ಮಣಿ, “ಸ್ವಾಮಿ ಇಲ್ಲೇ ಹುಟ್ಟಿದ್ದು. ಇಲ್ಲೇ ಸಾಯುವುದು. ಆ ಕಾಲದಲ್ಲಿ ನಾವು ಮೈನಿಂಗ್ ಕಾಲೋನಿಗಳನ್ನು ಬಿಟ್ಟು ಹೊರಕ್ಕೆ ಹೋಗ್ತಾ ಇರಲಿಲ್ಲ. ಈಗ ಆಗಲ್ಲವಲ್ಲ. ಕಾಲೋನಿಗಳಲ್ಲಿ ಇರುವವರೆಲ್ಲ ಕನ್ನಡ ಮಾತಾಡ್ತಾರೆ. ಕನ್ನಡ ಕಲಿತುಕೊಂಡಿದ್ದಾರೆ. ಸಾವಿರಾರು ಜನ ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ. ಅದೇ ರೀತಿ ಸಾವಿರಾರು ಹೆಣ್ಣುಮಕ್ಕಳು ಗಂಡುಮಕ್ಕಳು ಕೆಜಿಎಫ್‌ನಿಂದ ಬೆಂಗಳೂರಿಗೆ ದಿನನಿತ್ಯ ರೈಲ್‌ಗಳಲ್ಲಿ ಕೆಲಸಕ್ಕೆ ಹೋಗಿಬರ್ತಾರೆ. ಕಾಲ ಬದಲಾಗಿದೆ ಸ್ವಾಮಿ” ಎಂದ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತೇಳನೆಯ ಕಂತು ನಿಮ್ಮ ಓದಿಗೆ
ಅಧ್ಯಾಯ – 12
ಅದು ೨೦೧೯ನೇ ವರ್ಷ.. ಕೋಲಾರ ಚಿನ್ನದ ಗಣಿಗಳನ್ನು ಮುಚ್ಚಿ 18 ವರ್ಷಗಳೇ ಕಳೆದುಹೋಗಿದೆ. ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ ಮತ್ತು ಭೂವಿಜ್ಞಾನಿ ಸ್ವಾಮಿ ತನ್ನ ಕಾರ್‌ನಲ್ಲಿ ಕೆಜಿಎಫ್‌ನ ಗಣಿ ಕಲೋನಿಗಳಲ್ಲಿ ಸುತ್ತಾಡುತ್ತ.. ಸೈನೈಡ್ ಗುಡ್ಡಗಳು.. ಗಣಿ ಶಾಫ್ಟ್‌ಗಳು ಮತ್ತು ಬ್ರಿಟಿಷರು ಕಟ್ಟಿದ ಬಂಗಲೆಗಳಿರುವ ರಸ್ತೆಗಳಲ್ಲಿ ಕಾರು ಚಲಿಸುತ್ತಾ ಕೊನೆಗೆ ಒಂದು ಪೆಟ್ಟಿಗೆ ಅಂಗಡಿಯ ಮುಂದೆ ಕಾರ್ ನಿಲ್ಲಿಸಿ ಚಹಾ ಕುಡಿಯಲು ನಿಂತುಕೊಂಡರು. ಅದು ಕೆಜಿಎಫ್‌ನಲ್ಲಿ ಬದುಕು ಕಟ್ಟಿಕೊಂಡವರ ಒಂದು ರೀತಿಯ ನಾಸ್ಟಲ್ಜಿಯಾ. ಯಾರೇ ಆಗಲಿ ಐದಾರು ದಶಕಗಳಾದ ಮೇಲೆ ತಾನು ಹುಟ್ಟಿದ ಮನೆ, ತಾನು ಓದಿದ ಶಾಲೆಗೆ ಒಮ್ಮೆ ಭೇಟಿ ಮಾಡಿದಾಗ ಅದರ ಅನುಭವ ಆಗುತ್ತದೆ.
