Advertisement
ಗೋಡೆಯ ಮೇಲೆ ಪ್ರತಿಭಟನೆಯ ಚಿತ್ತಾರ:  ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಗೋಡೆಯ ಮೇಲೆ ಪ್ರತಿಭಟನೆಯ ಚಿತ್ತಾರ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಇದು 1980ರಲ್ಲಿ ಅಮೆರಿಕಾದಲ್ಲಿ ಜಾನ್ ಲೆನ್ನನ್ ಹತ್ಯೆಯಾದ ಮೇಲೆ ಪ್ರೇಗ್‌ನಲ್ಲಿ ಕಲಾವಿದರ ಗುಂಪೊಂದು ಈ ಗೋಡೆಯ ಮೇಲೆ ತಮ್ಮ ಸಹಿಗಳನ್ನು ಹಾಕಿ ವಿರೋಧ ವ್ಯಕ್ತಪಡಿಸಿದ್ದ ಕಲಾ ಗೋಡೆ. ಅದು ಇಂದಿನವರೆಗೂ ಮುಂದುವರಿದುಕೊಂಡು ಬಂದಿದೆ. ಅಲ್ಲಿಗೆ ತಲುಪಿದ ಯಾರಾದರೂ ಆ ಗೋಡೆಯ ಮೇಲೆ ಏನಾದರೂ ಗೀಚಬಹುದು. ಅಂದರೆ ಪ್ರತಿ ದಿನ ಪ್ರತಿಕ್ಷಣ ಅದು ಬದಲಾಗುತ್ತಲೆ ಇರುತ್ತದೆ. ಅನೇಕ ಸಲ ಸರ್ಕಾರ/ಆಡಳಿತ ಈ ಗೋಡೆಗೆ ಬಿಳಿಬಣ್ಣ ಬಳಿಯಿತಂತೆ. ಆದರೆ ಮರುಕ್ಷಣವೇ ನೂರಾರು ಕಲಾವಿದರು ಸೇರಿಕೊಂಡು ಗೋಡೆಯನ್ನು ಮತ್ತೆ ಬಣ್ಣಗಳ ಕಲೆಯಿಂದ ತುಂಬಿಸಿಬಿಡುತ್ತಿದ್ದರಂತೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ ಚೆಕಿಯಾ ದೇಶದ ಪ್ರವಾಸ ಕಥನದ ಎರಡನೇ ಭಾಗ ಇಲ್ಲಿದೆ

ಪ್ರೇಗ್‌ನ ಕ್ಯಾಸಲ್

ಪ್ರೇಗ್ ನಗರದಲ್ಲಿ ಮೆಟ್ರೋ ರೈಲು, ಟ್ರಾಮ್, ಬಸ್ಸುಗಳು ವಿದ್ಯುತ್‌ನಿಂದ ಓಡುತ್ತಿದ್ದು ಕಾರುಗಳು ಮಾತ್ರ ಇಂಧನದಲ್ಲಿ ಓಡುತ್ತಿದ್ದವು. ಮೊದಲ ದಿನ ಪ್ರೇಗ್‌ನ ಕೋಟೆ (ಕ್ಯಾಸಲ್) ನೋಡಲು `ಬೋಲ್ಟ್’ ಕ್ಯಾಬ್‌ನಲ್ಲಿ ಹೊರಟೆವು. ಯಾವುದೇ ಸ್ಥಳದಲ್ಲಿ ಕ್ಯಾಬ್ ಬುಕ್ ಮಾಡಿದರೂ ಎರಡು ನಿಮಿಷಗಳ ಒಳಗೆ ಕರಾರುವಾಕ್ಕಾಗಿ ಬಂದು ನಿಂತುಕೊಳ್ಳುತ್ತಿತ್ತು. ಎಲ್ಲವೂ ಗೇರ್‌ಲೆಸ್ ಕಾರುಗಳು. ರಸ್ತೆಯಲ್ಲಿ ಇಳಿದು ಕೋಟೆಯ ಕಡೆಗೆ ನಡೆದೆವು. ದೂರದಿಂದಲೆ ಕೋಟೆ ಒಂದು ದಿಬ್ಬದ ಮೇಲೆ ಸುಂದರವಾಗಿ ಕಾಣಿಸುತ್ತಿತ್ತು. ಎದುರಿಗೆ ಕೋಟೆ ಬಾಗಿಲಲ್ಲಿ ಇಬ್ಬರು ದೃಢಕಾಯ ಸಿಪಾಯಿಗಳು ಯುನಿಫಾರ್ಮ್‌ನಲ್ಲಿ ಕಣ್ಣು ಮಿಟುಕಿಸದೆ ನಿಂತಿದ್ದರು. ಕೋಟೆ ಒಳಗೆಹೋದರೆ ವಿಶಾಲವಾದ ಪ್ರಾಂಗಣದಲ್ಲಿ ದೊಡ್ಡದೊಡ್ಡ ಸಂಕೀರ್ಣಗಳು ತೆರೆದುಕೊಂಡವು. ಒಬ್ಬೊಬ್ಬರಿಗೆ 480 ಕೊರುನಾ ಟಿಕೆಟ್ಟುಗಳು. ಒಂದು ಕೊರುನಾ ಹೆಚ್ಚು ಕಡಿಮೆ ನಮ್ಮ 4 ರೂಪಾಯಿಗಳಿಗೆ ಸಮ. ಯಾವುದೇ ದೇಶದ ಸೀನಿಯರ್ ಸಿಟಿಜನ್‌ಗೂ ರಿಯಾಯಿತಿ ಇದೆ ಎಂದು ಅನಂತರ ತಿಳಿಯಿತು. ನಮ್ಮ ದೇಶದಲ್ಲಿ ಯುರೋಪಿಯನ್ನರು ಬಂದರೆ ಐದಾರು ಪಟ್ಟು ಹೆಚ್ಚು ಹಣ ಪೀಕುತ್ತಾರೆ. ಬಹಳ ವರ್ಷಗಳ ಹಿಂದೆ ದೆಹಲಿಯ ಕುತುಬ್ ಮಿನಾರ್ ನೋಡಲು ಹೋದಾಗ ಅಲ್ಲಿಗೆ ಬಂದಿದ್ದ ವಿದೇಶಿಗರು ನಾಲ್ಕಾರು ಪಟ್ಟು ಹೆಚ್ಚು ಬೆಲೆಯ ಟಿಕೆಟ್ ನೋಡಿ `ನಮಗೆ ಹಣ ಕೊಡಲು ತೊಂದರೆ ಇಲ್ಲ, ಆದರೆ ಇದೆಂತಹ ತಾರತಮ್ಯ?’ ಎಂದು ಕುತುಬ್ ಮಿನಾರ್ ನೋಡಲು ನಿರಾಕರಿಸಿ ಹಿಂದಿರುಗಿದ್ದರು. ನಮ್ಮ ಮ್ಯೂಸಿಯಂಗಳು, ಮೃಗಾಲಯಗಳ ನಿರ್ವಹಣೆ ಎಷ್ಟು ಕೆಟ್ಟದಾಗಿರುತ್ತದೆ ಎನ್ನುವುದು ಗೊತ್ತೆ ಇದೆ.

