ನಮ್ಮ ಅಣ್ಣ ಫಿಲ್ಮ್ ರೋಲ್ ಅನ್ನ ಅವನ ಸ್ನೇಹಿತರ ಮೂಲಕ ಮಿಲಿಟರಿ ಕ್ಯಾಂಟೀನ್‌ನಿಂದ ತರಿಸುತ್ತಿದ್ದ. ಹತ್ತು ರೂಪಾಯಿ ಕಡಿಮೆ ಬೀಳೋದು. ಆಗಲೇ ನನ್ನ ಫೋಟೋ ನಾನೇ ತೆಗಿತಿದ್ದೆ, ಈಗಿನ ಸೆಲ್ಫಿ ಹಾಗೇ. ಕ್ಯಾಮೆರಾ ತಿರುಗಿಸಿ ನನ್ನ ಮುಖ ಅಂದಾಜಿನ ಮೇಲೆ ಲೆನ್ಸ್ ಎದುರು ಇಟ್ಟುಕೊಂಡು ಕ್ಲಿಕ್ ಮಾಡೋದು. ಸೆಲ್ಫಿ ಕಲ್ಪನೆ ಆಗಲೇ ನಾನು ಕಂಡು ಹಿಡಿದಿದ್ದೆ. ಅದು ಚರಿತ್ರೆಯಲ್ಲಿ ಎಲ್ಲೂ ದಾಖಲು ಆಗಲಿಲ್ಲ, ನನ್ನ ಎಷ್ಟೋ ಇನ್ವೆನ್ಷನ್‌ಗಳ ಹಾಗೇ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

ಹದಿನೇಳನೇ ಸಂಚಿಕೆಯಲ್ಲಿ ಮತ್ತೆ ಪುಸ್ತಕದ ಅಂಗಡಿ ಬಗ್ಗೆ ಹೇಳಿದೆ. ಸಂಡೇ ಬಜಾರ್ ಬಗ್ಗೆ ವಿವರ ಕೊಟ್ಟೆ. ಅಲ್ಲಿ ಮಾರಾಟ ಆಗುತ್ತಿದ್ದ ಹಲವು ಸಾಮಗ್ರಿಗಳ ಬಗ್ಗೆ ಮಾಹಿತಿ ನೀಡಿದೆ. ಸಂಡೇ ಬಜಾರ್‌ನಲ್ಲಿ ಕಾಣದ ವಿಶೇಷ ಅಂದರೆ ಮಡಕೆ ಕುಡಕೆ ಮುಂತಾದ ಮಣ್ಣಿನ ಪಾತ್ರೆಗಳ ಅಂಗಡಿಗಳು ಇರಲಿಲ್ಲ. ಉಡದ ತುಪ್ಪ ಮಾರುವವರು ಉಡಗಳನ್ನು ಸಹ ತಂದು ಅದನ್ನು ಒಂದು ಬೋನಿನಲ್ಲಿ ಇರಿಸುತ್ತಿದ್ದರು. ಕಿವಿ ಗುಗ್ಗೆ ತೆಗೆಯುವ ಹಳ್ಳಿ ವೈದ್ಯರು ಅಲ್ಲಿ ಇರುತ್ತಿದ್ದರು. ಅವರ ಸುತ್ತ ಅವರ ಪೇಶಂಟುಗಳು. ಇಲ್ಲಿ ವೈದ್ಯ ಮಾಡಿಸ್ಕೋತಾರೆ, ಹೆಚ್ಚು ಕಮ್ಮಿ ಆದರೆ ಏನು ಗತಿ ಅಂತ ನಮಗೆ ಭಯ ಆಗೋದು. ಕಣ್ಣಿನ ಡಾಕ್ಟರು ಕನ್ನಡಕಗಳು ರಾಶಿ ಹಾಕಿಕೊಂಡು ಕೂತಿರುತ್ತಿದ್ದ. ಅವನ ಗಿರಾಕಿಗಳು ಅವನೆದುರು ಕೂತು ಒಂದೊಂದೇ ಕನ್ನಡಕ ತೆಗೆದು ಹಾಕಿ, ತೆಗೆದು ಹಾಕಿ ತಮಗೆ ಸರಿ ಹೋಗುವ ಕನ್ನಡಕ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಒಮ್ಮೆ ನನ್ನ ಸಂಗಡ ವೈದ್ಯ ಮಿತ್ರನೊಬ್ಬ ಬಂದಿದ್ದ. ಈ ಕ್ವಾಕ್ಸ್ (ವೈದ್ಯಕೀಯ ಪದವಿ, ಹಿನ್ನೆಲೆ ಇಲ್ಲದೇ ಡಾಕ್ಟರ ಕಾರ್ಯ ಮಾಡುವವರು) ಗಳನ್ನ ಹಿಡಿದು ಜೈಲಿಗೆ ಹಾಕಬೇಕು ಅಂತ ಉರಿದು ಉರಿದು ಬಿದ್ದ. ಮತ್ತೆ ಯಾವತ್ತೂ ಅವನು ಇತ್ತ ಮುಖ ಹಾಕಲಿಲ್ಲ! ಅಲ್ಲಿ ರೋಲ್ಡ್ ಗೋಲ್ಡ್ ಒಡವೆಗಳ ಮಾರಾಟ ಜೋರಾಗಿ ನಡೆಯುತ್ತಿತ್ತು. ವ್ಯಾಪಾರ ಮಾಡುವವರು ಹೆಚ್ಚಾಗಿ ಗಂಡಸರೇ. ಯಾಕೆ ಹೀಗೆ ಅಂತ ಆಶ್ಚರ್ಯ ಪಟ್ಟಿದ್ದೆ. ಯಾವಾಗಲೋ ಚಿನ್ನದ ಅಂಗಡಿಗೆ ಹೋಗಿದ್ದಾಗ ಅಲ್ಲೂ ಸೇಲ್ಸ್ ಮ್ಯಾನ್ ಗಳೇ, ಸೇಲ್ಸ್ ಗರ್ಲ್ಸೂ ಇರಲಿಲ್ಲ…! ಈಗೊಂದು ಹತ್ತು ವರ್ಷದಲ್ಲಿ ಚಿನ್ನದ ಅಂಗಡಿಯಲ್ಲಿ ಸೇಲ್ಸ್ ವುಮನ್ ನೋಡಿದ್ದೀನಿ, ಆದರೆ ಹಣಕಾಸು ವ್ಯವಹಾರ ಸಂಪೂರ್ಣ ಗಂಡುಗಳದ್ದೇ…

candle ನಲ್ಲಿ ನೀರಲ್ಲಿ ಓಡುವ boat ವಿವರ. ಸಂಡೇ ಬಜಾರ್‌ನಲ್ಲಿ ಹೊಸ ಹೊಸ ಆಟದ ವಸ್ತುಗಳು ತಳ ಮಧ್ಯಮ ವರ್ಗದ ಮಕ್ಕಳಿಗೆ ಎಂದೇ ತಯಾರಾದವು ಮೊದಲು ಕಾಣಿಸುತ್ತಿತ್ತು. ಅಂತಹ ಆಟದ ವಸ್ತು ಇದು. ಒಂದು ಬೇಸಿನ್‌ನಲ್ಲಿ ನೀರು ಇಡಿ. ಅದರಲ್ಲಿ ಈ ಒಂದು ತಗಡಿನ ದೋಣಿ ಇಡಿ. ತಳಭಾಗದಲ್ಲಿ ಅದಕ್ಕೆ ಒಂದು ಪೈಪ್ ಇರುತ್ತಿತ್ತು. ಬೋಟ್ ಒಳಗೆ ಕೊಂಚ ಒಳ ಆವರಣ. ಅದರಲ್ಲಿ ಮೇಣದ ಬತ್ತಿ ಹತ್ತಿಸಿ ಇಟ್ಟರೆ ಒಂದೆರೆಡು ನಿಮಿಷದಲ್ಲಿ ಗಾಳಿ ಒತ್ತಡ ಹೆಚ್ಚಿ ಟಕ ತಕ ಟಾಕ ತಕ ಎಂದು ಶಬ್ದ ಮಾಡುತ್ತಾ ಬೋಟು ಓಡುತ್ತಿತ್ತು. ಈ ಆಟದ ವಸ್ತು ಮಾರುಕಟ್ಟೆಗೆ ಬರಲೇ ಇಲ್ಲ. ಒಂದೇ ಒಂದು ಪೀಸ್ ತಂದಿದ್ದೆ ಮನೆಗೆ. ಇನ್ನೂ ಮಾರುಕಟ್ಟೆಗೆ ಬಂದಿರಲಿಲ್ಲವಾದ್ದರಿಂದ ನಮ್ಮ ರಸ್ತೆಯ ಜನ ಬಂದು ಬಂದು ಅದನ್ನು ನೋಡಿ ಆಶ್ಚರ್ಯಪಡುತ್ತಿದ್ದರು. ಇದು ಸಂಪೂರ್ಣ ಮರೆತೇ ಹೋಗಿತ್ತು. ಈಗೊಂದು ಹತ್ತು ವರ್ಷ ಹಿಂದೆ ಇದೇ ಆಟದ ವಸ್ತು ಶಿವಾಜಿನಗರದಲ್ಲಿ ನೋಡಿದೆ. ಫುಟ್ ಪಾತ್ ಮೇಲೆ ಇದನ್ನು ಒಬ್ಬ ಮಾರುತ್ತಿದ್ದ. ಎರಡು ಕೊಂಡು ತಂದೆ, ಆಡಿದೆ.

ಈಗ ಮುಂದೆ…
ಒಂದು ಐವತ್ತು ಅರವತ್ತು ವರ್ಷಗಳ ಹಿಂದೆ ನಮ್ಮ ಬೆಂಗಳೂರಿನಲ್ಲಿ ಗ್ರಹಣದ ದಿವಸ ಹೇಗೆ ಇರುತ್ತಿತ್ತು ಎಂದು ಯಾವತ್ತಾದರೂ ಯೋಚಿಸಿರುವಿರಾ.. ಗ್ರಹಣದ ದಿವಸ ಬರುತ್ತೆ ಅಂದಕೂಡಲೇ ಎಲ್ಲರೂ ತುಂಬಾ ಜಾಗೃತರಾಗಿ ಬಿಡೋರು. ಜಾಗೃತಿ ಅಂದರೆ ಹೇಗೆ? ಅವತ್ತು ಮನೇಲಿ ಹೇಗೆ ಅಡಗಿ ಕೂಡಬೇಕು, ಮನೆ ಒಳಗೆ ಬಿಸಿಲು ತೂರದ ಹಾಗೆ ಕಿಟಕಿ ಬಾಗಿಲ ಸಂದುಗಳನ್ನು ಹೇಗೆ ಮುಚ್ಚಬೇಕು…. ಈ ರೀತಿಯ ಮುನ್ನೆಚ್ಚರಿಕೆ ಕ್ರಮಗಳು. ಮನೆಯಿಂದ ಆಚೆ ಮಕ್ಕಳು ಹೆಂಗಸರು ವೃದ್ಧರು ಕಾಲಿಡುವ ಹಾಗಿಲ್ಲ. ವಯಸ್ಕರು ಸಹ ಅಷ್ಟೇ, ತುಂಬಾ ತುಂಬಾ ಅಗತ್ಯ ಬಿದ್ದರೆ ಮಾತ್ರ.

