ರಾತ್ರಿ ಮಾತ್ರ ಮಲಗುವುದು ಸಮಸ್ಯೆಯಾಗುತ್ತಿತ್ತು. ವೈದ್ಯಕೀಯ ಯಂತ್ರಗಳು ಹಗಲು ಹೊತ್ತು ಕೊಂಯ ಕೊಂಯ ಮಾಡುವುದನ್ನು ಸಹಿಸಿದರೂ ರಾತ್ರಿಯ ನೀರವ ವಾತಾವರಣದಲ್ಲಿ ಕಿರಿಕಿರಿ ಎನಿಸುತ್ತಿತ್ತು. ಅಂಥ ಪ್ರಸಂಗಗಳಲ್ಲಿ ರೋಗಿಗಳು ಅಸಹಾಯಕರಾಗಿ ಸಹನೆ ಕಳೆದುಕೊಳ್ಳುವ ಸ್ಥಿತಿಯಲ್ಲಿರುತ್ತಾರೆ. ಆಗ ನಾನೊಂದು ಉಪಾಯ ಹುಡುಕಿದೆ. ಫ್ಯಾನಿನ ತಂಗಾಳಿಯ ಕಡೆಗೆ ಮಾತ್ರ ಲಕ್ಷ್ಯಕೊಟ್ಟು ಬೇರೆ ಏನನ್ನೂ ಯೋಚಿಸದೆ ಅದನ್ನೇ ಆನಂದಿಸುತ್ತಿದ್ದೆ. ಯಾವ ಮಗ್ಗುಲು ಹೊರಳಿ ಮಲಗಿದರೆ ಖುಷಿ ಕೊಡುವುದೋ ಹಾಗೆ ಮಲಗಿ ಅದನ್ನೇ ಆನಂದಿಸುತ್ತಿದ್ದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 99ನೇ ಕಂತು ನಿಮ್ಮ ಓದಿಗೆ
2021ನೇ ಫೆಬ್ರುವರಿ 24ರಿಂದ ಮಾರ್ಚ್ 1 ರ ವರೆಗೆ ಕಾಶ್ಮೀರದಲ್ಲಿದ್ದು ಮಾರ್ಚ್ 1 ರಂದು ಮಧ್ಯರಾತ್ರಿ ಗೆಳೆಯರ ಜೊತೆ ಬೆಂಗಳೂರು ತಲುಪಿದೆ. ಫೆಬ್ರುವರಿ 24 ರಂದು ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ಅಂತರ‍್ರಾಷ್ಟ್ರೀಯ ವಿಮಾನ ನಿಲ್ದಾಣ ಬಿಟ್ಟ ವಿಮಾನ ದೆಹಲಿ ತಲುಪಿದ ನಂತರ ಇನ್ನೊಂದು ವಿಮಾನ ಹಿಡಿದು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಇಳಿದಾಗ ಮಧ್ಯಾಹ್ನವಾಗಿತ್ತು. ವಿಮಾನ ನಿಲ್ದಾಣದ ಸಿಬ್ಬಂದಿ ರ‍್ಯಾಪಿಡ್ ಟೆಸ್ಟ್ ಮಾಡಿ ನೆಗೆಟಿವ್ ಬಂದ ಮೇಲೆ ಶ್ರೀನಗರ ಪ್ರವೇಶಕ್ಕೆ ಅನುಮತಿ ನೀಡಲಾಯಿತು.
ಮಧ್ಯಾಹ್ನ ಊಟದ ನಂತರ ದಾಲ್ ಸರೋವರದ ಬೋಟ್ ಹೌಸ್ ಸೇರುವ ವೇಳೆಗೆ ಸಾಯಂಕಾಲವಾಗಿತ್ತು. ಬಹಳ ದಿನಗಳಿಂದ ಪ್ರವಾಸಿಗರು ಬಾರದೆ ಇದ್ದುದರಿಂದ ದಾಲ್ ಸರೋವರ ಬೋಟ್ ಹೌಸ್‌ಗಳೆಲ್ಲ ಶಿಸ್ತನ್ನು ಕಳೆದುಕೊಂಡಿದ್ದವು. ಅವುಗಳ ಮಾಲೀಕರು ಕಷ್ಟಪಟ್ಟು ಅವುಗಳನ್ನು ಕಾಯ್ದುಕೊಂಡು ಬಂದದ್ದೇ ದೊಡ್ಡದೆನಿಸಿತು. ಪ್ರಕೃತಿಯ ಸೌಂದರ್ಯದ ಮಧ್ಯೆ ರಾತ್ರಿ ಕಳೆದೆವು. ರಗ್ಗುಗಳು ಸಾಕಷ್ಟು ಇದ್ದುದರಿಂದ ಚಳಿಯನ್ನು ತಡೆದುಕೊಂಡರೂ ಎಲ್ಲವೂ ಅಸ್ತವ್ಯಸ್ತವೆನಿಸುತ್ತಿತ್ತು. ಆಗಲೆ ಅನಿಸಿತು ಇಲ್ಲಿಗೆ ಬರಬಾರದಿತ್ತು ಎಂದು.
