‘ಥ್ಯಾಂಕ್ಸ್ ಗಿವಿಂಗ್’ ಈ ನೀಳ್ಗತೆಯನ್ನು ಬರೆದು ಸುಮಾರು ಎಂಟುವರ್ಷಗಳೇ ಆಗಿವೆ. ‘ಹಿಜಾಬ್’ ಕಾದಂಬರಿಯ ಬರವಣಿಗೆ ನನ್ನನ್ನು ಬಸವಳಿಸಿತ್ತು. ಕೆಲವೊಮ್ಮೆ ಏನೂ ಬರೆಯಲಾರೆ ಅನ್ನಿಸಿತ್ತು. ತಿಂಗಳುಗಟ್ಟಲೆ ಬರವಣಿಗೆಯನ್ನು ನಿಲ್ಲಿಸಿದ್ದೆ. ಅದನ್ನು ಮರು ಉದ್ದೀಪನಗೊಳಿಸಿಕೊಳ್ಳಲು ಅದಕ್ಕೆ ವಸ್ತು, ವಿಷಯ ಮತ್ತು ನಿರೂಪಣೆಯಲ್ಲಿ ಸಂಪೂರ್ಣ ಬೇರೆಯಾಗಿರುವುದನ್ನು ಬರೆಯಬೇಕೆನ್ನಿಸಿತು. ಆ ಸಮಯದಲ್ಲಿ ಮೂಡಿಬಂದದ್ದು ‘ಥ್ಯಾಂಕ್ಸ್ ಗಿವಿಂಗ್’.
ಗುರುಪ್ರಸಾದ್ ಕಾಗಿನೆಲೆ ಬರೆದ ಹೊಚ್ಚಹೊಸ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್” ಕೆಂಡಸಂಪಿಗೆಯಲ್ಲಿ ಕೆಲವು ಕಂತುಗಳಲ್ಲಿ ಪ್ರತಿ ಶನಿವಾರ ಪ್ರಕಟವಾಗಲಿದೆ
‘ಶಾರದತ್ತೆ ಒಬ್ಬಾಕೇನ ಅಲ್ಲಿ ಬಿಟ್ಟು ನಾ ಇಲ್ಲಿಗೆ ಬಂದು ಅನಾಥಳನ್ನಾಗಿ ಮಾಡಿದೆ. ಇಲ್ಲಿ ಇಷ್ಟು ದಿನ ಇದ್ದು ಈಗ ಇರೋ ಮಕ್ಕಳನ್ನು ಬಿಟ್ಟು ವಾಪಸ್ ಭದ್ರಾವತಿಗೆ ಹೋದರೆ ಇವುಗಳನ್ನು ಅನಾಥರನ್ನಾಗಿ ಮಾಡಿದ ಹಾಗಲ್ವಾ? ಇವಕ್ಕೂ ನಮ್ಮನ್ನು ಬಿಟ್ಟರೆ ಯಾರಿದಾರೆ, ಕಷ್ಟ ಸುಖಕ್ಕೆ? ಆದರೆ, ಸಾಯೋ ಕಾಲದಲ್ಲಿ ಶಾರದತ್ತೆ ಪರಾಧೀನ ಆಗ್ತಾಳಲ್ಲ ಅಂತ ಮನಸ್ಸು ತಡೆಯಲ್ಲ, ನೋಡಿ’ ಸುಕನ್ಯ, ದೇಶ ಬಿಟ್ಟು ಬಂದಿರುವವರನ್ನೆಲ್ಲಾ ಸತತವಾಗಿ ಕಾಡುತ್ತಿರುವ ಜಿಜ್ಞಾಸೆಯನ್ನು ತಾನು ಮೊದಲ ಬಾರಿಗೆ ಆವಿಷ್ಕಾರ ಮಾಡಿದವಳಂತೆ ಹೇಳಿದಳು.
ಅದು ಹಾಗೆಯೇ ಅಲ್ಲವೇ, ಸಾರ್ವಕಾಲಿಕ ಸತ್ಯಗಳೂ ಸ್ವತಃ ಅನುಭವವಾಗದೇ ವಿದಿತವಾಗುವುದಿಲ್ಲ.
