ಮನುಷ್ಯ ಬದುಕಿನ ಎಲ್ಲ ಹೋರಾಟಗಳನ್ನೂ ಆರಂಭದ ಬಿಕು ಮತ್ತು ಮಾಲಿಂಗನ ಯುದ್ಧದಲ್ಲಿಯೇ ಕಾಣಬಹುದು. ಆ ಯುದ್ಧ ಒಂದು ಚಿತ್ರಮಾಲಿಕೆಯ ಹಾಗಿದೆ. ವಸ್ತುವನ್ನು ಅಪ್ಪಿಕೊಳ್ಳುವುದು, ಬಿಟ್ಟು ಕೊಡಲು ಹೆಣಗಾಡುವುದು, ಕಿತ್ತುಕೊಳ್ಳುವುದು, ಇದೇ ಅಲ್ಲವೇ ನಮ್ಮ ಹೋರಾಟ? ಶಬ್ದ ನಿಶ್ಶಬ್ದದ ಹೋರಾಟ. ಕೊಟ್ಟು ಬಿಟ್ಟಿದ್ದರೆ ಏನಾಗುತ್ತಿತ್ತು? ಮಾಲಿಂಗನಿಗೆ ಅದನ್ನು ಪಡೆಯುವ ಅರ್ಹತೆ ಇತ್ತೇ? ಬಿಕು ಆನಂದನ ಅಗಲಿಕೆಯಿಂದ ವಿಚಲಿತನಾಗಿ ಬಳಲಿ ನಿತ್ರಾಣನಾಗುವುದು ಏಕೆ? ಬಿಕುವಿನ ಆರೈಕೆಯಲ್ಲಿ ಅರಳಿದ ಸುಮಲತೆ ಆತನನ್ನು ಬಿಟ್ಟು ಹೊರಡಲು ಮನಸ್ಸು ಮಾಡಿದ್ದಾದರೂ ಹೇಗೆ?
ಡಾ. ಎಂ.ಎಸ್.‌ ಮೂರ್ತಿಯವರ “ಬೌಲ್‌” ಕಾದಂಬರಿಯ ಕುರಿತು ಬಿ.ಕೆ. ಸುಮತಿ ಬರಹ

ಡಾ. ಎಂ.ಎಸ್.ಮೂರ್ತಿ ಅವರು ಬರೆದಿರುವ “ಬೌಲ್” ಒಂದು ವಿಶಿಷ್ಟ ಕೃತಿ. ಅವರು ಅನುಭಾವದ ಒಂದು ಲೋಕವನ್ನು ಸೃಷ್ಟಿ ಮಾಡುತ್ತಾರೆ, ಅರಿವಿಗೆ ಬಂದಿರದ ಒಂದು ವಿಶೇಷ ಚೈತನ್ಯವನ್ನು ದಕ್ಕಿಸಿಕೊಡುತ್ತಾರೆ. ಬೌಲ್ ಕೃತಿಯ ಚಿಂತನಾ ಕ್ರಮವೇ ಬೇರೆ ಇದೆ ಎಂದು ಪ್ರೊಫೆಸರ್ ಮನು ಚಕ್ರವರ್ತಿ ಅವರು ತಮ್ಮ ಮುನ್ನುಡಿಯಲ್ಲಿ ಹೇಳಿದ್ದಾರೆ.

(ಡಾ. ಎಂ.ಎಸ್. ಮೂರ್ತಿ)

ಮೂರ್ತಿ ಅವರು ಮೂಲತಃ ದೃಶ್ಯ ಮಾಧ್ಯಮದ ವಕ್ತಾರ. ಹಾಗಾಗಿ ಇದನ್ನು ಕಾಲದಲ್ಲಿ ನಿಲ್ಲುವ, ಸಲ್ಲುವ, ಗಟ್ಟಿಯಾದ “ಕಲಾ “ಕೃತಿ” ಎಂದೇ ಹೇಳಿದರೆ ತಪ್ಪಾಗದು.
1.ಮೂರ್ತಿ ಅವರ ಕಥನ ಕ್ರಮ, ನಿರೂಪಣೆ, ಶೈಲಿ,
2. ಕಥಾವಸ್ತು ಮತ್ತು ಪ್ರಸ್ತುತತೆ, ಪರಿಣಾಮ ಕಲಿಕೆ, ಮತ್ತು ಅಗತ್ಯ
3. ಧಾರ್ಮಿಕ ಚೌಕಟ್ಟು ಮತ್ತು ಆಧ್ಯಾತ್ಮ

ಹೀಗೆ ಎಷ್ಟೊಂದು ಆಯಾಮಗಲ್ಲಿ ಕೃತಿಯನ್ನು ನಾವು ಅನುಭವಿಸಬಹುದು.