ಗರ್ಭಿಣಿಯರಿಗೆ ಗ್ರಹಣ ಸಮಯದಲ್ಲಿ ಸೂರ್ಯಕಿರಣ ಮೈಮೇಲೆ ಬಿದ್ದರೆ ಹುಟ್ಟುವ ಮಗು ಅಂಗವೈಕಲ್ಯ ಆಗಿ ಹುಟ್ಟುತ್ತೆ ಅನ್ನುವ ನಂಬಿಕೆ ಇತ್ತು. ಆಗ ತಾನೇ ಕಾಲೇಜು ಹೈಸ್ಕೂಲು ಮುಗಿಸಿ ಅಲ್ಲಿ ಗ್ರಹಣ ಹೇಗೆ ಆಗುತ್ತೆ ಅಂತ ಓದಿ ತಿಳಿದುಕೊಂಡಿದ್ದ ಕೆಲವರು ಗ್ರಹಣ ವೀಕ್ಷಿಸಲು ಮನೆಯಿಂದ ಆಚೆ ಬರುತ್ತಿದ್ದರು, ಮನೆಯಲ್ಲಿನ ಹಿರಿಯರ ಕಡು ವಿರೋಧದ ನಡುವೆಯೂ. ಆಗಿನ್ನೂ ನಮ್ಮ ಪ್ಲಾನೆಟೋರಿಯಂ ಆರಂಭ ಆಗಿರಲಿಲ್ಲ. ಜನ ಜಾಗೃತಿ ಮೂಡಿಸಬೇಕಾದ ಮಾಧ್ಯಮ ಅಂದರೆ ಟಿವಿ ವಾಹಿನಿಗಳು ಇಲ್ಲದ ಆ ಕಾಲದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ನಿರ್ವಹಿಸಬೇಕಿತ್ತು. ಅವು ತಕ್ಕ ಮಟ್ಟಿಗೆ ಜಾಗೃತಿ ಮೂಡಿಸಿದರೂ ಗ್ರಹಣ ಆಗುವ ವೈಜ್ಞಾನಿಕ ವಿಶ್ಲೇಷಣೆ ಮತ್ತು ಗ್ರಹಣ ಕಾಲದ ಆಚರಣೆಯ ವಿವರ ಎರಡೂ ಅಕ್ಕ ಪಕ್ಕ ಕಾಲಂನಲ್ಲಿ ಇರುತ್ತಿತ್ತು! ಕೊಂಚ ಸೈನ್ಸ್ ಓದಿರುವ ಹುಡುಗರು ಗ್ರಹಣದ ಮೊದಲು ಬಿಳೀ ಗಾಜಿಗೆ ಮೇಣದ ಬತ್ತಿ ಹತ್ತಿಸಿ ಅದರ ಮಸಿ ಹಿಡಿಸಿ ಇಡುತ್ತಿದ್ದರು. ಸೂರ್ಯನನ್ನು ನೇರವಾಗಿ ನೋಡಿದರೆ ಕಣ್ಣು ಹಾಳಾಗುತ್ತೆ ಅಂತ. ಜತೆಗೆ ಎಕ್ಸ್ ರೇ ಫಿಲ್ಮ್ ಹುಡುಕಿ ಜೋಪಾನ ಮಾಡುತ್ತಿದ್ದೆವು. ನಾನು ಕೆಲಸಕ್ಕೆ ಸೇರಿದ ಮೇಲೆ ಕೋಬಾಲ್ಟ್ ಗ್ಲಾಸ್ ಮತ್ತು ವೆಲ್ಡಿಂಗ್ ಗ್ಲಾಸ್ ತಂದು ಇಟ್ಟಿದ್ದೆ, ಗ್ರಹಣ ನೋಡಲು. ಕೆಲವರ ಮನೆ ಮುಂದಿನ ಅಂಗಳದಲ್ಲಿ ದೊಡ್ಡ ತಟ್ಟೆ ಇಟ್ಟು ಅದರಲ್ಲಿ ಸಗಣಿ ನೀರು ಕದಡಿ ಇಡುತ್ತಿದ್ದರು. ಗ್ರಹಣದ ಸಮಯದಲ್ಲಿ ಅದರ ಅಂದರೆ ಸಗಣಿ ನೀರಿನ ಮಧ್ಯೆ ಒಂದು ಒನಕೆ ಇಡುತ್ತಿದ್ದರು. ಒನಕೆ ನೇರವಾಗಿ ಗ್ರಹಣ ಮುಗಿಯುವ ತನಕ ನಿಂತಿರುತ್ತಿತ್ತು!

ಗರ್ಭಿಣಿಯರು, ಪುಟ್ಟ ಮಕ್ಕಳ ತಾಯಂದಿರು, ಬಾಣಂತಿಯರು ಇವರು ಗ್ರಹಣದ ಬೆಳಕು ಬೀಳಿಸಿಕೊಳ್ಳಬಾರದು ಅಂತ ಒಂದು ನಿಯಮ ಬಹಳ ಹಿಂದಿನಿಂದ ಪಾಲಿಸಿಕೊಂಡು ಬಂದ ಕುಟುಂಬಗಳು ಇದ್ದವು. ಅವು ಈಗಲೂ ಅದೇ ನಿಯಮ ಪಟ್ಟಾಗಿ ಹಿಡಿದಿದ್ದವು. ಅದರಿಂದ ಇವರುಗಳು ಆ ದಿನ ರೂಮಿನಲ್ಲಿ ಬಂಧಿತರು. ಇನ್ನು ಮನೇಲಿ ಗ್ರಹಣ ಮುಗಿದು ತಲೆಗೆ ಸ್ನಾನ ಆಗಿ ದೇವರ ಪೂಜೆ ಆಗುವ ತನಕ ಹೊಟ್ಟೆಗೆ ಏನೂ ಹಾಕುವ ಹಾಗಿಲ್ಲ. ಇನ್ನೂ ಸೋಜಿಗ ಅಂದರೆ ಗ್ರಹಣದ ಸಮಯದಲ್ಲಿ ಇದ್ದ ಆಹಾರ ತಿನ್ನುವಂತಿಲ್ಲ. ಅದರಿಂದ ಗ್ರಹಣಕ್ಕೆ ಮೊದಲು ಇದ್ದಬದ್ದ ತಿಂಡಿ ತೀರ್ಥ ಪೂರ್ತಿ ಖಾಲಿ. ಹುಣಿಸೆ ನೀರು ಹಾಕಿ ಪಾತ್ರೆ ತೊಳೆದು ಒಲೆಗೆ ಪೂಜೆ ಮಾಡಿ ಅಡಿಗೆಗೆ ಇಡೋದು, ಸುಮಾರು ಎಲ್ಲಾ ಮನೆಗಳ ಪದ್ಧತಿ. ಎಲ್ಲರೂ ಈ ನಿಯಮಗಳಿಗೆ ಬದ್ಧರು, ಒಂದೆರೆಡು ಅಪವಾದಗಳು ಇದ್ದವು, exception ರೀತಿ. ಅವು ನಾವು, ಅಂದರೆ ಈ ರೂಲು ಮೀರಿ ಅದೇನಾಗುತ್ತೆ ನೋಡೋಣ ಅಂತ ಭಂಡ ಧೈರ್ಯದವು. ನನ್ನ ರೀತಿ ಕೆಲವು ಸ್ನೇಹಿತರು ಸಹ ಇದ್ದರು. ಈ ವಿಷಯಕ್ಕೆ ಆಮೇಲೆ ಬರ್ತೀನಿ.

ಅಂದ ಹಾಗೆ ಆಗ ಸರಿಸುಮಾರು ಎಲ್ಲಾ ಹೋಟಲ್ಲುಗಳೂ ಕೂಡ ಬಂದ್ ಆಗಿರುತ್ತಿತ್ತು, ನಾವು ಪುಟ್ಟವರಿದ್ದಾಗ. ಕೊಂಚ ಬೆಳೆಯೋ ಹೊತ್ತಿಗೆ ಕೆಲವು ಹೋಟಲ್ಲು ತೆಗೆದು ಇರುತ್ತಿದ್ದರು. ಕೆಲವರ ಮನೆಯಲ್ಲಿ ದಿನಸಿ, ತರಕಾರಿ, ಹಾಲು, ಹಣ್ಣು ಎಲ್ಲಾ ಮುಗಿಸಿಖಾಲಿ ಪಾತ್ರೆ ಇಡ್ತಾ ಇದ್ದರು. ಮತ್ತೆ ಕೆಲವರು ಈ ರೂಲಿನಿಂದ ತಪ್ಪಿಸಿಕೊಳ್ಳಲು ಒಂದು ದಾರಿಯನ್ನು ಕಂಡುಕೊಂಡಿದ್ದರು. ಅದೆಂದರೆ ಗ್ರಹಣ ಸಮಯದಲ್ಲಿ ಮನೆಯಲ್ಲಿನ ದಿನಸಿ, ತರಕಾರಿ, ಹಾಲು, ಹಣ್ಣು ಎಲ್ಲದರ ಮೇಲೆ ಒಂದು ದರ್ಭೆ ಇಡುವುದು. ದರ್ಭೆ ಅಂದರೆ ಅದು ಒಂದು ರೀತಿಯ ಒಣ ಹುಲ್ಲು. ಪೂಜೆ ಪುನಸ್ಕಾರ ತಿಥಿ ಮೊದಲಾದ ಕಾರ್ಯಗಳಲ್ಲಿ ಇದು ಬೇಕೇಬೇಕು. ದರ್ಭೆ ಇರಿಸಿ ತಿಥಿ ಸಹ ಮಾಡುತ್ತಾರೆ. ದರ್ಭೆಗೆ ಆತ್ಮದ ಆಹ್ವಾನ ಅಲ್ಲ ಆವಾಹನೆ ಬೇರೆ ಇರುತ್ತೆ. ಇದನ್ನು ಯಾವಾಗಲಾದರೂ ವಿಶದವಾಗಿ ವಿವರಿಸುತ್ತೇನೆ.

ನನಗೆ ಗ್ರಹಣದ ಸಮಯದಲ್ಲಿ ವಿಚಿತ್ರ ಅಂತ ಅನಿಸುತ್ತಾ ಇದ್ದದ್ದು ಒಂದು ಸಂಗತಿ. ಈ ಕಟ್ಟು ಪಾಡು ನಿಯಮ ಎಲ್ಲಾ ನಮಗೇ ಯಾಕೆ ಅಪ್ಲೈ ಆಗುತ್ತೆ ಅಂತ. ನಮ್ಮ ನಮ್ಮ ಮನೇಲಿ ಗ್ರಹಣದ ಅಪಾಯ ತಪ್ಪಿಸಿಕೊಳ್ಳಲು ಎಲ್ಲರೂ ಮನೆಯಲ್ಲಿ ಅವಿತು ಇರ್ತಾ ಇದ್ದರೆ ಬುರ್ಖಾ ತೊಟ್ಟ ಬೂಬಮ್ಮ ಅವರ ಯಜಮಾನ, ಮಕ್ಕಳು ಮರಿಗಳ ಜತೆಗೆ ಆರಾಮಾಗಿ ಸುತ್ತಾಡುವುದು! ಸೂರ್ಯದೇವರು ಅವರಿಗೆ ವಿನಾಯಿತಿ ಕೊಟ್ಟಿದ್ದಾರೆ ಅಂತ ಆಗ ಅನಿಸುತ್ತಿತ್ತು. ಒಂದೆರೆಡು ವರ್ಷದಲ್ಲಿ ಅವರೂ ಸಹ ಥೇಟ್ ನಮ್ಮ ಹಾಗೇ ಆಗಿಬಿಟ್ಟರು!