ಮರುದಿನ ಥ್ರಿ ಸ್ಟಾರ್ ಹೊಟೆಲ್ ವ್ಯವಸ್ಥೆ ಇತ್ತು. ಅಲ್ಲಿ ಹೋದಮೇಲೆ ಎಲ್ಲವೂ ಚೆನ್ನಾಗಿ ಅನಿಸತೊಡಗಿತು. ಬಾಡಿಗೆ ವಾಹನದ ವ್ಯುವಸ್ಥೆಯಾಗಿದ್ದರಿಂದ ಫೆಬ್ರುವರಿ 29ರ ವರೆಗೂ ಸುತ್ತಿದೆವು. ಆಗ ಏನೂ ಅನಿಸಲಿಲ್ಲ. ವಾತಾವರಣ ಚೆನ್ನಾಗಿಯೆ ಇತ್ತು.
ಹೊಟೆಲ್‌ಗೆ ಹೋದ ನಂತರ ಗುಲ್ಮಾರ್ಗ್‌ಗೆ ಹೊರಟೆವು. ಹೋಗುವಾಗ ದಾರಿ ಮಧ್ಯೆ ವಾಹನ ನಿಂತಿತು. ಅಲ್ಲಿಯ ಅಂಗಡಿಯೊಂದರಲ್ಲಿ ಗುಲ್ಮಾರ್ಗಕ್ಕೆ ಹೋಗುವವರು ಅವಶ್ಯ ಧರಿಸಬೇಕಾದ ಗಂ ಬೂಟು, ಓವರ್ ಕೋಟ್ ಮತ್ತು ಕ್ಯಾಪ್‌ಗಳನ್ನು ಒಂದು ದಿನಕ್ಕಾಗಿ ಬಾಡಿಗೆಗೆ ಪಡೆಯಬೇಕಿತ್ತು. ಅವುಗಳನ್ನು ಧರಿಸಿದಾಗ ಕೊರೋನಾದ ನೆನಪಾಗತೊಡಗಿತು. ಎಷ್ಟೋ ದಿನಗಳಿಂದ ಅವುಗಳನ್ನು ತೊಳದಿಲ್ಲ ಮತ್ತು ಎಷ್ಟೋ ಜನರು ಈಗಾಗಲೇ ಧರಿಸಿದ್ದು ಎಂಬ ಭಾವ ಮೂಡಿದೊಡನೆ ಹೇಸಿಕೆ ಎನಿಸತೊಡಗಿತು. ಆದರೆ ಆ ಚಳಿಗೆ ಮತ್ತು ಹಿಮದಲ್ಲಿ ತಿರುಗಾಡಲಿಕ್ಕೆ ಅವೆಲ್ಲ ಅನಿವಾರ್ಯವಾಗಿದ್ದವು. ಗುಲ್ಮಾರ್ಗದ ಸೌಂದರ್ಯ ವರ್ಣಿಸಲಸಾಧ್ಯ. ಆದರೆ ರಾತ್ರಿ ವಾಪಸಾಗುವಾಗ ಸುಸ್ತಾಗಿ ಹೋಗಿತ್ತು.
ಮರುದಿನ ಸೋನ್ ಮಾರ್ಗಗೆ ಹೋಗುವಾಗ ಮಧ್ಯದಲ್ಲೇ ನಮ್ಮ ವಾಹನ ನಿಂತಿತು. ಮುಂದೆ ರಸ್ತೆ ಹಿಮಾಚ್ಛಾದಿತವಾಗಿದ್ದರಿಂದ ಅಂಥ ರಸ್ತೆಯಲ್ಲಿ ಹೋಗುವಂಥ ಚಿಕ್ಕ ವಾಹನಗಳಲ್ಲಿ ಮುಂದೆ ಸಾಗಿದೆವು. ಅದು ಕೂಡ ಅಪೂರ್ವ ಅನುಭವವೆ. ಇಡೀ ಜಗತ್ತೇ ಹಿಮಮಯವಾದ ಹಾಗೆ ಅನಿಸುತ್ತಿತ್ತು. ದಾರಿ ಮಧ್ಯೆ ಸಿಂಧುನದಿ ಹರಿಯುವುದು ನೋಡಿದಾಗ, ‘ಅದು ಮಹೋನ್ನತ ಸಿಂಧುನದಿ ಸಂಸ್ಕೃತಿ’ಗೆ ಕಾರಣವಾದುದಕ್ಕೆ ಖುಷಿ ಎನಿಸಿತು.
