ಮಹಾಭಾರತದ ಪ್ರಮುಖ ಪಾತ್ರವಾದ ಗಾಂಧಾರಿಯ ದುಗುಡ, ಯಾತನೆ, ಮನದ ಅಂತರಂಗವನ್ನು ಸುಂದರವಾಗಿ ಅಭಿವ್ಯಕ್ತಿಸುವ ಅದ್ಭುತ ಪುಸ್ತಕವನ್ನು ಹೊರತರುತ್ತಿದ್ದಾರೆ. ಪುರಾಣಪ್ರಿಯರಾದವರಿಗೆ “ಗಾಂಧಾರಿ “ಎಂಬ ಆ ವಿಶಿಷ್ಟ ಭೂಮಿಕೆಯನ್ನು ಲೇಖಕಿ ದಿವ್ಯಾ ಹೇಗೆ ಪ್ರಸ್ತುತಪಡಿಸಿರಬಹುದು ಎಂಬ ಕುತೂಹಲವಿದೆ. ಅವರ ಕುತೂಹಲಕ್ಕೆ ತಣ್ಣೀರೆರಚದೇ ಅದ್ಭುತವಾಗಿ “ಮಿಂಚದ ಮಿಂಚು ” ಮೂಡಿ ಬಂದಿದೆ. ಸಾಮಾನ್ಯವಾಗಿ ಗಾಂಧಾರಿ ಮಹಾಭಾರತದಲ್ಲಿ ದುರಂತ ನಾಯಕಿಯಾಗಿ, ನಿಸ್ಸಹಾಯಕ ಮತ್ತು ಹತಾಶ ವ್ಯಕ್ತಿತ್ವದವಳಾಗಿ ಕಾಣಸಿಗುತ್ತಾಳೆ. ಅದನ್ನು ದಿವ್ಯಾ ತೆರಿದಿರಿಸಿದ ಬಗೆ ಅನನ್ಯ.
ದಿವ್ಯಾ ಶ್ರೀಧರ್  ರಾವ್ ಅವರ ಹೊಸ ಕಿರುಕಾದಂಬರಿಗೆ ಜಗದೀಶ್ ಶೆಟ್ಟಿ ಬರೆದ ಮುನ್ನುಡಿ ಇಲ್ಲಿದೆ.

ದಿವ್ಯಾ ಶ್ರೀಧರ್ ರಾವ್ ಸದಾ ಕ್ರಿಯಾಶೀಲರಾಗಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಮದುವೆಯಾದ ನಂತರ ಸಂಸಾರ ನಿರ್ವಹಣೆ, ವೃತ್ತಿ ಮತ್ತು ಇನ್ನಿತರ ಕಾರಣಗಳಿಂದ ಸಮಾಜದ ಸೂಕ್ಷ್ಮಗಳಿಗೆ ಮಹಿಳೆಯರು ಸ್ಪಂದಿಸುವುದು ಬಲು ಅಪರೂಪ. ಆದರೆ ಈ ಎಲ್ಲ ಅಡೆತಡೆ- ಪ್ರತಿಕೂಲ ಸನ್ನಿವೇಶಗಳನ್ನು ಮೀರಿ ಸ್ತ್ರೀ ಸಂವೇದನೆಯನ್ನು ಅಳವಡಿಸಿಕೊಂಡು ಅನುದಿನವು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಯನ್ನು ಮಾಡುತ್ತಿರುವ ಬೆರಳೆಣಿಕೆಯ ಸಾಹಿತಿಗಳಲ್ಲಿ ದಿವ್ಯಾ ಶ್ರೀಧರ್ ರಾವ್ ರವರು ಒಬ್ಬರು.

(ದಿವ್ಯಾ ಶ್ರೀಧರ್ ರಾವ್)

