(ಟಿ. ಎಸ್. ಎಲಿಯಟ್‍ನ The Hippopotamus ಎಂಬ ಕವಿತೆಯನ್ನು ಅನುಸರಿಸಿ)

ಗಡಸು ಮೂತಿ ಚತುಷ್ಪಾದಿ ಘೇಂಡಾಮೃಗ
ಶಿಲೆಯಲ್ಲಿ ಹೆಜ್ಜೆ ಮೂಡುವಷ್ಟು ಅದರ ವಜ್ಜೆ
ಗಟ್ಟಿಮುಟ್ಟು ಮೈ ಕೈ ಅಂತನಿಸಿದರೂ ನಮಗ
ಅದು ಅಂತರ್ಯದಲ್ಲಿ ಬರೀ ಎಲುಬು ಮಾಂಸ ರಜ್ಜೆ.

ಎಲುಬು ಮಾಂಸ ರಜ್ಜೆ ದುರ್ಬಲ ಮತ್ತು ಸಣಕಲ
ರೋಗ ರುಜಿನ ಸಂಕುಲದಿಂದ ಛಿದ್ರ.
ನಮ್ಮ ಜೈ ಕನ್ನಡ ಸಾಹಿತ್ಯ ಪರಿಷತ್ತಿನ ತಳ-
ವಾದರೆ ಚಾಮರಾಜ ಪೇಟೆಯಲ್ಲಿ ಭದ್ರ.

ಬಡ ಘೇಂಡಾದ ಅಶಕ್ತ ಬಾಹುಗಳ ಒಳಕ್ಕೆ
ಸಿಗದು ಇಹದ ಯಾವುದೇ ಸಂಪತ್ತು.
ಆದರೆ ಒಂದಿಂಚೂ ಕದಲಬೇಕಾದ್ದಿಲ್ಲ ಅನುದಾನಕ್ಕೆ
ನಮ್ಮ ಜೈ ಕನ್ನಡ ಸಾಹಿತ್ಯ ಪರಿಷತ್ತು.

ಎಷ್ಟೇ ಜಿಗಿದರೂ ಎಟುಕೋದಿಲ್ಲ ಎಂದಿಗೂ
‘ಮೃಗದ ಕೈಗೆ ಮಾವಿನ ಮರದ ಹಣ್ಣು.
ಪರಿಷತ್ತಿಗಾದರೆ ಅಯಾಚಿತ ಬಾಗಿಲ ವರೆಗೂ
ಹಾಲು ಹೈನ ತುಪ್ಪ ಮೊಸರು ಗಿಣ್ಣು.

ಬಯಲಾಗಿಬಿಡುತ್ತದೆ ಜೋಡಿಯ ದಿನ
ಕರ್ಣಕಠೋರ ಘೇಂಡಾಮೃಗಂದು ಕರ್ಣಕಠೋರ ಶಬ್ದ.
ಬದಲಿಗೆ ಪ್ರತಿ ದಿನ ಪರಿಷತ್ತಿನ ಕಥೆ ಕವನ
ಅರ್ಪಿತವಾಗಿ ದೇವರಿಗೆ ಎಲ್ಲವೂ ಸ್ತಬ್ದ.

ದಿನವೆಲ್ಲಾ ಘೇಂಡಾಮೃಗಕ್ಕೆ ನಿದ್ದೆಯ ಮತ್ತು
ರಾತ್ರಿಯಾಯಿತೆಂದರೆ ಬೇಟೆಯ ಹುಡುಕಾಟ.
ದೇವರ ರೀತಿ ವಿಚಿತ್ರ – ಕ. ಸಾ. ಪರಿಷತ್ತಿಗೆ ಗೊತ್ತು
ಒಟ್ಟಿಗೇ ಹೇಗೆ ಮಾಡುವುದು ನಿದ್ದೆ ಹಾಗೂ ಊಟ.

ಗಗನಗಾಮಿ ‘ಮೃಗ ದೇವವಿಮಾನದಲ್ಲಿ ಹಾರಿ
ದೂತರು ಘೋಷಿಸುತ್ತ “ಉಘೇ ಉಘೇ!”
ಕೈ ಬೀಸಿ ಹೇಳುವುದು ಜನರ ಕಡೆ ದೃಷ್ಟಿ ಬೀರಿ
“ಸಂಭವಾಮಿ ಯುಗೇ ಯುಗೇ!”

ಅಚ್ಛೋದ ಸರೋವರದಲ್ಲಿ ಅಪ್ಸರೆಯರು
ಖುದ್ದಾಗಿ ಅದರ ಮೈತಿಕ್ಕಿ ತೊಳೆದು
ಕುಳ್ಳಿರಿಸಲು ಸ್ವತಃ ದೇವೇಂದ್ರನೆದುರು
ಹಾಡುವುದು ಅದು ಬಂಗಾರದ ವೀಣೆ ಹಿಡಿದು.

ಮುದ್ದು ಮಾಡುವರು ವಿಶ್ವ ಸುಂದರಿಯರು ಪ್ರತಿ ಸಾರೆ
ಅಚ್ಚ ಬಿಳಿ ಹಿಮಾಂಬರದಲ್ಲಿ ಹೊದ್ದು
ಇತ್ತ ನಮ್ಮ ನಿಜವಾದ ಕ. ಸಾ. ಪರಿಷತ್ತಾದರೆ
ಹೊರಳುವುದು ತನ್ನ ತಮಂಧದಲ್ಲಿ ಬಿದ್ದು.

 

(ಟಿಪ್ಪಣಿ: ‘ಹಿಪ್ಪೊಮೊಟಾಮಸ್’ ಎಂದರೆ ನೀರ್ಗುದುರೆ; ಇಲ್ಲಿ ಅದಕ್ಕೆ ಬದಲಾಗಿ ಘೇಂಡಾಮೃಗವನ್ನು ಬಳಸಿಕೊಳ್ಳಲಾಗಿದೆ, ಮೂಲದ ಚರ್ಚು ಇಲ್ಲಿ ಪರಿಷತ್ತು ಆಗಿದೆ. ಎಲಿಯಟ್ ರೋಮನ್ ಕ್ಯಾಥಲಿಕ್ ಚರ್ಚನ್ನು ಹಾಸ್ಯ ಮಾಡಲು 1920ರಲ್ಲಿ ಬರೆದ ಪದ್ಯ ಇದು. ಇಂದಿಗೆ ನೂರು ವರ್ಷ ಹಿಂದೆ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿತವಾದುದು 1915ರಲ್ಲಿ. ಇದನ್ನೊಂದು ತಮಾಷೆಯ ಪದ್ಯವಾಗಿ ತೆಗೆದುಕೊಳ್ಳಬೇಕಾಗಿ ವಿನಂತಿ.)