ಇದೇ ಗುಣವಿಶೇಷಣಗಳೂ ಹಾಗೂ ಅವನ ಅಯಸ್ಕಾಂತದಂತಹ ನಗುವೆ ಸಿಂಧೂಳನ್ನು ಅವನಿಗೆ ಕಚ್ಚಿಕೊಳ್ಳುವಂತೆ ಮಾಡಿದ್ದು. ಮ್ಯಾಗ್ನೆಟ್ಟಿನ ಎರಡು ಧ್ರುವಗಳು ಪರಸ್ಪರ ಆಕರ್ಷಣೆ, ವಿಕರ್ಷಣೆಗೊಳ್ಳುವಂತೆ ಒಮ್ಮೆ ಅವನಿಂದ ವಿಮುಖಗೊಂಡರೆ ಮತ್ತೊಮ್ಮೆ ಅವನನ್ನರಸಿ ಸೆಳೆತ ತೀವ್ರವಾಗಿ ಬಳಿಗೋಡುತ್ತಿದ್ದಳು. ಅವನಿಗೂ ಸಿಂಧುವಿನ ಅಗತ್ಯವಿಲ್ಲವೇನಂತಿಲ್ಲ. ಭೌತಿಕ ಅಗತ್ಯಗಳ ಜೊತೆಗೆ ಮಾನಸಿಕವಾಗಿಯೂ ಸಾಥಿಯವಳು. ಅವರಿಬ್ಬರಿಗೂ ತಮ್ಮ ಬೌದ್ಧಿಕ ಮಟ್ಟಕ್ಕೆ ಸಾಟಿಯಾಗುವಂತಹ ಗೆಳೆಯರು ಇಂತಹ ಊರಿನಲ್ಲೆಲ್ಲಿ ಸಿಗಬೇಕು? ಜೀವನಾಸಕ್ತಿಗೆ ಪರಸ್ಪರ ಪೂರಕವಾಗಿದ್ದ ಸಂಗಾತಿಗಳವರು. ಸ್ವಭಾವ ಎಷ್ಟೇ ವೈರುಧ್ಯವಾಗಿದ್ದರೂ ಜೀವನಶೈಲಿಯ ಎಲ್ಲಾ ಮಗ್ಗಲುಗಳೂ ಆಸಕ್ತಿದಾಯಕವಾಗಿದ್ದುದು ವಿಶೇಷವಾಗಿತ್ತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಮತಾ ಅರಸೀಕೆರೆ ಬರೆದ ಕತೆ “ಸಂಧಾನ”

‘ನೀನು ಅವನೊಂದಿಗೆ ಅಷ್ಟು ಸಮಯಕೊಟ್ಟು ಮಾತನಾಡಿದ್ದು ನನಗಿಷ್ಟವಾಗಲಿಲ್ಲ’ ಚಂದನ್ ಹಣೆಯಲ್ಲಿ ನೆರಿಗೆ ಜೋಡಿಸಿಕೊಂಡು ಹೇಳುತ್ತಿದ್ದರೆ ಸಿಂಧೂ ಹುಬ್ಬು ಸಂಕುಚಿಸಿ ನಸುನಕ್ಕಳು. ‘ಇನ್ನೆಷ್ಟು ಸಮಯಕೊಡಬೇಕಿತ್ತು? ಜಾಸ್ತಿ ಟೈಮ್ ನನಗೂ ಇರಲಿಲ್ಲ. ಹಾಗಾಗಿ ಬೇಗನೇ ಫೋನಿಟ್ಟುಬಿಟ್ಟೆ.’ ಅವ ಆಕ್ಷೇಪಿಸಿದರೂ ತನ್ನನ್ನು ಕಿಚಾಯಿಸುತ್ತಿದ್ದಾಳೆಂದು ಚಂದನ್‌ನ ಮುಖ ದಪ್ಪಗಾಗುವ ವಿವಿಧ ಹಂತಗಳನ್ನು ಗಮನಿಸಿ ಸಿಂಧೂಗೆ ಮತ್ತಷ್ಟು ಹುರುಪೇರಿತು.

‘ಅವನೊಂದಿಗಿನ ಒಡನಾಟ ಜಾಸ್ತಿಯಾಗ್ತಿರೋ ಹಾಗೆ ಕಾಣಿಸ್ತಿದೆ’. ಆಪಾದನೆಗೆ ಒತ್ತುಕೊಟ್ಟು ಹೇಳಿದ. ‘ನಾನು ಮಾತನಾಡೋ, ಒಡನಾಡೋ ಎಲ್ಲರೊಂದಿಗೂ ಇದೇ ಆರೋಪ ನಿಂದು. ಏನನ್ನು ಸಾಬೀತು ಮಾಡಲು ಹವಣಿಸ್ತಿದೀಯಾ? ಬೇರೆ ಏನಾದರೂ ಇದ್ರೆ ಹೇಳು. ಇದು ಮಾಮೂಲು ವಿಚಾರ.ʼ ನಿಧನಿಧಾನವಾಗಿ ಸಿಂಧೂ ದನಿ ಗಟ್ಟಿಯಾಗತೊಡಗಿದ್ದು ಚಂದನ್‌ನನ್ನು ಅಸ್ಥಿರಗೊಳಿಸಿತು. ‘ಮುಚ್ಚು ಬಾಯಿ, ಜಾಸ್ತಿ ಮಾತೇ ಇಲ್ಲ. ಹೇಳಿದಷ್ಟು ಜಾರಿಯಾಗಬೇಕು. ನನ್ನೆದುರಿಗೆ ನೀನು ಯಾರ ಜೊತೆಯೂ ಮಾತಾಡಕೂಡದು. ಅಷ್ಟೆ.!’ ದನಿಯಲ್ಲಿ ಗಡುಸಿದ್ದರೂ ಆಳ ತೆಳುವಾಗಿತ್ತು.

