ಯೂರೋಪಿನ ದೇಶಗಳಲ್ಲಿ ಹೀಗೆ ಸ್ಮಶಾನವನ್ನು ಸ್ವಚ್ಚಗೊಳಿಸುವುದು ಒಂದು ಗೌರವಯುತ ಕೆಲಸ. ವಿದ್ಯಾರ್ಥಿಗಳು, ಕಲಾವಿದರು ತಮ್ಮ ಖರ್ಚು ಸರಿದೂಗಿಸಿಕೊಳ್ಳಲು ಹೀಗೆ ಸ್ವಯಂಸೇವೆ ಮಾಡುತ್ತಾರೆ ಮತ್ತು ಪಗಾರ ಪಡೆಯುತ್ತಾರೆ. ಬಹಳಷ್ಟು ಸ್ಮಶಾನಗಳಿಗೆ ಭೇಟಿ ನೀಡಿದ್ದೇನೆ. ಅವುಗಳು ಪಾರ್ಕ್‌ನಂತೆ ಬಳಸಲ್ಪಡುತ್ತವೆ. ಸ್ವಚ್ಛತೆ ಮತ್ತು ಮೌನವು ಮಾರ್ದನಿಸುತ್ತಿರುತ್ತವೆ. ಕೆಲವು ಕಡೆ ಸಮಯ ನಿಗಧಿಯಾಗಿರುತ್ತದೆ, ಆದರೆ ಬಹುಪಾಲು ಸ್ಮಶಾನಗಳಿಗೆ ಸಾರ್ವಜನಿಕರು ದಿನದ ಯಾವ ಸಮಯದಲ್ಲಿಯಾದರೂ ಹೋಗಬಹುದು, ಅಲ್ಲಿ ಕುಳಿತು ಸಮಯ ಕಳೆಯಬಹುದಾಗಿರುತ್ತದೆ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ವೇಲ್ಸ್ ದೇಶದ ಕಾರ್ಡಿಫ್‌ನಲ್ಲಿ ಓಡಾಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ

ಸಮುದ್ರದ ಕೈ ಹಿಡಿದು ಮಾತು ಮೌನವಾಗುವವವರೆಗೂ ಹೆಜ್ಜೆ ಸದ್ದಾಗುತ್ತಾ ನಡೆದರೆ ತಿರುವಿನ ಕೊನೆಯಲ್ಲಿ ಸಿಗುತ್ತಿತ್ತು ಅರ್ಧ ಎಕರೆ ಹಸಿರು. ಅದರ ಮೇಲೆಲ್ಲಾ ಮೆಲ್ಲಮೆಲ್ಲಗೆ ಓಡಾಡುತ್ತಿದ್ದ ಬಿಳಿ ಮೃದು ಮೊಲಗಳು. ಒಂದೆರಡು ಬಾತುಕೋಳಿಗಳಂತಹ ಪುಕ್ಕವಿದ್ದ ಹಕ್ಕಿಗಳು ಅವುಗಳ ನಡುವೆ ತಿಳಿ ಬಣ್ಣದ ಮರದಿಂದ ಮಾಡಿದ ಗುಡಿಸಲಾಕಾರದ ಕೋಣೆ. ಸ್ಯಾಲಿ ತನ್ನ ಮನೆಯ ಹಿಂಭಾಗದ ಈ ಜಾಗವನ್ನು ಪ್ರವಾಸಿಗಳಿಗೆ ತಂಗುದಾಣವನ್ನಾಗಿ ನೀಡುವ ಬಿಜಿನೆಸ್ ಮಾಡುತ್ತಾರೆ.

ಆ ದಿನ ವೇಲ್ಸ್ ದೇಶದ ಕಾರ್ಡಿಫ್ ನಗರದ ಪೆನಾರ್ಥ್‍ ಎನ್ನುವ ಏರಿಯಾದಲ್ಲಿ ನಂ.2 ಅಂತ ಬೋರ್ಡ್ ಹೊತ್ತುಕೊಂಡು ನಿಂತಿದ್ದ ಈ ಸ್ವರ್ಗಕ್ಕೆ ಕಾಲಿಟ್ಟೊಡನೆ ನಗುನಗುತ್ತಾ ಸ್ವಾಗತಿಸಿದ ಸ್ಯಾಲಿ ಬೀಳ್ಕೊಡುವುದರಲ್ಲಿದ್ದಾಗ ತಣ್ಣನೆಯ ನಗು ಬೀರುತ್ತಾ ಮುತ್ತಿನಂತಹ ಹುಡುಗಿಯೊಬ್ಬಳು ಆಕೆಯ ಹಿಂದೆ ಬಂದಳು. ‘ಹೆಲೋ’ ಎಂದು ಮಧುರವಾಗಿ ಮುಂದೆ ನಿಂತವಳು ಏನೋ ಕೇಳಿದಳು. ಆ ಶೈಲಿಯ ಇಂಗ್ಲಿಷ್ ನನಗೆ ಅರ್ಥವಾಗಲಿಲ್ಲ. ಅವಳಮ್ಮನ ಕಡೆಗೆ ನೋಡಿದೆ “ನಿಮಗೆ ಕಾಫಿ ಮಾಡಿಕೊಡಲೇ? ಎಂದು ಕೇಳುತ್ತಿದ್ದಾಳೆ” ಎಂದು ಆಕೆ ಸ್ಪಷ್ಟ ಪಡಿಸಿದಳು.

ಅರೆ ಅಷ್ಟು ಚಿಕ್ಕ ಹುಡುಗಿ ಕಾಫಿ ಮಾಡೋದೇ? ಅದೂ ನಾನು ದುಡ್ಡು ಕೊಟ್ಟು ಉಳಿದುಕೊಂಡಿರುವ ಪ್ರವಾಸಿ, ಆ ಮಗುವಿನ ಕೈಯಲ್ಲಿ ಕಾಫಿ ಮಾಡಿಸಿಕೊಂಡು ಕುಡಿದರೆ ಬಾಲ ಕಾರ್ಮಿಕತೆ ಆದೀತು. ‘ಛೆ ಛೆ ಬೇಡ ಬೇಡʼ ಎಂದೆ. ಕೂಡಲೇ ಆ ಪೋರಿ ‘ನೀವು ನನಗೆ ಇಷ್ಟ ಆಗಿದ್ದೀರ.ನಾನು ಕಾಫಿ ಮಾಡಿ ಕೊಡ್ತೀನಿ ಪ್ಲೀಸ್’ ಎಂದು ನುಲಿಯಿತು. ನನ್ನ ಮುಖದಲ್ಲಿ ಅಯೋಮಯತೆ ಕಂಡ ತಾಯಿ “ಅವಳಿಗೆ ಇಷ್ಟವಾದ ಅತಿಥಿಗಳಿಗೆ ಅವಳು ಹೀಗೇ ಕಾಫಿ ಕೊಟ್ಟು ಸ್ವಾಗತಿಸುತ್ತಾಳೆ. ಮಾಡಿಕೊಂಡು ಬರುತ್ತಾಳೆ ಬಿಡಿ” ಎಂದು ನನ್ನನ್ನು ಸುಮ್ಮನಾಗಿಸಿದಾಗಲೇ ಸಿಂಡ್ರೆಲ್ಲಾದಂತಿದ್ದ ಮುದ್ದು ಹುಡುಗಿ ಒಳಕ್ಕೆ ಓಡಿ ಹೋಗಿದ್ದಳು.

10 ನಿಮಿಷದಲ್ಲಿ ಬಿಸಿಬಿಸಿ ಕಾಫಿ ಕಪ್ ಮುಂದೆ ಹಿಡಿದಳು. “ನನ್ನ ಹೆಸರು ಒಲಿವಿಯಾ. ನೀವೀಗ ವಿಶ್ರಾಂತಿ ತೆಗೆದುಕೊಳ್ಳಿ. ಬೆಳಗ್ಗೆ ಶಾಲೆಗೆ ಹೋಗಲು ನನಗೆ ತಯಾರಾಗಬೇಕಿದೆ. ಕಾಫಿ ಹೇಗಿತ್ತು ಎಂದು ಇನ್ನೊಮ್ಮೆ ಹೇಳಿ. ಬೈ” ಎನ್ನುತ್ತಾ ಓಡಿದಳು. ಅತಿಸೂಕ್ಷ್ಮಗೊಳ್ಳುತ್ತಿರುವ ನಾವು ಅಸೂಕ್ಷಗೊಳ್ಳುತ್ತಿರುವ ಮಕ್ಕಳು ಎನ್ನುವ ನನ್ನ ಕೊರಗಿಗೆ ಸಮತೋಲನ ಕಾಯ್ದ ದೇವತೆಯಂತೆ ಸಿಕ್ಕ Olivia ಬಗ್ಗೆ ಹೇಳಬೇಕಾದ್ದು ತುಂಬಾ ಇದೆ. ಆ ಊರಿನಲ್ಲಿ ನೋಡಬೇಕು ಎಂದು ಬರೆದಿಟ್ಟುಕೊಂಡಿದ್ದ ಪಟ್ಟಿಗೆ ಎಲ್ಲಕ್ಕಿಂತ ಮೇಲೆ ‘ಒಲಿವಿಯಾ ಜೊತೆ ಮಾತು’ ಎನ್ನುವ ಸಾಲು ಸೇರಿಕೊಂಡಿತು.