ಅರವಿಂದ ಹ್ಯಾಲೋವೀನಿಗೆಂದು ಹಾಕಿದ ಅಲಂಕಾರಗಳನ್ನು ತೆಗೆಯುತ್ತಿದ್ದ. ಒಡೆದ ಕೆಂಪು ಕುಂಬಳಗಳು ಶೀತಕ್ಕೆ ಹೆಪ್ಪುಗಟ್ಟಿದ್ದವು. ಅವುಗಳನ್ನು ಒಂದು ಕಸದ ಚೀಲಕ್ಕೆ ಹಾಕಿ ಪಕ್ಕಕ್ಕಿಟ್ಟು ಮನೆಯ ಅಂಗಳವನ್ನು ಗುಡಿಸುತ್ತಿದ್ದ. ಮುಂದಿನ ಲಾನಿನಲ್ಲಿದ್ದ ಮೇಪಲ್ ಮರದಿಂದ ಬಿದ್ದ ಎಲೆಗಳನ್ನು ಗುಡಿಸಿ ಓರಣ ಮಾಡುತ್ತಿದ್ದಳು, ಸುಕನ್ಯ. ನವೆಂಬರದ ಈ ಚಳಿಯಲ್ಲಿ ಮನೆಯ ಹೊರಗೆ ಲಾನಿನ, ಕೈದೋಟದ ಕೆಲಸಗಳನ್ನು ಮಾಡುವುದು ಸುಕನ್ಯಾಳಿಗೆ ಯಾವತ್ತೂ ಮೆಚ್ಚಿನ ಕೆಲಸವಾಗಿರಲಿಲ್ಲ. ತೋಟ ಕೈಯಾಡುವ ಹುಡುಗ ಕಳೆದ ವಾರ ಬಂದು ಮಿನೆಸೊಟಾದ ಈ ಶರದ್‌ಕಸವನ್ನು ಒಪ್ಪ ಮಾಡಿ ಹೋಗಿದ್ದರೂ ಮತ್ತೆ ಮತ್ತೆ ಬೀಳುವ ಎಲೆಗಳನ್ನು ಸವರಿ ಗುಡಿಸಿಡಲೇ ಬೇಕಾಗಿತ್ತು. ಅರವಿಂದನಿಗೆ ಹೃದಯಾಘಾತವಾದ ಮೇಲೆ ಹಿಮಸವರುವುದು, ಹುಲ್ಲಿನ ಸಪಾಟು, ಕೈದೋಟದ ಕಳೆ ಕೀಳುವುದು- ಎಲ್ಲ ಕೆಲಸಗಳೂ ಸುಕನ್ಯಳ ಪಾಲೇ. ಜತೆಗೆ ರತ್ನ ಇರುವುದರಿಂದ ಪರವಾಗಿಲ್ಲ. ಹೇಗೋ ನಡೆದು ಹೋಗುತ್ತಾ ಇದೆ.
ಕುಂಬಳಗಳನ್ನು ಕಸಕ್ಕೆ ಹಾಕಿ, ಮರಕ್ಕೆ ಹಾಕಿದ ಹ್ಯಾಲೋವೀನಿನ ಅಸ್ಥಿಪಂಜರ, ವ್ಯಾಂಪೈರುಗಳ ಪ್ರತಿಕೃತಿಗಳನ್ನು ಮಡಿಸಿ ಇನ್ನೊಂದು ಪ್ಲಾಸ್ಟಿಕ್ ಚೀಲದಲ್ಲಿಟ್ಟು ‘ಮತ್ತೆ ಮುಂದಿನ ವರ್ಷದ ತನಕ ಇದರ ತಂಟೇಗೆ ಹೋಗೋದಿಲ್ಲ’ ಎಂದು ನಿರಾಳವಾಗಿ ಉಸಿರಾಡಿ ಎಲ್ಲವನ್ನೂ ಬೇಸ್‌ಮೆಂಟಿಗೆ ಸೇರಿಸಿ, ಬೆಚ್ಚಗಿನ ಸನ್‌ರೂಮಿಗೆ ಹೋಗಿ ಲ್ಯಾಪ್‌ಟಾಪನ್ನು ತೆಗೆದು ನ್ಯೂಯಾರ್ಕ್ ಟೈಮ್ಸಿನ ಒಪೆಡ್ ಕಾಲಮನ್ನು ನೋಡುತ್ತಾ ಕುಳಿತ. ಸುಕನ್ಯ ಆತನನ್ನು ಒಮ್ಮೆ ದಿಟ್ಟಿಸಿ ನೋಡಿದಳು. ಕ್ರಿಸ್‌ಮಸ್ ಮರದ ಪ್ರಿಂಟಿದ್ದ ಸ್ವೆಟರ್, ಕುತ್ತಿಗೆಗೆ ಕಟ್ಟಿದ್ದ ಕೆಂಪು ಮಫ್ಲರು, ಪ್ರೊಗ್ರೆಸಿವ್ ಲೆನ್ಸೆಂಬ ದುಬಾರಿ ಬೈ ಫೋಕಲ್, ಕೆರೆಯದ ಒಂದು ದಿನದ ದಾಡಿ- ಅರವಿಂದ ಇನ್ನೂ ಹತ್ತು ವರ್ಷ ಹೆಚ್ಚು ವಯಸ್ಸಾದವನಂತೆ ಕಾಣುತ್ತಿದ್ದ. ಒಳಗೆ ಬಂದ ಸುಕನ್ಯ ಇತ್ತಲಿಂದ ನೋಡಿದಾಗ ಕನ್ನಡಕದಾಚೆಗಿನ ಅವನ ಕಣ್ಣುಗಳು ಆಕ್ವೇರಿಯಂನ ಹೊರಗಿನಿಂದ ಯಾವುದೋ ಕೆಟ್ಟ ಕೋನದಲ್ಲಿ ನೋಡಿದಾಗ ಕಾಣುವ ಮೀನಿನ ದೇಹದ ಅಷ್ಟಾವಕ್ರ ಭಾಗದಂತೆ ಕಾಣಿಸಿತು.
