ನದಿ, ಜಲಪಾತಗಳೆಲ್ಲಾ ಹೆಪ್ಪುಗಟ್ಟಿದ್ದ ಚಳಿಗಾಲದಲ್ಲೊಮ್ಮೆ ನಾನು ಚೀನಾದ ದಟಾಂಗ್ ಎನ್ನುವ ಊರಿನಲ್ಲಿದ್ದೆ. ಇದು ಉತ್ತರ ಚೀನಾದ ಶಾಂಕ್ಷಿ ಪ್ರಾಂತ್ಯದಲ್ಲಿದೆ, ಇದರ ಸುತ್ತಮುತ್ತ ಯುನೆಸ್ಕೋ ತಾಣಗಳೂ ಸೇರಿದಂತೆ ಅನೇಕ ಪ್ರಾಚೀನ ಬೌದ್ಧತಾಣಗಳಿವೆ. ಅಲ್ಲೊಂದು ಹಳೆಯ ಬೌದ್ಧವಿಹಾರ. ಬೋಳುಬೆಟ್ಟಗಳ ಜೊತೆ ತಾನೂ ಒಂದಾಗಿರುವಂತೆ ತೋರುವ ಆ ವಿಹಾರ ನೆಲದಿಂದ ೭೫ ಮೀ ಎತ್ತರದಲ್ಲಿ ಬೆಟ್ಟದ ಮೇಲ್ಮೈನಲ್ಲಿ ೧೫೦೦ ವರ್ಷಗಳಿಂದ ಬೀಳದೆ, ಅಲ್ಲಾಡದೆ, ಮಳೆಗೆ ಜಗ್ಗದೆ, ಬಿಸಿಲಿಗೆ ಕುಗ್ಗದೆ, ಹಿಮಕ್ಕೆ ಕರಗದೆ, ಗಾಳಿಗೆ ಹಾರಿ ಹೋಗದೆ ಹಾಗೇ ಉಳಿದುಕೊಂಡು ನಮ್ಮಂತಹ ನೋಡುವ ಕಣ್ಣಿಗೆ ವಿಸ್ಮಯವಾಗಿ ಉಳಿದುಬಿಟ್ಟಿದೆ.
‘ದೇವ ಸನ್ನಿಧಿ’ ಅಂಕಣದಲ್ಲಿ ಗಿರಿಜಾ ರೈಕ್ವ ಬೌದ್ಧ ದೇವಾಲಯಗಳ ಕುರಿತು ಬರೆದಿದ್ದಾರೆ.

ದೇವಾಲಯಗಳನ್ನು ಬೆಟ್ಟದ ಮೇಲೋ, ನಡೆಯೋಕೆ ಕಠಿಣವಾದ ಹಾದಿಯಲ್ಲೆಲ್ಲೋ ಕಟ್ಟೋದು ನಮಗೆಲ್ಲಾ ಗೊತ್ತೇ ಇದೆ. “ಎಲ್ಲೆಲ್ಲಿ ಪ್ರಕೃತಿಯ ವಿಶೇಷ ಭವ್ಯತೆ, ಸೌಂದರ್ಯ ಪ್ರಕಟವಾಗಿದೆಯೋ ಅಲ್ಲೆಲ್ಲಾ ತನ್ನ ಸೀಮಿತ, ಲೌಕಿಕ ಅಗತ್ಯಗಳನ್ನು ಮೀರುವಂತೆ ಮತ್ತು ಅನಂತ ವಿಶ್ವದಲ್ಲಿ ತನ್ನ ಸ್ಥಾನವನ್ನು ಅರಿತುಕೊಳ್ಳಲು ಸಹಾಯವಾಗುವಂತೆ ಭರತಭೂಮಿ ತನ್ನ ಯಾತ್ರಾಸ್ಥಳಗಳನ್ನು ಕಟ್ಟಿಕೊಂಡಿದೆ” ಅಂತ ರವೀಂದ್ರನಾಥ ಟ್ಯಾಗೋರರರು ಒಂದು ಕಡೆ ಹೇಳುತ್ತಾರೆ. ಕಷ್ಟ ಇಲ್ಲದೆ ಯಾತ್ರಾಸ್ಥಳ ಆಗೋದೇ ಇಲ್ಲವೇನೋ. ಮನಸ್ಸು ಲೌಕಿಕದಿಂದ ಆಚೆಗೆ ಜಿಗಿಯೋಕೆ ಬೆಟ್ಟದ ಮೇಲೋ, ಜನ ಇಲ್ಲದ ಹಾದಿಯೋ, ದುರ್ಗಮವಾದ ಗುಹೆಯೋ ಸರಿಯಾದ ಜಾಗ ಅನಿಸಿರಬೇಕು ಹಿಂದಿನವರಿಗೆ.