ಇದು ಸೂರ್ಯಗ್ರಹಣದ ಪದ್ಧತಿ ಅಂದರೆ ಹಗಲಿನಲ್ಲಿ ಗ್ರಹಣ ಆದಾಗ. ಚಂದ್ರಗ್ರಹಣ ರಾತ್ರಿ ಹೊತ್ತು. ಆಗಲೂ ಕೆಲವು ಸಂಪ್ರದಾಯಸ್ಥರ ಮನೆಗಳಲ್ಲಿ ಚಾಚೂ ತಪ್ಪದೆ ಶಾಸ್ತ್ರದ ನಿಯಮ ಪಾಲನೆ ಆಗುತ್ತಿತ್ತು. ಒಮ್ಮೆ ಚಂದ್ರ ಗ್ರಹಣದ ದಿವಸ. ಶ್ರೀನಿವಾಸ ಮೂರ್ತಿ ಜತೆ ಲಿಡೋ ಟಾಕೀಸ್‌ಗೆ ಫರ್ಸ್ಟ್ ಶೋ ಸಿನಿಮಾಗೆ ಹೋಗಿದ್ದೆ. ಅಲ್ಲಿಂದ ರಾತ್ರಿ ಸುಮಾರು ಒಂಬತ್ತರ ಸುಮಾರಿಗೆ ರಾಜಾಜಿನಗರದತ್ತ ನಡೆಯಲು ಶುರು ಮಾಡಿದೆವು. ಮೂರ್ತಿ ಆಗ ಬ್ರಹ್ಮಚಾರಿ. mei ಪಾಲಿಟೆಕ್ನಿಕ್‌ನಲ್ಲಿ ಸಂಜೆ ಹೊತ್ತು amie ಮಾಡ್ತಾ ಇದ್ದರು. ರಾತ್ರಿ ಊಟ ಅಲ್ಲೇ ಹತ್ತಿರದ ಹೋಟೆಲ್‌ನಲ್ಲಿ. ಕಬ್ಬನ ಪಾರ್ಕ್ ಹತ್ತಿರ ಬರೋಹೊತ್ತಿಗೆ ಮನೆ ಹತ್ತಿರದ ಹೋಟೆಲ್ ಮುಚ್ಚಿರುತ್ತದೆ ಅಲ್ಲೇ ಎಲ್ಲಾದರೂ ತಿನ್ನೋಣ ಅಂತ ಡಿಸೈಡ್ ಮಾಡಿದೆವು. ಕಬ್ಬನ್ ಪಾರ್ಕ್ ಹತ್ತಿರ, ಆಗ ತಾನೇ ಟಿಫಾನಿಸ್ ಶುರು ಆಗಿತ್ತು. ಅಲ್ಲಿ ಹೋದೆವಾ.. ಊಟ ಇಲ್ಲ ರೈಸ್ ಇದೆ ಕರ್ಡ್ಸ್ ಇದೆ ಅಂತ ಅವರು ಕೊಟ್ಟ ಮೇನು ಕಾರ್ಡ್ ಪೂರ್ತಿ ಓದಿದ ನಂತರ ಸರ್ವರ್ ಹೇಳಿದ. ಸರಿ ಅನ್ನ ಮೊಸರು ಹೇಳಿದೆವು. ಅನ್ನಕ್ಕೆ ಒಂದು ರೇಟು, ಮೊಸರಿಗೆ ಒಂದು ರೇಟು, ಉಪ್ಪಿನಕಾಯಿಗೆ ಒಂದು ರೇಟು…. ಬಿಲ್ ಬಂದಾಗ ಶಾಕ್ ಹೊಡೆದ ಹಾಗಾಯ್ತು. ಶ್ರೀನಿವಾಸಮೂರ್ತಿ ಹತ್ತು ಹದಿನೈದು ದಿವಸದ ಊಟದ ಬಿಲ್ ಮೀರಿತ್ತು ಇದು! ದಂಗ್ ಹೊಡೆದೆವು ಇಬ್ಬರೂ. ಗ್ರಹಣದ ದಿನ ಹೀಗಾಗಬೇಕೇ ಅಂತ ಪೇಚಾಡಿಕೊಂದು ಮನೆ ಸೇರಿದೆವು.

ಇನ್ನೊಂದು ಗ್ರಹಣದ ಅದೂ ಸಹ ಚಂದ್ರ ಗ್ರಹಣವೆ, ಮೂರ್ತಿ ಬನ್ರಿ ನಮ್ಮನೇಲಿ ತಿಂಡಿ ತಿನ್ನೋಣ ಅಂತ ಕರೆದೆ, ಹೋಟಲ್ಲುಗಳು ಮುಚ್ಚಿದ್ದವು. ಅವತ್ತೂ ಸಹ ಯಾವುದೋ ಸಿನಿಮಾ ನೋಡಿಕೊಂಡು ಮನೆಗೆ ನಡೆದು ಬಂದೆವು. ಆಗಲೇ ರಾತ್ರಿ ಹನ್ನೆರಡರ ಹತ್ತಿರ. ಮನೆಗೆ ಬಂದೆವು, ಮಹಡಿಯಲ್ಲಿ ಅವರನ್ನ ಕೂಡಿಸಿ ಕೆಳಗೆ ಬಂದು ಎರಡು ತಟ್ಟೆ ತುಂಬಾ ಉಪ್ಪಿಟ್ಟು ತುಂಬಿಕೊಂಡು ತಂದೆ. ಸಾಯಂಕಾಲದ ಉಪ್ಪಿಟ್ಟು, ತಣ್ಣಗಿದೆ ತಿನ್ನಿ ಅಂತ ಉಪಚಾರ ಮಾಡಿದೆ. ಗ್ರಹಣ ಬಿಟ್ಟಿದ್ದು ಹತ್ತುವರೆಗೆ, ಸಂಜೆ ಉಪ್ಪಿಟ್ಟು ಅಂದರೆ ಗ್ರಹಣಕ್ಕೆ ಮೊದಲು ಮಾಡಿದ್ದು. ನಮ್ಮ ಮನೆಯಲ್ಲಿ ಈ ವೇಳೆಗೆ ಊಟ ತಿಂಡಿ ವಿಚಾರದಲ್ಲಿ ಕೊಂಚ ಸುಧಾರಣೆ ತಂದಿದ್ದೆವು, ಇದಕ್ಕೆ ನಮ್ಮ ದೊಡ್ಡಣ್ಣ ಬೆಂಬಲ ಕೊಟ್ಟಿದ್ದ. ಗ್ರಹಣಕ್ಕೆ ಮೊದಲೇ ತಿಂಡಿ ಮಾಡಿ ಇಡುವುದು, ನಂತರ ತಿನ್ನುವುದು ಅಭ್ಯಾಸ ಆಗಿತ್ತು. ಮೂರ್ತಿ ಗಲಿಬಿಲಿಗೊಂಡರು. ಗ್ರಹಣಕ್ಕೆ ಮೊದಲಿನ ಉಪ್ಪಿಟ್ಟು ತಿನ್ನ ತಕ್ಕದ್ದಲ್ಲ, ತಿಂದುಬಿಟ್ಟೆ, ಇದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೇ ಬೇಡವೇ ಎನ್ನುವ ಗೊಂದಲ ಅವರ ಮನಸ್ಸಿನಲ್ಲಿ(ಇದು ನನ್ನ ಅನಿಸಿಕೆ). ಅವರು ನನಗಿಂತ ಬಹು ಆಚಾರವಂತರು. ಪ್ರತಿದಿನ ಸಂಧ್ಯಾವಂದನೆ ಮಾಡುವವರು. ಆಸ್ಟ್ರೊಲಜಿ ಬಗ್ಗೆ ಏನೇನೋ ಓದಿದ್ದರು ಮತ್ತು ಗೆಳೆಯರಿಗೆ ಜ್ಯೋತಿಷ್ಯ ಸಲಹೆ ಸಹ ಕೊಡುತ್ತಿದ್ದರು. ನೂರು ವರ್ಷದ ಗ್ರಹ ಸಂಚಲನೆಯ ಯುಫೀಮರಿಸ್ ಎನ್ನುವ ಅಪರೂಪದ ಪುಸ್ತಕ ಇಟ್ಟುಕೊಂಡು ಆಗಾಗ್ಗೆ ಓದುತ್ತಿದ್ದರು. ಜತೆಗೆ ಜಾತಕ ನೋಡುತ್ತಿದ್ದರು, ಸೂಕ್ತಸಲಹೆ ನೀಡುತ್ತಿದ್ದರು. ಈ ಬಗ್ಗೆ ಅದೇನೂ ಚಿಂತೆ ಮತ್ತು ಅಂತಹ ಜ್ಞಾನವೇ ಇಲ್ಲದವ ನಾನು. ನಾನೋ ಅದೇನೂ ತಲೆಗೆ ಅಂಟಿಸಿಕೊಳ್ಳದೆ ಉಪ್ಪಿಟ್ಟು ತಿನ್ನುತ್ತಾ ಇದೀನಿ. ಪಾಪ ಬೇರೆ ಆಪ್ಷನ್ ಇಲ್ಲದೇ ಅವತ್ತು ಅವರು ಉಪ್ಪಿಟ್ಟು ತಿನ್ನಲೇ ಬೇಕಾಯಿತು, ತಿಂದರು. ತುಂಬಾ ಕಸಿವಿಸಿ ಪಟ್ಟ ಹಾಗೆ ಕಂಡರು ಮತ್ತು ಹೇಳಿಕೊಳ್ಳಲು ಆಗದ ಸಂಕಟ ನೋವು ಅವರ ಮುಖದಲ್ಲಿ ನನಗೆ ಎದ್ದು ಕಂಡಿತು!(ಇದು ಬರೀ ನನ್ನ ಊಹೆ ಇದ್ದರೂ ಇರಬಹುದು)ಇದು ಹೇಗೋ ಸುಮಾರು ವರ್ಷ ನಮ್ಮ ಗೆಳೆಯರ ಗುಂಪಿನ ಚರ್ಚೆಯ ವಿಷಯ ಆಯಿತು. ಚರ್ಚೆಯ ವಿಷಯ ಆಗಲು ನನ್ನ ಕೈವಾಡ ಏನೂ ಇಲ್ಲ ಅಂತ ನಾನು ಧೈರ್ಯವಾಗಿ ಹೇಳಲಾರೆ. ಮೂರ್ತಿ ಸುಮಾರು ದಿವಸ ಅವರ ಇತರ ಸಹೋದ್ಯೋಗಿಗಳಿಗೆ ಒಂದು ತಮಾಷೆ ವಸ್ತು ಆಗಿಬಿಟ್ಟಿದ್ದರು. ಅಂತಹ ಪುಣ್ಯಾತ್ಮನಿಗೆ, ಅಂತಹ ಧರ್ಮಾತ್ಮನಿಗೆ, ಅಂತಹ ಗೋವಿನಂತಹ ಪುಣ್ಯಕೋಟಿಗೆ ನೀನು ನರಾಧಮ, ಮಾನವ ರೂಪಿನ ಮಹಿಷಾಸುರ ಗ್ರಹಣದ ಮೊದಲು ಮಾಡಿದ್ದ ತಿಂಡಿ ತಿನಿಸಿ ಬಿಟ್ಟೆ. ನಿನಗೆ ಅದ್ಯಾವ ರೌರವ ನರಕ ಕಾದಿದೆಯೋ ಅಂತ ಅವರ ಸೆಕ್ಷನ್ನಿನ ಗೆಳೆಯರು ನನಗೂ ತಮಾಷೆ ಮಾಡಿ ಹಿಗ್ಗಾ ಮುಗ್ಗಾ ಬೈದಿದ್ದು ನಿನ್ನೆ ಮೊನ್ನೆ ನಡೆದ ಹಾಗಿದೆ. ಮೂರ್ತಿ ಎರಡು ವರ್ಷ ಹಿಂದೆ ದೇವರ ಪಾದ ಸೇರಿದರು. ಮೂರ್ತಿ ಅಂದು ಪಟ್ಟಿರಬಹುದಾದ ಸಂಕಟಕ್ಕೆ ನಾನು ಕಾರಣ ಆದೆ ಎನ್ನುವ ಗಿಲ್ಟ್ ನನ್ನನ್ನು ಈಗಲೂ ಕಾಡುತ್ತದೆ. ಗ್ರಹಣದ ದಿವಸ ಮನೆ ಒಳಗೆ ಸೇರೋದು ಸ್ನಾನ ಮಾಡೋದು, ಅನ್ನ ಪನ್ನ ತಿನ್ನದೇ ಇರೋದು ಮೂಢನಂಬಿಕೆ ಅಂತ ಕರ್ನಾಟಕ ವಿಚಾರವಾದಿಗಳ ಸಂಘ ಒಂದು ಪತ್ರಿಕಾ ಹೇಳಿಕೆ ಕೊಟ್ಟಿತ್ತು.