(ಪ್ರೇಗ್ ಕಾಸ್ಟಲ್‌ನ ಒಳನೋಟ)

ಅದೇ ಸಂಕೀರ್ಣದಲ್ಲಿದ್ದ ಸೇಂಟ್ ವಿಟಾಸ್ ಚರ್ಚ್‌ ಒಳಗೆ ಹೋಗಿದ್ದೆ ನಾನು ದಂಗಾಗಿಹೋದೆ. ಎತ್ತರವಾದ ಗೋಪುರದ ಒಳಗೆ ಏನೆಲ್ಲ ಅಲಂಕಾರ! ಬಣ್ಣಬಣ್ಣದ ಕೋನಾಕೃತ ಗಾಜುಗಳು, ಗೋಡೆಗಳ ಮೇಲೆ ಬಿಡಿಸಿರುವ ಚಿತ್ರಗಳು, ಹತ್ತಾರು ಬಂಗಾರ/ಬಂಗಾರ ಬಣ್ಣದ ಶಿಲ್ಪಗಳು! ಇಂದಿನ ನಮ್ಮ ವಿಜೃಂಭಿತ ವಜ್ರ ವೈಢೂರ್ಯ ಚಿನ್ನದ ದೇವಾಲಯಗಳಂತೆ ಕಾಣಿಸಿಬಿಟ್ಟಿತು. ಯಾರು ಯಾವುದೇ ದೃಶ್ಯವನ್ನು ಸೆರೆಹಿಡಿದುಕೊಳ್ಳಬಹುದು, ಯಾವುದೇ ನಿರ್ಬಂಧ ಇರಲಿಲ್ಲ. ನಮ್ಮಲ್ಲಿ ಎಲ್ಲ ವಸ್ತುಗಳನ್ನು, ಚಪ್ಪಲಿಗಳನ್ನು ಹೊರಗೆ ಬಿಡಬೇಕು, ಕ್ಯಾಮೆರಾಗೆ ಬೇರೆ ಟಿಕೆಟ್ ತೆಗೆದುಕೊಳ್ಳಬೇಕು; ಒಂದೇ ಎರಡೇ ನಿರ್ಬಂಧಗಳು! ಆದರೆ ಇಲ್ಲಿ ನಿಜವಾಗಿಯೂ ಯಾತ್ರಿಗಳು ಸ್ವತಂತ್ರವಾಗಿ ಯಾವುದೇ ಅಳುಕಿಲ್ಲದೆ ನೋಡಿ ಆನಂದಿಸಬಹುದಾಗಿತ್ತು. ಜೋರಾಗಿ ಮಾತನಾಡುವುದಾಗಲಿ ಕೂಗಾಡುವುದಾಗಲಿ, ಅಡ್ಡಾದಿಡ್ಡಿ ಬರುವುದಾಗಲಿ ಅಪರೂಪ. ಎಲ್ಲರೂ ಸ್ವಯಂ ಶಿಸ್ತನ್ನು ಪಾಲಿಸುತ್ತಿದ್ದರು. ಆನಂದಿಸುವುದಕ್ಕೆ ನಮಗೆ ಸಮಯ ಇರಬೇಕಷ್ಟೇ? ಎಲ್ಲವನ್ನೂ ಸುತ್ತಿ ನೋಡಿದೆವು. ಅರಮನೆಗೆ ಮಾತ್ರ ಪ್ರವೇಶವಿರಲಿಲ್ಲ. ಅರಮನೆಯ ಹಿಂದೆ ಕೆಲಸಗಾರರ ಸಣ್ಣಸಣ್ಣ ಮನೆಗಳಿದ್ದು ಅವುಗಳನ್ನು ಶೋಕೇಸ್ ಮಾಡಿ ಇಡಲಾಗಿದೆ. ಎಲ್ಲಾ ಕಡೆ ಏನೋ ಒಂದು ಮಾಡಿ ಯಾತ್ರಿಗಳು ಕುತೂಹಲದಿಂದ ನೋಡುವಂತೆ ಮಾಡಲಾಗಿದೆ.