ಮರುದಿನ ಪಹಲ್‌ಗಾಂವಗೆ ಪ್ರಯಾಣ. ಅಲ್ಲಿನ ಹೊಟೇಲ್ ತಲುಪುವುದರೊಳಗಾಗಿ ರಾತ್ರಿಯಾಗಿತ್ತು. ಬೆಳಿಗ್ಗೆ ಕುದುರೆ ಸವಾರಿ ಮೂಲಕ ‘ಮಿನಿ ಸ್ವಿಟ್ಸರ್‌ಲ್ಯಾಂಡ್’ಗೆ ಹೋಗಬೇಕಿತ್ತು. ಆ ಪ್ರದೇಶಕ್ಕೆ ಸಲ್ಮಾನ್ ಖಾನ್ ಹಾಗೆ ಕರೆದ ಕಾರಣ ಎಲ್ಲರೂ ಹಾಗೇ ಕರೆಯುತ್ತಿದ್ದಾರೆ ಎಂದು ಕುದುರೆಯ ಜೊತೆಗೆ ನನ್ನೊಡನೆ ಬರುತ್ತಿದ್ದ ಆಳು ಹೇಳಿದ. ಕಡಿದಾದ ಕಾಲುದಾರಿಯಲ್ಲಿ ಬೀಳುವ ಭಯದಿಂದ ಕೈಯಲ್ಲಿ ಜೀವ ಹಿಡಿದು ಕುದುರೆ ಸವಾರಿ ಮಾಡುತ್ತ ಹೊರಟೆವು. ಇತ್ತೀಚಿನ ವರ್ಷಗಳಲ್ಲಿ “ಮಿನಿ ಸ್ವಿಟ್ಸರ್‌ಲ್ಯಾಂಡ್” ಎಂದು ಕರೆಯಲಾಗುವ ಸ್ಥಳಕ್ಕೆ ಭೇಟಿ ನೀಡಿ ವಾಪಸ್ ಬಂದು ಶೇಷನಾಗ ಕಡೆಗೆ ವಾಹನಗಳಲ್ಲಿ ಹೋದೆವು.
ಹೀಗೆ ವಿವಿಧ ಕಡೆ ಸುತ್ತಾಡಿದ ನಂತರ ವಾಪಸ್ ಬರುವ ಹಿಂದಿನ ದಿನ ಶಂಕರಾಚಾರ್ಯರು ಭೇಟಿ ನೀಡಿದ ಬೆಟ್ಟದ ಮೇಲಿನ ಶಿವದೇವಾಲಯ ನೋಡಲು ಹೋದೆವು. ಮೇಲೆ ಹೋಗಲು 250 ಮೆಟ್ಟಿಲು ಹತ್ತಬೇಕಿತ್ತು. ಸ್ವಲ್ಪ ಹತ್ತಿದ ಮೇಲೆ ಒಮ್ಮಿಂದೊಮ್ಮಲೆ ವಾತಾವರಣದಲ್ಲಿ ಬದಲಾವಣೆಯಾಗಿ ಹಿಮಪಾತ ಪ್ರಾರಂಭವಾಯಿತು. ಕೊಡೆ ಇಲ್ಲದ ಕಾರಣ ತೊಯ್ಸಿಕೊಂಡೇ ಮೇಲೆ ಹೋಗಿ ನಂತರ ಕೆಳಗೆ ಬರುವುದರೊಳಗೆ ಬಹಳ ಸುಸ್ತಾಯಿತು.
ಮರುದಿನ ಮಾರ್ಚ್ 1. ಅಂದು ಮಧ್ಯಾಹ್ನದೊಳಗೆ ಶ್ರೀನಗರ ವಿಮಾನ ನಿಲ್ದಾಣ ತಲುಪಬೇಕಿತ್ತು. ಕಾಶ್ಮೀರದ ಅನುಪಮ ಪ್ರಕೃತಿ ಸೌಂದರ್ಯದ ಮಧ್ಯೆ ಅಲ್ಲಿನ ನಿವಾಸಿಗಳ ಕರುಣಾಜನಕ ಬದುಕು ಮತ್ತು ಪ್ರವಾಸಿಗರಿಲ್ಲದೆ ಆ ಜನ ಪರಿತಪಿಸುವ ಸ್ಥಿತಿ ಮುಂತಾದವುಗಳ ಕುರಿತು ಧಾರವಾಡ ತಲುಪಿದ ಮೇಲೆ ಬರೆಯುವ ಯೋಚನೆಯನ್ನು ವಿಮಾನದಲ್ಲಿ ಕುಳಿತಾಗ ಮಾಡುತ್ತಲೇ ಇದ್ದೆ. ಮಾರ್ಚ್ 1 ರಂದೇ ರಾತ್ರಿ 11 ಗಂಟೆಗೆ ಬೆಂಗಳೂರು ಅಂತರ‍್ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆವು.
