ಚೇರಮನ್ನರು ಎದ್ದು ಹೋದ ಮೇಲೆ, ಎಲ್ಲರಿಗಿಂತ ವಯಸ್ಸಿನಲ್ಲಿಯೂ, ಹುದ್ದೆಯಲ್ಲಿಯೂ ಚಿಕ್ಕವನಾಗಿದ್ದ ಸಿಪಾಯಿ ನಾಗಯ್ಯನೇ ಮಾಸ್ತರುಗಳಿಗೆ ಸಮಾಧಾನ ಹೇಳಿದ – “ಸರಾ, ಅವಗ ಮಾಸ್ತರ ಆಗಬೇಕಂದ್ರ ಇನ್ನೂ ಐದಾರು ವರ್ಸ ಕಾಲೇಜು ಕಲತು ಪಾಸ ಮಾಡ್ಬಕು. ಇಲ್ಲ್ಯಾಂದರ ನೀವೆಲ್ಲಾ ಅವರಪ್ಪನ ಮುಸುಡಿ ನೋಡಿ ಪಾಸ ಮಾಡತಿದ್ರಿ, ಶಹರದೂರಾಗ ಯಾರು ಇವ್ನ ಪಾಸು ಮಾಡ್ಬಕು? ಇವನ ತೆಲಿ ನೋಡಿದರ ಮಾಸ್ತರ ಅಲ್ಲ, ಕಾರಕೂನ ಆಗಾಕು ಲಾಯಕ್ಕಿಲ್ಲ. ಇವಾ ಹೊಳ್ಳಿ ಬಂದು ಅವರವ್ವ ಆಳುಗಳಿಗೆ ಕಟ್ಟುವ ರೊಟ್ಟಿ ಎಣಿಸುವ ‘ರೊಟ್ಟಿ-ಕಾರಕೂನʼ ಆಗೂದ ಸೈ” ಎಂದ.
ಗುರುರಾಜ್‌ ಕೆ. ಕುಲಕರ್ಣಿ ಬರೆದ ಕತೆ “ರೊಟ್ಟಿ ಕಾರಕೂನ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಇರಿಯುವ ಮುಳ್ಳೇ, ಎಲ್ಲಿಯವರೆಗೆ ನಿನ್ನ ಆಟ…
“ರೊಟ್ಟಿ-ಕಾರಕೂನ ಚೇರಮನ್ನ ಆದರ ಅವನ ಜೊತಿ ಹ್ಯಾಂಗ ಏಗೋದು?” ಎಂದು ಕಲ್ಲೂರ ಮಾಸ್ತರರು ತೆಲಿಕೆಡಿಸಿಕೊಂಡಿದ್ದರು.

ಮಾಸ್ತರರು ಕೆಲಸ ಮಾಡತಾ ಇದ್ದದ್ದು ಸರಕಾರಿ ಅನುದಾನಿತ ಖಾಸಗಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ. ಅವರ ಪಗಾರ, ಮತ್ತೊಂದು ಮುಗದೊಂದು ಸರಕಾರದಿಂದ ಬರುತ್ತಿದ್ದರೂ, ಸಾಲಿ ನಡೆಸುವ ಸಂಸ್ಥಾದ ಚೇರಮನ್ನರ ಜೊತಿ ಹೊಂದಿಕೊಂಡು ಹೋಗಬೇಕಾಗುತ್ತಿತ್ತು. ಸಾಲಿವ ನೂರಾ ಎಂಟು ತಾರಾ-ತಿಗಡಿ, ಬಾರಾ-ಭಾನಗಡಿಗಳು ಇರತಾವು, ಇನ್ನು ಚೇರಮನ್ನನ ಜೋಡಿ ದುಸುಮುಸಿ ಮಾಡಿಕೊಂಡರ ಮಾಸ್ತರರಿಗೆ ಸಾಲಿ ನಡೆಸೋದು ತ್ರಾಸು… ಮ್ಯಾಲೆ ಮಾಸ್ತರರು ಪರ ಊರಿನಿಂದ ಎತ್ತಿಬಂದವರು.. ಹಿಂಗಾಗಿ ‘ನೀವ ಇಂದ್ರ.. ನೀವ ಚಂದ್ರʼ ಎಂದು ಅವರು ಕರ‍್ಯವಾಸಿ ಕತ್ತಿ ಕಾಲು ಹಿಡಿದು ಕೆಲಸ ಸಾಗಿಸತಾ ಇದ್ರು.

ಸಂಸ್ಥಾ ಅಂದರ ಅದೊಂದು ರೀತಿ ಪಾಳೆಗಾರ ಸಂಸ್ಥಾನ ಇದ್ದಂಗ ಇತ್ತು. ಸಂಸ್ಥಾ ಸ್ಥಾಪಿಸಿ ಅದರಿಂದ ಸಾಲಿ ಚಾಲು ಮಾಡಿದವರು ಸಂಗನಗೌಡರು. ಅವರ ನಂತರ ವಂಶಪಾರಂರ‍್ಯವಾಗಿ ಅವರ ಮಗ ಮಲ್ಲನಗೌಡರು ಸಂಸ್ಥಾದ ಚೇರಮನ್ನರಾಗಿದ್ದರು. ಗೌಡರ ಮನಿಯೊಳಗ ಗಂಡುಮಗು ಹುಟ್ಟಿತು ಅಂದರ ತೊಟ್ಟಲ ಹಾಕುವಾಗ ಕೂಸಿನ ಕಿವ್ಯಾಗ ‘ಮುಂದಿನ ಚೇರಮನ್ನʼ ಅಂತನ ಕೂಗತಿದ್ದರು ಅನಿಸುತ್ತ. ಹಿಂಗಾಗಿ ಸಂಸ್ಥಾ ಅನ್ನೋದು ಗೌಡರ ಆನುವಂಶಿಕ ಆಸ್ತಿ ಆಗಿತ್ತು. ಸಂಸ್ಥಾದ ಆಡಳಿತ ಮಂಡಲಿಯೊಳಗ ಇನ್ನೂ ನಾಕಾರು ಜನ ಇದ್ದರೂ ಅವರೆಲ್ಲ ಗೌಡರ ವಂದಿಮಾಗಧರೇ ಆಗಿರತಿದ್ದರು. ಇನ್ನು ಸಾಲಿಯೊಳಗೆ ಕೆಲಸಾ ಮಾಡುತ್ತಿದ್ದ ಜವಾನ-ಚಪರಾಸಿಗಳಿಗಂತೂ ಗೌಡರ ಮನೆಯ ಜೀತನೂ ಮಾಡಬೇಕಾಗತಿತ್ತು. ಮಾಸ್ತರ ಜನರು ಕೂಡ ಗೌಡರ ಮನ್ಯಾಗ ಲಗ್ನ-ಮುಹರ‍್ತ ಆದರ ಮುಂದ ನಿಂತು ಕರ‍್ಯ ನಡೆಸಿ ಕೊಡಬೇಕಾಗುತ್ತಿತ್ತು.

ಇದೆಲ್ಲ ಕಲ್ಲೂರ ಮಾಸ್ತರರಿಗೆ ಗೊತ್ತಿದ್ದದ್ದೇ. ಆದರೂ ರೊಟ್ಟಿ-ಕಾರಕೂನ, ರ‍್ಥಾತ್ ಚೇರಮನ್‌ ಮಲ್ಲನಗೌಡರ ಮಗ ಚೆನ್ನಬಸವಗೌಡ – ರ‍್ಫ್‌ ಚೆನ್ನ ಮುಂದಿನ ಚೇರಮನ್‌ ಆಗತಾನ ಅಂದರ ಮಾಸ್ತರರಿಗೆ ಯಾಕೆ ತೆಲಿ ಕೆಡಬೇಕು? ಅದೂ ಅಲ್ಲದ ಚೆನ್ನನೂ ಅದೇ ಸಾಲಿಯ ಹಳೆಯ ವಿದ್ಯರ‍್ಥಿ, ಮಾಸ್ತರರ ಕೈಯಾಗ ಕಲತವನು.. ಅಂದರೂ ಮಾಸ್ತರರಿಗೆ ಯಾಕ ಚಿಂತಿ?

ಯಾಕಂದರ ಚೆನ್ನಬಸವ ಮಾಡಿದ ಹಲವಾರು ಲೀಲೆ(!)ಗಳ ಸಹಿತ ಪರ‍್ತಿ ‘ಚೆನ್ನಬಸವ ಪುರಾಣʼ ಮಾಸ್ತರರಿಗೆ ಗೊತ್ತಿತ್ತು, ಏನೋ ಆರ‍್ಶದ ಬೆನ್ನು ಹತ್ತಿ ಮಾಸ್ತರಿಕೆಗೆ ಬಂದಿದ್ದ ಅವರು ಈ ಅಡ್ನಾಡಿ ಚೆನ್ನನ ಜೋಡಿ ಏಗಬೇಕಲ್ಲ ಎಂದು ತೆಲಿಬಿಸಿ ಮಾಡಿಕೊಂಡಿದ್ದು ಸಕಾರಣವಾಗಿಯೇ ಇತ್ತು.