ಇಂದ್ರಲೋಕದಂತಹ ರಾತ್ರಿಯಲ್ಲಿ ಕನಸಿನಂತಹ ನಿದ್ದೆ ಮುಗಿಸಿ ಬೆಳಗಿನ ಬಾಗಿಲು ತೆಗೆದಾಗ ಕಂಡದ್ದು ಎದುರು ರಸ್ತೆಯಲ್ಲಿದ್ದ ಸ್ಮಶಾನದ ಸಮಾಧಿ ಕಲ್ಲುಗಳನ್ನು ತೊಳೆಯುತ್ತಿದ್ದ, ಕಪ್ಪು ಬಣ್ಣದ ಜ್ಯಾಕೆಟ್ ಹಾಕಿದ್ದ ವ್ಯಕ್ತಿ. ಕೈಯಲ್ಲಿ ಕಾಫಿ ಬಟ್ಟಲು ಹಿಡಿದು ನೋಡುತ್ತಾ ನಿಂತೆ. ಹನುಮಂತ ಸಂಜೀವನಿ ಮೂಲಿಕೆಯನ್ನು ಹುಡುಕುತ್ತಿದ್ದಾಗ ಇಷ್ಟೇ ತನ್ಮಯನಾಗಿದ್ದನೇನು ಎನಿಸುವಷ್ಟು ತಲ್ಲೀನತೆಯಿಂದ ಈತ ಮಗ್‌ನಿಂದ ನೀರು ತೆಗೆದು, ಪ್ರತೀ ಕಲ್ಲಿನ ಮೇಲೂ ಹಾಕಿ ತೊಳೆಯುತ್ತಿದ್ದ ಅತ್ತಿತ್ತ ನೋಡದೆ, ಅತ್ತು ಹೊರಳಾಡದೆ ಕೂಡ. ಸ್ಪಷ್ಟವಾಯಿತು ಆತ ಅಲ್ಲಿ ಯಾರನ್ನೋ ಸಮಾಧಿ ಮಾಡಲು ಬಂದಿಲ್ಲ ಬದಲಿಗೆ ಅಲ್ಲಿನ ಕೆಲಸದವನು ಎಂದು. ಕಾಫಿಯ ಕೊನೆಯ ಗುಟುಕು ಎಳೆದುಕೊಂಡು, ಸ್ವೆಟರ್ ಗುಂಡಿ ಭದ್ರಪಡಿಸಿಕೊಳ್ಳುತ್ತಾ, ಶೂಜ಼್ ಹಾಕಿಕೊಳ್ಳಲು ಸಮಯ ವ್ಯರ್ಥ ಎನಿಸಿ ಚಪ್ಪಲಿಯಲ್ಲೇ ಓಡಿದೆ ಅವನ ಬಳಿಗೆ. “ಗುಡ್ ಮಾರ್ನಿಂಗ್” ಎಂದೆ. ಆತ ತಲೆ ಎತ್ತಿ ಪ್ರತಿ ಶುಭಕೋರಿದ. ನನ್ನ ಹೆಸರು ಹೇಳಿದ ನಂತರ ನೇರವಾಗಿ ಕೇಳಿದೆ “ನೀವು ಏನು ಮಾಡುತ್ತಿದ್ದೀರ?” ಜ್ಯಾಕ್ ಹೇಳಿದ್ದು ಇಷ್ಟು; ಆತ ಮೂಲತಃ ಪೋಲ್ಯಾಂಡ್ ದೇಶದವನು. ಆದರೆ ಅವನ ಮುತ್ತಾತ, ಅವನ ತಾತ ಯಾರೋ ಈ ದೇಶಕ್ಕೆ ಬಂದಿರಬಹುದು, ಹಾಗಾಗಿ ಇವನು ಇಲ್ಲಿ. 23ರ ಹರೆಯದ ಜ್ಯಾಕ್ ಬಹಳ ವರ್ಷಗಳ ಅಂತರದ ನಂತರ ವಾಣಿಜ್ಯ ವಿಷಯದಲ್ಲಿ ಓದಲು ಕಾಲೇಜಿಗೆ ಸೇರಿಕೊಂಡಿದ್ದಾನೆ. ವಾರಕ್ಕೆ ಒಮ್ಮೆ ಬಂದು ಹೀಗೆ ಸ್ಮಶಾನವನ್ನು ಸ್ವಚ್ಚಗೊಳಿಸಿ ಹೋಗುತ್ತಾನೆ. ಅಲ್ಲಿನ ಕಾರ್ಪೊರೇಷನ್ ಇವನಿಗೆ ಆ ಕೆಲಸಕ್ಕೆ 20 ಪೌಂಡ್ಸ್ ಕೂಲಿ ಕೊಡುತ್ತದೆ.

ಯೂರೋಪಿನ ದೇಶಗಳಲ್ಲಿ ಹೀಗೆ ಸ್ಮಶಾನವನ್ನು ಸ್ವಚ್ಚಗೊಳಿಸುವುದು ಒಂದು ಗೌರವಯುತ ಕೆಲಸ. ವಿದ್ಯಾರ್ಥಿಗಳು, ಕಲಾವಿದರು ತಮ್ಮ ಖರ್ಚು ಸರಿದೂಗಿಸಿಕೊಳ್ಳಲು ಹೀಗೆ ಸ್ವಯಂಸೇವೆ ಮಾಡುತ್ತಾರೆ ಮತ್ತು ಪಗಾರ ಪಡೆಯುತ್ತಾರೆ. ಬಹಳಷ್ಟು ಸ್ಮಶಾನಗಳಿಗೆ ಭೇಟಿ ನೀಡಿದ್ದೇನೆ. ಅವುಗಳು ಪಾರ್ಕ್‌ನಂತೆ ಬಳಸಲ್ಪಡುತ್ತವೆ. ಸ್ವಚ್ಛತೆ ಮತ್ತು ಮೌನವು ಮಾರ್ದನಿಸುತ್ತಿರುತ್ತವೆ. ಕೆಲವು ಕಡೆ ಸಮಯ ನಿಗಧಿಯಾಗಿರುತ್ತದೆ, ಆದರೆ ಬಹುಪಾಲು ಸ್ಮಶಾನಗಳಿಗೆ ಸಾರ್ವಜನಿಕರು ದಿನದ ಯಾವ ಸಮಯದಲ್ಲಿಯಾದರೂ ಹೋಗಬಹುದು, ಅಲ್ಲಿ ಕುಳಿತು ಸಮಯ ಕಳೆಯಬಹುದಾಗಿರುತ್ತದೆ. ನನ್ನ ಸಣ್ಣ ಅನುಭವದಲ್ಲಿ ವಿದೇಶದಲ್ಲಿ ಸಾವಿಗೆ ಇರುವಷ್ಟು ಗೌರವ ಮತ್ತು ಸ್ಮಶಾನಕ್ಕೆ ಇರುವ ಘನತೆ ನಮ್ಮಲ್ಲಿ ಬದುಕು, ಜೀವ, ದೇಶ, ಭಾವ ಯಾವುದಕ್ಕೂ ಇಲ್ಲ ಎನಿಸುತ್ತದೆ.