ಒಂದೊಂದು ಸಲ ಫಿಲ್ಮ್ ತಂದಾಗಲೂ ಆರು ಸೆಲ್ಫಿ ನನ್ನದೇ ಇರುತ್ತಿತ್ತು. ನಮ್ಮ ಅಣ್ಣ ಹಾಳಾದೋನು ಅರ್ಧ ಫಿಲ್ಮ್ ಇವನದ್ದೇ ಫೋಟೋ ತೆಕ್ಕೋತಾನೆ ಅಂತ ನನಗೆ ಕೇಳಲಿ ಅಂತಲೇ ಊಟಕ್ಕೆ ಎಲ್ಲರೂ ಕೂತಾಗ ಜೋರಾಗಿ ಹೇಳುತ್ತಿದ್ದ. ನಾನು “ಐ ಡೊಂಟ್ ಕೇರ್ ಮಾಸ್ಟರ್!” ಬೆಲೆ ಬಾಳುವ ಇಂಪೋರ್ಟೆಡ್ ಕ್ಯಾಮೆರಾಗಳು ಸಿಗುತ್ತಿದ್ದವು, ಆದರೆ ನಮ್ಮ ಕೈಗೆ ಎಟುಕದಷ್ಟು ದುಬಾರಿ. ಅದರಿಂದ ನಾವು ಬಾಕ್ಸ್ ಕ್ಯಾಮೆರಾ ಸಂತೃಪ್ತರು. ಬಾಕ್ಸ್ ಅಂದರೆ ಡಬ್ಬಾ. ಅದು ಇಲ್ಲಿ ಅನ್ವರ್ಥ.

ಆಗ ತಾನೇ ಕರ್ನಾಟಕ ವಿಚಾರವಾದಿಗಳ ಸಂಘ ಶುರು ಆಗಿತ್ತು. ಇವರು ಪೆರಿಯಾರ್ ಅವರನ್ನು ಕರೆಸಿದ್ದರು. ಪೆರಿಯಾರ್ ಸಭೆಗೆ ನಾವೂ (ಗೆಳೆಯ ನಟರಾಜ ಜತೆ ಬಂದಿದ್ದ ಅಂತ ನೆನಪು) ಹೋಗಿದ್ದೆವು. ಪೆರಿಯಾರ್ ಸಭೆ ವಿಷಯ ಮುಂದೆ ಯಾವಾಗಲಾದರೂ ಹೇಳುತ್ತೇನೆ. ಪ್ರೊ ಎಂ. ಡಿ. ನಂಜುಂಡಸ್ವಾಮಿ ಅದನ್ನು ಹುಟ್ಟು ಹಾಕಿದ್ದರು. ರೇಣುಕಾಚಾರ್ಯ ಲಾ ಕಾಲೇಜಿನಲ್ಲಿ ನಮಗೆ ಹೆನ್ರಿ ಮೈನ್ ಬರೆದ ಏನ್ಷಿಯೆಂಟ್ ಲಾ ಪಾಠ ಮಾಡುತ್ತಿದ್ದ ಪ್ರೊ ಎಂ ಧರ್ಮಲಿಂಗಂ ಅವರೂ ಸಹ ಈ ಗುಂಪಿನಲ್ಲಿದ್ದ ಹಲವಾರು ಪ್ರೊ ತಿಂಕರ್ಸ್‌ನಲ್ಲಿ ಒಬ್ಬರು. ಇವರು ಪಾಠ ಮಾಡ್ತಾ ಮಾಡ್ತಾ ನಮ್ಮ ಆಚಾರ ವಿಚಾರದಲ್ಲಿ ಇರುವ ವೈರುಧ್ಯಗಳನ್ನು ಬಹಳ ಆಳವಾಗಿ ವಿವರಿಸೋರು. ನೋಡೋದಕ್ಕೆ ಟಿ ಪೀ.ಕೈಲಾಸಂ ಹಾಗೆ ಇದ್ದರು. ಕಾಂಟ್ರಾಮೆಂಟಿನ ವೀಲರ್ ರೋಡಿನಲ್ಲಿ ಇವರ ಮನೆ. ಇವರ ಕಾಲಾನಂತರ ಇವರ ಹೆಸರನ್ನು ಒಂದು ರಸ್ತೆಗೆ ಇಟ್ಟರು ಎಂದು ಕೇಳಿದ್ದೆ. ಕನ್ಫರ್ಮ್ ಇಲ್ಲ ಈ ಸುದ್ದಿ.

ಹಲವಾರು ಸಭೆಗಳನ್ನು ಇವರು ಮೂಢನಂಬಿಕೆ ವಿರುದ್ಧ ಆಯೋಜಿಸುತ್ತಿದ್ದರು. ಇವರು ಈಗಲೂ ಈ ಮೂಢನಂಬಿಕೆ ವಿರುದ್ಧ ಒಂದು ಯೋಜನೆ ರೂಪಿಸಿದರು. ಅದರಂತೆ ಸೂರ್ಯಗ್ರಹಣದ ದಿವಸ ಗ್ರಹಣ ಹಿಡಿದಿರುವ ಸಮಯದಲ್ಲಿ ಟೌನ್ ಹಾಲ್ ಮುಂದೆ ಮಟನ್ ಪಫ್ ತಿನ್ನುವುದು. ಈ ಸುದ್ದಿಗೆ ಪತ್ರಿಕೆಗಳಲ್ಲಿ ತುಂಬಾ ಪ್ರಚಾರ ಸಿಕ್ಕಿತು. ಟೌನ್ ಹಾಲ್ ಮುಂದೆ ಗ್ರಹಣದ ದಿವಸ ಎಲ್ಲಾ ಮೂಢನಂಬಿಕೆ ವಿರೋಧಿಗಳು ಜಮಾಯಿಸಿದರು. ಡಾ.ಎಚ್ಚೆನ್ ಬರುತ್ತಾರೆ ಅಂತ ಪ್ರಚಾರ ಸಹ ಆಗಿತ್ತು. ಎಚ್ಚೆನ್ ಈ ವೇಳೆಗಾಗಲೇ ಹಲವಾರು ವೇದಿಕೆಗಳ ಮೂಲಕ ವಾಚಕರ ವಾಣಿ ಮೂಲಕ ಜನಜಾಗೃತಿ ಮಾಡುತ್ತಿದ್ದರು. ಅವತ್ತು ಎಚ್ಚೆನ್ ಅಲ್ಲಿಗೆ ಬರಲಿಲ್ಲ. ಅವರು ಮಟನ್ ತಿನ್ನಲ್ಲ ಅಂತ ಆಮೇಲೆ ತಿಳೀತು. ಮುಂದೆ ಸಹ ಅವರು ಈ ಗುಂಪಿನ ಜತೆ ಸಂಪರ್ಕ ಇಟ್ಟುಕೊಂಡವರು ಅಲ್ಲ. ಮಾನವನ ಮೇಲೆ ಗ್ರಹಗಳ ಪ್ರಭಾವ ಉಂಟೇ ಎನ್ನುವ ಚಿಕ್ಕ ಪುಸ್ತಕ ಪ್ರಕಟ ಆಗಿತ್ತು. ಅದನ್ನು ಬೆಂಗಳೂರು ವಿಶ್ವ ವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೊಬ್ಬರು (ಅವರ ಹೆಸರು ನೆನಪಿಗೆ ಬರುತ್ತಿಲ್ಲ) ರಚಿಸಿದ್ದರು. ಅದು ಆಗಿನ ಪ್ರೊ ಥಿಂಕರ್ಸ್ ಗೆ ಒಂದು ಕೈಪಿಡಿ, ಕಮ್ಯುನಿಸ್ಟರಿಗೆ ರೆಡ್ ಬುಕ್ ಇದ್ದ ಹಾಗೆ. ಈ ಪುಸ್ತಕ ಬರೆಯಲು ಪ್ರೇರೇಪಕರು ಎಚ್ಚೆನ್ ಎಂದೂ ಸುದ್ದಿಯಿತ್ತು. ಈ ಹಿನ್ನೆಲೆಯಲ್ಲಿ ಮೂಢನಂಬಿಕೆ ವಿರೋಧಿ ಗುಂಪಿಗೆ ಹೊಸ ಚೈತನ್ಯ ಬಂದಿತ್ತು. ಮುಂದೆ ಎಚ್ಚೆನ್ ವೈಜ್ಞಾನಿಕ ಚಿಂತನೆಗಳನ್ನು ಪ್ರಮೋಟ್ ಮಾಡಿದ್ದು ಇತಿಹಾಸ.

ಈಗ ಮತ್ತೆ ಮಟನ್ ಪಫ್ ಸುದ್ದಿಗೆ. ನಾನೂ ಆ ಮಟನ್ ಪಫ್ ಗುಂಪಿನಲ್ಲಿದ್ದೆ. ಭಾಷಣ ಪಾಷಣ ಆದಮೇಲೆ ಎಲ್ಲರಿಗೂ ಮಟನ್ ಪಫ್ ಕೊಟ್ಟರಾ? ನನ್ನ ಹತ್ತಿರ ಬಂದಾಗ ಬೇಡ ಅಂದೆ. ಯಾಕೆ ಸಾರ್? ಅಂತ ಕೇಳಿದರು. ಈ ತನಕ ನಾನು ಮಟನ್ ತಿಂದಿಲ್ಲ, ಮುಂದೇನೂ ತಿನ್ನೋಲ್ಲ ಅಂತ ಹೇಗೆ ಹೇಳೋದು? ನಾನೇ ಮನೆಯಿಂದ ತಂದೀದ್ದಿನಿ ಅಂದೆ. ಬಹುಶಃ ಶಾರ್ಟೇಜ್‌ ಆಗಬಹುದು ಅಂತ ಅವರು ಬಲವಂತ ಮಾಡಲಿಲ್ಲ. ಅವರೆಲ್ಲ ಮಟನ್ ಪಫ್ ತಿಂದರಾ? ನಾನು ಪ್ಯಾಂಟಿನ ಜೇಬಿಂದ ಎರಡು ತಲಾ ಅರ್ಧ ಮೊಳ ಉದ್ದದ ಹಳದಿ ಬಣ್ಣದ ಪಚ್ಚ ಬಾಳೆ ಹಣ್ಣು ಆಚೆ ತೆಗೆದು ಸಿಪ್ಪೆ ಸುಲಿದು ಒಂದರ ನಂತರ ಒಂದು ಮುರಿದು ಬಾಯಿಗೆ ಹಾಕಿಕೊಂಡೆ. ಟೌನ್ ಹಾಲ್‌ಗೆ ಬರ್ತಾ ಕಾರ್ಪೋರೇಶನ್ ಎದುರು ಒಂದು ಹೆಂಗಸು ಬಾಳೆಹಣ್ಣು ಮಾರ್ತಾ ಇದ್ದಳು. ಅದನ್ನ ನೋಡಿ ತಿನ್ನಬೇಕು ಅಂತ ಆಸೆ ಹುಟ್ಟಿತ್ತು. ಈ ಆಸೆ ದೊಡ್ಡ ಸೈಜಿನ ಬಾಳೆಹಣ್ಣು ನೋಡಿದಾಗಲೆಲ್ಲ ಹುಟ್ಟುತ್ತೆ. ನನ್ನ ಕಸಿನ್ ಅನಂತ ನಾನು ಒಂದು ಸಲ ಸಂಗಂ ಎದುರು ರಸ್ತೆಯಲ್ಲಿ ಬರ್ತಾ ಇದ್ದೆವು. ಜತೆಯಲ್ಲಿ ಪ್ರಸನ್ನ ಸಹ ಇದ್ದ. ಎದುರು ಬಾಳೆಹಣ್ಣು ನೋಡಿದೇವಾ… ಅನಂತನ ಮುಖ ಎಪ್ಪತ್ತು ಮಿಮಿ ಸ್ಕ್ರೀನ್ ತರಹ ಆಯಿತು. ಕಣ್ಣು ಫಳ ಫಳ ಹೊಳಿತಿದೆ. ಒಂದು ಅತ್ಯಂತ ಅಪೂರ್ವ ದೃಶ್ಯ ಕಂಡದ್ದು ಅವತ್ತು. ಅನಂತನಿಗೆ ಬಲವಂತ ಮಾಡಿ ಬಾಳೆ ಹಣ್ಣು ತಿನ್ನಿಸಿದೆವು. ಅವತ್ತಿಂದ ಎಲ್ಲೇ ಬಾಳೆಹಣ್ಣು ನೋಡಿದರೂ ಅವತ್ತಿನ ಫಳ ಫಳ ಹೊಳೆಯುವ ಅನಂತ ಕಣ್ಣ ಮುಂದೆ ಬರುತ್ತಾನೆ. ಅನಂತ ಈಗಲೂ ಸಹ ಕಣ್ಣಮುಂದೆ ಬಂದ. ಅದನ್ನು ನೆನೆಸಿಕೊಂಡೇ ಬಾಳೆಹಣ್ಣು ಕೊಂಡು ಜೇಬಲ್ಲಿ ಇಟ್ಟುಕೊಂಡೆ. ಅದು ಇಲ್ಲಿ ಪ್ರಯೋಜನಕ್ಕೆ ಬಂತು. ಪಫ್ ಆಮೇಲೆ ಅರ್ಧ ಕಪ್ ಟೀ ಕೊಟ್ಟರು. ಇದಕ್ಕೆ ಮೊದಲು ಎಲ್ಲರನ್ನೂ ಸಾಲಾಗಿ ಹಿಂದೆ ಮುಂದೆ ಗುಂಪಾಗಿ ನಿಲ್ಲಿಸಿದರು. ಧರ್ಮಲಿಂಗಂ ಅವರು ಮಧ್ಯ ನಿಂತರು. ಮಟನ್ ಪಫ್ ಕೈಯಲ್ಲಿ ಹಿಡಿದ ಹಾಗೆ ಯಾರೋ ಮಹಾರಾಯ ಫೋಟೋ ತೆಗೆದ.. ಮಾರನೇ ದಿನ ಪತ್ರಿಕೆಯ ಮುಖಪುಟದಲ್ಲಿ ದೊಡ್ಡ ಸುದ್ದಿ (ಗ್ರಹಣದ ಸಮಯದಲ್ಲಿ ಆಹಾರ ಸೇವಿಸಿದ ಮೂಢನಂಬಿಕೆ ವಿರೋಧಿಗಳು….. ಅಂತ ದಪ್ಪಕ್ಷರದ ಶೀರ್ಷಿಕೆ) ಸಮೇತ ಫೋಟೋ ಬಂತು, ನಾನೂ ಗುಂಪಿನಲ್ಲಿ ಗೋವಿಂದ ಆಗಿದ್ದೆ! ನನ್ನ ಕೈಯಲ್ಲಿದ್ದ ಬಾಳೆ ಹಣ್ಣು ಫೋಟೋದಲ್ಲಿ ಕಾಣಿಸದ ಹಾಗೆ ಮರೆ ಮಾಡಿಕೊಂಡಿದ್ದೆ…! ಫೋಟೋದಲ್ಲಿ ನಾನೇ ಗೋವಿಂದ ಆದಮೇಲೆ ಬಾಳೆ ಹಣ್ಣು ಎಲ್ಲಿ ಕಂಡೀತು…!