ಕಥನ ಕ್ರಮ, ನಿರೂಪಣೆ:

ಮೂರ್ತಿ ಚಿತ್ರಕಲಾವಿದರು. ಆದ್ದರಿಂದಲೇ ನಾವು ಕಾದಂಬರಿಯನ್ನು ಕೇವಲ ಓದುವುದಿಲ್ಲ, ನೋಡುತ್ತೇವೆ. ಇರುವುದು ಐದು ಮುಖ್ಯ ಪಾತ್ರಗಳು. ಸಹಜತೆ ಮೈವೆತ್ತ ಸಾಮಾನ್ಯ ಮಹಿಳೆ ಸುಮಲತಾ, ಪರಂಪರೆಯ ಪ್ರತಿನಿಧಿ ಅಜ್ಜ, ಸಮಾಜದ ಮತ್ತೊಂದು ಮಗ್ಗಲಿನ ಪ್ರತೀಕ ಮಾಲಿಂಗ, ಜೀವಧರ್ಮಧಾರಣ ಸಂಕೇತ ಬಿಕು ಮತ್ತು ಹರಿಯುವಿಕೆಯ ಹಂದರ ಬೆಸೆಯುವ ಆನಂದ.

ಸಂಜೆಯ ಕೆಂಪು, ನದಿಯ ಹರಿಯುವಿಕೆ, ಈಜು, ನೀರು ಕುಡಿಯುವುದು, ಕಾಡಿನಲ್ಲಿ ಸಂಚಾರ, ಹಸಿವೆ, ಕಣ್ಣೀರು ಸಂತೆ, ನಡಿಗೆ, ಬೆಂಕಿ, ನಾಯಿ, ಊರಿನ ಜನರು, ಗಿಡ ಮರಗಳು, ಪ್ರತಿಯೊಂದನ್ನೂ ನಮ್ಮ ಮನಸ್ಸಿನ canvas ನಲ್ಲಿ ಚಿತ್ರವಾಗಿ ಬಿಡಿಸುತ್ತಾರೆ ಮೂರ್ತಿ. ಬಣ್ಣ ಕೊಡುತ್ತಾರೆ. ದೃಷ್ಟಿ ಕೊಡುತ್ತಾರೆ.

“ಭಿಕ್ಷಾ ಪಾತ್ರೆಯ ತುದಿ ಮುರಿದಿತ್ತು. ಆದರೆ ಕೂಡಿಸಿದರೆ ಅದು ಕೂಡುತ್ತಿತ್ತು. ಮುರಿದೇ ಇಲ್ಲ ಎನ್ನುವ ಹಾಗೆ ಅದು ಕೂಡುತ್ತಿತ್ತು. ಕೂಡಿಸಿದವನಿಗೆ ಮಾತ್ರ ಮುರಿದ ಜಾಗ ಕಾಣುತ್ತಿತ್ತು.” ಇಂತಹ ಮಾತುಗಳು ಚಿತ್ರಕಾರನೇ ಬರೆಯಲು ಸಾಧ್ಯ.

“ಬೆಂಕಿ ಅಗತ್ಯಕ್ಕಿಂತ ಹೆಚ್ಚಾಗಿ ಉರಿಯುತ್ತಿತ್ತು. ತಳ ಎಲ್ಲ ಆವರಿಸಿ, ಒಳಗಿನದೆಲ್ಲವನ್ನು ಒಂದೇ ಸಲ ಬೆಂದು ನೀರಾಗಿಸುವಂತೆ ಎಸರು ಉಕ್ಕಿ ಬೆಂಕಿಗೆ ಆಹುತಿಯಾಗುತ್ತಿತ್ತು.” ಆರಂಭದಲ್ಲಿ ಸುಮಲತೆಯ ಮನಸ್ಥಿತಿಯನ್ನು ವರ್ಣಿಸುವ ಸಾಲುಗಳು.

ಬಿಕು ಮತ್ತು ಮಾಲಿಂಗನ ನಡುವೆ ನಡೆದ ಘರ್ಷಣೆಯಲ್ಲಿ ಒಂದೊಂದು ಹೆಜ್ಜೆಯನ್ನೂ, ಎರಡು ಮನಸಿನ ಭಾವಗಳನ್ನೂ ಚಲನಚಿತ್ರದ ಹಾಗೇ ಕಾಣಿಸುತ್ತಾರೆ. ಮನಸ್ಸಿನ ಲೆಕ್ಕಾಚಾರ ಮತ್ತು ದೈಹಿಕ ಕ್ರಿಯೆ ಎರಡನ್ನೂ ವಿವರಿಸಿರುವ ಪರಿ ಅನನ್ಯ. ಎಲ್ಲ ಪಾತ್ರಗಳೂ ನಮ್ಮ ಜೊತೆ ಮಾತಾಡುತ್ತವೆ.