ನಾನಿದ್ದ ಜಾಗದಿಂದ ಒಂದೆರಡು ಫರ್ಲಾಂಗಿನಲ್ಲಿ ಸಮುದ್ರ ಅಲೆಯಾಗುತ್ತಿತ್ತು. ದಕ್ಷಿಣ ವೇಲ್ಸ್‌ನಲ್ಲಿ ಇರುವ ಕಾರ್ಡಿಫ್ 1875ರಲ್ಲಿ ನಗರ ಎಂದು ವಿದ್ಯುಕ್ತಗೊಳ್ಳುವವರೆಗೂ ಪೆನಾರ್ಥ್ ಎನ್ನುವ ಜಾಗ ಕಡಲುಗಳ್ಳರ ಶ್ರೀಮಂತ ತಾಣವಾಗಿತ್ತಂತೆ. ರೆ ವೆಲ್ಷ್ ಭಾಷೆಯಲ್ಲಿ ಪೆನ್ ಎಂದರೆ ತಲೆ, ಅರ್ಥ್ ಎಂದರೆ ಕರಡಿ. ಈ ಜಾಗವು ಕರಡಿ ತಲೆಯ ಆಕಾರದಲ್ಲಿ ಇರುವ ಸಮುದ್ರ ತೀರ ಆದ್ದರಿಂದ ಇದಕ್ಕೆ ಪೆನಾರ್ಥ್ ಎನ್ನುವ ಹೆಸರು ಬಂದಿತು ಎನ್ನುತ್ತಾರೆ ಅಲ್ಲಿನ ಜನ. ಊರಿನ ಒಳಗೆ ಸರ್ಕಾರಿ ಸಾರಿಗೆ ಇದೆ. ಆದರೆ ಅಲ್ಲಿನ ಜನರು ನಡಿಗೆಯನ್ನು ಇಷ್ಟಪಟ್ಟು ಆಯ್ದುಕೊಳ್ಳುತ್ತಾರೆ. ನಾನೂ ಹಾಗೇ ಅಲ್ಲಿಂದ ಹೊರಟು ಪಾದಗಳನ್ನು ನಡಿಗೆಯಾಗಿಸುತ್ತಾ, ಮನಸ್ಸಿನ ಹೆಜ್ಜೆ ಮೇಲೊಂದು ಹೆಜ್ಜೆ ಇಡುತ್ತಾ, ಇಟಲಿ ಮಾದರಿಯ ಉದ್ಯಾನದ ಒಳಗಿನಿಂದ ಅಲ್ಲಿದ್ದ ಯುದ್ಧ ಸ್ಮಾರಕವನ್ನು ನೋಡುತ್ತಾ, ಸಣ್ಣಸಣ್ಣ ಗುಡ್ಡ ಏರಿ ಆ ತುದಿ ಸೇರಿದಾಗ, ಎದುರಾಗಿದ್ದು ಕಾರ್ಡಿಫ್ ಊರಿನ ನ್ಯಾಷನಲ್ ಮ್ಯೂಸಿಯಮ್. ವೇಲ್ಸ್ ದೇಶದ ಚರಿತ್ರೆ, ಎರಡನೆಯ ಯುದ್ಧದ ಸಮಯದಲ್ಲಿ ಅನುಭವಿಸಿದ ನರಕ ಯಾತನೆ, ನಂತರ ದೇಶ ಬೆಳೆದು ಬಂದ ಬಗೆ, ಆರ್ಥಿಕತೆ ವಗೈರೆಗಳ ಬಗ್ಗೆ ಮ್ಯೂಸಿಯಮ್ ನೀಡುವ ವಿವರ ಅದ್ಭುತ. ಎಲ್ಲಾ ಮಹಿತಿಗಳ ನಡುವೆ ನನ್ನ ಗಮನ ಸೆಳೆದ ಮಾಹಿತಿ ಹೀಗಿದೆ. ಒಂದೊಮ್ಮೆ ವಿಪರೀತ ಸಿರಿವಂತರಿದ್ದ ಕಾರ್ಡಿಫ಼್ ನಗರದಲ್ಲಿ, ಎಲ್ಲರೂ ಮನೆಯೊಳಗೆ ಮೆಟ್ಟಲುಗಳನ್ನು, ಅವುಗಳನ್ನು ಹಾದುಹೋಗುವ ಹಿಡಿಗಳನ್ನು ಉಕ್ಕು, ಕಬ್ಬಿಣ ಬಳಸಿ ಅಲಂಕಾರಿಕವಾಗಿ ಕಟ್ಟಿಕೊಳ್ಳುತ್ತಿದ್ದರಂತೆ. ಆದರೆ ಎರಡನೆಯ ಮಹಾಯುದ್ಧದ ಸಮಯದಲ್ಲಿ ಯುದ್ಧನೌಕೆ ತಯಾರಿಸಲು ಲೋಹಗಳು ಸಾಕಾಗದೆ ಹಿಟ್ಲರ್‌ನ ಆದೇಶದ ಮೇರೆಗೆ ಇಲ್ಲಿನ ಮನೆಗಳಿಂದ ಮೆಟ್ಟಿಲು, ಹಿಡಿಗಳನ್ನೇ ತೆಗೆದುಕೊಂಡು ಹೋದರಂತೆ. ನಿಜ, ಯುದ್ಧವೆಂದರೆ ನಿಂತ ಮೆಟ್ಟಿಲುಗಳನ್ನು ನಿರ್ನಾಮ ಮಾಡಿ ಆಸರೆಯಾಗುವ ಕೈಹಿಡಿಗಳನ್ನು ಅಲುಗಾಡಿಸಿ ಬದುಕನ್ನು ಭೂಮುಖ ಮಾಡಿಸುವ ಕ್ರಿಯೆ ಅಲ್ಲವೇ?!

