ಮನುಷ್ಯರು ಮಾಡಬಹುದಾದ ಒಳ್ಳೆಯ ಕೆಲಸಗಳಲ್ಲಿ ಕತೆ ಹೇಳುವುದೂ ಒಂದು ಎಂಬುದು ಚಿತ್ತಾಲರ ಗಾಢ ನಂಬಿಕೆ. ಈ ಬಗ್ಗೆ ಅವರು ಅಲ್ಲಲ್ಲಿ ಬರೆದಿರುವುದನ್ನು, ಮಾತನಾಡಿರುವುದನ್ನು ಗಮನಿಸಿದ್ದೇನೆ. ಚಿತ್ತಾಲರು ಬೆಂಗಳೂರಿಗೆ ಬಂದಿದ್ದ ವಿಷಯವನ್ನು ಗೆಳೆಯರೊಬ್ಬರು ತಿಳಿಸಿದಾಗ ಅವರನ್ನು ಸಂಪರ್ಕಿಸಿದೆ. ಫೋಟೊ ತೆಗೆಯುವ ನನ್ನ ಇಂಗಿತಕ್ಕೆ ಕೂಡಲೇ ಉತ್ಸಾಹದಿಂದ ಸಮ್ಮತಿ ಸೂಚಿಸಿದರು. ಶೂಟ್ ಗೆ ಹೊರಡುವ ಮುನ್ನ ನನಗೊಂದು ಆಘಾತ ಕಾದಿತ್ತು: ಕ್ಯಾಮೆರಾ ಮೆಕ್ಯಾನಿಸಮ್ ನಲ್ಲಿ ದೋಷ ಕಾಣಿಸಿತು. ಶಟರ್ ನನ್ನ ನಿಯಂತ್ರಣ ಮೀರಿ ಕೆಲವು ಬಾರಿ ತೆರೆಯುತ್ತಿತ್ತು, ಕೆಲವು ಬಾರಿ ತೆರೆಯುತ್ತಿರಲಿಲ್ಲ. ಹೇಗೋ ಧೈರ್ಯ ಮಾಡಿ ಅವರಿದ್ದ ಹೋಟೆಲಿಗೆ ಹೋದೆ.
ಚಿತ್ತಾಲರನ್ನು ಕಂಡು ಒಮ್ಮೆಲೇ ಬೆರಗಾದೆ. ಇಸ್ತ್ರಿ ಮಾಡಿದ ಗರಿಗರಿಯಾದ ಫುಲ್ ಆರ್ಮ್ ಶರ್ಟು, ಪ್ಯಾಂಟು, ಶೂ ಧರಿಸಿ ಯಾವುದೋ ಪೂರ್ವನಿಗದಿತ ಕಚೇರಿಯ ಕಾರ್ಯಕ್ರಮಕ್ಕೆ ಹೊರಡುವಂತೆ ಬಲು ಅಚ್ಚುಕಟ್ಟಾಗಿ ಸಜ್ಜಾಗಿ ಉತ್ಸಾಹದಿಂದ ಓಡಾಡುತ್ತಿದ್ದರು. ಹೋದಕೂಡಲೇ ನನ್ನ ಕ್ಯಾಮೆರಾದ ಅನಿರೀಕ್ಷಿತ ಸಮಸ್ಯೆಯ ಬಗ್ಗೆ ತಿಳಿಸಿದೆ. ಅದಕ್ಕೆ ಅವರು ‘ಪರವಾಗಿಲ್ಲ, ನೀವು ತಲೆಕೆಡಿಸಿಕೊಳ್ಳಬೇಡಿ. ಫೋಟೊ ಚೆನ್ನಾಗಿ ಬರಬೇಕಾದರೆ ಎಲ್ಲಕ್ಕಿಂತ ಮುಖ್ಯವಾಗಿ ಅದೃಷ್ಟವಿರಬೇಕು. ನನಗೆ ಆ ಅದೃಷ್ಟವಿದೆ ಅಂತ ನಿನ್ನೆಯೇ ಅನಿಸಿದೆ. ಫೋಟೊ ಚೆನ್ನಾಗಿ ಬರುತ್ತದೆ’ ಎಂದು ಬಿಟ್ಟರು. ನನಗೆ ಚಿತ್ತಾಲರು ಮಾತನಾಡುತ್ತಿದ್ದಾರೋ, ಅವರ ಕಥೆಗಳ ಪಾತ್ರ ಮಾತನಾಡುತ್ತಿದೆಯೋ ಎಂದು ಒಂದು ಕ್ಷಣ ದಿಗ್ಭ್ರಮೆಯಾಯಿತು. ಚಿತ್ತಾಲರ ಮಾತುಗಳನ್ನು ಕೇಳಿಸಿಕೊಂಡಾಗ, ಅಂದಿನ ಫೋಟೊ ಶೂಟ್ನ ