ಅಲ್ಲಿ ನಾವಿಬ್ಬರೂ ಶಾಲೆ ಕಲಿತ ನೆನಪಿತ್ತು. ಗುಲ್ ಮೊಹರ್ ಹೂವಿನ ಕೆಳಗಿನ ಎಸಳನ್ನು ಉಗುರುಗಳಿಗೆ ಅಂಟಿಸಿಕೊಂಡು “ದೆವ್ವಾ… ದೆವ್ವಾ..” ಅಂತ ಪುಟ್ಟ ತಮ್ಮನಿಗೆ ಹೆದರಿಸಿ, ಆಟ ಆಡಿದ ನೆನಪಿತ್ತು. ಅದರಲ್ಲೂ ಮುಖ್ಯವಾಗಿ ಬಹುತೇಕ ಸಂಜೆಗಳಲ್ಲಿ ಅಕ್ಕ ಮತ್ತು ನಾನು ಬಾಡಿಗೆ ಸೈಕಲ್ ಪಡೆದು ಮೈದಾನದ ತುಂಬೆಲ್ಲ ಸುತ್ತಾಡಿದ ನೆನಪಂತೂ ಇನ್ನೂ ಬೆಚ್ಚಗೆ ಮನಸ್ಸಲ್ಲಿದೆ. ಅಕ್ಕ ಮೊದಲಿನಿಂದಲೂ ಧೈರ್ಯವಂತೆ. ಅವಳು ಆಗಲೇ ಸೈಕಲ್ ಕಲಿತು ನನ್ನನ್ನು ಹಿಂದೆ ಕೂಡಿಸಿಕೊಂಡು ಸುತ್ತಾಡಿಸುತ್ತಿದ್ದಳು.
ರೂಪಶ್ರೀ ಕಲ್ಲಿಗನೂರ್ ಅಂಕಣ.

 

ಆವತ್ತು ವಾತಾವರಣವೇ ಹಾಗಿತ್ತು. ಹೊರಗೆ ಬಿಸಿಲು, ಒಳಗೆ ಇಳಿಬಿಟ್ಟ ಕೈಯೊಳಗಿನ ರಕ್ತ ಹೆಪ್ಪುಗಟ್ಟುವಂಥಾ ಚಳಿ. ಸರ್ಕಾರಿ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಕುಳಿತ ನಮಗಾಗಲೀ ಅಥವಾ ಮತ್ಮತ್ತೆ ಆಕಳಿಸಿಕೊಂಡು ಪಾಠ ಮಾಡುತ್ತಿದ್ದ ನಿರ್ಮಲಾ ಟೀಚರ್ ಗಾಗಲೀ ಪಾಠದ ಮೇಲೆ ಅಷ್ಟು ಗಮನವೇ ಇರಲಿಲ್ಲ. ಅದರಲ್ಲೂ ನಾವಾಗ ಎರಡೋ ಅಥವಾ ಮೂರನೆಯ ತರಗತಿಯ ಮಕ್ಕಳು. ಒಂದಿಂಚು ದಪ್ಪದ ಹಲಗೆಯೇ ನಮಗೆ ಆಗ ಬೆಂಚುಗಳಾಗಿದ್ದವು. ಥಣ್ಣಗೆ ಕೊರೆಯುತ್ತಿದ್ದ ಪಾಟಿಗ್ಗಲ್ಲಿನ ನೆಲ ನಮ್ಮನ್ನು ಶಾಲೆಯಿಂದ ಒದ್ದೋಡಿಸುವಷ್ಟು ಶೀತಲ ಶಿಲ್ಪವಾಗಿತ್ತು. ಅಂಥದ್ದರಲ್ಲಿ ಗೋಡೆಯ ಮೇಲಿನ ಗಡಿಯಾರವೂ ಬಹಳ ಹೊತ್ತಿನಿಂದ ಸಮಯವನ್ನು 12 ಗಂಟೆ ಎಂದೇ ತೋರಿಸುತ್ತಿತ್ತು. ಗಡಿಯಾರದ ಯಾವ ಮುಳ್ಳೂ ಅಲ್ಲಾಡಲೊಲ್ಲದು. ಅದಕ್ಕೂ ನಮ್ಮಂತೆ ಥಂಡಿ ಹಿಡಿದು, ಫ್ರೀಝ್ ಆಗಿಬಿಟ್ಟಿರಬಹುದಾ? ಅಥವಾ ಅದರ ನಟ್ಟುಬೋಲ್ಟುಗಳೆಲ್ಲಾ ಥಂಡಿಗೆ ತುಕ್ಕು ಹಿಡಿದು ಹೋದವಾ? ಅನ್ನೋದು ನನ್ನ ಚಿಂತೆ. ಯಾಕಂದ್ರೆ ಇನ್ನೊಂದರ್ಧ ಗಂಟೆ ಆ ಮುಳ್ಳುಗಳು ಮುಂದಕ್ಕೋಡಿದ್ರೆ ಹೊಟ್ಟೆಗೊಂದಿಷ್ಟು ತುಪ್ಪ ಕಲೆಸಿದ ಬಿಸಿಬಿಸಿ ಅನ್ನ ಬೀಳುತ್ತಿತ್ತು. ಜೊತೆಗೆ ಇವತ್ತಷ್ಟೇ ಭರಣಿಯಿಂದ ಹೊರಬಂದ ಅಮ್ಮನ ಬೆಲ್ಲದನಿಂಬೆಹಣ್ಣಿನ ಉಪ್ಪಿನಕಾಯಿಯ ರುಚಿಯೂ ಸಿಗುತ್ತೆ. ಥು. ಇದ್ಯಾವ ಟ್ಯಾಂಪೀಸು. ಕೆಟ್ಟು ನಿಂತಿರ್ಬೇಕು ಅಂತ ಮನಸ್ಸಲ್ಲೇ ಬೈದುಕೊಂಡೆ. ಮುಖ, ಕಣ್ಣೆಲ್ಲ ಪಾಠ ಮಾಡುತ್ತಿದ್ದ ಟೀಚರ್ ಮೇಲಿತ್ತಾದ್ರೂ ಮನಸ್ಸು ಮಾತ್ರ ಹೊತ್ತು ಹೋದಂತೆ ಹೊಟ್ಟೆಯ ಆಳಅಗಲ ಮತ್ತೂ ಹೆಚ್ಚುತ್ತಿದೆಯಲ್ಲ ಅಂತ ಇನ್ನಷ್ಟು ಖೇದಪಡುತ್ತಿತ್ತು.

ಹಾಗೆ ಹೊಟ್ಟೆದೇವರು ಇನ್ನಿಲ್ಲದಂತೆ ಊಟಾರಾಧನೆಗಾಗಿ ಬೊಬ್ಬಿಡುವಾಗ, ಎಷ್ಟೂಂತ ಟೀಚರ್ ಮುಖ ನೋಡುವುದು. ಹಾಗಂತ ಒಂದುಕ್ಷಣ ಎಡಕ್ಕೆ ತಿರುಗಿ ನೋಡಿದ್ದೆ. ಪಕ್ಕದಲ್ಲಿದ್ದ ಆಶಾ ಬ್ರಹ್ಮಾಂಡದಷ್ಟು ಬಾಯಿ ತೆಗೆದು ಆಕಳಿಸುತ್ತಿದ್ದಳು. ಆಶಾ ಸವಣೂರಿನ ನನ್ನ ಶಾಲೆಯ ನೆನಪಿನಂಗಳದ ಕೇಂದ್ರಬಿಂದು. ನನ್ನ ಬೆಸ್ಟ್ ಫ್ರೆಂಡ್. ಅವಳನ್ನು ನೋಡಿದ್ದೆ ನನಗೂ ಆಕಳಿಕೆಯ ಅಂಟುರೋಗ ನನ್ನ ಬೆನ್ನಿಗಂಟಿತ್ತು. ಅಷ್ಟರಲ್ಲೇ ಅವಳು ಮೆಲ್ಲನೆ ಹೊಟ್ಟೆಯ ಮೇಲೆ ಕೈಯಿಟ್ಟುಕೊಂಡು ‘ಹೊಟ್ಟೆ ಹಸಿವು’ ಎಂಬಂತೆ ಮುಖ ಸಣ್ಣ ಮಾಡಿದ್ದಳು. ನಾನು ನನಗೂ ಎಂಬಂತೆ ಸೋತ ಮುಖ ಮಾಡಿದ್ದೆ. ಅವಳೂ ಗಡಿಯಾರದತ್ತ ಒಮ್ಮೆ ಕಣ್ಣೋಡಿಸಿ, ಇನ್ನಷ್ಟು ಮುಖ ಬಾಡಿಸಿದ್ದಳು. ಅದಾಗಿ ಎರಡೂ ನಿಮಿಷವೂ ಆಗಿರಲಿಲ್ಲ. ಶಾಲೆಯ ಪ್ಯೂನ್ ಊಟದ ಗಂಟೆಯನ್ನ ಡಣ್ ಡಣಾ ಢಣ್ ಅಂತ ಬಾರಿಸಿದ್ದ. ನಾವಿಬ್ಬರೂ ಒಂದೇ ಸಲಕ್ಕೆ ಎಂಬಂತೆ ಗಡಿಯಾರದತ್ತ ಕಣ್ಣು ಹಾಯಿಸಿದ್ವಿ. ಆಗಲೂ ಅದೇ 12 ಗಂಟೆಯನ್ನೇ ತೋರಿಸ್ಬೇಕ! ಇಬ್ಬರೂ ಮುಖಮುಖ ನೋಡಿಕೊಂಡು ನಕ್ಕು ಕೈ ಹಿಡಿದುಕೊಂಡು ಹೊರಗೋಡಿ ಬಂದಿದ್ವಿ.