ಅತಿಸೂಕ್ಷ್ಮಗೊಳ್ಳುತ್ತಿರುವ ನಾವು ಅಸೂಕ್ಷಗೊಳ್ಳುತ್ತಿರುವ ಮಕ್ಕಳು ಎನ್ನುವ ನನ್ನ ಕೊರಗಿಗೆ ಸಮತೋಲನ ಕಾಯ್ದ ದೇವತೆಯಂತೆ ಸಿಕ್ಕ Olivia ಬಗ್ಗೆ ಹೇಳಬೇಕಾದ್ದು ತುಂಬಾ ಇದೆ. ಆ ಊರಿನಲ್ಲಿ ನೋಡಬೇಕು ಎಂದು ಬರೆದಿಟ್ಟುಕೊಂಡಿದ್ದ ಪಟ್ಟಿಗೆ ಎಲ್ಲಕ್ಕಿಂತ ಮೇಲೆ ‘ಒಲಿವಿಯಾ ಜೊತೆ ಮಾತು’ ಎನ್ನುವ ಸಾಲು ಸೇರಿಕೊಂಡಿತು.

ಹೊರ ಬಂದಾಗ ಸಿಕ್ಕಿದ್ದು ನಮ್ಮ ಗಾಂಧಿತಾತ. 300 ಕಿಲೋ ತೂಕ, 6 ಅಡಿ ಎತ್ತರದ ಕಂಚಿನ ಪ್ರತಿಮೆಯಾಗಿ ನಿಂತಿದ್ದರು. “ಓಹೋಹೋ ಎಲ್ಲಿ ಹೋದರೂ ಸಿಗುತ್ತೀರಲ್ಲ ಪೂರ್ವಜರ ಹಾರೈಕೆಯಂತೆ ನೆತ್ತಿ ಆಘ್ರಾಣಿಸಲು…” ಎಂದುಕೊಳ್ಳುತ್ತಾ ಗಾಂಧಿ ಪಾದದ ಬಳಿ ನಿಂತಿದ್ದೆ. ಒಂದು ಕೈಯಲ್ಲಿ ಊರುಗೋಲು, ಮತ್ತೊಂದರಲ್ಲಿ ಭಗವದ್ಗೀತೆ ಹಿಡಿದು ಇಲ್ಲಿಗೆ ಯಾಕೆ, ಯಾವಾಗ, ಹೇಗೆ ಬಂದರು ಎಂದು ತಿಳಿಯದೆ ಗೂಗಲ್ ಮಾಡಿದೆ. 2017 ಅಕ್ಟೊಬರ್ 2ರಂದು ಗಾಂಧೀಜಿಯ 148ನೆಯ ಜಯಂತಿಯ ಅಂಗವಾಗಿ, ವೇಲ್ಸ್ ದೇಶದ ಹಿಂದು ಕೌನ್ಸಿಲ್ ಅವರು, 65000 ಪೌಂಡ್ಸ್ ಚಂದಾ ಎತ್ತಿ ಈ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಿದರಂತೆ. ದೆಹಲಿಯ ನೋಯ್ಡ ಜಾಗದ ಶಿಲ್ಪಿಗಳಾದ ರಾಮ್ ಸುತಾರ್ ಮತ್ತು ಅವರ ಮಗ ಅನಿಲ್ ರೂಪಿಸಿಕೊಟ್ಟ ಈ ಪ್ರತಿಮೆಯ ಅನಾವರಣಕ್ಕೆ ಗಾಂಧಿಯವರ ಮರಿಮಗ ಸತೀಶ್ ಕುಮಾರ್ ಧುಪೇಲಿಯಾ ದಕ್ಷಿಣ ಆಫ್ರಿಕಾದಿಂದ ಬಂದಿದ್ದರಂತೆ. ಅಂದಹಾಗೆ, ವೇಲ್ಸ್ ದೇಶದ ಸರ್ಕಾರ ಘೋಷಿಸಿರುವ “ಪರ್ಸನ್ಸ್ ಆಫ್ ಇನ್ಟೆರೆಸ್ಟ್” ಪಟ್ಟಿಯಲ್ಲಿ ನಮ್ಮ ಮಹಾತ್ಮನ ಹೆಸರೂ ಇದೆ ಎನ್ನುವ ವಿಷಯ ಅಚ್ಚರಿ ಏನಲ್ಲ.

ಮ್ಯೂಸಿಯಂ‍ನ ಕೆಳಗಿನ ಕೊಠಡಿಯಲ್ಲಿ ನೆಲ್ಸನ್ ಮಂಡೇಲಾ ಅವರ ಜೀವನಗಾಥೆಯ ಫೋಟೊ ಪ್ರದರ್ಶನ ನಡೆಯುತ್ತಿತ್ತು. ಅದನ್ನು ನೋಡಿಕೊಂಡು ಪಕ್ಕದಲ್ಲಿಯೇ ಇರುವ ಕ್ಯಾಪಿಟಲ್ ಮಾಲ್ ಸುತ್ತುತ್ತಿರುವಾಗ ಗಾಜಿನ ಕೋಣೆಯೊಂದರಲ್ಲಿ, ಸುಂದರವಾದ ಯುವಕ ಯುವತಿ ಮೈಕ್ ಮುಂದೆ ಮಾತನಾಡುತ್ತಿದ್ದರು. ಆಕಾಶವಾಣಿ ಸಂಬಂಧ ಇರುವುದರಿಂದ ಅದು ರೇಡಿಯೋ ಕೇಂದ್ರ ಇರಬೇಕು ಎಂದುಕೊಂಡ ನನ್ನ ಊಹೆ ಸರಿಯಾಗಿತ್ತು. 97.4 FM ಕೇಂದ್ರ ಅದಾಗಿತ್ತು. Josh ಮತ್ತು Kelly ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಕೈ ಸಂಜ್ಞೆಯಲ್ಲಿ ಹಾಯ್ ಹಲೋ ಹೇಳಿ, ಹೊರಗೆ ಬರುವುದಾಗಿ ಹೇಳಿ ಬಂದರು. ಅವರು ನಿತ್ಯವೂ ಸಂಜೆ 4 ಗಂಟೆಯಿಂದ 7 ಗಂಟೆಯವರೆಗೂ “with Josh and Kelly” ಎನ್ನುವ ಸಾಮಾಜಿಕ ಕಳಕಳಿ ಇರುವ ನೇರ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಅವರ ರೇಡಿಯೋ ಬಗ್ಗೆ ನಮ್ಮ ದೇಶದ ಆಕಾಶವಾಣಿ, ಎಫ್‍ಎಂ‍ಗಳ ಬಗ್ಗೆ ಮಾತಾಯ್ತು. ನಮ್ಮಲ್ಲಿ Women Empowerment ಕಾರ್ಯಕ್ರಮವನ್ನು Radioದಲ್ಲೂ ಮಾಡುತ್ತೇವೆ ಎನ್ನುವ ನನ್ನ ವಿವರಣೆಯನ್ನು ಅವರುಗಳು ಆಶ್ಚರ್ಯದಿಂದ ಕೇಳಿದರು ಎನ್ನುವುದು ನನಗೂ ಆಶ್ಚರ್ಯ ತಂದಿತ್ತು.

ಆ ರಾತ್ರಿ ನಾಲ್ಕಾರು ತಿಂಗಳ ಹಿಂದೆ ಮಕ್ಕಳ ಕಲ್ಯಾಣ ಸಮಿತಿ ಕೆಲಸದಲ್ಲಿ ಭೇಟಿಯಾಗಿದ್ದ 16 ವರ್ಷದ ಸುಂದರಿ ಒಬ್ಬಳು ಮುಂದೆ ನಿಂತಿದ್ದಳು. ಒಬ್ಬಳೇ ಮಗಳು. ಶಾಲೆಯಲ್ಲೂ ಚುರುಕಿನ ಹುಡುಗಿಗೆ ವಯೋ ಸಹಜವಾಗಿ ಹುಡುಗನ ಪ್ರೀತಿ ಮೋಡಿ ಮಾಡಿತು. ಗುಟ್ಟಾಗಿ ಮನೆ ಬಿಟ್ಟು ನಡೆದೇ ಬಿಟ್ಟಳು. ಮಗಳು ಸಿಕ್ಕಿದ್ದಾಳೆ ಎನ್ನುವ ವಿಷಯ ತಿಳಿದಕೂಡಲೇ ಉಸಿರು ಹಿಡಿದು ಬಂದು ಎದುರು ನಿಂತಿದ್ದರು. ಹುಡುಗಿಯ ಕಣ್ಣೀರು, ಅಪ್ಪನ ರೋಧನೆ, ಅಮ್ಮನ ಗೋಳು ವಾರ್ತೆಯಲ್ಲಿ ಪ್ರತಿಧ್ವನಿಸುತ್ತಿದ್ದವು. ‘ಸ್ಕೂಲಿಗೆ ಹೋಗಿ ಬರೋದು, ಟಿವಿ ನೋಡೋದು ಬಿಟ್ಟರೆ ಇನ್ನೇನೂ ಕೆಲಸ ಮಾಡಿಸ್ತಿರ್ಲಿಲ್ಲ ಅವಳ ಹತ್ರ. ಒಂದು ಲೋಟ ನೀರನ್ನೂ ಎತ್ತಿಸದೆ ಬೆಳೆಸಿದ್ದೇವೆ. ಅವಳು ತನ್ನ ಊಟವನ್ನೂ ಕಲೆಸಿಕೊಳ್ಳಲ್ಲ, ನಾನೇ ಕಲೆಸಿ ತುತ್ತಿಡುತ್ತೇನೆ’ ಎಂದು ತಾಯಿ ಬಾರಿ ಬಾರಿಗೂ ಹೇಳುತ್ತಾ ಸೆರಗಿನಿಂದ ಮೂಗೊರೆಸಿಕೊಳ್ಳುತ್ತಿದ್ದಳು.

ತಾಯ್ತಂದೆಯರು ಮತ್ತು ಮಕ್ಕಳ ನಡುವೆ ಇರುವ ಅದೆಷ್ಟೋ ಮನಸ್ತಾಪ, ಮುನಿಸುಗಳನ್ನು ಆಲಿಸುವಾಗ ಹೆಚ್ಚಿನ ತಾಯಂದಿರು ‘ಹೂವೆತ್ತಲು ಬಿಡದೆ ಸಾಕಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮಕ್ಕಳು ತಮ್ಮ ತಮ್ಮ ಮನೆಯ ಕೆಲಸವನ್ನು ಮಾಡುವುದು ಅಪರಾಧ ಎನ್ನುವಂತೆಯೇ ನಂಬಿ, ಬಿಂಬಿಸುತ್ತಾರೆ. ಮಕ್ಕಳು ಅದನ್ನು ಹೌದು ಹೌದು ಎಂದು ಅನುಮೋದಿಸುತ್ತಾ ವಯಸ್ಕರಾಗಿಬಿಡುತ್ತಾರೆ. ವಯಸ್ಸಿಗೆ ಬಂದ ಹೆಣ್ಣು, ಗಂಡು ಮಕ್ಕಳು ತಮ್ಮ ಮನೆಯದ್ದೇ, ತಾವೇ ಬಳಸುವ ಶೌಚಾಲಯ ಶುಚಿಯಾಗಿಲ್ಲ ಎಂದು ತಾಯಂದರ ಮೇಲೆ ರೇಗುವುದನ್ನು ನೋಡಿದ್ದೇನೆ. ಶೂಜ್‌ನ ಲೇಸ್ ಕಟ್ಟಿಕೊಳ್ಳಲು ಬಾರದ ಕಾಲೇಜು ಹುಡುಗರು ಇರುವಂತೆಯೇ ತಮ್ಮದೇ ಜಡೆ ಹೆಣೆದುಕೊಳ್ಳಲು ಬಾರದ ಹುಡುಗಿಯರೂ ಇದ್ದಾರೆ. ಅವರುಗಳು ಅಸಮರ್ಥರಲ್ಲ ಬದಲಿಗೆ ದಿಕ್ಕು ಕಾಣದವರು.

