ಕನ್ನಡ ಸಾಹಿತ್ಯ ಪರಿಷತ್ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತದೆಯೇ, ಇಲ್ಲವೇ ಎಂಬ ಬಗ್ಗೆ ಆಗಾಗ ಚರ್ಚೆಗಳನ್ನು ಕೇಳುತ್ತೇವೆ. ಆದರೆ ಅದು ಚುನಾವಣೆಯ ಸಮೀಪಿಸುತ್ತಿದ್ದಂತೆಯೇ ಈ ಚರ್ಚೆಗೆ ಮತ್ತಷ್ಟು ಬಿರುಸು ದೊರೆಯುತ್ತದೆ. ಪ್ರಸ್ತುತ ನಿಗದಿಯಾದಂತೆ, ಮೇ 9ರಂದು ಕನ್ನಡ ಸಾಹಿತ್ಯ ಪರಿಷತ್ ನ ಚುನಾವಣೆ ನಡೆಯಲಿದೆ. 100 ವರ್ಷಗಳನ್ನು ದಾಟಿ ಬಂದ ಸಂಸ್ಥೆಯು ಯಾವೆಲ್ಲ ಕನ್ನಡಪರ ಚಳವಳಿಗಳಲ್ಲಿ ಸಕ್ರಿಯವಾಗಿತ್ತು ಎಂಬ ಪ್ರಶ್ನೆಯೊಂದನ್ನು ಮುಂದಿಟ್ಟುಕೊಂಡು, ಹಿರಿಯ ಲೇಖಕರಾದ  ಅಗ್ರಹಾರ ಕೃಷ್ಣಮೂರ್ತಿ  ಬರೆದ ವಿಶ್ಲೇಷಣೆ ನಿಮ್ಮ ಓದಿಗಾಗಿ.

 

ಕನ್ನಡ ಸಾಹಿತ್ಯ ಪರಿಷತ್ತು ಎಂಬ ಹೆಸರಿನಲ್ಲಿರುವ ಎರಡು ಶಬ್ದಗಳು ಕನ್ನಡಿಗರನ್ನು ಭಾವನಾತ್ಮಕವಾಗಿ ಸೆಳೆದು ಬಂಧಿಸಿಬಿಡುತ್ತವೆ. ಒಂದು ‘ಕನ್ನಡ’, ಇನ್ನೊಂದು ‘ಸಾಹಿತ್ಯ’. ‘ಕನ್ನಡ’ ಒಂದು ದೃಷ್ಟಿಯಿಂದ ಕನ್ನಡನಾಡಿನಲ್ಲಿ ಮತ್ತು ಹೊರನಾಡಿನಲ್ಲಿ ವಾಸಿಸುತ್ತಿರುವ, ಕನ್ನಡ ಭಾಷೆಯನ್ನು ಬಲ್ಲ ಎಲ್ಲ ಜನರನ್ನೂ ಭಾವನಾತ್ಮಕವಾಗಿ ಸೆಳೆಯುತ್ತದೆ. ಇದೊಂದು ಸತ್ಯ ಎನ್ನುವುದಕ್ಕಿಂತಲೂ ಹೆಚ್ಚಾಗಿ ಒಂದು ‘ನಂಬಿಕೆ’ ಎಂದು ತಿಳಿಯುವುದೇ ಸತ್ಯಕ್ಕೆ ಹೆಚ್ಚು ಹತ್ತಿರವಾಗಿರುತ್ತದೆ.

ಇನ್ನು ‘ಸಾಹಿತ್ಯ’ ಎಂಬ ಶಬ್ದದ ಸೆಳೆತದ ಬಗ್ಗೆ ಮಾತಾಡುವ ಮುನ್ನ ಕನ್ನಡಿಗರಾದ ನಾವು ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್’ ಎಂಬ ಮಾತನ್ನು ಶಾಸ್ತ್ರಕ್ಕಾದರೂ ನೆನಪು ಮಾಡಿಕೊಳ್ಳಲೇಬೇಕು. ಸಾಹಿತ್ಯ ಸಮ್ಮೇಳನಗಳಿಗೆ ಎಳೆಯ ಕೂಸುಗಳಾದಿಯಾಗಿ ವೃದ್ಧ ಮಾತಾಪಿತೃಗಳ ಸಮೇತ ನೂರಾರು ಮೈಲಿ ಪ್ರಯಾಣ ಮಾಡಿ ಬಂದು ನೆರೆಯುವ ಜನಜಂಗುಳಿಯನ್ನು ಕಂಡಾಗ ಅದರ ಸಾಕಾರ ಸ್ವರೂಪವು ನಮಗೆ ಅರಿವಿಗೆ ಬರುತ್ತದೆ. ಹಾಗಾಗಿ ಪರಿಷತ್ತು ಎಂಬ ಈ ಸಂಸ್ಥೆ ನಾಲ್ಕೂವರೆ ಕೋಟಿ ಕನ್ನಡಿಗರದ್ದು. ಅದು ನಮ್ಮದು ಅಂದುಕೊಳ್ಳುವುದಕ್ಕೆ ಅದರ ಸದಸ್ಯತ್ವವನ್ನು ಪಡೆಯಲೇಬೇಕೆಂಬ ನಿಯಮವೇನಿಲ್ಲ. ಸದಸ್ಯತ್ವವೆಂಬುದು ಒಂದು ತಾಂತ್ರಿಕ ಅಂಶ ಅಷ್ಟೆ. ಅನೇಕ ಸಂದರ್ಭಗಳಲ್ಲಿ ಅಂಥ ಸದಸ್ಯತ್ವ ಮತ ಯಾಚಕರ (ಇಲ್ಲಿ ಮತ ಎಂಬುದನ್ನು ವೋಟು ಮತ್ತು ಜಾತಿ ಎಂಬ ಎರಡೂ ಅರ್ಥಗಳಲ್ಲಿ ಗ್ರಹಿಸಬಹುದು) ಒಂದು ಬ್ಯಾಂಕ್. ಅದರ ಅಸ್ತಿತ್ವ, ಸ್ವರೂಪ, ಧ್ಯೇಯೋದ್ದೇಶಗಳ ಬಗ್ಗೆ ಎಷ್ಟು ಕೋಟಿ ಕನ್ನಡಿಗರಿಗೆ ನಿಖರ ಮಾಹಿತಿ ಇದೆಯೋ ಇಲ್ಲವೋ ತಿಳಿಯದು. ಅದರ ಸಾವಿರಾರು ಸದಸ್ಯರಿಗೇ ನಿಖರ ಮಾಹಿತಿ ಇಲ್ಲವೆಂಬ ಸಂಗತಿ ಎಲ್ಲರಿಗೂ ತಿಳಿದೇಯಿದೆ. ಈಗಾಗಲೇ ಹಲವು ಚುನಾವಣೆಗಳ ಹಿಂದಿನಿಂದಲೂ ಜಾತಿ ಆಧಾರಿತ, ಪ್ರಾದೇಶಿಕ ಆಧಾರಿತ ಸದಸ್ಯತ್ವಗಳ ನೋಂದಣಿಯಾಗಿದೆ ಮತ್ತು ಅಂಥ ಗುಂಪುಗಳನ್ನು ಚುನಾವಣೆಗಳ ಮಟ್ಟಿಗೆ ಸಕ್ರಿಯವಾಗಿ ಬಳಸಿಕೊಳ್ಳಲಾಗಿದೆ.

ಚುನಾವಣೆಗಳು ಪ್ರತಿಬಾರಿಯೂ ‘ರಂಗ್‍ಬಿರಂಗಿ’ ಸ್ವರೂಪ ಪಡೆದುಕೊಳ್ಳುತ್ತಿವೆ. ಮೊನ್ನೆ ಪ್ರಕಟವಾದ ಸುದ್ದಿಯ ಪ್ರಕಾರ ಈ ಬಾರಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಕಣ್ಣು ಮಂಡ್ಯ ಜಿಲ್ಲೆಯ ಮತದಾರರ ಮೇಲಿದೆಯಂತೆ. ಕಾರಣ ಅಲ್ಲಿ ಕಬ್ಬು ಕಡಿಯುವವರಾದಿಯಾಗಿ ಸಾವಿರಾರು ಸಂಖ್ಯೆಯಲ್ಲಿ, ರಾಜ್ಯದ ಇತರ ಜಿಲ್ಲೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಮತದಾರರಿದ್ದಾರೆಂಬುದು. ಕಬ್ಬು ಕಡಿಯುವವರು ಅಗತ್ಯವಾಗಿ ಪರಿಷತ್ತಿನ ಸದಸ್ಯರಾಗಬೇಕು ಎಂಬುದನ್ನು ಒಪ್ಪೋಣ. ಆದರೆ ಚುನಾವಣಾನಂತರದ ದಿನಗಳಲ್ಲಿ ಅವರ ಸಮಸ್ಯೆಗಳಿಗೆ ಪರಿಷತ್ತು ಎಷ್ಟರಮಟ್ಟಿಗೆ ಪ್ರತಿಸ್ಪಂದಿಸುತ್ತದೆ ಎಂಬುದು ಮುಖ್ಯ ಪ್ರಶ್ನೆ. ಇದಕ್ಕೂ ಹಿಂದಿನ ಹಕೀಕತ್ತೊಂದನ್ನು ಹೇಳುವುದಾದರೆ ಒಂದು ಚುನಾವಣಾ ಸಂದರ್ಭದಲ್ಲಿ ಸಾವಿರಾರು ಹೊಟೆಲ್ ಮಾಣಿಗಳನ್ನು ಸದಸ್ಯರನ್ನಾಗಿ ಮಾಡಿಸಿಕೊಳ್ಳಲಾಯಿತು. ಆದರೆ ಈತನಕ ಹೊಟೆಲ್ ಕಾರ್ಮಿಕರ ಕ್ಷೇಮವನ್ನೂ, ಸಮಸ್ಯೆಗಳನ್ನೂ ಪರಿಷತ್ತು ಒಮ್ಮೆಯೂ ಚಿಂತಿಸಿದಂತಿಲ್ಲ. ‘ಕನ್ನಡ ಸಾಹಿತ್ಯ’ ಪರಿಷತ್ತಿನ ಸಂದರ್ಭದಲ್ಲಿ ಹೀಗೆ ಯೋಚಿಸುವುದೇ ವಿಚಿತ್ರ, ಅಸಂಬದ್ಧ ಎನ್ನಬಹುದು ಕೆಲವರು ಅಥವಾ ಅನೇಕರು!

ಪರಿಷತ್ತನ್ನು ಸ್ಥಾಪಿಸಿದ್ದೇ ಕನ್ನಡಿಗರ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕುರಿತ ಚಿಂತನೆಯ ಒಂದು ಅಂಗವಾಗಿ ಎಂಬುದನ್ನು ಅದರ ಇತಿಹಾಸ ತಿಳಿಸುತ್ತದೆ. ಭಾಷೆಯ ಬಗೆಗೆ ಒಂದು ರೀತಿಯ ಭಾವನಾತ್ಮಕ ಐಕ್ಯತೆಯನ್ನು ಸಾಧಿಸಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲವಾದರೂ ಅದರ ಸ್ಥಾಪನೆಯ ಮೂಲ ಉದ್ದೇಶವಾಗಿದ್ದ ಕನ್ನಡಿಗನ ಸರ್ವಾಂಗೀಣ ಅಭಿವೃದ್ಧಿಯ ವಿಚಾರದಲ್ಲಿ ಪರಿಷತ್ತು ಯಾವ ಸಕಾರಾತ್ಮಕ ಹೆಜ್ಜೆಗಳನ್ನೂ ಇಡಲಿಲ್ಲ.