ಈ ಕಾದಂಬರಿ ಪ್ರಥಮ ಪುರುಷ ಸಂಭಾಷಣೆಯ ಧಾಟಿಯಲ್ಲಿದೆ. first person ನಿರೂಪಣೆ. ಹಾಗಾಗಿ ನಾವು ಪ್ರತಿ ಸಾಲನ್ನೂ ಓದುತ್ತಿದ್ದೇವೆ ಎನ್ನುವುದಕ್ಕಿಂತ ಮಾತಾಡುತ್ತಿದ್ದೇವೆ, ಅನಿಸುತ್ತದೆ. ಕತೆಯ ಉದ್ದಕ್ಕೂ ನಮ್ಮೊಂದಿಗೆ ಪಾತ್ರಗಳು ಚಲಿಸುತ್ತವೆ. ಪಾತ್ರಗಳ ಚಲನೆ, ಬದುಕಿನ ಚಲನೆ, ಕಾಲದ ಚಲನೆ.

“ಬೌಲ್” (ಪಾತ್ರೆ) ಇಡೀ ಕಾದಂಬರಿಯಲ್ಲಿ ಪಾತ್ರಗಳ ಪ್ರಾಣವಾಯು. ಕೊಡುವ, ಕೊಳ್ಳುವ, ತುಂಬುವ, ಖಾಲಿಯಾಗುವ, ಹರಿಯುವ, ನಿಲ್ಲುವ, ಒಡೆದ, ಹಿಡಿದ, ಕೊಡದ, ಕೊಟ್ಟ…. ಹೀಗೆ ಯಾವ ಪದದ ಜೊತೆ ಬೇಕಾದರೂ “ಬೌಲ್” ಸೇರಿಸಬಹುದು. ಸೇರುತ್ತದೆ. ಹಾಗಾಗಿ ಬೌಲ್ ಒಂದು ರೂಪಕವಾಗಿ ಓದುಗರನ್ನು ಆವರಿಸಿಕೊಳ್ಳುತ್ತದೆ. “ಬೌಲ್” ಅನ್ನು ಆಕಾರಕ್ಕೆ, ಪದಕ್ಕೆ ತಂದುಕೊಳ್ಳುವಷ್ಟರಲ್ಲಿ ಅದು ನಿರಾಕಾರವಾಗಿ ತಪ್ಪಿಸಿಕೊಳ್ಳುತ್ತದೆ. ಅದು ಶೂನ್ಯ. ಅದು ಖಾಲಿ. ನಿರಾಕಾರ. ತುಂಬುವುದು ನಮಗೇ ಬಿಟ್ಟದ್ದು. ಹಾಗೆಂದು ತುಂಬಿಸಲು, ಖಾಲಿ ಮಾಡಲು ಎಲ್ಲರಿಗೂ ಆಗದು. ನಮಗೆ ದಕ್ಕುವಷ್ಟನ್ನೇ ನಾವು ಪಡೆದದ್ದನ್ನೇ, ನಮ್ಮೊಳಗೆ ಇರುವುದನ್ನೇ ತುಂಬುತ್ತೇವೆ.

ಹಾಗೆ ಅದನ್ನು ಖಾಲಿ ಮಾಡುವುದು ಹೇಗೆ? ತೊಳೆದಿಡುವುದು ಹೇಗೆ? ಶುದ್ಧವಾಗಿಟ್ಟುಕೊಳ್ಳುವುದು ಹೇಗೆ? ಈ ಪ್ರಶ್ನೆಗಳನ್ನು ಮೂಡಿಸುತ್ತಾ ಒಂದು ಆಲೋಚನಾ ಕ್ರಮಕ್ಕೆ ನಮ್ಮನ್ನು ಸಿದ್ಧ ಮಾಡುತ್ತದೆ ಬೌಲ್.

ಕಥಾವಸ್ತು, ಮತ್ತು ಪ್ರಸ್ತುತತೆ, ಕಲಿಕೆ ಮತ್ತು ಪರಿಣಾಮ:

ಗುರುವಿಹಾರದಿಂದ ಲೋಕಸಂಚಾರಕ್ಕೆ ಹೊರಟ ಬಿಕು, ಅನಿರೀಕ್ಷಿತ ಘಟನೆಗಳನ್ನು ಎದುರಿಸುತ್ತಾನೆ. ಪ್ರಜ್ಞಾಪೂರ್ವಕವಾಗಿ ಒಂದು ಕುಟುಂಬದ ಜವಾಬ್ದಾರಿ ಹೊತ್ತು ಒಳಿತಿಗೆ ನಿಲ್ಲುತ್ತಾನೆ. ಸುಮಲತೆಯ ಮಗುವನ್ನು ಸಾಕಿ ಸಲಹುತ್ತಾನೆ.