“ಸರ, ಚೆನ್ನ ಶೆಗಣಿ ಹಿಡಕೊಂಡು ಹುಲ್ಲಿಕೇರಿ ಸರ್‌ರಿಗೆ ಬೆನ್ನು ಹತ್ಯಾನರಿ” ಎಂದು ಹುಡುಗರು ಹೇಳಿದ್ದಕ್ಕೆ ಕಲ್ಲೂರ ಮಾಸ್ತರರು ಸಾಲಿಯ ಕಟ್ಟೆಯ ತುದಿಗೆ ಬಂದು ನಿಂತು ನೋಡಿದರೆ, ದೂರದಲ್ಲಿ ವಿಜ್ಞಾನ ಶಿಕ್ಷಕರಾದ ಹುಲ್ಲಿಕೇರಿ ಮಾಸ್ತರರು, ಅವರ ಹಿಂದೆ ಒಬ್ಬ ಎಂಟು ಹತ್ತು ರ‍್ಷದ ಹುಡುಗ, ಅವನ ಹಿಂದೆ ದೊಡ್ಡವರು-ಸಣ್ಣವರು ಸೇರಿ ಒಂದು ಗುಂಪಿನಲ್ಲಿ ಬರುತ್ತಿರುವುದು ಕಾಣಿಸಿತು. ಹೊಸದಾಗಿ ಬಂದಿದ್ದ ಕಲ್ಲೂರ ಮಾಸ್ತರರಿಗೆ ಊರು ಇನ್ನೂ ಹೊಸತು. ಈ ಚೆನ್ನ ಯಾರು, ಅವನ್ಯಾಕ ಹುಲ್ಲಿಕೇರಿ ಮಾಸ್ತರರಿಗೆ ಬೆನ್ನು ಬಿದ್ದಿದ್ದಾನೆ ಎಂದು ವಿಸ್ಮಯಿಸಿದರು. ಅಷ್ಟರಲ್ಲಿ ಸಾಲಿಯ ಜವಾನ ನಾಗಯ್ಯ ಬಂದು ಚೆನ್ನ ಚೇರಮನ್‌ ಮಲ್ಲನಗೌಡರ ಒಬ್ಬನೇ ಮಗನೆಂದೂ, ಅಸಾಮಾನ್ಯ ಉಡಾಳನೆಂದೂ, ಯಾರೂ ಅವನ ಉಸಾಬರಿಗೆ ಹೋಗುವುದಿಲ್ಲವೆಂದೂ, ಅದರಿಂದಾಗಿ ಅವನ ಪುಂಡತನಕ್ಕೆ ಮಿತಿಯೇ ಇಲ್ಲವಾಗಿದೆ ಎಂದೂ ಚೆನ್ನನ ಪಾತ್ರ ಪರಿಚಯ ಮಾಡಿಸಿದ.

ಕಲ್ಲೂರ ಮಾಸ್ತರರಿಗೆ ‘ಶೆಗಣಿ ಹಿಡಕೊಂಡು ಬೆನ್ನು ಹತ್ತಿದ್ದು ಯಾಕೆʼ ಎಂದು ಸಂರ‍್ಭಸಹಿತ ಸ್ಪಷ್ಟೀಕರಣ ಇನ್ನೂ ಸಿಕ್ಕಿರಲಿಲ್ಲ. ಹುಲ್ಲಿಕೇರಿ ಗುರುಗಳು-ಚೆನ್ನ-ಮತ್ತು ಬ್ಯಾರೇ-ಏನೂ-ಹ್ವಾರೆ-ಇಲ್ಲದ ಅಗಾಧ ಕುತೂಹಲದ ಪ್ರೇಕ್ಷಕರ‍್ಗ ಕಲ್ಲೂರ ಮಾಸ್ತರರು ನಿಂತಿದ್ದ ಸಾಲಿ ಕಟ್ಟೆಯ ಹತ್ತಿರ ಬಂದು ತಲುಪಿದರು. ಹುಲ್ಲಿಕೇರಿ ಮಾಸ್ತರರು ಚೆನ್ನನ ಕಡೆಗೆ ತಿರುಗಿ “ಇನ್ನ ನಮ್ಮ ಸಾಲಿ ಬಂತು, ಇಕಾ ಕೈಮುಗಿತೇನಿ, ನನ್ನ ಬಿಟ್ಟು ನಿನ್ನ ಸಾಲಿಗೆ ಹೊಂಟೋಗು. ಇಲ್ಲಾ ಶಗಣಿ ಒಗುದು ಬಿಡು. ಈಗಾಗಲೇ ಅರ್ಧ ಊರಿನ್ಯಾಗ ಶೆಗಣಿ ಹಿಡಕೊಂಡು ಬೆನ್ನು ಹತ್ತಿ ನನ್ನ ಮರ‍್ಯಾದಿ ಕಳದಿ. ಒಂದ ಸಲ ಶಗಣಿ ಒಗದರ ಮನಿಗಿ ಹೋಗಿ ತೊಳಕೊಂಡು ಬರತೇನಿ” ಎಂದು ಚೆನ್ನನಿಗೆ ಕೈಮುಗಿದರು. ಚೆನ್ನನಿಂದ ಏನೂ ಪ್ರತಿಕ್ರಿಯೆ ಬರಲಿಲ್ಲ.. ನೆಟ್ಟ ಕಣ್ಣುಗಳಿಂದ ಮಾಸ್ತರರನ್ನೇ ದುರುಗುಟ್ಟುತ್ತಾ ನಿಂತೇ ಇದ್ದ.. ಕೈಯಾಗಿನ ಶೆಗಣಿನೂ ಬಿಡಲಿಲ್ಲ, ಹೊರಳಿಹೋಗುವ ಮಾತೂ ಇಲ್ಲ..

ಕಲ್ಲೂರ ಮಾಸ್ತರರು ಏನಾಯಿತು ಎಂದು ಕೇಳಿದ್ದಕ್ಕೆ ಹುಲ್ಲಿಕೇರಿ ಮಾಸ್ತರರು ಸಾಲಿಗೆ ಬರುವ ದಾರಿಯಲ್ಲಿ ಹ್ಯಾಗೆ ವಿಧಿ ತಮಗೆ ಗಂಟು ಬಿತ್ತು ಎಂದು ಹೇಳಿದರು. ಅವರ ಜೊತೆಗೆ ಬಂದಿದ್ದ ಬ್ಯಾರೆ-ಹ್ವಾರೆ-ಇಲ್ಲದ ಗಣದವರೂ ಅಲ್ಲಲ್ಲಿ ಬಿಟ್ಟ-ಸ್ಥಳ ತುಂಬಿ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದರು. ಅದರಂತೆ ತಿಳಿದುಬಂದದ್ದೇನೆಂದರೆ – ಮುಂಜಾನೆ ಕನ್ನಡಸಾಲಿಗೆ ಹೋಗುವಾಗ ಚೆನ್ನನಿಗೂ, ಅವನದೇ ಸಾಲಿಯ ಇನ್ನೊಬ್ಬ ಹುಡುಗನಿಗೂ ಜಗಳವಾಗಿದೆ. ಇಬ್ಬರೂ ದಾರಿಯಲ್ಲಿ ತೆಕ್ಕಿ-ಮುಕ್ಕಿ ಬಿದ್ದುದನ್ನು ನೋಡಿದ ಕಿರಾಣಿ ಅಂಗಡಿ ಆಳು ಶರಣಪ್ಪ ಇಬ್ಬರನ್ನು ಬಿಡಿಸಿ, ಬೈದು ಸಾಲಿಗೆ ಹೋಗುವಂತೆ ಬುದ್ಧಿಹೇಳಿದ್ದಾನೆ.

