ಇವೆಲ್ಲವನ್ನು ಹಿಂದಿನ, ಎಂದಿನ ಕುತೂಹಲದಿಂದ ನೋಡುತ್ತಾ ನಿಲ್ಲುವ ನನ್ನನ್ನು ಅನುಮಾನದಿಂದ ನೋಡುವ ಜನರು ಜಾಸ್ತಿಯಾಗಿರುವುದು ಗಮನಕ್ಕೆ ಬರುತ್ತದೆ. ಯಾರು ನೀವು, ಇಲ್ಲಿ ಯಾಕೆ ನಿಂತು ನಮ್ಮನ್ನು ನೋಡುತ್ತಿದ್ದೀರಿ, ನಿಮ್ಮಷ್ಟಕ್ಕೆ ನೀವು ನಿಮ್ಮ ಕೆಲಸ ನೋಡಿಕೊಂಡು ಮುಂದೆ ಸಾಗಿ, ಎಂದು ಕೆಲವರು ಕೇಳುವಾಗ ಜನಜೀವನದ ಮನಸ್ಸುಗಳ ಬೇರುಗಳಿಗೆ ಅಂಟಿಕೊಂಡಿರುವ ಮಣ್ಣು ಸಡಿಲವಾಗಿರುವುದು ಕಾಣುತ್ತದೆ. ನಮ್ಮಷ್ಟಕ್ಕೆ ನಾವು, ನಿಮ್ಮಷ್ಟಕ್ಕೆ ನೀವು ಎನ್ನುವ ಮಾತನ್ನು ಕೇಳಿದಾಗ ಯಾಕೋ ಮುಂದುವರೆದ ಪಾಶ್ಚಾತ್ಯ ದೇಶ-ಸಮಾಜಗಳ ಬಂಡವಾಳಶಾಹಿ ಧೋರಣೆ ನೆನಪಾಗುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಖಂಡಾಂತರ ಪ್ರಯಾಣದ ಆಯಾಮದಲ್ಲಿದ್ದಾಗ ವಿಶಿಷ್ಟ ಭಾವನೆಗಳು ಉಂಟಾಗುತ್ತವೆ. ವಾರದ ಕೆಲವು ಭಾಗದಲ್ಲಿ ಬೆಂಗಳೂರಿನಲ್ಲಿದ್ದುಕೊಂಡು ಆಮೇಲೆ ಮುಕ್ಕಾಲು ದಿನ ಆಕಾಶದಲ್ಲಿ ತೇಲಾಡಿ, ಕೆಳಗಿಳಿದು ಬ್ರಿಸ್ಬೇನ್ ನಗರದ ಪಾದಸ್ಪರ್ಶ ಮಾಡುವಾಗ looking glass ನಲ್ಲಿ ಇಣುಕಿದ ಹಾಗೆ. ಆ ಕನ್ನಡಿಯಲ್ಲಿ ನಾನೇನು ನೋಡುತ್ತೀನಿ, ನನಗೇನು ಕಾಣಬೇಕು, ಏನು ಕಾಣುತ್ತದೆ, ನನ್ನನ್ನು ಪಕ್ಕಕ್ಕಿಟ್ಟು ಇನ್ನೇನೆಲ್ಲಾ ಕಂಡಿತು, ಅದು ಕಾಣಲು ಸಾಧ್ಯವಾಗುವುದು ಹೇಗೆ… ಏನೇನೋ ವಿಚಿತ್ರ ಪ್ರಶ್ನೆಗಳು.