ಅವನ ಕನ್ನಡಕವನ್ನು ಹಿಂದೆ ಸರಿಸಿ ‘ಈ ಕನ್ನಡಕಕ್ಕೆ ಪ್ರೋಗ್ರೆಸಿವ್ ಅಂಥ ಹೇಳೊಕ್ಕೆ ಒಂದು ಕಾರಣ ಇದೆ. ಚಾಳೀಸಿನ ತರ ಮೂಗಿನ ತುದೀಗೆ ಹಾಕ್ಕೊಳೋದಕ್ಕೆ ಎರಡು ಸಾವಿರ ಡಾಲರ್ ಖರ್ಚು ಮಾಡಿ ತಗೋಬೇಕಾ? ವಾಲ್‌ಮಾರ್ಟಿನ ಯಾವುದಾದರೂ ರೀಡಿಂಗ್ ಗ್ಲಾಸಸ್ ತಗಂಡಿದ್ರೆ ಸಾಕಿತ್ತು. ಮೊದಲು ಶೇವ್ ಮಾಡಿಕೊಳ್ಳಿರಿ ಮಾರಾಯ್ರಾ, ನೋಡಕ್ಕಾಗಲ್ಲ ನಿಮ್ಮನ್ನ. ಇದೆಂಥ ಅವತಾರ ನಿಮ್ಮದು, ಮಕ್ಕಳು ಬಂದುಬಿಡ್ತಾರೆ. ಬೇಗ ಸ್ನಾನ ಮಾಡಿ ರೆಡಿಯಾಗಿ. ಬೇರೆ ಸ್ವೆಟರ್ ಹಾಕ್ಕೊಳ್ಳಿ. ಇದು ಥ್ಯಾಂಕ್ಸ್‌ಗೀವಿಂಗು. ಕ್ರಿಸ್‌ಮಸ್ಸಿಗೆ ಇನ್ನೂ ಒಂದು ತಿಂಗಳು ಟೈಮಿದೆ. ನೀವಂತೂ ಒಂಚೂರು ಚಳೀ ಬಿದ್ದ ತಕ್ಷಣ ಕ್ರಿಸ್‌ಮಸ್ ಸ್ವೆಟರ್ ಹಾಕ್ಕೊಂಡು ಕೂತುಬಿಡ್ತೀರ’ ಮಾತಾಡುತ್ತಲೇ ಹತ್ತಿರ ಬಂದು ಅವನ ಭುಜದ ಮೇಲೆ ಕೈಯಿಟ್ಟು ಅವನ ಕಣ್ಣುಗಳನ್ನೇ ನೋಡುತ್ತಾ ‘ಹಾಗಾದರೆ, ನಿಮ್ಮದು ಇದೇ ಕೊನೆಯ ನಿರ್ಧಾರವಾ? ಅಥವಾ ವಿನೂ, ವಿಶೂ, ಅಲಿಶಾಳನ್ನು ಒಂದು ಮಾತು ಕೇಳ್ತೀರೋ?’ ಎಂದಳು.
ಹೆಂಡತಿಯ ಈ ಅನಿರೀಕ್ಷಿತವಾದ ಪ್ರಶ್ನೆಗೆ ಕೊಂಚ ತಡವರಿಸಿ ಅರವಿಂದ ‘ಕೇ.. ಕೇಳೋಣ, ಮಾರಾಯ್ತೀ. ನಾನೀಮನೇಲಿ ಯಾವತ್ತು ಒಬ್ಬನೇ ನಿರ್ಧಾರ ಮಾಡಿದ್ದೀನಿ. ನನ್ನ ಮನಸ್ಸಲ್ಲಿರೋದನ್ನಂತೂ ಸ್ಪಷ್ಟವಾಗಿ ಹೇಳಿಬಿಡ್ತೀನಿ. ನೋಡೋಣ, ಮಕ್ಕಳು ಏನಂತಾರೆ, ಅಂತ. ತಿನ್ನೋಕೆ ಏನಾದರೂ ಇದೆಯಾ? ಹೊಟ್ಟೆ ಕರಕರ ಅಂತಿದೆ’ ಎಂದು ವಿಷಯ ಬದಲಿಸಲು ಪ್ರಯತ್ನಿಸಿದ.
