ನಾವು ನಮ್ಮ ಬೆಂಗಳೂರಿನ ಮನೆಯ ಬಗ್ಗೆ ತಿಳಿಸಿದಾಗ, ನಾನು HSR ಬಡಾವಣೆಯಲ್ಲಿ ನಾಲ್ಕು ವರ್ಷ ಇದ್ದೆ. ಕನ್ನಡಿಗನನ್ನೇ ಮದುವೆ ಆಗಿದ್ದೇನೆ. ಆತ ಯೋಗ ಶಿಕ್ಷಕ ಎಂದು ತುಂಬಾ ಖುಷಿಯಿಂದ ಹೇಳಿದಳು. ಅವಳ ಮುಖದಲ್ಲಿ ಭಾರತೀಯ ಕಳೆ ಇದೆ ಎಂದು ನನಗೂ ಅನ್ನಿಸಿತು. ಹಾಗಾದರೆ, ನೀವು ಅರ್ಧ ಕನ್ನಡಿಗರಲ್ಲವೇ ಅಂದರೆ. ಬಾಯಿ ತುಂಬಾ ನಗುತ್ತಾ, ಇಲ್ಲ ನಾನು French, ನನ್ನ ಹೊಟ್ಟೆಯಲ್ಲಿರುವ ಮಗು ಅರ್ಧ ಕನ್ನಡಿಗ ಎಂದು ತನ್ನ ಉಬ್ಬಿದ ಹೊಟ್ಟೆಯ ಮೇಲೆ ಕೈ ಹೊಡೆದುಕೊಂಡು ನಕ್ಕಳು. ಅವಳು ತುಂಬು ಗರ್ಭಿಣಿ ಎಂಬುದನ್ನು ನಾವು ಗಮನಿಸಿರಲೇ ಇಲ್ಲ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹನ್ನೆರಡನೆಯ ಬರಹ
ಬೆಳಗಿನ ತಿಂಡಿಗೆ ಮುನ್ನ ನನ್ನದು ಪುಟ್ಟ ವಾಕಿಂಗ್. ಆ ಶನಿವಾರ ಈ ಪುಟ್ಟ ವಾಕಿಂಗ್ ಮುಗಿಸಿಕೊಂಡು ಮನೆಗೆ ಬರುತ್ತಿದ್ದೆ. ಸಿಗ್ನಲ್‌ನಲ್ಲಿ ಎಡಗಡೆಗೆ ತಿರುಗಿ ಮನೆ ತಲುಪಬೇಕು. ಸಮೂಹಗಾನ, ವಾದ್ಯ ಸಂಗೀತದ ಅಲೆ ನನ್ನನ್ನು ಆಕರ್ಷಿಸಿತು. ಒಂದು ಕ್ಷಣ ಅಲ್ಲೇ ನಿಂತೆ. ಹಿತವಾದ ವಾದ್ಯ (ಪಿಯಾನೊ) ಸಂಗೀತ. ಜೊತೆಗೆ ಸ್ವಲ್ಪ ಎತ್ತರದ ಧ್ವನಿಯಲ್ಲೇ ಹೇಳುತ್ತಿದ್ದ ಸಮೂಹಗಾನ ಸುಶ್ರಾವ್ಯವಾಗಿತ್ತು, ಆರ್ತತೆಯಿತ್ತು. ಸಂಗೀತ ಹೊರಡುತ್ತಿದ್ದ ಕಟ್ಟಡ ಚರ್ಚ್ ಆಗಿರಲಿಲ್ಲ. ಪಾಶ್ಚಿಮಾತ್ಯ ಸಂಗೀತವಾದ್ದರಿಂದ ನನ್ನ ಮನಸ್ಸು ಚರ್ಚ್ ಎಂದು ಭಾವಿಸಿತ್ತು. ಕಟ್ಟಡದ ಮುಂದೆ ತುಂಬಾ ವಾಹನಗಳು ನಿಂತಿದ್ದವು. ನೆದರ್‌ಲ್ಯಾಂಡ್ಸ್ ಮಟ್ಟಿಗೆ ಒಂದು ಕಟ್ಟಡದ ಮುಂದೆ ಅಷ್ಟೊಂದು ವಾಹನಗಳು ಅಪರೂಪವೇ. ಸೈಕಲ್‌ಗಳು ಬೇಕಾದರೆ ದೊಡ್ಡ ಸಂಖ್ಯೆಯಲ್ಲಿ ನಿಂತಿರುತ್ತವೆ.
