ಸುಮಾರು ದೂರ ಓಡಿ ಅವರನ್ನು ಹಿಡಿದು ಭುಜ ತಟ್ಟಿ ಮಾತಾಡಿಸಿ ಅದೇನೋ ಕೇಳಿದ. ಕೂಡಲೇ ನಕ್ಕು ಪ್ರತಿಕ್ರಿಯಿಸಿದ ಆ ವಯೋವೃದ್ಧರು ತಮ್ಮ ಕೈಲಿದ್ದ ಪ್ಲಾಸ್ಟಿಕ್ ಸಂಚಿಯನ್ನು ಇವನ ಕೈಗೆ ವರ್ಗಾಯಿಸಿದರು. ಇವನು ಅವರ ಕೈ ಕುಲುಕಿದ. ನಾವು ಎಲ್ಲವೂ ಅಯೋಮಯವಾದಂತೆ ನೋಡುತ್ತ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತೇ ಇದ್ದೆವು. ಇಬ್ಬರ ಮುಖದಲ್ಲೂ ಹುಸಿನಗೆಯೊಂದು ಕಾಣುತ್ತಲೇ ಇತ್ತಾಗಿ ಧೈರ್ಯ. ಮತ್ತಾವುದೇ ಕಿರಿಕ್ ನಡೆಯದೆಂಬ ಸಮಾಧಾನ. ತಮ್ಮನು ಕೈಲಿದ್ದ ಸಂಚಿ ತೆರೆದು ನೋಡುತ್ತಾ ನಸುನಗುತ್ತಾ ವಾಪಸ್ ಬಂದನು.
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

ಹೇಳಿದ್ದೆನಲ್ಲಾ… ಮಠದ ಕೇರಿಯ ಹಿಂಬದಿಗೇ ಹೊಂದಿಕೊಂಡಂತೆ ಹರಡಿಕೊಂಡಿದ್ದ ಸಾಬರ ಕೇರಿ. ಹಿಂಬದಿಯಿಂದ ಬಳಸಿಕೊಂಡು ಕೊಂಚ ಅತ್ತಿತ್ತ ಹರಡಿತ್ತು. ಎರಡೂ ಕೇರಿಗಳ ಅನುಬಂಧಕ್ಕೇನೂ ಕೊರತೆಯಿರಲಿಲ್ಲ. ಹಗಲು ರಾತ್ರಿ ಪಾಳಿಯ ಮೇಲೆ ಸ್ನೇಹ ಸೇತುವೆ ತೂಗುತ್ತಿತ್ತು. ಹಗಲು ಹೆಂಗಳೆಯರ ಸ್ನೇಹವಾದರೆ ರಾತ್ರಿಗೆ ಗಂಡೈಕ್ಳ ತೇರು. ಹೀಗಿರುತ್ತಿರುತ್ತಾ ಅದೊಮ್ಮೆ ಏಕಾಏಕಿ ಕೇರಿಯೊಳಗಿನ ಚಪ್ಪಲಿಗಳು ಮಾಯವಾಗತೊಡಗಿದವು. ಆವರೆಗೆ ಒಂದು ಅವರೇಕಾಳು ಕೂಡಾ ಕೇರಿಯೊಳಗಿಂದ ಹೋದ ಉದಾಹರಣೆಗಳಿರಲಿಲ್ಲ. ತೀರಾ ದಾರಿಯ ಬದಿಗೆ ಚಾಚಿಕೊಂಡಿದ್ದ ಮನೆಯವರಂತೂ ರಾತ್ರಿ ಹೊರಗಿಟ್ಟ ಮುಸುರೆ ಪಾತ್ರೆಗಳನ್ನೂ ಅಲ್ಲಲ್ಲೇ ಬಿಡುತ್ತಿದ್ದುದುಂಟು! ಅಂಥದ್ದರಲ್ಲಿ ಬ್ರ್ಯಾಂಬರ ಚಪ್ಪಲಿ ಮುಟ್ಟೋ ಕೆಚ್ಚೆದೆ ಯಾರಿಗೆ!? ಅದೇನೋ ಮಾಯವೆಂಬಂತೆ ತಿಂಗಳಿಂದೀಚೆಗೆ ಹಲವರ ಚಪ್ಪಲಿಗಳು ಮಾಯ! ಅದು ಹೇಗೆ ಏನು ಯಾರು ಯಾವಾಗ ಯಾವ ಪ್ರಶ್ನೆಗಳಿಗೂ ಉತ್ತರವಿಲ್ಲ. ಇಂಥವರೇ ಎಂಬ ಗುರುತು ಸೂಕ್ಷ್ಮಗಳಿಲ್ಲ. ಕಳ್ಳ ಯಾವೊಂದು ಪುರಾವೆಗೂ ಸಿಗಲಿಲ್ಲ.