(ಪ್ರೇಗ್ ಕಾಸ್ಟಲ್ ಒಳಗಿರುವ ಸೇಂಟ್ ವಿಟಾಸ್ ಚರ್ಚ್‌ನ ಒಳನೋಟ)

9ನೇ ಶತಮಾನದಲ್ಲಿ ನಿರ್ಮಿಸಲಾದ ಈ ಕೋಟೆಯು ಬೊಹೆಮಿಯಾದ ರಾಜರು, ಪವಿತ್ರ ರೋಮನ್ ಚಕ್ರವರ್ತಿಗಳು ಮತ್ತು ಚೆಕೊಸ್ಲೊವಾಕಿಯಾದ ಅಧ್ಯಕ್ಷರ ಆಡಳಿತದ ದೀರ್ಘಕಾಲ ಸೇವೆ ಸಲ್ಲಿಸಿದೆ. ಇದೇ ಕೋಟೆಯಲ್ಲಿ ಸಿಬ್ಬಂದಿ ಮತ್ತು ಸಲಹೆಗಾರರು ನೆಲೆಸಿದ್ದರು. ಬೊಹೆಮಿಯಾದ ರಾಜರು ಅಮೂಲ್ಯ ಆಭರಣಗಳನ್ನು ಗುಪ್ತ ಕೋಣೆಗಳಲ್ಲಿ ಸಂಗ್ರಹಿಸಿಟ್ಟಿದ್ದರು. ಗಿನ್ನೇಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಕಾರ ಇದು ವಿಶ್ವದ ಅತಿದೊಡ್ಡ ಪ್ರಾಚೀನ ಕೋಟೆಯಾಗಿದ್ದು 750,000 ಚದರ ಅಡಿಗಳ ವಿಸ್ತೀರ್ಣವಿದ್ದು 1,870 ಅಡಿಗಳ ಉದ್ದ ಮತ್ತು ಸರಾಸರಿ 430 ಅಡಿಗಳ ಅಗಲವಿದೆ. ವಾರ್ಷಿಕ 1.8 ದಶಲಕ್ಷ ಜನರು ಕೋಟೆಯನ್ನು ವೀಕ್ಷಿಸಲು ಬರುತ್ತಾರೆ. ಕ್ರಿ.ಶ.870ರಲ್ಲಿ ವರ್ಜಿನ್ ಮೇರಿ ಚರ್ಚ್ಅನ್ನು ಕಟ್ಟಲಾಯಿತು. ಸೇಂಟ್ ಬೆಸಿಲಿಕಾ ಮತ್ತು ಸೇಂಟ್ ವಿಟಸ್ ಬೆಸಿಲಿಕಾ 10ನೇ ಶತಮಾನದ ಮೊದಲಾರ್ಧದಲ್ಲಿ ವ್ರಟಿಕಾಸ್-1, ಡ್ಯೂಕ್ ಆಫ್ ಬೊಹೆಮಿಯಾ ಮತ್ತು ಅವರ ಮಗ ಸೇಂಟ್ ವೆನ್ಸೆಸ್ಲಾಸ್ ಆಳ್ವಿಕೆಯಲ್ಲಿ ಕಟ್ಟಲಾಯಿತು. ಸೇಂಟ್ ಜಾರ್ಜ್ ಚರ್ಚ್‌ನ ಪಕ್ಕದಲ್ಲಿಯೇ ಒಂದು ಕಾನ್ವೆಂಟ್‌ಅನ್ನು ಸ್ಥಾಪಿಸಲಾಯಿತು. ಇದರ ಜೊತೆಗೆ 12ನೇ ಶತಮಾನದಲ್ಲಿ ರೋಮನೆಸ್ಕ್ ಅರಮನೆಯನ್ನು ನಿರ್ಮಿಸಲಾಯಿತು.