ಸುಸಂಸ್ಕೃತ ಕೌಟುಂಬಿಕ ಮತ್ತು ಶಿಕ್ಷಣದ ಹಿನ್ನೆಲೆಯು ಇವರ ಸಾಹಿತ್ಯ ಯಾನದ ಆದಿ ಮೆಟ್ಟಿಲುಗಳು. ಕಾಲೇಜು ಶಿಕ್ಷಣ ಮುಗಿದ ನಂತರ ಬದುಕಿನಲ್ಲಿ ಆಗಾಗ ಬಂದ ಅನಿರೀಕ್ಷಿತ ಮತ್ತು ಪ್ರತಿಕೂಲ ಸನ್ನಿವೇಶಗಳನ್ನು ಮೀರಿ ನಿಂತು ದಿಟ್ಟ ಮಹಿಳೆಯಾಗಿ ಕಳೆದ ಒಂದು ದಶಕದಿಂದ ಸಾಹಿತ್ಯದ ವಿವಿಧ ಮಜಲುಗಳಲ್ಲಿ ದಿವ್ಯಾ ಮಾಡಿರುವ ಸಾಧನೆಯನ್ನು ಕಂಡು ನಾವೆಲ್ಲ ಆಶ್ಚರ್ಯ ಚಕಿತರಾಗಿದ್ದೇವೆ, ಜೊತೆಗೆ ನಮ್ಮ ಪಕ್ಕದೂರಿನ ಹೆಣ್ಣುಮಗಳೊಬ್ಬಳು ಸಾಹಿತ್ಯಾಸಕ್ತರು ಗಮನವಿಟ್ಟು ಓದುವ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ ಎಂಬ ವಿಷಯಕವಾಗಿ ಹೆಮ್ಮೆ ಪಟ್ಟಿದ್ದೇವೆ.

ಆರಂಭದಲ್ಲಿ ನಾಡಿನ ಗಂಡುಕಲೆ ಎಂದು ಪರಿಗಣಿತವಾದ ಯಕ್ಷಗಾನದಲ್ಲಿ ತೀರಾ ಅಪರೂಪವೆಂಬಂತೆ ಹೆಣ್ಣು ಮಗಳಾಗಿ “ಕರ್ಣ ವೃಷಾಲಿ” ಎಂಬ ಪ್ರಸಂಗ ರಚಿಸಿದ ಹಿರಿಮೆ ದಿವ್ಯಾರವರದ್ದು. ಬಾಹ್ಯ ಪ್ರಭಾವಗಳಿಂದ ಆಧಾರಿತವಾದ ಸಾಮಾಜಿಕ ಪ್ರಸಂಗಗಳನ್ನು ರಚಿಸಿ ಪ್ರದರ್ಶಿಸುತ್ತಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಇಂತಹ ವಿಲಕ್ಷಣ ಅನುಕರಣೆಯ ಭರಾಟೆಯ ನಡುವೆ ಪುರಾಣ ಸಾಹಿತ್ಯದಲ್ಲಿ ಪಾತ್ರಗಳನ್ನು ಸೃಷ್ಟಿಸಿಕೊಂಡು, ಅದಕ್ಕೆ ನವರೂಪ ವಿಚಾರಧಾರೆಗಳನ್ನು ಪೋಣಿಸಿಕೊಂಡು ವಿಭಿನ್ನ ರೀತಿಯಲ್ಲಿ ಪ್ರಸಂಗವನ್ನು ಬರೆದ ಹಿರಿಮೆ ದಿವ್ಯಾ ಶ್ರೀಧರ್ ರಾವ್ ಅವರಿಗೆ ಸಲ್ಲುತ್ತದೆ. ತದನಂತರ ಅವರು ಬರೆದ “ಆ ನೀಲಿ ಕಂಗಳ ಹುಡುಗಿ” ಎನ್ನುವ ಪುಸ್ತಕ ಸಾಹಿತ್ಯ ವಲಯದಲ್ಲಿ ವ್ಯಾಪಕ ಪ್ರಶಂಸೆ ಮತ್ತು ಪುರಸ್ಕಾರಗಳಿಗೆ ಪಾತ್ರವಾಗಿತ್ತು. ವೇಶ್ಯೆಯೊಬ್ಬಳ ಜೀವನ ಚರಿತ್ರೆಯನ್ನು ಕಥಾವಸ್ತುವಾಗಿ ಅವರು ಬರೆದ ಇನ್ನೊಂದು ಕೃತಿ “ಮೌನ ಧ್ವನಿಸಿತು” ಎಂಬುದು ಅವರ ಸಾಹಿತ್ಯ ಕ್ಷೇತ್ರದ ಇನ್ನೊಂದು ಮೈಲುಗಲ್ಲು.

ಇನ್ನೂ ಪ್ರಸ್ತುತ ಈ ಕಾದಂಬರಿಯ ಕುರಿತಂತೆ ಹೇಳುವುದಿದ್ದರೇ, ದಿವ್ಯಾರವರು “ಮಿಂಚದ ಮಿಂಚು” ಎಂಬ ಈ ಕಾದಂಬರಿಯ ಮುಖೇನ ಮಹಾಭಾರತದ ಪ್ರಮುಖ ಪಾತ್ರವಾದ ಗಾಂಧಾರಿಯ ದುಗುಡ, ಯಾತನೆ, ಮನದ ಅಂತರಂಗವನ್ನು ಸುಂದರವಾಗಿ ಅಭಿವ್ಯಕ್ತಿಸುವ ಅದ್ಭುತ ಪುಸ್ತಕವನ್ನು ಹೊರತರುತ್ತಿದ್ದಾರೆ.

