ಮನುಷ್ಯ ಸಮಾಜಕ್ಕೆ ಐಡೆಂಟಿಟಿಯನ್ನು ನೀಡುವುದು ಭಾಷೆಯೊಂದೇ ಅಲ್ಲ, ಸಾಮೂಹಿಕವಾದ ಧರ್ಮ, ಜಾತಿ, ಆಚಾರ ವಿಚಾರಗಳು, ಸಂಸ್ಕಾರಗಳು, ಕಲೆಗಳು, ನಿಷೇಧಗಳು, ನಂಬಿಕೆಗಳು, ದೇವಳಗಳು, ಮಠಗಳು, ನಿತ್ಯಕರ್ಮಗಳು, ಸ್ತ್ರೀಯರ ಸ್ಥಾನ ಮಾನ ಇತ್ಯಾದಿ ಹಲವಾರು ವಿಷಯಗಳು ಸಮಾಜದ ಗುರುತನ್ನು ರೂಪಿಸುತ್ತವೆ. ಕಾಸರಗೋಡಿನಲ್ಲಿ ಗುಡಿಗಳು, ದೇವಸ್ಥಾನಗಳು, ಭೂತಸ್ಥಾನಗಳು, ಮಸೀದಿಗಳು, ಇಗರ್ಜಿಗಳು ನಿಬಿಡವಾಗಿವೆ. ಇವೆಲ್ಲವೂ ಸುಖಶಾಂತಿಯಿಂದ, ಆದರ್ಶಕರವಾಗಿ ಯಾವತ್ತೂ ಸಹಬಾಳ್ವೆ ನಡೆಸುತ್ತಿವೆ ಎನ್ನಲಾರೆ.
ಇಂದು ಮುಂಜಾನೆ ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ಕೆ.ವಿ. ತಿರುಮಲೇಶರು ತೀರಿಹೋದರು. ಕೆಂಡಸಂಪಿಗೆಯೊಡನೆ ಅವರ ನಂಟು ಅನನ್ಯ. ನಮ್ಮ ಓದುಗರಿಗಾಗಿ ಅವರು ಬರೆದ ಕೆಲವು ಬರಹಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ…

ಸಂಸ್ಕೃತಿಸಂಕರ

‘ನನ್ನ ಜೀವನವೊಂದು ಶುದ್ಧಗೆ’ಯೆಂದು ವಾದಿಸುವವರನ್ನು ತೋರಿಸಿಕೊಡಿ. ನಾನವರಿಗೆ ಉದ್ದಂಡ ನಮಸ್ಕಾರ ಹಾಕುತ್ತೇನೆ. ವಾಸ್ತವದಲ್ಲಿ ಶುದ್ಧವಾಗಿರುವವರು ಯಾರೂ ಇಲ್ಲ. ಶುದ್ಧ ಬ್ರಾಹ್ಮಣರು? ಶುದ್ಧ ವೈಶ್ಯರು, ಕ್ಷತ್ರಿಯರು, ಶೂದ್ರರು? ನಾವು ಬಳಸುವ ಭಾಷೆಗಳು? ಉಡುಗೆ ತೊಡುಗೆ, ಆಚಾರ ವಿಚಾರಗಳು? ಇತ್ತ ನಾರಣಪ್ಪನ ಶವ ಸಂಸ್ಕಾರವನ್ನು ಯಾರು ಮಾಡಬೇಕೆಂದು ಅಗ್ರಹಾರದ ಬ್ರಾಹ್ಮಣರು ‘ಧರ್ಮ ಜಿಜ್ಞಾಸೆ’ಯಲ್ಲಿರುವಾಗ ಅತ್ತ ಬ್ಯಾರಿಯೊಬ್ಬನು ಶವಕ್ಕೆ ಅಗ್ನಿ ಸಂಸ್ಕಾರ ಮಾಡುತ್ತಾನೆ! ಅಂತೆಯೇ ರವೀಂದ್ರನಾಥ ಠಾಕೂರರ “ಗೋರಾ” ಮತ್ತು ಭೈರಪ್ಪನವರ “ವಂಶವೃಕ್ಷ” ಕೊನೆ ತನಕ ಓದಿ. ನದಿ ಮೂಲ, ಋಷಿಮೂಲ ಮಾತ್ರವಲ್ಲ ಯಾರ ಮೂಲವನ್ನೂ ಕೇಳಬೇಡಿ. ನಿಮಗೆ ಶಾಕ್ ಕಾದಿರುತ್ತದೆ. ‘ನಾವು’ ಮತ್ತು ‘ಅವರು’ ಎಂಬುದರ ನಡುವಿನ ಅಂತರ ನಮ್ಮ ದೃಷ್ಟಿಕೋನವನ್ನು ಹೊಂದಿಕೊಂಡಿರುತ್ತದೆ.

ಶುದ್ಧ ಕನ್ನಡವನ್ನು ಪ್ರತಿಪಾದಿಸುವ ವಿದ್ವಾಂಸರಿಗೆ ಗೊತ್ತಿದೆಯೋ ಇಲ್ಲವೋ, ನಾವು ಅಚ್ಚಗನ್ನಡವೆಂದು ಭ್ರಮಿಸಬಹುದಾದ ‘ಅರಸ’ ಕೂಡ ಅಷ್ಟೇನೂ ‘ಅಚ್ಚಗನ್ನಡ’ವಲ್ಲ. ಮೂಲತಃ ಅದು ಸಂಸ್ಕೃತದ ‘ರಾಜ’ ಪದದಿಂದ ತಮಿಳು ಮುಖಾಂತರ ‘ಅಕಾರ’ವನ್ನು ಪಡೆದುಕೊಂಡು ‘ಅರಸ’ ರೂಪದಲ್ಲಿ ಕನ್ನಡವನ್ನು ಪ್ರವೇಶಿಸಿತು! ಇಂದೀಗ ಅದು ಕನ್ನಡವೇ. ಎಲ್ಲವೂ ಹಾಗೆಯೇ. ನಾವು ಬೇಕೆಂದು ಪಡೆದುಕೊಂಡಾಗ ಅದು ನಮ್ಮದಾಗುತ್ತದೆ. ಇನ್ನು ಅಚ್ಚ, ಉಚ್ಚ, ದೇಸಿ, ವಿದೇಶಿ, ಶುದ್ಧ, ಅಶುದ್ಧ ಇತ್ಯಾದಿ ವರ್ಗಗಳನ್ನು ನಾವು ಬೇರೆ ಬೇರೆ ಕಾರಣಗಳಿಗೋಸ್ಕರ ಮಾಡಿಕೊಂಡದ್ದು. ಸೂಜಿ ಎಲ್ಲಿಂದ ಬಂತು, ದಬ್ಬಣ ಎಲ್ಲಿಂದ ಬಂತು, ಹೊಲಿಗೆ ಯಂತ್ರವನ್ನು ಯಾರು ಕಂಡುಹಿಡಿದರು? ನೀರೆತ್ತುವ ರಾಟೆ? ಬಟ್ಟೆ ನೇಯುವ ಮಗ್ಗ? ನೇಗಿಲು, ಎತ್ತಿನ ಗಾಡಿ? ನಮ್ಮಲ್ಲಿ ಎಲ್ಲವೂ ಇದ್ದುವು ಎನ್ನುವ ಅತಿರಾಷ್ಟ್ರೀಯವಾದಿಗಳಿದ್ದಾರೆ. ಆದರೆ ಗನ್ ಪೌಡರ್ ಮತ್ತು ತುಪಾಕಿಗಳಿರಲಿಲ್ಲವಲ್ಲ. ಆ ಕುರಿತು ಯೋಚಿಸದೆ ಇದ್ದರೆ ಅವೂ ನಮ್ಮ ಬಳಿ ಇದ್ದುವು ಎಂದುಬಿಡಬಹುದು. ಆದರೆ ಬಾಬರನಿಗೆ ಸಣ್ಣ ಸೇನೆಯೊಂದಿಗೆ ಡೆಲ್ಲಿ ಸುಲ್ತಾನ ಇಬ್ರಾಹಿಂ ಲೋಧಿಯನ್ನು ಮೊದಲ ಪಾಣಿಪತ್ ಯುದ್ಧದಲ್ಲಿ ಗೆಲ್ಲಲು ಸಾಧ್ಯವಾದುದು ತನ್ನ ಬಳಿಯಿದ್ದ, ಆಗಿನ ಕಾಲಕ್ಕೆ ನವೀನವಾಗಿದ್ದ, ತುಪಾಕಿಗಳ ಸಹಾಯದಿಂದ. ಈಗ ಈ ಶಸ್ತ್ರಾಸ್ತ್ರಗಳು ಭಾರತದಲ್ಲೂ ಇವೆ, ಆದರೆ ‘ಮೂಲತಃ’ ಭಾರತದವಲ್ಲ.

ನಾನು ಹುಟ್ಟಿಬೆಳೆದ ಮನೆ ಹುಲ್ಲು ಛಾವಣಿಯದು. ಪ್ರತಿವರ್ಷ, ಕನಿಷ್ಠ ಎರಡು ವರ್ಷಗಳಿಗೊಮ್ಮೆಯಾದರೂ, ಛಾವಣಿಗೆ ಮುಳಿಹುಲ್ಲು ಹೊದೆಸಬೇಕಾಗುತ್ತಿತ್ತು. ಈ ಕೆಲಸ ಮಾಡಲು ಪರಿಣತಿ ಬೇಕಾಗುತ್ತಿತ್ತು. ಇದಕ್ಕೆ ನಮ್ಮ ಮನೆಯ ಅನತಿ ದೂರದಲ್ಲೇ ಒಬ್ಬ ವಯಸ್ಸಾದ ‘ಥ್ಯಾಚರ್’ ಇದ್ದ. ನಾನವನನ್ನು ಪ್ರೀತಿಯಿಂದ ಮಾಲಿಂಗಜ್ಜ ಎಂದು ಕರೆಯುತ್ತಿದ್ದೆ. ವರ್ಷಗಳ ನಂತರ ಮಿಸೆಸ್ ಮಾರ್ಗರೆಟ್ ಥ್ಯಾಚರ್ ಬ್ರಿಟನ್ನಿನ ಪ್ರಧಾನಿಯಾಗಿದ್ದಾಗ ಈ ‘ಥ್ಯಾಚರ್’ ಉಪನಾಮ ಆತ್ಮೀಯವೆನಿಸಿತು. ಹಿಂದೆ ಬ್ರಿಟನ್ನಿನಲ್ಲೂ ಮನೆಗಳಿಗೆ ಹುಲ್ಲು ಹೊದೆಸುತ್ತಿದ್ದರೆನಿಸಿ ಆ ದೇಶದೊಂದಿಗೆ ಆತ್ಮೀಯತೆಯೂ ಬಂತು! ನೋಡಿದಿರ, ಎಷ್ಟೊಂದು ಸಣ್ಣ ಸಂಗತಿ ಸಾಕು ಆತ್ಮೀಯತೆಗೆ? ಇದು ಬ್ರಿಟನ್ನಿಗೂ ಸೀಮಿತವಾಗಲಿಲ್ಲ, ಐರ್ಲೆಂಡಿಗೂ ಹರಡಿತು. ಯಾಕೆಂದರೆ ಐರಿಶ್ ಕವಿ ಸೀಮಸ್ ಹೀನಿಯ “ಥ್ಯಾಚರ್” ಹೆಸರಿನ ಕವಿತೆಯೊಂದಿದೆ: ಇದೂ ಹುಲ್ಲು ಹೊದೆಸುವ ಒಬ್ಬನ ಕುರಿತಾದುದು, ಮುಳಿಹುಲ್ಲಿಗೆ ಬದಲಾಗಿ ಇಲ್ಲಿ ಗೋಧಿಯ ಬೈಹುಲ್ಲನ್ನು ಹೊದೆಸಲಾಗುತ್ತದೆ ಅಷ್ಟೆ ವ್ಯತ್ಯಾಸ. ಈ ಕೊನೆ ಸಾಲುಗಳನ್ನು ಗಮನಿಸಿ:

Couchant for days on sods above the rafters,
He shaved and flushed the butts, stitched all
together

Into a sloped honeycomb, a stubble patch,
And left them gaping at his Midas touch.
— Thatcher, from Death of a Naturalist (1966)

ಹೀನಿಯ ಥ್ಯಾಚರಿನಷ್ಟೇ ಗೌರವಾರ್ಹ ನನ್ನ ಮಾಲಿಂಗಜ್ಜ. ಈಗ ಅವನಿಲ್ಲ; ಅವನು ಗತಿಸಿ ಕಾಲವಾಗಿದೆ. ಆದರೂ ನನ್ನ ಸ್ಮೃತಿಯಲ್ಲಿ ಇನ್ನೂ ಇದ್ದಾನೆ. ಅವನು ಮುಳಿ ಹೊದೆಸುತ್ತಿದ್ದ ಪ್ರತಿಯೊಂದು ಚಲನ ವಲನವೂ ನನಗೆ ಗೊತ್ತಿದೆ. ಮೈದಾಸ್ ಟಚ್ ಅವನ ಹೊದೆತಕ್ಕೂ ಇತ್ತು. ಕೆಲಸದ ದಿನಗಳಲ್ಲಿ ಅವನು ನಮ್ಮಲ್ಲೆ ಊಟ ಮಾಡುತ್ತಿದ್ದ. ಬೇಸಿಗೆಯ ಕಾಲವಾದ್ದರಿಂದ (ಹುಲ್ಲು ಹೊದೆಸುವುದು ಸಾಧಾರಣವಾಗಿ ಬೇಸಿಗೆಯಲ್ಲೇ) ತಾನೇ ಕಟ್ಟುತ್ತಿದ್ದ ಹಸಿ ಅಡಿಕೆ ಹಾಳೆಯ ಪಡಿಗೆಯಲ್ಲಿ ಅವನು ಕೈತುಂಬ ಉಣ್ಣುವ ಗಂಜಿಯೂಟದ ಶೈಲಿಯನ್ನು ಕಂಡರೆ ಆಗಷ್ಟೇ ಉಂಡವರಿಗೂ ಮತ್ತೊಮ್ಮೆ ಉಣಬೇಕೆನಿಸುವುದು! ಚೆನ್ನಾಗಿ ಹಸಿದವರ ಊಟದ ರೀತಿ ಅಂಥದು. ಮಾಲಿಂಗಜ್ಜನ ಆತ್ಮಕ್ಕೆ ಶಾಂತಿಯಿರಲಿ.

ಕಾಸರಗೋಡಿನ ಹಳ್ಳಿಯೊಂದರಲ್ಲಿ ಹುಟ್ಟಿಬೆಳೆದ ನಾನು ಎಷ್ಟೇ ಕಷ್ಟ ಕಾರ್ಪಣ್ಯಗಳನ್ನೆದುರಿಸಿದರೂ ಹಲವು ರೀತಿಗಳಲ್ಲಿ ಅದೃಷ್ಟವಂತನೇ ಸರಿ. ಮುಖ್ಯವಾಗಿ ಅಲ್ಲಿನ ಬಹು ಹಾಗೂ ಮಿಶ್ರ ಹಾಗೂ ವೈವಿಧ್ಯಮಯ ಸಂಸ್ಕೃತಿಗೆ ನಾನು ಋಣಿ. ಎಲ್ಲಕ್ಕಿಂತ ಮುಖ್ಯವಾಗಿ, ಇದೊಂದು ಬಹುಭಾಷಾ ಪ್ರದೇಶ. ಯಾರ ಮಾತೃಭಾಷೆಯೂ ಅಲ್ಲದ, ಆದರೆ ವಿದ್ಯಾವಂತ ವರ್ಗಕ್ಕೆ ಸ್ವಲ್ಪ ಮಟ್ಟಿಗಾದರೂ ಗೊತ್ತಿರುವ ಇಂಗ್ಲಿಷ್ ಮತ್ತು ಹಿಂದಿಯನ್ನು ಬದಿಗಿರಿಸೋಣ; ಮಾತೃಭಾಷೆಯಾಗಿರುವ ನುಡಿಗಳನ್ನು ನೋಡಿದರೆ ಗೊತ್ತಾಗುತ್ತದೆ: ಕನ್ನಡ, ತುಳು, ಮಲೆಯಾಳಂ, ಕೊಂಕಣಿ, ಮರಾಠಿ. ಈ ಒಂದೊಂದು ಭಾಷೆಗೂ ನಾನು ತಿಳಿದಂತೆ ಅನೇಕ ಪ್ರಭೇದಗಳು; ಕನ್ನಡವೊಂದಕ್ಕೇ ಹವ್ಯಕ ಕನ್ನಡ, ಹೆಬ್ಬಾರರ ಕನ್ನಡ, ಕೋಟೆ (ರಾಮಕ್ಷತ್ರಿಯ) ಕನ್ನಡ, ಮಾದಿಗ ಕನ್ನಡ; ತುಳುವಿನಲ್ಲಿ ಬ್ರಾಹ್ಮಣ (ಶಿವಳ್ಳಿ) ತುಳು, ಶೂದ್ರ ತುಳು, ಶೂದ್ರ ತುಳುವಿನಲ್ಲಿ ಬಂಟರ ತುಳು, ದಲಿತ ತುಳು, ಕೊರಗರ ತುಳು. ಕೊಂಕಣಿಯಲ್ಲಿ ಕೊಂಕಣಸ್ಥರ ಕೊಂಕಣಿ, ಕ್ರಿಶ್ಚಿಯನರ ಕೊಂಕಣಿ. ಮಲೆಯಾಳಮಿನಲ್ಲಿ ಮಲಬಾರ್ ಮಲೆಯಾಳ ಮತ್ತು ಬ್ಯಾರಿ ಮಲೆಯಾಳ, ಮರಾಠಿಯಲ್ಲಿ ಕರ್ಹಾಡ ಬ್ರಾಹ್ಮಣರ ಮರಾಠಿ, ಶೂದ್ರರ ಮರಾಠಿ. ಇವೆಲ್ಲವೂ ಬಗಲು ಬಗಲಲ್ಲೇ ಇರುತ್ತಿದ್ದ, ಈಗಲೂ ಇರುವ ಭಾಷೆಗಳು, ಕೆಲವು ಆಯಾ ಪಂಗಡಗಳ ಒಳಗೆ (ಹವ್ಯಕ, ಮರಾಠಿ, ಕೊಂಕಣಿ), ಕೆಲವು ಸಾಮಾಜಿಕವಾಗಿ(ಸೀಮೆಕನ್ನಡ, ತುಳು, ಮಲೆಯಾಳ). ಪ್ರತಿಯೊಂದು ಭಾಷೆಯೂ ಅದನ್ನು ಆಡುವವರಿಗೆ ಮುದ್ದು, ಆದರೂ ಅದನ್ನು ಇತರ ಭಾಷಿಕರ ಮೇಲೆ ಹೇರುವ ಕ್ರಮವಿಲ್ಲ. ಇಲ್ಲಿನ ಎಲ್ಲರಿಗೂ ಎಲ್ಲ ಭಾಷೆಗಳೂ ಗೊತ್ತು ಎಂದು ಹೇಳುವಂತೆಯೂ ಇಲ್ಲ.

ಈಗ ಭಾಷಾ ಸಂಸ್ಥಾನಗಳು ಹುಟ್ಟಿಕೊಂಡು ಮೊದಲಿನ ಭಾಷಾ ಸಾಮರಸ್ಯಕ್ಕೆ ಧಕ್ಕೆ ಬಂದಿದೆ ಎನ್ನುವುದೂ ನಿಜ. ಮೈನಾರಿಟಿ ಸಂಸ್ಕೃತಿಗಳನ್ನು (ಅವು ಸಾರ್ವತ್ರಿಕ ಮೌಲ್ಯಗಳಿಗೆ ಎದುರಾಗದೆ ಇದ್ದರೆ) ಮೆಜಾರಿಟಿ ಸಂಸ್ಕೃತಿ ಕಾಪಾಡುವುದು ಅಗತ್ಯ. ಸಂಸ್ಕೃತಿಯಲ್ಲಿ ಭಾಷೆ ಎನ್ನುವುದು ಅದರ ಜೀವವಿದ್ದ ಹಾಗೆ. ಅದನ್ನು ಕೊಂದರೆ, ಉಳಿಯುವುದು ಕಳೇಬರ ಮಾತ್ರ. ಅಮೇರಿಕನ್ ಕವಿ ಡಬ್ಲ್ಯೂ. ಎಸ್. ಮರ್ವಿನ್ ನ ಕವಿತೆಯೊಂದು ನೆನಪಾಗುತ್ತದೆ ಅದರ ಅರಂಭ:

ಉಸಿರೊಂದು ಹೊರಟೋಗುತ್ತೆ ವಾಕ್ಯಗಳಿಂದ, ಆಮೇಲದು ವಾಪಸು ಬರಲ್ಲ
ಅಂತಿದ್ದೂ ಹಳಬರಿಗೆ ನೆನಪಿದೆ ತಾವು ಹೇಳಬಹುದಾದ್ದು ಏನೋ ಒಂದು

ಆದರೆ ಅವರಿಗೆ ಗೊತ್ತು ಅಂಥ ಸಂಗತಿಗಳನ್ನ ಜನ ಈಗ ನಂಬಲ್ಲ
ಹಾಗೂ ಯುವಕರ ಹತ್ತಿರ ಶಬ್ದಗಳು ಕಡಿಮೆ
-The Loss of Language

ಭಾಷೆಯ ಅವಸಾನ ಕೇವಲ ಭಾಷೆಯದೇ ಅಲ್ಲ, ಜನಜೀವನದ್ದು ಎನ್ನುವುದು ಕವಿತೆಯ ಅರ್ಥ. ನನ್ನ ಮನೆ ಮಾತಾದ ಹವ್ಯಕದ ಅನೇಕ ಪದಗಳು ನನಗೀಗ ಮರೆತು ಹೋಗಿವೆ. ನೆನಪಿಗೆ ತರಲು ಪೇಚಾಡುತ್ತೇನೆ. ಹಲವು ಸಲ ಸಿಗುವುದಿಲ್ಲ, ಸಿಗದಾಗ ನಿರಾಸೆಯಾಗುತ್ತೆ. ಕೆಲವು ಸಲ ಸಿಗುತ್ತವೆ-ಸಿಕ್ಕಾಗ ಕಳೆದುಹೋದ ಅಮೂಲ್ಯ ವಸ್ತುವೊಂದು ಮರಳಿ ಸಿಕ್ಕಿದಷ್ಟು ಸಂತೋಷವಾಗುತ್ತದೆ. ಯಾಕೆಂದು ನನಗೆ ತಿಳಿಯದು; ಬಹಶಃ ಅವು ನನ್ನ ಗುರುತಿನ ಒಂದು ಭಾಗವೆಂಬ ಕಾರಣಕ್ಕೆ. ಅಷ್ಟೂ ಅಲ್ಲ, ನಾನೊಬ್ಬ ಪದಮೋಹಿ; ಭಾಷೆಗಳನ್ನು ನಾನು ಇಷ್ಟಪಡುತ್ತೇನೆ. ಕನ್ನಡವನ್ನು ಪ್ರೀತಿಸುವುದಕ್ಕೆ ಇತರ ಭಾಷೆಗಳನ್ನು ಕಡೆಗಣಿಸಬೇಕೆಂದಿಲ್ಲ.

ಡಿಗ್ರಿ ಕ್ಲಾಸಿನಲ್ಲಿ ಇಂಗ್ಲಿಷ್ ಸಾಹಿತ್ಯ ಕಲಿಸುತ್ತಿದ್ದ ಪ್ರೊಫೆಸರ್ ಮಧುಕರ ರಾವ್ ನನಗೆ ಸಾಹಿತ್ಯ ಮೋಹವನ್ನು ಹಿಡಿಸಿದ್ದು ಮಾತ್ರವಲ್ಲ, ಪದ ಮೋಹವನ್ನೂ ಹಿಡಿಸಿಬಿಟ್ಟರು. ಈ ಶೇಕ್ಸ್ಪಿಯರ್ ನೋಡಿ ತನ್ನ ಚೆಲುವಿನ ಕಥಾನಾಯಕಿಯರಿಗೆ ಎಷ್ಟೊಂದು ಚಂದದ ಹೆಸರುಗಳನ್ನು ಇಟ್ಟಿದ್ದಾನೆ—ಒಫೀಲಿಯಾ, ಒಲೀವಿಯಾ, ಇಮೊಜಿನ್, ಮಿರಾಂಡಾ, ಜೂಲಿಯೆಟ್, ರೋಸಲಿಂಡ್, ಮೆರೀನಾ,ಎನ್ನುತ್ತಿದ್ದರು. . Nonpareil, unparalleled, mellifluous, gossamer, casement ಮುಂತಾದ ಪದಗಳನ್ನು ನಾನು ಕಲಿತುದು ಅವರಿಂದಲೇ. ಈಚೆಗೆ ಪುಸ್ತಕವೊಂದನ್ನು ಓದುತ್ತ stentorian ಎಂಬ ಪದ ಕಾಣಸಿಕ್ಕಿ ನನ್ನ ಮನಸ್ಸು ಮಧುಕರ ರಾವ್ ಕ್ಲಾಸಿಗೆ ಹೋಯಿತು; stentorian ಎಂದರೆ ಮನುಷ್ಯ ಧ್ವನಿಗೆ ಸಂಬಂಧಿಸಿದ್ದು, ‘ಏರು ಸ್ವರದ ಮತ್ತು ಶಕ್ತಿಯುತ’ ಎಂದು ಅರ್ಥ!ಅಂತೆಯೇ ಇಂಗ್ಲಿಷ್ ನ ಹಲವಾರು ನುಡಿಗಟ್ಟುಗಳನ್ನು (ಇಡಿಯಮ್ಸ್), ಗಾದೆಮಾತುಗಳನ್ನು ‘out-Herod Herod’), ಶೇಕ್ಸ್ಪೀರಿಯನ್ ಮಹಾ ವಾಕ್ಯಗಳನ್ನು, ಉದಾ;

Out, out, brief candle!
Life’s but a walking shadow, a poor player,
That struts and frets his hour upon the stage,
And then is heard no more. It is a tale
Told by an idiot, full of sound and fury,
Signifying nothing.
-Macbeth

ಮುಂದೆ ನಾನು ಭಾಷಾವಿಜ್ಞಾನದಲ್ಲಿ ಆಸಕ್ತಿ ತಳೆಯುತ್ತ ಪದಗಳ ವ್ಯುತ್ಪತ್ತಿಯ ಕಡೆ ಗಮನ ಹರಿಸಿದೆ. ಈ ಇಂಗ್ಲಿಷ್ ನ ಶಬ್ದ ದಾಹ ಎಷ್ಟು ಅಗಾಧವಾದುದು ಎಂದು ದಿಗ್ಭ್ರಮೆಗೊಂಡೆ. ನಾನು ಇಂಗ್ಲೆಂಡಿನ ಇತಿಹಾಸವನ್ನೂ ಓದುತ್ತಿದ್ದೆ. ಇಂಗ್ಲೆಂಡ್ ಬೇರೆಯಲ್ಲ, ಇಂಗ್ಲಿಷ್ ಭಾಷೆ ಬೇರೆಯಲ್ಲ ಎಂಬಂತೆ ಎರಡೂ ಹಾಸುಹೊಕ್ಕಾಗಿವೆ. ಇಂಗ್ಲೆಂಡಿಗೆ ಆ ಹೆಸರು ಬರಲು ಕಾರಣವಾದವರು ಪೂರ್ವಕಾಲದಲ್ಲಿ ಅಲ್ಲಿಗೆ ಬಂದು ನೆಲಸಿದ ಸ್ಕಾಂಡಿನೇವಿಯದ ಜನವರ್ಗಗಳಲ್ಲಿ ಒಂದು (‘ಏಂಗ್ಲ್ಸ್’). ಇಡೀ ಇಂಗ್ಲೆಂಡ್ ದ್ವೀಪ ಒಂದು ವಲಸಿಗರ ದೇಶ; ಅವರ ಭಾಷೆಯೂ ಹಾಗೆಯೇ- ಒಂದು ಸಂಕರ. ಅದು ಆಗಿಂದಾಗ್ಗೆ ಬದಲಾಗುತ್ತ ಬಂದಿದ್ದರೂ (ಹಳೆ ಇಂಗ್ಲಿಷ್ ಮತ್ತು ನಡು ಇಂಗ್ಲಿಷ್ ಇಂದು ‘ಕುರಿತೋದದೆ’ಅರ್ಥವಾಗುವುದಿಲ್ಲ. ಆಧುನಿಕ ಇಂಗ್ಲಿಷ್ ಗಳು ಹಲವಾರು ಇವೆ—ಅಮೇರಿಕನ್, ಸ್ಕಾಟಿಶ್, ಐರಿಶ್, ಸಿಂಗಪೂರಿಯನ್, ಇಂಡಿಯನ್, ವೆಸ್ಟ್ ಇಂಡಿಯನ್, ಆಫ್ರಿಕನ್, ಆಸ್ಟ್ರೇಲಿಯನ್; ಇವೆಲ್ಲದರಲ್ಲಿ ಶ್ರೇಣೀಕೃತ ಭಿನ್ನತೆಗಳೂ ಇವೆ. ಆದರೆ ಒಟ್ಟಾರೆ ಒಂದು ಭಾಷೆಯಾಗಿ ಇಂಗ್ಲಿಷ್ ಗೆ ಅದರದೇ ಸ್ವಾಯತ್ತತೆ, ಗುರುತು ಇಲ್ಲದೆಇಲ್ಲ. ಅದು ಜರ್ಮಾನಿಕ್ ಮೂಲದ್ದಾದರೂ ಜರ್ಮನ್ ಅಲ್ಲ; ಲ್ಯಾಟಿನೇಟ್ ಪದಗಳನ್ನು ಹೊಂದಿದ್ದೂ, ಲ್ಯಾಟಿನ್ ಅಲ್ಲ; ಫ್ರೆಂಚಿನ ಪ್ರಭಾವವಿದ್ದೂ ಫ್ರೆಂಚ್ ಅಲ್ಲ; ಅರೆಬಿಕ್ ಪದಗಳಿದ್ದೂ ಅರೆಬಿಕ್ ಅಲ್ಲ; ಗ್ರೀಕ್ ಪಾರಿಭಾಷಿಕ ಪದಗಳನ್ನು ಬಳಸುತ್ತಿದ್ದರೂ ಗ್ರೀಕ್ ಅಲ್ಲ.

ಕಾಸರಗೋಡಿನಂಥ ಒಂದು ಚಿಕ್ಕ ಪ್ರದೇಶದಲ್ಲಿ ಮೇಲೆ ಹೆಸರಿಸಿದ ಭಾಷೆಗಳು ಮೈಯೊರೆಸಿಕೊಂಡಿರದೆ ಸಾಧ್ಯವಿಲ್ಲ. ಈ ಭಾಷಿಕರೆಲ್ಲ ಇಲ್ಲಿಗೆ ಯಾವಾಗ ಬಂದರು, ಎಲ್ಲಿಂದ ಬಂದರು, ಅವರು ತಮ್ಮ ಜತೆ ತಂದ ಭಾಷೆಗಳು ಹೇಗಿದ್ದುವು, ಅವು ಈಗ ಹೇಗಾಗಿವೆ ಎಂದು ಕೇಳುವುದು ಸುಲಭ; ಉತ್ತರಿಸುವುದು ಕಷ್ಟ. ಇಲ್ಲಿ ಎಲ್ಲರಿಗಿಂತ ಮೊದಲು ಇದ್ದವರು ತೌಳವರು ಎಂದು ಐತಿಹ್ಯಗಳಿಂದ, ಪಾಡ್ದನಗಳಿಂದ ಊಹಿಸಬಹುದು. ಅಲ್ಲದೆ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಕಾಸರಗೋಡು, ಮಂಗಳೂರು, ಉಡುಪಿ ಕರಾವಳಿಯಲ್ಲಲ್ಲದೆ ಇನ್ನೆಲ್ಲೂ ಇಲ್ಲ. ಇದು ಅಕ್ಷರ ಸಾಹಿತ್ಯದಿಂದ ದೂರವಾದ ಕಾರಣವೋ ಏನೋ, ಬ್ರಾಹ್ಮಣ ತುಳು ಪ್ರಭೇದವನ್ನು ಹೊರತುಪಡಿಸಿದಂತೆ, ಸಂಸ್ಕೃತದ ಪ್ರಭಾವಕ್ಕೆ ಜಾಸ್ತಿ ಒಳಗಾಗದೆ ಇದೆ. ಬದಲು ಸಮೃದ್ಧ ಜನಪದ ಸಾಹಿತ್ಯವನ್ನು ಪಡೆದಿದೆ. ಕೆಲವು ಮಲೆಯಾಳಿ ಬೂತಗಳನ್ನು ಬಿಟ್ಟರೆ ಇಲ್ಲಿನ ಬೂತಗಳೆಲ್ಲ ತುಳುವೇ.

ಈ ಪ್ರಾಂತ್ಯಕ್ಕೆ ಕನ್ನಡ ಮುಖ್ಯವಾಗಲು ಕಾರಣ ಹಿಂದಿನ ಮೆಡ್ರಾಸ್ ಪ್ರಸಿಡೆನ್ಸಿಯಲ್ಲಿ ಇದು ದಕ್ಷಿಣ ಕರ್ನಾಟಕದ ಭಾಗವಾಗಿದ್ದುದು. ಈ ದಕ್ಷಿಣ ಕನ್ನಡ ದಕ್ಷಿಣದಲ್ಲಿ ಕಾಸರಗೋಡಿನಿಂದ ಉತ್ತರದಲ್ಲಿ ಮಂಗಳೂರು, ಉಡುಪಿ ದಾಟಿ ಕುಂದಾಪುರ ತನಕ ಕರಾವಳಿಯಲ್ಲಿ ಹಾಗೂ ಪೂರ್ವದಲ್ಲಿ ಸುಳ್ಯ ಪುತ್ತೂರು ಬೆಳ್ತಂಗಡಿ ಕಡೆಗಳಲ್ಲಿ ಮೈಚಾಚಿಕೊಂಡಿರುವ ಪ್ರದೇಶ. ಕಾಸರಗೋಡಿನ ಈ ಕನ್ನಡ ಅಸ್ಮಿತೆಗೆ ಧಕ್ಕೆ ಬಂದುದು 1956ರ ಭಾಷಾವಾರು ಪ್ರಾಂತ ರಚನೆಯಲ್ಲಿ, ಕಾಸರಗೋಡಿನ ಬಹುಜನರ ಮನಸ್ಸಿಗೆ ವಿರುದ್ಧವಾಗಿ ಅದನ್ನು ಕೇರಳದ ಭಾಗವಾಗಿ ಮಾಡಿದಾಗ. ದೊಡ್ಡ ಚಳುವಳಿಯೇ ನಡೆಯಿತಾದರೂ ರಾಜಕೀಯ ಚದುರಂಗದಾಟದಲ್ಲಿ ಏನೂ ಫಲ ನೀಡಲಿಲ್ಲ. ಕೇರಳ ಸರಕಾರ ಕನ್ನಡ ಮೈನಾರಿಟಿಯ ಹಕ್ಕುಗಳನ್ನು ರಕ್ಷಿಸಬೇಕಿತ್ತು; ಅದಕ್ಕೆ ಬದಲಾಗಿ ಅದು ದಮನ ನೀತಿಯನ್ನು ಅನುಸರಿಸುತ್ತಿರುವುದು ಪ್ರಜಾ ಪ್ರಭುತ್ವಕ್ಕೆ ಮಾಡುವ ಅಪರಾಧ. ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಲವಲೇಶವೂ ಗೊತ್ತಿಲ್ಲದ ಮಲೆಯಾಳಿ ಅಧ್ಯಾಪಕರನ್ನು ನೇಮಿಸುವುದು ಏರುಗೈಯ ವರ್ತನೆಯಲ್ಲವೇ? ಇಂಥ ವರ್ತನೆಗಳಿಂದ ಕಾಸರಗೋಡಿನ ಕಾಲಾಂತರದ ಭಾಷಾಬಾಂಧವ್ಯ ಹಾಳಾಗುತ್ತದೆ ಅಷ್ಟೆ.

1956ರಲ್ಲಿ ನಾನಿನ್ನೂ ಹೈಸ್ಕೂಲು ಹುಡುಗ. ಆದರೂ ಕಾಸರಗೋಡು ಕನ್ನಡಿಗರ ಹೋರಾಟದಲ್ಲಿ ಭಾಗವಹಿಸಿದೆ. ಪೋಲೀಸರ ಕೈಯಲ್ಲಿ ಬಂಧನಕ್ಕೊಳಗಾದೆ. ಕರ್ನಾಟಕ ಸಮಿತಿ ಚುನಾವಣೆಗೆ ನಿಂತಾಗ ಉಮೇದುವಾರರ ಪರವಾಗಿ ಕೆಲಸ ಮಾಡಿದೆ. ಇದೆಲ್ಲದರ ನೆನಪುಗಳು ಕಹಿಯೋ ಸಿಹಿಯೋ ಇನ್ನೂ ನನ್ನ ಮನಸ್ಸಿನಲ್ಲಿವೆ. ಮೈನಾರಿಟಿಯನ್ನು ಹೇಗೆ ನಡೆಸಿಕೊಳ್ಳಬೇಕೆನ್ನುವುದಕ್ಕೆ ಮಾದರಿಯಾಗಬಹುದಾದ ಒಂದು ಸದವಕಾಶವನ್ನು ಕೇರಳ ಸರಕಾರಗಳು ಕಳೆದುಕೊಂಡು ಬಂದಿವೆ-ಒಂದು ಚಿಕ್ಕ ಪ್ರದೇಶಕ್ಕೆ ಸೀಮಿತವಾದ ಕನ್ನಡದಿಂದ ಮಲೆಯಾಳಕ್ಕೆ ಏನಾದರೂ ಗಂಡಾಂತರವಿದೆಯೇ? ಇಲ್ಲವಲ್ಲ. ಬದಲು ಬಹುತ್ವಕ್ಕೆ ಪ್ರೋತ್ಸಾಹ ಕೊಟ್ಟಂತೆ ಆಗುತ್ತದೆ. ಕೆಲಸ ಹುಡುಕಿ ಎಲ್ಲಿಗೆ ಬೇಕಾದರೂ ಹೋಗುತ್ತಿರುವ ಮಲೆಯಾಳಿಗಳಿಗೆ ಇದು ಗೊತ್ತಿಲ್ಲದ ವಿಷಯವೇ? ಮೈನಾರಿಟಿ ಮೆಜಾರಿಟಿ ಪ್ರಶ್ನೆ ಎಲ್ಲೇ ಬಂದಾಗಲೂ ಇದು ಮೆಜಾರಿಟಿಗೆ ಬಹುತ್ವವನ್ನು ಕಾಪಾಡಲು ಒಂದು ಅವಕಾಶವೆಂದೇ ನನಗನಿಸುವುದು.

ಕಾಸರಗೋಡನ್ನು ಸಂಪೂರ್ಣವಾಗಿ ಮಲೆಯಾಳೀಕರಿಸುವುದರಿಂದ ಕೇರಳಕ್ಕೆ ನಷ್ಟವಲ್ಲದೆ ಲಾಭವೇನೂ ಇಲ್ಲ. ಅದಕ್ಕೆ ಬದಲು ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುವುದು, ಕನ್ನಡದ ಮಹಾಕಾವ್ಯಗಳನ್ನು ಮಲೆಯಾಳಕ್ಕೆ ಭಾಷಾಂತರಿಸುವುದು ನಡೆಯಬೇಕಾದ ಕೆಲಸ. ನೋಡಿ, ಕನ್ನಡಿಗರು ಕೇರಳದಲ್ಲೇ ಹೆಚ್ಚು ಕನ್ನಡಿಗರಾಗಿದ್ದಾರೆ ಎಂದು ಕೇರಳ ಪ್ರಾಮಾಣಿಕವಾಗಿ ತೋರಿಸುವಂತಾಗಬೇಕು. ಕೋಟ್ಟಾಯಮಿನ ಮಹಾತ್ಮಾಗಾಂಧಿ ಯುನಿವರ್ಸಿಟಿಗೆ ಒಂದು ಅವಧಿಗೆ ಯು. ಆರ್. ಅನಂತಮೂರ್ತಿಯವರನ್ನು ಕುಲಪತಿಯಾಗಿ ಕೇರಳ ಬರಮಾಡಿಕೊಂಡಿತು. ಇದು ಸರ್ವತ್ರ ಶ್ಲಾಘನೆಗೆ ಒಳಗಾದ ಸಂಗತಿ. ಇಂಥ ಕೆಲಸ ನಡೆದರೆ ಎಷ್ಟು ಚಂದ ಅಲ್ಲವೇ? ಕೊಡು ಕೊಳ್ಳುವಿಕೆ ಇಲ್ಲದೆ ಯಾವ ಸಂಸ್ಕೃತಿಯೂ ಬೆಳೆದಿಲ್ಲ.

ಮಲೆಯಾಳವನ್ನಾಗಲಿ, ಮಲೆಯಾಳಿಗಳನ್ನಾಗಲಿ ನಾನು ದ್ವೇಷಿಸುವುದಿಲ್ಲ, ಯಾರೂ ದ್ವೇಷಿಸಲೂ ಬಾರದು. (ಇದೊಂದು ಹೇಳಿಕೊಳ್ಳುವ ಮಾತೂ ಅಲ್ಲ. ಈ ಸಂದರ್ಭದಲ್ಲಿ ಹೇಳುತ್ತಿದ್ದೇನೆ ಅಷ್ಟೆ.) ಸುತ್ತು ಮುತ್ತಲು ಮಲೆಯಾಳಿಗಳೇ ತುಂಬಿದ್ದ ಊರಿನಲ್ಲೇ ನಾನು ಹುಟ್ಟಿಬೆಳೆದುದು. ಮಲೆಯಾಳಿ ಬೂತಕೋಲಗಳನ್ನೇ ನಾನು ಮೊದಲು ನೋಡಿದುದು. ಮಲೆಯಾಳೀ ಮಾತೆಯೇ ನನಗೆ ಸ್ತನದಾಯಿನಿಯಾದುದು. ಮಲೆಯಾಳಿ ಹುಡುಗ ಹುಡುಗಿಯರೇ ನನ್ನ ಮೊದಲ ಆಟದ ಗೆಳೆಯರು ಕೂಡ. ನಮ್ಮ ಮನೆಗೆಲಸಕ್ಕೆ, ತೋಟದ ಕೆಲಸಕ್ಕೆ ಬರುತ್ತಿದ್ದವರೂ ಮಲೆಯಾಳಿಗಳೇ ಆಗಿದ್ದರು. ನಾನು ಶಾಲೆಗೆ ಹೋಗಲು ಪಡುವಣ ನನ್ನ ಸೋದರ ಮಾವನ ಮನೆಗೆ ಹೋದಾಗ ಪರಿಸರ ಸ್ವಲ್ಪ ಬದಲಾಯಿತು ಎನ್ನಬಹುದು. ಅಲ್ಲಿ ತುಳು ಭಾಷಿಕರು ಹೆಚ್ಚಿದ್ದರು.

ಕಾಸರಗೋಡಿನಲ್ಲಿ ಇಂಗ್ಲಿಷ್ ಬಿ.ಎ. ಮಾಡಿದ ಮೇಲೆ ನಾನು ಎಂ.ಎ. ಮಾಡಲು ಹೋದುದು ಮೈಸೂರಿಗಲ್ಲ, ಕೇರಳದ ರಾಜಧಾನಿಯಾದ ತಿರುವನಂತಪುರಕ್ಕೆ. ಇಸವಿ 1964. ತಿರುವನಂತಪುರ ಸೊಗಸಾದ ಚಿಕ್ಕ ನಗರ; ಅದೊಂದು ಪ್ರಾಂತದ ರಾಜಧಾನಿಯೆನ್ನುವ ಭಾವನೆಯೇ ಬರದಿರುವಂಥದು. ಅಲ್ಲಿ ಸಾಕಷ್ಟು ತಮಿಳು ಜನಸಂಖ್ಯೆಯೂ ಇತ್ತು. ಎಲ್ಲ ಗಡಿಪ್ರದೇಶಗಳಲ್ಲೂ ನಾವು ಇಂತಹ ದ್ವಿಭಾಷಾ, ಕೆಲವೆಡೆ ಬಹುಭಾಷಾ, ಚಲನೆಯನ್ನು ನಾವು ಕಾಣುತ್ತೇವೆ. ಎಂ.ಎ. ಮೊದಲ ವರ್ಷ ಕೇರಳದ ಪ್ರಸಿದ್ಧ ಕವಿ ಅಯ್ಯಪ್ಪ ಪಣಿಕ್ಕರ್ ನನಗೆ ಅಧ್ಯಾಪಕರಾಗಿದ್ದರು; ಅವರು ಕಲಿಸುತ್ತಿದ್ದುದು ಹಳೆ ಇಂಗ್ಲಿಷ್. ಮುಂದಿನ ವರ್ಷ ಅವರು ಯುನಿವರ್ಸಿಟಿ ಕೇಂದ್ರಕ್ಕೆ ಹೋದರು. ಕವಿಯಿತ್ರಿ ಹೃದಯಕುಮಾರಿ (ಕವಿಯಿತ್ರಿ ಸುಗತಕುಮಾರಿಯ ಸೋದರಿ) ಕೂಡ ನನಗೆ ಅಧ್ಯಾಪಕರಾಗಿದ್ದರು; ಅವರು ಕಲಿಸುತ್ತಿದ್ದುದು ಇಂಗ್ಲಿಷ್ ರೊಮ್ಯಾಂಟಿಕ್ ಪೋಯೆಟ್ರಿ. ಆದರೆ ನಾನು ಹೆಚ್ಚು ಇಷ್ಟಪಡುತ್ತಿದ್ದುದು ಕುಮಾರ ಪಿಳ್ಳೆಯವರನ್ನು. ಅವರು ಕಲಿಸುತ್ತಿದ್ದುದು ಟಿ.ಎಸ್. ಎಲಿಯಟ್ ನ ಕವಿತೆಗಳನ್ನು. ಹೊರಗೆ ಕಂಡಾಗಲೆಲ್ಲ ನನ್ನ ಸುಖದುಃಖ ವಿಚಾರಿಸುತ್ತಿದ್ದರು. ನನ್ನ ಊರ ಬಗ್ಗೆ ಕೇಳುತ್ತಿದ್ದರು.

ಇಸವಿ 1966. ಎಂ.ಎ. ಮುಗಿಸಿಕೊಂಡು ಕೇರಳದಲ್ಲಿ ಇಂಗ್ಲಿಷ್ ಲೆಕ್ಚರರಾಗಿ ಸುತ್ತಾಡುತ್ತಿದ್ದ ವೇಳೆ ನನಗೆ ಹಲವು ಆಧುನಿಕ ಮಲೆಯಾಳಿ ಕವಿಮಿತ್ರರು ಲಭ್ಯವಾದರು. ಕಡಮನಟ್ಟ ರಾಮಕೃಷ್ಣನ್, ಶಂಕರ ಪಿಳ್ಳ, ಸಚ್ಚಿದಾನಂದನ್, ಬಿ. ರಾಜೀವನ್, ನಾರಾಯಣ ಪ್ರಸಾದ್, ಶಿವದಾಸನ್, ಅಲಿಯಾರ್ ಕುಂಞು ಮುಂತಾಗಿ… ಲೋಕಸಾಹಿತ್ಯದ ಕುರಿತು ಇವರಿಗಿದ್ದ ಓದಿಗೆ ನಾನು ಬೆರಗಾದೆ. ಇನ್ನು ಕ್ರಾಂತಿಯ ವಿಷಯಕ್ಕೆ ಬಂದರೆ ಎಲ್ಲರೂ ಹೋ ಚಿ ಮಿನ್ನರೇ, ಎಲ್ಲರೂ ಚೆ ಗವೇರರೇ. ಕನ್ನಡದಿಂದ ಮಲೆಯಾಳಕ್ಕೆ ಹೊಸ ಕನ್ನಡ ಕವಿತೆಗಳನ್ನು ಅನುವಾದಿಸಲು ನಾನು ಸ್ವಲ್ಪ ಮಟ್ಟಿಗೆ ಒಂದು ಕೊಂಡಿಯಾಗಿ ಕೆಲಸ ಮಾಡಿದೆ. ಅವು ಕೆಲವು ಪಣಿಕ್ಕರರ “ಕೇರಳ ಕವಿತ” ಎಂಬ ಪತ್ರಿಕೆಯಲ್ಲಿ ಪ್ರಕಟವಾದುವು. ರಾಜಕೀಯ ಏನಿದ್ದರೂ ಸಾಹಿತ್ಯ ಅದನ್ನು ಮೀರಿ ನಿಲ್ಲಬಹುದು ಎಂಬುದನ್ನು ನಾನು ಅನುಭವದಿಂದ ಕಂಡುಕೊಂಡೆ. 1975ರಲ್ಲಿ ನಾನು ಕೇರಳ ತೊರೆದು ಹೈದರಾಬಾದಿಗೆ ಬಂದೆ, ಕೇರಳ ಕವಿಮಿತ್ರರ ಸಂಪರ್ಕ ನಿಂತಿತು.

ನಮ್ಮ ಹಿರಿಯರಿಗೆ ಮಲೆಯಾಳ ದೇಶದ ಸಂಬಂಧ ಬಹಳ ಹಿಂದಿನಿಂದಲೂ ಇತ್ತು. ಈಗ ಕೇರಳವನ್ನು ‘ದೇವರ ನಾಡು’ ಎಂದು ವಿಜೃಂಭಿಸುವುದು ವಾಡಿಕೆಯಾಗಿದೆ: ‘ನಿಸರ್ಗ ಸುಂದರ’ವಾದ ಪ್ರದೇಶ ಎಂಬ ಅರ್ಥದಲ್ಲಿ, ಪ್ರವಾಸೋದ್ಯಮದ ದೃಷ್ಟಿಯಿಂದ. ಆದರೆ ಕೇರಳದಲ್ಲಿ ವಿಪುಲವಾದ ದೇವಾಲಯಗಳೂ ಇವೆ. ಅಲ್ಲಿ ಅರ್ಚಕರಾಗಿ ನಮ್ಮ ಹಿರಿಯರು ಹೋಗುತ್ತಿದ್ದರು. ಇದಕ್ಕೆ ‘ತೆಂಕಲಾಗಿ ಹೋಗುವುದು’ ಎಂದು ಹೆಸರು. ಒಂದೊಂದು ಮನೆತನಕ್ಕೆ ಮೂಲ ಹಕ್ಕಿನಂತೆ ಒಂದೋ ಎರಡೋ ದೇವಾಲಯಗಳ ಅರ್ಚಕತ್ವ ಸಿಗುತ್ತಿತ್ತು. ಈ ಕಡೆಯ ಬ್ರಾಹ್ಮಣರು (‘ಎಂಬ್ರಾಂದ್ರಿ’ಗಳು) ಅಲ್ಲಿ ‘ಶಾಂತಿಕ್ಕಾರ’ರಾಗಿ ಇರುತ್ತಿದ್ದರು. ‘ಶಾಂತಿ ಮಾಡುವುದು ಎಂದರೆ ಈ ಪರಿಭಾಷೆಯಲ್ಲಿ ಪೂಜೆ ಮಾಡುವುದು ಎಂದೇ ಅರ್ಥ; ಅದನ್ನು ಮಾಡುವವರು ಶಾಂತಿಕ್ಕಾರರು! ‘ಶಾಂತಿ’ ವೇದಮಂತ್ರಗಳಲ್ಲಿ ಪದೇ ಪದೇ ಸಮಾಪ್ತಿಯಾಗಿ ಬರುವ‘ಓಂ ಶಾಂತಿಃ ಶಾಂತಿಃ ಶಾಂತಿಃ’ ಟಿ.ಎಸ್. ಎಲಿಯಟ್ ತನ್ನ ನೀಳ್ಗವನ ‘ದ ವೇಸ್ಟ್ ಲ್ಯಾಂಡ್’ನ ಸಮಾಪ್ತಿಗೆ ಬಳಸುವುದೂ ಇದನ್ನೇ! ಎತ್ತಣಿಂದೆತ್ತಣ ಸಂಬಂಧ! ಇಪ್ಪತ್ತನೆ ಶತಮಾನದ ಆದಿಯಲ್ಲಿ ಕರಾವಳಿ ರೈಲ್ವೆ (ಉಗಿ ಬಂಡಿ) ಸುರುವಾಯಿತಷ್ಟೆ? ಇದರಿಂದ ಜನಜೀವನದ ಗತಿಯೇ ಬದಲಾಯಿತು. ಇದರ ಫಲಾನುಭವಿಗಳಲ್ಲಿ ನಮ್ಮ ಶಾಂತಿಕ್ಕಾರರೂ ಇದ್ದರು.

ಈ ರೈಲ್ವೆ ಸುರುವಾಗುವ ಮೊದಲು ಅವರು ಕೇರಳಕ್ಕೆ ಹೇಗೆ ಹೋಗಿ ಬರುತ್ತಿದ್ದರೋ ತಿಳಿಯದು. ಬಸ್ಸು, ಕಾರುಗಳು ಇನ್ನೂ ಬಂದಿರಲಿಲ್ಲವಲ್ಲ. ಅಂತೂ ದಿನಗಟ್ಟಲೆ ನಡೆದುಕೊಂಡೋ ಎತ್ತಿನ ಗಾಡಿಗಳಲ್ಲೋ ಹೋಗಿ ಬರುತ್ತಿದ್ದರು. ಒಂದೆರಡು ವರ್ಷ ಅಲ್ಲಿದ್ದು ರಜದಲ್ಲಿ ಊರಿಗೆ ಬರುತ್ತಿದ್ದರು, ಮತ್ತೆ ಹೋಗುತ್ತಿದ್ದರು. ದೇವರ ಮೇಲಿನ ಭಕ್ತಿಯಿಂದಲ್ಲ, ಧನಾರ್ಜನೆಗೆ. ಅಂತೂ ಮಲೆಯಾಳದ ಸಂಪರ್ಕದಲ್ಲಿರುತ್ತಿದ್ದರು. ರೈಲು ಬಂದ ಮೇಲೆ ಇದು ಸ್ವಲ್ಪ ಸುಲಭವಾಯಿತು.

ಯಾಕೆ ಇದೆಲ್ಲ ಹೇಳುತ್ತಿದ್ದೇನೆ ಎಂದರೆ ತೆಂಕಲಾಗಿ ಹೋಗಿ ಬಂದವರು ಮೊದಲಿನಂತೆ ಇರುತ್ತಿರಲಿಲ್ಲ. ಅವರು ‘ನಿಜವಾದ’ಮಲೆಯಾಳ ಸಂಸ್ಕೃತಿ ಕಲಿತಿರುತ್ತಿದ್ದರು. ಕಾಳನ್, ಓಲನ್, ತೋರನ್, ಪರಿಪ್ಪು, ಪುಳಿಶ್ಶೇರಿ, ಅವಿಲ್, ಉಪ್ಪೇರಿ ಮುಂತಾದ ಊಟದ ಪದಾರ್ಥಗಳ ಬಗ್ಗೆ ಮಾತಾಡುತ್ತಿದ್ದರು. ಅವರ ಮಲೆಯಾಳ ಕೇಳಿ ನಮ್ಮ ಊರಿನ ಮಲೆಯಾಳಿಗಳು ಮೂಗಿಗೆ ಬೆರಳಿಡುತ್ತಿದ್ದರು. ಹೋಗುವಾಗ ಹೀಗಿರಲಿಲ್ಲವಲ್ಲ, ಈಗ ಯಾಕೆ ಹೀಗೆ ಎಂದು! ಕೇರಳದಿಂದ ಬಂದ ಹಲವರಿಗೆ ಮಲೆಯಾಳ ಓದಲು ಬರೆಯಲು ಕೂಡ ಬರುತ್ತಿತ್ತು. ನನ್ನ ಸೋದರ ಮಾವನಿಗೆ (ನಾನು ಶಾಲೆಗೆ ಹೋಗಲು ತಂಗಿದ್ದ ಮನೆಯವರು) ಹಣೆಗೆ ಮಾತ್ರವಲ್ಲ, ಇಡೀ ಕೈಮೈಗೆ ವಿಭೂತಿ ಬಳಿಯುವ ಅಭ್ಯಾಸ ಬಂದಿತ್ತು.

ಅದೇ ರೀತಿ ಎಡೆ ಹೊತ್ತಿನಲ್ಲಿ ಚಾಯ. ಅವರಿಗೆ ಚೆನ್ನಾಗಿ ಮಲೆಯಾಳ ಓದಲು ಬರೆಯಲು ಬರುತ್ತಿತ್ತು. ಅವರ ಹತ್ತಿರ ಭಟ್ಟಿ ವಿಕ್ರಮಾದಿತ್ಯ ಕಥೆಗಳ ದೊಡ್ಡದೊಂದು ಮಲೆಯಾಳ ಪುಸ್ತಕವಿತ್ತು. ಅದನ್ನು ಮಲೆಯಾಳದಲ್ಲೇ ನಮಗೆ ಓದಿಹೇಳುತ್ತಿದ್ದರು. ಗ್ರಾಂಥಿಕ ಮಲೆಯಾಳ ಭಾಷೆ, ಕುತೂಹಲಕರ ಕಥೆ, ಕೇಳಲು ಸೊಗಸಾಗಿತ್ತು.

