ಬದುಕು ಹೀಗೇ ಒಮ್ಮೊಮ್ಮೆ….

ಕಡು ಬೇಸಿಗೆಯಲು ಮಳೆ ಸರಿಯುತ್ತಿದೆ
ಅಚ್ಚರಿಯಿಲ್ಲದೆ ಬದುಕು ಸ್ಥಗಿತ
ವಾಗಿ ಬಿಟ್ಟಿತೋ ಎಂಬಂತೆ
ಇಳೆಯ ಹದ ಆರದಂತೆ
ಮನಸು ಬರಿದಾಗದಂತೆ

ಬದುಕು ಹೀಗೇ ಒಮ್ಮೊಮ್ಮೆ
ತಲೆಕೆಳಗಾಗಿಸಿ ಲೆಕ್ಕಾಚಾರಗಳ
ನಿಲ್ಲಲು ಕಾದಷ್ಟೂ ಬಿರುಸಾದಂತೆ ವರ್ಷ
ಹನಿಗಳ ಎಣಿಸಿದಷ್ಟೂ ಹೆಚ್ಚಾಗುವಂತೆ ಹರ್ಷ
ಎಣೆಗೆ ಸಿಗದೆ ಜಾರುವ ಕೌತುಕ

ಗುಡುಗು- ಮಿಂಚುಗಳ ಜೊತೆ
ಮೊಗೆದು-ಮೀಟುವ ಬಿಳಿ ಹನಿಯ ಚಾದರ
ಬಾನು-ಭುವಿಯ ನಡುವೆ
ಅಲಂಕರಿಸಿ ಹಾಸಿ ಹಿಡಿದ ಕ್ಷಣ
ಮಿಲಿಯನ್ನು ವೋಲ್ಟ್‌ ಗಳ ವಿದ್ಯುತ್ಸಂಚಾರ

ಬೀಳುವುದರಲ್ಲೂ ಇರುವ ಸುಖ
ಶುರುವಾಗುವುದೇ ಹೀಗೆ
ಮಾತು ಮೌನವಾದಂತೆ
ಪ್ರತಿಬಾರಿ ಪುಟಿದೇಳುವ
ವಿಜಯಕೆ ನಾಂದಿ ಹಾಡಿದಂತೆ

ತಪ್ಪೇನಿಲ್ಲ ಹನಿ ಬೀಳುವುದೇ ಕೆಳಗೆ
ಮೇಲೇಳುವ ಗರಿಕೆ ಚಿಗುರಿಗೆ
ಶಕ್ತಿ ಹರಿಸಿ ಬೇರಿಗೆ
ಇಲ್ಲಗಳ ಮಿತಿಯ ಕುಗ್ಗಿಸಿ,
ಏಳದಿದ್ದರೆ ಬಿದ್ದಷ್ಟೂ ಬೀಳಿಸಿ ಕೆಳಕ್ಕೆ

ಕಡು ಬೇಸಿಗೆಯ ಬೇಗೆ
ಸುಟ್ಟುಬಿಡುವಂತಹ ಮಳೆ
ಹೆಚ್ಚೇನೂ ಇಲ್ಲ ಕಲಿಯುವುದು
ಯಶಸ್ಸುಗಳಲಿ ಅಥವಾ ವಿಫಲತೆಯ
ಹಾದಿ ಸಾಗಿ ಸೇರುವಲ್ಲಿ
ಸಂಭವಿಸುವುದಷ್ಟರಲ್ಲೇ ಸುಖ
ಎಲ್ಲ ನಿಲ್ಲುವ ತನಕ