14ನೇ ಶತಮಾನದಲ್ಲಿ ಚಾರ್ಲ್ಸ್-4ರ ಆಳ್ವಿಕೆಯಲ್ಲಿ ಅರಮನೆಯನ್ನು ಗೋಥಿಕ್ ಶೈಲಿಯಲ್ಲಿ ಪುನರ್ನಿರ್ಮಿಸಿದರು ಮತ್ತು ಕೋಟೆ ಗೋಡೆಗಳನ್ನು ಬಲಪಡಿಸಿದರು. ಉದ್ದವಾದ ಮತ್ತು ಮೊನಚಾದ ಕಮಾನುಗಳು, ಹೊರಕ್ಕೆ ಬಾಗಿಕೊಂಡ ಶಿಲ್ಪಗಳು, ಮೊದಲಿಗಿಂತ ಉದ್ದವಾದ ಬಣ್ಣದ ಗಾಜಿನ ಕಿಟಿಕಿಗಳು, ಪಕ್ಕೆಲುಬಿನ ಕಮಾನುಗಳು ಮತ್ತು ಶಿಖರಗಳನ್ನು ಹೊಂದಿದ ಕಟ್ಟಡಗಳೇ ಗೋಥಿಕ್ ಶೈಲಿ. ಮೊದಲೇ ಇದ್ದ ಎರಡು ಚರ್ಚ್‌ಗಳ ನಡುವೆ ಬೃಹತ್ ಗೋಥಿಕ್ ಶೈಲಿಯ ಚರ್ಚ್ಅನ್ನು ನಿರ್ಮಿಸಲು ಪ್ರಾರಂಭಿಸಿ ಅದು 6 ಶತಮಾನಗಳ ನಂತರ ಪೂರ್ಣಗೊಂಡಿತು. 1485ರಲ್ಲಿ ವ್ಲಾಡಿಸ್ಲಾಸ್-11 ಜಾಗೀಯೆಲ್ಲನ್ ಕೋಟೆಯನ್ನು ಪುನರ್ನಿರ್ಮಿಸುವ ಜೊತೆಗೆ ಬೃಹತ್ ವ್ಲಾಡಿಸ್ಲಾವ್ ಹಾಲನ್ನು ನಿರ್ಮಿಸಿ ಅರಮನೆಗೆ ಸೇರಿಸಿಕೊಂಡನು. ಆದರೆ 1541ರಲ್ಲಿ ಕಾಣಿಸಿಕೊಂಡ ಬೆಂಕಿ ಕೋಟೆಯ ಹಲವು ಭಾಗಗಳನ್ನು ನಾಶಪಡಿಸಿತು. 1648ರಲ್ಲಿ 30 ವರ್ಷಗಳ ಯುದ್ಧದ ಕೊನೆಯಲ್ಲಿ ಪ್ರೇಗ್ ಕದನದ ಕಾಲದಲ್ಲಿ ರುಡಾಲ್ಫ್-2 ಸಂಗ್ರಹದಿಂದ ಅನೇಕ ಕಲಾಕೃತಿಗಳನ್ನು ಸ್ವೀಡನ್ನರು ಲೂಟಿ ಮಾಡಿಕೊಂಡು ಹೋದರು. 1948ರಲ್ಲಿ ಫರ್ಡಿನಾಂಡ್-1 ಪದತ್ಯಾಗದ ನಂತರ ಅವರ ಸೋದರಳಿಯ ಫ್ರಾಂಜ್ ಜೋಸೆಫ್ ಉತ್ತರಾಧಿಕಾರಿಯಾದ. ನಂತರ ಮಾಜಿ ಚಕ್ರವರ್ತಿ ಫರ್ಡಿನಾಂಡ್-1 ಪ್ರೇಗ್ ಕ್ಯಾಸಲ್‌ಅನ್ನು ತನ್ನ ಮನೆಯನ್ನಾಗಿ ಮಾಡಿಕೊಂಡನು. ಈ ಕೋಟೆ ಒಂದು ದೊಡ್ಡ ಸಂಕೀರ್ಣವಾಗಿದ್ದು 5 ಚರ್ಚ್‌ಳು, 4 ಅರಮನೆಗಳು (ಇವುಗಳಲ್ಲಿ 5 ದೊಡ್ಡ ಹಾಲುಗಳು) ಮೂರು ಉದ್ದನೆ ಗೋಪುರಗಳು, 9 ಕಟ್ಟಡಗಳು ಮತ್ತು ಸುತ್ತಲು 11 ಉದ್ಯಾನಗಳು ಇವೆ. ಒಟ್ಟಿನಲ್ಲಿ ಇದು ಕೂಡ ಚೆಕ್ ದೇಶದ ಯುನೆಸ್ಕೊ ಪಾರಂಪರಿಕ ಕಟ್ಟಡವಾಗಿದೆ.

ಚಾರ್ಲ್ಸ್ ಬ್ರಿಡ್ಜ್:

ಮಧ್ಯಕಾಲದಲ್ಲಿ ಪ್ರೇಗ್ ಮಧ್ಯಭಾಗದಲ್ಲಿ ಹರಿಯುವ ವ್ಲಾತಾವಾ ನದಿಯ ಮೇಲೆ ಗ್ರಾನೈಟ್ ಕಲ್ಲುಗಳಲ್ಲಿ ಕಮಾನು ಸೇತುವೆಯನ್ನು ಕಟ್ಟಲಾಗಿದೆ. ಸೇತುವೆಯ ಉದ್ದ 1,693 ಅಡಿಗಳು ಮತ್ತು 33 ಅಡಿಗಳ ಅಗಲವಿದ್ದು 16 ಬಿಲ್ಲಿನಾಕಾರದ ಕಮಾನುಗಳನ್ನು ಹೊಂದಿದೆ. ಸೇತುವೆಯ ಮೇಲೆ 30 ಪ್ರತಿಮೆಗಳ ಜೊತೆಗೆ ಮೂರು ಗೋಪುರಗಳನ್ನು ಕಟ್ಟಲಾಗಿದೆ. ಹೆಚ್ಚಿನ ಶಿಲ್ಪಗಳು ಬರೋಕ್-ಶೈಲಿಯಿಂದ ಕೂಡಿದ್ದು 1700ರ ಸುಮಾರಿಗೆ ಇವುಗಳನ್ನು ಕೆತ್ತಲಾಗಿ ನಂತರ ಶಿಥಿಲಗೊಂಡ ಕಾರಣ 30 ಪ್ರತಿಕೃತಿಗಳಿಂದ ಬದಲಿಸಲಾಯಿತು. ಈಗ ಅವೆಲ್ಲ ಮತ್ತೆ ಬಣ್ಣ ಕಳೆದುಕೊಂಡು ಶಿಥಿಲಗೊಂಡಿವೆ. ಬಹುಶಃ ನಿರ್ಮಿಸಿದಾಗ ಅಪರೂಪವಾಗಿ ಕಾಣಿಸುತ್ತಿರಬೇಕು! ಆಗಾಗ ತಪಾಸಣೆ, ಪುನಃಸ್ಥಾಪನೆ ಮತ್ತು ದುರಸ್ತಿಗಳು ನಡೆಯುತ್ತಲೇ ಇರುವುದಾಗಿ ತಿಳಿಯುತ್ತದೆ. 2019ರಲ್ಲಿ 60 ದಶಲಕ್ಷ ಚೆಕ್ ಕೊರುನಾ ಹಣವನ್ನು ವೆಚ್ಚ ಮಾಡಿರುವುದಾಗಿ ತಿಳಿದುಬರುತ್ತದೆ. 30 ಶಿಲ್ಪಗಳ ಬಗೆಗಿನ ಮಾಹಿತಿಯನ್ನು ಕೆದಕಿದಾಗ ಶಿಲ್ಪಗಳ ವಿವರಣೆ ಮತ್ತು ಅವುಗಳನ್ನು ಕೆತ್ತಿದ ಕಲಾವಿದರ ಹೆಸರುಗಳು ಮತ್ತು ಕಾಲವನ್ನು ಕರಾರುವಾಕ್ಕಾಗಿ ದಾಖಲಿಸಿರುವುದು ಕಾಣಿಸುತ್ತದೆ.