‘ನೀನು ಜಾರಿ ಮಾಡಬೇಕೆಂದಿರುವ ಆದೇಶಗಳು ಸಾಕಷ್ಟಿವೆ. ಅವುಗಳನ್ನೆಲ್ಲಾ ಬರೆದಿಡಲೋ ಇಲ್ಲವೇ ಪಾಲಿಸಲೋ ನನ್ ಹತ್ರ ಸಮಯ ಇಲ್ಲ. ಹಾಂ! ನಿನ್ನ ಎಲ್ಲಾ ತಾಕೀತುಗಳನ್ನು ಸಮಾಧಾನವಾಗಿ ಪಾಲಿಸುವ ನಿನ್ನ ಮುಗ್ಧ ಪತ್ನಿಯನ್ನು ವರ್ಗವಾಗದೇ ಒದ್ದಾಡ್ತಿರೋ, ಅವರ ಕೆಲಸ ಬಿಡಿಸಿ ನಿನ್ನೊಂದಿಗೇ ಇಟ್ಕೊಂಡು ಒಂದೊಂದೇ ವಾಕ್ಯಗಳನ್ನ ಹೇಳಿ ಸಾವಧಾನವಾಗಿ ಬರೆಸು. ಪಾಲಿಸಲೇ ಬೇಕಂತಿದ್ರೆ ಅವರ ಮೇಲೆ ಪ್ರಯೋಗಿಸು. ಓಕೆ..? ಅದಾಗಲ್ಲ ನಿಂಗೆ.’

ಸಿಂಧು ತನ್ನ ಅಸ್ತಿತ್ವವನ್ನೇ ಅಲುಗಾಡಿಸುತ್ತಿದ್ದಾಳೆನ್ನಿಸಿತು ಚಂದನ್‌ಗೆ. ಇತ್ತೀಚೆಗೆ ಬಲಿಷ್ಠವಾಗಲು ಪ್ರಯತ್ನ ಪಡ್ತಿದ್ದಾಳೆ ಅವಳು. ತನ್ನ ಅಂಕೆ ಮೀರಿ ಹತೋಟಿಗೆ ಸಿಗದೆ ತನ್ನೆದುರಿಂದಲೇ ನಿಧಾನವಾಗಿ ಕೈ ತಪ್ಪುತ್ತಿದ್ದಾಳೆನಿಸಿ, ಅದವಳ ಶಕ್ತತೆಯ ಪ್ರತೀಕವೋ, ತನ್ನ ದೌರ್ಬಲ್ಯವೋ ತಿಳಿಯದಾಯಿತವನಿಗೆ. ಇಂಥಾ ಸಮಯದಲ್ಲೇ ಪುರುಷನ ಅಹಂ ಕೆರಳುತ್ತದೆ. ಪರಿಸ್ಥಿತಿಯನ್ನ ತನ್ನ ಕೈ ಹಿಡಿತದಿಂದ ತಪ್ಪಿಸಿಕೊಳ್ಳಲು ಬಿಟ್ಟರೆ ಹುಸಿ ಸ್ವಾಭಿಮಾನಕ್ಕೆ ಪೆಟ್ಟುಕೊಟ್ಟಂತೆ.

‘ಯಾರ್ಗೂ ಕೇರ್ ಮಾಡಿದವನಲ್ಲ ನಾನು. ಎಲ್ರ ಹತ್ರನೂ ಇದೇ ಪಾಲಿಸಿ ನಂದು. ಯಾರ್ಯಾರು ನನ್ನ ಸಂಪರ್ಕಕ್ಕೆ ಬರ್ತಾರೋ ಅವರಿಗೂ ಇದೇ ನಿಯಮ. ನಾನು ಹೇಳಿದ ಹಾಗೆ ಕೇಳಿಕೊಂಡು ಇರುವುದಾದರೆ ಇರು. ಇಲ್ಲಾಂದ್ರೆ ಕಟಾಯಿಸ್ತಿರು. ಅದೇ ನಿನ್ನ ದ್ರ್ಯಾಬೆ ಗಂಡನ್ನ ಸೇವೆ ಮಾಡ್ಕೊಂಡು ಕೂತಿರು.’ ತಾನಾಡಿದ ಮಾತಿನ ಮೇಲೆ ತನಗೇ ಅಧಿಕೃತತೆ ಇಲ್ಲ. ಅದೆಷ್ಟು ದುರ್ಬಲ ವಾಕ್ಯಗಳನ್ನ ಆಡಿದ್ದೇ ಆಡಿ ವ್ಯರ್ಥಗೊಳಿಸ್ತಿದ್ದೇನೆ ಅನಿಸಿಬಿಟ್ಟಿತು. ಆ ಕಸಿವಿಸಿ ಮುಖದ ಮೇಲೆ ಕಾಣದಂತೆ ಎಚ್ಚರವಹಿಸಲು ಪ್ರಯತ್ನಪಟ್ಟ.