ಕುತೂಹಲ ತಡೆಯಲಾರದೆ ಸ್ವಲ್ಪ ಭಯ, ಹಿಂಜರಿಕೆಯಿಂದಲೇ ಕಾಂಪೋಂಡ್ ಒಳಗೆ ಹೋದೆ. ವಯಸ್ಸಾದ ಗಂಡಸರೊಬ್ಬರು ಬಾಗಿಲಲ್ಲಿ ಕಾವಲು ಕಾಯುತ್ತಿದ್ದರು. ಸ್ವಯಂ ಸೇವಕರಂತೆ ಕಂಡರು. ಮಾತನಾಡಿಸಿದೆ. ಉತ್ತರಿಸಿದ ಧ್ವನಿಯಲ್ಲಿ ತ್ರಾಣವಿರಲಿಲ್ಲ. ನನ್ನ ಪರಿಚಯ ಹೇಳಿಕೊಂಡೆ. ಅದರಲ್ಲೇನು ಅವರಿಗೆ ಆಸಕ್ತಿಯಿರಲಿಲ್ಲ. ಮೇಲುಗಡೆ ಹೋಗಲೇ, ಸಂಗೀತ ಕೇಳಲೇ ಎಂದೆ. ಹೋಗಿ ಎಂದರು ಉದಾಸೀನವಾಗಿ. ಅವರಿಗೆ ಅವರ ಬಗ್ಗೆಯಾಗಲೀ, ನನ್ನ ಬಗ್ಗೆಯಾಗಲೀ, ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆಯಾಗಲೀ ಯಾವ ಆಸಕ್ತಿಯೂ ಇರಲಿಲ್ಲ. ಯಾವುದನ್ನೂ ಗಂಭೀರವಾಗಿ ತೆಗೆದುಕೊಂಡಂತೆ ಕಾಣಲಿಲ್ಲ.
ಮೆಲ್ಲಗೆ ಅಡಿಯಿಡುತ್ತಾ ಎರಡು ಮಹಡಿ ಹತ್ತಿದೆ. ಅದೊಂದು ಕ್ರಿಶ್ಚಿಯನ್ ಸಮೂಹ. ವಿಶಾಲವಾದ ಸಭಾಂಗಣ. ಆಧುನಿಕ ರೀತಿಯದು. ಸೂಟುಧಾರಿಯೊಬ್ಬ ವೇದಿಕೆಯಲ್ಲಿ ನಿಂತು ಬೈಬಲ್ ಹಿಡಿದುಕೊಂಡು ಭಾಷಣ ಮಾಡುತ್ತಿದ್ದಾನೆ. ತರಗತಿಯ ಪಾಠ, ಮತ್ತು ಸಾರ್ವಜನಿಕ ಭಾಷಣದ ಮಧ್ಯದ ಧಾಟಿ. ಸಭಿಕರೇನು ವಿಶೇಷ ಆಸಕ್ತಿಯಿಂದ, ಏಕಾಗ್ರತೆಯಿಂದ ಕೇಳಿಸಿಕೊಳ್ಳುತ್ತಿರಲಿಲ್ಲ. ಸಭಾಂಗಣದ ಹೊರಗಡೆ ಊಟದ ವ್ಯವಸ್ಥೆ ಸಜ್ಜಾಗಿ ಕಾಯುತ್ತಿದೆ. ಧಾರ್ಮಿಕ ಪುಸ್ತಕಗಳು, ದಿನನಿತ್ಯದ ಜೀವನಕ್ಕೆ ಬೇಕಾದ ಪುಸ್ತಕಗಳು ಕೂಡ ಮಾರಾಟಕ್ಕಿವೆ. ಮಕ್ಕಳ ಆಟಕ್ಕೆ ಕೂಡ ವ್ಯವಸ್ಥೆಯಿದೆ. ಒಂದಕ್ಕೊಂದು ಸಂಬಂಧವಿಲ್ಲದಂತೆ ಸಭೆ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದೆ. ಕೆಲವರು ನನ್ನನ್ನು ಗಮನಿಸಿದರು. ಅಲ್ಲಿರುವವರ ವೇಶಭೂಷಣಕ್ಕೆ ಹೋಲಿಸಿದರೆ ನನ್ನದು ಸಾಧಾರಣವಾಗಿತ್ತು, ಅನೌಪಚಾರಿಕವಾಗಿತ್ತು. ಕೆಲವರ ಕಿರು ನಗೆಗೆ ಉತ್ತರವಾಗಿ ನಾನೂ ಮುಗುಳ್ನಕ್ಕೆ. ಪ್ರವಾಸಿ, ಇಂಡಿಯಾದವನು, ಬೆಂಗಳೂರಿನವನು ಎಂದು ಹೇಳಿಕೊಂಡೆ. ಒಬ್ಬರು ಮಾತ್ರ ನೇರವಾಗಿ ನನ್ನನ್ನು ಕೇಳಿದರು, ನಿಮಗೇನು ಬೇಕು? ನನಗೆ ತಕ್ಷಣ ಏನು ಉತ್ತರಿಸಬೇಕೆಂದು ಗೊತ್ತಾಗಲಿಲ್ಲ. ಹೀಗೇ ಸಂಗೀತ ಕೇಳಲು ಬಂದಿರುವೆ. ನಿಮ್ಮ ಸಂಘಟನೆ ಬಗ್ಗೆ ಕೂಡ ಕುತೂಹಲ, ತಿಳಿದುಕೊಳ್ಳುವ ಆಸೆ ಎಂದೆ, ಅವರಿಗೆ ಕೇಳಿಸಲೇಬಾರದು ಎನ್ನುವಷ್ಟು ಕ್ಷೀಣ ಧ್ವನಿಯಲ್ಲಿ.