1357ರಲ್ಲಿ ಚಾರ್ಲ್ಸ್-4 ರಿಂದ ಆರಂಭಗೊಂಡ ಸೇತುವೆ ಕೆಲಸ ಪೂರ್ಣಗೊಂಡಿದ್ದು ಮಾತ್ರ 15ನೇ ಶತಮಾನದಲ್ಲಿ. ಅದಕ್ಕೂ ಮುಂಚೆ ಮೂಲ ಸೇತುವೆ ಜುಡಿತ್‌ಅನ್ನು 1158-1172ರಲ್ಲಿ ಕಟ್ಟಲಾಗಿದ್ದು ಅದು 1342ರ ಪ್ರವಾಹದಲ್ಲಿ ಹಾನಿಗೊಳಗಾಗಿತ್ತು. ಹೊಸ ಸೇತುವೆಯನ್ನು ಪ್ರೇಗ್ ಸೇತುವೆಯೆಂದು ಕರೆಯಲಾಯಿತು. 1870ರ ನಂತರ ಚಾರ್ಲ್ಸ್ ಸೇತುವೆ ಎಂದು ಮರುನಾಮಕರಣ ಮಾಡಲಾಯಿತು. ಇದು 1841 ರವರೆಗೂ ವ್ಲಾತಾವಾ ನದಿಯನ್ನು ದಾಟುವ ಏಕೈಕ ಮಾರ್ಗವಾಗಿದ್ದು ಪೂರ್ವ ಮತ್ತು ಪಶ್ಚಿಮ ಯುರೋಪ್ ನಡುವಿನ ಮುಖ್ಯ ವ್ಯಾಪಾರ ಮಾರ್ಗವಾಗಿ ಕಾರ್ಯ ನಿರ್ವಹಿಸಿತ್ತು.

(ಚಾರ್ಲ್ಸ್ ಬ್ರಿಡ್ಜ್ ಮೇಲೆ ಓಡಾಡುತ್ತಿರುವ ಪ್ರವಾಸಿಗರು)