ಆದರೆ ಸಣ್ಣ ಗುಡಿಯನ್ನೋ ಅಥವಾ ಚಂದದ ದೇವಾಲಯವನ್ನೋ, ಬೆಟ್ಟದ ಮೇಲಾದರೂ ಸಮತಟ್ಟಾದ ನೆಲದ ಮೇಲೆ ಕಟ್ಟೋದು ಅಂಥ ಆಶ್ಚರ್ಯದ ವಿಷಯ ಅಲ್ಲ. ಅದನ್ನೇ ಬೆಟ್ಟದ ಮೇಲ್ಮೈ ಮೇಲೇ ಕಟ್ಟಿದರೆ ಹೇಗಿರುತ್ತೆ? ಅಂತಹ ಅಪಾಯಕಾರಿ ಜಾಗದಲ್ಲಿ ಯಾಕೆ ಕಟ್ಟುತ್ತಾರೆ ಅನ್ನೋದರಿಂದ ಅಲ್ಲಿ, ಅಷ್ಟು ಎತ್ತರದಲ್ಲಿ ಹೇಗೆ ಕಟ್ಟಿದರು? ಹೇಗೆ ಸಾಮಾನು ಸಾಗಿಸಿದರು? ಯಾವ ತಂತ್ರಜ್ಞಾನ ಬಳಸಿದರು? ಅಲ್ಲಿಗೆ ಯಾರು ಅಷ್ಟೆಲ್ಲಾ ಕಷ್ಟ ತೆಗೆದುಕೊಂಡು ಬರುತ್ತಿದ್ದರು ಹೀಗೇ ಪ್ರಶ್ನೆಗಳ ಸರಮಾಲೆ ನನ್ನದು. ನಾನು ನನ್ನ ಓಡಾಟದಲ್ಲಿ ಕಂಡ ಅನೇಕ ಬೌದ್ಧ ದೇವಾಲಯಗಳು, ಮಠಗಳು ಅಂತಹ ದುರ್ಗಮವಾದ ಜಾಗದಲ್ಲಿ ಇರುವುದನ್ನು ನೋಡಿದ್ದೇನೆ. ಹಾಗಾಗಿ ನನಗೆ ಬೌದ್ಧ ದೇವಾಲಯಗಳ ಮೇಲೆ ಇನ್ನಿಲ್ಲದ ಸೆಳೆತ. ಆ ಆಕರ್ಷಣೆಯೇ ಬೇರೆ ಬೇರೆ ದೇಶಗಳ ಅಂತಹ ಅದ್ಭುತ ತಾಣಗಳಿಗೆ ನನ್ನನ್ನು ಕರೆದುಕೊಂಡು ಹೋಗಿದೆ.

ನದಿ, ಜಲಪಾತಗಳೆಲ್ಲಾ ಹೆಪ್ಪುಗಟ್ಟಿದ್ದ ಚಳಿಗಾಲದಲ್ಲೊಮ್ಮೆ ನಾನು ಚೀನಾದ ದಟಾಂಗ್ ಎನ್ನುವ ಊರಿನಲ್ಲಿದ್ದೆ. ಇದು ಉತ್ತರ ಚೀನಾದ ಶಾಂಕ್ಷಿ ಪ್ರಾಂತ್ಯದಲ್ಲಿದೆ, ಇದರ ಸುತ್ತಮುತ್ತ ಯುನೆಸ್ಕೋ ತಾಣಗಳೂ ಸೇರಿದಂತೆ ಅನೇಕ ಪ್ರಾಚೀನ ಬೌದ್ಧತಾಣಗಳಿವೆ. ಅಲ್ಲಿಂದ ಒಂದು ಗಂಟೆ ದೂರದಲ್ಲಿ ಹೆಂಗ್‌ ಪರ್ವತಶ್ರೇಣಿಯಿದೆ. ಅಲ್ಲೊಂದು ಹಳೆಯ ಬೌದ್ಧವಿಹಾರ. ಬೋಳುಬೆಟ್ಟಗಳ ಜೊತೆ ತಾನೂ ಒಂದಾಗಿರುವಂತೆ ತೋರುವ ಆ ವಿಹಾರ ನೆಲದಿಂದ ೭೫ ಮೀ ಎತ್ತರದಲ್ಲಿ ಬೆಟ್ಟದ ಮೇಲ್ಮೈನಲ್ಲಿ ೧೫೦೦ ವರ್ಷಗಳಿಂದ ಬೀಳದೆ, ಅಲ್ಲಾಡದೆ, ಮಳೆಗೆ ಜಗ್ಗದೆ, ಬಿಸಿಲಿಗೆ ಕುಗ್ಗದೆ, ಹಿಮಕ್ಕೆ ಕರಗದೆ, ಗಾಳಿಗೆ ಹಾರಿ ಹೋಗದೆ ಹಾಗೇ ಉಳಿದುಕೊಂಡು ನಮ್ಮಂತಹ ನೋಡುವ ಕಣ್ಣಿಗೆ ವಿಸ್ಮಯವಾಗಿ ಉಳಿದುಬಿಟ್ಟಿದೆ. ಸರಿಯಾಗಿ ದೃಷ್ಟಿಯಿಟ್ಟು ನೋಡದಿದ್ದರೆ ಅದು ಇರುವುದೇ ತಿಳಿಯುವುದಿಲ್ಲ. ಇದು ಜುನಕಾಂಗ್‌ ದೇವಾಲಯ. ಅದು ಬೆಟ್ಟದ ಮೇಲೆ ನೇತಾಡ್ತಾ ಇರೋದ್ರಿಂದ ಹ್ಯಾಂಗಿಂಗ್‌ ಮೊನೆಸ್ಟರಿ ಅಂತಲೂ ಕರೆಯುತ್ತಾರೆ. ಬೌದ್ಧ, ಟಾವೋ, ಕನ್‌ಫ್ಯೂಸಿಯನ್‌ ಮೂರೂ ಧರ್ಮಗಳಿಗೆ ಸೇರಿದ ದೇವಾಲಯ ಆಗಿರುವುದು ಇದರ ವಿಶೇಷ. ಪ್ರಪಂಚದಲ್ಲಿ ಇಂತಹದ್ದು ಒಂದೇ ದೇವಾಲಯ ಇರೋದು.

ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋದರೆ, ಅದೊಂದು ದೊಡ್ಡ ಲೋಕ. ಅಲ್ಲಿ ನಲವತ್ತು ಕೊಠಡಿಗಳಿವೆ. ಇಡೀ ದೇವಾಲಯವನ್ನು ಕಟ್ಟಿಗೆಯಿಂದ ಕಟ್ಟಿದ್ದಾರೆ. ಅದಕ್ಕೆ ಬಳಸಿರುವ ಅಡಿಪಾಯದ ಮರದ ತೊಲೆಗಳು ಬೆಟ್ಟದ ಒಳಕ್ಕೆ ತೂರಿರುವುದರಿಂದ ಅದೂ ಕಾಣಿಸುವುದಿಲ್ಲ. ಇದೊಂದು ಇಂಜಿನಿಯರಿಂಗ್‌ ಅದ್ಭುತ. ೧೫೦೦ ವರ್ಷಗಳ ಕೆಳಗೆ ಯಾರು, ಯಾಕೆ ಕಟ್ಟಿದರೋ, ಅದೂ ಊರಲ್ಲೆಲ್ಲೂ ಜಾಗ ಸಿಗದೆ ಅಷ್ಟು ಎತ್ತರದಲ್ಲಿ ಕಟ್ಟೋ ಐಡಿಯಾ ಹೇಗೆ ಬಂತೋ. ಅಲ್ಲಿ ಸನ್ಯಾಸಿಗಳು ಬಂದು ಉಳಿದು ಧ್ಯಾನ ಮಾಡೋಕೆ ಮಾತ್ರ ಹೇಳಿ ಮಾಡಿಸಿದ ಹಾಗಿದೆ.