ಗುರುಕುಲದಲ್ಲಿ ಕಲಿತದ್ದನ್ನು ಬದುಕಿಗೆ ಅನ್ವಯಿಸುತ್ತಾನೆ. ಆನಂದನನ್ನು ರೂಪಿಸುತ್ತಾನೆ. ಅಜ್ಜನ ಜ್ಞಾನ, ಜೀವನ ನಿರ್ವಹಣೆ, ಸಹಜ ಬದುಕು ಸಾಗುವ ಚಿತ್ರಗಳನ್ನು ನಾವು ನೋಡುತ್ತೇವೆ. ಸಂಯಮ, ಸಮನ್ವಯದ ಜೀವನ ಕ್ರಮದ ಹಾದಿ ತೋರುತ್ತದೆ.

ಅಲ್ಲಲ್ಲಿ ಕಥೆ ಊಹಿಸದ ತಿರುವು ಪಡೆಯುತ್ತದೆ. ನಮ್ಮನ್ನು ಪ್ರಶ್ನಿಸುತ್ತಾ, ನಗುತ್ತಾ, ದ್ವಂದ್ವಗಳಿಗೂ ದೂಡುತ್ತಾ, ಕುತೂಹಲ ಕಾಪಿಟ್ಟುಕೊಳ್ಳುತ್ತದೆ.
ಇಂದಿಗೆ ಇದು ಎಷ್ಟು ಪ್ರಸ್ತುತ? ಎಂದು ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು. ಅದಕ್ಕೆ ಉತ್ತರವಾಗಿ ಲೇಖಕರು ಒಳನೋಟಗಳನ್ನು ತೋರುತ್ತಾರೆ. ಪ್ರಸ್ತುತ ಬದುಕಿನ ಆತಂಕಗಳು, ತಲ್ಲಣಗಳು, ಧಾವಂತಗಳು, ನಮ್ಮನ್ನು ಸಂಘರ್ಷದ ಸುಳಿಯಲ್ಲಿ ಸಿಲುಕಿಸಿವೆ. ಬೌಲ್‌ನ ಪಾತ್ರಗಳು ನಮ್ಮ ಅಂತರಂಗದ ಜೊತೆ ಸಂಭಾಷಿಸುತ್ತ ಅವಿರತ ಶಾಂತಿಯೆಡೆ ಚಲಿಸಲು ಸಾಧ್ಯವಿದೆ ಎಂದು ಮನದಟ್ಟು ಮಾಡುತ್ತವೆ.

“ಗಿಡ ಒಂದು ಎಲ್ಲರಿಗೂ ಒಂದೇ ರೀತಿಯ ಫಲವನ್ನು ಕೊಡುತ್ತದೆ. ಕಡಿಯುವವನಿಗೂ ನೀರೆರೆಯುವವನಿಗೂ. ಯಜಮಾನನಿಗೂ ಕಳ್ಳನಿಗೂ. ಗಿಡ ಒಂದೇ ಫಲವನ್ನು ನೀಡುತ್ತದೆ.” ನಾವೂ ಇಂಥ ಪ್ರಕೃತಿಯ ಭಾಗವಲ್ಲವೇ? ಎಂದು ಪ್ರಶ್ನಿಸುವ ಕಾದಂಬರಿ, ಬಟ್ಟೆ ತುಂಡು ಹೇಗೆ ಸವೆದು ಸವೆದು ಬತ್ತಿಯಾಗಬಲ್ಲುದು, ಸವೆದು ಹೋಗುವುದರ ಪ್ರಕ್ರಿಯೆ ಮತ್ತು ಒಂದು ವಸ್ತುವಿನ ಪೂರ್ಣ ಬಳಕೆಯನ್ನು ತಿಳಿಸುತ್ತದೆ. ಕರ್ಮ ಸಿದ್ಧಾಂತವನ್ನು ತೆರೆದಿಡುತ್ತದೆ.

ಅನಕ್ಷರಸ್ಥ ಜಾನಪದ ಪ್ರಜ್ಞೆ ಬುದ್ಧನಿಗಿಂತ ಮುಂಚೆಯೂ ಇತ್ತು. ಬುದ್ಧಿವಂತಿಕೆ, ವಿದ್ವತ್ತು, ಈ ಪಜ್ಞೆಯನ್ನು ಅಳಿಸಿಹಾಕಿದೆ. ವಿದ್ವತ್ತು ಮತ್ತು ಪುಸ್ತಕ ಜ್ಞಾನ ನಮ್ಮನ್ನು ಗುಲಾಮಗಿರಿಗೆ ದೂಡಿದೆ ಎಂದು ತಿಳಿಸುತ್ತಲೇ ಜಾನಪದರ ಜೀವನ ಕ್ರಮ, ಜೀವಂತಿಕೆ, ಮುಗ್ಧ ಸರಳ ಬದುಕು. ಮರುಸೃಷ್ಟಿಯಾಗುವುದು ಸಾಧ್ಯವಿದೆ ಎಂಬ ನಂಬಿಕೆ ಹುಟ್ಟಿಸುತ್ತದೆ.