ಸರ್ವಾಂಗೀಣ ಅಭಿವೃದ್ಧಿಯ ವಿಚಾರ ಕೈಬಿಟ್ಟು, ಭಾಷೆಯ ವಿಚಾರದಲ್ಲೇ ಇತ್ತೀಚಿನ ಉದಾಹರಣೆಯನ್ನು ಗಮನಿಸೋಣ. ಭದ್ರಾವತಿಯಲ್ಲಿ ನಡೆದ ರಾಜ್ಯದ ದೃಷ್ಟಿಯಿಂದ ಬಹಳ ಪ್ರತಿಷ್ಠಿತವೆಂಬ ಸಮಾರಂಭದ ನಾಮಫಲಕಗಳಲ್ಲಿ ಕನ್ನಡ ಕಣ್ಮರೆಯಾಯಿತು. ಸುಮಾರು ಹತ್ತು ವರ್ಷಗಳಿಂದಲೂ ಕನ್ನಡ ಶಾಸ್ತ್ರೀಯ ಭಾಷಾ ಇಲಾಖೆ ಬಾಲಗ್ರಹ ಪೀಡಿತವಾಗಿದೆ. ಬೆಳಗಾವಿ ಕುರಿತ ಈಚಿನ ಮತ್ತು ಕಾಲಕಾಲಕ್ಕೆ ಏಳುವ ವಿದ್ಯಮಾನಗಳು – ಇಂಥ ಅತಿಮುಖ್ಯ ಸಾಂಸ್ಕೃತಿಕ ಅಂಶಗಳ ಬಗ್ಗೆ ಕೆಲವು ವ್ಯಕ್ತಿಗತ ಪ್ರತಿಕ್ರಿಯೆಗಳು ಮತ್ತು ಕೆಲವು ಕನ್ನಡ ಸಂಘಟನೆಗಳು ತೋರಿದ ಪ್ರತಿಭಟನೆಗಳನ್ನು ಬಿಟ್ಟರೆ ಕನ್ನಡಿಗರ ಗೌರವಾನ್ವಿತ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್ತು ಯಾವುದೇ ಗಮನಾರ್ಹ ರೀತಿಯ ಜನಾಭಿಪ್ರಾಯ ರೂಪಿಸುವ, ಆ ಮೂಲಕ ಸತ್ತಾರೂಢ ವ್ಯವಸ್ಥೆಯ ಮೇಲೆ ಒತ್ತಡ ತರುವ ಯೋಚನೆಯನ್ನೇ ಮಾಡಿಲ್ಲ. ಇಂಥ ಸಂದರ್ಭಗಳಲ್ಲಿ ಪರಿಷತ್ತಿನ ಅಧ್ಯಕ್ಷರಾದವರು ನೀಡುವ ಒಂದು ಯಾಂತ್ರಿಕ ಪತ್ರಿಕಾ ಹೇಳಿಕೆಯ ಮಟ್ಟಿಗೆ ಸಮಾಪ್ತಿಯಾಗುತ್ತದೆ. ಅನೇಕ ಸಲ ಅದು ಪರಿಷತ್ತಿನ ಅಧ್ಯಕ್ಷರ ವೈಯಕ್ತಿಕ ನೈತಿಕ ಜವಾಬ್ದಾರಿಯಿಂದ ಮುಕ್ತರಾದ ನಿಲುವಿನಲ್ಲಿರುತ್ತದೆ. ಅದು ನಾಲ್ಕೂವರೆ ಕೋಟಿ ಕನ್ನಡಿಗರ ಘರ್ಜನೆಯಂತಾಗಲಿ ಅಥವಾ ಪರಿಷತ್ತಿನ ಲಕ್ಷಾಂತರ ಸದಸ್ಯರ ಏಕಾಭಿಪ್ರಾಯದಂತಾಗಲೀ ಇರುವುದೇ ಇಲ್ಲ.

ಪರಿಷತ್ತು ಸಾಹಿತ್ಯ ಕಾವ್ಯ ಲೀಲಾವಿನೋದದಲ್ಲಿ, ಕಾಂತಾ ಸಂಹಿತೆಯಲ್ಲಿ ಸಲ್ಲಾಪ ಮಾಡಲು ಇರುವ ಅಕಾಡೆಮಿಯಲ್ಲ. ಅದೊಂದು ವಿಶಿಷ್ಟ ಸಂಘಟನೆ. ಹಾಗಾಗಿಯೇ ಪರಿಷತ್ತಿಗೆ ಕಬ್ಬು ಕಡಿಯುವವರೂ, ಹೊಟೆಲಿನ ಮಾಣಿಗಳೂ ಇನ್ನೂ ಇತರರು ಸದಸ್ಯರಾಗಲು ಮುಕ್ತ ಅವಕಾಶ ಮತ್ತು ಹಕ್ಕು ಇರುವುದು.

ಭಾಷೆಯ ಬಗೆಗೆ ಒಂದು ರೀತಿಯ ಭಾವನಾತ್ಮಕ ಐಕ್ಯತೆಯನ್ನು ಸಾಧಿಸಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲವಾದರೂ ಅದರ ಸ್ಥಾಪನೆಯ ಮೂಲ ಉದ್ದೇಶವಾಗಿದ್ದ ಕನ್ನಡಿಗನ ಸರ್ವಾಂಗೀಣ ಅಭಿವೃದ್ಧಿಯ ವಿಚಾರದಲ್ಲಿ ಪರಿಷತ್ತು ಯಾವ ಸಕಾರಾತ್ಮಕ ಹೆಜ್ಜೆಗಳನ್ನೂ ಇಡಲಿಲ್ಲ.