ಅವರ ಪೈಕಿ ಮಧ್ಯವಯಸ್ಸಿನ ಚುರುಕಾದ, ಆಕರ್ಷಕ ಹೆಂಗಸೊಬ್ಬಳು ಮುಂದೆ ಬಂದಳು. ಜೀವಂತಿಕೆ, ಉಲ್ಲಾಸ ಸೂಸುವ ಮುಖ. ಎದುರಿಗೆ ನಿಂತುಕೊಂಡು ಮಾತನಾಡುತ್ತಿದ್ದರೂ ಓಡಾಡುತ್ತಿದ್ದಾಳೆ ಎಂಬ ಭಾವ ಹುಟ್ಟುತ್ತಿತ್ತು. ತಾನು ಮಾತನಾಡುವುದು ಮುಖ್ಯವಲ್ಲ, ಅದು ಇನ್ನೊಬ್ಬರಿಗೆ ತಲುಪಬೇಕಾದ್ದು ಮುಖ್ಯ ಅನ್ನುವ ಮನೋಧರ್ಮವನ್ನು ನಾಲ್ಕೇ ವಾಕ್ಯಗಳಲ್ಲಿ ಸೂಚಿಸುವ ಸಂಭಾಷಣಾ ಶೈಲಿ.
ನೀವು ಬಂದದ್ದು, ನೀವಾಗೇ ಬಂದದ್ದು ಸಂತೋಷ. ಇದು Seventh Day Adventisit Church ಸಭೆ ಅಂದಳು. ಸಂಘಟನೆಯ ಬಗ್ಗೆ ವಿವರಿಸಲು ಹೊರಟಳು.
ನೀವು ಬೆಂಗಳೂರಿನವರು ಅಂದಿರಿ ಅಲ್ಲವೇ, ಒಬ್ಬ ಬೆಂಗಳೂರಿನವರನ್ನು ಕರೆಸುತ್ತೇನೆ. ಅವರ ಜೊತೆ ಮಾತನಾಡುವಿರಂತೆ ಎಂದು ಒಬ್ಬರ ಕೈಲಿ ಹೇಳಿಕಳಿಸಿದಳು. ಬೆಂಗಳೂರಿನವರು ಬರುವ ತನಕ ಸಂಕ್ಷಿಪ್ತವಾಗಿ ಸಂಘಟನೆಯ ಬಗ್ಗೆ ತಿಳಿಸಿದಳು.
Seventh Day Adventisit ಒಂದು Protestant ಕ್ರೈಸ್ತರ ಉಪಪಂಗಡ. ನಾವು ಸಸ್ಯಾಹಾರಿಗಳು. ಕ್ರಿಸ್ತನ ಎರಡನೆ (ಪುನರ್) ಆಗಮನದಲ್ಲಿ ನಮಗೆ ನಂಬಿಕೆಯಿದೆ. ತೀರಿಹೋದ ಮನುಷ್ಯರು ಸತ್ತಿರುವುದಿಲ್ಲ, ನಿದ್ದೆಯಲ್ಲಿರುತ್ತಾರೆ, ಅವರಿಗೆ ಮತ್ತೆ ಜೀವ ಕೊಡುವ ತನಕ ಎಂದು ನಾವು ನಂಬುತ್ತೇವೆ. ಆದರೆ ಏಸುವನ್ನು ನಂಬುವವರಿಗೆ ಮರಣವೆಂಬುದು ಇಲ್ಲವೇ ಇಲ್ಲ, ನಿರಂತರ ಬದುಕು ಸಾಧ್ಯ ಎಂಬುದು ನಮ್ಮ ಇನ್ನೊಂದು ನಂಬಿಕೆ.
