ಇಲ್ಲಿ ಕಳೆದ ಸುಮಾರು ಇಪ್ಪತ್ತು ದಿನಗಳಿಂದ ಬಣ್ಣದ ಬಸವನ ಹುಳವೊಂದು ನನ್ನ ಸಹಪಾಠಿಯಂತೆ ಇಲ್ಲೇ ಸನಿಹದಲ್ಲಿ ಓಡಾಡುತ್ತಿದೆ. ಒಳ್ಳೆ ಸಾಕಿದ ಹರಿಣಿಯಂತೆ ಇಲ್ಲೇ ಮೇದುಕೊಂಡು, ಚಿಪ್ಪಿನೊಳಕ್ಕೆ ತನ್ನ ಹಸಿಹಸಿ ಕೆಂಪು ಮೈಯನ್ನು ಪೂರ್ತಾ ಎಳೆದುಕೊಂಡು ನಿದ್ದೆ ಹೊಡೆಯುತ್ತಾ ಕಾಲಕಳೆಯುತ್ತಿದೆ.
‘ಯಾಕೆ ಈ ಅಪರಿಮಿತ ಸುಂದರ ತರುಣ ಹೀಗೆ ಒಬ್ಬನೇ ಕಾಲದ ಪರಿವೆಯಿಲ್ಲದೆ ಇಲ್ಲೇ ಇದೆ? ಇದಕ್ಕೇನು ಸಂಸಾರ, ಸಮಾಜ, ಪ್ರೇಮ, ಕಾಮ ಏನೂ ಇಲ್ಲವೇ’ ಎಂದು ಬಹಳ ಕಾಲದಿಂದ ಚಿಂತಿಸುತ್ತಿರುವೆ. ಎಲ್ಲವೂ ಇದ್ದ ಹಾಗೆ ಕಾಣಿಸುತ್ತಿದ್ದರೂ ಆ ಏನನ್ನೂ ತೋರಿಸಿಕೊಳ್ಳದೆ ಅದು ಸುಮ್ಮನೆ ತಾನೇ ಹಾಕಿಕೊಂಡ ಪ್ರಾದೇಶಿಕ ಮಿತಿಯೊಳಗೆ ಓಡಾಡುತ್ತಿದೆ. ಒಮ್ಮೊಮ್ಮೆ ಸಿಕ್ಕಾಪಟ್ಟೆ ವಿಸ್ಮೃತಿಗಳನ್ನ ತಲೆಯೊಳಗಿಟ್ಟುಕೊಂಡ ವಿನಯಶೀಲನಂತೆಯೂ. ಈವತ್ತು ಇದನ್ನು ಬರೆಯುತ್ತಿರುವ ನಡುವೆಯೂ ಒಮ್ಮೆ ಹೋಗಿ ನೋಡಿ ಬಂದೆ.
ಇದೀಗ ಮುಗಿದಿರುವ ಮಳೆಗಾಲದ ಅಡ್ಡ ಪರಿಣಾಮವೇನಾದರೂ ಅದರ ದೈಹಿಕ ಸಾಮಾಜಿಕ ನಡವಳಿಕೆಯ ಮೇಲೆ ಮೂಡಿದೆಯೇ ಎಂದು ಗಮನಿಸಿದೆ. ಯಾವಾಗಲೂ ಮಳೆಯಲ್ಲಿ ಕೊಳೆಯುತ್ತ ಬಿದ್ದಿರುವ ಮರದ ಹಲಗೆಯ ಮೇಲಿನ ತೇವವನ್ನು ಮೇಯುತ್ತಿದ್ದ ಅದು ಇದೀಗ ಸೀಬೆ ಗಿಡದ ಎಲೆಯನ್ನು ಪ್ರಿಯಕರನಂತೆ ಆಲಂಗಿಸಿ ಮೇಯುತ್ತಿದೆ. ನಗು ಬರುತ್ತಿದೆ.
‘ಪರಲಿಂಗ ಕಾಮಿಯೂ ಅಲ್ಲದ, ಸಲಿಂಗ ಕಾಮಿಯೂ ಅಲ್ಲದ, ಎರಡೂ ಲಿಂಗಗಳನ್ನು ತನ್ನೊಳಗೇ ಇಟ್ಟುಕೊಂಡು ಓಡಾಡಲೇಬೇಕಾದ ಈ ಬಸವನ ಹುಳುವಿನ ಲೈಂಗಿಕ ಹಕ್ಕುಗಳ ಕುರಿತ ಹೋರಾಟದ ನಾಯಕತ್ವವನ್ನು ನೀನೇ ವಹಿಸು ಚೆಲುವೆಯೇ, ನಾನೂ ಬರುತ್ತೇನೆ’ ಎಂದು ಮಹಿಳೆಯರ ಹಕ್ಕಿನ ಹೋರಾಟಗಾರ್ತಿಯೊಬ್ಬರಿಗೆ ಕಿಚಾಯಿಸುತ್ತೇನೆ. ಈ ಅಭೂತಪೂರ್ವ ಹಸಿರಿನ ನಡುವೆ ಬಸವನ ಹುಳುವೊಂದರ ಉಭಯಕಾಮೀ ಪರದಾಟ!
‘ಅಯ್ಯೋ ಭಗವಂತಾ’ ಎಂದು ನನ್ನಗೆಳೆಯನಂತಿರುವ ಈ ಚೆಲುವ ಬಸವನ ಹುಳ ವನ್ನು ಸ್ತುತಿಸುತ್ತೇನೆ.
(ಫೋಟೋಗಳು: ಲೇಖಕರವು)
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.