ಪಾಕಿಸ್ತಾನದ ಶೊಯೆಬ್ ಅಖ್ತರ್ ಮೊದಲ ಬಾರಿ ಬೋಲಿಂಗ್ ಮಾಡಿದಾಗ ಅವರ ವೇಗವನ್ನು ನೋಡಿ ಜಗತ್ತೇ ತತ್ತರಿಸಿ ಹೋಗಿತ್ತು. ಜೊತೆಗೆ ಶೋಯೆಬ್‌ರ ಹಾವಭಾವ, ತನ್ನನ್ನು ಬಿಟ್ಟರಿಲ್ಲ ಎಲ್ಲಾರನ್ನೂ ಮುಗಿಸಿ ಬಿಡ್ತಿನಿ ಅನ್ನುವ ಮನೋಭಾವ ಎಲ್ಲರಲ್ಲೂ ಸ್ವಲ್ಪ ದಿಗಿಲು ಹುಟ್ಟಿಸಿತ್ತು. ವಿಶ್ವ ಕಪ್‌ಗೆ ಮೊದಲಬಾರಿ ಅವರು ಆಡಿದಾಗ ಸಚಿನ್ ಇವರ ಬೋಲಿಂಗನ್ನು ಥಳಿಸಲು ಪಣ ತೊಟ್ಟರು. ಇವರ ಬೋಲಿಂಗನ್ನು ಹಿಗ್ಗಾ ಮುಗ್ಗಾ ಬಾರಿಸಿ ಇವರು ಹುಲಿಯಲ್ಲ, ಹುಲಿ ವೇಶ ಹಾಕಿದ ಸಾಧು ಪ್ರಾಣಿ ಕುರಿ ಅಷ್ಟೇ, ಇವರಿಂದ ಏನೂ ಭಯಪಡಬೇಕಾಗಿಲ್ಲ ಎಂದು ತೋರಿಸಿ ಕೊಟ್ಟರು ಸಚಿನ್!
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ಬರಹ ನಿಮ್ಮ ಓದಿಗೆ

ಭಾರತದ ಕ್ರಿಕೆಟ್ ಟೀಮಿನಲ್ಲಿ ಚೆನ್ನಾಗಿ ಆಡಿ, ಎಷ್ಟೋ ಸರ್ತಿ ತಂಡವನ್ನು ಗೆಲ್ಲಿಸುವುದರಲ್ಲಿ ಗುಂಡಪ್ಪ ವಿಶ್ವನಾಥ್ ಅವರದು ಬಹಳ ದೊಡ್ಡ ಕೊಡುಗೆ ಇದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ನಾಣ್ನುಡಿಗೆ ಸಾಕ್ಷಿಯೇ ವಿಶ್ವನಾಥ್.

ಕ್ರಿಕೆಟ್ ಆಟದಲ್ಲಿ ಮೊದಲನೇ ಟೆಸ್ಟ್‌ನಲ್ಲಿ ಸೆಂಚುರಿ ಹೊಡೆಯುವುದು ಒಂದು ದೊಡ್ಡ ಸಾಧನೆ. ಬಹಳ ದೊಡ್ಡ ಆಟಗಾರರಿಗೆ ಇದು ಸಾಧ್ಯವಾಗಿಲ್ಲ. ಭಾರತದ ಶ್ರೇಷ್ಟ ಆಟಗಾರರಾದ ಸುನಿಲ್ ಗವಾಸ್ಕರ್, ಸಚಿನ್ ಟೆಂಡೂಲ್ಕರ್, ರಾಹುಲ್ ದ್ರಾವಿಡ್, ವಿಜಯ್ ಹಜಾರೆ, ಪಾಲಿ ಉಮ್ರಿಗರ್ ಅಂಥವರೂ ಮೊದಲನೆಯ ಟೆಸ್ಟ್ ಆಟದಲ್ಲಿ ಸೆಂಚುರಿ ಬಾರಿಸಿಲ್ಲ. ಲಾಲ ಅರ‍್ನಾಥ್, ದೀಪಕ್ ಶೋಧನ್, ಕ್ರಿಪಾಲ್ ಸಿಂಘ್, ಅಬ್ಬಾಸ್ ಅಲಿ ಬೈಗ್, ಸುರೇಂದರ್ ಅರ‍್ನಾಥ್ ಮುಂತಾದವರು ತಮ್ಮ ಪ್ರಪ್ರಥಮ ಮ್ಯಾಚಿನಲ್ಲಿ ಕ್ರಿಕೆಟ್‌ನ ಮೈದಾನವನ್ನು ಪ್ರವೇಶಿಸುತ್ತಲೇ ಸೆಂಚುರಿಯನ್ನು ಹೊಡೆದರು. ಆದರೆ ಅವರ‍್ಯಾರಿಗೂ ಮುಂದಿನ ಮ್ಯಾಚುಗಳಲ್ಲಿ ಮತ್ತೆ ಸೆಂಚುರಿ ಹೊಡೆಯಲು ಆಗಲಿಲ್ಲ.

ವಿಶ್ವನಾಥ್‌ಗೆ 1969ರಲ್ಲಿ ಕಾನ್ಪುರದಲ್ಲಿ ಆಸ್ಟ್ರೇಲಿಯ ವಿರುದ್ಧ ಆಡಲು ಅವಕಾಶ ಸಿಕ್ಕಿತು. ಆದರೆ ಆವರ ಮೊದಲನೆಯ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದರು. ಅದು ಎಂಥವರ ಮನಸ್ಸನ್ನು ಕುಗ್ಗಿಸುತ್ತ ತಮ್ಮ ಆತ್ಮವಿಶ್ವಾಸದಲ್ಲಿ ಶಂಕೆಯನ್ನು ಉಂಟುಮಾಡುತ್ತೆ. ತಂಡದ ನಾಯಕ ಪಟೌಡಿ ಅವರನ್ನು ಸಮಾಧಾನ ಮಾಡಿ ನೀನು ಎರಡನೇ ಇನ್ನಿಂಗ್ಸ್‌ನಲ್ಲಿ ಸೆಂಚುರಿ ಹೊಡೆಯುತ್ತೀಯ ಎಂದು ಅವರನ್ನು ಹುರಿದುಂಬಿಸಿದರು. ಆಗಿನ ಕಾಲದಲ್ಲಿ ಆರಂಭದಲ್ಲಿ ಸೊನ್ನೆಗೆ ಔಟಾದರೆ, ಮತ್ತೆ ಚಾನ್ಸ್ ಸಿಗುವುದು ಅಷ್ಟಕ್ಕಷ್ಟೇ. ದಕ್ಷಿಣ ವಲಯದಿಂದ ಆಟಗಾರರಿಗೆ ಇನ್ನೂ ಕಷ್ಟವಾಗಿತ್ತು. ಆದರೆ ವಿಶ್ವನಾಥ್ ಎರಡನೇ ಇನ್ನಿಂಗ್ಸಿನಲ್ಲಿ ಅಜೇಯರಾಗಿ 137ರನ್ ಹೊಡೆದು ಮೊದಲನೇ ಟೆಸ್ಟಿನಲ್ಲಿ ಸೆಂಚುರಿ ಬಾರಿಸಿದ ಆಟಗಾರರಲ್ಲಿ ಒಬ್ಬರಾಗಿ ಸೇರಿಕೊಂಡರು. ಇದಾದ ಮೇಲೆ ಆ ಗುಂಪಿನಿಂದ ಎರಡನೇ ಸೆಂಚುರಿ ಬಾರಿಸಿದವರಲ್ಲಿ ಇವರೇ ಮೊದಲಿಗರಾದರು! ಅಷ್ಟೇ ಅಲ್ಲದೆ ಇನ್ನೂ 13 ಸೆಂಚುರಿ ಬಾರಿಸಿದರು!