ಇದೇ ತರಹದ ಮತ್ತೊಂದು ಮೊನೆಸ್ಟರಿ ಭೂತಾನ್‌ ನ ಟೈಗರ್‌ ನೆಸ್ಟ್‌ ಅಥವಾ ತಕ್ತಸಂಗ್‌ ಮೊನೆಸ್ಟರಿ. ಇದು ಭೂತಾನಿನ ಪಾರೋ ಎಂಬ ಊರಿನಲ್ಲಿದೆ. ಅದನ್ನು ತಲುಪಲು ೩-೪ ಗಂಟೆಗಳ ಟ್ರೆಕ್‌ ಮಾಡಿ ಹೋಗಬೇಕು. ಅದೊಂದು ಸುಂದರ ಅನುಭವ. ಭೂತಾನ್‌ ಬೌದ್ಧರೇ ಇರುವ ದೇಶ. ಊರಿಗೊಂದು ದೇವಾಲಯ, ಹತ್ತು ಬೌದ್ಧ ವಿಹಾರಗಳನ್ನು ಕಾಣಬಹುದು. ಕೆಂಪು ಉಡುಪಿನ ಬೌದ್ಧ ಭಿಕ್ಷುಗಳು ಸುಂದರ ದೇಶದ ಮನೋಹರ ಬಿಂಬಗಳ ಹಾಗೆ ಓಡಾಡುತ್ತಿರುತ್ತಾರೆ.. ತಕ್ತಸಂಗ್‌ ಮೊನೆಸ್ಟರಿ ಬೌದ್ಧ ಗುರು ಪದ್ಮಸಂಭವ ಮೂರು ವರ್ಷ ಮೂರು ತಿಂಗಳು, ಮೂರು ದಿನ ಮೂರು ಗಂಟೆಗಳು ಧ್ಯಾನ ಮಾಡಿದ ಸ್ಥಳ. ಈ ವಿಹಾರ ಪಾರೋ ಊರಿಗಿಂತ ೧೦೦೦ ಅಡಿ ಎತ್ತರದಲ್ಲಿದೆ. ಇದು ೮ ನೇ ಶತಮಾನದಲ್ಲಿ ನಡೆದಿದ್ದು ಅಂತ ಹೇಳುತ್ತಾರೆ. ಭೂತಾನ್‌ ಗೆ ಬೌದ್ಧ ಧರ್ಮದ ಪ್ರವೇಶ ಆಗಿದ್ದೇ ಗುರು ಪದ್ಮಸಂಭವನಿಂದ. ಆದರೆ ಈ ಮೊನೆಸ್ಟರಿಯ ಕಟ್ಟಡ ಕಟ್ಟಿದ್ದು ಮಾತ್ರ ೧೭ ನೇ ಶತಮಾನದಲ್ಲಿ. ನಂತರ ಅದೂ ಸುಟ್ಟು ಹೋಗಿ ಅದನ್ನು ಮತ್ತೆ ಕಟ್ಟಿದ್ದಾರೆ. ನಡೆದು ನಡೆದು ಉಸ್ಸಪ್ಪಾ ಅಂತ ತಲುಪೋದೇ ಕಷ್ಟ. ಇಷ್ಟರ ಮೇಲೆ ಈ ಜಾಗ ಇರುವುದು ಸಮುದ್ರ ಮಟ್ಟದಿಂದ ೧೦೫೦೦ ಅಡಿ ಎತ್ತರದಲ್ಲಿ. ಸಮುದ್ರ ಮಟ್ಟದಿಂದ ಎತ್ತರಕ್ಕೆ ಹೋದಂತೆ ಆಮ್ಲಜನಕ ಕಡಿಮೆ ಆಗಿ ಹೆಜ್ಜೆ ಇಡೋದ್ರಲ್ಲಿ ಸುಸ್ತಾಗುತ್ತೆ. ಅಂತಹದರಲ್ಲಿ ಇನ್ನು ಅಲ್ಲಿಗೆ ಕಟ್ಟಡ ನಿರ್ಮಾಣದ ಸಾಮಗ್ರಿಗಗಳನ್ನು ಸಾಗಿಸಿ ಅಲ್ಲಿ ಅಂತಹ ಕಡಿದಾದ ಜಾಗದಲ್ಲಿ, ಇನ್ನೊಂದು ಹೆಜ್ಜೆ ಇಟ್ಟರೆ ಬಿದ್ದೇ ಹೋಗಬಹುದಾಗಿರುವ ಜಾಗದಲ್ಲಿ ನಿರ್ಮಾಣ ಮಾಡಿರುವುದು ಸೋಜಿಗ.

