ಏಸೊಂದು ಸೆಂದಾಕಿ ಪದ ಬಿಡುತ್ತಿದ್ದರು. ‘ಏಳ್ರಮ್ಮಣ್ಣಿದೀರಾ ನಿದ್ದೆ ಬತ್ತಾ ಐತೆ’ ಅಂಬ್ತ ಗಂಡಸರು ಯೋಳೋತಂಕ ಅಲ್ಲಿಂದ ಅಲ್ಲಾಡಿದ್ರೆ ಸೈ. ತಂಬಿಟ್ಟು ನಂಗೆ ಇಷ್ಟ ಅಂತ ವಸಿ ತುಪ್ಪ ಜಾಸ್ತಿ ಹಾಕಿ ಉಂಡೆ ಕಟ್ಟಿ ನಂಗೇಂತ ಮನೆಯ ನಿಲುವಿನಲ್ಲಿ ಮಕ್ಕಳಿಗೂ ಕಾಣದಂಗೆ ಬಚ್ಚಿಕ್ಕಿ ತಿನ್ನಿಸುತ್ತಿದ್ದ ನಾಗಮ್ಮ ನನ್ನ ಪಾಲಿನ ಯಶೋದೆಯೇ ಸೈ. ಎಡವಿ ಬಿದ್ದರೆ ಮನೆ ಸಿಗುತ್ತಿದ್ದರೂ ನಡುರಾತ್ರಿ ಮಗೀನ ಒಂದುನ್ನೇ ಕಳಿಸಕಾಯ್ತದಾ ಅಂತ ಕರೆತಂದು, ಮನೆ ಬಾಗಿಲು ತೆರೆದು, ‘ಅಮ್ಮಣ್ಣಿ, ಬಿಡ್ಡ ವಚ್ಚಿಂದಿ, ಪಂಡೇಯಮ್ಮೋ’ ಅಂತ ಹೇಳಿಯೇ ಹೋಗುತ್ತಿದ್ದಳು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿಯಲ್ಲಿ ಚಂದ್ರಮ್ಮನ್ನ ಹುಯ್ಯೋ ಸಂಭ್ರಮದ ಕುರಿತ ಬರಹ ನಿಮ್ಮ ಓದಿಗೆ
ಚಂದಿರಮ್ಮ ಚಂದಿರಮ್ಮ ನೀಕೆಂದರು ಬಿಡ್ಡಲಮ್ಮ
ಡೇರ್ ಡೇರಿ ಪೂಲೆ ಮಂಚಿ ಡೇರನ್ನ ಪೂವ್ವಲೆ
ಎಂದರು ಲೇರಮ್ಮ ನಾಕಿ ಒಕ್ಕೇ ಸೂರ್ಯುಡೇ
ಸೂರ್ಯನ್ನ ಎನಕ ಮಂಚಿ ಚಂದ್ರನ್ನ ಪುಟ್ಟೆ
ಚಂದ್ರನ್ನ ಎನಕ ಮಂಚಿ ಭೀಮನ್ನೆ ಪುಟ್ಟೆ
ಹೀಗೆ ಸೇರಿಗೆ ಸವ್ವಾಸೇರು ಎಂಬಂತೆ ಪಟಪಟನೆ ಎರಡು ಬದಿಯ ಹೆಣ್ಣುಮಕ್ಕಳ ಬಾಯಿಂದ ಪುತಪುತನೆ ಪುರಸೊತ್ತಿಲ್ಲದೆ ಪದಗೋಳು ಎಗರಿ ಬೀಳುತ್ತಿದ್ದರೆ ಸ್ಪರ್ಧೆಗೆ ಬಿದ್ದವರಂತೆ ಜಿದ್ದಾಜಿದ್ದಿನಿಂದ ಪದಗೋಳ್ ಬಾಣ ಬಿಸಾಕುತ್ತಿದ್ದರೆ ಕೇಳುವ ಕಿವಿಯಲ್ಲಿ ಜಲ್ಲನೆ ಝೇಂಕಾರ. ಎದೆಯಲ್ಲಿ ಗೆಜ್ಜೆ ನಾದ. ಇಂಗೆ ಕಿವಿಯಾಗೆ ಇಂಗುವ ಚಂದ್ರಮ್ಮನ ಪದಗಳ ಗುಂಗು ವಾರವಾದರೂ ಮನದ ಹೊಸ್ತಿಲಿಂದಾಚೆಗೆ ಹೋಗೋದೇ ಇಲ್ಲ.
ಅಚ್ಚ ತೆಲುಗರಲ್ಲದ ಕನ್ನಡ ಇಣುಕುವ ಕರುನಾಡಿನ ತೆಲುಗರು ನನ್ನೂರಿನವರು. ನನ್ನೂರು ಚಿಕ್ಕಮಾಲೂರಿನಲ್ಲಿ ಕದಿರಿ ಹುಣ್ಣಿಮಿ ಬಲು ವಿಶೇಷ. ಮುಕ್ಕಾಲುವಾಸಿ ಜನ ನಮ್ಮ ಜಮೀನಿನಲ್ಲಿರುವ ಕದಿರಪ್ಪನಿಗೆ ನಡೆದುಕೊಳ್ಳುವವರೆ. ಫಾಲ್ಗುಣ ಮಾಸದಲ್ಲಿ ಬರುವ ಹೋಳಿ ಹುಣ್ಣಿಮೆ ಅಥವಾ ಕದಿರಿ ಹುಣ್ಣಿಮೆ ಸೇರುಗಟ್ಟಲೇ ಸಂಭ್ರಮವನ್ನು ವಾರಗಟ್ಟಲೇ ಎದೆಗೆ ಸುರಿಯುತ್ತದೆ. ಅವತ್ತು ಕದಿರಪ್ಪನ ಪರಿಸೆ. ಊರಿಗೆ ಊರೇ ಜಮೀನಿನಲ್ಲಿ ಸೇರಿ ಜನಜಾತ್ರೆಯಾಗುತ್ತದೆ. ನನ್ನೂರಿನಲ್ಲಿ ಯಾವ ಗುಡಿಯಲ್ಲೂ ಎಂದೂ ಬ್ರಾಮ್ಮರು ಪೂಜಾರಿಕೆ ಮಾಡುತ್ತಿರಲಿಲ್ಲ. ಇಂದೂ ಅಷ್ಟೇ. ಈ ಗುಡಿಯಲ್ಲಿ ಆರಂಭದಿಂದಲೂ ಉಪ್ಪಾರರು ಪೂಜಾರಿಕೆ ಮಾಡುತ್ತಿದ್ದುದು. ಉಪ್ಪಾರರ ಕೋಡಪ್ಪ ನನ್ನ ಬಾಲ್ಯಕಾಲದ ಪೂಜಾರಪ್ಪನಾಗಿದ್ದ. ಈಗ ಆಯಪ್ಪನ ಮಗ ನಾಗರಾಜು ಪೂಜಾರಪ್ಪ.
