ನನ್ನಂತೆಯೇ ಹಲವರಿದ್ದಾರೆ, ಈಗಲೂ ಅವರಿಗೆ ನಾಯಿಗಳ ಬಗ್ಗೆ ಹೆಚ್ಚಿನದ್ದೇನೂ ಗೊತ್ತಿಲ್ಲ ಎಂಬ ಕಾರಣಕ್ಕಾಗಿಯೇ ಕೂರಾಪುರಾಣ ಶುರು ಮಾಡಿದ್ದು. ಥಿಯರಿ ಓದಿದರೆ ಪ್ರಾಕ್ಟಿಕಲ್ ಮಾಡಲು ಸ್ವಲ್ಪ ಧೈರ್ಯ ಹುಟ್ಟಬಹುದು ಎಂಬ ಕಾರಣಕ್ಕೆ. ಯಾಕೆಂದರೆ ನಾಯಿಗಳೊಡನೆ ಹುಟ್ಟಿಕೊಳ್ಳುವ ನಂಟು, ಅವುಗಳ ಸ್ನೇಹಕ್ಕೆ ಭಾಜನರಾಗುವ ಯೋಗ್ಯತೆ, ಮುಗ್ಧ ಪ್ರೀತಿಯನ್ನು ಅನುಭವಿಸುವ ಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂಬುದೇ ನನ್ನ ಆಸೆ. ಇಲ್ಲದೇ ಹೋದಲ್ಲಿ ಜೀವನದಲ್ಲಿ ಬಹುಮುಖ್ಯವಾಗಿರುವುದನ್ನು ಕಳೆದುಕೊಳ್ಳುತ್ತೀರಿ ಎಂದೇ ವಾದಿಸುವೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಏಳನೆಯ ಕಂತು

ಮನುಷ್ಯರ ಹಾಗೆ ನಾಯಿಗಳಲ್ಲಿಯು ಅನೇಕ ಜಾತಿಗಳಿರುತ್ತವೆ ಮತ್ತು ನಾಯಿಗಳ ಗುಣ, ಸ್ವಭಾವ, ವರ್ತನೆ, ಹಟ ಇತ್ಯಾದಿಗಳು ಅವುಗಳ ಜಾತಿಯ ಮೇಲೆ ಅವಲಂಬಿತವಾಗಿರುತ್ತವೆ ಎಂದು ನನಗೆ ಗೊತ್ತಾಗಿದ್ದು ಕೂರಾ ಮನೆಗೆ ಬಂದ ಮೇಲೆಯೇ. ಅಲ್ಲಿಯವರೆಗೆ ನನ್ನ ಪಾಲಿಗೆ ನಾಯಿಗಳೆಲ್ಲ ಒಂದೇ ಜಾತಿ. ಪ್ರತಿಯೊಂದು ವಿಷಯವೂ ಅಷ್ಟೇ. ನಮಗೆ ಅದರ ಬಗ್ಗೆ ತಿಳಿಯದೇ ಇದ್ದಾಗ ಅದರಲ್ಲೇನಿದೆ ಎಂಬ ಅಸಡ್ಡೆಯಲ್ಲಿ ನೋಡುವ ನಮಗೆ ಅದರಲ್ಲೂ ಅನೇಕ ಸಂಗತಿಗಳಿವೆ, ಒಂದು ಸಣ್ಣ ಜಗತ್ತು ಅದರೊಳಗೆ ಅಡಗಿದೆ ಎಂದು ಅರಿವಾಗುವುದು ಆ ಜಗತ್ತಿನ ಸಂಪರ್ಕಕ್ಕೆ ಬಂದಾಗಲೇ. ನಾಯಿಯೆಂದರೆ ದೂರ ಓಡುತ್ತಿದ್ದ ನನಗೆ ಇದೆಲ್ಲ ಗೊತ್ತಿರಲಿಕ್ಕೆ ಸಾಧ್ಯವೂ ಇರಲಿಲ್ಲ. ನನ್ನಂತೆಯೇ ಹಲವರಿದ್ದಾರೆ, ಈಗಲೂ ಅವರಿಗೆ ನಾಯಿಗಳ ಬಗ್ಗೆ ಹೆಚ್ಚಿನದ್ದೇನೂ ಗೊತ್ತಿಲ್ಲ ಎಂಬ ಕಾರಣಕ್ಕಾಗಿಯೇ ಕೂರಾಪುರಾಣ ಶುರು ಮಾಡಿದ್ದು. ಥಿಯರಿ ಓದಿದರೆ ಪ್ರಾಕ್ಟಿಕಲ್ ಮಾಡಲು ಸ್ವಲ್ಪ ಧೈರ್ಯ ಹುಟ್ಟಬಹುದು ಎಂಬ ಕಾರಣಕ್ಕೆ. ಯಾಕೆಂದರೆ ನಾಯಿಗಳೊಡನೆ ಹುಟ್ಟಿಕೊಳ್ಳುವ ನಂಟು, ಅವುಗಳ ಸ್ನೇಹಕ್ಕೆ ಭಾಜನರಾಗುವ ಯೋಗ್ಯತೆ, ಮುಗ್ಧ ಪ್ರೀತಿಯನ್ನು ಅನುಭವಿಸುವ ಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂಬುದೇ ನನ್ನ ಆಸೆ. ಇಲ್ಲದೇ ಹೋದಲ್ಲಿ ಜೀವನದಲ್ಲಿ ಬಹುಮುಖ್ಯವಾಗಿರುವುದನ್ನು ಕಳೆದುಕೊಳ್ಳುತ್ತೀರಿ ಎಂದೇ ವಾದಿಸುವೆ.

ನಾಯಿಗಳಲ್ಲಿ ತರಾವರಿ ತಳಿ (ಬ್ರೀಡ್)ಗಳಿರುತ್ತವೆ. ಪಟ್ಟಾಗಿ ಕೂತು ಜಗತ್ತಿನಲ್ಲಿರುವ ಎಲ್ಲ ಪ್ರಕಾರದ ತಳಿಗಳ ಲೆಕ್ಕ ಹಾಕಿದರೆ ಮೂನ್ನೂರ ನಲವತ್ತರ ಮೇಲೆಯೇ ಆಗುತ್ತದಂತೆ. ಅವುಗಳಲ್ಲಿ ಅಮೇರಿಕಾದಲ್ಲಿ ಪ್ರಸಿದ್ಧವಾಗಿರುವ ನಾಯಿ ತಳಿಗಳೆಂದರೆ ಲ್ಯಾಬ್ರಡಾರ್ ರಿಟ್ರೈವರ್ (ಸಾಮಾನ್ಯವಾಗಿ ಲ್ಯಾಬ್ ಎಂದು ಕರೆಯುತ್ತಾರೆ), ಫ್ರೆಂಚ್ ಬುಲ್ ಡಾಗ್, ಗೋಲ್ಡನ್ ರಿಟ್ರೈವರ್, ಜರ್ಮನ್ ಶೆಫರ್ಡ್, ಪೂಡಲ್, ಬೀಗಲ್, ರಾಟವೇಲರ್, ಸೈಬೇರಿಯನ್ ಹಸ್ಕೀ (ಹಸ್ಕೀ), ಆಸ್ಟ್ರೇಲಿಯನ್ ಶೇಫರ್ಡ್, ಶೀ ತ್ಛು, ಕೋರ್ಗಿ, ಡಾಲ್ಮೇಷನ್, ಪಗ್, ಚುವಾವಾ.. ಹೀಗೆ ದೊಡ್ಡ ಪಟ್ಟಿಯೇ ಇದೆ. ಪ್ರತಿ ನಾಯಿ ತಳಿಯು ತನ್ನದೇ ಆದ ವಿಶಿಷ್ಟ ಸ್ವಭಾವಗಳನ್ನು ಹೊಂದಿರುವುದರಿಂದ ಜನ ತಮ್ಮ ಇಷ್ಟಕ್ಕೆ ತಕ್ಕಂತೆ, ತಮ್ಮ ಮನೆತನಕ್ಕೆ ತಕ್ಕಂತೆ, ತಮಗೆ ಹೊಂದುವ ನಾಯಿಗಳನ್ನು ಸಾಕುತ್ತಾರೆ. ಉದಾಹರಣೆಗೆ; ಗೋಲ್ಡನ್ ರಿಟ್ರೈವರ್ ನಾಯಿಗಳು ಸ್ನೇಹಮಯಿ, ಬುದ್ಧಿವಂತ ಮತ್ತು ನಿಯತ್ತಿನ ಪ್ರಾಣಿಗಳು.