ಇನ್ನೊಂದು ಹುಡುಗ ಸುಮ್ಮನೆ ಸಾಲಿಗೆ ಹೋತಾದರೂ ಚೆನ್ನ ಮಾತ್ರ ಅಲ್ಲಿಯೇ ಬಿದ್ದಿದ್ದ ಶಗಣಿಯನ್ನು ಎತ್ತಿಕೊಂಡು ಶರಣಪ್ಪನಿಗೆ ಒಗೆಯುವಂತೆ ಗುರಿ ಹಿಡಿದು ನಿಂತುಕೊಂಡಿದ್ದಾನೆ. ಶರಣಪ್ಪ ಇನ್ನೇನು ಶಗಣಿ ಬಿದ್ದೇ ಬಿಟ್ಟಿತು ಎಂದು ಕಣ್ಮುಚ್ಚಿಕೊಂಡು ಎರಡು ಕ್ಷಣ ಕಾದರೂ ಏನು ಆಗಿಲ್ಲ.. ಕಣ್ತೆರೆದು ನೋಡಿದರೆ ದುರುದುರು ನೋಡುತ್ತ ಕೈಯಲ್ಲಿ ಶೆಗಣಿಯ ಗ್ರೇನೇಡು ಹಿಡಿದು ಚೆನ್ನ ನಿಂತೇ ಇದ್ದಾನೆ. ಸುಧಾರಿಸಿಕೊಂಡು ಶರಣಪ್ಪ “ಕೈಗೆ ನೀರು ಹಾಕ್ತೀನಿ, ಶೆಗಣಿ ತೊಳ್ಕೊಂಡು ಸಾಲಿಗೆ ಹೋಗು” ಎಂದು ಹೇಳಿದ್ದಾನೆ. ಚೆನ್ನ ಅದು ಯಾವುದು ತನ್ನ ಕಿವಿಗೆ ಬಿದ್ದೇ ಇಲ್ಲ ಎನ್ನುವಂತೆ ತನ್ನ ದೃಷ್ಟಿ ಪ್ರಹಾರವನ್ನು ಮುಂದುವರಿಸಿದ್ದಾನೆ. ಶರಣಪ್ಪ ಇದೇನು ಹಣೆಬರಹ ಎಂದು ತಲೆ ಚಚ್ಚಿಕೊಳ್ಳುತ್ತಿರುವಾಗ, ಅಂಗಡಿ ಮಾಲಕ ಪ್ರಭಯ್ಯ ಅದೇನು ಅಂತ ಕುತೂಹಲದಿಂದ ಅಂಗಡಿಯ ಕಟ್ಟೆಯ ತುದಿಗೆ ಬಂದು, ಈ ಘಟನೆಯನ್ನು ನೋಡಿ, “ಯಾಕೋ ತಮ್ಮ, ಯಾಕ ಮಂಗ್ಯಾನಾಟ ನಡಿಸಿ? ಸುಮಾಕ ಸಾಲಿಗೆ ಹೋಗು. ನಿಮ್ಮ ಅಪ್ಪಾರಿಗೆ ಹೇಳಿ ಕಳುಹಿಸಲಿ?” ಎಂದು ಜಬರಿಸಿದ್ದಾನೆ. ಆಗ ಚೆನ್ನ, ಶರಣಪ್ಪನನ್ನು ಬಿಟ್ಟು ಪ್ರಭಯ್ಯನ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಿ ಶೆಗಣಿ ಗುರಿ ಹಿಡಿದು ನಿಂತಿದ್ದಾನೆ. ಆಗ ಶಾಲೆಗೆ ಬರುತ್ತಿದ್ದ ಹುಲ್ಲಿಕೇರಿ ಮಾಸ್ತರರು ರಂಗಪ್ರವೇಶ ಮಾಡಿದ್ದಾರೆ. ಎಲ್ಲ ಮಾಸ್ತರರಿಗೆ ಇರುವಂತೆ ಹುಲ್ಲಿಕೇರಿ ಮಾಸ್ತರರಿಗೂ ‘ಜಗವೇ ಒಂದು ಕ್ಲಾಸ್ರೂಂ, ತಾವೇ ಜಗತ್-ಗುರುಗಳು’ ಎಂಬ ಭ್ರಮೆ ಇದೆ. ಅವರು ಹಿಂದೆ-ಮುಂದೆ ವಿಚಾರ ಮಾಡದೆ, ಚೆನ್ನನಿಗೆ “ಸುಮ್ಮಾಕ ಸಾಲಿಗೆ ಹೋಗಾಕ ಬರೋದಿಲ್ಲ?” ಎಂದು ದಬಾಯಿಸಿದ್ದಾರೆ. ಅಲ್ಲಿಗೆ ಶನಿ ಪ್ರಭಯ್ಯನ ಹೆಗಲು ಬಿಟ್ಟು ಮಾಸ್ತರರ ಹೆಗಲೇರಿದೆ. ಪ್ರಭಯ್ಯನನ್ನು ಬಿಟ್ಟ ಚೆನ್ನ, ಮಾಸ್ತರರನ್ನು ದುರುಗುಟ್ಟುತ್ತಾ ಶೆಗಣಿ ಗುರಿ ಹಿಡಿದಿದ್ದಾನೆ. ಮಾಸ್ತರರು ಚೆನ್ನನ ದೃಷ್ಟಿ ಪ್ರಹಾರಕ್ಕೆ ದರಕಾರ ಮಾಡದೆ ಹೊರಟಿದ್ದಾರೆ. ಚೆನ್ನ ತನ್ನ ಶಗಣಾಯುಧವನ್ನು ಹಿಡಿದು ಹಿಂಬಾಲಿಸಿದ್ದಾನೆ. ನಾಕು ಹೆಜ್ಜೆ ನಡೆದ ಮಾಸ್ತರರು ಇದೆಲ್ಲಿಯ ಶನಿ ಗಂಟು ಬಿತ್ತೆಂದು ತಿರುಗಿ ನಿಂತು ಬೈಯ್ದಿದ್ದಾರೆ. ಮತ್ತೆ ನಾಕು ಹೆಜ್ಜೆ ನಡೆದು ತಿರುಗಿದರೆ ಬಿಟ್ಟೆನೆಂದರೂ ಬಿಡದಿ ಶನಿ ಎಂಬಂತೆ ಚೆನ್ನ ಹಿಂದೆಯೇ ಬರುತ್ತಿದ್ದಾನೆ. ಕೊನೆಗೆ ಅವನಿಗೆ ಬಿಟ್ಟುಬಿಡಲು ಕೈಮುಗಿದು ಕೇಳಿಕೊಂಡಿದ್ದಾರೆ. ಯಾವುದಕ್ಕೂ ಜಗ್ಗದ ಚೆನ್ನ ಅವರ ಬೆಂಬತ್ತಿದ್ದಾನೆ. ಇವರ ಸವಾರಿ ಹಿಂದೆ ಮಂಗ್ಯಾನಾಟ ನೋಡಲು ಎಂದು ಜನ ಕೂಡಿಕೊಂಡಿದ್ದಾರೆ. ಆದರೆ ಇದು ಅಂಟುಜಾಡ್ಯದ ಕೇಸು, ತಾವೇನೋ ಹೇಳಲು ಹೋದರೆ ಮಾಸ್ತರರನ್ನು ಬಿಟ್ಟು, ಚೆನ್ನ ತಮಗೆ ಬೆನ್ನು ಹತ್ತುತ್ತಾನೆ ಎಂದು ಅರ್ಥವಾಗಿ ಮಾಸ್ತರರನ್ನು ಪಾರು ಮಾಡಿ ಹರಕೆಯ ಕುರಿಯಾಗಲು ಯಾರೂ ಬಂದಿಲ್ಲ.

ಕಲ್ಲೂರ ಮಾಸ್ತರರ ಬುದ್ಧಿಗೆ ನಡೆದದ್ದೆಲ್ಲ ಅರ್ಥವಾಯಿತು. ಅವರು ಶಗಣಿ ಆಯುಧಕ್ಕೆ, ಮನಸ್ಸಿನಲ್ಲಿಯೇ ಪ್ರತಿತಂತ್ರ ತಯಾರು ಮಾಡಿದರು. ನಾಗಯ್ಯನನ್ನು ಹತ್ತಿರ ಕರೆದು, ಕಿವಿಯಲ್ಲಿ ಏನೋ ಹೇಳಿದರು. ಇನ್ನೂ ಸಣ್ಣ ವಯಸ್ಸಿನವನಾಗಿದ್ದ ನಾಗಯ್ಯ, ಸಾಲಿಕಟ್ಟೆಯನ್ನು ಟಣಕ್ಕನ ಜಿಗಿದು, ಚೆನ್ನನ ತಲೆಗೆ ಏಟು ಕೊಟ್ಟು ಓಡತೊಡಗಿದ.. ಅನಿರೀಕ್ಷಿತವಾದ ಏಟಿನಿಂದ ಚೆನ್ನ ವಿಚಲಿತನಾದರೂ ಸುಧಾರಿಸಿಕೊಂಡು, ನಾಗಯ್ಯನ ಹಿಂದೆ ಓಡತೊಡಗಿದ. ನಾಗಯ್ಯ ಓಡುತ್ತ ಗೌಡರ ಮನೆಗೆ ಹೋಗಿ, ಚೆನ್ನನನ್ನು ಅವ್ರಪ್ಪನ ಕೈಗೆ ಒಪ್ಪಿಸಿ ಬಂದ! ಹುಲ್ಲಿಕೇರಿ ಮಾಸ್ತರರು ಕಲ್ಲೂರ ಮಾಸ್ತರರ ಸಮಯ ಪ್ರಜ್ಞೆಗೆ ತಲೆಬಾಗಿ, ತಮ್ಮ ಸ್ವಚ್ಛ-ಶ್ವೇತಾಂಬರದೊಂದಿಗೆ ಸಾಲಿ ಹೊಕ್ಕರು!

ಕಲ್ಲೂರ ಮಾಸ್ತರರಿಗೂ ಚೆನ್ನನಿಗೂ ಮೊಟ್ಟಮೊದಲ ಮುಖಾಮುಖಿಯಾದದ್ದು ಹೀಗೆ.