‘ಯಾಕೆ, ಹಸಿವೇನ್ರೀ? ಹೀಗೆ ಹೊತ್ತಲ್ಲದ ಹೊತ್ತಲ್ಲಿ ಏನಾರ ತಿಂದೇ ನಿಮ್ಮ ಆರೋಗ್ಯ ಹಾಳಾಗಿರೋದು. ರತ್ನಾ, ಎರಡು ಲೋಟ ಬಿಸಿಬಿಸಿ ಕಾಫಿ ಮಾಡೊಕಾಗುತ್ತಾ? ಹಾಗೇ ಅಡಿಗೇಮನೆ ಫ್ರಿಜ್ಜಲ್ಲಿ ಕಾಂಗ್ರೆಸ್ ಕಡ್ಲೇಕಾಯಿ ಬೀಜದ ಪ್ಯಾಕೆಟ್ ಇದೆ. ಅದನ್ನು ಒಂದು ಬೌಲಿಗೆ ಹಾಕಿ ಮೈಕ್ರೋವೇವಲ್ಲಿ ಒಂದು ಇಪ್ಪತ್ತು ಸೆಕೆಂಡು ಬೆಚ್ಚಗೆ ಮಾಡಿಕೊಂಡು ತಗಂಬಾ. ಬೌಲ್‌ಗಳನ್ನು ಕ್ಲಾಸೆಟ್ಟಿಂದ ತೆಗೀಬೇಕಾದರೆ ಹುಷಾರು. ಕೈ ತಪ್ಪಿ ಬಿದ್ದುಬಿಟ್ಟಾವು. ಬಹಳ ದುಬಾರಿ ಅವು. ಪ್ಯಾಕೆಟ್ಟಿಂದ ಕಡ್ಲೇಬೀಜ ತೆಗೆದಮೇಲೆ ಉಳಿದದ್ದನ್ನು ಒಂದು ಸಣ್ಣ ಪರ್ಲ್‌ಪೆಟ್ ಡಬ್ಬದಲ್ಲಿ ಹಾಕಿಡು. ಡಬ್ಬೀನ ಗಾಳಿ ಹೋಗದಹಾಗೆ ಭದ್ರವಾಗಿ ಮುಚ್ಚು. ಇಲ್ಲದಿದ್ದರೆ ಕಡ್ಲೇಬೀಜ ಮೆತ್ತಗಾಗಿಬಿಡುತ್ತೆ. ಗರಾಜಿನಲ್ಲಿರೋ ಫ್ರಿಜ್ಜಲ್ಲಿ ಬೆಣ್ಣೆ ಮುರುಕು, ಹುರಿಗಾಳು, ಹುಳಿಯವಲಕ್ಕಿ, ಹೆಸರುಬೇಳೆ, ಎಲ್ಲ ಇದೆ. ಹಾಗೇ ಅವನ್ನೂ ತೆಗೆದು ಹೊರಗಿಟ್ಟುಬಿಡು. ವಿನೂ, ವಿಶೂ ಇಬ್ಬರಿಗೂ ಇಷ್ಟ. ವಿಶೂ ಯಾರೋ ಹೊಸಾ ಸ್ನೇಹಿತನ್ನ ಬೇರೆ ಕರಕಂಡು ಬರ್ತಾ ಇದಾನಂತೆ. ಇನ್ನೇನು ವಿನಯ್, ಅಲಿಶಾ ಬಂದುಬಿಡ್ತಾರೆ. ಅಲಿಶಾಗೆ ಥ್ಯಾಂಕ್ಸ್‌ಗಿವಿಂಗಿಗೆ ಟರ್ಕಿಕೋಳಿ ಮಾಡ್ಸ್ಬೇಕಂತೆ, ವಿನಯ ಮೊನ್ನೆ ಫೋನ್ ಮಾಡಿದಾಗ ಹೇಳಿದ್ದ. ನಾನು ಇದೇನು ಗ್ರಹಚಾರವಪ್ಪಾ ಅಂತ ಯೋಚಿಸ್ತಿರ್ಬೇಕಾದ್ರೆ ಅವ್ನೇ ಪರಿಹಾರಾನೂ ಹೇಳ್ಬಿಟ್ಟ. ನಾನೇನೂ ಚಿಂತೆ ಮಾಡಬಾರದಂತೆ. ಅವನೇ ಪಕ್ಕದ್ಮನೆ ಶೆರಿಲ್‌ಗೆ ಫೋನ್ ಮಾಡಿ ಹೇಳಿದಾನಂತೆ. ಆಕೆಯೇ ಮಾಡಿ ಕಳಿಸ್ತಾಳಂತೆ. ನಾವು ಈ ದೇಶಕ್ಕೆ ಬಂದ ಹೊಸ್ತರಲ್ಲಿ ಬರೇ ಕುಂಬಳಕಾಯಿ ಹಲ್ವಾ ಮಾಡಕೊಂಡು ಥ್ಯಾಂಕ್ಸ್‌ಗಿವಿಂಗ್ ಮಾಡ್ತಾ ಇದ್ವಿ. ದೀಪಾವಳೀನೂ ಇದೇ ಟೈಮಲ್ಲಿ ಬರುತ್ತೆ ಅಂತ ಫಸ್ಟ್‌ಕ್ಲಾಸಾಗಿ ಹೋಳಿಗೇನೂ ಮಾಡ್ತಿದ್ದಿವಿ. ಈಗ ಪಕ್ಕದ್ಮನೇಯಿಂದ ಟರ್ಕಿ ಪಾರ್ಸೆಲ್ ಬರುತ್ತಂತೆ. ರಾಮರಾಮ, ಇನ್ನೂ ಏನೇನು ಕಾಣಬೇಕೋ ಈ ಜನ್ಮದಲ್ಲಿ. ಅಲ್ಲವೇ, ರತ್ನಾ, ತಾಳು ನಾನೇ ಬಂದೇ’ ರತ್ನಾ ಕಾಂಗ್ರೆಸ್ ಕಡ್ಲೆಕಾಯಿಬೀಜ ಸಿಗದೆ ಫ್ರಿಜ್ಜೆಲ್ಲ ಹುಡುಕುತ್ತಿದ್ದಾಗ ತಾನೇ ಹುಡುಕಲು ಧಡಕ್ಕನೆ ಎದ್ದಳು. ಏಕ್‌ದಂ ಎದ್ದಿದ್ದಕ್ಕೋ ಏನೋ ತಲೆ ಗಿಮ್ಮೆಂದು ಮತ್ತೆ ಕೆಳಗೆ ಸೋಫಾದ ಮೇಲೆ ಧೊಪ್ಪೆಂದು ಕೂತಳು.