ಅವನ ಈ ಎಲ್ಲಾ ಅವಸ್ಥೆ ಗಮನಿಸಿ ಸಿಂಧೂಗೆ ಅವನ ಮೇಲೆ ಕರುಣೆಯುಕ್ಕಿ ಮುಸಿಮುಸಿ ನಕ್ಕಳು. ಕೆಲವೊಮ್ಮೆ ಸಿಟ್ಟು, ಆಕ್ರೋಶದಿಂದ ಅವನ ಸಹವಾಸವೇ ಬೇಡ ಎಂಬ ನಿರ್ಧಾರ ತೆಗೆದುಕೊಳ್ಳೋದು ಸುಲಭ. ಆಚರಣೆ ಕಷ್ಟ ಎಂದು ಅವಳಿಗೂ ಅನ್ನಿಸಿದೆ. ಭೋರ್ಗರೆವ ಈ ವೈಪರೀತ್ಯಗಳನ್ನು ತಾಳುವುದು ಅವಳಿಗೂ ಅಸಹನೀಯವಾಗಿದೆ. ಕಡಿದುಕೊಳ್ಳುವ ಪ್ರಕ್ರಿಯೆ ಕ್ಷಣ ಮಾತ್ರದ್ದು. ಆದರೆ ಧಕ್ಕೆಯಾಗುವುದು ತನ್ನದೇ ಹೆಣ್ಣು ಅಸ್ಥಿರ ಭಾವನೆಗಳಿಗೆ. ಅವ ವ್ಯಕ್ತಿತ್ವದಲ್ಲಿ ಹುಸಿ ಪೊಳ್ಳುತನ ತೋರಿದರೂ ವ್ಯಕ್ತಿಗಳೊಂದಿಗೆ ಸಂಬಂಧಗಳನ್ನು ಶಾಶ್ವತವಾಗಿಸುವುದಿಲ್ಲ, ಬೇಕಾದರೆ ಸಂಬಂಧ ಕಡಿದುಕೊಂಡು ಕೈಬೀಸಿ ನಡೆದುಬಿಡಬಲ್ಲ ಗಟ್ಟಿಗನೇ ಸೈ. ಅದವನ ವೈಖರಿಯ ಮೇಲೆ ಯಾವ ಪ್ರಭಾವವನ್ನೂ ಬೀರುವುದಿಲ್ಲ.

ಎಷ್ಟೇ ಗಟ್ಟಿಯಾಗುತ್ತೇನೆಂದರೂ ತಾನೇ ಗೋಳಾಟದ ಪರಿಧಿಯೊಳಗೆ ಸಿಲುಕಿಕೊಳ್ಳಬೇಕು. ಅವ ಕೈಬಿಟ್ಟು ಹೋಗುತ್ತಾನೆ ಎಂದುಕೊಳ್ಳುವುದಕ್ಕಿಂತ ತನ್ನ ಅನುಪಸ್ಥಿತಿಯ ಪರಿಣಾಮ ಅವನ ಮೇಲಾಗುವುದಿಲ್ಲವೆಂಬ ಕಿಚ್ಚು ಅವಳಿಗೆ.

ಇಂತಹ ಅದೆಷ್ಟು ಪ್ರಸಂಗಗಳನ್ನು ದಾಟಿ ಕಲ್ಲು ಚಪ್ಪಡಿಯಂತಾಗಿದ್ದಾನೆ. ಅಗತ್ಯವಾದಾಗ ಮಾತ್ರ ‘ಬ್ಯಾಂಕಿನಿಂದ ಹಣ ಬಿಡಿಸಿಕೊಳ್ಳುವಂತೆ ಅವಶ್ಯಕತೆಗಳ ಪೂರೈಕೆಯನ್ನು ಸಲೀಸಾಗಿ ಗಿಟ್ಟಿಸಿಕೊಳ್ಳುತ್ತಾನೆ’. ತನ್ನೆದುರಿನ ಜೀವಗಳ ಅಳಲು ಅವನ ಎದೆ ತಾಕುವುದೇ ಅಪರೂಪ. ಪುರುಸೊತ್ತಿದ್ದಾಗ, ಮನಸ್ಸು ಅಣಿಯಾಗಿದ್ದಾಗ ಮಾತ್ರ ಕೇಳಿಸಿಕೊಂಡಂತೆ ನಟಿಸುತ್ತಾನೆ. ತನ್ನ ಮುಖ್ಯ ಕಸಿವಿಸಿಗಳಾವುವೂ ಅವನೆದುರಿಗೆ ಪ್ರಾಮುಖ್ಯತೆಯೇ ಪಡೆದಿಲ್ಲ.