ಅಷ್ಟರಲ್ಲಾಗಲೇ ಅಮ್ಮ ಸಮುದ್ರ ನೀಲಿ ಬಣ್ಣದ ಬ್ಯಾಸ್ಕೆಟ್ಟಿನಲ್ಲಿ ಊಟದ ಡಬ್ಬಿಯನ್ನು ತಂದು ಕಾಯುತ್ತಿದ್ದಳು. ನನ್ನನ್ನು ಕಂಡದ್ದೇ ಅಮ್ಮ ಬ್ಯಾಸ್ಕೆಟ್ ಕೊಟ್ಟು, ಆಶಾಳನ್ನೂ ಮಾತಾಡಿಸಿ “ಬಿಸೆ ಬಿಸೆ ಅನ್ನ ಐತಿ. ನೀನೂ ತಿನ್ನು ಅವ್ವಿ” ಅಂದು ಮನೆಯತ್ತ ಕಾಲುಹಾಕಿದ್ದಳು. ಅಮ್ಮನಿಗೆ ಅದೆಷ್ಟು ಸಹನೆ ಅಂದರೆ ನಾವು ಹೈಸ್ಕೂಲು ಮುಟ್ಟುವವರೆಗೂ ನಮ್ಮ ಮೂರುಜನಕ್ಕೂ ಮಧ್ಯಾಹ್ನಕ್ಕೆ ಬಿಸಿಯಡಿಗೆ ಮಾಡಿಕೊಂಡು ಬರುತ್ತಿದ್ದಳು. ಅದರಲ್ಲೂ ಅನ್ನಕ್ಕೆ ಬೀನ್ಸ್ ಹಾಕಿದ ಬೇಳೆ ಸಾರಿನ ಊಟವೆಂದರೆ ಸಾಕು. ಅರ್ಧಕ್ಕರ್ಧ ಡಬ್ಬಿ ಸ್ನೇಹಿತರ ಪಾಲಾಗಿಬಿಡುತ್ತಿತ್ತು. ಅಷ್ಟು ರುಚಿ ನನ್ನಮ್ಮನ ಕೈ ಅಡುಗೆಯದ್ದು.

ಹಾಗೆ ಅಮ್ಮ ತಂದ ಡಬ್ಬಿಯಲ್ಲಿನ ಊಟ ಸರಿಯಾಗಿ ಆರುವ ಮುನ್ನ ನಾನು ಮತ್ತು ಆಶಾ ಖಾಲಿಮಾಡಿ, ಮತ್ತೆ ಅವಳ ಮನೆಯತ್ತ ಹೆಜ್ಜೆ ಹಾಕುತ್ತಿದ್ವಿ. ಅವಳ ಮನೆಯೇನೂ ತೀರಾ ದೂರವಿರಲಿಲ್ಲ. ಆದರೆ ಸೀದಾ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕೆಂದರೆ 15 ನಿಮಿಷ ಬೇಕಾಗುತ್ತಿತ್ತು. ಹಾಗಂತ ಅಷ್ಟುದ್ದ ನಡೆದುಕೊಂಡು ಹೋಗಿ, ಊಟ ಮಾಡಿ ಬರಬೇಕೆಂದರೆ, ಶಾಲೆಯ ಸಮಯವಾಗಿಬಿಡುತ್ತಿತ್ತು. ಆಟಕ್ಕೆ ಒಂದಿಷ್ಟೂ ಸಮಯವೂ ಉಳಿಯುತ್ತಿರಲಿಲ್ಲ. ಹಾಗಾಗಿ ನಾವಿಬ್ಬರೂ ಒಂದು ಸಾಹಸೀಯ ಶಾರ್ಟ್ ಕಟ್ ಮಾರ್ಗವನ್ನು ಕಂಡುಕೊಂಡಿದ್ದೆವು! ಮೊದಲಿನಿಂದಲೂ ಸ್ವಲ್ಪ ಮೂಡಿಯಾದ ನನಗೆ ಸ್ನೇಹಿತರೇ ಕಡಿಮೆ. ಆದರೆ ಆಶಾಳ ಸ್ನೇಹ ಮಾತ್ರ ಆಗಲೇ ಬಹಳ ಗಟ್ಟಿಯಿತ್ತು. ಮತ್ತೆ ಈಗಲೂ ಹಾಗೇ ಇದೆ. ಆದರೆ ಅವಳು ಮಾತ್ರ ಮತ್ತೆ ಸಿಕ್ಕದ್ದಿಲ್ಲ.