ಅರವಿಂದನಿಗೆ ತಾನು ಯಾಕಾದರೂ ಹಸಿವಾಗಿದೆ ಎಂದು ಕೇಳಿದೆನೋ ಅನಿಸಿತು. ‘ನಿಧಾನ, ನಿಧಾನ, ಸುಕನ್ಯಾ. ಹಿಂದೆ ಮುಂದೆ ನೋಡಿ ಕೆಲಸ ಮಾಡು. ವಯಸ್ಸೇನು ಕಡಿಮೆ ಆಯ್ತಾ? ಡಾಕ್ಟ್ರು ಏಳಬೇಕಾದರೆ ನಿಧಾನಕ್ಕೆ ಏಳು ಅಂತ ಹೇಳಿದ್ದರೂ ಅದನ್ನು ನಿರ್ಲಕ್ಷ್ಯ ಮಾಡ್ತೀಯಾ. ತಾಳು, ನಾನೇ ತರ್ತೀನಿ’ ಎಂದು ಎದ್ದ.
“ಕೌಟುಂಬಿಕತೆಗಿಂತ ಮನುಷ್ಯರನ್ನು ಒಟ್ಟುಹಿಡಿಯುವ ಬಂಧ ಬೇರಿಲ್ಲ ಎಂದು ನಾನು ಬಲವಾಗಿ ನಂಬಿದ್ದೇನೆ. ಬೇರೆ ಬೇರೆ ನಂಬಿಕೆ, ಧೋರಣೆ, ಮನಸ್ಥಿತಿ ಹಾಗೂ ರಾಗ ದ್ವೇಷಗಳನ್ನು ಕುಟುಂಬ ಎನ್ನುವ ವ್ಯವಸ್ಥೆ ಕೆಲಮಟ್ಟಿಗಾದರೂ ಕಾಪುತ್ತದೆ ಇಲ್ಲವಾದಲ್ಲಿ ಕಾಪಬೇಕು ಎನ್ನುವುದು ನನ್ನ ಅಭೀಪ್ಸೆ, ಅಭಿಮತ. ಅದರ ಒಂದು ಸಣ್ಣ ಹುಡುಕಾಟ, ಪ್ರಯತ್ನ- ಥ್ಯಾಂಕ್ಸ್ ಗಿವಿಂಗ್”
ಕಳೆದ ಆರು ತಿಂಗಳಿಂದ ಸುಕನ್ಯಳಿಗೆ ಕುಳಿತವಳು ಏಕ್‌ದಂ ಎದ್ದರೆ ಬವಳಿ ಬಂದ ಹಾಗಾಗುತ್ತಿತ್ತು. ಕೈ ಮೈ ಎಲ್ಲ ರಾತ್ರಿಯ ಹೊತ್ತು ಜುಮಜುಮ ಎನ್ನುತ್ತಿತ್ತು. ಡಾಕ್ಟರುಗಳು ನೂರಾರು ಟೆಸ್ಟುಗಳನ್ನು ಮಾಡಿ ನಿಮಗೆ ಏಕ್‌ದಮ್ ಎದ್ದರೆ ಬೀಪಿ ಕಮ್ಮಿ ಆಗುತ್ತದೆ, ಬೇರೆ ಏನೂ ಇಲ್ಲ, ಸಾವಕಾಶವಾಗಿ ಕೆಲಸ ಮಾಡಿ ಎಂದು ಹೇಳಿದ್ದರು. ಸುಕನ್ಯಾ ಆದಷ್ಟು ಸಾವಕಾಶವಾಗಿ ಕೆಲಸ ಮಾಡುತ್ತಿದ್ದರೂ ಇಂಥ ಧಾವಂತದ ಕ್ಷಣಗಳಲ್ಲಿ ಅನಾಹುತವಾಗಿಬಿಡುತ್ತಿತ್ತು. ಒಂದೆರಡು ಬಾರಿ ಕಣ್ಣು ಕತ್ತಲು ಬಂದು ಬಚ್ಚಲುಮನೆಯಲ್ಲಿ ಬಿದ್ದಿದ್ದೂ ಇದೆ. ಆದರೆ, ಅದು ಅರವಿಂದನ ಗಮನಕ್ಕೆ ಬರದ ಹಾಗೆ ತಾನೇ ಸಂಭಾಳಿಸಿಕೊಂಡುಬಿಟ್ಟಿದ್ದಳು.
