ಹೀಗೆ ಸತ್ತವರನ್ನು ಮಣ್ಣು ಮಾಡಲೆಂದೇ ಇಷ್ಟು ವಿಶಾಲವಾದ ಭೂಮಿಯನ್ನು ಪಾಳು ಬಿಡುವುದು, ಪೋಲು ಮಾಡುವುದು ತಪ್ಪಲ್ಲವೇ? ಇವರೆಲ್ಲ ದಾಯಾದಿಗಳು. ಎಷ್ಟೋ ಮನೆಗಳವರು. ನಮ್ಮ ಹತ್ತಿರ ಮಾತು ಕೂಡ ಆಡುತ್ತಿರಲಿಲ್ಲ, ಈಗಲೂ ಆಡುವುದಿಲ್ಲ. ಕೆಲವು ಮನೆಗಳ ಜೊತೆ ರಾಜಕೀಯ ವೈರ ಕೂಡ ಇದೆ. ಇಂಥವರ ಹಿರೀಕರ ಸ್ಮಾರಕಗಳನ್ನೆಲ್ಲ ನಮ್ಮ ಜಮೀನನಲ್ಲಿ ಯಾಕೆ ಇಟ್ಟುಕೊಳ್ಳಬೇಕು. ನಿಮ್ಮ ಜನಾಂಗದವರು ಮಾಡುವ ಹಾಗೆ ಊರ ಮುಂದೆ ಒಂದು ಪುಟ್ಟ ಜಾಗ ಗುರುತು ಮಾಡಿಕೊಂಡು ಒಂದು ನಾಲ್ಕು ಮಣ ಸೌದೆ ಸೇರಿಸಿ ಸುಟ್ಟುಹಾಕಿ ಕೈ ತೊಳೆದುಕೊಳ್ಳುವುದೇ ಒಳ್ಳೆಯದಲ್ಲವೇ ಎಂದು ನನಗೆ ಮರುಪ್ರಶ್ನೆ ಮಾಡಿದ.
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ “ಪಾರ್ಸಿ ಸಂಸ್ಕಾರದ ರೀತಿಯೇ ಶ್ರೇಷ್ಠ” ನಿಮ್ಮ ಓದಿಗೆ

ನಮ್ಮ ಹಿರಿಯರು ಭೂಮಿಯನ್ನು ಗೇಣಿಗೇನು ಕೊಟ್ಟಿರಲಿಲ್ಲ. ಜವರೇಗೌಡರ ಮನೆತನದವರಿಗೆ ಎಲ್ಲ ಜವಾಬ್ದಾರಿಯನ್ನೂ ಒಪ್ಪಿಸಿಬಿಟ್ಟಿದ್ದರು. ಬರೇ ಹೊಲಗದ್ದೆಯನ್ನು ಮಾತ್ರವಲ್ಲ, ಪೂರ್ವಿಕರ ಮನೆಯ ದುರಸ್ತಿ, ಸುಣ್ಣಬಣ್ಣ ಮಾಡಿಸುವುದು, ಹೆಂಚು ಬದಲಾಯಿಸುವುದು, ಬಾಡಿಗೆ ಸಂಗ್ರಹಿಸುವುದು, ಹಾಗೆ ಸಂಗ್ರಹಿಸಿದ ಹಣದಿಂದ ಮನೆ ದೇವರ ಗುಡಿಗಳಿಗೆ ವರ್ಷಾವರಿ ಅಭಿಷೇಕದ ವ್ಯವಸ್ಥೆ ಮಾಡಿಸುವುದು, ಇವೆಲ್ಲವೂ ಮೂರು ನಾಲ್ಕು