“ನೋಡು ನೋಡು ಇಂದ್ರಲೋಕಕ್ಕೆ ಹೋದರೂ ರಕ್ತದ ಬುದ್ಧಿ ಬಿಡೋಲ್ಲ ನೀನು, ಸಾಕು ಮಾಡು” ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದಾಗ ಮೊಲದ ಮರಿಯನ್ನು ಕಂಕುಳಕ್ಕೆ ಸಿಕ್ಕಿಸಿಕೊಂಡು, ಹಾಲ್ನಗೆಯ ಹುಡುಗಿ ಬಂದಳು. ಕೊರೆಯುವ ಚಳಿಯಲ್ಲಿ ಮಂಚದ ಮೇಲಿನ ದಪ್ಪ ಚಾದರದೊಳಕ್ಕೆ ಹೊಕ್ಕು ಶುರುವಾಯ್ತು ನಮ್ಮೂವರ ಮಾತು. ಮೂವರು ಯಾರು? ಅದೆ ಒಲಿವಿಯಾ, ಅವಳ ಮೊಲ ಮತ್ತು ನಾನು! ಹಾಂ, ಓಲಿವಿಯಾಗೆ ಒಂಭತ್ತು ವರ್ಷ ವಯಸ್ಸು. ಶಾಲೆಗೆ ಹೋಗುತ್ತಾಳೆ. ಮುಂದೆ ಜಿಮ್ನ್ಯಾಸ್ಟ್ಕ್ ಪಟು ಆಗಬೇಕೆನ್ನುವ ಕನಸಿಗೆ ಶಾಖ ಕೊಡುತ್ತಿದ್ದಾಳೆ. ಇಬ್ಬರು ಅಕ್ಕಂದಿರ ಮುದ್ದಿನ ತಂಗಿ ನಾಲ್ಕು ಮೊಲಗಳ ಆಗು ಹೋಗುಗಳನ್ನು ನೋಡಿಕೊಳ್ಳುತ್ತಾಳೆ. ವಾಷಿಂಗ್ ಮೆಷೀನ್‌ನಲ್ಲಿ ಬಟ್ಟೆ ಒಗೆಯುತ್ತಾಳೆ, ಸಣ್ಣ ಪುಟ್ಟ ಅಡುಗೆ ಮಾಡಿಕೊಡುತ್ತಾಳೆ. ತನ್ನ ಸಮವಸ್ತ್ರ, ಕಾಲುಚೀಲಗಳನ್ನು ತಾನೇ ಸಿದ್ಧ ಪಡಿಸಿಕೊಳ್ಳುತ್ತಾಳೆ, ಕುಸುರಿ ಕೆಲಸಗಳನ್ನೂ ಮಾಡುತ್ತಾಳೆ. ಟಿವಿ ನೋಡುತ್ತಾಳೆ, ಸ್ನೇಹಿತರ ಜೊತೆ ಕಾಲ ಕಳೆಯುತ್ತಾಳೆ. ಅಜ್ಜಿ ತಾತನ ಮನೆಗೂ ಒಮ್ಮೊಮ್ಮೆ ಹೋಗಿ ಬರುತ್ತಾಳೆ ಮತ್ತು ಸಹಜವಾದ ಮನುಷ್ಯಳಾಗಿದ್ದಾಳೆ. ಒಲಿವಿಯಾ ಒಬ್ಬಳೇ ಅಲ್ಲ ಆ ಊರುಗಳಲ್ಲಿನ ಬಹುತೇಕ ಮಕ್ಕಳು ಹೀಗೇ. ಸ್ಯಾಲಿ ಕಳೆದ ವರ್ಷ ಸಂದೇಶ ಕಳುಹಿಸಿದ್ದಳು, ಒಲಿವಿಯಾ ಮತ್ತು ಅಕ್ಕಂದಿರು ಸುಖವಾಗಿದ್ದಾರೆ. ಆಕೆ ತನ್ನ ಗೆಳೆಯ ಯಾಂಡ್ರ್ಯೂ ಜೊತೆಗೆ ಯೆಂಗೇಜ್‍ಮೆಂಟ್ ಮಾಡಿಕೊಂಡಿದ್ದಾಳಂತೆ.