ಭೂತಾನಿನ ಅನೇಕ ಕಟ್ಟಡಗಳ ಹಾಗೇ ಇಲ್ಲೂ ಬಿಳಿ ಗೋಡೆಗಳ ಕಟ್ಟಡಕ್ಕೆ ಕೆಂಪು ಸೂರು. ಅದರ ಒಳಗೆ ಪ್ರವೇಶ ಮಾಡಿದರೆ ಅದು ಚಳಿಗೆ ತಣ್ಣನೆ ಕೊರೆಯುತ್ತಿರುತ್ತದೆ. ಕಲ್ಲಿನ ನೆಲ, ಸುತ್ತ ಕಲ್ಲಿನಿಂದ ಆವೃತವಾಗಿರುವ ಕಟ್ಟಡ ಅಲ್ಲಿ ಚಳಿಯನ್ನು ಹಿಡಿದಿಟ್ಟುಕೊಂಡಿದೆಯೇನೋ ಅನ್ನುವಷ್ಟು ಚಳಿ. ಬುದ್ಧ, ಪದ್ಮಸಂಭವ ಸೇರಿದಂತೆ ಅಲ್ಲಿ ನಾಲ್ಕು ದೇವಾಲಯಗಳು ಹಾಗೂ ಒಂದಷ್ಟು ಗುಹೆಗಳು, ಹಾಗೂ ಸನ್ಯಾಸಿಗಳಿಗೆ ಇರಲು ವಿಹಾರವೂ ಇದೆ. ದೇವಾಲಯದ ಒಳಗೆ ತಂಕಾಗಳು, ಬೌದ್ಧಧರ್ಮದ ಇತಿಹಾಸ, ಕಥೆಗಳನ್ನು ಹೇಳುವ ಸುಂದರವಾದ ಚಿತ್ರಗಳಿವೆ. ಬೆಳ್ಳಂಬೆಳ್ಳಿಗ್ಗೆ ಒಬ್ಬಳೇ ದುಡುದುಡು ಬೆಟ್ಟಹತ್ತಿ ತಕ್ತಸಂಗ್‌ ನೋಡಿಬಂದಿದ್ದು ಒಂದು ಸುಂದರ ಶಾಂತ ಅನುಭವ.

“ಎಲ್ಲೆಲ್ಲಿ ಪ್ರಕೃತಿಯ ವಿಶೇಷ ಭವ್ಯತೆ, ಸೌಂದರ್ಯ ಪ್ರಕಟವಾಗಿದೆಯೋ ಅಲ್ಲೆಲ್ಲಾ ತನ್ನ ಸೀಮಿತ, ಲೌಕಿಕ ಅಗತ್ಯಗಳನ್ನು ಮೀರುವಂತೆ ಮತ್ತು ಅನಂತ ವಿಶ್ವದಲ್ಲಿ ತನ್ನ ಸ್ಥಾನವನ್ನು ಅರಿತುಕೊಳ್ಳಲು ಸಹಾಯವಾಗುವಂತೆ ಭರತಭೂಮಿ ತನ್ನ ಯಾತ್ರಾಸ್ಥಳಗಳನ್ನು ಕಟ್ಟಿಕೊಂಡಿದೆ” ಅಂತ ರವೀಂದ್ರನಾಥ ಟ್ಯಾಗೋರರರು ಒಂದು ಕಡೆ ಹೇಳುತ್ತಾರೆ.

ಇನ್ನು ಗುಹೆ ಒಳಗೆಲ್ಲೋ ಇರುವ ಬೌದ್ಧ ದೇವಾಲಯಗಳು… ವಿಯಟ್ನಾಮಿನಲ್ಲಿ ಒಮ್ಮೆ ಪರ್‌ಫ್ಯೂಮ್‌ ಪಗೋಡ ಅಂತ ಒಂದು ಜಾಗಕ್ಕೆ ಹೋಗಿದ್ದೆ. ಅಲ್ಲಿಗೆ ಹೋಗೋದೇ ಮಜಾ. ಹನೋಯ್‌ ನಿಂದ ಬಸ್‌ನಲ್ಲಿ ಹೋಗಿ, ಆಮೇಲೆ ಸುಂದರ ಬೆಟ್ಟಗುಡ್ಡಗಳ ನಡುವೆ ನದಿಯಲ್ಲಿ ದೋಣಿಯಲ್ಲಿ ಒಂದು ಗಂಟೆ ಹೋಗಬೇಕು. ಅಲ್ಲಿಗೆ ಹೋಗೋ ದಾರಿಯಂತೂ ರಮಣೀಯ. ವಿಯಟ್ನಾಮಿನ ಅಗಲ ಟೋಪಿಯನ್ನು ಹಾಕಿಕೊಂಡ ಹೆಣ್ಣುಮಕ್ಕಳು ದೋಣಿ ನಡೆಸುತ್ತಾರೆ. ದೋಣಿ ಇಳಿದ ಮೇಲೆ ಬೆಟ್ಟ ಹತ್ತಿ ಹೋದರೆ ಸಿಗುತ್ತೆ ಒಂದು ಗುಹೆ. ಅದರೊಳಗೆ ಹೋಗೋಕೂ ಸ್ವಲ್ಪ ಮೆಟ್ಟಿಲು ಹತ್ತಿ ಇಳಿಯಬೇಕು. ಅದೊಂದು ಸುಣ್ಣದ ಕಲ್ಲಿನ ಗುಹೆಗಳ ಸಂಕೀರ್ಣ. ಅದು ಪ್ರಾಕೃತಿಕ ಗುಹೆ. ಬುದ್ಧನೂ ಸೇರಿದಂತೆ ಅನೇಕ ಪೂಜಾ ವಿಗ್ರಹಗಳಿದ್ದರೂ ಆ ಜಾಗಕ್ಕೇ ಒಂದು ಶಕ್ತಿಯಿದ್ದಂತೆನಿಸುತ್ತೆ. ವಿಯಟ್ನಾಮಿನ ಬೌದ್ಧರ ಯಾತ್ರಾಸ್ಥಳ ಇದು. ಯಾರೋ ಸನ್ಯಾಸಿ ೨೦೦೦ ವರ್ಷಗಳ ಹಿಂದೆ ಧ್ಯಾನಕ್ಕೆ ಬಳಸುತ್ತಿದ್ದ ಜಾಗ.

ಇನ್ನು ಭಾರತದ ಹಿಮಾಚಲ ಪ್ರದೇಶದಲ್ಲಿ ಹಾಗೂ ಲೇ ಲಡಾಕಿನಲ್ಲಿ ಅನೇಕ ವಿಶೇಷವಾದ ವಿಹಾರಗಳಿವೆ. ಅದು ನಮ್ಮ ದೇಶದಲ್ಲಿ ಬೌದ್ಧಧರ್ಮ ಹೆಚ್ಚಾಗಿ ವ್ಯಾಪಿಸಿರುವ ಭಾಗ. ಪ್ರತಿ ಮನೆಯಿಂದ ಒಬ್ಬ ಸನ್ಯಾಸಿಯಾಗೋದು ಇವತ್ತಿಗೂ ಇರುವ ಪದ್ಧತಿ. ಇವೆಲ್ಲಾ ಇವತ್ತಿಗೂ ಜೀವಂತ ಇರುವ ವಿಹಾರಗಳು. ಕೆಲವು ಕಡೆ ಅತಿಥಿಗಳಿಗೆ ಉಳಿಯುವ ವ್ಯವಸ್ಥೆ ಕೂಡ ಇರುತ್ತೆ. ಲಾಮಾಯೂರು, ಮುಲಬೆಖ್‌, ಹೆಮಿಸ್‌, ಥೀಕ್ಸೆ, ಶೈ, ಆಲಚಿ, ಲಿಖಿರ್‌ ಹೀಗೇ ಅನೇಕ ಕಲಾತ್ಮಕವಾದ, ವಿಶಾಲವಾದ ಅನೇಕ ಮಹತ್ವದ ಮೊನೆಸ್ಟರಿಗಳಿವೆ. ಹಿಮಾಲಯದ ಮರುಭೂಮಿಯಲ್ಲಿ, ಬೋಳುಗುಡ್ಡಗಳ ನಡುವೆ ಮಲ್ಲಿಗೆಯಂತೆ ಅರಳಿರುವ ಸುಣ್ಣ ಬಳಿದುಕೊಂಡ ಮೊನೆಸ್ಟರಿಯ ಕಟ್ಟಡಗಳು ಕಣ್ಣಿಗೆ ಹಬ್ಬ. ಆದರೆ ಅವನ್ನು ತಲುಪೋದು ಅಷ್ಟು ಸುಲಭ ಅಲ್ಲ. ಎಲ್ಲಾ ಒಂದೊಂದು ಗುಡ್ಡದ ಮೇಲಿರುತ್ತವೆ. ಗುಡ್ಡ ಹತ್ತಿ ಹೋಗೋದ್ರೊಳಗೆ ಸುಸ್ತಾಗಿ ಬಿಟ್ಟಿರುತ್ತೆ. ಹೊರಗೆ ಬಿಳಿ ಬಣ್ಣದ ಸರಳ ಕಟ್ಟಡವಾಗಿ ಕಾಣುವ ಮೊನೆಸ್ಟರಿಯ ಒಳಗೆ ಚಿತ್ರಗಳ ಬಣ್ಣದ ಓಕುಳಿ. ತಮಟೆಯ ಸದ್ದು, ಕೊಂಬು, ಜಾಗಟೆ, ನಗಾರಿಗಳ ನಾದ., ಕಾವಿ, ಕೆಂಪು ದಿರಿಸಿನ ಸನ್ಯಾಸಿಗಳ ಮೆರವಣಿಗೆ. ಭಾರತದ ಭವ್ಯ ಸಂಸ್ಕೃತಿಯ ಮತ್ತೊಂದು ಮುಖದ ಅನಾವರಣ. ಬಣ್ಣ ಬಣ್ಣದ ಚಿತ್ರಗಳ ದಿಬ್ಬಣ…

ಇವುಗಳಲ್ಲೆಲ್ಲಾ ನನ್ನ ಮೆಚ್ಚಿನ ಮೊನೆಸ್ಟರಿ ಸ್ಫಿಟಿಯಲ್ಲಿರುವ ಕೀ ಹಾಗೂ ಅತ್ಯಂತ ಹಳೆಯ ಮೊನೆಸ್ಟರಿಯಾದ ತಾಬೋ. ಕೀ ಅದರ ಸೌಂದರ್ಯಕ್ಕೆ ನಮ್ಮನ್ನು ಸೆಳೆದರೆ, ತಾಬೋ ಅದರ ಸರಳತನಕ್ಕೆ.

ಕೀ ಇರೋದು ಸಮುದ್ರಮಟ್ಟದಿಂದ ೧೩೬೦೦ ಅಡಿ ಎತ್ತರದಲ್ಲಿ. ಇಲ್ಲಿ ಲಾಮಾಗಳಿಗೆ ತರಬೇತಿ ನೀಡಲಾಗುತ್ತದೆ. ಇದು ಅನೇಕ ದಾಳಿಗಳನ್ನು ಕಂಡಂತಹುದು. ಮಂಗೋಲಿಯನ್ನರು, ಸ್ಥಳೀಯ ಯುದ್ಧ, ಮುಸ್ಲಿಂ ದಾಳಿ, ಸಿಖ್‌ ದಾಳಿ ಇವೆಲ್ಲದರಿಂದ ಅನೇಕ ಬಾರಿ ಮುರಿದು ಮತ್ತೆ ಮತ್ತೆ ಕಟ್ಟಿರುವ ವಿಹಾರ. ಇಲ್ಲಿ ಅನೇಕ ಅಪರೂಪದ ಮ್ಯೂರಲ್‌ ಗಳಿವೆ.

ತಾಬೋ ಮೊನೆಸ್ಟರಿ ತಾಬೋ ಅನ್ನುವ ಸ್ಪಿಟಿಯ ಒಂದು ಹಳ್ಳಿ. ಈಗಲೇ ಅಲ್ಲಿಗೆ ತಲುಪೋದು ಕಷ್ಟ. ಹಿಂದೆ ಇದೊಂದು ಹಿಮಾಲಯ ಮರುಭೂಮಿಯ ಕುಗ್ರಾಮವೇ ಆಗಿದ್ದಿರಬೇಕು. ಸಾವಿರ ವರ್ಷ ಹಳೆಯ ಮಣ್ಣಿನ ಗೋಡೆಗಳ ಪ್ರಾಚೀನ ಬೌದ್ಧ ದೇವಾಲಯ. ಇದು ಬೆಟ್ಟದ ಮೇಲಿಲ್ಲ. ಸಮತಟ್ಟಾದ ನೆಲದ ಮೇಲೇ ಇದೆ. ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ ಸಕ್ರಿಯವಾಗಿರುವ ದೇವಾಲಯ. ಟಿಬೆಟ್ಟಿನ ತೋಲಿಂಗ್‌ ಗೋಪಾದ ನಂತರ ಹೆಚ್ಚು ನಡೆದುಕೊಳ್ಳುವ ಟಿಬೆಟಿಯನ್‌ ವಿಹಾರ ಇದು. ನಾನು ಹೋದ ಸಮಯದಲ್ಲಿ ಅಲ್ಲಿನ ಧರ್ಮಗುರು ರಿಂಪೋಚೆಯವರ ಆಗಮನಕ್ಕೆ ಇಡೀ ಊರು