ಹಾಲು ತುಪ್ಪ ಆಗುವಾಗ, ಹಾಲು, ಮೊಸರು, ಬೆಣ್ಣೆ, ಹಂತಗಳನ್ನು ದಾಟಬೇಕು. ಹಾಲು ಕುಡಿದವನಿಗೆ ತುಪ್ಪದ ಅನುಭವ ಸಾಧ್ಯವಿಲ್ಲ. “ಸ್ಥಿತಿಯೇ ಬೇರೆ. ಅನುಭವವೇ ಬೇರೆ.” ಎಂದು ಮಾರ್ಮಿಕವಾಗಿ ಅರ್ಥ ಮಾಡಿಸುತ್ತದೆ.

ಸದ್ದು ಸದಾ ನಮ್ಮ ಜೊತೆ ಸಡ್ಡು ಹೊಡೆದು ಯುದ್ಧಕ್ಕೆ ಕರೆಯುತ್ತದೆ, ನಮ್ಮ ಮನದ ವಿವೇಕದ ಶಾಂತಿ ಭಂಗ ಮಾಡಿದರೇ ಶಬ್ದಕ್ಕೆ ತೃಪ್ತಿ. ನಾವು ಸೋಲದೆ ನಿಶ್ಯಬ್ದವನ್ನು ಆಲಿಸಲು ಕಲಿತರೆ ಎಂಥ ಚೆನ್ನ! ಇಂಥದೊಂದು ಅದ್ಭುತ ಭಾವ ಸ್ಫುರಣ ಮಾಡಿಸುತ್ತದೆ.

“ಅವನು ಆಯುಧ ನಂಬಿದ್ದಾನೆ, ನಾನು ಪ್ರಜ್ಞೆ ನಂಬಿದ್ದೇನೆ”

“ಸದ್ದು ನಿಂತ ಮರುಕ್ಷಣ, ಬೇಕು ಎನಿಸಿದಾಗ ಗುರುಪ್ರಜ್ಞೆ ದಕ್ಕುತ್ತದೆ”

“ಧ್ಯಾನ ಅಂದರೆ ಏನು” ಎಂಬ ಪ್ರಶ್ನೆ, ಉತ್ತರ..ಇವೆಲ್ಲ ಮಾತುಗಳೂ ಮತ್ತೆ ಮತ್ತೆ ನಮ್ಮನ್ನು ಆಲೋಚನೆಗೆ ದೂಡುತ್ತದೆ. ಎಷ್ಟು ಸೂಕ್ಷ್ಮ ವಿಚಾರಗಳು!

ಬೀಳ್ಕೊಡುವುದಕ್ಕೂ ದೂರವಾಗುವುದಕ್ಕೂ ಇರುವ ಅಂತರದ ಬಗ್ಗೆ ಒಂದು ಕಡೆ ಬಂದಿದೆ. ಹಾಗೇ ಮಾಲಿಂಗ ತಂದೆಯ ಹಾಗೆ ಇರಲಿಲ್ಲ. ಎಂದಾಗ ಅವನ ಒಳಗು ಏಕೆ ಹಾಗಾಗಿರಬಹುದು ಎಂಬ ಚಿಂತನೆಯಲ್ಲಿ ಇಂದಿನ “ಮನೋವಿಜ್ಞಾನದ” ಆಯಾಮಗಳು ಗೋಚರಿಸುತ್ತವೆ.

ಸುಮಲತೆ ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತಾಳೆ. ತಾಯಿಯ ಸೂಕ್ಷ್ಮತೆ ನನಗೆ ಯಾಕೆ ಬರಲಿಲ್ಲ ಎಂದು. ಅಜ್ಜ ಸುಮಲತೆಯನ್ನು ಕೇಳುವ ಪ್ರಶ್ನೆಗಳನ್ನು ಕೂಡ ಇಂದಿನ ಸಮಾಜಕ್ಕೆ ಅನ್ವಯ ಮಾಡಿ ಅಲೋಚಿಸಿದರೆ, ಇಲ್ಲಿರುವ ಸತ್ವ ಅರ್ಥವಾದೀತು.

ಗುರುಗಳು ವಿಹಾರಕ್ಕೆ ಬರುವವರಿಗೆ ಮತ್ತು ಭಿಕ್ಷೆ ಕೊಟ್ಟವರಿಗೆ ತಾವೇ ತಯಾರು ಮಾಡಿದ ಮಣ್ಣಿನ ಪಾತ್ರೆಗಳನ್ನು ಕೊಡುತ್ತಾರೆ. ಸ್ವಲ್ಪ ದಿನ ಕಳೆದ ಮೇಲೆ ಮಣ್ಣಿನ ಪಾತ್ರೆಗಳು ವಾಪಸ್ ಗುರುಕುಲಕ್ಕೆ ಬರುತ್ತವೆ. ನಮ್ಮ ಬಳಿ ಸಾಕಷ್ಟು ಪಾತ್ರೆಗಳು ಇವೆ, ಎಂದು ಪಡೆದುಕೊಳ್ಳಲು ನಿರಾಕರಿಸುತ್ತಾರೆ. ಶಿಷ್ಯರು ಗೊಂದಲಕ್ಕೀಡಾದಾಗ ಗುರುಗಳು ಊರು ಸುಸಂಸ್ಕೃತ ವಾಗಿದೆ ಎಂದು ವಿವರಿಸುತ್ತಾರೆ.