ತಲೆಮಾರುಗಳ ಕಾಲ ಅನೂಚಾನವಾಗಿ ನಡೆದುಕೊಂಡು ಬಂದಿತ್ತು. ಭತ್ತ, ರಾಗಿ, ಬೆಲ್ಲ, ಒಂದಿಷ್ಟು ತೆಂಗಿನಕಾಯಿ, ಮೇಲೊಂದಿಷ್ಟು ಹಣ ಎಲ್ಲವನ್ನೂ ವಾಯಿದೆ ತಪ್ಪದೆ ಕಳಿಸುತ್ತಿದ್ದರು. ಮೈಸೂರಿಗೆ ಬಂದಾಗ ನಮ್ಮಗಳ ಮನೆಗೆಲ್ಲ ಬಂದು ವಿಚಾರಿಸುತ್ತಿದ್ದರು. ಪ್ರತಿ ಸಲ ಬಂದಾಗಲೂ, ಮೂಟೆ ತೆಂಗಿನಕಾಯಿ, ಗೊನೆ ಬಾಳಹಣ್ಣು ತರುವುದು, ಇದೆಲ್ಲವೂ ತುಂಬಿಕೊಂಡು ನಡೆಯುತ್ತಿದ್ದುದು ಜವರೇಗೌಡರ ಕಾಲಕ್ಕೇ. ಆಮೇಲಾಮೇಲೆ, ನಮ್ಮ ತಾತ-ಚಿಕ್ಕ ತಾತ ಮೈಸೂರಿಗೆ ಸೇರಿಕೊಳ್ಳುತ್ತಿದ್ದ ಕಾಲಕ್ಕೆ, ಕ್ರಮೇಣ ನಮ್ಮವರಿಗೆ ಭೂಮಿಯ ಬಗ್ಗೆ ಪ್ರೀತಿ ಹೋಯಿತು. ಊರಿಂದ ಬರುತ್ತಿದ್ದ ಭತ್ತ, ರಾಗಿ, ಮೇಲೊಂದಿಷ್ಟು ಹಣ ಎಲ್ಲ ನಗಣ್ಯ ಅನಿಸಿತು. ಎಲ್ಲವನ್ನೂ ಹಣದ ಮೂಲಕವೇ ಲೆಕ್ಕ ಹಾಕಿದಾಗ, ಇವರಿಗೆ ನಗರಗಳಲ್ಲಿ ಬರುತ್ತಿದ್ದ ಲಕ್ಷಾಂತರ ರೂಪಾಯಿಗಳ ಸಂಬಳ ಸಾರಿಗೆಗಳ ಮುಂದೆ ಇಡೀ ಗ್ರಾಮ ಸಂಪತ್ತಿನಿಂದ ಬರುವ ಸಾವಿರಾರು ರೂಪಾಯಿಗಳು ಜುಜುಬಿ ಅನಿಸಿತು. ಜವರೇಗೌಡರ ಮನೆತನದ ಮುಂದಿನ ತಲೆಮಾರಿನವರಿಗೂ ನಮ್ಮಗಳ ಬಗ್ಗೆ ಉದಾಸೀನ ಶುರುವಾಯಿತು. ಮೊದಲಿನಷ್ಟು ನಿಗದಿಯಾಗಿ ಏನನ್ನೂ ಕಳಿಸುತ್ತಿರಲಿಲ್ಲ. ಈ ಮಧ್ಯೆ ಊರಿಂದ ಒಂದಿಬ್ಬರು ಪುಢಾರಿಗಳು ಬಂದು ನೀವು ಜಮೀನು ಮಾರಿಬಿಡಿ, ಭೂ ಸುಧಾರಣೆ ಬಂದರೆ ಒಂದು ಬಿಡಿಗಾಸೂ ಹುಟ್ಟುವುದಿಲ್ಲ ಅಂದರು.