ಮಾರ್ಚ್ 2 ರಂದು ರಾತ್ರಿ ಬಸ್ ಹತ್ತಿ ಧಾರವಾಡಕ್ಕೆ ಬಂದೆ. ಸ್ವಲ್ಪ ಕೆಮ್ಮು ಕಾಣಿಸಿಕೊಳ್ಳತೊಡಗಿತು. ಗಂಟಲು ಒಣಗುತ್ತಿತ್ತು. ಕೂಡಲೆ ಇ.ಎನ್.ಟಿ. ವೈದ್ಯರ ಬಳಿ ಹೋದೆ. ಅವರು ಹೇಳಿದ ಮಾತ್ರೆಗಳನ್ನು ತೆಗೆದುಕೊಂಡು ಮಾರ್ಚ್ 8 ರ ವರೆಗೆ ದಿನಗಳೆದೆ. ಮಾರ್ಚ್ 8 ರಂದು ಕೊರೋನಾ ಬಗ್ಗೆ ಸಂಶಯ ಬಂದು ಧಾರವಾಡದ ಸರ್ಕಾರಿ ಆಸ್ಪತ್ರೆಗೆ ಹೋದೆ. ಕೊರೋನಾ ಪಾಸಿಟಿವ್ ಆಗಿದ್ದು ದೃಢಪಟ್ಟಿತು. ಸಿ.ಟಿ. ಸ್ಕ್ಯಾನ್ ಕೂಡ ಆಯಿತು. ಮಾರ್ಚ್ 10 ರಂದು ಆಸ್ಪತ್ರೆಗೆ ಹೋದಾಗ ಅಲ್ಪಪ್ರಮಾಣದಲ್ಲಿ ನ್ಯುಮೋನಿಯಾ ಆಗಿದ್ದು ಸಿ.ಟಿ. ಸ್ಕ್ಯಾನ್ ಮೂಲಕ ತಿಳಿದುಬಂದಿತ್ತು. ವೈದ್ಯರ ಸಲಹೆ ಮೇರೆಗೆ ಕೊನೆಗೂ ಮಾರ್ಚ್ 11 ರಂದು ಧಾರವಾಡ ಸರ್ಕಾರಿ ಆಸ್ಪತ್ರೆಯ ಕೊವಿಡ್ ಐಸಿಯುಗೆ ಸೇರಿದೆ. ಐಸಿಯು ಸೇರಿದ್ದು ನನ್ನ ಜೀವನದ ಮೊದಲ ಅನುಭವವಾಯಿತು. ಐಸಿಯುಗೆ ಭಯಪಟ್ಟೇ ಮೂರು ದಿನ ಮನೆಯಲ್ಲೇ ಹೋಂ ಕೊರಂಟೈನ್‌ನಲ್ಲಿ ಉಳಿದಿದ್ದೆ. ಆದರೆ ಬಹಳ ತಡಮಾಡದೆ ಈ ನಿರ್ಧಾರ ಕೈಗೊಂಡಿದ್ದು ಒಳ್ಳೆಯದೇ ಆಯಿತು.
ಆ ಸಂದರ್ಭದಲ್ಲಿ ಐಸಿಯು ಅನ್ನು ಎಲ್ಲ ಆಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ಸುಸಜ್ಜಿತಗೊಳಿಸಲಾಗಿತ್ತು. ಆದರೆ ಇಬ್ಬರು ರೋಗಿಗಳು ಮಾತ್ರ ಇದ್ದರು. ನಾನು ಮೂರನೆಯವನಾಗಿ ಸೇರಿದೆ. ಇದರರ್ಥ ಧಾರವಾಡದಲ್ಲಿ ಕೊರೋನಾ ರೋಗಿಗಳು ಇದ್ದಿದ್ದಿಲ್ಲ ಎಂದಲ್ಲ. ಜನರು ಹೋಂ ಕೊರಂಟೈನ್ ಇಷ್ಟಪಡುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು.