ಪರಿಷತ್ತು ನೂರು ವರ್ಷಗಳನ್ನು ದಾಟಿ ಕುಳಿತಿರುವ ಸಂಸ್ಥೆ. ಕಾಲಕಾಲಕ್ಕೆ ಅದು ಕನ್ನಡಿಗರ ಬದುಕನ್ನು ಹಸನುಗೊಳಿಸುವ, ಕಾಪಾಡುವ ಸರ್ವಶಕ್ತ ಗುಣಗಳನ್ನು ರೂಢಿಸಿಕೊಂಡು ಬರಬೇಕಿತ್ತು. ಏಕೀಕರಣ ಸಂದರ್ಭವೊಂದನ್ನು ಬಿಟ್ಟರೆ ಪರಿಷತ್ತು ಗಮನಾರ್ಹವಾದ ಕ್ರಿಯಾಶೀಲತೆಯನ್ನೇ ತೋರಿಲ್ಲ. ಹಾಗೆ ಕನ್ನಡ ಸಮುದಾಯವನ್ನು ಅದರ ಎಲ್ಲ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಮಹತ್ವಗಳನ್ನು ಕಾಯ್ದುಕೊಂಡು ಹೋಗಲು ಬೇಕಾದಂಥ ಸರ್ವಶಕ್ತ ಗುಣಗಳನ್ನು ರೂಢಿಸಿಕೊಂಡು ಮುಂದುವರಿದಿದ್ದರೆ ಅದು ಇಂದು ಕರ್ನಾಟಕ ಸರ್ಕಾರದ ಮಂತ್ರಿಮಂಡಲಕ್ಕೆ ಸಮಾನಾಂತವಾದ ಸ್ಥಾನದಲ್ಲಿರಲು ಸಾಧ್ಯವಾಗುತ್ತಿತ್ತು. ಅದು ಚುನಾವಣಾ ರಾಜಕಾರಣವನ್ನು ಮಾಡದೆಯೇ ಅದರ ಮಾತುಗಳನ್ನು, ಅಭಿಪ್ರಾಯಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸುವುದಷ್ಟೇ ಅಲ್ಲ ಆಡಳಿತ ನಡೆಸುವಲ್ಲಿ, ಯೋಜನಾ ನೀತಿಗಳನ್ನು ರೂಪಿಸುವಲ್ಲಿ ಪರಿಷತ್ತಿನ ನಿಲುವುಗಳಿಗೆ ಮಾನ್ಯತೆ ಕೊಡಲೇಬೇಕಾಗುತ್ತಿತ್ತು. ದುರದೃಷ್ಟವಶಾತ್ ಪರಿಷತ್ತನ್ನು ಈ ದಿಕ್ಕಿನಲ್ಲಿ ಮುನ್ನಡೆಸಲು ಯಾರೂ ಮುಂದಾಗಲಿಲ್ಲ. ಹಾಗಾಗಿಯೇ ಪ್ರತಿ ಸಮ್ಮೇಳನದ ಕೊನೆಯಲ್ಲೂ ಹತ್ತಾರು ನಿಲುವಳಿಗಳನ್ನು ಮಂಡಿಸಲಾಗುತ್ತದೆ. ಅದೊಂದು ಯಾಂತ್ರಿಕ ಆಚರಣೆಯಾಗಿರುತ್ತದೆ. ಅವು ಎಂದೂ ಕಾರ್ಯರೂಪಕ್ಕೆ ಬರುವುದಿಲ್ಲ.