ಇರುತ್ತಿರಲಾಗಿ ಒಂದು ದಿನ, ನಾವೆಲ್ಲಾ ಅದೇನೋ ಬಹುದೊಡ್ಡ ದುರಂತದಿಂದಾಗಿ ಆಗಿನ್ನೂ ಮನೆಯಿಂದ ತೊಲಗಿದ್ದವರು ‘ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲೀ..’ ಅಂತ ಶಾಲಾ ಕಾಲೇಜುಗಳಿಂದ ಬೆಳಗ್ಗೆ ಹನ್ನೊಂದಕ್ಕೇ ಮನೆ ಸೇರಿದ್ದೆವು. ೧೪೪ ಸೆಕ್ಷನ್ ಜಾರಿಯಾಗಿದೆಯೆಂದು ಸುದ್ದಿ ಹಬ್ಬಿ ನರಪಿಳ್ಳೆ ರಸ್ತೆಯಲ್ಲಿ ಇರಲಿಲ್ಲ. ಹೀಗೊಂದು ಕರ್ಫ್ಯೂ ಅಂತ ಆಗಬಹುದು ಎಂದು ಅಂದಾಜಾಗಿದ್ದೇ ಆಗ! ಮತ್ತೀಗ ಲಾಕ್‌ಡೌನ್‌ನಲ್ಲಿದ್ದಂತೆ ನೀರವ ರಸ್ತೆಗಳೇ ನಾಲ್ದೆಸೆಗೂ ಬಿಸಿಲಿಗೆ ನಾಲಗೆ ತೆಕ್ಕೊಂಡು ಬಿದ್ದ ನಾಯಿಗಳಂತೆ ಮಲಗಿದ್ದವು. ಭುಸುಗುಡುವ ನಮ್ಮೂರ ಬಿಸಿಲು ಕಬ್ಬಿಣವನ್ನೇ ಕರಗಿಸುತ್ತೇನೆಂಬ ಕಿಚ್ಚಿನಲ್ಲಿ ಉರಿಯುತ್ತಿತ್ತು. ನಾವೆಲ್ಲಾ ಊಟಕ್ಕೆ ಕರೆವವರೆಗೂ ಮಾಡಲು ಬದುಕಿಲ್ಲದೇ ತಣ್ಣನೆಯ ಮರದ ಅಟ್ಟಕ್ಕೇರಿ ಕುಳಿತು ಈ ಕರ್ಫ್ಯೂದಿಂದಾಗಿ ಈಗ ಏನಾಗಬಹುದು ಎಂಬ ಕೆಟ್ಟ ಕುತೂಹಲದಲ್ಲಿ ನೆಟ್ಟ ನೋಟದಿಂದ ರಸ್ತೆ ನೋಡುತ್ತಿದ್ದೆವು.

ಹಾಗೂ ಹೀಗೂ ಓಡಾಡುವ ಪೋಲೀಸು ಜೀಪು ಹಾಗೂ ಅದರ ಕೇಕೆ ನಮ್ಮಲ್ಲಿ ಇನ್ನೂ ಭಯ ಹುಟ್ಟಿಸಿ ಈಗ ನಮ್ಮೂರು ಮುಳುಗುವುದೇನೋ ಎಂಬಂತಹ ಭಯ ಹುಟ್ಟಿಸಿದ್ದವು. ನಮ್ಮೂರು ಹೇಳಿಕೇಳಿ ಸಣ್ಣದಿದ್ದರೂ ರಾಜಕೀಯ ಕಚ್ಚಾಟಗಳಿಗೇನೂ ಕೊರತೆಯಿರಲಿಲ್ಲ. ಹಾಗಂತ ಎಂದೂ ಹಿಂದೂ-ಮುಸ್ಲಿಮ್ ಕಿಚ್ಚು ಹಾಯ್ದಿದ್ದಿಲ್ಲ. ಹೀಗೇ ಏನೇನೋ ಅಡರಿಗೆ ತೊಡರಾಗಿ ೧೪೪ ಬಂದು ಕೂತಿತು. ತಣ್ಣನೆಯ ಅಟ್ಟವಿರುವಾಗ ನಮಗೇನು ಭಯ! ಲೋಕವಾರ್ತೆಯೇ ಬಾಯ್ದುಂಬಿ ಆಗಾಗ ನಗು ಹೊಡೆದಾಟ ಕಚ್ಚಾಟ ಗಾಂಭೀರ್ಯ ತಮಾಷೆ ಎಲ್ಲವೂ ಮೈದುಂಬಿ ನಡೆಯುತ್ತಿದ್ದವು. ಅಟ್ಟದ ಪುಟ್ಟ ಕಿಟಕಿಯು ಪ್ರಪಂಚದ ಬಾಗಿಲಾಗಿ ಎಲ್ಲವನ್ನೂ ತೋರುತ್ತಿತ್ತು. ಅದ್ಯಾರದೋ ಕುಂಡೆಗೆ ಪೋಲೀಸರು ಎರಡು ಕೊಟ್ಟರು! ಸದ್ಯ ಸ್ಕೂಲಿಂದ ಬಂದದ್ದೇ ಒಳ್ಳೆಯದಾಯ್ತೆಂದು ತಮ್ಮನ ನಿಟ್ಟುಸಿರಿಟ್ಟ. ಇಲ್ಲದಿದ್ರೆ ಸಾಬರ ಹುಡುಗರ ಜೋಡಿ ಒಂದು ಸಣ್ಣ ಸರ್ಕೀಟು ಹೋಗಿಬರುವ ಉಪಾಯ ಇತ್ತೆಂದು ನಮಗಾಗಲೇ ಗೊತ್ತಿತ್ತು.

