ಆ ಹಾಡಿನ ಅರ್ಥ ಭಾವ ತಿಳಿಯದ ವಯಸ್ಸಿನಲ್ಲಿ ನಾನು ಆ ಚಿತ್ರದ “ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ” ಎನ್ನುತ್ತಾ ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ ಎಂದು ರಾಗವಾಗಿ ಹೇಳುವಾಗ ಅಕ್ಕಪಕ್ಕದ ಮನೆಯವರೆಲ್ಲಾ ನನ್ನ ನೋಡಿ ನಗುತ್ತಿದ್ದರೆ ನನಗೆ ಇನ್ನಷ್ಟು ಹುಮ್ಮಸ್ಸು ಬಂದು ಮತ್ತಷ್ಟು ಜೋರಾಗಿ ಹಾಡುತ್ತಿದ್ದದ್ದು ಈಗ ನೆನೆಸಿಕೊಂಡರೆ ಮುಖ ಮುಚ್ಚಿಕೊಳ್ಳುವಂತಾಗುತ್ತದೆ.
ಟೇಪ್ ರೆಕಾರ್ಡರ್‌ನಲ್ಲಿ ಹಾಡನ್ನು ಕೇಳುತ್ತಿದ್ದ ದಿನಗಳ ಕುರಿತು ಮಾಲತಿ ಶಶಿಧರ್ ಬರಹ
ಕಳೆದ ಭಾನುವಾರ ಅಮ್ಮನ ಮನೆಗೆ ಹೋಗಿದ್ದಾಗ ನನ್ನದೊಂದೆರಡು ಪುಸ್ತಕಗಳನ್ನು ಹುಡುಕುತ್ತಾ ಅಪ್ಪನ ಹಳೆಯ ಬೀರುವೊಂದರಲ್ಲಿ ಸೇರಿಕೊಂಡಿರಬಹುದು ಎಂದು ಅದರ ಬಾಗಿಲು ತೆಗೆದೆ. ಆಗ ಅಲ್ಲಿ ನೀಟಾಗಿ ಜೋಡಿಸಿಟ್ಟಿದ್ದ ಹಂಸಲೇಖ ಮತ್ತು ರವಿಚಂದ್ರನ್ ಕಾಂಬಿನೇಶನ್ ಚಿತ್ರಗಳ ಆಡಿಯೋ ಕ್ಯಾಸೆಟ್‌ಗಳು ಅದೆಷ್ಟೋ ವರ್ಷಗಳ ಬಳಿಕ ಕಣ್ಣಿಗೆ ಬಿದ್ದವು. ನೂರಕ್ಕೂ ಹೆಚ್ಚು ಕ್ಯಾಸೆಟ್‌ಗಳಿದ್ದು, ಅವುಗಳಲ್ಲಿ ಹೆಚ್ಚಿನವು ರವಿಚಂದ್ರನ್ ಚಿತ್ರಗಳದ್ದೇ ಇದ್ದರೂ ವಿಷ್ಣುವರ್ಧನ್, ರಾಜಕುಮಾರ್, ಶಿವರಾಜಕುಮಾರ್, ಮಾಲಾಶ್ರೀ, ಶಂಕರ್ ನಾಗ್ ಇವರುಗಳ ಹಿಟ್ ಸಾಂಗ್ಸ್‌ಗಳ ಕ್ಯಾಸೆಟ್ ಕೂಡ ಇದ್ದವು. ಅವನ್ನೆಲ್ಲ ಕಂಡವಳೇ ಅಲ್ಲೇ ಇದ್ದ ಒಂದು ಚಾಪೆ ಹಾಸಿ ಎಲ್ಲವನ್ನು ಸುರಿದು ಮುಂದೆ ಕುಳಿತು ಉತ್ಸಾಹದಿಂದ ಒಂದೊಂದನ್ನು ತೆಗೆದು ತೆಗೆದು ನೋಡುವಾಗ ಅದರೊಳಗಿಂದ ಒಂದೊಂದೇ ನೆನಪಿನ ಹಾಡು ಕೇಳಿಸತೊಡಗಿತು.
