ನಮ್ಮಲ್ಲೂ ಕೆಲಸ ಕೇಳಿ ಬಂದ ನೂರಾರು ಜನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ ರಾಜಕಾರಣಿ ಇದ್ದಾನೆ, ಹೈಸ್ಕೂಲು ಓದುತ್ತಿದ್ದ ದಾನಮ್ಮ ಎಂಬ ಹೆಣ್ಣುಮಗುವನ್ನು ಅತ್ಯಾಚಾರವೆಸಗಿ ಕೊಂದ ಸಹಪಾಠಿಗಳಿದ್ದಾರೆ, ಸೌಜನ್ಯಾ ಎಂಬ ಹುಡುಗಿ ಕಾಲೇಜಿಗೆ ಹೋದವಳು ಮರಳಿ ಮನೆ ತಲುಪದಂತೆ ಅತ್ಯಾಚಾರವೆಸಗಿ ಕೊಂದುಹಾಕಿದ ದುರುಳರಿದ್ದಾರೆ, ಜಾತಿಯ ಕಾರಣಕ್ಕಾಗಿ ಕರುಳ ಕುಡಿಯನ್ನೆ ಹೊಸಕಿಹಾಕಿದ ಹೆತ್ತವರಿದ್ದಾರೆ, ಧರ್ಮದ ಹೆಸರಲ್ಲಿ ಒಂಬತ್ತು ವರ್ಷದ ಹೆಣ್ಣುಮಗುವಿನ ಮೇಲೆ ದೇವಸ್ಥಾನದಲ್ಲೆ ಮುಗಿಬಿದ್ದು ಅತ್ಯಾಚಾರವೆಸಗಿದ ಮಹಾಮಹಿಮರಿದ್ದಾರೆ, ಹೆಂಗಸರು ಮನೆಯ ಹೊರಗೆ ದುಡಿಯತೊಡಗಿದರೆ ಅತ್ಯಾಚಾರಗಳಾಗುವುದು ಸಹಜ ಎಂಬರ್ಥದಲ್ಲಿ ಮಹಾಜ್ಞಾನಿ ರಾಜಕಾರಣಿಯೊಬ್ಬ ಹೇಳಿಕೆ ನೀಡಿ ಮೀಸೆ ತಿರುವುತ್ತಾನೆ…
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣದ ಮೂರನೆಯ ಬರಹ
ತುಂಬಾ ವರ್ಷಗಳ ಹಿಂದೆ ಫೇಸ್‌ಬುಕ್ಕಲ್ಲಿ ಒಂದು ವಿಡಿಯೋ ನೋಡಿದ್ದೆ. ಆತಂಕವಾದಿಗಳ ಕ್ರೌರ್ಯದ ಅತ್ಯಂತ ನೀಚ ಮಟ್ಟದ ಕುರಿತು ಹೇಳಿದ ವಿಡಿಯೋ ಅದಾಗಿತ್ತು. ಅದರ ಸತ್ಯಾಸತ್ಯತೆಯ ಬಗ್ಗೆ ನಾನರಿಯೆ. ಆದರೆ ಅದರಲ್ಲಿನ ವಿಷಯ ಕೇಳಿ ತುಂಬಾ ದಿನಗಳ ಕಾಲ ಮನಸು ಕಲಕಿಹೋಗಿತ್ತು. ಬಹುಶಃ ಇದನ್ನು ಓದುವಾಗ ನನ್ನಂತೆಯೇ ಅದನ್ನು ನೋಡಿದ ಕೆಲವರಿಗಾದರೂ ನೆನಪಾಗದೆ ಇರದು.