ಸುಸಜ್ಜಿತ ಐಸಿಯು ವ್ಯವಸ್ಥೆ ಬಹಳ ಮೆಚ್ಚುಗೆಯಾಯಿತು. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಸಹಾಯಕರು, ದಾದಿಯರು ಮತ್ತು ವೈದ್ಯರು ಬಂದು ತಮ್ಮ ಕರ್ತವ್ಯಗಳನ್ನು ಚೆನ್ನಾಗಿ ನಿಭಾಯಿಸುತ್ತಿದ್ದರು. ಔಷಧಿ ಇಂಜೆಕ್ಷನ್ ಮುಂತಾದವುಗಳ ಕಾರಣದಿಂದ ಶರೀರ ಅಶಕ್ತವಾಗಿ ಬಾಯಿ ಕೆಟ್ಟು ಯಾವ ಆಹಾರವೂ ರುಚಿಸದಂತಾಯಿತು. ಆದರೂ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕಾಗಿ ಸ್ವಲ್ಪವಾದರೂ ತಿನ್ನಲೇಬೇಕಾಗುವುದು. ಬೇಗ ಗುಣಮುಖರಾಗಲು ವೈದ್ಯರು ಮತ್ತು ದಾದಿಯರು ಹೇಳಿದ್ದನ್ನು ವ್ರತದಂತೆ ಪಾಲಿಸಬೇಕಾಗುವುದು.
ರಾತ್ರಿ ಮಾತ್ರ ಮಲಗುವುದು ಸಮಸ್ಯೆಯಾಗುತ್ತಿತ್ತು. ವೈದ್ಯಕೀಯ ಯಂತ್ರಗಳು ಹಗಲು ಹೊತ್ತು ಕೊಂಯ ಕೊಂಯ ಮಾಡುವುದನ್ನು ಸಹಿಸಿದರೂ ರಾತ್ರಿಯ ನೀರವ ವಾತಾವರಣದಲ್ಲಿ ಕಿರಿಕಿರಿ ಎನಿಸುತ್ತಿತ್ತು. ಅಂಥ ಪ್ರಸಂಗಗಳಲ್ಲಿ ರೋಗಿಗಳು ಅಸಹಾಯಕರಾಗಿ ಸಹನೆ ಕಳೆದುಕೊಳ್ಳುವ ಸ್ಥಿತಿಯಲ್ಲಿರುತ್ತಾರೆ. ಆಗ ನಾನೊಂದು ಉಪಾಯ ಹುಡುಕಿದೆ. ಫ್ಯಾನಿನ ತಂಗಾಳಿಯ ಕಡೆಗೆ ಮಾತ್ರ ಲಕ್ಷ್ಯಕೊಟ್ಟು ಬೇರೆ ಏನನ್ನೂ ಯೋಚಿಸದೆ ಅದನ್ನೇ ಆನಂದಿಸುತ್ತಿದ್ದೆ. ಯಾವ ಮಗ್ಗುಲು ಹೊರಳಿ ಮಲಗಿದರೆ ಖುಷಿ ಕೊಡುವುದೋ ಹಾಗೆ ಮಲಗಿ ಅದನ್ನೇ ಆನಂದಿಸುತ್ತಿದ್ದೆ. ಮನಸ್ಸಿನಲ್ಲಿ ಬೇರೆ ಯಾವುದೇ ವಿಚಾರಗಳು ಬರದಂತೆ ನೋಡಿಕೊಳ್ಳುತ್ತಿದ್ದೆ. ಬೆಡ್ಡು, ತಲೆದಿಂಬು, ವೈದ್ಯಕೀಯ ಯಂತ್ರಗಳು, ಫ್ಯಾನು ಮುಂತಾದವುಗಳನ್ನು ನಾನು ಸಂಗಾತಿಗಳೆಂದು ಭಾವಿಸಿದೆ. ಇದೊಂದು ಅನುಭಾವ.
ನಾನು ನಿಜಕ್ಕೂ ಸುದೈವಿ ಎಲ್ಲ ರೀತಿಯ ವೈದ್ಯಕೀಯ ವ್ಯವಸ್ಥೆಯಿಂದಾಗಿ ವೈದ್ಯರು ಮತ್ತು ಅವರ ಸಿಬ್ಬಂದಿಯ ಕಾಳಜಿಯಿಂದಾಗಿ ಗುಣಮುಖನಾಗಿ ಎಂಟನೇ ದಿನ, ಅಂದರೆ ಮಾರ್ಚ್ 18ರಂದು ರಾತ್ರಿ ಮನೆಗೆ ಬಂದೆ.