ಮನುಷ್ಯನಿಗೆ ಚಿನ್ನದ ಮೇಲೆ ಯಾಕೆ ಇಷ್ಟೊಂದು ವ್ಯಾಮೋಹ? ಎನ್ನುವ ಆಲೋಚನೆ ಸ್ವಾಮಿಯ ತಲೆಯಲ್ಲಿ ಎದ್ದು ನಿಂತಿತು. ಈ ಚಿನ್ನದ ಗಣಿಗಳನ್ನು ಮಾಡದೇ ಇದ್ದಿದ್ದರೆ ಚಿನ್ನ ದೊರಕುತ್ತಿರಲಿಲ್ಲ. ಈ ವಿಷ ಸಯನೈಡ್ ಗುಡ್ಡಗಳು ಹೀಗೆ ಭೂಮಿಯ ಮೇಲೆ ಬಿದ್ದು ಪರಿಸರ ಮಾಲಿನ್ಯವಾಗುತ್ತಿರಲಿಲ್ಲ.. ತುಳಿತಕ್ಕೆ ಒಳಪಟ್ಟ ಒಂದು ಜನಾಂಗ ಈ ಕಪ್ಪು ಸುರಂಗಗಳಲ್ಲಿ ಕೆಲಸ ಮಾಡಿ ಅವರ ಕುಟುಂಬಗಳಿಗೆ ಒಂದೊತ್ತು ಊಟ ದೊರಕುತ್ತಿರಲಿಲ್ಲ.. ಸ್ವಾಮಿಗೆ, ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿವೆ ಎನ್ನುವ ಆಲೋಚನೆ ಬಂದಿತು. ಅಂಗಡಿಯಲ್ಲಿದ್ದ ಯುವಕ “ಎನ್ನಾ ಸಾರ್ ವೇಣು?” ಎಂದ. ಸ್ವಾಮಿಗೆ ಸಣ್ಣಗೆ ಕೋಪ ಬಂದು “ಕನ್ನಡ ಬರಲ್ಲವಾ ನಿನಗೆ?” ಎಂದಿದ್ದೆ ಆ ಯುವಕ, “ಸರಿಯಾಗಿ ವರದಿಲ್ಲೆ ಸರ್” ಎಂದ. ಒಂದು ಕನ್ನಡ ಪದಾನಾದ್ರು ಮಾತಾನಾಡಿದನಲ್ಲ ಇವನು ಎಂದುಕೊಂಡ ಸ್ವಾಮಿ, “ಒಂದು ಟೀ ಕೊಡು” ಎಂದ. ಯುವಕ ಹಿಂದಕ್ಕೆ ತಿರುಗಿಕೊಂಡು ಸ್ಟೌವ್ ಹಚ್ಚಿ ಟೀ ಮಾಡತೊಡಗಿದ.
ಸ್ವಾಮಿ ಬೆಂಗಳೂರಿನಿಂದ ಕೆಜಿಎಫ್‌ಗೆ ಬಂದಾಗೆಲ್ಲ ಒಂದೆರಡು ದಿನ ತನ್ನ ಊರು ಯರ‍್ರಕೊಂಡ ಬ್ಯಾಟರಾಯನಹಳ್ಳಿರುವ ತಮ್ಮನ ಮನೆ ಮತ್ತು ಉರಿಗಾಂಪೇಟೆಯಲ್ಲಿರುವ ಪತ್ನಿಯ ಅಣ್ಣನ ಮಕ್ಕಳ ಮನೆಯಲ್ಲಿ ಉಳಿದುಕೊಂಡು ಹಳೆ ಗೆಳೆಯರನ್ನೆಲ್ಲ ನೋಡಿ ಮಾತನಾಡಿಸಿಕೊಂಡು ಹೋಗುವುದು ಸಾಮಾನ್ಯ. ಇಂದೂ ಕೂಡ ಗೆಳೆಯರನ್ನು ಭೇಟಿಯಾಗಲು ಬೆಳಿಗ್ಗೆ ಕಾರ್‌ನಲ್ಲಿ ಹೊರಟು ಬಂದಿದ್ದರು. ಯುವಕ, “ಸರ್ ಟೀ” ಎಂದಿದ್ದೆ ಸ್ವಾಮಿ ಟೀ ಕಪ್ ತೆಗೆದುಕೊಂಡು ಎಳೆ ಬಿಸಿಲಿನಲ್ಲಿ ನಿಂತುಕೊಂಡು ಕುಡಿಯತೊಡಗಿದರು. ಅಷ್ಟರಲ್ಲಿ ಸಣಕಲು ಮಹಿಳೆಯೊಬ್ಬಳು ಅಂಗಡಿ ಹತ್ತಿರಕ್ಕೆ ಬಂದು ಎರಡು ಬನ್ನು, ಎರಡು ಟೀ ಎಲೆಗಳನ್ನು ತೆಗೆದುಕೊಂಡಳು. ಸ್ವಾಮಿ ಆಕೆಯ ಕಡೆಗೆ ನೋಡಿದ. ಆಕೆ ಕೂಡ ಸ್ವಾಮಿಯ ಕಡೆಗೆ ನೋಡಿದಳು. ಸ್ವಾಮಿ, ನಿಧಾನವಾಗಿ ಆಕೆಯ ಚಿತ್ರಣವನ್ನು ತನ್ನ ಕಣ್ಣುಗಳ ಆಳದಲ್ಲಿ ಹುಡುಕಾಡಿ ನೋಡಿದ. ಓ ಸಿಕ್ಕಿಯೇಬಿಟ್ಟಳು.
