ಯಾವುದೇ ಗೂಡು ಕಟ್ಟುವ ಗೋಜಿಲ್ಲದೆ, ಮೊಟ್ಟೆಗಳಿಗೆ ಕಾವು, ಗುಟುಕು ನೀಡದೇ, ಬೂದುಕಾಗೆ ಮತ್ತು ಕಪ್ಪುಕಾಗೆಗಳ ಗೂಡಿನಲ್ಲಿ ತಮ್ಮ ಮೊಟ್ಟೆಯನಿಟ್ಟು ಕೈತೊಳೆದುಕೊಳ್ಳುವ ಪಕ್ಷಿಗಳು. ಸಾಧಾರಣವಾಗಿ ಹೆಣ್ಣು ಕೋಗಿಲೆ ಒಂದೇ ಮೊಟ್ಟೆಯನ್ನು ಇಡುತ್ತದೆ. ಹಾಗಾಗಿ ಇವುಗಳನ್ನು ಪರಪುಟ್ಟ ಎಂದೂ ಕರೆಯುತ್ತಾರೆ! ಕಾಗೆಯದೇ ಮೊಟ್ಟೆಯ ಆಕಾರ, ಬಣ್ಣ ಆದರೆ, ತುಸು ಸಣ್ಣ ಗಾತ್ರವಿರುವ ಮೊಟ್ಟೆಗಳನ್ನು ತಾನೂ ಇಡುತ್ತದೆ. ಈ ಮೊಟ್ಟೆ, ಕಾಗೆಯ ಮೊಟ್ಟೆಯಂತೆಯೇ ತಿಳಿಹಸಿರು ಬಣ್ಣದ, ಕಂದು ಬಣ್ಣದ ಗೀರುಗಳು ಮತ್ತು ಮಚ್ಚೆಗಳಿರುತ್ತದೆ. ಮೊಟ್ಟೆಯೊಡೆದು ಹೊರಬಂದ ಮರಿ ಕೋಗಿಲೆ ಹಲವು ವಾರಗಳ ಕಾಲ ಆಹಾರಕ್ಕಾಗಿ ಕಾಗೆಯನ್ನೇ ಆಶ್ರಯಿಸಿರುತ್ತದೆ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೋಗಿಲೆಯ ಕುರಿತ ಬರಹ ಇಲ್ಲಿದೆ
ಇಂದು ನಾವು ತಿಳಿದುಕೊಳ್ಳಲು ಹೊರಟಿರುವುದು ಕೋಗಿಲೆ ಎಂಬ ಅತ್ಯಂತ ಸುಪರಚಿತ ಪಕ್ಷಿಯ ಬಗ್ಗೆ. ವಿವಿಧ ಕೋಗಿಲೆಗಳು, ಕುಕೂಟಗಳು, ಮತ್ತು ಕೆಂಬೂತಗಳು ಸೇರಿರುವ ಕುಕುಲಿಡೆ ಎಂಬ ಕುಟುಂಬಕ್ಕೆ ಸೇರಿದ ಕೋಗಿಲೆಯನ್ನು ಇಂಗ್ಲೀಷ್ ಭಾಷೆಯಲ್ಲಿ ಏಶಿಯನ್ ಕೋಯಲ್ ಎಂದೂ ವೈಜ್ಞಾನಿಕ ಪರಿಭಾಷೆಯಲ್ಲಿ ಯೂಡೈನಾಮಿಸ್ ಸ್ಕೋಲೋಪೇಶಿಯಸ್ ಎಂದೂ ಕರೆಯುತ್ತಾರೆ. ಕೋಗಿಲೆ ಭಾರತ, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಹಾಗೂ ಆಗ್ನೇಯ ಏಶಿಯಾ ಪ್ರದೇಶಗಳಲ್ಲಿ ವಾಸ ಮಾಡುತ್ತವೆ.
ಭಾರತೀಯ ಸಂಸ್ಕೃತಿ, ಪುರಾಣ, ಜಾನಪದ, ಹಾಗೂ ಹಲವಾರು ಶಿಲ್ಪಕಲೆ, ಕಾದಂಬರಿ, ಕವನ-ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಕೋಗಿಲೆಗಳು ಮತ್ತು ಅವುಗಳ ಮಧುರ ಕಂಠದ ಉಲ್ಲೇಖಗಳು ಕಂಡುಬರುತ್ತವೆ.
