ನಮ್ಮ ಅಭ್ಯಾಸ ಅದ್ಭುತವಾಗಿದ್ದರಿಂದ ಒಂದು ಬಾರಿ ಸಾಲದೆಂದು ಬೆಳ ಬೆಳಗ್ಗಿಯೇ ಮೂರು ಮೂರು ಬಾರಿ ನೆಟ್ ಪ್ರಾಕ್ಟಿಸ್ ನಡೆಸಿದ್ದರಿಂದ ಗೆಲುವು ನಮ್ಮದೇ ಆಗಲಿದೆ ಎಂಬ ವಿಶ್ವಾಸ ನಮ್ಮದಾಗಿತ್ತು. ಈ ವಿಶ್ವಾಸದಿಂದಲೇ ಆಟವನ್ನೇನೋ ಆರಂಭಿಸಿದೆವು. ಆದರೆ, ಪಂದ್ಯ ಸಾಗುತ್ತಲೇ ನಮ್ಮ ಎಣಿಕೆಗಳೆಲ್ಲಾ ತಲೆಕೆಳಗಾಗಲಾರಂಭಿಸಿದ್ದವು. ಇದಕ್ಕೆ ಬಹುಮುಖ್ಯ ಕಾರಣ ನಮ್ಮ ಆಟದ ಕೊರತೆ ಎಂಬುದಕ್ಕಿಂತ ನಿದ್ರೆಯ ಕೊರತೆಯೇ ಆಗಿತ್ತು. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದ ಪ್ರತಿಫಲವಾಗಿ ನಿದ್ದೆ ಎಲ್ಲರನ್ನೂ ಆವರಿಸಲಾರಂಭಿಸಿತ್ತು. ಚೆನ್ನಾಗಿ ಬ್ಯಾಟಿಂಗ್ ಬೌಲಿಂಗ್ ಮಾಡಿ ಪಂದ್ಯ ಗೆಲ್ಲುವುದಿರಲಿ ಹೋಗಿ ಮಲಗಿದರೆ ಸಾಕು ಎನಿಸಲಾರಂಭಿಸಿತ್ತು.
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಹನ್ನೊಂದನೆಯ ಬರಹ
“ಕ್ರಿಕೆಟ್, ಕ್ರಿಕೆಟ್, ಕ್ರಿಕೆಟ್… ಈಟ್ ಕ್ರಿಕೆಟ್, ಡ್ರಿಂಕ್ ಕ್ರಿಕೆಟ್, ಸ್ಲೀಪ್ ಕ್ರಿಕೆಟ್… ವೈ ಹ್ಯಾವ್ ಯು ಕಮ್ ಟು ದ ಮೆಸ್… ಗೋ ಬ್ಯಾಕ್ ಟು ಯುವರ್ ಡಾರ್ಮಿಟ್ರಿಸ್..” ಇದು ಭಾನುವಾರದ ದಿನಗಳಲ್ಲಿ ಕ್ರಿಕೆಟ್ ಆಡಿಕೊಂಡು ತಡವಾಗಿ ಮಧ್ಯಾಹ್ನದ ಊಟಕ್ಕೆ ತೆರಳುತ್ತಿದ್ದ ನಮಗೆ ಜೇಮ್ಸ್ ಸರ್ ಹೇಳುತ್ತಿದ್ದ ಸಾಮಾನ್ಯ ಗದರಿಕೆಯ ಮಾತಾಗಿತ್ತು.