ನಾವು ಅಲ್ಲಿಗೆ ತಲುಪಿದಾಗ ಸೇತುವೆ ಮೇಲೆ ನೂರಾರು ಜನರು ದಾಂಗುಡಿ ಇಟ್ಟಿದ್ದರು. ಒಂದು ಕಡೆ ಕಲಾವಿದರು ಗಿರಾಕಿಗಳನ್ನು ಕುರ್ಚಿಗಳ ಮೇಲೆ ಕೂರಿಸಿಕೊಂಡು ಅವರ ಚಿತ್ರಗಳನ್ನು ಗೆರೆಗಳಲ್ಲಿ ಮತ್ತು ಪೂರ್ಣ ಚಿತ್ರಗಳನ್ನು ಬಿಡಿಸುತ್ತಿದ್ದರು. ಪಕ್ಕದಲ್ಲಿ 500 ಮತ್ತು 1000 ಚೆಕ್ ಕೊರುನಾ ಎಂದು ಬರೆಯಲಾಗಿತ್ತು. ಇನ್ನಷ್ಟು ಕಲಾವಿದರು ಗಿರಾಕಿಗಳಿಗೆ ಕಾಯುತ್ತಿದ್ದರು, ಇನ್ನೂ ಕೆಲವರು ಬಾಟಲಿಗಳನ್ನು ಕೈಗಳಲ್ಲಿ ಹಿಡಿದುಕೊಂಡು ಗುಟುಕರಿಸುತ್ತಿದ್ದರು. ಕೆಲವು ಜೋಡಿಗಳು ಆಲಿಂಗನದಲ್ಲಿ ತೊಡಗಿಕೊಂಡಿದ್ದರೆ, ಕೆಲವರು ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಒಂದು ಜೋಡಿಯ ಗೆಳೆತನ ಪ್ರೀತಿಯಲ್ಲಿ ಪರಿವರ್ತನೆಗೊಂಡಿತೊ, ಒಟ್ಟಾಗಿರಲು ತೀರ್ಮಾನಿಸಿತೊ ಇಲ್ಲ ಮದುವೆಯಾಗಲು ನಿರ್ಧಾರ ತೆಗೆದುಕೊಂಡಿತೊ ಸುತ್ತಲಿದ್ದ ನಾಲ್ಕಾರು ಜನರು ಹಾರೈಸುತ್ತಿದ್ದರು. ಯುರೋಪಿಯನ್ನರ ನಡುವೆ ಚೀನಿ ಪ್ರವಾಸಿಗರು ಲವಲವಿಕೆಯಿಂದ ಓಡಾಡುತ್ತಾ ಫೋಟೋಗಳನ್ನು ಹಿಡಿದುಕೊಳ್ಳುತ್ತಿದ್ದರು. ನಾಲ್ಕೈದು ಮಕ್ಕಳು ನಮ್ಮ ಹತ್ತಿರಕ್ಕೆ ಬಂದು `ಇಂಗ್ಲಿಷ್?’ ಅಂದರು. `ಎಸ್.. ಎಸ್..’ ಎಂದಿದ್ದೆ. `ನಮಗೆ ಶಾಲೆಯಲ್ಲಿ ಒಂದು ಅಸೈನ್‌ಮೆಂಟ್ ಇದೆ. ನಿಮ್ಮನ್ನ ಪ್ರಶ್ನಿಸಬಹುದೆ?’ ಎಂದರು. ಮತ್ತೆ `ಎಸ್.. ಎಸ್..’ ಎಂದೆವು. `ನೀವು ಯಾವ ದೇಶ, ಪ್ರೇಗ್ ಹೇಗೆನಿಸಿತು? ಏನು ಇಷ್ಟ ಆಯಿತು? ಯಾವ ಸೀಸನ್ ನಿಮಗೆ ಇಷ್ಟ?’ ಕೊನೆಗೆ ನಮ್ಮ ಜೊತೆಗೆ ಫೋಟೋಗಳನ್ನು ಹಿಡಿದುಕೊಂಡು ಕಿಲಕಿಲನೆ ನಗುತ್ತಾ ಹೊರಟುಹೋದರು. ನಾವೂ ಅವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಫೋಟೋಗಳನ್ನು ಹಿಡಿದುಕೊಂಡೆವು.

(ಪ್ರೇಗ್ ನಗರದ ವೃತ್ತಗಳಲ್ಲಿ ಕಂಡುಬರುವ ವಿಲಕ್ಷಣ ಪ್ರತಿಮೆಗಳು)

ಯಾರು ಯಾವುದೇ ದೃಶ್ಯವನ್ನು ಸೆರೆಹಿಡಿದುಕೊಳ್ಳಬಹುದು, ಯಾವುದೇ ನಿರ್ಬಂಧ ಇರಲಿಲ್ಲ. ನಮ್ಮಲ್ಲಿ ಎಲ್ಲ ವಸ್ತುಗಳನ್ನು, ಚಪ್ಪಲಿಗಳನ್ನು ಹೊರಗೆ ಬಿಡಬೇಕು, ಕ್ಯಾಮೆರಾಗೆ ಬೇರೆ ಟಿಕೆಟ್ ತೆಗೆದುಕೊಳ್ಳಬೇಕು; ಒಂದೇ ಎರಡೇ ನಿರ್ಬಂಧಗಳು! ಆದರೆ ಇಲ್ಲಿ ನಿಜವಾಗಿಯೂ ಯಾತ್ರಿಗಳು ಸ್ವತಂತ್ರವಾಗಿ ಯಾವುದೇ ಅಳುಕಿಲ್ಲದೆ ನೋಡಿ ಆನಂದಿಸಬಹುದಾಗಿತ್ತು. ಜೋರಾಗಿ ಮಾತನಾಡುವುದಾಗಲಿ ಕೂಗಾಡುವುದಾಗಲಿ, ಅಡ್ಡಾದಿಡ್ಡಿ ಬರುವುದಾಗಲಿ ಅಪರೂಪ. 

ಸೇತುವೆಯ ಕೆಳಗೆ ನದಿಯಲ್ಲಿ ತಣ್ಣನೆ ನೀರು ಬಿಸಿಲಿಗೆ ಕಾಯುತ್ತಾ ಕುಳಿತಿರುವಂತೆ ತೋರುತ್ತಿತ್ತು. ನದಿಯಲ್ಲಿ ತೇಲಾಡುವ ಹೋಟಲುಗಳು ಗಿರಾಕಿಗಳಿಗಾಗಿ ಕಾಯುತ್ತಿದ್ದವು. ನದಿಯ ಉದ್ದಕ್ಕೂ ಸಣ್ಣಸಣ್ಣ ದ್ವೀಪಗಳಿದ್ದು ಉದ್ದಕ್ಕೂ ಗಿಡಮರಗಳು ಬಣ್ಣಬಣ್ಣದ ಹೂವುಗಳನ್ನು ಅರಳಿಸಿ ನಿಂತುಕೊಂಡಿದ್ದವು. ಎಲ್ಲವನ್ನೂ ನೋಡಿಕೊಂಡು ಸೇತುವೆಯನ್ನು ದಾಟಿಕೊಂಡು ಹಳೆ ನಗರದ ಬೀದಿಗಳಿಗೆ ಇಳಿಯುತ್ತಿದ್ದಂತೆ, ಕ್ರಾಂತಿ ಫೋನ್ ಮಾಡಿ ಎಲ್ಲಿದ್ದೀರಿ ಎಂದು ಕೇಳಿ ಹೇಳಿದೆವು. `ಅಲ್ಲೇ ಇರಿ, ಸ್ವಲ್ಪ ದೂರದಲ್ಲಿ ಜಾನ್ ಲೆನ್ನನ್ ಆರ್ಟ್ ಗೋಡೆಯೊಂದಿದೆ. ನಾನೂ ಬರ‍್ತೀನಿ’ ಎಂದ. ಕ್ರಾಂತಿ ಬಂದ ಮೇಲೆ ಒಂದು ಕಿ.ಮೀ. ದೂರ ಹಳೆ ನಗರದ ಬೀದಿಗಳಲ್ಲಿ ನಡೆದುಕೊಂಡು ಹೋದೆವು.
ಪ್ರೇಗ್ ನಗರದ ವೃತ್ತಗಳಲ್ಲಿ ಕಂಡುಬರುವ ವಿಲಕ್ಷಣ ಪ್ರತಿಮೆಗಳು.