ವಿಶ್ವನಾಥ್‌ರ ಒಂದು ದಾಖಲೆಯನ್ನು ಇನ್ನೂ ಯಾರೂ ಮುರಿದಿಲ್ಲ. ಅವರೊಬ್ಬರೇ ಪ್ರಪ್ರಥಮವಾಗಿ ಆಡಿದ ಮೊದಲನೇ ಫಸ್ಟ್ ಕ್ಲಾಸ್ ರಣಜಿ ಪಂದ್ಯದಲ್ಲಿ ಡಬಲ್ ಸೆಂಚುರಿ ಮತ್ತು ಮೊದಲನೇ ಟೆಸ್ಟಿನಲ್ಲಿ ಸೆಂಚುರಿ ಬಾರಿಸಿದವರು. 1967-68ರಲ್ಲಿ ಆಂಧ್ರದ ವಿರುದ್ಧ ಮೊದಲನೇ ರಣಜಿ ಪಂದ್ಯದಲ್ಲಿ ಕಡಿಮೆ ಸ್ಕೋರಿಗೆ ಮೈಸೂರು (ಈಗ ಕರ್ನಾಟಕ) 2 ವಿಕೆಟ್ ಕಳೆದುಕೊಂಡಿದ್ದಾಗ ಆಡಲು ಬಂದ ವಿಶ್ವನಾಥ್‌ರನ್ನು ನೋಡಿ ಪಾಪ ಸಣ್ಣ ಹುಡುಗನನ್ನು ಆಡಲು ಕಳಿಸಿದ್ದಾರೆ ಬೋಲಿಂಗ್ ಸ್ವಲ್ಪ ಮೆತ್ತಗೆ ಮಾಡೋಣ ಎಂದು ಅಂದುಕೊಂಡಿದ್ದರು ಅವರ ವೇಗದ ಬೋಲರ್‌ಗಳು! ಮೈಸೂರಿನ ಇನ್ನಿಂಗ್ಸ್ ಮುಗಿದಾಗ ವಿಶ್ವನಾಥ್ 230ರನ್ನು ಮಾಡಿದ್ದರು! ಅದು ಚೊಚ್ಚಲ ರಣಜಿ ಮ್ಯಾಚಿನಲ್ಲಿ!

ಅವರ ಆಟದ ಶೈಲಿಯನ್ನು ಕುರಿತು ಪ್ರೇಕ್ಷಕರೇ ಅಲ್ಲ ನುರಿತ ಆಟಗಾರರು, ದಿಗ್ಗಜರು, ಸಮಕಾಲೀನರು ಎಲ್ಲರೂ ಅವರ ಆಟದ ಬಗ್ಗೆ ಹಾಡಿ ಹೊಗಳಿದ್ದಾರೆ. ಅವರ ಸ್ಕೊಯರ್ ಕಟ್ ಪ್ರಪಂಚದಲ್ಲಿ ಸುಪ್ರಸಿದ್ಧವಾಯಿತು! ಹಾಗೇ ಕವರ್ ಡ್ರೈವ್ ಕೂಡ ಅವರನ್ನು ಬಿಟ್ಟರೆ ಬೇರೆ ಯಾರೂ ಅಷ್ಟು ಆಕರ್ಷಕವಾಗಿ ಹೊಡೆಯುವರಿಲ್ಲ ಎನ್ನುವುದು ಒಮ್ಮತವಾಗಿ ಬಂದ ತೀರ್ಮಾನ!

ಅವರು ಜನವರಿ 1975ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡುತ್ತಾ ಸಂಕಟದಲ್ಲಿದ್ದ ಭಾರತವನ್ನು ರಕ್ಷಿಸಿ 97 ರನ್ ಹೊಡೆದದ್ದನ್ನು ಇಂದಿಗೂ ಅದನ್ನು ನೋಡಿದ ಪ್ರೇಕ್ಷಕರು ಶ್ಲಾಘಿಸುತ್ತಾರೆ, ಸ್ಮರಿಸುತ್ತಾರೆ. ಆಗಿನ ಕಾಲದಲ್ಲಿ ಪ್ರಪಂಚದ ಅತ್ಯಂತ ವೇಗದ ಬೋಲರ್ ಎಂದು ಪ್ರಸಿದ್ಧಿಯಾದ ಆಂಡಿ ರಾಬರ್ಟ್ಸ್‌ನ ಎದುರಿಗೆ ನಿಂತು ಆಡುವುದು ಅಷ್ಟು ಸುಲಭವಿರಲಿಲ್ಲ. ಜೊತೆಗೆ ಚೆನೈನ ಚೆಪಾಕ್‌ ಪಿಚ್ ಫಾಸ್ಟ್ ಬೋರ್‌ಗೆ ಅನುಕೂಲವಾಗಿ ಮಾಡಲಾಗಿತ್ತು. ಹಾಗಿದ್ದಾಗ, ಭಾರತ 6 ವಿಕೆಟ್ ನಷ್ಟಕ್ಕೆ ಕೇವಲ 55ರನ್ ಆಗಿದ್ದಾಗ ವಿಶ್ವನಾಥ್ ಅವರ ಬೋಲಿಂಗನ್ನು ಧೈರ್ಯವಾಗಿ ಎದುರಿಸಿ, 97 ರನ್‌ ಮಾಡಿ ಭಾರತದ ಇನ್ನಿಂಗ್ಸನ್ನು ರಕ್ಷಣೆ ಮಾಡಿದರು. ಅವರ ಆ ಸ್ಕೋರ್‌ಗೆ ಎಷ್ಟು ಪ್ರಾಮುಖ್ಯತೆ ಕೊಡಬೇಕೆಂದರೆ, ಮಿಕ್ಕವರು ಹೊಡೆದ ಸ್ಕೋರನ್ನು ನೋಡಿ – ಅಶೋಕ್ ಮಂಕಡ್ 19 ಮತ್ತು ಎಕ್ಸ್ಟ್ರಾಸ್‌ 16! ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲೂ ವಿಶ್ವನಾಥ್ 46 ರನ್ ಹೊಡೆದು ಭಾರತಕ್ಕೆ ವಿಜಯವನ್ನು ಗಳಿಸಿ ಕೊಟ್ಟರು. ಕ್ರಿಕೆಟ್‌ನ ಗ್ರಂಥಕಾರ ವಿಸ್ಡನ್ ಮತ್ತು ಇತರರು ಇದು ಭಾರತದಲ್ಲಿ ಒಬ್ಬ ಆಟಗಾರನಾಡಿದ ಉನ್ನತ ಹಾಗೂ ಅತ್ಯಂತ ಶ್ರೇಷ್ಟ ಆಟವೆಂದು ಎಲ್ಲರೂ ಒಕ್ಕೊರಲನಿಂದ ಪರಿಗಣಿಸಿದ್ದಾರೆ.