ಕೊರೋನಾ-೧೯ ಕಾರಣದಿಂದ ಕೆಲ ವರ್ಷಗಳ ಕಾಲ ಬೆಂಗಳೂರಿಗೆ ಬರಲಾಗಲಿಲ್ಲವಾಗಿತ್ತು. ಈ ಬಾರಿ ಜೂನ್ ತಿಂಗಳಿನಲ್ಲಿ ಬಂದಾಗ ಹೆಜ್ಜೆಹೆಜ್ಜೆಗೂ ಬೆಂಗಳೂರಿನಲ್ಲಿ ಕಂಡಿದ್ದು ಇಲ್ಲಿ ಹೆಚ್ಚುಕಡಿಮೆ ಭಾರತದ ಎಲ್ಲಾ ದಿಕ್ಕುಗಳ ಊರುಗಳಿಂದ ಬಂದಿರುವ ಜನರ ಇರುವಿಕೆಯ ಬದುಕು. ಅದರಲ್ಲಿ ಏಕತೆಯಲ್ಲಿ ಅನೇಕತೆ; ಅನೇಕತೆಯ ಏಕತೆಯಲ್ಲಿ ಅದರ ಭಾಗಗಳ ಜನಜೀವನದ ಛಿದ್ರ ನೋಟಗಳು, ಚಿತ್ರಣಗಳು. ಛಿದ್ರಗಳನ್ನು ಹೀಗೆಯೇ ವಿಭಜಿಸಿಯೇ ಇಟ್ಟು ನೋಡುವ ಬಲವಂತದ ಪ್ರಯತ್ನಗಳು. ಅದರೊಂದಿಗೆ ನೇತು ಹಾಕಿಕೊಂಡಿರುವ ಹಳೆಯ ನಂಬಿಕೆಗಳು ಮತ್ತು ಧೋರಣೆಗಳು. ಅವುಗಳು ಈ ಕಾಲಕ್ಕೆ ಸಲ್ಲುವುದಿಲ್ಲ ಎಂದು ಮನಗಾಣುತ್ತಾ ಬದಲಾವಣೆಯನ್ನು ರೂಢಿಸಿಕೊಳ್ಳುತ್ತಾ ಮುನ್ನಡೆದಿರುವ ಮಂದಿ. ಇವೆಲ್ಲದರಲ್ಲಿ ಕೊರೋನಾ ಪ್ರಭಾವ ಎಷ್ಟಿದೆಯೆಂದು ಗೊತ್ತಾಗಲಿಲ್ಲ.
ಅವೆಲ್ಲದರ ಜೊತೆಜೊತೆಗೆ ಬೆಂಗಳೂರು ಗ್ಲೋಬಲ್ ಸಿಟಿಯಾಗಿದೆ. ಪಾದಗಳಿಗೆ Crocs ಅಥವಾ Sketchers ತೊಟ್ಟ ಯುವಕಯುವತಿಯರು, ಮೆಟ್ರೋ ರೈಲಿನಲ್ಲಿ ಕೂತೋ ನಿಂತೋ ಮಾಡುತ್ತಾ ಕೈಯಲ್ಲಿರುವ ಫೋನ್‌ನಲ್ಲಿ ತರತರದ ಸಿನೆಮಾ ಹಾಡುಗಳನ್ನು, ಧಾರಾವಾಹಿಗಳನ್ನು ವೀಕ್ಷಿಸುತ್ತಿರುವ ಜನರು, ಅಕಸ್ಮಾತ್ ಹೆಂಗಸರ ಮೈ ತಗುಲಿದರೆ ತಾವಾಗೇ ಎಚ್ಚರಿಕೆಯಿಂದ ಪಕ್ಕಕ್ಕೆ ಸರಿಯುವ ಕೆಲ ಗಂಡಸರು, ರಾಜಧಾನಿ ದೆಹಲಿಯಿಂದ ಬಂದಿರುವ ತನ್ನ ಮಹಿಳಾ ಸಹೋದ್ಯೋಗಿಗೆ ಬಲು ಉತ್ಸಾಹದಿಂದ ಬೆಂಗಳೂರಿನ ದೇಸಿ ರೆಸ್ಟೊರಾಂಟ್‌ಗಳನ್ನು ಪರಿಚಯಿಸುತ್ತಾ ತನ್ನ ಮಾತಿನಲ್ಲಿ ಸುಲಲಿತವಾಗಿ ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳನ್ನು ಬಳಸುವ ಪ್ರೊಫೆಷನಲ್… ಎನ್ ಆರ್ ಐ ಗಳ ಬಗ್ಗೆ ಹಿಂದಿದ್ದ ‘ಅಬ್ಬಾ, ಓಹೋ, ಆಹಾ’ ಗಳ ಅಚ್ಚರಿ, ಮೆರೆದಾಟ ಈಗ ಇಲ್ಲವಾಗಿದ್ದು, ಅವರೇನು ಮಹಾ, ಅವರಿಗಿಂತ ನಾವೇನೂ ಕಡಿಮೆಯಿಲ್ಲ ಎಂಬಂಥಾ ಆತ್ಮವಿಶ್ವಾಸ ಕಾಣುತ್ತಿದೆ. ಅದನ್ನು ನೋಡಿ ಖುಷಿ ಪಡುವ ಸರದಿ ಈಗ ಎನ್ ಆರ್ ಐ ಗಳದ್ದು.