ಅಪ್ಪನಿಗೆ ಹಾಡು ಕೇಳುವುದು ಒಂದು ಹವ್ಯಾಸವಾಗಿತ್ತು ಅನ್ನೋದಕ್ಕಿಂತ ಹುಚ್ಚಾಗಿತ್ತು ಎನ್ನುವುದೇ ಸರಿ. ನಾನು ನೋಡಿದಂತೆ ಅವರ ನಲವತ್ತರ ಹರೆಯದಲ್ಲಿ ಎಷ್ಟು ಉತ್ಸಾಹದಿಂದ ಹಾಡು ಕೇಳುತ್ತಿದ್ದರೋ ಅಷ್ಟೇ ಉತ್ಸಾಹದಿಂದ ಈಗಿನ ಎಪ್ಪತ್ತರ ವಯಸ್ಸಿನಲ್ಲೂ ಕೇಳುತ್ತಾರೆ. ಈ ಹುಚ್ಚು ಅವರಿಂದ ನನಗೂ ಅಂಟಿಕೊಂಡು ಬಂದಂತಿದೆ. ಕರ್ತವ್ಯ ಮತ್ತು ನಿದ್ರಿಸುವಾಗ ಹೊರತು ಮಿಕ್ಕೆಲ್ಲಾ ಸಮಯದಲ್ಲೂ ಮನೆಯ ಮ್ಯೂಸಿಕ್ ಸಿಸ್ಟಮ್ ಸಣ್ಣದಾಗಿ ಹಂಸಲೇಖರ ಹಾಡುಗಳನ್ನು ಹಾಡುತ್ತಲೇ ಇರುತ್ತದೆ.
ಅಪ್ಪನಿಗೂ ನನಗೂ ಇರುವ ಒಂದು ವ್ಯತ್ಯಾಸವೆಂದರೆ ನಾನು ಕಾಲಕ್ಕೆ ತಕ್ಕ ಹಾಗೆ ರೇಡಿಯೋ, ಟೇಪ್ ರೆಕಾರ್ಡರ್, ವಾಕ್ಮಾನ್, ಐಪಾಡ್, ಮೊಬೈಲ್, ಬ್ಲೂಟೂತ್ ಹೀಗೆ ಟೆಕ್ನಾಲಜಿಗಳನ್ನೆಲ್ಲಾ ಬಳಸಿಕೊಂಡೆ ಆದರೆ ಅಪ್ಪ ಮೂವತ್ತೈದು ವರ್ಷದಿಂದಲೂ ಅದೇ ಟೇಪ್ ರೆಕಾರ್ಡರನ್ನೂ ಇಂದಿಗೂ ಜೋಪಾನವಾಗಿ ಕಾಪಿಟ್ಟುಕೊಂಡು ಬಂದದಲ್ಲದೆ ಈಗಲೂ ಅದರಲ್ಲೇ ಹಾಡು ಕೇಳುತ್ತಾರೆ ಅನ್ನುವುದು ನನಗಂತೂ ಸೋಜಿಗದಂತೆ ಅನಿಸುತ್ತದೆ.
ಯಾವುದೇ ಸಿನಿಮಾ ಆಡಿಯೋ ರಿಲೀಸ್ ಆದರು ಸರಿ ಆ ವಾರದ ಅಂತ್ಯದೊಳಗೆ ಕ್ಯಾಸೆಟ್ ನಮ್ಮ ಮನೆಯಲ್ಲಿರುತ್ತಿತ್ತು. ಅವುಗಳ ಮೇಲಿನ ಅವರ ಮಮತೆ ಎಷ್ಟು ಎಂಬುದಕ್ಕೆ 30 ವರ್ಷಗಳ ನಂತರವೂ ಆ ಕ್ಯಾಸೆಟ್‌ಗಳು ಹಾಗೆ ಇರುವುದೇ ಸಾಕ್ಷಿ.
