“ನಮ್ಮ ಮನೆಯಲ್ಲಿ ನಾನೇ ಚಿಕ್ಕವನು ಮತ್ತು ಓದಿದ್ದು ನಾನೊಬ್ಬನೇ, ನನ್ನೆಲ್ಲಾ ಒಡಹುಟ್ಟಿದವರು ತೀರಿಹೋಗಿದ್ದಾರೆ. ಹರೆಯದರಲ್ಲೇ ಇಲ್ಲಿಗೆ ಬಂದದ್ದರಿಂದ ಯಾರೊಟ್ಟಿಗೂ ಅಂತಹಾ ಗೆಳೆತನವೂ ಉಳಿದಿಲ್ಲ. ನಮಗೆ ಮಕ್ಕಳಿಲ್ಲವಾದುದರಿಂದ ನನ್ನ ಹೆಂಡತಿಗೂ ಇಲ್ಲಿನ ಜೀವನ, ಅನಾಮಿಕತೆ, ಬೇಡದ ವಿಷಯಗಳಲ್ಲಿ ತಲೆಹಾಕುವ ಜನಗಳ ಕಿರಿ ಕಿರಿ ಯಾವುದೂ ಇಲ್ಲ ಮತ್ತು ಬೇಡವಾಗಿದೆ. ಅವಳಿಗೂ ಅಲ್ಲಿ ಹೇಳಿಕೊಳ್ಳುವ ಬಂಧು- ಬಂಧ ಎರಡೂ ಇಲ್ಲ. ಇಲ್ಲೂ ಇಲ್ಲ ಅನ್ನಿ, ಆದರೆ ನಾವಿಲ್ಲಿಗೆ ಒಗ್ಗಿ ಹೋಗಿದ್ದೇವೆ! ನಾನು ಬದುಕಿರುವವರೆಗೂ ನನ್ನ ವೀಸಾದಲ್ಲಿ ಅವಳಿಲ್ಲಿ ಇರಬಹುದು. ಆಮೇಲಿನದ್ದು ‘ಅಲ್ಲಾಹುವಿನ’ ಇಚ್ಛೆ. ಸತ್ತರೇ ಅವನದ್ದೇ ಮಣ್ಣಿನಲ್ಲಿ ಹೂಳುತಾರೆ. ಮತ್ತೇನು ಬೇಕು?”
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿಯ ಏಳನೆಯ ಕಂತು
ಮೊನ್ನೆ ಮೊನ್ನೆ ನಮ್ಮ ಕಂಪನಿಯವರೊಬ್ಬರ ಹತ್ತಿರ ಮಾತನಾಡುತ್ತಿದ್ದೆ. ಅವರು ಪಾಕಿಸ್ತಾನದ ‘ಖಾದ್ರಿಗಳು’. ತುಂಬಾ ತೂಕದ ಮನುಷ್ಯ. ಇನ್ನೇನು ಒಂದೆರಡು ತಿಂಗಳುಗಳಲ್ಲಿ ನಿವೃತ್ತಿ ಹೊಂದಲಿದ್ದರು. ನಾನು ಲೋಕಾರೂಢಿಯಾಗಿ “ನಿವೃತ್ತಿಯ ನಂತರ ಮರಳಿ ಪಾಕಿಸ್ತಾನಕ್ಕೆ ಹೋಗುವುದಾ?” ಎಂದು ಕೇಳಿದೆ. ಅದಕ್ಕವರು “ಇಲ್ಲ ಇಲ್ಲ!” ಅಂದರು. “ಮತ್ತೆ ಎಲ್ಲಿಗೆ?” ಎಂದು ಕೇಳಿದಾಗ ‘ಇಲ್ಲಿಯೇ’ ಎಂದರು. ನನಗೆ ಆಶ್ಚರ್ಯವಾಯಿತು!
ಸೌದಿ ಅಥವಾ ಇತರೇ ಅರಬ್ ರಾಷ್ಟ್ರಗಳಲ್ಲಿ ನೀವು ದಶಕಗಳೇ ಇದ್ದರೂ ಪೌರತ್ವ ಕೊಡುವುದಿಲ್ಲ. ಅಷ್ಟೇ ಏಕೆ ಸೌದಿಯವರು ಒಂದು ವೇಳೆ ದುಬೈನವರನ್ನೋ, ಒಮಾನ್, ಕತಾರ್ ನವರನ್ನೋ ಅಲ್ಲಿಯವರು ಇಲ್ಲಿಯವರನ್ನೊ ಮದುವೆಯಾದರೆ ಪೌರತ್ವಕ್ಕೆ ಹಲವು ಕಟ್ಟಳೆಗಳು, ಕಾನೂನುಗಳಿವೆ. ನಾನು ಸುಮ್ಮನಿರದೆ “ಇಲ್ಲಿರುವುದು ಹೇಗೆ?” ಎಂದು ಕೇಳಿದೆ. ಅದರ ಉದ್ದೇಶ ಇಲ್ಲಿ ಮತ್ತ್ಯಾವುದೋ ಕೆಲಸ ಸಿಕ್ಕಿರಬೇಕು ಎಂಬುದು. ಅಥವಾ ಸ್ವಂತ ಏನಾದರೂ ಮಾಡುವ ಆಲೋಚನೆ ಇದೆಯಾ ಎಂಬುದು. ಇದಕ್ಕೆ ಲೋಕಲ್ ಸೌದಿ ಒಬ್ಬನ ಸಹಭಾಗಿತ್ವ ಅವಶ್ಯಕ. ಆತನನ್ನು ‘ಖಫಿಲ್’ ಅನ್ನುತ್ತಾರೆ. ಆತ ಅವರ ವೀಸಾ ಸ್ಪಾನ್ಸರ್ ಕೂಡಾ ಆಗಿರುತ್ತಾನೆ.
ಖಾದ್ರಿಗಳು ಇನ್ನೂ ಯಾರೂ ‘ಖಫಿಲ್’ ಸಿಕ್ಕಿಲ್ಲವೆಂದೂ ಅದರ ತಲಾಶಿನಲ್ಲಿಯೇ ಇರುವೆನೆಂದು ಹೇಳಿದರು. ನನಗೆ ಗೊತ್ತಿದ್ದ ಪ್ರಕಾರ ಖಾದ್ರಿಗಳಿಗೆ ಹೃದಯ ಸಂಬಂಧಿ ಸಮಸ್ಯೆಗಳಿದ್ದವು. ಅವರಿಗೆ ‘ಸ್ಟಂಟ್’ ಕೂಡಾ ಅಳವಡಿಸಿದ್ದರು. ನಮ್ಮ ಡಿಪಾರ್ಟ್ಮೆಂಟ್‌ನ ಯುಕ್ರೇನ್ ಪ್ರಜೆಯೊಬ್ಬರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು ಮತ್ತು ವಯಸ್ಸಿನ ಕಾರಣ ಇವರಿಗೂ ಅವರಿಗೂ ಒಳ್ಳೆಯ ಸ್ನೇಹ ಏರ್ಪಾಟಾಗಿತ್ತು. ನಾವವರನ್ನು “ನೋವಿನ ಬಂಧುಗಳು” ಎಂದು ಕರೆಯುತ್ತಿದ್ದೆವು. ಅವರೂ ಅದನ್ನು ಅನುಮೋದಿಸುತ್ತಿದ್ದರು. ನಮ್ಮ ಮಾತು ಕಥೆಯಲ್ಲಿ ರಷ್ಯಾ- ಯುಕ್ರೇನ್, ಭಾರತ- ಪಾಕಿಸ್ತಾನದ ಹಲವಾರು ವಿಷಯಗಳು ಚರ್ಚೆಯಾಗುತ್ತಿತ್ತು.