ಮಕ್ಕಳೊಂದಿಗೆ ಬಹಳ ಪ್ರೀತಿಯಿಂದ ವರ್ತಿಸುವ, ಮನೆಯವರೊಂದಿಗೆ ಹೊಂದಿಕೊಂಡು ಕುಟುಂಬದಲ್ಲಿ ಒಂದಾಗಿ ಬಿಡುವ ಈ ನಾಯಿಗಳನ್ನು ಮನೆ ತುಂಬ ಮಕ್ಕಳಿರುವ, ದೊಡ್ಡ ಕುಟುಂಬದ ಜನ ಸಾಕುತ್ತಾರೆ. ಅದೇ ಬುಲ್ ಡಾಗ್ ನಾಯಿಗಳು ತುಸು ಹಟಮಾರಿಗಳು. ಅವು ಸಹ ಮಕ್ಕಳೊಡನೆ ಚೆನ್ನಾಗಿ ಬೆರೆಯುತ್ತವಾದರು ಸುಲಭವಾಗಿ ಮಾತು ಕೇಳುವುದಿಲ್ಲ. ಅವುಗಳಿಗೆ ಸಾಕಷ್ಟು ಟ್ರೇನ್ ಮಾಡಬೇಕಾದ ಅವಶ್ಯಕತೆಯಿರುತ್ತದೆ. ಹಾಗಾಗಿ ಅವುಗಳೊಂದಿಗೆ ಬಹಳ ಸಮಯ ವಿನಿಯೋಗಿಸಬೇಕು. ಇನ್ನು ಲ್ಯಾಬ್ ನಾಯಿಗಳ ವಿಷಯಕ್ಕೆ ಬಂದರೆ ಕಣ್ಣಿನಲ್ಲಿಯೇ ಎಲ್ಲವನ್ನು ವ್ಯಕ್ತ ಪಡಿಸುವ ಈ ಪ್ರಾಣಿಗಳು ಮಕ್ಕಳನ್ನು ಬಹಳ ಪ್ರೀತಿಸುತ್ತವೆ. ತಮ್ಮನ್ನು ಸಾಕಿದವರೇ ಇರಲಿ, ಅಥವಾ ಹೊರಗಿನವರೇ ಇರಲಿ ಎಲ್ಲರನ್ನು ಬಹಳ ಸ್ನೇಹದಿಂದ ಕಂಡು ಹಚ್ಚಿಕೊಳ್ಳುತ್ತವೆ. ಹೀಗೆ ಒಂದೊಂದು ತಳಿಯು ಭಿನ್ನ. ದೊಡ್ಡ ನಾಯಿಗಳನ್ನು ಸಾಕುವುದು ಕಷ್ಟ ಎನ್ನುವವರು ಆಕಾರದಲ್ಲಿ ಸಣ್ಣಗಿರುವ ಚೂವಾವಾ, ಪಗ್ (ವೋಡಾಫೋನ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾಯಿ), ಪಾಮರೇನಿಯನ್, ಫ್ರೆಂಚ್ ಬುಲ್ ಡಾಗ್.. ಇಂತಹ ನಾಯಿಗಳನ್ನು ಸಾಕುತ್ತಾರೆ. ಇವುಗಳನ್ನು ಸಲೀಸಾಗಿ ಕೈಯ್ಯಲ್ಲಿ ಎತ್ತಿಕೊಂಡು ತಿರುಗಾಡಬಹುದು. ಇಂತಹ ಸಣ್ಣ ನಾಯಿಗಳನ್ನು ಸಾಕುವುದು ಸುಲಭ. ಕೆಲವು ವಿಮಾನಗಳಲ್ಲಿ ಇವುಗಳನ್ನು ಎತ್ತಿಕೊಂಡು ಮಡಿಲಲ್ಲಿ ಕೂರಿಸಿಕೊಂಡು ಪ್ರಯಾಣಿಸುವ ಸೌಲಭ್ಯವು ಇರುತ್ತದೆ. ಅದೇ ದೊಡ್ಡ ನಾಯಿಗಳಾದ ಗೋಲ್ಡನ್ ರಿಟ್ರೈವರ್, ಲ್ಯಾಬ್, ಹಸ್ಕೀ ಇತ್ಯಾದಿಗಳನ್ನು ಅಷ್ಟು ಸುಲಭವಾಗಿ ಎಲ್ಲ ಕಡೆಗೆ ಕರೆದುಕೊಂಡು ಹೋಗಲು ಆಗುವುದಿಲ್ಲ.