ಇದ್ದಕ್ಕಿದ್ದಂತೆ ಅಟ್ಟದ ಕಿಟಕಿ ಇಣುಕುತ್ತಿದ್ದ ತಮ್ಮ ಕಿಟಾರನೆ ಕಿರುಚಿದ. “ಹೋತ್ ಕಣೇ ಅಕ್ಕಾ ಹೋತೂ… ಇನ್ನು ಅಮ್ಮ ನನ್ನ ಬೆನ್ನು ಮುರೀತಾಳೆ.. ಓಡ್ರೇ ಓಡ್ರೀ..” ಅಂತ ಕೂಗಿಕೊಂಡು ದಡಬಡ ಅಟ್ಟದ ಮೆಟ್ಟಿಲಿಳಿದು ಓಡಹತ್ತಿದ. ಹಿಂದೂ ಮುಂದೂ ಅರಿಯದ ಅಬ್ಬೇಪಾರಿಗಳು ನಾನೂ ತಂಗಿಯೂ ಕಣ್ಣು ಪಿಳುಕಿಸುತ್ತಾ ನೋಡುತ್ತಿದ್ದೆವು. ಎರಡು ಕ್ಷಣ ಕಳೆದು ಏನೋ ತಿಳಿದಂತಾಗಿ ನಾನು ಅವನ ಹಿಂದೆ ಓಡಿದೆ. ಮೆಟ್ಟಿಲ ಕಟ್ಟೆಯ ಮೇಲೆ ನಿಂತಿದ್ದ ಅವನು ರಸ್ತೆಯು ಇಳುಕಲಾಗಿದ್ದ ಕಡೆಗೆ ಕೈ ತೋರಿಸಿ “ನೋಡೇ ಅಲ್ಲೀ ಅಕ್ಕಾ.. ಕಂಡ್ಯಾ.. ಹೋದ್ವೂ..” ಅಂದ ಮತ್ತೆ!! ಏನೆಂದು ಭುಜಗಳನ್ನ ಅಲುಗಾಡಿಸಿ ಕಣ್ಣು ಕೆಂಪಗೆ ಮಾಡಿ ಕೇಳಿದರೆ “ಇರೇ ಬಂದೇ..” ಅಂದವನೇ ನಾಗಾಲೋಟ ಓಡಿದ. “ಏನು ಹೋತೋ ಕಪೀಶಾ‌. ಹೇಳಿ ಓಡು..” ಅಂದವರಿಗೂ ಏನೂ ಉತ್ತರಿಸದೇ ತಡಬಡಾಯಿಸಿ ಓಡಿ ಓಡಿ ಕಡೆಗೆ ಅಲ್ಲಿ ಏನೋ ಕವರೊಂದನ್ನು ಕೈಲಿ ಹಿಡಿದು ಕತ್ತು ಬಗ್ಗಿಸಿ ತನ್ನ ಪಾಡಿಗೆ ತಾನು ನೆಮ್ಮದಿಯಾಗಿ ತೆರಳುತ್ತಿದ್ದ ವಯೋವೃದ್ಧರೊಬ್ಬರನ್ನು ಹಿಡಿದು ನಿಲ್ಲಿಸಿದ. ಅದಾಗಲೇ ಹಲವು ಇಂತಹ ಉದ್ಧಟತನಗಳಿಗೆ ಸಾಕ್ಷಿಯಾಗಿದ್ದ ಈ ಪುಣ್ಯಾತ್ಮನು ಮತ್ತೊಂದು ಅಪಾಯವನ್ನು ತಾನೇ ಬರಮಾಡಿಕೊಳ್ಳುತ್ತಿರುವುದ ಕಂಡು ನಾವೆಲ್ಲಾ ದಿಗ್ಭ್ರಮೆಗೊಂಡೆವು.