ಭೂ ಸುಧಾರಣೆ ಬಂದರೂ ಹಾಗೇನೂ ಆಗಲಿಲ್ಲ. ಜವರೇಗೌಡರ ಮೊಮ್ಮಕ್ಕಳೇ ಬಂದು ಖಾನೇಷುಮಾರಿಯನ್ನೆಲ್ಲ ವಿವರಿಸಿ ಯಾವತ್ತೂ ಬರೆಯದೇ ಇದ್ದ ಗೇಣಿ ಪತ್ರವನ್ನು ಹೊಸದಾಗಿ ಸೃಷ್ಟಿಸಿ, ಸದರಿ ಗೇಣಿ ಪತ್ರದ ಆಧಾರದ ಮೇಲೇ ನಮ್ಮವರಿಂದ ಜಮೀನನ್ನು ಫೈನಲ್‌ ಆಗಿ ಬರೆಸಿಕೊಂಡು ಮಾರಾಟದ ಬಾಬ್ತು ಅಂತ ಸಾಕಷ್ಟು ದೊಡ್ಡ ಮೊತ್ತವನ್ನೇ ಕೊಟ್ಟರು. ಫೈನಲ್‌ ಬಾಬ್ತು ಕೊಡಲು ಮನೆಗೆ ಬಂದಿದ್ದಾಗ, ಮನೆಯಲ್ಲಿದ್ದ ಮುತ್ತೈದೆಯರಿಗೆಲ್ಲ ರೇಷ್ಮೆ ಸೀರೆ, ಖಣದ ಬಾಗಿನ ಕೊಟ್ಟು ಉಡಿ ತುಂಬಿದರು. ಮುಂದೆ ಕೂಡ ಭೂಮಿ ಸಂಬಂಧವನ್ನು-ನೆನಪುಗಳನ್ನು ಉಳಿಸಿಕೊಳ್ಳಿ ಎಂದು ಕೂಡ ಹೇಳಿದರು.
ಹಾಗೇನೂ ಆಗಲಿಲ್ಲ.
*****
ನಾನು ಮೈಸೂರಿನಲ್ಲಿ ಡಿಗ್ರಿಗೆ ಓದುತ್ತಿದ ವರ್ಷಗಳಲ್ಲಿ ಜವರೇಗೌಡರ ಮನೆತನದ ಕುಡಿ ಸೋಮಶೇಖರನು ಕೂಡ ನನ್ನ ಜೊತೆ ಓದುತ್ತಿದ್ದ. ನಾನು ಊರಿನ ಜಮೀನ್ದಾರ್‌ ಮನೆತನದವನೆಂದು ಒಂದು ವಿಶೇಷ ಆದರ ಬೆಳೆಸಿಕೊಂಡು, ನಮ್ಮ ಮನೆಗೆ ಹೋಗಿ ಬಂದು ಮಾಡುತ್ತಿದ್ದ. ನೀವೆಂಥ ಜನ, ಶಾಸ್ತ್ರಕ್ಕಾದರೂ, ದಾಖಲೆಗಾದರೂ ಒಂದಿಷ್ಟು ಜಮೀನು ಇಟ್ಟುಕೊಳ್ಳಬೇಕಿತ್ತು, ಸಕಲವನ್ನೂ ಯಾಕೆ ಮಾರಬೇಕಾಗಿತ್ತು ಎಂದು ಮೂದಲಿಸುತ್ತಲೇ ಇದ್ದ. ಇದೆಲ್ಲ ಸೋಮಶೇಖರನ ವ್ಯಾಕುಲತೆ ಮಾತ್ರವಷ್ಟೇ! ಮುಂದೆ ಆದದ್ದೇ ಆಗಿದ್ದೇ ಬೇರೆ.
*****
ಜವರೇಗೌಡರ ಮನೆತನದವರು ನಮ್ಮ ಜಮೀನನ್ನು ಮಾತ್ರವಲ್ಲ, ಸಣ್ಣಪುಟ್ಟ ಒಕ್ಕಲಿಗ ಗೇಣಿದಾರರು, ಈಡಿಗರು, ಆಚಾರ್ರು ಮೊದಲಾದವರಿಂದಲೂ ಮೊದಮೊದಲಿಗೆ ಜಮೀನು ಪರಭಾರೆ ಮಾಡಿಸಿಕೊಂಡು, ನಂತರ ಕೊಂಡು, ಈಗ ತಾಲೂಕಿಗೆ ದೊಡ್ಡ ಜಮೀನ್ದಾರರಾಗಿದ್ದರು. ಏಳು ಗ್ರಾಮಗಳಲ್ಲಿ ಈಗ ಅವರಿಗೆ ಫಾರಂ ಇತ್ತು. ಇದನ್ನೆಲ್ಲ ನೋಡುವ ಬಾ ಎಂದು ಒಮ್ಮೆ ನನ್ನನ್ನು ಗ್ರಾಮದ ತೇರಿನ ಹಬ್ಬದ ಸಂದರ್ಭದಲ್ಲಿ ಕರೆದುಕೊಂಡು ಹೋದ.