ಕೆಲವು ನಾಯಿಗಳಿಗೆ ನೀರೆಂದರೆ ಬಹಳ ಇಷ್ಟ. ಲ್ಯಾಬ್ ನಾಯಿಯನ್ನು ಕೆರೆ, ಬೀಚ್ ಇಂತಹ ನೀರಿರುವ ಸ್ಥಳಕ್ಕೆ ಕರೆದುಕೊಂಡು ಹೋದರೆ ಮುಗಿಯಿತು! ನೀರಿನಲ್ಲಿ ಈಜುತ್ತ ಮುಳುಗುತ್ತ ಮನೆಗೆ ಬರಲೊಲ್ಲೆ ಎಂದು ಹಟ ಮಾಡುತ್ತವೆ. ಇನ್ನು ಚೂವಾವಾನಂತಹ ನಾಯಿಗಳು ನೀರನ್ನು ಕಂಡರೆ ಓಡಿ ಹೋಗುತ್ತವೆ. ಬುಲ್ ಡಾಗ್, ರಾಟವೇಲರ್ ಇಂತಹ ನಾಯಿಗಳಿಗೆ ವಿಪರೀತ ಸಿಟ್ಟು. ಲ್ಯಾಬ್, ಗೋಲ್ಡನ್ ರಿಟ್ರೈವರ್ ನಾಯಿಗಳಿಗೆ ಸಹನೆ ಹೆಚ್ಚು. ಕೆಲವು ನಾಯಿ ತಳಿಗಳ ಆಯುಷ್ಯ ಬೇರೆಯವದಕ್ಕೆ ಹೋಲಿಸಿದರೆ ಹೆಚ್ಚು. ಕೆಲವು ನಾಯಿತಳಿಗಳಿಗೆ ರೋಗಗಳು ಬಹಳ ಬೇಗ ಅಂಟಿಕೊಳ್ಳುವುದರಿಂದ ಹೆಚ್ಚಿನ ವ್ಯಾಕ್ಸಿನ್ ಅವಶ್ಯಕತೆಯಿರುತ್ತದೆ. ನಾಯಿಗಳ ಸಲೂನ್ ಸಹ ಇಲ್ಲಿ ಬಹಳ ಯಶಸ್ವಿಯಾಗಿ ನಡೆಯುತ್ತಿರುವ ಉದ್ಯಮ. ಮೈ ತುಂಬ ಕೂದಲಿರುವ ನಾಯಿಗಳನ್ನು ಆಗಾಗ ಗ್ರೂಮ್ ಮಾಡಿಸುತ್ತಲೇ ಇರಬೇಕು. ಇಲ್ಲದೇ ಹೋದರೆ ಮನೆಯೆಲ್ಲ ಕೂದಲು! ಕೆಲವಕ್ಕೆ ಕೂದಲೇ ಇರುವುದಿಲ್ಲ. ಇನ್ನು ಕೆಲವಕ್ಕೆ ಕೂದಲಿದ್ದರು ಅಷ್ಟಾಗಿ ಉದುರುವುದಿಲ್ಲ. ಹೀಗೆ ನಾಯಿ ತಳಿಗಳ ಮೇಲೆ ಸಂಶೋಧನೆಯನ್ನೇ ಮಾಡುವಷ್ಟು ವಿಷಯಗಳಿವೆ.

ಈ ಎಲ್ಲ ವಿಷಯಗಳ ಬಗ್ಗೆ ಅರಿವಿದ್ದವರು ತಮಗೆ ಇಂತಹದೇ ತಳಿ ಬೇಕು ಎಂದು ನಿರ್ಧರಿಸಿಕೊಂಡು ನಾಯಿಯನ್ನು ತರುತ್ತಾರೆ. ನಮಗೆ ಇದಾವುದು ಅಷ್ಟಾಗಿ ಗೊತ್ತಿಲ್ಲದೇ ಇದ್ದುದರಿಂದ, ಒಟ್ಟಿನಲ್ಲಿ ನಾಯಿಯೊಂದನ್ನು ಸಾಕಬೇಕು ಎಂದಷ್ಟೇ ಆಸೆಯಿದ್ದುದರಿಂದ ನಾವು ತಳಿಯ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ನಮ್ಮ ಕಾಲೋನಿಯವನೊಬ್ಬ ತನ್ನ ನಾಯಿ ಮರಿಗಳನ್ನು ಹಾಕಿದೆ, ತನಗೆ ಸಾಕಲು ಆಗುವುದಿಲ್ಲ, ಯಾರಾದರು ಬಂದು ತೆಗೆದುಕೊಂಡು ಹೋಗಬಹುದು ಎಂದು ನೆಬರ್ಸ್ ಆಪ್‌ನಲ್ಲಿ ಫೋಟೊಗಳನ್ನು ಹಾಕಿದ್ದ. ಸಮರ್ಥ ಅಲ್ಲಿಗೆ ಹೋಗುವ ಹೊತ್ತಿಗೆ ಅವನ ಬಳಿಯಿದ್ದ ಮರಿಗಳಲ್ಲಿ ಕೇವಲ ಎರಡೇ ಉಳಿದುಕೊಂಡಿದ್ದವು. ಕಪ್ಪು ಬಣ್ಣದ ಗಂಡು ನಾಯಿ, ಇನ್ನೊಂದು ಬಿಳಿ ಬಣ್ಣದ ಹೆಣ್ಣು ನಾಯಿ. ಸಮರ್ಥ ಅವರಿಗೆ ಹಣೆಯ ಮೇಲೆ ಬಿಳಿ ನಾಮವಿದ್ದ ಕಪ್ಪು ಮರಿ ಇಷ್ಟವಾಗಿ ಅದನ್ನು ಎತ್ತಿಕೊಂಡು ಬಂದಿದ್ದರು. ನಾನು ಮೊದಲೇ ಹೇಳಿದೆನಲ್ಲ, ಅದು ಮನೆಗೆ ಬರುವವರೆಗು ನನಗೆ ಅದರ ಬಗ್ಗೆ ಯಾವ ಆಸ್ಥೆಯು ಇರಲಿಲ್ಲ. ನಂತರ ಅವನನ್ನು ಪಾರ್ಕಿಗೆ ಕರೆದುಕೊಂಡು ಹೋಗಲು ಶುರು ಮಾಡಿದಾಗ ಅಲ್ಲಿ ಮಾತನಾಡಿಸುತ್ತಿದ್ದ ನಾಯಿ ಪೋಷಕರು ಮೊದಲು ಕೇಳುತ್ತಿದ್ದ ಪ್ರಶ್ನೆಯೇ ‘ಯಾವ ತಳಿ?’ ಎಂದು. ಕೂರಾ ಮಿಕ್ಸಡ್ ತಳಿ ಎಂದು ನಮಗೆ ನಿಧಾನವಾಗಿ ಅರ್ಥವಾಗಿತ್ತು. ಅವನ ಅಪ್ಪ ಲ್ಯಾಬ್ ಮತ್ತು ಅಮ್ಮ ಆಸ್ಟ್ರೇಲಿಯನ್ ಶೇಫರ್ಡ್ ಆದ್ದರಿಂದ ಅವನು ಮಿಕ್ಸಡ್ ಬ್ರೀಡ್ ಆಗಿ ಎರಡರ ಗುಣ ಸ್ವಭಾವಗಳು ಅವನಿಗೆ ಬಂದಿವೆ. ಅದು ಬಹಳ ಒಳ್ಳೆಯ ಕಾಂಬಿನೇಶನ್ ಎಂದು ತಿಳಿದವರು ಹೇಳುತ್ತಾರೆ. ಲ್ಯಾಬ್ ನಾಯಿಗಿರುವ ಸ್ನೇಹ, ಕಾಳಜಿ, ತುಂಟತನ, ಹೊಳೆಯುವ ಕೂದಲು ಜೊತೆಗೆ ಆಸ್ಟ್ರೆಲಿಯನ್ ಶೇಫರ್ಡ್ ನಾಯಿಗಿರುವ ಜಾಣ್ಮೆ, ಕಪ್ಪು ಬಿಳಿ ಮಿಶ್ರಿತ ಕೂದಲು ಇವನಿಗೆ ಜನ್ಮಜಾತವಾಗಿವೆ.

ಪ್ಯೂರ್ ಬ್ರೀಡ್ ಅಂದರೆ ಒಂದೇ ತಳಿಯ ನಾಯಿಗಳಿಗೆ ಬಹಳ ಬೇಡಿಕೆಯಿದೆ ಇಲ್ಲಿ. ಅದನ್ನೇ ಉದ್ಯಮವನ್ನಾಗಿ ಮಾಡಿಕೊಂಡು, ಸರಕಾರದಿಂದ ಪರವಾನಗಿ ಪಡೆದಿರುವ ಹಲವು ಬ್ರೀಡರ್‌ಗಳು ಸಿಗುತ್ತಾರೆ. ಪಾರ್ಕಿನಲ್ಲಿ ಮೂರು ತಿಂಗಳ ಆಸ್ಟ್ರೇಲಿಯನ್ ಶೇಫರ್ಡ್ ನಾಯಿಮರಿಯೊಂದನ್ನು ಒಬ್ಬ ಕರೆದುಕೊಂಡು ಬರುತ್ತಿದ್ದ. ಬಿಳಿ ಮತ್ತು ಚಾಕೋಲೇಟ್ ಮಿಶ್ರ ಬಣ್ಣಗಳ ಕೂದಲಿದ್ದ ಆ ನಾಯಿಮರಿ ಮುಟ್ಟಿದರೆ ಕರಗುತ್ತದೇನೋ ಎನ್ನುವಷ್ಟು ಮೆತ್ತಗಿರುತ್ತಿತ್ತು. ಅದರ ಹೆಸರ ಹರ್ಷೀ. ಕಣ್ಣುಗಳೋ ಗಾಢ ಹಸಿರು. ಗೊಂಬೆಗೆ ಜೀವ ಬಂದಿದೆಯೇನೋ ಎನ್ನುವಷ್ಟು ಮುದ್ದು. ಅದಕ್ಕೆ ಅವನು ನಾಲ್ಕು ಸಾವಿರ ಡಾಲರ್ ಕೊಟ್ಟು ಖರೀದಿಸಿದ್ದ. ಭಾರತದ ರೂಪಾಯಿ ಲೆಕ್ಕದಲ್ಲಿ ಮೂರು ಲಕ್ಷದ ಮೇಲೆ! ಇನ್ನೊಬ್ಬಳು ಎರಡು ಸಾವಿರ ಡಾಲರ್ ಕೊಟ್ಟು ಪೂಡಲ್ ಒಂದನ್ನು ಖರೀದಿಸಿದ್ದಳು. ಹೀಗೆ ತಮಗೆ ಬೇಕಾದ ಬ್ರೀಡಿಗೆ ಸಾವಿರಗಟ್ಟಲೇ ಡಾಲರ್ ಹಣ ಸುರಿಯುವ ಜನ ಒಂದೆಡೆಯಾದರೆ ಇನ್ನು ಕೆಲವರು ರೆಸ್ಕ್ಯೂ ನಾಯಿಗಳನ್ನು