ಪುರಾಣಪ್ರಿಯರಾದವರಿಗೆ “ಗಾಂಧಾರಿ “ಎಂಬ ಆ ವಿಶಿಷ್ಟ ಭೂಮಿಕೆಯನ್ನು ಲೇಖಕಿ ದಿವ್ಯಾ ಹೇಗೆ ಪ್ರಸ್ತುತಪಡಿಸಿರಬಹುದು ಎಂಬ ಕುತೂಹಲವಿದೆ. ಅವರ ಕುತೂಹಲಕ್ಕೆ ತಣ್ಣೀರೆರಚದೇ ಅದ್ಭುತವಾಗಿ “ಮಿಂಚದ ಮಿಂಚು ” ಮೂಡಿ ಬಂದಿದೆ.

ಸಾಮಾನ್ಯವಾಗಿ ಗಾಂಧಾರಿ ಮಹಾಭಾರತದಲ್ಲಿ ದುರಂತ ನಾಯಕಿಯಾಗಿ, ನಿಸ್ಸಹಾಯಕ ಮತ್ತು ಹತಾಶ ವ್ಯಕ್ತಿತ್ವದವಳಾಗಿ ಕಾಣಸಿಗುತ್ತಾಳೆ. ಅದನ್ನು ದಿವ್ಯಾ ತೆರಿದಿರಿಸಿದ ಬಗೆ ಅನನ್ಯ.

ಪಾಂಡವ ಪಂಚಕರಿಂದ ಕೌರವಾದಿಗಳ ಹನನದ ಪಶ್ಚಾತ್ ಕಂಪನವೇ “ಗಾಂಧಾರಿ ಶಾಪ” ಎಂಬ ಪ್ರಸಂಗ. ಕೃಷ್ಣಾವಾತಾರದ ಪರಿಸಮಾಪ್ತಿಗೆ ಗಾಂಧಾರಿಯ ಶಾಪವೇ ಹೇತುವಾಯಿತು ಎಂಬ ಮಾತಿದೆ. ಈ ಕಥೆಯ ಎಳೆಯನ್ನೇ ತಿರುಳಾಗಿಸಿಕೊಂಡು ರೂಪುಗೊಂಡದ್ದು “ಮಿಂಚದ ಮಿಂಚು” ಎಂಬ ಮಿನಿ ಕಾದಂಬರಿ.

(ಜಗದೀಶ್ ಶೆಟ್ಟಿ)

ಕೃಷ್ಣನಿಗೆ ಶಪಿಸಿದ ಬಳಿಕ ಉದ್ಭವಿಸುವ ಗಾಂಧಾರಿಯ ಮನದ ತುಮುಲಗಳು, ಅವುಗಳನ್ನು ಕುಂತಿಯೊಂದಿಗೆ ಹಂಚಿಕೊಳ್ಳುತ್ತಾ ಸಾಗುವ ಬಗೆಯಲ್ಲಿ ಗಾಂಧಾರಿಯ ಜೀವನದ ಸಮಗ್ರ ಚಿತ್ರಣವು ಓದುಗರಿಗೆ ಲಭ್ಯ ವಾಗುತ್ತದೆ.

ಸ್ತ್ರೀ ಸಂವೇದನೆಯನ್ನು ತನ್ನ ಎಂದಿನ ಸರಳ ಸುಂದರ ಶೈಲಿಯೊಂದಿಗೆ ದಿವ್ಯಾ ಕಟ್ಟಿಕೊಡುವ ಬಗೆ ಅನನ್ಯ, ಅನುಪಮವಾದುದು.