ಈ ಮಣ್ಣಿನ ಪಾತ್ರೆಗಳು, ಜನರಿಗೆ ಪ್ರಾಮಾಣಿಕತೆ, ನಡವಳಿಕೆ ಮತ್ತು ಧರ್ಮ ಕಲಿಸಿವೆ ಎಂದು ವಿವರಿಸುತ್ತಾರೆ. ವಸ್ತುಗಳ ಎಚ್ಚರಿಕೆಯ ಬಳಕೆ, ಸದ್ಬಳಕೆ, ಮರುಬಳಕೆ ಬಗ್ಗೆ ಬಂದಿರುವ ಕಥೆಯೊಳಗಿನ ಕಥೆಗಳ ಸಾರ ಸುಂದರ, ಮತ್ತು ಅತ್ಯಂತ ಪ್ರಸ್ತುತ.

ಗುರುಕುಲಗಳು, ಪೀಠಗಳು ಸಮಾಜದ ಜೊತೆ ಜೊತೆಗೇ ಇರುತ್ತ ಅಥವಾ ಸಮಾಜದಿಂದ ದೂರ ಇದ್ದರೂ ಸತ್ಯ ನೇಮಗಳ “ಬೀಜ ಪ್ರಸರಣ” ಕಾರ್ಯದಲ್ಲಿ ಹೇಗೆ ತೊಡಗಬಹುದು ಎಂಬ ವಿಚಾರವೂ ಇಂದಿನ ಅಗತ್ಯವನ್ನೇ ತಿಳಿಸುತ್ತದೆ. ಕೃಷಿ, ಪರಿಸರ ಪ್ರಜ್ಞೆ, ಮತ್ತು ಅಂತಃಪ್ರಜ್ಞೆ ಜಾಗೃತಗೊಳ್ಳುವ ಅನೇಕ ಅಂಶಗಳನ್ನು ಕೃತಿ ಒಳಗೊಂಡಿದೆ.

“ಬೌಲ್” (ಪಾತ್ರೆ) ಇಡೀ ಕಾದಂಬರಿಯಲ್ಲಿ ಪಾತ್ರಗಳ ಪ್ರಾಣವಾಯು. ಕೊಡುವ, ಕೊಳ್ಳುವ, ತುಂಬುವ, ಖಾಲಿಯಾಗುವ, ಹರಿಯುವ, ನಿಲ್ಲುವ, ಒಡೆದ, ಹಿಡಿದ, ಕೊಡದ, ಕೊಟ್ಟ…. ಹೀಗೆ ಯಾವ ಪದದ ಜೊತೆ ಬೇಕಾದರೂ “ಬೌಲ್” ಸೇರಿಸಬಹುದು. ಸೇರುತ್ತದೆ. ಹಾಗಾಗಿ ಬೌಲ್ ಒಂದು ರೂಪಕವಾಗಿ ಓದುಗರನ್ನು ಆವರಿಸಿಕೊಳ್ಳುತ್ತದೆ. “ಬೌಲ್” ಅನ್ನು ಆಕಾರಕ್ಕೆ, ಪದಕ್ಕೆ ತಂದುಕೊಳ್ಳುವಷ್ಟರಲ್ಲಿ ಅದು ನಿರಾಕಾರವಾಗಿ ತಪ್ಪಿಸಿಕೊಳ್ಳುತ್ತದೆ.

ಧಾರ್ಮಿಕ ಚೌಕಟ್ಟು ಮತ್ತು ಆಧ್ಯಾತ್ಮ:

ಸಮಕಾಲೀನ ವಿಚಾರ ಅಥವಾ ರಾಜಕಾರಣದ ನಿಯಂತ್ರಣಗಳು ಇಲ್ಲಿಲ್ಲ. ಇತಿಹಾಸದ ವಿಶ್ಲೇಷಣೆಯ ಅನಂತ ಸಾಧ್ಯತೆಗಳ ಅನಾವರಣ ಇಲ್ಲಿದೆ. ಎನ್ನುತ್ತಾರೆ ಪ್ರೊ.ಮನು ಚಕ್ರವರ್ತಿ. ಶ್ರೇಣೀಕೃತ ರಚನೆಗಳ ಕಲ್ಪನೆಗಳನ್ನು ಸಾರಾ ಸಗಟಾಗಿ ನಿರಾಕರಿಸಿ, ಪ್ರಪಂಚದ ಸಂವೇದನಾ ಶೂನ್ಯ ಮಾರ್ಗಗಳ ಮೇಲೆ ಮಾತ್ರ ಸಮರ್ಥವಾಗಿ ದಾಳಿ ಮಾಡುತ್ತದೆ ಈ ಕೃತಿ.