ಕರೆದುಕೊಂಡು ಹೋದವನು ಫಾರಂ ಮಾತ್ರ ತೋರಿಸಲಿಲ್ಲ.

 

ಭೂ ಸುಧಾರಣೆ ಬಂದರೂ ಹಾಗೇನೂ ಆಗಲಿಲ್ಲ. ಜವರೇಗೌಡರ ಮೊಮ್ಮಕ್ಕಳೇ ಬಂದು ಖಾನೇಷುಮಾರಿಯನ್ನೆಲ್ಲ ವಿವರಿಸಿ ಯಾವತ್ತೂ ಬರೆಯದೇ ಇದ್ದ ಗೇಣಿ ಪತ್ರವನ್ನು ಹೊಸದಾಗಿ ಸೃಷ್ಟಿಸಿ, ಸದರಿ ಗೇಣಿ ಪತ್ರದ ಆಧಾರದ ಮೇಲೇ ನಮ್ಮವರಿಂದ ಜಮೀನನ್ನು ಫೈನಲ್‌ ಆಗಿ ಬರೆಸಿಕೊಂಡು ಮಾರಾಟದ ಬಾಬ್ತು ಅಂತ ಸಾಕಷ್ಟು ದೊಡ್ಡ ಮೊತ್ತವನ್ನೇ ಕೊಟ್ಟರು.

ಮೊದಲು ನಮ್ಮಿಂದ ಕೊಂಡ ಜಮೀನಿನ ಹತ್ತಿರವೇ ಕರೆದುಕೊಂಡು ಹೋದ. ಜಮೀನಿನ ಉತ್ತರ ದಿಕ್ಕಿನ ವಿಶಾಲವಾದ ಭಾಗದಲ್ಲಿ ಮೂವತ್ತು ನಲವತ್ತು ಬೃಂದಾವನಗಳು, ಶಿಲಾಶಾಸನಗಳು, ಫಲಕಗಳು. ತಲೆಮಾರುಗಳಿಂದ ಸತ್ತವರನ್ನೆಲ್ಲ ಅಲ್ಲೇ ಮಣ್ಣು ಮಾಡಿದ್ದರು. ಅಲ್ಲೇ ಹಾಲು-ತುಪ್ಪ, ಪಕ್ಷ ಮಾಸದ ಎಡೆ ಊಟ ಕೂಡ ನಡೆಯುತ್ತಿತ್ತಂತೆ. ಈ ಬೃಂದಾವನಗಳ ಸುತ್ತ ಬೆಳೆದಿದ್ದ ಮಾವು, ಬೇವು, ನೇರಳೆ, ಹೊಂಗೆ ಮರದ ತೋಪು ನನಗೆ ತುಂಬಾ ಆಕರ್ಷಕವಾಗಿ ಕಂಡಿತು. ಸತ್ತವರನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುವುದು, ಆರಾಧಿಸುವುದು ಎಷ್ಟು ಪುಣ್ಯದ, ಸಂತೋಷದ ಕೆಲಸ ಎಂದು ನಾನು ಸೋಮಶೇಖರನನ್ನು ಕೇಳಿದೆ.
ಇಲ್ಲ, ಇಲ್ಲ, ಹಾಗೇನಿಲ್ಲ ಎಂದ ಸೋಮಶೇಖರ.