ಸಜ್ಜಾಗಿತ್ತು. ಹೆಣ್ಣುಮಕ್ಕಳು ಸಿಂಗರಿಸಿಕೊಂಡು, ಕಳಶದೊಂದಿಗೆ ಸ್ವಾಗತಕ್ಕೆ ನಿಂತಿದ್ದರು. ನಾನೂ ಅವರೊಂದಿಗೆ ನಿಂತು ಸ್ವಾಗತಿಸಿದೆ. ಅವರ ಪ್ರವಚನ ಕೇಳಿದೆ. ಅಲ್ಲಿರುವ ಹಳೆಯ ಬುದ್ಧನ ಹಾಗೂ ಇತರ ದೇವರ ಚಿತ್ರಗಳು ಅದ್ಭುತವಾಗಿವೆ. ಬೌದ್ಧ ದೇವತಾಲೋಕ ತುಂಬಾ ಜಟಿಲ ಹಾಗೂ ಅಗಾಧವಾದದ್ದು. ಅದಕ್ಕೇ ಇಲ್ಲಿ ನಾನು ಅದರ ಬಗ್ಗೆಹೆಚ್ಚು ಬರೆದಿಲ್ಲ. ಅದು ಬೇರೆಯದೇ ವಸ್ತು. ಅನೇಕ ಚಿತ್ರಗಳು ಹಾಳಾಗಿವೆ. ಆದರೆ ಸಾವಿರ ವರ್ಷಗಳಿಂದ ಉಳಿದು ಬಂದಿರೋದೇ ಆಶ್ಚರ್ಯ!

ಬದುಕು ಉತ್ತರ ಮುಖಿ, ಕೆಳಗೆ ನೆಲದಲ್ಲಿ ನಿಂತಾಗ ಎತ್ತರದ ಈ ಮೊನೆಸ್ಟರಿಯ ಲೋಕಗಳು ಕುತೂಹಲಭರಿತ ಅಷ್ಟೆ ಅಂತ ಅನಿಸಿಬಿಡಬಹುದು, ಆದರೆ ಜೇಬಿನಿಂದ ಕಾಸು ಹಾಕಿಕೊಂಡು ಅಷ್ಟೊಂದು ದುರ್ಗಮ ಬೆಟ್ಟಗಳಿಗೆ, ಅದರ ಹೊಟ್ಟೆಯೊಳಗೆ ಅಡಗಿ ಕೂತಿರುವ ಕಿಬ್ಬಿಗಳಿಗೆ ಹೋಗಿ ತಾಗಿಕೊಂಡಾಗ ಮನಸ್ಸು ಹೊಸ ಎತ್ತರವನ್ನು ಅನುಭವಿಸುತ್ತದೆ. ಕಂಪ್ಯೂಟರ್‌ ಪರದೆಯಲ್ಲಿ ಹೊಸ ವಿಂಡೋ ತೆರೆದುಕೊಂಡಂತೆ ಇಲ್ಲಿ ಹೊಸ ಆಯಾಮ, ಹೊಸ ಬಯಲು ನಮ್ಮೊಳಗೆ ಸೃಷ್ಟಿಯಾಗುತ್ತದೆ. ಮನುಷ್ಯ ತನ್ನ ಮನೋಲೋಕದ ಬಗ್ಗೆ ಕೇವಲ ಕುತೂಹಲ ಬೆಳೆಸಿಕೊಂಡರೆ ಸಾಲದು ಅದರ ಒಳಗೆ ಹಂತ ಹಂತವಾಗಿ ಪ್ರವೇಶ ಮಾಡಬೇಕು ಎಂಬುದು ಬೌದ್ಧ ಯೋಗದ ಒಟ್ಟು.

ಭಾರತೀಯ ಯೋಗದ ದಾರಿ ಅಲ್ಲವೆ? ಅಂಥ ಒಂದು ಮನೋಲೋಕದೊಳಗಿನ ಯೋಗ ಪ್ರವೇಶಕ್ಕೆ ಬೇಕಾದ ಗಟ್ಟಿಮುಟ್ಟಾದ ಗಂಭೀರ ಪರಿಸರವನ್ನು ಇಂಥ ಮೊನೆಸ್ಟರಿಗಳು ಕಟ್ಟಿಕೊಡುತ್ತವೆ. ಮಠದೊಳಗೆ ಧ್ಯಾನದ ಪಾಠವಂತೂ ಇದ್ದೇ ಇದೆ, ಆದರೆ ಇಲ್ಲೆಲ್ಲಾ ಮಠದ ಕಟ್ಟಡವೆ ಒಂದು ಪಾಠ.