ಆಧುನಿಕತೆಯ ಸೋಗಿನಲ್ಲಿ ಮನುಷ್ಯ ಸ್ವಾರ್ಥ ಮೆರೆಯುತ್ತಿದ್ದಾನೆ. ಅಂತಿಮವಾಗಿ ಮನುಕುಲದ ಸರ್ವನಾಶಕ್ಕೆ ತಾನೇ ಕಾರಣನಾಗುತ್ತಿದ್ದಾನೆ. ಇದನ್ನು ಹೆಜ್ಜೆ ಹೆಜ್ಜೆಗೂ ಈ ಕೃತಿ ಬಿಂಬಿಸಿದೆ.

ಬದುಕಿನ ವೈಪರೀತ್ಯಗಳು ನಮಗೆ ಸಂಪೂರ್ಣ ಅಪರಿಚಿತ, ಇದು ಅದ್ಭುತ ಆಶ್ಚರ್ಯ ತರುತ್ತದೆ. ಮಾನವನ ಪವಿತ್ರ ಅಸ್ತಿತ್ವದ ನೋಟ ಮಾತ್ರ ಇಲ್ಲಿದೆ ಎನ್ನುತ್ತಾರೆ ಪ್ರೊ ಮನು ಚಕ್ರವರ್ತಿ.

ಬುದ್ಧನ ನಿರ್ವಾಣದ ನಂತರ ನಾನ್ನೂರಕ್ಕೂ ಹೆಚ್ಚು ವರ್ಷಗಳ ಕಾಲ ಒಂದು ನಿಶ್ಯಬ್ದವಿತ್ತು. ಜನ ಪ್ರಜ್ಞಾವಂತರಾಗಿ ಬಾಳುತ್ತಿದ್ದರು.ಅಶ್ವಘೋಷ ಅಕ್ಷರದಲ್ಲಿ ಕಟ್ಟಿಕೊಟ್ಟದ್ದು ಮಾತ್ರ ನಮಗೆ ಗೋಚರಿಸಿದೆ, ಹಾಗಾದರೆ ಆ ನಿಶ್ಯಬ್ದ ಹೇಗಿತ್ತು? ಈ ಕುತೂಹಲ ಹುಟ್ಟಿಸುತ್ತಾರೆ ಲೇಖಕರು. ಸತ್ಯವನ್ನು ಅರ್ಥ ಮಾಡಿಸುವ ಕ್ರಮಗಳು ಇದ್ದವು. ಈ ನೆಲದ ಜನಗಳ ಸಂಸ್ಕಾರಗಳಲ್ಲಿ ಮನುಷ್ಯ ಬದುಕಿನ ರುಚಿಗಳು ಇವೆ.

ಅದನ್ನು ಅರಿಯಲು ತರ್ಕ ಮೀಮಾಂಸೆ ವಿದ್ವತ್ತು ಪುರಾಣ ಗ್ರಂಥಗಳ ಜ್ಞಾನ ಬೇಕಾಗಿಲ್ಲ, ಆ ನಾನ್ನೂರು ವರ್ಷದ ನಿಶ್ಯಬ್ದಕ್ಕೆ ಕಿವಿ ಕೊಟ್ಟು ಕೇಳಿಸಿಕೊಳ್ಳಬೇಕು. ನಾನು ಬುದ್ಧನಾದರೆ ನನಗೂ ಬುದ್ಧ ಕಾಣುತ್ತಾನೆ. ಸಾತ್ವಿಕತೆ ಪ್ರಚೋದನೆ ಆಗಬೇಕು. ಬುದ್ಧ ಎನ್ನುವುದು ಒಂದು ಪ್ರಜ್ಞೆ, ಅದು ಒಂದು ನದಿಯಂತೆ ಪ್ರವಹಿಸಬೇಕು, ಎಂಬ ಸಂಗತಿಗಳು ಮನ ತುಂಬಿಸುತ್ತದೆ.

ತರ್ಕದ ವ್ಯಾಖ್ಯಾನಗಳ ಅಗತ್ಯವಿಲ್ಲ. ಅಕ್ಷರವೇ ಪ್ರಧಾನವಲ್ಲ. “ನೋಟದ” ಗ್ರಹಿಕೆ, ಅರಿವು ಒಳಗೆ ಇಳಿಯಬೇಕು. ನನ್ನ ಧರ್ಮವನ್ನು ನಾನೇ ಕಟ್ಟಬೇಕು. ಪ್ರಾಚೀನತೆ ಮತ್ತು ಸಂವೇದನೆ ಮರುಸೃಷ್ಠಿ ಆದರೆ ಅಧ್ಯಾತ್ಮ ಮತ್ತು ಸಮನ್ವಯ ಸಾಧಿಸಬಹುದು. ಇವೆಲ್ಲ ಚಿಂತನೆಗಳನ್ನು ಉದ್ದೀಪಿಸುತ್ತದೆ, “ಬೌಲ್” ಕೃತಿ.