*****

1949ರಲ್ಲಿ ಹುಟ್ಟಿದ ವಿಶ್ವನಾಥ್ ಅವರು 5′ 3′ ಎತ್ತರ. ಸುನಿಲ್ ಗವಾಸ್ಕರ್ ಇವರಿಗಿಂತ ಒಂದು ಇಂಚು ಎತ್ತರವಿರಬಹುದು. ವಿಶ್ವನಾಥ್‌ರನ್ನು ನೋಡಿ ಇವನಿಗೆ ಕ್ರಿಕೆಟ್ ಆಡ ಬರುವುದೇ ಎಂದು ಕನಿಕರ ಪಟ್ಟವರಿಗೆ ಅವರ ಆಟ ನೋಡಿ ಇವನನ್ನ ಹೇಗೆ ಔಟ್ ಮಾಡುವುದಪ್ಪಾ ಎಂದು ತಲೆಯ ಮೇಲೆ ಕೈ ಇಟ್ಟುಕೊಂಡು ವ್ಯಥೆ ಪಟ್ಟವರೇ ಬಹಳ! 1978- 79 ಟೆಸ್ಟ್ ಸರಣಿಯಲ್ಲಿ ಇವರ ಆಟದ ವೈಖರಿ, ಕುಶಲತೆಯನ್ನು ನೋಡಿ ಆರೂಕಾಲು ಎತ್ತರವಿದ್ದ ಇಂಗ್ಲೆಂಡಿನ ನಾಯಕ ಟೋನಿ ಗ್ರೆಗ್‌ ಇವರನ್ನು ಔಟ್ ಮಾಡುವುದಕ್ಕೆ ಆಗದೆ ಸೆಂಚುರಿ ಹೊಡೆದ ವಿಶ್ವನಾಥ್‌ರನ್ನು ಆತ್ಮೀಯವಾಗಿ ಮಕ್ಕಳನ್ನು ಎತ್ತುವ ಹಾಗೆ ಸಲೀಸಾಗಿ ಎತ್ತಿಕೊಂಡರು!

ಭದ್ರಾವತಿಯಲ್ಲಿ ಹುಟ್ಟಿದ ವಿಶ್ವನಾಥ್ ಬೆಂಗಳೂರಿನ ಸ್ಪಾರ್ಟನ್ಸ್ ಟೀಮಿಗೆ ಆಡುತ್ತಿದ್ದರು. ಅವರು ಬೇಸಿಗೆಯಲ್ಲಿ ನಡೆಯುವ ಅಲ್ಲಿನ ಟೆನ್ನಿಸ್ ಬಾಲಿನ ಕ್ರಿಕೆಟ್ ಮ್ಯಾಚುಗಳಲ್ಲಿ ಆಡಿದ್ದಾರೆ. ಮಾಧವನ್ ಪಾರ್ಕ್‌, ಆರ್ಮುಗಂ ಸರ್ಕಲ್, ಕೊಹಿನೂರ್ ಪಾರ್ಕ್‌, ಪಟಾಲಮ್ಮನ ಭಾವಿ ಮೈದಾನ, ನ್ಯಾಷನಲ್ ಹೈ ಸ್ಕೂಲ್ ಗ್ರೌಂಡ್ಸ್ ಇವೆಲ್ಲಾ ಬೆಂಗಳೂರಿನ ಟೆನಿಸ್ ಬಾಲ್‌ನ ಈಡನ್ ಗಾರ್ಡನ್ಸ್, ಲಾರ್ಡ್ಸ್‌, ಎಮ್ ಸಿ ಜಿ, ವಾಂಖೆಡೆ, ಜೊ ಬರ್ಗ್‌ ಮೈದಾನಗಳು. ಇದರಲ್ಲಿ ಪಳಗಿ, ನುರಿತು ಎಷ್ಟೋ ಕ್ರಿಕೆಟ್ ಆಟಗಾರರು ದೇಶಕ್ಕೆ ಆಡಿದ್ದಾರೆ. ಇದರಲ್ಲಿ ವಿಶ್ವನಾಥ್ ಕೂಡ ಒಬ್ಬರು.

ಒಮ್ಮೆ ಹೈದರಾಬಾದಿನಲ್ಲಿ ವಿಶ್ವನಾಥ್ ರಣಜಿ ಟ್ರೋಫಿ ಮ್ಯಾಚ್ ಆಡುವಾಗ ಎಮ್. ಎಲ್. ಜಯಸಿಂಹ ಮತ್ತು ಮನ್ಸೂರ್ ಆಲಿ ಖಾನ್ ಪಟೌಡಿ ಇವರ ಆಟವನ್ನು ನೋಡಿದರಂತೆ. ಆ ದಿನಗಳಲ್ಲಿ ಪಟೌಡಿ ರಣಜಿ ಹೈದರಾಬಾದಿನ ತಂಡಕ್ಕೆ ಆಡುತ್ತಿದ್ದರು. ಇವರ ಬ್ಯಾಟಿಂಗನ್ನು ನೋಡಿ ದಂಗಾಗಿ, ವಿಶ್ವನಾಥ್ ಎಷ್ಟು ಬೇಗ ಇಂಡಿಯಾಗೆ ಆಡಿದರೆ ಅಷ್ಟು ಒಳ್ಳೆಯದು ಎಂದು ತೀರ್ಮಾನಕ್ಕೆ ಬಂದರು! ಅವರು ಹೊಸ ಬಾಲಿನಿಂದ ಅತ್ಯಂತ ವೇಗದಿಂದ ಮಾಡುವ ಫಾಸ್ಟ್ ಬೋಲ್‌ನ ಹೆದರಿಕೆಯೇ ಇಲ್ಲದೆ ಆರಾಮವಾಗಿ ಆಡುತ್ತಿದ್ದರು. ಅವರು ಆಡುವ ರೀತಿ, ಆಡುವ ವೈಖರಿ ನೋಡಿ ಲೆಕ್ಕವಿಲ್ಲದಷ್ಟು ಪ್ರೇಕ್ಷಕರು ಮತ್ತು ಕ್ರಿಕೆಟ್ ಪಂಡಿತರು ಮೆಚ್ಚಿಕೊಂಡರು. ಅವರು ಕಲಿತಿದ್ದು ಬಹಳಷ್ಟು ಇರಬಹುದು ಆದರೆ ಹುಟ್ಟಿನಿಂದ ತಾನಾಗಿಯೇ ಬಂದದ್ದು ಬೆಟ್ಟದಷ್ಟು. ಅವರ ಬ್ಯಾಟಿಂಗ್‌ನ ವಿಶೇಷವೇನೆಂದರೆ ಅವರು ಮಣಿಕಟ್ಟಿನ (ರಿಸ್ಟ್) ಶಕ್ತಿಯಿಂದ ಹೊಡೆಯುತ್ತಿದ್ದ ರನ್‌ಗಳು. ಅವರು ಹೊಡೆಯುತ್ತಿದ್ದರು ಅಂದರೆ ತಪ್ಪಾಗುತ್ತೆ; ಕ್ಷಮಿಸಿ. ಬಾಲನ್ನು ಬ್ಯಾಟಿನಿಂದ ಮುತ್ತಿಟ್ಟ ಹಾಗೆ ನವಿರಾಗಿ ಮಣಿಕಟ್ಟಿನ ಬಲದಿಂದ ಮೆತ್ತಗೆ ತಳ್ಳುತ್ತಿದ್ದರು, ಅದು ಶರವೇಗದಿಂದ ಬೌಂಡರಿಗೆ ಓಡುತ್ತಿತ್ತು. ಇದನ್ನು ಟೈಮಿಂಗ್ ಎಂದು ಕರೆಯುತ್ತಾರೆ. ಯಾವ ಬಾಲಿಗೆ ಎಷ್ಟು ಬಲ ಬೇಕೋ ಅಷ್ಟೇ ಬಲ ಕೊಟ್ಟು ಅದನ್ನು ಬೌಂಡರಿಗೆ ರವಾನಿಸುತ್ತಿದ್ದರು.