ಉಳಿದ ಕ್ರೈಸ್ತರಂತೆ ನಾವು ಭಾನುವಾರ ಸಭೆ ಮಾಡುವುದಿಲ್ಲ. ಶನಿವಾರ ಮಾಡುತ್ತೇವೆ. ಶನಿವಾರವೇ ನಮಗೆ ವಾರದ ಕೊನೆಯ ದಿನ. ನಾವು ಇಲ್ಲಿ ಸೇರಿರುವುದು ಸ್ವಂತ ಕಟ್ಟಡದಲ್ಲಲ್ಲ. ಕೆಲವು ಘಂಟೆಗಳ ಕಾಲ ಪ್ರತಿ ವಾರವೂ ಬಾಡಿಗೆಗೆ ತೆಗೆದುಕೊಳ್ಳುತ್ತೇವೆ. ಇಲ್ಲಿ ಎಲ್ಲ ದೇಶಗಳವರೂ ಇದ್ದಾರೆ. ನಮ್ಮ ಪಂಗಡ-ಪಂಥ ಪ್ರಾರಂಭವಾದದ್ದು ಹತ್ತೊಂಭತ್ತನೇ ಶತಮಾನದ ಮಧ್ಯ ಭಾಗದಲ್ಲಿ, ಅಮೆರಿಕದಲ್ಲಿ. ನಾವು ಶಾಲೆಗಳನ್ನು ನಡೆಸುತ್ತೇವೆ. ಜಗತ್ತಿನಾದ್ಯಂತ ನಮ್ಮ ಪಂಥದವರಿದ್ದಾರೆ.
ನಾವು ಉಪದೇಶದ ಸಭೆ ನಡೆಸುವುದಿಲ್ಲ. ನಾವು ಯಾವಾಗಲೂ ಪ್ರಾರ್ಥನಾ ಸಭೆ ನಡೆಸುತ್ತೇವೆ. ಇಲ್ಲಿ ನಾವು ನಮಗಾಗಿ ಮಾತ್ರ ಪ್ರಾರ್ಥಿಸುವುದಿಲ್ಲ. ಇನ್ನೊಬ್ಬರು ಬಂದು ಕಷ್ಟ ಸುಖ ಹೇಳಿಕೊಳ್ಳುತ್ತಾರೆ. ಅಂಥವರ ಕಷ್ಟ ಪರಿಹಾರವಾಗಲಿ ಎಂದು ಇಲ್ಲಿ ಸೇರಿರುವವರೆಲ್ಲ ಒಟ್ಟಾಗಿ ಪ್ರಾರ್ಥಿಸುತ್ತೇವೆ. ಪ್ರಾರ್ಥನೆಗೆ ಅಂತಹ ಶಕ್ತಿ ಇದೆ.
ಇಲ್ಲಿ ಎಲ್ಲ ರಾಷ್ಟ್ರೀಯತೆಯವರು ಇದ್ದಾರೆ, ಆದರೂ ಪೂರ್ವ ಯುರೋಪಿನವರೇ ಹೆಚ್ಚು. ಉಕ್ರೇನ್ ನಿರಾಶ್ರಿತರು ಇಲ್ಲಿ ಹೆಚ್ಚು. ಅಧಿಕೃತವಾಗಿ ಇನ್ನೂ ಅವರು ಈ ದೇಶಕ್ಕೆ ಪ್ರವೇಶ ಪಡೆದಿಲ್ಲ. ಒಂದು ಗುಂಪಾಗಿ ಬೀಚ್ ಬಳಿ ವಾಸಿಸುತ್ತಾರೆ. ಪ್ರಾರ್ಥನೆ ಸಲ್ಲಿಸಲೆಂದು ಇಲ್ಲಿಗೆ ಒಟ್ಟಾಗಿ ಬರುತ್ತಾರೆ. ಈವತ್ತು ಬಂದಿರುವವರಲ್ಲಿ ಹೆಚ್ಚಿನ ಸಂಖ್ಯೆಯವರು ಅವರೇ. ವಾರದಿಂದ ವಾರಕ್ಕೆ ಅವರ ಸಂಖ್ಯೆ ಹೆಚ್ಚುತ್ತಿದೆ.