“ಈಟ್ ಕ್ರಿಕೆಟ್, ಡ್ರಿಂಕ್ ಕ್ರಿಕೆಟ್, ಸ್ಲೀಪ್ ಕ್ರಿಕೆಟ್..” ಎಂಬುದು ಆ ಕಾಲದಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನಲ್‌ನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ಟ್ಯಾಗ್ ಲೈನ್ ಆಗಿತ್ತು. ಅಷ್ಟೇ ಅಲ್ಲ, ನಮ್ಮ ತರಗತಿಯ ಬಹುತೇಕರ ದಿನಚರಿಯ ಭಾಗವೂ ಆಗಿತ್ತು. ನಮ್ಮೆಲ್ಲರ ಕ್ರಿಕೆಟ್ ಪ್ರೇಮದ, ಪ್ರೇಮದ ಎಂಬುದಕ್ಕಿಂತ ಕ್ರಿಕೆಟ್ ಹುಚ್ಚಿನ ಕಥೆಗಳನ್ನು ಬರೆಯ ಹೊರಟರೆ ಲಿಯೋ ಟಾಲ್ಸ್ಟಾಯ್‌ನ “ವಾರ್ ಅಂಡ್ ಪೀಸ್” ರೇಂಜಿನ ಗಾತ್ರದ ಗ್ರಂಥವೇ ಆದೀತು.
ಒಂದೆಡೆ ಕ್ರಿಕೆಟ್ ಆಡುವ ಹುಚ್ಚು, ಇನ್ನೊಂದೆಡೆ ಕ್ರಿಕೆಟ್ ನೋಡುವ ಹುಚ್ಚು, ಮತ್ತೊಂದೆಡೆ ಕ್ರಿಕೆಟ್ ಬಗೆಗೆ ತಿಳಿಯುವ ಹುಚ್ಚು..
ಆಗಿನ ಕಾಲಕ್ಕೆ ಕನ್ನಡದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ರಾಜು ಪತ್ರಿಕೆ, ಇಂಗ್ಲಿಷ್‌ನ ಸ್ಪೋರ್ಟ್ಸ್ ಸ್ಟಾರ್ ಹೆಸರಿನ ಕ್ರೀಡಾ ಪತ್ರಿಕೆಗಳನ್ನು ನಾವು ಷೇರು ಬಂಡವಾಳ ಹಾಕಿ ತರುತ್ತಿದ್ದದ್ದು, ಅವುಗಳಲ್ಲಿನ ವಿಷಯಗಳನ್ನು ನಮ್ಮ ಪಠ್ಯಗಳಿಗಿಂತ ನಿಷ್ಠೆಯಿಂದ ಓದುತ್ತಿದ್ದದ್ದು, ಯಾರು ಕ್ರಿಕೆಟ್ ಇತಿಹಾಸದ ಮೊದಲ ಬಾಲ್ ಮಾಡಿದರು, ಯಾರು ಮೊದಲ ರನ್ ಹೊಡೆದರು, ಯಾವ ಯಾವ ವಿಶ್ವ ಕಪ್‌ಗಳನ್ನು ಯಾವ ಯಾವ ದೇಶದವರು ಗೆದ್ದರು, ಯಾರೆಲ್ಲಾ ಮ್ಯಾನ್ ಆಫ್ ದಿ ಮ್ಯಾಚ್ ಗಳಿಸಿದರು ಎಂಬೆಲ್ಲಾ ಮಾಹಿತಿಗಳನ್ನು ತಲೆಯೊಳಗೆ ತುಂಬಿಕೊಂಡು ಕ್ರಿಕೆಟ್ ವಿಕಿಪೀಡಿಯಾಗಳೇ ಆಗಿರುತ್ತಿದ್ದದ್ದು.
ಈಗ ಇಪ್ಪತ್ತು ಓವರ್‌ಗಳ 20-20 ಪಂದ್ಯಗಳನ್ನೇ ಪೂರ್ಣವಾಗಿ ನೋಡಲಾಗದಿರುವಾಗ ಐದು ದಿನಗಳ ಟೆಸ್ಟ್ ಪಂದ್ಯಗಳನ್ನೂ ಕಂಡ ಕಂಡ ಶಿಕ್ಷಕರುಗಳ ಮನೆ ತುಂಬಿ ನೋಡುತ್ತಿದ್ದದ್ದು….