ಒಂದು ಪುಟ್ಟ ಹುಡುಗನೊಬ್ಬನನ್ನು ಆತಂಕವಾದಿಗಳು ಒತ್ತೆಯಾಳಾಗಿಸಿಕೊಳ್ಳುತ್ತಾರೆ. ಆ ಮಗುವಿನ ತಾಯಿ ತನ್ನ ಮಗನನ್ನು ಮರಳಿಸಲು ಅವರಲ್ಲಿ ಪರಿಪರಿಯಾಗಿ ಕೇಳಿಕೊಳ್ಳುತ್ತಾಳೆ. ತುಂಬಾ ಗೋಗರೆದ ನಂತರ ಅವರು, “ಆಗಲಿ ನಿನ್ನ ಮಗ ನಿನ್ನನ್ನು ಸೇರುವಂತೆ ಮಾಡುತ್ತೇವೆ. ಆದರೆ ನಮ್ಮದೊಂದು ಶರತ್ತಿದೆ. ಶಾಕಾಹಾರಿಯಾದ ನೀನು ಮಾಂಸದೂಟವನ್ನು ಮಾಡಬೇಕು” ಎನ್ನುತ್ತಾರೆ. ಹೇಗಾದರೂ ಸರಿ ನನ್ನ ಮಗು ನನಗೆ ಸಿಕ್ಕುತ್ತದಲ್ಲ ಎನ್ನುವ ಆಸೆಗೆ ಆಕೆ ಒಪ್ಪಿ, ಅವರು ಕೊಟ್ಟ ಮಾಂಸದ ಅಡುಗೆಯನ್ನು ಬಲವಂತದಿಂದ ಉಣ್ಣುತ್ತಾಳೆ. ನಂತರ, “ನೀವು ಹೇಳಿದಂತೆ ಮಾಡಿರುವೆ. ದಯವಿಟ್ಟು ನನ್ನ ಮಗುವನ್ನ ನನಗೆ ಮರಳಿಸಿ” ಎಂದು ಬೇಡಿಕೊಳ್ಳುತ್ತಾಳೆ. ಅದಕ್ಕವರು, “ನಾವು ನಿನಗೆ ಈ ಮೊದಲೇ ಹೇಳಿದಂತೆ ನಿನ್ನ ಮಗ ನಿನ್ನಲ್ಲಿ ಸೇರಿದ್ದಾನೆ ನೀನಿನ್ನು ಹೊರಡು ಇಲ್ಲಿಂದ” ಎನ್ನುತ್ತಾರೆ. ಆಕೆಗದು ಅರ್ಥವಾಗುವುದಿಲ್ಲ, ಕಂಗಾಲಾಗಿ ಎಲ್ಲಿ ಎಲ್ಲಿ ಎನ್ನುತ್ತಾ ಸುತ್ತಮುತ್ತ ನೋಡುತ್ತಾಳೆ. ಆಕೆಗೆ ಅಂದು ಆ ಕ್ಷಣದಲ್ಲಿ ಅರ್ಥವಾಗದೇ ಇದ್ದಿದ್ದು ನಿಮಗೀಗಾಗಲೇ ಅರ್ಥವಾಗಿರಬೇಕು ಅಲ್ಲವೇ? ಹೌದು ಆಕೆ ಉಂಡ ಊಟದಲ್ಲಿ ಅವಳ ಮಗನಿರುತ್ತಾನೆ. ಆ ಮಗುವನ್ನು ಕೊಂದು ಅಡುಗೆ ಮಾಡಿ ಆಕೆಗೆ ಉಣ್ಣಿಸುವ ಕ್ರೌರ್ಯ ಮೆರೆದಿರುತ್ತಾರೆ.
ಈಗ ಆ ಘಟನೆ ನೆನಪಾಗಲು ಕಾರಣ ಎಪ್ಸ್ಟಿನ್ ಫೈಲ್ಸ್ ಜಗತ್ತಿನೆದೆಯಲ್ಲಿ ಹುಟ್ಟಿಸಿದ ನಡುಕ. ನಾವು ಯಾರನ್ನೆಲ್ಲ ಆದರ್ಶ ಎಂದೋ, ಜಗತ್ತಿನ ಅಪ್ರತಿಮ ಪ್ರತಿಭೆಗಳೆಂದೋ, ಗಣ್ಯಾತಿಗಣ್ಯರೆಂದೋ ಬಗೆದಿದ್ದೆವೋ ಅವರಲ್ಲಿ ಕೆಲವರ ರಕ್ಕಸ ಮುಖಗಳು ಲಕ್ಷಲಕ್ಷ ಪುಟಗಳಲ್ಲಿ ದಾಖಲೆಯಾಗಿರುವುದು ಎಂಥಾ ಭಯಂಕರ ವ್ಯಂಗ್ಯವದು! ಎಳೆಯ ಮಕ್ಕಳನ್ನು, ಹದಿಹರೆಯದವರನ್ನು ತಮ್ಮ ವಿಕೃತ ಕಾಮತೃಷೆಗೆ, ಹೂನಗೆಯಿಂದ ಎಂಥಾ ಒರಟು ಮನಸ್ಸನ್ನೂ ಮೃದುಗೊಳಿಸುವ ತೊಟ್ಟಿಲ ಹಸುಗೂಸುಗಳನ್ನು ಕತ್ತರಿಸಿ ಉಂಡು ಆನಂದಿಸಲು ಬಳಸಿಕೊಂಡ ಇವರೆಲ್ಲರ ಕ್ರೌರ್ಯವನ್ನು ಮೀರಿಸಬಲ್ಲಂಥದ್ದು ಬೇರೇನಾದರೂ ಜಗತ್ತಿನಲ್ಲಿರಲು ಸಾಧ್ಯವೇ?!