ನೆರೆದಿದ್ದವರ ಬಣ್ಣ ಆಕೃತಿ ನೋಡಿ, ಇಂಥವರೇ ಉಕ್ರೇನ್ ನಿರಾಶ್ರಿತರು ಎಂದು ನನಗೆ ಪತ್ತೆ ಹಚ್ಚಲು ಆಗಲಿಲ್ಲ. ಹಂಗೇರಿ ಪ್ರವಾಸದ ಸಂದರ್ಭದಲ್ಲೂ ನಿರಾಶ್ರಿತರಾಗಿ ಬಂದಿರುವ ಉಕ್ರೇನ್ ನಾಗರಿಕರ ಬಗ್ಗೆ ಮಾತಾಡಿದ್ದರು, ಸ್ವಲ್ಪ ತಾತ್ಸಾರದಿಂದಲೇ. ಗತಿಯಿಲ್ಲದೆ ಬೇರೆ ದೇಶಗಳಿಗೆ ಬಂದು ತೊಂದರೆ ಕೊಡುತ್ತಾರೆ ಎಂಬ ಭಾವ ಪ್ರಬಲವಾಗಿದೆ. ಆದರೆ ಅವರು ಬಂದಿಲ್ಲ, ಹೊರದೂಡಲ್ಪಟ್ಟಿದ್ದಾರೆ ಎಂಬುದು ಮುಖ್ಯ. ಅದನ್ನೆಲ್ಲ ಯಾರು ಯೋಚನೆ ಮಾಡುತ್ತಾರೆ. ಇರಲಿ, ಇಲ್ಲಿ ಉಕ್ರೇನಿನವರೇ ಜಾಸ್ತಿ ಎಂದು ಆಕೆ ಹೇಳುವಾಗ ಯಾವುದೇ ರೀತಿಯ ತಾತ್ಸಾರ ಅಸಡ್ಡೆ ಕಾಣಲಿಲ್ಲ.
ಆಕೆ ಯಾವ ಸಂಗತಿಯನ್ನೂ ಹೇರುವವಳಂತೆ ಮಾತನಾಡುತ್ತಿರಲಿಲ್ಲ. ಮಾಹಿತಿಯನ್ನು ಸರಾಗವಾಗಿ ಹೇಳುತ್ತಿದ್ದಳು. ಹೇಳುವುದರಲ್ಲಿ ಆತುರವಿರಲಿಲ್ಲ. ಸಾಕಷ್ಟು ನಗುತ್ತಾ ಲವಲವಿಕೆಯಿಂದಲೇ ಹೇಳಿದಳು. ಪ್ರಾರ್ಥನೆಯ ಶಕ್ತಿ, ಅಗತ್ಯತೆ ಕುರಿತಂತೆ ಅವಳು ಹೇಳಿದ್ದು ನನ್ನ ಮನಸ್ಸನ್ನು ತಟ್ಟಿತು. ನಮ್ಮ ಪ್ರಾರ್ಥನೆಗೆ ಇನ್ನೊಬ್ಬರ ಕಷ್ಟವನ್ನು ಪರಿಹರಿಸುವ ಶಕ್ತಿ ಇದೆ ಎಂಬ ನಂಬಿಕೆಯೇ ಎಷ್ಟು ಚೇತೋಹಾರಿಯಾದದ್ದು. ಈಕೆ ಇಷ್ಟನ್ನೆಲ್ಲ ನನಗೆ ಹೇಳುತ್ತಿದ್ದಾಗ ತುಂಬಾ ಜನ ಅವಳ ಗಮನ ಸೆಳೆದು, ಹಲೋ ಹೇಳುತ್ತಿದ್ದರು. ಈಕೆ ಕೂಡ ಸಂತೋಷದಿಂದ ಪ್ರತಿ ವಂದನೆ ಹೇಳುತ್ತಿದ್ದಳು. ತುಂಬಾ ಜನಬಾವಣಿಕೆ ಇರುವ ಹೆಂಗಸು ಈಕೆ ಎನಿಸಿತು.
ನೋಡಿ, ಇಗೋ ಸಂಜೀವ್ ಬಂದರು, ಬೆಂಗಳೂರಿನವರು ಅಂತ ಪರಿಚಯಿಸಿದರು.
ಸಂಜೀವ್ ತುಂಬಾ ಎತ್ತರದ ಮನುಷ್ಯ. ದಷ್ಟಪುಷ್ಟ ಆಳು. ನೋಡಿದ ತಕ್ಷಣ ವಿವಿಯನ್ ರಿಚರ್ಡ್ಸ್ ನೆನಪಿಗೆ ಬಂತು. ಆದರೆ ಆತನಿಗಿಂತ ಎತ್ತರ. ಆತನಿಗಿಂಗಲೂ ಕಪ್ಪು. ಟ್ರಿಮ್ ಮಾಡಿದ ಗುಂಗುರು ಕೂದಲು. ದಪ್ಪ ತುಟಿ. ನಾನು ಕತ್ತನ್ನು ಎತ್ತರಿಸಿಕೊಂಡು ನೋಡಬೇಕಾಯಿತು. ನಕ್ಕರು. ಕೈ ಕುಲುಕಿದರು. ನಾನೂ ಬೆಂಗಳೂರಿನವನೇ. ಇಲ್ಲಿ ಮನೆ ಎಲ್ಲಿ ಎಂದು ಕೇಳಿದರು. ಮನೆಯಲ್ಲಿ ಯಾರು ಯಾರಿದ್ದಾರೆ, ಎಲ್ಲರನ್ನೂ ಕರೆದುಕೊಂಡು ಮುಂದಿನ ವಾರ ಬನ್ನಿ ಎಂದರು. ಹೀಗೇ ಮಾತು ಇಂಗ್ಲಿಷ್‌ನಲ್ಲಿ ಮುಂದುವರೆಯಿತು. ಒಂದು ಹಂತದಲ್ಲಿ ನಿಮಗೆ ಕನ್ನಡ ಬರುತ್ತಾ ಎಂದರು. ಅವರು ಪ್ರಶ್ನೆ ಕೇಳಿದ ರೀತಿಯಲ್ಲೇ ಕನ್ನಡ ಅವರ ಮನೆ ಮಾತು ಎಂದು ಗೊತ್ತಾಯಿತು. ಬಿಡಿ, ಹಾಗಾದರೆ ನಾವು ಕನ್ನಡದಲ್ಲೇ ಮಾತನಾಡೋಣ ಎಂದು ಒಂದು ಪಕ್ಕಕ್ಕೆ ಕರೆದುಕೊಂಡು ಹೋಗಿ ಕಿಟಕಿ ಬಳಿ ನಿಲ್ಲಿಸಿಕೊಂಡರು.
ಸಂಜೀವ್ ಎಂಜಿನಿಯರ್. ಬೆಂಗಳೂರಿನ Global Institute of Technologyಯಲ್ಲಿ ಓದಿದವರು. ರಾಜರಾಜೇಶ್ವರಿ ನಗರದಲ್ಲಿ ಸ್ವಂತ ಮನೆ ಇದೆ. ನೆದರ್‌ಲ್ಯಾಂಡ್ಸ್‌ಗೆ ಬಂದು ಆರೇಳು ವರ್ಷಗಳಾಗಿವೆ. ಇಲ್ಲಿಯ ಜೀವನಶೈಲಿ, ನಾಗರಿಕರ ಮನೋಧರ್ಮ ತುಂಬಾ ಹಿಡಿಸಿದೆ. ನಾವು ಮಾತನಾಡುತ್ತಿದ್ದ ಜಾಗದಿಂದ ಸುಮಾರು ಇಪ್ಪತ್ತು ಮೈಲಿ ದೂರದಲ್ಲಿ ಅವರ ಮನೆ.
Global Institute ಎಂದ ತಕ್ಷಣವೇ ಮಾತು ಡಿಕೆ ಶಿವಕುಮಾರ್ ಕಡೆ ಹೊರಳಿತು. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾಫಿಯಾ, ಸಾರಿಗೆ ಸಮಸ್ಯೆ, ಜನಸಂದಣಿ, ಈಚಿನ ಚುನಾವಣೆ ಕಡೆ ಹೊರಳಿತು. ನೋಡಿ, ಚುನಾವಣೆಯಿಂದ ಸರ್ಕಾರ ಬದಲಾದರೂ it is a change. Yet no change. ಒಂದೇ ರೀತಿಯ ಜನ, ಅದೇ ರೀತಿಯ ಜನ ಮೂರು ಪಕ್ಷಗಳಲ್ಲೂ ಇದ್ದಾರೆ. ಅವರಲ್ಲೇ ಯಾರನ್ನಾದರೂ ಆರಿಸಬೇಕು.