ನಂತರದ ದಿವಸಗಳಲ್ಲಿ ಗ್ರಹಣದ ದಿವಸ ಟೌನ್ ಹಾಲ್ ಮುಂದೆ ಪಫ್ ತಿನ್ನುವುದು ಒಂದು ಸಂಪ್ರದಾಯ ಆಯಿತು. ಒಮ್ಮೆ ಒಬ್ಬರು ಗ್ರಹಣದ ದಿನ ನೇರವಾಗಿ ಸೂರ್ಯನನ್ನು ಇಡೀ ಗ್ರಹಣದ ಕಾಲದಲ್ಲಿ ನೋಡುತ್ತೇನೆ ಅಂತ ಟೌನ್ ಹಾಲ್ ಮುಂದೆಯೇ ಪ್ರದರ್ಶನ ಕೊಟ್ಟರು. ಅವರು ಹಠ ಯೋಗಿಗಳು ಅಂತ ಯಾರೋ ಪ್ರಚಾರ ಮಾಡಿದ್ದರು. ಇನ್ನೊಬ್ಬರು ಬೆಂಗಳೂರಿನ ಹಠಯೋಗದವರ ನೆನಪು ಬಂತು. ಇವರು ನೀರಿನ ಮೇಲೆ ನಡೆಯುತ್ತೇನೆ ಅಂತ ಪ್ರಚಾರ ಮಾಡಿದರು. ಬೊಂಬಾಯಿಯಲ್ಲಿ ಒಂದು ಶೋ ಇಟ್ಟರು. ಟಿಕೆಟ್ ಮೂಲಕ ಪ್ರವೇಶ. ಪ್ರದರ್ಶನ ನೋಡಲು, ನೀರಿನ ಮೇಲೆ ನಡೆಯುವ ಪವಾಡ ನೋಡಲು ಜನ ಕಿಕ್ಕಿರಿದು ಸೇರಿದರು. ಪ್ರದರ್ಶನ ಶುರು ಆಯಿತು. ಹಠಯೋಗಿ ನೀರಿನ ಮೇಲೆ ಕಾಲಿಟ್ಟರು ಮೂರು ಹೆಜ್ಜೆ ಹಾಕಿ ಮುಳುಗಿದರು. ಆಮೇಲೆ ಅವರನ್ನ ಮೇಲಕ್ಕೆ ಎತ್ತಿದರು ಅನ್ನುವ ಸುದ್ದಿ ಓದಿದ್ದೆ. ಎಂಬತ್ತರ ದಶಕದಲ್ಲಿ ಜಯನಗರದಲ್ಲಿ ಒಂದು ಮನೆ ತೋರಿಸಿ ಇದೇ ಹಠ ಯೋಗಿಗಳ ಮನೆ ಅಂತ ನನ್ನಾಕೆ ತೋರಿಸಿದ್ದಳು. ಅವರ ಹೆಸರು ಅದೇನೋ ರಾವ್/ಸ್ವಾಮಿ ಅಂತ ನೆನಪು.

ಗ್ರಹಣದ ಬಗ್ಗೆ ವೈಜ್ಞಾನಿಕ ನಿಲುವು ಹೊಂದಿದ್ದೆವಲ್ಲ.. ಒಂದು ಖಗ್ರಾಸ ಗ್ರಹಣ ಆಗುವುದರ ಬಗ್ಗೆ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ಆಗುತ್ತಾ ಇತ್ತು. ದೇಶ ವಿದೇಶಗಳಿಂದ ಖಗೋಳ ವಿಜ್ಞಾನಿಗಳು ಬಂದು ಸಂಶೋಧನೆ ನಡೆಸುತ್ತಾರೆ ಅಂತ ಪ್ರಚಾರ ಆಗಿತ್ತು ಮತ್ತು ಆ ವಿಜ್ಞಾನಿಗಳು ಸಮುದ್ರ ತೀರಗಳಲ್ಲಿ ವಾಸ್ತವ್ಯ ಮಾಡುತ್ತಾರೆ ಎಂದೂ ಸುದ್ದಿಯಿತ್ತು. ನಾವು (ಅಂದರೆ ಪ್ರಸನ್ನ, ನಾಗರಾಜ್ ಮತ್ತೊಬ್ಬ ಗೆಳೆಯ ದಾಮೋದರ ಹಾಗೂ ಮತ್ತಿಬ್ಬರು) ಎಲ್ಲರೂ ಯಾವುದಾದರೂ ಸಮುದ್ರ ತೀರದಲ್ಲಿ ಗ್ರಹಣ ನೋಡಲು ನಿರ್ಧಾರ ಮಾಡಿದೆವು. ಬೆಂಗಳೂರಿನಲ್ಲಿ ಸಮುದ್ರ ಇಲ್ಲದ್ದು ಮತ್ತು ಇಲ್ಲಿ ಅಂತಹ ಪ್ರಯೋಗ ಮಾಡಲು ಮನೆಯಲ್ಲಿ ಬಿಡುತ್ತಾರೆಯೇ ಎನ್ನುವ ಸಂಶಯ ಇತ್ತೋ…ತಿಳಿಯದು. ಪ್ರಸನ್ನ ಈ ವೇಳೆಗೆ ಸರ್ಕಾರಿ ಕೆಲಸ ಬಿಟ್ಟು ವಕೀಲಿ ಕೆಲಸ ಶುರು ಮಾಡಿದ್ದ. ದಾಮೋದರ ಕೂಡ ವಕೀಲ. ನಾಗರಾಜ ಬ್ಯಾಂಕು ಮತ್ತು ನಾನು ಫ್ಯಾಕ್ಟರಿ ಕೂಲಿ. ನಮ್ಮ ಜತೆ ಇನ್ನೂ ಒಂದಿಬ್ಬರು(ಗೋಪಿ, ಪದ್ಮನಾಭ) ಇದ್ದರು, ಅವರು ಸ್ವಂತ ಉದ್ಯೋಗ ಮಾಡುತ್ತಿದ್ದರು ಅಂತ ಮಸಕು ನೆನಪು.

ಸಮುದ್ರ ತೀರದಲ್ಲಿ ವಾಸ್ತವ್ಯದ ಅನುಕೂಲ ಇರದು. ನಮ್ಮ ವ್ಯವಸ್ಥೆ ನಾವೇ ಮಾಡಿಕೊಳ್ಳಬೇಕು ಅಂತ ಸಮುದ್ರ ತೀರ ಕೈ ಬಿಟ್ಟಾಯ್ತು. ನೆಕ್ಸ್ಟ್ ಆಪ್ಷನ್ ನದಿತೀರದಲ್ಲಿ ಅಂತ ಅದರ ಪಟ್ಟಿ ಮಾಡಿದೆವು. ಆಗ ಮಾಗೋಡು ಫಾಲ್ಸ್ ನೆನಪಿಗೆ ಬಂತು. ನಾವು ಯಾರೂ ಅದನ್ನ ನೋಡಿರಲಿಲ್ಲ, ನಾಗರಾಜ ನೋಡಿದ್ದ ಅಂತ ಕಾಣುತ್ತೆ. ಅಲ್ಲೊಂದು ಸರ್ಕಾರಿ ಟಿಬಿ ಇರೋದು, ಅದು ವಾಸ್ತವ್ಯಕ್ಕೆ ಯಾರಾದರೂ ಪ್ರಭಾವಿಗಳ ಮೂಲಕ ಪಡೆಯಬಹುದು ಅನ್ನುವುದು ಸಹ ಗೊತ್ತಾಯಿತು.