ಹುಣ್ಣಿಮಿ ಹಿಂದಿನ ರಾತ್ರಿಯತಂಕ 5 ಅಥವಾ 9 ದಿನ ಮುಂಚಿನಿಂದ ಈ ಚಂದ್ರಮ್ಮನ ಹುಯ್ಯೋ ಸಂಭ್ರಮದ ಪೂಜಾಚರಣೆ ಶುರುವಾಗುತ್ತೆ. ಬೆಳದಿಂಗಳ ತಂಬೆಳಕಿನ ಇರುಳಿನಾಗೆ ಬೆಳ್ಳನ್ನ ರಂಗೋಲಿ. ಸುತ್ತಾ ಬೆಳ್ಮನದ, ನಗೆಮೊಗದ, ತುಂಟ ಹೃದಯದ, ವಯೋಭೇದವಿಲ್ಲದೆ ಹಾಡಲು ನೆರೆದ ರಾಶಿ ಹೆಣ್ಣುಮಕ್ಕಳು ಹಾಗೂ ಅವರೊಂದಿಗೆ ಅವರ ಮನೆ ಗಂಡಸರೂ ಕುಂತು ನೋಡುವ ಈ ಜನಪದ ಸಂಸ್ಕೃತಿಯ ಆರಾಧನೆ ಅನೂಚಾನವಾಗಿ ನಡೆದು ಬರುತ್ತಿದೆ.
ಹಸಿಸೆಗಣಿಯಿಂದ ದಪ್ಪಗೆ ಅಷ್ಟಗಲ ನೆಲವನ್ನು ಸಾರಿಸಿ ಹಸಿರುಮಯ ಮಾಡುತ್ತಾರೆ. ಎಲ್ಲರೂ ಕಲೆತು ರಂಗೋಲಿ ಇಕ್ಕಿ, ಚಂದ್ರಮ್ಮನ್ನ ಕರೆಯುತ್ತಾ ನಟ್ಟ ನಡುರಾತ್ರಿಯತಂಕ ಪದಗಳನ್ನು ಹಾಡುತ್ತಾರೆ. ರಾತ್ರಿ ಬಿರಬಿರನೆ ಹಿಟ್ಟು ಉಂಡು ಕೇರಿಯವರೆಲ್ಲ ಕೂಡಿ ಜಾಗ ನೋಡಿ, ಇರೋ ಹತ್ತು ಹದಿನೈದು ಅಡಿ ಅಗಲದ ರಸ್ತೆಯಲ್ಲಿಯೇ ಯಾರದ್ದಾದರೂ ವಸಿ ದೊಡ್ಡಕಿರುವ ಅಂಗಳದಾಗೆ ಕುಂತ್ಕಳಾಕೆ ಜಾಗ ಬಿಟ್ಟು ದೊಡ್ಡದಾಗಿ ಚಂದ್ರಮ್ಮನ್ನ ಹುಯ್ಯುತ್ತಾರೆ. ಸ್ಯಾಮಂತಿ ಹೂವ, ಕಣಗಿಲ, ಸೆಂಡು ಹೂವ, ತಂಗಡಿ ಹೂವ ಕುಯ್ದು ತಂದು ಸೊಗಸು ಮಾಡುತ್ತಾರೆ. ಇರೋ ತುಸು ಜಾಗದಾಗೆ ವತ್ತರಿಸಿಕೊಂಡು ಒಬ್ಬರ ಬುಡಕ್ಕೆ ಒಬ್ಬರು ಅಂಟಿಕೊಂಡು ಕುಂತು ಪದ ಶುರು ಹಚ್ಕಂತಾರೆ. ಕೊನೇ ದಿನ ಹಬ್ಬ ಮಾಡ್ತಾರೆ. ರಂಗೋಲಿಗೆ ಕೆಮ್ಮಣ್ಣು, ಸುದ್ದೆ ಮಣ್ಣು, ಅರಸಿಣ, ಕುಂಕುಮ ತಂದು ಬಣ್ಣ ತುಂಬ್ತಾರೆ. ಜಾಸ್ತಿ ಹೂವ ಹಾಕಿ, ದೊಡ್ಡ ದೊಡ್ಡ ತಂಬಿಟ್ಟಿನ ಆರತಿ ಮಾಡಿ ಇಡುತ್ತಾರೆ. ಯಾವಾದರೂ ಎರಡು ಚಿಕ್ಕ ಹೈಕಳನ್ನ ಅವು ಗಂಡಾದರೂ ಸೈ, ಹೆಣ್ಣಾದ್ರೂ ಸೈ ಒಟ್ನಾಗೆ ಜೋಡಿ ಸರಿ ಹೊಂದ್ಕಂಡ್ರೆ ಸಾಕು. ಅವರಿಗೆ ಗಂಡು ಹೆಣ್ಣು ಯಾಸ ಹಾಕಿ ಆಕಾಸದೆತ್ತರಕ್ಕೆ ಚಾಚಿದ ಮರದ ಬುಡದಾಗೆ ಬಿದ್ದಿರೋ ಆಕಾಶಮಲ್ಲಿಗೆ ಹೂವ ಆರಿಸಿಕೊಂಡು ಬಂದು ಮಾಲೆ ಕಟ್ಟಿ ಇಬ್ಬರ ಕೊಳ್ಳಾಗೂ ಹಾಕಿ ನಡುಮದ್ಯೇ ಕುಂಡರಿಸಿ, ಸುತ್ತಾ ಹೆಣ್ಣುಮಕ್ಕಳು ಕುಂತು ಪದ ಯೋಳ್ತಾರೆ. ಕಡೇನಾಗೆ ತಂಬಿಟ್ಟು ಆರತಿ ಬೆಳಗಿ, ಎಲ್ಲರಿಗೂ ಅದ್ನೇ ಪ್ರಸಾದ ಹಂಚಿ, ಸೊಗಸು ಮಾಡಿದ್ದ ಕಣಗಿಲೆ ಹೂವ ತಕಂಡೋಗಿ ಗೋವಿಂದಪ್ಪನ ಮನೆ ಮುಂದೆ ಇರೋ ಬಾವಿನಾಗೆ ಹಾಕಿ ಬಂದ್ರೆ ಚಂದ್ರಮ್ಮನ್ನ ಸಾಗಾಕಿ ಬಂದಂತೆ. ಮತ್ತೆ ಮುಂದಲ ವರ್ಸಾನೇ ಅವಳ್ನ ಕರೆಯುವುದು.
ಚಂದ್ರ ಇಲ್ಲಿ ಚಂದ್ರಮ್ಮಳಾಗುತ್ತಾನೆ. ಇಡೀ ಪ್ರಕೃತಿ ಮಾತೃಸ್ವರೂಪ ಅನ್ನುವ ನಂಬಿಕೆಯ ಜನಪದರಲ್ಲಿ ಅವಳು ಎಲ್ಲರಂತೇ ತಾಯಿಯೇ. ಕಾಪಾಡುವ ಶಕ್ತಿ ಇರೋಳು. ಮೇಲಿನ ಹಾಡಿನಲ್ಲಿ ಚಂದ್ರಮ್ಮ ತಾಯಿಯಾದರೆ ಅವಳ ಮಕ್ಕಳ ಪಟ್ಟಿಯಲ್ಲಿ ಸೂರ್ಯ ಮತ್ತು ಚಂದ್ರ ಇಬ್ಬರೂ ಇರೋದು ಇನ್ನೊಂದು ಸೋಜಿಗ. ಜನಪದರ ಈ ಕಲ್ಪನೆಯೇ ಬಲು ಮೋಜು. ಚಂದ್ರ ಚಂದ್ರಮ್ಮನೂ ಹೌದು, ಚಂದಿರನೂ ಹೌದು.