ಮನುಷ್ಯ ಬದುಕಿನ ಎಲ್ಲ ಹೋರಾಟಗಳನ್ನೂ ಆರಂಭದ ಬಿಕು ಮತ್ತು ಮಾಲಿಂಗನ ಯುದ್ಧದಲ್ಲಿಯೇ ಕಾಣಬಹುದು. ಆ ಯುದ್ಧ ಒಂದು ಚಿತ್ರಮಾಲಿಕೆಯ ಹಾಗಿದೆ. ವಸ್ತುವನ್ನು ಅಪ್ಪಿಕೊಳ್ಳುವುದು, ಬಿಟ್ಟು ಕೊಡಲು ಹೆಣಗಾಡುವುದು, ಕಿತ್ತುಕೊಳ್ಳುವುದು, ಇದೇ ಅಲ್ಲವೇ ನಮ್ಮ ಹೋರಾಟ? ಶಬ್ದ ನಿಶ್ಶಬ್ದದ ಹೋರಾಟ. ಕೊಟ್ಟು ಬಿಟ್ಟಿದ್ದರೆ ಏನಾಗುತ್ತಿತ್ತು? ಮಾಲಿಂಗನಿಗೆ ಅದನ್ನು ಪಡೆಯುವ ಅರ್ಹತೆ ಇತ್ತೇ? ಬಿಕು ಆನಂದನ ಅಗಲಿಕೆಯಿಂದ ವಿಚಲಿತನಾಗಿ ಬಳಲಿ ನಿತ್ರಾಣನಾಗುವುದು ಏಕೆ? ಬಿಕುವಿನ ಆರೈಕೆಯಲ್ಲಿ ಅರಳಿದ ಸುಮಲತೆ ಆತನನ್ನು ಬಿಟ್ಟು ಹೊರಡಲು ಮನಸ್ಸು ಮಾಡಿದ್ದಾದರೂ ಹೇಗೆ? ಗುರುಸ್ಥಾನದಲ್ಲಿ ಕುಳಿತಿದ್ದ ಆನಂದನನ್ನು ಕದಲಿಸಿದ ಆ ಮಹಾಸಂಗತಿ ಯಾವುದು? ಅಜ್ಜ ಬದುಕಿದ್ದು ಹೇಗೆ? ಗಳಿಸಿದ್ದೇನು? ಹಂಚಿದ್ದೇನು? ಮಾಲಿಂಗ ಲೋಕ ಬಿಟ್ಟಾಗ ಅವನ ಕಣ್ಣುಗಳು ಸಾರಿದ ಸತ್ಯವೇನು?

ನಾವೂ ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ “ಬೌಲ್” ನ ಅಂಚಿನಲ್ಲಿ ನಡೆಯುತ್ತಿದ್ದೇವೆ. ಪಾತ್ರೆಯ ಒಳಗೆ ಕತ್ತಲಿದೆ. ಪಾತ್ರೆಯ ಹೊರಗೆ ಏನೂ ಇಲ್ಲ. ಆದಿಯೂ ಇಲ್ಲ. ಅಂತ್ಯವೂ ಇಲ್ಲ.

“ಬೌಲ್” ಕಾಲದ ಪಾತ್ರೆ. “ಬೌಲ್” ಸಂಗ್ರಹದ ಕೇಂದ್ರ ಅಲ್ಲ. ವಸ್ತುವನ್ನು ಹಿಡಿದಿಟ್ಟುಕೊಳ್ಳುವ ಆವರಣ ಮಾತ್ರ. ಮತ್ತೆ ಮತ್ತೆ ಖಾಲಿಯಾಗಬೇಕು. ಮತ್ತೆ ಮತ್ತೆ ತುಂಬಿಕೊಳ್ಳಬೇಕು. “ಬೌಲ್” ಶುದ್ಧವಾಗಿರಬೇಕು. ನಮ್ಮೊಳಗೆ ” ಬೌಲ್” ಇದೆಯೇ? ಹೇಗಿದೆ? “ಬೌಲ್” ಓದುವುದಲ್ಲ. ನೋಡುವುದು. ಮತ್ತೆ ಮತ್ತೆ ನೋಡಿಕೊಳ್ಳುವುದು.

(ಕೃತಿ: ಬೌಲ್‌ (ಕಾದಂಬರಿ), ಲೇಖಕರು: ಡಾ. ಎಂ.ಎಸ್‌. ಮೂರ್ತಿ, ಪ್ರಕಾಶಕರು: ಕಿರಂ ಪ್ರಕಾಶನ, ಬೆಲೆ:250/-)