ಸ್ವಾಮಿ, ಸಮಯ ಹಾಳುಮಾಡದೆ ಆಕೆಯ ಕಡೆಗೆ ನೋಡಿ “ಹಲೋ ಮೇಡಮ್ ನೀನು ಕಲೈಸೆಲ್ವಿ ಅಲ್ಲವೆ?” ಎಂದು ಕೇಳಿಯೇಬಿಟ್ಟ. ಆಕೆ ಸ್ವಾಮಿಯನ್ನೇ ದಿಟ್ಟಿಸಿ ನೋಡಿ ನಕ್ಕು “ಹೌದು!” ಎಂದಳು. ಸ್ವಾಮಿ, “ಸೆಲ್ವಿ ನಾನು ಸ್ವಾಮಿ. ಪಿ.ಯು.ಸಿ.ಯಲ್ಲಿ ನಿನ್ನ ಕ್ಲಾಸ್‌ಮೇಟ್” ಎಂದ. ಸೆಲ್ವಿ ಸ್ವಾಮಿಯ ಮುಖವನ್ನು ಮತ್ತೆ ದಿಟ್ಟಿಸಿ ನೋಡಿದಳು. ಆಕೆಯ ಕುಳಿಬಿದ್ದ ಕಣ್ಣುಗಳಲ್ಲಿ ಸ್ವಾಮಿಯ ಚಿತ್ರ ಉಳಿದುಕೊಂಡಿತ್ತೊ ಇಲ್ಲವೊ ತಿಳಿಯಲಿಲ್ಲ. ಆದರೆ ಸ್ವಾಮಿ ಎಂದ ತಕ್ಷಣ ಅವಳ ಸ್ಮೃತಿಪಟಲದಲ್ಲಿ ಎಲ್ಲೋ ಉಳಿದುಕೊಂಡಿದ್ದ ಆ ಹೆಸರನ್ನು ಗುರುತು ಹಿಡಿದಂತೆ ಕಾಣಿಸಿತು.
ಕಾಲೇಜ್‌ನ ಕೆಲವು ದೃಶ್ಯಗಳು ಈಗ ಅವಳ ಕಣ್ಣುಗಳಲ್ಲಿ ಕಾಣಿಸಿಕೊಂಡು, “ಓ ಸ್ವಾಮಿ! ನೀವಾ?” ಎಂದು ಹತ್ತಿರಕ್ಕೆ ಬಂದು ಕೈಹಿಡಿದುಕೊಂಡಳು. ಸ್ವಾಮಿ ಕೂಡ ಅವಳ ಕೈಯನ್ನು ಹಿಡಿದುಕೊಂಡ. ದಾರಿಯಲ್ಲಿ ಹೋಗುತ್ತಿದ್ದ ಒಂದಿಬ್ಬರು ಅವರ ಕಡೆಗೆ ನೋಡುತ್ತಾ ಹೋದರು. ಅವರಿಬ್ಬರಿಗೂ ಅದ್ಯಾವುದರ ಬಗ್ಗೆಯೂ ಗಮನ ಇರಲಿಲ್ಲ. ಸೆಲ್ವಿ, “ಸ್ವಾಮಿ, ಎಷ್ಟು ವರ್ಷಗಳಾಯಿತು ನಿಮ್ಮನ್ನು ನೋಡಿ. ಕೂದಲೆಲ್ಲ ಬಿದ್ದೋಗಿ ಬಾಲ್ಡಿ ಆಗಿಬಿಟ್ಟಿದ್ದೀಯ? ಎಷ್ಟು ಕೂದಲಿತ್ತು ನಿಮ್ಮ ತಲೆಯಲ್ಲಿ” ಎಂದಳು. ಸ್ವಾಮಿ ನಗುತ್ತಾ ತಲೆ ಸವರಿಕೊಂಡ. ನಂತರ ಸೆಲ್ವಿ, “ನಮ್ಮ ಮನೆ ಇಲ್ಲೆ ಇರೋದು. ಬನ್ನಿ ಹೋಗೋಣ” ಎಂದಳು. ಸ್ವಾಮಿ ಏನೂ ಯೋಚಿಸದೆ “ಕಾರ್‌ನಲ್ಲಿ ಹೋಗೋಣ ಬಾ ಸೆಲ್ವಿ” ಎಂದ. ಸೆಲ್ವಿ, “ಇಲ್ಲೇ ಮನೆ ಇರೋದು. ನಾನು ನಡೆದುಕೊಂಡೆ ಬರ್ತೀನಿ” ಎಂದಳು. ಸ್ವಾಮಿ ಅವಳನ್ನು ಒತ್ತಾಯಿಸಿ ಕಾರ್‌ನಲ್ಲಿ ಕೂರಿಸಿಕೊಂಡ. ಬರಿ ಕಾಲಿನಲ್ಲಿದ್ದ ಸೆಲ್ವಿ ಕಾರ್ ಒಳಗೆ ಕುಳಿತುಕೊಂಡು ಅರಮನೆಯ ಕೋಣೆಯೊಂದನ್ನು ನೋಡಿದಂತೆ ಒಳಗೆಲ್ಲ ನೋಡತೊಡಗಿದಳು. ಸೆಲ್ವಿ ದಾರಿ ತೋರುತ್ತ ಬಂದು ಗಣಿ ಕಾಲೋನಿಯ ಒಂದು ಸಣ್ಣ ಮನೆ ಮುಂದೆ ಕಾರು ನಿಂತುಕೊಂಡಿತು.
ಸ್ವಾಮಿ, ಕಾರ್‌ನಿಂದ ಇಳಿದು ಹಿಂದಕ್ಕೆ ಬಂದು ಬಾಗಿಲು ತೆರೆದು ಸೆಲ್ವಿಯನ್ನು ವಿಐಪಿ ರೀತಿಯಲ್ಲಿ ಇಳಿಸಿಕೊಂಡ. ಸೆಲ್ವಿ ಕಾರ್‌ನಿಂದ ಕೆಳಗೆ ಇಳಿಯುತ್ತಲೇ “ಬನ್ನಿ ಸ್ವಾಮಿ” ಎಂದು ಮನೆ ಒಳಕ್ಕೆ ಹೋದಳು. ಸ್ವಾಮಿ, ಕಾರ್ ಬಾಗಿಲುಗಳನ್ನು ಮುಚ್ಚಿ ಕಾರ್ ಕಡೆಗೆ ಆಟೋಮ್ಯಾಟಿಕ್ ಕೀ ತೋರಿಸಿ ಬಟನ್ ಒತ್ತಿದ್ದೆ ಬಾಗಿಲುಗಳಲ್ಲಿದ್ದ ಬಟನ್‌ಗಳು ಒಳಕ್ಕೆ ಹೋಗಿ ಲಾಕ್ ಆಯಿತು. ನಂತರ ಸ್ವಾಮಿ ಮನೆ ಬಾಗಿಲು ಹತ್ತಿರಕ್ಕೆ ಬಂದು ನಿಂತುಕೊಂಡ. ಸೆಲ್ವಿ ಮನೆ ಒಳಗೆ ಮಲಗಿದ್ದವರನ್ನು ಎದ್ದು ಕೂರುವಂತೆ ಹೇಳಿದಳು. ಬಾಗಿಲು ಮುಂದೆ ಒಂದು ಹಳೆ ಚಪ್ಪಲಿ ಮಾತ್ರ ಇದ್ದು ಸ್ವಾಮಿ ತನ್ನ ಹೊಸ ಬೂಟುಗಳನ್ನು ಬಾಗಿಲು ಮುಂದೆ ಬಿಡಲೊ ಬೇಡವೊ ಎಂದು ಒಂದೆರಡು ಕ್ಷಣ ಯೋಚಿಸುತ್ತ ನಿಂತುಕೊಂಡ. ಸೆಲ್ವಿಯ ಗುಡಿಸಿಲು ಮನೆ ಮುಂದೆ ತನ್ನ ದುಬಾರಿ ಬೂಟುಗಳನ್ನು ಪ್ರದರ್ಶಿಸುವುದು ಸ್ವಾಮಿಗೆ ಇಷ್ಟವಿರಲಿಲ್ಲ.