*****
ಇದೆಲ್ಲ ಸುಮ್ಮನೆ waste ಅಂದ. ಸತ್ತ ದಿನ ನೆನಪಿಸಿಕೊಂಡು, ಶಾಸ್ತ್ರಕ್ಕೆ ಒಂದಿಷ್ಟು ಪೂಜೆ-ಪುನಸ್ಕಾರ ಮಾಡಿ, ದಾನ ಧರ್ಮ ಕೊಟ್ಟರೆ ಸಾಕು. ಹೀಗೆ ಸತ್ತವರನ್ನು ಮಣ್ಣು ಮಾಡಲೆಂದೇ ಇಷ್ಟು ವಿಶಾಲವಾದ ಭೂಮಿಯನ್ನು ಪಾಳು ಬಿಡುವುದು, ಪೋಲು ಮಾಡುವುದು ತಪ್ಪಲ್ಲವೇ? ಇವರೆಲ್ಲ ದಾಯಾದಿಗಳು. ಎಷ್ಟೋ ಮನೆಗಳವರು. ನಮ್ಮ ಹತ್ತಿರ ಮಾತು ಕೂಡ ಆಡುತ್ತಿರಲಿಲ್ಲ, ಈಗಲೂ ಆಡುವುದಿಲ್ಲ. ಕೆಲವು ಮನೆಗಳ ಜೊತೆ ರಾಜಕೀಯ ವೈರ ಕೂಡ ಇದೆ. ಇಂಥವರ ಹಿರೀಕರ ಸ್ಮಾರಕಗಳನ್ನೆಲ್ಲ ನಮ್ಮ ಜಮೀನನಲ್ಲಿ ಯಾಕೆ ಇಟ್ಟುಕೊಳ್ಳಬೇಕು. ನಿಮ್ಮ ಜನಾಂಗದವರು ಮಾಡುವ ಹಾಗೆ ಊರ ಮುಂದೆ ಒಂದು ಪುಟ್ಟ ಜಾಗ ಗುರುತು ಮಾಡಿಕೊಂಡು ಒಂದು ನಾಲ್ಕು ಮಣ ಸೌದೆ ಸೇರಿಸಿ ಸುಟ್ಟುಹಾಕಿ ಕೈ ತೊಳೆದುಕೊಳ್ಳುವುದೇ ಒಳ್ಳೆಯದಲ್ಲವೇ ಎಂದು ನನಗೆ ಮರುಪ್ರಶ್ನೆ ಮಾಡಿದ.
ನಾನು ಹಾಗೇನಿಲ್ಲ ಎಂದೆ.
ಅಂದರೆ ಎಂದು ಮರುಪ್ರಶ್ನಿಸಿದ.
ಹಾಗೇನಿಲ್ಲ ಎಂದೇನೆಂದು ನನಗೆ ವಿವರಿಸಲು ಬರಲಿಲ್ಲ.
*****
ಡಿಗ್ರಿ ಮುಗಿದ ತಕ್ಷ ನಾನು ಜಲಮಂಡಳಿ ಕಛೇರಿಯಲ್ಲಿ ಬಿಲ್‌ ಕಲೆಕ್ಟರ್‌ ಆಗಿ ಕೆಲಸಕ್ಕೆ ಸೇರಿಕೊಂಡೆ. ಸೋಮಶೇಖರ Forensic Science ಓದುವೆನೆಂದು ಬಾಂಬೆಗೆ ಹೋದ. ಓದಿದ ಮೇಲೆ ಅಲ್ಲೇ ಕೆಲಸಕ್ಕೆ ಸೇರಿಕೊಂಡು Coastal Guard Armyಯಲ್ಲಿ ನಿರೀಕ್ಷಕನಾಗಿದ್ದ. ಗ್ರಾಮದ, ಕುಲಸ್ಥರ ವಿರೋಧ ಕಟ್ಟಿಕೊಂಡು ಪಾರ್ಸಿ ಜನಾಂಗದ ಹುಡುಗಿಯನ್ನು ಮದುವೆಯಾಗಿ ಅಲ್ಲೇ ನೆಲೆಸಿದ. ಕ್ರಮೇಣ ಸಂಪರ್ಕ ಕಡಿಮೆ ಆಯಿತು. ನನಗೆ ಮಾತ್ರ ಹಿಂದಿನ ಗೆಳೆತನದ ಸಲಿಗೆಯಲ್ಲೇ ದೀಪಾವಳಿಗೆ, ಹೊಸ ವರ್ಷಕ್ಕೆ, ಶುಭಾಷಯ ಕೋರಿ ಗ್ರೀಟಿಂಗ್‌ ಕಳಿಸುತ್ತಿದ್ದ.