ನಮ್ಮ ಶಾಲೆಯಿದ್ದದ್ದು ಒಂದು ದೊಡ್ಡ ಮೈದಾನದಲ್ಲಿ. ಅಲ್ಲಿ ಸರ್ಕಾರಿ ಹೆಣ್ಣುಮಕ್ಕಳ ಶಾಲೆ, ಗಂಡುಮಕ್ಕಳ ಶಾಲೆ, ಉರ್ದು ಶಾಲೆಯಲ್ಲದೇ ಮತ್ತು ಒಂದು ಕಾನ್ವೆಂಟ್ ಶಾಲೆಯೂ ಅಲ್ಲಿತ್ತು. ಅಷ್ಟಲ್ಲದೇ ಅಪ್ಪ ಕೆಲಸ ಮಾಡುತ್ತಿದ್ದ ಗ್ರಂಥಾಲಯ, ತೋಟಗಾರಿಕೆ ಇಲಾಖೆ, ಮಿನಿ ವಿಧಾನಸೌಧ ಮತ್ತು ಒಂದು ಕೋರ್ಟ್ ಸಹ ಇತ್ತು. ಆ ಕೋರ್ಟ್ ಮತ್ತು ಗ್ರಂಥಾಲಯದ ನಡುವೆ ಒಂದಿಷ್ಟು ಜಾಗವಿತ್ತು. ಮತ್ತೆ ಅವೆರಡರ ಹಿಂದಿನ ಭಾಗದುದ್ದಕ್ಕೂ ಹಳೆಯದಾದ ಜೈಲು ಸಹ ಇತ್ತು. ಅಪ್ಪನ ಗ್ರಂಥಾಲಯಕ್ಕೆ ಹೋದಾಗಲೆಲ್ಲ ನಾನು ಆ ಜೈಲನ್ನು ಇನ್ನಿಲ್ಲದಂತೆ ಗಮನಿಸುತ್ತಿದ್ದೆ. ಗ್ರಂಥಾಲಯದ ಕಿಟಕಿಯ ಸರಳುಗಳನ್ನು ಹಿಡಿದು, ಪಾಠದಲ್ಲಿ ಬರುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರು, ಇಂಥದ್ದೆ ಜೈಲುಗಳಲ್ಲಿ ಇದ್ದರಾ? ಅಥವಾ ಇಲ್ಲೇ ಇದ್ದು ಹೋಗಿರಬಹುದಾ? ಎಂದೆಲ್ಲ ಅಂದುಕೊಳ್ಳುತ್ತಿದ್ದೆ. ಹುಲ್ಲು, ಹೊಲಸು ತುಂಬಿರುತ್ತಿದ್ದ ಆ ಒಂದೊಂದು ಕೋಣೆಗಳು, ಪಾಚಿಕಟ್ಟಿದ ಗೋಡೆಗಳನ್ನು ನನ್ನನ್ನು ಸ್ವಲ್ಪ ಅಧೀರಳನ್ನಾಗಿಸುತ್ತಿದ್ದವು. ಆದರೂ ನನ್ನ ಕುತೂಹಲವು ಸುಮ್ಮನಿರಗೊಡದೆ, ಮತ್ತೆಮತ್ತೆ ಅದರ ಮೇಲೆಯೇ ನೋಟ ನೆಡುವಂತೆ ಮಾಡುತ್ತಿತ್ತು. ಇನ್ನು ಕೋರ್ಟ್ ಆವರಣದಲ್ಲಿ ಧ್ವಜದ ಕಂಬದ ಮೇಲೆಯೇ ಪ್ರತಿಬಾರಿಯ ಸ್ವಾತಂತ್ರ್ಯೋತ್ಸವದ ಧ್ವಜ ಹಾರಾಡುತ್ತಿದ್ದುದು. ಆ ಧ್ವಜದ ಕಟ್ಟೆಗೆ ಸುತ್ತಲೂ ಕಂಬಗಳನ್ನು ನೆಟ್ಟು ಅವಕ್ಕೆ ಸರಪಳಿಗಳನ್ನು ಜೋತು ಬಿಟ್ಟಿದ್ದರು. ಶಾಲೆಗೆ ಹೋಗುವಾಗಲೂ ಬರುವಾಗಲೂ ಎಲ್ಲ ಶಾಲೆಯ ಮಕ್ಕಳೂ ಅದನ್ನ ದಾಟಿಕೊಂಡೇ ಓಡಾಡಬೇಕಿತ್ತು. ಹಾಗಾಗಿ ನಾವು ಜೋಕಾಲಿಯಲ್ಲಿ ಅಷ್ಟು ಜೀಕು ಹೊಡೆದಿದ್ದೆವೋ ಇಲ್ಲವೋ, ಆದರೆ ಆ ಸರಪಳಿಗಳ ಮೇಲೆ ಕೂತು ಸಾವಿರಬಾರಿಯಾದರೂ ಜೋಕಾಲಿ ಆಡಿರಬೇಕು. ಅದರ ನೆನಪಿನ್ನೂ ನಿಚ್ಚಳವಾಗಿ ನೆನಪಿದೆ. ಆಗಿನ್ನೂ 6-7 ವರ್ಷದ ಮಕ್ಕಳಾಗಿದ್ದರಿಂದಲೋ ಏನೋ ಯಾರ ಕೈಯಲ್ಲೂ ಅದರ ಕುರಿತು ಬೈಸಿಕೊಂಡಿರದಿದ್ದುದು ನಮ್ಮ ಪುಣ್ಯವೇ.

ಅಮ್ಮ ಸಮುದ್ರ ನೀಲಿ ಬಣ್ಣದ ಬ್ಯಾಸ್ಕೆಟ್ಟಿನಲ್ಲಿ ಊಟದ ಡಬ್ಬಿಯನ್ನು ತಂದು ಕಾಯುತ್ತಿದ್ದಳು. ನನ್ನನ್ನು ಕಂಡದ್ದೇ ಅಮ್ಮ ಬ್ಯಾಸ್ಕೆಟ್ ಕೊಟ್ಟು, ಆಶಾಳನ್ನೂ ಮಾತಾಡಿಸಿ “ಬಿಸೆ ಬಿಸೆ ಅನ್ನ ಐತಿ. ನೀನೂ ತಿನ್ನು ಅವ್ವಿ” ಅಂದು ಮನೆಯತ್ತ ಕಾಲುಹಾಕಿದ್ದಳು. ಅಮ್ಮನಿಗೆ ಅದೆಷ್ಟು ಸಹನೆ ಅಂದರೆ ನಾವು ಹೈಸ್ಕೂಲು ಮುಟ್ಟುವವರೆಗೂ ನಮ್ಮ ಮೂರುಜನಕ್ಕೂ ಮಧ್ಯಾಹ್ನಕ್ಕೆ ಬಿಸಿಯಡಿಗೆ ಮಾಡಿಕೊಂಡು ಬರುತ್ತಿದ್ದಳು.

ಅವಿಷ್ಟೂ ಕಟ್ಟಡಗಳ ಸುಮಾರು ಅರ್ಧಕ್ಕಿಂತ ಹೆಚ್ಚು ಭಾಗಕ್ಕೆ ಉದ್ದಾನುದ್ದದ ಗೋಡೆ ಕಟ್ಟಲಾಗಿತ್ತು. ಇಷ್ಟೆಲ್ಲವನ್ನೂ ದಾಟಿ, ಹೊರಹೋದಮೇಲೆ, ಮತ್ತೆ ಆ ಗೋಡೆಯ ಅರ್ಧಭಾಗ ಹಿಂದಕ್ಕೆ ಹೋದರೆ ಅಲ್ಲಿ ಆಶಾಳ ಮನೆಯಿತ್ತು. ಹಾಗಾಗಿ ಅಷ್ಟೆಲ್ಲ ದಣಿವು ಮಾಡಿಕೊಳ್ಳುವುದಕ್ಕಿಂತ ಗೋಡೆ ಹಾರುವುದೇ ಮೇಲೆಂಬ ಸತ್ಯವನ್ನು ಆಶಾ ಅರಿತುಕೊಂಡಿದ್ದಳು. ಹಾಗಾಗಿಯೇ ಅವಳು ಸುತ್ತಿಬಳಸಿ ಬರುವ ಬದಲು ಶಾರ್ಟ್ ಕಟ್ ಹಾದಿಯಲ್ಲಿ ಶಾಲೆಗೆ ಓಡಾಡುತ್ತಿದ್ದಳು.