ಸುಮಾರು ದೂರ ಓಡಿ ಅವರನ್ನು ಹಿಡಿದು ಭುಜ ತಟ್ಟಿ ಮಾತಾಡಿಸಿ ಅದೇನೋ ಕೇಳಿದ. ಕೂಡಲೇ ನಕ್ಕು ಪ್ರತಿಕ್ರಿಯಿಸಿದ ಆ ವಯೋವೃದ್ಧರು ತಮ್ಮ ಕೈಲಿದ್ದ ಪ್ಲಾಸ್ಟಿಕ್ ಸಂಚಿಯನ್ನು ಇವನ ಕೈಗೆ ವರ್ಗಾಯಿಸಿದರು. ಇವನು ಅವರ ಕೈ ಕುಲುಕಿದ. ನಾವು ಎಲ್ಲವೂ ಅಯೋಮಯವಾದಂತೆ ನೋಡುತ್ತ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತೇ ಇದ್ದೆವು. ಇಬ್ಬರ ಮುಖದಲ್ಲೂ ಹುಸಿನಗೆಯೊಂದು ಕಾಣುತ್ತಲೇ ಇತ್ತಾಗಿ ಧೈರ್ಯ. ಮತ್ತಾವುದೇ ಕಿರಿಕ್ ನಡೆಯದೆಂಬ ಸಮಾಧಾನ. ತಮ್ಮನು ಕೈಲಿದ್ದ ಸಂಚಿ ತೆರೆದು ನೋಡುತ್ತಾ ನಸುನಗುತ್ತಾ ವಾಪಸ್ ಬಂದನು. ಕುತೂಹಲ ತಾಳಲಾರದೇ ನಾವು ಬಿಸಿ ದೋಸೆ ಕಾವಲಿಯ ಮೇಲೆ ನಿಂತವರಂತೆ ಕಾಲೆತ್ತಿಡುತ್ತಾ ಬಗ್ಗಿ ಬಗ್ಗಿ ನೋಡುತ್ತಾ “ಬಾರೋ.. ಬಾ ಬೇಗಾ…” ಎಂದು ಅರಚುತ್ತಲೇ, “ತಾಳ್ರೇ.. ಒಂದು ದೊಡ್ಡ ಕೆಲಸ ಮಾಡಿನ್ನಿ.. ವೀರ ಬಾಲಕ ಅಂತ ಅವಾರ್ಡ್ ಕೊಡ್ಬುಕು ನೋಡು ನಂಗೆ..” ಅಂತ ಸ್ವಪ್ರಶಂಸೆ ಮಾಡಿಕೊಳ್ಳುತ್ತಾ ತನ್ನ ಭುಜ ತಾನೇ ತಟ್ಟಿಕೊಳ್ಳುತ್ತಾ ಬಂದವನು ಹತ್ತಿರ ಬಂದು ಕೈಲಿದ್ದ ಸಂಚಿ ಬಿಡಿಸಿದ. ತೆರೆದ ಸಂಚಿಯೊಳಗೆ ಏನಿತ್ತೆಂದು ಕೇಳಿದರೆ ನೀವೂ ಅವಾಕ್ಕಾಗದೇ ಇರಲಾರಿರಿ ಹೌದೋ.. ಆಗ ತಾನೇ ಸ್ಕೂಲು-ಕಾಲೇಜುಗಳಿಂದ ಬಂದು ಮನೆ ಮುಂದಿನ ಪಡಸಾಲೆಯಲ್ಲಿ ಬಿಟ್ಟಿದ್ದ ನಮ್ಮೆಲ್ಲರ ಪಾದರಕ್ಷೆಗಳು..! ಅಮ್ಮನಿಗೆ ಹೆದರಿ ಕೆಸರು ಕೊಚ್ಚೆ ಮೆತ್ತಿಸದೇ, ರಸ್ತೆಯ ಪಕ್ಕದಲ್ಲಿ ನಡೆದು ಹೊಲಸು ಹತ್ತಿಸದೇ, ಮಳೆ-ಬಿಸಿಲಿಗೆ ಬೇಯಿಸದೇ ಚೊಕ್ಕವಾಗಿ ಓರಣವಾಗಿ ಹೊಸತರಂತೆ ಕಾಪಾಡಿದ್ದ ನಮ್ಮ ಚಪ್ಪಲಿಗಳು..!! ನಮ್ಮ ಖುಷಿಗೆ ಪಾರವಿರಲಿಲ್ಲ.

ಹೀಗಿರುತ್ತಿರುತ್ತಾ ಅದೊಮ್ಮೆ ಏಕಾಏಕಿ ಕೇರಿಯೊಳಗಿನ ಚಪ್ಪಲಿಗಳು ಮಾಯವಾಗತೊಡಗಿದವು. ಆವರೆಗೆ ಒಂದು ಅವರೇಕಾಳು ಕೂಡಾ ಕೇರಿಯೊಳಗಿಂದ ಹೋದ ಉದಾಹರಣೆಗಳಿರಲಿಲ್ಲ. ತೀರಾ ದಾರಿಯ ಬದಿಗೆ ಚಾಚಿಕೊಂಡಿದ್ದ ಮನೆಯವರಂತೂ ರಾತ್ರಿ ಹೊರಗಿಟ್ಟ ಮುಸುರೆ ಪಾತ್ರೆಗಳನ್ನೂ ಅಲ್ಲಲ್ಲೇ ಬಿಡುತ್ತಿದ್ದುದುಂಟು!

ಮನೆಗೆ ಬಂದ ಖುಷಿಗೆ ಹೊರಗಿಟ್ಟಿದ್ದವನ್ನೆಲ್ಲಾ ಈಗ ತೊಳೆದು ಒಳಗಿಟ್ಟೆವು. ಅಂದು ಬೆಳಗ್ಗೆ ಕೂಡಾ ಅಮ್ಮನಿಂದ ಹೀನಾಮಾನ ಬೈಸಿಕೊಂಡು “ಅಷಡ್ಢಾಳ ಮುಂಡೇದೇ, ಕೆಲಸಕ್ಕೆ ಬಾರದ್ದೇ..” ಎಂಬ ಬಿರುದಾಂಕಿತಗಳಿಗೆ ಪಾತ್ರನಾಗಿದ್ದ ತಮ್ಮನು ಏಕಾಏಕಿ ಈಗ ಹೀರೋ ಆಗಿಬಿಟ್ಟಿದ್ದ. ಹೀಗೊಂದು ಸಾಹಸ ಕೃತ್ಯಗೈದು ಮನೆಗೆ ನೂರಾರು ರೂಪಾಯಿಗಳನ್ನು ಉಳಿಸಿಕೊಟ್ಟ ಭಲೇ ಗಂಡಾಗಿ ಹೊರಹೊಮ್ಮಿದ ಧೀರನ ಸುತ್ತಲೂ ನೆರೆದ ನಾವು ಅವನ ಈ ಚಾಣಾಕ್ಷತೆಯ ಕತೆಯನ್ನು ಉತ್ಸುಕರಾಗಿ ಕೇಳತೊಡಗಿದೆವು. ತಂಗಿಯಂತೂ ಅವನ ಅಂಗಿ ಹಿಡಿದು ಜಗ್ಗುತ್ತಾ “ಅಣ್ಣಯಾ ಹೇಳೋ.. ಏನಾತೋ.. ಹ್ಯಾಗೋ ಹಿಡದೇ ಕಳ್ಳನ್ನಾ.. ಹೇಳೋ.. ಭಾರಿ ಸಾಹಸ ಮಾಡಿದಿ ಕಣೋ ಹೇಳೋ..” ಎಂದು ಕುತ್ತಿಗೆಗೆ ಬಿದ್ದು ಪೀಡಿಸತೊಡಗಿದ್ದಳು. ನನಗೂ ಕುತೂಹಲ ತಡೆಯಲಾಗದಿದ್ದರೂ ಅವನನ್ನು ಬಿಂಕ ಬಿಟ್ಟು ಮಾತಾಡಿಸಲು ನನಗೇನೋ ಮುಜುಗರ.