ನಮ್ಮಲ್ಲೂ ಕೆಲಸ ಕೇಳಿ ಬಂದ ನೂರಾರು ಜನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ ರಾಜಕಾರಣಿ ಇದ್ದಾನೆ, ಹೈಸ್ಕೂಲು ಓದುತ್ತಿದ್ದ ದಾನಮ್ಮ ಎಂಬ ಹೆಣ್ಣುಮಗುವನ್ನು ಅತ್ಯಾಚಾರವೆಸಗಿ ಕೊಂದ ಸಹಪಾಠಿಗಳಿದ್ದಾರೆ, ಸೌಜನ್ಯಾ ಎಂಬ ಹುಡುಗಿ ಕಾಲೇಜಿಗೆ ಹೋದವಳು ಮರಳಿ ಮನೆ ತಲುಪದಂತೆ ಅತ್ಯಾಚಾರವೆಸಗಿ ಕೊಂದುಹಾಕಿದ ದುರುಳರಿದ್ದಾರೆ, ಜಾತಿಯ ಕಾರಣಕ್ಕಾಗಿ ಕರುಳ ಕುಡಿಯನ್ನೆ ಹೊಸಕಿಹಾಕಿದ ಹೆತ್ತವರಿದ್ದಾರೆ, ಧರ್ಮದ ಹೆಸರಲ್ಲಿ ಒಂಬತ್ತು ವರ್ಷದ ಹೆಣ್ಣುಮಗುವಿನ ಮೇಲೆ ದೇವಸ್ಥಾನದಲ್ಲೆ ಮುಗಿಬಿದ್ದು ಅತ್ಯಾಚಾರವೆಸಗಿದ ಮಹಾಮಹಿಮರಿದ್ದಾರೆ, ಹೆಂಗಸರು ಮನೆಯ ಹೊರಗೆ ದುಡಿಯತೊಡಗಿದರೆ ಅತ್ಯಾಚಾರಗಳಾಗುವುದು ಸಹಜ ಎಂಬರ್ಥದಲ್ಲಿ ಮಹಾಜ್ಞಾನಿ ರಾಜಕಾರಣಿಯೊಬ್ಬ ಹೇಳಿಕೆ ನೀಡಿ ಮೀಸೆ ತಿರುವುತ್ತಾನೆ… ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮನುಷ್ಯತ್ವ ಮರೆತ ರಕ್ಕಸರ ಉದಾಹಣೆಗಳು ದಂಡಿ ದಂಡಿಯಾಗಿ ಸಿಗುತ್ತವೆ. ಇದನ್ನೆಲ್ಲ ನೆನೆದಾಗ ಅಂಥವರ ನಡುವೆ ನಾವಿದ್ದೆವೋ ಇಲ್ಲಾ ನಮ್ಮ ನಡುವೆ ಅವರಿದ್ದಾರೊ ಎಂದು ಅನುಮಾನ ಮೂಡುವಷ್ಟು ಭಯ ಆವರಿಸಿಕೊಳ್ಳುತ್ತದೆ.