ಬರುವ ದಿನ ಒಂದು ಅನುಭವವಾಯಿತು. ಹಿಂದಿನ ದಿನವೇ “ನಾಳೆ ನಿಮ್ಮ ಬಿಡುಗಡೆಯಾಗುವುದು” ಎಂದು ವೈದ್ಯರೊಬ್ಬರು ಹೇಳಿ ಹೋಗಿದ್ದರು. ಮಾರ್ಚ್ 18 ರಂದು ಮನೆ ಸೇರುವ ವಿಚಾರವೇ ಮನಸ್ಸಿನಲ್ಲಿ ಉಳಿಯಿತು. ಅಂದು ಬೆಳಿಗ್ಗೆ 10 ಗಂಟೆಯೊಳಗಾಗಿ ಗಂಟುಮೂಟೆ ಕಟ್ಟಿಕೊಂಡು ರೆಡಿಯಾಗಿ ಕುಳಿತಿದ್ದೆ. ಡಿಸ್‌ಚಾರ್ಜ್ ಮಾಡುವ ವೈದ್ಯರು ಬರಲಿಲ್ಲ. ಮಧ್ಯಾಹ್ನ ಬರುವುದಾಗಿ ದಾದಿ ಹೇಳಿದರು. ಸಾಯಂಕಾಲ ಐದು ಗಂಟೆಗೆ ದಾದಿ ಬಂದರು. “ಡ್ಯೂಟಿ ಡಾಕ್ಟರ್ ಬಂದಿದ್ದರು. ನಿಮಗೆ ನಾಳೆ ಡಿಸ್‌ಚಾರ್ಜ್ ಮಾಡುವುದಾಗಿ ಹೇಳಿ ಹೋದರು” ಎಂದು ತಿಳಿಸಿದರು. ಆ ಡಾಕ್ಟರ್‌ಗೆ ನಾನು ನೋಡಿದ್ದಿಲ್ಲ. ನನಗೆ ಬಹಳ ಅಸಹನೀಯವೆನಿಸಿತು. ಇದೆಂಥ ಬೇಜವಾಬ್ದಾರಿ ಡಾಕ್ಟರ್ ಎಂದು ಬೇಸರಪಟ್ಟೆ. ಹಿರಿಯ ವೈದ್ಯರ ನಂಬರ್ ನನ್ನ ಬಳಿ ಇದ್ದದ್ದು ಒಳ್ಳೆಯದಾಯಿತು. ನಾನು ಅವರ ಮೊಬೈಲ್‌ಗೆ ಕರೆ ಮಾಡಿದೆ. ಅವರ ಮುಂದೆ ಬೇಸರ ವ್ಯಕ್ತಪಡಿಸಿದೆ. “ನಾನು ಇಂದು ಮನೆಗೆ ಹೋಗಲು ಮಾನಸಿಕವಾಗಿ ಸಿದ್ಧನಾಗಿದ್ದೇನೆ. ಬೆಳಿಗ್ಗೆಯಿಂದ ಡ್ಯೂಟಿ ಡಾಕ್ಟರ್‌ಗಾಗಿ ದಾರಿ ಕಾಯ್ದೆ, ಬರಲಿಲ್ಲ. ಸಾಯಂಕಾಲ ಬಂದು ಭೇಟಿಯಾಗದೆ ಹೋಗಿದ್ದಾರೆ. ನನಗೆ ನಾಳೆಯವರೆಗೆ ಕಾಯಲು ಸಾಧ್ಯವೇ ಇಲ್ಲ. ಹಿಂದಿನ ದಿನವೇ ಹೇಳಿದ್ದರೆ ಯಾವುದೇ ಸಮಸ್ಯೆ ಇರಲಿಲ್ಲ. ರೋಗಿಗಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯ” ಎಂದು ಬೇಸರ ವ್ಯಕ್ತಪಡಿಸಿದೆ. ಅವರು ಸಮಾಧಾನದಿಂದ ಕೇಳಿದರು. “ನೀವು ಹೇಳಿದ್ದು ಸರಿ. ಈಗಲೇ ಇನ್ನೊಬ್ಬ ವೈದ್ಯರನ್ನು ಕಳಿಸುವೆ” ಎಂದರು. ಲೇಡಿ ಡಾಕ್ಟರ್ ಬಂದರು. ಒಂದು ಗಂಟೆಯಲ್ಲಿ ದಾಖಲೆ ತಯಾರಿಸಿ, ಎಲ್ಲ ಬರೆದುಕೊಟ್ಟು ಸಮಾಧಾನದಿಂದ ಎಲ್ಲ ಮಾತ್ರೆಗಳ ಬಗ್ಗೆ ವಿವರಿಸಿ, ಹೋಂ ಕೊರಂಟೈನ್‌ನಲ್ಲಿ ಹೇಗೆ ಇರಬೇಕು ಎಂಬುದನ್ನು ತಿಳಿಸಿ ಕಳುಹಿಸಿಕೊಟ್ಟರು. ಬಿಡುಗಡೆಯ ಆನಂದವನ್ನು ಅನುಭವಿಸಿದೆ.