ನಮಗೆ ಮಾತನಾಡಲು ಬೇಕಾದಷ್ಟು ವಿಷಯಗಳಿದ್ದವು. ಚರ್ಚ್ ಬಗ್ಗೆ ನಾವು ಏನೂ ಮಾತನಾಡಲೇ ಇಲ್ಲ. ಭಾರತದ ಬಗ್ಗೆ, ಕರ್ನಾಟಕದ ಬಗ್ಗೆಯೇ ಮಾತು. ಬೆಂಗಳೂರಿನ ದರ್ಶಿನಿ ಹೋಟೆಲ್ ಒಂದರ ಮುಂದೆ ಕಾಫಿ ಕುಡಿಯುತ್ತಾ ನಿಂತು ಹರಟುವ ಹಾಗೆ.
ತುಂಬಾ walking ಮಾಡುತ್ತೀರಾ ಎಂದು ಹರಟೆಮಲ್ಲ ಸಂಜೀವ್ ಕೇಳಿದರು. ಇಲ್ಲಿ ಅದೊಂದೇ ಕೆಲಸ. ನಾಲೆಗಳ ಸುತ್ತ ಸುತ್ತುಹೊಡೆಯುವುದು ಎಂದೆ. ನಮ್ಮ ತಂದೆ ಕೂಡ ಬಂದಿದ್ದಾರೆ. ಅವರು ಕೂಡ ಯಾವಾಗಲೂ ವಾಕಿಂಗ್ ಮಾಡುತ್ತಿರುತ್ತಾರೆ. ಇಷ್ಟೊಂದು ಓಡಾಡಿ ಮಂಡಿ ಚಿಪ್ಪು ಸವೆಸಿಕೊಳ್ಳಬೇಡಿ ಎಂದು ನಾನು ಎಷ್ಟು ಹೇಳಿದರೂ ಕೇಳುವುದಿಲ್ಲ, ಸಂಜೀವ್ ಗೊಣಗಿದರು.
ನನ್ನ ಜೊತೆ ಮಹಡಿಯಿಂದ ಕೆಳಗಿಳಿದು ಬೀಳ್ಕೊಟ್ಟರು. ಇಬ್ಬರಿಗೂ ಚರ್ಚ್, ನೆದರ್‌ಲ್ಯಾಂಡ್ಸ್ ಬಗ್ಗೆ ಮಾತನಾಡುವುದು ಮರೆತೇ ಹೋಗಿತ್ತು. ತುಂಬಾ ದಿನ miss ಮಾಡಿಕೊಂಡಿದ್ದ ಸಮಕಾಲೀನ ಭಾರತ-ಕರ್ನಾಟಕದ ಬಗ್ಗೆ ಒಳ್ಳೆಯ ಹರಟೆ, ಅದೂ ಕನ್ನಡದಲ್ಲಿ. ತುಂಬಾ ಸಂತೋಷದಿಂದ ಮನೆ ಕಡೆ ಹೊರಟೆ. ನಡಿಗೆಯಲ್ಲಿ ಚಿಮ್ಮು ಮೂಡಿತ್ತು.
ಸಂಜೀವ್ ಪರಿಣಾಮವಿರಬೇಕು, ಸಂಜೆ ಪೆಟ್ರೋಲ್ ಬಂಕ್ ಬಳಿ ನಾನು, ಸುಮಿತ್ರ ಮತ್ತು ಮೊಮ್ಮಗಳು ನಿಂತು ಹರಟುತ್ತಿದ್ದೆವು. ತರುಣ ಭಾರತೀಯರ ತಂಡವೊಂದು ನಮ್ಮ ಹತ್ತಿರ ಬಂತು. ಬ್ಯಾಟ್, ಬಾಲ್ ಹಿಡಿದು ಹೊರಟಿದ್ದರು. ಕ್ರಿಕೆಟ್ ಆಟಗಾರರ ತಂಡ. ನೀವು ಭಾರತದಿಂದ ಬಂದಿದ್ದೀರಾ? ಎಲ್ಲಿಂದ? ಓ, ಬೆಂಗಳೂರಿನಿಂದಲಾ? ತಂಡದವರಲ್ಲಿ ಒಬ್ಬ ಮುಂದೆ ಬಂದ. ಕೈಯಲ್ಲಿ ವಿಕೆಟ್. ನಾನು ಕೂಡ ಬೆಂಗಳೂರಿನವನು. ವಿದ್ಯಾರಣ್ಯಪುರದ ಬಡಾವಣೆಯವನು ಎಂದು ಪರಿಚಯ ಮಾಡಿಕೊಂಡ. ನಾವೆಲ್ಲರೂ ಬ್ರಹ್ಮಚಾರಿಗಳು. ನಿಮ್ಮ ಬೀದಿಯ ಹಿಂದುಗಡೆ ರಸ್ತೆಯಲ್ಲಿ ವಾಸವಾಗಿದ್ದೇವೆ ಎಂದ.