ಕಾಸರಗೋಡಿನಲ್ಲಿ ಗಣನೀಯವಾದ ಮುಸ್ಲಿಂ ಜನಸಂಖ್ಯೆಯಿದೆ. ಇವರು ಮಾತಾಡುವ ಮಲೆಯಾಳಕ್ಕೆ ಮಾಪಿಳ್ಳೆ ಯಾ ಬ್ಯಾರಿ ಭಾಷೆ ಎನ್ನುತ್ತಾರೆ. ಇದು ಮಲಬಾರು ಮಂಗಳೂರು ಕಡೆ ಪ್ರಚಾರದಲ್ಲಿದೆ. ಅರೇಬಿಕ್ ನಿಂದ ಬಹಳ ಪ್ರಭಾವಿತವಾದ ಉಪಭಾಷೆ ಇದು. ಇದರ ವಿಶಿಷ್ಟತೆಯನ್ನು ಗುರುತಿಸಿದ ಕರ್ನಾಟಕ ಸರಕಾರ ಬ್ಯಾರಿ ಎಕಾಡಮಿಯನ್ನು ಸ್ಥಾಪಿಸಿದೆ. ಕೇರಳದ ವಿಚಾರ ನನಗೆ ತಿಳಿಯದು.

ಕಾಸರಗೋಡಿಗೆ ಹವೀಕರು ಎಲ್ಲಿಂದ ಯಾವಾಗ ಯಾಕೆ ಬಂದರು ಎನ್ನುವುದಕ್ಕೆ ದಾಖಲೆಯಿಲ್ಲ. ಬಹುಶಃ ಅವರು ಉತ್ತರ ಕನ್ನಡದಿಂದ ಬಂದಿರಬೇಕು. ಈಗ ಕಾಸರಗೋಡಿನ ಹವ್ಯಕಕ್ಕೂ ಉತ್ತರ ಕನ್ನಡ ಹವ್ಯಕಕ್ಕೂ ಇರುವ ವ್ಯತ್ಯಾಸಗಳನ್ನು ಮತ್ತು ಇಲ್ಲಿನವರ ವಿಪುಲ ಜನಸಂಖ್ಯೆಯನ್ನು ನೋಡಿದರೆ, ಈ ವಲಸೆ ಶತಮಾನಗಳ ಹಿಂದೆಯೇ ಯಾವುದೋ ಮುಖ್ಯ ಕಾರಣಕ್ಕೆ ನಡೆದಿರಬೇಕೆನಿಸುತ್ತದೆ. ಅದೇನೆನ್ನುವುದು ಊಹೆಗೆ ಬಿಟ್ಟ ವಿಚಾರ. ಈ ಉಪಭಾಷೆಗಳು ಪರಸ್ಪರ ಅರ್ಥವಾಗುವಂತಿವೆ; ಆದರೆ ಕಾಸರಗೋಡಿನ ಹವ್ಯಕ ಮಾತು ಹಳೆಗನ್ನಡಕ್ಕೆ ಹತ್ತಿರವಿದೆ, ಮತ್ತು ಮಲೆಯಾಳ, ತುಳುವಿನಿಂದ ಸ್ವಲ್ಪ ಮಟ್ಟಿಗೆ ಪ್ರಭಾವಿತವಾಗಿದೆ, ಉತ್ತರ ಕನ್ನಡದ ಹವ್ಯಕ ಸೀಮೆಕನ್ನಡದಿಂದ ಪ್ರಭಾವಿತವಾಗಿದ್ದು ಕಾಸರಗೋಡಿನ ಹವ್ಯಕ ಮತ್ತು ಸೀಮೆಕನ್ನಡದ ಮಧ್ಯೆ ಇರುವಂತೆ ಕಾಣುತ್ತದೆ.

ಹವ್ಯಕ ನುಡಿ ಸ್ವಸಮಾಜದೊಳಗೆ ಬಳಸಲ್ಪಡುವಂಥದು, ಆದ್ದರಿಂದ ಅದರಲ್ಲಿ ಜನಪದ ಸಾಹಿತ್ಯವಿದೆಯೇ ಹೊರತು, ಲಿಖಿತ ಸಾಹಿತ್ಯ ಕಡಿಮೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ: ಹೊಸ ಸಾಹಿತ್ಯ ಸೃಷ್ಟಿಯಾಗುತ್ತಿದೆ, ಪುಸ್ತಕರೂಪದಲ್ಲಿ ಪ್ರಕಟವಾಗುತ್ತಿದೆ—ಕವಿತೆ, ಕತೆ, ಕಾದಂಬರಿ, ನಾಟಕ ಇತ್ಯಾದಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ. ಈ ನಿಟ್ಟಿನಲ್ಲಿ ಹರಿಕೃಷ್ಣ ಭರಣ್ಯರ ಕೊಡುಗೆ ಅಪಾರವಾದುದು ಮತ್ತು ಅನುಸರಣೀಯ.

ಕಾಸರಗೋಡಿನ ಮೂಲ ಭಾಷೆಯಾದ ತುಳು ಈ ಪ್ರದೇಶದ ವ್ಯಾವಹಾರಿಕ ಭಾಷೆ ಕೂಡ ಹೌದು. ಇದಕ್ಕೆ ಬರಹವಿಲ್ಲ, ಇತ್ತು ಎನ್ನುತ್ತಾರೆ ಕೆಲವರು. ಮಲೆಯಾಳದ ಗ್ರಂಥ ಲಿಪಿಯೇ ತುಳುವಿನ ಲಿಪಿ ಎನ್ನುವುದು ಅವರ ವಾದ. ಇದ್ದೀತು, ಆದರೆ ಈಗ ಇಲ್ಲ. ತುಳು ಬರೆಯಬೇಕಾಗಿ ಬಂದಾಗ ಕನ್ನಡ ಲಿಪಿಯನ್ನೇ ಬಳಸಲಾಗುತ್ತದೆ. ಆದರೆ ಈಗಾಗಲೇ ಹೇಳಿದಂತೆ ತುಳು ಅದನ್ನಾಡುವ ಜನರ ಜಾತಿಯನ್ನು ಹೊಂದಿಕೊಂಡು ಬೇರೆ ಬೇರೆ ಸ್ವರೂಪವನ್ನು ಪಡೆದುಕೊಂಡಿದೆ. ತುಳು ಮಾತಾಡುವ ಜನಸಂಖ್ಯೆ ಕಿರಿದಾದರೂ, ಅದರ ಕ್ಷೇತ್ರ ಕಾಸರಗೋಡಿಗಷ್ಟೆ ಸೀಮಿತವಾಗಿಲ್ಲ, ಕಾಸರಗೋಡಿನ ದಕ್ಷಿಣಕ್ಕೂ ಉತ್ತರಕ್ಕೂ ಅದು ಮೈಚಾಚಿದೆ-ಮುಂಬಯಿಯನ್ನೂ ತಲುಪಿದೆ. ಬಹು ಪ್ರಾಚೀನವಾದ ಈ ಭಾಷೆಯ ಜನಪದ ಸಾಹಿತ್ಯ ಶ್ರೀಮಂತವಾದುದು; ಇದನ್ನು ಕಾಪಾಡುವುದು ಗೌರವಿಸುವುದು ಅಗತ್ಯವಿದೆ.

ಕಾಸರಗೋಡಿನ ತುಳು ಜನರು ಕನ್ನಡ ಸಾಹಿತ್ಯಕ್ಕೆ ಕೊಟ್ಟ, ಕೊಡುತ್ತಿರುವ ಕೊಡುಗೆ ಸಾಕಷ್ಟು ದೊಡ್ಡದು ಎನ್ನುವುದನ್ನು ಮರೆಯಬಾರದು; ಕಯ್ಯಾರ ಕಿಞ್ಞಣ್ಣ ರೈ ಹೆಸರು ಅವಿಸ್ಮರಣೀಯ. ಮನೆಮಾತು ಏನಿದ್ದರೂ ಕಾಸರಗೋಡಿನ ಹಲವು ಜನ ಕನ್ನಡದಲ್ಲಿ ಬರೆಯುತ್ತ ಬಂದಿದ್ದಾರೆ, ಕನ್ನಡ ಅವರೆಲ್ಲರನ್ನೂ ಕನ್ನಡಿಗರೆಂದೇ ತಿಳಿದಿದೆ. ನನ್ನ ಮಿತ್ರ ಕನ್ನಡದ ಪ್ರಸಿದ್ಧ ಕತೆಗಾರ ಎಂ. ವ್ಯಾಸರ ಮನೆ ಮಾತು ತುಳು. ಅವರು ಯಾರಿಗಿಂತಲೂ ಕಡಿಮೆ ಕನ್ನಡಿಗ ಹೇಗಾದಾರು? ಕನ್ನಡದ ಪ್ರಸಿದ್ಧ ಕಾದಂಬರಿಕಾರ ಕೆ.ಟಿ. ಗಟ್ಟಿಯವರ ಮನೆಮಾತು ಕೂಡ ತುಳು. ಆದರೇನಾಯಿತು? ಕನ್ನಡಕ್ಕೆ ಅವರು ಕನ್ನಡಿಗರೇ. “ಸಂಸ್ಕಾರ”ವೂ ಸೇರಿದಂತೆ ಹಲವು ಆಧುನಿಕ ಕನ್ನಡ ಕೃತಿಗಳನ್ನು ಮಲೆಯಾಳಕ್ಕೆ ಅನುವಾದಿಸಿದ ಸಿ. ರಾಘವನ್ ಅಪ್ಪಟ ಮಲೆಯಾಳಿ, ಆದರೆ ಅವರು ಕನ್ನಡಕ್ಕೆ ಹೊರತಲ್ಲ. ಕನ್ನಡ ಮಾತಾಡುತ್ತಿದ್ದರು, ಓದುತ್ತಿದ್ದರು. ಹಾಸನದಿಂದ ಕಾಸರಗೋಡು ಸರಕಾರಿ ಕಾಲೇಜಿಗೆ ಕನ್ನಡ ಪ್ರಾಧ್ಯಾಪಕರಾಗಿ ಬಂದು ಕಾಲಾವಕಾಶದಲ್ಲಿ ಮಲೆಯಾಳ ಕಲಿತು ಅನೇಕ ಪ್ರಸಿದ್ಧಮಲೆಯಾಳಂ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಬಿ. ಕೆ. ತಿಮ್ಮಪ್ಪನವರ ಸೇವೆಯೂ ಕನ್ನಡದ ಸೇವೆಯೇ.

ಕಾಸರಗೋಡಿನ ಐದು ಭಾಷೆಗಳಲ್ಲಿ ಕನ್ನಡ, ತುಳು, ಮಲೆಯಾಳಂ ಎಂಬ ಮೂರು ದ್ರಾವಿಡ ವರ್ಗದವಾದರೆ, ಉಳಿದೆರಡು ಕೊಂಕಣಿ ಮತ್ತು ಮರಾಠಿ ಇಂಡೋ-ಯುರೋಪಿಯನ್ ವರ್ಗಕ್ಕೆ ಸೇರಿದಂಥವು, ಪ್ರಾಕೃತ ಪಂಗಡಕ್ಕೆ ಸೇರಿದಂಥವು. ಈ ಎರಡು ಭಾಷಿಕರು ಉತ್ತರದಿಂದ ಈ ಕಡೆ ಬಂದವರಿರಬೇಕು. ಕೊಂಕಣಿ ಮಾತಾಡುವವರು (ಸಾರಸ್ವತ, ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ಕ್ರಿಶ್ಚಿಯನ್ ಶೂದ್ರರು) ಕೊಂಕಣಸ್ಥರೆಂದು (ಎಂದರೆ ಗೋವಾದಿಂದ ಮಲಬಾರ್ ತನಕದ ಕರಾವಳಿ ನಿವಾಸಿಗರೆಂದು) ಪ್ರಸಿದ್ಧರಾದರೂ, ಈ ಸೀಮೆಗೂ ಮೇಲಿನ ಉತ್ತರದಿಂದ ಅವರು ಬಂದಿರಬಹುದು. ಕೊಂಕಣಿ ಬ್ರಾಹ್ಮಣರು ದೇಸೀಯರಿಗಿಂತ ಪರಿಷ್ಕೃತರು ಮತ್ತು ವಿದ್ಯಾವಂತರು, ಹೆಚ್ಚಿನವರೂ ನಗರವಾಸಿಗಳಾಗಿದ್ದು, ವ್ಯಾಪಾರ ವಹಿವಾಟುಗಳಲ್ಲಿ, ವಕಾಲತು, ಅಧ್ಯಾಪನ ಮುಂತಾದ ಗೌರವಾನ್ವಿತ ಉದ್ಯೋಗಗಳಲ್ಲಿ ತೊಡಗಿಸಿಕೊಂಡವರು. ಕನ್ನಡ ಸಾಹಿತ್ಯಕ್ಕೆ ಕೊಂಕಣಸ್ಥರ ಕೊಡುಗೆ ಎಷ್ಟು ಅಪಾರವಾದುದು ಎನ್ನುವುದಕ್ಕೆ ನಮ್ಮ ಗೋವಿಂದ ಪೈ ಹೆಸರೇ ಸಾಕು. ಈಗ ಈ ಮೂಲದಿಂದ ಕನ್ನಡ ಯುವ ಲೇಖಕರು ಎಷ್ಟೋ ಮಂದಿ ಬರುತ್ತಿದ್ದಾರೆ. ಇಡೀ ಕನ್ನಡ ಕರಾವಳಿಗೆ ಒಂದು ಬಾಂಧವ್ಯವನ್ನು ಬೆಸೆಯುವುದಕ್ಕೆ ಕೊಂಕಣ ಭಾಷಿಕರ ಉದ್ಯಮಶೀಲತೆಯೂ ಒಂದು ಕಾರಣ.

ಕೊಂಕಣಿಗೆ ಅದರದೇ ಆದ ಬರಹವಿಲ್ಲ, ಇದುವರೆಗೆ ಇರಲಿಲ್ಲ. ಹೇಳಿಕೊಳ್ಳುವಂತಹ ಸಾಹಿತ್ಯವೂ ಇರಲಿಲ್ಲ. ಆದರೆ ಈಗ ಸಾಂಸ್ಕೃತಿಕ ಪುನರುದಯವೊಂದು ಕಾಣಸಲು ತೊಡಗಿದೆ. ದೇವನಾಗರಿಯನ್ನೇ ಕೊಂಕಣಿಗೆ ಬಳಸಬೇಕೆನ್ನುವುದು ಕೇಂದ್ರ ಸಾಹಿತ್ಯ ಅಕಾಡಮಿಯ ಸೂಚನೆ. ಇದುವರೆಗೆ ಆಯಾ ಪ್ರಾದೇಶಿಕ ಮುಖ್ಯ ಭಾಷೆಯ ಲಿಪಿಯನ್ನೇ ಕೊಂಕಣಿ ಬರೆಯಲು ಬಳಸಲಾಗುತ್ತಿತ್ತು. ಕೊಂಕಣಿಗೆ ಇತರ ಭಾಷೆಗಳಿಂದ (ಕನ್ನಡ, ಇಂಗ್ಲಿಷ್, ಮಲೆಯಾಳಂ) ಅನುವಾದ ಕಾರ್ಯವೂ ನಡೆದಿದೆ. ಚಿನ್ನಾ ಕಾಸರಗೋಡು ಅವರ ಅನುವಾದ ಕಾರ್ಯ ಶ್ಲಾಘನೀಯ. ಆಧುನಿಕ ಕನ್ನಡದ ಮೂವತ್ತು ಸಣ್ಣ ಕತೆಗಳ ಅವರ ಕೊಂಕಣಿ ಅನುವಾದ “ತೀಸ್ ಕಾಣಿಯೋ” ಕರ್ನಾಟಕದ ಅಕಾಡಮಿ ಪ್ರಶಸ್ತಿಗೆ ಭಾಜನವಾಗಿದೆ. ಅಂತೆಯೇ ಅವರ ‘ಘರ್ ಘರ್ ಕೊಂಕಣಿ’ ಕಾರ್ಯಕ್ರಮ ಕೊಂಡಾಡತಕ್ಕದ್ದು; ಇದೊಂದು ಕೊಂಕಣಿ ಸ್ವಾಭಿಮಾನ ಉದ್ದೀಪನ ಯೋಜನೆಯಾಗಿದ್ದು ಅದ್ವಿತೀಯವಾದದ್ದು ಎನಬಹುದು.

ಸಾಹಿತ್ಯ, ಸಂಗೀತ, ಗಾಯನ, ನಾಟಕ, ಸಿನೆಮಾ, ಸಂವಾದ ಕಾರ್ಯಕ್ರಮಗಳ ಮೂಲಕ ಚಿನ್ನಾ ಕನ್ನಡ, ತುಳು, ಕೊಂಕಣಿ ಸಾಂಸ್ಕೃತಿಕ ಕ್ಷೇತ್ರಗಳಿಗೆ ನೀಡುತ್ತಿರುವ ಸೇವೆ ಕಾಸರಗೋಡಿನ ಯುವ ಜನತೆಗೆ ಚೈತನ್ಯದಾಯಕವಾಗಿದೆ. ಇದರಿಂದ ಈ ಸರಹದ್ದಿನ ಜನರ ಅನಾಥ ಭಾವ ಸ್ವಲ್ಪವಾದರೂ ಇಲ್ಲದಾಗುತ್ತದೆಎನಿಸುತ್ತದೆ.

ಕುಂಬಳೆ, ಬೇಳ, ನೀರ್ಚಾಲಿನ ಸುತ್ತ ಮುತ್ತ ನೆಲಸಿದ ಕ್ರಿಶ್ಚಿಯನರ ಮಾತೃಭಾಷೆಯೂ ಕೊಂಕಣಿಯೇ. ಆದರೆ ಬ್ರಾಹ್ಮಣರ ಕೊಂಕಣಿಯೂ ಕ್ರಿಶ್ಚಿಯನರ ಕೊಂಕಣಿಯೂ ಒಂದೇ ರೀತಿ ಇಲ್ಲ. ಪದಗಳಲ್ಲಿ, ಶೈಲಿಯಲ್ಲಿ, ಧಾಟಿಯಲ್ಲಿ ವ್ಯತ್ಯಾಸಗಳಿವೆ. ಎರಡೂ ಕೊಂಕಣಿಗಳ ಮೇಲೆ ದಟ್ಟವಾದ ಕನ್ನಡ, ತುಳು ಪ್ರಭಾವಗಳೂ ಇವೆ. ಕ್ರಿಶ್ಚಿಯನ್ ಕೊಂಕಣಿ ಜನರು ಇತರರ ಜೊತೆ ವ್ಯಾವಹಾರಿಕ ಭಾಷೆಯಾಗಿ ತುಳು ಮಾತಾಡುವುದೇ ಜಾಸ್ತಿ. ಬೇಳದ ಕ್ರಿಶ್ಚಿಯನ್ ಗಂಡಾಳುಗಳಿಗೆ ಸೋಜ ಎನ್ನುವ ಉಪನಾಮವಿದೆ. ಇದು ಪೋರ್ಚುಗೀಸಿನ ಡಿ’ಸೋಜ ಎಂಬ ಪದದಿಂದ ಬಂದುದು. ಬಹುಶಃ ನಮ್ಮೂರಿನ ಸೋಜರು ಪೋರ್ಚುಗೀಸ್ ಮಿಶನರಿಗಳ ಪ್ರಭಾವದಿಂದ ಗೋವಾ ದಾಮನ್ ಗಳಲ್ಲಿ ಮತಪರಿವರ್ತನೆಗೆ ಒಳಗಾಗಿದ್ದು ಮತಪ್ರಚಾರಕರ ಜತೆ ಇತ್ತ ವಲಸೆ ಬಂದಿರಬೇಕು.

ಬೇಳದಲ್ಲೊಂದು ಮಾದ್ರಿ ಶಾಲೆಯಿದೆ, ಒಂದು ಕನ್ಯಾನಿಲಯವೂ ಇದೆ. ಕುಂಬಳೆಯಲ್ಲೂ ಇವೆ. ಇವೆಲ್ಲ ಕ್ಯಾಥಲಿಕ್ ಮಿಶನರಿ ಪ್ರಾಯೋಜಿತವಾದರೆ, ಕಾಸರಗೋಡು ಪಟ್ಟಣದ ಪ್ರೊಟೆಸ್ಟೆಂಟರ ಬಾಸೆಲ್ ಮಿಶನ್ ಶಾಲೆಯೂ ಹೆಸರಾಂತ ಶಿಕ್ಷಣ ಸಂಸ್ಥೆ, ಪುರಾತನವೂ ಸುಪ್ರಸಿದ್ಧವೂ ಆದುದು. ಕ್ಯಾಥಲಿಕ್-ಪ್ರೊಟೆಸ್ಟೆಂಟ್ ಭೇದವಿಲ್ಲದೆ ಶಿಕ್ಷಣಕ್ಕೆ ಕ್ರಿಶ್ಚಿಯನ್ ಮಿಶನರಿಗಳ ಕೊಡುಗೆ ಎಲ್ಲ ಕಡೆಯಲ್ಲಿರುವಂತೆ ಇಲ್ಲಿಯೂ ಅನನ್ಯವಾದುದು. ಈ ಸಂಸ್ಥೆಗಳಲ್ಲಿ ಜಾತ್ಯತೀತವಾಗಿ ಎಲ್ಲರಿಗೂ ಮುಕ್ತಾವಕಾಶವಿದೆ ಎನ್ನುವುದು ಗಮನಾರ್ಹವಾದ ಸಂಗತಿ.

ಮರಾಠಿ ಆಡುವವರು ಕರ್ಹಾಡ ಬ್ರಾಹ್ಮಣರು ಹಾಗೂ ಕೆಲವು ಜಾತಿಯ ಶೂದ್ರರು. ಇವರೂ ಈ ಪ್ರದೇಶಕ್ಕೆ ವಲಸಿಗರೇ. ಯಾಕೆ ಬಂದರು, ಯಾವಾಗ ಬಂದರು ಎನ್ನುವುದು ಸ್ಪಷ್ಟವಿಲ್ಲ. ಕರ್ಹಾಡ ಎಂಬ ಹೆಸರಿರುವುದರಿಂದ ಮಹಾರಾಷ್ಟ್ರದ ಕರ್ಹಾಡ ಪ್ರಾಂತದಿಂದ ಗೋವಾ ಮೂಲಕ ಕೊಂಕಣ ಸೀಮೆಗೆ ಬಂದರು ಎಂದು ಊಹಿಸಬಹುದು. ಇವರಿಗೆ ಪದ್ಯ ಬ್ರಾಹ್ಮಣರು ಎಂದೂ ಹೇಳುತ್ತಾರೆ. ಇವರು ಮಾತಾಡುವ ಮರಾಠಿಯ ಮೇಲೆ ಕೊಂಕಣಿ, ಕನ್ನಡ ಮತ್ತು ತುಳು, ಮಲೆಯಾಳಗಳ ಪ್ರಭಾವ ಇದೆ. ಹೆಚ್ಚಿನವರೂ ಅಡಿಕೆ ಕೃಷಿಕರು, ವಿದ್ಯಾವಂತರು, ಉದ್ಯೋಗಸ್ಥರು, ಹೆಚ್ಚಿನವರೂ ತಕ್ಕ ಮಟ್ಟಿಗೆ ಸ್ಥಿತಿವಂತರು, ಕೆಲವರು ಸಾಕಷ್ಟು ಶ್ರೀಮಂತರು. ಕಾಸರಗೋಡಿನ ಸಂಕರ ಸಂಸ್ಕೃತಿಗೆ ಒಗ್ಗಿಕೊಂಡಿದ್ದೂ ತಮ್ಮ ಅಸ್ಮಿತೆಯನ್ನು ಸಾಧ್ಯವಾದಷ್ಟೂ ಉಳಿಸಿಕೊಂಡಿರುವರು. ಇದೇ ಸಮಾಜದಿಂದ ಬಂದ ಕನ್ನಡ ಸಾಹಿತಿ ರಾಧಾಕೃಷ್ಣ ಬೆಳ್ಳೂರು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿದ್ದು ಈ ಪ್ರದೇಶದ ಕರ್ಹಾಡ ಬ್ರಾಹ್ಮಣರ ಭಾಷೆ ಮತ್ತು ಜನಜೀವನದ ಕುರಿತು ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.

ಮನುಷ್ಯ ಸಮಾಜಕ್ಕೆ ಐಡೆಂಟಿಟಿಯನ್ನು ನೀಡುವುದು ಭಾಷೆಯೊಂದೇ ಅಲ್ಲ, ಸಾಮೂಹಿಕವಾದ ಧರ್ಮ, ಜಾತಿ, ಆಚಾರ ವಿಚಾರಗಳು, ಸಂಸ್ಕಾರಗಳು, ಕಲೆಗಳು, ನಿಷೇಧಗಳು, ನಂಬಿಕೆಗಳು, ದೇವಳಗಳು, ಮಠಗಳು, ನಿತ್ಯಕರ್ಮಗಳು, ಸ್ತ್ರೀಯರ ಸ್ಥಾನ ಮಾನ ಇತ್ಯಾದಿ ಹಲವಾರು ವಿಷಯಗಳು ಸಮಾಜದ ಗುರುತನ್ನು ರೂಪಿಸುತ್ತವೆ. ಕಾಸರಗೋಡಿನಲ್ಲಿ ಗುಡಿಗಳು, ದೇವಸ್ಥಾನಗಳು, ಭೂತಸ್ಥಾನಗಳು, ಮಸೀದಿಗಳು, ಇಗರ್ಜಿಗಳು ನಿಬಿಡವಾಗಿವೆ. ಇವೆಲ್ಲವೂ ಸುಖಶಾಂತಿಯಿಂದ, ಆದರ್ಶಕರವಾಗಿ ಯಾವತ್ತೂ ಸಹಬಾಳ್ವೆ ನಡೆಸುತ್ತಿವೆ ಎನ್ನಲಾರೆ. ಕೆಲವೊಮ್ಮೆ ವೈಮನಸ್ಸು ಉಂಟಾಗುತ್ತದೆ. ತಾನು ಬದುಕುವುದು, ಇತರರನ್ನು ಬದುಕಲು ಬಿಡುವುದು ಹೇಗೆನ್ನುವುದೇ ಮನುಷ್ಯನ ಮುಂದಿರುವ ಪ್ರಶ್ನೆ. ಅದು ಯಾವತ್ತಿನಿಂದಲು, ಎಲ್ಲೆಡೆಯೂ ಇರುವ ಪ್ರಶ್ನೆಯೇ. ಯಾವ ಪ್ರವಾದಿಯೂ, ಸಂತನೂ, ತತ್ವಪದಕಾರನೂ ಅದನ್ನು ಶಾಶ್ವತವಾಗಿ ಪರಿಹರಿಸಿಲ್ಲ. ಯಾಕೆಂದರೆ ಇದು ಪ್ರತಿಯೊಬ್ಬ ಮನುಷ್ಯನೂ, ಪ್ರತಿಯೊಂದು ಸಮಾಜವೂ, ರಾಷ್ಟ್ರವೂ ತಮಗೆ ತಾವೇ ಪರಿಹರಿಸಿಕೊಳ್ಳಬೇಕಾದ, ತಪ್ಪು ಮಾಡುತ್ತಲೇ ಕಲಿತುಕೊಳ್ಳಬೇಕಾದ, ತಿದ್ದಿಕೊಳ್ಳಬೇಕಾದ ವಿಷಯ.

ಆದರೆ ಇಲ್ಲೊಂದು ವಿರೋಧಾಭಾಸ ತಲೆಯೆತ್ತುತ್ತದೆ: ಸರಿ ತಪ್ಪುಗಳನ್ನು ನಿರ್ಧರಿಸಲು ಸಮೂಹಗಳ ಸ್ವ-ಹಿತಾಸಕ್ತಿಗಳಿಗೆ ಅತೀತವಾದ, ಸಂದರ್ಭರಹಿತವಾಗಿ, ‘ಎಲ್ಲರೂ’ ಒಪ್ಪುವ ಕೆಲವು ಮೌಲ್ಯಗಳು – ಒಂದು ಸಂಹಿತೆ ಬೇಕಲ್ಲವೇ? ಇದನ್ನೇ ನಾವು ಸಂವಿಧಾನವೆಂದು ಕರೆಯುವುದು. ಯಾವ ಸಾಮಾಜಿಕ ಆಚರಣೆ ಕೂಡಾ ಅದಕ್ಕೆ ವಿರುದ್ಧವಾಗಿ ಇರಬಾರದು. ಉದಾಹರಣೆಗೆ ಬಾಲ್ಯವಿವಾಹ ಪದ್ಧತಿ. ನಮ್ಮ ಸಂವಿಧಾನ ಇದನ್ನು ನಿಷೇಧಿಸಿದೆ; ಯಾವ ಜಾತಿಯೂ ಮತವೂ ಇದು ತಮ್ಮ ಪರಂಪರೆ ಎಂದು ಸಂವಿಧಾನದ ನಿಷೇಧವನ್ನು ತಿರಸ್ಕರಿಸುವಂತಿಲ್ಲ. ಇನ್ನು ಯುನಿವರ್ಸಲ್ ಆದ ಕೆಲವು ಮೌಲ್ಯಗಳಿವೆ, ಅವುಗಳನ್ನು ಎಲ್ಲ ನಾಗರಿಕ ರಾಷ್ಟ್ರಗಳೂ ಗೌರವಿಸಬೇಕಾಗುತ್ತದೆ. ಉದಾಹರಣೆಗೆ, ಯುದ್ಧ ಕೈದಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವುದು.

ಯಾಕೆ ಹೇಳುತ್ತಿದ್ದೇನೆಂದರೆ ಸಣ್ಣ ಸಣ್ಣ ಗುಂಪುಗಳ ಬೆಳವಣಿಗೆಗೆ ಗೋಡೆಗಳು ಬೇಕು, ಗೋಡೆಗಳೆಂದರೆ ಸ್ವಾಯತ್ತತೆ, ಆದರೆ ಅವು ಸೆರೆಮನೆಗಳಾಗಬಾರದು. ಒಂದು ಮನೆ ಎಂದ ಮೇಲೆ ಬಾಗಿಲು ಬೇಕೇ ಬೇಕು-ಹೊರ ಹೋಗುವುದಕ್ಕೆ ಹೇಗೋ ಹಾಗೆ ಒಳ ಬರುವುದಕ್ಕೆ. ಸಂಕರ ಸ್ಥಿತಿ ಯಾವುದೇ ಚಲನಶೀಲ ಬದುಕಿಗೆ ಅನಿವಾರ್ಯ. ಹೀಗೆ ಕಾಸರಗೋಡಿನವರು ಒಂದು ರೀತಿಯಲ್ಲಿ ಉದಾರವಾದಿಗಳು, ಬುದ್ಧನ ಮಧ್ಯಮ ಮಾರ್ಗಿಗಳು. ತಂತಿಯನ್ನು ಅತಿಯಾಗಿ ಬಿಗಿಯಬೇಡಿ, ಕಡಿದೀತು, ಅತಿಯಾಗಿ ಸಡಿಲಿಸಬೇಡಿ, ಸ್ವರ ಹೊರಡದೆ ಇದ್ದೀತು. ಹೀಗೆಂದು ಬುದ್ಧನಿಗೆ ಹೇಳಿದವರು ದಾರಿಹೋಕ ಹೆಂಗಸರಲ್ಲದೆ ಯಾವ ಮಹಾಜ್ಞಾನಿಗಳೂ ಅಲ್ಲ!

ಜರ್ಕುಂ ಬುರ್ಕುಂ ಏನಜ್ಜೀ?

ನಾನು ಚಿಕ್ಕವನಿದ್ದಾಗ (ಇಳಿವಯಸ್ಸಿನಲ್ಲಿ ಕಥನಗಳು ಹೀಗೇ ಮೊದಲಾಗುವುದಲ್ಲವೇ?!) ನಮ್ಮೂರಿಗೆ ನೈಲ್ ಕಟ್ಟರ್ ಎಂಬ ಅದ್ಭುತ ಸಾಧನವೊಂದು ಇನ್ನೂ ಪರಿಚಿತವಾಗಿರದ ಕಾಲದ ಬಗ್ಗೆ ಹೇಳುತ್ತಿದ್ದೇನೆ. ಕ್ಷಮಿಸಿ ನನಗೆ ಈ ಪುಟ್ಟ ಪುಟ್ಟ ತಾಂತ್ರಿಕ ಸಾಧನಗಳೆಲ್ಲವೂ ಅದ್ಭುತವಾಗಿಯೇ ಕಾಣುತ್ತವೆ – ಸೂಜಿಯಿಂದ ಹಿಡಿದು ಹೊಲಿಗೆ ಯಂತ್ರದ ವರೆಗೆ. ಅವು ಒಮ್ಮೆ ಆವಿಷ್ಕಾರಗೊಂಡು ದಿನ ಬಳಕೆಗೆ ಬಂದ ಮೇಲೆ ಜನರಿಗೆ ಸಾಮಾನ್ಯವಾಗಿ ಬಿಡುತ್ತವೆ. ಎಂದರೆ ಅವು ನಮ್ಮ ಮನೋವಲಯದ ಭಾಗವಾಗಿ ಬಿಡುತ್ತವೆ ಎಂದರ್ಥ.

ಆರ್ಜೆಂಟೀನಿಯನ್ ಕವಿ, ಕತೆಗಾರ ಬೋರ್ಹೆಸ್ “ಸರಳತೆ” ಎಂಬ ತನ್ನ ಕವಿತೆಯಲ್ಲಿ ಹೇಳುವಂತೆ ನಮ್ಮ ಪ್ರೀತಿಯ ಜಗತ್ತು ಗೇಟು ತೆರೆದು ಉದ್ಯಾನಕ್ಕೆ ಕಾಲಿಟ್ಟ ಹಾಗೆ ಇರುತ್ತದೆ. ನಾವಲ್ಲಿಗೆ ಹೋಗುತ್ತೇವೆ ಬರುತ್ತೇವೆ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ನಾವೇ ಅದರ ಭಾಗವಾಗಿಬಿಡುತ್ತೇವೆ, ಮತ್ತು ಅದು ನಮ್ಮ ಭಾಗವಾಗಿ. ಈ ಸೂಜಿಯನ್ನುನೋಡಿ: ಹೇಗೆ ನಮ್ಮದಾಗಿ (ಮತ್ತು ನಾವು ಅದರದಾಗಿ) ಬಿಟ್ಟಿದ್ದೇವೆ. ಮೆಣಸು ಜೀರಿಗೆ ತರಲು ಹೋದವನ ಅವಸ್ಥೆ ಏನಾಗುತ್ತದೆ? ಅವನು ಮೇಣ ಸೂಜಿ ತರುತ್ತಾನೆ! ‘ರೀಗೆ’ ಲೆಕ್ಕಕ್ಕಿಲ್ಲ. ಅವನ ಸ್ಮೃತಿಗೆ ಸೂಜಿ ಹತ್ತಿರ! ಹಾಗೆಂದು:

ಹರ್ ಹರ್ ಸೂಜಿ
ಘರ್ ಘರ್ ಸೂಜಿ

ಎಂದು ದಿನವೂ ಹೊಗಳೋದಕ್ಕೆ ಯಾರಿಗೆ ತಾನೆ ಸಮಯವಿದೆ? ಆದರೂ ಎಲ್ಲೋ ಇರಿಸಿ ಮರೆತು ಬಿಟ್ಟ ಒಂದು ‘ಯಃಕಶ್ಚಿತ್’ ಸೂಜಿಗಾಗಿ ಒಮ್ಮೆಯಾದರೂ ಪರದಾಡದೆ ಇದ್ದವರು ಯಾರಿದ್ದಾರೆ? ಆದರೆ ಅದು ‘ಯಃಕಶ್ಚಿತ್’ ಅಲ್ಲ! ಸುಲಭವಾಗಿ ಕಣ್ಣಿಗೆ ಬೀಳುವಂಥದಲ್ಲ, ಎಲ್ಲ ಅಂಗಡಿಗಳಲ್ಲಿ ಸಿಗುವಂಥದೂ ಅಲ್ಲ. ಸೂಜಿಯಿದೆಯೇ….? ಸೂಜಿಯಿದೆಯೇ…? ಎಂದು ಹುಡುಕಿಕೊಂಡು ಅಲೆದಾಡಬೇಕಾಗುತ್ತದೆ. ನಾಲ್ಕು ಕಾಸಿನ ಸೂಜಿಯನ್ನು ಮಾರಲು ತಮ್ಮಲ್ಲಿ ಇರಿಸಿಕೊಳ್ಳುವ ದೂಕಾನುದಾರರು ಎಲ್ಲಿದ್ದಾರೆ?

ಇದ್ದಾರೆ, ನಮ್ಮೂರ ಜಾತ್ರೆಯ ಸಂತೆಗಳಲ್ಲಿ. ನಾವು ಒಂದರ್ಧ ಡಜನು ದೊಡ್ಡ ಸಣ್ಣ ಸೂಜಿಗಳನ್ನು, ನೂಲಿನ ಉಂಡೆಗಳನ್ನು ಕೊಂಡುಕೊಂಡು ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. 1980ರ ಸುಮಾರಿಗೆ ನಾನು ಇಂಗ್ಲೆಂಡಿಗೆ ಹೋದಾಗ ಚೀಲದಲ್ಲಿರಿಸಿಕೊಂಡ ಸಾಧನಗಳಲ್ಲಿ ಒಂದೆರಡು ಸೂಜಿಗಳು, ಕೆಲವು ಗುಬ್ಬಿಗಳು, ಸ್ವಲ್ಪ ನೂಲು ಇದ್ದುವು! ಇಂಗ್ಲೆಂಡಿನಲ್ಲಿ ರೆಡಿ ಮೇಡ್ ಅಂಗಿಗಳು ಎಲ್ಲೆಂದರಲ್ಲಿ ಸಿಗಬಹುದು, ಆದರೆ ಸೂಜಿ? ಗುಬ್ಬಿ? ಸೂಜಿ ಕಾಣೆ, ಗುಬ್ಬಿ ಮಾಯ!

ನೈಲ್ ಕಟ್ಟರ್ ಬರುವ ಶಕದ ಹಿಂದಿನ ಕಾಲವನ್ನು ಊಹಿಸಿಕೊಳ್ಳಿ. ನಾನು ಆ ಕಾಲದ ಮನುಷ್ಯ. ಉಗುರು ತೆಗೆಯುವ ಈ ಯಂತ್ರವನ್ನು ನಾನು ಮೊತ್ತ ಮೊದಲು ಕಂಡುದು ಕಾಲೇಜಿಗೆ ಹೋಗಲು ಸುರುಮಾಡಿದ ಮೇಲೆ. ಯಾಕೆಂದರೆ ಅದರ ಬಳಕೆ ನಗರ ಸಂಸ್ಕೃತಿಗೆ ಸೇರಿದ್ದಾಗಿತ್ತು. ನಾವು ಹಳ್ಳಿಗರು ಚೂರಿಯಿಂದ ಉಗುರು ತೆಗೆಯುತ್ತಿದ್ದೆವು. ಅದೊಂದು ಸುಲಭದ ಕೆಲಸವಲ್ಲ. ಸಾಧಾರಣ ಮನುಷ್ಯನೊಬ್ಬ ಮೂರು-ನಾಲ್ಕು ವಾರಗಳಿಗೊಮ್ಮೆಯಾದರೂ ಉಗುರು ತೆಗೆಯಬೇಕಾಗುತ್ತದೆ. ಕೈಯದ್ದು ಮತ್ತು ಕಾಲಿನದು. ಚೂರಿಯಿಂದ ಹೀಗೆ ತೆಗೆಯುವಾಗ ಅಪ್ಪಿ ತಪ್ಪಿ ಗಾಯವಾಗುವ ಸಂಭವ ಇದ್ದೇ ಇರುತ್ತದೆ.

ನಾವು ಹೆಚ್ಚಿನವರೂ ಬಲಗೈಯವರು, ಕೆಲವರು ಎಡಗೈಯವರು. ಸವ್ಯಸಾಚಿಗಳು ಕಡಿಮೆ. ಬಲಗೈಯವರು ಬಲಗೈಯ ಮತ್ತು ಎಡಗೈಯವರು ಎಡಗೈಯ ಉಗುರನ್ನು ಚೂರಿಯಿಂದ ಕತ್ತರಿಸುವುದು ತ್ರಾಸದಾಯಕವಾದ ಕೆಲಸವೇ ಸರಿ. ಇನ್ನು ಚಿಕ್ಕ ಮಕ್ಕಳ ಉಗುರನ್ನು ದೊಡ್ಡವರು ತೆಗೆಯುವ ಕೆಲಸವೂ ಹೀಗೆಯೇ. ಮೊದಲನೆಯದಾಗಿ, ಅವು ಕೂತಲ್ಲಿ ಕೂರುವುದಿಲ್ಲ. ಎರಡನೆಯದಾಗಿ ಉಗುರು ತೆಗೆಯಬೇಕು ಎನ್ನುವುದು ಅವಕ್ಕೆ ಗೊತ್ತಿರುವುದಿಲ್ಲ. ಎಲ್ಲಾದರೂ ಸ್ವಲ್ಪ ಗಾಯವಾದರೆ ಮಗುವಿಗೂ ನೋವು, ತಾಯಿಗೂ ಹಾಗೆಯೇ. ಇಪ್ಪತ್ತು ಬೆರಳುಗಳ ಉಗುರು ತೆಗೆಯುವಲ್ಲಿಗೆ ಒಂದು ಯುದ್ಧ ಮುಗಿದ ಹಾಗೆ….

ನಾನು ಹೇಳುತ್ತಿರುವುದು ಚೂರಿಯುಗದ ಕತೆ. ಚೂರಿಯ ಬಾಯಿ ಹರಿತವಾಗಿರಬೇಕು. ನಮ್ಮ ಊರಿನ ಚೂರಿಗಳು ಬಡ್ಡಾಗಿರುತ್ತಿದ್ದುವು: ‘ಹೊಕ್ಕುಳ ಬಳ್ಳಿ ಕತ್ತರಿಸಲೂ ಆಗುವಂತಿಲ್ಲ’ ಎಂಬ ಮಾತೊಂದು ಇತ್ತು. ಹರಿತ ಮಾಡುವುದಕ್ಕೆ ನಮ್ಮಲ್ಲೊಂದು ಕೌಶಲ್ಯವಿತ್ತು. ಮರದ ತುಂಡೊಂದರ (ಅಥವಾ ಅಡಿಕೆ ಮರದ ಸಲಿಕೆಯ) ಸಪಾಯಿ ಮೇಲ್ಮೈಗೆ ಬೆಂಗಲ್ಲಿನ (ಬೆಣಚು ಕಲ್ಲಿನ) ಪುಡಿಯನ್ನು ಹಾಕಿ ಕತ್ತಿಯನ್ನು (ಚೂರಿಯನ್ನು) ಅದರಲ್ಲಿ ಮಸೆಯುವುದು. ಹಾಗೆ ಮಾಡುವಾಗ ಕರ್ಕಶ ಸದ್ದಾಗುತ್ತದೆ, ಕೆಲವು ಬೆಂಕಿಯ ಕಿಡಿಗಳು ಹಾರಲೂಬಹುದು. ಒಂದು ಮಕ್ಕಳ ಕತೆಯಿದೆಯಲ್ಲ? ಕೆಲವು ಮಕ್ಕಳು ಅಜ್ಜಿಯ ಮನೆಗೆ ಹೊರಟಿರುತ್ತಾರೆ. ಅಜ್ಜಿ ಒಬ್ಬಳೇ ಕಾಡಿನ ಆಚೆ ವಾಸ ಮಾಡಿಕೊಂಡಿರುತ್ತಾಳೆ. ಮಕ್ಕಳು ಅಲ್ಲಿಗೆ ಹೋಗುವುದನ್ನು ತಿಳಿದುಕೊಂಡ ತೋಳ ಅಜ್ಜಿಯ ಮನೆಗೆ ಮುಂದಾಗಿ ಹೋಗಿ ಅಜ್ಜಿಯನ್ನು ಬಂಧಿಸಿಟ್ಟು ತಾನು ಅಜ್ಜಿಯ ವೇಷ ಹಾಕಿಕೊಂಡು ಅಲ್ಲಿ ಮಕ್ಕಳಿಗೋಸ್ಕರ ಕಾಯುತ್ತಿರುತ್ತದೆ. ರಾತ್ರಿಯೂಟದ ನಂತರ ಮಕ್ಕಳು ನಿದ್ರಿಸುತ್ತಿರುವಾಗ ಅವರನ್ನು ಕೊಂದು ತಿನ್ನುವುದು ತೋಳನ ಉದ್ದೇಶ. ಮಕ್ಕಳಿಗೆ ನಿದ್ದೆ ಬಂದಿರಬಹುದು ಎಂದುಕೊಂಡು ತೋಳ ಕತ್ತಲಲ್ಲಿ ಕತ್ತಿ ಮಸೆಯಲು ಸುರುಮಾಡುತ್ತದೆ. ಆದರೆ ಇನ್ನೂ ನಿದ್ರೆ ಬಂದಿರದ ಮಕ್ಕಳು:

ಜರ್ಕುಂ ಬುರ್ಕುಂ ಏನಜ್ಜೀ?
ಕತ್ತೀ ಮಸೆವುದು ಯಾರಜ್ಜೀ?

ಎಂದು ಕೇಳುತ್ತವೆ. ತೋಳ ಗುಟ್ಟು ಬಿಟ್ಟು ಕೊಡದೆ ಒಗಟು ಮಾತಿನಲ್ಲಿ ಏನೋ ಸಬೂಬು ಹೇಳುತ್ತದೆ. ಅಂತೂ ಕೊನೆಗೆ ತೋಳ ಸೋಲುತ್ತದೆ, ಮಕ್ಕಳು ಮತ್ತು ನಿಜವಾದ ಅಜ್ಜಿ ಬಚಾವಾಗುತ್ತಾರೆ. ಇಡೀ ಕತೆ ತುಂಬಾ ಚಂದ ಇದೆ. ಕತೆಯ ಎಲ್ಲಾ ವಿವರಗಳೂ ನನಗೀಗ ಈ ಇಳಿ ವಯಸ್ಸಿನಲ್ಲಿ ನೆನಪಿಲ್ಲ. ಆದರೆ, ‘ಜರ್ಕುಂ ಬುರ್ಕುಂ ಏನಜ್ಜೀ / ಕತ್ತೀ ಮಸೆವುದು ಯಾರಜ್ಜೀ?’ ಎನ್ನುವ ಪಲ್ಲವಿ ಇನ್ನೂ ನೆನಪಿದೆ ನೋಡಿ! ಬಹುಶಃ ಈ ಸಾಲುಗಳ ಲಾಲಿತ್ಯ, ಲಯ, ಅವಕ್ಕೆ ಸಂಬಂಧಿಸಿದ ನನ್ನ ಬಾಲ್ಯ ಜೀವನ ಇದಕ್ಕೆ ಕಾರಣವಿರಬೇಕು.

ನಮ್ಮ ಹಿರಿಯರು ದೇವಾಲಯಗಳ ಅರ್ಚಕರಾಗಿ ‘ತೆಂಕಲಾಗಿ’ (ಎಂದರೆ ಕೇರಳಕ್ಕೆ) ಹೋಗುತ್ತಿದ್ದರು. ಅಲ್ಲಿಂದ ಬರುವಾಗ ಏನಾದರೂ ವಿಶೇಷ ವಸ್ತುಗಳನ್ನು ತರುವುದು ವಾಡಿಕೆಯಾಗಿತ್ತು. ಹಾಗೆ ಅವರು ತರುತ್ತಿದ್ದ ವಸ್ತುಗಳಲ್ಲಿ ಒಂದು ಪೆನ್ ನೈಫ್ ಅಥವಾ ಪಾಕೆಟ್ ನೈಫ್ ಎಂದು ಇಂಗ್ಲಿಷ್ ನಲ್ಲಿ ಕರೆಯಲ್ಪಡುವ ಮಡಚುವ ಚೂರಿ. ಅದನ್ನು ನಾವು ‘ಪೀಶಾಕತ್ತಿ’ ಅಥವಾ ಚಿಕ್ಕದಾಗಿ ‘ಪಿಶಾತಿ’ ಎಂದು ಕರೆಯುತ್ತಿದ್ದೆವು. ಚಾಕು, ಚೂರಿ, ಕತ್ತಿ ಎಂದು ಮುಂತಾಗಿ ಅಲ್ಲ. ಈ ‘ಪೀಶಾಕತ್ತಿ’ಯ ವ್ಯುತ್ಪತ್ತಿ ಹೇಗೆಂದು ನನಗೆ ಗೊತ್ತಿಲ್ಲ. ಅದರ ಹ್ರಸ್ವ ರೂಪವೇ ‘ಪಿಶಾತಿ.’ ಪಿಶಾಚಿಗೂ ಅದಕ್ಕೂ ಸಂಬಂಧವಿಲ್ಲ. ಬಹುಶಃ ಮಲೆಯಾಳಿ ಭಾಷೆಯಿಂದ ನಮ್ಮ ಕಡೆಯ ಹವ್ಯಕವನ್ನು ಪ್ರವೇಶಿಸಿದುದು.

ಕೇರಳದಿಂದ ಬರುವ ಈ ಚೂರಿಗಳ ಒಂದು ಬ್ರಾಂಡಿಗೆ ಹೆಚ್ಚಿನ ಬೇಡಿಕೆಯಿತ್ತು. ‘ಮುಂದಿನ ಸಲ ಬರುವಾಗ ನನಗೊಂದು ತಂದುಕೊಡಿ’ ಎನ್ನುತ್ತಿದ್ದರು. ಬಹುಶಃ ‘ತೋಟರ’ ಎನ್ನುವ ಬ್ರಾಂಡಿನದು. ಯಾಕೆ ಇಂಥ ಬೇಡಿಕೆಯೆಂದರೆ ನಮ್ಮೂರಿನ ತಯಾರಿಕೆಗಳಿಂತ ಇದು ಎಷ್ಟೋ ಮುಂದುವರಿದಿತ್ತು. ಇದಕ್ಕೆ ಬಳಸಿದ ಕಬ್ಬಿಣಕ್ಕೆ ಬೇಗ ತುಕ್ಕು ಹಿಡಿಯುತ್ತಿರಲಿಲ್ಲ. ಬಾಯಿ ಹರಿತವಾಗಿತ್ತು. ಅಲ್ಲದೆ ಇದರ ಹಿಡಿ ಉಳೆಕ್ಕೊಂಬಿನಿಂದ ಮಾಡಿದುದಾಗಿತ್ತು. ‘ಉಳೆಕ್ಕೊಂಬು’ ಎಂದರೆ ಜಿಂಕೆಯ ಕೊಂಬು. ಏನಿದರ ವಿಶೇಷ? ಒಂದು ರೀತಿಯಲ್ಲಿ ಆನೆಯ ದಂತದಷ್ಟೇ ಗಟ್ಟಿ, ಆದರೆ ಕಂದು ಬಣ್ಣದ್ದು. ಮುಖ್ಯವಾಗಿ ಇದರ ಮೈ ಹಿತವಾದ ದುಂಡು ಮೊನೆಗಳಂಥ ಏರುತಗ್ಗುಗಳಿಂದ ಕೂಡಿದ್ದು ಹಿಡಿಯಲು ಭದ್ರವಾಗಿತ್ತು. ವಿವಿಧ ಸೈಜುಗಳಲ್ಲಿ ಈ ಪೀಶಾಕತ್ತಿ ದೊರಕುತಿತ್ತು. ತೋರು ಬೆರಳಷ್ಟು ಉದ್ದದ ಹಿಡಿ ಇರುವ ಮಧ್ಯಮ ದರ್ಜೆಯದು ಜನಪ್ರಿಯವಾಗಿತ್ತು. ಮನೆಯಲ್ಲೊಂದು ತೋಟರ ಪಿಶಾತಿ ಅರ್ಥಾತ್ ಪೀಶಾಕತ್ತಿಯಿದ್ದರೆ ಅದು ಸರ್ವೋಪಯೋಗಿ; ಆದರೆ ಅದು ಹೆಚ್ಚಾಗಿ ಬಳಕೆಯಾಗುತ್ತಿದ್ದುದು ಎಲೆಯಡಕೆ ತಟ್ಟೆಗಳಲ್ಲಿ, ಮತ್ತು, ಉಗುರು ಕತ್ತರಿಸುವುದಕ್ಕೆ!

ಹವ್ಯಕದಲ್ಲಿ ಬರೇ ಕತ್ತಿ ಎಂದರೆ ಕುಡುಗೋಲು, ಕಮ್ಯೂನಿಸ್ಟ್ ಪತಾಕೆಯಲ್ಲಿರುವಂಥದು, ಕುಡುಗೋಲು ಅಥವಾ ಕುಯಿಲುಗೋಲು, ಹುಲ್ಲು ಕೆರೆಯುವುದಕ್ಕೆ ಸಣ್ಣ ಗಾತ್ರದ್ದು. ಸೊಪ್ಪು ಕೊಚ್ಚುವ ಕತ್ತಿಯೇ ಹಿರಿದು; ಅದಕ್ಕೆ ಕಡ್ಪಕತ್ತಿ ಎನ್ನುವರು. ಗೂಟದ ಮೇಲೆ ಒಂದು ಹಿಡಿ ಹಸಿರು ಸೊಪ್ಪನ್ನು ಇರಿಸಿ ಈ ಭಾರವಾದ ಕಡ್ಪ ಕತ್ತಿಯಿಂದ ನಾನು ಎಷ್ಟೋ ಬಾರಿ ಕೊಚ್ಚಿದ್ದೇನೆ. ಇದು ದನಗಳ ಹಟ್ಟಿಗೆ, ಅವಕ್ಕೆ ಬೆಡ್ಡು, ನಮಗೆ ಗೊಬ್ಬರ.

ಇದೇ ಸಂದರ್ಭದಲ್ಲಿ ಊರಿಗೆ ಇನ್ನೊಂದು ಆವಿಷ್ಕಾರ ಪ್ರವೇಶ ಕೊಟ್ಟಿತ್ತು. ಅದುವೇ ಸೇಫ್ಟಿ ರೇಝರ್. ಅದುವರೆಗೆ ಜನರು ಬಾಳಿನಿಂದ ಗಡ್ಡ ಮಾಡಿಸಿಕೊಳ್ಳುತ್ತಿದ್ದರು – ಊರ ಕ್ಷೌರಿಕನಿಂದ (ಆತ ಮನೆ ಮನೆಗೆ ಬರುತ್ತಿದ್ದ)– ಅಥವಾ ತಮಗೆ ತಾವೇ. ಈ ಬಾಳು ಎಂಬ ಸಾಧನ ಈಗಲೂ ಕ್ಷೌರದಂಗಡಿಗಳಲ್ಲಿ ಬಳಕೆಯಲ್ಲಿದೆ. ಹರಿತವಾದ ಬಾಯಿ (ಅಲಗು) ಇರುವ, ಒಳಗಡೆಗೆ ಮಡಚಿಕೊಳ್ಳಬಹುದಾದ ಹೆರೆಯುವ ಚಾಕು ಇದು. ಇದನ್ನು ಹರಿತಗೊಳಿಸುವುದು ಚರ್ಮದನಾಲಿಗೆ (ನೀಳವಾದ ಹಾಳೆ) ಮೇಲೆ. ನನ್ನ ಅಣ್ಣನ ಬಳಿ ಇಂಥದೊಂದು ಬಾಳು ಇತ್ತು, ಹಾಗೂ ಅವರು ತಮ್ಮ ಗಡ್ಡವನ್ನು ತಾವೇ ಹೆರೆದುಕೊಳ್ಳುತ್ತಿದ್ದರು. ಕನ್ನಡಿ ಮುಂದಿಟ್ಟುಕೊಂಡು, ಪಕ್ಕದಲ್ಲಿರಿಸಿದ ನೀರಿನ ಗ್ಲಾಸಿನಲ್ಲಿ ಸಾಬೂನು ಅದ್ದಿ ಮೋರೆಗೆ ಲೇಪಿಸಿ ಮೋರೆಯನ್ನು ವಿಕಾರವಾಗಿ ಮಾಡಿಕೊಂಡು ಬಾಳನ್ನು ಕೆನ್ನೆಗಿರಿಸಿ ನಡೆಸುವ ಈ ಕಾರ್ಯಕ್ರಮ ನೋಡಲು ಖುಷಿ, ಆದರೆ ಗಡ್ಡ ಹೆರೆಯುವವನಿಗೆ ಅಲ್ಲ. ಯಾಕೆಂದರೆ ಪ್ರತಿ ಬಾರಿಯೂ ಸಣ್ಣ ಪುಟ್ಟ ಗಾಯಗಳಾಗಿ ರಕ್ತ ಸೋರದೆ ಇರುತ್ತಿರಲಿಲ್ಲ. ಆದ್ದರಿಂದ ಇದು ಪ್ರತಿ ದಿನ ನಡೆಸುವ ಕ್ರಿಯೆಯಾಗಿರಲಿಲ್ಲ; ಆದರೆ ಹಾಗೆಂದು ದೀರ್ಘ ಕಾಲ ಮುಂದೂಡುವ ಹಾಗೆಯೂ ಇಲ್ಲ, ಕಾರಣ ಗಡ್ಡ ಹೆಚ್ಚು ಬೆಳೆದರೆ ಅದನ್ನು ತೆಗೆಯಲು ಮತ್ತೆ ಕ್ಷೌರಿಕನೇ ಬೇಕು! ನಾನೆಂದೂ ಈ ಬಾಳು ಬಳಸುವ ಅಗತ್ಯ ಬರಲಿಲ್ಲ. ಯಾಕೆಂದರೆ ನಾನು ಬೆಳೆಯುತ್ತಿದ್ದಂತೆ ಸೇಫ್ಟಿ ರೇಝರ್ ಮಾರುಕಟ್ಟೆಗೆ ಬಂದಿತ್ತು.

ಇಂದಿನ ಓದುಗರಿಗೆ ಸೇಫ್ಟಿ ರೇಝರ್ ಚೆನ್ನಾಗಿ ಗೊತ್ತಿರುವ ಕಾರಣ ನಾನದನ್ನು ಇಲ್ಲಿ ವಿವರಿಸಬೇಕಾದ ಅವಶ್ಯಕತೆ ಇಲ್ಲ. ಈ ಸೇಫ್ಟಿ ರೇಝರ್, ಸೇಫ್ಟಿ ಮ್ಯಾಚಸ್ (ಬೆಂಕಿ ಪೆಟ್ಟಿಗೆ), ಸೇಫ್ಟಿ ಪಿನ್ ಕೂಡ ಇಂದು ನಮಗೆ ಚಿರ ಪರಿಚಿತವಾಗಿರುವ ಕಾರಣ ಇವುಗಳಿಲ್ಲದ ಕಾಲವನ್ನು ಊಹಿಸುವುದೂ ಕಷ್ಟ. ಈ ಎಲ್ಲಾ ‘ಸೇಫ್ಟಿ’ದಾರರಿಗೆ ನಾವು ಕೃತಜ್ಞರಾಗಿರಬೇಕು. ಹೆಸರಿಸಲು ಇಲ್ಲಿ ಜಾಗ ಸಾಲದಂಥ ಇಂಥ ಹಲವಾರು ಚಿಕ್ಕ ಪುಟ್ಟ ಆವಿಷ್ಕಾರಗಳಿವೆ. ಇವುಗಳ ಹಿಂದಿರುವ ಸೃಷ್ಟಿಕರ್ತರು ಇಂದು ನಮ್ಮ ಮಟ್ಟಿಗೆ ಬಹುತೇಕ ಅನಾಮಿಕರು. ಆದರೆ ಅಷ್ಟಕ್ಕೆ ಅವರ ಕೊಡುಗೆ ನಗಣ್ಯವಾಗುವುದಿಲ್ಲ. ಇವು ಯಾವುವೂ ಒಂದು ದಿನದಲ್ಲಿ ನಿರ್ಮಾಣವಾಗಲಿಲ್ಲ, ಒಬ್ಬ ವ್ಯಕ್ತಿಯಿಂದಲೂ ಅಲ್ಲ. ಇವುಗಳ ಹಿಂದೆ ಹಲವರ ಪರಿಶ್ರಮಗಳಿವೆ.

ಸೇಫ್ಟಿ ರೇಝರಿನಲ್ಲಿ ಉಕ್ಕಿನ ತೆಳು ಬ್ಲೇಡ್ ಇದೆ ತಾನೆ? ಇದು ಬಹಳ ಹರಿತವಾದುದು. ಕ್ಷೌರಿಕರು ಒಂದು ಬ್ಲೇಡನ್ನು ಎರಡಾಗಿ ಮುರಿದುಕೊಂಡು ಬಾಳಿನಂಥ ಫ್ರೇಮಿಗೆ ತಗಲಿಸಿ ಗಡ್ಡ ಹೆರೆಯುವ ತಾಂತ್ರಿಕತೆಯನ್ನು ಈಗ ರೂಢಿಸಿಕೊಂಡಿದ್ದಾರೆ. ಇದು ಪರವಾಯಿಲ್ಲ. ಪ್ರತಿ ಬಾರಿಯೂ ಬ್ಲೇಡಿನ ತುಂಡು ಹೊಸತಾಗಿರುವುದರಿಂದ ಕ್ಷೌರದ ಮೂಲಕ ಹರಡಬಹುದಾದ ಸೋಂಕಿನ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಬ್ಲೇಡನ್ನು ಕೆಲವರು ಉಗುರು ತೆಗೆಯಲು ಬಳಸುವುದಿದೆ. ನೈಲ್ ಕಟ್ಟರ್ ಬಂದ ಮೇಲೂ ಹೀಗೆ ಮಾಡುವುದರಲ್ಲಿ ಅರ್ಥವಿಲ್ಲ. ಬ್ಲೇಡಿನಿಂದ ಉಗುರು ತೆಗೆಯುವುದು ಬಹಳ ಅಪಾಯಕಾರಿ ಕೆಲಸ. ಎಲ್ಲಾದರೂ ಕೈ ಜಾರಿದರೆ ಗಾಯವಾಗುವ ಸಂಭವ ಜಾಸ್ತಿ. ಅಲ್ಲದೆ ಕಾಲಿನ ಉಗುರುಗಳು ಒರಟಾಗಿದ್ದು ಬ್ಲೇಡಿನ ನಾಜೂಕಿಗೆ ಹಿಡಿಸುವುದೂ ಇಲ್ಲ.

ನಾನು ‘ಸನಾ’ದಲ್ಲಿ ಕೆಲಸದಲ್ಲಿದ್ದಾಗ ನನ್ನ ಅಪಾರ್ಟ್ಮೆಂಟಿನ ಕೆಳಗಿನ ಅಪಾರ್ಟ್ಮೆಂಟಿನಲ್ಲಿ ಇರಾಕಿ ಪ್ರೊಫೆಸರ್ ಒಬ್ಬರು ವಾಸವಿದ್ದರು. ಅವರು ಏನು ಕಲಿಸುತ್ತಿದ್ದರೋ ತಿಳಿಯದು. ಆದರೆ ಯಾವಾಗಲೂ ತಮ್ಮ ಮನೆ ಮುಂದಿನ ವೆರಾಂಡದಲ್ಲಿ ನಿಂತುಕೊಂಡು ತಮ್ಮ ಜೇಬಿನಲ್ಲಿದ್ದ ಒಂದು ಹಿಡಿ ಪೆನ್ಸಿಲುಗಳನ್ನು ಒಂದೊಂದಾಗಿ ತೆಗೆದು ಮೊನೆ ಮಾಡುತ್ತಿದ್ದರು. ಅವರು ಹಾಗೆ ಮಾಡುತ್ತಿದ್ದುದು ಬ್ಲೇಡಿನಲ್ಲಿ. ಯಾಕೆ ಇಷ್ಟೊಂದು ಪೆನ್ಸಿಲುಗಳು, ಅದೂ ದಿನ ದಿನವೂ ಎನ್ನುವುದು ನನಗೆ ಅಚ್ಚರಿಯ ವಿಷಯವಾಗಿತ್ತು. ಏನೋ ಮಹಾ ಕಾದಂಬರಿಯೊಂದನ್ನು ಬರೆಯುತ್ತಿದ್ದರೇ? ಪೆನ್ಸಿಲ್ ನಲ್ಲಿ? ಆದರೂ ನಾನು ವಿಚಾರಿಸಲು ಹೋಗಲಿಲ್ಲ. ಅವರವರ ಚಟ ಅವರವರಿಗೆ. ನಾವು ಪರಸ್ಪರ ಕಂಡಾಗಲೆಲ್ಲ ನಸು ನಕ್ಕು ತಲೆಯಾಡಿಸುತ್ತಿದ್ದೆವು, ಅಷ್ಟೆ.

ಅವರ ಕುರಿತು ಯೋಚಿಸಿದಾಗಲೆಲ್ಲ ನನಗೆ ಚಾಲ್ರ್ಸ್ ಡಿಕೆನ್ಸ್ನ “ಡೇವಿಡ್ ಕಾಪರ್ ಫೋಲ್ಡ್” ಕಾದಂಬರಿಯಲ್ಲಿ ಬರುವ ಡಿಕ್ ಎಂಬ ಕಥಾಪಾತ್ರವೊಂದರ ನೆನಪಾಗುತ್ತದೆ. ಈ ಡಿಕ್ ತನ್ನ ಅಣ್ಣನ ಕೈಯಿಂದ ಸಾಕಷ್ಟು ದೌರ್ಜನ್ಯಕ್ಕೆ ಒಳಗಾಗಿ ಹುಚ್ಚಾಸ್ಪತ್ರೆ ಸೇರಿ ನಂತರ ಆಶ್ರಯದಾತೆಯೊಬ್ಬಳ ಮನೆಯಲ್ಲಿ ಇರುತ್ತಾನೆ. ಕಾಪರ್ ಫೀಲ್ಡ್ ನ ಗೆಳೆಯ ಅವನು, ದೈಹಿಕವಾಗಿ ಬೆಳೆದರೂ ಮಾನಸಿಕವಾಗಿ ಇನ್ನೂ ಮಗು, ಆದರೆ ಮಹಾ ಪರೋಪಕಾರಿ. ತನ್ನ ‘ಮೆಮ್ವಾ’ (ಜೀವನ ಸ್ಮೃತಿ) ಬರೆಯುವ ಯತ್ನ ನಡೆಸಿದ್ದಾನೆ. ‘ಮೆಮ್ವಾ’ವನ್ನು ಅವನು ತಪ್ಪಾಗಿ ಹೇಳುವುದು ‘ಮೆಮೋರಿಯಲ್’ (ಸ್ಮಾರಕ) ಎಂಬುದಾಗಿ! ಆದರೆ ಎಂದೂ ಈ ಯತ್ನ ಯಶಸ್ವಿಯಾಗುವುದಿಲ್ಲ. ಯಾಕೆಂದರೆ ಅವನು ಬರೆಯಲು ಕುಳಿತಾಗಲೆಲ್ಲಾ ಒಂದನೇ ಕಿಂಗ್ ಚಾಲ್ರ್ಸ್ನ ರುಂಡ ಅವನ ಲಕ್ಷ್ಯವನ್ನು ಭಂಗಪಡಿಸುತ್ತ ಇರುತ್ತದೆ! (ಇಂಗ್ಲೆಂಡಿನ ಒಂದನೇ ಕಿಂಗ್ ಚಾಲ್ರ್ಸ್ ವಧಾ ಶಿಕ್ಷೆಗೆ ಗುರಿಯಾದವ.)

ನನಗೆ ಇನ್ನೊಂದು ನೆನಪೂ ಬರುತ್ತದೆ. ಮಿಡ್ಲ್ ಸ್ಕೂಲಿನ ತನಕ ನಾವು ಬರೆಯಲು ಬಳಸುತ್ತಿದ್ದುದು ಪೆನ್ಸಿಲೇ. ಪೆನ್ಸಿಲ್ ಎಂದಮೇಲೆ ಅದನ್ನು ಮೊನೆ ಮಾಡುತ್ತ ಇರಬೇಕಲ್ಲ? ಅದಕ್ಕೆ ಪೀಶಾಕತ್ತಿಯನ್ನು ಬಳಸುತ್ತಿದ್ದೆವು. ಅದು ಸರಿಯಾಗುತ್ತಲೇ ಇರಲಿಲ್ಲ. ಬಡ್ಡು ಬಡ್ಡಾಗಿ ಇರುತ್ತಿತ್ತು. ಆದರೆ ಆಗ ಅದೃಷ್ಟವಶಾತ್ ‘ಪೆನ್ಸಿಲ್ ಮೊನೆ ಮಾಡುವ ಯಂತ್ರ’ವೊಂದು ಮಾರ್ಕೆಟಿಗೆ ಬಂತು. ನಮ್ಮ ಖುಷಿಗೆ ಪಾರವೇ ಇಲ್ಲ. ಅದರ ಇಂಗ್ಲಿಷ್ ಹೆಸರು ಪೆನ್ಸಿಲ್ ಶಾರ್ಪನರ್ ಎಂದಿದ್ದರೂ ನಾವು ಅದನ್ನು ಕರೆಯುತ್ತಿದ್ದುದು ಪೆನ್ಸಿಲ್ ಮೊನೆ ಮಾಡುವ ಯಂತ್ರ ಎಂದೇ. ಎಲ್ಲರ ಕೈಯಲ್ಲೂ ಅಂಥದೊಂದು ಯಂತ್ರ ಈಗ ಕಾಣಿಸಿಕೊಳ್ಳಲು ಸುರುವಾಯಿತು. ಸ್ಟೀಲಿನ ಮೈಯದು, ಪ್ಲಾಸ್ಟಿಕ್ ನ ಮೈಯದು. ಯಾವ ದೇವದೂತರು ನಮ್ಮ ಕಷ್ಟ ನೋಡಿ ಇದನ್ನು ಭೂಮಿಗೆ ಕಳಿಸಿದರು ಎಂದು ನಾವು ಯೋಚಿಸಿದವರಲ್ಲ. ಅಂತೂ ಅದು ಬಂತು. ಈಗ ಪೆನ್ಸಿಲ್ ಮೊನೆ ಮಾಡುವುದು ಎಷ್ಟೊಂದು ಸುಲಭವಾಯಿತು ಎಂದರೆ, ಪೆನ್ಸಿಲನ್ನು ಯಂತ್ರದ ತೂತಿಗೆ ಹಾಕಿ ತಿರುಗಿಸುತ್ತ ಅದರಿಂದ ಸುರುಳಿ ಸುರುಳಿಯಾಗಿ ಬೀಳುವ ಮರದ ಶೇವಿಂಗ್ಸನ್ನು ನೋಡುವುದು ನಮಗೊಂದು ಸಂತೋಷ ತರುತ್ತಿತ್ತು.

ಈ ಯಂತ್ರ ನಾಜೂಕಾದ ಮೊನೆಗಳನ್ನು ನೀಡುತ್ತಿದ್ದರೂ, ಅದರಿಂದ ಸ್ವಲ್ಪ ನಷ್ಟವೂ ಉಂಟಾಗುತ್ತಿತ್ತು ನಿಜ. ಎಂದರೆ ಸ್ವಲ್ಪ ಮೊನೆ ಅನಿವಾರ್ಯವಾಗಿ ಕೊರೆದು ಹೋಗುತ್ತಿತ್ತು. ಆದ್ದರಿಂದ ಪೀಶಾಕತ್ತಿಯಿಂದ ಮೊನೆ ಮಾಡುತ್ತಿದ್ದವರು ಈ ಯಂತ್ರವನ್ನು ಟೀಕಿಸುವುದಿತ್ತು. ಇಷ್ಟು ಸಾಕು ಎಂದು ಯಥಾಸ್ಥಿತಿವಾದಿಗಳು, ಇನ್ನೂ ಇದೆ ಎಂದು ಪ್ರಗತಿಶೀಲರು. ಹೀಗೆ ಯಥಾಸ್ಥಿತಿವಾದಿಗಳಿಗೂ ಪ್ರಗತಿಶೀಲರಿಗೂ ಸಂಘರ್ಷ ಯಾವತ್ತಿನಿಂದಲೂ, ಎಲ್ಲಾ ಕ್ಷೇತ್ರಗಳಲ್ಲೂ, ಇದ್ದದ್ದೇ!

ಈಗಲಾದರೆ ಮರದ ಮೈಯೇ ಇರದ, ಮೊನೆ ಮಾಡುವ ಯಂತ್ರವನ್ನು ಅನಗತ್ಯಗೊಳಿಸುವ, ಕೇವಲ ಸೀಸದ ಕಡ್ಡಿಯನ್ನು ಕೊಳವೆಗೆ ತುರುಕಿ ಬರೆಯುವ ಪೆನ್ಸಿಲುಗಳ ಆವಿಷ್ಕಾರವಾಗಿದೆ. ಆದರೆ ಇಂದಿಗೂ ಶಾಲಾ ಮಕ್ಕಳ ಮಟ್ಟಿಗೆ ಹೇಳುವುದಾದರೆ, ಮರದ ಉರುಟಿನ ಅಥವಾ ಷಟ್ಕೋನ ಮೈಯ ಪೆನ್ಸಿಲೇ ಮಾತೃಕೆ. ಅದರಲ್ಲಿ ಕೆಲವು ಒಳ ಭಿನ್ನತೆಗಳಿವೆ ನಿಜ: ರಬ್ಬರಿನ ಕಿರೀಟವಿರುವುದು, ಇಲ್ಲದಿರುವುದು, ಕೆಲವು ಸೀಸಗಳು ಹೆಚ್ಚು ಮಿದುವಾಗಿರುವುದು, ಇನ್ನು ಕೆಲವು ಹೆಚ್ಚು ಗಟ್ಟಿಯಾಗಿರುವುದು ಇತ್ಯಾದಿ. ಇದರ ಕ್ರಮಾಂಕಗಳನ್ನು ಎಚ್ (ಹಾರ್ಡ್ ‘ಗಟ್ಟಿ’) ಬಿ (ಬ್ಲ್ಯಾಕ್ ‘ಮಿದು’) ರೂಪದಲ್ಲಿ ಪೆನ್ಸಿಲ್ ಮೇಲೆಯೇ ಕೊಟ್ಟಿರುತ್ತದೆ.

ಶಾಲಾ ಮಕ್ಕಳು ಹೆಚ್ಚಾಗಿ ಬಳಸುವುದು ಮಧ್ಯಮ ತರದ ‘2 ಎಚ್ ಬಿ’ಯನ್ನು. ಇಂಥ ಮರದ ಮೈಯ ಪೆನ್ಸಿಲುಗಳು ಇರುವತನಕ ಮೊನೆ ಯಂತ್ರಗಳೂ ಇರುತ್ತವೆ. ಹಾಗೂ ಪೆನ್ಸಿಲ್ ಇರುವ ತನಕ ‘ರಬ್ಬರ್’ ಕೂಡ ಇರುತ್ತದೆ. ಘನಾಕೃತಿಗಳಿಗೆ (‘ಕ್ಯೂಬೋಯ್ಡ್’) ಹೇಳಿ ಮಾಡಿಸಿದ ಉದಾಹರಣೆಗಳು; ಕೆಲವಕ್ಕೆ ಪರಿಮಳ ಇರುತ್ತದೆ, ಕೆಲವು ನಿರ್ಗುಣಿಗಳು. ಪೆನ್ಸಿಲ್-ರಬ್ಬರ್ ಎಂದರೆ ಸೂಜಿ-ನೂಲಿನಂತೆ, ಟೂಥ್ ಬ್ರಶ್-ಟೂಥ್ ಪೇಸ್ಟಿನಂತೆ ಅವಳಿ-ಜವಳಿಗಳು. ಇನ್ನು ನನ್ನ ಫೇವರೇಟ್ ವಸ್ತುವಾದ ನೈಲ್ ಕಟ್ಟರ್ – ಅದರಲ್ಲಿ ಒಂದು ಅರವನ್ನೂ ಅಳವಡಿಸಿರುತ್ತದೆ. ಉಗುರು ಕತ್ತರಿಸಿದ ಮೇಲೆ ಅರ ಹಾಕಿ ಬೆರಳಿನ ತುದಿಯುಗುರನ್ನು ನಯಗೊಳಿಸುವುದಕ್ಕೆ. ಈ ದೃಷ್ಟಿಯಿಂದ ನೈಲ್ ಕಟ್ಟರ್ ಕೂಡ ಒಂದು ಯಮಳವೇ, ಹಾಗೂ ನೈಲ್ ಟ್ರಿಮ್ಮರ್ ಎಂಬ ಅದರ ಇನ್ನೊಂದು ಉಪಾಧಿ ಅದಕ್ಕೆ ಹೆಚ್ಚು ಒಪ್ಪುತ್ತದೆ. ಆದರೆ ಕನ್ನಡದಲ್ಲಿ ಉಗುರು ತೆಗೆಯುವ ಯಂತ್ರ ಯಂತ್ರವೇ. ನಾನಿದ್ದ ‘ಸನಾ’ದಲ್ಲಿ ಒಬ್ಬ ಇಲೆಕ್ಟ್ರೀಶಿಯನ್ ಕೂಡ ಎಂಜಿನೀಯರೇ.

ಬೆರ್ಚಪ್ಪ ಪ್ರಪಂಚ

ನನ್ನ ಕವಿತೆಗಳಲ್ಲಿ ಬರುವ ಕೆಲವು `ಲೋಲಿ ಕ್ಯಾರಕ್ಟರ್ಸ್’ಗಳಲ್ಲಿ ವಿದೂಷಕ ಒಂದು, ಬೆರ್ಚಪ್ಪ ಇನ್ನೊಂದು. ವಿದೂಷಕ ಹಿಂದಿನ ನಾಟಕಗಳಲ್ಲಿನ ಒಂದು ಸ್ಥಿರ ಪಾತ್ರ. ನಮ್ಮ ಕಡೆಯ ಯಕ್ಷಗಾನ ಬಯಲಾಟಗಳಲ್ಲಂತೂ ವಿದೂಷಕ ಬೇಕೇಬೇಕು. ಬೆರ್ಚಪ್ಪ ಗದ್ದೆಗಳ ನಡುವೆ ಹಕ್ಕಿಗಳನ್ನೋಡಿಸಲು ಇರಿಸುವ ಒಂದು ಗೊಂಬೆ. ಈ ಬೆರ್ಚಪ್ಪನ ಹೆಸರಿನಲ್ಲಿ ನಾನೊಂದು ಕತೆಯನ್ನೂ ಬರೆದಿದ್ದೇನೆ: `ಬೆಚ್ಚು ಬೊಮ್ಮ’ ಎಂದು ಅದರ ಹೆಸರು. ಅರ್ಧ ಕನ್ನಡ, ಅರ್ಧ ತೆಲುಗು ಸೇರಿಸಿ, ಬಹುಶಃ ನನ್ನದೇ ಸನ್ನಿವೇಶವನ್ನು ಪ್ರತಿನಿಧಿಸುವಂತೆ, ತಯಾರಿಸಿದ ಶೀರ್ಷಿಕೆ ಇದು. `ಬೊಮ್ಮ’ ಎಂದರೆ ತೆಲುಗಿನಲ್ಲಿ ಬೊಂಬೆ (ಗೊಂಬೆ) ಎಂದು ಅರ್ಥ. ಈ ಪದ ಬಹುಶಃ ಬ್ರಹ್ಮನ ಅವತಾರ ಇರಬೇಕು. ನಾನು ಕತೆಗೆ `ಬೆರ್ಚಪ್ಪ’ ಎಂದು ಹೆಸರು ಇರಿಸಬಹುದಿತ್ತು; ಆದರೆ ಸ್ವಲ್ಪ ನಾವೀನ್ಯತೆ ಇರಲಿ ಎನಿಸಿ ಈ ಹೆಸರು ಇರಿಸಿದೆ.

ಬೆರ್ಚಪ್ಪ ಎನ್ನುವುದು ದಕ್ಷಿಣ ಕನ್ನಡದ ಪ್ರದೇಶದ ಪದಪ್ರಯೋಗ; ಸೀಮೆ ಕನ್ನಡದಲ್ಲಿ `ಬೆದರುಗೊಂಬೆ’ ಎಂದು ಕರೆಯುತ್ತಾರೋ ಏನೋ. ಬೆರ್ಚುವುದು ಎಂದರೆ ಬೆಚ್ಚುವುದು, ಬೆದರುವುದು, ಗಲಿಬಿಲಿಗೊಳ್ಳುವುದು ಎಂದು ಅರ್ಥವಾಗುತ್ತದೆ. `ಬೆಚ್ಚಿಬೀಳು’ ಎನ್ನುವುದಕ್ಕೆ ಹವ್ಯಕದಲ್ಲಿ ಬೆರ್ಚಿಬೀಳು ಎನ್ನುತ್ತಾರೆ. ಕೆಲವು ಬಣ್ಣಗಳನ್ನು ಕಂಡರೆ ಬೆರ್ಚುವ ದನಗಳಿರುತ್ತವೆ. ಅಂಥ ದನಗಳಿಗೆ `ಪೆರ್ಚಿ’ ಇದೆ ಅನ್ನುತ್ತೇವೆ. ಬೆರ್ಚಿಗೆ `ಅಪ್ಪ’ ಸೇರಿ ಬೆರ್ಚಪ್ಪ ಉಂಟಾಗಿದೆ: ಈ `ಅಪ್ಪ’ ಎಂಬ ಪದವನ್ನು (+Human, +Male) ಒಂದು ಪ್ರತ್ಯಯದಂತೆ ಹಚ್ಚಿ ಅಂಕಿತ ನಾಮಗಳನ್ನು ರಚಿಸುವುದು ಕನ್ನಡದ ಒಂದು ಜಾಯಮಾನ ತಾನೆ? ರಾಮಪ್ಪ, ಸೋಮಪ್ಪ, ಭೀಮಪ್ಪ, ವೆಂಕಪ್ಪ, ಸಂಕಪ್ಪ, ಮುದುಕಪ್ಪ, ತಟಪಟಹನಿಯಪ್ಪ ಎಂಬಂತೆ.

ಹೀಗೆ ಈ `ಬೆರ್ಚಪ್ಪ’ ಪದದೊಳಗೆ ಬೆದರಿಕೆ ಇದೆ. ಆದರೆ ಈ ಗೊಂಬೆ ಸ್ವತಃ ಬೆದರುತ್ತದೆ ಎಂದು ಅರ್ಥವಲ್ಲ; ಅದು ಇತರರನ್ನು, ಮುಖ್ಯವಾಗಿ ಹಕ್ಕಿಗಳನ್ನು, ಹೊಲಕ್ಕೆ ಬರದಂತೆ ಬೆದರಿಸುತ್ತದೆ ಎಂದು ತಿಳಿಯಬೇಕು. ಬೆರ್ಚಪ್ಪ ಸಕರ್ಮಕ! ಭತ್ತ, ಧಾನ್ಯ, ತರಕಾರಿ ಬೆಳೆಸುವ ಹೊಲಗಳ ಮಧ್ಯದಲ್ಲಿ ಈ ಗೊಂಬೆಯನ್ನು ಆಳೆತ್ತರಕ್ಕೆ, ಎಲ್ಲರಿಗೂ ಕಾಣಿಸುವಂತೆ ಇರಿಸುತ್ತಾರೆ. ಇದು ಹೊಲಕ್ಕೆ ದಾರಿಹೋಕರ ‘ಕಣ್ಣು ಬೀಳದಿರುವುದಕ್ಕೂ’ ಆಯಿತು!

ಬೆರ್ಚಪ್ಪನನ್ನು ಸಂತೆಯಿಂದ ಖರೀದಿಸಿ ತರುವುದಿಲ್ಲ; ಅದು ಹಾಗೆ ಸಿಗುವುದೂ ಇಲ್ಲ. ಬೇಕಾದಾಗ ನಾವೇ ಮಾಡಿಕೊಳ್ಳುತ್ತೇವೆ. ಹಾಗೂ ಇದನ್ನು ಮಾಡುವುದಕ್ಕೆ ಹೆಚ್ಚೇನೂ ಪರಿಣತಿ ಬೇಡ. ಕೈಗೆ ಸಿಗದ ಸಾಮಗ್ರಿಗಳೂ ಬೇಡ. ಮಾಡುವುದು ಬಹಳ ಸುಲಭ.

ಬೇಕಾದ ಸಾಮಾನುಗಳು: 1. ಮರದ ಎರಡು ಕೋಲುಗಳು, ಒಂದು ಉದ್ದದ್ದು, ಇನ್ನೊಂದು ಅದಕ್ಕಿಂತ ಸ್ವಲ್ಪ ಚಿಕ್ಕದ್ದು; 2. ಸ್ವಲ್ಪ ಬೈಹುಲ್ಲು, ಅಥವಾ ಮುಳಿಹುಲ್ಲು; 3. ಹೊಸ ಅಥವಾ ಹಳೆಯ ಒಂದು ಮಡಕೆ; 4. ಹಳತಾದ ಉದ್ದ ಕೈಯ ಒಂದು ಅಂಗಿ. 5. ಸುಣ್ಣ; 6. ಬೇಕಾದಷ್ಟು ಹಗ್ಗ.

ಮಾಡುವ ವಿಧಾನ: ಉದ್ದದ ಕೋಲನ್ನು ಉದ್ದಕ್ಕೂ, ಚಿಕ್ಕ ಕೋಲನ್ನು ಅದಕ್ಕೆ ಅಡ್ಡವಾಗಿಯೂ ಇರಿಸಿ ಎರಡನ್ನೂ ನಡುವೆ ಬಿಗಿದು ಕಟ್ಟುವುದು. ಇದು ಯೇಸು ಕ್ರಿಸ್ತನನ್ನು ಏರಿಸಿದ ಶಿಲುಬೆಯಂತೆ ಕಾಣಿಸುತ್ತದೆ. ಈಗ ಉದ್ದದ ಕೋಲಿನ ಕೆಳಭಾಗ ಸೊಂಟ ಮತ್ತು ಕಾಲು, ಮೇಲಿನ ಭಾಗ ಕುತ್ತಿಗೆ ಎಂತಲೂ ತಿಳಕೊಳ್ಳಬೇಕು. ಅಡ್ಡಕೆ ಕಟ್ಟಿದ ಕೋಲಿನ ಆಚೀಚಿನ ಭಾಗಗಳು ತೋಳುಗಳು ಎಂತ ಲೆಕ್ಕ. ಇಷ್ಟಾದ ನಂತರ ದೇಹಾಂಗಗಳಿಗೆ ಬೇಕಾದಂತೆ ಬೈಹುಲ್ಲು ಅಥವಾ ಮುಳಿಹುಲ್ಲು ಸುತ್ತಿ ಹಗ್ಗದಿಂದ ಕಟ್ಟುವುದು. ಆಮೇಲೆ ಅದಕ್ಕೆ ಅಂಗಿ ಸುರಿಯುವುದು. ಪೈಜಾಮ ಅಥವಾ ಪ್ಯಾಂಟ್ಸ್? ಬೇಡ, ಅಷ್ಟೊಂದು ರಿಯಲಿಸಂ ಅಗತ್ಯವಿಲ್ಲ. ಇದ್ದರೆ ಸರಿ, ಇಲ್ಲದಿದ್ದರೆ ತಲೆಕೆಡಿಸಿಕೊಳ್ಳುವುದು ಬೇಡ. ಮಾನ ಮುಚ್ಚುವಷ್ಟು ಅಂಗಿ ಸೊಂಟದಿಂದ ಇಳಿಬಿದ್ದಿದ್ದರೆ ಸಾಕು—ಅದಲ್ಲದಿದ್ದರೆ ಒಬ್ಬ ಮನುಷ್ಯನನ್ನೇ ನಿಲ್ಲಿಸಬೇಕಾಗುತ್ತದೆ! (ಯಾಕೆಂದರೆ, ನಾವಿಲ್ಲಿ ಮಾಡುತ್ತಿರುವುದು ಒಂದು ಗೊಂಬೆಯನ್ನಲ್ಲದೆ ನಿಜವಾದ ಕಾವಲುಗಾರನನ್ನಲ್ಲ! ಕೆಲವು ಕತೆಗಾರರು ವಾಸ್ತವತೆ ತರಬೇಕು ಎಂದುಕೊಂಡು ವರದಿಯನ್ನೇ ಬರೆದುಬಿಡುತ್ತಾರೆ. ಆಗ ಕತೆ ಹೊರಟುಹೋಗಿ ವರದಿ ಉಳಿಯುತ್ತದೆ. ಅದೇ ರೀತಿ ಬೆರ್ಚಪ್ಪನನ್ನು ನಿಜವಾದ ವ್ಯಕ್ತಿಯಂತೆ ನಾಜೂಕಾಗಿ ತಯಾರಿಸಿದರೆ ಮತ್ತೆ ಬೆರ್ಚಪ್ಪ ಇರುವುದಿಲ್ಲ!)

ಈಗ ಮಡಕೆಗೆ ಕಣ್ಣುಗಳ ಎರಡು ತೂತುಗಳು, ಬಾಯಿಯ ಒಂದು ತೂತು ತೆಗೆಯಬೇಕು. ಸುಣ್ಣವನ್ನು ನೀರಿನಲ್ಲಿ ಮಿದು ಮಾಡಿ ಇಟ್ಟುಕೊಂಡು ಮಡಕೆಗೆ ಅಲ್ಲಲ್ಲಿ ಬೊಟ್ಟುಗಳನ್ನು ಹಾಕುವುದು. ಅದಕ್ಕೆ ಹೀಗೇ ಎಂಬ ನಿಯಮವೇನೂ ಇಲ್ಲ. ಎಷ್ಟು ಬೊಟ್ಟು ಎನ್ನುವುದರಲ್ಲಿ ಅರ್ಥವಿಲ್ಲ. ಬರಿಯ ಸ್ವಾರ್ಥ. ನಂತರ ಈ ಮಡಕೆಯನ್ನು ಮೇಲಿನ ಕೋಲಿಗೆ ಸಿಕ್ಕಿಸಿದರೆ ಬೆರ್ಚಪ್ಪ ತಯಾರು. ಇನ್ನು ಅದಕ್ಕೆ ಬೂಟು ತೊಡಿಸುವುದು, ಕಾಲಾ ಚಶ್ಮ ಇರಿಸುವುದು, ಬೆಲ್ಟ್ ಕಟ್ಟುವುದು ಇತ್ಯಾದಿ ಏಡ್-ಓನ್ಸ್ ನಿಮಗೆ ಬಿಟ್ಟದ್ದು. ಈ ಬೆರ್ಚಪ್ಪನನ್ನು ಹೊಲದ ಮಧ್ಯೆ ಎಲ್ಲರಿಗೂ ಕಾಣಿಸುವಂತೆ ಇನ್ನೊಂದು ಕೋಲಿಗೆ ಕಟ್ಟಿ ಊರಿದರಾಯಿತು.
This is our Installation!

ಅರ್ಥಾತ್ ಇನ್ಸ್ಟಲೇಶನ್ ಆರ್ಟ್. ಒರಿಜಿನಲ್ ಅಲ್ಲದಿದ್ದರೇನಾಯಿತು? ಪರಂಪರೆಯಿಂದ ಬಂದುದು. ನಮ್ಮ ದೇಸೀ ಪರಂಪರೆ. ಪೇಟೆಯವರಿಗೆ ಥ್ರಿಲ್ ನೀಡುವಂಥದು. ಆದರೂ ನಮ್ಮ ಯಾವ ದೇಸೀವಾದಿಗಳೂ ಈ ಬೆರ್ಚಪ್ಪನನ್ನು ಹೊಗಳಿ ಬರೆದುದಿಲ್ಲ. ಇದರ ಮೂಲವೇನು, ಕತೆಯೇನು ಎಂಬ ಕುರಿತು ವಿವರಗಳೇ ಇಲ್ಲವಲ್ಲ.

ಆದರೆ ಜನರು ಬೆರ್ಚಪ್ಪನನ್ನು ಒಂದು ಕಲಾವಿನ್ಯಾಸವನ್ನಾಗಿ ಕಲ್ಪಿಸುವುದಿಲ್ಲ. ಹೊಲಕ್ಕೆ ಹಕ್ಕಿಗಳು ಬರದಂತೆ ಬೆದರಿಸುವ ಒಂದು ಗೊಂಬೆಯಾಗಿ ಕಲ್ಪಿಸುತ್ತಾರೆ. ಅಷ್ಟಕ್ಕೂ ಬೆರ್ಚಪ್ಪನ ಕಲ್ಪನೆ ನಮ್ಮ ಜನರಿಗೆ ಮಾತ್ರವೇ ಸೀಮಿತ ಎನ್ನುವಂತೆಯೂ ಇಲ್ಲ. ಇದೊಂದು ಜಾಗತಿಕ ಕಲ್ಪನೆ. ಧಾರ್ಮಿಕ ಮೂಲದ್ದೇ ಅಥವಾ ಕರ್ಷಕ ಮೂಲದ್ದೇ ಎನ್ನುವುದು ಚಿಂತಿಸತಕ್ಕ ವಿಷಯ; ಎರಡೂ ಆಗಿರಬಹುದು. ಜಪಾನೀ ಭಾಷೆಯಲ್ಲಿ ಬೆರ್ಚಪ್ಪನಿಗೆ Kuebiko ಎನ್ನುತ್ತಾರಂತೆ. ಹಾಗಂದರೆ ಒಂದು ದೈವ. ಇದು ನಡೆಯಲಾರದು, ಆದರೆ ಎಲ್ಲವನ್ನೂ ತಿಳಕೊಂಡಿರುತ್ತದೆಯಂತೆ. ಅಂಥದೊಂದು ದೈವ ಹೊಲಕ್ಕೆ ಕಾವಲುಗಾರ ಆಯಿತು. ದಕ್ಷಿಣ ಕನ್ನಡದ ನಮ್ಮ ಕಡೆ ಬೆರ್ಚಪ್ಪನನ್ನು ದೈವೀಕರಿಸುವುದಿಲ್ಲ. ಬಹುಶಃ ನಮ್ಮಲ್ಲಿ ಈಗಾಗಲೇ ಸಾಕಷ್ಟು ಸಂಖ್ಯೆಯ ದೈವಗಳು ಇರುವುದರಿಂದ ಬೆರ್ಚಪ್ಪನನ್ನೂ ಒಂದು ದೈವವಾಗಿ ಮಾಡುವ ಅಗತ್ಯ ಬರಲಿಲ್ಲವೇನೋ. ವಾಸ್ತವದಲ್ಲಿ ಅದಕ್ಕೂ ಒಂದು ವಾರ್ಷಿಕ ಜಾತ್ರೆ ಇದ್ದಿದ್ದರೆ ಒಳ್ಳೇದಿತ್ತು.

ಜಾಗತಿಕವಾಗಿ ನೋಡುವುದಿದ್ದರೆ ಬೆರ್ಚಪ್ಪ ಬಹುಶಃ ಕೃಷಿಮೂಲದ ಗೊಂಬೆ. ಲೋಕದ ಹೆಚ್ಚಿನ ಭಾಷೆಗಳಲ್ಲೂ ಇದಕ್ಕೆ ಆಯಾ ಭಾಷೆಯ ಹೆಸರಿದೆ. ಜಪಾನೀ ಹೆಸರನ್ನು ನೋಡಿದೆವು. ಒಂದೇ ಭಾಷೆಯೊಳಗೂ ಪ್ರಾದೇಶಿಕ ವ್ಯತ್ಯಾಸಗಳಿವೆ. ಇಂಗ್ಲೆಂಡ್ ನಷ್ಟು ಚಿಕ್ಕ ದೇಶದಲ್ಲೇ ಹಲವಾರು ಹೆಸರುಗಳು ಪ್ರಚಲಿತ:

Scare-crow: England
Hay-man: England
Hodmedod: Berkshire
Murmet: Devon
Mommet: Somerset
Bwbak: Wales
Bodach-rocais:Scotland
Tattie bogle: Scotland

ಎಂದರೆ ಇದೆಷ್ಟು ನೆಲಕ್ಕೆ ಅಂಟಿಕೊಂಡಿರುವಂಥ `ಗುಮ್ಮ’ ಎನ್ನುವುದು ಗೊತ್ತಾಗುತ್ತದೆ. ಹೊಲ ಮನೆ, ನೊಗ ನೇಗಿಲುಗಳ ಹಾಗೆಯೇ. ಚಂದದ ಹೆಸರುಗಳು ಅಲ್ಲವೇ? ಇನ್ನು ಇಂಗ್ಲಿಷ್ ನ scare-crow ಎಂಬ ಪದದ ಶಬ್ದಾರ್ಥ ಗಮನಿಸಿ: ಕಾಗೆಯನ್ನು ಹೆದರಿಸುವಂಥದು ಎಂದರ್ಥ; ಇಲ್ಲಿ ಕಾಗೆ ಎಂದರೆ ಹೊಲಕ್ಕೆ ಉಪದ್ರ ಕೊಡುವ ಎಲ್ಲಾ ಹಕ್ಕಿಗಳೂ ಆದುವು. ಅದೇ ರೀತಿ, Hay-man ಎಂದರೆ ಬೈಹುಲ್ಲಿನ ಮನುಷ್ಯ; ಯಾವ ಹುಲ್ಲಿಂದಾದರೂ ಇದನ್ನು ಮಾಡಬಹುದು. ಆದರೆ ಹೊಲದ್ದೇ ಅದ ಬೈಹುಲ್ಲು ಇದಕ್ಕೆ ಜನಪ್ರಿಯ ಕಚ್ಚಾವಸ್ತು. ಸ್ಕಾಟಿಶ್ ನ Bodach-rocais ಎಂದರೆ `ಕಾಗೆಗಳ ಮುದಿಯ’ (‘ಮುದಿ ಕಾಗೆ’) ಎಂದರ್ಥ. ಮಲೇಶಿಯನ್ ಭಾಷೆಯಲ್ಲಿ ಬೆರ್ಚಪ್ಪನಿಗೆ Orang-orang ಎನ್ನುತ್ತಾರಂತೆ! (ಇದು ಬಹುಶಃ Orang-utan ‘ಚಿಂಪಾಂಜಿ ಜಾತಿಯ ಮರಕೋತಿ’ ಎಂಬ ಪದದಿಂದ ಬಂದಿರಬಹುದು.) ಹೀಗೆ ಈ ಬೆರ್ಚಪ್ಪನ ಪದಗಳು ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವರ್ಣರಂಜಿತವಾಗಿ ಮೂಡಿಬಂದಿವೆ. ಮುಖ್ಯವಾದ ವಿಷಯವೆಂದರೆ ಬೆರ್ಚಪ್ಪ ಎನ್ನುವುದು ಹಳ್ಳಿಮಕ್ಕಳ ಮನಸ್ಸಿನ ಒಂದು ಭಾಗವಾಗಿಹೋಗಿದ್ದು ಅವರ ಕಲ್ಪನಾಶಕ್ತಿಯನ್ನು ಕೆರಳಿಸುವಂಥ ಒಂದು `ಬೆಂತರ’, ಗುಮ್ಮ ಅಥವಾ ಗುಮ್ಮನ ತಮ್ಮ.

ಬೆರ್ಚಪ್ಪನಿಗೆ ಹಕ್ಕಿಗಳು ಬೆದರುತ್ತವೆಯೇ? ನನಗೀ ಬಗ್ಗೆ ಸಂಶಯವಿದೆ. ಬೆರ್ಚಪ್ಪನ ಹೆಗಲ ಮೇಲೇ ಕೂತು ದಣಿವಾರಿಸಿಕೊಳ್ಳುತ್ತಿರುವ ಹಕ್ಕಿಗಳನ್ನು ನಾನು ಕಂಡಿದ್ದೇನೆ. ಇನ್ನು ಈ ಕುರಿತು ಹಕ್ಕಿಗಳನ್ನು ಕೇಳಿ ಪ್ರಯೋಜನವಿಲ್ಲ. ಅವು ಕಬಳಿ ಹಾಕಿದ ಭತ್ತದ ಹೊಟ್ಟುಗಳನ್ನು ನೋಡಿದರೆ ಗೊತ್ತಾಗುತ್ತದೆ: ಹಕ್ಕಿಗಳು ನಿಜ ಹೇಳಲಾರವು ಎನ್ನುವುದು. ಬೆರ್ಚಪ್ಪ ನೆಟ್ಟ ನೋಟದಲ್ಲಿ ನಿಂತುಕೊಂಡೇ ಇರುತ್ತದೆ (ಇರುತ್ತಾನೆ?); ಹಕ್ಕಿಗಳು ತಮ್ಮ ಪಾಡಿಗೆ ತಾವು ಬಂದು ಬೇಕಷ್ಟು ತಿಂದುಕೊಂಡು ಹೋಗುತ್ತವೆ. ಇದು ಗೊತ್ತಿದ್ದೂ ಪ್ರತಿವರ್ಷವೂ ಬೆರ್ಚಪ್ಪನನ್ನು ನಿಲ್ಲಿಸುತ್ತಾರೆ; ಹೊಲ ಎಂದ ಮೇಲೊಂದು ಬೆರ್ಚಪ್ಪ ಬೇಕೇಬೇಕು ಎಂಬಂತೆ. ಸಂಸ್ಕೃತಿ ಎಂದರೆ ಇದುವೇ.

ತರಕಾರಿ ಹೊಲಗಳಲ್ಲಿ ಈ ಬೆರ್ಚಪ್ಪನ ಕೆಲಸ ಹಕ್ಕಿಗಳನ್ನು ಓಡಿಸುವುದಕ್ಕಿಂತಲೂ, ದೃಷ್ಟಿಬೊಟ್ಟಾಗಿ ಇರುವುದು. `ಓಹೋ ದೇವಲೋಕದ ಹಾಗಿದೆ ತರಕಾರಿ ಬೆಳೆ!’ ಎಂದು ಕೆಲವರು ಹೇಳಿಬಿಟ್ಟರೆ ಬೆಳೆಯ ಗತಿ ಏನು? ಮುಗಿದಂತೆಯೇ. ಸಂಪೂರ್ಣ ನಾಶವಾಗಿಬಿಡುತ್ತದೆ- ಹಾಗೆಂತ ನಾವು ಕೇಳಿದ್ದೇವೆ. ಇದಕ್ಕೆ `ಕಣ್ಹಾಕುವುದು’, `ಕಣ್ಣು ತಾಗುವುದು’, `ದೃಷ್ಟಿ ಸೋಂಕುವುದು’, `ದೃಷ್ಟಿ ಬಡಿಯುವುದು’ ಎಂದು ಮುಂತಾಗಿ ಅನ್ನುತ್ತಾರೆ.

ಕಣ್ಹಾಕುವಂಥ ದುಷ್ಟ ದೃಷ್ಟಿಶಕ್ತಿಯಿರುವವರು ಊರಿನಲ್ಲಿ ಕೆಲವರಾದರೂ ಇರುತ್ತಾರೆ. `ಎಷ್ಟು ಚಂದ ಇದೆ ಮಗು! ತಿಂಗಳಿನಲ್ಲಿ ತೊಳೆದ ಹಾಗೆ!’ ಅಂತ ಅಂದುಬಿಡುತ್ತಾರೆ. ಆವತ್ತು ರಾತ್ರೆ ಮಗುವಿಗೆ ಜ್ವರ; ಮರುದಿನ ನೀವು ಹೆಂಡತಿಮಗು ಸಮೇತ ಡಾಕ್ಟರಲ್ಲಿಗೆ ಪ್ರಯಾಣ. ಏನಾಯಿತು ಎಂದು ಡಾಕ್ಟರ್ ಕೇಳಿದರೆ ನೀವು ನಿನ್ನೆ ನಡೆದ ಘಟನೆಯನ್ನು ವಿವರಿಸುತ್ತೀರಿ; ಎಂದರೆ ಯಾರೋ ಒಬ್ಬರ ದೃಷ್ಟಿ ಬಡಿಯಿತು ಎಂದು. ಡಾಕ್ಟರ್ ಹಾಂ ಅನ್ನುವುದಿಲ್ಲ, ಹೂಂ ಎನ್ನುವುದಿಲ್ಲ. ಮಗುವಿನ ಪರೀಕ್ಷೆ ಮಾಡಿ ಔಷಧಿ ಕೊಡುತ್ತಾರೆ. ಒಂದು ದೃಷ್ಟಿ ಬೊಟ್ಟಿನಲ್ಲಿ ಹೋಗುವ ಜ್ವರಕ್ಕೆ ನೂರು ರೂಪಾಯಿ ಖರ್ಚು! ಯಾಕೆಂದರೆ ನಿಮ್ಮ ಮಗುವಿಗೆ ದೃಷ್ಟಿ ಬೊಟ್ಟು ಇರಿಸಲು ನಿನ್ನೆ ನೀವು ಮರೆತಿರುತ್ತೀರಿ, ಅಥವಾ ಲೆಕ್ಕಕ್ಕಿಂತ ತುಸು ಜಾಸ್ತಿಯೇ ವಿಚಾರಶೀಲರಾಗಿ ಇದನ್ನು ಮೂಢನಂಬಿಕೆಯೆಂದು ಧಿಕ್ಕರಿಸಿರುತ್ತೀರಿ. ಈ ಕಣ್ಹಾಕುವವರಾದರೂ ಬೇಕೆಂತಲೇ ನಿಮ್ಮ ತೋಟವನ್ನೋ ಮಗುವನ್ನೋ ಕೆಡಿಸಬೇಕು ಎನ್ನುವ ಉದ್ದೇಶ ಇಟ್ಟುಕೊಂಡಿರುವುದಿಲ್ಲ.

ಅವರು ಬರುತ್ತಾರೆ, ನೋಡುತ್ತಾರೆ, ಅವರ ಬಾಯಿಂದ ಒಂದು ರೂಪಕ ಬಂದು ಬಿಡುತ್ತದೆ ಅಷ್ಟೆ; ಅಲ್ಲದೆ ಅವರು ಹೇಳುವ ಮಾತು ನಿಜವೇ ಇರಬಹುದು; ಎಂದರೆ ನಿಮ್ಮ ತರಕಾರಿ ಬೆಳೆ ಅಥವಾ ಮಗು ತುಂಬಾ ಚಂದ ಇರಬಹುದು. ಆದರೆ ಹಾಗೆ ಅವರು ಬಾಯಿತೆರೆದು ಹೇಳಿಬಿಟ್ಟರೆ ಅಪಾಯ! ಕೆಲವು ಹೆಂಗಸರಿಗೆ ಗೊತ್ತಿರುತ್ತದೆ, ತಮ್ಮ ಗಂಡನಿಗೆ ಇಂಥ ಅಭ್ಯಾಸವಿದೆ ಎಂಬುದಾಗಿ; ಅದ್ದರಿಂದ ಗಂಡ ಮನೆಯಿಂದ ಹೊರಟಾಗಲೇ ಅವರು ಸಾಕಷ್ಟು ತಾಕೀತು ಮಾಡಿರುತ್ತಾರೆ, ಅಲ್ಲಿ ಹೋಗಿ ಏನಾರೂ ಹೇಳಬೇಡಿ ಮತ್ತೆ, ಎಂದು! ಗಂಡನೇನೋ ಒಪ್ಪಿದಂತೆ ತಲೆ ಆಡಿಸುತ್ತಾನೆ; ಆದರೆ ಅವನ ನಾಲಿಗೆ ಸುಮ್ಮನಿರಬೇಕಲ್ಲ! ಏನೋ ನುಡಿದುಬಿಡುತ್ತದೆ. ಅಷ್ಟು ಸಾಕು ಆ ವಸ್ತುವಿಗೆ ಗತಿ ಕಾಣಿಸುವುದಕ್ಕೆ: ಮಗುವಿಗೆ ಜ್ವರ ಬರುತ್ತದೆ, ನಾಯಿ ಲಾಚಾರಿಯಾಗಿ ಸತ್ತುಹೋಗುತ್ತದೆ, ಬೆಕ್ಕು ನಾಪತ್ತೆ, ದನದ ಕೆಚ್ಚಲಲ್ಲಿ ಬಾವು, ಮನೆ ಮುಂದೆ ಮೈತುಂಬಾ ಹೂ ಬಿಡುತ್ತಿದ್ದ ದಾಸನ ಗಿಡಕ್ಕೆ ಹುಳ! ತರಕಾರಿ ತೋಟವಂತೂ ನಾಶ. ಕಣ್ಣು ಬೀಳದಿರಲಿ ಎಂದು ಎಷ್ಟೆಂದು ಅಡಗಿಸುವುದು ಸಾಧ್ಯ?

ಅದ್ದರಿಂದಲೇ ಅಲ್ಲವೇ ಮಕ್ಕಳ ಮುದ್ದುಕೆನ್ನೆಗಳ ಮೇಲೆ ಕಪ್ಪು ಮಸಿಯಿಂದ ಬೊಟ್ಟಿಡುವುದು? ಇದಕ್ಕೆ `ದೃಷ್ಟಿಬೊಟ್ಟು’ ಅನ್ನುತ್ತಾರೆ. ಇಂಥ ಬೊಟ್ಟು ಇದ್ದರೆ ಕಣ್ಣಡುವವರ ದೃಷ್ಟಿ ಮಗುವಿಗೆ ಸೋಂಕುವುದಿಲ್ಲ ಎಂದು ನಂಬಿಕೆ. ಈ ಬೊಟ್ಟು ಅವರ ಮಾತಿನ ಕೆಟ್ಟುದನ್ನು ಹೀರಿಕೊಳ್ಳುತ್ತದೆ. ಬೊಟ್ಟು ದೊಡ್ಡದಾದಷ್ಟೂ ಹೀರುವ ಸಾಮರ್ಥ್ಯ ಅದಕ್ಕೆ ಜಾಸ್ತಿ.

ನನ್ನ ಚಿಕ್ಕಂದಿನಲ್ಲಿ ಒಂದು ಕತೆ ಕೇಳಿದ್ದೆ. ಒಂದು ಊರಿನಲ್ಲಿ ಹೀಗೆ ಕಣ್ಹಾಕುವ ಒಬ್ಬ ಮಹರಾಯ ಇದ್ದ. ಅವನು ಒಂದು ಆರೋಗ್ಯವಂತ ಕೋಣನನ್ನು ನೋಡಿ, ಯಾವಾಗ ಬಂದ್ಯೋ ಯಮಲೋಕದಿಂದ ಎಂದರೆ ಸಾಕು, ಆ ಕೋಣ ವಾಪಸು ಯಮಲೋಕಕ್ಕೆ ಹೋದಂತೆಯೇ. ಈ ಕಣ್ಹಾಕುವವ ಬರುವುದು ಗೊತ್ತಾದರೆ, ಊರವರು ತಮ್ಮ ಅಮೂಲ್ಯ ವಸ್ತುಗಳನ್ನು ಅಡಗಿಸಿಡುತ್ತಿದ್ದರಂತೆ. ಹೀಗಿರಲು ಒಮ್ಮೆ ಅದೇ ಊರಿನ ಯಜಮಾನರೊಬ್ಬರಿಗೆ ಸಮಸ್ಯೆಯೊಂದು ಬಂತು. ಅವರಿಗೆ ಹೊಸ ಮನೆ ಕಟ್ಟಿಸಬೇಕೆಂಬ ಮನಸ್ಸಾಯಿತು. ಅದಕ್ಕೆ ಅಗೆತ ಸುರುವಾದಾಗ ಮಣ್ಣಿನ ಕೆಳಗೊಂದು ಹೆಬ್ಬಂಡೆ ಕಾಣಿಸಿತು. ಇದನ್ನು ಒಡೆಯುವುದಕ್ಕೆ ಸಿಡಿಮದ್ದು ತರಿಸುವುದು ಸುಲಭವಾಗಿರಲಿಲ್ಲ. ಆಗ ಯಾರೋ ಸಲಹೆಮಾಡಿದರು: ಈ ನಮ್ಮ ಕಣ್ಹಾಕುವವನ ಕರೆಸೋಣ ಅಂತ. ಬಂಡೆಗೆ ಬಿಳಿ ವಸ್ತ್ರ ಹೊದೆಸಿಟ್ಟು ಅವನನ್ನು ಉಪಾಯದಿಂದ ಅಲ್ಲಿಗೆ ಬರಮಾಡಿಕೊಂಡರು. ಯಾಕೆ ಏನೆಂಬುದಕ್ಕೆ ಅದೇನೋ ಸುಳ್ಳು ಹೇಳಿದ್ದರು. ಅವನ ಕಣ್ಣಿಗೆ ಈ ವಸ್ತ್ರ ಹೊದೆಸಿಟ್ಟ ಬಂಡೆಗಲ್ಲು ಕಾಣಿಸಿದ್ದೇ `ದಾನೆಯ ಬೊಳ್ಳ, ಬೊಳ್ಪಾತು ಸಮಯ ಏತಾಂಡ್? ಲಕ್ಯಾರ ಆತಿದ್ಯ ಮಾರಾಯ ನೀಕು?’ ಎಂದೇನೋ ಅಂದುಬಿಟ್ಟ, ತುಳುವಿನಲ್ಲಿ; ಎಂದರೆ `ಏನು ಬಿಳಿಯ, ಬೆಳಗಾಗಿ ಸಮಯ ಎಷ್ಟಾಯ್ತು? ಏಳೋದಕ್ಕೆ ಆಗಿಲ್ವೆ ಮಾರಾಯ ನಿನಗೆ?’ ಎಂದು, ಬಂಡೆಯನ್ನು ಇನ್ನೂ ಎಚ್ಚರಾಗದೆ ನಿದ್ರಿಸುತ್ತಿದ್ದ ಕೋಣ ಎಂಬ ರೀತಿಯಲ್ಲಿ ಉದ್ದೇಶಿಸಿ. ಸರಿ, ಅವನ ಜತೆ ಯಜಮಾನರು ಅದೇನೋ ಮಾತಾಡಿ ಕಳಿಸಿಯಾಯಿತು. ಆದರೆ ಅವನಿನ್ನೂ ಬೇಲಿ ದಾಟಬೇಕಾದರೆ ಎಲ್ಲರೂ ನೋಡನೋಡುತ್ತಿದ್ದಂತೆ ಬಂಡೆ ಸಿಡಿದು ನುಚ್ಚುನೂರು! ಇದೊಂದು ಅತ್ಯುತ್ಪ್ರೇಕ್ಷೆಯ ಕತೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ನಮ್ಮ ಕಡೆಯ ಯಾರನ್ನಾದರೂ ಕೇಳಿ ನೋಡಿ, ಅವರಿಗೆ ಈ ಕತೆಯ ಒಂದಲ್ಲ ಒಂದು ಆವೃತ್ತಿ ಗೊತ್ತಿರುತ್ತದೆ.