ಅವನ ಕಾಲ ಬೆರಳಿಗೆ ಪೆಟ್ಟಾಗಿ ಉಗುರು ಮೇಲೆದ್ದು ಬಂದದ್ದನ್ನು ಜಗತ್ತಿನ ಮಹಾಪ್ರಳಯವೆಂಬಂತೆ ವರ್ಣಿಸುತ್ತಾನೆ. ಚಿಕ್ಕಪುಟ್ಟ ಸಮಸ್ಯೆಗಳನ್ನೆ ಅಗಾಧವೆಂಬಂತೆ ಬಿತ್ತರಿಸುತ್ತಾನೆ. ಅದೇ ಸಮಯದಲ್ಲಿ ವೈರುಧ್ಯವೆಂಬಂತೆ ಜೀವಕ್ಕೆರವಾದ ಘಾಸಿಗಳಿಗೆ ಅಷ್ಟೇ ಪ್ರಬುದ್ಧತೆಯಿಂದ ಪ್ರತಿಕ್ರಿಯಿಸುತ್ತಾನೆ. ದುರಂತಗಳು ಅವನನ್ನು ಅಲುಗಾಡಿಸಲಾರವೆಂಬಂತೆ ಅವಕ್ಕೆದುರಾಗಿ ದೃಢವಾಗಿ ನಿಂತುಬಿಡುತ್ತಾನೆ. ತಳಮಳ ಅಲೆಯಲೆಯಾಗಿ ಸೋಕುತ್ತಿದ್ದರೂ ಕಣ್ಣುಗಳು ದಿಕ್ಕೆಡಲಾರವು. ಆ ರೀತಿ ತರಬೇತಿ ಕೊಟ್ಟುಬಿಟ್ಟಿದ್ದಾನೆ. ಹಾಗೆಯೇ ಆಕಸ್ಮಿಕವೆಂಬಂತೆ ಅಪಾರ ಜೀವಪರತೆ ಅವನದಾಗಿಬಿಡುತ್ತೆ. ಅಸಹಾಯಕ ತಲ್ಲಣಗಳಿಗೆ ಅಷ್ಟೇ ಮರುಗುತ್ತಾನೆ. ಆಸರೆಗೆ ಧಾವಿಸುತ್ತಾನೆ. ಯಾವುದಕ್ಕೂ ಅಂಟಿಕೊಳ್ಳದವನವ.

ಇದೇ ಗುಣವಿಶೇಷಣಗಳೂ ಹಾಗೂ ಅವನ ಅಯಸ್ಕಾಂತದಂತಹ ನಗುವೆ ಸಿಂಧೂಳನ್ನು ಅವನಿಗೆ ಕಚ್ಚಿಕೊಳ್ಳುವಂತೆ ಮಾಡಿದ್ದು. ಮ್ಯಾಗ್ನೆಟ್ಟಿನ ಎರಡು ಧ್ರುವಗಳು ಪರಸ್ಪರ ಆಕರ್ಷಣೆ, ವಿಕರ್ಷಣೆಗೊಳ್ಳುವಂತೆ ಒಮ್ಮೆ ಅವನಿಂದ ವಿಮುಖಗೊಂಡರೆ ಮತ್ತೊಮ್ಮೆ ಅವನನ್ನರಸಿ ಸೆಳೆತ ತೀವ್ರವಾಗಿ ಬಳಿಗೋಡುತ್ತಿದ್ದಳು. ಅವನಿಗೂ ಸಿಂಧುವಿನ ಅಗತ್ಯವಿಲ್ಲವೇನಂತಿಲ್ಲ. ಭೌತಿಕ ಅಗತ್ಯಗಳ ಜೊತೆಗೆ ಮಾನಸಿಕವಾಗಿಯೂ ಸಾಥಿಯವಳು. ಅವರಿಬ್ಬರಿಗೂ ತಮ್ಮ ಬೌದ್ಧಿಕ ಮಟ್ಟಕ್ಕೆ ಸಾಟಿಯಾಗುವಂತಹ ಗೆಳೆಯರು ಇಂತಹ ಊರಿನಲ್ಲೆಲ್ಲಿ ಸಿಗಬೇಕು? ಸದಾ ಓದು ಬರಹ ಓಡಾಟವೆಂದರೆ ಮೂಗು ಮಟ್ಟದವರೆಗೆ ಪ್ರೀತಿಸುತ್ತಿದ್ದ, ಜೀವನಾಸಕ್ತಿಗೆ ಪರಸ್ಪರ ಪೂರಕವಾಗಿದ್ದ ಸಂಗಾತಿಗಳವರು. ಸ್ವಭಾವ ಎಷ್ಟೇ ವೈರುಧ್ಯವಾಗಿದ್ದರೂ ಜೀವನಶೈಲಿಯ ಎಲ್ಲಾ ಮಗ್ಗಲುಗಳೂ ಆಸಕ್ತಿದಾಯಕವಾಗಿದ್ದುದು ವಿಶೇಷವಾಗಿತ್ತು.

ಆಗಾಗ ಪರಸ್ಪರ ತೋಳತೆಕ್ಕೆಗೆ ಬಿದ್ದು, ಮಡಿಲು ಸೇರಿ ಮಿಂದರೇ ಇಬ್ಬರಿಗೂ ಜೀವಂತಿಕೆ. ತಮ್ಮ ವೈವಾಹಿಕ ಸಂಗಾತಿಗಳ ರಸಹೀನ ಜೀವನವಿಧಾನ, ಉದಾಸೀನತೆ, ಯಾಂತ್ರಿಕ ಒಡನಾಟ, ಆಸಕ್ತಿಹೀನ ಹವ್ಯಾಸಗಳ ಬಗ್ಗೆ ಗಂಟೆಗಟ್ಟಲೇ ಮಾತನಾಡುತ್ತಾ ಹೊಂದಾಣಿಕೆಯಾಗುತ್ತಿದ್ದವರು ಅವರು. ಸಾಂದರ್ಭಿಕವಾಗಿ ಪ್ರತಿಕ್ರಿಯಿಸುತ್ತಾ, ಪರಿಹಾರ ಒದಗಿಸಿಕೊಳ್ಳುತ್ತಾ ಪರಸ್ಪರ ಒಗಟಾಗಿಯೆ ಉಳಿದವರು. ಸಾಮಾಜಿಕ ಸ್ಪಂದನೆ, ಕಲೋಪಾಸನೆ ಕಟ್ಟಿಹಾಕುತ್ತಾ ಅವರನ್ನು ತನ್ನ ಬಲೆಯೊಳಗೆ ಅಡಗಿಸಿಕೊಂಡಿತ್ತು.