ಗ್ಲೋಬಲ್ ಸಿಟಿಯಲ್ಲೂ ಲೋಕಲ್ ಜೀವನ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗುವುದು ಮನೆ ಮುಂದೆ ಬರುವ ಅಲಂಕೃತ ಗೋವು, ಹೈದರಾಬಾದಿನಿಂದ ಬಂದು ಬೆಂಗಳೂರಿನ ಬಡಾವಣೆಗಳ ಬೀದಿಗಳಲ್ಲಿ ತನ್ನ ಕತ್ತೆಯೊಂದಿಗೆ ನಡೆದಾಡುತ್ತಾ ಕತ್ತೆ ಹಾಲು ಮಾರುವವಳು, ಸೊಪ್ಪು, ಮೊಸರು, ಕಳ್ಳೆಪುರಿ ಮಾರುವ ಉದ್ಯೋಗದವರು, ಹಿಂದಿನಂತೆ ಇಂದೂ ಇರುವ ದಿನಸಿ ಪದಾರ್ಥಗಳ ಗಲ್ಲಿ, ಪೂಜಾ ಸಾಮಗ್ರಿಗಳ ಗಲ್ಲಿಗಳು.
ಇವೆಲ್ಲವನ್ನು ಹಿಂದಿನ, ಎಂದಿನ ಕುತೂಹಲದಿಂದ ನೋಡುತ್ತಾ ನಿಲ್ಲುವ ನನ್ನನ್ನು ಅನುಮಾನದಿಂದ ನೋಡುವ ಜನರು ಜಾಸ್ತಿಯಾಗಿರುವುದು ಗಮನಕ್ಕೆ ಬರುತ್ತದೆ. ಯಾರು ನೀವು, ಇಲ್ಲಿ ಯಾಕೆ ನಿಂತು ನಮ್ಮನ್ನು ನೋಡುತ್ತಿದ್ದೀರಿ, ನಿಮ್ಮಷ್ಟಕ್ಕೆ ನೀವು ನಿಮ್ಮ ಕೆಲಸ ನೋಡಿಕೊಂಡು ಮುಂದೆ ಸಾಗಿ, ಎಂದು ಕೆಲವರು ಕೇಳುವಾಗ ಜನಜೀವನದ ಮನಸ್ಸುಗಳ ಬೇರುಗಳಿಗೆ ಅಂಟಿಕೊಂಡಿರುವ ಮಣ್ಣು ಸಡಿಲವಾಗಿರುವುದು ಕಾಣುತ್ತದೆ. ನಮ್ಮಷ್ಟಕ್ಕೆ ನಾವು, ನಿಮ್ಮಷ್ಟಕ್ಕೆ ನೀವು ಎನ್ನುವ ಮಾತನ್ನು ಕೇಳಿದಾಗ ಯಾಕೋ ಮುಂದುವರೆದ ಪಾಶ್ಚಾತ್ಯ ದೇಶ-ಸಮಾಜಗಳ ಬಂಡವಾಳಶಾಹಿ ಧೋರಣೆ ನೆನಪಾಗುತ್ತದೆ. ಬೆಂಗಳೂರು ‘ಮುಂದುವರೆದಿರುವುದು’ ಅನುಭವಕ್ಕೆ ಬರುತ್ತದೆ.