(ಗಮನಿಸಬೇಕಾದ ಸಂಗತಿಯೆಂದರೆ: ಕೆಡುಗಣ್ಣಿನ ಮಂದಿ ಯಾವಾಗಲೂ ರಂಗುರಂಗಾಗಿ ಮಾತಾಡುತ್ತಾರೆ—ಉಪಮೆ, ರೂಪಕ ಇತ್ಯಾದಿಗಳನ್ನು ಬಳಸಿ. ಆದ್ದರಿಂದ ಸಾಮಾನ್ಯ ಜನರು ಖಾಸಗಿ ಮಾತಿನಲ್ಲಿ ಇಂಥ ಅಲಂಕಾರಗಳನ್ನು ಬಳಸುವುದಕ್ಕೆ ಹಿಂಜರಿಯುತ್ತಾರೆ—ತಾವು ಹೇಳಿದ್ದು ಎಲ್ಲಾದರೂ ಕೆಡುಕಾಗಿ ಪರಿಣಮಿಸಿದರೆ ಎಂಬ ಭಯದಲ್ಲಿ!)

ಇದೇ ಕಾರಣಕ್ಕೆ ಹೊಸ ಕಟ್ಟಡಗಳನ್ನು, ಮನೆಗಳನ್ನು ಕಟ್ಟುವಾಗ ಪೆಡಂಬೂತದ ತಲೆಗಳಂಥ ಆಕೃತಿಗಳನ್ನು ಎದುರಿಗೆ ತೂಗಿಹಾಕುವ ಪರಿಪಾಠ ಬಂದಿರಬೇಕು. ಇಂಥ ಆಕೃತಿಗಳಾದರೆ ಬಹುಶಃ ಅಂಗಡಿಗಳಲ್ಲಿ ಖರೀದಿಸಲು ಸಿಗುತ್ತವೆ ಎಂದು ತೋರುತ್ತದೆ. ಯಾಕೆಂದರೆ ರೀಯಲ್ ಎಸ್ಟೇಟ್ ಧಂಧೆಯಿಂದಾಗಿ ಈಗ ಈ ಮನೆ ಕಟ್ಟುವವರ ಸಂಖ್ಯೆ ಜಾಸ್ತಿಯಾಗಿದೆ. (ಕೆಲವರು ಬೂದುಗುಂಬಳವನ್ನು—ಅದರಲ್ಲೇನೋ ನೆಗೆಟಿವ್ ಶಕ್ತಿಯಿದೆ ಎಂದುಕೊಂಡು—ತೂಗಿಹಾಕುತ್ತಾರೆ; ಅದಕ್ಕೊಂದು ತಲೆಬುರುಡೆಯ ಆಕಾರ ಇದೆಯಷ್ಟೆ. ಒಡೆದರೆ ಅದು ಒಡೆಯಲಿ ಎಂದು.)

ಕೆಡುಗಣ್ಣಿಗೆ ಇಂಗ್ಲಿಷ್ನಲ್ಲಿ Evil Eye ಎನ್ನುತ್ತಾರೆ. ಆದರೆ ಇದು ಮೂಲತಃ ಯುರೋಪಿಯನ್ ಕಲ್ಪನೆಯೆಂದು ಅನಿಸುವುದಿಲ್ಲ. ಮುಖ್ಯವಾಗಿ ಮೆಡಿಟರೇನಿಯನ್ ಮತ್ತು ಏಶಿಯಾಟಿಕ್ ಕಲ್ಪನೆಯಿರಬಹುದು. ಅರೆಬಿಕ್, ಹೀಬ್ರೂ, ಪರ್ಶಿಯನ್, ಟರ್ಕಿಶ್, ಅಫ್ಘಾನೀ, ಭಾರತೀಯ ಭಾಷೆಗಳಲ್ಲಿ ಕೆಡುಗಣ್ಣಿಗೆ ಪರ್ಯಾಯ ಪದಗಳಿವೆ. ಯುರೋಪಿಯನರಲ್ಲಿ ಸ್ಪ್ಯಾನಿಶ್ ಭಾಷೆಯಲ್ಲೂ ಇಂಥ ಪದವಿದೆ; ಬಹುಶಃ 400 ವರ್ಷಗಳ ಮುಸ್ಲಿಮ್ ಆಳ್ವಿಕೆಯ ಕಾಲದಲ್ಲಿ ಸ್ಪ್ಯಾನಿಶಿಗೆ ಇದು ಹರಡಿರಬಹುದು. ಇಂಗ್ಲಿಷ್ ಗೆ ಹೇಗೆ ಬಂತೋ ತಿಳಿಯದು. ಬಹುಶಃ ಸ್ಪ್ಯಾನಿಶ್ ನಿಂದ. ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಂತೂ ಕೆಡುಗಣ್ಣಿನ ನಂಬಿಕೆ ಸಾರ್ವತ್ರಿಕವಾಗಿದೆ ಎಂದು ಅನಿಸುತ್ತದೆ. ಈಗ ಇಂಥ ನಂಬಿಕೆ ಕಡಿಮೆಯಾಗುತ್ತ ಬಂದಿದೆ. ಆದರೂ ದೃಷ್ಟಿ ಬೊಟ್ಟಿನ ಆಚರಣೆ ಮುಂದುವರಿದಿದೆ. ಹಾಗೂ ಟೀವಿ ಸೀರಿಯಲುಗಳು ಇವನ್ನು ಮತ್ತೆ ಪ್ರಚಾರಕ್ಕೆ ತರುತ್ತಿವೆ. ನಟಿಕೆ ಮುರಿಯುವುದು, ನಾಯಕಿಯ ತಾಯಿ ತನ್ನ ಕಣ್ಣಿನ ಬದಿಯಿಂದ ಉಗರಿನಲ್ಲಿ ಚೂರು ಮಸ್ಕರಾ ತೆಗೆದು ನಾಯಕಿಯ ಕೆನ್ನೆಗೆ ಬಳಿಯುವುದು ಇತ್ಯಾದಿ.

ಈ ರೀತಿ ಕಣ್ಹಾಕುವ ಮಂದಿಯಾದರೂ ಸುರಕ್ಷಿತರೇ ಎಂದರೆ ಅದೂ ಇಲ್ಲ! ಯಾಕೆಂದರೆ ಸಂಸಾರಸ್ಥರು ಕೆಲವು ಪ್ರತಿಕ್ರಮಗಳನ್ನು ರೂಢಿಸಿಕೊಂಡಿರುತ್ತಾರೆ. ನಮ್ಮ ಕಡೆಯಾದರೆ, ಕೆಡುಗಣ್ಣಿಗ ನಿಂತಿದ್ದ ಜಾಗದಿಂದ ತುಸು ಮಣ್ಣನ್ನು ತೆಗೆದು ಒಲೆಯ ಉರಿಗೆ ಹಾಕಿದರೆ ಕಣ್ಹಾಕಿದವರ ಕಣ್ಣು ಹೊಟ್ಟಿ ಹೋಗುತ್ತದೆ ಎನ್ನುವ ವಿಶ್ವಾಸವಿದೆ, ಇತ್ತು. ಕೆಲವರು ಮಣ್ಣಿನ ಬದಲು ಸ್ವಲ್ಪ ಸಾಸಿವೆ ಕಾಳನ್ನು ಬೆಂಕಿಗೆ ಹಾಕುತ್ತಿದ್ದರು. ಅದಾದರೆ ಸಿಡಿಯುವ ಸದ್ದು ಕೇಳಿಸುವುದಲ್ಲ! ಆ ಸದ್ದಿನಲ್ಲೊಂದು ತೃಪ್ತಿ. ಆದರೆ ಹಾಗೆ ಕಣ್ಣು ಕಳಕೊಂಡ ವ್ಯಕ್ತಿಗಳನ್ನು ಮಾತ್ರ ನಾನು ನಿಜಕ್ಕೂ ಕಂಡಿಲ್ಲ.

ನಮ್ಮ ಬೆರ್ಚಪ್ಪ ಹೊಲದ ಮಧ್ಯೆ ಇರುವ ತನಕ ಹೊಲಕ್ಕೆ ಯಾರ ಕಣ್ಣೂ ಬೀಳದು; ಯಾಕೆಂದರೆ ಅವರು ಬೆರ್ಚಪ್ಪನನ್ನೇ ನೋಡಿ ಮೂಕವಿಸ್ಮಿತರಾಗುತ್ತಾರೆ, ಹೊಲದ ಮೇಲೆ ಅವರ ದೃಷ್ಟಿ ಹಾಯುವುದಿಲ್ಲ ಎಂದೇನೂ ಅಲ್ಲ! ಬೆರ್ಚಪ್ಪ ಎಂಥ ದೃಷ್ಟಿಯನ್ನೂ ತೆಗೆದು ನಿವಾಳಿಸಿ ಒಗೆಯುತ್ತದೆ ಎಂಬ ಕಾರಣಕ್ಕೆ. ಆದರೆ ನಮ್ಮ ಬೆರ್ಚಪ್ಪ ದೃಷ್ಟಿಬೊಟ್ಟಾಗಿ ಬಳಕೆಯಾಗುವುದಕ್ಕಿಂತಲೂ ಹೆಚ್ಚು ಹಕ್ಕಿಗಳನ್ನು ಓಡಿಸುವ ಕೆಲಸಕ್ಕೆ ನಿಯುಕ್ತವಾಗಿರುವುದೇ ಹೆಚ್ಚು.
ಹಿಂದೆ ಕೆಲವು ಕಡೆ ಹಕ್ಕಿಗಳನ್ನು ಓಡಿಸುವ ಕೆಲಸವನ್ನು ಜನರೇ ಮಾಡುವುದು ಇತ್ತೆಂದು ಕಾಣುತ್ತದೆ. ಹಕ್ಕಿಗಳನ್ನು ಓಡಿಸಲೆಂದು ಅಂಥವರು ಹೊಲಗಳ ಬಳಿ ಇಡೀ ದಿನ ಕಾವಲು ನಿಂತಿರುತ್ತಿದ್ದರು. ಶಿಶುನಾಳ ಷರೀಫರದೊಂದು ಸೊಗಸಾದ ಪದ್ಯವಿದೆ. ಇದರಲ್ಲಿ ಹೆಣ್ಣೊಬ್ಬಳು `ಕಾಡತಾವ ಕಬ್ಬಕ್ಕಿ, ಹೊಲದೊಳಗೆ ನಾ ಒಬ್ಬಾಕಿ’ ಎಂಬಂಥ ಸಾಲುಗಳು ಬರುತ್ತವೆಯೆಂದು ನನ್ನ ನೆನಪು. ಷರೀಫರ ಮಟ್ಟಿಗೆ ಈ ಕಬ್ಬಕ್ಕಿಗಳು ಭವದ ಉಪಾಧಿಗಳಿರಬೇಕು. ಅವು ಬಂದು ಮನುಷ್ಯರನ್ನು ಕಾಡುತ್ತವೆ ಎಂಬ ಅಧ್ಯಾತ್ಮಿಕ ಅರ್ಥ ಅದರಲ್ಲಿದೆ ಎನ್ನುತ್ತಾರೆ, ಇರಬಹುದು. ನನಗಾದರೆ ಇಂಥ ಅಧ್ಯಾತ್ಮದ ಆಸಕ್ತಿಯಿಲ್ಲ; ಅವೆಲ್ಲಾ ಲೋಕವನ್ನು ತಿಳಿಯುವ ತೀರಾ ಸಿಂಪ್ಲಿಸ್ಟಿಕ್ ವಿಧಾನಗಳೆಂದು ನನಗನಿಸುತ್ತದೆ. ಆದರೆ ಷರೀಫರ ಈ ಪದ್ಯವನ್ನು ಪದ್ಯವಾಗಿ (ಎಂದರೆ ಐಹಿಕವಾಗಿ) ನಾನು ಆನಂದಿಸಬಲ್ಲೆ. ಇದನ್ನೋದಿದಾಗ ನನಗೆ ಆ ಮಾತುಗಳನ್ನು ನುಡಿಯುವ ಒಬ್ಬ ಯುವತಿ ಕಲ್ಪನೆಗೆ ಬರುತ್ತಾಳೆ; ಅವಳು ಒಬ್ಬಂಟಿಯಾಗಿ ಹೊಲ ಕಾಯ್ತ ಇರುತ್ತಾಳೆ. ಬಹುಶಃ ಅದು ಅವಳ ದೈನಂದಿನ ಕಸುಬು. ಆದರೆ ಈ ಖದೀಮ ಹಕ್ಕಿಗಳ ಉಪಟಳ ಜಾಸ್ತಿ; ಅವುಗಳನ್ನು ಓಡಿಸುವುದಕ್ಕೆ ಅವಳಿಂದ ಆಗುತ್ತಿಲ್ಲ. ಬಹುಶಃ ಸುಸ್ತಾಗಿಬಿಟ್ಟಿದ್ದಾಳೆ. ಅವಳಿಗೆ ಯಾರಾದರೂ ಸಹಾಯ ಮಾಡಬಾರದೇ ಎಂದು ನಾನು ಅಂದುಕೊಳ್ಳುತ್ತೇನೆ. ಬಹುಶಃ ಅವಳಿಗೊಬ್ಬ ಪ್ರಿಯತಮ ಇರುತ್ತಿದ್ದರೆ! ಇಂಥ ವಿಚಾರಗಳು ನನ್ನ ತಲೆಯಲ್ಲಿ ಮೂಡುತ್ತವೆ.

ಇವೇನೂ ಷರೀಫರ ಅಧ್ಯಾತ್ಮಿಕ ವಿಚಾರಗಳಿಗಿಂತ ಕಡಿಮೆ ಜೀವನ ಮೌಲ್ಯವುಳ್ಳವೆಂದು ನನಗನಿಸುವುದಿಲ್ಲ. ಷರೀಫರೇ ಸ್ವತಃ ಇಂಥದೊಂದು ಚಿತ್ರವನ್ನು ರೂಪಕವಾಗಿಯಾದರೂ ಕೊಟ್ಟುದು ಅವರ ವಸ್ತುಪ್ರಪಂಚವನ್ನು ನಮಗೆ ತೋರಿಸುತ್ತದೆ. ಅಬ್ಬೆ, ಹೆಣ್ತಿ, ಕೋಳಿ, ಕೋಡಗ, ಮಗ್ಗ, ಮದ್ದಳೆ, ಕುಪ್ಪಸ, ಸೀರೆ! ಇಂಥ ತೀರ ಸಾಮಾನ್ಯವಾದ ವಿವರಗಳಿಂದ ಷರೀಫರ ಜಗತ್ತು ದಿಮಿಗುಟ್ಟುತ್ತ ಇತ್ತು, ಇರುತ್ತದೆ. ಈ ಜಗತ್ತು ನಮ್ಮದಕ್ಕಿಂತ ಭಿನ್ನವಲ್ಲ ಎಂದು ಗೊತ್ತಾಗಿ ಸಂತೋಷವೆನಿಸುತ್ತದೆ. ಷರೀಫರು ಸ್ವತಃ ಈ ಹುಡುಗಿಯನ್ನು ನೋಡಿರಬೇಕಲ್ಲ ಎನಿಸುತ್ತದೆ. ಪುರಂದರದಾಸರ ಪದ್ಯಗಳನ್ನು ಓದಿದಾಗಲೂ ನನಗೆ ಇಂಥದೇ ಭಾವನೆ ಬರುತ್ತದೆ.

ಅವರು `ಕಾಗದ ಬಂದಿದೆ’ ಎನ್ನುವಾಗ, ಆಹಾ, ಅವರ ಕಾಲದಲ್ಲೂ ಈ ಕಾಗದ ಕಳಿಸುವ ವ್ಯವಸ್ಥೆ ಇತ್ತೇ ಎಂದು ಸೋಜಿಗಪಡುವುದು ಮಾತ್ರವಲ್ಲ; ಇಂಥ ಸಾಮಾನ್ಯ ವಸ್ತುವನ್ನೂ ಅವರು ಕಡೆಗಣಿಸಲಿಲ್ಲವಲ್ಲ ಎಂದು ಖುಷಿಯಾಗುತ್ತದೆ. (ಈವತ್ತಾದರೆ ಅವರು ಈ-ಮೇಲ್ ಬಂದಿದೆ ಎನ್ನುತ್ತಿದ್ದರೋ ಏನೋ! ಯಾಕಿರಬಾರದು? ಆದರೆ ಇಂಥ ಯೋಚನೆಯೇ ಅಪವಿತ್ರವೆಂದು ಆಸ್ತಿಕರ ನಂಬಿಕೆ. ಅಪವಿತ್ರ ಪವಿತ್ರೋ ವಾ!) ಇಂಥ ಪದ್ಯಗಳನ್ನೋದಿ ಎಷ್ಟು ಮಂದಿ ಅಧ್ಯಾತ್ಮಿಗಳಾದರೋ ನನಗೆ ಗೊತ್ತಿಲ್ಲ, ಆದರೆ ಪದ್ಯಗಳು ಮಾತ್ರ ಜನರಿಗೆ ಖುಷಿಯನ್ನು ಕೊಡುತ್ತಲೇ ಬಂದಿವೆ.

ಷರೀಫರ ಈ ಕಬ್ಬಕ್ಕಿ ಪದ್ಯ ನಾನು ಓದಿದ ಇತರ ಕೆಲವು ಪದ್ಯಗಳನ್ನು ನನಗೆ ನೆನಪಿಗೆ ತರುತ್ತದೆ. ಉದಾಹರಣೆಗೆ, ವಾಲೆಸ್ ಸ್ಟೀವನ್ಸನ “Thirteen Ways of Looking at a Blackbird”. ಕಬ್ಬಕ್ಕಿಯನ್ನು ನೋಡುವ ಹದಿಮೂರು ಬಗೆಗಳನ್ನು ಹದಿಮೂರು ಚರಣಗಳಲ್ಲಿ ವಿವರಿಸುವ ಪದ್ಯ ಇದು- ಹದಿಮೂರು ಯಾಕೆ, ಅಥವಾ ಹದಿಮೂರೇ ಯಾಕೆ ಎಂದು ಕೇಳಬೇಡಿ. ಪ್ರಾಯಶಃ ಹದಿಮೂರಕ್ಕೆ ಪದ್ಯ ನಿಂತಿತು, ಅದಕ್ಕೇ ಹದಿಮೂರು ಬಗೆ. A painting is never finished, it is only abandoned ಎಂಬ ಮಾತು ಕವಿತೆಗೂ ಸಲ್ಲುತ್ತದೆ. ಜಪಾನೀ ಹಾಯಿಕುಗಳ ಮಾದರಿಯ ಚಿಕ್ಕ ಚಿಕ್ಕ ಚರಣಗಳ ಜೋಡಣೆ ಇದು. ಇದರಲ್ಲಿ ನನಗೆ ಅತ್ಯಂತ ಇಷ್ಟವಾದ ಸಾಲುಗಳೆಂದರೆ:

I do not know which to prefer,
The beauty of inflections
Or the beauty of innuendoes,
The blackbird whistling
Or just after.

ಯಾಕೆ ಎಂದು ಕೇಳಬೇಡಿ. ಮನಸ್ಸಿಗೆ ಆಹ್ಲಾದ ಉಂಟುಮಾಡುತ್ತದೆ. ಪದ್ಯವೊಂದು ಅಷ್ಟು ಮಾಡಿದರೆ ಸಾಲದೇ? ಹಕ್ಕಿಯೊಂದನ್ನು ಅದು ಸಿಳ್ಳೆ ಹೊಡೆಯುವ ಮೊದಲು ಮತ್ತು ನಂತರ ಎಂದು ಕಲ್ಪಿಸುವುದೇ ಒಂದು ಖುಷಿ! ಸ್ಟೀವನ್ಸ್ ನ ಬ್ಲ್ಯಾಕ್ ಬರ್ಡ್ (ತ್ರಶ್) ಬಹುಶಃ ಕನ್ನಡದ ಕಬ್ಬಕ್ಕಿ ಇರಲಾರದು. ಸ್ಟೀವನ್ಸ್ ನ ಹಕ್ಕಿ ಹಾಡುತ್ತದೆ. ಕನ್ನಡದ ಕಬ್ಬಕ್ಕಿ ಕಾಳು ಕೊಳ್ಳೆ ಹೊಡೆಯುತ್ತದೆ! ಆದರೆ ಹಕ್ಕಿಗಳು ಹಕ್ಕಿಗಳೇ!

ಅದೇ ರೀತಿ, ವಿಲಿಯಂ ವಡ್ರ್ಸ್ವರ್ತ್ ನ “The Solitary Reaper” ಎಂಬ ಪದ್ಯ ನೆನಪಾಗುತ್ತದೆ. ಹೊಲದಲ್ಲಿ ಒಬ್ಬಳೇ ಬೆಳೆ ಕೊಯ್ಯುವ ಹೆಣ್ಣೊಬ್ಬಳ ಚಿತ್ರಣ ಇದರಲ್ಲಿದೆ. ಬಾಗಿ ಕೊಯ್ಯುತ್ತ, ಕಟ್ಟುತ್ತ ಅವಳು ಬೇಸರದ ಧ್ವನಿಯ ಹಾಡೊಂದನ್ನು ಹಾಡುತ್ತ ಇರುತ್ತಾಳೆ. ಆ ಹಾಡು ಯಾತರ ಕುರಿತು ಎನ್ನುವುದು ಕವಿಗೆ ಗೊತ್ತಾಗುವುದಿಲ್ಲ, ಯಾಕೆಂದರೆ ದೂರದ ಗುಡ್ಡದಿಂದ ಅವನ ಕಣ್ಣಿಗೆ ಬೀಳುವ ದೃಶ್ಯ ಇದು; ಆದರೆ ಹಾಡಿನ ಸಂಗೀತ ಮಾತ್ರ ಅವನ ಹೃದಯದಲ್ಲಿ ನೆಲಸುತ್ತದೆ. ಉಳಿದುದನ್ನೆಲ್ಲ ಅವನು ಕಲ್ಪಿಸಿಕೊಳ್ಳುತ್ತಾನೆ. ವಡ್ರ್ಸ್ ವರ್ತ್ ನ ಹಲವಾರು ಪ್ರಸಿದ್ಧ ಸ್ಮೃತಿಗೀತಗಳಲ್ಲಿ ಇದೂ ಒಂದು, ನಮ್ಮ ಮನಸ್ಸನ್ನು ಗಾಢವಾಗಿ ಹಿಡಿದುಕೊಳ್ಳುವಂಥದು.

ಇಂಥದೇ ಇನ್ನೊಂದು ಕವಿತೆ ಕೀಟ್ಸ್ನ “Ode to a Nightingale”. ಕವಿತೆಯ ಈ ಭಾಗವನ್ನು ನೋಡಿ:
Hou wast not born for death, immortal Bird!
No hungry generations tread thee down;
The voice I hear this passing night was heard
In ancient days by emperor and clown:
Perhaps the selfsame song that found a path
Through the sad heart of Ruth, when, sick for home,
She stood in tears amid the alien corn;
The same that oft-times hath
Charmed magic casements, opening on the foam
Of perilous seas, in faery lands forlorn.

ನೈಟಿಂಗೇಲ್ ಹಕ್ಕಿಯನ್ನು ಹೊಗಳುವ ನೆವದಲ್ಲಿ ಕೀಟ್ಸ್ ಎಷ್ಟೊಂದು ಸಂಗತಿಗಳನ್ನು ತರುತ್ತಾನೆ! ಇಲ್ಲಿ ಬರುವ ಮಹಾರಾಜ ಮತ್ತು ವಿದೂಷಕನ ಪ್ರಸ್ತಾಪ ಶೇಕ್ಸ್ಪಿಯರನ “ಕಿಂಗ್ ಲೀಯರ್” ನಾಟಕಕ್ಕೆ ಸಂಬಂಧಿಸಿದುದು ಎನ್ನುತ್ತಾರೆ ವಿಮರ್ಶಕರು: ತನ್ನ ಇಬ್ಬರು ಹಿರಿಯ ಮಗಳಂದಿರಿಂದ ಹೊರಹಾಕಲ್ಪಟ್ಟ ಕಿಂಗ್ ಲೀಯರ್ ಹುಚ್ಚನಂತೆ ಮಳೆಗಾಳಿಯಲ್ಲಿ ಬಯಲು ಸುತ್ತುತ್ತಿರುವಾಗ ಅವನಿಗೆ ಜತೆಯಾಗುವುದು ಹುಚ್ಚನ ವೇಷವನ್ನು ಬೇಕೆಂದೇ (ಮುದಿ ಅರಸನಿಗೆ ನೆರವಾಗಲು) ಧರಿಸಿಕೊಂಡಿದ್ದ ಎಡ್ಗರ್. ಈ ಎಡ್ಗರ್ ಸಹಾ ತನ್ನ ತಂದೆಯಿಂದ ಹೊರ ಹಾಕಲ್ಪಟ್ಟವನು. ಆದರೆ ನಮ್ಮ ಅಗ್ರೇರಿಯನ್ (ಕರ್ಷಕ) ವಲಯಕ್ಕೆ ಹೆಚ್ಚು ಪ್ರಸ್ತುತವಾದುದು ರೂತ್ ನ ಪ್ರಸ್ತಾಪ. ರೂತ್ ಎನ್ನುವವಳು ಒಬ್ಬ ಬಿಬ್ಲಿಕಲ್ ತರುಣಿ. ಬೈಬಲಿನ `ಬುಕ್ ಆಫ್ ರೂತ್’ನಲ್ಲಿ ಇವಳ ಕತೆಯನ್ನು ಓದಬಹುದು. ತನ್ನ ಊರು (ಮೊಆಬ್) ಬಿಟ್ಟು ಪರವೂರಿನಲ್ಲಿ (ಬೆತ್ಲಹೆಮ್) ತನ್ನ ಅತ್ತೆಯೊಂದಿಗೆ ನೆಲಸಲು ತೀರ್ಮಾನಿಸಿದ ಈ ಯುವ ವಿಧವೆ ರೂತ್ (ಬಡವಳು ಅವಳು) ಬೇರೆಯವರ ಹೊಲದಲ್ಲಿ ಬಿದ್ದ ತೆನೆಗಳನ್ನು ಹೆಕ್ಕಿಕೊಳ್ಳುವ ಪ್ರಸಂಗ ಕೀಟ್ಸ್ನ ಕವಿತೆಯಲ್ಲಿ ಮನಮೋಹಕವಾಗಿ ಬಂದಿದೆ. ನೈಟಿಂಗೇಲಿನ ಕೂಗು ಅವಳ ಹೃದಯದಲ್ಲಿ ಹೊಕ್ಕು ಹಾಯುತ್ತದೆ, ನೈಟಿಂಗೇಲಿನ ಹಾಡಿನಿಂದ ಅವಳಿಗೆ ತನ್ನ ಹುಟ್ಟೂರಿನ ಹಂಬಲ ತೀವ್ರವಾಗುತ್ತದೆ ಎಂದು ಕೀಟ್ಸ್ ಕಲ್ಪಿಸುತ್ತಾನೆ.

ಈ ಸಾಲುಗಳನ್ನು ಓದುತ್ತ ನನಗೆ ನಮ್ಮ ಊರಿನಲ್ಲಿ ಹಿಂದೆ ಇದ್ದ ಒಂದು ಸಂಪ್ರದಾಯದ ನೆನಪಾಗುತ್ತದೆ: ಭತ್ತದ ಕೊಯ್ಲು ಆದ ನಂತರ ಗದ್ದೆಯಲ್ಲಿ ಬಿದ್ದಿರಬಹುದಾದ ಕಾಳು ಕದಿರುಗಳನ್ನು ಯಾರು ಬೇಕಾದರೂ ಹೆಕ್ಕಿಕೊಂಡು ಹೋಗಬಹುದಾಗಿತ್ತು! ಇದೇ ಸಂಪ್ರದಾಯ ಒಂದು ಕಾನೂನಿನಂತೆ ಪುರಾತನ ಇಸ್ರೇಲಿನಲ್ಲೂ ಇತ್ತು ಎನ್ನುವುದು ನನಗೆ ಲೋಕವನ್ನು ಇನ್ನಷ್ಟು ಹತ್ತಿರ ತರುತ್ತದೆ. ಷರೀಫ್, ವಡ್ರ್ಸ್ ವರ್ತ್, ಕೀಟ್ಸ್ ಎಲ್ಲರ ಕವಿತೆಗಳಲ್ಲೂ ಬರುವ ಇಲ್ಲದುದರ ಹಂಬಲ ಕೂಡ ಸಾರ್ವತ್ರಿಕವಾದುದು. ದೂರವಿರುವ ತಮ್ಮ ಊರನ್ನು ಮತ್ತು ಇಷ್ಟದ ಜನರನ್ನು ನೆನೆನೆನೆದು ಕೊರಗುವ ವ್ಯಸನಕ್ಕೆ ಹವ್ಯಕ ಭಾಷೆಯಲ್ಲಿ `ಅಸಕ್ಕ’ ಎನ್ನುತ್ತಾರೆ. ಮದುವೆಯಾಗಿ ಗಂಡನ ಮನೆಗೆ ಹೋಗಿ ಜೀವಿಸುವ ಯುವತಿಯರಿಗೆ ತವರಿನ ಕುರಿತು `ಅಸಕ್ಕ ಆವುತ್ತು’ (ಹಂಬಲವಾಗುತ್ತದೆ). `ಆಷಾಢ ಮಾಸ ಬಂತಮ್ಮಾ, ಕರೆಯಾಕೆ ಅಣ್ಣ ಬಂದಿಲ್ಲ’ ಎಂಬಂಥ ಜನಪದ ಹಾಡುಗಳು ಈಗಲೂ ಎಷ್ಟೊಂದು ಮನ ಕಲಕುತ್ತವೆ!

ಬೇಂದ್ರೆಯವರ “ಹಕ್ಕಿ ಹಾರುತಿದೆ ನೋಡಿದಿರಾ” ಎಂಬ ಪದ್ಯವೂ ಈ ಸಂದರ್ಭದಲ್ಲಿ ನನಗೆ ನೆನಪಾಗುತ್ತದೆ. ಆದರೆ ಈ ಹಕ್ಕಿ ಮಾತ್ರ ಬ್ರಹ್ಮಾಂಡದ ಹಕ್ಕಿಯಾಗಿದ್ದು ನಮ್ಮ ಬಡ ಬೆರ್ಚಪ್ಪನ ಅಳವಿಗೆ ನಿಲುಕುವಂಥದಲ್ಲ. ಬೆರ್ಚಪ್ಪ ಅಧ್ಯಾತ್ಮ ಜೀವಿಯಲ್ಲ—ಆತ ಕೇವಲ ಒಬ್ಬ `ಹುಲುಮಾನವ’—ಅಕ್ಷರಶಃ! ಮಾನವನೂ ಅಲ್ಲ, ನಮ್ಮದೇ ಇಮೇಜಿನಲ್ಲಿ ನಾವು ಕಲ್ಪಿಸಿದ ಒಂದು ಗೊಂಬೆ.

ಈ ಯಾವ ಪದ್ಯದಲ್ಲೂ ಬೆರ್ಚಪ್ಪನ ಉಲ್ಲೇಖವಿಲ್ಲ. ಆದರೇನಾಯಿತು? ಅದು ನನ್ನ ಮನಸ್ಸಿನಲ್ಲಿದೆ. ಹಾಗೇನೇ ನಾನು ಚಿಕ್ಕಂದಿನಲ್ಲಿ ಕಂಡ ಭತ್ತದ ಗದ್ದೆಗಳು, ಬೆಟ್ಟು ಗದ್ದೆಗಳಲ್ಲಿ ನಾವು ಬೆಳೆಯುತ್ತಿದ್ದ ತರಕಾರಿ ಬೆಳೆಗಳು, ಅದಕ್ಕೆ ಏತದಿಂದ ನೀರು ಎತ್ತಿ ಎರೆಯುತ್ತಿದ್ದುದು ಎಲ್ಲವೂ. ಇದು ಬೆರ್ಚಪ್ಪ ಪ್ರಪಂಚ. ನಾವೆಲ್ಲರೂ ನಮ್ಮ ನಮ್ಮ ಅನುಭವಗಳಿಗೆ ಹೊಂದಿಸಿಕೊಂಡು ಓದುತ್ತೇವೆ, ಅರ್ಥಮಾಡಿಕೊಳ್ಳುತ್ತೇವೆ. ಆದ್ದರಿಂದ ಪ್ರತಿಯೊಬ್ಬನ ಓದು ಕೂಡ ಭಿನ್ನವಾಗಿರುತ್ತದೆ—ಒಬ್ಬೊಬ್ಬನ ಬೆರಳ ಗುರುತಿನಂತೆ. ಇಲ್ಲಿ ಉಲ್ಲೇಖಿಸಿದ ಪದ್ಯಗಳನ್ನು ನಾನು ಓದಿದಂತೆ ಇನ್ನೊಬ್ಬರು ಓದಬೇಕೆಂದಿಲ್ಲ, ಬಹುಶಃ ಅದು ಸಾಧ್ಯವೂ ಇಲ್ಲ. ಆದರೆ ಹಾಗೆಂದು ನಮ್ಮ ಓದಿಗೂ ಇತರರ ಓದಿಗೂ ಸಮಾನತೆ ಇಲ್ಲವೆಂದೂ ಹೇಳಲಾಗದು. ಅದಲ್ಲವಾದರೆ, ನಾವು ಹೇಳುವುದು ಇನ್ನೊಬ್ಬರಿಗೆ ಅರ್ಥವೇ ಆಗದು. ಆದರೂ ನಮಗೆ ಪರಸ್ಪರ ಅರ್ಥವಾಗುತ್ತದೆ: ಕೆಲವೊಮ್ಮ ವಡ್ರ್ಸ್ ವರ್ತ್ ಒಂಟಿ ಕೊಯ್ಲುಗಾರ್ತಿಯ ಹಾಡಿನ ಧ್ವನಿಯಿಂದ ಅದನ್ನು ಅರ್ಥಮಾಡಿಕೊಂಡಂತೆ, ಭಾವನಾತ್ಮಕವಾಗಿ ಅರಿತುಕೊಳ್ಳುತ್ತೇವೆ. ಅರ್ಥವಾಗುವಿಕೆಯಲ್ಲಿ ಹಲವಾರು ಮಟ್ಟಗಳು, ಪ್ರಮಾಣಗಳು ಇವೆಯಲ್ಲವೇ? ಅರ್ಥ ಒಂದು ಚಲನಶೀಲ (ಡೈನಮಿಕ್) ಕ್ರಿಯೆ-ಪರಿಪೂರ್ಣ ಸ್ಥಿತಿಯಲ್ಲ. ಕೆಲವೊಮ್ಮೆ ಯಾವುದೋ ಭಾವ ಸ್ಫುರಿಸಿದರೆ ಅದೇ ಹಾಡಿನ ಅರ್ಥ.

ಈ ಬೆರ್ಚಪ್ಪ ಎಷ್ಟೊಂದು ಒಂಟಿ ಎನಿಸುತ್ತದೆ ನನಗೆ. ಹೊಲದ ಮಧ್ಯೆ ನಿಂತಿರುತ್ತದೆ. ಯಾರೂ ಅದನ್ನು ಮಾತಾಡಿಸುವುದಿಲ್ಲ— ಕಾಣುತ್ತಾರೆ, ನೋಡುವುದಿಲ್ಲ. ಬೆರ್ಚಪ್ಪನನ್ನು ನೋಡಿ ಎಷ್ಟು ಚೆನ್ನಾಗಿದೆ ಇದು ಎಂದು ಯಾರಾದರೂ ಎನ್ನುವುದನ್ನು ನೀವು ಕೇಳಿದ್ದೀರಾ? ಅದರ ಏಕಾಂತ ಅದಕ್ಕೇ ಗೊತ್ತು, ಎಂದರೆ ಅದರಲ್ಲಿ ತಮ್ಮನ್ನು ತಾವು ಕಾಣಬಲ್ಲವರಿಗೆ. ಆದರೆ ಬೆರ್ಚಪ್ಪನ ಅಪ್ಪನಂಥ ಆಕೃತಿಯೊಂದು ನಮ್ಮ ಊರಿನಲ್ಲಿದೆ, ಕೆಲವು ದೇವಸ್ಥಾನಗಳಲ್ಲಿ. ಬೇತಾಳ ಎಂದು ಅದರ ಹೆಸರು. ದೈತ್ಯಾಕಾರದ ಈ ಆಕೃತಿ ದಷ್ಟಪುಷ್ಟವಾಗಿದ್ದು ಕಣ್ಣು ಮೋರೆಗೆ ಬಣ್ಣ ಬಳಿದ ಮರದ ತಲೆಯನ್ನು ಹೊಂದಿರುತ್ತದೆ. ದೇವಸ್ಥಾನದ ಮೂಲೆಯಲ್ಲಿ ಅಥವಾ ಹೊರ ಕೊಟ್ಟಿಗೆಯಲ್ಲಿ ನೀವದನ್ನು ಕಾಣಬಹುದು. ವರ್ಷಕ್ಕೊಮ್ಮೆ ಉತ್ಸವದ ಸಂದರ್ಭದಲ್ಲಿ ಅದು ತನ್ನ ಸ್ಥಾನದಿಂದೆದ್ದು ಉತ್ಸವ ಮೂರ್ತಿಯ ಮುಂದೆ ಪ್ರಾಂಗಣದಲ್ಲಿ ಕೊನೆಯ ಮೂರು ನಾಲ್ಕು ಸುತ್ತು ವಿಚಿತ್ರವಾಗಿ ಕುಣಿಯುತ್ತದೆ. ಎಂದರೆ ಅದರೊಳಗೊಬ್ಬ ಹೊಕ್ಕು ಕುಣಿಸುತ್ತಾನೆ, ಕುಣಿಯುತ್ತಾನೆ. ಇಂಥ ಬೇತಾಳ ಕುಣಿಯುತ್ತಿದ್ದರೆ ಅದರ ಧಾಂಡಿಗ ತೋಳುಗಳು ಓ ಅಷ್ಟು ದೂರಕ್ಕೆ ಬೀಸುತ್ತಿರುತ್ತದೆ. ಜನ ಚದರುತ್ತಾರೆ, ಮಕ್ಕಳು ಬೆರಗಾಗುತ್ತಾರೆ. ಬೇತಾಳ ಕುಣಿಯುವಾಗ ದೇವರ ಉತ್ಸವ ಮೂರ್ತಿಯನ್ನು ಯಾರೂ ನೋಡುವುದಿಲ್ಲ, ಬೇತಾಳವನ್ನೇ ನೋಡುತ್ತಿರುತ್ತಾರೆ. ನಂತರ ಅದು ಯಥಾಸ್ಥಾನವನ್ನು ಸೇರಿಕೊಳ್ಳುತ್ತದೆ; ಮುಂದಿನ ವರ್ಷದ ತನಕ ಅದಕ್ಕೆ ಕೆಲಸವಿಲ್ಲ. ಅದೂ ಮೌನಿ.

ಗಾಳಿಗೆ ಅಲೆಅಲೆಯಾಗಿ ಅಲ್ಲಾಡುವ ಮುಳಿಹುಲ್ಲು

The prairie-grass dividing—its special odor breathing,
I demand of it the spiritual corresponding,
Demand the most copious and close companionship of men,
Demand the blades to rise of words, acts, beings,
Those of the open atmosphere, coarse, sunlit, fresh, nutritious,
Those that go their own gait, erect, stepping with freedom and command—leading, not following,
Those with a never-quell’d audacity—those with sweet and lusty flesh, clear of taint,
Those that look carelessly in the faces of Presidents and Governors, as to say, Who are you?
Those of earth-born passion, simple, never-constrain’d, never obedient,
Those of inland America.

-Walt Whitman, “The Prairie-Grass Dividing”

ಒಮ್ಮೆ ನಾನು ಇಂಗ್ಲೆಂಡಿನಲ್ಲಿ ಹಾಸ್ಟೆಲಿನಲ್ಲಿ ಊಟಕ್ಕೆ ಕುಳಿತಿದ್ದಾಗ ನನ್ನ ಪಕ್ಕದಲ್ಲಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಮಾತಾಡಿಸಿದೆ. ಏನು ಮಾಡುತ್ತಿರುವಿ ಎಂದು ವಿಚಾರಿಸಿದೆ. ರಿಸರ್ಚು ಎಂದಳು. ಯಾವುದರ ಬಗ್ಗೆ ಎಂದು ಕೇಳಿದೆ. ಹುಲ್ಲಿನ ಬಗ್ಗೆ ಎಂದಳು. ನನಗೆ ಸ್ವಲ್ಪ ನಗು ಬಂತು. ಯಾಕೆ ನಗುತ್ತೀ ಎಂದಳು ತುಸು ಆಶ್ಚರ್ಯದಿಂದ. ಇಂಟರೆಸ್ಟಿಂಗ್ ಎಂದೆ. ವಾಸ್ತವದಲ್ಲಿ ಹುಲ್ಲಿನ ಕುರಿತಾಗಿ ರಿಸರ್ಚ್ ಮಾಡುವ ಒಬ್ಬಾಕೆಯನ್ನು ನಾನು ಕಂಡುದು ಅದೇ ಮೊದಲ ಸಲವಾಗಿತ್ತು. ಇಷ್ಟೊಳ್ಳೆ ಹುಡುಗಿ ಹುಲ್ಲಿನ ಬದಲು ಹೂವಿನ ಕುರಿತು ರಿಸರ್ಚ್ ಮಾಡುತ್ತಿದ್ದರೆ ಚೆನ್ನಾಗಿತ್ತು ಎಂದು ನಾನು ಅಂದುಕೊಂಡೆನೇ?! ಹಾಗೇನಿಲ್ಲ. ಹುಲ್ಲಿನಂಥ ವಿಷಯದ ಬಗ್ಗೆ ರಿಸರ್ಚ್ ಮಾಡುವ ಒಬ್ಬಾಕೆಯ ಈ ಹಠಾತ್ತನೆ ಭೇಟಿಯ ವಿಸ್ಮಯಕ್ಕೆ ನಾನು ಒಳಗಾಗಿದ್ದೆ. ಎಂದರೆ ಪಕ್ಕದಲ್ಲಿ ಕೂತವಳು, ತಾನು ಮಂಗಳ ಗ್ರಹದಿಂದ ಬಂದವಳು ಎಂದು ಹೇಳಿದ್ದರೂ ಬಹುಶಃ ನಾನು ಅದೇ ತರ ಆಗ ಪ್ರತಿಕ್ರಿಯಿಸುತ್ತಿದ್ದೆ. ಅದು ನನ್ನ ಅರಿವಿನ ಕೊರತೆಯಲ್ಲದೆ ಬೇರೇನಲ್ಲ. ಈ ಲೋಕದಲ್ಲಿ ರಿಸರ್ಚ್ ಮಾಡುವುದಕ್ಕೆ ಎಷ್ಟೊಂದು ವಿಷಯಗಳಿವೆ ಎಂಬ ವಿಸ್ಮಯಕ್ಕೆ ನಾನು ಒಳಗಾಗಿದ್ದೆ. ಅವಳು ನನ್ನನ್ನು ತಪ್ಪು ತಿಳಿದುಕೊಂಡಳೋ ಗೊತ್ತಿಲ್ಲ. ಒಂದು ವೇಳೆ ಹಾಗೆ ತಿಳಿದುಕೊಂಡಿದ್ದರೆ ನಾನವಳನ್ನು ದೂರಲಾರೆ. ಯಾಕೆಂದರೆ ಹುಲ್ಲು ನಮ್ಮ ದೃಷ್ಟಿಯಲ್ಲಿ ತೀರಾ ‘ಕ್ಷುಲ್ಲಕ’ ವಸ್ತು-ನಾವು ದಿನವೂ ಕಾಣುವಂಥದು, ಕೆಲವೊಮ್ಮೆ ಮೆಟ್ಟಿ ನಡೆಯುವಂಥದು. ಆದರೆ ಅದೇ ನಮ್ಮ ಜೀವ ನಾಡಿಯೂ ಎನ್ನುವುದನ್ನು ಮರೆತುಬಿಡುತ್ತೇವೆ. ಹೀಗೆ ಮರೆತವರಲ್ಲಿ ಬಹುಶಃ ನಾನೂ ಒಬ್ಬ. ಆದ್ದರಿಂದ ಹುಲ್ಲು ಎಂದಾಗಲೆಲ್ಲ ನನಗೆ ಆ ಹುಡುಗಿ ನೆನಪಾಗುತ್ತಾಳೆ, ಹುಲ್ಲಿನ ಮಹತ್ವ ಮನಸ್ಸಿಗೆ ಬರುತ್ತದೆ.

ವಾಸ್ತವವೆಂದರೆ ಹಳ್ಳಿಗಳಲ್ಲಿ ಹುಟ್ಟಿ ಬೆಳೆದ ನನ್ನಂಥವರೆಗೆ ಹುಲ್ಲಿನ ಸಂಪರ್ಕ ಇದ್ದೇ ಇರುತ್ತದೆ. ಇದು ನಮ್ಮ ಪ್ರಾಕೃತ ಸ್ಮೃತಿಯಲ್ಲಿ ಸೇರಿರುವ ಕಾರಣ ನಮಗೆ ಹುಲ್ಲು ಮರೆತುಹೋಗುವ ಪ್ರಶ್ನೆಯೇ ಇಲ್ಲ. ನಾನು ಚಿಕ್ಕಂದಿನಲ್ಲಿ ಕಲಿತು ಈಗಲೂ ನೆನಪಿರುವ ಒಂದು ಪದ್ಯವೆಂದರೆ:

ದನ ದನ ನಮ್ಮ ದನ
ಕಾಳು ಕಡ್ಡಿ ತಿನ್ನುವ ದನ
ಹುಲ್ಲು ಮೇದು ಬರುವ ದನ
ಹಾಲು ಕೊಡುವ ನಮ್ಮ ದನ

ಯಾರಾದರೂ ಒಂದು ಕನ್ನಡದ ಪದ್ಯ ಹೇಳೆಂದರೆ ನಾನು ತಪ್ಪಿಲ್ಲದೆ ಹೇಳಬಹುದಾದ ಪದ್ಯವೆಂದರೆ ಇದೊಂದೇ. ಎಷ್ಟು ಸರಳವೂ ಸ್ಪಷ್ಟವೂ ಆದ ಪದ್ಯ! ಆದರೆ ಒಂದು ಇಡೀ ಜೀವನ ಪದ್ಧತಿಯನ್ನೇ ಒಳಗೊಂಡಂಥದು. ನಿಜ, ಹುಲ್ಲು ಮತ್ತು ದನಕ್ಕೆ ಅವಿನಾಭಾವ ಸಂಬಂಧ. ನನ್ನ ಚಿಕ್ಕಂದಿನಲ್ಲಿ ಅಮ್ಮ ತೋಟದಲ್ಲಿ ಕುಕ್ಕರಗಾಲಲ್ಲಿ ಕುಳಿತು ಕತ್ತಿಯಿಂದ ಹುಲ್ಲು ‘ಕೆರೆಸು’ವ ನೆನಪು ನನಗೆ ಬರುತ್ತಿದೆ. ಎಡಗೈಯಿಂದ ಹುಲ್ಲುಗಳನ್ನು ಮುಷ್ಟಿಯಲ್ಲಿ ಹಿಡಿದುಕೊಂಡು ಹೀಗೆ ಕೆರೆಸುವಾಗ ಕರ ಕರ ಸದ್ದಾಗುತ್ತಲೇ ಇರುತ್ತದೆ. ತೋಟದಲ್ಲಿ ನುಸಿ ಬಾಧೆ. ಅವುಗಳನ್ನೂ ಓಡಿಸಿಕೊಳ್ಳಬೇಕು, ಅವು ಕಚ್ಚಿದಲ್ಲಿ ಆಗಾಗ ತುರಿಸಿಕೊಳ್ಳಬೇಕು. ನಂತರ ನಾನೂ ಹುಲ್ಲು ಕೆರೆಸುವುದನ್ನು ಅಭ್ಯಾಸ ಮಾಡಿಕೊಂಡೆ. ಈ ಹುಲ್ಲನ್ನು ಕಟ್ಟಿಕೊಂಡು ನಾವು ಕೊಟ್ಟಿಗೆಗೆ ತರುತ್ತೇವೆ. ಎಲ್ಲಾ ದನಗಳಿಗೂ ಇಂಥ ಹಸಿ ಹುಲ್ಲನ್ನು ತಿನಿಸುವಷ್ಟು ಹುಲ್ಲು ತೋಟದಲ್ಲಿ ಸಿಗುವುದಿಲ್ಲ. ಗಬ್ಬ ಧರಿಸಿದ ಅಥವಾ ಹಾಲು ಕೊಡುವ ದನಗಳಿಗೆ ಮಾತ್ರ ಈ ಪ್ರತ್ಯೇಕ ಉಪಚಾರ. ದನಗಳಿಗೆ ಹಸಿ ಹುಲ್ಲೆಂದರೆ ಪ್ರಾಣ. ಕೊಟ್ಟಿಗೆ ದನಗಳನ್ನು ನಾವು ಬೆಳಿಗ್ಗೆ ಗುಡ್ಡಕ್ಕೆ ಬಿಡುತ್ತೇವೆ. ಅವು ಮೇದುಕೊಂಡು ಸಂಜೆಗೆ ಮರಳುತ್ತವೆ. ಬಾಯಾರಿಕೆಯಾದರೆ ಕೆಲವು ಮೊದಲೇ ಬರುತ್ತವೆ. ಆದರೆ ನಾವಿರುವ ಜಾಗದಲ್ಲಿ ಸಮಸ್ಯೆಯೊಂದು ಇತ್ತು: ನಮ್ಮ ಜಾಗದ ಹೊರಗೆಲ್ಲಾ ಆಗ ದಟ್ಟವಾದ ಅರಣ್ಯ—ವರ್ಷಾರಣ್ಯ ಅರ್ಥಾತ್ ರೈನ್ ಫಾರೆಸ್ಟ್. ನಾವಿದನ್ನು ‘ಫಾರೆಸ್ಟ್ ಕಾಡು’ ಎನ್ನುತ್ತಿದ್ದೆವು. ಎಂದರೆ ಸರಕಾರಕ್ಕೆ ಸೇರಿದ್ದು ಎನ್ನುವ ಅರ್ಥದಲ್ಲಿ. ನನಗೆ ‘ಬುದ್ಧಿ ಬರುತ್ತಿರುವಂತೆ’ ಈ ಕಾಡು ಮರಗಳನ್ನೆಲ್ಲಾ ಕಡಿದು ಸುಟ್ಟು ಆ ಜಾಗದಲ್ಲಿ ಗೇರು ಬೀಜದ ಬೆಳೆಯನ್ನು ಬೆಳೆಸಲಾಯಿತು. ಇದು ಸರಕಾರದ ವತಿಯಿಂದ ಆದ ಕೆಲಸ. ಕಾಡಿನ ಆಚೆ, ಗುಡ್ಡದ ಮೇಲೆ ಅಲ್ಪ ಸ್ವಲ್ಪ ಹುಲ್ಲು ಬೆಳೆಯುವ ಪ್ರಶಸ್ತವಾದ ಜಾಗ ಇದ್ದಿತಾದರೂ (ಇಂಥ ಸ್ಥಳಗಳೇ ‘ಅಡ್ಕ’ಗಳು; ಈ ಅಡ್ಕ ಎಂಬ ಉಪಾಧಿಯಿರುವ ಅನೇಕ ಗ್ರಾಮಗಳಿವೆ: ಬದಿಯಡ್ಕ, ಬಂದಡ್ಕ, ಸಾಮೆತ್ತಡ್ಕ, ಸಾರಡ್ಕ ಇತ್ಯಾದಿ; ನಮ್ಮ ಗ್ರಾಮದ ಹೆಸರು ಕಾರಡ್ಕ) ನಮ್ಮ ಜಾನುವಾರುಗಳು ಈ ಕಾಡಿನ ಮೂಲಕವೇ ಹೋಗಿ ಬರಬೇಕಷ್ಟೆ? ಈಗ ಈ ಫಾರೆಸ್ಟ್ ಕಾಡಿನ ಗಾರ್ಡುಗಳು, ರೇಂಜರುಗಳು, ಫಾರೆಸ್ಟರ್ ಗಳೇ ಮೊದಲಾದ ಅಧಿಕಾರಿಗಳು ದನಗಳ ಮೇಯುವ ಹಕ್ಕನ್ನು ತಡೆಯತೊಡಗಿದರು. ದನಗಳು ಈ ಸರಕಾರಿ ಕಾಡುಗಳನ್ನು ಪ್ರವೇಶಿಸುವುದು ಅಪರಾಧವಾಗಿತ್ತಂತೆ. ಅವುಗಳನ್ನು ಹಿಡಿದು ಅದಕ್ಕೆಂದೇ ಕಟ್ಟಿದ ದೊಡ್ಡಿಯಲ್ಲಿ ಕೂಡಿಹಾಕುತ್ತಿದ್ದರು. ನಾವು ಹೋಗಿ, ದಂಡ ತೆತ್ತು ಅವುಗಳನ್ನು ಬಿಡಿಸಿಕೊಂಡು ಬರಬೇಕಾಗಿತ್ತು. ಆದರೆ ಇದೇ ಗಾರ್ಡ್, ರೇಂಜರ್ ಇತ್ಯಾದಿಗಳಿಗೆ ಏನಾದರೂ ರುಶುವತ್ತು (ಒಂದೋ ಹಣದ ರೂಪದಲ್ಲಿ, ಇಲ್ಲವೇ ಬಾಳೆಕಾಯಿ, ತೆಂಗಿನಕಾಯಿ, ಹಲಸಿನಕಾಯಿ ಇತ್ಯಾದಿ ವಸ್ತು ರೂಪದಲ್ಲಿ) ತೆತ್ತರೆ ನಮ್ಮ ದನಗಳನ್ನು ತಕರಾರಿಲ್ಲದೆ ಬಿಟ್ಟುಬಿಡುತ್ತಿದ್ದರು.

ಹುಲ್ಲುಗಳಲ್ಲಿ ಎಷ್ಟು ಬಗೆ? ಯಾರಿಗೆ ಗೊತ್ತು? ನಾನಂತೂ ಹುಲ್ಲಿನ ವಿದ್ಯಾರ್ಥಿಯಲ್ಲ. ನನಗದರ ಕುರಿತು ಏನಾದರೂ ಗೊತ್ತಿದ್ದರೆ ಅದು ಹೆಚ್ಚಾಗಿ ಅನುಭವದ ಮೂಲಕ. ಅಮ್ಮನ ಜತೆಯೋ ಒಬ್ಬನೆಯೋ ತೋಟದಲ್ಲಿ ತಿರುಗಾಡುತ್ತ ಅನೇಕ ತರದ ಹಸಿರು ಹುಲ್ಲ ಹಾಸಿನ ಮೇಲೆ ನಡೆದ ಅನುಭವವಿದೆ. ತಂಪು ಸ್ಥಳದಲ್ಲಿ ಅವು ದಟ್ಟವಾಗಿ ಬೆಳೆಯುತ್ತವೆ. ಕೆಲವೊಂದು ಮುಳ್ಳು ಕೂಡಾ ಅಲ್ಲಲ್ಲಿ ಇರಬಹುದು. ಅವುಗಳಿಂದ ಚುಚ್ಚಿಸಿಕೊಳ್ಳಬೇಕಾಗುತ್ತದೆ. ಉಳಿದಂತೆ ಬರಿಗಾಲಲ್ಲಿ ನಡೆಯುವಾಗ (ಅಲ್ಲದೆ ಚಪ್ಪಲಿ ಗಿಪ್ಪಲಿ ಕಂಡವರಾರು?) ಮಖಮಲ್ಲಿನ ಸ್ಪರ್ಶದ ಅನುಭವವಾಗುತ್ತದೆ. ಮಖಮಲ್ಲಾದರೂ ಅನೇಕ ವರ್ಷಗಳ ನಂತರ ಕಂಡದ್ದು. ಹಸಿ ಹುಲ್ಲಿನ ವಾಸನೆ, ಅದರ ಮೆತ್ತನೆ ಸ್ಪರ್ಶ, ಪಚ್ಚೆ ಬಣ್ಣದ ನೋಟ ಇವೆಲ್ಲವೂ ಸಹಜವಾಗಿ ಬರುವ ಅನುಭವಗಳು. ದನಗಳಿಗೆ ನೀಡುವ ಈ ಹುಲ್ಲು ಹೆಚ್ಚು ಉದ್ದವಾಗಿ ಬೆಳೆಯುವುದಿಲ್ಲ. ಬೇಸಿಗೆಯಲ್ಲಿ ಒಣಗಿ ಮಣ್ಣಿಗೆ ಹಿಡಿದುಹೋಗುತ್ತದೆ. ಮುಂದಿನ ಮಳೆಯಲ್ಲಿ ಮತ್ತೆ ಬೆಳೆಯಲು ಕಾಯುತ್ತ. ಆದರೆ ಇಂಥ ಹುಲ್ಲಿಗೆ ಕೂಡ ಬೆಳೆಯಲು ಸಾಕಷ್ಟು ಬಿಸಿಲೂ ಬೇಕು. ಆದ್ದರಿಂದ ನಮ್ಮ ಅಡಿಕೆ ತೋಟದ ಉದ್ದಗಲಕ್ಕೂ ಇದು ಬೆಳೆಯುವುದಿಲ್ಲ; ಎಲ್ಲಿ ಸೂರ್ಯನ ಬೆಳಕು ಬೀಳುವುದೋ ಎಲ್ಲಿ ನೆಲ ಸ್ವಲ್ಪ ತೇವ ಇರುವುದೋ ಅಲ್ಲಿ ಮಾತ್ರ ಬೆಳೆಯುತ್ತದೆ. ಎಂದರೆ ಸೂರ್ಯನ ಶಾಖವನ್ನು ಇದು ಹೀರಿ ತನ್ನದಾಗಿಸಿಕೊಂಡು ದನಗಳಿಗೆ ಆಹಾರವಾಗುತ್ತದೆ; ದನ ನಮಗೆ ಹಾಲು ಕೊಡುತ್ತದೆ. ಇದು ಸ್ಕೂಲು ವಿಜ್ಞಾನ. ಅದೇ ರೀತಿ, ಹುಲ್ಲು ಚೆನ್ನಾಗಿ ಬೆಳೆಯುವುದು ಸಮಶೀತೋಷ್ಣ ಪ್ರದೇಶಗಳಲ್ಲಿ; ಮೊಂಗೋಲಿಯಾದಂಥ ಕಡೆ ಹುಲ್ಲು ಧಾರಾಳ ಬೆಳೆಯುತ್ತದಂತೆ. ಅಲ್ಲಿ ಆಹಾರ ಕೃಷಿ ಸಾಕಷ್ಟು ಇಲ್ಲ. ಆದರೆ ಈ ಹುಲ್ಲನ್ನು ಕುದುರೆಗಳು, ಜಾನುವಾರುಗಳು ತಿನ್ನುತ್ತವೆ; ಕುದುರೆ ಮಾಂಸವನ್ನು ಜನ ತಿನ್ನುತ್ತಾರೆ.