ಇಬ್ಬರ ನಡುವೆ ಆಗಾಗ್ಗೆ ವೈಷಮ್ಯಗಳೇಳುತ್ತಿದ್ದವು. ಒಬ್ಬರ ಮೇಲೊಬ್ಬರು ಹಕ್ಕು ಚಲಾಯಿಸುವ, ಮೇಲ್ಮೈ ಸಾಧಿಸುವ ಹುಕಿಗೆ ಒಡಕು ಮೂಡತೊಡಗಿದ್ದು ನಿಧಾನವಾಗಿ ಅರಿವಿಗೆ ಬರತೊಡಗಿತು. ಚಂದನನ ಗೆಳತಿಯರ ಪಟ್ಟಿ ವಿಸ್ತಾರವಾಗುತ್ತಿದ್ದುದು ಅವಳಿಗೆ ನುಂಗಲಾರದ ತುತ್ತು. ತಾನೂ ತನ್ನ ಗಂಡನನ್ನು ಏಮಾರಿಸುತ್ತಿದ್ದುದನ್ನು ಮರೆತು ಇಡೀ ದೇಹ ಬಳಸಿ ಮಾರಾಮಾರಿ ಜಗಳಕ್ಕೆ ನಿಂತುಬಿಡುತ್ತಿದ್ದಳು. ಬಗೆಹರಿಯದ ಕಲಹವಿದು, ಒಂದು ತಾರ್ಕಿಕ ಅಂತ್ಯ ಕಾಣಿಸಬೇಕೆಂದು ಯೋಚಿಸಿದಷ್ಟೂ ಯಾವ್ಯಾವುದೋ ಅನಿವಾರ್ಯತೆ ತೇಪೆ ಹಾಕುತ್ತಿತ್ತು. ರೋಸಿಹೋಗಿ ತಾನೂ ಜಾಲತಾಣದಲ್ಲಿ ಮುಳುಗಿ, ತನ್ನ ಗೆಳೆಯರ ಬಳಗ ವಿಸ್ತರಿಸುವ ಮೂಲಕ ಸೇರಿಗೆ ಸವ್ವಾಸೇರಾಗತೊಡಗಿದಳು.

ಕೆಲವೊಮ್ಮೆ ಸಿಟ್ಟು, ಆಕ್ರೋಶದಿಂದ ಅವನ ಸಹವಾಸವೇ ಬೇಡ ಎಂಬ ನಿರ್ಧಾರ ತೆಗೆದುಕೊಳ್ಳೋದು ಸುಲಭ. ಆಚರಣೆ ಕಷ್ಟ ಎಂದು ಅವಳಿಗೂ ಅನ್ನಿಸಿದೆ. ಭೋರ್ಗರೆವ ಈ ವೈಪರೀತ್ಯಗಳನ್ನು ತಾಳುವುದು ಅವಳಿಗೂ ಅಸಹನೀಯವಾಗಿದೆ. ಕಡಿದುಕೊಳ್ಳುವ ಪ್ರಕ್ರಿಯೆ ಕ್ಷಣ ಮಾತ್ರದ್ದು. ಆದರೆ ಧಕ್ಕೆಯಾಗುವುದು ತನ್ನದೇ ಹೆಣ್ಣು ಅಸ್ಥಿರ ಭಾವನೆಗಳಿಗೆ.

ಲ್ಯಾಪ್‌ಟಾಪ್‌ ತೆರೆದು ತಾನು ಪ್ರವಾಸ ಹೋದಾಗಿನ ಚಿತ್ರಗಳನ್ನು ತೋರಿಸತೊಡಗಿದ ಚಂದನ್. ಘಟ್ಟಗಳು, ಗುಡ್ಡಗಳು, ಹಕ್ಕಿಗಳು, ಪ್ರಕೃತಿಯ ಸೊಗಸಾದ ನೂರಾರು ಭಿನ್ನಕೋನದ ಸ್ಥಿರ ಚಿತ್ರಗಳು. ‘ಈ ಮೊದಲಾದರೆ ಈ ಪಟಗಳಲ್ಲಿ ನಾನೂ ಇರ‍್ತಿದ್ದೆ. ಈಗ್ಯಾಕೆ ನೀನು ನನ್ನ ಕರೆದೊಯ್ಯುತ್ತಿಲ್ಲ. ಯಾರ್ಯಾರನ್ನೋ ಜತೆ ಮಾಡಿಕೊಂಡು ಮಜಾ ಹೊಡಿತಿಯಾ! ನಾನು ಖುಷಿಯಾಗಿರೋದು ನಿಂಗೆ ಬೇಕಿಲ್ಲ ಅಷ್ಟೆ.’ ಸಿಂಧು ಕಿಚಾಯಿಸಿದಳು.