ಅದಿರಲಿ, ಟಿ.ವಿ.ಯಲ್ಲಿ ಬರದ ರಣಜಿ ಪಂದ್ಯಗಳನ್ನೂ ನಾಲ್ಕು ಐದು ದಿನಗಳ ಕಾಲ ಒಬ್ಬರ ನಂತರ ಒಬ್ಬರು ಸರದಿಯಲ್ಲಿ ತರಗತಿಗೆ ಚಕ್ಕರ್ ಹಾಕಿ ರೇಡಿಯೋದಲ್ಲಿ ಕಾಮೆಂಟರಿ ಕೇಳುತ್ತಿದ್ದದ್ದು, ತೊಂಭತ್ತಾರರ ವಿಶ್ವಕಪ್‌ನ ಸೆಮಿಫೈನಲ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋಲಲಿದ್ದೇವೆಂದು ಕಾಂಬ್ಳಿ ಕಣ್ಣೀರು ಹರಿಸುತ್ತಿದ್ದರೆ ನಾವೂ ಅದೇ ಸ್ಥಿತಿಯಲ್ಲಿದ್ದದ್ದು, ಪಾಕಿಸ್ತಾನದ ವಿರುದ್ಧ ಅತುಲ್ ಬಿಡಾಡೆ ನಾಲ್ಕು ಸಿಕ್ಸರ್ ಸಿಡಿಸಿದನೆಂದು ವಾರ್ತೆಯಲ್ಲಿ ಕೇಳಿಯೇ ರೋಮಾಂಚನಗೊಂಡದ್ದು, ನಮ್ಮ ಹತ್ತನೇ ತರಗತಿಯ ಗಣಿತ ಪರೀಕ್ಷೆಯ ಹಿಂದಿನ ದಿನದ ರಾತ್ರಿಯೂ ನಾನು, ರುದ್ರ ನೈಟ್ ವಾಚ್‌ಮನ್ ಈರಯ್ಯ ಅಂಕಲ್ ಕಣ್ಣು ತಪ್ಪಿಸಿ, ಗಾಜು ಚುಚ್ಚಿದ್ದ ಶಾಲಾ ಕಾಂಪೌಂಡ್ ಹಾರಿ ಸಿ.ಆರ್.ಎಸ್ ಎಂಬ ಸ್ಥಳದಲ್ಲಿದ್ದ ಪರಿಚಯಸ್ಥರ ಮನೆಯಲ್ಲಿ ತಡ ರಾತ್ರಿಯವರೆಗೆ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟೆಸ್ಟ್ ಪಂದ್ಯವನ್ನು ನೋಡಿ ಬಂದದ್ದು, ಬೆಳಿಗ್ಗೆ ಬರೆಯಲಿರುವ ಬೋರ್ಡ್ ಪರೀಕ್ಷೆಯ ಆತಂಕಕ್ಕಿಂತ ನವಜೋತ್ ಸಿಂಗ್ ಸಿದ್ದು ಸಿಡಿಸಿದ ಡಬಲ್ ಸೆಂಚುರಿಯ ಸಂಭ್ರಮವೇ ದೊಡ್ಡದ್ದಾಗಿದ್ದು..
ನಾನು ಒಂದು ಬದಿಯಲ್ಲಿದ್ದರೆ ವಿಕೆಟ್ ಕಾಯ್ದುಕೊಳ್ಳುವೆನೆಂದು ನನ್ನನ್ನೇ ನಮ್ಮ ತಂಡದ ಆರಂಭಿಕನನ್ನಾಗಿ ಆಡಲು ತೀರ್ಮಾನಿಸಿದ್ದು, ಅದನ್ನೇ ನೆಪ ಮಾಡಿಕೊಂಡು ನಾನು ದ್ರಾವಿಡನನ್ನು ಮೀರಿಸುವಂತೆ ಕುಟುಕುತ್ತಿದ್ದದ್ದು, ಇಂತಹ ಸಂದರ್ಭಗಳಲ್ಲಿ ನಾನು ಔಟಾದರೆ ವಿರೋಧಿ ಪಾಳಯದವರಿಗಿಂತ ನಮ್ಮ ತಂಡದವರೇ ಹಲವು ಬಾರಿ ಖುಷಿಯಾಗುತ್ತಿದ್ದದ್ದು, ನಮ್ಮ ತಂಡ ಒಂಭತ್ತು, ಹತ್ತನೆಯ ತರಗತಿಯ ವೇಳೆಗಾಗಲೇ ಸೀನಿಯರ್‌ಗಳ ತಂಡಗಳನ್ನಿರಲಿ ಬಾಳೆಹೊನ್ನೂರಿನ ಕ್ರಿಕೆಟ್ ಕ್ಲಬ್ ನವರನ್ನೂ ಸೋಲಿಸುವಂತಾಗಿದ್ದು..,
ಇಂತಹವೇ ನೂರೆಂಟು ಕಥೆಗಳು!
