ಹದಿನೆಂಟನೇ ವರ್ಷ ಪ್ರಾಯದಲ್ಲಿ ಶಿವರಾಮನಿಗೆ ಒಂದು ಭ್ರಮೆಯಿತ್ತು. ಜಗತ್ತಿನಲ್ಲಿ ಎಲ್ಲರಿಗೂ ಸಾವಿದೆ. ಆದರೆ ತನಗೆ ಆ ಸಾವು ಬರುವುದು ಸಾವಿರ ವರ್ಷದ ನಂತರ ಎನ್ನುವುದು ಆ ಭ್ರಮೆ. ಇಪ್ಪತ್ತೈದನೇ ವರ್ಷದಲ್ಲಿ ಮತ್ತೊಂದು ಭ್ರಮೆ ಬಂದವಚಿಕೊಂಡಿತು. ತಾನು ಯಾವತ್ತೂ ಹೀಗೇ ಇರುತ್ತೇನೆ, ತನಗೆ ಮುಪ್ಪು ಬರುವುದೇ ಇಲ್ಲ ಎನ್ನುವುದು ಆ ಭ್ರಮೆ. ಇಪ್ಪತ್ತೆಂಟನೇ ವರ್ಷದಲ್ಲಿ ಶಿವರಾಮನಿಗೆ ಮದುವೆಯಾಯಿತು. ಮರುವರ್ಷ ಗಂಡು ಮಗುವಿನ ತಂದೆಯಾದಾಗ ಅವನಿಗೆ ಮತ್ತೊಂದು ಭ್ರಮೆ ಆವರಿಸಿಕೊಂಡಿತು. ಮೊದಲೇ ಪುನರ್ಜನ್ಮದಲ್ಲಿ ನಂಬಿಕೆಯಿರುವ ಮನುಷ್ಯ ಶಿವರಾಮ. ಮನುಷ್ಯ ಪುನಃ ಮನುಷ್ಯನಾಗಿಯೇ ಹುಟ್ಟುತ್ತಾನೆ ಎಂಬ ಕಡು ವಿಶ್ವಾಸ ಅವನದು. ಆದರೆ ಮನುಷ್ಯ ಪುನರ್ಜನ್ಮವನ್ನು ಹೇಗೆ ಪಡೆಯುತ್ತಾನೆ ಎನ್ನುವ ಬಗ್ಗೆ ಅವನಿಗೆ ಯಾವುದೇ ಟೆಕ್ನಿಕಲ್ ಜ್ಞಾನ ಇರಲಿಲ್ಲ. ತನ್ನನ್ನೇ ಹೋಲುವ ತನ್ನ ಗಂಡು ಮಗುವನ್ನು ನೋಡುತ್ತಾ ನೋಡುತ್ತಾ ಅದು ತನ್ನದೇ ಪುನರ್ಜನ್ಮ ಎಂದು ಅವನಿಗೆ ಅನಿಸತೊಡಗಿತು. ಮಂಡಿಯಲ್ಲಿ ಕೂರುವ ಎಷ್ಟೋ ವರ್ತಕರು ತಮ್ಮ ಗಂಡು ಮಕ್ಕಳ ರೂಪದಲ್ಲಿ ಮತ್ತೆ ಹುಟ್ಟಿ ಮತ್ತೆ ಅಲ್ಲೇ ಅದೇ ರೀತಿ ಮುಂದರಿಯುವುದನ್ನು ಅವನು ಕಂಡಿದ್ದ. ‘ಮಗ ಅಲ್ಲ ಅಪ್ಪನೇ’ ಎಂದು ಅವನಿಗೆ ಎಷ್ಟೋ ಬಾರಿ ಖಾತರಿಯಾಗಿತ್ತು. ತಾನು ಕೂಡ ಹಾಗೆಯೇ ತನ್ನ ಮಗನಲ್ಲಿ ತನ್ನ ಜನ್ಮವನ್ನು ಮುಂದರಿಸಬಹುದು; ಹಾಗಾಗಬೇಕಾದರೆ ಅವನಲ್ಲಿ ತನ್ನನ್ನು ಪ್ರತಿಷ್ಟಾಪನೆ ಮಾಡಬೇಕು, ಅಂಥ ಪುನರ್ಜನ್ಮಕ್ಕೆ ಏನು ಮಾಡಬೇಕೋ ಅದನ್ನು ಮಾಡಲು ಈಗಿಂದೀಗಲೇ ತೊಡಗಬೇಕು ಎಂದುಕೊಂಡ.ಹೆತ್ತ ತಾಯಿಗಿಂತ ಹೆಚ್ಚು ಹೊತ್ತು ತಂದೆಯೇ ಮಗುವಿನ ಬಳಿಯಿರುವುದು ತಾಯಿ ಸುಶೀಲೆಗೆ ಅತಿ ಅಪೂರ್ವವಾದ ಸಂಗತಿಯೆನಿಸಿತು. ಈ ಅಚ್ಚೆ ಮತ್ತು ಕಾಳಜಿ ಒಮ್ಮೊಮ್ಮೆ ಅವಳಿಗೆ ಕಿರಿಕಿರಿಯೆನಿಸಿದರೂ ಇಷ್ಟು ಜತನದಿಂದ ತಾನೇ ತಾಯಿಯೆಂಬಂತೆ ಮಗುವನ್ನು ನೋಡಿಕೊಳ್ಳುವ ಇನ್ನೊಬ್ಬ ತಂದೆ ಜಗತ್ತಿನಲ್ಲಿ ಇರಲಾರ ಎಂದೆನಿಸಿ ಖುಷಿಯೂ ಆಯಿತು. ಮುಖ್ಯವಾಗಿ, ಅದು ಗೀಳಿನಂತೆ ಅಥವಾ ಮೋಹದಂತೆ ಅವಳಿಗೆ ತೋರಲಿಲ್ಲ. ಕರ್ತವ್ಯ ಪ್ರಜ್ಞೆಯಂತೆ ತೋರಿತು. ಪ್ರಪಂಚದಲ್ಲಿ ಗಂಡು ಮಗುವನ್ನು ಹಣ ಸಂಪಾದನೆ ಮಾಡತೊಡಗಿದ ಮೇಲೆ ಮಾತ್ರ ನಿಜವಾಗಿಯೂ ತನ್ನದೆಂದು ಭಾವಿಸುವ ಅಪ್ಪಂದಿರೇ ಹೆಚ್ಚು. ಹಾಗಿರುವಾಗ ಹೆತ್ತಿರುವುದು ತಾನೇ ಎಂಬಂತೆ ಮಗುವನ್ನು ಲಾಲಿಸುವ ಪಾಲಿಸುವ ತಂದೆಯನ್ನು ಪಡೆದುದು ತನ್ನ ಭಾಗ್ಯ ಎಂದು ಸುಶೀಲೆಗನಿಸದಿರಲಿಲ್ಲ. ಮಗನಿಗೆ ‘ಶಿವರಾಮ’ ಎಂದೇ ಹೆಸರಿಡುವುದು ಎಂದು ಶಿವರಾಮ ತೀರ್ಮಾನಿಸಿದ. “ಇದು ಗೊಂದಲಕ್ಕೆ ಕಾರಣವಾದೀತಲ್ಲ?” ಎಂದಳು ಸುಶೀಲೆ. “ಏನು ಗೊಂದಲ?” “ನಾನು ಅವನನ್ನು ಕೂಗುವುದು ಹೇಗೆ?” “ನೀನು ಶಿವ ಅಂತ ಕೂಗು ಅಥವಾ ರಾಮ ಅಂತ ಕೂಗು” ತಾನು ಶಿವ ಎಂದು ಕೂಗ್ತೇನೆ ಎಂದು ನಿರ್ಧರಿಸಿದಳು ಸುಶೀಲೆ. “ನಾನು ಶಿವರಾಮ ಅಂತ್ಲೇ ಕೂಗ್ತೇನೆ” ಎಂದ ಶಿವರಾಮ. ಮಗ ಶಿವರಾಮ ಬೆಳೆದು ದೊಡ್ಡವನಾಗುತ್ತಿದ್ದಂತೆ ತನ್ನ ಪ್ರತಿರೂಪದಂತೆಯೇ ಕಾಣಿಸುತ್ತಿದ್ದಾನೆ ಎಂದು ಅಪ್ಪ ಶಿವರಾಮನಿಗನಿಸಿತು. ಮಗ ನಡೆಯತೊಡಗಿದಾಗ ತಾನು ಆ ಪ್ರಾಯದಲ್ಲಿ ಹೇಗೆ ನಡೆಯುತ್ತಿದ್ದೆನೋ ಹಾಗೆಯೇ ಅವನು ನಡೆಯುತ್ತಿದ್ದಾನೆ ಎಂದನಿಸಿತು. ಅವನು ಮೂರನೆಯ ವರ್ಷದಲ್ಲಿಯೇ ಶುದ್ಧವಾಗಿ, ಸ್ಫಟವಾಗಿ ಮತ್ತು ನಿರರ್ಗಳವಾಗಿ ಮಾತು ಆಡತೊಡಗಿದಾಗ ಮಗುವಿನ ಅಜ್ಜಿ ಸುಭದ್ರಮ್ಮ, “ನೀನು ಕೂಡ ಬೇಗನೇ ಮಾತು ಆಡಲು ಆರಂಭಿಸಿದ್ದಿ ಶಿವರಾಮ. ಹೀಗೇ ಅಡೆತಡೆಯಿಲ್ಲದೆ ಮಾತಾಡ್ತಿದ್ದಿ” ಎಂದಳು.“ಇವರಿಗೆ ಮಾತು ಸ್ವಲ್ಪ ಜಾಸ್ತಿಯೇ. ಅಷ್ಟು ಮಾತಾಡದಿದ್ರಾಯ್ತು” ಎಂದು ನಕ್ಕಳು ಸುಶೀಲೆ. ಶಿವರಾಮನನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಅವನ ಸಕಲ ಪ್ರಶ್ನೆಗಳಿಗೂ ಉತ್ತರ ನೀಡುವುದು, ಅವನ ಜೊತೆ ಹೊರಗೆ ಅಡ್ಡಾಡುವುದು, ಪರಿಸರವನ್ನು ತೋರಿಸುವುದು, ದೊಡ್ಡವನಾದಂತೆ ಮನುಷ್ಯ ಪ್ರಾಣಿ ಪಕ್ಷಿಗಳ ಬಗ್ಗೆ ಹೇಳುವುದು, ಮಾನವ ಜೀವನ ಮೌಲ್ಯಗಳ ಬಗ್ಗೆ ಮಾತಾಡುವುದು ಎಲ್ಲವನ್ನೂ ಮಾಡಿದ ಶಿವರಾಮ. ಶಾಲೆಯಲ್ಲಿ ಕಲಿಸುವುದು ಏನೇನೂ ಸಾಲದು ಎಂದು ನೂರಾರು ವಿಚಾರಗಳನ್ನು ಮಗನಿಗೆ ಹೇಳಿದ. ನೀತಿ ನಿಯಮಗಳನ್ನು ಹೇಳಿಕೊಟ್ಟ. ಒಳ್ಳೆಯದು ಕೆಟ್ಟದರ ನಡುವಿನ ವ್ಯತ್ಯಾಸವನ್ನು ಮನದಟ್ಟು ಮಾಡಿಸಿದ. ಸತ್ಯವೆಂದರೇನು ಅಸತ್ಯವೆಂದರೇನು ಎಂದು ಹೇಳಿಕೊಟ್ಟ. ಹೈಸ್ಕೂಲು ಓದು ಮಗಿಯುತ್ತಾ ಬರುವಾಗ ಬದುಕಿಗೆ ಸಂಬಂಧಿಸಿದ ಎಲ್ಲಾ ಮೌಲ್ಯಗಳನ್ನು ತಿಳಿಸಿದ. ಪಾರಂಪರಿಕ ಆಚಾರ ವಿಚಾರಗಳನ್ನು ತಿಳಿಸಿದ. ದೈವಭಕ್ತಿ, ದೇಶಭಕ್ತಿ ಮುಂತಾದುದರ ಬಗ್ಗೆ ಹೇಳಿದ. ನ್ಯಾಯ-ಅನ್ಯಾಯ, ನೀತಿ ಅನೀತಿ ಇತ್ಯಾದಿಗಳ ಕುರಿತು ಹೇಳಿದ. ಜ್ಞಾನ, ವಿವೇಕ, ಧೈರ್ಯ, ಆತ್ಮ ವಿಶ್ವಾಸ ಮುಂತಾದವುಗಳ ಬಗ್ಗೆ ತನ್ನ ಬದುಕಿನಿಂದಲೇ ಉದಾಹರಣೆಗಳನ್ನು ನೀಡಿದ.ತಾಯಿಯದೇನಿದ್ದರೂ ದೈನಂದಿನ ಜೀವನಕ್ಕೆ ಸಂಬಂಧಿಸಿದ ಮಾತುಗಳು, ಮುಖ್ಯವಾಗಿ, ‘ಏಳು, ಮುಖ ತೊಳಿ, ಪೇಸ್ಟ್ ತೆಗಿ, ಹಲ್ಲು ತಿಕ್ಕು ಊಟ ಮಾಡು, ಡ್ರೆಸ್ ಮಾಡು’ ಇತ್ಯಾದಿ ಆಜ್ಞಾ ರೂಪದ ಕ್ರಿಯಾಪದಗಳು, ‘ಡ್ರೆಸ್ ಹಾಕ್ಕೊಂಡಾಯ್ತ? ಬ್ಯಾಗ್ ಎಲ್ಲಿಟ್ಟೆ? ಷರ್ಟ್ ಎಲ್ಲಿ ಹಾಕ್ದೆ? ಹೋಮ್ ವರ್ಕ್ ಮಾಡಿ ಮುಗೀತಾ?’ ಇತ್ಯಾದಿ ಪ್ರಶ್ನೆಗಳು, ಮತ್ತು ‘ಅದನ್ನು ಇಲ್ಲಿ ಇಡ್ಬೇಡ, ಇದನ್ನು ಅಲ್ಲಿ ಇಡು. ಆಡಿದ್ದು ಸಾಕು. ಈಗ ಹೊರಗೆ ಹೋಗ್ಬೇಡ. ಅವ್ರು ಇವ್ರು ಕೊಟ್ಟದ್ದನ್ನೆಲ್ಲ ತಿನ್ಬೇಡ. ಪುಸ್ತಕವನ್ನು ಸರಿಯಾಗಿ ಇಟ್ಕೊ’ ಇತ್ಯಾದಿ ‘ಡೂ’ಗಳು ಮತ್ತು ‘ಡೋಂಟ್’ಗಳು. ರೂಪದಲ್ಲಿ, ನಡೆನುಡಿಯಲ್ಲಿ, ಹಾವಭಾವದಲ್ಲಿ, ಧ್ವನಿಯಲ್ಲಿ, ವಿಚಾರಾಭಿವ್ಯಕ್ತಿಯಲ್ಲಿ ಶಿವರಾಮ ಪ್ರತಿಶತ ತನ್ನನ್ನೇ ಹೋಲುತ್ತಿದ್ದಾನೆ ಎಂದು ಶಿವರಾಮನಿಗೆ ಖಾತ್ರಿಯಾಯಿತು. ಅವನು ತಂದೆ ತಿನ್ನುವ ಉಣ್ಣುವ ಶೈಲಿಯಲ್ಲೇ ತಂದೆ ತಿನ್ನುವುದನ್ನೇ ತಿನ್ನುತ್ತಿದ್ದ, ಉಣ್ಣುತ್ತಿದ್ದ. ತಾನು ತಿನ್ನುವ ಆಹಾರವನ್ನೆಲ್ಲ ಮಗನೂ ತಿನ್ನಬೇಕೆನ್ನುವುದು ಶಿವರಾಮನ ತೀರ್ಮಾನವಾಗಿತ್ತು. ಶಿವರಾಮನಿಗೆ ಇತರ ಎಲ್ಲಾ ತರಕಾರಿಗಳಿಗಿಂತ ಹಾಗಲಕಾಯಿ ಇಷ್ಟದ ತರಕಾರಿಯಾಗಿತ್ತು. ಅವನು ಹಸಿ ಹಾಗಲಕಾಯಿಯನ್ನು ಕೂಡ ಕಚಕಚನೆ ಜಗಿದು ತಿನ್ನುತ್ತಿದ್ದ. ಆದರೆ ಎಷ್ಟೇ ಪ್ರಯತ್ನಿಸಿದರೂ ಮಗನಿಗೆ ಹಾಗಲಕಾಯಿ ತಿನ್ನಿಸುವುದು ಅವನಿಂದಾಗಲಿಲ್ಲ. ಹಾಗಲಕಾಯಿಯನ್ನು ತಿನ್ನುವುದಂತಿರಲಿ, ಅದರ ವಾಸನೆಗೇ ಮಗ ಶಿವರಾಮ ವಾಂತಿ ಮಾಡುತ್ತಿದ್ದ. ಮಗನಿಗೆ ಸುಮಾರು ಇಪ್ಪತ್ತು ವರ್ಷ ಪ್ರಾಯವಾಗುವ ವರೆಗೂ ಶಿವರಾಮ ತನ್ನ ಪ್ರಯತ್ನ ಬಿಡಲಿಲ್ಲ. ಕೊನೆಗೆ ಡಾಕ್ಟರೊಡನೆ ಈ ವಿಚಾರ ಹೇಳಿದಾಗ ‘ಅವನಿಗೆ ಹಾಗಲಕಾಯಿ ಅಲರ್ಜಿಯಿರಬಹುದು. ಬಲವಂತ ಮಾಡಬೇಡಿ. ಕೆಲವೊಮ್ಮೆ ಅಲರ್ಜಿಯಿರುವ ವಸ್ತುವನ್ನು ತಿಂದುದರಿಂದಾಗಿ ಮೈಯೆಲ್ಲ ಊದಿಕೊಳ್ಳಬಹುದು’ ಎಂದು ಹೇಳಿದ ನಂತರ ತನ್ನ ಪ್ರಯತ್ನವನ್ನು ಕೈಬಿಟ್ಟ.ಮಗನ ಚಲನವಲನ, ಮಾತು, ಹಾವಭಾವ, ಅಭಿರುಚಿ, ಹಾಗಲಕಾಯಿಯೊಂದರ ಹೊರತು ಇತರೆಲ್ಲದರ ಮೇಲಿನ ರುಚಿ ತನ್ನದೇ ಎನಿಸಿತು. ಖಂಡಿತವಾಗಿಯೂ ತಾನು ತನ್ನ ಮಗನಲ್ಲಿ ಮುಂದರಿಯುತ್ತಿದ್ದೇನೆ ಎಂದನಿಸಿತು. ತಾನು ತನ್ನ ಮಗನಾಗಿ ಬದುಕು ಮುಂದರಿಸಬೇಕು ಎನ್ನುವ ಬಯಕೆಯಲ್ಲಿ ಆಶ್ಚರ್ಯಪಡುವಂಥದೇನೂ ಇರುವುದಿಲ್ಲ. ಡಾಕ್ಟರ್ ತನ್ನ ಮಗನನ್ನು ಡಾಕ್ಟರ್ ಮಾಡುವುದು, ಲಾಯರ್ ಲಾಯರ್ ಮಾಡುವುದು, ಉದ್ಯಮಿ ಉದ್ಯಮಿ ಮಾಡುವುದು, ವ್ಯಾಪಾರಿ ವ್ಯಾಪಾರಿ ಮಾಡುವುದು, ಮಂತ್ರಿ ಮಂತ್ರಿ ಮಾಡುವುದು, ಮುಖ್ಯ ಮಂತ್ರಿ ಮುಖ್ಯ ಮಂತ್ರಿ ಮಾಡುವುದು, ಪ್ರಧಾನ ಮಂತ್ರಿ ಪ್ರಧಾನ ಮಂತ್ರಿ ಮಾಡುವುದು ಪ್ರಪಂಚದಲ್ಲಿ ಇದ್ದದ್ದೇ. ಇವರೆಲ್ಲರಿಗೂ ಅರಸ ಮತ್ತು ಅರಸೊತ್ತಿಗೆಯೇ ಮಾದರಿ. ರಾಜಕುಮಾರ ರಾಜನದೇ ಮುಂದಿನ ಜನ್ಮ ಎಂದು ವಾದಿಸುವವರು ಕೂಡ ಇದ್ದಾರೆ. ಅದೇ ಮಾದರಿಯಲ್ಲಿ ಅಪ್ಪನ ಹೆಸರನ್ನೇ ಉಪನಾಮದ ರೂಪದಲ್ಲಿ ಮಗನಿಗೆ ಅಂಟಿಸುವವರೂ ಇದ್ದಾರೆ. ತನ್ನ ಮಗ ತನ್ನ ಮರುಹುಟ್ಟು ಎಂದು ನಂಬುವವರೂ ಇದ್ದಾರೆ. ತನ್ನ ಮಗ ತನ್ನ ಕಾರ್ಬನ್ ಪ್ರತಿ ಎಂದುಕೊಳ್ಳುವವರೂ ಇದ್ದಾರೆ. ತಾನು ಮಾಡಿದುದನ್ನು ತನ್ನ ಮಗ ಮುಂದರಿಸಲೇ ಬೇಕು ಎಂಬ ಬಯಕೆಯಂತೂ ತೀರಾ ಸಾಮಾನ್ಯ. ಆದರೆ ತನ್ನ ಮಗನಲ್ಲಿ ತಾನು ಪುನರ್ಜನ್ಮವನ್ನು ಪಡೆಯಬೇಕು ಎಂದು ಅದಕ್ಕಾಗಿ ಶಿವರಾಮನಂತೆ ನಿರಂತರವಾಗಿ ಪ್ರಯತ್ನಿಸುವವರು, ತಾನೇ ತನ್ನ ಮಗನಾಗಬೇಕು, ಆಗಿಯೇ ಆಗುತ್ತೇನೆ ಎಂದು ನಂಬುವವರು ಬಹುಶಃ ಇರಲಾರರು.ಶಿವರಾಮ ಕಡು ಬಡತನದಿಂದ ಬದುಕಿನಲ್ಲಿ ಹಲವು ಏಳುಬೀಳುಗಳ ಸಹಿತ ಹೇಗೋ ಓದು ಮುಂದುವರಿಸಿ ಮುಂದೇನು ಮಾಡುತ್ತೇನೆ ಎಂದು ಗೊತ್ತಿಲ್ಲದಿರುವ ಸ್ಥಿತಿಯಲ್ಲಿ ಒಬ್ಬರು ಮಠಾಧೀಶರ ನೆರವಿನಿಂದ ಕಾಲೇಜು ಓದು ಮುಂದರಿಸಿ ಸಂಸ್ಕೃತದಲ್ಲಿ ಎಂಎ ಮಾಡಿ ಸಂಸ್ಕೃತ ಉಪನ್ಯಾಸಕನಾದವನು. ಪುನರ್ಜನ್ಮದಲ್ಲಿ ದೃಢವಾದ ನಂಬಿಕೆ ಅವನ ಬದುಕಿನ ಕಲ್ಲು ಮುಳ್ಳಿನ ದಾರಿಯಲ್ಲಿ ಎಲ್ಲೋ ಹುಟ್ಟಿಕೊಂಡದ್ದು. ಆ ಬಗ್ಗೆ ಒಬ್ಬಿಬ್ಬರು ಪ್ರತಿಭಾಶಾಲಿಗಳಾದ ಭೌತವಿಜ್ಞಾನಿಗಳೊಡನೆ ಶಿವರಾಮ ಬಹಳ ಚರ್ಚೆ ನಡಿಸಿದ್ದಾನೆ. ಪುನರ್ಜನ್ಮ ಎಂಬುದಿದೆ ಎನ್ನುವ ಶಿವರಾಮನ ವಾದವನ್ನು ಅವರು ಒಪ್ಪಿಕೊಂಡಿದ್ದರು.‘ಆತ್ಮಕ್ಕೆ ಸಾವು ಇಲ್ಲ. ಅದಕ್ಕೆ ಪುನಃ ಜನ್ಮ ತಾಳುವ ಶಕ್ತಿ ಇದೆ. ಜಗತ್ತಿನ ವಿವಿಧ ಭಾಗಗಳಲ್ಲಿ ಅಂಥದು ನಡೆದಿದೆ. ಸತತವಾದ ಸಾಧನೆಯಿಂದ ಮನುಷ್ಯನಿಂದ ಮತ್ತೆ ಜನ್ಮವನ್ನು ತಾಳಲು ಸಾಧ್ಯವಿದೆ. ಮನುಷ್ಯನಿಂದ ಮಾತ್ರ ಇದು ಸಾಧ್ಯ. ಯಾಕೆ ಮನುಷ್ಯನಿಂದ ಮಾತ್ರ ಸಾಧ್ಯ ಎಂದರೆ, ತನ್ನ ಇಚ್ಚೆಯಂತೆ ತನಗೆ ಬೇಕಾದುದನ್ನು ಸಾಧಿಸುವುದು ಮನುಷ್ಯನಿಗೆ ಮಾತ್ರ ಸಾಧ್ಯ. ಅವನು ಮಿದುಳು ಪರಿಪೂರ್ಣವಾಗಿ ವಿಕಾಸ ಹೊಂದಿರುವ ಒಂದು ಅಸ್ತ್ರ. ಅದರ ಸಂಪೂರ್ಣ ಶಕ್ತಿಯಿಂದ ಅವನು ಬೇಕಾದ್ದನ್ನು ಸಾಧಿಸಬಹುದು’ ಎಂಬುದು ಶಿವರಾಮನ ವಾದ. ಭೌತವಿಜ್ಞಾನದ ಪ್ರೊಫೆಸರುಗಳು ಶಿವರಾಮನ ವಾದವನ್ನು ತಿರಸ್ಕರಿಸದಾದರು. ತರಗತಿಯ ಹೊರಗೆ ಸಿಗುವ ಸಮಯದಲ್ಲಿ ಸಾಕಷ್ಟು ಚಿಂತನೆ ಮತ್ತು ಸಂಶೋಧನೆ ನಡೆಸಿ ಅವನ ವಾದಕ್ಕೆ ಪುರಾವೆಗಳನ್ನು ಸಂಗ್ರಹಿಸಿ ವೈಜ್ಞಾನಿಕವಾದ ಸಮರ್ಥನೆಗಳನ್ನು ಕೂಡ ನೀಡಿದರು. ತನ್ನ ಮಗನಲ್ಲಿ ತಾನು ಮುಂದರಿಯಲು ಬೇಕಾದ್ದು ತನ್ನ ಮತ್ತು ಮಗನ ಮನಸ್ಸಿನ ಆತ್ಮಗಳು ಒಂದೇ ಟ್ಯೂನಿನಲ್ಲಿ ಇರಬೇಕಾದ್ದು ಎಂಬುದನ್ನು ಅರ್ಥ ಮಾಡಿಕೊಂಡ ಶಿವರಾಮ ಅದನ್ನು ಬಹುತೇಕ ಸಾಧಿಸಿಬಿಟ್ಟಿದ್ದ. ಅದಕ್ಕಾಗಿ ಮಗ ಕೂಡ ಸಂಸ್ಕೃತ ವಿದ್ವಾಂಸನಾಗಬೇಕೆಂದೇನೂ ಇಲ್ಲ. ಆದರೆ ಮಗನ ಮನಸ್ಸಿನಲ್ಲಿ ತಾನುಂಟುಮಾಡಿರುವ ಟ್ಯೂನನ್ನು ಭಂಗಗೊಳಿಸುವ ಹೆಣ್ಣನ್ನು ಅವನು ಹೆಂಡತಿಯಾಗಿ ಪಡೆಯಬಾರದು ಎಂಬುದು ಬಹಳ ಮುಖ್ಯವಾಗಿತ್ತು. ಯಾಕೆಂದರೆ, ಮಗನ ಆತ್ಮವನ್ನು ಎಷ್ಟು ಚೆನ್ನಾಗಿ ಟ್ಯೂನ್ ಮಾಡಿಟ್ಟರೂ ಹೆಂಡತಿಯಾಗಿ ಬಂದವಳು ಆ ಟ್ಯೂನನ್ನು ಸಂಪೂರ್ಣವಾಗಿ ಕೆಡಿಸಿದ್ದನ್ನು ಶಿವರಾಮ ಬಹಳ ಕಡೆ ಕಂಡಿದ್ದ. ಆದ್ದರಿಂದ ತಮ್ಮ ಸಂಬಂಧಿಕರ ಪೈಕಿ ಒಂದು ಹುಡುಗಿಯನ್ನು ಆಯ್ಕೆ ಮಾಡಿ ಚಿಕ್ಕಂದಿನಿಂದಲೇ ಅವಳ ಮೇಲೆ ಕಣ್ಣಿರಿಸಿದ. ಐದಾರು ವರ್ಷಗಳ ಬಳಿಕ ಒಂದು ದಿನ ಅವಳ ತಾಯಿ ತಂದೆಯರೊಡನೆ ಮಾತಾಡಿ, ಅವರು ಸಂಬಂಧಕ್ಕೆ ಒಪ್ಪಿಕೊಂಡಾಗ, ‘ಅವನ ಓದು ಮುಗಿಯಲಿ. ಅಲ್ಲಿಯ ತನಕ ಈ ವಿಷಯ ಗುಟ್ಟಾಗಿಯೇ ಇರಲಿ’ ಎಂದ. ಗುಟ್ಟಾಗಿಯೇ ಇಡುತ್ತೇವೆ ಎನ್ನುವ ವಾಗ್ದಾನವನ್ನು ಕೂಡ ಪಡೆದುಕೊಂಡ. ತನಗೆ ಇಂಗ್ಲಿಷ್ ಕಲಿಯಲಾಗಲಿಲ್ಲ, ಆದರೆ ಮಗ ಇಂಗ್ಲಿಷಿನಿಂದ ವಂಚಿತನಾಗುವುದು ಬೇಡ ಎಂದು ಮಗನನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿದ. ಆದರೆ ಎರಡನೆಯ ಭಾಷೆಯಾಗಿ ಕನ್ನಡದ ಬದಲು ಸಂಸ್ಕೃತವನ್ನು ಆಯ್ಕೆ ಮಾಡಿಸಿದ. ಮಗನಿಗೆ ಸಂಸ್ಕೃತ ಕರಾತಲಮಲಕವಾಗಬೇಕೆಂದು ಸತತವಾಗಿ ಸಂಸ್ಕೃತಾಭ್ಯಾಸ ಮಾಡಿಸಿದ. ಹೀಗಾಗಿ ಹನ್ನೆರಡನೇ ತರಗತಿ ಕೊನೆಯ ಪರೀಕ್ಷೆಯಲ್ಲಿ ಎಂಬತ್ತೈದು ಪರ್ಸೆಂಟ್ ಅಂಕ ಪಡೆದ ಶಿವರಾಮ ಇಂಗ್ಲಿಷ್‌ನಲ್ಲಿ ಮಾಸ್ಟರ್ ಆಗುವುದರ ಜೊತೆಗೆ ಸಂಸ್ಕೃತದಲ್ಲಿಯೂ ಪಂಡಿತ ಆಗಿದ್ದ. ಮುಂದಕ್ಕೆ ಸಾಫ್ಟ್‌ವೇರ್ ಇಂಜಿನಿಯರಿಂಗ್ ಡಿಗ್ರಿ, ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ, ಸಂಸ್ಕೃತದಲ್ಲಿ ಎಂ.ಎ. ಎಂಬ ಮೂರು ದಾರಿಗಳು ಅವನ ಮುಂದೆ ಇದ್ದುವು. “ನೀನು ಸಂಸ್ಕೃತ ಎಂ. ಎ. ಮಾಡು. ಮನೆಯಲ್ಲಿ ಇಂಗ್ಲಿಷ್ ಓದು” ಎಂದ ಶಿವರಾಮ. ಶಿವರಾಮ ಮತ್ತು ಅವನ ಮಗ ಇಬ್ಬರನ್ನೂ ಹುಚ್ಚರು ಎನ್ನದವರೇ ಇರಲಿಲ್ಲ. ಪಕ್ಕದ ಮನೆಯವನ ಮಗ ಇಂಜಿನಿಯರಾಗಲಿ ಎನ್ನುವ ಬಯಕೆ ನೂರರಲ್ಲಿ ಒಬ್ಬರಿಗೂ ಇಲ್ಲ. ಆದರೆ ಕೆಲವರು ತನ್ನ ಮಗ ಇಂಜಿನಿಯರಾಗುತ್ತಿರುವುದಕ್ಕೆ ಪಡುವ ಖುಷಿಯಷ್ಟೇ ಪಕ್ಕದ ಮನೆಯವನ ಮಗ ಇಂಜಿನಿಯರಾಗದಿರುವುದನ್ನು ಕಂಡು ಉಂಟಾಗುವ ಖುಷಿಯನ್ನು ಬಾಯಿ ಮುಚ್ಚಿ ಅನುಭವಿಸಿದರೆ, ಇನ್ನು ಕೆಲವರು ‘ಛೆ’ ಎಂದು ಹೇಳಿಯೋ ‘ಹುಚ್ಚ’ ಎಂದು ಕರೆದೋ ಖುಷಿಪಟ್ಟುಕೊಳ್ಳುತ್ತಾರೆ. ಅಂಥವರು ಶಿವರಾಮನನ್ನು ಕಂಡು ‘ಅಪ್ಪನೂ ಹುಚ್ಚ ಮಗನೂ ಹುಚ್ಚ’ ಎನ್ನದಿರುವರೆ? “ನೀನು ಅವರಿವರು ಹೇಳುವುದಕ್ಕೆ ಕಿವಿ ಕೊಡಬೇಡ. ಬಡತನದ ಕಾರಣದಿಂದ ಅಥವಾ ಬೇರೆ ಕಾರಣದಿಂದ ಬುದ್ಧಿವಂತ ಹುಡುಗ ಡಾಕ್ಟರೋ ಇಂಜಿನಿಯರೋ ಆಗುವ ಕೋರ್ಸಿಗೆ ಸೇರಲು ಆಗದಿದ್ದರೆ ‘ಹುಚ್ಚ’ ಎಂದು ಹೇಳಿ ನಗಲು ಜನಗಳಿಗೆ ಒಂದು ಅವಕಾಶ. ಸತ್ಯ ಏನೆಂದು ಜನಕ್ಕೆ ತಿಳಿದರೂ ಒಂದೇ ತಿಳಿಯದಿದ್ದರೂ ಒಂದೇ’ ಎಂದ ಶಿವರಾಮ. ಮಗ ಸಾಫ್ಟ್‌ವೇರ್ ಇಂಜಿನಿಯರನಾಗಬಾರದು ಎಂಬುದೇನೂ ಅವನ ಇರಾದೆಯಾಗಿರಲಿಲ್ಲ. ಮಗ ಇನ್ನಷ್ಟು ಕಾಲ ತನ್ನ ಜತೆಯಲ್ಲೇ ಇರಬೇಕೆನ್ನುವುದು ಅವನ ಇರಾದೆ. ಯಾಕೆಂದರೆ, ಅವನ ಭವಿಷ್ಯದಲ್ಲಿಯೇ ತನ್ನ ಪುನರ್ಜನ್ಮವಿರುವುದರಿಂದ ಅದಕ್ಕಾಗಿ ಅವನನ್ನು ಇನ್ನೂ ‘ಟ್ಯೂನ್’ ಮಾಡಲಿಕ್ಕೆ ಇತ್ತು. ಮಗ ಶಿವರಾಮ ಸಂಸ್ಕೃತದಲ್ಲಿ ಯೂನಿವರ್ಸಿಟಿಗೆ ಫಸ್ಟ್ ರಾಂಕ್ ಪಡೆದು ಎಂ.ಎ. ಮುಗಿಸಿದ. ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿರುವಾಗ ಸಂಸ್ಕೃತ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿಯೂ ಭಾಷಣ ಸ್ಪರ್ಧೆಗಳಲ್ಲಿ, ಪ್ರಬಂಧ ಸ್ಪರ್ಧೆಗಳಲ್ಲಿ ಹಲವು ಸಲ ವಿಶ್ವವಿದ್ಯಾನಿಲಯ ಮಟ್ಟದ ಪ್ರಥಮ ಬಹುಮಾನ ಪಡೆದ ಶಿವರಾಮನಿಗೆ ಅವನು ಅರ್ಜಿ ಹಾಕದೇನೇ ಒಂದು ಮಲ್ಟಿ ನ್ಯಾಷನಲ್ ಕಂಪೆನಿಯಿಂದ ನೇಮಕಾತಿ ಪತ್ರ ಬಂತು. ಅವನನ್ನು ‘ಲಿಂಗ್ವಿಸ್ಟಿಕ್ ಸಾಫ್ಟ್‌ವೇರ್ ಇಂಜಿನಿಯರ್’ ಎಂದು ಕಂಪೆನಿ ಕರೆದಿತ್ತು. ತಿಂಗಳಿಗೆ ಐವತ್ತು ಸಾವಿರ ಸಂಬಳ. ತನ್ನ ಮಗನಲ್ಲಿ ಮುಂದರಿಯುವುದಕ್ಕೆ ವ್ಯತಿರಿಕ್ತವಾದುದೇನು ಶಿವರಾಮನಿಗೆ ಆ ತನಕ ಎದುರಾಗಲಿಲ್ಲ. ಬಡತನದಿಂದಾಗಿ ಬೇಗನೆ ಮದುವೆಯಾಗಲು ಅವನಿಂದ ಆಗಿರಲಿಲ್ಲ. ಮದುವೆಯಾಗುವಾಗ ಮೂವತ್ತೆರಡಾಗಿತ್ತು. ಆದರೆ ಮಗ ಅಷ್ಟು ವರ್ಷ ಕಾಯುವ ಅಗತ್ಯ ಕಾಣಿಸಲಿಲ್ಲ. ತಾನು ಮಗನಲ್ಲಿ ಮುಂದುವರಿಯಲು ಮಗ ವಿವಾಹಿತನಾಗುವುದು ಅಡ್ಡಿಯಾಗಲಾರದೆನಿಸಿತು. ಆದುದರಿಂದ ಅವನ ಮದುವೆ ಇಪ್ಪತ್ತರಡರಲ್ಲೇ ನಡೆಯಲಿ ಎಂದು ತೀರ್ಮಾನಿಸಿದ. ಮಗನೊಡನೆ ಈ ವಿಚಾರ ಎತ್ತಿದ ಕೂಡಲೇ ಅವನು ಒಪ್ಪಿಕೊಂಡ. ತಾನು ಆಯ್ಕೆ ಮಾಡಿದ ಹುಡುಗಿಯನ್ನು ತೋರಿಸಿದಾಗ ಅದಕ್ಕೂ ಕೂಡಲೇ ಒಪ್ಪಿಕೊಂಡ. ತಾನೂ ಹೀಗೇ ನಡೆದುಕೊಂಡದ್ದು ಎಂಬುದು ನೆನಪಿಗೆ ಬಂದು, ತನ್ನ ಮಗನಲ್ಲಿ ತಾನೀಗಲೇ ಮುಂದರಿಯುತ್ತಿದ್ದೇನೆ ಎಂದು ಶಿವರಾಮನಿಗೆ ಖಾತ್ರಿಯಾಯಿತು. ಆದರೆ ಈಗ ಮಗ ತನ್ನಿಂದ ದೂರವಾಗುವುದು ತನ್ನ ಉದ್ದೇಶ ಸಾಧನೆಗೆ ಅಡ್ಡಿಯಾಗುತ್ತದೆ ಎಂದು ಶಿವರಾಮನಿಗನಿಸಿತು. “ದೊಡ್ಡ ಸಂಬಳದ ಕೆಲಸವೇನೋ ನಿಜ. ಆದರೆ ನೀನು ನಮ್ಮಿಂದ ದೂರ ಇರುವ ಬಗ್ಗೆ ನಮ್ಗೆ ಚಿಂತೆಯಾಗಿದೆ. ಇನ್ನು ಒಂದು ವರ್ಷದಲ್ಲಿ ನಂಗೆ ರಿಟೈರಾಗುತ್ತೆ. ಅನಂತರ ಇಲ್ಲಿ ನಾವಿಬ್ಬರೇ ಆಗುತ್ತೇವೆ” ಎಂದು ಹೇಳಿದಾಗ ಮಗ ಶಿವರಾಮ “ಇಲ್ಲೇ ಇದ್ದುಕೊಂಡು ಏನಾಗಬೇಕಾಗಿದೆ?’ ಈ ಮನೆಯನ್ನ ಮಾರಿ ನಮ್ಮ ಜೊತೆ ಇರಿ” ಎಂದು ಹೇಳಿದ. ಅದೇ ಸರಿ ಎಂದು ತೀರ್ಮಾನಿಸಿ ಆರು ತಿಂಗಳ ರಜೆ ಹಾಕಿ ಹೆಂಡತಿಯನ್ನೂ ಕರೆದುಕೊಂಡು ಮಗ ಹೋಗುವಾಗಲೇ ಮಗನೊಡನೆ ದೆಹಲಿಗೆ ಹೋದ. ಆರು ತಿಂಗಳ ನಂತರ ಮರಳಿ ಬಂದು, ಕೆಲಸದಿಂದ ನಿವೃತ್ತಿಯಾದ ಮೇಲೆ, ಮನೆ ಮಾರಿ ಗಂಡ ಹೆಂಡತಿ ದೆಹಲಿಗೆ ಹೋದರು. ಶಸ್ತ್ರಕ್ರಿಯೆ ನಡೆಸಲು ತನ್ನ ಪ್ರಜ್ಞೆ ತಪ್ಪಿಸಿದ ನಂತರ ಪುನಃ ಪ್ರಜ್ಞೆ ಬರುವ ವರೆಗೆ ತಾನು ಎಲ್ಲಿದ್ದೆ ಎಂದು ಶಿವರಾಮ ಯೋಚಿಸಿದ. ಅಪ್ರಜ್ಞಾವಸ್ಥೆಯಿಂದ ಅರೆಪ್ರಜ್ಞಾವಸ್ಥೆಗೆ, ಅರೆಪ್ರಜ್ಞಾವಸ್ಥೆಯಿಂದ ಪ್ರಜ್ಞಾವಸ್ಥೆಗೆ ಮರಳಿದ ಪ್ರಜ್ಞಾಪ್ರಯಾಣವನ್ನು ನೆನಪಿಸಿಕೊಂಡ. ಬಹಳ ಹೊತ್ತು ತಾನು ಪೂರ್ಣವಾಗಿ ತನ್ನೊಳಗಿರಲಿಲ್ಲ. ಈಗಲೂ ಇಲ್ಲ ಎಂದನಿಸಿತು. ಒಂದು ವಾರದ ಬಳಿಕ ಡಾಕ್ಟರು ‘ಇನ್ನು ಮನೆಗೆ ಕರೆದುಕೊಂಡು ಹೋಗಬಹುದು’ ಎಂದರು. ಶಿವರಾಮ ತಂದೆಯನ್ನು ಮನೆಗೆ ಕರೆದುಕೊಂಡು ಬಂದ. ಮನೆಗೆ ಮರಳಿದ ಶಿವರಾಮನಿಗೆ ಕೆಲವೊಮ್ಮೆ ತಾನಿನ್ನೂ ಅರೆಪ್ರಜ್ಞಾವಸ್ಥೆಯಲ್ಲೇ ಇದ್ದೇನೆ ಎಂದನಿಸುತ್ತಿತ್ತು. ಬಹುಶಃ ಔಷಧಿಗಳ ಪ್ರಭಾವದಿಂದ ಹಾಗನಿಸುತ್ತಿರಬಹುದೆ ಎನ್ನುವ ಅನುಮಾನ ಕೂಡ ಕಾಡಿತು. ಶಿವರಾಮನ ಹೆಂಡತಿ ಗಂಡ ಆಸ್ಪತ್ರೆಯಿಂದ ಬಂದ ಮೊದಲ ದಿನವೇ ಅವನಿಗೆ ಇಷ್ಟವಾದ ಹಾಗಲ ಕಾಯಿ ಪಲ್ಯ ಮಾಡುವ ನಿರ್ಧಾರ ಮಾಡಿದಳು. ಆದರೆ ಅವಳ ಬಲಗೈ ಬೆರಳಿಗೆ ಈರುಳ್ಳಿ ಹೆಚ್ಚುವಾಗ ಚಾಕು ತಾಗಿ ಗಾಯವಾಗಿದ್ದುದರಿಂದ ಅವಳ ನಿರ್ದೇಶನದಲ್ಲಿ ಅಡಿಗೆ ಕೆಲಸವನ್ನು ಸೊಸೆ ಸುಮನ ನಿಭಾಯಿಸುತ್ತಿದ್ದಳು. ಅತ್ತೆ ಪ್ರತಿ ಸಲ ಹಾಗಲಕಾಯಿ ಪಲ್ಯ ಮಾಡುವಾಗಲೂ ಅತ್ತೆಯ ಬಳಿಯೇ ನಿಂತು ನೋಡುತ್ತಿದ್ದಳು. ಕಹಿ ಹಾಗಲಕಾಯಿ ಪಲ್ಯಕ್ಕೆ ಅಪೂರ್ವವಾದ ರುಚಿ ಅಂಟಿಸುವ ಟೆಕ್ನಿಕಲ್ ಜ್ಞಾನ ಅವಳಿಗೆ ಕಾಣಿಸಲೇ ಇಲ್ಲ. ಇವತ್ತು ತಯಾರಾಗಬೇಕಾಗಿದ್ದ ಹಾಗಲಕಾಯಿ ಪಲ್ಯ ಸಾಧಾರಣವಾದುದಾಗಿರಲಿಲ್ಲ. ಯಾಕೆಂದರೆ, ‘ಉಪ್ಪು ಮತ್ತು ಸಕ್ಕರೆಯನ್ನು ಸಂಪೂರ್ಣವಾಗಿ ವರ್ಜಿಸಬೇಕು’ ಎಂದು ಡಾಕ್ಟರ್ ಹೇಳಿದ್ದರು. ಉಪ್ಪು ಮತ್ತು ಬೆಲ್ಲ ಹಾಕದೆ ಹಾಗಲಕಾಯಿಗೆ ರುಚಿ ಬರುವುದು ಹೇಗೆ? ಶಿವರಾಮ ಬದುಕು ಎಂಬ ಹಾಗಲಕಾಯಿಯಲ್ಲಿ ಸುಖ ಎಂಬ ರುಚಿಯನ್ನು ‘ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ’ ಎಂಬಂತೆ ಹಿಂದು ಮುಂದು ನೋಡದೆ ಕಹಿಯೇ ಸಿಹಿಯೆಂಬಂತೆ ಪಲ್ಯ, ಸಾಂಬಾರು, ಗೊಜ್ಜು, ಚಟ್ಣಿ, ಬಜಿ, ತಂಬ್ಳಿ ಮುಂತಾದ ವೈವಿಧ್ಯಗಳಲ್ಲಿ ಎಲ್ಲವನ್ನೂ ಮೆಲ್ಲುವವನಾಗಿದ್ದರೂ ಹಲವು ಇಂಜಕ್ಷನ್ ಚುಚ್ಚಿಸಿಕೊಂಡು, ನೂರಾರು ಕಹಿಗುಳಿಗೆಗಳನ್ನು ನುಂಗಿ ಆಸ್ಪತ್ರೆಯಿಂದ ಮನೆಗೆ ಮರಳಿದ ಗಂಡನಿಗೆ ಉಪ್ಪು ಬೆಲ್ಲವಿಲ್ಲದ ಹಾಗಲಕಾಯಿ ಪಲ್ಯವನ್ನು ಸೊಸೆಯ ಕೈಯಲ್ಲಿ ಮಾಡಿಸಲು ಸುಶೀಲೆಗೆ ಭರ್ತಿ ಅರ್ಧಗಂಟೆ ಬೇಕಾಯಿತು. ಇದೇನು ಅಮ್ಮ ಮತ್ತು ಸುಮನ ಮಾಡುತ್ತಿದ್ದ ಹೊಸ ಅಡುಗೆ ಎಂದು ಶಿವರಾಮ ಆಫೀಸಿಗೆ ಹೊರಡುವ ನಡುವೆ ಹಲವು ಸಲ ಬಂದು ಇಣುಕಿ ಹೋಗಿದ್ದ. ಶಿವರಾಮ ಊಟಕ್ಕೆ ಕುಳಿತಾಗ ಅವನೆದುರೇ ಊಟಕ್ಕೆ ಕುಳಿತ ಮಗ ಶಿವರಾಮ ಕೂಡ ಉಪ್ಪು ಬೆಲ್ಲದ ಸ್ಪರ್ಶವಿಲ್ಲದ ಹಾಗಲಕಾಯಿ ಪಲ್ಯ ಹಾಕಿಸಿಕೊಂಡು ಮೆಲ್ಲುತ್ತಿರುವುದನ್ನು ಕಂಡು ಅದು ತಾನೇ ಎಂದನಿಸಿತು. ಊಟಕ್ಕೆ ಕುರ್ಚಿಯಲ್ಲಿ ಅವನು ಕುಳಿತ ಭಂಗಿಯೂ ತನ್ನದೇ ಎಂದನಿಸಿತು. ತಾಯಿ ‘ಸ್ವಲ್ಪ ಅನ್ನ ಹಾಕಲೆ?’ ಎಂದು ಬಡಿಸಲು ಅನ್ನ ತಂದಾಗ, ‘ಎರಡ್ನೇ ಸಲ ಅನ್ನ ತರ್‌ಬೇಡ ಅಂತ ಎಷ್ಟು ಸಲ ಅಮ್ಮ ನಿಂಗೆ ಹೇಳೋದು?’ ಎಂದು ಅವನು ಸಿಡುಕಿದ ರೀತಿಯೂ ಶಿವರಾಮ ಚಿಕ್ಕಂದಿನಲ್ಲಿ ತನ್ನ ತಾಯಿಯ ಜೊತೆ ಸಿಡುಕುತ್ತಿದ್ದಂತೆಯೇ ಇತ್ತು. ಅಪ್ಪ ಶಿವರಾಮನಿಗೆ ಬೆಳ್ಳುಳ್ಳಿ ವಗ್ಗರಣೆ ವಾಸನೆ ಮೂಗಿಗೆ ಬಡಿದ ಕ್ಷಣವೇ ಮೂರು ಸೀನು ಬರುತ್ತಿತ್ತು. ಮಗ ಶಿವರಾಮನಿಗೆ ಏನೂ ಆಗುತ್ತಿರಲಿಲ್ಲ. ಈಗ ಅವನಿಗೂ ಮೂರು ಸೀನು ಬರತೊಡಗಿತು. ಅಪ್ಪ ಶಿವರಾಮ ದಿನಾಲು ನುಣ್ಣಗೆ ಗಡ್ಡ ಬೋಳಿಸಿಕೊಳ್ಳುತ್ತಿದ್ದ. ಮಗ ಶಿವರಾಮ ವಾರಕ್ಕೆರಡು ಬಾರಿ ಕ್ಷೌರದಂಗಡಿಗೆ ಹೋಗಿ ಗಿಡ್ಡಗೆ ಗಡ್ಡ ಕತ್ತರಿಸಿಕೊಂಡು ಬರುತ್ತಿದ್ದ. ಈಗ ಅವನೂ ಅಪ್ಪನಂತೆ ದಿನವೂ ಮುಖಕ್ಷೌರ ಮಾಡಿಕೊಳ್ಳತೊಡಗಿದ. ಅಪ್ಪ ಶಿವರಾಮ ಮನೆ ಬಾಗಿಲಿಗೆ ಬಂದು ‘ಅಮ್ಮಾ ಭಿಕ್ಷ’ ಎಂದು ಕೂಗುವ ಭಿಕ್ಷುಕರಿಗೆ, ‘ಮುಂದಕ್ಕೆ ಹೋಗಪ್ಪಾ’ ಎನ್ನುತ್ತಿದ್ದ. ಮಗ ಶಿವರಾಮ, ‘ಏನೂ ಇಲ್ಲ ಹೋಗು’ ಎನ್ನುತ್ತಿದ್ದ. ಈಗ ಅವನು ಕೂಡ ‘ಮುಂದಕ್ಕೆ ಹೋಗು’ ಎನ್ನತೊಡಗಿದ. ತಾನೀಗಲೇ ಮಗನಲ್ಲಿ ಮುಕ್ಕಾಲು ಪಾಲು ಮುಂದರಿದಾಗಿದೆ, ಇದು ಬಹುತೇಕ ಪುನರ್ಜನ್ಮವೇ ಎಂದು ಅವನಿಗನಿಸಿತು. ದಿನದಿಂದ ದಿನಕ್ಕೆ ವೇಗವಾಗಿ ತಾನು ತನ್ನ ಮಗನೇ ಆಗಿ ಬದಲಾಗುತ್ತಿರುವುದನ್ನು ಶಿವರಾಮ ಸುಮಾರು ಮೂರು ವರ್ಷಗಳ ಕಾಲ ವೀಕ್ಷಿಸಿ ಇನ್ನೇನು ತಾನೇ ಅವನಾಗಲು ಉಳಿದಿರುವುದು ಒಂದು ಪರ್ಸೆಂಟ್ ಮಾತ್ರ ಎಂದನಿಸಿತು. ಮರುದಿನ ಅವನು ನಿದ್ರೆಯಲ್ಲಿದ್ದಾಗ ಕೊನೆಯುಸಿರೆಳೆದ. ಮಗನಾಗಿ ಪರಿವರ್ತನೆಗೊಳ್ಳಲಿಕ್ಕೋಸ್ಕರ ತನ್ನಿಂದ ಮಗನಿಗೆ ದಾಟಿಸಲು ಉಳಿದಿದ್ದುದು ಪೂರ್ವ ಜನ್ಮದ ಸ್ಮರಣೆ ಮಾತ್ರವಾಗಿತ್ತು. ಪ್ರಸಕ್ತ ಜನ್ಮವಿರುವಾಗಲೇ ಅದು ಪೂರ್ವ ಜನ್ಮದ ಸ್ಮರಣೆಯಾಗದು, ಪ್ರಸಕ್ತ ಜನ್ಮ ಅಂತ್ಯಗೊಳ್ಳದೆ ಪೂರ್ವ ಜನ್ಮದ ಸ್ಮರಣೆಯನ್ನು ಉತ್ತರ ಜನ್ಮಕ್ಕೆ ದಾಟಿಸಲಾಗದು ಎನ್ನುವ ಟೆಕ್ನಿಕಲ್ ಜ್ಞಾನ ಅಪ್ಪ ಶಿವರಾಮನಿಗೆ ಇರಲಿಲ. ಹಾಗಾಗಿ ಅಪ್ಪನ ಸಕಲ ಗುಣಗಳನ್ನೂ ಪಡೆದ ಮಗ ಶಿವರಾಮ ಮಗ ಶಿವರಾಮನಾಗಿಯೇ ಮುಂದುವರಿದ. |
ಉಜಿರೆಯಲ್ಲಿ ನೆಲೆಸಿರುವ ಕನ್ನಡದ ಖ್ಯಾತ ಕಾದಂಬರಿಗಾರ. ಇಂಗ್ಲಿಷ್ ಭಾಷಾ ಬೋಧನೆಯ ವಿಶೇಷಜ್ಞ