ಬಸವ ರಾಮ ಹೆಣ್ಣು ನೋಡಲು ಸೀತೆಯ ಮನೆಗೆ ಬರುತ್ತಾನೆ. ಸೀತೆಯನ್ನು ನೋಡಿ ತಲೆಯಲ್ಲಾಡಿಸುವುದರ ಮೂಲಕ ಮದುವೆಗೆ ಒಪ್ಪಿಗೆಯನ್ನು ನೀಡುತ್ತಾನೆ. ಆಗ ಸೀತೆ ದನವನ್ನಾಡಿಸುವವಳು ಬಸವನಾಡಿಸುವವನನ್ನು ಛೇಡಿಸುತ್ತಾಳೆ. “ಏನ್ ನಿನ್ನ ರಾಮ ಒಪ್ಪಿದ ಕೂಡಲೇ ಸೀತೆನ ಕೊಡೋಕ್ಕಾಗತ್ತಾ? ನಮ್ಮುಡುಗಿಯನ್ನೂ ಒಂದು ಮಾತು ಕೇಳಬೇಕು” ಎನ್ನುತ್ತಾ ಸೀತೆಯ ಒಪ್ಪಿಗೆಯನ್ನು ಕೇಳುತ್ತಾಳೆ. ಸೀತೆ ದನ ನಾಚುತ್ತಾ ತನಗೆ ಮದುವೆ ಬೇಡವೆನ್ನುವಂತೆ ತಲೆಯನ್ನು ಅಲ್ಲಾಡಿಸುತ್ತದೆ. ಆಗವಳು, “ನಿಮ್ ರಾಮಂಗೆ ವಯಸ್ಸಾಗಯ್ತೆ. ನಮ್ ಸೀತೆ ಮದುವೆಯಾಗಲ್ಲ ಅಂತವ್ಳೆ” ಅಂತ ತಗಾದೆ ತೆಗೆಯುತ್ತಾಳೆ. ರಾಮನೆಂಬ ಬಸವನಿಗೆ ಕೋಪ ಬಂದು ದೂರ ಹೋಗಿ ಮುಖ ತಿರುಗಿಸಿ ನಿಲ್ಲುತ್ತಾನೆ. ಬಸವನಾಡಿಸುವವನು ವಧುವಿನ ಎದುರು ರಾಮನ ಗುಣಗಾನ ಮಾಡಿ ಅವಳನ್ನು ಮದುವೆಗೆ ಒಪ್ಪಿಸುತ್ತಾನೆ. ಸೀತೆ ರಾಮನ ಸುತ್ತ ಮೂರು ಸುತ್ತು ತಿರುಗಿ ಅವನೊಡನೆ ಬಂದು ನಿಲ್ಲುತ್ತಾಳೆ. ಸೀತೆ ರಾಮರ ಕಲ್ಯಾಣವನ್ನು ಇಬ್ಬರೂ ತಮ್ಮ ವಾದ್ಯಗಳನ್ನು ಊದುವುದರ ಮೂಲಕ ಸಂಪನ್ನಗೊಳಿಸುತ್ತಾರೆ. ಸುತ್ತ ನಿಂತವರೆಲ್ಲ ರಾಮ ಸೀತೆಯರಿಗೆ ತಮ್ಮ ಮನೆಯಲ್ಲಿರುವ ಹಳೆಯ ಸೀರೆ, ಪಂಚೆಗಳ ಉಡುಗೊರೆಯನ್ನು ನೀಡುವುದಲ್ಲದೇ ಮೆಚ್ಚುಗೆಯ ಚಪ್ಪಾಳೆಯನ್ನು ತಟ್ಟುತ್ತಾರೆ. ರಾಮ ಸೀತೆಯರಿಗೆ ತಿನ್ನಲು ಸಿಹಿಯಾದ ಬೆಲ್ಲ ಮತ್ತು ಅಕ್ಕಿಯನ್ನು ಮೊರದಲ್ಲಿಟ್ಟು ಕೊಡುತ್ತಾರೆ. ಅದರಲ್ಲಿ ಸ್ವಲ್ಪವನ್ನು ಬಸವನಾಟದವರು ತಮ್ಮ ಜೋಳಿಗೆಗೆ ಸೇರಿಸುತ್ತಾರೆ. ತೆಂಗಿನಕಾಯಿಯನ್ನೋ, ಧವಸ ಧಾನ್ಯಗಳನ್ನೋ ಇನಾಮಾಗಿ ಪಡೆದು ಮುಂದಿನ ಕೇರಿಗೆ ಸಾಗುತ್ತಾರೆ.

ಕೆಲವೊಮ್ಮೆ ದೊಡ್ಡ ಬಸವನನ್ನು ಒಂಟಿಯಾಗಿ ಆಡಿಸಲು ತರುವುದೂ ಉಂಟು. ಆಗೆಲ್ಲ ಆ ಬಸವನನ್ನು ತಮ್ಮ ಮೈಮೇಲೆ ನಿಲ್ಲಿಸಿ ತೋರಿಸುವ ಸಾಹಸವನ್ನು ಬಸವನಾಟದವರು ಪ್ರದರ್ಶಿಸುತ್ತಾರೆ. ಅವರು ಊದುವ ವಾದ್ಯದ ರಾಗಕ್ಕೆ ತಕ್ಕಂತೆ ಮೊದಲು ಬಸವ ಮಲಗಿರುವ ಅವರ ತೊಡೆಗಳ ಮೇಲೆ ತನ್ನ ಮುಂಗಾಲುಗಳನ್ನಿಟ್ಟು ನಿಲ್ಲುತ್ತದೆ. ನಂತರ ನಿಧಾನವಾಗಿ ತನ್ನ ಮುಂದಿನ ಕಾಲುಗಳನ್ನು ಎದೆಯ ಮೇಲಿಟ್ಟು ತೊಡೆಗಳ ಮೇಲೆ ಹಿಂಗಾಲುಗಳನ್ನಿಟ್ಟು ಇಡಿಯಾಗಿ ಬಸವನಾಡಿಸುವವನ ಮೈಯ್ಯೇರಿ ನಿಲ್ಲುತ್ತದೆ. ಜನರೆಲ್ಲ ನಿಬ್ಬೆರಗಾಗಿ ಈ ಸಾಹಸವನ್ನು ಕಣ್ತುಂಬಿಕೊಳ್ಳುತ್ತಾರೆ.

ಹೊಳೆಸಾಲಿಗೆ ಅಪರೂಪಕ್ಕೊಮ್ಮೆ ಬಾವಾಜಿಗಳೆಂಬ ಕಾಷಾಯ ವಸ್ತ್ರಧಾರಿಗಳು ಬರುವುದುಂಟು. ಮುಖದಲ್ಲಿ ಇಳಿಬಿಟ್ಟ ಬಿಳಿಯ ಗಡ್ಡ, ಬಗಲಲ್ಲೊಂದು ಜೋಳಿಗೆ, ಮೈತುಂಬ ಕೇಸರಿಯ ಬಟ್ಟೆ ಧರಿಸಿ ಬರುವ ಇವರು ಮಾತನಾಡುವುದೇ ಕಡಿಮೆ. ಸುಮ್ಮನೆ ಮನೆಯ ಮುಂದೆ ನಿಂತು ಅಮ್ಮಾ ಎಂದು ಕರೆಯುತ್ತಾರಷ್ಟೆ. ಮನೆಯೊಡತಿ ನೀಡುವ ರೂಪಾಯಿಯನ್ನೋ, ಅಕ್ಕಿ ಮೊದಲಾದ ಧಾನ್ಯವನ್ನೋ ಮರುಮಾತನಾಡದೇ ತೆಗೆದುಕೊಂಡು ಮುಂದಕ್ಕೆ ಹೋಗುತ್ತಾರೆ. ಮಿತಭಾಷಿಗಳಾದ ಇವರನ್ನು ಗುಮ್ಮನೆನ್ನುವಂತೆ ಸಣ್ಣ ಮಕ್ಕಳಿಗೆ ಬಿಂಬಿಸುವುದು ಹೊಳೆಸಾಲಿನ ಅಮ್ಮಂದಿರ ಚಾಳಿ. ಊಟ ಮಾಡಲು, ನಿದ್ದೆ ಮಾಡಲು ಹಠ ಮಾಡುವ ಮಕ್ಕಳಿಗೆಲ್ಲ ಬಾವಾಜಿಯ ಹೆಸರನ್ನು ಹೇಳಿ ಅವರಿಗೇ ನಿನ್ನನ್ನು ಕೊಟ್ಟುಬಿಡುವೆನೆಂದು ಹೆದರಿಸಿ ತಮ್ಮ ಕೆಲಸ ಸಾಧಿಸಿಕೊಳ್ಳುವುದು ಎಲ್ಲ ತಾಯಂದಿರ ಹುನ್ನಾರ. ತಂಬೂರಿ ಮೀಟುತ್ತಾ ಬರುವ ಭಜನೆಯವರನ್ನು ಕಂಡರೆ ಹೊಳೆಸಾಲಿನ ಹುಡುಗಿಯರಿಗೆ ಇನ್ನಿಲ್ಲದ ಅಕ್ಕರೆ. ಅವರನ್ನು ಮನೆಯೊಳಗೆ ಕರೆದು ಕೂಡಿಸಿ ಅವರಿಂದ ಹೊಸ, ಹೊಸ ಭಜನೆಗಳನ್ನು ಹಾಡಿಸಿ, ಅದನ್ನು ಪಟ್ಟಿಯಲ್ಲಿ ಬರೆದುಕೊಂಡು ಕಳಿಸುವುದು ಅವರ ರೂಢಿ. ಹೊಳೆಸಾಲಿನ ಹೆಂಗಳೆಯರಿಗೆ ಹೊಸದೊಂದು ಹಾಡು ಸಿಗಬೇಕೆಂದರೆ ಹೊರ ಊರಿನಿಂದ ಬಂದ ಭಜನೆಯವರೇ ಬರಬೇಕು. ಅವರಿಂದ ಕಲಿತ ಜಾನಪದ ಹಾಡುಗಳನ್ನು ಹೊಳೆಸಾಲಿನ ಹೆಂಗಸರು ಗದ್ದೆಯ ಕೆಲಸ ಮಾಡುವಾಗ ದಣಿವು ಮರೆಯಲು ಹಾಡುವರು.

ಇವರೆಲ್ಲರ ಬರವು ನೀಲಿಗೆ ಬಹಳ ಖುಶಿಯ ಸಂಗತಿಯಾದರೆ ಇನ್ನು ಕೆಲವರು ಬಂದಾಗಲೆಲ್ಲ ನೀಲಿಯ ಕಣ್ಣುಗಳು ತುಂಬಿ ಬರುತ್ತವೆ. ಸಣ್ಣ ಮಗುವೊಂದನ್ನು ಬಟ್ಟೆಯಲ್ಲಿ ಸುತ್ತಿ ಸೊಂಟಕ್ಕೆ ಕಟ್ಟಿಕೊಂಡು ಕೈಯ್ಯಲ್ಲೊಂದು ಹಳೆಯ ಅಲ್ಯುಮಿನಿಯಂ ಪಾತ್ರೆಯನ್ನು ಹಿಡಿದುಕೊಂಡು ಭಿಕ್ಷೆ ಬೇಡಲು ಬರುವ ಹೆಂಗಸರನ್ನು ಕಂಡಾಗಲೆಲ್ಲ ನೀಲಿಗೆ ದುಃಖವಾಗುತ್ತದೆ. ಅವರು ಬಂದು ಹೋದ ಎಷ್ಟೋ ಹೊತ್ತಿನವರೆಗೂ ಅಮ್ಮನಲ್ಲಿ ಅವರ ಬಗೆಗೆ ಕೇಳುತ್ತಲೇ ಇರುತ್ತಾರೆ. ಅವರ‍್ಯಾಕೆ ಹಾಗೆ ಮನೆ ಮನೆಯ ಬಾಗಿಲಿಗೆ ಅಲೆಯುತ್ತಾರೆ? ಆ ಪುಟ್ಟ ಮಗುವಿಗೆ ಕೆಲಸ ಮಾಡಿ ಸಾಕುವ ಅಪ್ಪನೆಂಬುವವನು ಯಾಕಿಲ್ಲ? ಮನೆ ಮನೆಯ ಬಾಗಿಲಿಗೆ ಬರುವ ಆ ಹೆಂಗಸು ನಮ್ಮೂರ ನಾಗಿಯಂತೆ ಯಾಕೆ ಕೆಲಸ ಮಾಡಿ ಜೀವಿಸುವುದಿಲ್ಲ? ಅವರೆಲ್ಲ ರಾತ್ರಿಯಾದರೆ ಎಲ್ಲಿ ಮಲಗುತ್ತಾರೆ? ಅವರಿಗೆಲ್ಲ ಮನೆಯೆಂಬುದು ಯಾಕಿಲ್ಲ? ಅವರೆಲ್ಲ ಎಲ್ಲಿ ಅಡುಗೆ ಮಾಡಿಕೊಳ್ಳುತ್ತಾರೆ? ನೀಲಿಯ ಪ್ರಶ್ನೆಗಳ ಬಾಣಕ್ಕೆ ನಲುಗಿ ಹೋಗುವ ಅಮ್ಮ ಕೊನೆಗೊಮ್ಮೆ ಅವಳ ಮೇಲೆ ರೇಗುತ್ತಾಳೆ, “ನಾಳೆ ಒಂದ್ಕೆಲ್ಸ ಮಾಡು ಮಾರಾಯ್ತಿ. ಅವಳು ಬಂದಾಗ ಅವಳ ಹಿಂದೇನೇ ಹೋಗಿ ಎಲ್ಲ ಕೇಳಿ ತಿಳ್ಕೊಂಡು ಬಾ. ಈ ಜಗತ್ತಿನಲ್ಲಿ ಸಾವಿರ ಜನರಿಗೆ ಸಾವಿರ ಸಮಸ್ಯೆಗಳಿರ್ತಾವಪ್ಪ. ಅದೆಲ್ಲ ಹೇಗೆ? ಯಾಕೆ? ಏನು? ಅಂತೆಲ್ಲ ಯೋಚಿಸ್ತಾ ಕೂತ್ರೆ ನಮ್ಮ ತಲೆ ಕೆಟ್ಟುಹೋಗತ್ತೆ ಅಷ್ಟೆ.” ಅಮ್ಮ ರೇಗಿದ ಮೇಲೂ ನೀಲಿ ಯೋಚಿಸುವುದುಂಟು, ತಾನು ದೊಡ್ಡವಳಾದ ಮೇಲೆ ಕಡೇ ಪಕ್ಷ ಆ ಹೆಂಗಸಿನ ಸೊಂಟದಲ್ಲಿರುವ ಕೂಸಿಗಾದರೂ ಒಂದು ಮನೆಯನ್ನು ಕಟ್ಟಿ, ಅಲ್ಲಿ ಹಾಗಿರುವ ಮಕ್ಕಳನ್ನೆಲ್ಲ ಒಟ್ಟಿಗೆ ಬೆಳೆಸಬೇಕು ಎಂದು.

ಹೊಳೆಸಾಲಿನಲ್ಲಿರುವ ಹರೆಯದ ಹೆಣ್ಣು ಮಕ್ಕಳೆಲ್ಲ ವರ್ಷವಿಡೀ ಕಾಯುವ ಸಂಗತಿಯೆಂದರೆ ಹೊಳೆಸಾಲಿನ ಹತ್ತಿರದ ಊರುಗಳಲ್ಲಿ ಬಿಡಾರ ಹೂಡುವ ನಾಟಕ ಕಂಪನಿಯವರ ಆಗಮನ. ಊರ ಹೊರಗಿರುವ ಬಯಲಿನಲ್ಲಿ ನೋಡುತ್ತಿರುವಂತೆಯೇ ಒಂದು ಟೆಂಟನ್ನು ನಿರ್ಮಿಸಿಬಿಡುವ ನಾಟಕ ಕಂಪನಿಯವರು ತಾವು ಪ್ರದರ್ಶಿಸುವ ನಾಟಕದ ವಿವರಗಳನ್ನು ಒಳಗೊಂಡ ಕರಪತ್ರಗಳನ್ನು ಹಿಡಿದು ಹೊಳೆಸಾಲಿನವರೆಗೂ ಬರುತ್ತಾರೆ. ಅಗಲವಾದ ಕೊಳವೆಯಂತಹ ಮೈಕ್‌ನ್ನು ಬಾಯಿಗಿಟ್ಟು ತಮ್ಮ ಪ್ರದರ್ಶನದ ವಿವರಗಳನ್ನು ಕೂಗಿ ಹೇಳುತ್ತಾರೆ. ಅವರು ಎಸೆಯುತ್ತಾ ಸಾಗುವ ಕರಪತ್ರಗಳನ್ನು ಹೆಕ್ಕಿಕೊಳ್ಳಲು ಅವರು ನಡೆವ ದಾರಿಗುಂಟ ಮಕ್ಕಳು ಸವಾರಿ ಹೊರಡುತ್ತಾರೆ. ಮಕ್ಕಳು ಹೆಕ್ಕಿತಂದ ಕರಪತ್ರಗಳನ್ನು ಆಸ್ಥೆಯಿಂದ ಓದುವ ತರುಣಿಯರು ನಾಟಕ ನೋಡುವ ಕನಸು ಕಾಣತೊಡಗುತ್ತಾರೆ. ಮೊದಲು ಯಾರೆಲ್ಲ ಹೋಗುವವರೆಂದು ಪಟ್ಟಿಯಾಗಬೇಕು, ನಾಟಕದ ಟಿಕೇಟಿಗೆ ಹಣದ ಹೊಂದಿಕೆಯಾಗಬೇಕು, ಹುಡುಗಿಯರ ರಕ್ಷಣೆಗೆ ಒಬ್ಬಿಬ್ಬರಾದರೂ ಹುಡುಗರನ್ನು ಜತೆಮಾಡಿಕೊಳ್ಳಬೇಕು, ಮುಸ್ಸಂಜೆಗೆ ಪ್ರಾರಂಭವಾಗುವ ನಾಟಕ ಮುಗಿಯುವಾಗ ರಾತ್ರಿಯಾಗುವುದರಿಂದ ಅಲ್ಲಿಂದ ನಡೆದು ಬರಲು ಬೆಳಕಿನ ವ್ಯವಸ್ಥೆಯಾಗಬೇಕು, ಎಲ್ಲಕ್ಕಿಂತ ಮುಖ್ಯವೆಂದರೆ ನಾಟಕ ನೋಡಲು ಮನೆಯ ಹಿರಿಯರ ಅನುಮತಿ ದೊರೆಯಬೇಕು. ಇವೆಲ್ಲವು ಅಣಿಯಾದ ದಿನ ಊರ ಹುಡುಗಿಯರಿಗೆ ಹಬ್ಬ. ತೋಟದ ತುಂಬೆಲ್ಲ ಅಲೆದು ಅಬ್ಬಲಿಗೆ ಹೂವನ್ನಾಯ್ದು ಕಟ್ಟುವ ಸಂಭ್ರಮವೇನು? ನಾಟಕ ನೋಡುವಾಗ ತಿನ್ನಲೆಂದು ಶೇಂಗಾ ಹುರಿಯುವ ಸಡಗರವೇನು? ಅತ್ತರಿನೆಣ್ಣೆಯನ್ನು ಪೂಸಿ ತಲೆಬಾಚುವ ಸಂಭ್ರಮವೇನು? ಮರಳಿಬರುವಾಗ ದಾರಿಬೆಳಕಿಗೆಂದು ತೆಂಗಿನ ಗರಿಗಳನ್ನು ಒಟ್ಟುಗೂಡಿಸಿ ಸೂಡಿ ಮಾಡುವ ಗಡಿಬಿಡಿಯೇನು? ಅಂದು ಇಡಿಯ ಹೊಳೆಸಾಲೇ ಒಂದು ನಾಟಕದಂತೆಯೇ ಚಲನಶೀಲವಾಗಿಬಿಡುವುದು. ಚನ್ನಪ್ಪ ಚನ್ನೇಗೌಡ, ಅತ್ತೆಗೆ ತಕ್ಕ ಸೊಸೆ, ಬಂಗಾರವಾದ ಬಾಳು, ನೀ ಕಳ್ಳ- ನಾ ಸುಳ್ಳ….. ಹೀಗೆ ಥರಾವರಿ ಹೆಸರಿನ ನಾಟಕಗಳನ್ನು ಹೊಳೆಸಾಲಿನ ಮಂದಿ ನೋಡಿ ಆನಂದಿಸಿದ್ದಾರೆ.