ಅದರಲ್ಲಿ ನಮ್ಮ ಆರಂಭಿಕ ದಿನಗಳ “ಕ್ಯಾಂಡಲ್ ಕ್ರಿಕೆಟ್” ಕಥೆಯನ್ನು ನಿಮಗಿಲ್ಲಿ ಹೇಳಬೇಕೆನಿಸಿತು.
ಅದು ನಮ್ಮ ನವೋದಯ ಜೀವನದ ಮೊದಲ ಕ್ಲಾಸ್ ವೈಸ್ ಮ್ಯಾಚ್! ಅದೂ ಸೀನಿಯರ್ ತರಗತಿಯವರೊಡನೆ! ಅಲ್ಲಿಯವರೆಗೆ ನಮ್ಮ ತರಗತಿಯರೇ ಎ ಮತ್ತು ಬಿ ಸೆಕ್ಷನ್ ಅಥವಾ ಕೆಳ ಮತ್ತು ಮೇಲಿನ ಡಾರ್ಮಿಟರಿ ಎಂದು ತಂಡಗಳನ್ನು ಮಾಡಿ ಕ್ರಿಕೆಟ್ ಪಂದ್ಯ ಆಡುತ್ತಿದ್ದವರು ಮೊದಲ ಬಾರಿಗೆ ಸೀನಿಯರ್ ತರಗತಿಯವರೊಡನೆ ಪಂದ್ಯವೊಂದನ್ನು ಆಡಲಿದ್ದೆವು. ಇದೋ ನಮ್ಮಲ್ಲಿ ಲಗಾನ್ ಸಿನಿಮಾದಲ್ಲಿ ಭುವನನ ಚಂಪಾನೇರ್ ಇಲವೆನ್ ತಂಡ ಬ್ರಿಟೀಷರ ವಿರುದ್ಧದ ಪಂದ್ಯಕ್ಕೆ ತಯಾರಾದಂತ ವಿಶೇಷ ಉತ್ಸಾಹವನ್ನು ತುಂಬಿತ್ತು.
ಈ ವಿಶೇಷ ಉತ್ಸಾಹದಲ್ಲಿಯೇ ಹಿಂದಿನ ದಿನ ಶನಿವಾರದ ಸಂಜೆ ತಂಡವನ್ನು ಆಯ್ಕೆ ಮಾಡಿದೆವು, ಆಡುವ ಹನ್ನೊಂದರ ಜೊತೆಗೆ ಬದಲಿ ಆಟಗಾರರ ಪಟ್ಟಿಯೂ ಉದ್ದವಿತ್ತು.