ಸಿಗರೇಟಿನ ಹೊಗೆಯನ್ನು ಹೊರಬಿಟ್ಟು ‘ಪ್ರವಾಸನಾ? ಅದೂ ನಿನ್ ಜೊತೆನಾ? ಸಾಧ್ಯವಿಲ್ಲ, ಇನ್ನುಮೇಲೆ. ಅಷ್ಟು ವರ್ಷಜೊತೆಯಾಗೇ ಸುತ್ತಿದೀವಿ, ಇನ್ನೂ ತೃಪ್ತಿಯಿಲ್ವಾ ನಿಂಗೆ. ಇತ್ತೀಚೆಗೆ ನೀನು ತುಂಬಾ ಇರಿಟೇಟ್ ಮಾಡ್ತೀಯ. ನೀನೂ ನಿನ್ನ ಬಳಗದ ಜೊತೆ ಎಲ್ಲೋ ಅಡ್ಡಾಡಿಬರಲು ಹೋಗಿದ್ಯಲ್ಲಾ? ನಾನೇನಾದ್ರೂ ಕೇಳಿದ್ನಾ ನಿನ್ನ!? ನನ್ ಮೇಲೆ ಅಧಿಕಾರ ಚಲಾಯಿಸ್ತಿದೀಯಲ್ಲ. ನಂಗೂ ನಿಂಗೂ ಹೊಂದಾಣಿಕೆನೇ ಬರ್ತಿಲ್ಲ. ನೀನು ನಿನ್ ಪಾಡಿಗಿರೋದು ಒಳ್ಳೆಯದು’ ಚೂಪು ಮೂತಿ ಮಾಡಿ ಅಣಕಿಸಿದ. ಮಾತು ಎಲ್ಲಿಂದಲೋ ಶುರುವಾಗಿ ಎಂದಿನಂತೆ ಮತ್ತೆಲ್ಲೋ ನಿಲ್ದಾಣ ಬದಲಾಯಿಸಿತು.

ಹೀಗೆಲ್ಲಾ ಅಂದಾಗ ಸಿಂಧುವಿನ ಕೋಪ ಜ್ವಲಿಸಿ ಸಿಡಿಲಾಗಿಬಿಡುತ್ತಾಳೆ. ‘ನನ್ ಪಾಡಿಗೆ ನಾನಿರೋದಾದ್ರೆ ಹೀಗೆ ಪದೇಪದೇ ನನ್ನ ಕರೆದು ಭೇಟಿಯಾಗೋದ್ಯಾಕೆ? ನಾನೂ ನಿನ್ನ ಬಹುಮುಖ್ಯ ಅಗತ್ಯ ಅನ್ನೋದು ನಿನ್ನ ಗಮನದಲ್ಲಿರಬೇಕಾಗಿತ್ತು. ಸ್ವಾರ್ಥಿ ನೀನು. ನಿನ್ನ ಅನಿವಾರ್ಯತೆಗಷ್ಟೆ ನನ್ನ ಬಳಸಿಕೊಳ್ತೀಯ. ಸರಿ ಬಿಡು ಅಷ್ಟೊಂದು ಹೀನಾಯವಾಗಿ ತಿರಸ್ಕರಿಸಿದ ಮೇಲೆ ನಾನ್ಯಾಕಿಲ್ಲಿರಲಿ. ನಾನೇ ನಿನ್ನ ಬಹಿಷ್ಕರಿಸಿ ಹೋಗ್ತಿದೀನಿ. ಇದೇ ಕಡೆಯ ಭೇಟಿ’.

ಅವಳ ಮಾತನ್ನುಅರ್ಧಕ್ಕೆ ತುಂಡರಿಸಿ ‘ನಿನ್ನ ಕೊನೆ ಇಚ್ಚೆ ಅದೇನಿದೆಯೋ ಹೇಳಿಬಿಡು’ಅಂದವನ ಮಾತಿಗೆ ಹೊರಗೆ ಬಿಸಿಲಿನ ತಾಪಮಾನ ಸರ‍್ರನೆ ಮೇಲೇರಿತು. ‘ನಿನ್ನ ಕೊಂದು ಹಾಕೋದು’ ಮೂತಿ ತಿರುವಿದಳು. ‘ನಿನ್ನ ಕಣ್ಣು, ಜಾಣತನದಿಂದಲೇ ಕೊಂದಿದ್ದೀಯಲ್ಲೇ, ಮತ್ತೇನು ಬೇಕು ನಿಂಗೆ’ ಕಣ್ಣು ಹೊಡೆದ ಚಂದನ್. ತಾಪಮಾನದ ಬೆಂಕಿಗೆ ಭರ‍್ರನೆ ಮಳೆಸುರಿದ ಹಾಗಾಯ್ತು. ‘ಇದಕ್ಕೇನೂ ಕಡಿಮೆಯಿಲ್ಲ. ಪರಮ ಸ್ವಾರ್ಥಿ ನೀನು’ ಕೂದಲು ಪಕ್ಕಕ್ಕೆ ಸರಿಸಿ ಸರ‍್ರನೆ ಹೊರಡಲನುವಾದಳು.