ಕಾರಣ, ಯಾವಾಗಲೂ ನಮ್ಮಿಬ್ಬರ ಮಧ್ಯೆ ಒಂದು ಶೀತಲ ಯುದ್ಧ ಜಾರಿಯಲ್ಲೇ ಇರುತ್ತಿತ್ತು. ಅಮ್ಮನ ಬಳಿ ಜಾಣೆ ಮಗಳು ಎನಿಸಿಕೊಂಡ ನಾನು ಯಾವಾಗಲೂ ಒಂದು ಕೈ ಮೇಲೆಂಬ ಗತ್ತನ್ನು ಬಿಟ್ಟುಕೊಡುತ್ತಿರಲಿಲ್ಲ. ಅವನಿಗೆ ಅದೊಂದು ಒಳಗೇ ಮಥಿಸುವ ಮತ್ಸರ. “ಭಾssಳ ಜಾಣಿ ಬಿಡಮ್ಮಾ ನೀನು‌.. ವೇದನ ಮಗಳು ವೇsದಪುರುಷಿ. ಭಾಳ ತಿಳಕಂಡಿರ ಜಗಜ್ಜಾssಣಿ.. ನಿನ್ನ ಮಾತಾಡ್ಸಿಯಾರುಂಟೇ.. ನೀವೆಲ್ಲೋ ನಾವೆಲ್ಲೋ..! ಪಾಮರರು ನಾವು.” ಅನ್ನುವನು, ಮಾತುಮಾತಿಗೆ ಹಂಗಿಸುವನು. ಹೀಗಿದ್ದವನ ಅಕಸ್ಮಾತಾಗಿ ಅಟ್ಟಕ್ಕೇರಿ ಚಿಗುರು ಮೀಸೆ ಹೊಸೆಯುವಂತಾದ್ದು ನನಗೂ ಕಿರಿಕಿರಿಯೇ.. ಸುಮ್ಮನೆ ಅವನೆದುರು ಕೂತು “ಏ.. ಭಾಳ ಆಡಬ್ಯಾಡ ಏನಾತು ಸುಮ್ನೆ ಬೊಗಳೋ ನಾಯಿ. ಆವಜ್ಜ ನಿನ್ನ ಸಾಬ್ರು ಫ್ರೆಂಡ್ಸ್ ತಾತ ಇರಬುಕ್, ಅದುಕ್ಕೇ ಹೋದನೇ ನಕ್ಕು ಕೈಕುಲ್ಕಿ ಚೀಲ ಇಸ್ಕಂಬಂದೆ.. ನಿಜ ಬೊಗಳು.” ಅಂದೆ. ಸ್ವಲ್ಪ ಅಹಂ ಚುಚ್ಚಿ ಮೂತಿ ಸೊಟ್ಟಗೆ ಮಾಡಿಕೊಂಡು ವಿವರಿಸತೊಡಗಿದ.

*****

ಪಕ್ಕದ ಸಾಬರ ಕೇರಿಯ ತೀರಾ ಸಭ್ಯರಲ್ಲಿ ಸಭ್ಯ ಹಾರ್ಡ್‌ವೇರ್ (ಗುಜರಿ) ನವಾಜನ ಖಾಸಾ ಚಿಕ್ಕಪ್ಪನೇ ಈ ಚಪ್ಪಲಿವೀರ. ಬೆಂಗಳೂರಿನಲ್ಲಿ ಇದ್ದ ಈತನಿಗೆ ಆರೋಗ್ಯ ಹದಗೆಟ್ಟು ಅಲ್ಲಿ ನೋಡಲು ಯಾರೂ ದಿಕ್ಕಿಲ್ಲದೇ ಎಲ್ಲರೂ ಸೇರಿ ಸಾಧು ಪ್ರಾಣಿಯಂತಿದ್ದ ನವಾಜನ ತಲೆಗೆ ತಂದು ಗಂಟು ಹಾಕಿದರು. ಅವರ ಮನೆಗೆ ಎರಡು ತಿಂಗಳ ಕೆಳಗೆ ಬಂದು ನೆಲೆಸಿದ ಈ ಹಿರಿಯನು ಆರೋಗ್ಯ ಸ್ವಲ್ಪ ಸುಧಾರಿಸುವವರೆಗೂ ಸುಮ್ಮನಿದ್ದು ನಂತರ ಈ ಕೆಲಸ ಶುರುಮಾಡಿಕೊಂಡಿದ್ದ. ಬೀಡಿ ಖರ್ಚಿಗೆ ಕಾಸು ಹೊಂಚಲು ಸೈಡು ಬಿಜಿನೆಸ್ಸು ಮಾಡುವೆನೆಂದು ನವಾಜಣ್ಣನಿಗೆ ಹೇಳಿಕೊಂಡು ಅದಕ್ಕಾಗೇ ಓಡಾಡುತ್ತಿರುವೆ ಎಂದು ನಂಬಿಸಿ ಸುತ್ತಮುತ್ತಲ ಕೇರಿಗಳ ಚಪ್ಪಲಿಯ ಸೈಡು ಬಿಜಿನೆಸ್ ಮಾಡತೊಡಗಿದ್ದನು. ಬಂದಾಗಿನಿಂದ ಒಳಗೇ ಇದ್ದನಾಗಿ, ನಮ್ಮೂರಿನಲ್ಲಿ ಹೆಚ್ಚು ಮುಖಪರಿಚಯವಿಲ್ಲದ್ದು ಅವನಿಗೆ ಒಳ್ಳೆಯದೇ ಆಗಿತ್ತು. ಇದು ನವಾಜನಿಗೆ ಸಂಬಂಧಪಟ್ಟ ಆಸಾಮಿಯೆಂದು ಯಾರಿಗೂ ತಿಳಿದಿರಲಿಲ್ಲ. ಹಾಗಾಗಿ ದಿನವೂ ಮಧ್ಯಾಹ್ನ ಎರಡು ಜೊತೆ ಮೆಟ್ಟು ಎಗರಿಸಿದರೆ ಸಾಕು, ಹಾಯಾಗಿ ಖರ್ಚಿಗೆ ಆಗುವಷ್ಟು ಕಾಂಚಾಣ ಇವನ ಕಿಸೆಗೆ ಬಂದು ಬೀಳುತ್ತಿತ್ತು. ಬೆಂಗಳೂರಿನಲ್ಲಿ ಅದಾವ ಕಸುಬು ಮಾಡುತ್ತಿದ್ದನೋ, ಇಲ್ಲಿ ಚಪ್ಪಲಿ ಎಗರಿಸಲು ಇನ್ನಿಲ್ಲದ ಕೌಶಲ್ಯ ಪರಿಣತಿ ಮೆರೆಯುತ್ತಿದ್ದ. ದಾರಿಯಲ್ಲಿ ಜನಸಂದಣಿಯಿದ್ದರೆ ಇವನ ಕೆಲಸ ಇನ್ನೂ ಸುಲಭ!