ಪ್ರಭಾವ ಉಪಯೋಗಿಸಿ ಟಿಬಿ ಬುಕ್ ಮಾಡಿದೆವು. ಗ್ರಹಣದ ಹಿಂದಿನ ದಿವಸ ಅಲ್ಲಿ ತಲುಪುವ ಹಾಗೆ ಬಸ್ಸು ಹಿಡಿದು ಒಂದೆರೆಡು ಕಡೆ ಬದಲಾಯಿಸಿ (ಸಿರ್ಸಿ ಯಲ್ಲಾಪುರ ಮೊದಲಾದ ಊರುಗಳು ದಾರಿಯಲ್ಲಿ ಸಿಕ್ಕವು)ಅಲ್ಲಿಗೆ ಸೇರಿಕೊಂಡೆವು. ಇದು ಗೂಗಲ್, ಮ್ಯಾಪು, ಸೆಲ್ ಫೋನ್ ಮೊದಲಾದ ಈಗಿನ ಯಾವ ಪರಿಕರವೂ ಇನ್ನೂ ಕಲ್ಪನೆಯಲ್ಲಿ ಸಹ ಇಲ್ಲದ ಕಾಲದಲ್ಲಿ. ಹಾಗೆ ನೋಡಿದರೆ ಲ್ಯಾಂಡ್ ಲೈನ್ ಫೋನ್ ಸಹ ದುಸ್ತರ..! ಕೆಲವು ತಿಳಿದವರಿಂದ, ಕೆಲವು ಬಲ್ಲವರಿಂದ ಕೇಳಿ ತಿಳಿದು ನಮ್ಮ ರೋಡ್ ಮ್ಯಾಪ್ ಮಾಡಿದ್ದು. ಡಿಜಿಟಲ್ ಕ್ಯಾಮೆರಾ ಅಂತ ಒಂದು ಇನ್ನು ಮುಂದೆ ಬರುತ್ತೆ ಅಂತ ಯಾವ ವಿಜ್ಞಾನಿ ಆಗಲಿ ಜೋತಿಷಿ ಆಗಲಿ ಹೇಳಿರಲಿಲ್ಲ. ಆಗ agfa ಕಂಪನಿಯ ಕ್ಯಾಮೆರಾ ಬರುತ್ತಿತ್ತು, ನಮ್ಮಂತಹ ಪೂರ್ತಿ ತಳ ಮಧ್ಯಮದ ಜನಗಳಿಗೆ ಮತ್ತು ಫೋಟೋ ತೆಗೆಯುವ ಹುಚ್ಚು ಇರುವವರಿಗೆ. ಅದರ ಲೇಟೆಸ್ಟ್ ವರ್ಷನ್ ಅಂದರೆ ಕ್ಲಿಕ್ 3 ಅಂತ. ಅರವತ್ತೈದು ರೂಪಾಯಿ ಕೊಟ್ಟು ಕೊಂಡಿದ್ದೆ. ಅದಕ್ಕೆ ತಲಾ ಇಪ್ಪತ್ತೊಂದು ರೂಪಾಯಿ ಕೊಟ್ಟು ಆರು ಫಿಲ್ಮ್ ರೋಲ್ ತಗೊಂಡಿದ್ದೆ. ಒಂದು ರೋಲ್‌ನಲ್ಲಿ ಹನ್ನೆರೆಡು ಫೋಟೋ ತೆಗಿಬಹುದು. ಫಿಲ್ಮ್ ತಿರುಗಿಸೋದು ಅಡ್ಜಸ್ಟ್ ಮಾಡಿಕೊಂಡು ಹದಿಮೂರು ಫೋಟೋ ತೆಗಿಬಹುದು, ಆದರೆ ಇದಕ್ಕೆ ಪರಿಣತಿ ಬೇಕು. ಆ ಪರಿಣತಿ ನಾನು ಸಾಧಿಸಿಬಿಟ್ಟಿದ್ದೆ. ನಮ್ಮ ಅಣ್ಣ ಫಿಲ್ಮ್ ರೋಲ್ ಅನ್ನ ಅವನ ಸ್ನೇಹಿತರ ಮೂಲಕ ಮಿಲಿಟರಿ ಕ್ಯಾಂಟೀನ್‌ನಿಂದ ತರಿಸುತ್ತಿದ್ದ. ಹತ್ತು ರೂಪಾಯಿ ಕಡಿಮೆ ಬೀಳೋದು. ಅಂತ ಫಿಲ್ಮ್ ರೋಲ್ ಕ್ಯಾಮೆರಾಗೆ ತೂರಿಸಿ ಪ್ರತಿಸಲ ಫೋಟೋ ತೆಗೆಯೋದು ನಾನು. ಆಗಲೇ ನನ್ನ ಫೋಟೋ ನಾನೇ ತೆಗಿತಿದ್ದೆ, ಈಗಿನ ಸೆಲ್ಫಿ ಹಾಗೇ. ಕ್ಯಾಮೆರಾ ತಿರುಗಿಸಿ ನನ್ನ ಮುಖ ಅಂದಾಜಿನ ಮೇಲೆ ಲೆನ್ಸ್ ಎದುರು ಇಟ್ಟುಕೊಂಡು ಕ್ಲಿಕ್ ಮಾಡೋದು. ಆಗ ಲೆನ್ಸ್ ಕಡೆಯಿಂದ ಕ್ಲಿಕ್ ಅಂತ ಶಬ್ದ ಬಂದು ಬಾಗಿಲು ತೆರೆದು ಮುಚ್ಚಿದ ಹಾಗೆ ಆಗುತ್ತಿತ್ತು. ಬಹುಶಃ ಈ ಕಾರಣಕ್ಕೇ ಕ್ಯಾಮೆರಾಗೆ ಕ್ಲಿಕ್ ಅಂತ ಹೆಸರು ಇಟ್ಟಿರಬೇಕು! ಸೆಲ್ಫಿ ಕಲ್ಪನೆ ಆಗಲೇ ನಾನು ಕಂಡು ಹಿಡಿದಿದ್ದೆ. ಅದು ಚರಿತ್ರೆಯಲ್ಲಿ ಎಲ್ಲೂ ದಾಖಲು ಆಗಲಿಲ್ಲ, ನನ್ನ ಎಷ್ಟೋ ಇನ್ವೆನ್ಷನ್‌ಗಳ ಹಾಗೇ. ಒಂದೊಂದು ಸಲ ಫಿಲ್ಮ್ ತಂದಾಗಲೂ ಆರು ಸೆಲ್ಫಿ ನನ್ನದೇ ಇರುತ್ತಿತ್ತು. ನಮ್ಮ ಅಣ್ಣ ಹಾಳಾದೋನು ಅರ್ಧ ಫಿಲ್ಮ್ ಇವನದ್ದೇ ಫೋಟೋ ತೆಕ್ಕೋತಾನೆ ಅಂತ ನನಗೆ ಕೇಳಲಿ ಅಂತಲೇ ಊಟಕ್ಕೆ ಎಲ್ಲರೂ ಕೂತಾಗ ಜೋರಾಗಿ ಹೇಳುತ್ತಿದ್ದ. ನಾನು “ಐ ಡೊಂಟ್ ಕೇರ್ ಮಾಸ್ಟರ್!” ಬೆಲೆ ಬಾಳುವ ಇಂಪೋರ್ಟೆಡ್ ಕ್ಯಾಮೆರಾಗಳು ಸಿಗುತ್ತಿದ್ದವು, ಆದರೆ ನಮ್ಮ ಕೈಗೆ ಎಟುಕದಷ್ಟು ದುಬಾರಿ. ಅದರಿಂದ ನಾವು ಬಾಕ್ಸ್ ಕ್ಯಾಮೆರಾ ಸಂತೃಪ್ತರು. ಬಾಕ್ಸ್ ಅಂದರೆ ಡಬ್ಬಾ. ಅದು ಇಲ್ಲಿ ಅನ್ವರ್ಥ.

ಗ್ರಹಣದ ಹಿಂದಿನ ದಿನ ರಾತ್ರಿ ಸರಿ ರಾತ್ರಿವರೆಗೂ ಕೂತು ಮಾತುಕತೆ ಮೂಲಕ ನಮ್ಮ ಬುದ್ಧಿವಂತಿಕೆ ಪ್ರದರ್ಶನ ಮಾಡಿಕೊಂಡೆವು. ಮಲಗಕ್ಕೆ ಅಂತ ಟಿಬಿ ಒಳಗೆ ಬಂದೆವು. ಬಾಗಿಲು ಚಿಲಕ ಭದ್ರವಾಗಿ ದಾಮೋದರ ಹಾಕಿದ. ನಂತರ ಮೊದಲು ಬೆಂಚ್ ಎಳೆದು ಅದಕ್ಕೆ ಅಡ್ಡ ಇಟ್ಟ. ಅದರ ಮೇಲೆ ಇನ್ನೊಂದು ಬೆಂಚು ಹೇರಿದ. ಅದರ ಮೇಲೆ ಎರಡು ಟೀಪಾಯ್ ಒಂದರ ಪಕ್ಕ ಮತ್ತೊಂದು ಇಟ್ಟ. ಸುಮಾರು ಬಾಗಿಲ ಎತ್ತರಕ್ಕೆ ಇವು ಬಂದವು. ಎರಡು ಹಾಸಿಗೆ ಎಕ್ಸ್ಟ್ರಾ ಇದ್ದವು. ಅದನ್ನೂ ಎತ್ತಿ ಟೀ ಪಾಯ್ ಮೇಲೆ ಇರಿಸಿದ. ಈಗ ಸರಿಹೋಯಿತು ಅಂದುಕೊಂಡು ಒಮ್ಮೆ ಟಿಬಿ ಒಳಗಡೆ ಒಂದು ಸುತ್ತು ಹಾಕಿದ. ಮಿಕ್ಕಿದ್ದ ಆರು ಚೇರು ಬಾಗಿಲಿಗೆ ಅಡ್ಡ ಆದವು.

“ಯಾಕೆ ಈ ಪ್ರಿಕಾಶನ್ ಗೊತ್ತಾ?” ಅಂದ
“ಊಹೂಂ…” ಅಂತ ತಲೆ ಆಡಿಸಿದೆವು.

“ನೋಡಿ ಈ ಟಿಬಿ ಕಾಡಿನಲ್ಲಿ ಇರೋದು. ಇಷ್ಟು ಜನ ಮನುಷ್ಯರು ಇದಾರೆ ಅಂದರೆ ಯಾವುದಾದರೂ ಕಾಡು ಪ್ರಾಣಿ ಬಂದೇ ಬರುತ್ತೆ. ಅದಕ್ಕೇನು ಬಾಗಿಲು ಮುರಿದು ಒಳಗೆ ಬಂದು ನಮ್ಮನ್ನ ಕಚ್ಚಿಕೊಂಡು ಹೋಗೋದು ದೊಡ್ಡದಲ್ಲ. ಅದಕ್ಕೇ ಈ ಮುಂಜಾಗ್ರತೆ……” ಅಂದ. ದಾಮೋದರನ ಮುಂದಾಲೋಚನೆ ಆಶ್ಚರ್ಯ ಹುಟ್ಟಿಸಿತ್ತು. ದಾಮೋದರ ಎಷ್ಟು ಬುದ್ಧಿವಂತ ಅಂತ ಖುಷಿ ಆಗಿತ್ತು.

ಹಾಗಿದ್ದರೆ ಇಷ್ಟೊಂದು ಬಂದೋಬಸ್ತ ಯಾಕೆ ಅಂತೀರಾ? ಅದು ಬಾಗಿಲು ನೂಕಿದಾಗ ಶಬ್ದ ಆಗುತ್ತಲ್ಲಾ ಆಗ ಓಡಬಹುದು ಅಂದ! ಬಾಗಿಲಿಗೆ ಅಡ್ಡ ಹುಲಿ, ಸಿಂಹ ನಿಂತಿದ್ದರೆ ಎಲ್ಲಿ ಓಡೋದೂ… ಅಂತ ತಲೆಗೆ ಬಂದರೂ ತೆಪ್ಪಗಿದ್ದೆವು, ಭಯವೆ, ತಿಳಿಯದು.

ನಮಗೆ ನಿದ್ದೆ ಹಾರಿತು ಅಂತ ಹೇಳಬೇಕಿಲ್ಲ. ಅದು ಹೇಗೋ ಮಲಗಿದೆವು. ಕಾಡು ಪ್ರಾಣಿ ಅದರಲ್ಲೂ ಹುಲಿ ಸಿಂಹ ಚಿರತೆ ಕರಡಿ ಬಂದು ಬಾಗಿಲು ಮುರಿಯತ್ತೆ, ಅಂತಹ ಶಬ್ದಕ್ಕೆ ಕಾದೆವು. ಅದ್ಯಾವುದೋ ಮಾಯದಲ್ಲಿ ನಿದ್ದೆ ಬಂದು ಬಿಟ್ಟಿತ್ತು. ಬೆಳಿಗ್ಗೆ ಕಿಟಕಿ ಮೂಲಕ ಸೂರ್ಯ ನಮ್ಮ ಮೇಲೆ ಬಿದ್ದಾಗಲೇ ಎಚ್ಚರ. ರಾತ್ರಿ ಹುಲಿ ಸಿಂಹ ಕರಡಿ ಬಂದು ಯಾರನ್ನಾದರೂ ತಿಂದೂ ಇದೆಯಾ ಅಂತ ನಮ್ಮ ಎಲ್ಲರನ್ನೂ ಎರಡು ಮೂರು ಸಲ ಎಣಿಸಿ, ಹೆಸರು ಹಿಡಿದು ಕೂಗಿ ಎಲ್ಲರೂ ಜೀವಂತ ಇದೀವಿ ಅಂತ ಕನ್ಫರ್ಮ್‌ ಮಾಡಿಕೊಂಡೆವು.