ಅಷ್ಟರಲ್ಲಿ ಸೆಲ್ವಿ, “ಸ್ವಾಮಿ, ಏನು ನೋಡ್ತೀರಾ ಬನ್ನಿ ಒಳಗೆ. ಇದೇ ನಮ್ಮ ಅರಮನೆ ನೋಡಿ” ಎನ್ನುತ್ತಾ ಮೂಲೆಯಲ್ಲಿದ್ದ ಹಳೆ ಕುರ್ಚಿ ಸರಿಪಡಿಸಿ ಧೂಳನ್ನು ಕೈಯಿಂದ ಒರೆಸಿ ಕುಳಿತುಕೊಳ್ಳಲು ಹೇಳಿದಳು. ಸ್ವಾಮಿ ಬೂಟುಗಳ ಜೊತೆಗೆ ಸಾಕ್ಸ್ ಬಿಚ್ಚಿ ಬಾಗಿಲು ಪಕ್ಕದಲ್ಲಿಟ್ಟು ಮನೆ ಒಳಗೆ ಬಂದು ಸುತ್ತಲೂ ನೋಡಿ ನೋಡದಂತೆ ಮೂಲೆಯಲ್ಲಿದ್ದ ಹಳೆ ಕುರ್ಚಿಯ ಮೇಲೆ ಕುಳಿತುಕೊಂಡ. ಸೆಲ್ವಿ ಎಲ್ಲಾ ಕಡೆ ಬಿದ್ದಿದ್ದ ಸಣ್ಣಪುಟ್ಟ ಸಾಮಾನುಗಳನ್ನೆಲ್ಲ ಎತ್ತಿ ಅಲ್ಲಲ್ಲಿ ಇಡುತ್ತಿದ್ದಳು. ಅದು ಮನೆಯೂ ಅಲ್ಲ ಗುಡಿಸಲೂ ಅಲ್ಲ. ಗಣಿ ಕಾರ್ಮಿಕರಿರುವ ಲೈನ್ ಮನೆಗಳ ಕಾಲೋನಿಯಲ್ಲಿರುವ ಒಂದು ಪುಟ್ಟ ಮನೆ. ಮೇಲೆ ಜಿಂಕ್ ಶೀಟುಗಳು. ಒಳಗೆ ಒಂದು ಕೋಣೆಯನ್ನೇ ಇಬ್ಭಾಗ ಮಾಡಿದ ಸಣ್ಣ ಕಿಚನ್. ಅದರಲ್ಲಿ ಅರ್ಧ ಸ್ನಾನ ಮಾಡುವ ಬಚ್ಚಲು ಮನೆ. ಮಸುರೆ ತೊಳೆಯುವುದು ಅದರಲ್ಲೇ. ಎರಡು ಹಗ್ಗಗಳನ್ನು ಎರಡೂ ಕಡೆ ಗೋಡೆಗಳಿಗೆ ಎಳೆದು ಕಟ್ಟಿದ್ದು ಅವುಗಳ ಮೇಲೆ ಕೆಲವು ಬಟ್ಟೆಗಳನ್ನು ಹಾಕಲಾಗಿತ್ತು. ಎದುರಿಗೆ ಗೋಡೆ ಮೇಲೆ ಸೆಲ್ವಿ ಮತ್ತು ಗಂಡನ ಒಂದು ಕಪ್ಪುಬಿಳುಪಿನ ಮದುವೆ ಫೋಟೋ ಇದೆ. ಪಕ್ಕದಲ್ಲಿ ಸೆಲ್ವಿ ಗಂಡ ಕಾರ್ಮಿಕನಾಗಿ ತೆಗೆಸಿಕೊಂಡಿರುವ ಕಪ್ಪುಬಿಳಿಪಿನ ಫೋಟೋ ಕೂಡ ಇದೆ. ಅದರಲ್ಲಿ ಅವನು ಹುರಿಮೀಸೆ ಬಿಟ್ಟುಕೊಂಡಿದ್ದು ಪ್ಯಾಂಟ್ ಮತ್ತು ಉದ್ದನೆ ತೋಳಿನ ಮೈನಿಂಗ್ ಯುನಿಫಾರ್ಮ್ ಧರಿಸಿದ್ದಾನೆ. ಕಾಲಿಗೆ ಮೈನಿಂಗ್ ಬೂಟುಗಳು ಮತ್ತು ತಲೆಯ ಮೇಲೆ ಹೆಲ್ಮೆಟ್ ಇದ್ದು ಅದರಲ್ಲಿರುವ ಹೆಡ್‌ಲೈಟ್ ಬೆಳಕು ಚೆಲ್ಲುತ್ತಿದೆ. ಎಲ್ಲವೂ ಕಾಲದ ಹೊಡೆತದಲ್ಲಿ ಜೀರ್ಣವಾಗಿ ಮಸುಕುಮಸುಕಾಗಿ ಕಾಣಿಸುತ್ತಿವೆ.