ಬಾಗಿಲ ಬಳಿಯೇ ಖುಷಿಖುಷಿಯಾಗಿ ಹಾಡ್ಹೇಳುತ್ತಾ ಎದುರಾದ ಕೆಲಸದಾಕೆ ಶಾಂತಮ್ಮ ಇದ್ದಕ್ಕಿದ್ದಂತೆ ಎರಡು ದಿನಗಳ ಬಳಿಕ ಪ್ರತ್ಯಕ್ಷಳಾಗಿದ್ದು ಸಿಂಧುವಿನ ಪ್ರಜ್ಞೆಯನ್ನು ಕೆರಳಿಸಿ ಅಲ್ಲೆ ನಿಲ್ಲಿಸಿತು. ‘ಏನಿದು ಇಷ್ಟೊಂದು ಆನಂದವಾಗಿದ್ದೀಯಲ್ಲ’ ಅಂದವಳು ಚಂದನ್‌ನ ಪ್ರತಿಕ್ರಿಯೆಗೆ ಕಾದಳು. ‘ಬೇರೆಯವ್ರು ಖುಷಿಯಾಗಿರೋದನ್ನು ನೀನು ಸಹಿಸೋಲ್ಲ ಕಣೆ’ ಅಂತೆಲ್ಲ ಆಗಾಗ್ಗೆ ತಿವಿಯುತ್ತಿದ್ದುದ್ದು ಅವಳ ಮಾತಿಗೆ ಕತ್ತರಿ ಹಾಕಿತ್ತು. ಬಾಗಿಲ ಬಳಿಯ ಕಾರ್ಪೆಟ್ಟನ್ನು ಒದರುತ್ತಾ, ಶಾಂತಮ್ಮ ‘ಸೀಕ್ರೇಟ್’ಅಂದದ್ದು ಕುತೂಹಲವನ್ನೇನೂ ಕೆರಳಿಸದಿದ್ದರೂ ಚಂದನ್‌ ಎರಡು ದಿನ ಅವಳ ಗೈರುಹಾಜರಿಗೆ ಕಾರಣ ಕೇಳಿದ. ಶಾಂತಮ್ಮಳೊಡನೆ ಸ್ವಲ್ಪ ಸಲುಗೆ ಅವನಿಗೆ. ಗಂಡ ಸತ್ತು ವಿಧವೆಯಾಗಿ, ಸಮಾಜ ಅವಳ ಒಂಟಿತನದ ಬದುಕಿಗೆ ಕೊಡುವ ಗೌರವದ ಅರಿವಾಗಿ ವಿಧುರನೊಬ್ಬನನ್ನು ಮರುಮದುವೆಯಾದವಳವಳು. ಯಾರ‍್ಯಾರೊಂದಿಗೋ ಅವಳ ಸಂಬಂಧಗಳನ್ನು ಜನ ಕಲ್ಪಿಸಿ ಆಡಿಕೊಳ್ಳುವಾಗ ರಾಜಾರೋಷವಾಗಿ ತನಗನ್ನಿಸಿದಂತೆ ಬದುಕುವ ಅವಳ ಬೋಲ್ಡ್ನೆಸ್‌ಗೆ ಮಾರುಹೋದವನವ.

(ಮಮತಾ ಅರಸೀಕೆರೆ)

‘ಅದೊಂದು ದೊಡ್ಡಕತೆ’ ಶಾಂತಮ್ಮಳ ಮಾತುಗಳಿನ್ನೂ ಮುಗಿದಿರಲಿಲ್ಲ. ‘ಅಷ್ಟೊಂದು ಖುಷಿಕೊಡುವ ಕತೆಯ?’ ಸಿಂಧು ಮಧ್ಯೆ ಬಾಯಿ ಹಾಕಿದಳು. ‘ನಿಂಗ್ಯಾಕೆ ಅದೆಲ್ಲ? ಇರು ಶಾಂತಮ್ಮ, ಅವಳು ಹೋದ್ ಮೇಲೆ ಕತೆ ಹೇಳೋವಂತೆ’ ಚಂದನ್ ಸಿಟಾರನೆ ಅಂದದ್ದು ಸಹಿಸಲಾಗಲಿಲ್ಲ ಅವಳಿಗೆ. ಕೋಪದಿಂದ ಕಾಲಪ್ಪಳಿಸಿ ವ್ಯಾನಿಟಿ ಬ್ಯಾಗ್ ಕೈಗೆತ್ತಿಕೊಂಡವಳೇ ದುಡುದುಡು ಹೊರಟವಳನ್ನು ಶಾಂತಮ್ಮಳ ಕೂಗು ನಿಲ್ಲಿಸಿತು. ‘ಹಂಗೆಲ್ಲ ಅವಳನ್ನ ಅನ್ನಬಾರದು ಕಣಪ್ಪ.’ ಅಂದವಳೇ ಸಿಂಧೂನ ಕಡೆತಿರುಗಿ‘ನಿನ್ ಹತ್ರ ಏನ್ ಮುಚ್ಚುಮರೆ ಸಿಂಧು. ಇವತ್ತು ನಾನೂ ನನ್ನೆಜಮಾನನೂ ಒಂದು ತೀರ್ಮಾನಕ್ಕೆ ಬಂದ್ವಿ. ನನ್ ವ್ಯವಹಾರಕ್ಕೆ ಆತ ಬರೋಂಗಿಲ್ಲ. ಅವನ ವ್ಯವಹಾರಕ್ಕೆ ನಾನೋಗಂಗಿಲ್ಲ. ವ್ಯಾವಾರ ಅಂದ್ರೆ ಗೊತ್ತಾತಲ್ಲ, ‘ತಿನ್ನೋದು, ಉಡೋದು, ಪ್ರೀತಿ, ವಿಶ್ವಾಸ, ವಾತ್ಸಲ್ಯ ಇವೆಲ್ಲಾ ಸಹಜವಾಗೇರ‍್ತವೆ. ಧಕ್ಕೆಯೇ ಇಲ್ಲ. ಆದ್ರೆ ತೀರಾ ನನ್ ವೈಯಕ್ತಿಕ ಪ್ರಶ್ನೆ ಮಾಡ್ಬಾರ್ದು, ಆಗಾಗ್ಗೆ ನನ್ ಫೋನ್‌ ಇಸ್ಕೊಂಡು ಪರೀಕ್ಷೆ ಮಾಡೋನು. ಹೇಳೊವಷ್ಟು ಹೇಳಿ ನೋಡಿದೆ. ಮಿತಿ ಮೀರಿ ನಾನೂ ಅವನನ್ನ ತಿರುಗಿ ಪ್ರಶ್ನಿಸೋಕೆ ಶುರು ಮಾಡಿದೆ. ಇಬ್ರೂ ಪರಸ್ಪರ ಕೆಸರೆರಚ್ಕೋತಿದ್ವಿ. ಇವತ್ತು ಅವನೇ ಘೋಷಿಸಿಬಿಟ್ಟ. ನಮ್ ನಮ್ ವ್ಯವಾರ ನಮ್ ನಮ್ಗೆ ಅಂತ. ನಾವಿಬ್ರು ಇನ್ಮೇಲೆ ಕೆದಕೋ ಹಂಗೇ ಇಲ್ಲ. ನಮ್ ಗೆಳೆಯರ ಬಳಗದ ಬಗ್ಗೆ ನಾವಾಗೇ ಪರಿಚಯಿಸದ ಹೊರತು ಮತ್ತೊಬ್ರು ಕೇಳಂಗಿಲ್ಲ ಅಂತ. ಅದೇನೂ ಸ್ವೇಚ್ಛಾಚಾರ ಅಲ್ಲ. ಆದ್ರೆ, ಇಷ್ಟಾದ್ರೂ ಸ್ವಾತಂತ್ರ್ಯಇಲ್ಲದಿದ್ರೆ ಹ್ಯಾಗೆ?’