ಅಂದಹಾಗೆ, ಅವತ್ತು ಲಂಡನ್‌ನಿಂದ ಕಾರ್ಡಿಫ್‌ಗೆ ಹೋಗಲು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿದ್ದೆ. ವಿಕ್ಟೋರಿಯಾ ಸ್ಟೇಷನ್‌ನಿಂದ ಬಸ್ ಹತ್ತಬೇಕಿತ್ತು. ಆದರೆ ನಾನು ಅಲ್ಲಿಗೆ ಬಂದ ಟ್ಯೂಬ್ (ಮೆಟ್ರೋ ರೈಲು) ಯಾವುದೋ ಸಮಸ್ಯೆ ಆಗಿ, ಒಂದು ದೂರದ ಸ್ಟೇಷನ್‌ನಲ್ಲಿ ಸುಮಾರು ನಲವತ್ತು ನಿಮಿಷ ನಿಂತುಬಿಟ್ಟಿತ್ತು. ಹಾಗಾಗಿ ಇಲ್ಲಿಗೆ ಬರುವ ವೇಳೆಗೆ ಬಸ್ ಹೊರಟು 6 ನಿಮಿಷಗಳು ಆಗಿಹೋಗಿತ್ತು. 40 ಪೌಂಡ್ಸ್ ಕೊಟ್ಟು ಕೊಂಡಿದ್ದ ಟಿಕೆಟ್ ಹೊಳೆಯಲ್ಲಿ ತೇಲಿ ಹೋಗಿತ್ತು. 40 ಪೌಂಡ್ಸ್ ಹಾಗೆ ಕಳೆದುಕೊಳ್ಳುವುದು ಎಂದರೆ ಅರ್ಥ ಏನು. ಕರುಳು ಕಣ್ಣೀರಿಡುತ್ತಿತ್ತು. ಸೀದಾ ಟಿಕೆಟ್ ಕೌಂಟರಿಗೆ ಹೋಗಿ ನಾನು ಭಾರತೀಯ ಪ್ರವಾಸಿ ಮತ್ತೆ 40 ಪೌಂಡ್ ಕೊಡಲು ಸಾಧ್ಯ ಆಗದು ದಯವಿಟ್ಟು ಮತ್ತೊಂದು ಬಸ್ಸಿನಲ್ಲಿ ಕಳುಹಿಸಿಕೊಡಲು ಮನವಿ ಮಾಡಿಕೊಂಡೆ. ಆತ ಆಗಲ್ಲ ಎಂದ. ಕೈಮುಗಿದೆ. ಉಹುಂ ಆಗಲ್ಲ ಎನ್ನುವುದೇ ಉತ್ತರ. ಗದ್ಗದಿತ ದನಿಯಲ್ಲಿ ಗೋಗರೆದೆ. ಹೆಣ್ಣಿನ ಕಣ್ಣೀರಿಗೆ ಕರಗದವ ಗಂಡಸು ಇರಲಿ ಮನುಷ್ಯನೇ ಅಲ್ಲ! ಆತ “ನೋಡಿ ನನ್ನ ಬಳಿ ಮತ್ತ್ಯಾರದ್ದೋ ಒಂದು ಟಿಕೆಟ್ ಇದೆ. ಅದು ಬಳಕೆ ಆಗಲ್ಲ ವೇಸ್ಟ್. ಆದರೆ ಅದನ್ನು ನಿಮಗೆ ಕೊಡಲು ಬರುವುದಿಲ್ಲ. ನೀವು 20 ಪೌಡ್ಸ್ ಕೊಟ್ಟರೆ ನಿಮ್ಮ ಹೆಸರಿಗೆ ಅದನ್ನು ಕೊಡುತ್ತೇನೆ” ಎಂದ. ಸರಿ ಎಂದು ಎಟಿಎಂ ಕಾರ್ಡ್ ಕೊಟ್ಟೆ. ಅದಕ್ಕೆ ಆತ “ಇಲ್ಲ ನೀವು ಕ್ಯಾಶ್ ಕೊಡಬೇಕು. ಅಲ್ಲಿ ಕ್ಯಾಮೆರ ಇದೆ ಸ್ವಲ್ಪ ಪಕ್ಕಕ್ಕೆ ಬನ್ನಿ” ಎನ್ನುತ್ತಾ ಒಂದು ಬಿಳಿ ಕವರ್ ಕೊಟ್ಟು ಅದರಲ್ಲಿ ಹಾಕಿ ಅಲ್ಲಿಯೇ ಇಡಲು ಹೇಳಿದ. ಹಾಗೇ ಮಾಡಿದೆ, ನನಗೆ ಹೊಸ ಟಿಕೆಟ್ ಸಿಕ್ಕಿತ್ತು. ಬಸ್‌ನಲ್ಲಿ ಕುಳಿತೆ.


ಭ್ರಷ್ಟಾಚಾರ ಭಾರತದಲ್ಲಿ ತಾಂಡವ ಆಡುತ್ತಿದೆ. ಹಾಗೇ ಹೀಗೆ ಎಂದೆಲ್ಲಾ ಕೇಳುವಾಗ ಅಂದುಕೊಳ್ಳುತ್ತಿರುತ್ತೇನೆ “ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇಲ್ಲ, ಅದು ಇರುವುದು ನನ್ನ ಮನಸ್ಸಿನಲ್ಲಿ. ಕೆಲವೊಮ್ಮೆ 20 ಪೌಂಡಿನಷ್ಟು ಮಾತ್ರ ಮತ್ತೆ ಕೆಲವೊಮ್ಮೆ ಕೋಟಿಕೋಟಿ ರೂಪಾಯಿಯಷ್ಟು”. ಸೋಜಿಗದಾಚೆಗಿನ ಒಂದು ಸೋಜಿಗ ಎಂದರೆ ಮನಸ್ಸು ಭಾರತ, ಲಂಡನ್, ಕಾರ್ಡಿಫ಼್ ಎಲ್ಲಿಯೂ working 24X7.