ನನ್ನ ಸಹೋದ್ಯೋಗಿಯೊಬ್ಬರು ಹೈದರಾಬಾದಿನವರು, ಖಾದ್ರಿಗಳನ್ನು ಕುರಿತು “ನಿಮ್ಮ ದೇಶದಲ್ಲಿಯೇ ಸುಖವಾಗಿರಬಾರದೇ? ಇಳಿವಯಸ್ಸಿನಲ್ಲಿ ಅದೂ!” ಎಂದು ಕೇಳಿಬಿಟ್ಟರು. ಆ ಪ್ರಶ್ನೆಗೆ ತುಂಬಾ ಸಮಾಧಾನದಿಂದ ಉತ್ತರಿಸಿದ ಖಾದ್ರಿಗಳು “ನೋಡಿ ನಾನಿಲ್ಲಿಗೆ ಬಂದು 45 ವರ್ಷಗಳಾಗಿವೆ. ನಮ್ಮ ಮನೆಯಲ್ಲಿ ನಾನೇ ಚಿಕ್ಕವನು ಮತ್ತು ಓದಿದ್ದು ನಾನೊಬ್ಬನೇ, ನನ್ನೆಲ್ಲಾ ಒಡಹುಟ್ಟಿದವರು ತೀರಿಹೋಗಿದ್ದಾರೆ. ಹರೆಯದರಲ್ಲೇ ಇಲ್ಲಿಗೆ ಬಂದದ್ದರಿಂದ ಯಾರೊಟ್ಟಿಗೂ ಅಂತಹಾ ಗೆಳೆತನವೂ ಉಳಿದಿಲ್ಲ. ನಮಗೆ ಮಕ್ಕಳಿಲ್ಲವಾದುದರಿಂದ ನನ್ನ ಹೆಂಡತಿಗೂ ಇಲ್ಲಿನ ಜೀವನ, ಅನಾಮಿಕತೆ, ಬೇಡದ ವಿಷಯಗಳಲ್ಲಿ ತಲೆಹಾಕುವ ಜನಗಳ ಕಿರಿ ಕಿರಿ ಯಾವುದೂ ಇಲ್ಲ ಮತ್ತು ಬೇಡವಾಗಿದೆ. ಅವಳಿಗೂ ಅಲ್ಲಿ ಹೇಳಿಕೊಳ್ಳುವ ಬಂಧು- ಬಂಧ ಎರಡೂ ಇಲ್ಲ. ಇಲ್ಲೂ ಇಲ್ಲ ಅನ್ನಿ, ಆದರೆ ನಾವಿಲ್ಲಿಗೆ ಒಗ್ಗಿ ಹೋಗಿದ್ದೇವೆ! ನಾನು ಬದುಕಿರುವವರೆಗೂ ನನ್ನ ವೀಸಾದಲ್ಲಿ ಅವಳಿಲ್ಲಿ ಇರಬಹುದು. ಆಮೇಲಿನದ್ದು ‘ಅಲ್ಲಾಹುವಿನ’ ಇಚ್ಛೆ. ಸತ್ತರೇ ಅವನದ್ದೇ ಮಣ್ಣಿನಲ್ಲಿ ಹೂಳುತಾರೆ. ಮತ್ತೇನು ಬೇಕು?” ಎಂದರು.
ಖಾದ್ರಿಗಳಿಗೆ ಮಕ್ಕಳಿಲ್ಲದ್ದು, ಸೌದಿಯಲ್ಲಿಯೇ 45 ವರ್ಷಗಳು ಬದುಕು ಕಟ್ಟಿಕೊಂಡದ್ದು, ಪಾಕಿಸ್ತಾನ ಅವರಿಗೆ ಗೋಜಲಾಗಿ ಕಂಡಿದ್ದು, ತಮ್ಮ ಓರಗೆಯವರ ಜೊತೆಗಿರದ ಬಂಧ- ಗೆಳೆತನ, ಸೌದಿ ಕೊಟ್ಟ ಅನಾಮಿಕತೆ, ನೆಮ್ಮದಿ (?), ಧಾರ್ಮಿಕತೆ ಅವರ ಮತ್ತು ಅವರ ಮಡದಿಗೆ, ಇಲ್ಲಿಯೇ ಉಳಿದು ಅಳಿಯುವಂತೆ ಪ್ರೇರೇಪಿಸಿದೆ ಅನ್ನಿಸುತ್ತದೆ.