ಕಾಫಿ ತಿಂಡಿ ಮುಗಿಸಿ ಅವರವರ ಕ್ಯಾಮೆರಾ ಹಿಡಿದು ಒಂದೆರೆಡು ಮೈಲಿ ನಡೆದರೆ ಅಲ್ಲಿ ಫಾಲ್ಸ್. ಕೊಂಚ ದೂರದಲ್ಲಿ ಮರಗಳು. ಮಧ್ಯೆ ಕೊಂಚ ಬಯಲು ನಂತರ ಕಲ್ಲು ಬಂಡೆಗಳು. ಅದನ್ನು ದಾಟಿದರೆ ನೀರಿನ ಜಲಪಾತ. ಇದು ಆಗಿನ ಅಲ್ಲಿನ ಲೋಕಲ್ ಜಾಗ್ರಫಿ. ಈಗ ಬೇಕಾದಷ್ಟು ಬದಲಾವಣೆ ಆಗಿದೆ.

ಬೆಳಿಗ್ಗೆ ಒಂಬತ್ತರಿಂದ ಮಧ್ಯಾಹ್ನ ಒಂದರವರೆಗೆ ಗ್ರಹಣದ ಸಮಯ. ಮಧ್ಯ ಹನ್ನೊಂದೂವರೆಗೆ ಹತ್ತೂವರೆ ನಿಮಿಷದಷ್ಟು ಕಾಲ ಇಡೀ ಪ್ರದೇಶ ಕತ್ತಲಾಗಿಬಿಡುತ್ತೆ. ಹಗಲು ರಾತ್ರಿ ಆದ ಅನುಭವ ಕೊಡುತ್ತೆ, ಅದೆಷ್ಟೋ ವರ್ಷಗಳಿಗೆ ಒಮ್ಮೆ ನಡೆಯುವ ಘಟನೆ ಇದು ಎಂದು ಪೇಪರುಗಳಲ್ಲಿ ಈ ಗ್ರಹಣದ ಬಗ್ಗೆ ವ್ಯಾಪಕ ಪ್ರಚಾರ ಆಗಿತ್ತು ಮತ್ತು ನಾವೂ ಆ ಕುರಿತ ಲೇಖನಗಳನ್ನು ಓದಿದ್ದೆವು. ಈ ಲೇಖನಗಳ ಪ್ರಭಾವವೇ ನಮ್ಮನ್ನು ಇಲ್ಲಿಯವರೆಗೆ ಎಳೆದು ತಂದಿದ್ದು.

ಸಮತಟ್ಟಾದ ಸುತ್ತಲೂ ಮರಗಿಡಗಳು ಇರುವ ಜಾಗ ಆರಿಸಿದೆವು. ಸೂರಿನ ಭಾಗದಿಂದ ಸೂರ್ಯನ ಬಿಸಿಲು ನೇರ ನೆಲದ ಮೇಲೆ ಬೀಳುವಂತಹ ಜಾಗ ಆರಿಸಿದ್ದು, ಮರಗಳ ನೆರಳು ಬಿದ್ದು ಗ್ರಹಣ ವೀಕ್ಷಣೆ ಆಗದೇ ಇದ್ದರೆ ಅಂತ ಈ ಮುಂದಾಲೋಚನೆ! ನಮ್ಮ ಪುಣ್ಯ, ಅವತ್ತು ಮೋಡ ಕವಿದಿರಲಿಲ್ಲ ಮತ್ತು ನೀಲಿ ಆಕಾಶ ಹರಡಿತ್ತು.

ಅವರವರು ತಂದಿದ್ದ ವಿವಿಧ ರೀತಿಯ ಕ್ಯಾಮೆರಾ, ಕೆಲವು ಬಾಕ್ಸ್ ಟೈಪ್, ಕೆಲವು ಕಾಸ್ಟ್ಲಿ.. ಆದರೆ ಈಗಿನ ಡಿಜಿಟಲ್ ಕ್ಯಾಮೆರಾ ಇಲ್ಲ, ಮೊದಲಾದವು ಮತ್ತು ಗ್ರಹಣ ವೀಕ್ಷಣಾ ಸಾಮಗ್ರಿಗಳಾದ ಕರೀ ಮಸಿ ಹಚ್ಚಿದ ಗಾಜು, ಎಕ್ಸರೇ ಫಿಲ್ಮ್.. ಸಮೇತ ಬಯಲಿನಲ್ಲಿ ಕೂತೆವು. ಎಲ್ಲರ ಕಣ್ಣೂ ಸೂರ್ಯನ ಮೇಲೆ ಮತ್ತು ಆಸು ಪಾಸು. ಒಂಬತ್ತರ ಸುಮಾರಿಗೆ ಸೂರ್ಯನ ಮೇಲೆ ಕೊಂಚ ಕೊಂಚ ಅರೆ ಚಂದ್ರನ ತುಂಡು ಬರಲು ಶುರು ಆಯಿತು. ಗ್ರಹಣ ಶುರು ಆತೋ ಅಂತ ಕೂಗಿದೆ. ಹಾಗೇ ನೋಡುತ್ತಾ ನೋಡುತ್ತಾ ಸೂರ್ಯನ ಮೇಲೆ ನೆರಳು ಹೆಚ್ಚುತ್ತಾ ಹೋಯಿತು. ಕ್ಯಾಮೆರಾ ತೆಗೆದು ಚಿತ್ರಗಳನ್ನು ತೆಗೆದು ಪೂರ್ಣ ಗ್ರಹಣಕ್ಕೆ ಕಾಯುತ್ತಾ ಕುಳಿತೆವು. ಕೆಲವೇ ಹೊತ್ತಿನಲ್ಲಿ ಪೂರ್ಣ ಗ್ರಹಣ ಆಗಿ ಇಡೀ ಭೂ ಮಂಡಲ ಕತ್ತಲು ಕವಿದು ರಾತ್ರಿ ಆಯಿತು. ಗಲಿಬಿಲಿಗೊಂಡ ಹಕ್ಕಿಗಳು ಕಕ್ಕಾ ಬಿಕ್ಕಿ ಆದವು. ರೆಕ್ಕೆ ಪಟ್ ಪಟ್ ಪಟ ಬಡಿಯುತ್ತಾ ಗಾಬರಿ ಹೆದರಿಕೆಯಿಂದ ಚೀರುತ್ತಾ ಮೇಲೆ ಕೆಳಗೆ ಹಾರಿದವು. ಕೆಲವರು ಆ ದೃಶ್ಯ ನೋಡುತ್ತಿದ್ದರೆ ಮತ್ತೆ ಕೆಲವರು ಪೂರ್ಣ ಗ್ರಹಣದ ಚಿತ್ರ ತೆಗೆಯುತ್ತಾ ಇದ್ದೆವು. ಪೂರ್ಣ ಗ್ರಹಣದ ಆರಂಭ ಮತ್ತು ನೆರಳು ಸೂರ್ಯನ ಬಿಂಬದಿಂದ ಹೊರಬರಬೇಕಾದರೆ ಒಂದು ಉಂಗುರದ ಆಕಾರ ಮತ್ತು ರೂಪು ಸೂರ್ಯನ ಸುತ್ತ ಮೂಡುತ್ತದೆ. ಇಂತಹ ಅಭೂತ ಪೂರ್ವ ದೃಶ್ಯ ಅಪರೂಪಕ್ಕೆ ಸಿಗುವಂತಹುದು.

ಬೈ ಲಿಸ್ ರಿಂಗ್ ಅಂತ ಇದರ ಹೆಸರು ಅಂತ ಓದಿ ಗೊತ್ತಿತ್ತು. ಇನ್ನೊಂದು ಹೆಸರು ರಿಂಗ್ ಆಫ್ ಫೈರ್ ಅಂತ. ಪ್ರತಿಯೊಬ್ಬರೂ ಅದನ್ನು ನೋಡಿ ಖುಷಿ ಪಟ್ಟಿದ್ದೆ ಪಟ್ಟದ್ದು. ಉಂಗುರ ಬರುವ ಮೊದಲು ಪೂರ್ಣ ಗ್ರಹಣ, ಇದು ಒಂದೂವರೆ ಎರಡು ನಿಮಿಷ ಕಾಣುತ್ತೆ. ಮರದಲ್ಲಿನ ಸೂರ್ಯನ ನೆರಳು ಹೇಗೆ ಕಾಣುತ್ತೆ ಅನಿಸಿತು. ಸೀದಾ ಮರದ ಬುಡಕ್ಕೆ ಓಡಿದೆವು. ನೆರಳಿನಲ್ಲಿಯೂ ಸಹ ಗ್ರಹಣದ ಚಿತ್ರ! ವಾಹ್ ಅನಿಸಿತು. ಅದರ ಕೆಲವು ಚಿತ್ರಗಳು, ಗ್ರಹಣ ಮುಗಿಯುತ್ತಾ ಬಂದಹಾಗೆ ಮತ್ತಷ್ಟು ಮರದ ನೆರಳಿನ ಚಿತ್ರ ತೆಗೆದೆವು. ರೀಲ್ ತೆಗೆದು ಜೋಪಾನವಾಗಿ ಇರಿಸಿ ಬೇರೆ ರೀಲ್ ಹಾಕಿ ಮತ್ತೆ ಮತ್ತೆ ಕೆಲವು ಫೋಟೋ ತೆಗೆದೆವು. ಗ್ರಹಣ ಮುಗಿಯೋ ಹೊತ್ತಿಗೆ ಅದೇನೋ ಖುಷಿ ಮತ್ತು ಏನೋ ಸಾಧಿಸಿದ ಅಮಲು ಬಂದಿತ್ತು. ಗ್ರಹಣ ಮುಗೀತಾ. ಜೀವಮಾನದ ಮೊದಲ ಖಗ್ರಾಸ ಗ್ರಹಣವನ್ನು ಸಂಪೂರ್ಣವಾಗಿ ಕಣ್ಣು, ಹೊಟ್ಟೆ ತುಂಬಾ ಕುಡಿದು ಸಂತೋಷ ಪಟ್ಟಿದ್ದೆವು. ಪ್ರಸನ್ನ, ದಾಮೋದರ, ನಾಗರಾಜ, ನಾನು ಮತ್ತಿಬ್ಬ ಗೆಳೆಯರು(ಅವರು ಗೋಪಿ, ಪದ್ಮ ಎನ್ನುವರು ಎಂದು ನೆನಪು. ನಾಗರಾಜನ ಆಪ್ತರು)ಪರಸ್ಪರ ಶೇಕ್ ಹ್ಯಾಂಡ್ ಕೊಟ್ಟುಕೊಂಡು ಒಂದೆರೆಡು ಹೆಜ್ಜೆ ಸ್ಟೆಪ್ಸ್ ಹಾಕಿದೆವಾ.. ಗಲಿಬಿಲಿಗೊಂಡ ಹಕ್ಕಿಗಳು ಮತ್ತೆ ಪೂರ್ವ ಸ್ಥಿತಿಗೆ ನಿಧಾನಕ್ಕೆ ಬರುತ್ತಿದ್ದವು. ಇಡೀ ಭೂ ಮಂಡಲ ಆಗ ತಾನೇ ಸ್ನಾನ ಮಾಡಿ ಶುಭ್ರವಾದ ಹಾಗೆ ಅನಿಸಿತು…. ಇದು ನಡೆದದ್ದು ಫೆಬ್ರವರಿ ೧೬ ನೇ ತಾರೀಕು, ಇಸವಿ ೧೯೮೦.