ಅಂದು ಮಧ್ಯಾಹ್ನ ಕರ್ಫ್ಯೂದಿಂದಾಗಿ ಭಣಗುಡುತ್ತಿದ್ದ ರಸ್ತೆಗಳಿಗೆ ಕೈಕಡಿತ ತಡೆಯಲಾರದೇ ಇಳಿದ ಈ ಮಹಾತ್ಮನು ಅಪ್ಪಿತಪ್ಪಿ ನಮ್ಮ ಬಾಗಿಲಿಗೆ ಎರಗಿದ್ದ. ಮೆಲ್ಲನೆ ಚಪ್ಪಲಿ ಎಗರಿಸಿ ಕೈಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ಇಳಿಸಿ ಏನೂ ಅರಿಯದವನಂತೆ ಮೆಲ್ಲಗೆ ಮದುಮಗಳಂತೆ ನಡೆಯುತ್ತಾ ಹೋಗುವಾಗ ಇವನ ಕಣ್ಣಿಗೆ ಬಿದ್ದುದು. ಹೀಗೆ ಅಮಾಯಕನಂತೆ ನಡೆದು ಹೋಗುವವನನ್ನು ತಡೆದು ಬೈಯಲೆಂದು ಬಾಯ್ತೆಗೆದ ತಮ್ಮನಿಗೆ ಆ ಅವಕಾಶವನ್ನೇ ಕೊಡದೇ “ಓಹೋ.. ನೋಡ್ಕೊಂಬಿಟ್ರಾ.. ತೊಗೊಳಿ ಸ್ವಾಮೀ..” ಎಂದು ತಣ್ಣಗೆ ನುಡಿದು ಕೈಲಿದ್ದ ಚೀಲವನ್ನು ಹಸ್ತಾಂತರಿಸಿ ನಸುನಕ್ಕು ನಡೆದೇಬಿಟ್ಟನಂತೆ. ಹೊರಡುವ ಕೊನೆಯಲ್ಲಿ “ನವಾಜ಼್‌ಗೆ ಹೇಳ್ಬೇಡಿ” ಅನ್ನದಿದ್ದರೆ ಅವನು ಅಜ್ಞಾತವಾಗೇ ಉಳಿದುಬಿಡುತ್ತಿದ್ದನೋ ಏನೊ! ಆದರೆ ಅದಾವ ಭಯಕ್ಕೋ.. ನವಾಜನ ಹೆಸರು ಹೊರಗೆ ಬಿತ್ತು. ಅದು ಇಡೀ ದೃಷ್ಟಾಂತಕ್ಕೇ ಒಂದು ದಿಕ್ಕು ನೀಡಿತು.