ಸರಿ, ತಂಡವನ್ನು ಆಯ್ಕೆ ಮಾಡಿದರೆ ಸಾಕೆ! ಯಾರ್ಯಾರು ಯಾವ ಆರ್ಡರ್‌ನಲ್ಲಿ ಆಡಬೇಕು, 20 ಓವರ್‌ಗಳ ಮ್ಯಾಚ್‌ನಲ್ಲಿ ಯಾರು ಮೊದಲನೇ ಓವರ್ ಬೌಲಿಂಗ್ ಮಾಡಬೇಕು, ಎರಡನೇ ಓವರ್ ಯಾರು ಮಾಡಬೇಕು, ಮಿಡಲ್ ಓವರ್, ಡೆತ್ ಓವರ್‌ಗಳನ್ನು ಯಾರ್ಯಾರು ಮಾಡಬೇಕು ಎಂದೆಲ್ಲಾ ಚರ್ಚಿಸಿದೆವು. ಸಾಲದಕ್ಕೆ ಯಾರು ಗಲ್ಲಿ, ಪಾಯಿಂಟ್, ಕವರ್, ಎಕ್ಸ್ಟ್ರಾ ಕವರ್, ಮಿಡ್ ವಿಕೆಟ್, ಮಿಡ್ ಆನ್ ಎಂದು ಎಲ್ಲೆಲ್ಲಿ ನಿಂತು ಫೀಲ್ಡಿಂಗ್ ಮಾಡಬೇಕು ಎಂದು ಪೇಪರ್‌ನಲ್ಲಿ ಡ್ರಾಯಿಂಗ್ ಮಾಡಿ ಕ್ಯಾಪ್ಟನ್‌ನ ಜೇಬಿನಲ್ಲಿಟ್ಟುಕೊಳ್ಳಲು ನೀಡಿದೆವು.
ಸರಿ, ಊಟದ ನಂತರ ಮತ್ತೊಮ್ಮೆ ಎಲ್ಲವನ್ನೂ ತಡ ರಾತ್ರಿಯವರೆಗೂ ಚರ್ಚಿಸಿದೆವು. ಈ ಚರ್ಚೆಯಲ್ಲಿ ಭಾನುವಾರದ ದಿನ ಹೇಗೂ ಜಾಗಿಂಗ್ ಪೀರಿಯಡ್ ಇರಲಿಲ್ಲವಾಗಿ ಈ ಅವಧಿಯಲ್ಲಿ ನೆಟ್ ಪ್ರಾಕ್ಟಿಸ್ ಮಾಡುವುದೆಂದೂ, ನಂತರ ಹಾಲು ಕುಡಿದು ಬಂದು ಸಂಡೇ ಕ್ಲೀನಿಂಗ್ ಮುಗಿಸಿ ಮತ್ತೆ ನೆಟ್ ಪ್ರಾಕ್ಟಿಸ್ ಮಾಡುವುದೆಂದೂ ತೀರ್ಮಾನಿಸಿದ್ದೆವು.
ಕ್ರಿಕೆಟ್ ಪಂದ್ಯದ ಆರಂಭಕ್ಕೂ ಮುನ್ನ ನಮ್ಮ ಸಚಿನ್, ಶ್ರೀನಾಥ್, ಕುಂಬ್ಳೆಯಂತವರೆಲ್ಲಾ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದದ್ದು ಮಿಗಿಲಾಗಿ “ಅಭ್ಯಾಸದಿಂದಲೇ ಗೆಲುವು” ಎಂದು ನಾವು ಪದೇ ಪದೇ ಓದುತ್ತಿದ್ದದ್ದು ನಮ್ಮ ಈ ತೀರ್ಮಾನಕ್ಕೆ ಸ್ಪೂರ್ತಿಯಾಗಿತ್ತು.
ಸರಿ ಮಲಗಿದೆವು.
ಬೆಳಗ್ಗೆ ಬೇಗನೆ ಎದ್ದು ನೆಟ್ ಪ್ರಾಕ್ಟೀಸ್ ಮಾಡುವುದೆಂದು ತೀರ್ಮಾನಿಸಿದ್ದೇನೋ ಸರಿಯಾಗಿತ್ತು. ಬೇಗನೆ ಎಂದರೆ ಐದು ಐದೂವರೆ ಗಂಟೆಗೆ ಹೋಗಿ ಪ್ರಾಕ್ಟೀಸ್ ಮಾಡುವುದೆಂದು ನಾವು ಅಂದಾಜಿಸಿದ್ದೆವು. ಆದರೆ ಅದ್ಯಾರಿಗೆ ನಾಲ್ಕು ನಾಲ್ಕೂವರೆಗೆ ಎಚ್ಚರವಾಯಿತೋ ನಮ್ಮನ್ನೆಲ್ಲಾ ಎಬ್ಬಿಸಲು ಶುರು ಮಾಡಿ ಬಿಟ್ಟಿದ್ದರು. ನೋಡಿದರೆ ಆಗಿನ್ನು ಕತ್ತಲೆಯಾಗಿದೆ. “ಕತ್ತಲೆಯಾಗಿದೆ ಮತ್ತೆ ಹೋಗೋಣ” ಎಂದು ಕೆಲವರೆಂದರೆ ಮತ್ತೆ ಕೆಲವರು “ಸ್ವಲ್ಪ ಹೊತ್ತು ಕಾಯ್ದರೆ ಹೇಗೂ ಬೆಳಕಾಗುತ್ತದೆ ಈಗಲೇ ಹೋಗೋಣ” ಎಂದರು.