ಯಾಂಟಿ ಬಯೋಟಿಕ್ಸ್ ಮುಂತಾದ ಔಷಧಿಗಳಿಂದಾಗಿ ಅಶಕ್ತತನ ಸಹಜವಾಗಿಯೇ ಬರುತ್ತದೆ. ಸ್ಟಿರೊಯ್ಡ್ಸ್ ಕಾರಣದಿಂದ ತಾತ್ಕಾಲಿಕ ಮಧುಮೇಹ ಬರುತ್ತದೆ. ನಂತರ ಕಡಿಮೆಯಾಗುತ್ತದೆ. ಕೆಲವರಿಗೆ ಹಾಗೇ ಮುಂದುವರಿಯುವ ಸಾಧ್ಯತೆಗಳಿವೆ ಎಂದೂ ಹೇಳುತ್ತಾರೆ. ಈಗ ಕೂಡ ಬಿಪಿ ಮಾತ್ರೆ, ವಿಟಮಿನ್ ಸಿ, ವಿಟಮಿನ್ ಬಿ ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಎಕೊಸ್ಪ್ರಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವೆ. ಎಕೊಸ್ಪ್ರಿನ್ ಮಾತ್ರೆಯನ್ನು ದಿನಕ್ಕೊಂದರಂತೆ ಆರು ತಿಂಗಳು ತೆಗೆದುಕೊಳ್ಳಬೇಕೆಂದು ವೈದ್ಯರು ಹೇಳಿದ್ದಾರೆ. ಹೀಗೆ ಕೊರೋನಾ ರೋಗ ನಿರ್ನಾಮ ಮಾಡಿದ ಔಷಧಿಗಳ ದುಷ್ಪರಿಣಾಮಗಳನ್ನು ಹೋಗಲಾಡಿಸಲು ಮತ್ತೆ ಹೊಸ ಔಷಧಿಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ.
ಕೊರೋನಾ ಬರದ ಹಾಗೆ ನೋಡಿಕೊಳ್ಳುವುದೇ ಎಲ್ಲದರಲ್ಲಿ ಉತ್ತಮವಾದುದು ಎಂಬುದು ನನ್ನ ವಿಚಾರವಾಗಿದೆ. ಮುಂಜಾಗ್ರತಾ ಕ್ರಮದಿಂದ ಕೊರೋನಾ ಬರದಂತೆ ನೋಡಿಕೊಳ್ಳಲು ಸಾಧ್ಯವಿದೆ. ಪ್ರತಿದಿನ ಒಂದರಂತೆ 10 ದಿನಗಳವರೆಗೆ ಬೆಳಗಿನ ಉಪಹಾರದ ನಂತರ ವಿಟಮಿನ್ ಸಿ 500 ಎಂ.ಜಿ. ಮಾತ್ರೆ ಚೀಪುವುದು ಮತ್ತು ಜಿಂಕ್ ಸಮೇತ ಇರುವ ವಿಟಮಿನ್ ಬಿ ಕಾಂಪ್ಲೆಕ್ಸ್ ಮಾತ್ರೆಯನ್ನು ನುಂಗುವುದು. ದಿನಕ್ಕೆರಡು ಬಾರಿ ಉಗಿ (ಸ್ಟೀಂ) ತೆಗೆದುಕೊಳ್ಳುವುದು ಅವಶ್ಯ. ಕೊರೋನಾ ವೈರಾಣು ಮೂಗಿನಲ್ಲಿ ವಾಸ ಮಾಡಿದ್ದರೆ ಉಗಿಯಿಂದ ಸತ್ತುಹೋಗುವುದು. ಕಷಾಯ ರೋಗನಿರೋದಕ ಶಕ್ತಿ ಕೊಡುವುದು. ಶುದ್ಧ ಹವೆ ಕೂಡ ಬಹಳ ಸಹಾಯಕವಾಗುವುದು. ಕಷಾಯ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಜನರಿಂದ ಆರಡಿ ಅಂತರ ಕಾಯ್ದುಕೊಳ್ಳುವುದು. ಮೂಗು ಬಾಯಿ ಮುಚ್ಚುವಂಥ ಸ್ವಚ್ಛ ಮಾಸ್ಕ್ ಧರಿಸುವುದು. ಬೆರಳ ಸಂದಿ ಸಮೇತ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು. ಕೈ ತೊಳೆದುಕೊಳ್ಳುವ ಅವಕಾಶ ಇಲ್ಲದ ಸ್ಥಳಗಳಲ್ಲಿಯಾದರೂ ಸ್ಯಾನಿಟೈಜರ್ ಬಳಸುವುದು. ಲಘು ವ್ಯಾಯಾಮ, ನಡಿಗೆ ಮುಂತಾದವು ಮುಂಜಾಗ್ರತಾ ಕ್ರಮಗಳಾಗಿವೆ.