ತುಂಬಾ ಹಿಂದೆ ನಮ್ಮಲ್ಲೊಬ್ಬ ಇದ್ದ ಬಕಾಸುರನೆಂಬ ರಾಕ್ಷಸ. ಅದೇ, ಮಹಾಭಾರತದಲ್ಲಿ. ಬಂಡಿ ಬಂಡಿ ಅನ್ನ, ಜೋಡು ಕೋಣ ಜೊತೆಗೆ ಒಬ್ಬ ನರ ಮನುಷ್ಯನನ್ನು ತಿನ್ನುತ್ತಿದ್ದವ. ಬಕಾಸುರ ಊರೊಳಗೆ ಬಂದರೆ ದಿನಕ್ಕೆಷ್ಟು ಜನ ಸಾಯಬೇಕೋ ಎಂದು ಹೆದರಿದ ಏಕಚಕ್ರ ಎಂಬ ಊರಿನ ಜನ, ಅವನಿದ್ದ ಬೆಟ್ಟಕ್ಕೇ ಬಂಡಿ ಅನ್ನ, ಅದಕ್ಕೆ ಬೇಕಾದ ವ್ಯಂಜನವನ್ನು ಎರಡು ಕೋಣಗಳನ್ನು ಹೂಡಿದ ಬಂಡಿಯಲ್ಲಿ ಒಬ್ಬನನ್ನು ಆಹಾರವಾಗಿ ಕಳಿಸುತ್ತಲೇಯಿದ್ದರಂತೆ, ಭೀಮ ಹೋಗಿ ಹೋರಾಡಿ ಬಕಾಸುರನನ್ನು ಕೊಲ್ಲುವ ತನಕ. ಇಲ್ಲಾಗಿದ್ದೂ ಹೆಚ್ಚುಕಮ್ಮಿ ಅದೇ. ವ್ಯತ್ಯಾಸವೆಂದರೆ ಇಲ್ಲಿ ಬಕಾಸುರನನ್ನು ಭೀಮ ಕೊಲ್ಲಲಿಲ್ಲ. ಈತ ಜೈಲಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಥವಾ ಜೈಲಲ್ಲಿದ್ದ ಅವನ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ. ನಾನು ನೋಡಿದ ವಿಡಿಯೊ ಒಂದರಲ್ಲಿ, ಆತನ ಎಡ ತೋಳಿನ ಸುತ್ತಲೂ ಬಳೆ ಏರಿಸಿದಂತೆ ಇದ್ದ ಹಚ್ಚೆ, ಆತನ ಶವ ಪರೀಕ್ಷೆಯ ಸಮಯದಲ್ಲಿ ತೆಗೆದ ಫೋಟೊದಲ್ಲಿನ ಅವನ ಎಡಗೈ ತೋಳಲ್ಲಿ ಕಾಣದೇ ಇರುವುದು ಈ ಅನುಮಾನಕ್ಕೆ ಕಾರಣ. ಆ ಅಸಲಿ ಬಕಾಸುರ ಇವನಂತೆ ವಿಕೃತ ಶಿಶುಕಾಮಿಯಾಗಿರಲಿಲ್ಲ, ತಲೆಹಿಡುಕನಾಗಿರಲಿಲ್ಲ ಎನ್ನುವುದು, ನಾನು ಇವನಿಗೆ ಬಕಾಸುರನ ಹೋಲಿಕೆ ಮಾಡಿದ್ದು ಎಷ್ಟು ಸರಿ ಎಂದೀಗ ಯೋಚಿಸುವಂತೆ ಮಾಡುತ್ತಿದೆ…

ಸಾಮಾಜಿಕ ಜಾಲತಾಣಗಳನ್ನು ಬಳಸುವ ಯಾರೇ ಆಗಲಿ ಹುಡುಕಿದರೆ epstein filesಗೆ ಸಂಬಂಧಪಟ್ಟಂತೆ ಸಾವಿರಾರು ಬರಹಗಳು ಸಿಗುತ್ತವೆ, ನೂರಾರು ವಿಡಿಯೊಗಳು ಸಿಗುತ್ತವೆ. ಅವುಗಳಲ್ಲಿ ಎಳೆಯ ಮಕ್ಕಳು ತಮ್ಮ ಮೇಲಾದ ಅತ್ಯಾಚಾರಗಳ ಬಗ್ಗೆ, ಅದರಿಂದ ಅವರ ದೇಹದ ಮೇಲಾದ ಗಾಯಗಳ ಬಗ್ಗೆ, ನೋವಿನ ಬಗ್ಗೆ, ಅಲ್ಲವರು ಅನುಭವಿಸುತ್ತಿದ್ದ ಹಿಂಸೆಯ ಬಗ್ಗೆ, ತಮ್ಮ ಕೈಯಿಂದಲೇ ಶಿಶುಗಳನ್ನು ಕೊಲ್ಲಿಸುತ್ತಿದ್ದ ಬಗೆಯನ್ನು ಹೇಳುತ್ತಿದ್ದರೆ ನಾಲಿಗೆ ಪಸೆ ಆರಿಹೋದಂತಾಗಿ ನಮ್ಮ ಮನೆಯ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಶುರುವಾಗುತ್ತದೆ. ಇವನ ಜಾಲಕ್ಕೆ ಸಿಕ್ಕು ಸತತ ಅತ್ಯಾಚಾರಕ್ಕೆ ಒಳಗಾಗುತ್ತ, ಬಸಿರಾಗಿ, ಬಲವಂತವಾಗಿ ಗರ್ಭಪಾತ ಮಾಡಿಸಿಕೊಂಡು ನರಳಿದ ಹರೆಯದ ಹೆಣ್ಣುಮಕ್ಕಳು ಅದೆಷ್ಟೋ…
ಜಾಫ್ರಿ ಎಪ್ಸ್ಟಿನ್ ಎಂಬ ಅಮೇರಿಕದ ಈ ಪ್ರಜೆ ಬಡತನದಲ್ಲಿ ಬೆಳೆದವ. ಅಪೂರ್ಣ ವಿದ್ಯಾಭ್ಯಾಸವಿದ್ದೂ ಸ್ಕೂಲೊಂದರಲ್ಲಿ ಮೇಷ್ಟ್ರಾದವ. ಅಲ್ಲಿಂದ ಅಮೇರಿಕದ ಇನ್ವೆಸ್ಟ್’ಮೆಂಟ್ ಬ್ಯಾಂಕೊಂದರದಲ್ಲಿ ಕೆಳಮಟ್ಟದ ಉದ್ಯೋಗಿಯಾಗಿ ಕೆಲಸ ಮಾಡುತ್ತ ಮುಂದೆ ನಾಲ್ಕೈದು ವರ್ಷಗಳಲ್ಲೇ ಕಂಪನಿಯೊಂದರ ಸಿಇಓ ಆದವ. ಸಾವಿರಾರು ಹರೆಯದ ಹೆಂಗಳೆಯರನ್ನು ಲೈಂಗಿಕವಾಗಿ ಬಳಸಿಕೊಂಡವ. ಆರ್ಥಿಕವಾಗಿ ಸಬಲನಾಗುತ್ತಿದ್ದಂತೆಯೇ ಅದರ ಮೂಲಕವೇ ಬಹಳಷ್ಟು ಜನ ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಗಳ ಜೊತೆ ಸಂಪರ್ಕದ ಬೆಳೆಸಿಕೊಂಡವ. ಅವರಿಗಾಗಿ ಪಾರ್ಟಿಗಳನ್ನು ಏರ್ಪಡಿಸುತ್ತ ದೊಡ್ಡ ದೊಡ್ಡ ಜನರಿಗೆ ಹರೆಯದ ಹೆಂಗಳೆಯರನ್ನು, ಎಳೆಯ ಮಕ್ಕಳನ್ನು ಒದಗಿಸುತ್ತಾ ತಲೆಹಿಡುಕನಾದವ. ತಿನ್ನಲು ಹಸುಗೂಸುಗಳನ್ನು ಎಳೆಯ ಮಕ್ಕಳ ಕೈಯಿಂದಲೇ ಕೊಲ್ಲಿಸಿ ಆ ಕಂದಮ್ಮಗಳ ಮಾಂಸದಡುಗೆಯನ್ನು ನರಭಕ್ಷಕರಿಗೆ ಉಣಬಡಿಸಿದ ನೀಚ ಈ ಜಾಫ್ರಿ ಎಪ್ಸ್ಟಿನ್. ೧೯೯೬ರಲ್ಲಿ ಮಾರಿಯಾ ಫಾರ್ಮರ್ ಎನ್ನುವ ಕಲಾವಿದೆ ಒಬ್ಬಳು ತನ್ನ ಹದಿವಯಸ್ಸಿನ ತಂಗಿಯ ನಗ್ನ ಫೋಟೊಗಳನ್ನು ಎಪ್ಸ್ಟಿನ್ ಕದ್ದಿರುವನೆಂದು ಪೋಲಿಸ್ ಕಂಪ್ಲೇಂಟ್ ಕೊಡುತ್ತಾಳಾದರೂ, ಪೋಲಿಸರು ಅವನನ್ನು ಬಂಧಿಸುವುದಿಲ್ಲ. ಆದರೆ ಇವನ ಈ ಕರಾಳ ಮುಖ ಬಯಲಾಗುವುದು ೨೦೦೫ರಲ್ಲಿ. ಒಬ್ಬ ಹುಡುಗಿ ಎಪ್ಸ್ಟಿನ್ ನ ಮನೆಯಿಂದ ಹೊರಬಂದು, ಫುಟ್ಪಾತ್ ಮೇಲೆ ನಿಂತು ಭಯದಿಂದ ತತ್ತರಿಸುತ್ತಾ, “ಇಲ್ಲಿ ಪುಟ್ಟಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗ್ತಿದೆ, ಅವರೆಲ್ಲ ಮಕ್ಕಳನ್ನು ತಿಂತಾರೆ” ಬೋರಾಡುತ್ತಾಳೆ. ಆ ವಿಡಿಯೋ ಈಗಲೂ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ. ಆದರೆ ಅಂದು ಆ ಹುಡುಗಿ ಕಾಣೆಯಾದವಳು ಈಗಲೂ ಯಾರ ಕಣ್ಣಿಗೂ ಬಿದ್ದಿಲ್ಲವಂತೆ. ಅದೇ ವರ್ಷ ಒಬ್ಬಾಕೆ, ತನ್ನ ೧೪ ವರ್ಷದ ಮಲಮಗಳನ್ನು ಹಣದಾಮಿಷ ತೋರಿಸಿ ಎಪ್ಸ್ಟಿನ್ ನಿವಾಸಕ್ಕೆ ಕರೆದುಕೊಂಡುಹೋಗಿ, ಅವಳನ್ನಲ್ಲಿ ಬೆತ್ತಲಾಗಿಸಿದ್ದಲ್ಲದೇ ಅವಳಿಂದ ಮಸಾಜ್ ಮಾಡಿಸಿಕೊಳ್ಳಲಾಗಿದೆ ಎಂದು ಕಂಪ್ಲೇಂಟ್ ನೀಡುತ್ತಾಳೆ. ಆಕೆ ಪೋಲಿಸರಿಗೆ ಕೊಟ್ಟ ಕಂಪ್ಲೇಂಟ್ ನಿಂದಾಗಿ ಪೋಲಿಸ್ ಕಾರ್ಯಾಚರಣೆ ಆರಂಭವಾಗುತ್ತದೆ. ೨೦೦೮ರಲ್ಲಿ ಎಪ್ಸ್ಟಿನ್ ಮಕ್ಕಳನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡ ಅಪರಾಧ ಸಾಬೀತಾಗಿ, ಆತನಿಗೆ ಒಂದೂವರೆ ವರ್ಷ ಜೈಲುವಾಸ ಎನ್ನುವ ತೀರ್ಪು ಹೊರಬೀಳುತ್ತದೆ. ಆದರೆ ಮೂರೂವರೆ ತಿಂಗಳಲ್ಲೇ ಅವನಿಗೆ ವರ್ಕ್ ರಿಲೀಸ್ (ದಿನದ ಹನ್ನೆರಡು ಗಂಟೆ ಕೆಲಸದ ನಿಮಿತ್ತ ಜೈಲಿಂದಾಚೆ ಇದ್ದು, ರಾತ್ರಿಯಷ್ಟರಲ್ಲಿ ಜೈಲಿಗೆ ಮರಳುವ ವ್ಯವಸ್ಥೆ) ನೀಡಲಾಗುತ್ತದೆ ಮತ್ತು ೧೩ ತಿಂಗಳಲ್ಲೇ ಅವನನ್ನು ಬಿಡುಗಡೆ ಕೂಡ ಮಾಡಲಾಗುತ್ತದೆ! ಮತ್ತೆ ಅವನನ್ನು ೨೦೧೯ರ ಜುಲೈ ತಿಂಗಳಲ್ಲಿ ವೈಶ್ಯಾವಾಟಿಕೆ ನಡೆಸುತ್ತಿದ್ದ ಅಪರಾಧಕ್ಕಾಗಿ ಬಂಧಿಸಲಾಗುತ್ತದೆ. ಮುಂದೆ ಒಂದು ತಿಂಗಳಲ್ಲೇ ಅಂದರೆ ೧೦ ಆಗಸ್ಟ್ ೨೦೧೯ರಂದು ಈತ ಜೈಲಲ್ಲಿ ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗುತ್ತದೆ.