‘ಬೇಡಬೇಡ. ನಿಮಗೆ ಗೊತ್ತಾಗೊಲ್ಲ. ರತ್ನಾ ತರ್ತಾಳೆ. ಅಲ್ಲೇ ಇದೆ, ನೋಡು ರತ್ನಾ, ಸಿಗ್ತಾ. ಸರಿ. ಹಾಗೇ ಅಂಗಡಿಗೆ ಹೋಗಿ ಕೊಂಚ ತರಕಾರಿ ತಗಂಬರ್ತೀಯಾ? ಇವರಿಗೆ ಫ್ರೆಶ್ ತರಕಾರಿ ಯಾವುದು ಅಂತ ಗೊತ್ತಾಗೊಲ್ಲ. ಆ ಗುಡ್ ಫುಡ್ ಸ್ಟೋರಿಗೇ ಹೋಗು, ನಾಮ್‌ಧಾರಿಯಿಂದ ತರಿಸಿರ್ತಾನೆ. ನೋಡಿ ತಗೋ. ಡ್ರೈವಿಂಗ್ ಹುಷಾರು. ಆ ಕಡೇ ಈ ಕಡೇ ನೋಡ್ತಾ ಗಾಡಿ ಬಿಡಬೇಡ, ಫೋನ್ ತಗಂಡು ಹೋಗು. ಏನ್ರೀ ರಾಯರೇ, ನಿಮ್ಮದು ರಾತ್ರಿಗೆಲ್ಲ ರೆಡಿ ಇದ್ಯಾ? ನೀವು ಊಟದ ಸಮಯಕ್ಕೆ ಯಾವುದೋ ಕೆಟ್ಟ ಓಪನ್ ಮಾಡಕ್ಕಾಗದೇ ಇರೋ ಸ್ಕಾಚ್ ಬಾಟಲ್ ಹಿಡ್ಕಂಡು ಒದ್ದಾಡಬೇಡಿ. ಅದಕ್ಕೆ ಬೇಕಾದ್ರೆ, ಬೇಗ ಒಂದು ರೌಂಡು ಹೋಗಿ ಬಂದುಬಿಡಿ. ನಾನು ಒಂದು ಕೇಸು ಕೆಬರ್ನೆ ಹಿಡಕೊಂಡು ಬಂದೆ. ಅಲಿಶಾ ಹೇಗೂ ಬಸುರಿ. ಆಕೆ ಕುಡಿಯೋ ಹಾಗಿದ್ರೆ ಕಷ್ಟ. ಮಹಾ ಕುಸಬಷ್ಟಿಯವಳಾಕೆ. ಅವಳಿಗೆ ಮಾತ್ರ ಪೂರೈಸಕ್ಕಾಗಲ್ಲಪ್ಪ, ನಂಕೈಲಿ’
‘ಸೂ’ ಆಕೆಯ ಮುಂದೆ ಕೂತು ಆಕೆಯ ಗಲ್ಲವನ್ನು ಕೈಯಿಂದ ಮೇಲೆತ್ತಿ ಆಪ್ತವಾಗಿ ಕೇಳಿದ, ಅರವಿಂದ. ಆಪ್ತ ಏಕಾಂತದಲ್ಲಿ ಸುಕನ್ಯಾ ‘ಸೂ’ ಆಗುತ್ತಿದ್ದಳು, ಅರವಿಂದನಿಗೆ. ‘ಯಾಕಿಷ್ಟು ಗಡಿಬಿಡಿ, ಟೆನ್ಷನ್ನು? ಆರಾಮಾಗಿರು. ನಮ್ಮ ಮಕ್ಕಳೇ ಅಲ್ವಾ ಬರ್ತಿರೋದು. ಬೇರೆ ಯಾರೋ ಬರ್ತಾ ಇಲ್ವಲ್ಲ?’
ಸುಕನ್ಯಾಳ ತುಂಬಿದ ಕಣ್ಣಾಲಿಗಳಿಂದ ಪಳಕ್ಕನೆ ಎರಡು ಹನಿ ಕೆಳಗೆ ಬಿದ್ದವು. ‘ನಮ್ಮ ಮಕ್ಕಳು ಇಷ್ಟು ಬೇಗ ಬೇರೆ ಯಾರೋ ಗುರುತೇ ಇಲ್ಲದ ಅತಿಥಿಗಳ ತರ ಆಗಿಹೋದ್ರಲ್ರೀ?’
‘ಹುಚ್ಚಿ. ಮಕ್ಕಳು ಮಕ್ಕಳೇ, ಅವು ಯಾವತ್ತೂ ಬೇರೆ ಯಾರೂ ಆಗಲ್ಲ?’
‘ನಿಮಗೆ ಸುಳಿವು, ಸೂಕ್ಷ್ಮ ಯಾವುದೂ ಗೊತ್ತಾಗಲ್ಲ. ಬರೋಕೆ ಎಂಟು ದಿನ ಮುಂಚಿನಿಂದ ವಿನಯ ಆತನ ರೂಮಿನ ಬೆಡ್‌ಶೀಟುಗಳು ಹೊಸದಾ, ಹೊದ್ಕೊಳ್ಳೋಕೆ ತರ್ಲಾ? ಕುತ್ತಿಗೆಗೆ ಇಟ್ಕೊಳೋ ದಿಂಬಿದೆಯಾ? ಹೀಗೇ ಸಾವಿರ ಪ್ರಶ್ನೆ ಕೇಳಿದ. ಇದೇ ಮನೇಲೇ ಬೆಳೆದಿದ್ದಲ್ಲವಾ, ಅವನು? ನಾಲಕ್ಕು ದಿನ ಮನೇಗೆ ಬಂದವರನ್ನು ಹೇಗೆ ನೋಡ್ಕೋಬೇಕು ಅಂತ ನನಗೆ ಗೊತ್ತಾಗಲ್ವಾ?’
‘ಹಾಗಲ್ಲವೇ, ಹೆಂಡತಿ ಬಸುರಿ ಅಂತ ಹೆಚ್ಚು ಕಾಳಜಿ ಆತನಿಗೆ.’