ಟಿಬೆಟಿನಂಥ ಅತಿ ಎತ್ತರದ ಪ್ರದೇಶದಲ್ಲಿ ಆಹಾರ ಕೃಷಿ ತೀರಾ ಕಡಿಮೆ. ಬೆಳೆಯುವ ಅಲ್ಪ ಸ್ವಲ್ಪ ಹುಲ್ಲನ್ನು ಯಾಕ್ ಎಂಬ, ಟಿಬೇಟಿಗೆಂದೇ ದೇವರು ನಿರ್ಮಿಸಿದ, ಮೃಗಗಳು ತಿನ್ನುತ್ತವೆ. ಟಿಬೆಟನರಿಗೆ ಹಾಲು ಹೈನ, ಕಂಬಳಿ, ಚರ್ಮ ಎಲ್ಲಕ್ಕೂ ಯಾಕ್ ಒಂದೇ ಸಂಪನ್ಮೂಲ. ಹೀಗೆ ನಾನು ಓದಿದ್ದೇನೆ. ಹೈಸ್ಕೂಲಿನ ಪಠ್ಯಗಳಲ್ಲಿ ಪ್ರಯರಿ, ಸವನ್ನಾ, ತುಂದ್ರಾ, ಸ್ಟೆಪಿ ಮುಂತಾದ ಪ್ರದೇಶಗಳ ಕುರಿತು ಓದಿ ನಾನು ಪುಳಕಿತನಾದ್ದು ಇದೆ. ಅವೆಲ್ಲವೂ ಬೇರೆ ಬೇರೆ ರೀತಿಯ ವಿಶಾಲವಾದ ಹುಲ್ಲುಗಾವಲುಗಳು.

ನಮ್ಮಲ್ಲಿ ನನ್ನ ಚಿಕ್ಕಂದಿನಲ್ಲಿ ಅಲ್ಲಲ್ಲಿ ಹುಲುಗಾವಲುಗಳೇನೋ ಇದ್ದುವು. ನಮ್ಮದು ಏರು ತಗ್ಗಿನ, ಕಣಿವೆ ಬೆಟ್ಟಗಳ ಭೌಗೋಳಿಕ ಪ್ರದೇಶವಾದ ಕಾರಣ ‘ಅಡ್ಕಗಳು’ (ಪ್ರಶಸ್ತ ಪ್ರದೇಶಗಳು) ಹೆಚ್ಚು ಹರವಾಗಿ ಇರುವುದು ಕಡಿಮೆ. ಆದ್ದರಿಂದ ಹುಲ್ಲುಗಾವಲುಗಳ ವಿಸ್ತಾರವೂ ಹೇಳಿಕೊಳ್ಳುವಷ್ಟು ಇಲ್ಲ. ಆದರೆ ಈ ಪ್ರಯರಿ ಮುಂತಾದುವು ಹಾಗಲ್ಲ ಎನ್ನುವುದು ನನ್ನ ಕಲ್ಪನೆಯಾಗಿತ್ತು. ಮುಂದೆ ನಾನು ಅಮೇರಿಕೆಗೆ ಹೋದಾಗ ಅಯೋವಾ ಪ್ರಾಂತದಲ್ಲಿ ಸುವಿಸ್ತಾರವಾದ ಪ್ರಯರಿಗಳನ್ನು ಕಣ್ಣಾರೆ ನೋಡಿದೆ. ಅದೇ ರೀತಿ ಕಣ್ಣಿಗೆ ಹಬ್ಬವೆನಿಸುವ ಹುಲ್ಲುಗಾವಲುಗಳನ್ನು ನಾನು ನೋಡಿದುದು ಇಂಗ್ಲೆಂಡಿನಲ್ಲಿ. ಅವು ಸಮುದ್ರದ ತೆರೆಗಳಂತೆ ದಿಗಂತದ ಕಡೆ ಚಾಚಿಕೊಂಡಿರುತ್ತವೆ. ಇದೇ ಹುಲ್ಲುಗಾವಲುಗಳಲ್ಲಿ ಬೆಳೆದ ಕುರಿಗಳ ಉಣ್ಣೆಗಳನ್ನು ಹಿಂದೆ ಇಂಗ್ಲೆಂಡು ಯರೋಪಿನ ದೇಶಗಳಿಗೆ, ಮುಖ್ಯವಾಗಿ ಫ್ರಾನ್ಸಿಗೆ, ಕಚ್ಚಾ ವಸ್ತುವಾಗಿ ಮಾರಿ ಹಣಗಳಿಸುತ್ತಿದ್ದುದು. ನಂತರ ಈ ಉಣ್ಣೆಯಿಂದ ಸಿದ್ಧ ಉಡುಪುಗಳನ್ನು ಮಾಡಿ ಮಾರುವುದು ಹೆಚ್ಚು ಲಾಭದಾಯಕ ಎನ್ನುವುದನ್ನು ಅದು ಕಂಡುಕೊಂಡಿತು. ಇಂಗ್ಲೆಂಡಿನ ‘ಕಾಟ್ಸ್ವೋಲ್ಡ್ಸ್’ ವೂಲ್ ಇಂದಿಗೂ ಪ್ರಸಿದ್ಧ. (ಕಾಟ್ಸ್ವೋಲ್ಡ್ಸ್’ ಇಂಗ್ಲೆಂಡಿನ ದಕ್ಷಿಣ ಮಧ್ಯ ಭಾಗದ ಗ್ರಾಮಾಂತರ ಪ್ರದೇಶ.)

ಹೌದು, ನನ್ನ ಚಿಕ್ಕಂದಿನಲ್ಲಿ ನಮ್ಮ ಕಡೆಯೂ ಸಾಕಷ್ಟು ಹುಲ್ಲುಗಾವಲುಗಳು ಇದ್ದುವು. ಇವು ಬಹುಶಃ ಸರಕಾರಿ ಪ್ರದೇಶಗಳಾಗಿದ್ದುವು ಎಂದು ಕಾಣುತ್ತದೆ. ಕ್ರಮೇಣ ಇಲ್ಲೆಲ್ಲ ದರಖಾಸ್ತುಗಳಾಗಿ ಜಮೀನು ಖಾಸಗಿಯವರ ಪಾಲಾಯಿತು. (ದರಖಾಸ್ತು ಎಂದರೆ ಕೋರಿಕೆ ಎಂದರ್ಥ; ಅರೆಬಿಕ್ ಪದ. ಭೂಮಿಯಿಲ್ಲದವರು, ಅಥವಾ ಇದ್ದೂ ಏನೇನೋ ಕಾರಣವೊಡ್ಡಿ ಹುಲ್ಲು, ಸೊಪ್ಪು ಬೆಳೆಯಲು ಜಾಗ ಬೇಕೆನ್ನುವ ಕೃಷಿಕರು, ಅವರಲ್ಲಿ ಕೆಲವರು ಭೂದಾಹಿಗಳು, ಸರಕಾರಕ್ಕೆ ಅರ್ಜಿ ಹಾಕಿ, ಅಧಿಕಾರಿಗಳನ್ನು ಪೂಸಿ ಮಾಡಿಕೊಂಡು ತಮ್ಮ ಹೆಸರಿಗೆ ಸರಕಾರಿ ಜಾಗ ಬರೆಸಿಕೊಳ್ಳುವುದಕ್ಕೆ ದರಖಾಸ್ತು ಮಾಡಿಸುವುದು ಎಂಬ ಹೆಸರಿತ್ತು.) ನೋಡನೋಡುತ್ತಲೇ ಅವರು ಒಬ್ಬೊಬ್ಬರೂ ತಂತಮ್ಮ ದರಖಾಸ್ತು ಜಾಗದ ಸುತ್ತ ದರೆಗಳನ್ನು, ಅಥವಾ ಉಂಡೆ ಕಲ್ಲಿನ ಎದೆಯೆತ್ತರದ ಗೋಡೆಗಳನ್ನು ನಿರ್ಮಿಸಿದರು. ದರೆಗಳ ಮೇಲೆ ದಡ್ಡೋಲಿ ಸಸಿಗಳನ್ನು ನಟ್ಟು ಯಾವ ದನಗಳೂ ಒಳಕ್ಕೆ ಬಾರದಂತೆ ಬಂದೋಬಸ್ತು ಮಾಡಿಕೊಂಡರು. ನಿಜಕ್ಕೂ ಜಾನುವಾರುಗಳಿದ್ದುದು ಕೆಳಗೆ ಬಯಲು ಕಣಿವೆಗಳಲ್ಲಿನ ಕೃಷಿಕರ ಬಳಿ. ಅವರು ತಮ್ಮ ಈ ಸಾಕು ಪ್ರಾಣಿಗಳನ್ನು ಮೇಯಲು ಗುಡ್ಡಗಳಿಗೆ ಬಿಡುವುದು ಕಾಲಾಂತರದಿಂದ ಬಂದ ರೂಢಿಯಾಗಿತ್ತು. ಆದರೆ ಗುಡ್ಡೆಗಳು ದರಖಾಸ್ತ್ ಎಂಬ ಬಾಲ್ಕನೈಶೇಸನಿಗೆ ಒಳಗಾದ್ದೇ ಈ ಪ್ರಾಣಿಗಳಿಗೆ ಮೇಯಲು ಜಾಗವಿಲ್ಲದಾಯಿತು. ಅರ್ಥಾತ್ ಹುಲ್ಲುಗಾವಲುಗಳು ಮಕ್ಕಳ ಪುಸ್ತಕದಲ್ಲಿ ಮಾತ್ರ ಉಳಿದುವು! ಆದರೆ ಇದೆಲ್ಲ ಮುಂದೆ ಉಂಟಾದ ಪರಿಣಾಮ. ನನ್ನ ಚಿಕ್ಕಂದಿನಲ್ಲಾದರೆ ನಮ್ಮ ಪ್ರದೇಶದ ಭೂದೃಶ್ಯ ಹೆಚ್ಚು ತೊರಸಾಗಿತ್ತು, ಎಂದರೆ ದನಗಳು ಮೇಯಬಹುದಾದ ಹುಲ್ಲುಗಾವಲುಗಳು ಇದ್ದುವು. ಯಾರ ಜಾಗ ಯಾರ ಹುಲ್ಲು ಎನ್ನವ ಪ್ರಶ್ನೆಯನ್ನೇ ಕೇಳದೆ ಎಮ್ಮೆ ಕೋಣ ದನ ಎತ್ತುಗಳು ಸುಖವಾಗಿ ಅಲ್ಲಿ ಮೇಯುತ್ತಿದ್ದುವು. ನಮ್ಮ ಕಾರಡ್ಕದ ‘ಫಾರೆಸ್ಟ್ ಕಾಡಿನ’ ಸಮಸ್ಯೆಯೊಂದನ್ನು ಬಿಟ್ಟರೆ, ಉಳಿದಂತೆ ಗುಡ್ಡಗಾಡುಗಳು ಸಾಕಷ್ಟು ಮುಕ್ತವಾಗಿದ್ದುವು.

ಸ್ಕೂಲು ಕಲಿಯಲೆಂದು ನಾನು ಮಾವನ ಮನೆಗೆ ಹೋದೆ. ಅಲ್ಲಿಯೂ ಗುಡ್ಡಗಳು. ಅಡ್ಕಗಳು ಸಾಕಷ್ಟು ಇದ್ದುವು. ಜಾನುವಾರುಗಳನ್ನು ಮೇಯಲು ಈ ಅಡ್ಕಗಳಿಗೆ ಕಳಿಸಲಾಗುತ್ತಿತ್ತು. ಶಾಲೆ ಮಕ್ಕಳು ಕೆಲವೊಮ್ಮೆ ಗೋಪಾಲಕರಾಗಿ ಕೆಲಸ ಮಾಡಬೇಕಾಗುತ್ತಿತ್ತು. ಎಂದರೆ, ಸಂಜೆ ಶಾಲೆಯಿಂದ ಬಂದ ಕೂಡಲೆ, ಅಥವಾ ರಜಾದಿನಗಳಲ್ಲಿ, ನಮ್ಮ ನಮ್ಮ ಮನೆಯ ಎಮ್ಮೆ ದನಗಳನ್ನು ನಾವು ಎಬ್ಬಿಸಿಕೊಂಡು ಹಟ್ಟಿಗೆ ತರಬೇಕಾಗಿತ್ತು. ಇದು ನಮಗೆ ಸಂತೋಷದ ಕೆಲಸವೇ ಸರಿ. ಯಾಕೆಂದರೆ ಗುಡ್ಡದ ಮೇಲಿನ ಹುಲುಸಾದ ಹುಲ್ಲಿನ ಗುಂಟ ಸಾಗುವಷ್ಟು (ಅ)ಲೌಕಿಕ ಸುಖ ಬಹುಶಃ ಇನ್ನೊಂದು ಇರಲಾರದು. ನಿಮಗೆ ಕಲ್ಪನಾಶಕ್ತಿಯಿದ್ದರೆ ಇದೇ ಲೌಕಿಕ ಸುಖ ಪಾರಮಾರ್ಥಿಕ ಆನಂದವೂ ಆಗಬಹುದು. ಮೇಲೆ ಕೊಟ್ಟ ವ್ಹಿಟ್ ಮನ್ ಪದ್ಯವೂ ಇದನ್ನೇ ಹೇಳುವುದು. ವ್ಹಿಟ್ ಮನ್ ಅಮೇರಿಕದ ಪ್ರಯರಿಗಳಲ್ಲಿ ಹುಲ್ಲಿನ ನಡುವೆ ದಾರಿಮಾಡಿಕೊಂಡು ನಡೆಯುವ ಐಂದ್ರಿಯ ಸುಖದ ಬಗ್ಗೆ ಹೇಳುತ್ತಾನೆ; ಅದನ್ನೇ ಪಾರಮಾರ್ಥಿಕವಾಗಿ ಮಾಡಿಕೊಳ್ಳಬೇಕು ಎನ್ನುತ್ತಾನೆ. ನಾನಿಲ್ಲಿ ಹೇಳುವ ನಮ್ಮ ಅಡ್ಕಗಳ ಹುಲ್ಲು ಮೊದಲು ಹೇಳಿದ ತೋಟದ ಹುಲ್ಲಿನಂಥದಲ್ಲ. ಅಡ್ಕದ ಹುಲ್ಲಿಗೆ ನಾವು ಮುಳಿ (ಅಥವಾ ಮುಳಿಹುಲ್ಲು) ಎನ್ನುತ್ತೇವೆ, ಅರ್ಥಾತ್ ಇದು ವ್ಹಿಟ್ ಮನ್ ನ ಪ್ರಯರಿ ಹುಲ್ಲಿಗೆ ಸರಿಯಾದುದು. ಆಗ ನನಗೆ ವ್ಹಿಟ್ ಮನ್ ಗಿಟ್ ಮನ್ ಯಾರೂ ಗೊತ್ತಿರಲಿಲ್ಲ. ಆದರೂ ಮುಳಿ ಹುಲ್ಲಿನ ನಡುವೆ ದಾರಿ ಮಾಡಿಕೊಂಡು, ಅದರ ಗಂಧವನ್ನು ಆಘ್ರಾಣಿಸಿದ, ಹಾಗೂ ಆ ಹುಲ್ಲಿನಲ್ಲಿ ಎದೆಮಟ್ಟ ಮಾಯವಾದ, ಕೆಲವೊಮ್ಮೆ ಅದರಲ್ಲಿ ಬಿದ್ದುಹೊರಳಿದ, ಇಳಿಜಾರಿನಲ್ಲಿ ಜಾರಿದ ನನ್ನದೇ ಈ ಚಿಕ್ಕಂದಿನ ಅನುಭವ ಇರುವುದರಿಂದಲೋ ಏನೋ ವ್ಹಿಟ್ ಮನ್ ಪದ್ಯ ನನಗೆ ತುಂಬಾ ಇಷ್ಟವಾಗುತ್ತದೆ.

ನಮ್ಮ ನಮ್ಮ ಜಾನುವಾರುಗಳನ್ನು ಹುಡುಕಿ ಹೊರಟ ಗೋಪಾಲಕರಾದ ನಮ್ಮ ಲಕ್ಷ್ಯ ಕೇವಲ ಜಾನುವಾರುಗಳ ಮೇಲೇ ಇರಲಿಲ್ಲ; ಮಕ್ಕಳಾದ ನಮಗೆ ಈ ಹುಲ್ಲಿನ ವೈಭೋಗವನ್ನು ಆನಂದಿಸುವುದೇ ಮುಖ್ಯ ಇರಾದೆಯಾಗಿತ್ತು. ಅದೂ ಅರಬ್ಬೀ ಸಮುದ್ರದಲ್ಲಿ ಸೂರ್ಯನು ನಿಜವಾಗಿ ಮುಳುಗುತ್ತಿದ್ದ ಕಾಲ! ಕವಿ ಹೇಳುವಂತೆ ಆ ಅಸ್ತಮಯ ಸಮಯದಲ್ಲಿ ಸೂರ್ಯನು ತೊಳತೊಳ ತೊಳಗುವನು. ಅದೊಂದು ದಿವ್ಯ ಪ್ರಭೆ ಅಲೆ ಅಲೆಯಾಗಿ ಈ ಮುಳಿಹುಲ್ಲ ಸಮುದ್ರದ ಮೇಲೂ ಹಾಯುವುದು. ಸಂಜೆಯ ಗಾಳಿಗೆ ಮುಳಿಹುಲ್ಲು ಕೂಡಾ ಅಲೆ ಅಲೆಯಾಗಿ ಅಲ್ಲಾಡುವುದು. ಇದನ್ನೆಲ್ಲ ನೋಡುತ್ತ ಮೈಮರೆಯುವವರಲ್ಲಿ ನಾನೂ ಒಬ್ಬ. ಇದೇ ಹುಲ್ಲು ಆರಂಭದಲ್ಲಿ ಅಚ್ಚ ಹಸಿರು ಬಣ್ಣದಲ್ಲಿದ್ದುದು ಬೆಳೆಯುತ್ತ ಎತ್ತರವಾಗುತ್ತ ಹಣ್ಣಾಗುವುದು, ಹೊಂಬಣ್ಣಕ್ಕೆ ತಿರುಗುವುದು. ಇದರ ಸೂಕ್ಷ್ಮ ಕುಸುಮವು ಹಲವು ಜನರಿಗೆ ಅಲರ್ಜಿಯನ್ನೂ ತರುವುದು: ಮುಳಿ ಹಣ್ಣಾಗುವ ಜ್ವರ ಎಂಬ ಹೆಸರಿನ ಒಂದು ಜ್ವರವೇ ಇದೆ!

ನಾವು ಹೆಚ್ಚಾಗಿ ಹೊರಳಲು ಇಷ್ಟಪಡುವುದು ನೆಯ್ ಮುಳಿ ಎಂಬ ಉತ್ತಮ ತಳಿಯ ಮುಳಿಯ ಮೇಲೆ; ಯಾಕೆಂದರೆ ಅದು ಹೆಸರೇ ಸೂಚಿಸುವಂತೆ ತುಂಬ ನಯವಾದುದು. ತುಂಬ ನಾಜೂಕು ಕೂಡ. ನೆಯ್ ಮುಳಿ ಹೆಚ್ಚು ಪ್ರದೇಶದಲ್ಲಿ ಬೆಳೆಯುವುದಿಲ್ಲ. ನಾನು ಉದ್ದೇಶಿಸುವ ಗುಡ್ಡದಲ್ಲಿ ಈ ನೆಯ್ ಮುಳಿಯ ಸುಂದರ ತೇಪೆಗಳು ಅಲ್ಲಲ್ಲಿ ಇದ್ದುವು. ಒಣ ಮುಳಿಯ ಮೇಲೆ ಹೀಗೆ ಹೊರಳಾಡಿದರೆ ನೆಯ್ ಮುಳಿಯಾಗಲಿ ಇತರ ಮುಳಿಗಳಾಗಲಿ ಬಾಗುತ್ತವೆ; ರಾತ್ರಿಯ ಇಬ್ಬನಿಗೂ ಅವು ತಲೆ ಬಾಗಿಸಬಹುದು. ನಸುಕಿನ ತನಕ ಅವು ಹಾಗೇ ಅವನತಶಿರಗಳಾಗಿ ಇರುತ್ತವೆ. ಆದರೆ ಏನಾಶ್ಚರ್ಯ! ಸೂರ್ಯ ಮೇಲೇರುವ ವೇಳೆಗೆ ಏನೂ ಆಗದವರಂತೆ ಎದ್ದು ನಿಂತುಕೊಳ್ಳುತ್ತವೆ. ಒಂದು ಗಾದೆಯಿದೆಯಲ್ಲ, ತಾಳಿದವನು ಬಾಳಿಯಾನು. ಮರವೊಂದು ಬಿರುಗಾಳಿಗೆ ಉರುಳಿ ಬೀಳಬಹುದು. ಆದರೆ ಹುಲ್ಲಿಗೆ ಏನೂ ಆಗುವುದಿಲ್ಲ. Lessed are the meek: for they shall inherit the earth. ಮ್ಯಾಥ್ಯೂ 5:5.

ಇನ್ನೊಂದು ವರ್ಗದ ಮುಳಿಯಿದೆ: ಅದು ಧಡಸಲು, ಎಂದರೆ ನೆಯ್ ಮುಳಿಯ ಗುಣಗಳಿಗೆ ವಿರುದ್ಧವಾದುದು. ಅದರ ದಂಟು ದಬ್ಬಣದಂತೆ ದಪ್ಪ, ಹಾಗೂ ದಳಗಳು ಕೂಡಾ ದೊರಗಾದುವು. ಬಹುಶಃ ದನಗಳು ಇಷ್ಟಪಡುವ ಜಾತಿಯದಲ್ಲ. ಈ ಹುಲ್ಲು ಕೂಡಾ ಬೆಳೆಯುವುದು ನೆಲ ದೊರಗಾದ ಜಾಗಗಳಲ್ಲೇ. ಇನ್ನು ಈ ಎರಡು ವರ್ಗಗಳ ನಡುವಣ ದರ್ಜೆಯ ಮುಳಿಯೊಂದು ಇದೆ: ಇದು ಬುದ್ಧನು ಹೇಳಿದ ಮಧ್ಯಮ ಮಾರ್ಗಿ. ಇದೇ ನಮ್ಮ ಕಡೆ ಧಾರಾಳವಾಗಿ ಬೆಳೆಯುವುದು, ಜಾನುವಾರುಗಳಿಗೆ ಆಧಾರ, ಮನುಷ್ಯರಿಗೂ ಮನೆ ಛಾವಣಿ ಹೊದೆಸುವುದಕ್ಕೆ ಅತ್ಯಗತ್ಯ. ಬೇಸಿಗೆಯಲ್ಲಿ ಈ ಮುಳಿಯನ್ನು ಶೇಖರಿಸಿ ಇಡುವ ಕಾರ್ಯಕ್ರಮ ಸುರುವಾಗುತ್ತದೆ. ಐದಾರು ಹಿಡಿಯಷ್ಟು ಮುಳಿ ಒಂದು ಸೂಡಿ. ಅದಕ್ಕೆ ಅದೇ ಮುಳಿಯ ಕಟ್ಟು. ಇಂಥ ಅರುವತ್ತು ಅಥವಾ ನೂರು ಸೂಡಿಗಳನ್ನು ಒಟ್ಟು ಸೇರಿಸಿ ಕಟ್ಟು ಹಾಕಿದರೆ ಅದು ಒಂದು ಕಟ್ಟು (‘ಕಟ್ಟ’) ಮುಳಿ. ಎಂದರೆ ಒಂದು ತಲೆಹೊರೆ.

ಇಂಥ ಕಟ್ಟುಗಳನ್ನು ಆಳುಗಳಿಂದ ತರಿಸುತ್ತಿದ್ದೆವು, ಹಾಗೂ ಮಾರುವವರಿಂದ ಕೊಳ್ಳುತ್ತಿದ್ದೆವು. ಅವುಗಳನ್ನು ಒಂದೋ ಕೊಟ್ಟಿಗೆಯ ಅಟ್ಟದಲ್ಲಿ ಶೇಖರಿಸಿಡುತ್ತಿದ್ದೆವು, ಇಲ್ಲವೇ ಅಂಗಳದಲ್ಲಿ ಮೆದೆಯಾಗಿ ಕೂಡಿಡುತ್ತಿದ್ದೆವು. ಇದು ಛಾವಣಿಗೂ ಆಯಿತು, ಜಾನುವಾರುಗಳಿಗೂ ಅಯಿತು, ಗುಡ್ಡದ ಮೇವು ಕಡಿಮೆಯಾದ ಮಳೆಗಾಲದಲ್ಲಿ. ಈ ಮಧ್ಯಮ ಮಾರ್ಗಿಗಳಲ್ಲೂ ಛಾವಣಿಗೆ ಹೆಚ್ಚು ಉತ್ತಮ ತರಗತಿಯದು, ಉಳಿದದ್ದು ಜಾನುವಾರುಗಳಿಗೆ.

ಜಾನುವಾರುಗಳು ಪ್ರೀತಿಸುವ ಇನ್ನೊಂದು ಹುಲ್ಲು ಬೈಹುಲ್ಲು: ಎಂದರೆ ಭತ್ತ ಕೊಯ್ದಾದ ನಂತರ ತೆನೆ ಬಡಿದು ಭತ್ತ ತೆಗೆದ ನಂತರ ಸಿಗುವ ಒಣಹುಲ್ಲು. ಇದಕ್ಕೆ ಲಘು ಹಳದಿ ಬಣ್ಣ. ಮುಳಿಹುಲ್ಲಿಗಿಂತ ಉದ್ದವೂ ಗಟ್ಟಿಯೂ ಆದ ಹುಲ್ಲು; ಬಹುಶಃ ಹೆಚ್ಚು ಪೌಷ್ಟಿಕ. ಇದನ್ನೂ ಸೂಡಿ ಮಾಡಿ ನಾವು ಶೇಖರಿಸಿ ಇಟ್ಟುಕೊಳ್ಳುತ್ತಿದ್ದೆವು—ಮನೆ ಹೊದೆಸುವುದಕ್ಕಲ್ಲ, ಜಾನುವಾರುಗಳಿಗೆ ತಿನಿಸುವುದಕ್ಕೆ. ಭತ್ತದ ಕೃಷಿ ಇರುವವರು ಇದನ್ನು ಕೊಳ್ಳುವ ಅಗತ್ಯವಿಲ್ಲ, ಯಾಕೆಂದರೆ ಇದು ಉಪ ಉತ್ಪತ್ತಿಯಾಗಿ ಸಿಗುವಂಥದು. ಆಶ್ಚರ್ಯದ ಮಾತೆಂದರೆ ಕೃಷಿಕರಿಗೆ ಯಾವುದೂ ನಿರುಪಯೋಗಿಯಾದ ಸಾಧನವಲ್ಲ! ಭತ್ತ, ಬಾಳೆ, ಕಂಗು, ತೆಂಗು ಎಲ್ಲದರ ಅವಯವವೂ ಪ್ರಯೋಜನಕಾರಿಯೇ. ಬೈಹುಲ್ಲನ್ನೂ ಒಂದೋ ಕೊಟ್ಟಿಗೆ ಅಟ್ಟದಲ್ಲಿ ಇಲ್ಲವೇ ಕೊಟ್ಟಿಗೆಯ ಕೋಣೆಯಲ್ಲಿ, ಅಥವಾ ಮೆದೆಯಾಗಿ ಒಟ್ಟೈಸಿ ಇಡುವುದು ಪದ್ಧತಿ. ಈ ಮೆದೆ ಒಂದು ಪುಟ್ಟ ಪಿರಮಿಡಿನಂತೆ ಅಂಗಳದ ಮೂಲೆಯಲ್ಲಿ ಶೋಭಿಸುವುದು. ಇದರೊಳಗೆ ಯಾವ ಫೇರೋ ಕೂಡ ಅಡಗಿರುವುದಿಲ್ಲ. ಮಳೆ ಬಿದ್ದ ಮೇಲೆ ಕೆಲವೊಮ್ಮೆ ಮೆದೆಯ ಪಕ್ಕಗಳಲ್ಲಿ ಅಣಬೆಗಳು ತಲೆಯೆತ್ತುತ್ತಿದ್ದುವು ಅಷ್ಟೆ. ಅಣಬೆಗಳ ಧೂಳಿನಂಥ ಸೂಕ್ಷ್ಮಾತಿಸೂಕ್ಷ್ಮ ಪುಡಿಗಳು ಬಹುಶಃ ಗಾಳಿಯಲ್ಲಿ ತೇಲಿ ಬಂದು ತೇವಕ್ಕಾಗಿ ಈ ಬೈಹುಲ್ಲಿ ಸಾಮೀಪ್ಯದಲ್ಲಿ ಕಾಯುತ್ತಿದ್ದುವು.

ನಾವು ಅಕ್ಕಿ ತೆಗೆಯುವ ಈ ಭತ್ತವೆನ್ನುವ ಸಸ್ಯ ಹುಲ್ಲಿನ ವರ್ಗಕ್ಕೆ ಸೇರಿದುದು. ಇದಲ್ಲದೆ ಗೋಧಿ, ಜೋಳ, ನವಣೆ, ರಾಗಿ ಮುಂತಾದ ಇತರ ಧಾನ್ಯಗಳೂ ಹುಲ್ಲಿನ ವರ್ಗದವೇ. ಮನುಷ್ಯರು ಹುಲ್ಲಿನಲ್ಲಿ ಬೆಳೆಯುವ ಧಾನ್ಯಗಳನ್ನು (ಬೀಜಗಳನ್ನು) ತಿಂದರೆ, ದನ, ಆಡು, ಕುರಿ, ಕುದುರೆ ಮುಂತಾದ ಪ್ರಾಣಿಗಳು ನೇರವಾಗಿ ಹುಲ್ಲನ್ನೇ ತಿಂದು ಬದುಕುತ್ತವೆ. ಈ ಪ್ರಾಣಿಗಳಿಂದ ವಿವಿಧ ಉಪಯೋಗ ಪಡೆಯುವ ಮನುಷ್ಯರು ಅವುಗಳ ಮಾಂಸವನ್ನೂ ತಿನ್ನಬಹುದು. ಇದು ಮನುಷ್ಯರಿಗೆ ಹುಲ್ಲಿನ ದ್ವಿತೀಯ ತರದ ಲಾಭ. ಫುಡ್ ಚೈನ್. ಎಂದ ಮೇಲೆ ಹುಲ್ಲಿನ ಪ್ರಾಮುಖ್ಯವನ್ನು ಒತ್ತಿ ಹೇಳಬೇಕಾದ ಅಗತ್ಯವಿಲ್ಲ.

ಚರಿತ್ರಪೂರ್ವದ ಒಂದು ಕಾಲದಲ್ಲಿ ಭತ್ತ, ಗೋಧಿ ಮುಂತಾದವು ಇನ್ನೂ ಗೃಹೀಕರಣಗೊಂಡಿರಲಿಲ್ಲ (domestication). ಅವುಗಳು ಕೇವಲ ಕಾಡು ಸಸ್ಯಗಳಾಗಿದ್ದುವು. ಅವುಗಳು ಯಾವುದೋ ಕಾಲದಲ್ಲಿ ತಳಿಸ್ಫೋಟಗೊಂಡು (mutation) ಅಹಾರಕ್ಕೆ ಯೋಗ್ಯವೆನಿಸಿದುವು. ಆಗಲೇ ಅವು ಗೃಹೀಕರಣಗೊಂಡುದು. ಇದೆಲ್ಲ ಎಲ್ಲಿ ಯಾವ ಕಾಲದಲ್ಲಿ ನಡೆದುವು, ಎಲ್ಲಿಂದ ಎಲ್ಲಿಗೆ ಹರಡಿದುವು ಎನ್ನುವುದು ಅತ್ಯಂತ ಕುತೂಹಲಕಾರಿ ವಿಷಯ. ಒಂದು ಕಾಲದಲ್ಲಿ ಗೋಧಿಗೆ ತುಂಬಾ ಮೀಸೆಯಿತ್ತಂತೆ—ಧಾನ್ಯವು ಗಾಳಿಗೆ ಹಾರಿಹೋಗಿ ಬೇರೆಡೆ ಪ್ರಸರಣಗೊಳ್ಳಲು ಅನುಕೂಲವಾಗಲಿ ಎಂದು. ಆಗ ಗೋಧಿ ವನ್ಯ ಸಸ್ಯವಾಗಿತ್ತು. ಆ ನಂತರ ಮೀಸೆ ಕಡಿಮೆಯಿರುವ ತಳಿಯೊಂದು ಮೂಡಿಬಂದಿರಬೇಕು; ಅದನ್ನೇ ಮನುಷ್ಯರು ಸಾಕು ಸಸ್ಯವಾಗಿ ಬೆಳೆಸಿದರು. ಯಾಕೆಂದರೆ ಅದೇ ಹೆಚ್ಚು ಅನುಕೂಲಕರವಾಗಿತ್ತು. ಆದ್ದರಿಂದ ನಮಗೀಗ ಪರಿಚಯ ಇರುವ ಗೋಧಿಗೆ ಮೀಸೆ ಕಡಿಮೆ. ಇಂದು ನನಗೆ ಆ ಇಂಗ್ಲಿಷ್ ಹುಡುಗಿ ಕಾಣಸಿಕ್ಕಿದ್ದರೆ ಅವಳ ಜತೆ ಮಾತಾಡಲು ಬಹಳಷ್ಟು ವಿಷಯಗಳಿರುತ್ತಿದ್ದುವು. ನಾವು ತಿಳದುಕೊಂಡಷ್ಟೂ ನಮ್ಮಲ್ಲಿ ಮತ್ತಷ್ಟು ಪ್ರಶ್ನೆಗಳು ಹುಟ್ಟುತ್ತವೆ. ಏನೂ ತಿಳಿಯದವನಿಗೆ ಪ್ರಶ್ನೆಗಳೇ ಇರುವುದಿಲ್ಲ.

ಒಂದು ಲೆಕ್ಕದ ಪ್ರಕಾರ ಈಚಿನ ತನಕ ಇಂಗ್ಲೆಂಡ್ ದೇಶದ ಮಣ್ಣಿನ ಶೇಕಡಾ 35 ಭಾಗವನ್ನು ಹುಲ್ಲು ಹೊದೆದಿತ್ತು; ಆದರೆ ವರ್ಷ ವರ್ಷವೂ ಈ ಅನುಪಾತದ ಪ್ರಮಾಣ ಕಡಿಮೆಯಾಗುತ್ತ ಇದೆ. ಇದೊಂದು ಆತಂಕದ ವಿಷಯ. ಕೇವಲ ಇಂಗ್ಲಿಷ್ ಜನರಿಗೇ ಅಲ್ಲ; ಲೋಕದ ಯಾವುದೇ ದೇಶದ ನಿಸರ್ಗ ಸಂಪತ್ತು ಕಡಿಮೆಯಾದರೂ ಅದು ಎಲ್ಲರನ್ನೂ ಬಾಧಿಸುವಂಥದು. ಇನ್ನು ಭಾರತದ ಮಣ್ಣಿನಲ್ಲಿ ಎಷ್ಟು ಭಾಗವನ್ನು ಹುಲ್ಲು ಹೊದೆದಿದೆ ಎಂದು ಗೊತ್ತಿಲ್ಲ. ಏನಿದ್ದರೂ ಸಾಮಾನ್ಯ ಜ್ಞಾನದ ಆಧಾರದ ಮೇಲೆ ಹೇಳುವುದಾದರೆ, ಹುಲ್ಲಿನ ಹೊದಿಕೆ ತೀವ್ರತರದಲ್ಲಿ ಕಡಿಮೆಯಾಗುತ್ತಿದೆ. ಮಣ್ಣನ್ನೇ ಕೊರೆಯುತ್ತ ಇದ್ದರೆ ಇನ್ನು ಹುಲ್ಲು ಬೆಳೆಯುವುದಾದರೂ ಎಲ್ಲಿ? ಹುಲ್ಲುಮಣ್ಣು ನಾಶವಾಗಿ ಸ್ಥಳಗಳು ಮರುಭೂಮಿಗಳಾದ ಉದಾಹರಣೆಗಳು ಭೂಗೋಲದ ಇತಿಹಾಸದಲ್ಲಿ ಸಾಕಷ್ಟು ಇವೆ. ಕೆಲವು ನೈಸರ್ಗಿಕವಾಗಿ ಹಾಗಾದರೆ, ಇನ್ನು ಕೆಲವು ಮಾನವ ಹಸ್ತಕ್ಷೇಪದಿಂದ ಹಾಗಾಗಿವೆ.

ಕೃಷಿಕರಿಗೆ ಮಾತ್ರವಲ್ಲ, ಕವಿಗಳಿಗೂ ಹುಲ್ಲುಗಳೆಂದರೆ ಇಷ್ಟ. ಚಿಕ್ಕ ಮಕ್ಕಳಿಗೂ ಹಾಗೆಯೇ. ಮುಂಜಾವದ ವೇಳೆ ಹುಲ್ಲಿನ ದಳಗಳ ಮೇಲೆ ಇಬ್ಬನಿ ಹನಿಗಳು ಸ್ಫಟಿಕದ ಮಣಿಗಳಂತೆ ಸೂರ್ಯನ ಬೆಳಕಿಗೆ ಹೊಳೆಯುವುದನ್ನು ನೋಡಲು ತುಂಬಾ ಖುಷಿ. ಕವಿಗಳು ವಿಚಿತ್ರ ಜೀವಿಗಳು. ಅವರು ಲೋಕದ ವಸ್ತುಗಳನ್ನು ಆಯಾ ವಸ್ತುಗಳಾಗಿಯೂ ಜತೆಗೇ ರೂಪಕಗಳಾಗಿಯೂ ಕಾಣುತ್ತಾರೆ. ಅಂತೆಯೇ ಅವರಿಗೆ ಹುಲ್ಲು, ಹುಲ್ಲೂ ಹೌದು, ರೂಪಕವೂ ಹೌದು. ವ್ಹಿಟ್ ಮನ್ ನ ಪ್ರಯರಿ ಪದ್ಯ ನೋಡಿ: ಈ ಪದ್ಯದಲ್ಲಿ (ಇದು ಅವನ 1855ರ Leaves of Grass ‘ಹುಲ್ಲಿನ ದಳಗಳು’ ಎಂಬ ಕವನಸಂಕಲನದಿಂದ ಎತ್ತಿಕೊಂಡದ್ದು), ಪ್ರಯರಿ ಹುಲ್ಲುಗಳು ವಾಸ್ತವವೇ: ಉದಾಹರಣೆಗೆ, ಅವುಗಳ ಮಧ್ಯೆ ದಾರಿ ಬಿಡಿಸುವಾಗಿನ ಗಂಧ; ಅವು ರೂಪಕಗಳೂ ಹೌದು: ಈ ಹುಲ್ಲುಗಳು ಪ್ರಸಿಡೆಂಟರನ್ನು, ಗವರ್ನರುಗಳನ್ನು ಲಕ್ಷ್ಯವಿಲ್ಲದೆ ಕೇಳುತ್ತವೆ: Who are you? ಎಷ್ಟೊಂದು ಅರ್ಥಗರ್ಭಿತವಾದ ಮಾತು! ಮಹಾ ಪ್ರಜಾಪ್ರಭುತ್ವವಾದಿ ವ್ಹಿಟ್ ಮನ್! ಇನ್ನೇನಿಲ್ಲದಿದ್ದರೂ ಹೀಗೆ ಕೇಳುವುದಕ್ಕಾದರೂ ಹುಲ್ಲುಗಳು ಇರಬೇಕು ಎನಿಸುತ್ತದೆ ಇದನ್ನೋದಿದರೆ.

I demand of it spiritual corresponding ಎನ್ನುತ್ತಾನೆ ವ್ಹಿಟ್ ಮನ್, ಈ ಪ್ರಯರಿ ದಾರಿಯ ಕುರಿತು. ಹುಲ್ಲಿನ ಜತೆ ಇಂಥ ಅತೀತವನ್ನು ಸಾಧಿಸಿದ ಇನ್ನೊಬ್ಬ ಕವಿ ವರ್ಡ್ಸ್ ವರ್ತ್. Intimations of ಕವಿತೆಯ ಹತ್ತನೇ ಭಾಗದಲ್ಲಿ ಅವನು ಹೀಗನ್ನುತ್ತಾನೆ:

What though the radiance which was once so bright
Be now for ever taken from my sight,
Though nothing can bring back the hour
Of splendour in the grass, of glory in the flower;
We will grieve not, rather find
Strength in what remains behind;
In the primal sympathy
Which having been must ever be;
In the soothing thoughts that spring
Out of human suffering;
In the faith that looks through death,
In years that bring the philosophic mind.
‘the hour/ Of splendour in the grass’! ಹುಲ್ಲಿನ ಮೇಲಣ, ಹೂವಿನ ಮೇಲಣ ದಿವ್ಯ ಗಳಿಗೆ!—ಕವಿ ಅನ್ನುವುದು ಬಾಲ್ಯದ ಜತೆ ಕಳೆದುಹೋಗುವ ದಿವ್ಯ ಕ್ಷಣಗಳ ಬಗ್ಗೆ–ಅದೀಗ ಕಳೆದು ಹೋದರೇನಾಯಿತು? ಆದಿಮ ಅನುಕಂಪವಿಲ್ಲವೇ, ಒಮ್ಮೆ ಇದ್ದುದು ಎಂದಿಗೂ ಇರುತ್ತದೆ ಎನ್ನುತ್ತಾನೆ ಕವಿ.

ಇರುತ್ತದೆಯೇ? ಭಾವಿಸಿದರೆ ಇರುತ್ತದೆ, ಇಲ್ಲದಿದ್ದರೆ ಇಲ್ಲ.

ತರ ತರದ ತರಕಾರಿ

ತರಕಾರಿ, ನೆಟ್ಟಿಕಾಯಿ (ಹವ್ಯಕ), ಕಾಯಿಪಲ್ಲೆ (ಉ. ಕನ್ನಡ), ಕಾಯಿ ಕಜಿಪ್ಪು(ತುಳು), ಪಚ್ಚಕ್ಕರಿ (ಮಲಯಾಳ), ಹಸಿರುವಾಣಿ. ಆಹಾ, ಅವುಗಳದೇ ಒಂದು ಅದ್ಭುತಲೋಕ! ಆ ಲೋಕದ ನನ್ನ ಸ್ಮೃತಿ ಚಿತ್ರಗಳ ಬಗ್ಗೆ ಬರೆಯುತ್ತಿದ್ದೇನೆ. ವಿಸ್ಮೃತಿಯನ್ನು ಸ್ಮೃತಿಗೆ ತರುವ ಪ್ರಯತ್ನದ ಒಂದು ಭಾಗ. ನನ್ನ ಬಾಲ್ಯಕಾಲದ ಒಂದು ಪ್ರಧಾನ ಭಾಗವೂ ಹೌದು.

ಅದು ಹೇಗೆ ನನಗೆ ಈ ‘ನೆಟ್ಟಿಕಾಯಿ’ ಬೆಳೆಯುವ ಹುಚ್ಚು ಹಿಡಿಯಿತೋ. ನಮ್ಮ ಪ್ರದೇಶದಲ್ಲಿ ಮಕ್ಕಳಾದಿಯಾಗಿ ಎಲ್ಲರೂ ತಂತಮ್ಮ ಮನೆಜಾಗದಲ್ಲಿ ಮಾಡುತ್ತಿದ್ದ ಕೆಲಸ ಈ ತರಕಾರಿ ಕೃಷಿ ಎಂದರೆ. ಅಂದು ಅದೊಂದು ಮರುಳಾಗಿ ಕಾಣಿಸಿಯೇ ಇರಲಿಲ್ಲ. ಚಿಕ್ಕಂದಿನಲ್ಲಿ ನನಗೆ ಅಕ್ಕ ಪಕ್ಕದಲ್ಲಿ ಗೆಳೆಯರು ಇರಲಿಲ್ಲ. ಆದ್ದರಿಂದ, ಸ್ವಲ್ಪ ತಡವಾಗಿ ದೂರದ ಸೋದರಮಾವ ಒಬ್ಬರ ಮನೆಯಲ್ಲಿ ನೆಲಸಿ, ಶಾಲೆ ಸೇರುವ ತನಕ ಚೆಂಡಾಟ. ತಲೆಮ, ಡೂಡು (ಕಬಡ್ಡಿ) ಇತ್ಯಾದಿ ಸಾಮೂಹಿಕ ಆಟಗಳು ನನಗೆ ಗೊತ್ತಿರಲಿಲ್ಲ. ಪ್ರಕೃತಿಯೇ ನನ್ನ ಆಡುಂಬೊಲವಾಗಿತ್ತು. ಈ ತರಕಾರಿ ಬೆಳೆಸುವ ಆಸಕ್ತಿ ಮಕ್ಕಳಾಟದ ಕುರಿತಾದ ನನ್ನ ಕೊರತೆಯ ಒಂದು ಪೂರಕ ರೂಪವಾಗಿತ್ತೇನೊ. ಚಿಕ್ಕಂದಿನಿಂದಲೆ ದೊಡ್ಡವರ ಜೊತೆ ನಾನು ನನ್ನ ಕೈಲಾದ ಸಹಾಯ ಮಾಡುತ್ತ ದುಡಿಯುತ್ತಿದ್ದೆ. ತರಕಾರಿ ಬೆಳೆಯಲ್ಲೂ ನಾನು ನನ್ನ ಶಕ್ತ್ಯನುಸಾರ ಭಾಗವಹಿಸುತ್ತಿದ್ದೆ; ಮುಖ್ಯವಾಗಿ ಹಿರಿಯರಿಗೆ ಚೇಲನಾಗಿ.

ಪರಂಪರಾಗತ ಕಾವ್ಯಗಳ ನನ್ನ ಪರಿಮಿತ ಓದಿನಲ್ಲೆಲ್ಲೂ ನಾನು ತರಕಾರಿಗಳ ಬಗ್ಗೆ ಓದಿದ ನೆನಪಿಲ್ಲ. ಎಲ್ಲೋ ಯಾರೋ ಹೇಳಿರಬಹುದು, ನನಗೆ ಕಾಣ ಸಿಕ್ಕಿಲ್ಲ. ಹಾಗೆ ನೋಡಿದರೆ ಜನಪದ ಜೀವನಕ್ಕೆ ಹತ್ತಿರವಾದ ಅವೆಷ್ಟೋ ಸಂಗತಿಗಳನ್ನು ಶಿಷ್ಟ ಕಾವ್ಯ ಹೊರಗಿಟ್ಟಿದೆ. ಜನಪದ ಕಾವ್ಯ ಮಾತ್ರ ಬೇರೆ. ಹದಿನಾರನೇ ಶತಮಾನದ ಕವಿ ರತ್ನಾಕರವರ್ಣಿ ತನ್ನ ಪ್ರಸಿದ್ಧ ಕಾವ್ಯ “ಭರತೇಶ ವೈಭವ”ದ ಮೊದಲ ಸಂಧಿಯಲ್ಲೇ (ಆಸ್ಥಾನ ಸಂಧಿ) ‘ಪುಸ್ತಕದ ಬದನೆ ಕಾಯಿ’ ಎಂಬ ನಾಣ್ಣುಡಿಯನ್ನು ತರುತ್ತಾನೆ.

ಸಕಲ ಲಕ್ಷಣವು ವಸ್ತುಕಕೆ, ವರ್ಣಕಕಿಷ್ಟು
ವಿಕಳವಾದರು ದೋಷವಿಲ್ಲ
ಸಕಲ ಲಕ್ಷಣಕಾಗಿ ಬಿರುಸು ಮಾಡಿದರೆ ಪು
ಸ್ತಕದ ಬದನೆಕಾಯಹುದು

ವಸ್ತುಕ ಎಂದರೆ ಚಂಪೂ ಕಂದ ವೃತ್ತ ಮುಂತಾದ ಮಾರ್ಗ ಕಾವ್ಯ, ವರ್ಣಕ ಎಂದರೆ ಷಟ್ಪದಿ, ರಗಳೆ ಸಾಂಗತ್ಯ ಮುಂತಾದ ದೇಸೀ ಕಾವ್ಯ. ರತ್ನಾಕರವರ್ಣಿ ಕನ್ನಡದಲ್ಲಿ ದೇಸೀ ಕಾವ್ಯ ಮುನ್ನಡಿಯಿಡುತ್ತಿರುವ ನಡುಗನ್ನಡ ಕಾಲಘಟ್ಟಕ್ಕೆ ಸೇರಿದವನು. “ಭರತೇಶ ವೈಭವ” ಬರೆಯಲು ಅವನು ಆರಿಸಿಕೊಂಡುದು ಸಾಂಗತ್ಯವನ್ನು; ಸಾಂಗತ್ಯ ಷಟ್ಪದಿಗಿಂತಲೂ ಹೆಚ್ಚು ದೇಸಿ (‘ಹಾಡುಗಬ್ಬ’) ಎಂದರೆ ಅದರಲ್ಲೇ ಮಹಾಕಾವ್ಯ ಕಲ್ಪಿಸಿದ ಅವನ ಧೈರ್ಯವನ್ನು ಮೆಚ್ಚಲೇಬೇಕು! ಇನ್ನು ಇದೇ ಸಂಧಿಯಲ್ಲಿ ಮಿಶ್ರಭಾಷೆಯನ್ನು ತಂದವನೂ ಅವನೇ:

ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯಾ ಮಂಚಿದಿಯನೆತೆಲುಗಾ
ಅಯ್ಯಯ್ಯ ಎಂಚ ಪೊರ್ಲಾಂಡೆಂದು ತುಳುವರು
ಮೈಯ್ಯುಬ್ಬಿ ಕೇಳಬೇಕಣ್ಣಾ

ಇಲ್ಲಿ ಕನ್ನಡದ ಜತೆಗೆ, ತೆಲುಗು, ತುಳು ಮಾತುಗಳು ಒಟ್ಟಿಗೇ ಬರುವುದನ್ನು ಗಮನಿಸಿ! ಅಂತೆಯೇ ಈ ಸೋದರ ಭಾಷಿಕರೂ ತನ್ನ ಕಾವ್ಯವನ್ನು ಕೇಳುವರು/ ಓದುವರು ಎಂಬ ಕವಿಯ ಭರವಸೆ ಕೂಡ ನಾವು ಮೆಚ್ಚುವಂಥದೇನನ್ನೋ (ಬಹುಶಃ ಭಾಷಾ ಬಾಂಧವ್ಯವನ್ನು) ಹೇಳುತ್ತದೆ ಅಲ್ಲವೇ? ಭೋಗವನ್ನೂ ತ್ಯಾಗವನ್ನೂ, ಐಹಿಕವನ್ನೂ ಅಧ್ಯಾತ್ಮವನ್ನೂ ಒಳಗೊಳ್ಳಬೇಕೆನ್ನುವ ಕವಿಗೆ ಬದನೆಕಾಯಿ ಅಥವಾ ಅದರ ಉಲ್ಲೇಖ ವರ್ಜ್ಯವಾಗುವುದು ಹೇಗೆ ಸಾಧ್ಯ?

ಕ್ಷಮಿಸಿ, ಈ ಲೇಖನ ರತ್ನಾಕರವರ್ಣಿಯ ಕುರಿತಾಗಲಿ, ಮಾರ್ಗ-ದೇಸಿ ಭಿನ್ನತೆಯ ಕುರಿತಾಗಲಿ ಅಲ್ಲ, ನನ್ನ ಬಾಲ್ಯದಲ್ಲಿ ನಾವು ಬೆಳೆಸುತ್ತಿದ್ದ ತರಕಾರಿಗಳ ಬಗ್ಗೆ. ಒಂದೊಂದು ಪ್ರದೇಶದ ಹವೆ ಮತ್ತು ಮಣ್ಣಿನ ಗುಣಕ್ಕೆ ತಕ್ಕುದಾಗಿ ಅಲ್ಲಿನ ತರಕಾರಿಗಳು ಇರುತ್ತವೆ; ಹೊಸ ಹೊಸ ತರಕಾರಿಗಳ ಪರಿಚಯ ಆಗಬಾರದು ಎಂದಿಲ್ಲ. ಅಂಥ ಸಾಧ್ಯತೆಗಳು ತೀರ ಕಡಿಮೆ. ನೀವೀಗ ಅವುಗಳನ್ನು ಪೇಟೆಯಿಂದ ಕೊಂಡು ತರಬಹುದು, ಪಲ್ಯ ಮಾಡಿ ತಿನ್ನಬಹುದು, ಆದರೆ ಊರಲ್ಲೇ ಬೆಳೆಯುವುದು ಸಾಧ್ಯವಾಗದೆ ಇರಬಹುದು: ಉದಾ. ಎಲೆಕೋಸು (ಕ್ಯಾಬೇಜು), ಹೂಕೋಸು (ಕಾಲಿಫ್ಲವರ್), ನವಿಲುಕೋಸು (ಬೆಂಗಳೂರು ಬದನೆ), ಕೆಂಪು ಮೂಲಂಗಿ, ಬಿಳಿ ಮೂಲಂಗಿ, ಬೀಟ್ರೂಟು, ಬೀನ್ಸ್, ಚೌಳಿಕೋಡು ಇತ್ಯಾದಿ. ನಾನಾದರೆ ಇವುಗಳನ್ನು ಕಂಡಿರಲಿಲ್ಲ, ಕೇಳಿರಲಿಲ್ಲ. ನಾನು ನನ್ನ ಹುಟ್ಟೂರಾದ ಕಾಸರಗೋಡು ಪ್ರದೇಶದ ಬಗ್ಗೆ ಹೇಳುತ್ತಿದ್ದೇನೆ. ಈ ಮಣ್ಣಿನಲ್ಲಿ ಮೇಲೆ ಹೇಳಿದ ಕೆಲವೊಂದು ತರಕಾರಿಗಳು ಬೆಳೆಯುವುದಿಲ್ಲ, ಇನ್ನು ಕೆಲವೊಂದರ ಅಭ್ಯಾಸ ನಮಗಿಲ್ಲ. ಹಳ್ಳಿಯ ಹಲಸಿನ ಕಾಯಿ ತಿಂದು ಬೆಳೆದವನು ನಾನು. ನನ್ನ ಬಾಲ್ಯವೆಂದರೆ ಇಂದಿಗೆ ಸುಮಾರು ಎಪ್ಪತ್ತು ವರ್ಷಗಳ ಹಿಂದಣ ಮಾತು; ಯಾತಾಯಾತಗಳೇ ಅಪರೂಪವಾಗಿದ್ದ ಕಾಲ ಅದು. ಚಿಕ್ಕವನಾದ ನಾನು ಬರಿಕೋಮಣ (ಕೌಪೀನ) ಮತ್ತು ಮುಟ್ಟಪ್ಪಾಳೆಯಲ್ಲಿ (ಅಡಿಕೆ ಹಾಳೆಯಿಂದ ಮಾಡಿದ ಸ್ಥಳೀಯ ಶಿರಸ್ತ್ರಾಣ) ಓಡಾಡಿಕೊಂಡಿರುತ್ತಿದ್ದ ಕಾಲ.

ನಾವು ಬೆಳೆಯುತ್ತಿದ್ದ ನಾಟಿ ತರಕಾರಿಗಳೆಲ್ಲ ನಮ್ಮೂರ ಸಸ್ಯಗಳಂತೆ ಹಳತು. ಆದರೂ ಬೆಳೆದರೆ ಅವೇ ನಮಗೆ ಬೇಕಷ್ಟು ಇದ್ದುವು. ಬೆಳೆಯುತ್ತಿದ್ದೆವು, ತಿನ್ನುತ್ತಿದ್ದೆವು, ಮಿಕ್ಕವನ್ನು ನೆರೆಯವರಿಗೂ ಕೊಡುತ್ತಿದ್ದೆವು. ಕೆಲವೊಂದು ತಳಿಗಳಿಗೆ ಜನ ಇತರರನ್ನು ಆಶ್ರಯಿಸಬೇಕಾಗುತ್ತಿತ್ತು. ಅದೊಂದು ಸಾಮೂಹಿಕ, ಸಾವಯವ ಜೀವನ, ಅದರೊಳಗಿನ ವೈರುಧ್ಯಗಳು ಎಷ್ಟೇ ಇದ್ದರೂ – ಉದಾ: ಚೋಮನ ದುಡಿ! ಅವನಿಗೆ ಜಮೀನೇ ಇರಲಿಲ್ಲ. ಹೇಗೆ ಮರೆಯಲಿ? ಹಾಗೆ ನೋಡಿದರೆ, ಒಂದು ನರತಂತು ಮಿಡುಕಿದಾಗ ಇಡೀ ದೇಹವೇ ಹೇಗೆ ಕಂಪಿಸುತ್ತದೆ. ಆದರೆ ನಾನೀಗ ನನ್ನ ತರಕಾರಿ ಬೆಳೆಯ ಕಥನವನ್ನು ಮುಂದರಿಸಬೇಕು. ನನಗೆ ಅರಿವು ಮೂಡಿದಾಗ ನಾವು ನಮ್ಮ ಪಡುವಣ ಸೀಮೆಯ ತರವಾಟಿನ ಆಸ್ತಿಪಾಸ್ತಿಗಳನ್ನೆಲ್ಲ ಕಳಕೊಂಡು (ಆದರೆ ನನ್ನ ಹೆಸರಿನ ಮುಂದಿನ ಇನಿಶಿಯಲ್ ‘ಕೆ ಫಾರ್ ಕಿಳಿಂಗಾರ್’ ಈಗಲೂ ಇದೆ, ಶಾಲೆಯಲ್ಲಿ ಸೇರಿಸಿದ್ದು) ಮೂಡಣ ಸೀಮೆಯಲ್ಲಿ, ಪನ್ನೆಪ್ಪಲ ಎಂಬಲ್ಲಿ (ಇದು ಕಾರಡ್ಕ ಗ್ರಾಮದಲ್ಲಿದೆ), ಗೇಣಿ ಒಕ್ಕಲಿಗರಾಗಿ ಇದ್ದೆವು. ನಾನು ಜನಿಸಿದ್ದು ಈ ಮೂಡಣ ಸೀಮೆಯಲ್ಲೇ. ನಾವು ಕೃಷಿಕ ಬ್ರಾಹ್ಮಣರು, ಬೆಳೆಯುತ್ತಿದ್ದುದು ಕಂಗು, ತೆಂಗು, ಬಾಳೆ, ಕರಿಮೆಣಸು, ಕಾಡುತ್ಪತ್ತಿಯಾಗಿ ಗೇರುಬೀಜ. ಭತ್ತ ಬೆಳೆಯುವ ಜಾಗ ಅದಲ್ಲ. ಪಡುವಣದ ನನ್ನ ಮಾವಂದಿರಿಗೆ ಗದ್ದೆಗಳಿದ್ದು ಅವರು ಪ್ರಧಾನವಾಗಿ ಭತ್ತ, ಕೆಲವೊಮ್ಮೆ ಪರ್ಯಾಯ ಬೆಳೆಯಾಗಿ ರಾಗಿ, ಉದ್ದು, ಕಡಲೆ ಬೆಳೆಯುತ್ತಿದ್ದರು. ಆಮೇಲೆ ಕಾಲಾಯ ತಸ್ಮೈ ನಮಃ ಎಂದು ಅವೆಲ್ಲ ಅಡಿಕೆ ತೋಟಗಳಾದುವು.

ನಮ್ಮ ಪನ್ನೆಪ್ಪಲ ಗೇಣಿ ಜಾಗದಲ್ಲಿ (ಕಾಲಾಂತರದಲ್ಲಿ ಅಣ್ಣ ಅದನ್ನು ಖರೀದಿಸಿದರು) ತರಕಾರಿ ಬೆಳೆಯುವುದಕ್ಕೆ ಯಥೇಷ್ಟ ಸ್ಥಳವಿತ್ತು, ಹಾಗೂ ನಾವು ಸಾಕಷ್ಟು ಬೆಳೆಯುತ್ತಲೂ ಇದ್ದೆವು – ಕೆಲವೊಮ್ಮೆ ಕೆಲವು ಎಂಬಂತೆ. ಬಾಳೆ ಕಾಯಿ, ಹಲಸಿನ ಗುಜ್ಜೆಯಂತೂ ಪೆರೆನಿಯಲ್; ಹಣ್ಣಾಗಲು ಬಿಟ್ಟರೆ ಹಣ್ಣು, ಹಸಿಯಲ್ಲೇ ಕೊಯ್ದರೆ ತರಕಾರಿ. ನಾನೀ ಕಥನವನ್ನು ಬಾಳೆ, ಹಲಸಿನಿಂದ ಪ್ರಾರಂಭಿಸಬಾರದು, ಯಾಕೆಂದರೆ ಅವು ಪ್ರೋಟೋಟಿಪಿಕಲ್ ತರಕಾರಿಗಳಲ್ಲ. ಒಂದು ಹಕ್ಕಿಯ ಹೆಸರೇಳಿ ಎಂದರೆ ಗುಬ್ಬಿ, ಕೋಗಿಲೆ ಎನ್ನುತ್ತೇವೆಯೇ ವಿನಾ ಗಿಡುಗ, ಹದ್ದು ಎನ್ನುವುದಿಲ್ಲ; ಇಲ್ಲಿಯೂ ಹಾಗೆಯೇ. ತರಕಾರಿ ಎಂದರೆ ತೊಂಡೆ, ಬೆಂಡೆ, ಬದನೆ – ಇನ್ನು ಹಾಗಲಕಾಯಿ, ಪಡವಲಕಾಯಿ, ಸೌತೆಕಾಯಿ ಇತ್ಯಾದಿ, ಅಲ್ಲದೆ ಬಾಳೆಕಾಯಿ, ಹಲಸಿನಕಾಯಿ, ಪಪ್ಪಾಯಿ (ಹವ್ಯಕ: ಬಪ್ಪಂಕಾಯಿ ಎನ್ನುವುದಿಲ್ಲ, ಇವುಗಳಿಂದಲೂ ಸೊಗಸಾದ ಪಲ್ಯಗಳನ್ನು ಮಾಡುವುದು ಸಾಧ್ಯವಿದ್ದರೂ)

ತೊಂಡೆ ಚಪ್ಪರದಿಂದ ಶುರು; ಅಂದಿನ ಕಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಹೆಚ್ಚಿನವರ ಮನೆ ಮುಂದೆ ಒಂದು ತೊಂಡೆ ಚಪ್ಪರ ಇರುತ್ತಿದ್ದುದು ಸಾಮಾನ್ಯವಾಗಿತ್ತು. ಯಾಕೆ ತೊಂಡೆ ಚಪ್ಪರ ಎಂದರೆ, ಅದೊಂದು ಇಡೀ ವರ್ಷ ಫಲ ಕೊಡುವ ತರಕಾರಿ ಬಳ್ಳಿ. ಅಲ್ಲದೆ ತೊಂಡೆಯಿಂದ ಪಲ್ಯ, ಅರೆದ ತೆಂಗಿನ ಕಾಯಿ ಮತ್ತು ಮಜ್ಜಿಗೆ ಹಾಕಿದ ಮೇಲೋಗರ (ಹವ್ಯಕ: ಮೇಲಾರ), ಹುಳಿಗೊಜ್ಜು ಮಾಡಬಹುದಾಗಿತ್ತು. ಮೇಲೋಗರಕ್ಕೆ ಸೌತೆಕಾಯಿ ಇದ್ದರೆ ಸರಿಯಾದ ಜತೆ. ನೀವು ತೊಂಡೆ ಬೆಳೆಸಬೇಕಾದರೆ ನೀವು ಅದರದೊಂದು ಹಸಿ ದಂಟನ್ನು ಸಂಪಾದಿಸಬೇಕು. ಯಾಕೆಂದರೆ ದಂಟಿನಿಂದಲೇ ಇದರ ಪ್ರಸರಣ. ಅದಕ್ಕೇ ನಾನು ಹೇಳಿದ್ದು ತರಕಾರಿ ಕೃಷಿ ಒಂದು ಸಾಮೂಹಿಕ, ಸಾವಯವ ಜೀವನ ಎಂದು. ತೊಂಡೆಕಾಯಿಗೆ ಬೀಜಗಳಿದ್ದರೂ ಅವು ಹುಸಿ ಬೀಜಗಳು. ಕಾಯಿ ಹೆಚ್ಚು ಬೆಳೆದರೆ ಪಲ್ಯಕ್ಕೂ ಬರುವುದಿಲ್ಲ. ಕೊಯ್ಯದೆ ಚಪ್ಪರದಲ್ಲೆ ಬಿಟ್ಟರೆ ಅಲ್ಲೇ ಹಣ್ಣಾಗಿ ಹಕ್ಕಿಗಳಿಗೆ ಆಹಾರವಾಗಿ ಬಿದ್ದು ಹೋಗುತ್ತವೆ.

ನೀವು ಊರುವ ದಂಟು ಒಂದಡಿಯಿಂದ ಐದು ಆರಡಿ, ಎಂದರೆ ಚಪ್ಪರದವರೆಗೆ ಇರಬಹುದು. ಚಿಕ್ಕದಿದ್ದರೆ ಅದು ಚಪ್ಪರದ ತನಕ ಬೆಳೆಯಲು ಕೋಲಿನ ಆಧಾರ ಕೊಡಬೇಕು. ತೊಂಡೆಕಾಯಿ ಟಿಪಿಕಲ್ ಚಪ್ಪರದ ಬೆಳೆ. ಚಪ್ಪರದಲ್ಲೆ ಅದರ ಎಗೆಗಳು, ಎಗೆಗಳಿಂದ ಎಗೆಗಳು ಹರಡಬೇಕು. ಹಟ್ಟಿ ಗೊಬ್ಬರ ಇದಕ್ಕೆ, ಹಾಗೂ ಇತರ ಎಲ್ಲ ತರಕಾರಿಗಳಿಗೂ ಈಟು. ತೊಂಡೆಯ ಎಗೆಗಳು ಹರಡುತ್ತಿರುವಂತೆ ಅವುಗಳಲ್ಲಿ ಎಲೆಗಳು ಹುಟ್ಟಿಕೊಳ್ಳುತ್ತವೆ, ಕ್ರಮೇಣ ಸೌಮ್ಯವಾದ ಬಿಳಿ ಹೂಗಳು ಕಾಣಿಸಿಕೊಳ್ಳುತ್ತವೆ. ಈ ಹೂಗಳ ಬುಡಗಳೇ ಕಾಯಿಗಳಾಗಿ ಬೆಳೆಯುವುದು. ಹೆಚ್ಚಾಗಿ ಎಲ್ಲಾ ಸಸ್ಯಗಳಲ್ಲೂ ಹಾಗೇ ತಾನೆ? ಇಲ್ಲಿ ಬೆಳೆಗಾರನಿಗೆ ಗೊತ್ತಿರುವ ಒಂದೆರಡು ಸೂಕ್ಷ್ಮಗಳನ್ನು ಹೇಳಬೇಕು. ಒಂದು: ಚಪ್ಪರದಲ್ಲಿ ಎಲೆಗಳು ಸೊಕ್ಕಲು ಬಿಡಬಾರದು, ಎಲೆಗಳು ಸೊಕ್ಕಿದರೆ ಹೂ ಬಿಡುವುದಿಲ್ಲ. ಎಲೆಗಳನ್ನು ಕಿತ್ತು ಸಸಿಯ ಬುಡಕ್ಕೆ ಹಾಕಿದರೆ ಸರಿ; ಹಾಗೆಂದು ಪೂರ್ತಿ ಕೀಳಲೂ ಬಾರದು. ವಿರಳವಾಗಿಸಿದರೆ ಸಾಕು.

ಇನ್ನೊಂದು ವಿಷಯ: ಇದು ತೊಂಡೆ ಸಸ್ಯವನ್ನು ಬಾಧಿಸುವ ಸಣ್ಣ ಕೀಟಗಳ ನಿಯಂತ್ರಣ ಹೇಗೆ ಎನ್ನುವುದು. ಈ ಕೀಟಗಳನ್ನು ಹಿಡಿದು ತಿನ್ನುವ ಇರುವೆಗಳ ಕುಲವೊಂದು ಇದೆ, ಕೆಂಪಿರುವೆ ಅಥವಾ ಹವ್ಯಕದ ಸೌಳಿ. ಇವುಗಳ ಕೊಟ್ಟೆಯೊಂದನ್ನು (ಎಂದರೆ, ಮರದ ಹಸಿರಲೆಗಳನ್ನೆ ಒಂದುಗೂಡಿಸಿ ಇರುವೆಗಳು ತಮಗೋಸ್ಕರ ಕಟ್ಟಿಕೊಂಡ ಗೂಡು) ಇರುವೆಗಳಿಗೆ ತಿಳಿಯದಂತೆ – ಯಾಕೆಂದರೆ ತಿಳಿದರೆ ಅವು ಕಚ್ಚಬಹುದು – ಜಾಗ್ರತೆಯಾಗಿ ಬುಡದಿಂದ ಕತ್ತರಿಸಿ ತಂದು ಚಪ್ಪರದಲ್ಲಿ ಬಿಟ್ಟು ಬಿಡುವುದು! ನೆನೆದರೆ ಅಯ್ಯೋ ಪಾಪ ಎನಿಸುತ್ತದೆ. ಆ ಗೂಡಿನ ನಿವಾಸಿಗಳಾದ ಎಷ್ಟೋ ಇರುವೆಗಳು ನಾವು ಗೂಡನ್ನು ಅಪಹರಿಸಿದಾಗ ಹೊರಗೆಲ್ಲೋ ಹೋಗಿರಬಹುದಲ್ಲ; ಅವು ಮರಳಿದಾಗ ಅಲ್ಲಿ ಮನೆಯಿಲ್ಲ, ಎಂದರೆ ಗೂಡಿಲ್ಲ! ಗೂಡಿನೊಳಗೆ ಹಾಯಾಗಿದ್ದು ಚಪ್ಪರಕ್ಕೆ ಸ್ಥಳಾಂತರಿಸಲ್ಪಟ್ಟ ಇರುವೆಗಳ ಪಾಡೇನು? ಅಲ್ಲಿ ಅವುಗಳಿಗೆ ತಿನ್ನುವುದಕ್ಕೇನೋ ಧಾರಾಳ ಸಿಗಬಹುದು, ಆದರೆ ಅವುಗಳಿಗೆ ಇದುವರೆಗೆ ರೂಢಿಯಾದ ಅವುಗಳದೇ ಆದ ಸಾಮಾಜಿಕ ಜೀವನದ ಗತಿಯೇನು?

ತರಕಾರಿ ಚಪ್ಪರದಲ್ಲಿ ಬೆಳೆಯುವುದೋ (ತೊಂಡೆ, ಹೀರೆ, ಪಡುವಲ, ಹಾಗಲ, ಕೆಲವೊಮ್ಮೆ ಸೋರೆ), ಗಿಡದಲ್ಲೋ (ಬದನೆ, ಬೆಂಡೆ, ಅವರೆ), ಬಳ್ಳಿಯಲ್ಲೋ (ಕುಂಬಳ, ಚೀನಿಕಾಯಿ ಅರ್ಥಾತ್ ಸಿಹಿಗುಂಬಳ, ಸೌತೆ, ಮುಳುಸೌತೆ, ಅಲಸಂಡೆ), ನೆಲದೊಳಗೋ (ಗೆಣಸು, ಸುವರ್ಣಗಡ್ಡೆ) ಎನ್ನುವುದನ್ನು ಹೊಂದಿಕೊಂಡು ಹಲವು ವರ್ಗಗಳಿವೆ. ತೊಂಡೆ ಮತ್ತು ಗೆಣಸನ್ನು ಉಳಿದಂತೆ ಇವೆಲ್ಲವೂ ಬಿತ್ತು ಯಾ ಗಡ್ಡೆ ಮುಖೇನ ಪ್ರಸರಣಗೊಳ್ಳುವಂಥವು. ಬೆಳೆಗಾರ ಬಿತ್ತು ನೋಡಿಯೆ ಇದು ಯಾತರದ್ದೆಂದು ಹೇಳಬಲ್ಲ. ತೊಂಡೆಯಂತೆ ಚಪ್ಪರವನ್ನು ಆಶ್ರಯಿಸುವ ಜನಪ್ರಿಯ ಬೆಳೆಗಳೆಂದರೆ ಮುಖ್ಯವಾಗಿ ಹೀರೆ (ದಾರಳೆ), ಪಡುವಲ (ಪಟಗಿಲ), ಹಾಗಲ.

ಹೀರೆ (ಹವ್ಯಕ: ದಾರಳೆ) ಮತ್ತು ಪಡುವಲವನ್ನು (ಹವ್ಯಕ: ಪಟಗಲ/ ಪಟಗಿಲ) ಒಂದೇ ಚಪ್ಪರದಲ್ಲಿ ಬೆಳೆಯುವುದಿದೆ, ಯಾಕೆಂದರೆ ಅವುಗಳನ್ನು ಒಟ್ಟಿಗೆ ಪಲ್ಯಮಾಡಿದರೆ ಪ್ರತ್ಯೇಕವಾಗಿ ಮಾಡಿದುದಕ್ಕಿಂತ ಹೆಚ್ಚು ರುಚಿ. ಚಪ್ಪರದಲ್ಲೂ ಅವುಗಳ ಫಲಗಳಲ್ಲಿ ಗೊಂದಲಕ್ಕೆ ಕಾರಣವಿಲ್ಲ: ಪಡುವಲ ಉದ್ದಕೆ ಹಾವಿನಂತೆ (ಅದಕ್ಕೇ ಅದು ಸ್ನೇಕ್ ಗೂರ್ಡ್) ಬೆಳೆದರೆ, ಹೀರೆ ಕುಳ್ಳಗೆ ದುಂಡಗೆ ಇರುತ್ತದೆ. ಇವುಗಳ ಬಿತ್ತುಗಳಲ್ಲಿಯಂತೂ ತುಂಬ ವ್ಯತ್ಯಾಸ. ಪಡುವಲದ ಬಿತ್ತು ಕರ್ರಗೆ, ಬಹಳ ಗಟ್ಟಿ, ಯಾವುದೋ ಯುನಿವರ್ಸಿಟಿ ಲಾಂಛನದ ಮಿನಿ ರೂಪದಂತೆ! ಹೀರೆ ಬಿತ್ತು ಬಿಳಿ, ಮೆತ್ತಗೆ, ಹಳೆಮಾದರಿಯ ಲೋಲಕದಂತೆ. ಹೀರೆ ಬಿತ್ತು ಮಡಿ ಸೇರಿದ ಒಂದು ವಾರದಲ್ಲೇ ಮೊಳಕೆಯೊಡೆದರೆ, ಪಡುವಲ ಇನ್ನಷ್ಟು ದಿನ ತೆಗೆದುಕೊಳ್ಳುತ್ತದೆ. ಮರೆತೇ ಹೋಯಿತೆ ಎನ್ನುವಷ್ಟರಲ್ಲಿ ಇದೋ ನಾನಿದ್ದೇನೆ ಎಂದು ಕಾಣಿಸಿಕೊಳ್ಳುತ್ತದೆ.

ಪಡುವಲ ಕಾಯಿಯ ಹೂ ಬಿಳಿ, ಹೀರೆಯದ್ದು ಬಹುಶಃ ಹಳದಿ. ಪಡುವಲ ಕಾಯಿ ಸುಮಾರು ಐದಡಿಯಷ್ಟು ಕೆಳಗಿಳಿದರೆ (ಇದರಲ್ಲಿ ಗಿಡ್ಡ ಹಾಗೂ ಉಬ್ಬು ಕಾಯಿಯ ಒಂದು ತಳಿಯೂ ಇದೆ), ಹೀರೆ ಕಾಯಿ ಒಂದೂವರೆ ಅಡಿಯಷ್ಟು ಇಳಿಯುತ್ತದೆ. ಈ ಹೀರೆಕಾಯಿಯ ಕುರಿತು ಇನ್ನಷ್ಟು ಹೇಳಬೇಕು. ಇದರ ತಿರುಳು ಪಲ್ಯಕ್ಕಾದರೆ ಓಳಿಗಳಿರುವ ಇದರ ಹೊರಮೈಯನ್ನು ಹೆರೆದು ತೆಗೆದು ಬೇಯಿಸಿ, ತೆಂಗಿನ ತುರಿ ಮತ್ತು ಮಸಾಲೆ ಪದಾರ್ಥಗಳೊಂದಿಗೆ ಅರೆದು ಪಚ್ಚಡಿ ಮಾಡುವುದಿದೆ! ಇನ್ನು ಕಾಯಿಗಳನ್ನು ಒಣಗಲು ಬಿಟ್ಟರೆ ಬಿತ್ತುಗಳು ಸಿಗುತ್ತವೆ. ಒಣ ಹೀರೆ ಕಾಯಿಯ ಸಿಪ್ಪೆ ಸುಲಿದು ತೆಗೆದರೆ ದೊರಕುವ ಗಟ್ಟಿ ನಾರುಗಳ ಚುಂಗನ್ನು ಪಾತ್ರೆ ತೊಳೆಯಲು ಬಳಸುವುದೂ ಇತ್ತು. ಪರಿಷ್ಕೃತ ಸಾಧನಗಳು ಇರದಿದ್ದ ಕಾಲ ಅದು.

ಚಪ್ಪರ ತರಕಾರಿಗಳಲ್ಲಿ ನನಗೆ ತುಂಬಾ ಇಷ್ಟವಾದುದೆಂದರೆ ಹಾಗಲಕಾಯಿ. ಇದು ಕಹಿಯಾನು ಕಹಿ! ವಿಷ ತಾಕಿದವರನ್ನು ಕಕ್ಕಿಸಲು ಇದರ ಹಸಿ ರಸವನ್ನು ಕೊಡುತ್ತಿದ್ದರು. ಹಾಗಲಕಾಯಿಯಲ್ಲಿ ಕಬ್ಬಿಣದ ಸತ್ವ ಇದೆಯಂತೆ. ಯಾವ ತರಕಾರಿಯಲ್ಲಿ ಏನಿದೆಯೆಂದು ನಮಗೇನು ಗೊತ್ತು? ಈ ತರಕಾರಿಗಳು, ಇವುಗಳನ್ನು ಅಡುಗೆಗೆ ಬಳಸುವ ವಿಧಾನ ನಮಗೆ ಹಿರಿಯರಿಂದ ಬಂದ ಜ್ಞಾನ. ಅದರಂತೆ ಮಾಡುತ್ತ ಬಂದಿದ್ದೇವೆ; ರುಚಿಗೋಸ್ಕರವಲ್ಲದೆ, ಆರೋಗ್ಯಕ್ಕೆ ಎಂದಲ್ಲ. ರುಚಿಕರವಾದುದು ಆರೋಗ್ಯಕರವೂ ಆಗಿದ್ದರೆ ಅತ್ಯಂತ ಸ್ವಾಗತಾರ್ಹ. ಕಡು ಕಹಿಯಾದ ಹಾಗಲಕಾಯಿಯಿಂದ ನಮ್ಮವರು ಪಲ್ಯ (ಹವ್ಯಕ: ‘ತಾಳು’, ಸಾಂಬಾರು, ಮೇಲೋಗರ, ‘ಮೆಣಸುಕಾಯಿ’ ಗೊಜ್ಜು (ಸುಟ್ಟು ಅಥವಾ ಬೇಯಿಸಿ)ಎಂದು ಮುಂತಾದ ಸ್ವಾದಿಷ್ಟ ಪದಾರ್ಥಗಳನ್ನು ಮಾಡುತ್ತಿರುವುದು ಒಂದು ಅನನ್ಯ ಕಲೆಯೇ ಸರಿ.

ಮಿಶ್ರ ತರಕಾರಿಯ ಅವಿಲಿಗೆ ಇನ್ನೇನಿಲ್ಲದಿದ್ದರೂ ಹಾಗಲಕಾಯಿ ಅನಿವಾರ್ಯ. ಹಸಿ ಹಾಗಲ ಕಾಯಿಯನ್ನು ಉರುಟುರುಟಾಗಿ ಕತ್ತರಿಸಿ ಉಪ್ಪು ಸೇರಿಸಿ ಹುಳಿ ಮಜ್ಜಿಗೆಯಲ್ಲಿ ಅದ್ದಿ ಬಿಸಿಲಿಗೆ ಒಣಗಿಸಿ, ಹುರಿದು ತಿನ್ನಲು ಬಾಳಕ ಮಾಡಿ ಇರಿಸಿಕೊಳ್ಳುವುದು ಇನ್ನೊಂದು ಕಲೆ. ಎಂಥ ಬುದ್ಧಿಜೀವಿ ಕೂಡ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾನೆ! ಈ ಹಾಗಲ ಬಳ್ಳಿಯಲ್ಲೂ ಸಣ್ಣ ಕಾಯಿಗಳನ್ನು ಬಿಡುವಂಥ ತಳಿಗಳಿವೆ. ಸಾಮಾನ್ಯ ಕಾಯಿಗಳು ಸುಮಾರು ಏಳೆಂಟು ಇಂಚುಗಳಿದ್ದರೆ, ಬರೇ ನಡುಬೆರಳಷ್ಟು ಉದ್ದದ ದಪ್ಪ ಕಾಯಿ ಬಿಡುವ ಒಂದು ತಳಿಯಿದೆ. ಇನ್ನೊಂದು ಕೇವಲ ಉಂಗುರ ಬೆರಳಷ್ಟು ಉದ್ದದ್ದು, ಹೆಚ್ಚು ದಪ್ಪವೂ ಇಲ್ಲ, ನಮ್ಮ ಊರಿನಲ್ಲಿ ನಾನಿದನ್ನು ನೋಡಿರಲಿಲ್ಲ, ಆದರೆ ಹೈದರಾಬಾದ್ ಸಂತೆಗಳಲ್ಲಿ ಸಿಗುತ್ತದೆ. ಇದನ್ನು ಉದ್ದಕೆ ಹೊಟ್ಟೆ ಸೀಳಿ, ಮಸಾಲೆ ತುಂಬಿಸಿ ಎಣ್ಣೆಯಲ್ಲಿ ಕರಿದು ತಿನ್ನುವುದು. (ತೊಂಡೆಕಾಯಿಯನ್ನೂ ಈ ಪ್ರಕ್ರಿಯೆಗೆ ಒಳಪಡಿಸಬಹುದು.)

ಗಿಡದಲ್ಲಿ ಬೆಳೆಯುವ ತರಕಾರಿಗಳಲ್ಲಿ ಬಹುಶಃ ಬೆಂಡೆ ತುಂಬ ಜನಪ್ರಿಯ. ಇದರ ಬಿತ್ತು ದೊಡ್ಡ ಉದ್ದಿನ ಕಾಳಿನ ತರದ್ದು. ಹೂವು ಅತ್ಯಂತ ಆಕರ್ಷಕ –ಹೂವಿನ ಎಸಳು ಕಡು ಹಳದಿ ಬಣ್ಣದ್ದು, ಒಳತಳದಲ್ಲಿ ನೇರಳೆ ಬಣ್ಣ. ಇದರ ಕಸ್ತ್ರವೂ ಒಂದು ಮಾದರಿಯದು. ನಮ್ಮೂರ ಬೆಂಡೆಕಾಯಿ ಸಾಕಷ್ಟು ದೊಡ್ಡದಿರುತ್ತದೆ, ಸುಮಾರು ಎಂಟು ಹತ್ತು ಇಂಚು ಉದ್ದ.

ಬೆಂಡೆಕಾಯಿಗೆ ಇಂಗ್ಲಿಷ್ ನಲ್ಲಿ ಓಕ್ರ ಅನ್ನುತ್ತಾರೆ, ಅದು ಮೂಲತಃ ಆಫ್ರಿಕನ್ ಶಬ್ದವಂತೆ, ಆದರೆ ಎಲ್ಲೆಡೆ ‘ಲೇಡೀಸ್ ಫಿಂಗರ್’ (ಮಹಿಳೆಯರ ಅಂಗುಲಿ) ಎನ್ನುವ ಅನ್ವರ್ಥಕ ನಾಮ (?) ಹೆಚ್ಚು ಜನಪ್ರಿಯ! ಇದೊಂದು ಪಂಚಕೋನಗಳಿರುವ (‘ಪೆಂಟಗಾನ್’), ಕೊನೆಯಲ್ಲಿ ಎಲ್ಲ ಕೋನಗಳು ಒಂದುಗೂಡುವ ಮನೋಹರ ಕಾಯಿ, ಅಡುಗೆಯಲ್ಲಿ ಇನ್ನು ಯಾವುದೇ ತರಕಾರಿಯ ಜತೆಗೂ ಸೇರುವುದಿಲ್ಲ. ಸಾಂಬಾರು, ಮೇಲೋಗರ, ಪಲ್ಯ, ಗೊಜ್ಜಿಗೆ ಉಪಯೋಗವಾಗುತ್ತದೆ.

ಈಗ ಬಂದೆವು ನೋಡಿ ನಮ್ಮ ಬದನೆಗೆ. ಪುಸ್ತಕದ ಬದನೆ ಕಾಯಿ ಎಂಬ ವಾಸ್ತವರಹಿತ ಜ್ಞಾನದ ಗೇಲಿಗೆ ಬದನೆಯೇ ಯಾಕೆ ಬಂತೋ ತಿಳಿಯದು, ಬೆಂಡೆಯೋ ಇನ್ನು ಯಾವುದೋ ಬರಬಹುದಿತ್ತು, ಬಂದಿಲ್ಲ, ಬದನೆಯೇ ಬಂತು. ಇದು ಬಹುಶಃ ಅದರ ಜನಪ್ರಿಯತೆಯನ್ನು ತೋರಿಸುತ್ತದೆ. ಬದನೆ ಕೊಟ್ಟು ಕೊದನೆ ಕೊಂಡ ಎನ್ನುವ ಇನ್ನೊಂದು ಗಾದೆಯೂ ಇದೆ: ಬದನೆ ಶ್ರೇಷ್ಠ, ಸುಮ್ಮನೆ ಬೆಳೆಯುವ ಕೊದನೆ (ಗೊಜ್ಜಿಗೆ ಉಪಯೋಗವಾದರೂ) ಪಡಪೋಶಿ, ಆದ್ದರಿಂದ ಬದನೆ ಕೊಟ್ಟು ಕೊದನೆ ಕೊಳ್ಳುವುದು ಮೂರ್ಖತನ ಎಂದು ಅರ್ಥ. ಅಲ್ಲದೆ ಉಡುಪಿ ಗುಳ್ಳ ಲೋಕಪ್ರಸಿದ್ಧ; ಮುನಿದ ಗಂಡನನ್ನು ಒಲಿಸಲು ಗುಳ್ಳನ ಗೊಜ್ಜು ಮಾಡಿದರೆ ಸಾಕಂತೆ! ಆದರೆ ಕನ್ನಡ ಜನಪದದಲ್ಲಿ ಬದನೆಯ ಅಪಮೌಲ್ಯವೂ ಆಗಿದೆ: ಹೇಳುವುದು ಶಾಸ್ತ್ರ, ತಿನ್ನುವುದು ಬದನೆಕಾಯಿ ಎಂಬ ಮಾತನ್ನು ನೋಡಿ! ಅದೇನಿದ್ದರೂ, ಕನ್ನಡ ನುಡಿಯಲ್ಲಿ ಇಂತು ಹರೆದಾಡುವ ಬದನೆ ಬಿತ್ತಿನಿಂದ ಪ್ರಸರಣಗೊಳ್ಳುವಂಥದು, ಗಿಡವಾಗಿ ಬೆಳೆಯುತ್ತದೆ. ಗಿಡದಿಂದ ಒಂದೆರಡು ವರ್ಷ ಬೆಳೆ ತೆಗೆಯಬಹುದು.

ಇದರಲ್ಲಿ ಉದ್ದ ಬದನೆ, ಗುಳ್ಳ ಬದನೆ ಎಂದು ಪ್ರಧಾನವಾಗಿ ಎರಡು ವಿಧ; ಇವುಗಳ ಬಣ್ಣ ಬಿಳಿ, ಹಸಿರು ಬಿಳಿ, ಇಲ್ಲವೇ ನೇರಳೆ ಇರಬಹುದು. ಬಿತ್ತಿನಿಂದ ಈ ತರಾವಳಿಯನ್ನು ಗುರುತಿಸುವುದು ಕಷ್ಟ, ನನಗಂತೂ ಸಾಧ್ಯವಿಲ್ಲ, ನಾನು ಅಷ್ಟೊಂದು ಪರಿಣತನಲ್ಲ. ಪರಿಣತರು ಇರಬಹುದು. ಇರಲಿ. ಅವರಿಗೆ ನಮಸ್ಕಾರ. ಈಗ ನಾನಿರುವ ಹೈದರಾಬಾದಿನಲ್ಲಿ ಕೆಲವು ವರ್ಷಗಳಿಂದ ನೇರಳೆ ಬಣ್ಣದ ಬೃಹತ್ತಾದ ಉರುಟು ಬದನೆಯನ್ನು ನಾನು ನೋಡುತ್ತ ಬಂದಿದ್ದೇನೆ. ಅದು ನೋಡಲು ಬಹಳ ಮುದ್ದಾಗಿರುತ್ತದೆ, ಪದಾರ್ಥಕ್ಕೂ ಚೆನ್ನಾಗಿರುತ್ತದೆ, ಆದರೆ ಎಳತಾಗಿರಬೇಕು. ಇಂಥಾ ಬೃಹತ್ ಬದನೆ ಬಹುಶಃ ಈಚಿನ ಆವಿಷ್ಕಾರವೆಂದು ತೋರುತ್ತದೆ. ಚಿಕ್ಕಂದಿನಲ್ಲಿ ನಮ್ಮ ಹಳ್ಳಿಯಲ್ಲಿ ಅದು ಇರಲಿಲ್ಲ. ಯಾವುದೇ ಬದನೆ ಸಾಧಾರಣವಾಗಿ ಎಲ್ಲಾ ಪದಾರ್ಥಗಳಿಗೂ ಬರುತ್ತದೆ. ಆದರೆ ಬದನೆ ನಂಜು ಎಂದು ಲೆಕ್ಕ. ಕೆಲವರಿಗೆ ಅದು ವರ್ಜ್ಯ. ಆದರೆ ನಾವು ಅಷ್ಟೊಂದು ಸೂಕ್ಷ್ಮ ಅಲ್ಲ. ತರಕಾರಿಯನ್ನು ಪದಾರ್ಥವೆಂದು ಅವುಗಳ ರುಚಿಗೆ ತಿನ್ನುತ್ತೇವೆಯೇ ವಿನಾ ಪ್ರಧಾನ ಆಹಾರವಾಗಿ ಅಲ್ಲ. ಜೀರ್ಣರಸಗಳ ಪ್ರಚೋದನೆಗೆ ರುಚಿ ಮುಖ್ಯ. ಸತ್ವ ದ್ವಿತೀಯ.

ಬದನೆಯನ್ನು ಸುಟ್ಟು ಗೊಜ್ಜು ಮಾಡುವುದಾದರೆ ಅದರ ಮೈಗೆ ಎಣ್ಣೆ ಹಚ್ಚಿ ಕೆಂಡದಲ್ಲಿ ಹಾಕಬೇಕು; ನಂತರ ಬಿಸಿ ಆರಿದ ಮೇಲೆ ಸಿಪ್ಪೆ ಸುಲಭವಾಗಿ ತೆಗೆಯಲು ಬರುತ್ತದೆ. ಆಮೇಲೆ ‘ಗುಳ’ವನ್ನು (ತಿರುಳನ್ನು ಚಚ್ಚುವುದು. ಈಗ ಸುಡುವ ಕೆಂಡವೂ ಇಲ್ಲ ಗೊಜ್ಜು ಮಾಡುವವರೂ ಇಲ್ಲ.

ಅಮರೆ (ಅವರೆ) ಕೋಡು (ಕೋಡಮರೆ) ಸಹಾ ಗಿಡದಲ್ಲಿ ಬೆಳೆಯುವುದು. ಒಂದು ಅಡಿ ಉದ್ದ, ಬೆಲ್ಟಿನಷ್ಟು ದಪ್ಪವಿರುವ ಅವರೆ ಕೋಡನ್ನು ಎಳತಿನಲ್ಲೇ ಉಪಯೋಗಿಸಬೇಕು, ಹೆಚ್ಚು ಬೆಳೆಯಲು ಬಿಟ್ಟರೆ ಅದರ ಒಳಗಿನ ಪೊರೆ ಪ್ಲಾಸ್ಟಿಕ್ ನಂತೆ ಪೆಡಸಾಗಿ ತಿನ್ನಲು ಕಿರಿಕಿರಿಯಾಗುತ್ತದೆ. ಅವರೆ ಕೋಡನ್ನು ನಾವು ಹೆಚ್ಚಾಗಿ ಪಲ್ಯಕ್ಕೆ ಮಾತ್ರ ಬಳಸುತ್ತಿದ್ದುದು. ಇದು ಬಿತ್ತಿನಿಂದ ಪ್ರಸರಣಗೊಳ್ಳುವುದು. (ನಾನಿಲ್ಲಿ ಬೀನ್ಸ್ ಮತ್ತು ಚೌಳಿಕೋಡುಗಳ ಬಗ್ಗೆ ಹೇಳುತ್ತಿಲ್ಲ, ಯಾಕೆಂದರೆ ನಮ್ಮ ಊರಲ್ಲಿ ಅವನ್ನು ಬೆಳೆಯುತ್ತಿರಲಿಲ್ಲ. ಪೇಟೆಯ ಸಂಪರ್ಕ ಹೊಂದುವವರೆಗೆ ನಮಗವುಗಳ ಪರಿಚಯವೂ ಇರಲಿಲ್ಲ. ನಾನು ಹೈದರಾಬಾದಿನಿಂದ ಒಮ್ಮೆ ಊರಿಗೆ ಚೌಳಿಕೋಡಿನ ಬಿತ್ತುಗಳನ್ನು ಒಯ್ದಿದ್ದೆ. ಅದು ಒಂದು ವರ್ಷ ಚೆನ್ನಾಗಿ ಬೆಳೆಯಿತು ಎಂದು ಕೇಳಿದ್ದೇನೆ.)

ಇದೇ ಸಂದರ್ಭದಲ್ಲಿ ನಾನು ನುಗ್ಗೆ ಗಿಡದ (ಹವ್ಯಕ: ನುಗ್ಗಿ ಗೆಡು) ಕುರಿತೂ ಹೇಳಬೇಕು. ಊರಲ್ಲಿ ಇದೊಂದು ಜನಪ್ರಿಯ ತರಕಾರಿ (ಕೊಂಬು). ಪಲ್ಯ, ಸಾಂಬಾರು, ಅವಿಲ್ ಗೆ ಬಳಕೆಯಾಗುತ್ತದೆ. ಜಗಿದಷ್ಟೂ ರಸ ಕೊಡುವ ಕಬ್ಬಿನಂಥ ಸಾಧನ. ಇಡಿಯಾಗಿ ಇದು ನಮ್ಮ ಶಾಲಾ ಮಾಸ್ತರರ ಬಳಿ ಇರುತ್ತಿದ್ದ ಬೆತ್ತವನ್ನು ಜ್ಞಾಪಿಸುವಂಥದು.

ಇಂಗ್ಲಿಷ್ನಲ್ಲಿ ‘ಡ್ರಮ್ ಸ್ಟಿಕ್’ (ಚೆಂಡೆ ಕೋಲು’!). ನುಗ್ಗೆಯ ಎಲೆಯನ್ನು, ಮುಖ್ಯವಾಗಿ ಹೂವನ್ನು ಕೂಡ ಸಾರಿಗೆ ಹಾಕಿ ಅಡುಗೆಗೆ ಬಳಸುತ್ತಾರೆ. ಬಹಳ ಪುಷ್ಟಿದಾಯಕ ಎಂದು ಕೇಳಿದ್ದೇನೆ. ನುಗ್ಗೆಯ ಸಮಸ್ಯೆ ಏನೆಂದರೆ ಗಿಡವಾಗಿ ಇರಲೋ ಮರವಾಗಿ ಬೆಳೆಯಲೋ ಎಂದು ಅದಿನ್ನೂ ತೀರ್ಮಾನಿಸದೆ ಇರುವುದು! ಬೆಳೆಯಲು ಬಿಟ್ಟರೆ ಇದು ಮರದಷ್ಟು ಬೆಳೆದರೂ, ಮರದ ಶಕ್ತಿಯಿಲ್ಲ ಇದಕ್ಕೆ. ಕೊಂಬುಗಳು ಗೊಂಚಲು ಗೊಂಚಲಾಗಿ ಇಳಿದರೂ ಅವನ್ನು ಕೊಯ್ಯಲು ದೋಟಿಯ ಸಹಾಯ ಬೇಕಾಗಬಹುದು. ಮರವೆಂದು ಮೇಲೆ ಹತ್ತಿದರೆ ಗೆಲ್ಲು ಹಿಸಿದು ಮನುಷ್ಯ ಕೆಳಬೀಳುವ ಅಪಾಯವಿದೆ.

ಇನ್ನೊಂದು ಸಮಸ್ಯೆಯೆಂದರೆ ಮರದಿಂದ ತಮ್ಮದೇ ನೂಲುಗಳಲ್ಲಿ ಪುಟ್ಟ ಮಕ್ಕಳಂತೆ ಕೆಳಕ್ಕೆ ನೇತಾಡುವ ಕಂಬಳಿ ಹುಳಗಳು. ಅವು ನುಗ್ಗೆ ಮರವನ್ನು ಹುಡುಕಿಕೊಂಡು ಬರುತ್ತವೆ. ಇದರ ಅರಿವಿಲ್ಲದ ಕೆಳಗೆ ಹೋಗುವ ಮನುಷ್ಯರ ತಲೆಮೇಲೆಈ ಹುಳಗಳು ಆಕಸ್ಮಿಕವಾಗಿ ಬೀಳಬಹುದು! ಬಿದ್ದರೆ ಬಿದ್ದ ಜಾಗದಲ್ಲಿ ತುರಿಕೆ ಖಂಡಿತ. ನುಗ್ಗೆ ಬಿತ್ತಿನಿಂದ ಹುಟ್ಟುವುದಿಲ್ಲ; ಕಾಂಡದಿಂದ ಪ್ರಸರಣಗೊಳ್ಳುತ್ತದೆ. ಇದಕ್ಕೆ ಹೆಚ್ಚೇನೂ ಆರೈಕೆ ಬೇಡವಾದ ಕಾರಣ ನುಗ್ಗೆ ಮರ ಅನಾಥವಾಗಿ ಒಂದೆಡೆ ನಿಂತುಕೊಂಡಿರುತ್ತದೆ; ಕಾಯಿ ಬಿಡುವಾಗಲೇ ಜನರು ಅದರ ಕಡೆ ನೋಡುವುದು! ಆಗ ಅದು ಎಲ್ಲರಿಗೂ ಬೇಕು, ನೆರೆಯವರಿಗೂ ಹೊರೆಯವರಿಗೂ.

ಎಲ್ಲ ತರಕಾರಿಗಳೂ ಒಂದೊಂದು ತರ, ಅಲಸಂಡೆಯದು (ಹವ್ಯಕ: ಅಳತ್ತೊಂಡೆ) ಇನ್ನೊಂದು ತರ. ಸುಮಾರು ಒಂದಡಿ ಉದ್ದದ ಆಚೀಚೆ ಇರುವ ಇದರ ಕೊಂಬು (ಕೋಡು) ತುಂಬ ಉದ್ದಕ್ಕೂ ಬಿಳಿಯಬಿತ್ತುಗಳು. ಒಣ ಬಿತ್ತುಗಳಿಂದಲೇ ಇದನ್ನು ಬೆಳೆಸುವುದು. ಇದರಲ್ಲಿ ದೊಡ್ಡ ತರದ್ದು, ಮಧ್ಯಮ ತರದ್ದು, ಚಿಕ್ಕ ತರದ್ದು ಎಂಬ ತಳಿಗಳಿವೆ. ಬಿಳಿ ಹಸಿರು ಬಣ್ಣ ಸಾಮಾನ್ಯ, ಆದರೆ ನೇರಳೆ ಬಣ್ಣದ್ದೂ ಇದೆ. ಇದನ್ನು ನೆಲದಲ್ಲೂ ಅಲ್ಲ, ಆಕಾಶದಲ್ಲೂ (ಚಪ್ಪರದಲ್ಲೂ) ಅಲ್ಲ ಎಂಬಂತೆ ಗೂಟಗಳನ್ನೂರಿ ಅವುಗಳ ಸುತ್ತ ಒಂದು ಪೊದೆಯಾಗಿ ಬೆಳೆಯುವಂತೆ ಮಾಡುತ್ತಾರೆ. ಅಲಸಂಡೆ ಕಂಡರೆ ಮಕ್ಕಳಿಗಿಷ್ಟ, ಸುಟ್ಟು ಸುಲಿದು ಅಥವಾ ಹಸಿಯಾಗಿ ಸುಲಿದು ಬಿತ್ತುಗಳನ್ನು ತಿಂದುಬಿಡುತ್ತಾರೆ.

ನೆಲದಲ್ಲೂ ಅಲ್ಲ, ಆಕಾಶದಲ್ಲೂ ಅಲ್ಲ, ಮಧ್ಯಮ ಸ್ಥಿತಿಯಲ್ಲಿ ಬೆಳೆಯುವ ಬೂದುಗುಂಬಳ, ಸಿಹಿಗುಂಬಳ (ಚೀನಿಕಾಯಿ, ಹವ್ಯಕ: ಕೆಮ್ಮುಂಡೆ), ಸೋರೆಕಾಯಿಗಳಿವೆ ಸೋರೆಗೆ (ಹವ್ಯಕ: ಸೊರೆಕ್ಕಾಯಿ) ಚಪ್ಪರ ಹಾಕುವುದೂ ಸಾಧ್ಯ. ಇವೆಲ್ಲವೂ ದೊಡ್ಡ ದೊಡ್ಡ ಕಾಯಿಗಳನ್ನು ಬಿಡುವ ಕಾರಣ ಚಪ್ಪರದಲ್ಲಿ ನಿಲ್ಲಲಾರವು. ಆದರೆ ನೆಲದಲ್ಲಿ ಯಾಕಿಲ್ಲ ಎಂದು ಕೇಳಬಹುದು. ಲತಾ ಮೂಲಗಳಾದ ಇವು ಬೀಜ ಟಿಸಿಲೊಡೆದು, ನಾಲ್ಕು ಮಾರು ನೆಲದಲ್ಲೆ ಬೆಳೆದೊಡನೆ, ಎಂದರೆ ವಯಸ್ಸಿಗೆ ಬಂದೊಡನೆ, ಇವುಗಳಿಗೆ ಅಡರುಗಳ ಆಧಾರ ಕೊಡಬೇಕು, ಹಾಗಿದ್ದರೇನೇ ಬಳ್ಳಿಗಳು ಹೂ ಬಿಟ್ಟು ಕಾಯಿಗಳಾಗುತ್ತವೆ. ಅಡರು ಕೊಡದಿದ್ದರೆ ಬಳ್ಳಿಗಳು ಮಣ್ಣಿನ ಸಂಪರ್ಕದಲ್ಲಿ ಗಂಟು ಗಂಟಿಗೆ ಬೇರು ಬಿಡುತ್ತ, ಬೇರು ಬಿಟ್ಟಲ್ಲೆಲ್ಲ ಎಳತಾಗಿಯೆ ಇದ್ದು ಬಳ್ಳಿಗಳು ಬಲಿಯದೆ ಹೂ ಬಿಡಲಾರವು.

ಮಣ್ಣಿನ ಸಾಲುಗಳಲ್ಲಿ ಬೆಳೆಸುವ ಸೌತೆ, ಮುಳುಸೌತೆಗಳಿಗೂ ಇದೇ ಕಾರಣಕ್ಕೆ ಅಡರಿನ ಆಧಾರ ಬೇಕು. ಇದನ್ನೆಲ್ಲ ನಮ್ಮ ಹಿರಿಯರು ಯಾರಿಂದ, ಎಷ್ಟು ಪ್ರಯೋಗಗಳ (ಸೋಲು ಮತ್ತು ಗೆಲುವುಗಳ) ನಂತರ ಕಲಿತುಕೊಂಡರು, ಒಬ್ಬರ ಜ್ಞಾನ ಹೇಗೆ ಇತರರಿಗೆ ಪ್ರಸರಣಗೊಂಡಿತು ಎಂದು ಯೋಚಿಸಿದರೆ ದಿಗ್ಭ್ರಮೆಯಾಗುತ್ತದೆ!

ಬೂದುಗುಂಬಳಗಾಯಿ! ಒಮ್ಮೆ ಹೇಳಿ ನೋಡೋಣ. ಬಾಯಿ ತುಂಬುತ್ತದೆ ಅಲ್ಲವೇ? ತರಕಾರಿಗಳಲ್ಲೆಲ್ಲ ಅತಿ ದೊಡ್ಡ ಕಾಯಿ ಇದು. ಪ್ರಾಣಿಗಳಲ್ಲಿ ಆನೆ ಇದ್ದ ಹಾಗೆ. ಆದ್ದರಿಂದ ‘ಬೂದುಗುಂಬಳಗಾಯಿ’ ಅನ್ವರ್ಥ ನಾಮ. ಕುಂಬಳ ಕಾಯಿ ಕದ್ದ ಎಂದರೆ ಬೆನ್ನು ಮುಟ್ಟಿ ನೋಡಿಕೊಂಡ ಎಂದು ಕನ್ನಡ ಜನ ಇದನ್ನು ಗಾದೆ ಮಾತಿನಲ್ಲಿ ಕೊಂಡಾಡಿದ್ದಾರೆ. ಇದರ ಮೈಯಲ್ಲಿ ಬೂದಿಯಂಥ ಪುಡಿ ಇದ್ದು, ಹೆಗಲಿಗೇರಿಸಿದರೆ ಹೆಗಲ ಮೇಲೆ ಬಿಳಿಬಣ್ಣ ಉಳಿಯುವುದು ಖಂಡಿತ. ಈ ಗಾದೆಯಿಂದ ನಮ್ಮ ಹಿಂದಣ ಕನ್ನಡ ಜನರ ಜೀವನದ ಬಗ್ಗೆ ಸಾಕಷ್ಟು ತಿಳಿಯುತ್ತದೆ ಅಲ್ಲವೇ? ಒಂದೇ ಕೈಯಿಂದ ಕುಂಬಳ ಕಾಯಿಯನ್ನು ಎತ್ತುವುದಕ್ಕೆ ಆಗುವುದಿಲ್ಲ ಎನ್ನುವ ಮಾತೂ ಇದೆ. ಇರಲಿ, ನಮಗೆ ಬೇಕಾದ್ದು ಕುಂಬಳ ಕಾಯಿ, ಸಾಂಬಾರಿಗೆ, ಹುಳಿ ಬೆಂದಿಗೆ, ಸಾಸಿವೆಗೆ, ಮೇಲೋಗರಕ್ಕೆ, ಹಲ್ವಕ್ಕೆ! ಕಾಯಿಯ ದಪ್ಪ ಸಿಪ್ಪೆಯನ್ನು (ಹವ್ಯಕ: ‘ಓಡು’) ಕತ್ತರಿಸಿ ಪಲ್ಯ ಕೂಡ ಮಾಡಬಹುದು. ನಮ್ಮ ಜನ ಯಾವುದನ್ನೂ ಪೋಲು ಮಾಡಲು ಬಿಡುವುದಿಲ್ಲ. ಕೂಷ್ಮಾಂಡ ಕಾಯಿ ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ. ನನಗೆ ಗೊತ್ತಿಲ್ಲ. ಅದನ್ನು ತಿಂದು ಬುದ್ಧಿವಂತನಾದವರನ್ನು ನಾನು ಕಂಡಿಲ್ಲ.

ತರಕಾರಿಗಳಲ್ಲಿ ಕುಂಬಳದ ಕುರಿತು ನನಗೆ ಹೆಚ್ಚು ಮಮತೆ ಇದೆ. ಆದರೆ ಇದನ್ನು ಯಾಕೆ ದೇವರ ಪೂಜೆಯಿಂದ ನಿಷಿದ್ಧ ಮಾಡಿದ್ದಾರೋ ತಿಳಿಯದು. ಅಪರ ಕ್ರಿಯೆಗಳಿಗೆ, ಮಾಟಮಂತ್ರಗಳಿಗೆ ಮಾತ್ರ ಇದು ಸಲ್ಲುವಂಥದು. ಅಲ್ಲದೆ ಹೊಸ ಮನೆಗಳನ್ನು ಕಟ್ಟಿಸುವಾಗ ಎಲ್ಲರಿಗೂ ಕಾಣುವ ಹಾಗೆ ಎದುರಿಗೇ ಇದನ್ನು ತೂಗಿ ಹಾಕುವುದಿದೆ, ಜನರ ಕೆಟ್ಟ ದೃಷ್ಟಿ ತಾಕದಿರಲಿ ಎಂದು. ಕುಂಬಳದಲ್ಲೂ ಒಂದು ಚಿಕ್ಕ ಫಲ ಬಿಡುವ ತಳಿಯಿದೆ; ಕಾಶಿ ಕುಂಬಳವೆಂಬ ಹೆಸರಿನ ಇದು ತುಂಬಾ ಗಟ್ಟಿಯಾಗಿದ್ದು ಹೆಚ್ಚು ಜನಪ್ರಿಯವಲ್ಲ. ಇನ್ನು ನಮ್ಮೂರಿನ ಪಶ್ಚಿಮಕ್ಕಿರುವ ಪೇಟೆಯ ಹೆಸರು ಕುಂಬಳೆ; ಕುಂಬಳ ಕಾಯಿಗೂ ಇದಕ್ಕೂ ಸಂಬಂಧವಿರುವ ಹಾಗೆ ನನಗನಿಸುವುದಿಲ್ಲ. ಜವುಗು ಮಣ್ಣಿನ ಈ ಪ್ರದೇಶದಲ್ಲಿ ಬೆಂಡೆ, ಬಚ್ಚಂಗಾಯಿ, ಕುಂಬಳ ಫಲವತ್ತಾಗಿ ಬೆಳೆಯುತ್ತವೆ ನಿಜ.

ಕುಂಬಳ ಕಾಯಿ ಎಷ್ಟೇ ಬೆಳೆದರೂ ಒಳಗೆ ಬಿಳಿಯಾಗಿಯೇ ಇರುತ್ತದೆ. ಅದು ಹಣ್ಣಾಗುವುದು ಎಂದಿಲ್ಲ. ಆದರೆ ಇದರ ದಾಯಾದಿಯಂತಿರುವ ಚೀನಿಕಾಯಿ (ಸಿಹಿಗುಂಬಳ) ಹಾಗಲ್ಲ, ಅದು ಎಳವೆಯಲ್ಲಿ ಒಳಗೆ ಬಿಳಿಯಾಗಿರುತ್ತದೆ, ಬೆಳೆದಂತೆ ಕೆಂಪಾಗುತ್ತದೆ. ಬೆಳೆದ ಬೂದುಗುಂಬಳವನ್ನಾಗಲಿ, ಚೀನಿ ಕಾಯಿಯನ್ನಾಗಲಿ ಕೊಯ್ದು ಕೆಲವು ತಿಂಗಳ ತನಕ ಹಾಗೇ ಇಟ್ಟುಕೊಳ್ಳಬಹುದು. ಕುಂಬಳ ಕಾಯಿ ಕರೆಯುವ ತನಕ ಮಲಗಿರುತ್ತದೆ, ಚೀನಿ ಕಾಯಿ ಕೂತಿರುತ್ತದೆ! ಇನ್ನು ಚೀನಿ ಕಾಯಿಯನ್ನೂ ಎಳವೆಯಲ್ಲೇ ಕೊಯ್ದು ಸಿಹಿ ಬೆಂದಿ ಮಾಡಲು ಬಹುದು, ಒಂದಿಗೆ ನೆನೆ ಹಾಕಿದ ಬಿಳಿ ಹೆಸರು ಕಾಳುಗಳನ್ನು ಸೇರಿಸಿ ಬೇಯಿಸಿದರೆ ಉತ್ತಮ. ಬೆಳೆದು ಕೆಂಪಾದ ನಂತರ ಚೀನಿ ಕಾಯಿಯ ಸಾಂಬಾರು, ಕೊದಿಲು ಮಾಡುತ್ತಾರೆ – ತೊಗರಿ ಬೇಳೆ ಹಾಕಿದರೆ ಸಾಂಬಾರು, ಇಲ್ಲದಿದ್ದರೆ ಕೊದಿಲು.