ಒಂದು ತಾಜಾ ಉದಾಹರಣೆಯನ್ನು ನೋಡೋಣ. ಪರಿಷತ್ತು ಒಂದು ಪ್ರಶಸ್ತಿಯನ್ನು ಸಾಕಿಕೊಂಡಿದೆ. ಅದರ ಜೊತೆಗೆ ಒಂದೆರಡು ಮರಿ ಪ್ರಶಸ್ತಿಗಳೂ ಉಂಟು. ವರ್ಷಕ್ಕೊಮ್ಮೆ ಕೊಡಮಾಡಲಾಗುವ ಆ ಪ್ರಶಸ್ತಿಯ ಮೊತ್ತ ಸುಮಾರು ಏಳೆಂಟು ಲಕ್ಷ ರೂಪಾಯಿಗಳು. ಇದು ಕಡಿಮೆ ಮೊತ್ತವಲ್ಲ. ಪರಿಷತ್ತಿನ ಸಾಕುಪ್ರಶಸ್ತಿಯಾದ ಇದಕ್ಕೆ ಮೂಲಧನವನ್ನು ಕೊಟ್ಟಿರುವವರು ಸಾರಿಗೆ ನೌಕರರು ಕೆಲಸ ಮಾಡುವ ಬಿಎಂಟಿಸಿ ಸಂಸ್ಥೆ. ಕೋಟ್ಯಂತರ ರೂಪಾಯಿಗಳ ಆ ಮೂಲಧನದಲ್ಲಿ ಈ ನೌಕರರ ದೇಣಿಗೆಯೂ ಇದೆ. ಈ ನೌಕರರು ಈಗ ತಮ್ಮ ಸಂಬಳದ ಹೆಚ್ಚಳಕ್ಕಾಗಿ ಒಂದು ಹೋರಾಟದಲ್ಲಿ ತೊಡಗಿದ್ದಾರೆ. ಈ ಕನ್ನಡ ನೌಕರರಿಗೂ ಪರಿಷತ್ತಿಗೂ ಯಾವ ಸಂಬಂಧವೂ ಇಲ್ಲವೆಂಬಂತೆ ಮೌನವಾಗಿರುವುದು ಒಂದು ವಿಪರ್ಯಾಸದಂತೆ ಕಾಣುವುದಿಲ್ಲವೇ ? ಈ ಸಾರಿಗೆ ನೌಕರರಲ್ಲಿ ಸಾವಿರಾರು ಜನ ಪರಿಷತ್ತಿನ ಸದಸ್ಯರಿರಬಹುದು. ಅವರ ಹೋರಾಟದ ನಾಯಕತ್ವವನ್ನು ಕಬ್ಬು ಕಡಿಯುವವರೇ ವಹಿಸಬೇಕಲ್ಲವೇ?

ಪರಿಷತ್ತು ಕೊಡಮಾಡುವ ಈ ಸಾಕುಪ್ರಶಸ್ತಿಯ ಬಹು ದೊಡ್ಡ ಮೊತ್ತವನ್ನು ಕನ್ನಡದ ಸುಪ್ರಸಿದ್ಧ ಲೇಖಕ ದೇವನೂರು ಮಹಾದೇವ ಅವರು ನಿರಾಕರಿಸಿದರು. ಅವರು ಕೊಟ್ಟ ಕಾರಣವೇನೆಂದರೆ ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿರುವಂತೆ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿಫಲಗೊಂಡಿದೆ ಎಂಬುದು. ಇದು ಪರಿಷತ್ತಿನಂಥ ಸಂಸ್ಥೆಗೆ ಅವಮಾನದ ಬದಲಿಗೆ ಕೇವಲ ಮರೆತುಬಿಡುವ ಮಾತಾಗಿತ್ತು! ಕನ್ನಡದ ಸಾಕ್ಷೀಪ್ರಜ್ಞೆಯಂತಿರುವ ಲೇಖಕನ ಮಾತು ಅಸಡ್ಡೆಗೊಳಗಾಯಿತು. ಕಡೇ ಪಕ್ಷ ಆ ಮಾತನ್ನೇ ಒಂದು ಮಾರ್ಗಸೂಚಿಯನ್ನಾಗಿ ಪರಿಗಣಿಸಿ ಪರಿಷತ್ತೇ ಸ್ವತಃ ಒಂದು ಮಾದರಿ ಕನ್ನಡ ಶಾಲೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಬಹುದಿತ್ತು. ಜಿಲ್ಲೆಗೊಂದು ತಾಲೂಕಿಗೊಂದು ಪರಿಷತ್ತಿನ ಶಾಖೆಗಳನ್ನು ತೆರೆದು ಅವುಗಳ ಚುನಾವಣೆಗಳನ್ನು ನಡೆಸುವುದಕ್ಕಿಂತಲೂ ಅಲ್ಲಲ್ಲಿ ಅಂಥ ಶಾಲೆಗಳನ್ನು ತೆರೆಯುವ ಪ್ರಯತ್ನ ಹೆಚ್ಚು ಉಪಯುಕ್ತವಾಗುತ್ತಿತ್ತು.