‘ನಾವು ಏನೇನೋ ಕನಸು ಕಂಡಿರ್ತೀವಿ. ಅವನ ಮದುವೇನ ಬೆಂಗಳೂರಲ್ಲಿ ಧಾಂಧೂಂ ಅಂತ ಮಾಡಬೇಕಂದುಕೊಂಡಿದ್ದೆ. ಹೋಗಿ ಯಾರೋ ಹಿಂದೆ ಮುಂದೆ ಇಲ್ಲದ ಅನಾಥ ಹುಡುಗೀನ ಮದುವೆ ಮಾಡಿಕೊಂಡ. ಏನಾರ ಕೇಳಕ್ಕೆ ಹೋದರೆ ಹೈಸ್ಕೂಲ್ ಸ್ವೀಟ್‌ಹಾರ್ಟುಗಳು, ಸೌಲ್‌ಮೇಟುಗಳು ಅಂತಾನೆ. ಸೌಲ್‌ಮೇಟುಗಳಂತೆ, ಮುಂಡಾಮೋಚ್ತು. ಮದುವೇ ಅನ್ನೋ ಸಮಾರಂಭಾನೇ ನಡೀಲಿಲ್ಲ. ಹೆಸರಿಗೆ ನಮ್ಮನೇಲಿ ಒಂದು ಸತ್ಯನಾರಾಯಣ ಪೂಜೆ. ಪೂಜೆಗೂ ಮದುಮಕ್ಕಳು ಕೂತಿರಲಿಲ್ಲ. ನಾವು ದುಡ್ಡಿಟ್ಕೊಂಡು ಏನು ಮಾಡಬೇಕು, ಒಂದು ರಿಸೆಪ್ಷನ್ ಮಾಡೋಣ ಅಂದರೆ ಏನೇನೋ ಕಾರಣ ಹೇಳಿ ಅದನ್ನೂ ತಳ್ಳಿಹಾಕಿಬಿಟ್ಟ. ಎಲ್ಲ ಅವಳ ತಾಳಕ್ಕೆ ಕುಣೀತಾನೆ, ಈತ. ಇನ್ನು ವಿಶೂದಂತೂ ದೇವರಿಗೇ ಗೊತ್ತು. ದಿನಕ್ಕೊಬ್ಬ ಗೆಳೆಯ. ಈಗ ಆ ಸುಪ್ರೀತ ಅಂತ ಯಾರದೋ ಜತೇಗಿದ್ದಾನೆ. ಕೇಳಿದರೆ ನಿನಗೆ ಅರ್ಥಾ ಆಗೊಲ್ಲಮ್ಮ ಅಂತಾನೆ. ನಾನೇನೂ ಮಾತಾಡೋ ಹಾಗೇ ಇಲ್ಲ’
‘ಮದುವೆ ಆದ ಮೇಲೆ ಎಲ್ಲ ಗಂಡಸರೂ ಹಾಗೇ. ಈಗ ನನ್ನನ್ನೋಡು. ನೀನು ಉಸಿರಾಡಂದ್ರೆ ಉಸಿರಾಡ್ತೀನಿ. ನಿಲ್ಸು ಅಂದ್ರೆ ನಿಲ್ಸೇಬಿಡ್ತೀನಿ’
‘ಸಾಕು, ಸಾಕು. ನಿಮಗೆಲ್ಲ ತಮಾಷೆ. ಎಲ್ಲ ನಾ ಹೇಳಿದ ಹಾಗೆ ನಡೆಯೋದು ಈ ಮನೇಲಿ’ ಎನ್ನುತ್ತಾ ಚೂಡಿದಾರದ ಚುನ್ನಿಯ ತುದಿಯಿಂದ ಟೀಪಾಯಿಯನ್ನು ಒರೆಸತೊಡಗಿದಳು. ಏನು ಮಾಡಲೂ ಗೊತ್ತಾಗದೇ ತಾನೂ ಎದ್ದು ಖುರ್ಚಿಯ ಮೇಲಿದ್ದ ಧೂಳನ್ನು ಝಾಡಿಸತೊಡಗಿದ.
‘ಹೀಗೆ ಮನೆ ಕಸ ಹೊಡೆದ್ರೆ ಎಲ್ಲ ಸರಿ ಹೋಗಲ್ಲ, ಸೂ. ಬೇರೆ ಏನಾದ್ರೂ ಮಾತಾಡು’ ಎಂದ.
‘ಏನು ಮಾತಾಡ್ಲೀ, ನಾನು. ನೀವೇ ತಾನೇ ಮಾರಾಯರು ದೊಡ್ಡ ದೊಡ್ಡ ಪ್ಲಾನು ಮಾಡ್ತಾ ಇರೋದು.’
‘ನಂದು ಇನ್ನೂ ಏನೂ ಗ್ಯಾರಂಟಿ ಇಲ್ಲವೇ? ಎಲ್ಲ ಪ್ಲಾನಷ್ಟೇ. ಶಾರದತ್ತೆಯ ಕಡೆಯ ದಿನಗಳಲ್ಲಿ ಭದ್ರಾವತಿಗೆ ಹೋಗಿ ಅಲ್ಲಿರಬೇಕು ಎಂದು ಆಸೆ ಪಡ್ತಾ ಇರೋದು ಯಾರು, ನೀನೋ, ನಾನೋ?’
‘ನಂದು ಏನಿದ್ರೂ ಎರಡೋ ಮೂರೋ ತಿಂಗಳು. ನೀವು ವಾನಪ್ರಸ್ಥಾಶ್ರಮದ ಮಾತಾಡ್ತೀರಾ. ಪರ್ಮನೆಂಟಾಗಿ ಇಂಡಿಯಾಕ್ಕೆ ಹೋಗಿ ರಮಾನಂದರ ಆಶ್ರಮ ಸೇರೋ ಮಾತಾಡ್ತೀರಾ.’