ಮುಂದುವರೆದ ಬಂಡವಾಳಶಾಹಿ ಪಾಶ್ಚಾತ್ಯ ದೇಶ-ಸಮಾಜವಾದ ಆಸ್ಟ್ರೇಲಿಯಾಕ್ಕೆ ವಾಪಸ್ಸಾದಾಗ ಇದು NAIDOC ವಾರ. ವಿಮಾನದಲ್ಲಿಯೇ airlines ಸಿಬ್ಬಂದಿ NAIDOC ವಾರಕ್ಕೆ ಸ್ವಾಗತವೆಂದು ಕೋರುತ್ತಾ, ಕಷ್ಟಪಟ್ಟುಕೊಂಡು ಪ್ರಯತ್ನಿಸಿ ಸ್ಥಳೀಯ ಅಬೊರಿಜಿನಲ್ ಜನಪಂಗಡದ ಹೆಸರನ್ನು ಉಚ್ಚರಿಸಿ ಅವರ ಜನರಿಗೆ ಗೌರವವನ್ನು ಸಲ್ಲಿಸಿದಾಗ ಮನಸ್ಸು ಬೆಚ್ಚಗಾಯಿತು. ಬಂಡವಾಳಶಾಹಿ ವ್ಯವಸ್ಥೆಯನ್ನು ರೂಪಿಸಿದ ವಸಾಹತುಶಾಹಿಗಳು ಮತ್ತು ವಲಸಿಗರು ಎಷ್ಟರಮಟ್ಟಿಗೆ ಈ NAIDOC ವಾರದಂದು ಈ ದೇಶದ ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳ ಅಸ್ಮಿತೆ, ಹಕ್ಕು ಮತ್ತು ಸ್ವಯಂ-ನಿರ್ಣಯಗಳನ್ನು ಬೆಂಬಲಿಸುತ್ತಿದ್ದಾರೆ? ಎಷ್ಟರಮಟ್ಟಿಗೆ ಅವರ ಮತ್ತು ಇವರ ನಡುವೆ ಇರುವ ಅಸಮಾನತೆಗಳನ್ನು ಗುರುತಿಸುತ್ತಿದ್ದಾರೆ? ಜನಾಂಗೀಯ ವಿಭಜನೆಯ ಮೇಲೆ ಸ್ಥಾಪನೆಯಾಗಿ ನಿಂತಿರುವ ಸಮಾಜದಲ್ಲಿ ‘ಮುಂದುವರೆದ’ ನಡೆನುಡಿಗಳು ಹೇಗಿರಬೇಕು?
ಕೈಗಾರೀಕರಣದಿಂದ ಆರ್ಥಿಕ ರಂಗದಲ್ಲಿ ಪ್ರಗತಿ ಸಾಧಿಸಿದ ಪಾಶ್ಚಾತ್ಯ ದೇಶಗಳಲ್ಲಿ ಅದೇ ಕೈಗಾರೀಕರಣವು ಜನಜೀವನವನ್ನೂ ಬದಲಾಯಿಸಿತು. ಗಂಡಸು ಕಾರ್ಖಾನೆಯ ನೌಕರಿಗಿಳಿದಾಗ ಹೆಂಗಸು ಮನೆವಾರ್ತೆ ನಡೆಸುವಾಗ, ನಿತ್ಯಜೀವನದ ಅನುಕೂಲಕ್ಕೆಂದು ಸಾಧನಗಳು, ಸಲಕರಣೆಗಳು ಬಂದವು. ಆದರೆ ಅವೀಗ ಮನೆಮನೆಯ ಅವಿಭಾಜ್ಯ ಅಂಗಗಳಾಗಿವೆ. ಹಾಗೂ, ಅವುಗಳಿದ್ದರೆ ಅಥವಾ ಅವುಗಳಿಂದ ಅಂತಸ್ತು ಏರುವುದಿಲ್ಲ, ತಗ್ಗುವುದಿಲ್ಲ. ಇದರಿಂದಾಚೆಗೆ ಜನರು materialistic ಜೀವನಶೈಲಿಯಿಂದ ದೂರವಾಗಲು ಪ್ರಯತ್ನಿಸುತ್ತಿದ್ದಾರೆ. ಮಾನವ ಸಂಬಂಧಗಳನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ.