ಸಿಂಧೂ ತನಗಿಲ್ಲದ ಧೈರ್ಯ ಈ ಅರೆಬರೆ ವಿದ್ಯಾವಂತಳಿಗೆ ಬಂದದ್ದು ಹೇಗೆ ಅಂತೆಲ್ಲಾ ಹುಬ್ಬೇರಿಸಿ ಕೇಳುತ್ತಿದ್ದವಳು, ‘ಅಷ್ಟು ಸುಲಭಕ್ಕೆಒಪ್ಪಿದ್ನಾ ಅಂದಳು’!

‘ಒಪ್ದೇ ಏನವ್ವಾ? ನಾವಿಬ್ರೂ ಹೊರಗೆ ದುಡಿಯೋರು. ನಮ್ದೂ ನೂರಾರು ಜಂಬಾರ ಇರುತ್ತೆ. ಎಲ್ಲಾನೂ ಒಪ್ಪಿಸಿಕೊಂಡು ಕೂರೋಕಾಗುತ್ತಾ? ಕಾಂಪಿಟೇಷನ್‌ ದುನಿಯಾ ಇದು, ದೌಡಾಯಿಸ್ತರ‍್ಬೇಕು. ಸ್ವಲ್ಪ ಯಾಮಾರಿದ್ವೋ ಹಿಂದುಳಿದುಬಿಡ್ತೀವಿ. ಸೈಲೆಂಟಾಗಿ ಸುಮ್ನಿರು ಅಂದೆ. ಹೇಳೋರೀತಿಲಿ ಹೇಳಿದ್ರೆ ಎಲ್ಲಾ ಕೇಳ್ತಾರೆ ಕಣವ್ವಾ?’ ಶಾಂತವ್ವನ ಮಾತಿನ ಗತ್ತಿಗೆ ಅವಳ ಗಂಡ ತೆಪ್ಪಗಾಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲವೆನಿಸಿತು.


‘ಒಬ್ರಿಗೊಬ್ರು ಕಷ್ಟ ಸುಖಕ್ಕೆ ಆಗ್ತೀವಿ. ಸದಾ ಜೊತೆಯಾಗಿದ್ರೆ ಸಲಿಗೆ ಹೆಚ್ಚು ನೋಡು, ಕೆದಕುತ್ತಾ ಆಳಕ್ಕೆ ಹೋದಾಗ ಜಗಳ ಹತ್ಕೋತಾವೆ. ಪೂರೈಸೋದೆಲ್ಲಾ ಪೂರೈಸಿಯಾದ ಮೇಲೆ ಮತ್ತೇನು ವರಾತ ತೆಗೆಯಂಗಿಲ್ಲ’. ಶಾಂತಮ್ಮ ಕೆಲಸ ಮುಂದುವರೆಸುತ್ತಾ ತನ್ನ ಪುಟ್ಟ ಪ್ರಪಂಚದ ಅನಾವರಣ ಮಾಡುತ್ತ ಮಾತಾಡುತ್ತಲೇ ಇದ್ದಳು.

ಇವರು ಒಬ್ಬರನ್ನೊಬ್ಬರು ಅರ್ಥಗರ್ಭಿತವಾಗಿ ನೋಡಿಕೊಳ್ಳತೊಡಗಿದರು.