ಸಾಲದ್ದಕ್ಕೆ “ಅಲ್ಲಿಯವರೆಗೂ ಕ್ಯಾಂಡಲ್ ಹಿಡಿದು ಪ್ರಾಕ್ಟೀಸ್ ಮಾಡೋಣ” ಎಂದು ಹೆಚ್ಚುವರಿ ಐಡಿಯಾವನ್ನೂ ಕೊಟ್ಟರು. ಸರಿ, ಸೀನಿಯರ್‌ಗಳೊಡನೆ ಗೆಲ್ಲಲ್ಲೇ ಬೇಕೆಂಬ ಹುಮ್ಮಸ್ಸಿನಲ್ಲಿದ್ದ ನಾವು ಇದರ ಸಾಧಕ ಬಾಧಕಗಳನ್ನು ಚರ್ಚಿಸ ಕೂರಲಿಲ್ಲ. ಬದಲಿಗೆ, ವಿಶ್ವೇಶ್ವರಯ್ಯನಂಥವರು ರಾತ್ರಿ ಹೊತ್ತಿನಲ್ಲಿ ಬೀದಿ ದೀಪದ ಕೆಳಗೆ ಓದಿ ಮಹನೀಯರಾದಂತೆ ತಾವು ಹೊತ್ತು ಕರಗುವ ಮುನ್ನ ಕ್ಯಾಂಡಲ್ ಬೆಳಕಿನಲ್ಲಿ ಕ್ರಿಕೆಟ್ ಆಡಿ ಮಹನೀಯರಾಗಲಿರುವೆವೆಂದೇ ಭಾವಿಸುತ್ತಾ ಫೀಲ್ಡಿನೆಡೆಗೆ ಹೊರಟೆವು.
ಸರಿ, ಫೀಲ್ಡ್‌ನಲ್ಲಿ ನಿಂತು ಕ್ಯಾಂಡಲ್ ಹಚ್ಚಲು ನೋಡಿದರೆ ಸುತ್ತಲೂ ಗಾಳಿ. ಕ್ಯಾಂಡಲ್ ಹಚ್ಚಿದಂತೆಲ್ಲ ಗಾಳಿಗೆ ಅದು ನಂದಿ ಹೋಗುತ್ತಿತ್ತು. ಕೊನೆಗೆ ವೀರಗಲ್ಲು ಮಾಸ್ತಿಗಲ್ಲುಗಳಿಗೆಂದು ಕಟ್ಟಿದ್ದ ಕಟ್ಟೆಯ ಬಳಿ ನಿಂತು, ಅದರ ಬುಡದಲ್ಲಿ ಕ್ಯಾಂಡಲ್ ಇಟ್ಟು ಅದಕ್ಕೆ ಒಂದಿಬ್ಬರು ಅಡ್ಡಲಾಗಿ ನಿಂತು ಕ್ಯಾಂಡಲನ್ನೇನೋ ಹಚ್ಚಿದೆವು.
ಆದರೆ, ಆ ಕ್ಯಾಂಡಲ್ ಬೆಳಕೋ ಎಲ್ಲಿಗೂ ಸಾಕಾಗುತ್ತಿರಲಿಲ್ಲ. ಅದೇ ಬೆಳಕಿನಲ್ಲಿ ವಿಕೆಟ್‌ಗಳನ್ನು ನೆಟ್ಟೆವು. ಬ್ಯಾಟ್ ಬಾಲ್ ಹಿಡಿದು ಆಡ ಹೋದರೆ ದೂರದವರು ಕಾಣುತ್ತಿಲ್ಲ.