ನನಗಿನ್ನೂ ನೆನಪಿದೆ 1995ರಲ್ಲಿ ನನಗಾಗ ಎಂಟು ವರ್ಷ. ಆಗ ತಾನೇ ರಿಲೀಸ್ ಆಗಿ ಎಲ್ಲರ ತಲೆಕೆಡಿಸುತ್ತಿದ್ದ ಪುಟ್ನಂಜ ಸಿನಿಮಾದ ಹಾಡುಗಳು ನನ್ನಪ್ಪನ್ನೇನು ಬಿಟ್ಟಿರಲಿಲ್ಲ. ಆಸೆಯಿಂದ ಪುಟ್ನಂಜ ಆಡಿಯೋ ಕ್ಯಾಸೆಟ್ ತಂದು ದಿನವಿಡೀ ಎ ಸೈಡ್ ಬಿ ಸೈಡ್ ಅಂತ ತಿರುಗಿಸಿ ತಿರುಗಿಸಿ ಹಾಕಿದ್ದೆ ಹಾಕಿ ಕೇಳಿದ್ದೆ ಕೇಳಿ “ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡೇ ನೀನಿಲ್ಲಿ ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ” ಹಾಡು ನನಗಂತೂ ಕಂಠ ಪಾಠವೇ ಆಗಿಬಿಟ್ಟಿತ್ತು. ಜೊತೆಯಲ್ಲಿ ಮತ್ತೆ ಮತ್ತೆ ಹಾಕಿ ಉಜ್ಜಿಸುತ್ತಿದ್ದ ಮತ್ತೊಂದು ಕ್ಯಾಸೆಟ್ ಎಂದರೆ ಹಳ್ಳಿಮೇಷ್ಟ್ರು ಸಿನೆಮಾದ್ದು. ಎಷ್ಟರ ಮಟ್ಟಿಗೆ ಎಂದರೆ ಅರ್ಥ ಭಾವ ತಿಳಿಯದ ವಯಸ್ಸಿನಲ್ಲಿ ನಾನು ಆ ಚಿತ್ರದ “ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ” ಎನ್ನುತ್ತಾ ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ ಎಂದು ರಾಗವಾಗಿ ಹೇಳುವಾಗ ಅಕ್ಕಪಕ್ಕದ ಮನೆಯವರೆಲ್ಲಾ ನನ್ನ ನೋಡಿ ನಗುತ್ತಿದ್ದರೆ ನನಗೆ ಇನ್ನಷ್ಟು ಹುಮ್ಮಸ್ಸು ಬಂದು ಮತ್ತಷ್ಟು ಜೋರಾಗಿ ಹಾಡುತ್ತಿದ್ದದ್ದು ಈಗ ನೆನೆಸಿಕೊಂಡರೆ ಮುಖ ಮುಚ್ಚಿಕೊಳ್ಳುವಂತಾಗುತ್ತದೆ.
ಅಪ್ಪ ಅವರ ಟೇಪ್ ರೆಕಾರ್ಡರ್ ಮತ್ತು ಕ್ಯಾಸೆಟ್‌ಗಳನ್ನು ಜೋಪಾನ ಮಾಡುತ್ತಿದ್ದ ರೀತಿಗೆ ಹೆದರಿ ಯಾರೊಬ್ಬರೂ ಅವುಗಳನ್ನು ಮುಟ್ಟುತ್ತಿರಲಿಲ್ಲ.
ಒಮ್ಮೆ ಅಪ್ಪ ಇಲ್ಲದ ಸಮಯದಲ್ಲಿ ಶಾಂತಿ ಕ್ರಾಂತಿ ಸಿನೆಮಾದ “ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ” ಹಾಡು ಕೇಳುವ ಮನಸ್ಸಾಗಿ ಆ ಕ್ಯಾಸೆಟ್ ತೆಗೆದುಕೊಂಡು ಹಾಕಿ ಬೇಡದ ಹಾಡುಗಳನ್ನು ಫಾಸ್ಟ್ ಫಾರ್ವರ್ಡ್ FF ಬಟನ್ ಒತ್ತಿ ಮುಂದಕ್ಕೆ ಓಡಿಸಿ, ಬೇಕಾದ ಒಂದೇ ಹಾಡನ್ನು ಪುನಃ ಪುನಃ ರಿವೈನ್ಡ್ RWD ಬಟನ್ ಒತ್ತಿ ಒತ್ತಿ ಕೇಳುವಾಗ ಅದೇನಾಯಿತೋ ಏನೋ ಕಲ್ಲಲ್ಲಿ ಹೊಡೆಸಿಕೊಂಡ ನಾಯಿಮರಿಯಂತೆ ಕುಯ್ಗುಡಲು ಆರಂಭಿಸಿಬಿಟ್ಟಿತು. ಸ್ಟಾಪ್ ಬಟನ್ ಕೂಡ ಕಣ್ಣಿಗೆ ಕಾಣದಷ್ಟು ಗಾಬರಿಗೊಂಡ ನಾನು ಹೇಗೋ ಆಫ್ ಮಾಡಿ ನಂತರ ಎಜೆಕ್ಟ್ ಬಟನ್ ಒತ್ತಿ ಕ್ಯಾಸೆಟ್ ಆಚೆ ತೆಗೆದರೆ ದೊಡ್ಡ ಗಂಡಾಂತರದಂತೆ ಹನುಮನ ಬಾಲದ ಟೇಪ್ ಹೊರ ತೆಗೆದಷ್ಟು ಆಚೆ ಬರುತ್ತಲೇ ಕೊನೆಗೆ ಬಾರದೆ ನಿಂತುಬಿಟ್ಟಿತ್ತು.ಇದೇನಾಯಿತೆಂದು ಅದರ ಬಾಯೊಳಗೆ ಬಗ್ಗಿ ನೋಡಿದರೆ ಟೇಪು ವಿಚಿತ್ರವಾಗಿ ಬ್ರಹ್ಮಗಂಟೊಂದರಂತೆ ನುಲಿದುಕೊಂಡಿತ್ತು. ಎಳೆದರೆ ಕಿತ್ತು ಹೋಗುತ್ತದೆ ನಿಧಾನಕ್ಕೆ ಬಿಡಿಸಲು ಕೈನಡುಕ. ದಿಕ್ಕು ತೋಚದಂತಾದ ನಾನು ಓಡಿ ಹೋಗಿ ಅಲ್ಲೇ ಆಡುತ್ತಿದ್ದ ಅಣ್ಣನನ್ನು ಕರೆದುಕೊಂಡು ಬಂದೆ. ಗಂಡುಮಗನೆಂದರೆ ಮನೆಯ ಮೆಕ್ಯಾನಿಕ್ ಎಂದರ್ಥ. ಅದೇನು ಜಾದು ಮಾಡಿದನೋ ಟೇಪನ್ನು ಬಿಡಿಸಿ ಕ್ಯಾಸೆಟ್ಟಿನ ಮಧ್ಯೆ ಇರುವ ಎರಡು ತೂತುಗಳಲ್ಲೊಂದಕ್ಕೆ ರೇನಾಲ್ಡ್ಸ್ ಪೆನ್ ತೂರಿಸಿ ನಿಧಾನಕ್ಕೆ ತಿರುಗಿಸುತ್ತಾ ಹೇಗೋ ಮೊದಲ ಸ್ಥಿತಿಗೆ ತಂದು ನನ್ನ ಪಾಲಿನ ಸೂಪರ್ ಮ್ಯಾನ್ ಆಗಿಬಿಟ್ಟಿದ್ದ. ಅಪ್ಪ ಬರುವ ಮೊದಲೇ ಅದನ್ನು ಕ್ಯಾಸೆಟ್ ರಾಶಿಯ ನಡುವೆ ಹುದುಗಿಸಿಟ್ಟುಬಿಟ್ಟಿದ್ದೆ. ಆ ಕ್ಯಾಸೆಟ್ ಇಂದಿಗೂ ನನ್ನ ನೆನಪಿಗೆ ಸಾಕ್ಷಿಯಾಗಿ ಹಾಗೆ ಇದೆ.
ಇನ್ನೊಮ್ಮೆ ನಾನಾಗ ಪ್ರೌಢಶಾಲೆಯಲ್ಲಿ ಓದುತ್ತಿದ್ದೆ ಅಪ್ಪನ ಸ್ನೇಹಿತರೊಬ್ಬರು ಸೋನಿ ವಾಕ್ಮನ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಟೇಪ್ ರೆಕಾರ್ಡರ್ ಜೊತೆ ನಿಕಟ ಸಂಬಂಧ ಸಾಧಿಸಿ ಬಿಟ್ಟಿದ್ದ ಅಪ್ಪನಿಗೆ ಅದು ಹಿಡಿಸದೆ ನನ್ನ ಪಾಲಾಗಿತ್ತು. ಪೋರ್ಟೆಬಲ್ ಆದ್ದರಿಂದ ಅದರೊಳಗೊಂದು ಕ್ಯಾಸೆಟ್ಟು ತುರುಕಿ ಇಯರ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು ಬೇಕಂತಲೇ ಮನೆಯ ಆಚೆ ಬಂದು ಹಾಡು ಕೇಳುತ್ತಾ ನಿಲ್ಲುವುದು, ಮೆಟ್ಟಿಲ ಮೇಲೆ ಕೂತು ತಲೆ ಆಡಿಸುತ್ತಾ ಯಾರ ಬಳಿಯೂ ಇಲ್ಲದ್ದೇನೋ ನನ್ನ ಬಳಿ ಇರುವಂತೆ ಜಂಬ ಮಾಡುತ್ತಿದ್ದು, ಮತ್ತೊಮ್ಮೆ ಸ್ನೇಹಿತೆಯರ ಮುಂದೆ ಆ ವಾಕ್ ಮ್ಯಾನ್ ಶೋ ಆಫ್ ಮಾಡಲೆಂದು ಶಾಲೆಗೆ ತೆಗೆದುಕೊಂಡು ಹೋಗಿ ಕ್ಲಾಸ್ ಟೀಚರ್ ಕೈಯಲ್ಲಿ ಸಿಕ್ಕಿಬಿದ್ದು ಅವರು ಅದನ್ನು ಕಿತ್ತುಕೊಂಡು ಒಂದು ವಾರ ಕೊಡದೆ ಆಟ ಆಡಿಸುತ್ತಿದ್ದರೆ, ನಾನಿಲ್ಲಿ ಬಿಟ್ಟು ಹೋದ ಪ್ರಿಯತಮೆಯ ನೆನಪಿನಲ್ಲಿರುವ ಪ್ರಿಯಕರನಂತಾಗಿದ್ದೆ. ಒಂದು ಪುಟ್ಟ ಕ್ಯಾಸೆಟ್ನೊಳಗೆ ಅದೆಷ್ಟು ನೆನಪಿನ ಹಾಡುಗಳು.
ಇಂದು ಬೆರಳ ತುದಿಯಲ್ಲಿ ಪ್ರಪಂಚದ ಅಷ್ಟೂ ಹಾಡುಗಾರರ ಹಾಡುಗಳಿವೆ. ಆದರೆ ಆಗ ಸಿಗುತ್ತಿದ್ದ ಖುಷಿ ಅವು ಕಟ್ಟಿಕೊಟ್ಟ ನೆನಪುಗಳು ಈಗಿವೆಯೇ?
ಎಷ್ಟು ವೇಗವಾಗಿ ಕೂತಲ್ಲೇ ಎಲ್ಲವನ್ನು ನೋಡುವ ಕೇಳುವ ನಾವು ಅಷ್ಟೇ ವೇಗದಲ್ಲಿ ಅಳಿಸಿ ಬಿಡುತ್ತೇವೆ. ಆಗ ಯಾವ ಕ್ಯಾಸೆಟ್‌ನಲ್ಲೂ ಟೇಪ್ ರೆಕಾರ್ಡರ್‌ನಲ್ಲೂ ಅಳಿಸುವ ಆಪ್ಷನ್ ಇರಲಿಲ್ಲ. ಆದರೆ ಈಗ ಎಲ್ಲದಕ್ಕೂ ಡಿಲೀಟ್ ಆಪ್ಶನ್ ಬಂದುಬಿಟ್ಟಿದೆ… ನೆನಪುಗಳಿಗೂ ಸಂಬಂಧಗಳಿಗೂ..
ಅಂದು ಒಂದು ರೇಡಿಯೋದಲ್ಲೋ, ಟೇಪ್ ರೆಕಾರ್ಡರ್‌ನಲ್ಲೋ ಬರುವ ಹಾಡು ಮನೆಯವರನ್ನೆಲ್ಲಾ ಒಂದುಗೂಡಿಸುತ್ತಿತ್ತು. ಇಂದು ಮನೆಯಲ್ಲಿರುವ ಪ್ರತಿಯೊಬ್ಬರ ಕೈಯಲ್ಲೂ ಫೋನ್ ಕಿವಿಯಲ್ಲಿ ಬ್ಲೂಟೂತ್ ಅವರ ಮಾತು ಇವರಿಗೆ ಬೇಕಿಲ್ಲ ಇವರ ಮಾತು ಅವರಿಗೆ ಬೇಕಿಲ್ಲ. ಟೆಕ್ನಾಲಜಿ ಬೆಳೆದಷ್ಟು ಬದುಕು ಸುಲಭವಾಗುತ್ತಿದೆ ಮತ್ತು ಸಂಬಂಧಗಳು ಕಷ್ಟವಾಗುತ್ತಿವೆ.
ಮಾಲತಿ ಶಶಿಧರ್ ಚಾಮರಾಜನಗರದವರು. ಗಣಿತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರೆಯುವುದು ಮತ್ತು ಓದುವುದು ಇವರ ಹವ್ಯಾಸಗಳು