ಊರಿಗೆ ಬಂದು ಸೇರಿದ ಎರಡು ಮೂರು ದಿವಸ ಕ್ಯಾಮೆರಾ ಫಿಲ್ಮ್ ಪ್ರಿಂಟ್‌ಗೆ ಕೊಡೋದು, ಅದನ್ನ ತರೋದು ಆದರೆ ಮನೆಯವರಿಗೆ ಸ್ನೇಹಿತರಿಗೆ ಗ್ರಹಣದ ಅನುಭವ ಮತ್ತು ಖುಷಿ ಹಂಚಿಕೊಳ್ಳುವುದು ಆಯಿತು. ಮನೆ ಮಕ್ಕಳನ್ನ ಮತ್ತು ನಂಟರು ಸ್ನೇಹಿತರನ್ನು ಕರೆದುಕೊಂಡು ಹೋಗಿ ಈ ಗ್ರಹಣ ತೋರಿಸಬೇಕಿತ್ತು ಎಂದು ಎಷ್ಟೋ ಸಲ ಅನಿಸಿದೆ. ಬೆಂಗಳೂರಿಗೆ ಬಂದ ನಂತರ ಗ್ರಹಣದ ಕಪ್ಪು ಬಿಳುಪು ಫೋಟೋ ನಮ್ಮ ಸ್ನೇಹಿತರು ನಂಟರು ಇವರುಗಳ ನಡುವೆ ಹಲವು ತಿಂಗಳು ಪರ್ಯಟನ ಮಾಡಿದವು. ದೂರದ ಊರಿಗೆ ಹೋಗಿ ಗ್ರಹಣ ನೋಡಿದ ಎನ್ನುವ ಮೆಚ್ಚುಗೆ ಕೆಲವರದು. ಕೂಡಿಸಿ ಕೂಡಿಸಿ ಅನುಭವ ಕೇಳುವರು. ಅಯ್ಯೋ ಹೌದಾ ಹಾಗಿತ್ತಾ ಎಂದು ಆಶ್ಚರ್ಯ ಪಡುವರು. ಸಾಕಷ್ಟು ಜನರಿಗೆ ಬೇಕಾದಷ್ಟು ಹೊಟ್ಟೆ ಉರಿಸಿದೆ ಎನ್ನುವ ಆತ್ಮ ತೃಪ್ತಿ ನನಗೂ ಹುಟ್ಟಿತು! ಇದೇ ಸಮಯದಲ್ಲಿ ನನ್ನ ಹಿರಿಯ ಕೊಲೀಗ್ (ಶ್ರೀ ರಾಮಮೋಹನ್ ರಾವ್ ಇರಬೇಕು) ಒಬ್ಬರ ಮಗ ಸಮುದ್ರ ತೀರದಲ್ಲಿ ಕ್ಯಾಂಪ್ ಹಾಕಿ ಗ್ರಹಣದ ಬಣ್ಣ ಬಣ್ಣದ ಫೋಟೋ ತೆಗೆದಿದ್ದ. ಅದು ಒಂದು ವಾರಪತ್ರಿಕೆಯಲ್ಲಿ ಮುಖಪುಟವಾಗಿ ಅಚ್ಚಾಯಿತು.ಅವರು ಮುಖಪುಟ ತೋರಿಸಿ ಹೆಮ್ಮೆ ಪಟ್ಟರೆ ನಾವು ನಮ್ಮ ಬಾಕ್ಸ್ ಕ್ಯಾಮೆರಾದ ಬ್ಲಾಕ್ ಅಂಡ್ ವೈಟ್ ಚಿತ್ರ ತೋರಿಸಿ ಉಬ್ಬುತ್ತಿದ್ದೆವು. ಕಾಲಕ್ರಮೇಣ ಫೋಟೋಗಳು ಇದರ ಹುರುಪು ಕಡಿಮೆ ಆಗಿ ಕಣ್ಮರೆ ಆದರೂ ನೆನಪು ಚಿರಸ್ಥಾಯಿ ಆಯಿತು. ಗೆಳೆಯರ ಹತ್ತಿರ ಆ ಫೋಟೋಗಳು ಇರುವ ಸಂಭವ ಕಡಿಮೆ.

ಬೆಂಗಳೂರಿನಲ್ಲಿ ಆ ಗ್ರಹಣದ ದಿವಸವೂ ರಸ್ತೆಗಳು ಬಿಕೋ ಎನ್ನುತ್ತಿದ್ದವು, ಜನ ಮನೆಯಲ್ಲಿ ಅಡಗಿದ್ದರು ಎಂದು ಸ್ನೇಹಿತರು ಮತ್ತು ಪತ್ರಿಕೆ ಹೇಳಿದವು. ಇಂತಹ ಪ್ರಕೃತಿಯ ಸೊಬಗು ನೋಡುವುದು ಕಳೆದುಕೊಂಡರಲ್ಲಾ ಅಂತ ಅನಿಸಿತು. ಮೊದಲಿನಿಂದಲೂ ನನ್ನನ್ನು ತಮಾಷೆ ಮಾಡಿ ಚುಡಾಯಿಸುತ್ತಿದ್ದ ನನ್ನ ಆಪ್ತ ನಂಟರೊಬ್ಬರು ಪೂರ್ಣ ಗ್ರಹಣ ಸಂಪೂರ್ಣ ನೋಡಿದೆಯಲ್ಲಯ್ಯ.. ಅದೇನು ಕೇಡು ಕಾದಿದೆಯೋ ನಿನಗೆ… ಅಂತ ತಮಾಷೆ ಮಾಡಿದರು. ಗ್ರಹಣ ನಡೆದ ಕೆಲವೇ ದಿವಸದಲ್ಲಿ ನನ್ನ ಮದುವೆ ಆಯಿತು! ನನಗೆ ಆ ಗ್ರಹಣ ನೋಡುವ ಆಸೆಯಿತ್ತು ನೀನು ಕರಕೊಂಡು ಹೋಗಲಿಲ್ಲ ಎಂದು ಈಗಲೂ ನನ್ನಾಕೆ ನನ್ನ ಮೇಲೆ ಆಗಾಗ ಮುನಿಸು ತೋರುತ್ತಾಳೆ….!

(ಮಾಗೋಡು ಜಲಪಾತ)

೧೯೮೯ ರಲ್ಲಿ ಬೆಂಗಳೂರಿಗೆ ಪ್ಲಾನೆಟೋರಿಯಂ ಅಂದರೆ ತಾರಾಲಯ ಬಂತು. ಅಲ್ಲಿ ನಮ್ಮ ನಭೋ ಮಂಡಲದ ವಿಶೇಷಗಳ ಪರಿಚಯ ಆರಂಭ ಆಯಿತು. ಗ್ರಹಣ ದಿವಸಕ್ಕೆ ಎಷ್ಟೋ ಮೊದಲೇ ಅಲ್ಲಿ ಕನ್ನಡಕ ವಿತರಣೆ ಇರುತ್ತೆ. ಆಸಕ್ತರು ಮತ್ತು ಪುಟ್ಟ ಮಕ್ಕಳು ಗ್ರಹಣವನ್ನು ಸಂಪೂರ್ಣ ಸುರಕ್ಷಿತ ಪರಿಕರ ಮತ್ತು ಪರಿಸರದೊಂದಿಗೆ ನೋಡಿ ಅರ್ಥ ಮಾಡಿಕೊಳ್ಳುತ್ತಾರೆ. ಇದು ಸಹಜವಾಗಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು ಎಂದು ಆಶಿಸುವ ಎಲ್ಲರಿಗೂ ಸಂತೋಷ ಕೊಡುವ ಸಂಗತಿ. ಈಗ ಬೆಂಗಳೂರಿನಲ್ಲಿ ಗ್ರಹಣವಾದರೆ ಮನೆಯಲ್ಲಿ ಅವಿತುಕೊಳ್ಳುವವರು ಕಡಿಮೆ ಆಗಿದ್ದಾರೆ. ನಂತರ ಸುಮಾರು ಗ್ರಹಣ ನಡೆದಿದೆ. ಆಗೆಲ್ಲಾ ಮರದ ನೆರಳು, ಎಲೆಗಳ ಸಂದಿನಿಂದ ಬೀಳುವ ಬಿಸಿಲು ಕೋಲು.. ಇವುಗಳ ಚಿತ್ರ ತೆಗೆದು ಮಕ್ಕಳಿಗೆ ತೋರಿಸಿ ಗ್ರಹಣ ವಿವರಿಸಿದ್ದೇನೆ! ಈ ಅನುಭವಗಳಿಗೆ ಮತ್ತೊಂದು ಸೇರ್ಪಡೆ ಅಂದರೆ ಒಮ್ಮೆ ಗ್ರಹಣ ನಡೆಯಬೇಕಾದರೆ ಬಿಸಿಲಿಗೆ ಅಡ್ಡವಾಗಿ ಒಂದು ಜರಡಿ ಹಿಡಿದದ್ದು. ಜರಡಿ ಕಿಂಡಿಯಲ್ಲಿ ತೂರಿದ ಬಿಸಿಲ ಕಿರಣಗಳು ಪ್ರತಿ ಕಿಂಡಿಯಲ್ಲೂ ಸಹಸ್ರಾರು ಗ್ರಹಣದ ಪಡಿಯಚ್ಚು ರೂಪಿಸಿದ್ದವು. ಆ ಫೋಟೋ ಸುಮಾರು ವರ್ಷ ಕಾಪಾಡಿಕೊಂಡು ಬಂದಿದ್ದೆ. ಅದು ಹೇಗೋ ಕಣ್ಮರೆ ಆಯಿತು.

ಮಾಗೋಡು ಫಾಲ್ಸ್‌ಗೆ ಈಗೊಂದು ಎಂಟು ಹತ್ತು ವರ್ಷದ ಹಿಂದೆ ಹೋಗಿದ್ದೆ. ಈಗ ಅಲ್ಲೂ ಸಹ ಬದಲಾವಣೆ ಗಾಳಿ ಚೆನ್ನಾಗೇ ಬೀಸಿದೆ. ಕಟ್ಟಡಗಳು ಎದ್ದಿವೆ, ಫಾಲ್ಸ್ ನೋಡಲು ಬರುವ ಜನ ಹೆಚ್ಚಿದ್ದಾರೆ ಮತ್ತು ಪರಿಸರ ಸಹ ಮೊದಲಿನ ನೋಟ ಕಳೆದುಕೊಳ್ಳುತ್ತಿದೆ ಅನಿಸಿತು. ನಗರಿಗರ ತ್ಯಾಜ್ಯ ಅಲ್ಲೂ ಶೇಖರವಾಗುತ್ತಿದೆ ಮತ್ತು ಪರಿಸರದ ಬಗ್ಗೆ ಕಾಳಜಿಯಿಲ್ಲದ ಪ್ರವಾಸಿಗಳು ಅಲ್ಲಿನ ನೈಸರ್ಗಿಕ ಪ್ರಾಕೃತಿಕ ಸಂಪತ್ತನ್ನು ಹಾಳು ಮಾಡುತ್ತಿದ್ದಾರೆ.


ಈಗಲೂ ಗ್ರಹಣ ಅಂದ ಕೂಡಲೇ ಮಾಗೋಡು, ಅಲ್ಲಿಗೆ ಗೆಳೆಯರ ಸಂಗಡ ಹೋಗಿದ್ದು ಮತ್ತು ಅಂದಿನ ಗ್ರಹಣದ ನೆನಪು ಒದ್ದುಕೊಂಡು ಬರುತ್ತೆ. ಜತೆಯಲ್ಲಿದ್ದ ಗೆಳೆಯರು ಅವರ ಜತೆ ಟಿಬಿಯಲ್ಲಿ ಹುಲಿ ಸಿಂಹ ಕರಡಿ ಚಿರತೆ ಇವುಗಳ ಬರವನ್ನು ನಿರೀಕ್ಷಿಸುತ್ತಾ ಕಳೆದ ರಾತ್ರಿ ಕಣ್ಣ ಮುಂದೆ ಬರುತ್ತೆ! ಅವತ್ತು ದಾಮೋದರ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳು ಕಣ್ಣ ಮುಂದೆ ಓಡುತ್ತದೆ. ಅಂದಿನ ಗ್ರಹಣವನ್ನು ನನ್ನ ಜತೆ ಮಾಗೋಡಿನಲ್ಲಿ ನೋಡಿದ ಗೆಳೆಯರಲ್ಲಿ ಮೂರು ಜನ ದೇವರ ಪಾದವನ್ನು ಸೇರಿದ್ದಾರೆ, ಅವರು ತುಂಬಾ ಹತ್ತಿರದಿಂದ ಬರೀ ಕಣ್ಣಲ್ಲೇ ಗ್ರಹಣ ನೋಡಬಹುದು…!

ಇದು ಮಾಗೋಡು ಬಗ್ಗೆ ಈಗಿನ ವಿಕಿಪೀಡಿಯ ಮಾಹಿತಿ. ಆಗ ನೋ ವಿಕಿಪೀಡಿಯ…!