ಊರ ಗಂಡು ಪಿಳ್ಳೆಗಳಿಗೆಲ್ಲ ಈ ನಾಟಕಗಳೆಂದರೆ ಅಷ್ಟಕಷ್ಟೆ. ಹಣ ಕೊಟ್ಟು ಅಷ್ಟು ದೂರ ಹೋಗಿ ಗೋಳೋ ಎಂದು ಅಳುವ ಗೋಳನ್ನು ಯಾಕಾದರೂ ನೋಡಬೇಕು ಎಂಬುದು ಅವರ ತಗಾದೆ. ಅದರ ಬದಲು ಊರ ಹೊರಗಿನ ಮೈದಾನದಲ್ಲಿ ಎಲ್ಲೋ ಐದು ವರ್ಷಗಳಿಗೊಮ್ಮೆ ಬರುವ ಸೈಕಲ್ ಸವಾರಿಯೆಂದರೆ ಅವರಿಗೆ ಬಲುಮೆಚ್ಚು. ಒಬ್ಬನೇ ಒಬ್ಬ ವ್ಯಕ್ತಿ, ಒಂದು ಒಂಟಿ ಚಕ್ರದ ಸೈಕಲ್ ಇಷ್ಟರಲ್ಲಿಯೇ ಸೃಷ್ಟಿಯಾಗುವ ಅದ್ಭುತಗಳ ಸರಣಿಗೆ ಅವರು ಮಾರುಹೋಗುತ್ತಾರೆ. ಸುತ್ತ ನಿಂತು ನೋಡುವ ಜನರನ್ನು ಇಡೀ ಎರಡು ತಾಸು ತನ್ನ ಸೈಕಲ್ ಸವಾರಿಯ ಚಾತುರ್ಯದಿಂದ ಹಿಡಿದಿಡುವ ಆ ವ್ಯಕ್ತಿ ಅವರ ಪಾಲಿನ ಅಪೂರ್ವ ಹೀರೋ. ಸೈಕಲ್ ಸವಾರನು ಪ್ರದರ್ಶಿಸುವ ಗಿಮಿಕ್‌ಗಳನ್ನೆಲ್ಲ ತಾವೂ ಪ್ರಯತ್ನಿಸಲು ಹೋಗಿ ಕೈಕಾಲು ಮುರಿದುಕೊಳ್ಳುವ ಸಾಹಸವನ್ನು ಹೊಳೆಸಾಲಿನ ಗಂಡುಗಳು ವರ್ಷವಿಡೀ ಮಾಡುತ್ತಲೇ ಇರುವುದು ಅಲ್ಲಿನ ಮಾಮೂಲು ಸಂಗತಿಯಾಗಿಹೋಗಿತ್ತು.


ಪ್ರಚಾರಕ್ಕೋ, ಪ್ರದರ್ಶನಕ್ಕೋ, ಜೀವನೋಪಾಯಕ್ಕೋ ಹೊಳೆಸಾಲಿನ ಹೊಳೆದಾಟಿ ಒಳಬರುವ ಇವರೆಲ್ಲರಿಗೂ ಆ ದಿನದ ಊಟವನ್ನು ಹೊಳೆಸಾಲಿನ ಜನರು ನೀಡದೇ ಕಳಿಸುತ್ತಿರಲಿಲ್ಲ. ಹೊಳೆಸಾಲಿನ ಹೊಳೆ ಮಾತ್ರ ಅಪರೂಪಕ್ಕೆ ಬರುವ ಇಂಥವರ ಕಾಲನ್ನು ಚೂರೇ ಚೂರು ಎಳೆದು ಅವರು ತಡವರಿಸಿ ಗಾಬರಿಗೊಂಡಾಗ ಕಿಸಕ್ಕನೆ ನಕ್ಕು ಸಣ್ಣಗೆ ಮಜಾ ಪಡೆಯುವುದನ್ನು ಯಾರೂ ಗಮನಿಸುತ್ತಿರಲಿಲ್ಲ.