ನವಾಜನ ಮೇಲಿದ್ದ ಮಮತೆಗೋ, ಅವನ ಒಳ್ಳೆಯತನ ಅಷ್ಟು ವರ್ಷಗಳ ಕಾಲ ಎಲ್ಲರ ಮನಸಿನಲ್ಲಿ ಬೇರೂರಿದ್ದಕ್ಕೋ, ಎಲ್ಲರನ್ನೂ ತನ್ನ ಬಂಧುಗಳೆಂಬಂತೆ ಚಾಯ್ ಕುಡಿಯಲು ಆಹ್ವಾನಿಸುತ್ತಿದ್ದ ಅವನ ಮಡದಿ ರಜಿಯಾಳ ಮುಗ್ಧಮನಸಿಗೋ.. ಅಂತೂ ವಿಷಯ ತಿಳಿದ ಮೇಲೂ ಒಬ್ಬರೂ ನವಾಜನ ಮನೆ ಬಾಗಿಲಿಗೆ ಈ ವಿಚಾರಕ್ಕಾಗಿ ಹೋಗಲಿಲ್ಲ. ಪವಾಡದಂತೆ, ಆಮೇಲೆ ಮಠದ ಕೇರಿಯ ಒಳಗೆ ಚಪ್ಪಲಿಗಳು ಕಳುವಾಗಲೂ ಇಲ್ಲ. ಕೆಲದಿನಗಳ ನಂತರ ನವಾಜಿಯ ಚಿಕ್ಕಪ್ಪ ಹುಷಾರಾಗಿ ಬೆಂಗಳೂರಿಗೆ ತಿರುಗಿ ಹೋದರೆಂದು ತಮ್ಮನಿಂದ ತಿಳಿದ ಸುದ್ದಿ.

ಇದಾಗಿ ವರುಷಗಳೇ ಉರುಳಿದರೂ ನಮ್ಮ ಮನೆಯಲ್ಲಿ ಇಂದಿಗೂ ಆ ಮಹಾಪುರುಷನ ಮಾತೊಂದು ಆಡುನುಡಿಯಾಗಿ ಉಳಿದು ಬೆಳೆದಿದೆ. ಈಗಲೂ ಮನೆಯಲ್ಲಿ ಕದ್ದುಮುಚ್ಚಿ ಏನಾದರೊಂದು ಕೆಟ್ಟಕೆಲಸ ಮಾಡಿ ಸಿಕ್ಕಿಬಿದ್ದರೆ, “ಓಹೋ ನೋಡ್ಕೊಂಬಿಟ್ರಾ ಸಾರ್‌.. ನವಾಜಿಗೆ ಹೇಳ್ಬೇಡಿ” ಅಂತ ಮನಸಾರೆ ನಗುತ್ತೀವಿ. ತಪ್ಪು ನಡೆದೇ ಹೋಗಿದ್ದರೆ “ಕವರೊಳಗಿನ ಚಪ್ಪಲಿ ಮಾಯ!” ಅಂತೀವಿ. ಯಾವಾಗಲಾದರೊಮ್ಮೆ ಎಲ್ಲರೂ ಸೇರಿದಾಗ ಇದನ್ನೇ ನೆನೆದು ಮನಸಾರೆ ಹೊಟ್ಟೆಹುಣ್ಣಾಗುವಷ್ಟು ನಗುತ್ತೀವಿ. ಕಾಲಾಂತರದಲ್ಲಿ ಅವರ ಹೆಸರು ಗೊತ್ತಿಲ್ಲದ ಕಾರಣ ಅವರಿಗೆ ‘ಚಪ್ಪಲಿ ಸಾಹೇಬ’ರೆಂದು ನಮ್ಮ ಮನೆಯಲ್ಲಿ ನಾಮಕರಣವಾಯ್ತು. ಇತ್ತೀಚೆಗೆ ಲಾಕ್‌ಡೌನಿನ ಬಳಿಕ ಬೀದಿಗಳೆಲ್ಲಾ ಸ್ಮಶಾನ ಮೌನದಲ್ಲಿ ಮಲಗಿದಾಗ ನನಗೆ ದಿನವೂ ಚಪ್ಪಲಿ ಸಾಹೇಬರ ನೆನಪು ಕಾಡುವುದು‌. ನಾಗರಿಕತೆ ಹಾಗೂ ಶಿಷ್ಟಾಚಾರದ ಹೆಸರಿನಲ್ಲಿ ಕಳೆದುಹೋಗಿರುವ ಅನಂತ ಸಂತಸಗಳ ಶವಯಾತ್ರೆಯ ವಾಸನೆ ಮೂಗಿಗೆ ಬಡಿದು, ಮುಂದಿನ ಪೀಳಿಗೆಗೆ ಎಂದೂ ದೊರೆಯಲಾರದ ಇಂತಹ ಅಪೂರ್ವ ನೆನಪುಗಳನ್ನು ಇನ್ನೂ ದಾಖಲಿಸಬೇಕೆನಿಸಿತು. ಸದ್ಯಕ್ಕೆ ನಿಮ್ಮ ನಡುವೆಯೂ ತಪ್ಪು ಮಾಡಿದಾಗ “ಓಹೋ.. ನೋಡ್ಕೊಂಬಿಟ್ರಾ..” ಸರಿದು ಸುಳಿಯಲಿ ಎಂದು ಹಾರೈಸುವೆ.