*****

ಆಟದ ಜೊತೆ ಅವರ ಅತ್ಯಂತ ಸರಳತೆ, ಮುಗ್ಧ ಸ್ವಭಾವ ಅವರ ಜೊತೆ ಮತ್ತು ವಿರುದ್ಧವಾಗಿ ಆಡಿದ ಆಟಗಾರರಿಗೂ ಇಷ್ಟವಾಗಿ ಅವರಿಗೆ ಶತ್ರುಗಳೇ ಇಲ್ಲ ಅನ್ನುವ ಮನೋಭಾವ ಎಲ್ಲರಲ್ಲೂ ನಾಟಿತ್ತು. ಎಷ್ಟೋ ಹುಡುಗರು ಅವರ ವಿರುದ್ಧ ತಂಡದಲ್ಲಿದ್ದರೂ ಅವರ ಪ್ರಶ್ನೆಗಳಿಗೆ ನೇರವಾಗಿ ಉತ್ತರಕೊಟ್ಟು ಅವರಿಗೆ ಹೇಗೆ ಆಡಬೇಕೆಂದು ತೋರಿಸಿಕೊಡುತ್ತಿದ್ದರು. ಅವರ ಆಟಕ್ಕೆ, ಸರಳತೆಗೆ ಬಹಳ ಮೆಚ್ಚಿದ ಸುನಿಲ್ ಗವಾಸ್ಕರ್, ವಿಶ್ವನಾಥ್ ಅವರನ್ನು ತಮಗಿಂತ ಶ್ರೇಷ್ಟ ಆಟಗಾರನೆಂದು ಎಣಿಸಿದರು. ಗಾಢ ಸ್ನೇಹಿತರಿಬ್ಬರೂ ನೆಂಟರಾದರು. ವಿಶ್ವನಾಥ್ ಗವಾಸ್ಕರ್ ಅವರ ತಂಗಿ ಕವಿತಾಳನ್ನು ಮೋಹಿಸಿ ಮದುವೆಯಾದರು.

‘ವಿಶ್ವನಾಥ್ ಸೆಂಚುರಿ ಹೊಡೆದರೆ, ಭಾರತಕ್ಕೆ ಎಂದೂ ಸೋಲಿಲ್ಲ’ ಎಂಬುದು ಸತ್ಯಾಂಶ. ಇದು ಅಕ್ಷರಸಹ ನಿಜವಾಗಿ ಭಾರತ ಎಂದೂ ಸೋಲನ್ನು ಅನುಭವಿಸಲಿಲ್ಲ! ಸಮಕಾಲೀನರಾಗಿ ಆಡಿ ಭಾರತಕ್ಕೆ ಎಷ್ಟೋ ವಿಜಯವನ್ನು ಸಾಧಿಸಿದ ಗವಾಸ್ಕರ್ ಮತ್ತು ವಿಶ್ವನಾಥ್ ಒಟ್ಟಿಗೆ ಆಡಿ ಇಬ್ಬರೂ ರನ್‌ಗಳಿಸಿದ ಸಮಯ ಬಹಳ ವಿರಳ! ಒಬ್ಬರು ಔಟಾದರೆ ಇನ್ನೊಬ್ಬರು ತಂಡವನ್ನು ಕಾಪಾಡಿ ಒಳ್ಳೆಯ ಸ್ಕೋರ್‌ಗೆ ತರಲು ಶ್ರಮಿಸುತ್ತಿದ್ದರು.

ಒಮ್ಮೆ ವೆಸ್ಟ್ ಇಂಡೀಸ್ ವಿರುದ್ಧ ಇಬ್ಬರೂ ಸೆಂಚುರಿ ಬಾರಿಸಿ ಭಾರತಕ್ಕೆ ಅಪೂರ್ವ ವಿಜಯವನ್ನು ಗಳಿಸಿಕೊಟ್ಟು ವಿಶ್ವ ದಾಖಲೆಯನ್ನು ಮಾಡಿದರು. 1978ರಲ್ಲಿ ಭಾರತಕ್ಕೆ ವಿಜಯ ಸಾಧಿಸಲು ಕೊನೆಯ ಇನ್ನಿಂಗ್ಸ್‌ನಲ್ಲಿ 403 ರನ್ ಮಾಡಬೇಕಿತ್ತು. ಇದಕ್ಕೆ ಮುಂಚೆ ಒಂದೇ ಸರ್ತಿ- ಆಸ್ಟ್ರೇಲಿಯ ತಂಡ ಡಾನ್ ಬ್ರಾಡ್ಮನ್‌ರ ನೇತೃತ್ವದಲ್ಲಿ ಇಂಗ್ಲೆಂಡಿನ ವಿರುದ್ಧ 1948 ರಲ್ಲಿ 404 ರನ್ ಹೊಡೆದು ಗೆದ್ದಿದ್ದರು.

ಈ ಇನ್ನಿಂಗ್ಸಿನಲ್ಲಿ ನಮ್ಮ ದಿಗ್ಗಜರಿಬ್ಬರೂ ಸೆಂಚುರಿಗಳನ್ನು ಹೊಡೆದು ರೆಕಾರ್ಡ್‌ ಮಾಡಿ ಮ್ಯಾಚ್ ಗೆಲ್ಲಲು ಸಹಾಯ ಮಾಡಿದರು. ಬ್ರಿಜೇಶ್‌ ಪಟೇಲ್ ಕೊನೆಯ ಗೆಲುವಿನ ರನ್ ಹೊಡೆದು ಭಾರತಕ್ಕೆ ಅದ್ಭುತ ವಿಜಯವನ್ನು ಗಳಿಸಿ ಕೊಟ್ಟರು. ಇಂದಿಗೂ ವಿಶ್ವನಾಥ್ ಮತ್ತು ಗವಾಸ್ಕರ್ ಅವರಿಬ್ಬರ ಆ ಟೆಸ್ಟಿನ ಆಟವನ್ನು ಲಕ್ಷಾಂತರ ಕ್ರಿಕೆಟ್ ಪಟುಗಳು ಸ್ಮರಿಸುತ್ತಾರೆ, ಶ್ಲಾಘಿಸುತ್ತಾರೆ.

ವಿಶ್ವನಾಥ್‌ರ ಮತ್ತೊಂದು ಗುಣ; ಅವರು ಔಟಾದರೆ ಅಂಪೈರ್‌ನ ತೀರ್ಮಾನಕ್ಕೆ ಕಾಯುವುದಿಲ್ಲ. ಅವರೇ ಸೀದಾ ಪೆವಿಲಿಯನ್ ಕಡೆ ನಡೆದುಬಿಡುತ್ತಿದ್ದರು! ಅವರ ಈ ಮನೋಧರ್ಮ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿ ಅದನ್ನ ಗೌರವಿಸಿ ಚಪ್ಪಾಳೆ ತಟ್ಟುತ್ತಿದ್ದರು. ಇದನ್ನು ಅವರೇ ಬೆಳಸಿಕೊಂಡು ಜೀವನವಿಡೀ ಪಾಲಿಸುತ್ತಾ ಬಂದರು.

ಅವರ ಆಟದ ಶೈಲಿಯನ್ನು ಕುರಿತು ಪ್ರೇಕ್ಷಕರೇ ಅಲ್ಲ ನುರಿತ ಆಟಗಾರರು, ದಿಗ್ಗಜರು, ಸಮಕಾಲೀನರು ಎಲ್ಲರೂ ಅವರ ಆಟದ ಬಗ್ಗೆ ಹಾಡಿ ಹೊಗಳಿದ್ದಾರೆ. ಅವರ ಸ್ಕೊಯರ್ ಕಟ್ ಪ್ರಪಂಚದಲ್ಲಿ ಸುಪ್ರಸಿದ್ಧವಾಯಿತು! ಹಾಗೇ ಕವರ್ ಡ್ರೈವ್ ಕೂಡ ಅವರನ್ನು ಬಿಟ್ಟರೆ ಬೇರೆ ಯಾರೂ ಅಷ್ಟು ಆಕರ್ಷಕವಾಗಿ ಹೊಡೆಯುವರಿಲ್ಲ ಎನ್ನುವುದು ಒಮ್ಮತವಾಗಿ ಬಂದ ತೀರ್ಮಾನ!

ಒಮ್ಮೆ ಅವರ ನೇತೃತ್ವದಲ್ಲಿ ಭಾರತದ ಸ್ವರ್ಣ ವರ್ಷದ ಅಂಗವಾಗಿ ವಿಶೇಷ ಮ್ಯಾಚ್ ಆಡಲು ಇಂಗ್ಲೆಂಡಿನ ಟೀಮ್ ಭಾರತಕ್ಕೆ ಬಂದಿತ್ತು. ಆ ಪಂದ್ಯಕ್ಕೆ ವಿಶ್ವನಾಥ್ ನಾಯಕತ್ವ ವಹಿಸಿದ್ದರು. ಇಂಗ್ಲೆಂಡಿನ ತಂಡ ಅಷ್ಟು ಚೆನ್ನಾಗಿ ಆಡದೆ ಬಹಳ ವಿಕೆಟ್‌ಗಳನ್ನು ಕಡಿಮೆ ಸ್ಕೋರ್‌ಗೆ ಕಳೆದುಕೊಂಡಿತ್ತು. ಭಾರತದ ಪಕ್ಷಕ್ಕೆ ಗೆಲ್ಲಲು ಒಳ್ಳೆ ಅವಕಾಶ ಒದಗಿತ್ತು. ಬ್ಯಾಟಿಂಗ್ ಮಾಡುತ್ತಿದ್ದ ಇಂಗ್ಲೆಂಡಿನ ಬಾಬ್ ಟೈಲರ್ ವಿರುದ್ಧ ವಿಕೆಟ್ ಕೀಪರ್ ಕ್ಯಾಚ್ ಹಿಡಿದು ಅಪೀಲ್ ಮಾಡಿದ್ದಕ್ಕೆ ಅಂಪೈರ್ ಔಟ್ ಕೊಟ್ಟರು. ಟೈಲರ್ ವಾಪಸ್ಸು ಪೆವಿಲಿಯನ್‌ಗೆ ಹೋಗದೆ ಅಲ್ಲೇ ನಿಂತಿದ್ದರು. ಅವರು ಅಂಪೈರಿಗೆ ತಾವು ಬ್ಯಾಟ್‌ನಿಂದ ಆಡಿಲ್ಲ ಎಂದು ತೋರಿಸಿದರು. ಆವಾಗೆಲ್ಲಾ ಡಿ ಆರ್ ಎಸ್ ತರಹ ಸ್ಲೊ ಮೋಷನ್‌ನಲ್ಲಿ ನೋಡಲು ತಾಂತ್ರಿಕ ಸುವಿಧಗಳು ಇರಲಿಲ್ಲ. ಅಂಪೈರ್ ಔಟ್ ಕೊಟ್ಟ ಮೇಲೆ ವಾಪಸ್ಸು ಹೋಗಬೇಕಿತ್ತು. ವಿಶ್ವನಾಥ್ ಟೈಲರ್ ಬಳಿಗೆ ಹೋಗಿ ಬ್ಯಾಟ್‌ಗೆ ಬಾಲು ತಾಕಿಸಿದರಾ ಎಂದು ಕೇಳಿದರು. ಅವರು ಇಲ್ಲವೆಂದಾಗ ವಿಶ್ವನಾಥ್ ಅಂಪೈರ್ ಹತ್ತಿರ ಹೋಗಿ ಅವರಿಗೆ ಮತ್ತೆ ಆಡಲು ಅನುಮತಿ ಕೇಳಿದರು! ಇದು ಯಾವತ್ತೂ ಆಗಿಲ್ಲ ಮುಂದೆ ಆಗಲ್ಲ! ಅಂಪೈರ್ ಅವರನ್ನು ಅಪೀಲ್‌ನ ವಾಪಸ್ಸು ಪಡೆಯಲು ಹೇಳಿದರು. ಇದೆಲ್ಲಾ ಆದನಂತರ ಟೈಲರ್ ಮತ್ತೆ ಆಡಲು ಶುರು ಮಾಡಿದರು. ಟೈಲರ್ ಮತ್ತು ಅವರ ಜೊತೆ ಆಡುತ್ತಿದ್ದ ಬೋಥಮ್ ಮುಂದೆ ಚೆನ್ನಾಗಿ ರನ್ ಹೊಡೆದು ಇಂಗ್ಲೆಂಡಿಗೆ ಗೆಲ್ಲಲು ಸಾಧ್ಯವಾಯಿತು. ಸ್ವರ್ಣ ವರ್ಷದ ವಿಶೇಷ ಪಂದ್ಯ ಗೆಲುವಿನ ಸ್ಥಿತಿಯಲ್ಲಿದ್ದ ಭಾರತ ಸೋಲನ್ನು ಅನುಭವಿಸಿತು. ಆದರೆ ಇಂದಿಗೂ ಎಲ್ಲರೂ ಆ ಪಂದ್ಯವನ್ನು ಜ್ಞಾಪಿಸಿಕೊಳ್ಳುವುದು ಯಾರು ಗೆದ್ದರು ಅನ್ನುವ ಕಾರಣಕ್ಕೆ ಅಲ್ಲ. ವಿಶ್ವನಾಥ್ ಮಾಡಿದ ಅಪೂರ್ವ ಮಹತ್ತರ ನಿರ್ಧಾರಕ್ಕೆ! ಅಂಪೈರ್ ಕೊಟ್ಟ ನಿರ್ಧಾರವನ್ನು ಬದಲಾಯಿಸಿ ಔಟು ಕೊಟ್ಟ ಪ್ಲೇಯರ್‌ನ ವಾಪಸ್ಸು ಕರೆಸಿದ್ದಕ್ಕೆ! ತಮ್ಮ ಅಚಲ ಮಹತ್ತರವಾದ ನಂಬಿಕೆ; ಏನು ಮಾಡಿದರೂ ಅದು ಸರಿಯಾಗಿರಬೇಕು. ಅದರಲ್ಲಿ ಕೊಂಚವೂ ನಿಯತ್ತಿಗೆ ದಖ್ಖೆ ಬರಬಾರದು. ಅದರ ಪರಿಣಮ ಏನು ಬೇಕಾದರೂ ಆಗಲಿ. ಇದು ಅವರ ಧ್ಯೇಯ.