ಎಳೆಗರು ಎತ್ತಾಗುವಂತೆ ಚೆನ್ನ ಏಳನೇ ತರಗತಿ ಮುಗಿಸಿ, ಕಲ್ಲೂರ ಮಾಸ್ತರರು-ಹುಲ್ಲಿಕೇರಿ ಮಾಸ್ತರರು ಕಲಿಸುವ ಹೈಸ್ಕೂಲಿಗೆ ದಾಖಲಾದ. ಅವಾಗ ಅವನನ್ನು ಮಾಸ್ತರರು ಹತ್ತಿರದಿಂದ ಗಮನಿಸುವುದು ಸಾಧ್ಯವಾಗಿ, ಸುಧಾರಿಸುವ ಪ್ರಯತ್ನಮಾಡಿದರು. ಚೆನ್ನ ದುಷ್ಟನಲ್ಲ, ಉಡಾಳನು ಅಲ್ಲ, ಜಾಣ ಮೊದಲೇ ಅಲ್ಲ. ದಡ್ಡ? ಗೊತ್ತಿಲ್ಲ.. ಅವನವು ಮಾತು ಕಡಿಮೆ, ಬೆಲ್ಲ ಬಡಿದ ಗುಂಡುಕಲ್ಲಿನಂತೆ ಸುಮ್ಮನೆ ಕೂತಿರುತ್ತಿದ್ದ. ಹೇಳಿದ ವಿಷಯ ಅರ್ಥವಾಗಿದೆಯೋ ಇಲ್ಲವೋ ಎನ್ನುವುದು ಶಿಕ್ಷಕರಿಗೆ ತಿಳಿಯುತ್ತಿರಲಿಲ್ಲ. ವಿಷಯಕ್ಕೆ ಸಂಬಂಧಿಸಿದ ಸರಳ ಪ್ರಶ್ನೆ ಕೇಳಿದರೆ, ಅದಕ್ಕೆ ಉತ್ತರವನ್ನೇ ಕೊಡುತ್ತಿರಲಿಲ್ಲ. ವಿಷಯ ಅವನಿಗೆ ತಿಳಿದಿಲ್ಲವೋ ಅಥವಾ ಉತ್ತರ ಹೇಳಲು ಮೈಯಾಗಿನ ಸೊಕ್ಕೋ ಎಂದು ಶಿಕ್ಷಕರು ಪರದಾಡುತ್ತಿದ್ದರು. ಮತ್ತ್ಯಾವುದೋ ಕಠಿಣ ವಿಷಯ ಅವನಿಗೆ ಅರ್ಥವಾಗಿಲ್ಲವೆಂದುಕೊಂಡಿದ್ದರೆ ಅದಕ್ಕೆ ಸರಿಯಾದ ಉತ್ತರ ಕೊಟ್ಟು ಶಿಕ್ಷಕರನ್ನು ಚಕಿತಗೊಳಿಸುತ್ತಿದ್ದ.

ಅವನು ಒಂದು ರೀತಿಯಿಂದ ವಿಕ್ಷಿಪ್ತ, ತನ್ನ ಮನಸ್ಸಿಗೆ ಬಂದುದನ್ನು ಮಾಡುವ ಮನಸುಖರಾಯ. ಅವನಿಗೆ ಏನು ಮಾಡಬೇಕು, ಏನು ಮಾಡಬಾರದು ಎಂಬ ಪರಿಜ್ಞಾನವಿರಲಿಲ್ಲ, ಅಪಮಾನ-ಅವಮಾನಗಳ ಹೆದರಿಕೆಯೂ ಇರಲಿಲ್ಲ.

ಶಾಲೆ ಶುರುವಾಗಿ ಮೂರು-ನಾಲ್ಕು ತಿಂಗಳಾಗಿ, ಅರ್ಧವಾರ‍್ಷಿಕ ಪರೀಕ್ಷೆಗಳು ಬಂದವು. ಪರೀಕ್ಷೆ ಬಗ್ಗೆ ಶಿಕ್ಷಕರೆಲ್ಲಾ “ಇದು ಕನ್ನಡ ಶಾಲೆಯ ಪರೀಕ್ಷೆದಂತಲ್ಲ, ಇದು ಹೈಸ್ಕೂಲು.. ಇಲ್ಲಿ ಪರೀಕ್ಷೆಗೆ ಬಹಳ ಮಹತ್ವ” ಎಂದು ಮಕ್ಕಳನ್ನು ಹೆದರಿಸಿಬಿಟ್ಟಿದ್ದರು. ಮಕ್ಕಳು ಕೂಡ ಬಹಳ ಗಂಭೀರವಾಗಿ ಪರೀಕ್ಷೆಗೆ ಓದು ನಡೆಸಿದ್ದರು. ಪರೀಕ್ಷೆಯ ಹಿಂದಿನ ದಿನ ರಾತ್ರಿ, ಚೆನ್ನ ಸ್ಟಾಫ್‌ರೂಮಿನ ಕೀಲಿ ಒಡೆದು, ಪ್ರಶ್ನೆಪತ್ರಿಕೆಯನ್ನು ಕದಿಯುತ್ತಿದ್ದನಂತೆ. ಅವತ್ತು ವಾಚ್‌ಮನ್ ಡ್ಯೂಟೀಲಿದ್ದ ಸಿಪಾಯಿ ನಾಗಯ್ಯ ಅವನನ್ನು ಹಿಡಿಯಲು ಹೋಗಿದ್ದನಂತೆ. ನಾಗಯ್ಯನ್ನು ನೂಕಿ ಚೆನ್ನ ಓಡಿ ಹೋಗಿದ್ದನಂತೆ.

ಚೇರ್ಮನ್ನರಿಗೆ ಈ ಸುದ್ದಿ ಹೋದಾಗ ಅವರು, “ಹೇ ಅವ ಸಣ್ಣ ಹುಡುಗ.. ಅವಾ ಏನು ಮಾಡತಾನ? ರಾತ್ರಿ ಕತ್ತಲ್ಯಾಗ ಬ್ಯಾರೆ ಯಾರೋ ಕಳ್ಳರು ಬಂದಿರಬೇಕು, ಸಿಪಾಯಿ ನಾಗ್ಯಾ ಏನೋ ತಪ್ಪ್‌ ತಿಳಕೊಂಡಾನ..” ಎಂದು ತಳ್ಳಿಹಾಕಿದರು. ಚೇರ್ಮನ್ನರಿಗೆ ಅವರ ಮಗನ ಲೀಲಾವಿಲಾಸಗಳನ್ನು ಯಾರು ತಿಳಿಸಿ ಹೇಳಬೇಕು? ಹಿಂಗಾಗಿ ಬಡಪಾಯಿ ನಾಗಯ್ಯ ನೋವು ತಿಂದದಷ್ಟೇ ಬಂತು, ಚೆನ್ನನಿಗೆ ಯಾರೂ ಒಂದು ‘ಬ್ರʼ ಅನ್ನಲಿಲ್ಲ..

ಇದಾದ ನಂತರ ಹುಲ್ಲಿಕೇರಿ ಗುರುಗಳು ಸ್ಟಾಫ್‌ಮೀಟಿಂಗಿನಲ್ಲಿ “ಕರೆ ನಾಯನ್ನು ತೊಳೆದು ತೊಳೆದು ಬಿಳೆ ನಾಯಿ ಮಾಡಬಹುದು, ಆದರೆ ಈ ಚೆನ್ನನನ್ನು ಸುಧಾರಿಸಲು ಸಾಧ್ಯನ ಇಲ್ಲ. ದಡ್ಡ ಇದ್ದರೂ, ವಿಧೇಯ ಇದ್ದರ ಉದ್ಧಾರ ಆಗಬಹುದು, ಮಂಡ ಇದ್ದರೂ, ಶಾಣೆ ಇದ್ದರ ಉದ್ಧಾರ ಆಗಬಹುದು. ಆದರ ಚೆನ್ನನ್ಹಂಗ ಮಂಡನೂ ಇದ್ದು, ದಡ್ಡನೂ ಇದ್ದರ ಉದ್ಧಾರ ಆಗುದುಲ್ಲ. ಊರಮುಂದಿನ ಹೊಳ್ಯಾಗ ಹೆಣ ತೇಲಿ ಬಂದು ದಂಡಿಗೆ ಬಿದ್ದರ ಹ್ಯಾಂಗ ಮುಂದಕ್ಕ ದಬ್ಬತಾರಲ್ಲ, ಹಂಗ ನಾವೂನು ಇವನನ್ನ ಮುಂದಕ್ಕ ಸಾಗಹಾಕಬೇಕ.. ಇವಗ ಬುದ್ಧಿ ಹೇಳಾಕ ಹೋಗಿ ಅವ ನಮ್ಮ ಕೈ-ಕಾಲು ಮುರಿದರ ಏನ್‌ ಗತಿ?” ಎಂದು ತಮ್ಮ ವಿಚಾರ ಮಂಡಿಸಿದರು. ಎಲ್ಲ ಶಿಕ್ಷಕರು ಅವರ ಸಲಹೆಗೆ ಒಮ್ಮತದಿಂದ ಒಪ್ಪಿಕೊಂಡರು.

ಹುಲ್ಲಿಕೇರಿ ಗುರುಗಳು ಚೆನ್ನನನ್ನು ಕರೆದು “ಸಣ್ಣಗೌಡ್ರ, ನೀವು ಪ್ರಶ್ನೆಪತ್ರಿಕೆ ಕದಿಯೋದು ಬ್ಯಾಡ, ಅದಕ್ಕಾಗಿ ಸ್ಟಾಫ್ ರೂಮಿನ ಕೀಲಿ ಮುರಿಯೋದು ಬ್ಯಾಡ, ನಾವೇ ಪ್ರಶ್ನೆಪತ್ರಿಕೆಯ ಪ್ರತಿಯನ್ನ, ಅದರ ಜೊತಿಗೆ ಮಾದರಿ ಉತ್ತರಪತ್ರಿಕೆಯನ್ನು ಸೈತ ಕಳಿಸಿಕೊಡತೇವಿ. ದಯವಿಟ್ಟು ಅದನ್ನು ನೋಡಿ, ತಯಾರಿ ಮಾಡಿಕೊಂಡು ಬಂದು ಪರೀಕ್ಷೆ ಬರೀರಿ” ಎಂದು ಹೇಳಿದರು.

ಇಷ್ಟು ಮಾಡಿದರೂ ಚೆನ್ನನ ಉತ್ತರಪತ್ರಿಕೆಗಳು ಹೆಚ್ಚುಕಡಿಮೆ ಖಾಲಿಯೇ ಇರುತ್ತಿದ್ದವು. ಆದರೂ ಪೇಪರ್‌ ತಿದ್ದುವ ಮಾಸ್ತರರು ಕೈಬಿಚ್ಚಿ ಮಾರ್ಕ್ಸ್‌ ಕೊಟ್ಟು ಪಾಸ್ ಮಾಡುತ್ತಿದ್ದರು. ಹೀಗಾಗಿ ಹೆಣ ಹತ್ತನೇಯತ್ತೆಯ ಪಬ್ಲಿಕ್‌ ಪರೀಕ್ಷೆಯ ಹೊಸಿಲಿಗೆ ಬಂತು. ಅಲ್ಲಿಯೂ ಚೆನ್ನನಿಗಿಂತ ಮಾಸ್ತರುಗಳಿಗೆಯೇ ಹೆಚ್ಚು ಆತಂಕವಾಗಿತ್ತು. ಅವನಿರುವ ಕೊಠಡಿಗೆ ಮೇಲ್ವಿಚಾರಕರಾಗಿ ಹೋದವರು ಬಹಳ ಕಷ್ಟಪಟ್ಟು, ಸಾಕಷ್ಟು ಲಫಂಗತನ ಮಾಡಿ ಚೆನ್ನನ ಕೈಯಿಂದ ಪರೀಕ್ಷೆ ಬರೆಸಿದರು.

ಫಲಿತಾಂಶ ಬಂದಾಗ ಚೆನ್ನ ಕಟಾನಕಟಿ ಪಾಸಾಗಿದ್ದ. ಚೇರ್ಮನ್ನರು ಚೆನ್ನನ ಮುಂದಿನ ಭವಿಷ್ಯದ ಬಗ್ಗೆ ಮಾಸ್ತರ ಜನರಲ್ಲಿ ವಿಚಾರ ವಿನಿಮಯ ಮಾಡಿದರು. ಎಲ್ಲ ಮಾಸ್ತರರು ‘ಚೆನ್ನ ಅಯೋಗ್ಯʼ ಎಂಬ ಕಟು ಸತ್ಯಕ್ಕೆ ಸಾಕಷ್ಟು ಪೌಡರು-ಸ್ನೋ ಹಚ್ಚಿ, ಚೇರ್ಮನ್ನರಿಗೆ ಕಡಿಮೆ ನೋವಾಗುವಂತೆ ತಿಳಿಯಪಡಿಸಿದರು. ಚೇರ್ಮನ್ನರು ಅರ್ಥ ಮಾಡಿಕೊಂಡು – “ನೀವು ನಿಮ್ಮ ಪ್ರಯತ್ನ ಮಾಡೀರಿ, ಮರ ಏರೋರ ಮುಕುಳಿ ಎಷ್ಟ ಎತ್ತರತಂಕಾ ಹಿಡಿಯಾಕ ಆಗತ್ತ?” ಎಂದು ಮಾಸ್ತರರನ್ನೇ ಸಮಾಧಾನ ಮಾಡಿದರು. ನಂತರ “ಅವನೇನು ಓದಿ ಇಂಜನೀಯರು, ಡಾಕ್ಟರು ಆಗಬೇಕಾಗಿಲ್ಲ. ಒಬ್ಬವನ ಮಗ.. ಇಷ್ಟೊಕೊಂದಾ ಆಸ್ತಿ ಐತಿ.. ಅದನ್ನು ನೋಡಿಕೊಂಡು ಇದ್ದರ ಸಾಕು” ಎಂದರು. ಎಲ್ಲ ಮಾಸ್ತರುಗಳು ಸಮಾಧಾನದ ನಿಟ್ಟುಸಿರು ಬಿಟ್ಟರು. ಅದರೆ ಮುಂದುವರಿಸುತ್ತಾ “ಒಂದು ಬಿಎ-ಬಿಎಡ್‌ ಮಾಡಿಸಿ, ನಮ್ಮದ ಸಂಸ್ಥಾದೊಳಗ ಒಂದು ಮಾಸ್ತರಿಕಿ ನೌಕರಿಗೆ ತಗೊಂಡರ, ಇದ್ದೂರಾಗ ಹೊಲ-ಮನಿ ನೋಡಿಕೊಂಡು, ನೌಕರಿ ಮಾಡಿಕೊಂಡು ಹೋಗತಾನ” ಎಂದದ್ದಕ್ಕೆ ಗುರುವೃಂದ ಸಿಡಿಲು ಬಡಿದ್ಹಂಗ ಬೆಚ್ಚಿ ಬಿತ್ತು.

ಚೇರ್ಮನ್ನರ ನಂಬಿಕೆಯ ಪ್ರಕಾರ ‘ಸ್ಟೇಷನ್‌ಮಾಸ್ತರರಿಗೆ ನಿದ್ದಿ ಇಲ್ಲ, ಸಾಲಿ ಮಾಸ್ತರರಿಗೆ ಬುದ್ಧಿ ಇಲ್ಲʼ! ಆದ್ದರಿಂದ ಬುದ್ಧಿ ಇಲ್ಲದ ಚೆನ್ನ ಮಾಸ್ತರಗಿರಿಗೆ ಯೋಗ್ಯ ಅಂತ ಅವರ ಲೆಕ್ಕ!

ಅದೇ ಆಗ ಚೆನ್ನನ ಮೂರು ವರ್ಷದ ಹೈಸ್ಕೂಲುವಾಸ ಮುಗಿಯಿತು ಎಂದು ನಿರಾಳರಾಗಿದ್ದ ಶಿಕ್ಷಕಸೇನೆ, ‘ಹೋದ್ಯಾ ಪಿಶಾಚಿ ಎಂದರೆ, ಬಂದೆ ಗವಾಕ್ಷಿಲಿʼ ಎಂದು ಚೆನ್ನ ಮತ್ತೆ ಹೈಸ್ಕೂಲಿಗೆ, ಅದೂ ಶಿಕ್ಷಕನಾಗಿ, ವಕ್ಕರಿಸುತ್ತಾನೆ ಎಂದು ಆತಂಕಗೊಳ್ಳುವುದು ಸಹಜವೇ ಆಗಿತ್ತು.

ಶರಣಪ್ಪ ಇನ್ನೇನು ಶಗಣಿ ಬಿದ್ದೇ ಬಿಟ್ಟಿತು ಎಂದು ಕಣ್ಮುಚ್ಚಿಕೊಂಡು ಎರಡು ಕ್ಷಣ ಕಾದರೂ ಏನು ಆಗಿಲ್ಲ.. ಕಣ್ತೆರೆದು ನೋಡಿದರೆ ದುರುದುರು ನೋಡುತ್ತ ಕೈಯಲ್ಲಿ ಶೆಗಣಿಯ ಗ್ರೇನೇಡು ಹಿಡಿದು ಚೆನ್ನ ನಿಂತೇ ಇದ್ದಾನೆ. ಸುಧಾರಿಸಿಕೊಂಡು ಶರಣಪ್ಪ “ಕೈಗೆ ನೀರು ಹಾಕ್ತೀನಿ, ಶೆಗಣಿ ತೊಳ್ಕೊಂಡು ಸಾಲಿಗೆ ಹೋಗು” ಎಂದು ಹೇಳಿದ್ದಾನೆ. ಚೆನ್ನ ಅದು ಯಾವುದು ತನ್ನ ಕಿವಿಗೆ ಬಿದ್ದೇ ಇಲ್ಲ ಎನ್ನುವಂತೆ ತನ್ನ ದೃಷ್ಟಿ ಪ್ರಹಾರವನ್ನು ಮುಂದುವರಿಸಿದ್ದಾನೆ.

ಚೇರಮನ್ನರು ಎದ್ದು ಹೋದ ಮೇಲೆ, ಎಲ್ಲರಿಗಿಂತ ವಯಸ್ಸಿನಲ್ಲಿಯೂ, ಹುದ್ದೆಯಲ್ಲಿಯೂ ಚಿಕ್ಕವನಾಗಿದ್ದ ಸಿಪಾಯಿ ನಾಗಯ್ಯನೇ ಮಾಸ್ತರುಗಳಿಗೆ ಸಮಾಧಾನ ಹೇಳಿದ – “ಸರಾ, ಅವಗ ಮಾಸ್ತರ ಆಗಬೇಕಂದ್ರ ಇನ್ನೂ ಐದಾರು ವರ್ಸ ಕಾಲೇಜು ಕಲತು ಪಾಸ ಮಾಡ್ಬಕು. ಇಲ್ಲ್ಯಾಂದರ ನೀವೆಲ್ಲಾ ಅವರಪ್ಪನ ಮುಸುಡಿ ನೋಡಿ ಪಾಸ ಮಾಡತಿದ್ರಿ, ಶಹರದೂರಾಗ ಯಾರು ಇವ್ನ ಪಾಸು ಮಾಡ್ಬಕು? ಇವನ ತೆಲಿ ನೋಡಿದರ ಮಾಸ್ತರ ಅಲ್ಲ, ಕಾರಕೂನ ಆಗಾಕು ಲಾಯಕ್ಕಿಲ್ಲ. ಇವಾ ಹೊಳ್ಳಿ ಬಂದು ಅವರವ್ವ ಆಳುಗಳಿಗೆ ಕಟ್ಟುವ ರೊಟ್ಟಿ ಎಣಿಸುವ ‘ರೊಟ್ಟಿ-ಕಾರಕೂನʼ ಆಗೂದ ಸೈ” ಎಂದ.