*****
ಹೋದ ತಿಂಗಳು ಮೈಸೂರಿನ ಪೋಲೀಸ್‌ ಅಕಾಡೆಮಿಯಲ್ಲಿ ಉಪನ್ಯಾಸ ನೀಡಲು ಸೋಮಶೇಖರನ ಹಿರಿಯ ಅಧಿಕಾರಿ ಬಂದರು. ಅವರ ಜೊತೆಗಾಗಿ ಇವನೂ ಬಂದ. ಸಂಸಾರವೂ ಬಂದಿತ್ತು. ಅಧಿಕಾರಿ, ಉಪನ್ಯಾಸ ಮಾಡಿ ಹೊರಟುಹೋದರು. ಇವನು ನಮ್ಮ ಮನೆಗೂ ನಾಲ್ಕಾರು ಸಲ ಬಂದ. ಎರಡೂ ಸಂಸಾರಗಳು ಕೂಡಿ ಕಬಿನಿ, ಚಾಮುಂಡಿ ಬೆಟ್ಟ, ನಾಗರಹೊಳೆ, ಶ್ರೀರಂಗಪಟ್ಟಣ ಎಂದು ಪ್ರವಾಸ ಮಾಡಿದೆವು. ಹಳೇ ದಿನಗಳು, ಮಾತುಕತೆಯನ್ನೆಲ್ಲ ನೆನಪಿಸಿಕೊಂಡೆವು. ನನ್ನನ್ನು ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾಗ ಸತ್ತವರಿಗೆಂದು ಬೃಂದಾವನ, ಸ್ಮಾರಕಗಳನ್ನು ನಿರ್ಮಿಸುವುದಕ್ಕೆ ಅವನ ವಿರೋಧವಿದ್ದುದನ್ನು ಹೇಳಿದೆ. ಸೋಮಶೇಖರನ ಹೆಂಡತಿ ಜಿಮ್ಮಿ ಕೆಂಚಾಟ, ಕುತೂಹಲದಿಂದ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಳು. ಈಗ ಸೋಮಶೇಖರನ ಅಭಿಪ್ರಾಯ ಇನ್ನೂ ಬದಲಾಗಿತ್ತು.
ನಿಮ್ಮ ಜನಾಂಗದವರ ರೀತಿ ಹೆಣ ಸುಡುವುದು ಕೂಡ waste. ಸೌದೆ, ಸೊಪ್ಪುಗಳನ್ನೆಲ್ಲ ಏಕೆ ಪೋಲು ಮಾಡಬೇಕು. ಹೂತರೂ ಅಷ್ಟೇ, ಸುಟ್ಟರೂ ಅಷ್ಟೇ! ಮನುಷ್ಯ ಇಲ್ಲ ಎಂದಮೇಲೆ ಇಲ್ಲ.
ಆದರೆ ಜಿಮ್ಮಿಯ ಪಾರ್ಸಿ ಜನರಲ್ಲಿ ಸತ್ತವರ ಹೆಣವನ್ನು ತೆಗೆದುಕೊಂಡು ಹೋಗಿ ಊರಿನ ಬಯಲಿನ ಕೊನೆಯಲ್ಲಿರುವ ಎತ್ತರದ ಗೋಪುರದಲ್ಲಿ ನೇತು ಹಾಕಿಬಿಡುತ್ತಾರೆ. ನಾಲ್ಕಾರು ದಿನಗಳಲ್ಲಿ ಪ್ರಾಣಿ-ಪಕ್ಷಿಗಳು ಬಂದು ತಮಗೆ ಬೇಕಾದಾಗ, ಬೇಕಾದಷ್ಟು ಶರೀರದ ಬೇರೆ ಬೇರೆ ಭಾಗಗಳನ್ನು ಊಟ ಮಾಡಿಕೊಂಡು ಹೋಗುತ್ತವೆ. ಅದು ತಿನ್ನದೆ ಹೋದದ್ದು ಅಲ್ಲೇ ಗೊಬ್ಬರವಾಗಿ ಉಳಿದು ಗೋಪುರದ ಸುತ್ತ ಉದ್ಯಾನವನ ಸೊಂಪಾಗಿ ಬೆಳೆಯಲು ನೆರವಾಗುತ್ತದೆ.