ಹದಿನೈದು ದಿನದ ಹಿಂದೆ ಈ ವಿಷಯದ ಪ್ರಸ್ತಾಪವನ್ನು ಅರವಿಂದ ಮೊದಲು ಮಾಡಿದ್ದ. ಪ್ರಸ್ತಾಪವೆಂದರೆ ಸುಮ್ಮನೆ ಒಂದು ತೀರ ಆರಂಭಿಕ ಮಾತನ್ನು ಸುಕನ್ಯಾಳ ಮುಂದೆ ಇಟ್ಟಿದ್ದ ಅಷ್ಟೇ. ಮೂರು ದಿನ ನಿರಂತರವಾಗಿ ಈ ವಿಷಯದ ಬಗ್ಗೆ ಚರ್ಚಿಸಿಯಾದ ಮೆಲೆ ಯಾವೊಂದು ನಿರ್ಧಾರಕ್ಕೂ ಬರಲಾಗದೇ, ಸುಕನ್ಯಾ ಇದರ ಬಗ್ಗೆ ಮಕ್ಕಳು ಬಂದು ಹೋಗುವ ತನಕ ಮತ್ತೆ ಮಾತಾಡಬಾರದೆಂದು ಕೇಳಿಕೊಂಡಿದ್ದಳು. ಈಗ ತಡೆಯಲಾಗದೇ ಮತ್ತೆ ತಾನೇ ಆ ವಿಷಯವನ್ನು ಕೆದಕಿದ್ದಳು. ಅರವಿಂದ ಮಾತಾಡದೇ ಕಡ್ಲೆಕಾಯಿ ಬೀಜ ತಿನ್ನುತ್ತಿದ್ದ.
ಸುಕನ್ಯಾ ಬಿಡಲಿಲ್ಲ ‘ಅವುಗಳಿಗೆ ನಮ್ಮ ಬಗ್ಗೆ ನಿಗಾ ಇಲ್ಲ ಅಂತ ನಾವು ಬಿಟ್ಟುಬಿಡಕ್ಕೆ ಆಗುತ್ತಾ? ಸಂಯ, ಸಂದರ್ಭ ನೋಡಿ ಇಂಥ ವಿಷಯ ಮಾತಾಡಬೇಕು. ಅಲಿಶಾ ತುಂಬು ಬಸುರಿ. ವಿನಯಂಗೆ ನಾನು ಹೆರಿಗೆ ಸಮಯದಲ್ಲಿ ಶಿಕಾಗೋದಲ್ಲಿರಬೇಕು ಅಂತ ಆಸೆ. ಆಕೆಗೂ ಯಾರೂ ಇಲ್ಲ. ಪಾಪ ಹೆಣ್ಣು ಜೀವ, ಈ ಸಮಯದಲ್ಲಿ ಯಾರಾದರೂ ಜತೆ ಇರಲಿ ಅಂತ ಬಯಸುತ್ತೆ. ಬಹಳ ಸಂದಿಗ್ಧ ಇದು. ವರ್ಷದಲ್ಲಿ ಈ ನಾಲ್ಕು ದಿನ ಮಕ್ಕಳು ಬಂದು ಮನೇಲಿದ್ದು ಹೋಗ್ತಾವೆ. ಈ ಸಮಯದಲ್ಲಿ ಈ ವಿಚಾರಾನ ಪ್ರಸ್ತಾಪ ಮಾಡೋ ಹಾಗಿಲ್ಲ, ಬಿಡೋ ಹಾಗಿಲ್ಲ’ ಎಂದು ಮತ್ತೆ ಒದ್ದಾಡಿಕೊಂಡಳು. ಕೇವಲ ಐದು ನಿಮಿಷದ ಅವಧಿಯಲ್ಲಿ ಸೊಸೆಯ ಬಗ್ಗೆ ಪ್ರೀತಿ, ಕರಕರೆ ಎರಡೂ ವ್ಯಕ್ತವಾಗಿತ್ತು, ಸುಕನ್ಯಾಳ ಮಾತಿನಲ್ಲಿ.
(ಮುಂದುವರೆಯುವುದು)
ಗುರುಪ್ರಸಾದ್ ಕಾಗಿನೆಲೆ ಹುಟ್ಟಿದ್ದು ಶಿವಮೊಗ್ಗದಲ್ಲಿ. ಮಿನೆಸೊಟಾ ರಾಜ್ಯದ ರಾಚೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ. ಸದ್ಯಕ್ಕೆ ಅಮೇರಿಕಾದ ರಾಚೆಸ್ಟರ್ನಲ್ಲಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ನಿರ್ಗುಣ, ಶಕುಂತಳಾ (ಕಥಾ ಸಂಗ್ರಹಗಳು), ಆಚೀಚೆಯ ಕಥೆಗಳು (ಸಂಪಾದಿತ ಕಥಾ ಸಂಕಲನ), ವೈದ್ಯ ಮತ್ತೊಬ್ಬ (ಲೇಖನ ಸಂಗ್ರಹ) “ಬಿಳಿಯ ಚಾದರ”, ‘ಹಿಜಾಬ್” (ಕಾದಂಬರಿಗಳು) ಅವರ ಪ್ರಕಟಿತ ಕೃತಿಗಳು.