ನಾಗಯ್ಯನ ಮಾತಿನಿಂದ ಜ್ಞಾನೋದಯವಾಗಿ, ಮಾಸ್ತರುಗಳು ತಮ್ಮ ಶಿಷ್ಯಶಿಖಾಮಣಿಯ ಬಗ್ಗೆ ತಾವೇ ಓವರ್-ಎಸ್ಟೀಮೇಟ್‌ ಮಾಡಿದ್ದಕ್ಕೆ ನಾಚಿಕೊಂಡರು. ಚೆನ್ನನ ಬಗ್ಗೆ ನಾಗಯ್ಯ ಉಪಯೋಗಿಸಿದ ‘ರೊಟ್ಟಿ-ಕಾರಕೂನʼ ಎಂಬ ವಿಶೇಷಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ, ಮೊದಲು ಮಾಸ್ತರುಗಳ ನಡುವೆ, ನಂತರ ಊರವರೆಲ್ಲರ ನಡುವೆ ಜನಪ್ರಿಯವಾಯಿತು. ನಂತರ ಚೆನ್ನನಿಗೆ ಅದೇ ಅಂಕಿತನಾಮವೆನ್ನುವಷ್ಟು ಅಂಟಿಕೊಂಡು ಬಿಟ್ಟಿತು.

ನಾಗಯ್ಯನ ಭವಿಷ್ಯವಾಣಿಯಂತೆ ರೊಟ್ಟಿ-ಕಾರಕೂನ ಕೆಲವೇ ದಿನಗಳಲ್ಲಿ ಕಾಲೇಜಿನ ಧಡಿಕೆ ತಾಳಲಾರದೆ ಊರಿಗೆ ಮರಳಿದ. ಮೊದಲೇ ವಿಕ್ಷಿಪ್ತ, ಈ ಕಾಲೇಜು ‘ದಂಡʼಯಾತ್ರೆಯಿಂದಾದ ಅವಮಾನವೂ ಸೇರಿ ಇನ್ನೂ ಒಳಮುಚ್ಚುಗ ಆದ. ಮನೆಯಲ್ಲಿ ತನ್ನ ಕೊಣೆಯಲ್ಲಿಯೇ ಇರೋದು ಅಥವಾ ಯಾವಾಗಾದ್ರೂ ಮನಸ್ಸು ಬಂದರೆ ಹೊಲಕ್ಕೆ ಹೋಗುವುದು ಅಷ್ಟೇ ಅವನ ಚಟುವಟಿಕೆ. ಹೈಸ್ಕೂಲಿನ ಮಾಸ್ತರರ ವೃತ್ತದಲ್ಲಿ ಅವನು ಮರತೇ ಹೋಗಿದ್ದ. ಅಕಸ್ಮಾತ್ ಯಾರಾದರು ಚೇರ್ಮನ್ನರನ್ನು ಭೇಟಿಯಾಗಲು ಅವರ ಮನೆಗೆ ಹೋದರೆ, ಮನೆಯಲ್ಲಿ ಚೆನ್ನ ಇದ್ದರೆ, “ಚೆನ್ನಬಸವನಗೌಡರು ಆರಾಮ?” ಎಂಬ ಪ್ರಶ್ನೆಯಿಂದ ಶುರುವಾಗಿ ಅವನು ಗೋಣುಹಾಕುವುದರೊಂದಿಗೆ ಅವರ ಸಂವಹನ ಮುಗಿಯುತ್ತಿತ್ತು.

ವರ್ಷಗಳು ಉರುಳಿದವು. ಚೇರ್ಮನ್ನರು ರೊಟ್ಟಿ-ಕಾರಕೂನನ ಮದುವೆಗಾಗಿ ಒಂದು ಹುಡುಗಿಯನ್ನು ನೋಡಿದರು. ಹುಡುಗಿಯ ಅಪ್ಪ ಚೇರ್ಮನ್ನರ ಆಸ್ತಿ-ಅಂತಸ್ತು ನೋಡಿ, ಕಾಲೇಜು ಓದುತ್ತಿದ್ದ ಹುಡುಗಿಯನ್ನು ಓದು ಬಿಡಿಸಿ ಮದುವೆಗೆ ಒಪ್ಪಿಸಿದ. ನಿರೀಕ್ಷೆಯಂತೆ ಸಾಲಿ ಮಾಸ್ತರ ಜನರು ಮದುವೆ ಕಾರ್ಯಕ್ರಮದಲ್ಲಿ ಟೊಂಕಕಟ್ಟಿ ದುಡಿದರು. ಹೆಡ್ಮಾಸ್ತರ್ ಕಲ್ಲೂರವರಂತೂ ಹುಡುಗಿ ನೋಡುವ ಶಾಸ್ತ್ರದ ಹಿರೇತನದಿಂದ ಚಾಲುಮಾಡಿ, ಮಾತುಕತೆಯಲ್ಲೂ ಪ್ರಧಾನ ಪಾತ್ರವಹಿಸಿ, ಲಗ್ನದ ಯಾದಿಯನ್ನೂ ಬರೆದು, ಕೊನೆಗೆ ಮದುವೆಯನ್ನು ಸಾಂಗವಾಗಿ ನಡೆಸಿಕೊಡುವಲ್ಲಿ ಶ್ರಮಿಸಿದರು.

ಮದುವೆಯ ಈ ಗದ್ದಲ ನಡೆದಾಗ ಕಲ್ಲೂರ ಮಾಸ್ತರರ ಹೆಂಡತಿ, ತನ್ನ ಗಂಡನಿಗೆ “ಹುಡುಗಿ ಶಾಣೇಕಿ ಇದ್ದಂಗ ಅದಾಳು. ಅರ್ಧಾ ಕಾಲೇಜು ಮುಗಿಸ್ಯಾಳಂತ. ಅಂತಹ ನಾಜುಕು ಹುಡುಗಿ ಈ ರೊಟ್ಟಿ-ಕಾರಕೂನನ ಜೋಡಿ ಏನು ಪುರೋಟ ಆದೀತು? ನೀವಾದರೂ ಹುಡುಗಿಯ ಅಪ್ಪನಿಗೆ ಈ ರೊಟ್ಟಿ-ಕಾರಕೂನನ ಬಗ್ಗೆ ಒಂದು ಮಾತು ಹೇಳಬೇಕಿತ್ತು” ಎಂದರು. ಮಾಸ್ತರರು ಆ ಕಾಲಕ್ಕೆ ವೇದವಾಕ್ಯದಷ್ಟೇ ಪ್ರಸಿದ್ಧವಾಗಿದ್ದ “ಲಗ್ನಾದ ಮ್ಯಾಗ ಅವನೂ ಸರಿ ಹೊಕ್ಕಾನ ತಗೋ” ಎಂಬ ಮೂಢನಂಬಿಕೆಯ ಸಮ್ಮೋಹನಾಸ್ತ್ರವನ್ನು ಹೆಂಡತಿಯ ಮೇಲೆ ಬಿಟ್ಟು ಸುಮ್ಮನಾಗಿಸಿದರು.

ಈ ‘ಲಗ್ನಾದ ಮ್ಯಾಗ..’ ಮೂಢನಂಬಿಕೆಗೆ ಅದೆಷ್ಟು ಜೀವನಗಳು ಹಾಳಾಗಿವೆಯೋ ಲೆಕ್ಕಿಲ್ಲ, ಆ ಸಂಖ್ಯೆಗೆ ರೊಟ್ಟಿ-ಕಾರಕೂನನ ಕೈಹಿಡಿದು ಬಂದ ಸುಜಾತನ ಜೀವನವೂ ಸೇರಿ ಹೋಯಿತು.

ಗಂಡನಮನೆಗೆ ಬಂದ ಸುಜಾತ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಳು. ಅವಳು ಕಲ್ಲೂರ ಮಾಸ್ತರರು ಮತ್ತು ಅವರ ಹೆಂಡತಿಯನ್ನು ‘ಕಾಕʼ, ‘ಕಕ್ಕಿʼ ಎಂದು ಹಚ್ಚಿಕೊಂಡಿದ್ದಳು. ಮಾಸ್ತರ ದಂಪತಿಗಳು ಕೂಡ ಸುಜಾತಳನ್ನು ಪುತ್ರಿವಾತ್ಸಲ್ಯದದಿಂದ ಕಾಣುತ್ತಿದ್ದರು. ಸುಜಾತ ನಾಲ್ಕು ದಿನಕ್ಕೊಮ್ಮೆ ಮಾಸ್ತರರ ಹೆಂಡತಿ ಹತ್ತಿರ ಬಂದು, ಗಂಡನ ಹಿಂಸೆಯ ವರದಿ ಒಪ್ಪಿಸುತ್ತಿದ್ದಳು. ಮಾಸ್ತರರ ಹೆಂಡತಿಯು ನಾಲ್ಕು ಸಮಾಧಾನದ ಮಾತು ಹೇಳಿ ಕಳಿಸುತ್ತಿದ್ದರು.