ಹಾಗೆಯೇ ದಿನನಿತ್ಯ ನಾವು ಮಧ್ಯಾಹ್ನ ನನ್ನ ಡಬ್ಬಿಯನ್ನು ಸ್ವಚ್ಚಗೊಳಿಸಿದ್ದೇ ದಾಪುಗಾಲು ಹಾಕಿ ಗೋಡೆಯತ್ತ ಓಡಿ, ಅದನ್ನು ಹಾರಿ ಅವಳ ಮನೆಗೆ ಹೋಗೋದು ಶಾಲೆಯ ದಿನಚರಿಯ ಭಾಗವಾಗಿಹೋಗಿತ್ತು. ಗೋಡೆ ಹಾರಲಂತೂ ಒಬ್ಬರಿಗೆ ಇನ್ನೊಬ್ಬರ ಸಹಾಯ ಬೇಕೇ ಬೇಕಿತ್ತು. ಆದರೆ ಚೋಟುದ್ದವಿದ್ದ ನಾವಿಬ್ಬರೂ ಹೇಗೆ ಆ ಗೋಡೆಯನ್ನು ಹತ್ತಿಳಿದು ಮಾಡುತ್ತಿದ್ದೆವೋ. ಅದಂತೂ ನೆನಪಿಗೇ ಬರುತ್ತಿಲ್ಲ. ಇಳಿಯುವಾಗ ಮಾತ್ರ ಆಶಾ ನನಗೆ ಕೈಕೊಟ್ಟು ಇಳಿಸಿಕೊಳ್ಳುತ್ತಿದ್ದ ನೆನಪು ಇನ್ನೂ ಹಸಿಹಸಿಯಾಗಿದೆ. ಮೊದಲನೆಯ ತರಗತಿಯಿಂದ ಮೂರನೆ ತರಗತಿಯವರೆಗೂ ಮಧ್ಯಾಹ್ನದ ನಮ್ಮ ಶಾಲೆಯ ಡೈರಿಯ ದೃಶ್ಯ ಬಹುತೇಕ ಇದೇ ಆಗಿರುತಿತ್ತು. ಆಮೇಲೆ ಬೆಂಗಲೂರು ಸೇರಿದ ನಂತರದ್ದು ಇಷ್ಟೆಲ್ಲ ಮಜವಾಗಿರಲಿಲ್ಲ ಅಂತ ಅನ್ನಿಸುತ್ತೆ. ಅಷ್ಟೇ ಅಲ್ಲದೇ ಸಾಹಸಗಳೆಂದರೆ ಮಾರುದ್ದ ನಿಲ್ಲುವ ನಾನು ಅದು ಹೇಗೆ ಆ ಗೋಡೆಯನ್ನು ಹತ್ತಿಳಿಯುತ್ತಿದ್ದೆನೋ. ಈಗಲೂ ಅದೊಂದು ವಿಸ್ಮಯದ ವಿಷಯ ನನಗೆ. ಹಾಗೇ ಆಶಾ ಕೂಡ.