ವಿಶ್ವನಾಥ್ 91 ಟೆಸ್ಟ್ ಮ್ಯಾಚುಗಳನ್ನಾಡಿ ಒಟ್ಟು 6081 ರನ್ ಮಾಡಿ ಅದರಲ್ಲಿ 14 ಶತಕ ಮತ್ತು 35 ಅರ್ಧ ಶತಕವನ್ನು 41.93 ಸರಾಸರಯಲ್ಲಿ ಹೊಡೆದಿದ್ದಾರೆ. ಅವರು 1969ರಿಂದ 1983ರವರೆಗೆ ಭಾರತಕ್ಕೆ ಕ್ರಿಕೆಟ್ ಆಡಿದರು. ಆಟದಿಂದ ವಿಶ್ರಾಂತಿ ಹೊಂದಿ, ಸೆಲೆಕ್ಷನ್ ಟೀಮಿನ ಅಧ್ಯಕ್ಷರಾಗಿ ಈಗ ಮಡದಿ ಕವಿತಾ ಮತ್ತು ಮಗ ದೈವಿಕ್‌ರ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇಂದಿಗೂ ಪ್ರೇಕ್ಷಕರು ಅವರ ಅದ್ಭುತ ಆಟವನ್ನು ನೆನೆಸಿಕೊಂಡು ಅವರನ್ನು ಜ್ಞಾಪಿಸಿಕೊಳ್ಳುತ್ತಾರೆ.

*****

ಫೆಬ್ರವರಿ 24, 1988ರಲ್ಲಿ ಸಚಿನ್ ಟೆಂಡೂಲ್ಕರ್ ಮತ್ತು ಅವರ ಸಹಪಾಠಿ ವಿನೋದ್ ಕಾಂಬ್ಳಿ ಅವರ ಶಾಲೆ ಶಾರದಾಶ್ರಮದ ಪರವಾಗಿ ಆಡುತ್ತಾ ಸಂತ ಕ್ಸೇವಿರ್ಸ್‌ ವಿರುದ್ಧ 668 ರನ್ ಭರ್ಜರಿ ಭಾಗದಾರಿಕೆ ಮಾಡಿದರು. ಸಚಿನ್ 326 ಹೊಡೆದರೆ ಅವರ ಪಾಲುದಾರ ಕಾಂಬ್ಳಿ 349 ರನ್ ಹೊಡೆದರು. ಇಂತಹ ಇನ್ನಿಂಗ್ಸ್‌ನ ಆಡುತ್ತಲೇ ಸಚಿನ್ ಕ್ರಿಕೆಟ್ ಮೈದಾನವನ್ನು ಪ್ರವೇಶಿಸಿದರು. ಅವರ ಕೋಚ್ ರಮಾಕಾಂತ್ ಅಚ್ರೇಕರ್ ಸಚಿನ್‌ರ ಯಶಸ್ಸಿಗೆ ಬಹುಮಟ್ಟಿಗೆ ಕಾರಣರಾದರು. ಅವರು ಹಾಕಿಕೊಟ್ಟ ಅಡಿಪಾಯದಿಂದಲೇ ಸಚಿನ್ ಮುಂದೆ ಅವರ ಭವ್ಯ ಕ್ರಿಕೆಟ್‌ನ ಸಾಮ್ರಾಜ್ಯ ಕಟ್ಟಲು ಸಾಧ್ಯವಾಯಿತು.

ಡಿಸೆಂಬರ್ 11, 1988ರಲ್ಲಿ ಅವರು ಆಡಿದ ಮೊದಲನೇ ರಣಜಿ ಟ್ರೋಫಿ ಮ್ಯಾಚಿನಲ್ಲೇ ಸೆಂಚುರಿ ಬಾರಿಸಿದರು. ಗುಜರಾತ್ ವಿರುದ್ಧ ಆಡಿದ ಟೆಂಡೂಲ್ಕರ್ 129 ಬಾಲುಗಳಲ್ಲಿ 100 ರನ್ ಭಾರಿಸಿ ಅಜೇಯರಾಗಿ ಉಳಿದರು.

1991 ಜನವರಿಯಲ್ಲಿ ಮೊಟ್ಟ ಮೊದಲನೇ ಬಾರಿ ಆಡಿದ ದುಲೀಪ್ ಟ್ರೋಫಿ ಮ್ಯಾಚಿನಲ್ಲಿ ಸಚಿನ್ ಶತಕ ಬಾರಿಸಿ ದಾಖಲೆ ಬರೆದರು. ಅವರು ಪೂರ್ವ ವಲಯದ ಮೇಲೆ ಆಡುತ್ತಾ 159 ರನ್ ಹೊಡೆದರು.

ಪಾಕಿಸ್ತಾನಕ್ಕೆ ಹೋದಾಗ ಅಲ್ಲಿ ಬೆಳಕು ಸರಿಯಾಗಿಲ್ಲದ ಕಾರಣದಿಂದ ಒಂದು ಪಂದ್ಯವನ್ನು ಪ್ರದರ್ಶನ ಪಂದ್ಯವಾಗಿ ಬದಲಾಯಿಸಿದರು. 16 ವರ್ಷದ ಸಚಿನ್, 20 ಓವರ್‌ನ ಆ ಪಂದ್ಯದಲ್ಲಿ ಹೆಸರುವಾಸಿಯಾದ ಪಾಕಿಸ್ತಾನದ ಸ್ಪಿನ್ನರ್ ಅಬ್ದುಲ್ ಖಾದರ್ ಅವರ ಒಂದು ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಹೊಡೆದು 18 ಬಾಲ್‌ಗಳಲ್ಲಿ 53 ರನ್ ಗಳಿಸಿದರು! ಹಿಂದೆಂದೂ ಅವರ ಬೋಲಿಂಗಿಗೆ ಯಾರೂ ಈ ತರಹ ರನ್ ಹೊಡೆದಿರಲಿಲ್ಲ. ಸಚಿನ್‌ರ ಈ ಇನ್ನಿಂಗ್ಸ್ ಎಲ್ಲರನ್ನೂ ಹೊಡೆದೆಬ್ಬಿಸಿದರೆ ಕ್ರಿಕೆಟ್ ವಿಶ್ವ ಯಾರಪ್ಪಾ ಈ ತರಹ ಹೊಡೀತಿದಾನೇ ಅಂತ ಅಚ್ಚರಿಯಿಂದ ನೋಡಿತು!