ಚೇರ್ಮನ್ನರೂ, ಅವರ ಹೆಂಡತಿಯೂ ಮನೆಯ ಮರ್ಯಾದೆ ಕಾಯಲು ಎಷ್ಟು ಹೆಣಗಾಡಿದರೂ ರೊಟ್ಟಿ-ಕಾರಕೂನ ಅವರ ಮಾತೂ ಕೇಳುತ್ತಿರಲಿಲ್ಲ. ಹೆಂಡತಿಯನ್ನು ಹೊಡೆಯೋದು ಬಡಿಯೋದು ಅಂತೂ ಸೈಯ ಸೈ, ಅದರ ಜೊತೆಗೆ ಅವಳಿಗೆ – ಶೆಗಣಿಪುಟ್ಟಿ ಹೊರಿಸಿ ನಿಲ್ಸೋದು, ಎಮ್ಮಿಡುಬ್ಬದ ಮ್ಯಾಲೆ ಕುಂಡ್ರಸೋದು – ಇಂತಹ ಚಿತ್ರವಿಚಿತ್ರ ಶಿಕ್ಷೆ ಕೊಡುತ್ತಿದ್ದನಂತೆ. ಓಣಿಯಲ್ಲಿನ ಜನ ಆಡಿಕೊಂಡು ನಗುವುದಕ್ಕೆ ಚೇರ್ಮನ್ನರಿಗೂ, ಅವರ ಹೆಂಡತಿಗೂ ಮುಖ ಎತ್ತಿ ನಡೆದಾಡಲಾರದ ಪರಿಸ್ಥಿತಿ ಬಂದಿತ್ತು. ಮದುವ್ಯಾಗಿ ಇನ್ನೂ ಒಂದು ವರ್ಷವೂ ಪೂರ್ತಿಯಾಗಿರಲಿಲ್ಲ, ಒಂದು ದಿವಸ ಮಲಗಿಕೊಂಡಿದ್ದ ಚೇರಮನ್ನರು ಬೆಳಿಗ್ಗೆ ಏಳಲೇ ಇಲ್ಲ. ಮಂದಿ ಹಾರ್ಟ್‌ ಆಗಿತ್ತು ಅಂದರೂ, ಊರಾಗ ರಾಜನ ಹಾಗೆ ಮೆರೆದ ಅವರು ಮಗನ ದೆಸೆಯಿಂದಾಗಿ ಸಣ್ಣಾಗಿ, ಜೀವಕ್ಕ ಏನಾರು ಮಾಡಿಕೊಂಡಿದ್ದರೋ ಏನೋ ಯಾರಿಗೆ ಗೊತ್ತು.. ಅಲ್ಲಿಯವರೆಗೆ ಸೊಸೆಯ ಬಗ್ಗೆ ಸಹಾನುಭೂತಿ ತೋರುತ್ತಿದ್ದ ಚೇರಮನ್ನರ ಹೆಂಡತಿ, ಸೊಸೆಯ ಕಾಲ್ಗುಣದಿಂದಲೇ ತನ್ನ ತಾಳಿಗೆ ಕುತ್ತು ಬಂತು ಎಂದು ಗಂಡನ ಸಾವಿನ ಅಪವಾದವನ್ನು ಸುಜಾತಳ ತಲೆಗೆ ಕಟ್ಟಿದಳು. ಇದರಿಂದ ಪಾಪದ ಹುಡುಗಿ ಸುಜಾತ ಕಂಗೆಟ್ಟು ಹೋದಳು.

ಇದೇ ದಿನಗಳಲ್ಲಿಯೇ ಕಲ್ಲೂರ ಮಾಸ್ತರರು “ರೊಟ್ಟಿ-ಕಾರಕೂನ ಚೇರಮನ್ನ ಆದರ ಅವನ ಜೊತಿ ಹ್ಯಾಂಗ ಏಗೋದು?” ಎಂದು ತೆಲಿ ಕೆಡಿಸಿಕೊಂಡಿದ್ದು. ಹೆತ್ತವರಿಗೆ ಮರ್ಯಾದಿ ಕೊಡಲಾರದವ, ಕಟ್ಟಿಕೊಂಡ ಹೆಂಡತಿಗೆ ಶೆಗಣಿಪುಟ್ಟಿ ಹೊರಿಸಿ ನಿಲ್ಲಿಸಿದವ, ಚೇರಮನ್ನ ಆದರ, ಸಂಸ್ಥಾದ ನೌಕರರಾದ ನಮಗೂ ಶೆಗಣಿಪುಟ್ಟಿ ಹೊರಿಸಿ ನಿಲ್ಲಿಸುದುಲ್ಲಾ ಅಂತ ಏನ್‌ ಗ್ಯಾರಂಟಿ ಎಂದು ಮಾಸ್ತರರಿಗೆ ಪುಕುಪುಕು ಶುರುವಾತು. ಅದೇ ದಿನಗಳಲ್ಲಿ ಸರಕಾರ ಹೊಸ ಶಾಲೆಗಳನ್ನು ಶುರು ಮಾಡುವ ಯೋಜನೆ ಪ್ರಕಟಿಸಿ, ಅದಕ್ಕಾಗಿ ಅನುಭವಿ ಶಿಕ್ಷಕರಿಂದ ಅರ್ಜಿ ಆಹ್ವಾನಿಸಿತು. ಸಿಕ್ಕಿದ್ದೇ ಚಾನ್ಸು ಎಂದು ಕಲ್ಲೂರ ಮಾಸ್ತರರು ಅರ್ಜಿ ಹಾಕಿ, ಹೊಸ ನೌಕರಿ ಪಡೆದುಕೊಂಡರು.

ಸುಮಾರು ವರ್ಷ ಆ ಊರಲ್ಲಿ ಮೆಚ್ಚಿನ ಶಿಕ್ಷಕರಾಗಿದ್ದ ಮಾಸ್ತರರು ಊರು ಬಿಟ್ಟು ಹೋಗುತ್ತಾರೆ ಎಂದು ಬಹಳ ಜನ ಬೇಸರಮಾಡಿಕೊಂಡರು. ಶಾಲೆಯಲ್ಲಿ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಬೀಳ್ಕೊಡುವ ಕಾರ್ಯಕ್ರಮ ಮಾಡಿ ಸನ್ಮಾನಿಸಿದರು. ಹಳೆಯ ವಿದ್ಯಾರ್ಥಿಗಳು ಮನೆಗೆ ಬಂದು ಆಶೀರ್ವಾದ ತಗೊಂಡು ಹೋದರು. ಊರಲ್ಲಿನ ಉಳಿದ ಗಣ್ಯರು ಮಾಸ್ತರರಿಗೆ ಭೇಟಿಯಾಗಿ ಶುಭಾಶಯಕೋರಿದರು. ಎಲ್ಲಕ್ಕಿಂತ ಹೆಚ್ಚು ಕಷ್ಟವಾಗಿದ್ದು ಸುಜಾತಳಿಗೆ. ಅವಳಂತೂ ಮಾಸ್ತರರಿಗೂ, ಅವರ ಹೆಂಡತಿಗೂ ತೆಕ್ಕೆ ಬಿದ್ದು “ಕಾಕಾರ, ಕಕ್ಕಿಯಾರ ನೀವು ಹ್ವಾದ ಮ್ಯಾಗ ಹೆಂಗೆ ಇರಲಿ?” ಎಂದು ಭೋರಿಟ್ಟಳು. ಮಾಸ್ತರರು “ನಮ್ಮದು-ಸಂಸ್ಥಾದ್ದು ನಾವ ಹಾಕ್ಕೋಂಡ ಗಂಟು, ಸಡಲ ಐತಿ.. ಬಿಚ್ಚಿಗೊಂಡು ಹೋಗಬಹುದು. ನಿನಗ ಮತ್ತ ಈ ಊರಿಗೆ ಗಂಟು ಹಾಕಿದ್ದು ದೇವರು.. ಅದು ಬಿಗಿ ಗಂಟು.. ಸುಧಾರಿಸಿಕೊಂಡು ಹೋಗು, ಮುಂದ ಒಳ್ಳೆದಾಗತ್ತ..” ಎಂದು ತಮ್ಮ ಮಗಳಿಗೆ ಹೇಳುವಂತೆ ಹೇಳಿ ಸಮಾಧಾನ ಮಾಡಿದರು.