ಗಾಂಧಾರಿಯ ಬಾಲ್ಯ, ಬಾಲ್ಯದಲ್ಲಿ ಆಕೆಗೆ ಕತ್ತಲೆಯ ಕುರಿತಾಗಿ ಇದ್ದ ಅಪರಿಮಿತ ಭಯ, ನೀನು ಗಾಂಧಾರದ ಮಿಂಚು ಎಂದು ಅಣ್ಣ ಶಕುನಿಯಿಂದ ಹೇಳಿಸಿಕೊಂಡದ್ದೂ, ಕಣ್ಣಿದ್ದೂ ತನ್ನ ಗಂಡನಿಗಿರದ ಸೌಭಾಗ್ಯ ತನಗೆ ಬೇಡವೆಂದು ಕಣ್ಣಿಗೆ ಬಟ್ಟೆ ಕೊಂಡು ಕುರುಡಳಾಗುವ ಆಕೆಯ ನಿರ್ಧಾರ, ಮಕ್ಕಳಿಗೆ ಸಿಗಬೇಕಾದ ಪ್ರೀತಿ ಸಿಗದೇ ಹೋದಾಗ ಅವರು ಎಲ್ಲಿ ಪ್ರೀತಿ ಸಿಗುತ್ತದೊ ಎಂದು ಅರಸಿ ಅಲ್ಲಿ ಸಾಗುತ್ತಾರೆ ಎಂದು ಹೇಳುತ್ತಾ ಶಕುನಿಯಿಂದಾಗಿ ನನ್ನ ಮಗ ದಾರಿ ತಪ್ಪಿದ ಎಂದು ರೋಧಿಸುವ ಬಗೆ, ಕೃಷ್ಣನಿಂದ ಒದಗಲ್ಪಟ್ಟ ಅಕ್ಷಯಾಂಬರದಿಂದ ತನ್ನ ಮಗನಿಗೆ ಸೋಲಾದರೂ, ಮಗನ ಸೋಲನ್ನು ಸಂಭ್ರಮಿಸುವ ಪ್ರಥಮ ತಾಯಿ ತಾನು ಎಂದು ಹೇಳುವ ಗಾಂಧಾರಿಯ ಜೀವನ ಚರಿತ್ರೆಯನ್ನು ಎಳೆಎಳೆಯಾಗಿ ತೆರಿದಿರಿಸುತ್ತಾ ದಿವ್ಯಾ ತಾನೋರ್ವ ಮಾಗಿದ ಕತೆಗಾರ್ತಿ ಎಂಬುದನ್ನು ಸಾಬೀತು ಪಡಿಸಿದ್ದಾರೆ.
“ಪುತ್ರ ಶೋಕಂ ನಿರಂತರಂ” ಎಂಬಂತೆ ಪ್ರಾಯಪ್ರಬುದ್ದರಾದ ಮಕ್ಕಳು ಕಣ್ಣೆದುರೇ ಸತ್ತಾಗ ಮಾತೆಯಾದವಳು ಪಡುವ ನೋವು ವರ್ಣಿಸಲಸಾಧ್ಯವಾದದ್ದು.

ಗಾಂಧಾರಿ ನೂರು ಮಕ್ಕಳ ಸಾವಿನ ಶೋಕಸಾಗರದಲ್ಲಿ ಮುಳುಗಿ ಜಗತ್ತಿನ ಯಾವ ತಾಯಿಯೂ ಅನುಭವಿಸದ ನೋವನ್ನು ಅನುಭವಿಸಿದವಳು. ಹೆಣ್ಣೊಬ್ಬಳಿಗೆ ಹೆರಿಗೆಯ ನೋವೇ ಮಹಾಯಾತನೆಯಂತೆ. ಆದರೆ ಗಾಂಧಾರಿ ಸರಣಿಯಾಗಿ ಸರಣಿಯಾಗಿ ಮಕ್ಕಳ ಸಾವಿನ ನೋವನ್ನು ಅನುಭವಿಸಿ ಜರ್ಜರಿತಳಾದವಳು. ಮಕ್ಕಳ ಶವಗಳ ಮುಂದೆ ಕಣ್ಣೀರು ಕರಗಿಸಿಕೊಂಡವಳು. ರಾಜಕುಮಾರಿಯಾಗಿ, ಮಡದಿಯಾಗಿ, ರಾಣಿಯಾಗಿ, ತಾಯಿಯಾಗಿ ಒಂದು ದಿನವೂ ಸುಖ ಕಾಣದ ನತದೃಷ್ಟೆ ಗಾಂಧಾರಿ. ಇಂತಹ ಪಾತ್ರದ ಒಳಮನಸ್ಸನ್ನು ಹೊರಜಗತ್ತಿಗೆ ತೋರಿಸುವ ಉತ್ತಮ ಪ್ರಯತ್ನವನ್ನು ಲೇಖಕಿ ದಿವ್ಯಾ ಶ್ರೀಧರ್ ರಾವ್ “ಮಿಂಚದ ಮಿಂಚು” ಎಂಬ ಕಾದಂಬರಿಯ ಮೂಲಕ ಮಾಡಿದ್ದಾರೆ.