ಜಾನ್ ಲೆನ್ನನ್ ಆರ್ಟ್ ಗೋಡೆ: ಮನೆಗಳ ನಡುವೆ ಒಂದು ಮನೆಯ ಉದ್ದನೆ ಗೋಡೆ ಮೇಲೆ ಬಿಡಿಸಿರುವ ಬಣ್ಣಬಣ್ಣದ ಗೋಡೆ ಬರಹಗಳು. ಇದು 1980ರಲ್ಲಿ ಅಮೆರಿಕಾದಲ್ಲಿ ಜಾನ್ ಲೆನ್ನನ್ ಹತ್ಯೆಯಾದ ಮೇಲೆ ಪ್ರೇಗ್‌ನಲ್ಲಿ ಕಲಾವಿದರ ಗುಂಪೊಂದು ಈ ಗೋಡೆಯ ಮೇಲೆ ತಮ್ಮ ಸಹಿಗಳನ್ನು ಹಾಕಿ ವಿರೋಧ ವ್ಯಕ್ತಪಡಿಸಿದ್ದ ಕಲಾ ಗೋಡೆ. ಅದು ಇಂದಿನವರೆಗೂ ಮುಂದುವರಿದುಕೊಂಡು ಬಂದಿದೆ. ಅಲ್ಲಿಗೆ ತಲುಪಿದ ಯಾರಾದರೂ ಆ ಗೋಡೆಯ ಮೇಲೆ ಏನಾದರೂ ಗೀಚಬಹುದು. ಅಂದರೆ ಪ್ರತಿ ದಿನ ಪ್ರತಿಕ್ಷಣ ಅದು ಬದಲಾಗುತ್ತಲೆ ಇರುತ್ತದೆ. ಅನೇಕ ಸಲ ಸರ್ಕಾರ/ಆಡಳಿತ ಈ ಗೋಡೆಗೆ ಬಿಳಿಬಣ್ಣ ಬಳಿಯಿತಂತೆ. ಆದರೆ ಮರುಕ್ಷಣವೇ ನೂರಾರು ಕಲಾವಿದರು ಸೇರಿಕೊಂಡು ಗೋಡೆಯನ್ನು ಮತ್ತೆ ಬಣ್ಣಗಳ ಕಲೆಯಿಂದ ತುಂಬಿಸಿಬಿಡುತ್ತಿದ್ದರಂತೆ. ಜಗತ್ತಿನಲ್ಲಿ ಯಾವುದೇ ಆಂದೋಳನ, ಯುದ್ಧಗಳು ನಡೆದರೆ ಈ ಗೋಡೆಯ ಮೇಲೆ ಚಟುವಟಿಕೆಗಳು ಕಾಣಿಸಿಕೊಳ್ಳುತ್ತವೆ. ಈಗ ಈ ಗೋಡೆಯನ್ನು ಸಿಸಿ ಕ್ಯಾಮೆರಾ ಕಾವಲು ಕಾಯುತ್ತಾ ಕುಳಿತುಕೊಂಡಿದೆ. ಗೋಡೆಯ ಎತ್ತರ ಸುಮಾರು 15 ಅಡಿಗಳಿದ್ದು ಉದ್ದ 60 ಅಡಿಗಳು ಇರಬಹುದು! ಇದನ್ನು ನೋಡಲು ಕೆಲವು ಲಕ್ಷಗಳ ಜನರು ಪ್ರತಿ ವರ್ಷ ಬರುತ್ತಾರೆ. ಇಲ್ಲಿಯೂ ಯುರೋಪಿಯನ್ ಮಾರ್ಕೆಟಿಂಗ್ ತಂತ್ರಗಾರಿಕೆ ಕೆಲಸ ಮಾಡುತ್ತಿದೆ. ನನಗಂತೂ ಇಲ್ಲಿ ಏನಿದೆ? ಎನಿಸುವಂತಾಗಿ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಹಿಂದಿರುಗಿದೆವು.