ಕೋಗಿಲೆಗಳು ಆಹಾರಕ್ಕಾಗಿ ಹಾಗೂ ವಿಶ್ರಾಂತಿ ಪಡೆಯಲು ನೆಲ ಮತ್ತು ಮರಗಳನ್ನಾಶ್ರಯಿಸುವ ಮಧ್ಯಮ ಗಾತ್ರದ ಎಂದರೆ 43 ಸೆಂಟಿಮೀಟರ್ ಗಾತ್ರದ ಹಕ್ಕಿಗಳು. ಗಂಡು ಹಕ್ಕಿ ಮತ್ತು ಹೆಣ್ಣು ಹಕ್ಕಿ ನೋಡಲು ವಿಭಿನ್ನ. ಗಂಡುಹಕ್ಕಿಗೆ ಅಚ್ಚ ಕಪ್ಪು ದೇಹ; ಗಟ್ಟಿಮುಟ್ಟಾದ, ತುಸು ಬಾಗಿದ ಹಳದಿ ಕೊಕ್ಕು; ಚಿಕ್ಕ ಬೂದು ಬಣ್ಣದ ಕಾಲುಗಳು; ಕಾಲ್ಬೆರಳುಗಳ ವಿಶೇಷವೇನೆಂದರೆ, ಇವುಗಳ ಎರಡು ಕಾಲ್ಬೆರಳುಗಳು ಮುಂದೆ ಮತ್ತು ಉಳಿದೆರಡು ಎರಡು ಹಿಂದಕ್ಕೆ ತಿರುಗಿವೆ. ಇದನ್ನು ಝೈಗೋಡ್ಯಾಕ್ಟೈಲಿ ಎನ್ನುತ್ತಾರೆ. ಹೀಗಿರುವುದರಿಂದ ಕೊಂಬೆಯ ಮೇಲೆ ಅವುಗಳ ಹಿಡಿತ ಕಪಿಮುಷ್ಟಿಯ ಹಾಗೆ ದೃಢವಾಗಿರುತ್ತದೆ. ಬಾಲವು ಉದ್ದವಾಗಿ, ಪಟ್ಟೆಪಟ್ಟೆಗಳೊಂದಿಗೆ, ದೇಹಕ್ಕೆ ಭಾರವೋ ಎನಿಸುವಂತೆ ಇರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಕೆಂಪು ಕಣ್ಣು! ಹೆಣ್ಣಿಗೆ ಕಡುಗಂದು ದೇಹ ಮತ್ತು ಮಾಸಲು ಬಿಳಿ ಕೆಳಮೈ ಹಾಗೂ ಮೈತುಂಬ ಕಂದು ಗೀರು ಮತ್ತು ಮಚ್ಚೆಗಳು. ಎರಡು ಹಕ್ಕಿಗಳನ್ನು ಒಟ್ಟಿದೇ ನೋಡಿದರೆ, ಒಂದಕ್ಕೊಂದು ಸಂಬಂಧವೇ ಇಲ್ಲವೇನೋ ಎಂದು ತೋರುತ್ತದೆ. ಅಪ್ರಾಪ್ತ ಹಕ್ಕಿಗಳು ಸಾಧಾರಣವಾಗಿ, ಗೀರುಗಳಿರುವ ಕಂದುಬಣ್ಣದ ದೇಹವನ್ನು ಹೊಂದಿರುತ್ತವೆ. ಕೋಗಿಲೆಗಳು ಜೋಡಿಯಾಗಿ, ತೋಪುಗಳಲ್ಲಿ ಮತ್ತು ಜನವಸತಿಯಿರುವೆಡೆ ಮರಗಳ ಮೇಲೆ, ಪೊದೆಗಳ ನಡುವೆ, ಆಹಾರಕ್ಕಾಗಿ ಬೇಟೆಯಾಡುತ್ತಾ ವಾಸಿಸುತ್ತವೆ.
ಕೋಗಿಲೆ ಮಿಶ್ರಾಹಾರಿ ಪಕ್ಷಿ. ಮೃದ್ವಂಗಿಗಳು, ಹಾವು-ಹಲ್ಲಿಗಳು, ಸಣ್ಣ ಅಕಶೇರುಕಗಳು ಹಾಗೂ ಸಣ್ಣಪುಟ್ಟ ಪಕ್ಷಿಗಳ ಮೊಟ್ಟೆ ಮತ್ತು ಹಣ್ಣುಗಳು ಕೋಗಿಲೆಗಳ ಆಹಾರದ ಪಟ್ಟಿಯಲ್ಲಿ ಸೇರಿವೆ. ಮಳೆಗಾಲ, ಚಳಿಗಾಲದಲ್ಲಿ ಯಾವುದೇ ಹೆಚ್ಚಿನ ಕೂಗುಗಳಿಲ್ಲದೆ ಮೌನವಾಗಿರುವ ಕೋಗಿಲೆಗಳು, ವಸಂತಾಗಮನವಾದೊಡನೆ, ಅಂದರೆ, ಸಂತಾನಋತುವಿನಲ್ಲಿ, ಸುಪರಿಚಿತವಾದ, ಸುಶ್ರಾವ್ಯವಾದ, ಪ್ರಸಿದ್ಧವಾದ ಏರುಗತಿಯ ಕು.ಹೂ..ಕುಹೂ.. ಎಂಬ ಉತ್ಸಾಹಭರಿತವಾದ ಗಾನದಿಂದ ಕೂಗಿ ಇಡೀ ವಾತಾವರಣವನ್ನು ಸಮ್ಮೋಹಗೊಳಿಸುತ್ತವೆ! ಆದರೆ ಹೆಣ್ಣು ಕೋಗಿಲೆ ಹಾರುವಾಗ ಮಾತ್ರ ಕೆಕ್ಕೆಕ್ಕೆ ಎಂದು ಕೂಗಿ ತನ್ನ ಇರುವನ್ನು ಪ್ರಕಟಿಸುತ್ತದೆ.