ಅಷ್ಟರಲ್ಲಿ ಕ್ಯಾಂಡಲ್ ನಂದಿ ಹೋಗುವುದು, ಕಾಣದ ಕತ್ತಲಲ್ಲಿ ಮತ್ತೆ ಕ್ಯಾಂಡಲ್ ಹಚ್ಚುವ ಪ್ರಯತ್ನ ಮಾಡುವುದು., ಹೀಗೆ ಸಮಯ ಸರಿದು ಹೋಗುತ್ತಿತ್ತು.
ಕೆಲವರು ಮತ್ತೆ ವಾಪಸ್ ಹೋಗೋಣವೆಂದರು. ಕೆಲವರು ಗಾಳಿ ನಿಲ್ಲಬಹುದೆಂದರು. ಮತ್ತೆ ಕೆಲವರು ಹೇಗೂ ಇನ್ನೇನು ಬೆಳಕಾಗಲಿದೆ, ಅಲ್ಲಿಯವರೆಗೂ ಕಟ್ಟೆಯ ಮೇಲೆ ಕುಳಿತು ಪಂದ್ಯದ ಕಾರ್ಯ ಯೋಜನೆಗಳನ್ನು ಹೇಗೆ ಕಾರ್ಯರೂಪಕ್ಕೆ ತರಬೇಕು ಎಂಬುದರ ಕುರಿತು ಚರ್ಚಿಸೋಣ ಎಂದರು.
ಸರಿ ಕುಳಿತೆವು. ಚರ್ಚಿಸಿದೆವು. ಚರ್ಚಿಸುತ್ತಾ ಚರ್ಚಿಸುತ್ತಾ ಸಮಯವಾಗುತಲಿತ್ತು. ಅಂತೂ ಈ ಎಲ್ಲಾ ರಗಳೆಗಳ ನಡುವೆ ಬೆಳಕು ಮೂಡಿತು. ಒಂದಷ್ಟು ಹೊತ್ತು ನೆಟ್ ಪ್ರಾಕ್ಟೀಸನ್ನು ಯಶಸ್ವಿಯಾಗಿ ನಡೆಸಿದೆವು.
ಮತ್ತೆ ಹಾಲು ಕುಡಿದು ಬಂದು, ಬೇಗ ಬೇಗನೇ ಸಂಡೆ ಕ್ಲೀನಿಂಗ್ ಮುಗಿಸಿ ಮತ್ತಷ್ಟು ಹೊತ್ತು ನೆಟ್ ಪ್ರಾಕ್ಟೀಸ್ ಮಾಡಿ ತಿಂಡಿಗೆ ಹೋದೆವು. ಬೇಗನೇ ಅರ್ಧಂಬರ್ಧ ತಿಂಡಿ ತಿಂದು ಬಂದು ನಮ್ಮ ಅಪ್ಪೋನೆಂಟ್ ತಂಡದವರಿಗೂ ಮೊದಲೇ ವಿಕೆಟ್‌ಗಳನ್ನು ನೆಟ್ಟು ಮತ್ತೊಮ್ಮೆ ನೆಟ್ ಪ್ರಾಕ್ಟೀಸ್ ಮಾಡಿದೆವು.
ಸರಿ ಮ್ಯಾಚ್ ಆರಂಭಗೊಂಡಿತು.
ಆರು ಮತ್ತು ಏಳನೇ ತರಗತಿಯವರ ನಡುವಿನ ರೋಚಕ ಹಣಾಹಣಿಯ ಕ್ಲಾಸ್ ವೈಸ್ ಮ್ಯಾಚ್.