ಆ ಗೋಡೆಗೆ ಸಂಬಂಧಿಸಿದ್ದ ಇನ್ನೊಂದು ನೆನಪಿದೆ. ಸರ್ಕಾರಿ ಶಾಲೆಗಳೆಲ್ಲ ಆದನಂತರ, ಮತ್ತೊಂದು ಪುಟ್ಟ ಮೈದಾನದಂತಿದ್ದ ಆವರಣದಲ್ಲಿ ಕಾನ್ವೆಂಟ್ ಶಾಲೆ, ಮತ್ತು ಒಂದು ಪುಟ್ಟ ವಠಾರವಿತ್ತು. ಆ ವಠಾರಕ್ಕಂಟಿಕೊಂಡೇ ನಾವು ಹಾರುವ ಗೋಡೆಯಿದ್ದದ್ದು. ಆ ಆವರಣದ ತುಂಬ ಮತ್ತೆ ಶಾಲೆ ವಠಾರದ ತುಂಬೆಲ್ಲಾ ಉದ್ದನೆಯ ಬಿಳಿ ಹೂವಿನ ಉದ್ದುದ್ದ ಮರಗಳಿದ್ದವು. ಹಾಗಾಗಿ ನಮ್ಮ ಶಾಲೆಯ ಆವರಣಕ್ಕಿಂತ ಕಾನ್ವೆಂಟ್ ಶಾಲಾ ಆವರಣ ಸದಾ ಮಬ್ಬುಗತ್ತಲಿನಲ್ಲಿ ಇರುವಂತೆ ಕಾಣುತ್ತಿತ್ತು. ಮರಗಳಿಂದ ಉದುರುತ್ತಿದ್ದ ಎಲೆಗಳು ಹೇರಳವಾಗಿರುತ್ತಿದ್ದರಿಂದ ಆಡುವಾಗ ಯಾರಾದರೊಬ್ಬರು ಜಾರಿ ಬೀಳುತ್ತಿದ್ದರು. ಹಾಗಾಗಿ ಸದಾ ಅವುಗಳನ್ನೆಲ್ಲ ಗುಡಿಸಿ ಅಲ್ಲಲ್ಲಿ ಗುಡ್ಡೆ ಹಾಕಿರುತ್ತಿದ್ದರು. ಅದೇ ಕಸವು ಹೆಚ್ಚಾದಾಗ ಅದನ್ನೆಲ್ಲ ವಠಾರಾದ ಹಿಂದಕ್ಕೆ ಸುರಿದು ಬೆಂಕಿ ಹಚ್ಚಿರುತ್ತಿದ್ದರು. ಮೊದಲೇ ಕತ್ತಲುಕತ್ತಲಿದ್ದ ಅಲ್ಲಿಯ ವಾತಾವರಣ ಚಳಿಗಾಲದಲ್ಲಿ ಮತ್ತಷ್ಟು ಮಬ್ಬುಗೊಳ್ಳುತ್ತಿತ್ತು. ಜೊತೆಗೆ ವಠಾರಾದ ಹಿಂದಿನಿಂದ ಹೊಗೆ ಬರುವುದು ಎಂಬ ವಿಷಯ.. ಎರಡನ್ನೂ ಸೇರಿಸಿ ಯಾರೋ ಹುಡುಗರು “ಅಲ್ಲಿ ಮೋಹಿನಿ ಇದಾಳೆ” ಅಂತ ಎಲ್ಲ ಶಾಲೆಯ ಮಕ್ಕಳನ್ನ ಹೆದರಿಸಿಬಿಟ್ಟಿದ್ದರು. ಹಾಗಾಗಿ ಚಳಿಗಾಲದಲ್ಲಿ ಆ ಗೋಡೆಯನ್ನು ಹತ್ತಿಳಿಯುವಾಗೆಲ್ಲ ನಾನು ಮತ್ತು ಆಶಾ ಇನ್ನಿಲ್ಲದಂತೆ ಹೆದರಿಕೊಂಡು , ಕೈಕೈ ಹಿಡಿದುಕೊಂಡು ವಠಾರದಿಂದ ಮಾರುದ್ದ ದೂರದಲ್ಲಿ ಓಡಾಡುತ್ತಿದ್ದೆವು. ಅದನ್ನ ನೆನೆಸಿಕೊಂಡರೆ ಈಗಲೂ ನಗುವುಕ್ಕಿ ಬರುತ್ತೆ.

ಮೊದಲೆಲ್ಲ ನಮ್ಮ ಪುಟ್ಟಪುಟ್ಟ ಕಣ್ಣುಗಳಲ್ಲಿ ಸಣ್ಣಪುಟ್ಟ ಮರಗಳಿಂದ ಹಿಡಿದು, ಮನೆಯ ಮೇಲ್ಛಾವಣಿಯೆಲ್ಲ ಚರ್ಚ್ ಗೋಡೆಯಷ್ಟೇ ಉದ್ದಕ್ಕೆ ಅನ್ನಿಸುತ್ತಿದ್ದವಲ್ಲ. ಹಾಗೇ ಆ ಗೋಡೆಯೂ ನಿಜದಲ್ಲಿ ಮೋಟು ಗೋಡೆಯಾಗಿರಬಹುದೇ. ಯಾರಿಗೆ ಗೊತ್ತು. ಈಗ ಆ ಗೋಡೆ ಇರಬಹುದೇನೋ. ಒಮ್ಮೆ ನೋಡಿಬರಬೇಕೆಂಬ ಆಸೆ ಆಗಾಗ ಮೂಡುತ್ತಲೇ ಇರುತ್ತೆ.