ಕುಂಬಳ ಕಾಯಿಯ ಮಹಿಮೆಗಳು ಚೀನಿ ಕಾಯಿಗೆ ಇಲ್ಲ. ಆದರೆ ಅದರ ತೊಟ್ಟಿಗೆ ವಿಷಹಾರಿ ಗುಣವಿದೆಯೆಂದು ಕೇಳಿದ್ದೇನೆ; ಇದಕ್ಕೆ ವಿರುದ್ಧವಾಗಿ, ಕುಂಬಳ ಕಾಯಿ ವಿಷಪ್ರಚೋದಕ. ಅಲ್ಲದೆ ಕಾಯಾಗದ (ಕುಂಬಳದಲ್ಲಾಗಲಿ ಚೀನಿಯಲ್ಲಾಗಲಿ ಎಲ್ಲ ಹೂಗಳಲ್ಲೂ ಕಾಯಿ ಬಿಡುವುದಿಲ್ಲ) ಚೀನಿಯ ಕಡು ಅರಸಿನ ಬಣ್ಣದ ಹೂವನ್ನು ಕೊಯ್ದು ಬೇಯಿಸಿ ತೆಂಗಿನ ಕಾಯಿ ತುರಿಯೊಂದಿಗೆ ಅರೆದು ಪಚ್ಚಡಿ ಮಾಡುವುದಿದೆ. ಈ ಭಾಗ್ಯ ಕುಂಬಳ ಕಾಯಿಯ ಹೂವಿಗೆ ಇಲ್ಲ.

ಸೋರೆಕಾಯಿಯನ್ನು ಚಪ್ಪರದಲ್ಲಿ ಬೆಳೆಸಬಹುದಾದರೂ, ಅದು ಕೂಡ ಗಾತ್ರದಲ್ಲಿ ದೊಡ್ಡದಾದುದರಿಂದ ಅದನ್ನು ಕುಂಬಳ, ಚೀನೀ ಕಾಯಿಯಂತೆ ಅಡರಿನ ಮೇಲೆ ಬೆಳೆಸುವುದೇ ಕ್ಷೇಮ. ವಾಣಿಜ್ಯ ಮಟ್ಟದಲ್ಲಿ ಬೆಳೆಯುವವರು ಮಾತ್ರ ಬಹುಶಃ ಚಪ್ಪರ ಉಪಯೋಗಿಸಬಹುದು. ಇದರ ಜನಪ್ರಿಯ ತಳಿಯಲ್ಲಿ ಕಾಯಿ ಉದ್ದಕೆ ಒಂದೆರಡು ಅಡಿ ಬೆಳೆಯುತ್ತದೆ – ಪುರಾಮಾನವರು ಜಗಳಕ್ಕೆ ಬಳಸುವ ದೊಣ್ಣೆಯಂತೆ! ಇನ್ನೊಂದು ತಳಿಯಲ್ಲಿ ಕಾಯಿ ದುಂಡಗೆ ಸಿಹಿಗುಂಬಳದ ಗಾತ್ರದಲ್ಲಿ ಇರುತ್ತದೆ. ರುಚಿಯಲ್ಲಿ ಉದ್ದದ ಕಾಯಿಯೂ ದುಂಡನೆ ಕಾಯಿಯೂ ಒಂದೇ. ಸೋರೆಕಾಯಿಯನ್ನು ಪದಾರ್ಥಕ್ಕೆ ಉಪಯೋಗಿಸಲು ಎಳವೆಯಲ್ಲೇ ಕೊಯ್ಯಬೇಕು. ರುಬ್ಬಿದ ಅಕ್ಕಿ ಹಿಟ್ಟಿನೊಂದಿಗೆ ಇದರ ಚೂರುಗಳನ್ನು, ಹಾಗೂ ಎಳತಾಗಿದ್ದರೆ ಬಿತ್ತು ಸಮೇತ ಬೆರೆಸಿ ಸೆಕೆಗಿರಿಸಿ ಇಡ್ಲಿ ಮಾಡುವುದೂ ಇದೆ. ಮತ್ತು ಸೋರೆಕಾಯಿ ಪಾಯಸ ಕೂಡಾ ಬಹಳ ಸ್ವಾದಿಷ್ಟ.

ಸೋರೆಕಾಯಿಯ ಕುರಿತು ಹೇಳುವಾಗ ಅದರ ಉದ್ದ ಭಾಷೆಯ ಕಾಯಿಯಿಂದ ಸಿಗುವ ಬುರುಡೆಯ ಕುರಿತೂ ಹೇಳಬೇಕು. ಸೋರೆಯ ಬಿತ್ತು ತೆಗೆದಿಡಲು ಕಾಯಿಯನ್ನು ಬಳ್ಳಿಯಲ್ಲೆ ಒಣಗುವ ತನಕ ಬಿಡಬೇಕಾಗುತ್ತದೆ. ಆಗ ಕಾಯಿಯ ಮೈ ಒಣಗಿ ಗಟ್ಟಿಯಾಗುತ್ತದೆ. ಇದನ್ನೇ ಒಂದು ಬುರುಡೆಯಾಗಿ ಮಾಡುವುದು ಸಾಧ್ಯ. ಒಣಗಿದ ಕಾಯೊಳಗಿಂದ ಬಿತ್ತುಗಳನ್ನು ತೆಗೆದರೆ ಉಳಿಯುವುದೇ ಬುರುಡೆ. ಇದಕ್ಕೆ ಬಿರಡೆಯನ್ನೂ ಮಾಡಿ ಹಾಕಿಕೊಳ್ಳ ಬಹುದು. ಬಹುಶಃ ಒಂದು ಕಾಲದಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಶೇಖರಿಸಲು ಇದನ್ನು ಬಳಕೆ ಮಾಡುತ್ತಿದ್ದರು. ನನ್ನ ಬಾಲ್ಯದಲ್ಲಿ ನಾನಿದನ್ನು ಕಂಡುದು ನಮ್ಮ ತೋಟದಲ್ಲಿದ್ದ ಒಂದು ಎತ್ತರದ ತಾಳೆ ಮರದಿಂದ ಕಳ್ಳು ಭಟ್ಟಿಯಿಳಿಸಲು ಬರುತ್ತಿದ್ದ ಒಬ್ಬ ಮೂರ್ತೆದಾರನ ಸೊಂಟದಲ್ಲಿ. ಮರದ ಕೊಂಬೆಯಿಂದ ಕಳ್ಳು ತುಂಬಿಸಿ ತರಲು ಇದು ಆದರ್ಶ ಬುರುಡೆ! ಕೆಲವು ಸಲ ಅವನ ಬಳಿ ಇಂಥ ಎರಡೆರಡು ಬುರುಡೆಗಳಿರುತ್ತಿದ್ದುವು. ದೇವರೆ, ಅಪಾರ ನಿನ್ನ ಕರುಣೆ!

ಅಡರಿನ ಮೇಲೆ ಸಾಲು ಸಾಲಾಗಿ ಬೆಳೆಸುವ ಇನ್ನೆರಡು ತರಕಾರಿಗಳು ಸೌತೆ ಮತ್ತು ಮುಳುಸೌತೆ. ಎಳೆಯ ಸೌತೆಯನ್ನು ಕತ್ತರಿಸಿ, ಉಪ್ಪು ಬೆರೆಸಿ ಇರಿಸಿಕೊಂಡು ಆಮೇಲೆ ಬೇಕಾದಾಗ ಅದಕ್ಕೆ ಅರೆದ ಮೆಣಸಿನ ಮುದ್ದೆಯನ್ನು ಬೆರೆಸಿ ಉಪ್ಪಿನಕಾಯಿ ಮಾಡುವುದಿದೆ – ಬಹಳ ಸ್ವಾದಿಷ್ಟ, ಇದನ್ನು ಹಲ್ಲಿನಿಂದ ಜಗಿಯುವಾಗ ಆಗುವ ‘ಕರಕ್’ ಶಬ್ದ ಇದರ ಡೆಲಿಕೆಸಿಯ ಒಂದು ಭಾಗ! ಈಗ ಇಂಥ ಸಾಧನಗಳೆಲ್ಲ ಹಳ್ಳಿಗಳಿಂದ ಹೊರಟು ಹೋಗಿರುವುದರಿಂದ ಇದನ್ನು ಇಲ್ಲಿ ಕೊಡುತ್ತಿದ್ದೇನೆ. ಇನ್ನು ಸೌತೆ ಹಣ್ಣಾದ ಮೇಲೆಯೂ (ಹೊರಗೆ ಹಣ್ಣಿನಂತೆ ಕಂಡರೂ ಒಳಗೆ ಹಸಿಯಾಗಿಯೆ ಇರುತ್ತದೆ) ಉಪ್ಪಿನಕಾಯಿ ಮಾಡಬಹುದು (‘ದೋಸಕಾಯಿ’ ಉಪ್ಪಿನಕಾಯಿ ತೆಲುಗರಿಗೆ ತುಂಬ ಇಷ್ಟ), ಆದರೆ ತಾತ್ಕಾಲಿಕವಾಗಿ ಮಾತ್ರ, ಅವಧಿ ಕಳೆದರೆ ಅದು ಹಳಸುತ್ತದೆ. ಸೌತೆಕಾಯಿಯ ಪಲ್ಯ, ಸಾಂಬಾರು, ಮೇಲೋಗರ (ಹೆಚ್ಚಾಗಿ ತೊಂಡೆಕಾಯಿ ಜತೆ) ಮಾಡುತ್ತಾರೆ. ಪದಾರ್ಥದಲ್ಲಿ ಇದನ್ನು ‘ಚೋಲಿ’ (ಸಿಪ್ಪೆ) ಸಮೇತ ತಿನ್ನಬೇಕು ಎನ್ನುತ್ತಾರೆ: ಚೋಲಿ ಮತ್ತು ‘ಗುಳ’ದ ನಡುವೆ ಅಮೃತವಿದೆಯಂತೆ! ಅಡಗಿ ಕುಳಿತುಕೊಳ್ಳುವುದಕ್ಕೆ ಅಮೃತಕ್ಕೆ ಬೇರೆ ಜಾಗವಿಲ್ಲವೇ ಎಂದು ಕೇಳಿದರೆ ಅದು ಉದ್ಧಟತನವಾಗುತ್ತದೆ. ಬೇಕಾದರೆ ತಿನ್ನಿ, ಇಲ್ಲದಿದ್ದರೆ ಬಿಡಿ!

ವರ್ಷದಷ್ಟು ಬಾಳಿಕೆ ಬರುವ ಹಣ್ಣು ಸೌತೆಯನ್ನು ಮನೆಯಲ್ಲಿ ದಾಸ್ತಾನು ಮಾಡುವುದೂ ಒಂದು ಕಲೆ. ಕಂಭಗಳಿರುವ ಮನೆ ಮತ್ತು ಕೊಟ್ಟಿಗೆಗಳಲ್ಲಿ ಇವನ್ನು ಬಾಳೆ ನಾರುಗಳಲ್ಲಿ ಸುತ್ತಲೂ ತಾಯಿತದಂತೆ ಒಂದರ ಮೇಲೆ ಒಂದರಂತೆ ಕಟ್ಟಲಾಗುತ್ತದೆ. ಇದು ಬರೇ ಜಾಗ ಕಾಪಾಡುವ ದೃಷ್ಟಿಯಿಂದಲೇ ಅಲ್ಲ, ಇಲಿ ಹೆಗ್ಗಣಗಳಿಂದ ರಕ್ಷಿಸುವುದಕ್ಕೆ ಕೂಡ. ಇಲ್ಲಿ ಹೇಳಬೇಕಾದ ಇನ್ನೊಂದು ವಿಷಯ: ಬೇಸಿಗೆಯಲ್ಲಿ ಸೌತೆಯನ್ನು ನಡುವಿನಿಂದ ಕತ್ತರಿಸಿ, ತೆಂಗಿನ ಕಾಯಿಯಂತೆ ತುರಿದು, ಅದಕ್ಕೆ ಸ್ವಲ್ಪ ತೆಂಗಿನ ತುರಿಯನ್ನೂ ಬೆಲ್ಲವನ್ನೂ (ಬೇಕಿದ್ದರೆ ಚೂರು ಉಪ್ಪನ್ನೂ) ಸೇರಿಸಿ, ತುರಿದು ಖಾಲಿಯಾದ ಸೌತೆಯ ‘ಕಪ್ಪಿ’ನಿಂದಲೇ ತಿನ್ನುವುದು – ಕೆಳಗೆ ಶೇಖರವಾದ ರಸವನ್ನು ಹೀರುವುದು. ಇದು ಉಷ್ಣ ಪರಿಹಾರಕ ಎಂದು ಲೆಕ್ಕ, ರುಚಿಕರವಂತೂ ಹೌದು.

ಮುಳು ಸೌತೆ (ಮುಳ್ಳು ಸೌತೆ) ಸೌತೆ ಕಾಯಿಯ ತಮ್ಮ, ಮಿಡಿಯಾಗಿರುವಾಗ ಇದನ್ನು ‘ಕರುಗಳ ಮೆಡಿ’ ಎಂದು ಹವ್ಯಕದಲ್ಲಿ ಅನ್ನುವುದಿದೆ – ಪ್ರೀತಿಯಿಂದ. ತರಕಾರಿ ಭಕ್ಷಕರಾದ ಕುದುಕ (ನರಿ) ಗಳಿಗೆ ಇದು ಪಂಚಪ್ರಾಣ. ಸಾಲಿನಲ್ಲಿ ಬೆಳೆಯಲು ಬಿಟ್ಟರೆ ಅಣ್ಣ ಸೌತೆಗಿಂತ ಇದು ದೊಡ್ಡದಾಗುತ್ತದೆ. ಆದರೆ ಬಿಡಬೇಕಲ್ಲ! ಯಾಕೆಂದರೆ ಇದು ಎಳತಿನಲ್ಲೇ ಹಸಿಯಾಗಿ, ಬೇಕಿದ್ದರೆ ಹೋಳು ಮಾಡಿ ಸ್ವಲ್ಪ ಉಪ್ಪು ಸೇರಿಸಿ, ತಿನ್ನಲು ರುಚಿ, ಪಲ್ಯ ಮಾಡುವುದು ಅಪರೂಪ. ಬೆಳೆದ ಮುಳ್ಳು ಸೌತೆಯನ್ನು ಪಾಯಸ ಮಾಡುವುದೂ ಇದೆ. ಹಣ್ಣಾದ ಮುಳ್ಳು ಸೌತೆ ಐದಾರು ತಿಂಗಳು ಉಳಿಯಬಹುದು. ಎಳವೆಯಲ್ಲಿ ಇದರ ಮೈ ತುಂಬಾ ಗುಂಡು ಸೂಜಿಯ ಗುಂಡಿನಂಥ ಹುಸಿ ಮುಳ್ಳುಗಳಿರುವುದರಿಂದ ಇದರ ಹೆಸರಿಗೆ ಮುಳ್ಳು ಎಂಬ ಪದ ಅಂಟಿಕೊಂಡಿದೆ. ಇಂಥ ತರಕಾರಿಗಳನ್ನು ಮತ್ತು ನಿಂಬೆ, ಮುಸುಂಬಿ ಮುಂತಾದ ಹಣ್ಣುಗಳನ್ನು ಕತ್ತರಿಸಿದಾಗಲೆಲ್ಲ ನನಗೆ ಪ್ರಕೃತಿಯ ಅಚ್ಚುಕಟ್ಟಾದ ‘ಪ್ಯಾಕೇಜಿಂಗ್ ಸಿಸ್ಟಮ್’ ಕಂಡು ವಿಸ್ಮಯವಾಗುತ್ತದೆ!

ಯಾವ ಸ್ಥಳವನ್ನೂ ಪೋಲು ಮಾಡದೆ ಬಿತ್ತುಗಳನ್ನು / ಕೋಶಗಳನ್ನು ಒಂದಕ್ಕೆ ಒಂದು ಒತ್ತೊತ್ತಾಗಿ ಜೋಡಿಸಿ ಕಟ್ಟಿಡಲಾಗಿದೆ. ಹೇಗಾಯಿತು ಇದೆಲ್ಲ?! ಹೇಗೋ ಆಯಿತು ಎಂದಷ್ಟೆ ಹೇಳಬಹುದು. ಆದರೆ ಈ ಗೃಹೋಪಯೋಗಿ ತರಕಾರಿ ತಳಿಗಳ ಬೆಳವಣಿಗೆಯಲ್ಲಿ ಮನುಷ್ಯನ ಹಿತಾಸಕ್ತಿಯ ಕೈವಾಡವಿದೆ ಎನ್ನುವುದನ್ನು ಊಹಿಸಬಹುದು. ಹೆಚ್ಚಿನ ಜಾತಿಯಲ್ಲೂ ಮನುಷ್ಯರಿಗೆ ನಿರುಪಯುಕ್ತವಾದ ತಳಿಗಳು ನೈಸರ್ಗಿಕವಾಗಿ ಇನ್ನೂ ಬದುಕುಳಿದಿರುವುದನ್ನು ಕಾಣಬಹುದು. ಉದಾಹರಣೆಗೆ, ಸೌತೆ ಜಾತಿಯಲ್ಲಿ ಕಿರಿದಾದ ಫಲ ಬಿಡುವ, ಆದರೆ ಅತ್ಯಂತ ಕಹಿಯಾದ ಒಂದು ತಳಿಯಿದೆ. ನಾವು ಬೆಳೆಸುವ ಸೌತೆ ಯಾದೃಚ್ಛವಾಗಿ ಸ್ಫೋಟಗೊಂಡು ಕಹಿರಹಿತವಾಗಿದ್ದು ಮನುಷ್ಯರಿಂದ ಬೇಕೆನಿಸಿ ಸ್ವೀಕೃತವಾದ ತಳಿಯಾಗಿರಬೇಕು. ಆದರೆ ಈ ಕಾಡು ಮತ್ತು ನಾಡಿನ ತಳಿಗಳು ಒಂದೇ ಜಾತಿಗೆ ಸೇರಿದುವು ಎಂದು ಧಾರಾಳವಾಗಿ ಊಹಿಸಿಕೊಳ್ಳಬಹುದು. ಮೃಗಗಳಲ್ಲಿಯೂ ಇದೇ ವಿದ್ಯಮಾನವನ್ನು ನೋಡುತ್ತೇವೆ: ಊರ ನಾಯಿ, ಕಾಡು ನಾಯಿ, ನಾಟಿ ಕೋಳಿ, ಕಾಡು ಕೋಳಿ ಮುಂತಾಗಿ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಈ ಕಥನ ಇನ್ನೂ ಇದೆಯೇ ಎಂದರೆ ವಾಸ್ತವದಲ್ಲಿ ಇನ್ನೂ ಇದೆ. ಬಹಳ ಇದೆ: ಬಸಳೆ, ಹರಿವೆ, ಕೆಸವಿನೆಲೆ (‘ಪತ್ರಡೆ!’) ಮುಂತಾದ ಎಲೆಗಳ ಆಕರ್ಷಕ ಕ್ಷೇತ್ರವಿದೆ; ಕೆಸವಿನ ಗಡ್ಡೆ, ಮುಂಡಿ ಗಡ್ಡೆ, ಕೇನೆ ಗಡ್ಡೆ (ಸುವರ್ಣ ಗಡ್ಡೆ), ಕೂರ್ಕೆ, ಗೆಣಸು ಮುಂತಾದ ‘ಗಡ್ಡೆ ಗೆಣಸು’ಗಳ ವಿಭಾಗವಿದೆ; ಹಲಸು, ಮಾವು, ನೆಲ್ಲಿ, ದೀವಿ ಗುಜ್ಜೆ, ಬಾಳೆ ಕಾಯಿಗಳಿವೆ – ಬಾಳೆ ದಿಂಡನ್ನೂ, ಗೊನೆಯ ಕೊನೆಯಲ್ಲಿರುವ ‘ಕುಂಡಿಗೆ’ಯನ್ನೂ ಪದಾರ್ಥಗಳಿಗೆ ಬಳಸುತ್ತೇವೆ. ಆದರೆ ಕಟ್ಟುನಿಟ್ಟಾಗಿ ಹೇಳುವುದಿದ್ದರೆ ಹಲಸು, ಮಾವು, ನೆಲ್ಲಿ, ದೀವಿ, ಬಾಳೆ ಮುಂತಾದುವು ‘ನೆಟ್ಟಿಕಾಯಿ’ಗಳಲ್ಲ. ಆದರೆ ಹಾಗೆ ಬಳಸುತ್ತೇವೆ. ಇನ್ನು ಕೆಲವು ಕಾಡುತ್ಪತ್ತಿಯಂಥವು: ಮೈಯೆಲ್ಲ ಮಿದುವಾದ ಮುಳ್ಳುಗಳಿರುವ, ಒಂದು ಮುಷ್ಟಿಯೊಳಗೆ ಬರುವ, ಮುದ್ದಾದ ಪೀರೆ ಕಾಯಿ ಇದೆ (ಇದನ್ನು ಹೈದರಾಬಾದ್ ತರಕಾರಿ ಮಾರ್ಕೆಟ್ ನಲ್ಲೂ ನಾವು ಕಂಡಿದ್ದೇನೆ, ಕೊಂಡಿದ್ದೇವೆ). ಮಳೆಗಾಲದ ನೀರಿನ ತೋಡಿನ ಬದಿಗೆ ತಾನೇ ತಾನಾಗಿ ಹುಟ್ಟಿ, ಬದಿಯ ಮರಗಳಿಗೆ ಬಳ್ಳಿಯಾಗಿ ಹಬ್ಬಿ ನೆಲ್ಲಿ ಕಾಯಿ ಗಾತ್ರದ ಉರುಟು ಕಾಯಿಗಳನ್ನು ಬಿಡುವ ಕಾನಕಲ್ಲಟೆ ಕಾಯಿ – ಸೌತೆಯ ಜತೆ ಮೇಲೋಗರ ಮಾಡಿದರೆ ಅಂದಿನ ಸ್ಪೆಶಲ್ ಎಂದು ಲೆಕ್ಕ.

ಆದರೆ ಅತ್ಯಂತ ವಿಶಿಷ್ಟವಾದ ಹಾಗೂ ರುಚಿಕರವಾದ ಕಳಲೆ ಬಗ್ಗೆ ಹೇಗೆ ಹೇಳದಿರಲಿ? ಇದು ಶತ ಪ್ರತಿಶತ ಕಾಡುತ್ಪತ್ತಿ, ಯಾಕೆಂದರೆ ಬಿದಿರಿನಬುಡದಿಂದ ಹುಟ್ಟುವ ಚಿಗುರು (ಕುರುಳೆ) ಕಳಲೆ ಎಂದರೆ. ಇದನ್ನು ಬಾಳೆ ಕುಂಡಿಗೆಯಂತೆ ಕೊಚ್ಚಿ, ಬೇಕಿದ್ದರೆ ಹಲಸಿನ ಬೇಳೆ ಚೂರುಗಳನ್ನು ಸೇರಿಸಿ, ಪಲ್ಯ ಮಾಡಬಹುದು (ಆದರೆ ಅದಕ್ಕೆ ಮೊದಲು ಕೊಯ್ದ ಕಳಲೆಯನ್ನು ಒಮ್ಮೆ ಬೇಯಿಸಿ ನೀರು ಚೆಲ್ಲಿಬಿಡಬೇಕು), ಉಪ್ಪಿನ ಕಾಯಿ ಮಾಡಿದರೆ ಅದು ಡೆಲಿಕೆಸಿಗಳಲ್ಲಿ ಡೆಲಿಕೆಸಿ!
ಇದನ್ನೆಲ್ಲ ನಮಗೆ ಕಲಿಸಿಕೊಟ್ಟ ಹಿರಿಯರಿಗೆ ನಾವು ಕೃತಜ್ಞರಾಗಿರಬೇಕು; ಆದರೆ ನಮ್ಮ ಕಿರಿಯರಿಗೆ ನಾವಿದನ್ನೆಲ್ಲ ಕಲಿಸಿಕೊಟ್ಟಿಲ್ಲವಲ್ಲ?

*****

ಕೆಲವೇ ವರ್ಷಗಳಲ್ಲಿ ನಾನು ಶಾಲೆ ಕಲಿಯಲೆಂದು ಸ್ವಲ್ಪ ತಡ ವಯಸ್ಸಿನಲ್ಲೆ ಸೋದರ ಮಾವನ ಮನೆಗೆ ಸ್ಥಳಾಂತರಗೊಂಡ ನಂತರ ಅಲ್ಲಿಯೂ ಆರಂಭದ ಕೆಲ ಕಾಲ ನನ್ನ ತರಕಾರಿ ಆಸಕ್ತಿ ಮುಂದುವರಿಯಿತು; ತರಕಾರಿ ಬೆಳೆಸಲು ಅಲ್ಲಿ ಭತ್ತದ ಗದ್ದೆಗಳಿದ್ದುವು. ಅನತಿ ಕಾಲದಲ್ಲೇ ಈ ಭತ್ತ ಕೃಷಿಕರ ಒಲವು ವಾಣಿಜ್ಯ ಬೆಳೆಯಾದ ಅಡಿಕೆಯ ಕಡೆ ವಾಲಿದ್ದರಿಂದ ಜನರ ಲಕ್ಷ್ಯವೆಲ್ಲ ಎಲ್ಲೆಲ್ಲಿ ಜಾಗವಿದೆಯೋ ಅಲ್ಲೆಲ್ಲ ಅಡಿಕೆ ಸಸಿ ನಡುವ ನಿಟ್ಟಿನಲ್ಲಿ ಸರಿಯಿತು. ನಾನು ಹೇಳುವುದು ಈ ಬದಲಾವಣೆಯ ಮೊದಲಿನ ಕಾಲ. ಮಾವನ ಊರಿನಲ್ಲಿ ನೀರಾಶ್ರಯವನ್ನು ಹೊಂದಿಕೊಂಡು ಮೂರು ತರದ ಗದ್ದೆಗಳಿದ್ದುವು: ನೀರು ಬೇಕಷ್ಟಿದ್ದು ವರ್ಷಕ್ಕೆ ಮೂರು ಬೆಳೆ ತೆಗೆಯುವ ಕೊಳಕ್ಕೆ ಗದ್ದೆ, ನೀರು ತಕ್ಕಷ್ಟೆ ಇದ್ದು ಎರಡು ಬೆಳೆ ತೆಗೆಯುವ ಸುಗ್ಗಿ ಗದ್ದೆ, ಮಳೆ ನೀರನ್ನು ಮಾತ್ರ ಆಶ್ರಯಿಸಿದ (ಒಣ) ಬೆಟ್ಟು ಗದ್ದೆ. ಇಂಥ ಬೆಟ್ಟು ಗದ್ದೆಗಳನ್ನು ಅವುಗಳ ಒಡಮಸ್ಥರು ಸಾಮೂಹಿಕ ತರಕಾರಿ ಬೆಳೆಗಾಗಿ ನೆರೆಕರೆಯವರಿಗೆ ಬಿಟ್ಟು ಕೊಡುತ್ತಿದ್ದರು. ಇದರಿಂದ ಎರಡೂ ಪಾರ್ಟಿಯವರಿಗೆ ಅನುಕೂಲವಿರುತ್ತಿತ್ತು; ಸ್ವಂತ ಜಾಗವಿಲ್ಲದವರಿಗೆ ಜಾಗ, ಗದ್ದೆ ಮಾಲಿಕರಿಗೆ ಹೇಗೂ ‘ಹಡಿಲು’ ಬೀಳುವ ತಮ್ಮ ಗದ್ದೆಗೆ ಸಲ್ಪ ಈಟು ಬಿದ್ದು ಜಾಗ ಹಸನಾಗಿರುವುದು. ಹೀಗೆ ಜಾಗ ಕಡ ಪಡೆದ ನೆರೆಯವರು ಒಡಮಸ್ಥರಿಗೆ ಏನೂ ಕೊಡುವ ಅಗತ್ಯವಿರಲಿಲ್ಲ; ಬೆಳೆಸಿದ ತರಕಾರಿಯೆಲ್ಲ ಬೆಳೆಸಿದವರಿಗೇ.

ಇಂಥ ಕೃಷಿಕರಲ್ಲಿ ನಾನು ಅದೆಂಥ ಉತ್ಸಾಹವನ್ನು ನೋಡಿದ್ದೇನೆ! ಪ್ರತಿದಿನ ಸಂಜೆ ತಂತಮ್ಮ ಗಿಡಗಳಿಗೆ ಆರೈಕೆ ಮಾಡಲು, ನೀರು ಚೇಪಲು ಆಯಾ ಮನೆಯವರು ಹೆಣ್ಣು ಗಂಡು ಮಕ್ಕಳು ಎನ್ನುವ ಭೇದವಿಲ್ಲದೆ (‘ಕುಂಞ ಕುಟ್ಟಿ ಸಂಸಾರ’) ಅಲ್ಲಿ ಬಂದು ಸೇರಿ ಕೆಲಸ ಮಾಡುವುದನ್ನು ನೋಡಲು ಒಂದು ಖುಷಿ. ಯಾರೂ ಜಗಳಾಡುವುದನ್ನು ನಾನು ಕಂಡಿಲ್ಲ. ಬಿತ್ತುಗಳು ಮೊಳಕೆಯೊಡೆಯುತ್ತವೆ, ಚಿಗುರುತ್ತವೆ, ಅವಕ್ಕೆ ಆಶ್ರಯ ಕೊಡಲು ಅಡೆರುಗಳನ್ನು ಇಡುತ್ತಾರೆ, ದಂಟುಗಳನ್ನು ಊರುತ್ತಾರೆ, ಸಸಿಗಳ ಬುಡಕ್ಕೆ ಸಾವಯವ (ರಾಸಾಯನಿಕ ಗೊತ್ತೇ ಇರಲಿಲ್ಲ!) ಗೊಬ್ಬರ ಹಾಕುತ್ತಾರೆ. ಸೌತೆ, ಮುಳ್ಳುಸೌತೆ, ಗೆಣಸು, ಅಳಸಂಡೆ, ಹರಿವೆ, ಅಮರೆ, ಬೆಂಡೆ, ಬದನೆ– ಅವು ಹೂ ಬಿಡುವುದನ್ನು ನೋಡುವುದು ಒಂದು ಚಂದ, ಎಳೆ ಕಾಯಿಗಳು ರೂಪು ತಳೆಯುವುದನ್ನು ನೋಡುವುದು ಇನ್ನೊಂದು ಚಂದ. ಮಕ್ಕಳ ಕೈಗೆ ಎಳೆ ಮುಳ್ಳುಸೌತೆ ಸಿಕ್ಕರೆ ಮುಳ್ಳು ಸೌತೆಯ ಜೀವನ ಸಾರ್ಥಕ! ಆದರೆ ಕುದುಕ (ನರಿ) ಕೂಡ ಕಾಯ್ತ ಇರುತ್ತದೆ!

ಸಾಯಂಕಾಲ ನೀರು ಚಿಮುಕಿಸಿದ ಇಡೀ ತರಕಾರಿ ಬೆಳೆಯನ್ನು ನೋಡುವುದು ಕಣ್ಣಿಗೆ ಹಬ್ಬ. ನನ್ನ ಮನಸ್ಸಿಗೆ ಬರುವ ಇನ್ನೊಂದು ಸೋಜಿಗ: ಹೇಳದೆ ಬರುವ ಅತಿಥಿಯಂತೆ, ಯಾರೂ ಬಿತ್ತದೆ, ಬೆಳೆಯದೆ, ಇತರ ತರಕಾರಿ ಗಿಡಗಳ ನಡುವೆ ಕೆಲವೆಡೆ ಕಾಣಿಸಿಕೊಳ್ಳುವ ಒಂದು ಜೋಳದ ಕೊಂಬು ಇಲ್ಲವೇ ರಾಗಿಯ ತೆನೆ. ಯಾರೂ ಕಿತ್ತು ಬಿಸಾಡುವುದಿಲ್ಲ ಅವನ್ನು; ಅವು ಹೊಲಕ್ಕೊಂದು ಶೋಭೆ. ಅದೇ ರೀತಿ, ಅನಿರೀಕ್ಷಿತವಾಗಿ, ಸೌತೆ ಸಾಲಿನಲ್ಲಿ ಮೂಡಿ ಬರುವುದು ಖರ್ಬೂಜ – ಸೌತೆಯ ಹಿರಿಯಣ್ಣ. ದಪ್ಪ ದಪ್ಪವಾಗಿ, ಗಟ್ಟಿಯಾಗಿ ಬೆಳೆಯುವ ಇದು ಪಲ್ಯಕ್ಕೆ ಬರುತ್ತದೆ.

ಇದನ್ನೆಲ್ಲ ಬರೆಯುತ್ತಿರುವಾಗ ನನ್ನ ಮನಸ್ಸಿನಲ್ಲಿ ನಿಚ್ಚಳವಾಗಿ ಮೂಡಿ ಬರುತ್ತಿರುವುದು ನಾನು ಆಶ್ರಯ ಪಡೆದ ನನ್ನ ಮಾವನವರ ಬೆಟ್ಟುಗದ್ದೆಯೇ. ಅಲ್ಲಿ ನಾವೂ ನಮಗಾಗಿ ಇರಿಸಿಕೊಂಡ ಪ್ಲಾಟಿನಲ್ಲಿ ತರಕಾರಿ ಬೆಳೆಸುತ್ತಿದ್ದೆವು. ಗದ್ದೆಯ ಒಂದು ಬದಿಯಲ್ಲಿ ಬಾವಿ ಇತ್ತು. ಬೇಸಿಗೆಯಲ್ಲಿ ಕೃಷಿ ನೀರಾವರಿಗೆಂದೇ ತೋಡಿದ ಬಾವಿ ಇದು. ಸಾಕಷ್ಟು ಆಳವಿತ್ತು, ನೀರೂ ಇತ್ತು. ಇದರಿಂದ ನೀರು ಮೊಗೆಯಲು ಏತದ ಏರ್ಪಾಡಿತ್ತು. ಏತಕ್ಕೆ ನಮ್ಮ ಕಡೆ ‘ಜೊಟ್ಟೆ’ ಎನ್ನುತ್ತಾರೆ. ಜೊಟ್ಟೆ ಎಂದರೆ ಒಂದು ತೊಟ್ಟಿಯೂ ಹೌದು, ಅದನ್ನು ಒಳಗೊಂಡ ಒಂದು ಸಸ್ಥಾಪನೆಯೂ ಹೌದು. ಜೊಟ್ಟೆಯನ್ನು ತಾಳೆ ಮರದ ತಮ್ಮನ ಹಾಗಿರುವ ಈಂದು ಇಲ್ಲವೇ ಈಚಲ ಮರದ ಕಡು ಕಠಿಣವಾದ ಬುಡದ ಬೊಡ್ಡೆಯಿಂದ ಕೆತ್ತಿ ತಯಾರಿಸುತ್ತಿದ್ದರು. ಇದನ್ನು ಮಾಡುವುದು ಪರಿಣಿತರಿಗಷ್ಟೇ ಸಾಧ್ಯ.

ಇದನ್ನು ಮಾಡುವ ಕರ್ಮಚಾರಿಗಳು ನಮ್ಮೂರಲ್ಲಿ ಇದ್ದರು. ಇದರ ಅಗಲವಾದ ಬಾಯಿಗೆ ತೂತು ಕೊರೆದು, ಕೋಲು ಸಿಕ್ಕಿಸಿ, ಹಗ್ಗ ಕಟ್ಟಿರುತ್ತಿದ್ದರು. ಹಾಗೂ ಇದು (ಜೊಟ್ಟೆ)ಇಡಿಬಿದಿರಿನ ಗಳುವೊಂದಕ್ಕೆ ಜೋಡಿಸಿರುತ್ತಿತ್ತು. ನೀರಿಗೆ ಇಳಿಸುವುದು, ನೀರಿನಿಂದ ಎತ್ತುವುದು ಈ ಕೆಳಗಿನ ಭಾಗವನ್ನು; ಮೇಲಿನ ಭಾಗ ತೊಲೆಯೊಂದಕ್ಕೆ (‘ದಡೆ’) ಜೋಡಿಸಿರುತ್ತಿತ್ತು. ಹಾಗೂ ಆ ತೊಲೆಯ ಇನ್ನೊಂದು ಕೊನೆಗೆ ಭಾರದ ಕಲ್ಲೊಂದನ್ನು ಬ್ಯಾಲೆನ್ಸಿಗೆಂದು ಕಟ್ಟಿರುತ್ತಿತ್ತು. ಇನ್ನು ಬಾವಿಯ ಸಂಕದಲ್ಲಿ ನಿಂತು ಜೊಟ್ಟೆಯನ್ನು ಕೆಳಗಿಳಿಸುವುದು, ನೀರು ತುಂಬಿಸಿ ಮೇಲೆತ್ತಿ ಅಲ್ಲಿ ಹಾಕಿದ ಪಾತಿಗೆ ಮಗಚುವುದು ಪ್ರಜ್ಞಾವಂತರ ಕೆಲಸ. ಮಕ್ಕಳಾದ ನಮ್ಮ ಕೆಲಸವೇನು? ತೊಲೆಗೆ ಕಲ್ಲು ಕಟ್ಟಿದ ಭಾಗದಲ್ಲಿ ಹಾಕಿದ ಹಗ್ಗ ಹಿಡಿದು, ಅದಕ್ಕೆಂದೇ ತಯಾರಿಸಿದ ಪುಟ್ಟದೊಂದು ಹೊಂಡಕ್ಕೆ ಹಾರುವುದು. ಆಚೆ ಬದಿಯಲ್ಲಿ ನೀರು ತುಂಬಿದ ಜೊಟ್ಟೆ ಸುಲಭವಾಗಿ ಮೇಲೆ ಬರಲು ಸಹಾಯ ಮಾಡುವುದಕ್ಕೆ ಈ ಉಪಾಯ.

ಕೆಲವರು ಎಷ್ಟು ಜೊಟ್ಟೆ ನೀರು ಮೇಲೆ ಬಂತು ಎಂದು ಎಣಿಸುವುದಕ್ಕೆ ಒಮ್ಮೊಮ್ಮೆ ಜಿಗಿದಾಗಲೂ, ಒಂದೊಂದು ಕಲ್ಲು ಪಕ್ಕದ ಕಿಂಡಿಯಲ್ಲಿ ಇರಿಸಿಕೊಳ್ಳುತ್ತಿದ್ದರು. ಹೀಗೆ ನಾನೂ ಎಷ್ಟೋ ಸಲ ಹೊಂಡಕ್ಕೆ ಜಿಗಿದಿದ್ದೇನೆ – ಅಳಿಲ ಸೇವೆ! ಬಲ್ಲವನೇ ಬಲ್ಲ ಬೆಲ್ಲದ ಸವಿಯ ಎಂಬಂತೆ ಈ ಕೆಲಸವನ್ನು ನಾನು ತುಂಬಾ ಆನಂದಿಸಿದ್ದೇನೆ. ಇದೆಂದೂ ಒಂದು ಹೊರೆಯೆಂದು ನನಗೆ ಅನಿಸಿಯೇ ಇರಲಿಲ್ಲ.

ಈ ಏತ ನೀರಾವರಿಯನ್ನು ಮೊದಲು ಯಾರು ಕಂಡುಹಿಡಿದರು, ಆಮೇಲೆ ಅದು ಹೇಗೆ ಹರಡಿತು ಎನ್ನುವುದು ಯಾರಿಗೂ ಗೊತ್ತಿಲ್ಲ. ಜನಪದ ಆ ಕುರಿತು ಯೋಚಿಸುವುದಿಲ್ಲ, ಅಂಥ ನೆನಪುಗಳನ್ನೂ ಅದು ಇಟ್ಟುಕೊಳ್ಳುವುದಿಲ್ಲ. ಆದರೆ ಏತ ಬಹಳ ಪುರಾತನವಾದುದು ಎಂಬುದರಲ್ಲಿ ಸಂದೇಹವಿಲ್ಲ. ಪುರಾತನ ಈಜಿಪ್ಟಿನಲ್ಲಿ ಫೇರೋಗಳ ಕಾಲದಲ್ಲೇ (ಕ್ರಿಸ್ತ ಪೂರ್ವ ಹಲವು ಶತಮಾನಗಳಷ್ಟು ಹಿಂದೆ) ನೈಲ್ ನದಿಯಿಂದ ದಂಡೆಗೆ ನೀರೆತ್ತಿ ಕೃಷಿ ಮಾಡಲು ಜನ ಈ ವಿಧಾನವನ್ನು ಉಪಯೋಗಿಸುತ್ತಿದ್ದರು ಎನ್ನುವುದು ಆ ಕಾಲದ ಭಿತ್ತಿ ಚಿತ್ರಗಳಿಂದ ತಿಳಿದು ಬರುತ್ತದೆ. ಏತವನ್ನು ಅವರು ‘ಶಾಡೂಫ್’ ಎಂದು ಕರೆಯುತ್ತಿದ್ದರು, ನಾವು ‘ಜೊಟ್ಟೆ’ ಎನ್ನುತ್ತೇವೆ. ನೀರು ಮೇಲೆತ್ತುವ ಯಾಂತ್ರಿಕ ಲಾಭ ಒಂದೇ. ಇದರ ಇನ್ನೊಂದು ರೂಪವೇ ರಾಟೆ, ಗೃಹ ಬಳಕೆಗೆ ಬಾವಿಯಿಂದ ನೀರೆತ್ತಲು ಬಳಸುವ, ಅಥವಾ ಇತ್ತೀಚಿನವರೆಗೆ ಬಳಸುತ್ತಿದ್ದ, ಇನ್ನೊಂದು ಅದ್ಭುತ ಶೋಧನೆ. (ಹಲವು ದೇವಾಲಯಗಳಲ್ಲಿ ಇಂಥ ಬಾವಿಗಳು ಇನ್ನೂ ಇವೆ—ದೇವರ ಪೂಜೆಗೆ ಬಾವಿ ನೀರೇ ಆಗಬೇಕು-ಬಹುಶಃ.)

ಇನ್ನು ತರಕಾರಿ ತೋಟವೆಂದ ಮೇಲೆ ಅಲ್ಲೊಂದು ಬೆರ್ಚಪ್ಪ ಇಲ್ಲದಿದ್ದರೆ ಹೇಗೆ? ಹಕ್ಕಿಗಳನ್ನು ಓಡಿಸುವುದಕ್ಕೆ ಬೆಂತರ, ದೃಷ್ಟಿ ನಿವಾಳಿಸುವುದಕ್ಕೆ ದೃಷ್ಟಿ ಬೊಟ್ಟು. ಈ ಬೆರ್ಚಪ್ಪ ಎನ್ನುವುದು ನನ್ನ ಪ್ರಜ್ಞಾಲೋಕದ ಒಂದು ಅವಿನಾ ಭಾವವೇ ಅಗಿದೆ, ನನ್ನ ಕತೆಗಳಲ್ಲಿ ಬರುತ್ತದೆ, ಕವಿತೆಗಳಲ್ಲಿ ಬರುತ್ತದೆ. ಈ ನನ್ನ ಬಾಲ್ಯಕಾಲದ ಸ್ನೇಹಿತನ ಕುರಿತು ನಾನು ಈಗಾಗಲೇ ಅನೇಕ ಕಡೆ ಬಣ್ಣಿಸಿರುತ್ತ ಮತ್ತೆ ಇಲ್ಲಿ ಆ ಕೆಲಸ ಮಾಡುವುದಿಲ್ಲ. ಬೆರ್ಚಪ್ಪ ನನ್ನನ್ನು ಕ್ಷಮಿಸಲಿ!

ನನ್ನ ತರಕಾರಿ ಬಾಂಧವ್ಯದ ಮೂರನೇ ಹಂತ ಹೈದರಾಬಾದಿನಲ್ಲಿ, ನಾವು (ನಾನು ಮತ್ತು ನಿರ್ಮಲ) ಅಲ್ಲಿಗೆ ಹೋಗಿ ನೆಲಸಿದ ಆರಂಭದ ಎರಡು ಮೂರು ವರ್ಷ. ಹೊಸ ಕ್ವಾರ್ಟರ್ಸ್, ಮನೆಯ ಮೂರೂ ಕಡೆ ಹೊಸ ಮಣ್ಣು, ಸಾಕಷ್ಟು ನೀರು, ಬಿಸಿಲು. ಏನಾದರೂ ಬೆಳೆಸಬೇಕೆನ್ನುವ ನಮ್ಮ ತಾರುಣ್ಯದ ಉತ್ಸಾಹ. ಹೂ ಬೆಳೆಸಿದೆವು, ತರಕಾರಿ ಬೆಳೆಸಿದೆವು, ಹುಲ್ಲು ಕೂಡ ಬೆಳೆಸಿದೆವು. ನಾವು ಬೆಳೆಸಿದ ಎಲ್ಲಾ ಹೂವುಗಳ ನೆನಪು ನನಗೀಗ ಇಲ್ಲ; ದಾಸವಾಳ, ಜರ್ಬರ, ಸೂರ್ಯಕಾಂತಿ, ಗುಲಾಬಿ, ಏಸ್ಟರ್, ಬಾಲ್ಸಮ್, ಮಲ್ಲಿಗೆ, ಕನಕಾಂಬರ, ಚೆಂಡು ಮಲ್ಲಿಗೆ, ಸೇವಂತಿಗೆ, ಶಂಖಪುಷ್ಪ, ಲಂಬನ, ಡೇಲಿಯ, ಹೋಲಿಹಾಕ್ಸ್ ಇದ್ದುವು.

ನಿರ್ಮಲ ಒಮ್ಮೆ ಊರಿನಿಂದ ಸುರುಳಿ ಹೂವಿನ (ವಾಟರ್ ಲಿಲಿ) ಗಡ್ಡೆಯನ್ನು ತಂದು ತಂಪಿನ ಜಾಗದಲ್ಲಿ ನಟ್ಟಿದ್ದಳು. ಅದು ಕೂಡ ಚಿಗುರಿ ಬೆಳೆದು ಸ್ವಲ್ಪ ಕಾಲ ಹೂ ಬಿಟ್ಟಿತು. ಅತ್ಯಂತ ಮಾರ್ದವದ, ಅಚ್ಚ ಬಿಳಿ ಎಸಳುಗಳ, ಸೌಮ್ಯ ಪರಿಮಳದ ಹೂವು ಇದು. ಹೈದರಾಬಾದಿನ ಸೆಕೆಗೆ ಉಳಿಸಿಕೊಳ್ಳುವುದು ಕಷ್ಟ. ನಮ್ಮ ಹೂಗಿಡಗಳ ಸಮೂಹದಲ್ಲಿ ರಜನೀಗಂಧ ಕೂಡ ಇತ್ತು. ಪಾರಿಜಾತದ ಗಿಡ ಬೆಳೆಸಬೇಕೆಂದಿತ್ತು, ಆದರೆ ಸಾಧ್ಯವಾಗಲಿಲ್ಲ.

ಹಾಗೇನೇ ಬಂದ ಮೊದಲಲ್ಲಿ ಒಂದೆರಡು ವರ್ಷ ತರಕಾರಿಗಳನ್ನೂ ಬೆಳೆಸಿದೆವು. ಇದಕ್ಕೆಲ್ಲ ಹಾರೆ, ಪಿಕಾಸು, ಕತ್ತಿ, ಕತ್ತರಿ, ಗಡಪಾರೆ, ಬುಟ್ಟಿ ಇತ್ಯಾದಿ ಸಲಕರಣೆಗಳು ಅಗತ್ಯ; ಬಿತ್ತುಗಳು, ಸಾರಗಳು ಎಲ್ಲಿ ಸಿಗುತ್ತವೆ ಎಂದು ಗೊತ್ತಿರಬೇಕು. ಆಗಿನ ಕಾಲದಲ್ಲಿ ಹೈದರಾಬಾದು ಇಷ್ಟೊಂದು ನಿಬಿಡವಾಗಿ ಇರಲಿಲ್ಲ. ಸಾಕಷ್ಟು ದೂರ ನಾನು ನಡೆದೇ ಹೋಗುತ್ತಿದ್ದೆ. ಸೈಕಲ್ ರಿಕ್ಷ, ಆಟೋರಿಕ್ಷಗಳ ಅನುಕೂಲತೆಯೂ ಇತ್ತು. ಹೂ ಮತ್ತು ತರಕಾರಿ ಬೀಜಗಳನ್ನು ಮಾರುವ ಒಂದು ಇಡೀ ರಸ್ತೆಯನ್ನು ಕಂಡುಹಿಡಿದೆ. ಇಲ್ಲಿನ ವ್ಯಾಪಾರಿಗಳು ತೋಟಗಾರಿಕೆಗೆ ಸಂಬಂಧಿಸಿದ ವಸ್ತುಗಳ ಸ್ಪೆಶಲಿಸ್ಟರಾಗಿದ್ದರು. ಸರಿ, ಇನ್ನು ನನ್ನನ್ನು ತಡೆಯುವವರು ಯಾರು? ನನಗೆ ಬೇಕಾದ್ದನ್ನೆಲ್ಲ ಅಲ್ಲಿಂದ ಕೊಂಡುಕೊಳ್ಳುತ್ತಿದ್ದೆ. ಗಡ್ಡೆಗಳಿಗೆ ಮತ್ತು ಬಳ್ಳಿಗಳಿಗೆ ಮಾತ್ರ ಸಾಮಾಜಿಕರನ್ನು ಹುಡುಕಿಕೊಂಡು ಹೋಗಬೇಕಾಗಿತ್ತು. ಆ ಮೂಲಕವೂ ನಾವು ನಮಗೆ ಬೇಕಾದುದನ್ನು ಪಡೆದುಕೊಂಡೆವು.

ಹಾಗೆಂದು ನಾವೇನೂ ಮಹತ್ವಾಕಾಂಕ್ಷಿಗಳಾಗಿರಲಿಲ್ಲ. ಬೇರೆ ಕೆಲಸಗಳಿದ್ದುವಲ್ಲ. ನಮ್ಮ ತೋಟಗಾರಿಕೆ ಪ್ರಯೋಜನಕ್ಕಿಂತಲೂ ಹೆಚ್ಚು ಪ್ರಾಯೋಗಿಕವಾಗಿತ್ತು. ಅಲ್ಲದೆ ಜಾಗ ಮತ್ತು ನೀರಿನ ಪರಿಮಿತಿಯೊಳಗೆ ನಾವು ವರ್ತಿಸಬೇಕಾಗಿತ್ತು. ಆದರೂ ಬೆಂಡೆ, ಬದನೆ, ಬಸಳೆ, ಹರಿವೆ, ಚೀನಿಕಾಯಿ, ಕೋಡಮರೆ ಮುಂತಾದ ಹಲವಾರು ತರಕಾರಿಗಳನ್ನು ನಾವು ಸಣ್ಣ ಪ್ರಮಾಣದಲ್ಲಿ ಬೆಳೆದೆವು. ಈ ಮಣ್ಣಿನಲ್ಲಿ ಬೆಂಡೆ, ಬದನೆ ಮುಂತಾದುವು ಗಾತ್ರದಲ್ಲಿ ಚಿಕ್ಕದಾಗಿ ಬೆಳೆಯುತ್ತಿದ್ದುದನ್ನು ಪ್ರತ್ಯಕ್ಷ ಕಂಡುಕೊಂಡೆವು; ಇದು ತಳಿ ವ್ಯತ್ಯಾಸದಿಂದಲ್ಲ, ಮಣ್ಣಿನ ಸ್ವಭಾವದಿಂದ ಎನಿಸುತ್ತದೆ. ಬಸಳೆ ಮತ್ತು ಹರಿವೆ ಕೂಡ ನಮ್ಮ ಊರಿನಷ್ಟು ಹುಲುಸಾಗಿ ಬೆಳೆಯುವುದಿಲ್ಲ. ಹುಟ್ಟೂರಿನ ಪಕ್ಷಪಾತದಿಂದ ನಾನೀ ಮಾತನ್ನು ಹೇಳುತ್ತಿಲ್ಲ! ನಿಜವಾಗಿ ಬೆಂಡೆಕಾಯಿಯನ್ನು ನೀವು ಕುಂಬಳೆಯ ಕಡೆಯಲ್ಲಿ ನೋಡಬೇಕು; ಸೀಮೆ ಬೆಂಡೆಕಾಯಿ ಇದರ ಅಣಕ.

ಅದೇ ರೀತಿ, ನಮ್ಮೂರ ಹಾಗಲಕಾಯಿಗಿಂತ ಎಷ್ಟೋ ಕಿರಿದಾದ, ಚೋಟುದ್ದದ ಮಾದರಿಯನ್ನು ನಾನು ಕಂಡುದು ಹೈದರಾಬಾದಿನಲ್ಲಿ. ಆದರೆ ಈ ಪುಟ್ಟ ಹಾಗಲಕ್ಕೆ ಒಂದು ವಿಶಿಷ್ಟವಾದ ಉಪಯೋಗವಿದೆ. ಇದನ್ನು ಉದ್ದಕೆ ಸೀಳಿ, ಒಳಗಿನ ಬಿತ್ತು ಇತ್ಯಾದಿಯನ್ನು ತೆಗೆದುಹಾಕಿ, ಆ ಜಾಗದಲ್ಲಿ ಮಸಾಲೆ ತುಂಬಿ ಮುಚ್ಚಿ ಲಘು ಎಣ್ಣೆಯಲ್ಲಿ ಹುರಿದು ತೆಗೆದರೆ ಊಟದಲ್ಲಿ ತಿನ್ನಲು ರುಚಿ.

ಚಿಕ್ಕಂದಿನಲ್ಲಿ ಹಳ್ಳಿಗಳಲ್ಲಿ ನಾನು ಕಂಡಿರದ ಕೇಳಿರದ ಟೊಮ್ಯಾಟೋವನ್ನು ಇಲ್ಲಿ ಬೆಳೆಸಿದೆವು. ಇದು ಬಹುಶಃ ತರಕಾರಿಗಳಲ್ಲೆಲ್ಲಾ ಅತ್ಯಂತ ಸುಲಭವಾಗಿ ಬೆಳೆಸಬಹುದಾದ ಕೃಷಿ. ಬಿತ್ತಿಗೆ ಎಲ್ಲಿಗೂ ಅಲೆಯಬೇಕಾಗಿಲ್ಲ, ಹಣ್ಣು ಟೊಮ್ಯಾಟೋದ ತುಂಬ ಬಿತ್ತುಗಳೇ. ಇಡೀ ಹಣ್ಣನ್ನೇ ಮಣ್ಣಿನಲ್ಲಿ ಹುಗಿದು ಹಾಕಿದರಾಯಿತು. ಕುಂಡಗಲ್ಲಿ ಕೂಡ ಟೊಮ್ಯಾಟೋವನ್ನು ಬೆಳೆಸಬಹುದು. ಬೇಗನೆ ಫಲ ಕೊಡುತ್ತದೆ. ಒಂದೇ ಸಮಸ್ಯೆಯೆಂದರೆ ಕೀಟಗಳ ಉಪದ್ರವ. ಬೆಳೆಸಲು ಸುಲಭವಾದ ಇನ್ನೊಂದು ಸಸ್ಯ ಹಸಿಮೆಣಸು – ಅದರದೂ ಒಂದು ಗಿಡ ಇತ್ತು.

ಹೈದರಾಬಾದಿನಲ್ಲಿ ಹೊಸತಾಗಿ ಬೆಳೆಸಿದ ಇನ್ನೊಂದು ತರಕಾರಿ ಚಪ್ಪರ ಅಮರೆ. ಊರಲ್ಲಿ ನನ್ನ ಚಿಕ್ಕಂದಿನಲ್ಲಿ ನಮಗಿದು ಪರಿಚಿತವಲ್ಲ. ಬಿತ್ತಿನಿಂದ ಮೊಳಕೆಯೊಡೆದು, ಬಳ್ಳಿಯಾಗಿ ಚಪ್ಪರದಲ್ಲಿ ಹರಡಿ, ಚತುಷ್ಕೋನ ಧಾರೆಯ ಗೊಂಚಲು ಗೊಂಚಲಾಗಿ ಇಳಿಯುವ ಬೆರಳುದ್ದದ ಮಿದುವಾದ ವಿಚಿತ್ರ ಹಸಿರು ತರಕಾರಿ ಇದು. ಎಳತಿನಲ್ಲೆ ಕೊಯ್ದು ಪಲ್ಯ ಮಾಡುವಂಥದು. ಇದು ಬಹಳ ಹುಲುಸಾಗಿ ಬೆಳೆಯಿತು. ಹೈದರಾಬಾದಿನಲ್ಲಿ ಜನಪ್ರಿಯವಾಗಿದ್ದು, ನಮಗೂ ಇಷ್ಟವಾಗಿದ್ದು, ನಾವು ಬೆಳೆಸದೆ ಹೋದ ಇನ್ನೊಂದು ತರಕಾರಿ ಚಿಕ್ಕುಡು ಕಾಯಿ (‘ಡಬ್ಲ್ ಬೀನ್ಸ್’) – ಇದೂ ಅಮರೆ ಜಾತಿಯದೇ. ಬೆಳೆಸಿದ ತರಕಾರಿಗಳಿಂತ ಬೆಳೆಸದದಿರುವುದೇ ಹೆಚ್ಚು!

ನಂತರ ನಾವು ಮನೆ ಬದಲಿಸಬೇಕಾಗಿ ಬಂತು. ಅಪಾರ್ಟ್ಮೆಂಟ್ ಒಂದರ ಮಹಡಿಗೆ ಬಂದೆವು. ಮಣ್ಣಿನ ಸಂಪರ್ಕ ಕಡಿಯಿತು. ನಂತರ ವಾರದ ಸಂತೆಗೆ ಹೋಗಿ ಅಲ್ಲಿ ಇದ್ದುದನ್ನು ಆರಿಸಿ ಖರೀದಿಸುತ್ತೇವೆ. ಈಗಲೂ ನನಗೆ ಮತ್ತು ನಿರ್ಮಲಳಿಗೆ ತರಕಾರಿ ಸಂತೆ ಸುತ್ತುವುದು ಒಂದು ಆಹ್ಲಾದಕರ ಅನುಭವವೇ.