ಪ್ರಜನನ ಕಾಲದಲ್ಲಿ; ಸರಿಸುಮಾರು ಎಲ್ಲ ಕೋಗಿಲೆಗಳ ಪ್ರಭೇದಗಳೂ ತಮ್ಮ ಹಾಡಿನ ಸ್ವರಗಳನ್ನು ಅವರೋಹಣ ಗತಿಯಲ್ಲಿ ಹಾಡುವುದು ಒಂದು ವಿಶೇಷ. ಯಾವುದೇ ಗೂಡು ಕಟ್ಟುವ ಗೋಜಿಲ್ಲದೆ, ಮೊಟ್ಟೆಗಳಿಗೆ ಕಾವು, ಗುಟುಕು ನೀಡದೇ, ಬೂದುಕಾಗೆ ಮತ್ತು ಕಪ್ಪುಕಾಗೆಗಳ ಗೂಡಿನಲ್ಲಿ ತಮ್ಮ ಮೊಟ್ಟೆಯನಿಟ್ಟು ಕೈತೊಳೆದುಕೊಳ್ಳುವ ಪಕ್ಷಿಗಳು. ಸಾಧಾರಣವಾಗಿ ಹೆಣ್ಣು ಕೋಗಿಲೆ ಒಂದೇ ಮೊಟ್ಟೆಯನ್ನು ಇಡುತ್ತದೆ. ಹಾಗಾಗಿ ಇವುಗಳನ್ನು ಪರಪುಟ್ಟ ಎಂದೂ ಕರೆಯುತ್ತಾರೆ! ಕಾಗೆಯದೇ ಮೊಟ್ಟೆಯ ಆಕಾರ, ಬಣ್ಣ ಆದರೆ, ತುಸು ಸಣ್ಣ ಗಾತ್ರವಿರುವ ಮೊಟ್ಟೆಗಳನ್ನು ತಾನೂ ಇಡುತ್ತದೆ. ಈ ಮೊಟ್ಟೆ, ಕಾಗೆಯ ಮೊಟ್ಟೆಯಂತೆಯೇ ತಿಳಿಹಸಿರು ಬಣ್ಣದ, ಕಂದು ಬಣ್ಣದ ಗೀರುಗಳು ಮತ್ತು ಮಚ್ಚೆಗಳಿರುತ್ತದೆ. ಮೊಟ್ಟೆಯೊಡೆದು ಹೊರಬಂದ ಮರಿ ಕೋಗಿಲೆ ಹಲವು ವಾರಗಳ ಕಾಲ ಆಹಾರಕ್ಕಾಗಿ ಕಾಗೆಯನ್ನೇ ಆಶ್ರಯಿಸಿರುತ್ತದೆ.
ಕೋಗಿಲೆಗಳು ಮುಖ್ಯವಾಗಿ ಹಣ್ಣುಗಳನ್ನು ತಿನ್ನುವುದರಿಂದ ಬೀಜಪ್ರಸರಣ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಶ್ರೀಗಂಧದ ಹಣ್ಣುಗಳನ್ನು ತಿಂದು ಅವುಗಳ ಬೀಜಗಳನ್ನು ದೂರ ದೂರದ ಸ್ಥಳಗಳಲ್ಲಿ ಹಿಕ್ಕೆ ಹಾಕುವುದರಿಂದ ವ್ಯಾಪಕವಾಗಿ ಶ್ರೀಗಂಧದ ಕಾಡು ಬೆಳೆಯಲು ಕಾರಣವಾಗಿವೆ.
(ಕಲಾಕೃತಿ: ಲೇಖಕರದ್ದು)

ಡಾ. ಎಸ್.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ. ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