ಈಗ ನಾಲ್ಕೈದು ವರ್ಷಗಳ ಹಿಂದೆ ನಮ್ಮ ಕುಟುಂಬದವರೆಲ್ಲ ಸವಣೂರಿಗೆ ಹೋಗಿದ್ವಿ. ಆಗ ಅಕ್ಕ ಮತ್ತೆ ನಾನು ಮೊದಲು ಓಡಿದ್ದೇ ನಮ್ಮ ಶಾಲಾ ಮೈದಾನಕ್ಕೆ. ಅಲ್ಲಿ ನಾವಿಬ್ಬರೂ ಶಾಲೆ ಕಲಿತ ನೆನಪಿತ್ತು. ಗುಲ್ ಮೊಹರ್ ಹೂವಿನ ಕೆಳಗಿನ ಎಸಳನ್ನು ಉಗುರುಗಳಿಗೆ ಅಂಟಿಸಿಕೊಂಡು “ದೆವ್ವಾ… ದೆವ್ವಾ..” ಅಂತ ಪುಟ್ಟ ತಮ್ಮನಿಗೆ ಹೆದರಿಸಿ, ಆಟ ಆಡಿದ ನೆನಪಿತ್ತು. ಅದರಲ್ಲೂ ಮುಖ್ಯವಾಗಿ ಬಹುತೇಕ ಸಂಜೆಗಳಲ್ಲಿ ಅಕ್ಕ ಮತ್ತು ನಾನು ಬಾಡಿಗೆ ಸೈಕಲ್ ಪಡೆದು ಮೈದಾನದ ತುಂಬೆಲ್ಲ ಸುತ್ತಾಡಿದ ನೆನಪಂತೂ ಇನ್ನೂ ಬೆಚ್ಚಗೆ ಮನಸ್ಸಲ್ಲಿದೆ. ಅಕ್ಕ ಮೊದಲಿನಿಂದಲೂ ಧೈರ್ಯವಂತೆ. ಅವಳು ಆಗಲೇ ಸೈಕಲ್ ಕಲಿತು ನನ್ನನ್ನು ಹಿಂದೆ ಕೂಡಿಸಿಕೊಂಡು ಸುತ್ತಾಡಿಸುತ್ತಿದ್ದಳು. ಸರಿಯಾಗಿ ಡಬಲ್ ರೈಡ್ ಬರದ ನನ್ನನ್ನ ಈಗಲೂ ಹಾಗೇ ಸುತ್ತಾಡಿಸುತ್ತಾಳೆ. ಆದರೆ ನನಗೆ ಈಗಲೂ ಸೈಕಲ್ ಓಡಿಸಲು ಬರೋಲ್ಲವೆಂಬುದು ನಿಜಕ್ಕೂ ಸತ್ಯವಾದ ಮಾತು. ದ್ವಿಚಕ್ರ ವಾಹನಕ್ಕೆ ಡ್ರೈವಿಂಗ್ ಸ್ಕೂಲಿಗೆ ಸೇರಿಯೇ ಗಾಡಿ ಕಲಿತುಕೊಂಡೆನೆ ಹೊರತು ಸಣ್ಣ ಗಾಯಕ್ಕೂ ಹೆದರುತ್ತಿದ್ದ ನಾನು, ಸೈಕಲ್ ತುಳಿಯೋ ಆಸೆಯಿದ್ದರೂ ‘ಬಿದ್ದು ಗಾಯವಾಗಿಬಿಟ್ಟರೆ’ ಎಂಬ ಭಯಕ್ಕೆ ಸೈಕಲ್ ಕಲಿಯೋ ಸಾಹಸ ಮಾಡಲೇ ಇಲ್ಲ. ಶಾಲಾ ಅಂಗಳದಲ್ಲಿ ಸುತ್ತಾಡಿಯಾದ ಮೇಲೆ ಆಶಾಳ ಮನೆಯನ್ನು ಹುಡುಕಿಕೊಂಡೂ ಹೋಗಿದ್ದೆ. ಅಲ್ಲಿ ಅವಳಷ್ಟೇ ಅಲ್ಲ ಅವಳಿಗೆ ಸಂಬಂಧಪಟ್ಟವರಾರೂ ಸಿಗಲಿಲ್ಲ. ಹಾಗಾಗಿ ನಿರಾಸೆ ಹೊತ್ತುಕೊಂಡೇ ಬೆಂಗಳೂರಿಗೆ ವಾಪಾಸ್ಸಾಗಿದ್ದೆ.