ರೋಗ ಲಕ್ಷಣಗಳು ಕಂಡು ಬಂದರೆ ಶೀಘ್ರ ವೈದ್ಯರನ್ನು ಕಾಣುವುದು ಅವಶ್ಯವಾಗಿದೆ. ವೈದ್ಯರನ್ನು ಕಾಣುವ ಸ್ಥಿತಿಯಲ್ಲಿ ಇಲ್ಲದ ಸಂದರ್ಭದಲ್ಲಿ ಪ್ಯಾರಾಸಿಟಮೊಲ್ 650 ಎಂ.ಜಿ. ಮಾತ್ರೆಯನ್ನು ಬೆಳಿಗ್ಗೆ ತಿಂಡಿ ಮತ್ತು ರಾತ್ರಿ ಊಟದ ನಂತರ 5 ದಿನ ತೆಗೆದುಕೊಳ್ಳಬೇಕು. ಮೂರು ದಿನಗಳವರೆಗೆ ಪ್ರತಿ ದಿನ ಬೆಳಿಗ್ಗೆ ತಿಂಡಿ ತಿಂದ ನಂತರ ಅಜಿಂ 500 ಎಂ.ಜಿ. ಮಾತ್ರೆ ತೆಗೆದುಕೊಳ್ಳಬೇಕು. ಮೂರು ದಿನಗಳವರೆಗೆ ಸಿ.ಪಿ.ಎಂ. 4 ಎಂ.ಜಿ. ಮಾತ್ರೆಯನ್ನು ರಾತ್ರಿ ಊಟದ ನಂತರ ತೆಗೆದುಕೊಳ್ಳಬೇಕು. ವಿಟಮಿನ್ ಸಿ ಮತ್ತು ವಿಟಮಿನ ಬಿ ಕಾಂಪ್ಲೆಕ್ಸ್ ಮಾತ್ರೆಗಳನ್ನು ಮುಂದುವರಿಸಬೇಕು. ವೈದ್ಯರನ್ನು ಭೇಟಿ ಮಾಡಿದಾಗ ಯಾವ ಯಾವ ಮಾತ್ರೆಗಳನ್ನು ತೆಗೆದುಕೊಂಡಿದ್ದನ್ನು ತಿಳಿಸಬೇಕು. ಈ ಔಷಧಿಗಳ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ.
ಯಾವುದಕ್ಕೂ ಹೆದರಬಾರದು. ಆದರೆ ಜಾಗರೂಕರಾಗಿ ಇರಬೇಕು. ವೈದ್ಯರ ಸಲಹೆ ಅವಶ್ಯ. ಸ್ವಯಂ ವೈದ್ಯರಾಗಬಾರದು. ಕೊರೋನಾ ರೋಗದ ಲಕ್ಷಣಗಳ ಬಗ್ಗೆ ಅರಿವಾದ ಕೂಡಲೆ ವೈದ್ಯರನ್ನು ಕಾಣಲು ಯತ್ನಿಸಬೇಕು. ಬೇಗ ಆಸ್ಪತ್ರೆಗೆ ಹೋದರೆ ವೈದ್ಯರು ಕೊರೋನಾ ರೋಗದಿಂದ ಬೇಗ ಮುಕ್ತಗೊಳಿಸಲು ಸಾಧ್ಯವಾಗುವುದು.
ಕಾಶ್ಮೀರಕ್ಕೆ ಹೋಗುವ ಮೊದಲು ಒಂದು ವರ್ಷ ಮನೆಯಲ್ಲೇ ಇದ್ದೆ. ಯಾವುದೇ ಸಮಸ್ಯೆ ತಲೆದೋರಲಿಲ್ಲ. ಆದರೆ ಒಂದು ಕ್ಷಣದ ಮರೆವಿನಿಂದಾಗಿ ಗೆಳೆಯರ ಕೂಡ ಕಾಶ್ಮೀರಕ್ಕೆ ಹೋಗಿ ತಪ್ಪು ಮಾಡಿದೆ. ನಾನು ಮಾಡಿದ ತಪ್ಪನ್ನು ನೀವಾರೂ ಮಾಡಬಾರದು. ‘ಮನೆಯೇ ಮಂತ್ರಾಲಯ’ ಎಂಬುದನ್ನು ಮರೆಯಬಾರದು.

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.