ಚಂದ್ರಮ್ಮನ ಪದಗಳಲ್ಲಿ ಹೆಚ್ಚಿನವು ಗೌರಿಯನ್ನು ಕುರಿತಂತೆಯೇ ಇವೆ. ಈ ಗೌರಿಯೂ ನಮ್ಮಂತೆ ಸಾಮಾನ್ಯ ಹೆಣ್ಣುಮಗಳೆಂಬ ಭಾವ. ಇನ್ನೊಂದಿಷ್ಟು ಪದಗಳಲ್ಲಿ ಅವರ ಕಲ್ಪನೆಯ ಪರಿಧಿಯ ವಿಸ್ತರಣೆಯನ್ನು ಕಾಣಬಹುದು. ಕೆಲವಂತೂ ಚಿತ್ರವಿಚಿತ್ರ ಪದಗಳು. ಅವರೇ ಕಟ್ಟಿ ಹಾಡಿದ್ದಾದ್ದರಿಂದ ಚಿಕ್ಕಮಾಲೂರಿನ ಎಲ್ಲ ಗ್ರಾಮ ದೇವತೆಗಳು, ಊರಿನ ಜಾತಿ ಜನಿವಾರಗಳು, ಕೇರಿಗಳು, ಕದಿರಪ್ಪನ ಗುಡಿ, ಪರಿಸೆ ಎಲ್ಲಾ ಬಂದು ಹೋಗುತ್ತವೆ. ಊರಿನಲ್ಲಿ ತೆಲುಗು ಭಾಷೆಯೇ ಹೆಚ್ಚು ಬಳಕೆಯಲ್ಲಿರುವುದು. ತೆಲುಗು ಪದಗಳೆ ಹೆಚ್ಚು. ಎಲ್ಲೊ ಕೆಲವು ಮಾತ್ರ ಕನ್ನಡದವು.
ಒಂದೆ ಮೂಲೆಗೊಂದೆ ಪಾತ್ರೆ
ಗೌರಿ ನಿನ್ನಾ ಸಾಲಾಮೂಲೆಗೆ ಬಿಲ್ಲಾಪಾತ್ರೆ
ಆ ಪಾತ್ರೆ ಕೊಂಡೋಗಿ ಎಣ್ಣೆ ಮಜ್ಜನ ಮಾಡಿ
ನಿನ್ನ ಲೋಕಕೆ ಹೋಗುಬಾರೆ
ಹೋಗು ಹೋಗೆಂದರೆ ನಾನೆಂಗೆ ಹೋಗಲಿ
ಮ್ಯಾಲೆ ಸತ್ತರವಿಲ್ಲ, ಕೆಳಗೆ ಹಂದರವಿಲ್ಲ
ಗೂಡೆ ಗೂಡಾರವೇ ಮಾಡೆ ಮಾಡಾರವೇ
ಮನೆಗೊಂದರಸಿಣವೇ ಪಚ್ಚಕ್ಕೆ ಪಣಿವಾರವೇ ಚಂದ್ರಮ್ಮಗೆ ನಿತ್ಯ ಸೋಬಾನವೇ
ಗೌರಿಕತೆಯಿಂದ ಸುರುವಾಗಿ ಚಂದ್ರಮ್ಮನ ಕರೆಯಲ್ಲಿ ಮುಗಿಯುತ್ತೆ. ವಿಚಿತ್ರವಾಗಿದೆಯಲ್ಲ ಇದು ಅಂತ ಅರ್ಥ ಕೇಳಿದರೆ ‘ಅಯ್ಯೋ ಅವೆಲ್ಲ ನಮ್ಕೇನ್ ತಿಳೀತೈತೆ. ದೊಡ್ಡೋರು ಯೋಳ್ತಿದ್ರು. ನಾವೂ ಪಾಠ ಮಾಡ್ಕಂಡ್ವಿ. ನಾವು ಅರ್ಥ ಕ್ಯೋಳ್ ನಿಲ್ಲ. ಅವ್ರೂ ಯೋಳ್ ಲಿಲ್ಲ. ಅವೆಲ್ಲಾ ತಲೆಗಳೂ ಹೋದ್ವೋ. ಇನ್ನಾ ಈಗ ಯೋಳೋರ್ಯಾರು’ ಅಂತ ನಾಯಕರ ಕೇರಿ ಕಮಲಮ್ಮ ತಲೆ ಕೆರೆದುಕೊಳ್ಳುತ್ತಾ ಹೇಳಿದರೆ ಈ ಅಮೂಲ್ಯ ಜನಪದ ಪದಗಳನ್ನು ಇನ್ನೂ ಮೊದಲೇ ಸಂಗ್ರಹಿಸಬೇಕಿತ್ತು ಎಂದು ಮನಸು ಹಳವಳಿಸಿತು. ಬಹುತೇಕ ಪದಗಳು ಜನರು ಬಿಡುವಿನ ಸಮಯದಲ್ಲಿ ಪರಸ್ಪರ ಕಾಲೆಳೆಯಲು ಕಟ್ಟಿದ್ದೇ ಆಗಿವೆ. ಅರ್ಥ ಪರ್ಥ ಇರಲೇಬೇಕೆಂದೇನೂ ಇಲ್ಲ. ಪ್ರಾಸಕ್ಕೆ ಸೈ ಎನಿಸಿಕೊಂಡ್ರೆ ಸಾಕು. ಚೆಂದಾಕಿ ಹೆಣೆದು ಪದಗಳಲ್ಲಿ ಬಿಗಿಯುತ್ತಾರೆ.
ಒಂದೆ ತಂಗಡಿ ತಾವರೆ ಯಾವ ತ್ವಾಟದ ಜಾಣನೆ
ಹೂವ ತಾರಂದ್ರೆ ತಾರನೆ ಕಡ್ಡಿ ತಾರಂದ್ರೆ ತಾರನೆ ಚಂದ್ರಗೌರಿಯ ಪೂಜೆಗೆ
ಸುರಹೊನ್ನೆ ಹೂವ ಮಡಿಲಾಗೆ ಕಟ್ಟಿಕೊಂಡು
ಸುಳಿದೋನೆ ಸೂಳೆಕೇರಿಗೇ
ಹೋದನೇ ರಾಜಬೀದೀಗೆ
ಕೋಲು ಸಂಪಿಗೆ ಕೋಲೆ ಕೋಲು ಮಲ್ಲಿಗೆ ಕೋಲೆ
ನಮ್ಮ ಜಮೀನಿನಲ್ಲಿ ಇರುವ ಕದಿರಪ್ಪನ ಗುಡಿಯಲ್ಲಿ ಕದಿರಿ ಹುಣ್ಣಿಮಿ ದಿವಸ ನಡೆಯೋ ಪರಿಸೆಗಾಗಿ ವರುಷೊಪ್ಪತ್ತಿನಿಂದ ಕಾಯುತ್ತಾರೆ. ತಮ್ಮ ಅನುಕೂಲಕ್ಕೆ ತಕ್ಕಂಗೆ 5 ಅಥವಾ 9 ದಿವಸ ಚಂದ್ರಮ್ಮನ್ನ ಹುಯ್ದು ಸಿಂಗರಿಸಿ, ಹಾಡಿ ತಣಿಸಿ, ಸಾಗಾಕಿ ಬರುತ್ತಾರೆ. ತಡರಾತ್ರಿಯಲ್ಲಿ ಮಲಗಿದರೂ ಬೆಳಗಾನ ಬೇಗೆದ್ದು ಬರುತ್ತಾರೆ.
‘ಹೊತ್ತಾರೇನೇ ತಂಬಿಟ್ಟಿನಾರತಿ ಮಾಡ್ಕೊಂಡು, ಜೊತ್ಯಾಗೆ ನಮ್ಮ ಮಾದಿಗರ ಹಟ್ಟೀಯಿಂದ ನಮ್ಮ ದ್ಯಾವ್ರು ನರಸಿಂಹಪ್ಪನ್ನ ಕರ್ಕೊಂಡು ಬತ್ತೀವಿ. ಇಲ್ಲಿ ಗುಡಿ ತಾವ ಕಲೀತೀವಿ. ದಾಸಪ್ಪಗೋಳ ಬೂತಕುಣಿತ ನೋಡ್ಕ್ಯಂಡು ಆರತಿ ಬೆಳಗಿ, ಇಲ್ಲೇನಾರಾ ಉಣ್ಣಾಕಿಕ್ಕಿದರೆ ಉಂಡು ಮನೆಗೆ ಹೋದ್ರೆ ಆ ವರ್ಸಕ್ಕೆ ಮುಗೀತು. ಆದ್ರೆ ನೀ ಯೋನೇ ಯೋಳಮ್ಮ. ನಮ್ಮ ದ್ಯಾವ್ರು ಇಲ್ಲಿಗ್ ಬಂದ್ರೇನೇ ಪರಿಸೇಗೆ ಒಂದು ಕಳೆ ಬತ್ತದೆ. ಇಲ್ಲದೋದ್ರೆ ಯೋನೂ ಸೊಗಸೇ ಇರಾಕಿಲ್ಲ. ಓದ್ ಕಿತ ನಮಗೆ ಮೈಲಿಗೆ ಅಂತ ದ್ಯಾವ್ರು ತಂದಿರಲಿಲ್ಲ. ಪರಿಸೆ ನೋಡಾಕೆ ಆಗವಲ್ದು’ ಅಂತ ಕೆಂಚಮ್ಮ ಬೋ ಕುಸಿಯಿಂದ ಹೇಳಿದ್ಲು.
ಊರಿನ ಗ್ರಾಮದೇವತೆ ಸತ್ಯಮ್ಮನ ಮೇಲೆ ಕಟ್ಟಿದ ಪದವಿದು.
ಸೊಮ್ಮುಲ್ಲೋನ ಪುಟ್ಟಿತಿವಮ್ಮ ಸೊಮ್ಮುಲ್ಲೋನ ಪೆರಿಗಿತಿವಮ್ಮ
ಕಂಸಲೋಳ್ಳೋ ಆಡ ಬಿಡ್ಡಮ್ಮ ಸತ್ಯಮ್ಮ ತೆಲ್ಲಿ ಕಂಸಲೋಳ್ಳೋ ಆಡ ಬಿಡ್ಡಮ್ಮ
ಚೀರಲ್ಲೋನ ಪುಟ್ಟಿತಿವಮ್ಮ ಚೀರಲ್ಲೋನ ಪೆರಿಗಿತಿವಮ್ಮ
ನೇಸೇವಾಳಲ್ಲೋ ಆಡ ಬಿಡ್ಡಮ್ಮ
ಈ ಪದಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ವೃತ್ತಿಗಳೇ ಜಾತಿಗಳಾದ ಸಾಮಾಜಿಕ ರಚನೆಯನ್ನು ಸರಳವಾಗಿ ಕಟ್ಟಿಕೊಡುತ್ತದೆ. ಈ ಪದ ಸಾಕಷ್ಟು ದೊಡ್ಡದಿದ್ದು ವೃತ್ತಿಜಾತಿಗಳ ಪಟ್ಟಿಯನ್ನೇ ಮುಂದಿಡುತ್ತದೆ.
ಬಾಲ್ಯದಲ್ಲಿ ಕೇಳಿದ್ದ ಈ ಪದ ನೆನಪಿನ ಬುತ್ತಿಯಲ್ಲಿ ಅಚ್ಚೊತ್ತಿದೆ. ಮತ್ತೊಮ್ಮೆ ಕೇಳುವ, ಚಂದ್ರಮ್ಮನನ್ನ ಹುಯ್ಯುವ ಸಂಭ್ರಮ ಕಾಣುವ ಆಸೆ ಬಲವಾಯಿತು. ರಾತ್ರಿ ಹೊತ್ನಾಗೇ ಅಲ್ಲಿದ್ದು ನೋಡೋಣ ಅಂದುಕೊಂಡರೂ ಏನೋನೋ ನೂರೆಂಟು ಅಲ್ಲಂಡೆಗಳಿಂದ ಕೈಗೂಡಲಿಲ್ಲ. ಇತ್ತೀಚಿಗೆ ಊರಿಗೆ ಕದಿರಪ್ಪನ ಪೂಜೆಗೆ ಹೋಗುವ ಅವಕಾಶ ಕೂಡಿತು. ಮನದ ಮೂಲೆಯ ಆಸೆ ಮತ್ತೆ ಭುಗಿಲೆದ್ದಿತು. ಚಂದ್ರಮ್ಮನ್ನ ಈಗ ಹುಯ್ಯಿಸಲು ಆಗುತ್ತೆಯೇ, ಪದ ಹಾಡ್ಸೋಕೆ ಆಗುತ್ತೇ ಅಂತ ಕೇಳಿದಾಗ, ನಿಮಗ್ಯಾಕೆ ನಾನು ವ್ಯವಸ್ಥೆ ಮಾಡ್ತೀನಿ ಅಂತ ಹೇಳಿದ್ದು ನಾಯಕರ ಅಶ್ವತ್ಥಪ್ಪ. ‘ಕದಿರಪ್ಪನ ಗುಡಿ ತಾವ್ಲೇ ಮಾಡುಸ್ತೀನಿ. ಮಾದಿಗರ ಹಟ್ಯಾಗಿರೋ ಹೆಣ್ಣುಮಕ್ಕಳನ್ನು ಕರೀತೀನಿ’ ಅಂದಿದ್ದು ಆಸೆಗೆ ರೆಕ್ಕೆ ಪುಕ್ಕ ಚಿಗುರಿಸಿತು. ಮಾದಿಗರ ಹಟ್ಟಿಯ ಕೆಂಚಮ್ಮ, ಅಂಜಮ್ಮ ಸಂಜೀವಮ್ಮ, ನರಸಮ್ಮ ಬೋ ಶ್ರದ್ಧೆಯಿಂದ, ಖುಸಿಯಿಂದ ತಯಾರಾಗಿ ಬಂದಿದ್ರು. ಅವರ ಜೊತೆ ನಾಯಕರ ಕೇರಿಯ ಕಮಲಮ್ಮ, ಲಿಂಗಮ್ಮರೂ ಕೂಡಿಕೊಂಡರು. ಈಗೇನು ಹಬ್ಬ ಅಲ್ಲ. ಸುಮ್ಕೆ ಹುಯ್ಯೋದು ಅಂತ ಎಂಗೆಂಗೋ ಮಾಡೋಕೆ ಆಯ್ತದೇನು. ಅದು ಚಂದ್ರಮ್ಮ ದ್ಯಾವ್ರಲ್ವೇ. ಸಂದಾಕೇ ಮಾಡಾಮ ಅಂಬ್ತ ನರಸಮ್ಮ ಕೈನಾಗೆ ಹಸಿ ಸೆಗಣಿ ಹಿಡಕೊಂಡೇ ಬಂದ್ಲು. ಅಂಜಮ್ಮ ರಂಗೋಲಿ ತಂದಿದ್ದಳು. ಸಂಜೀವಮ್ಮ, ಕೆಂಚಮ್ಮ ರಂಗೋಲಿ ಹಾಕಿದ್ರೆ, ಕಮಲಮ್ಮ, ಲಿಂಗಮ್ಮ ಹೂವ ಇಕ್ಕಿ ಸೊಗಸು ಮಾಡಿದರು.