ಈಗ ೩೦ ಜನವರಿ ೨೦೨೬ರಂದು ಯುಕೆಯ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ಮೂವತ್ತು ಲಕ್ಷ ಪುಟಗಳ ದಾಖಲೆ ಹೊಂದಿರುವ ಎಪ್ಸ್ಟಿನ್ ಫೈಲನ್ನು ಸಾರ್ವತ್ರಿಕಗೊಳಿಸಿದೆ. ಅದರಲ್ಲಿ ಅವನ ಎಲ್ಲ ವಯಕ್ತಿಕ ವಿವರಗಳಿವೆ, ವಿಚಾರಣೆಯ ವೇಳೆಯ ಸಂದರ್ಶನಗಳಿವೆ, ಟಿವಿಗಳಿಗೆ ಆತ ನೀಡಿದ ಸಂದರ್ಶನ, ಅವನ ಯಾರೆಲ್ಲರೊಂದಿಗಿನ ಸಂಪರ್ಕ, ವಹಿವಾಟಿನ ಇ ಮೇಲ್ಸ್, ಫೋಟೋಸ್, ಮತ್ತು ಅವನಿಂದ ಲಾಭಪಡೆದವರ, ಅವನಿಂದ ನೋವುಂಡವರ ಹೀಗೆ ಅವನ ಅನೇಕ ಕುಕೃತ್ಯಗಳನ್ನು ಬಹಿರಂಗಗೊಳಿಸುವ ವಿಡಿಯೋಸ್ ಇವೆ. ಆದರೆ ಈಗ ಅವನಿಲ್ಲ. ಆದರೆ ಮಕ್ಕಳನ್ನುಂಡ ಅನೇಕರು ಇನ್ನೂ ಬದುಕಿದ್ದಾರೆ!
ಈ ಎಪ್ಸ್ಟಿನ್ ಫೈಲಲ್ಲಿ ಡೊನಾಲ್ಡ್ ಟ್ರಂಪ್, ಬಿಲ್ ಕ್ಲಿಂಟನ್, ಮೈಕಲ್ ಜಾಕ್ಸನ್, ಬಿಲ್ ಗೇಟ್ಸ್ ರಂಥ ಜಗತ್ತಿನ ನಾನಾ ದೇಶದ ಅತಿರಥ ಮಹಾರಥರ ಹೆಸರುಗಳು ಸಾಕಷ್ಟು ಸಲ ಪ್ರಸ್ತಾಪವಾಗಿದೆ. ನಮ್ಮ ಭಾರತದ ಪ್ರಧಾನಿ ನರೇಂದ್ರ ಮೋದಿ, ಅನಿಲ್ ಅಂಬಾನಿ, ಮೀರಾ ನಾಯರ್, ಅನುರಾಗ್ ಕಶ್ಯಪ್ ಅವರ ಹೆಸರುಗಳೂ ಈ ಫೈಲಲ್ಲಿವೆ.