ಈ ರೀತಿಯ ಸಂಸ್ಕಾರವೇ ನನಗೆ ಸರಿಯೆನ್ನಿಸಿದೆ. ಇದೊಂದು ರೀತಿಯಲ್ಲಿ ಮನುಷ್ಯನಿಗೆ ಕೃತಜ್ಞತೆ ಸಲ್ಲಿಸುವ ಅವಕಾಶ, ಪ್ರಾಯಶ್ಚಿತ್ತ ಮಾಡಿಕೊಳ್ಳುವ ಅವಕಾಶ. ಮನುಷ್ಯ ಬದುಕಿರುವುದಕ್ಕೂ, ಬದುಕಿರುವುದೇ ಕಾರಣವಾಗಿ ಪ್ರಾಣಿಗಳು, ಪಕ್ಷಿಗಳನ್ನು, ಕ್ರಿಮಿಗಳನ್ನು, ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತಲೇ ಇರುತ್ತಾನೆ. ಅದನ್ನೇ ಬದುಕುವ ರೀತಿಯನ್ನಾಗಿ ಕೂಡ ಮಾಡಿಕೊಂಡಿರುತ್ತಾನೆ ಯಾರೂ ಹೇಳುವವರು ಕೇಳುವವರಿಲ್ಲವೆಂದು. ಇದೆಲ್ಲದಕ್ಕೂ ಪ್ರಾಯಶ್ಚಿತ್ತವಾಗಿ, ಪರಿಹಾರವಾಗಿ ದೇಹವನ್ನು ಪ್ರಾಣಿ-ಪಕ್ಷಿಗಳಿಗೆ ಒಡ್ಡಿಕೊಳ್ಳುವುದೇ ಶ್ರೇಷ್ಠವೆನಿಸುತ್ತದೆ.
*****

ಇದನ್ನೆಲ್ಲ ಸೋಮಶೇಖರ ಹೇಳಿದಾಗ ನಾವು ನಾಗರಹೊಳೆ ಕಾಡಿನ ದಟ್ಟವಾದ ಭಾಗದಲ್ಲಿದ್ದೆವು. ಸುತ್ತುಲೂ ಗಾಢವಾದ ಮೌನ. ಜಿಮ್ಮಿ ಏಕೋ ಮುಖ ಸಣ್ಣಗೆ ಮಾಡಿಕೊಂಡಿದ್ದರು.

ಪ್ರವಾಸ ಮುಗಿಸಿ ಮುಂಬೈಗೆ ವಾಪಸ್‌ ಹೋದ ಮೇಲೆ ಸೋಮಶೇಖರ ಪ್ರತಿದಿನವೂ ಸಂಜೆ ವಾಯುವಿಹಾರಕ್ಕೆ ಹೋಗುತ್ತಿದ್ದ ಪಾರ್ಸಿ ಜನಾಂಗದ ಸ್ಮಶಾನ, ಗೋಪುರ, ಉದ್ಯಾನವನದ ಚಿತ್ರಗಳನ್ನು ತೆಗೆದು ಮೊಬೈಲ್‌ನಲ್ಲಿ ಪದೇ ಪದೇ ಕಳಿಸುತ್ತಲೇ ಇದ್ದ.
[ಸ್ಮಶಾನದ ಚಿಕ್ಕಪ್ಪನ ಮನೆ ಕಿರುಗತೆಗಳ ಸಂಗ್ರಹದಿಂದ]