ಆಮೆಗಳು ನೂರಾರು ವರ್ಷಗಳವರೆಗೆ ಜೀವಿಸುತ್ತವಂತೆ. ಹಾಗೆಯೇ ಪರಿಷತ್ತು ಪ್ರಾಣಿ ಸಂಗ್ರಹಾಲಯದಲ್ಲಿರುವ ವಯಸ್ಸಾದ ಆಮೆಯಂತೆ ಕಾಣಿಸುತ್ತದೆ. ಅದನ್ನು ನೋಡಿಕೊಳ್ಳುವವನು ತರುವ ಆಹಾರಕ್ಕಾಗಿ ಕಾಯುತ್ತಾ ಕಾಲಕಳೆಯುತ್ತದೆ. ಚುನಾವಣೆಯ ಸಂದರ್ಭದಲ್ಲಿ ಸ್ವಲ್ಪ ಸುದ್ದಿಯಲ್ಲಿರುವ ಪರಿಷತ್ತು ಮತ್ತೆ ಸುದ್ದಿಗೆ ಬರುವುದು ಅದರ ವಾರ್ಷಿಕ ಸಮ್ಮೇಳನಗಳೆಂಬ ಜಾತ್ರೆಯ ದಿನಗಳಲ್ಲಿ ಮಾತ್ರ. ವಾರ್ಷಿಕ ಸಮ್ಮೇಳನಕ್ಕಾಗಿ ಸರ್ಕಾರ ನೀಡುವ ಅನುದಾನಕ್ಕಾಗಿ ಆಮೆಯಂತೆ ಕಾದು ಅದು ಖರ್ಚಾದ ನಂತರ ಮತ್ತೆ ಕಾಯುತ್ತ ಕೂರುತ್ತದೆ. ಆರ್ಥಿಕ ಸಬಲತೆಯ ಕಡೆಗೆ ಪರಿಷತ್ತು ಯೋಚಿಸುವುದೇ ಇಲ್ಲ. ಇನ್ನು ಕನ್ನಡಿಗನನ್ನು ಸಬಲನನ್ನಾಗಿ ಮಾಡುತ್ತದೆಂಬ ನಿರೀಕ್ಷೆಗೆ ಯಾವ ಅರ್ಥವೂ ಇರುವುದಿಲ್ಲ. ಇನ್ನು ಸಾಹಿತ್ಯದ ಅಭಿವೃದ್ಧಿಗೆ ಪರಿಷತ್ತು ಏನಾದರೂ ಮಾಡಿದೆಯೇ ಎಂದು ನೋಡಿದರೂ ನಿರಾಶೆಯೇ ಕಾದಿರುತ್ತದೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ತೆಗೆದುಕೊಂಡ ಕನ್ನಡ-ಕನ್ನಡ ನಿಘಂಟು ಮತ್ತು ಕೆಲವು ಪ್ರಕಟಣೆಗಳನ್ನು ಹೊರತುಪಡಿಸಿ ಬೇರೇನೂ ಮಹತ್ವಪೂರ್ಣ ಕೆಲಸವಾಗಿಲ್ಲ. ಇದಕ್ಕೆಲ್ಲ ಬೇಕಾದ ಹಣಕಾಸು ಇಲ್ಲವೆಂಬುದು ಸಿದ್ಧ ಉತ್ತರವಾಗಿರುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತು ಎಂಬುದು ಕನ್ನಡ ಜನಾಂಗದ, ಕನ್ನಡ ಧರ್ಮದ ಒಂದು ಕನ್ನಡ ಮಠ ಎಂಬುದನ್ನು ಪ್ರತಿವರ್ಷ ಮಠಮಾನ್ಯಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡುವಂತೆ ಈ ಮಠಕ್ಕೂ ಮೀಸಲು ತೆಗೆದಿಡಬೇಕೆಂದು ಸರ್ಕಾರದ ಬುದ್ಧಿಗೆ ತಿಳಿಯುವಂತೆ ಮನವರಿಕೆ ಮಾಡಿಕೊಡುವ ಶಕ್ತಿ ಪರಿಷತ್ತಿಗೆ ಬರುತ್ತದೆಯೇ ಅಥವಾ ಎಂದಿನಂತೆ ವಾರ್ಷಿಕ ಜಾತ್ರೆಗೆಷ್ಟು ಬೇಕೋ ಅಷ್ಟನ್ನು ಬೇಡುತ್ತಾ ಕೂರುತ್ತದೆಯೊ ತಿಳಿಯುವುದಿಲ್ಲ.