(ಜಾನ್ ಲೆನ್ನನ್ ಆರ್ಟ್ ಗೋಡೆ)

1960 ರಿಂದಲೇ ಕಲಾವಿದರು ಸರ್ಕಾರ/ಆಡಳಿತದ ವಿರುದ್ಧ ಕಿರು ಸಂದೇಶಗಳು ಮತ್ತು ಕವಿತೆಗಳನ್ನು ಬರೆಯತೊಡಗಿದ್ದರು. 1980ರ ಲೆನ್ನನ್ ಹತ್ಯೆಯ ನಂತರ ಆತನ ರಾಜಕೀಯ ಹೋರಾಟದ ಸಂಕೇತವಾಗಿ ಅಜ್ಞಾತ ಕಲಾವಿದನೊಬ್ಬ ಲೆನ್ನನ್ ಚಿತ್ರವನ್ನು ಇಲ್ಲಿ ಬಿಡಿಸಿದನು. ಇದು ಚೆಕ್ ಕಮ್ಯುನಿಸ್ಟ್ ಆಡಳಿತದ ಗುಸ್ಟಾವ್ ಹುಸಾಕ್ ವಿರುದ್ಧದ ಆಂದೋಳನವಾಗಿತ್ತು. ಕಲಾವಿದರು ಮತ್ತು ಬುದ್ಧಿಜೀವಿಗಳು ಪಶ್ಚಿಮದ ಮಾರುಕಟ್ಟೆ ಮತ್ತು ಬಂಡವಾಳಶಾಹಿ ಏಜೆಂಟ್ ಎಂದು ತಿರುಗಿಬಿದ್ದಿದ್ದರು. 2021ರಲ್ಲಿ ಲೆನ್ನನ್ ಗೋಡೆಯ ಇತಿಹಾಸದ ಬಗ್ಗೆ ಲೆನ್ನನ್ ವಾಲ್ ಸ್ಟೋರಿ ಹೊಸ ಮ್ಯೂಸಿಯಂಅನ್ನು ತಂಪಾದ ನೆಲಮಾಳಿಗೆಯಲ್ಲಿ ಪ್ರೊಕೊಪ್ಸ್ಕಾ ಬೀದಿ 8ರಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಡಜನ್‌ಗಟ್ಟಲೇ ಫೋಟೋಗಳು, ಐತಿಹಾಸಿಕ ವಸ್ತುಗಳು, ಬೀಟಲ್ಸ್ ಸ್ಮರಣಿಕೆಗಳು ಮತ್ತು ಗೋಡೆ ಇತಿಹಾಸದ ಬಗ್ಗೆ 30 ನಿಮಿಷಗಳ ಸಾಕ್ಷ್ಯಚಿತ್ರವನ್ನು ನೋಡಬಹುದು.

ವಿಶೇಷವೆಂದರೆ ಈ ಲೆನ್ನನ್ ಮಹಾಶಯ ಪ್ರೇಗ್‌ಗೆ ಒಮ್ಮೆಯೂ ಬರಲಿಲ್ಲ. ಜಾನ್ ವಿನ್‌ಸ್ಟನ್ ಒನೊ ಲೆನ್ನನ್ ಎಂಬಿಇ, ಇಂಗ್ಲಿಷ್ ಗಾಯಕ-ಗೀತ ರಚನೆಕಾರ ಮತ್ತು ದಿ ಬೀಟಲ್ಸ್‌ನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ ವಿಶ್ವದಾದ್ಯಂತ ಖ್ಯಾತಿ ಹೊಂದಿದ್ದನು. 1980ರ ಡಿಸೆಂಬರ್ 8ರಂದು ನ್ಯೂಯಾರ್ಕ್ ನಗರದಲ್ಲಿ ಆತನ ಮನೆಯ ಮುಂದೆಯೆ ಆತನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಕೊಂದವನು ಅಮೆರಿಕದ ಮಾರ್ಕ್ ಡೇವಿಡ್ ಚಾಪ್ಮನ್ ಎಂಬಾತ. ಅದೇ ದಿನ ಬೆಳಿಗ್ಗೆ ಚಾಪ್ಮನ್, ಲೆನ್ನನ್ ಹೊಸ ಆಲ್ಬಂ `ಡಬಲ್ ಫ್ಯಾಂಟಸಿ’ಗೆ ಆಟೋಗ್ರಾಫ್ ಸಹಿ ಹಾಕಿಸಿಕೊಂಡಿದ್ದನು. ಚಾಪ್ಮನ್ ಹವಾಯ್‌ನಿಂದ ಮೂರು ತಿಂಗಳ ಮೊದಲೇ ನ್ಯೂಯಾರ್ಕ್‌ಗೆ ಬಂದು ಲೆನ್ನನ್‌ನನ್ನು ಕೊಲೆ ಮಾಡಲು ಗನ್ ಖರೀದಿಸಿದ್ದನು. ಯಾಕೆ ಕೊಲೆ ಮಾಡಿದೆ ಎಂದು ದಂಡನಾ ಸಮಿತಿ ಕೇಳಿದಾಗ, `ಎಲ್ಲದಕ್ಕೂ ನನ್ನ ದೊಡ್ಡ ಉತ್ತರ ಎಂದರೆ, ಇನ್ನು ಮುಂದೆ ನಾನು ಯಾರೊ ಒಬ್ಬನಾಗುವುದಿಲ್ಲ’ ಎಂದಿದ್ದ. ಅಂದರೆ ಆತ ತನ್ನ ಖ್ಯಾತಿಯ ಹುಚ್ಚಿಗೆ ಲೆನ್ನನ್‌ನನ್ನು ಕೊಲೆ ಮಾಡಿದ್ದನು.

(ಹಿಂದಿನ ಕಂತು: ಚೆಕಿಯಾ ದೇಶದಲ್ಲಿ…(೧))

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