ಅಂಗೇ ಮಾತಾಡ್ತಾ ಕೇಳಿದೆ. ಈಗಲೂ ಊರಲ್ಲಿ ಎಲ್ರೂ ಒಟ್ಟಿಗೇ ಸೇರಿ ಚಂದ್ರಮ್ಮನ್ನ ಮಾಡ್ತೀರಾ? ಇಲ್ಲ ಕಣಮ್ಮ. ಈಗ ಊರು ವಸಿ ದೊಡ್ಡದಾಗದೆ. ಉಪ್ಪಾರರ ಕೇರ್ಯಾಗೆ ಉಪ್ಪಾರ್ರು, ಮಾದಿಗರ ಹಟ್ಯಾಗೆ ಮಾದಿಗರು, ನಾಯಕರ ಓಣ್ಯಾಗೆ ನಾಯಕರು ಮಾಡ್ಕ್ಯಂತಾರೆ. ನಮ್ ಮೊಮ್ಮಕ್ಕಳಿಗೂ ಸ್ಯಾನೆ ಇಷ್ಟ. ಅವಕ್ಕೂ ಪದಗಳು ಸೆಂದಾಕಿ ಬರ್ತವೆ. ಹಾಡ್ಕ್ಯಂತ ಡಾನ್ಸೂ ಮಾಡ್ತವೆ. ಒಟ್ನಾಗೆ ನಾವು ಈ ಆಚಾರ ಮರ್ತಿಲ್ಲ. ನಮ್ ಮಕ್ಕಳೂ ಮೊಮ್ಮಕ್ಕಳೂ ಮುಂದೊರ್ಸಿಕೊಂಡು ಓಗ್ತಾ ಅವೆ ಅಂತ ಹೆಮ್ಮೆಯಿಂದ ಹೇಳಿಕೊಂಡರು.
ಅಂಗೇ ರಂಗೋಲಿ ಮ್ಯಾಗೆ ಕಣ್ಣು ಹಾಕಿದೆ. ಪ್ರತಿ ಸಣ್ಣ ಅಂಶವನ್ನೂ ಬಿಡದೇ ಹಾಕಿದ್ದರು. ದೊಡ್ಡ ತೇರು, ತೇರಿನ ಮ್ಯಾಕೆ ಸೂರ್ಯ, ಚಂದ್ರ. ಸೂರ್ಯ ಅರ್ಧ ಚಂದ್ರಾಕೃತಿಯಲ್ಲಿದ್ದರೆ, ಹುಣ್ಣಿಮಿ ಚಂದ್ರ ಪೂರ್ಣಾಕಾರದಲ್ಲಿದ್ದ. ಸೂರ್ಯನ ಮುಂದ್ಕೆ ಒಂದು ಚೇಳು. ಅದು ಸೂರ್ಯನ ರಕ್ಷಣೆಗಂತೆ! ಮ್ಯಾಲೆ ಆಕಾಶ. ಅದರ ತುಂಬಾ ನಕ್ಷತ್ರಗಳ ರಾಶಿ. ತೇರಿನ ಮುಂದೆ ಬಂಡಿ, ಎತ್ತುಗಳು. ಹೆಡೆ ಬಿಚ್ಚಿದ ನಾಗಪ್ಪ ಕಾವಲಿಗೆ. ಒಟ್ಟಾರೆ ನೆಲಮೂಲ ಪರಂಪರೆಯ ಶ್ರಮದ ಬದುಕನ್ನು, ಬೆವರಿನ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳು. ದೈನಂದಿನ ಏಕತಾನತೆಯ ದುಡಿಮೆಯಲ್ಲಿ, ಬಡತನದ ನೋವಿನಲ್ಲಿ ನಲಿವನ್ನು ಚಿಮ್ಮಿಸುವ ಆಚರಣೆ.

(ಫೋಟೋಗಳು: ಲೇಖಕರವು)
ಚಂದ್ರ ಇಲ್ಲಿ ಚಂದ್ರಮ್ಮಳಾಗುತ್ತಾನೆ. ಇಡೀ ಪ್ರಕೃತಿ ಮಾತೃಸ್ವರೂಪ ಅನ್ನುವ ನಂಬಿಕೆಯ ಜನಪದರಲ್ಲಿ ಅವಳು ಎಲ್ಲರಂತೇ ತಾಯಿಯೇ. ಕಾಪಾಡುವ ಶಕ್ತಿ ಇರೋಳು. ಮೇಲಿನ ಹಾಡಿನಲ್ಲಿ ಚಂದ್ರಮ್ಮ ತಾಯಿಯಾದರೆ ಅವಳ ಮಕ್ಕಳ ಪಟ್ಟಿಯಲ್ಲಿ ಸೂರ್ಯ ಮತ್ತು ಚಂದ್ರ ಇಬ್ಬರೂ ಇರೋದು ಇನ್ನೊಂದು ಸೋಜಿಗ. ಜನಪದರ ಈ ಕಲ್ಪನೆಯೇ ಬಲು ಮೋಜು. ಚಂದ್ರ ಚಂದ್ರಮ್ಮನೂ ಹೌದು, ಚಂದಿರನೂ ಹೌದು.
ರಂಗೋಲಿಯ ನಡುಮಧ್ಯೆ ಪುಟ್ಟ ಸೆಗಣಿ ಉಂಡೆ ಇಕ್ಕಿ ಅದರ ಮ್ಯಾಗೆ ದೀಪ, ಅದರ ಸುತ್ತಾ ಹೂವ. ಮುಂದಿಕ್ಕೆ ವಿಳೇದೆಲೆ ಅಡಿಕೆ, ಅರಿಸಿಣ, ಕುಂಕುಮ, ಬಾಳೆಹಣ್ಣು ಅದಿಕ್ಕೆ ಊದುಗಡ್ಡಿ ಸಿಕ್ಕಿಸಿ, ಸೋಬಾನೆ ಪದಗಳ್ನ ಸುರು ಹಚ್ಕೊಂಡ್ರು. ರಂಗೋಲಿ ಅತ್ಲಾಗೆ ಇತ್ಲಾಗೆ ಎದರಾಬದರಾ ಕುಂತು, ನಕ್ಕೊಂತಾ, ಒಬ್ರಿಗೊಬ್ರು ಕಾಲೆಳೆಕೊಂತಾ ಪದ ಯೋಳ್ತಿದ್ರೆ ಕೇಳೋಕೇಂತಾನೆ 20-30 ಜನ ಗುಂಪುಗೂಡಿದ್ದರು.