ಪರಿಷತ್ತು ನಾಲ್ಕೂವರೆ ಕೋಟಿ ಕನ್ನಡಿಗರ ಗರ್ಭಗುಡಿಯೆಂಬುದು ಕೇವಲ ಒಂದು ಭಾವನಾತ್ಮಕ ನಂಬಿಕೆ ಅಷ್ಟೆ. ಸರ್ವರನ್ನೂ ಒಳಗೊಳ್ಳುವ ಕೆಲಸವಾಗಬೇಕಾದರೆ ದೊಡ್ಡರಂಗೇ ಗೌಡ, ಸಿದ್ದಲಿಂಗಯ್ಯ, ವೆಂಕಟೇಶಮೂರ್ತಿ, ಕಂಬಾರ ಮುಂತಾದವರನ್ನು ಜಪಿಸುವ ಹಾಗೆ ಯು ಆರ್ ರಾವ್, ಜಿ ಆರ್ ವಿಶ್ವನಾಥ್, ಸಿ ಎನ್ ಆರ್ ರಾವ್, ಹೆಚ್ ನರಸಿಂಹಯ್ಯ, ಪ್ರಕಾಶ್ ಪಡುಕೋಣೆ, ಜನರಲ್ ತಿಮ್ಮಯ್ಯ, ಸಾಲುಮರದ ತಿಮ್ಮಕ್ಕ, ಶಿವಕುಮಾರ ಸ್ವಾಮಿಜಿ, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್… ಹೀಗೆ ಗತಿಸಿದ ಮತ್ತು ಬದುಕಿರುವ ನೂರಕ್ಕೂ ಹೆಚ್ಚು ಕನ್ನಡ ಶಲಾಕಾ ಪುರುಷರ ಹೆಸರುಗಳನ್ನು ಹೇಳಬಹುದು…. ಅಂಥವರನ್ನು ಯಾವಾಗ ಪರಿಷತ್ತಿನ ವಾರ್ಷಿಕ ಸಮ್ಮೇಳನಗಳ ಅಧ್ಯಕ್ಷರುಗಳನ್ನಾಗಿ ಆರಿಸುವುದಿಲ್ಲವೋ ಅಲ್ಲಿಯವರೆಗೆ ಪರಿಷತ್ತು ಪಾರ್ಶ್ವವಾಯು ಪೀಡಿತ ಆಮೆಯಂತೆ ಬದುಕುತ್ತಿರುತ್ತದೆ.

ಈಗ ಮತ್ತೆ ಪರಿಷತ್ತು ಚುನಾಣೆಯ ಕಾರಣಕ್ಕೆ ಸುದ್ದಿಯಲ್ಲಿದೆ. ಯಾರು ಗೆದ್ದರೂ ಅದರ ಸ್ವರೂಪ ಬದಲಾಗುವ ಹಾಗೆ ಕಾಣುವುದಿಲ್ಲ. ಮರ್ಜಿಗೆ, ಕಾಟಾಚಾರಕ್ಕೆ ಮತ ಚಲಾಯಿಸುವ ಮಂದಿ ಬೇಕಾದಷ್ಟು ಮತದಾರರಿದ್ದಾರೆ. ಮತ ಚಲಾಯಿಸದೇ ಇರುವವರೂ ಲೆಕ್ಕವಿಲ್ಲದಷ್ಟು ಜನರಿದ್ದಾರೆ. ಆದರೆ ಪಕ್ಷ ರಾಜಕಾರಣವನ್ನೂ ಮೀರಿಸುವಂಥ ಚುನಾವಣಾ ಸ್ವರೂಪವನ್ನು ನಾವು ಕಾಣುತ್ತಿದ್ದೇವೆ. ಅದಕ್ಕೆ ಯಾರೂ ಆಶ್ಚರ್ಯಪಡಬೇಕಾಗಿಲ್ಲ. ಯಾಕೆಂದರೆ ನಮಗೆ ರಾಜಕೀಯ ಪಕ್ಷಗಳ ಚುನಾವಣೆಗಳಿಗೂ ಪರಿಷತ್ತಿನ ಚುನಾವಣೆಗಳಿಗೂ ಯಾವ ವ್ಯತ್ಯಾಸವೂ ಕಾಣುತ್ತಿಲ್ಲ.