ಮತ್ತೆ ಎರಡು ಘಂಟೆಯ ನಂತರ ಪಿಜ್ಜ ಅಂಗಡಿಯಲ್ಲಿ ಇನ್ನಿಬ್ಬರು ತರುಣರು ಬಂದರು. ನೀವು ಕನ್ನಡದವರಾ ಎಂದು ಬಲು ಸಂಭ್ರಮದಿಂದ ಕೇಳಿದರು. ಅವರ ಸಂಭ್ರಮಕ್ಕೆ ಕಾರಣವಿತ್ತು. ಇದೀಗ ಎರಡು ತಿಂಗಳ ಹಿಂದೆ ಅವರು ಬೆಂಗಳೂರನ್ನು ಬಿಟ್ಟು ಬಂದಿದ್ದರು.
ದಿನಗಳು ಹೀಗೇ ಕಳೆದವು. ಭಾರತಕ್ಕೆ ವಾಪಸ್ ಹೊರಡಲು ಇನ್ನು ಮೂರು ನಾಲ್ಕು ದಿನಗಳಿದ್ದವು. ಸಂಜೆ ಪೇಟೆಯಿಂದ ಮನೆಗೆ ಹಿಂತಿರುಗುತ್ತಿದ್ದೆವು. ವಿದೇಶಿ ಮಹಿಳೆಯೊಬ್ಬಳು ಆತುರಾತುರವಾಗಿ ನಮ್ಮ ಹತ್ತಿರ ಬಂದು ಇಂಗ್ಲಿಷ್‌ನಲ್ಲಿ ನೀವು ಕರ್ನಾಟಕದವರಾ, ಬೆಂಗಳೂರಿನವರಾ, ಬೆಂಗಳೂರಿನಲ್ಲಿ ಎಲ್ಲಿ ಎಂದು ಖುಷಿಯಾಗಿ ಕೇಳಿದಳು. ನಾವು ನಮ್ಮ ಬೆಂಗಳೂರಿನ ಮನೆಯ ಬಗ್ಗೆ ತಿಳಿಸಿದಾಗ, ನಾನು HSR ಬಡಾವಣೆಯಲ್ಲಿ ನಾಲ್ಕು ವರ್ಷ ಇದ್ದೆ. ಕನ್ನಡಿಗನನ್ನೇ ಮದುವೆ ಆಗಿದ್ದೇನೆ. ಆತ ಯೋಗ ಶಿಕ್ಷಕ ಎಂದು ತುಂಬಾ ಖುಷಿಯಿಂದ ಹೇಳಿದಳು. ಅವಳ ಮುಖದಲ್ಲಿ ಭಾರತೀಯ ಕಳೆ ಇದೆ ಎಂದು ನನಗೂ ಅನ್ನಿಸಿತು. ಹಾಗಾದರೆ, ನೀವು ಅರ್ಧ ಕನ್ನಡಿಗರಲ್ಲವೇ ಅಂದರೆ. ಬಾಯಿ ತುಂಬಾ ನಗುತ್ತಾ, ಇಲ್ಲ ನಾನು French, ನನ್ನ ಹೊಟ್ಟೆಯಲ್ಲಿರುವ ಮಗು ಅರ್ಧ ಕನ್ನಡಿಗ ಎಂದು ತನ್ನ ಉಬ್ಬಿದ ಹೊಟ್ಟೆಯ ಮೇಲೆ ಕೈ ಹೊಡೆದುಕೊಂಡು ನಕ್ಕಳು. ಅವಳು ತುಂಬು ಗರ್ಭಿಣಿ ಎಂಬುದನ್ನು ನಾವು ಗಮನಿಸಿರಲೇ ಇಲ್ಲ.
ಹೀಗೆ ಪ್ರವಾಸದುದ್ದಕ್ಕೂ ಯಾರು ಯಾರೋ ಸಿಗುತ್ತಲೇ ಇರುತ್ತಾರೆ. ನಮ್ಮ ನೆನಪು, ಅನುಭವಗಳನ್ನು ಎಲ್ಲೆಲ್ಲಿಗೋ ಕೊಂಡೊಯ್ಯುತ್ತಿರುತ್ತಾರೆ. ನಾವು ಜನರ ಬಗ್ಗೆ ದಣಿವು ಮೂಡಿಸಿಕೊಳ್ಳಬಾರದು ಅಷ್ಟೇ!
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.