ಸಚಿನ್ ಕ್ರಿಕೆಟ್ ಪ್ರಪಂಚದಲ್ಲಿ ಬಹಳ ಬೇಗನೆ ಪ್ರಖ್ಯಾತರಾದರು. ತನ್ನ ತಂಡ ಸಂಕಟದಲ್ಲಿದ್ದಾಗ ಇವರು ಎಷ್ಟೊ ಕಡೆ ‘ಸಂಕಟ ಬಂದಾಗ ವೆಂಕಟ ರಮಣ’ ಆದರು! ಪಾಕಿಸ್ತಾನದ ಶೊಯೆಬ್ ಅಖ್ತರ್ ಮೊದಲ ಬಾರಿ ಬೋಲಿಂಗ್ ಮಾಡಿದಾಗ ಅವರ ವೇಗವನ್ನು ನೋಡಿ ಜಗತ್ತೇ ತತ್ತರಿಸಿ ಹೋಗಿತ್ತು. ಜೊತೆಗೆ ಶೋಯೆಬ್‌ರ ಹಾವಭಾವ, ತನ್ನನ್ನು ಬಿಟ್ಟರಿಲ್ಲ ಎಲ್ಲಾರನ್ನೂ ಮುಗಿಸಿ ಬಿಡ್ತಿನಿ ಅನ್ನುವ ಮನೋಭಾವ ಎಲ್ಲರಲ್ಲೂ ಸ್ವಲ್ಪ ದಿಗಿಲು ಹುಟ್ಟಿಸಿತ್ತು. ವಿಶ್ವ ಕಪ್‌ಗೆ ಮೊದಲಬಾರಿ ಅವರು ಆಡಿದಾಗ ಸಚಿನ್ ಇವರ ಬೋಲಿಂಗನ್ನು ಥಳಿಸಲು ಪಣ ತೊಟ್ಟರು. ಇವರ ಬೋಲಿಂಗನ್ನು ಹಿಗ್ಗಾ ಮುಗ್ಗಾ ಬಾರಿಸಿ ಇವರು ಹುಲಿಯಲ್ಲ, ಹುಲಿ ವೇಶ ಹಾಕಿದ ಸಾಧು ಪ್ರಾಣಿ ಕುರಿ ಅಷ್ಟೇ, ಇವರಿಂದ ಏನೂ ಭಯಪಡಬೇಕಾಗಿಲ್ಲ ಎಂದು ತೋರಿಸಿ ಕೊಟ್ಟರು ಸಚಿನ್!

ಶೇನ್ ವಾರ್ನ್‌ ಈ ಶತಮಾನದ ಅತ್ಯುತ್ತಮ ಬೋಲರ್‌ಗಳಲ್ಲಿ ಒಬ್ಬರು. ಶ್ರೀ ಲಂಕದ ಮುತ್ತಯ್ಯ ಮುರಳಿಧರನ್ ಆದಮೇಲೆ ಬಹಳ ವಿಕೆಟ್ ತೆಗೆದುಕೊಂಡವರು ವಾರ್ನ್‌. ಸ್ಟೀವ್ ವಾ ಭಾರತಕ್ಕೆ ಬಂದಾಗ ಅವರದು ಮುಖ್ಯ ಉದ್ದೇಶವೇನಿತ್ತೆಂದರೆ ಭಾರತವನ್ನು ಭಾರತದಲ್ಲಿ ಸೋಲಿಸಿ ಪ್ರಪಂಚದಲ್ಲೇ ಆಸ್ಟ್ರೇಲಿಯ ಅತ್ಯಂತ ಪರಾಕ್ರಮಿ, ಕ್ರಿಕೆಟ್ಟಿನಲ್ಲಿ ಮೊದಲಿಗರು ಎಂದು ತೋರಿಸುವುದು. ಅದಕ್ಕೆ ಆ ಆಸೆ ಇಡೇರುವುದಕ್ಕೆ ಅವರು ಶೇನ್ ವಾರ್ನ್‌ ಮೇಲೆ ಬಹಳ ಅವಲಂಬಿಸಿದ್ದರು. ವಾರ್ನ್‌ ಆಗಲೇ ಎಲ್ಲಾ ದೇಶಗಳಮೇಲೆ ಚೆನ್ನಾಗಿ ಆಡಿ ವಿಕೆಟ್‌ಗಳನ್ನು ತೆಗೆದುಕೊಂಡಿದ್ದರು. ಕೆಲವು ದೇಶಗಳಿಗಂತೂ ಅವರು ಸಿಂಹಸ್ವಪ್ನರಾಗಿದ್ದರು. ಶೇನ್ ವಾರ್ನ್‌ ಬಂದಾಗ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಭಾರತದ ಸ್ಪಿನ್ ಬೋಲಿಂಗ್‌ನ ಹೊರೆ ಹೊತ್ತಿದ್ದರು.

ಶೇನ್ ವಾರ್ನ್‌ ಎಷ್ಟು ಪ್ರಸಿದ್ಧಿಯಾಗಿದ್ದರೆಂದರೆ ಅವರ ಬೋಲಿಂಗ್‌ನ ಹೇಗೆ ಆಡೋದು ಅನ್ನುವ ಚಿಂತೆ ಭಾರತದ ಬ್ಯಾಟ್ಸ್‌ಮನ್ರಿಗೆ ಸಹಜವಾಗಿ ಯೋಚನೆಯಾಗಿತ್ತು. ಇದರ ಹಿಂದಿನ ಸರಣಿಯಲ್ಲಿ ಶೇನ್ ವಾರ್ನ್‌ ಭಾರತಕ್ಕೆ ಬಂದಾಗ ಆವಾಗಲೇ ಅವನ ಬೋಲಿಂಗನ್ನು ಸಚಿನ್ ಪಿಚ್‌ನ ಎಲ್ಲಾಕಡೆ ಹೊಡೆದು ಅವನ ಬೋಲಿಂಗಿಗೆ ಭಾರತ ಹೆದರಬೇಕಾಗಿಲ್ಲ ಎಂದು ತೋರಿಸಿಕೊಟ್ಟಿದ್ದರು. 1998 ರ ಆ ಸರಣಿಯಲ್ಲಿ ಟೆಸ್ಟ್ ಮ್ಯಾಚಿಗೆ ಮುಂಚೆ ಮುಂಬಯಿ ಆಸ್ಟ್ರೇಲಿಯದ ವಿರುದ್ಧ ಒಂದು ಪಂದ್ಯವಿತ್ತು. ಆ ಪಂದ್ಯದಲ್ಲಿ ಸಚಿನ್ ದ್ವಿ- ಶತಕ ಬಾರಿಸಿದರು. ಆ ಪಂದ್ಯದಲ್ಲಿ ವಿಶೇಷವಾಗಿ ಶೇನ್ ವಾರ್ನ್‌ ಬೋಲಿಂಗ್‌ಅನ್ನು ಚೆನ್ನಾಗಿ ಥಳಿಸಿ ಅವರ ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟು ಮಾಡಿದ್ದರು. ವಾರ್ನ್‌ ಟೆಸ್ಟ್ ಮ್ಯಾಚು ಶುರುವಾಗುವದಕ್ಕೆ ಮುಂಚೆ ಕುಗ್ಗಿ ಹೋಗಿದ್ದರು. 2001 ರಲ್ಲಿ ಅವರ ಬೋಲಿಂಗನ್ನು ಲೀಲಾಜಾಲವಾಗಿ ಆಡಿ ಆ ಸರಣಿಯಲ್ಲಿ ಭಾರತ ಅದ್ಭುತ ವಿಜಯವನ್ನು ಸಾಧಿಸಿತು. ಹರ್ಭಜನ್‌ರ ಬೋಲಿಂಗ್‌ನಲ್ಲಿ ಅತ್ಯಂತ ಯಶಸ್ವಿಯಾದರೆ, ಲಕ್ಷ್ಮಣ್ ಮತ್ತು ದ್ರಾವಿಡ್ ಕಲ್ಕತ್ತ ಟೆಸ್ಟಿನಲ್ಲಿ ಹೊಸ ದಾಖಲೆ ಬರೆದು ಭಾರತಕ್ಕೆ ಗೆಲುವನ್ನು ತಂದುಕೊಟ್ಟರು.