ಆದರೆ…
ಯಾರದೇ ಹೆಸರು ಅಲ್ಲಿ ಪ್ರಸ್ತಾಪಗೊಂಡಿದ್ದರೂ ಅವರೆಲ್ಲರೂ ಈ ಹೀನ ಕೃತ್ಯದಲ್ಲಿ ಅವನೊಂದಿಗೆ ಭಾಗಿಯಾಗಿದ್ದರು ಅಥವಾ ಅವನ ಹೀನ ಕೃತ್ಯದ ಫಲಾನುಭವಿಗಳಾಗಿದ್ದರು ಎಂದು ಸಾರಾಸಗಟವಾಗಿ ನಾವು ನಿರ್ಣಯಕ್ಕೆ ಬರುವಂತಿಲ್ಲ. ಅವರಲ್ಲನೇಕರು ಯಾವುದೋ ಮೀಟಿಂಗಲ್ಲಿ ಜಸ್ಟ್ ಭೇಟಿಯಾಗಿದ್ದಿರಬಹುದು, ಇನ್ನ್ಯಾವುದೋ ವ್ಯವಹಾರ ನಿಮಿತ್ತ ಭೆಟ್ಟಿಯಾಗಿರಲೂಬಹುದು. ಆದರೆ ಯಾರೆಲ್ಲ ಇವನ ಮೂಲಕ ಎಳೆಯ ಮಕ್ಕಳನ್ನು, ಹೆಣ್ಣುಮಕ್ಕಳನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡಿದ್ದಾರೋ, ಯಾರೆಲ್ಲ ಹಸುಗೂಸುಗಳ ಮಾಂಸವನ್ನು ಚಪ್ಪರಿಸಿ ತಿಂದಿದ್ದಾರೋ ಅವರೆಲ್ಲರಿಗೂ ತಕ್ಕ ಕಠಿಣ ಶಿಕ್ಷೆಯಾಗಲೇಬೇಕು. ಹಸಿದು ತುಂಡು ರೊಟ್ಟಿ ಕದ್ದವನನ್ನೇ ಕಂಬಕ್ಕೆ ಕಟ್ಟಿ ಹೊಡೆವ ಜನರು ಜಗತ್ತಿನಾದ್ಯಂತ ಇದ್ದಾರೆ. ದೊಡ್ಡವರೆನಿಸಿಕೊಂಡವರು ಯಾರದೋ ಮನೆಯ ಅಮಾಯಕ ಮಕ್ಕಳನ್ನೇ ಬೇಯಿಸಿ ತಿಂದಿದ್ದು ಸಾಬೀತಾದರೂ ಸುಮ್ಮನೆ ಇದ್ದಲ್ಲಿ, ಏಕಚಕ್ರ ನಗರದ ಜನರಂತೆ ನಾವಾಗಿಯೇ ಇಂಥವರಿಗೆ ಬೇಕಾದ ಆಹಾರವನ್ನು ಒದಗಿಸುವುದನ್ನು ಮುಂದುವರೆಸಿದಂತಾಗುತ್ತದೆ. ಎಲ್ಲರೊಳಗಿನ ಭೀಮ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ನಾವೆಲ್ಲ ಕಾಗದದ ಹುಲಿಗಳಂತೆ ಹಾರ್ಯಾರಿ ದೊಡ್ದ ದೊಡ್ದ ಮಾತುಗಳನ್ನಾಡುವುದನ್ನು ನಿಲ್ಲಿಸುವುದು ಉತ್ತಮ.

ಲೇಖಕಿ, ರಂಗ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರು. ನೀಲ ಕಡಲ ಭಾನು’ (ಕವನ ಸಂಕಲನ) ‘ಹೇಳತೇವ ಕೇಳ’ (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ‘ಮುಕ್ಕು ಚಿಕ್ಕಿಯ (ಕಾದಂಬರಿ) ವಿಜಯ್ ತೆಂಡೂಲ್ಕರ್ ಅವರು ಬರೆದ ಮರಾಠಿ ಮೂಲದ ನಾಟಕ ‘ಬೇಬಿ’ (ಅನುವಾದಿತ ನಾಟಕ) ಇವರ ಪ್ರಕಟಿತ ಕೃತಿಗಳು. ‘ಜನದನಿ’ (ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿರುವ ಸಂಸ್ಥೆ) ಸಂಸ್ಥಾಪಕಿ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಸಾಮಾಜಿಕ ಪಿಡುಗನ್ನು ತೊಲಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