ಸೆಲ್ವಿ, “ಮಣಿ ಎದ್ದು ಕುಳಿತುಕೊಳ್ಳಿ” ಎಂದು ಮಲಗಿದ್ದವನ ದೇಹದ ಮೇಲಿದ್ದ ಬಟ್ಟೆಯನ್ನು ಸರಿಸಿದಳು. ರೋಗಿಯಂತಿದ್ದ ಆತ ಕಷ್ಟಪಟ್ಟು ಉಸಿರುಬಿಡುತ್ತಾ ಸೆಲ್ವಿಯ ಸಹಾಯದಿಂದ ಎದ್ದು ಕುಳಿತುಕೊಂಡು ಎದುರಿಗಿದ್ದ ಸ್ವಾಮಿಯ ಕಡೆಗೆ ಕಣ್ಣುಜ್ಜಿಕೊಂಡು ಅವಕ್ಕಾಗಿ ನೋಡುತ್ತ ಕಣ್ಣುಗಳಲ್ಲೇ ಸ್ವಾಮಿಯನ್ನು ಗುರುತು ಹಿಡಿಯಲು ಹೆಣಗಾಡತೊಡಗಿದ. ಅಷ್ಟರಲ್ಲಿ ಸೆಲ್ವಿ, “ಇವರು ಸ್ವಾಮಿ. ಪಿಯುಸಿಯಲ್ಲಿ ನನ್ನ ಕ್ಲಾಸ್‌ಮೇಟ್. ಅಂಗಡಿ ಹತ್ತಿರ ನಿಂತುಕೊಂಡು ಟೀ ಕುಡಿಯ್ತಾ ಇದ್ದರು. ಕರೆದುಕೊಂಡು ಬಂದೆ”. ಎಂದಳು. ಸ್ವಾಮಿ, ಮಣಿ ಎಂಬ ಹೆಸರು ಎಲ್ಲೋ ಕೇಳಿದ್ದೀನಲ್ಲ ಎಂದುಕೊಂಡ.
ಮಣಿ? ಯಾವ ಮಣಿ? ಕಾಲೇಜಿನಲ್ಲಿ ಸೆಲ್ವಿಯನ್ನು ಭಯಂಕರವಾಗಿ ಪ್ರೀತಿಸುತ್ತಿದ್ದ ಮಣಿ ಇವನೇನೆ? ಇರಲಾರ. ಸ್ವಾಮಿ ಮಣಿಯನ್ನೇ ದಿಟ್ಟಿಸಿ ನೋಡಿದ. ಗುರುತು ಹಿಡಿಯಲು ಸಾಧ್ಯವಾಗಲಿಲ್ಲ. ಎದುರಿಗೆ ಎದ್ದು ಕುಳಿತಿರುವ ಆತ ನೆರೆತ ಕೂದಲಿನ ಗಡ್ಡಮೀಸೆ ಮತ್ತು ಗುಳಿಬಿದ್ದ ಕಣ್ಣುಗಳಿಂದ ಈಗಲೋ ಆಗಲೋ ಹಾರಿಹೋಗುವ ಪ್ರಾಣವನ್ನು ಕಣ್ಣುಗಳಲ್ಲಿ ಹಿಡಿದಿಟ್ಟುಕೊಂಡಂತೆ ತೋರುತ್ತಿದ್ದನು. ಯಾವುದೋ ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವ ರೋಗಿಯಂತೆ ಕಾಣುತ್ತಿರುವ ಆತನ ಕಣ್ಣುಗಳಲ್ಲಿ ಸ್ವಾಮಿಯನ್ನು ಸರಿಯಾಗಿ ಗುರುತಿಸಿ ನೋಡಿದ ಮೇಲೆ ಒಂದು ರೀತಿಯ ಮಿಂಚಿನ ಹೊಳಪು ಕಾಣಿಸಿಕೊಂಡಿತು. ಮಣಿ ಇದ್ದಕ್ಕಿದ್ದಂತೆ “ಸ್ವಾಮಿ, ಉರಿಗಾಂಪೇಟಿಯಿಂದ ಬರ್ತಾಇದ್ದರಲ್ಲ ನೀವು?” ಎಂದ. ಸ್ವಾಮಿಗೆ ದಿಢೀರನೆ ಫ್ಲ್ಯಾಶ್ ಆಗಿ ಸ್ವಾಮಿ, “ಏಯ್ ಮಣಿ ನೀನಾ? ನನ್ನನ್ನು ಜ್ಞಾಪಕ ಇಟ್ಟುಕೊಂಡಿದ್ದೀಯಲ್ಲೊ” ಎಂದ, ಸ್ವಾಮಿ ಎದ್ದು ಬಂದು ಮಣಿ ಕೈ ಹಿಡಿದುಕೊಂಡ. ಇಬ್ಬರೂ ಸುಮಾರು ಹೊತ್ತು ಹಾಗೇ ಕೈಗಳನ್ನು ಹಿಡಿದುಕೊಂಡು ಒಬ್ಬರನ್ನೊಬ್ಬರು ನೋಡಿಕೊಂಡರು. ಕಾಲದ ಮಹಿಮೆಯಿಂದ ಇಬ್ಬರ ಚಹರೆಗಳು ಸಾಕಷ್ಟು ಬದಲಾಗಿ ಹೋಗಿದ್ದವು. ಆದರೆ ನೆನಪುಗಳು ಮಾತ್ರ ಯಾವೊತ್ತಿಗೂ ಮಾಸುವುದಿಲ್ಲ. ಅವು, ಸಾವು ಸಂಭವಿಸುವವರೆಗೂ ಜೊತೆಯಲ್ಲೇ ಇರುತ್ತವೆ.
ಕೆಲವೇ ಕ್ಷಣಗಳಲ್ಲಿ ನಾಲ್ಕು ದಶಕಗಳ ಹಿಂದಿನ ಹತ್ತಾರು ದೃಶ್ಯಗಳು ಅವರ ಮಧ್ಯೆ ಹಾದು ಹೋದವು. ಮಣಿ, “ಸ್ವಾಮಿ, ನಿನ್ನನ್ನು ನೋಡಿ ಎಷ್ಟು ವರ್ಷ ಆಯಿತಪ್ಪ? ನಲವತ್ತು ವರ್ಷಗಳೇ ಆಗಿರಬೇಕಲ್ಲ?” ಎಂದ ಕೆಮ್ಮುತ್ತಾ. ಮತ್ತೆ ಮಣಿ, “ಅಂಡರ್‌ಗ್ರೌಂಡ್‌ನಲ್ಲಿ ಕೆಲಸ ಮಾಡಿಮಾಡಿ ಈಗಾಗಿದ್ದೀನಿ ನೋಡು (ತನ್ನ ದೇಹವನ್ನು ನೋಡಿಕೊಂಡು ಹೇಳಿದ). ಮತ್ತೆ ನೀನು ಹೇಗಿದ್ದೀಯಾ? ಸ್ವಾಮಿ. ಏನು ಮಾಡ್ತಾ ಇದ್ದೀಯಾ?” ಎಂದ. ಸ್ವಾಮಿಗೆ ಹೇಳಲೊ ಬೇಡವೊ ಎನ್ನುವ ಸಂದೇಹ ಮನಸ್ಸಿನಲ್ಲಿ ಎದ್ದರೂ, ಸ್ವಾಮಿ, “ನಾನಾ ಮಣಿ. ನಮ್ಮ ಕಾಲೇಜಿನಲ್ಲಿ ಬಿ.ಎಸ್ಸಿ., ಮುಗಿಸಿ ಬೆಂಗಳೂರಿನಲ್ಲಿ ಜಿಯಾಲಜಿಯಲ್ಲಿ ಎಂ.ಎಸ್ಸಿ., ಮುಗಿಸಿ ನಂತರ ಕೋಲಾರ ಚಿನ್ನದ ಗಣಿಗಳ ಮೇಲೆ ಪಿಎಚ್‌ಡಿ ಮಾಡಿ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿ ಜಿಯಾಲಜಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಂಡೆ. ದೇಶ ಎಲ್ಲಾ ಸುತ್ತಿ ಕೊನೆಗೆ ನಾಗ್ಪುರದಲ್ಲಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಆಗಿ ಇತ್ತೀಚೆಗೆ ನಿವೃತ್ತಿಯಾದೆ” ಎಂದ. ಮಣಿ, “ನಮ್ಮ ಕೋಲಾರ ಚಿನ್ನದ ಗಣಿಗಳ ಬಗ್ಗೆ ಪಿಎಚ್‌ಡಿ ಮಾಡಿದ್ದೀಯಾ. ನನಗೆ ಗೊತ್ತೇ ಇಲ್ಲವಲ್ಲಪ್ಪ. ದೊಡ್ಡ ಪೋಸ್ಟ್. ಪೆನ್ಶನ್ ಎಷ್ಟು ಬರುತ್ತೆ?” ಎಂದ. ಸ್ವಾಮಿ, “ಸಾಕಷ್ಟು ಬರುತ್ತೆ ಮಣಿ” ಎಂದ. ಸ್ವಾಮಿ, “ಕನ್ನಡ ಚೆನ್ನಾಗಿ ಮಾತಾಡ್ತಿಯಲ್ಲ ಮಣಿ” ಎಂದರು.
ಮಣಿ, “ಸ್ವಾಮಿ ಇಲ್ಲೇ ಹುಟ್ಟಿದ್ದು. ಇಲ್ಲೇ ಸಾಯುವುದು. ಆ ಕಾಲದಲ್ಲಿ ನಾವು ಮೈನಿಂಗ್ ಕಾಲೋನಿಗಳನ್ನು ಬಿಟ್ಟು ಹೊರಕ್ಕೆ ಹೋಗ್ತಾ ಇರಲಿಲ್ಲ. ಈಗ ಆಗಲ್ಲವಲ್ಲ. ಕಾಲೋನಿಗಳಲ್ಲಿ ಇರುವವರೆಲ್ಲ ಕನ್ನಡ ಮಾತಾಡ್ತಾರೆ. ಕನ್ನಡ ಕಲಿತುಕೊಂಡಿದ್ದಾರೆ. ಸಾವಿರಾರು ಜನ ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ. ಅದೇ ರೀತಿ ಸಾವಿರಾರು ಹೆಣ್ಣುಮಕ್ಕಳು ಗಂಡುಮಕ್ಕಳು ಕೆಜಿಎಫ್‌ನಿಂದ ಬೆಂಗಳೂರಿಗೆ ದಿನನಿತ್ಯ ರೈಲ್‌ಗಳಲ್ಲಿ ಕೆಲಸಕ್ಕೆ ಹೋಗಿಬರ್ತಾರೆ. ಕಾಲ ಬದಲಾಗಿದೆ ಸ್ವಾಮಿ” ಎಂದ. ಮತ್ತೆ ಮಣಿ, “ಅದಿರಲಿ ಸ್ವಾಮಿ. ಎಷ್ಟು ಜನ ಮಕ್ಕಳು?” ಎಂದಿದ್ದಕ್ಕೆ ಸ್ವಾಮಿ “ಒಬ್ಬನೇ ಮಗ ಯುರೋಪ್‌ನಲ್ಲಿದ್ದಾನೆ” ಎಂದ. ಮಣಿ, “ಮದುವೆ?” ಎಂದ. ಸ್ವಾಮಿ, “ಮದುವೆ ಇನ್ನೂ ಆಗಿಲ್ಲ” ಎಂದರು. ಮಣಿ, “ಚೆನ್ನಾಗಿದ್ದಾನೆ ತಾನೆ? ಅಷ್ಟು ಸಾಕು ಬಿಡು” ಎಂದ.
(ಹಿಂದಿನ ಕಂತು: ಫೋಟೋದಲ್ಲಿ ಬಂಧಿಯಾದ ಸೆಲ್ವಂ)

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.