ಟೆಂಡೂಲ್ಕರ್ ಡೆಸರ್ಟ್‌ ಸ್ಟಾರ್ಮ್‌ (ಮರುಭೂಮಿಯ ಚಂಡಮಾರುತ) ಅನ್ನುವ ಏಕ ದಿನದ ಸರಣಿಯಲ್ಲಿ ಷಾರ್ಜ ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಬಹಳ ಚೆನ್ನಾಗಿ ಆಡಿದರು. 1998ರ ಆ ಸರಣಿಯಲ್ಲಿ ಟೆಂಡೂಲ್ಕರ್ 143 ರನ್ ಬಾರಿಸಿದರು. ತಂಡವನ್ನು ಗೆಲುವಿಗೆ ಬಹಳ ಹತ್ತಿರ ತಂದಿದ್ದರು. ಅವರು ಔಟಾದಮೇಲೆ ಭಾರತ ತನ್ನ ವಿಕೆಟ್‌ಗಳನ್ನು ಕಳೆದುಕೊಂಡು ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಅನುಭವಿಸಿತು.

*****

24 ಏಪ್ರಿಲ್ 1973ರಲ್ಲಿ ಹುಟ್ಟಿದ ಸಚಿನ್ ಟೆಂಡೂಲ್ಕರ್ 5’5″ ಎತ್ತರ. ಅವರು ಸ್ಕೂಲಿನಿಂದಲೇ ಶತಕಗಳನ್ನು ಬಾರಿಸಿ ಬಹಳ ಕಡಿಮೆ ವಯಸ್ಸಿನಲ್ಲೇ ಮುಂಬಯಿ ಮತ್ತು ಭಾರತಕ್ಕೆ ಆಡಿದರು. 200 ಟೆಸ್ಟ್ ಆಡಿ 15921 ರನ್‌ ಹೊಡೆದ ಅವರ ಸರಾಸರಿ 53.78. ಟೆಸ್ಟ್‌ನಲ್ಲಿ 51 ಶತಕ ಮತ್ತು ಏಕ ದಿನದ ಮ್ಯಾಚಿನಲ್ಲಿ ೪೯ ಶತಕ ಬಾರಿಸಿದ ಟೆಂಡೂಲ್ಕರ್ ಒಟ್ಟು ನೂರು ಶತಕಗಳನ್ನು ಬಾರಿಸಿದ್ದಾರೆ! ಭಾರತ ಸರ್ಕಾರ ಅವರಿಗೆ ‘ಭಾರತ ರತ್ನ’ ವನ್ನು ಕೊಟ್ಟು ಸನ್ಮಾನಿಸಿತು. ಇದು ಒಬ್ಬ ಆಟಗಾರನಿಗೆ ಕೊಟ್ಟ ಮೊದಲ ಭಾರತ ರತ್ನ ಕೊಡುಗೆ. ಕ್ರಿಕೆಟ್‌ನ ದಿಗ್ಗಜ ಡಾನ್ ಬ್ರಾಡ್ಮನ್ ಅವರನ್ನು ವಿಶ್ವದ ಅತ್ಯಂತ ಶ್ರೇಷ್ಟ ಕ್ರಿಕೆಟ್ ಆಟಗಾರನೆಂದು ಪರಿಗಣಿಸಿ ಅವರ 90ನೇ ಹುಟ್ಟು ಹಬ್ಬಕ್ಕೆ ಅವರ ಮನೆಗೆ ಆಮಂತ್ರಿಸಿದರು.

1999ರಲ್ಲಿ ವಿಶ್ವ ಕಪ್ ಆಡುತ್ತಿದ್ದಾಗ ಟೆಂಡೂಲ್ಕರ್ ಅವರ ತಂದೆ ರಮೇಶ್ ಟೆಂಡೂಲ್ಕರ್ ಕಾಲವಾದರು. ಅವರ ಅಂತ್ಯ ಸಂಸ್ಕಾರಕ್ಕೆ ಬಂದ ಸಚಿನ್ ನಾಲ್ಕು ದಿನದ ತರುವಾಯ ವಾಪಸ್ಸು ಹೋಗಿ ಕೆನ್ಯ ವಿರುದ್ಧ 140 ರನ್ ಹೊಡೆದು ಭಾರತಕ್ಕೆ ವಿಜಯವನ್ನು ಗಳಿಸಿಕೊಟ್ಟರು. ದುಃಖದಲ್ಲಿದ್ದ ಟೆಂಡೂಲ್ಕರ್ ವಾಪಸ್ಸು ಬಂದು ತಂಡಕ್ಕೆ ಅವರ ಈ ಸೇವೆ, ಕೊಡುಗೆ ಬಹಳ ಅಪಾರವಾದದ್ದು.

ಇಷ್ಟು ಅಪಾರ ಯಶಸ್ಸು ಗಳಿಸಿ, ಹಿಮಾಲಯ ಪರ್ವತದಷ್ಟು ಕೀರ್ತಿ ಬಂದರೂ ಸಚಿನ್ ಬಹಳ ಸರಳ ವ್ಯಕ್ತಿ ಮತ್ತು ಮೃದು ಸ್ವಭಾವದವರು. ಅವರು ಆಡುವಾಗ ಎಂದೂ ಬೇರೆ ಆಟದವರ ವಿರುದ್ಧ, ಅಂಪೈರ್ ವಿರುದ್ಧ ಕೋಪಿಸಿಕೊಂಡವರಲ್ಲ. ಅವರ ಜೊತೆಯಲ್ಲಿ ಆಡಿದವರಿಗೆ ಆಟದ ತಾಂತ್ರಿಕ ವಿಷಯದಲ್ಲಿ ಸಹಾಯಮಾಡಿ, ಒಡನಾಡಿಗಳೊಂದಿಗೆ ಸ್ನೇಹಪೂರ್ವ ಮನೋಭಾವ ಹೊಂದಿದ್ದರು. ಮುಂಬಯಿಯಲ್ಲಿ ಅವರ ಪತ್ನಿ ಮತ್ತು ಮಕ್ಕಳ ಜೊತೆ ಇದ್ದಾರೆ.

ಅವರ ಮಗ ಅರ್ಜುನ್ ಟೆಂಡೂಲ್ಕರ್ ಹೋದ ವಾರ ಅವನ ತಂದೆಯ ತರಹಾನೇ ಅವನ ಮೊದಲ ರಣಜಿ ಪಂದ್ಯದಲ್ಲಿಯೇ ಶತಕ ಗಳಿಸಿದ್ದಾನೆ!