ಒಕ್ಕೊಕ್ಕ ಬೀಪ ಗಿಂಜೆ ಗೌರಮ್ಮ
ಏರೇರಿ ರಾಶಿ ಪೋಯೆ ಗೌರಮ್ಮ
ರಾಶಿ ಕೊಲತಾಮು ರಾವೆ ರತ್ನಾಲ ಚಿಲಕ
ಚಿಲಕಾಕಿ ಸಿಂಗಾರ ಮೆಂತೆನ್ನಕದ್ದೆ
ಪತ್ತೀಕಿ ಪನಿವಾರಮೆಂತನ್ನ ಕದ್ದೆ
ಎಗ್ಗಿಣಾಲೇರಿಣಾಲೇ ಚಂದ್ರಮ್ಮಕಿ ಗೆಜ್ಜೆಲೆ ತೋರಣಾಲೆ
ಆಹಾ! ಘಲ್ಲುಘಲ್ಲೆನ್ನುವ ಸದ್ದು ಕಿವಿಯಲ್ಲಿ ಬಿತ್ತುವ ಈ ಪದವಂತೂ ನನ್ನನ್ನು ಬಾಲ್ಯಕ್ಕೇ ಎಳೆದೊಯ್ದಿತು. ನಮ್ಮ ಮನೆ ಮಗ್ಗುಲು ಬೀದಿಯೇ ನಾಯಕರ ಹಟ್ಟಿ. ಸಾಲಾಗಿ ನಾಗಮ್ಮ, ಕಮಲಮ್ಮ, ನಿಂಗಮ್ಮರ ಮನೆಗಳು. ನಾಗಮ್ಮ ವಸಿ ಹಿರಿಯೋಳು. ಎಲ್ಲರಿಗೂ ಪದ ಕಲಿಸೋಳು. ಅವಳ ಮನೆ ತಾವ ಮುಂದ್ಕೆ ವಸಿ ಜಾಗವೂ ಇತ್ತು. ಅಲ್ಲಿಯೇ ಚಂದ್ರಮ್ಮನ್ನ ಮಾಡೋರು. ನಾನೂ ನಾಗಮ್ಮನ ಮಗ್ಗುಲಾಗೆ ಕುಂತು ಅವರ ಜೊತ್ಯಾಗೆ ಪದ ಹೇಳ್ತಿದ್ದರೆ ಮಜವೋ ಮಜ. ಹೊತ್ತು ಸರೀತಿದ್ದದ್ದೆ ತಿಳೀತಿರಲಿಲ್ಲ. ಅಮ್ಮ 2- 3 ಕಿತ ಬಂದು ಕೂಗಿದರೂ ಕಮಕ್ ಕಿಮಕ್ ಅಮ್ತಿರಲಿಲ್ಲ. ಕೊನೆಗೆ ಬರಿ ಬಾಗಿಲು ಮುಂದುಕಿಕ್ಕಿ ಮಲಗೋರು. ನಾಗಮ್ಮ, ಪಾಪ ಮಗಿ ಹಸಿಕೊಂಡೈತೆ ಅಂತ ಒಳಗೆ ಯಾರಿಗೂ ಕಾಣ್ದಂಗೆ ಮಡಗಿದ್ದ ಬಾಳೆಹಣ್ಣು ಮುಚ್ಚಿ ಕೊಡೋಳು. ಬಾಗಿಲ ಸಂದೀಲಿ ಗುಳುಂ ಮಾಡ್ತಿದ್ದೆ. ಕಿವಿವರೆಗೂ ಬಾಯಿ ಎಳೆಯುವಷ್ಟು ಆಕಳಿಕೆ ಬರುತ್ತಿದ್ದರೂ ಧ್ಯಾಸ ಮಾತ್ರ ಪದಗಳತ್ತಾನೆ. ಪದಗಳ್ ಬಾಣ ಬಿಡೋದ್ರಾಗೆ ಯಾರೂ ಸೋಲೊಪ್ಪಿಕೊಳ್ಳುತ್ತಿರಲಿಲ್ಲ. ಪುಂಖಾನುಪುಂಖ. ಪರಸ್ಪರ ಛೇಡಿಸಲು ಹೊಸ ಹೊಸದಾಗಿ ಅಲ್ಲಿಯೇ ಕಟ್ಟಿ ಹಾಡುತ್ತಿದ್ದರು. ಅವರ ಸಮಯಸ್ಫೂರ್ತಿ, ಆಶು ಕವಿತ್ವಕ್ಕೆ ಮನ ಸೂರೆಯಾಗುತ್ತಿತ್ತು. ಅವರ ಎದೆಗೆ ಅಕ್ಷರ ಬೀಳದೆ, ಎದೆ ಸೀಳಿದರೆ ಒಂದಕ್ಷರವೂ ಇರುತ್ತಿರಲಿಲ್ಲ. ಆದ್ರೆ ಆ ಎದ್ಯಾಗೆ ಪ್ರೀತಿ, ಅಂತಃಕರಣ, ವಿಶ್ವಾಸದ ಬಿತ್ತ ಮಾತ್ರ ಸಮೃದ್ಧವಾಗಿತ್ತು.
ಏಸೊಂದು ಸೆಂದಾಕಿ ಪದ ಬಿಡುತ್ತಿದ್ದರು. ‘ಏಳ್ರಮ್ಮಣ್ಣಿದೀರಾ ನಿದ್ದೆ ಬತ್ತಾ ಐತೆ’ ಅಂಬ್ತ ಗಂಡಸರು ಯೋಳೋತಂಕ ಅಲ್ಲಿಂದ ಅಲ್ಲಾಡಿದ್ರೆ ಸೈ. ತಂಬಿಟ್ಟು ನಂಗೆ ಇಷ್ಟ ಅಂತ ವಸಿ ತುಪ್ಪ ಜಾಸ್ತಿ ಹಾಕಿ ಉಂಡೆ ಕಟ್ಟಿ ನಂಗೇಂತ ಮನೆಯ ನಿಲುವಿನಲ್ಲಿ ಮಕ್ಕಳಿಗೂ ಕಾಣದಂಗೆ ಬಚ್ಚಿಕ್ಕಿ ತಿನ್ನಿಸುತ್ತಿದ್ದ ನಾಗಮ್ಮ ನನ್ನ ಪಾಲಿನ ಯಶೋದೆಯೇ ಸೈ. ಎಡವಿ ಬಿದ್ದರೆ ಮನೆ ಸಿಗುತ್ತಿದ್ದರೂ ನಡುರಾತ್ರಿ ಮಗೀನ ಒಂದುನ್ನೇ ಕಳಿಸಕಾಯ್ತದಾ ಅಂತ ಕರೆತಂದು, ಮನೆ ಬಾಗಿಲು ತೆರೆದು, ‘ಅಮ್ಮಣ್ಣಿ, ಬಿಡ್ಡ ವಚ್ಚಿಂದಿ, ಪಂಡೇಯಮ್ಮೋ’ ಅಂತ ಹೇಳಿಯೇ ಹೋಗುತ್ತಿದ್ದಳು. ನೆನಪಿನ ಧಾಳಿಗೆ ಕಣ್ಣಂಚು ಒದ್ದೆಯಾಯಿತು. ಎಂಟು ಹತ್ತು ವರುಷದ ಹಿಂದೆ ಕಾಲವಾದ ನಾಗಮ್ಮ ಬಾಲ್ಯದ ಒಂದು ಭಾಗವಾಗಿ ಎದೆಯಲ್ಲಿ ಭದ್ರವಾಗಿದ್ದಾಳೆ. ಊರಿನ ಹಿರಿತಲೆಗಳೆಲ್ಲ ಕಾಲನ ಅತಿಥಿಗಳಾಗಿ ಅವನರಮನೆ ಸೇರಿದ್ದಾರೆ.
ನಮ್ಮಣ್ಣ ನಿಮ್ಮಣ್ಣ ಒಂದೇ ಬೆಟ್ಟಕ್ಕೋದ
ಒಂದೇ ಎಮ್ಮೆ ತಂದ ಕಾಸಾಲಾರೆ, ಕಟ್ಟಾಲಾರೆ
ಮುದುಮುದು ಬೆಣ್ಣೆ ತೆಗೆಯಾಲಾರೆ
ಉಂಗುರು ಬೆಳ್ಳು ಊರಾಲಾರೆ ಸಿಲುಮೆ ನೀರಿಗೆ ಸೆಲ್ಲಾಲಾರೆ
ಬಾವಿ ನೀರಿಗೆ ಬಗ್ಗಾಲಾರೆ ಕೆರೆಯಾ ನೀರಿಗೆ ನಡೆಯಾಲಾರೆ
ದೊಡ್ಡಕ್ಕೆ ದೊಡ್ಡ ಮನಸಾ ನಮ್ಮಣ್ಣ ದೊಡ್ಡೋರು ಮಗಳ್ ತಂದಾ
ಅತ್ತಿಗೆಯನ್ನು ಸುಪ್ಪನಾತಿ ಸುಬ್ಬಿ ಅಂತ ಆಡಿಕೊಳ್ಳುವ ಈ ಸೋಬಾನೆ ಪದ ಕಿವಿಗೆ ಬಿದ್ದು, ನೆನಪಿನಿಂದ ಹೊರ ಬಂದಂತೆ ತುಟಿ ಬಿರಿಯಿತು.
ಎದುರು ಕುಂತವರು ಸುಮ್ಕೆ ಬಿಟ್ಟಾರೆಯೇ ತಕೋ ಪದಗೋಳ್ ಬಾಣ ಅಂತ ಬಿಟ್ಟರು.
ಒಂದೇ ಮೆಟ್ಟಿಗೆ ಒಂದೇ ಮೆಟ್ಟಿಗೆ ಇಳಿಯಾಲಾರೆ ನಾನಿಳಿಯಾಲಾರೆ
ಚಂದಿರ ಬಾವಿ ಚಂದಿರ ಗಟ್ಟೆ ತುಳಿಯಾಲಾರೆ ನಾನ್ ತುಳಿಯಾಲಾರೆ ಕಾಮ ಭೀಮ ಮುಳುಗಿದರಮ್ಮ ಹೊಳೆಯಾಗೆ
ನಾನೋಗಿ ಬೇಟೆ ನೋಡಿದೆನಮ್ಮ ಬಯಲಾಗೆ
ತಾಳ ತಂತು ಕೂಡದಿದ್ದರೂ ರಾಗ ಭಾವಗಳು ಕೂಡಿ ಅರ್ಥದಿಂದಾಚೆಗೆ ವಿಸ್ತರಿಸಿಕೊಂಡು ಎದೆಯಲ್ಲಿ ಸಂತಸದ ಬುಗ್ಗೆ ನವಿರೇಳುತ್ತದೆ. ಜಾತಿಗಳು ಅವುಗಳ ಲಾಂಛನಗಳು ಸೇರಿದಂತೆಯೂ ಈ ಪದಗಳಿವೆ. ಒಂದು ಪದವಂತೂ ಪ್ರಕೃತಿಯೊಂದಿಗಿನ ಸಹಜೀವನವನ್ನು ಸರಳವಾಗಿ ಸಹಜ ನಡೆಯೆಂಬಂತೆ ಹೇಳುತ್ತದೆ. ಇರುವೆಗೂಡಿಗೆ ಸಕ್ಕರೆ ಹಾಕು, ಹಾವಿಗೆ ಹಾಲೆರೆ, ಹಕ್ಕಿಪಕ್ಷಿಗೆ ಕಾಳುಕಡಿ ಹಾಕು’ ಈ ಅಂಶಗಳನ್ನು ಪದಗಳ ಮೂಲಕ ಮನದಲ್ಲಿ ಅಚ್ಚೊತ್ತುತ್ತಾರೆ. ಅವರ ಬದುಕಿನ ಒಂದು ಭಾಗವಾಗಿರುವ ಈ ನೆಲಮೂಲ ಸಂಸ್ಕೃತಿ ಜನಪದ ಹಾಡಿನಲ್ಲಿ ಅರಳಿ ಜನಮನದಲ್ಲಿ ಘಮಘಮಿಸುತ್ತದೆ.
ಒಂದು ಪದ ಕತೆಯಂತೆ ಬೆಳೆಯುತ್ತದೆ. ಆದರೆ ಆ ಕತೆ ಕಾಲಿನಲ್ಲಿ ನಡೆಯದೆ ರೆಕ್ಕೆ ಕಟ್ಟಿ ಹಾರುತ್ತೆ. ಅಲ್ಲಿ ಕೊಂಡಿ ಕಳಚಿಕೊಂಡಿದ್ದೂ ತಿಳಿಯುವುದಿಲ್ಲ. ಪದ ಮಾತ್ರ ಮಸ್ತ್ ಮಸ್ತ್. ಇಲ್ಲಿ ರಾಮ ಒಬ್ಬ ಮನುಷ್ಯ. ಅವನು ನೆಲಕ್ಕೆ ಒಂದು ಮೊಳಕೆ ಹಾಕಿರುತ್ತಾನೆ. ಅದು ಗಿಡವಾಗಿ ಹೂವ ಬಿಡುತ್ತೆ. ಕಾಯಾಗಿ, ಹಣ್ಣಾಗುತ್ತೆ. ಕಾಲಿಲ್ಲದವನು ಆ ಮರ ಹತ್ತುತ್ತಾನೆ. ಕೈಯಿಲ್ಲದವನು ಆ ಹಣ್ಣು ಕೊಯ್ದನಂತೆ. ಆ ಹಣ್ಣು ಮೇಲಿನ ತಿರುಪತಿಗೆ ಹೋಯಿತು. ಅದು ವೆಂಕಟೇಶನಿರುವ ಜಾಗ. ಆ ಹಣ್ಣಿಗೆ ಬೆಲೆ ಹೇಳಿದನಂತೆ ಬಾಲಕ.
ಆಕು ವಾಡನಿ ಪಂಡು ಅರವೈಯಿ ವೇಲು
ತೊಟಮು ವಾಡನಿ ಪಂಡು ತೊಂಬೈಯಿ ವೇಲು
ಮುಳ್ಳು ಮುರುಗಿನ ಪಂಡು ಮುನ್ನೂರು ವೇಲು
ಇಂತಹ ಬೆಲೆಬಾಳುವ ಹಣ್ಣನ್ನು ಚಂದ್ರಮ್ಮ ತಾಯಿ ಕೊಳ್ಳುತ್ತಾಳೆ. ದೇವಲೋಕಕ್ಕೆ ಕೊಂಡೊಯ್ದಾಗ ಮಕ್ಕಳಾದ ಸೂರ್ಯ ಚಂದ್ರ ಅದನ್ನು ತಿನ್ನುತ್ತಾರೆ. ಇದಾದ ನಂತರವೂ ಕತೆ ಬೆಳೆಯುತ್ತೆ. ವರ್ಷಕ್ಕೊಮ್ಮೆ ಸೂರ್ಯಗ್ರಹಣದ ಸುದ್ದಿಯೂ ಸೇರುತ್ತೆ. ತಲೆ ಬಾಲ ಇಲ್ಲದೆ ಓತಪ್ರೋತವಾಗಿ ಪದ ಮುಂದೆ ಓಡುತ್ತೆ. ಬಹುಶಃ ಬಾಯಿಂದ ಬಾಯಿಗೆ ಬರುವ ಭರದಲ್ಲಿ ಬಾಯಿ ತಪ್ಪಿರಬಹುದು. ನೆನಪು ಕೈಕೊಟ್ಟು ಕೊಂಡಿಗಳು ಇಷ್ಟಿಷ್ಟೆ ಕಳಚಿ ವಿಚಿತ್ರ ರೂಪು ಪಡೆದಿರಬಹುದು. ಏನಾದರಾಗಲಿ ಅವರ ಪದಗಳ ಧಾಟಿ ನಮಗೆ ದಿಲ್ ಮಾಂಗೇ ಮೋರ್. ಕೊನೆಯಲ್ಲಿ ಕದಿರಪ್ಪನ ಪದದ ಮೂಲಕ ಅಂತ್ಯಕ್ಕೆ ಬಂದರು.