ಕಡೆಯ ಮಾತು:
ಮೊನ್ನೆ ಭಾರತದಿಂದ ಮರಳಿದ ಬಳಿಕ, ಹಲವು ವಾರಗಳ ಕಾಲ ಭಯಂಕರ ಬಿಸಿಲಿನಲ್ಲಿ ನಿಂತಲ್ಲೇ ನಿಂತಿದ್ದ ನನ್ನ ಕಾರಿನ ಬ್ಯಾಟರಿ ಸತ್ತಿತ್ತು. ಗೆಳೆಯನ ಕಾರಿನ ಸಹಾಯದಿಂದ ಅದನ್ನು “ಜಂಪ್ ಸ್ಟಾರ್ಟ್” ಮಾಡಿ ವರ್ಕ್ ಶಾಪ್‌ಗೆ ಕೊಂಡೊಯ್ಯುವಾಗ, ಅದೇ ರಸ್ತೆಯಲ್ಲಿ ಧಡೂತಿ ದೇಹದ, 65 ರ ವಯಸ್ಸಿನ, ಸಾಲ್ಟ್ ಪೆಪ್ಪರ್ ಕೂದಲಿನ, ಬಿಳಿ ಗಡ್ಡದ, ಷರ್ಟ್ ಪಾಂಟ್ ತೊಟ್ಟು ಎಂದಿನಂತೆ ಔಟ್‌ಷರ್ಟ್ ಮಾಡಿದ್ದ ಖಾದ್ರಿಯವರನ್ನು ಗೇಟು, ರೈಲಿಂಗ್ಸ್ ಮಾಡುವ ಮೆಕಾನಿಕಲ್ ವರ್ಕ್ ಶಾಪ್ ಒಂದರ ಹೊರಗಡೆ ಪುಟ್ಟ ಕಬ್ಬಿಣದ ಸ್ಟೂಲ್‌ನ ಮೇಲೆ ಕಂಡೆ. ಅವರು ಆಚೀಚಿನ ವಾಹನಗಳನ್ನು ತಮ್ಮ ಕನ್ನಡಕದೊಳಗಿನ ಮಂದವಾಗುತ್ತಿರುವ ಕಣ್ಣುಗಳಿಂದ ನೋಡತೊಡಗಿದ್ದರು. ಅವರಿಗೆ ಈ ಊರು, ಬಿಸಿಲು, ಮರಳು, ಧೂಳು, ಜನ, ರಸ್ತೆ, ಮಸೀದಿ ಎಲ್ಲವೂ ಪರಿಚಿತ, ಮತ್ತದೇ ಅವರಿಗೆ ಬೇಕಾದ ಅನಾಮಿಕತೆಯನ್ನು ಒದಗಿಸಿದ್ದವು ಅನ್ನಿಸಿತು.

ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ (ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ನಾನೊಬ್ಬ ನಾವಿಕ “ (ಕವನ ಸಂಕಲನಗಳು), “ಅಪ್ಪನ ರಾಲೀಸ್ ಸೈಕಲ್” (ಪ್ರಬಂಧಗಳು). ಇವರ ಬರಹಗಳು ಹಲವು ವೆಬ್ ಹಾಗೂ ಕನ್ನಡ ದೈನಿಕಗಳಲ್ಲಿ ಪ್ರಕಟವಾಗಿವೆ. ದೇಶ ಸುತ್ತುವುದು, ಚರಿತ್ರೆ ಮತ್ತು ಅರ್ಥಶಾಸ್ತ್ರ ಸಂಬಂಧಿ ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.