ಸಾಕುವ ಮನಸ್ಸು ಮಾಡುತ್ತಾರೆ. ಅಂದರೆ ಈ ನಾಯಿಗಳು ತಮ್ಮ ಪೋಷಕರಿಂದ ಯಾವುದೋ ಕಾರಣಕ್ಕೆ ದೂರವಾಗಿ ನಾಯಿಗಳ ಆಶ್ರಮದಲ್ಲಿಯೇ ಬೆಳೆಯುತ್ತಿರುತ್ತವೆ. ಪ್ರವಾಹ, ಅಗ್ನಿ ದುರಂತಗಳು ಸಂಭವಿಸಿ ಮನೆಯವರಿಂದ ದೂರವಾಗಿರುತ್ತವೆ. ಅಂತಹ ನಾಯಿಗಳನ್ನು ಸಾಕಿದರೆ ವ್ಯಾಕ್ಸಿನ್ ಇತ್ಯಾದಿಗಳ ಖರ್ಚನ್ನು ಸರಕಾರವೇ ಭರಿಸುತ್ತದೆ. ಈಗಾಗಲೇ ನಾಯಿಗಳನ್ನು ಸಾಕಿದ, ಅವುಗಳಿಗೆ ತರಬೇತಿ ಕೊಡುವ ಅನುಭವವಿದ್ದವರು ಇಂತಹ ನಾಯಿಗಳನ್ನು ಸಾಕುತ್ತಾರೆ.

ನಮಗೆ ನಾಯಿತಳಿಗಳ ಬಗ್ಗೆ ಗೊತ್ತಿಲ್ಲದೇ ಹೋದರೂ ಬಹಳ ಒಳ್ಳೆಯ ಸ್ವಭಾವದ ನಾಯಿ ಸಿಕ್ಕಿದೆ ಎಂಬುದೇ ಸಂತೋಷ. ಕೆಲವೊಮ್ಮೆ ಕೂರಾನ ಗುಣ ಸ್ವಭಾವಗಳನ್ನು ನೋಡಿದರೆ ಮನುಷ್ಯನೇನೋ ಎನ್ನಿಸುವಷ್ಟು ಅಚ್ಚರಿಯಾಗುತ್ತದೆ. ಇಂಗ್ಲೀಷಿನಲ್ಲಿ ಒಂದು ಮಾತಿದೆ “Dogs have a way of finding the people who need them and filling an emptiness we didn’t even know we had.” ಬದುಕಿನಲ್ಲಿ ನಡೆಯುವ ಎಲ್ಲ ಸಂಗತಿಗಳಿಗು ಒಂದು ಕಾರಣವಿರುತ್ತದೆ. ಹಾಗೆಯೇ ನಾಯಿಯೊಂದು ನಮ್ಮನ್ನು ಹಚ್ಚಿಕೊಳ್ಳುವುದು, ನಮ್ಮ ಬದುಕಿನ ಭಾಗವೇ ಆಗಿ ಬಿಡುವುದು ಸಹ ಕಾರಣವಿಲ್ಲದೇ ಘಟಿಸುವುದಿಲ್ಲ. ಅದು ಯಾವುದೇ ಕಾರಣವಿರಲಿ, ಅದು ನಮ್ಮ ಜೀವನದಲ್ಲಿ ಘಟಿಸಿದ್ದಕ್ಕೆ ನಾವು ಸದಾ ಸಂತೃಪ್ತರು.

ಮುಂದುವರೆಯುತ್ತದೆ….
(ಹಿಂದಿನ ಕಂತು: ಪರಚುವ ಉಗುರುಗಳು ಮತ್ತು ಮೊಂಡು ನಾಯಿಗಳು)