ಹಾಲಡಿಗೆ ಮಾಡುತ್ತಿದ್ದೆ ಸ್ವಾಮಿ ಕದಿರಪ್ಪನಾ ಪರಿಸೇಗೆ ನಾ ಹೋಗುವಾಗ
ಪಾಲಿಕೆ ತಂದೆವಯ್ಯ ಪಾಲಿಕೆ ಸುತ್ತೂರ ಪಾರಿಜಾತದೂವ
ಪಾದಕ್ಕೆ ಬಂದೇವಯ್ಯ ಸಿಕ್ಕ ಸಿಗಮಾಲ್ಲೂರು ಸಿಗನಿಂಬೆ ತೋಟದ ಮೊಗ್ಗು ತರುವಾರೆ
ಚಿಕ್ಕಮಾಲೂರು, ಕದಿರಪ್ಪನನ್ನು ಹಾಗೂ ಅವನ ಪರಿಸೆಯನ್ನು ಸೇರಿಸಿ ಕಟ್ಟಿದ್ದು.
ದಾಸಪ್ಪಾ ಬಂದ ಕಾಣೆ ದಾಸವಾಳದೂವ ಕಿವಿಸಂದೆ ಮುಡಕೊಂಡು ಮೀಸಲಿಗೆ ಬಂದಾ ಕಾಣೆ
ಗುಡಿಯಾ ನೋಡಿದರೆ ಗುಡಿಯೆಲ್ಲಾ ಸಿಂಗಾರ ಕೋಲು ಕೋಲನ್ನ ಕೋಲೆ
ಈ ಪದದಲ್ಲಿ ಹಂಗೇ ಊರಿನ ಎಲ್ಲ ಗ್ರಾಮದೇವತೆಗಳೂ ಬಂದು ಹೋಗುತ್ತಾರೆ. ಕೆರೆಕಟ್ಟೆ ಬಳಿಯ ಚೌಡಮ್ಮ, ಚಿಕ್ಕತಾತನ ಮನೆ ಮಗ್ಗುಲಿನ ಬ್ರಹ್ಮಯ್ಯ, ಕೆಂಪಾಪುರದ ದಾರಿಯಲ್ಲಿನ ನಾಡವಾರಮ್ಮ, ನಮ್ಮ ತೋಟದ ಕೆಳಗೆ ಇರುವ ಸತ್ಯಮ್ಮ ನಾಲಗೆಯ ಮೇಲೆ ನಲಿಯುತ್ತಿದ್ದರು. ಮಂಗಳ ಪದ ಹಾಡಿ ಮುಗಿಸಿದ ಹೆಣ್ಣುಮಕ್ಕಳು ಸಾಕೇನಮ್ಮ, ಖುಸಿಯಾಯ್ತೇನಮ್ಮ ಅಂದಾಗ, ಎದೆ ತುಂಬಿ ಸಂತಸದ ಪದ ಹರಿದಿತ್ತು. ದಿನಗೂಲಿ ಹೋಗುವ ಆ ಹೆಣ್ಣುಮಕ್ಕಳಿಗೆ ಕೂಲಿ ಕೊಡುವುದಾಗಿ ಹೇಳಿ ಕರೆಸಿದ್ದು. ಅವರಿಗೆ ಕೂಲಿ ಹಣಕ್ಕಿಂತ ಹೆಚ್ಚಿಗೇ ಕೊಟ್ಟು, ಹೊಟ್ಟೆ ತುಂಬ ಊಟ ಕೊಟ್ಟಾಗ ಅವರ ಮೊಗದ ಖುಸಿಯನ್ನು ಮನಸ್ಸು ಸೆರೆ ಹಿಡಿಯಿತು. ಸುಮಾರು ವರ್ಷಗಳೆ ನಾನು ಊರಿಗೆ ಕಾಲಿಟ್ಟಿರಲಿಲ್ಲ. ಅವರೆಲ್ಲ ನಾನು ಚಿಕ್ಕವಳಾಗಿದ್ದಾಗ ನೋಡಿದ್ದರು. ಹಂಚಿಕಡ್ಡಿಯಂತೆ ಇದ್ದೆ. ಅವರ ಮಾತು ‘ಗಾಳಿ ಬಂದ್ರೆ ಹಾರ್ಕೊಂಡು ಹೋಗುತ್ತಿದ್ದಳು. ಕಣ್ಣಿಗೇ ಕಾಂಬ್ತಿರಲಿಲ್ಲ. ಇವಾಗ ಸೆಂದಾಕಾಗವ್ಳೆ. ವಸಿ ಕಣ್ತುಂಬಾ ಕಾಣ್ತವ್ಳೆ. ಗಂಡ ಚೆಂದಾಕಿ ನೋಡ್ಕೊಂತಾವ್ನೇಳು, ವಸಿ ಮೈಕೈ ತುಂಬಿಕೊಂಡವಳೆ’ ಅಂದಾಗ ನನ್ನ ಗಂಡನಿಗೆ ನಗು ತಡೆಯಲಾಗದೆ ಮುಖ ಪಕ್ಕಕ್ಕೆ ತಿರುಗಿಸಿ ಮುಸಿ ಮುಸಿ ನಕ್ಕಿದ್ದೇ ನಕ್ಕಿದ್ದು. ವಸಿ ಅಲ್ಲ ತುಸು ಜಾಸ್ತೀನೇ ಮೈಕೈ ತುಂಬಿಕೊಂಡಿರೋ ನಾನು ಚಿಕ್ಕೋಳಿದ್ದಾಗ ಕೋಳಿ ಪಿಳ್ಳೆ ತರ ಹಗೂರಾಗಿ ಅಡ್ಡಾಡ್ತಿದ್ದೋಳು ಈಗ ತೂಕದ ವ್ಯಕ್ತಿಯಾಗಿ ಅಂಬಾ ಅಂತ ಸೊಪ್ಪು ಸದೆ ತಿಂತಾ ಕಾಲ ಹಾಕ್ತಿದ್ದೀನಿ. ಆದ್ರೂ ಅವರು ಅಂಗಂದಿದ್ ಖುಸೀನಾಗೆ ಆಕಾಸ ಏರಿದಂಗೆ ಗಾಳಿನಾಗೆ ಮನಸು ಹಾರಾಡಿದ್ದು ದಿಟವೇಯಾ. ಅದೇ ಖುಸಿ ಹೊತ್ತು ಬೆಂಗಳೂರಿಗೆ ಹಿಂತಿರುಗಿದೆ.

ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.