ನಮ್ಮ ಅಭ್ಯಾಸ ಅದ್ಭುತವಾಗಿದ್ದರಿಂದ ಒಂದು ಬಾರಿ ಸಾಲದೆಂದು ಬೆಳ ಬೆಳಗ್ಗಿಯೇ ಮೂರು ಮೂರು ಬಾರಿ ನೆಟ್ ಪ್ರಾಕ್ಟಿಸ್ ನಡೆಸಿದ್ದರಿಂದ ಗೆಲುವು ನಮ್ಮದೇ ಆಗಲಿದೆ ಎಂಬ ವಿಶ್ವಾಸ ನಮ್ಮದಾಗಿತ್ತು.
ಈ ವಿಶ್ವಾಸದಿಂದಲೇ ಆಟವನ್ನೇನೋ ಆರಂಭಿಸಿದೆವು. ಆದರೆ, ಪಂದ್ಯ ಸಾಗುತ್ತಲೇ ನಮ್ಮ ಎಣಿಕೆಗಳೆಲ್ಲಾ ತಲೆಕೆಳಗಾಗಲಾರಂಭಿಸಿದ್ದವು.
ಇದಕ್ಕೆ ಬಹುಮುಖ್ಯ ಕಾರಣ ನಮ್ಮ ಆಟದ ಕೊರತೆ ಎಂಬುದಕ್ಕಿಂತ ನಿದ್ರೆಯ ಕೊರತೆಯೇ ಆಗಿತ್ತು.
ಬೆಳಗ್ಗೆ ನಾಲ್ಕು ಗಂಟೆಗೆ ಎದ್ದ ಪ್ರತಿಫಲವಾಗಿ ನಿದ್ದೆ ಎಲ್ಲರನ್ನೂ ಆವರಿಸಲಾರಂಭಿಸಿತ್ತು. ಚೆನ್ನಾಗಿ ಬ್ಯಾಟಿಂಗ್ ಬೌಲಿಂಗ್ ಮಾಡಿ ಪಂದ್ಯ ಗೆಲ್ಲುವುದಿರಲಿ ಹೋಗಿ ಮಲಗಿದರೆ ಸಾಕು ಎನಿಸಲಾರಂಭಿಸಿತ್ತು.
ಗೆಲುವು ಇನ್ನೆಲ್ಲಿಯದು! ಸ್ವಲ್ಪ ಹೀನಾಯವಾಗಿಯೇ ಸೋತೆವು. ಸೋತವರಿಗೆ ಬೇಸರಿಸಿಕೊಳ್ಳಲೂ ಸಮಯವಿರಲಿಲ್ಲ. ಊಟಕ್ಕೆ ಓಡಿ ಹೋಗಿ, ಡಾರ್ಮಿಟರಿಗಳಿಗೆ ಬಂದು ಮಲಗಿದರೆ ಸಾಕಾಗಿತ್ತು!
ಅಂತೂ “ಕ್ಯಾಂಡಲ್ ಕ್ರಿಕೆಟ್” ಅಭ್ಯಾಸದಿಂದಲೇ ಗೆಲುವು ಎನ್ನುವ ಮಾತನ್ನು ಹುಸಿಗೊಳಸಿ ಅಭ್ಯಾಸಕ್ಕೂ ಸೋಲುಂಟು ಎಂಬುದನ್ನು ಕಲಿಸಿತ್ತು!

ಪೂರ್ಣೇಶ್ ಮತ್ತಾವರ ಮೂಲತಃ ಚಿಕ್ಕಮಗಳೂರಿನವರು. ಮೂಡಿಗೆರೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಸಂಘಟನೆಗಳಲ್ಲಿ ಸಕ್ರಿಯ. “ದೇವರಿದ್ದಾನೆ! ಎಚ್ಚರಿಕೆ!!” ಇವರ ಪ್ರಕಟಿತ ಕಥಾ ಸಂಕಲನ. ಕತೆಗಳು, ಲೇಖನಗಳು, ಮಕ್ಕಳ ಪದ್ಯಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪರಿಸರದ ಒಡನಾಟದಲ್ಲಿ ಒಲವಿದ್ದು, ಪಕ್ಷಿ ಛಾಯಾಗ್ರಹಣದಲ್ಲೂ ಆಸಕ್ತಿ ಹೊಂದಿದ್ದಾರೆ..