ಮಾಸ್ತರರಿಗೆ ಅರ್ಧರ್ಧ ನಿದ್ದಿ, ಅರ್ಧರ್ಧ ಎಚ್ಚರ.. ಮೂವತ್ತೈದು ವರ್ಷ ಮಾಸ್ತರಿಕೆ ಮಾಡಿ ನಿವೃತ್ತರಾಗಿ, ಬೋರ್ಡಿನ ಮೇಲೆ ಕೈಯೆತ್ತಿ ಬರದೂ ಬರದೂ ಬರುವ ಬೆನ್ನಹುರಿ ಸವಕಳಿ ರೋಗಕ್ಕಾಗಿ ಆಪರೇಷನ್‌ ಮಾಡಿಸಿಕೊಂಡು ಮಲಗಿದ್ದಾರೆ. ವರ್ಷಗಳ ಮಾಸ್ತರಿಕೆಯಲ್ಲಿ ಕಂಡ ಜಾಣ, ತುಂಟ, ಮುಗ್ಧ ಮುಖಗಳು ನೆನಪಾಗುತ್ತಿದ್ದಾರೆ.. ಜೊತೆಗೆ ದುಡಿದ ಸಹೋದ್ಯೋಗಿಗಳು ನೆನಪಾಗುತ್ತಿದ್ದಾರೆ.. ರೊಟ್ಟಿ-ಕಾರಕೂನ-ಸುಜಾತರ ಮುಖಗಳು ಕಣ್ಮುಂದೆ ಬಂದಂತಾಗಿ ಒಮ್ಮೆಲೆ ಎಚ್ಚರವಾದರು. ಇಷ್ಟು ವರ್ಷ ಅವರು ಮರತೇ ಹೋಗಿದ್ದರಲ್ಲ ಎಂದು ವಿಸ್ಮಯಿಸುತ್ತಿರುವಾಗಲೇ “ಕಾಕಾರ ಎಚ್ಚರಾದಿರಿ? ಅರಾಮ ಇದ್ದೀರಿ?” ಎಂದ ದನಿ ಬಂದ ಕಡೆ ನೋಡಿದರು. ಅರೇ.. ಸುಜಾತಾ.. ಒಂಚೂರು ವಯಸ್ಸಾಗಿವೆಯಾದರೂ ತ್ರಾಸಿಲ್ಲದೇ ಗುರುತು ಸಿಕ್ಕಿತು.

“ನೀನೇನು ಇಲ್ಲಿ?” ಎಂಬ ಮಾಸ್ತರರ ಪ್ರಶ್ನೆಗೆ, ಸುಜಾತ ತನ್ನ ಮಗಳು ಅದೇ ಆಸ್ಪತ್ರೆಯಲ್ಲಿ ಹೌಸ್‌ ಸರ್ಜನ್‌ ಆಗಿದ್ದಾಳೆಂದು ಹೇಳಿ, ಮಾತು ಮುಂದುವರಿಸುತ್ತಾ – “ಇವತ್ತು ಬೆಳಿಗ್ಗೆ ರೌಂಡ್ಸ್‌ಗೆ ಬಂದಾಗ ಕಕ್ಕಿಯವರನ್ನು ಮಾತನಾಡಿಸಿದಳಂತ. ಅವಾಗ ನಾನು ಮನ್ಯಾಗ ಅವಳಿಗೆ ಆಗಾಗ ಹೇಳತಾ ಇದ್ದ ಕಲ್ಲೂರ ಮಾಸ್ತರರು ನೀವ ಎಂದು ಗೊತ್ತಾಗಿ, ನನಗ ಫೋನು ಮಾಡಿದಳು. ನಾನು ನೋಡಿಕೊಂಡು ಹೋಗೋಣು ಅಂತ ಬಂದೆ. ನೀವು ಮಲಗಿದ್ದಿರಿ. ಕಕ್ಕಿಯವರಿಗೆ ತಿಂಡಿ ತಿನಿಸಿಕೊಂಡು ಬರಾಕ ಅಂತ ನನ್ನ ಮಗಳು ಕರಕೊಂಡು ಹೋಗ್ಯಾಳ, ಇನ್ನೇನು ಬರತಾರ” ಎಂದು ಪಟಪಟನೇ ಹೇಳಿದಳು.

ಆದರೆ ಅವರ ಕುತೂಹಲ ಇನ್ನೂ ಬಗೆಹರಿದಿರಲಿಲ್ಲ.. “ಅಲ್ಲಬೇ, ಈ ಬೆಂಗಳೂರಿಗೆ ಯಾವಾಗ ಬಂದಿ? ಎಲ್ಲಿ ನಿನ್ನ..” ಎಂದು ಕೇಳುತ್ತಿದ್ದ ಅವರ ಮಾತನ್ನು ಅರ್ಧಕ್ಕ ನಿಲ್ಲಿಸಿ ಸುಜಾತಾ “ದೊಡ್ಡ ಕತಿ ಐತಿ ಹೇಳತೇನಿ ತಡಿರಿ ಕಾಕಾರ..” ಎಂದು ಮಾಸ್ತರರು ಆತು ಕೂಡುವುದಕ್ಕೆ ಅನುಕೂಲವಾಗುವಂತೆ ಬೆಡ್ಡನ್ನು ಹೊಂದಿಸಿದಳು. ನಂತರ “ನೀವು ಊರು ಬಿಟ್ಟು ಹ್ವಾದ ಮ್ಯಾಗ ನನಗ ಅಲ್ಲಿರುದು ಭಾಳ ತ್ರಾಸ ಆತು. ಅಷ್ಟರಾಗ ನಾನು ಹೊಟ್ಟಿಲಿದ್ದೆ. ನಾನು ಹ್ಯಂಗೋ ತಡಕೊಂಡೇನು ಅಂದರೂ, ಹುಟ್ಟುವ ಕೂಸಿನ ಭವಿಷ್ಯ ಏನು ಅಂತ ವಿಚಾರ ಮಾಡಿದೆ. ದೇವರ ಹಾಕಿದ್ದ ಗಂಟು ಆದರೂ ನಮ್ಮ-ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯದಾಗಬೇಕು ಅಂದರ ಅದನ್ನು ಬಿಡಿಸಿಕೊಳ್ಳಬೇಕು ಅಂತ ನಿರ್ಧಾರ ಮಾಡಿದೆ. ಅಲ್ಲಿಂದ ಬಿಟ್ಟು ಹೋಗಿ ಅರ್ಧ ಕಲಿತ ಕಾಲೇಜು ಮುಗಿಸಿದೆ. ಒಂದು ನೌಕರಿ ಹಿಡಿದು ಮಗಳನ್ನ ಬೆಳೆಸಿದೆ. ಆಕಿಗೆ ಮೆಡಿಕಲ್‌ ಸೀಟು ಬೆಂಗಳೂರಾಗ ಸಿಕ್ಕಾಗ ಬೆಂಗಳೂರಿಗೆ ಬಂದ್ವಿ” ಎಂದು ಹೇಳುವುದಕ್ಕೂ ಮಾಸ್ತರ ಹೆಂಡತಿಯೂ ಸುಜಾತಾಳ ಮಗಳೂ ಮರಳಿ ಬಂದರು. “ಇಕಿನ ನೋಡರಿ ನಿಮ್ಮ ಮೊಮ್ಮಗಳು ಡಾಕ್ಟರ್‌ ಮುಕ್ತಾ” ಎಂದು ಸುಜಾತಾ ಹೆಮ್ಮೆಯಿಂದ ಹೇಳಿದಳು.

ಮಾಸ್ತರರು “ಇಕಿ ಹೆಸರು ಮುಕ್ತಾ ಅಂತ ಇಟ್ಟೀಯಾ?” ಎಂದು ಕೇಳಿ, “ಮುಕ್ತ.. ಮುಕ್ತ..” ಎಂದು ರಾಗವಾಗಿ ಹೇಳಿದರು.

ಸುಜಾತಾ ಕೂಡ ಎಚ್ಚೆಸ್ವಿಯವರ ಪದ್ಯ ಗುನುಗತೊಡಗಿದಳು:
“ಇರಿಯುವ ಮುಳ್ಳೇ | ಎಲ್ಲಿಯ ವರೆಗೆ ನಿನ್ನ ಆಟ…
ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ | ಕಲಿಸಿದೆ ಜೀವನ ಪಾಠ…
ಇರುಳ ವಿರುದ್ಧ, ಬೆಳಕಿನ ಯುದ್ಧ | ಕೊನೆಯಿಲ್ಲದ ಕಾದಾಟ…
ತಡೆಯೆ ಇಲ್ಲದೇ, ನಡೆಯಲೇ ಬೇಕು | ಸೋಲಿಲ್ಲದ ಹೋರಾಟ… “

*****

ಪದವಿವರಣೆ:
ಕಲ್ಲೂರು, ಹುಲ್ಲಿಕೇರಿ: ನಾಮಪದಗಳು, ಊರ ಹೆಸರುಗಳು, ಇಲ್ಲಿ ಆಯಾ ಮಾಸ್ತರುಗಳ ಅಡ್ಹೆಸರುಗಳು.
ಏಗು : ಶ್ರಮಪಡು
ದುಸುಮುಸಿ : ಮುಸುಕಿನ ಜಗಳ
ಬ್ಯಾರೆ-ಹ್ವಾರೆ-ಇಲ್ಲದ : ಬೇರೆ ಕೆಲಸ(= ಹ್ವಾರೆ) ಇಲ್ಲದ
‘ಬ್ರʼ ಅನ್ನದೇ : ಬಯ್ಯದೇ
ಕಟಾನಕಟಿ : ಕನಿಷ್ಟ
ಕಾಕಾ-ಕಕ್ಕಿ : ಚಿಕ್ಕಪ್ಪ-ಚಿಕ್ಕಮ್ಮ
ಕಾರಕೂನ : ಗುಮಾಸ್ತ
ಶೆಗಣಿಪುಟ್ಟಿ : ಶೆಗಣಿ ತುಂಬಿದ ಬುಟ್ಟಿ