ಕಳೆದೆರಡು ದಶಕಗಳಲ್ಲಿ ವ್ಯಾಪಿಸಿ, ಈಗ ಆಳವಾಗಿರುವ ಜಾಗತೀಕರಣದ ಹರಿವು ಬೆಂಗಳೂರಿನಲ್ಲಿ ನಿಚ್ಚಳವಾಗಿ ಕಂಡಿತು. ಮೆಟ್ರೋ ರೈಲು ಸಂಚಾರವು ಎಷ್ಟು ಸುಗಮವಾಗಿದೆಯೋ, ಅದರಿಂದ ಜನರ ದೈನಂದಿನ ಪ್ರಯಾಣವು ಎಷ್ಟು ಸುಧಾರಿಸಿದೆಯೋ ಅಷ್ಟೇ ಸ್ಪಷ್ಟವಾಗಿ ನೆಲೆ ನಿಂತಿರುವುದು ಬಹುತ್ವಗಳನ್ನು ಆಧರಿಸಿದ ಪ್ರಯತ್ನಗಳು, ಪ್ರಯೋಗಗಳು. ನಗರದಲ್ಲಿನ ಸಾಮಾನ್ಯ ಥರ್ಟಿ ಬೈ ಫಾರ್ಟಿ ಮನೆ ಮೇಲೆ ಇರುವ ರೂಫ್ ಗಾರ್ಡನ್, ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿ ಆಹಾರ ಗಿಡಗಳನ್ನು, ಮರಗಳನ್ನು ಪೋಷಿಸುವ ಮನಸ್ಸುಗಳು. ಬ್ರಿಗೇಡ್ ರೋಡಿನಲ್ಲಿ ಇರುವ Crocs ಅಂಗಡಿಗಿಂತಲೂ ಎಲ್ಲರಿಗೂ ಎಟುಕುವ permaculture, worm farm, ಎಲ್ಲಾ ತರಹದ ಕೆಲಸಗಾರರು ಸಮಾನವಾಗಿ ಸಂಚರಿಸುವ ಮೆಟ್ರೋ ರೈಲು, ರಸ್ತೆಬದಿ ಕೈಗಾಡಿಯಲ್ಲಿ ಹಣ್ಣು ಮಾರುವ ಜನರು, mountain bike ಸರದಾರನ ಪಕ್ಕದಲ್ಲಿಯೇ ತಲೆಮೇಲೆ ಹಣ್ಣಿನ ಬುಟ್ಟಿ ಹೊತ್ತು ನಡೆಯುವ ಹೆಂಗಸು, ಹಮ್ಮು-ಬಿಮ್ಮು ಇಲ್ಲದ ರಂಗ ಶಾಲೆಗಳು, ಆರೋಗ್ಯಕ್ಕೆಂದು ಸೃಷ್ಟಿಯಾದ ನಡಿಗೆ ಗುಂಪುಗಳು … ಬದುಕಿಗಿರುವ ಕಳೆ ರವೆಯಷ್ಟೂ ಕುಂದಿಲ್ಲ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
ತುಂಬಾ ಚೆನ್ನಾಗಿ ವಿವರಿಸಿದ್ದೀಿ.
ನಿಮಗೆ ಧನ್ಯವಾದಗಳು,ಶುಭ.