ಆಸ್ಮ ಎಂಬ ಸಂಗಾತಿ

ನಾನು ಅರೇಬಿಯಾದಲ್ಲಿ ಇಂಗ್ಲಿಷ್ ಕಲಿಸುತ್ತಿದ್ದಾಗ ನನಗೆ ‘ಆಸ್ಮ’ ಎಂಬ ಹೆಸರಿನ ಅನೇಕ ಮಂದಿ ವಿದ್ಯಾರ್ಥಿನಿಯರಿದ್ದರು. ಅರೇಬಿಕ್ ನಲ್ಲಿ ಆಸ್ಮ ಎಂದರೆ ‘ಚೆಲುವೆ’ ಎಂದು ಅರ್ಥ. ಇದು ಹುಡುಗಿಯರಿಗೆ ಸರ್ವೇ ಸಾಧಾರಣವಾಗಿ ಇರಿಸುವ ಜನಪ್ರಿಯ ಹೆಸರು. ಅವರನ್ನು ನೋಡಿ, ‘ಅರೇ! ಇವರೆಲ್ಲ ಎಷ್ಟು ಚಂದಾಗಿದ್ದಾರೆ, ಆದರೆ ನನಗಂಟಿದ ಆಸ್ಮಾ ಯಾಕೆ ಇಷ್ಟು ಕಠೋರವಾಗಿದೆ’ ಎಂದು ನನಗೆ ಅನಿಸಿದ್ದುಂಟು.

ನನ್ನ ಸುಮಾರು ಐದನೇ ವಯಸ್ಸಿನಲ್ಲಿ ನನಗೆ ಆಸ್ಮ (ಅಸ್ತಮಾ, ಉಬ್ಬಸ) ರೋಗ ಬಡಿಯಿತು. ಅದರ ಆರಂಭ ನನಗೆ ಸರಿಯಾಗಿ ನೆನಪಿಲ್ಲ. ನೆಗಡಿ, ಸಿಂಬಳ, ಕೆಮ್ಮು, ಆಕ್ಸಿ, ದಮ್ಮು, ಗುಂಯ್ ಗುಂಯ್, ತಲೆನೋವು, ಕೆಲವೊಮ್ಮೆ ಜ್ವರ ಸಹಿತ. ಇದು ಬರಲು ಕಾರಣ ಮನೆ ಹಿಂದಣ ಗುಳಿಗನ ವನದಲ್ಲಿರುವ ಗುಳಿಗನ ಭೂತ ಎನ್ನುತ್ತಿದ್ದಳು ನನ್ನ ಅಮ್ಮ. ಒಂದು ದಿನ ಅಮ್ಮ ಆ ಕಡೆ ಗೇರು ಬೀಜ ಹೆಕ್ಕುವುದಕ್ಕೆಂದು ಹೋಗಿದ್ದಳಂತೆ; ಅವಳ ಹಿಂದಿನಿಂದ ನಾನೂ. ವನ ನಮ್ಮ ಮನೆಯಿಂದ ಸ್ವಲ್ಪ ಎತ್ತರದಲ್ಲಿ ನಾಲ್ಕು ಮಾರು ದೂರದಲ್ಲಿ ಇತ್ತು. ಹಾಗೂ ನಡುವೆ ಕಡಿದಾದ ಒಂದು ಮುರ ಕಲ್ಲಿನ ಬರೆ. ನಾನು ಆಯ ತಪ್ಪಿ ಬರೆಯಿಂದ ಕೆಳಕ್ಕೆ ಬಿದ್ದುಬಿಟ್ಟೆನಂತೆ – ಎಂದರೆ ಸುಮಾರು ಹತ್ತಡಿ ಆಳಕ್ಕೆ. ಆಗ ತಲೆಗಾದ ಪೆಟ್ಟಿನ ಗುರುತಾಗಿ ನನ್ನ ಮುಂದಲೆಯಲ್ಲಿ ಕಾಸಿನಷ್ಟು ಜಾಗದಲ್ಲಿ ಕೂದಲಿಲ್ಲ; ಅಲ್ಲೊಂದು ನುಣುಪಾದ ತಗ್ಗಿದೆ ಅಷ್ಟೆ. ಆಚೀಚಿನ ಕೂದಲು ಆ ಜಾಗವನ್ನು ಮುಚ್ಚಿರುವುದರಿಂದ ಅದು ಹೊರಕ್ಕೆ ಕಾಣಿಸುವುದಿಲ್ಲ. ಆದರೆ ಇದೆ.

ಆ ಗಾಯದಿಂದ ಬಹಳ ರಕ್ತಸ್ರಾವವಾಗಿ ಅಮ್ಮನಿಗೆ ಗಾಬರಿಯಾಗಿರಬೇಕು. ಅವಳೇನು ಮಾಡಿದಳೋ ನನಗೆ ಗೊತ್ತಿಲ್ಲ. ನಮ್ಮೂರಿನಲ್ಲಿ ಡಾಕ್ಟರರಾಗಲಿ ವೈದ್ಯರಾಗಲಿ ಇರಲಿಲ್ಲ. ನನಗಂತೂ ಈ ಘಟನೆಯ ನೆನಪೇ ಇಲ್ಲ. ಈ ಘಟನೆಯ ನಂತರ ನನಗೆ ಆಸ್ಮ ಸುರುವಾಯಿತು, ಅದು ಗುಳಿಗನ ಉಪದ್ರವ ಎನ್ನುವುದು ನನ್ನ ಅಮ್ಮನ ನಂಬಿಕೆಯಾಗಿತ್ತು. (ಗುಳಿಗ ಒಂದು ಕ್ಷುದ್ರ ದೇವತೆ, ಭೂತ.) ಅಂತೂ ಆಗ ನನಗೆ ಹತ್ತಿದ ಆಸ್ಮ ನನ್ನನ್ನು ಜೀವಮಾನ ಇಡೀ ಬೇರೆ ಬೇರೆ ತೀವ್ರತೆಯಲ್ಲಿ ಕಾಡುತ್ತ ಬಂದಿದೆ. ವೈದ್ಯಕೀಯ ಅನುಕೂಲತೆ ಇಲ್ಲದ ಊರಿನಲ್ಲಿ ಇಂಥ ರೋಗವೊಂದು ಬಂದರೆ ಮನುಷ್ಯ ಹೋದನೇ – ಎಂದರೆ ಅನುಭವಿಸದೆ ಬೇರೆ ದಾರಿಯಿಲ್ಲ. ನನಗುಂಟಾದ ಬವಣೆಗಳಲ್ಲಿ ಕೆಲವರ ಕುರಿತು ಹೇಳುವುದು ನನ್ನ ಉದ್ದೇಶ.

ಆಸ್ಮಕ್ಕೆ ಮದ್ದೇನು? ಆಯುರ್ವೇದ ಯುನಾನಿ ಸಿದ್ಧ ಇತ್ಯಾದಿ ಪಂಡಿತ ವಿದ್ಯೆಗಳೆಲ್ಲ ನಮಗೆ ಗೊತ್ತಿಲ್ಲ. ಜನ ಜನಿತವಾದ ಕೆಲವೊಂದು ಉಪಾಯಗಳಷ್ಟೆ ಗೊತ್ತು. ವಾತ, ಪಿತ್ಥ, ಕಫ ಎಂಬ ಜನವರ್ಗೀಕರಣ ಕೇಳಿ ಗೊತ್ತು. ಮನುಷ್ಯರು ಈ ಮೂರರಲ್ಲಿ ಯಾವುದಾದರೂ ಒಂದು ವರ್ಗಕ್ಕೆ ಜನ್ಮತಃ ಸೇರಿರುತ್ತಾರೆ ಎಂದು ಲೆಕ್ಕ. ನಾನು ಸ್ಪಷ್ಟವಾಗಿಯೂ ಕಫಕ್ಕೆ ಸೇರಿದವನು. ಆಸ್ಮ ಕಫದ ಪಂಗಡದವರಿಗೆ ಬರುವ ರೋಗ. ಅಂಥವರು ಕೆಲವು ಪಥ್ಯ ಪಾಲಿಸಬೇಕು. (ನಾನು ಜನರ ನಂಬಿಕೆಯ ಬಗ್ಗೆ ಹೇಳುತ್ತಿದ್ದೇನೆ.) ಕಫಹಾರಿಯಾದ ಆಹಾರಗಳನ್ನು ಸೇವಿಸಬೇಕು; ಶೀತಕಾರಿಗಳು, ನಂಜು ವಜ್ರ್ಯ. ಎಂದರೆ ಮುಳ್ಳು ಸೌತೆ, ಹಲಸಿನ ಹಣ್ಣು, ದೀವಿಗುಜ್ಜೆ, ಬದನೆ ಇತ್ಯಾದಿ ಇತ್ಯಾದಿ. ಅಂತೆಯೇ ಕರಿದ ತಿಂಡಿಗಳು, ಸಿಹಿ ಪದಾರ್ಥಗಳು, ಹಾಲು ಮಜ್ಜಿಗೆ,. ತುಪ್ಪ, ಎಲ್ಲಾ ಜಿಡ್ಡು ಪದಾರ್ಥಗಳು, ಇನ್ನೇನುಳಿಯಿತು? ವಾಸ್ತವದಲ್ಲಿ ಇವೆಲ್ಲ ನನಗೆ ಪ್ರಿಯವಾದ ಸಂಗತಿಗಳು. ಸಹಜವಾಗಿಯೇ ಇಂಥ ಪಥ್ಯವನ್ನು ನಾನು ಕೆಲವು ಸಲ ಮೀರುತ್ತಿದ್ದೆ. ನಂತರ ಆಸ್ತಮಾ ಆಕ್ರಮಿಸಿದರೆ ಅದಕ್ಕೆ ಕಾರಣ ನಾನು ಪಥ್ಯ ಪಾಲಿಸದೆ ಇದ್ದದ್ದು ಎಂಬ ಆತ್ಮನಿಂದನೆ ನನ್ನಲ್ಲಿ ಮೂಡುತ್ತಿತ್ತು.

ಆದರೆ ಈ ರೋಗಕ್ಕೆ ಪಥ್ಯವೊಂದೇ ಸಾಲದಲ್ಲ? ಔಷಧಿಯೂ ಬೇಕು. ನಮ್ಮ ವರ್ಗದವರ ಪ್ರತಿ ಮನೆಯಲ್ಲೂ ಅಜ್ಜಿ ಮದ್ದಿನ ಸಂದೂಕವೊಂದು ಅದೆಲ್ಲೋ ಇರುತ್ತಿತ್ತು, ಅಜ್ಜಿ ಇರಲಿ, ಇಲ್ಲದಿರಲಿ. ಅದಕ್ಕೆ ಜಾಯಿಕಾಯಿ ಪೆಟ್ಟಿಗೆ ಎನ್ನುತ್ತಿದ್ದರು. ನಮ್ಮ ಮನೆಯಲ್ಲಿ ಅಜ್ಜಿಯಾಗಲಿ, ಅಜ್ಜನಾಗಲಿ ಇರಲಿಲ್ಲ, ಆದರೆ ಇಂಥದೊಂದು ಮನೆ ಮದ್ದಿನ ಪೆಟ್ಟಿಗೆ ಇತ್ತು. ಅದನ್ನು ನೋಡಿಕೊಳ್ಳುತ್ತಿದ್ದುದು ನನ್ನ ಅಮ್ಮ. ಅದರಲ್ಲಿ ಕೆಲವು ಕಾಳುಗಳು, ಬೀಜಗಳು, ಒಣ ಎಲೆಗಳು, ಬೇರುಗಳು, ತೊಗಟೆಗಳು ಕಚ್ಚಾ ಸ್ಥಿತಿಯಲ್ಲಿ ಇರುತ್ತಿದ್ದುವು. ಉದಾಹರಣೆಗೆ ಕರಿಮೆಣಸು, ತ್ರಿಫಲಾದಿ, ಲವಂಗ, ಏಲಕ್ಕಿ, ಜಾಯಿಕಾಯಿ, ಅಣಲೆ ಕಾಯಿ, ಒಣ ಶುಂಠಿ, ಅರಶಿಣ ಕೊಂಬು, ನನಗೀಗ ಮರೆತು ಹೋಗಿರುವ ಇನ್ನಿತರ ವಸ್ತುಗಳು; ಇವೆಲ್ಲವೂ ಏಕ ಕಾಲಕ್ಕೆ ಅಲ್ಲಿ ಇರುತ್ತಿದ್ದುವು ಎಂದಲ್ಲ, ಕೆಲವು ಇರುತ್ತಿದ್ದುವು, ಹಲವು ಇರುತ್ತಿರಲಿಲ್ಲ. ಕರಿಮೆಣಸಂತೂ ಇದ್ದೇ ಇರುತ್ತಿತ್ತು, ಯಾಕೆಂದರೆ ನಾವದನ್ನು ಬೆಳೆಯುತ್ತಿದ್ದೆವು. ಕರಿಮೆಣಸಿನ ಕಷಾಯ ಆಸ್ಮದವರಿಗೆ ಮುಖ್ಯ. ಅದೇ ರೀತಿ ಅಣಲೆ, ಶುಂಠಿಗಳು ಕೂಡ ಆಸ್ಮದವರಿಗೆ ಬೇಕು. ಇನ್ನು ಜೇನು ಸಹಾ ಅಗತ್ಯ. ಅದಾದರೆ ನಮ್ಮಲ್ಲಿ ಸದಾ ಇರುತ್ತಿತ್ತು. ಅಲ್ಲದೆ, ಮುಗಿದರೆ ತರಿಸಿಕೊಳ್ಳುವ ಸಾಧ್ಯತೆ ಇದ್ದೇ ಇತ್ತು. ಅಣಲೆಯ ಚೊಗರನ್ನು ಜೇನಿನ ಸಿಹಿಯಿಲ್ಲದೆ ಸಹಿಸುವುದು ಕಷ್ಟಕರ. ನನ್ನ ಭಾಗ್ಯಕ್ಕೆ ಜೇನು ಆಸ್ಮಕ್ಕೆ ವರ್ಜ್ಯವಾಗಿರಲಿಲ್ಲ.

ಇದೆಲ್ಲದರಿಂದ ರೋಗ ಪರಿಹಾರ ಆಗುತ್ತದೆ ಎನ್ನಲಾಗದು, ಆಸ್ಮ ಪರಿಹಾರವಾಗುವುದು ಎಂದಿಲ್ಲ, ಸ್ವಲ್ಪ ತಹಬಂದಿಗೆ ಬರುತ್ತದೆ ಅಷ್ಟೆ. ಅಷ್ಟಾದರೆ ಅದೇ ದೊಡ್ಡ ವಿಷಯ. ಆರಂಭದಲ್ಲಿ ನನಗೆ ಏರುಪೇರುಗಳಿದ್ದುವು, ತಿಂಗಳಿಗೊಮ್ಮೆಯಾದರೂ ಏದುಸಿರು ಜೋರಾಗುತ್ತಿತ್ತು. ಆಗಲೆಲ್ಲ ನನ್ನ ಪಕ್ಕೆಗಳು ನೋಯುತ್ತಿದ್ದು ಸಹಿಸಲು ಕಷ್ಟವಾಗುತ್ತಿತ್ತು. ಅಮ್ಮ ನನ್ನ ಬೆನ್ನು ಉಜ್ಜುತ್ತಿದ್ದಳು. ಇಂಥದೊಂದು ಮಗುವಿಗೆ ಜನ್ಮವಿತ್ತೆನಲ್ಲ ಎಂದು ಅವಳಿಗೆ ದುಃಖವಾಗಿರಬೇಕು. ಉಬ್ಬಸದ ಸ್ಥಿತಿಯಲ್ಲಿ ಒದ್ದಾಡುತ್ತಿರುವವರನ್ನು ನೋಡುವುದೇ ಒಂದು ಸಂಕಟ. ರಾತ್ರಿ ನನಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ, ಎದೆ ಭಾರದಿಂದ. ಆಗ ಮಲಗಲೂ ಆಗದೆ, ಎದ್ದಿರಲೂ ಆಗದೆ, ಚಾವಡಿಯ ದಳಿಗೆ ಕೈಯಿರಿಸಿ ನೇತು ಚಡಪಡಿಸುತ್ತಿದ್ದುದು ನನ್ನ ನೆನಪಿಗೆ ಬರುತ್ತಿದೆ. ಬೆಳಗಾಗುವುದನ್ನೇ ಕಾಯುತ್ತಿದ್ದೆ. ಬೆಳಗ್ಗೆಯೋ ಅಸಾಧ್ಯವಾದ ತಲೆನೋವು ಬೇರೆ. ಕಣ್ಣುಗಳು ಉಬ್ಬಿರುತ್ತಿದ್ದುವು. ಕೆಲವೊಮ್ಮೆ ನನ್ನ ಅಕ್ಕ ನನ್ನ ಹಣೆ ಮೇಲೆ ಕಾಸರಕನ ಸೊಪ್ಪುಗಳನ್ನಿರಿಸಿ, ಕೆಂಡದಲ್ಲಿ ಕೆಂಪಗೆ ಕಾಯಿಸಿದ ಸಟ್ಟುಗದಿಂದ ‘ಕಾಸಿ ಬರೆ’ಯುತ್ತಿದ್ದಳು. ಅದು ಹಿತವಾದ ಅನುಭವ ಕೊಡುತ್ತಿತ್ತು. ಹಸಿ ಕಾಸರಕನದ ಎಲೆಯ ಒಂದು ಆರೋಮಾ ಕೂಡ ಮೂಗಿಗೆ ಬಡಿಯುತ್ತಿತ್ತು. ಅದೇ ರೀತಿ, ಕುದಿನೀರಿನ ಹಬೆಗೆ ಮುಖ ಒಡ್ಡುವುದೂ ಇತ್ತು; ಆಗ ಮಂತ್ರವಾದಿಯಂತೆ ತಲೆಗೆ ಬಟ್ಟೆಯಿಂದ ಮುಚ್ಚಿಕೊಳ್ಳುವುದು. ನೀಲಗಿರಿ ತೈಲ ಹಚ್ಚಿಕೊಳ್ಳುವುದು, ಅಥವಾ ಅಣಲೆಯನ್ನು ಕಲ್ಲಿನಲ್ಲಿ ಅರೆದು ಅದನ್ನು ಹಣೆಗೆ ಲೇಪಿಸಿಕೊಳ್ಳುವುದು. ಅಣಲೆಯ ಲೇಪ ಆರುತ್ತಲೇ ಹಣೆಯ ಚರ್ಮವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಿತ್ತು. ಇದೂ ಒಂದು ಹಿತಾನುಭವವೇ.

ಹುಟ್ಟಿದ ಮಗು ಬದುಕುವುದೇ ದೊಡ್ಡ ವಿಷಯವಾದ ಕೊಂಪೆ ಕೊಳಚೆಯ ಊರು ನಮ್ಮದು. ವರ್ಷದ ಆರು ತಿಂಗಳೂ ಮಳೆ, ಮಂಜು. ಕಾಲಿಟ್ಟಲ್ಲಿ ಪಚಕ್! ಅಲ್ಲದೆ ಶೀತ ಜ್ವರ (ಟೈಫಾಯ್ಡ್), ಕಫಜ್ವರ (ನ್ಯುಮೋನಿಯಾ), ನಡುಕ ಜ್ವರ (ಮಲೇರಿಯಾ), ನೀರ್ಕೋಟ್ಳೆ (ಚಿಕನ್ ಪಾಕ್ಸ್), ಕೆಪ್ಪಟ್ರಾಯ (ಮಮ್ಸ್); ಇನ್ನು ಊರು ಹೆಸರು ಗೊತ್ತಿಲ್ಲದ ಇತರ ಮಾರಿ ಪರೀಕ್ಷೆಗಳನ್ನು ಮಕ್ಕಳು ದೊಡ್ಡವರೆನ್ನದೆ ಎಲ್ಲರೂ ಪಾಸು ಮಾಡಿಕೊಂಡೇ ಬದುಕುಳಿಯಬೇಕು. ಇವುಗಳ ನಡುವೆ, ‘ಇದೋ ನಾನಿದ್ದೇನೆ’ ಎನ್ನುವ ಉಬ್ಬಸ ನನ್ನಂಥವನಿಗೆ! ಏನು ಮಹಾ? ಹತ್ತರ ಜತೆ ಹನ್ನೊಂದು ತಾನೆ. ಆದರೂ ‘ಓಷಧಯ’ ಪವಾಡದ ಅನ್ವೇಷಣೆ ನಡೆದೇ ಇತ್ತು. ಅದು ವಿಲಕ್ಷಣ ಎನಿಸಿದಷ್ಟೂ ಅದರ ಕುರಿತಾದ ಆಕರ್ಷಣೆ ಹೆಚ್ಚು. ಒಮ್ಮೆ ಯಾರೋ ಅಂದರು, ಆಸ್ಮಕ್ಕೆ ಉಮ್ಮತ್ತನ (ದತ್ತೂರದ) ಹೂವಿನ ಹೊಗೆ ಬತ್ತಿ ಸೇದಿದರೆ ಒಳ್ಳೆಯದು ಎಂಬುದಾಗಿ. ಈ ಉಮ್ಮತ್ತ ನಮ್ಮ ಅಂಗಳದಾಚೆ, ತೋಟದ ಬದಿಗೆ ಯಥೇಷ್ಟವಾಗಿ ಬೆಳೆಯುವ ಗಿಡ. ಯಾವ ಉಪಯೋಗಕ್ಕೂ ಬಾರದ ಸಸ್ಯವೆಂದುಕೊಂಡಿದ್ದೆವು. ಹಸಿರು ಲಡ್ಡುವಿನ ತರದ ಇದರ ಮುಳ್ಳು ಮುಳ್ಳಿನ ಬೀಜ ಅತ್ಯಂತ ವಿಷಕಾರಿಯಂತೆ. ಪಶುಗಳು ಕೂಡ ಇದರ ಗೊಡವೆಗೆ ಹೋಗುವುದಿಲ್ಲ. ಇನ್ನು ಇದರ ಹೂವಿನ ಬಣ್ಣ ಬಿಳಿ. ಓಟೆಯಂತೆ ಸುರುವಾಗಿ ಮಕ್ಕಳ ಆಟದ ತುತ್ತೂರಿಯಂತೆ (‘ಹಿಸ್ ಮಾಸ್ಟರ್ಸ್ ವಾಯ್ಸ್’ನ ಮೈಕಿನ ತರದಲ್ಲಿ) ಬಿರಿಯುತ್ತದೆ.

ಪೂಜೆಗಾಗಲಿ, ಮುಡಿಯುವುದಕ್ಕಾಗಲಿ ಯಾವ ಅಲಂಕಾರಕ್ಕಾಗಲಿ ಇದನ್ನು ಬಳಸುವುದಿಲ್ಲ. ಇದಕ್ಕೊಂದು ಪರಿಮಳವಾಗಲಿ ಇಲ್ಲ. ಪ್ರಕೃತಿಯಲ್ಲಿ ಇದು ಯಾವ ಕಾರಣಕ್ಕಾಗಿ ಸಿಲೆಕ್ಟ್ ಆಯಿತೋ ತಿಳಿಯದು. ಬಹುಶಃ ಆಸ್ಮ ಪರಿಹಾರಕವಾಗಿ? ಆದರೆ ಹಾಗೆ ಅದು ಪ್ರಚಲಿತವಲ್ಲ. ಯಾರೋ ಕೊಟ್ಟ ಪುಕ್ಕಟೆ ಸಲಹೆ. ನಮಗೂ ನಷ್ಟವೇನಿಲ್ಲ. ಸರಿ, ಅ ಒಂದೆರಡು ಹೂಗಳನ್ನು ಒಣಗಿಸಿ ಹೊಗೆ ಬತ್ತಿ ಮಾಡಿ ಚಿಕ್ಕ ಹುಡುಗನಾಗಿದ್ದ ನಾನು ಸೇದಿದ್ದಾಯಿತು. (ವರ್ಷಗಳ ನಂತರ ನನ್ನ ಸಿಗರರೇಟ್ ಹವ್ಯಾಸಕ್ಕೆ ನಾಂದಿಯಾಯ್ತೆ ಅದು!) ಅದರ ಹೊಗೆಯ ಕೆಟ್ಟ ವಾಸನೆ ನನಗೆ ಹಿಡಿಸಲಿಲ್ಲ. ಉಪಯೋಗ ಸಿಗುತ್ತದೋ ಇಲ್ಲವೋ ಗೊತ್ತಾಗುವ ಮೊದಲೇ ನಾನದನ್ನು ಬಿಟ್ಟು ಬಿಟ್ಟೆ. ಮನೆಯವರಿಗೂ ಈ ಉಮ್ಮತ್ತನ ಔಷಧಿಯಲ್ಲಿ ಮನಸ್ಸಿರಲಿಲ್ಲ. ಆ ಪ್ರಕರಣ ಅಲ್ಲಿಗೆ ನಿಂತಿತು, ಇನ್ನೇನೋ ಸುರುವಾದುವು.

ಈ ಮಧ್ಯೆ ನಾನು ಸ್ಥಳಾಂತರಕ್ಕೊಳಗಾದೆ. ಶಾಲೆ ಕಲಿಯಲೆಂದು ನನ್ನ ಸೋದರ ಮಾವನ ಮನೆ ಸೇರಿದೆ. ಇದರಿಂದ ನನ್ನ ಎಳೆ ಮನಸ್ಸು ಖಿನ್ನತೆಗೆ ಒಳಗಾದರೂ, ಆ ಪ್ರದೇಶ ಹೆಚ್ಚು ಆರೋಗ್ಯಕರವಾಗಿದ್ದು ನನ್ನ ಆಸ್ಮಕ್ಕೆ ಸ್ವಲ್ಪ ಮಟ್ಟಿಗೆ ಶಮನ ಸಿಕ್ಕಿ, ದೇಹ ಬೆಳೆಯುತ್ತಿದ್ದಂತೆ ಈ ರೋಗವನ್ನು ಸಹಿಸಿಕೊಳ್ಳುವುದು ಸಾಧ್ಯವಾಯಿತು. ಆದರೂ ಔಷಧೋಪಚಾರಗಳು ಆಗಾಗ ಬೇಕಾಗುತ್ತಲೇ ಇದ್ದುವು. ಇದರ ಎಲ್ಲ ಕಾಲಘಟ್ಟಗಳನ್ನೂ ಇಲ್ಲಿ ಹೇಳಲಾರೆ. ಆದರೆ ಎರಡು ಮೂರು ಸಂಗತಿಗಳ ಕುರಿತು ಪ್ರಸ್ತಾಪ ಮಾಡುವೆ – ಸಹಜೀವಿಗಳಿಗೆ ಉಪಯೋಗವಾಗಲಿ ಎನ್ನುವುದಕ್ಕೆ. ಈ ರೋಗದ ಕುರಿತು ಮೊದಲಿಗಿಂತ ಹೆಚ್ಚು ಸಾಮಾನ್ಯ ಜ್ಞಾನ ಮನುಷ್ಯರಲ್ಲಿ ಈಗ ಇದೆ. ಔಷಧಗಳೂ ಇವೆ. ಆದ್ದರಿಂದ ನನ್ನ ಅನುಭವದಿಂದ ಯಾರಿಗೆ ಏನೂ ಆಗಬೇಕಾಗಿ ಇರಲಾರದು. ಆದರೂ ಮನುಷ್ಯಾವಸ್ಥೆಯ ದೃಷ್ಟಿಯಿಂದ ಹೇಳುತ್ತಿದ್ದೇನೆ.

ಹೆಚ್ಚು ಶೀತ ಪ್ರದೇಶದಿಂದ ಕಡಿಮೆ ಶೀತ ಪ್ರದೇಶಕ್ಕೆ ವಸತಿ ಬದಲಾವಣೆ ಆಸ್ಮ ಬಾಧಿತರಿಗೆ ಒಳ್ಳೆಯದೇ, ಆದರೆ ಅದರಿಂದ ಶಾಶ್ವತ ಪರಿಹಾರ ಸಿಗುತ್ತದೆ ಎಂದೇನಿಲ್ಲ. ಸುಮಾರು ಇಪ್ಪತ್ತನೆ ವಯಸ್ಸಿನಿಂದ ಮೂವತ್ತೈದರ ತನಕ, ನಾನು ಸಾಕಷ್ಟು ಆರೋಗ್ಯದಲ್ಲೇ ಇದ್ದೆ. ಸಾಹಿತ್ಯ, ಕವಿಗೋಷ್ಠಿ ಎಂದು ಮೈಸೂರು ಬೆಂಗಳೂರು ಕಡೆ ಓಡಾಡಿದ್ದೂ ಇದೆ. ಕೇರಳದ ಸರಕಾರಿ ಕಾಲೇಜುಗಳಲ್ಲಿ ಲೆಕ್ಚರನಾಗಿ ಖಾಯಂ ಕೆಲಸದಲ್ಲಿದ್ದರೂ (ನಾನು ಇಂಗ್ಲಿಷ್ ಎಂ.ಎ. ಮಾಡಿದ್ದು ತಿರುವನಂತಪುರದಲ್ಲಿ, 1964-66) ನನ್ನ ಅಧ್ಯಯನದ ದಾಹ ನಿಂತಿರಲಿಲ್ಲ. ಪಿಎಚ್. ಡಿ. ಮಾಡುವುದಕ್ಕೆಂದು ಹೈದರಾಬಾದಿನ ಪ್ರಸಿದ್ಧ ಇಂಗ್ಲಿಷ್ ಸಂಸ್ಥೆಗೆ ಬಂದೆ. ಹೀಗೆ ನಾನು ನನ್ನ ಮೂವತ್ತೈದನೆ ಮಧ್ಯ ವಯಸ್ಸಿನಲ್ಲಿ (1975)ಪಶ್ಚಿಮ ಕರಾವಳಿಯಿಂದ ಹೈದರಾಬಾದಿಗೆ ಸ್ಥಳಾಂತರಗೊಂಡೆ.

ದಕ್ಖಣದ ಪೀಠಭೂಮಿಯಲ್ಲಿರುವ ಹೈದರಾಬಾದು ಒಣ ಪ್ರದೇಶ, ಮಳೆಯೇ ಕಡಿಮೆ. ನನಗಿದು ತೀರಾ ಹೊಸತು. ಆದರೇನು, ಮೊದಲ ಒಂದು ವರ್ಷ ಕಾಲ ಎಷ್ಟು ಸುಖವಾಗಿ ಇದ್ದೆನೆಂದರೆ ಇದು ನನಗೆ ಹೇಳಿ ಮಾಡಿಸಿದ ಊರು ಎನಿಸಿತು. ಊರಿನಿಂದ ನನ್ನ ಹೆಂಡತಿಯನ್ನು ಕರೆಸಿಕೊಂಡೆ. ಈ ಮೊದಲೇ ನಾನು ಮಾಡಬಾರದ ಕವಿಗಳ ಶೋಕಿಯ ಅಭ್ಯಾಸವಾದ ಸಿಗರೇಟಿನ ಚಟಕ್ಕೆ ಗುರಿಯಾಗಿ ಬಿಟ್ಟಿದ್ದೆ. ನನ್ನ ಪಿಎಚ್. ಡಿ. ಅಧ್ಯಯನ ಬೇರೆ ಸಾಗುತ್ತಿತ್ತು. ಆ ಮೇಲೆ ನಾನು ಕಲಿಯುತ್ತಿದ್ದ ಕಡೆಯೇ ಕೆಲಸಕ್ಕೆ ಸೇರಿದೆ. ಕಾಲಕ್ರಮೇಣ ಒಂದೆರಡು ಸುತ್ತಿಗೆ ವಿಭಾಗದ ಮುಖ್ಯಸ್ಥನೂ ಆದೆ. ಸರಿ, ಸಿಗರೇಟು ಸೇವನೆ ಈಗ ಜೋರಾಗಿತ್ತು. ಆಸ್ಮಕ್ಕೆ ನಾನು ಹೈದರಾಬಾದಿಗೆ ಬಂದ ಮರು ವರ್ಷವೇ ಗೊತ್ತಾಗಿತ್ತು, ನಾನದನ್ನು ಸೋಲಿಸಲೆಂದೇ ಇಲ್ಲಿಗೆ ಬಂದಿದ್ದೇನೆ ಎಂದು. ಅದು ನಾನೂ ಇದ್ದೇನೆ ಎಂದು ಹೇಳಲು ಸುರುಮಾಡಿತು. ಮತ್ತದೇ ಕೆಮ್ಮು, ದಮ್ಮು, ನೆಗಡಿ, ತಲೆ ನೋವು, ಗೊಯ್ ಗೊಂಯ್ ಶಬ್ದ, ನಿದ್ರಾಹೀನತೆ ಇತ್ಯಾದಿ. ಹೀಗೆ ಜೀವನ ಮೊದಲಿನ ಲಯಕ್ಕೆ ತಿರುಗಿತು.

ಈಗಲಾದರೆ ನಾನು ದೊಡ್ಡ ನಗರದಲ್ಲಿದ್ದೇನಲ್ಲ, ಹೋಗಿ ಡಾಕ್ಟರನ್ನು ಕಂಡು ಪರೀಕ್ಷೆ ಮಾಡಿಸಿ (ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಿತ್ತು) ಅವರು ಹೇಳಿದ ಹಲವಾರು ಮಾತ್ರೆಗಳನ್ನು ತಂದೆ. ಅವುಗಳಲ್ಲಿ ಆಸ್ತಲಿನ್ ಒಂದು ಎನ್ನುವುದು ನೆನಪಿನಲ್ಲಿದೆ. ಎಲರ್ಜಿ ನಿರೋಧಕ (ಏಂಟಿ-ಹಿಸ್ಟಮಿನ್) ಗುಳಿಗೆಯೂ ಇತ್ತು. ಅದನ್ನು ರಾತ್ರೆ ತೆಗೆದುಕೊಳ್ಳಬೇಕಿತ್ತು; ಯಾಕೆಂದರೆ ಅದು ಮಂಪರು ಹಿಡಿಸುವಂಥದು. ಅದರ ಪ್ರಭಾವ ಮರುದಿನ ಹೊತ್ತೇರುವ ತನಕ, ಕೆಲವು ಸಲ ಇನ್ನೂ ಮುಂದಕ್ಕೆ ಇರುತ್ತಿದ್ದುದರಿಂದ ನನಗೆ ಯಾವಾಗಲೂ ಒಂದು ತರದ ಮಂಕು ಕವಿದಂತೆ ಅನಿಸುತ್ತಿತ್ತು. ಏನು ಮಾಡಲಿ, ಬೇರೇನೂ ಉಪಾಯವಿರಲಿಲ್ಲ. ಡಾಕ್ಟರ್ ಕೆಲವೊಂದು ಆಹಾರ ನಿಯಮಗಳನ್ನು ಸಹಾ ಸೂಚಿಸಿದ್ದರು. ಇವು ಊರ ಪಥ್ಯಗಳ ತರವೇ; ಜೊತೆಗೆ ಎಲ್ಲಾ ತರದ ಗಡ್ಡೆ ಗೆಣಸುಗಳೂ! ಹೀಗೆ ನಾನು ತಿನ್ನಬಾರದ ವಸ್ತುಗಳ ಸಂಖ್ಯೆ ಜಾಸ್ತಿಯಾಗಿ, ಮಾತ್ರೆಗಳ ಮೇಲೆಯೇ ಬದುಕುವಂತಾಯಿತು.

ಈ ವಿಧಾನಗಳೆಲ್ಲ ನನ್ನನ್ನು ಜೀವಂತ ಇರಿಸಿದರೂ, ತೀರಾ ಬಡಕಲು ಜೀವಿಯನ್ನಾಗಿ ಮಾಡಿದುವು. ಇದೇ ವೇಳೆಗೆ ಇಲಾಖೆಯ ಮುಖ್ಯಸ್ಥನಾಗಿ ನಾನು ಏನಾದರೂ ಮಾಡಬೇಕೆಂದು ಮೂರು ದಿನಗಳ ರಾಷ್ಟ್ರೀಯ ಸೆಮಿನಾರ್ ನಡೆಸಿದೆ. Explanation in Linguistics ಎಂಬ ವಿಷಯದ ಕುರಿತು. ಸೆಮಿನಾರೇನೋ ಎಲ್ಲರ ಸಹಾಯದಿಂದ ಭರ್ಜರಿಯಾಗಿ ನಡೆಯಿತು, ಆದರೆ ನಾನು ಕುಸಿದು ಹೋದೆ. ಮತ್ತದೇ ಡಾಕ್ಟರನ್ನು ಭೇಟಿ ಮಾಡಿದರೆ ಅವರು ನನ್ನನ್ನು ಪರೀಕ್ಷೆ ಮಾಡದೆಯೆ ಔಷಧಿ ಪ್ರಮಾಣವನ್ನು ಇಮ್ಮಡಿಗೊಳಿಸುವಂತೆ ಹೇಳಿದರು—ಏನೊಂದೂ ವಿಚಾರಿಸದೆ. ಅವರು ಹಾಗೆ ಹೇಳಬಾರದಿತ್ತು, ಮತ್ತು ನಾನದನ್ನು ಪಾಲಿಸಬಾರದಿತ್ತು, ಅಂದರೆ ರೋಗಿಗಳು ವೈದ್ಯರನ್ನು ನಂಬಿಬಿಡುತ್ತಾರೆ. ಇದೀಗ ನನ್ನನ್ನು ಗಂಡಾಂತರ ಪರಿಸ್ಥಿತಿಗೆ ದೂಡಿತು. ನನ್ನ ಪಪ್ಫುಸಗಳು ಒಣಗಿ ಹೋದಂತೆ ಅನಿಸಿ ಉಸಿರು ತೆಗೆದುಕೊಳ್ಳಲಾರದೆ ಇನ್ನೇನು ಸತ್ತೇ ಹೋಗುತ್ತೇನೆ ಎಂಬ ಪರಿಸ್ಥಿತಿ ಬಂತು. ಹಿತೈಷಿಗಳ ನೆರವಿನಿಂದ ಒಂದು ಕ್ಲಿನಿಕ್ ಸೇರಿದೆ. ಅಲ್ಲಿ ನನಗೆ ಅದೇನೋ ಎಮೆರ್ಜೆನ್ಸಿ ಚಿಕಿತ್ಸೆ ನೀಡಲಾಯಿತು. ಅದರ ವಿವರಗಳು ನನಗೀಗ ನೆನಪಿಲ್ಲ, ಸುಮಾರು ಅರ್ಧ ಶತಮಾನದ ಹಿಂದಣ ಕತೆ ಹೇಳುತ್ತಿದ್ದೇನೆ. ಅಂತೂ ಬದುಕಿ ಬಂದೆ. ತಡವಾಗುತ್ತಿದ್ದರೆ ಸಾಯುತ್ತಿದ್ದಿ ಎಂದರು ಅಲ್ಲಿನ ವೈದ್ಯರು. ಅದು ನನಗಿಂತ ಹೆಚ್ಚು ಯಾರಿಗೆ ಗೊತ್ತು?!

ಈಗ ನಾನು ತೀರಾ ಸಣಕಲಾಗಿದ್ದೆನಲ್ಲ, ಇದು ಹೀಗಾದರೆ ನಡೆಯುವುದಿಲ್ಲ ಅನಿಸಿತು. ಪಥ್ಯವನ್ನು ಧಿಕ್ಕರಿಸಿದೆ. ಎಲ್ಲ ಆಹಾರವನ್ನೂ ಹಿತಮಿತವಾಗಿ ತೆಗೆದುಕೊಳ್ಳಲು ಸುರುಮಾಡಿದೆ. (ದಿನವೂ ನುಂಗಬೇಕಾದ ಗುಳಿಗೆಗಳಂತೂ ಇದ್ದುವು.) ಇದರಿಂದ ಸ್ವಲ್ಪ ಚೈತನ್ಯವೂ ಬಂತು. ಆದರೆ ಒಮ್ಮೆ ಯಾರೋ ತಂದುಕೊಟ್ಟ ಅಣಬೆ ಪಲ್ಯವನ್ನು ತಿಂದು ವಿಷಮ ಸ್ಥಿತಿ (ಮುಖ್ಯವಾಗಿ ಮೈ ತುರಿಕೆ) ಉಂಟಾದುದಿದೆ. ನನಗೆ ಅಣಬೆ ಎಲರ್ಜಿ ಇದೆ ಎಂದು ಗೊತ್ತಿರಲಿಲ್ಲ. ಇದಕ್ಕೆ ಮೊದಲು ನನಗೆ ಅಣಬೆಯನ್ನು ತಿಂದ ನೆನಪೂ ಇಲ್ಲ. ಅಣಬೆ ನಮ್ಮ ಊಟದ ಮೇಜಿನಿಂದ ಅಂದಿನಿಂದ ಬ್ಯಾನ್ಡ್.

ಕೆಲವು ವರ್ಷಗಳ ನಂತರ ನನಗೆ ಇನ್ನೊಂದು ಮಾರಣಾಂತಿಕ ಎನ್ನಬಹುದಾದ ಪ್ರಕರಣ ಒದಗಿತು. ಇದಕ್ಕೆ ಸರಿಯಾದ ಕಾರಣ ಏನೆನ್ನುವುದು ನನಗೆ ಇದುವರೆಗೂ ಗೊತ್ತಿಲ್ಲ. ಬಹುಶಃ ನಾವು ಕ್ವಾರ್ಟರ್ಸ್ ಬದಲಾಯಿಸಿದುದು ಕಾರಣ. ಮೂರನೆ ಮಹಡಿಯ ಫ್ಲಾಟಿನಲ್ಲಿದ್ದ ನಮಗೆ ನೀರಿನ ತೊಂದರೆಯಿತ್ತು. ಒಮ್ಮೆ ಕೆಳಗಿನ ನೆಲಹಂತದ ಫ್ಲಾಟು ಖಾಲಿಯಾದಾಗ ಅಲ್ಲಿ ನೀರಿನ ತೊಂದರೆಯಿಲ್ಲವೆಂದು ಅಲ್ಲಿಗೆ ಬದಲಾಯಿಸಿಕೊಂಡೆವು. ಆಮೇಲೆಯೇ ಗೊತ್ತಾದುದು ಅಲ್ಲಿನ ಸಮಸ್ಯೆಗಳು. ಮನೆಯೊಳಗೆಲ್ಲಾ ಕತ್ತಲು, ಅನಾರೋಗ್ಯಕರ ಸುತ್ತಮುತ್ತಲು—ಅದೇನೋ ಗಿಡಕಂಟಿಗಳು, ಮುಳ್ಳಿನ ಗಿಡಗಳು, ನೊರಜು, ಸೊಳ್ಳೆಗಳು ಇತ್ಯಾದಿ. ಇಲ್ಲಿ ನಿವರ್ಲಾಗೆ (ನನ್ನ ಹೆಂಡತಿ) ಜ್ವರ ಬಂದು ಮಲಗಿದಳು. ಎರಡು ವಾರಗಲ್ಲಿ ಗುಣವಾದರೂ ಅದೇನು ಜ್ವರವೆಂದೇ ಗೊತ್ತಾಗಲಿಲ್ಲ. ಆಮೇಲೆ ನನ್ನ ಸ್ಥಿತಿ ಬಿಗಡಾಯಿಸಿತು, ಅದುವರೆಗೆ ನಾನು ತಕ್ಕಮಟ್ಟಿಗೆ ಸರಿಯಾಗಿಯೇ ಇದ್ದೆ. ಈಗ ಊಟಕ್ಕೆ ರುಚಿಯಿಲ್ಲದಾಯಿತು. ರಾತ್ರೆ ಊಟ ಮಾಡುವುದಕ್ಕೇ ಭಯವಾಗುತ್ತಿತ್ತು. ಎಲ್ಲಿ ಆಸ್ಮ ಪ್ರಕರಣ ಆಕ್ರಮಿಸುತ್ತದೋ ಎಂದು.

ಅಂತೂ ಒಂದು ರಾತ್ರೆ ಅದು ಸಂಭವಿಸಿತು. ಪಕ್ಕದ ಬೀದಿಯಲ್ಲೆ ಇದ್ದ ನಮ್ಮ ಪರಿಚಯದ ಡಾಕ್ಟರರು ಕೂಡಲೆ ಬಂದು ನನಗೆ ಬ್ರೋಂಕೋ ಡಯಲೇಟರ್ ಇಂಜೆಕ್ಷನ್ ಕೊಟ್ಟರು. ಬಹುಶಃ ಡೆರಿಫೈಲಿನ್. ಔಷಧಿಯ ವಿವರಗಳನ್ನೆಲ್ಲ ಈಗ ಮರೆತಿದ್ದೇನೆ. ನನ್ನ ಅವಜ್ಞೆಗೆ ಕ್ಷಮೆಯಿರಲಿ. ಆಮೇಲೆ ಡಾಕ್ಟರ್ ಅಂದುದು ಅವರು ದೊಡ್ಡ ರಿಸ್ಕ್ ತಗೊಂಡಿದ್ದರು ಎಂಬುದಾಗಿ. ಉಸಿರಾಟ ಸಾಧ್ಯವಾಗುವ ಇಲ್ಲವೇ ಪೂರ್ತಿ ನಿಂತು ಹೋಗುವ ಎರಡೂ ಸಾಧ್ಯತೆಗಳು ಇದ್ದುವು! ಆದರೆ ಡಾಕ್ಟರ್ ಇಂಜೆಕ್ಷನ್ ಚುಚ್ಚಿದ ಕೆಲವೇ ನಿಮಿಷಗಳಲ್ಲಿ ನನ್ನ ಉಸಿರಾಟ ಸಾಮಾನ್ಯ ಸ್ಥಿತಿಗೆ ಮರಳಿತು. ನನಗನಿಸಿದ ಆಶ್ವಾಸ ಅಷ್ಟಿಷ್ಟಲ್ಲ. ಡಾಕ್ಟರಿಗೆ ಕೃತಜ್ಞತೆ ಹೇಳಿದೆ. ಅಂದು ಆ ನಿರ್ಣಾಯಕ ಕ್ಷಣದಲ್ಲಿ ಡಾಕ್ಟರ್ ಖುದ್ದು ಅನುಭವಿಸಿರಬಹುದಾದ ತುಮುಲ ಇವತ್ತಿಗೂ ನನ್ನ ಮನಸ್ಸಿನಲ್ಲಿದೆ. ಮುಂದೆ ನಾವು ಆ ಮನೆ ಬಿಟ್ಟು ಹಿಂದಿದ್ದ ಮೂರನೆ ಮಹಡಿಯ ಮನೆಗೇ ಮರಳಿದೆವು.

(ಶಕ್ತಿವರ್ಧನೆಗೆಂದು ನಾನು ‘ಬಿ’ ಜೀವಸತ್ವ ಹೆಚ್ಚಿರುವ ಖರ್ಗೋಸಾ ಎಂಬ, ಹಾಲು ಹಾಕದ ಚಹದಂಥ, ರಶಿಯನ್ ಪಾನೀಯವೊಂದನ್ನು ಮನೆಯಲ್ಲಿ ತಯಾರಿಸಿ ಕೆಲ ಕಾಲ ಕುಡಿದದ್ದಿದೆ. ಇದಕ್ಕೆ ವಿಶಿಷ್ಟವಾದೊಂದು ಯೇಸ್ಟ್ ಬಳಸಬೇಕಿತ್ತು. ಆದರೆ ಇದು ಅತಿ ಶೀಘ್ರ ಬೆಳೆಯುತ್ತಿದ್ದ ವಸ್ತುವಾದ್ದರಿಂದ ಇದನ್ನು ನಿಭಾಯಿಸಲಾರದೆ ಕೈಬಿಡಬೇಕಾಯಿತು.)

ಇದಕ್ಕೆ ಕೆಲವು ವರ್ಷಗಳ ಮೊದಲು ನಾನೊಮ್ಮೆ ಒಂದು ವರ್ಷದ ಮಟ್ಟಿಗೆ ಇಂಗ್ಲೆಂಡಿಗೆ ಹೋಗಿದ್ದೆ, ಅನ್ವಯಿಕ ಭಾಷಾ ವಿಜ್ಞಾನದಲ್ಲಿ ಎಂ.ಎ. ಮಾಡುವುದಕ್ಕೆ. ನಾನು ಸೇರಿದ ರೆಡಿಂಗ್ ಯುನಿವರ್ಸಿಟಿ ಒಂದು ಗುಡ್ಡದ ಮೇಲಿತ್ತು; ನನ್ನ ವಸತಿ ಕೆಳಗಿತ್ತು. ಕ್ಲಾಸಿಗೆ ಹೋಗಲು ನಾನು ದಿನವೂ ಎರಡು ಫರ್ಲಾಂಗ್ ಗುಡ್ಡ ಏರಬೇಕಿತ್ತು. ಆರಂಭದ ಎರಡು ಮೂರು ತಿಂಗಳು ನನಗೆ ಅದೊಂದು ದೈಹಿಕ ವ್ಯಾಯಾಮದಂತೆ ಸ್ವಾಗತಾರ್ಹ ಎನಿಸುತ್ತಿತ್ತು. ನಂತರ ಅದೊಂದು ಹೊರೆಯಾಗಿ ನಾನು ಏದುಸಿರು ಬಿಡತೊಡಗಿದೆ. ಆಸ್ಪತ್ರೆಗೆ ಹೋಗುವುದು ಅನಿವಾರ್ಯವೆನಿಸಿತು. ಬ್ರಿಟಿಷ್ ಕೌನ್ಸಿಲ್ ನವರ ಶಿಫಾರಿಸಿನ ಮೇಲೆ ಬ್ಯಾಟಲ್ ಹಾಸ್ಪಿಟಲ್ ಎಂಬಲ್ಲಿಗೆ ಹೋದೆ. ಅದೊಂದು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ. ಹಲವಾರು ಕಟ್ಟಡಗಳ ಹರಡಿದ ಸಮುಚ್ಚಯ. ದ್ವಿತೀಯ ಮಹಾಯುದ್ಧದ ಕಾಲದಲ್ಲಿ, ಬಹುಶಃ ಸೈನಿಕರಿಗೆ ಕಟ್ಟಿಸಿದ ಕಾರಣ ಆ ಬ್ಯಾಟಲ್ ಹೆಸರು ಬಂದಿತ್ತು. ಡಾಕ್ಟರ್ ನನಗೆ ಸ್ವಲ್ಪ ಗಟ್ಟಿ ರಬ್ಬರಿನ ಬೆಲೂನಿನಂಥ ಸಾಧನವೊಂದನ್ನು ಕೊಟ್ಟು ಅದನ್ನು ನನ್ನೆಲ್ಲಾ ಶಕ್ತಿಯಿಂದ ಊದುವಂತೆ ಹೇಳಿದರು. ನನ್ನ ಶ್ವಾಸಕೋಶದ ನಿಶ್ವಾಸ ಶಕ್ತಿಯನ್ನು ಅದು ಅಳೆಯುತ್ತಿತ್ತು. ನನಗಿರಬೇಕಾದ ಶಕ್ತಿಗಿಂತ ಸುಮಾರು ಶೇಕಡಾ ಮೂವತ್ತರಷ್ಟು ಕಡಿಮೆಯಿತ್ತು.

ನಿಶ್ವಾಸವಿಲ್ಲದಿದ್ದರೆ ಉಚ್ಛ್ವಾಸ (ಉಸಿರು ಒಳಕ್ಕೆ ಎಳೆದುಕೊಳ್ಳುವುದು) ಹೇಗೆ ಸಾಧ್ಯ? ಈಗ ನಾನೇನು ಮಾಡಲಿ? ಡಾಕ್ಟರ್ ನನಗೊಂದು ಪುಟ್ಟ ಉಪಕರಣ (ಮುಷ್ಟಿಯಲ್ಲಿ ಹಿಡಿಯುಂಥದು) ತೋರಿಸಿದರು: ರೋಟಾ ಹೇಲರ್. ಅದರೊಳಗೆ ಔಷಧಿ ಪುಡಿ ತುಂಬಿದ ಕ್ಯಾಪ್ಸ್ಯೂಲ್ ಒಂದನ್ನಿರಿಸಿ ತಿರುವಿ ಉಪಕರಣವನ್ನು ಬಾಯಲ್ಲಿರಿಸಿ ಮೇಲಕ್ಕೆ ಉಸಿರೆಳೆದುಕೊಳ್ಳುವುದು. ಇದರಿಂದ ಈ ಪುಡಿಯನ್ನು ಪಪ್ಫುಸಕ್ಕೆ ಸಿಂಪಡಿಸಿದಂತಾಗುತ್ತದೆ. ಅದು ಕಫ ಸೇರುವುದನ್ನು ತಡೆಗಟ್ಟುತ್ತದೆ. ಈಗಿನವರಿಗೆ ಇದನ್ನೆಲ್ಲ ವಿವರಿಸುವ ಅಗತ್ಯವಿಲ್ಲ. ಆದರೆ ಆಗ ಇಂಗ್ಲೆಂಡಿನಲ್ಲಿ ಸಹಾ ಇದು ಹೊಸದಾಗಿತ್ತು. ನಾನೀ ವಸ್ತುಗಳನ್ನು ಕೊಂಡು ಕೊಂಡು ದಿನಕ್ಕೆ ಮೂರು ನಾಲ್ಕು ಬಾರಿ ಉಪಯೋಗಿಸತೊಡಗಿದೆ. ಇದು ರಾಮಬಾಣದಂತೆ ಕೆಲಸ ಮಾಡಿತು. ನನಗೆ ಉಸಿರಾಟ ಸುಗಮವಾಯಿತು. ಆಸ್ಮದ ಛಾಯೆ ಸಂಪೂರ್ಣ ಹೋಗದೆ ಇದ್ದರೂ ಅದನ್ನು ನಿಯಂತ್ರಿಸುವುದು ಸಾಧ್ಯವಾಯಿತು. ಆಮೇಲೆ ನಾನು ಕಲಿತುಕೊಂಡುದೆಂದರೆ, ಆಸ್ಮವನ್ನು ತೊಲಗಿಸುವುದಕ್ಕಿಂತ ಅದನ್ನು ನಿಯಂತ್ರಿಸುವ ಕುರಿತು ಗಮನ ಹರಿಸುವುದು ಮುಖ್ಯ.

ಇಂಗ್ಲೆಂಡಿನಿಂದ ಮರಳುವಾಗ ನಾನು ರೋಟಾಹೇಲರ್ ಯಂತ್ರವನ್ನೂ ಕೆಲವು ಕ್ಯಾಪ್ಸ್ಯೂಲುಗಳನ್ನೂ ತಂದಿದ್ದೆ. ಆದರೆ ಕ್ಯಾಪ್ಸ್ಯೂಲುಗಳು ಇಲ್ಲಿ ಸಿಗುತ್ತಿರಲಿಲ್ಲ. ಇನ್ನೇನು ಮಾಡಲಿ ಎಂದು ಚಿಂತಿಸುವ ಹೊತ್ತಿಗೆ ಸಿಪ್ಲ ಕಂಪೆನಿಯ ಆಸ್ತಲಿನ್ ಇನ್ಹೇಲರ್ ಮಾರ್ಕೆಟಿಗೆ ಬಂತು. ಇದೊಂದು ಔಷಧಿಯ ಗ್ಯಾಸ್ ತುಂಬಿದ ಬೆರಳಷ್ಟು ಉದ್ದದ ಇಂಗ್ಲಿಷ್ನ ‘ಐ’ ಶೇಪಿನ ಪುಟ್ಟ ಡಬ್ಬ. ಇದರ ಕೆಳಬದಿಯ ಮೂತಿಯನ್ನು ಬಾಯಿಗಿರಿಸಿ ಒತ್ತಿ ಶ್ವಾಸ ಮೇಲಕ್ಕೆಳೆದರಾಯಿತು, ಗ್ಯಾಸ್ ನ ಒಂದಷ್ಟು ನಿಗದಿತ ಪ್ರಮಾಣ ಪಪ್ಫುಸದೊಳಕ್ಕೆ ಹೋಗುತ್ತದೆ. ಇದನ್ನು ನಾನು ಹಲವು ವರ್ಷಗಳಿಂದ ಬಳಸುತ್ತ ಬಂದಿದ್ದೇನೆ. ನನಗೆ ಆಸ್ಮ ಪ್ರಕರಣ ಬಂದಿಲ್ಲ, ಎಂದರೆ ಅದು ಹತೋಟಿಯಲ್ಲಿ ಇದೆ. ಈಗ ರೋಟಾ ಹೇಲರ್ ರೂಪದಲ್ಲಿಯೂ ಆಸ್ತಲಿನ್ ಇನ್ಹೇಲರ್ ಸಿಗುತ್ತದೆ ಎಂದು ಕೇಳಿದ್ದೇನೆ. ನೋಡಬೇಕು.

ಆದರೆ ಈಗಲೂ ನಾನು ನನ್ನ ಹಳ್ಳಿಯ ಹಿನ್ನೆಲೆಯನ್ನು ಮರೆತಿಲ್ಲ. ಗಂಟಲು ಕೆರೆತ ಇದ್ದಾಗ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು, ಕೆಮ್ಮು ಹೋಗದೆ ಇರುವಾಗ ಕಾಳು ಮೆಣಸಿನ ಕಷಾಯ ಕುಡಿಯುವುದು ನಡೆದೇ ಇದೆ. ಇನ್ನು ದೇಹ ಉರಿದಂತೆ ತೋರಿದಾಗ ಮಜ್ಜಿಗೆ ನೀರು ತಕ್ಷಣ ಉಪಶಮನ ನೀಡುವ ಅಚ್ಚ ದೇಸೀ ವಿಧಾನ.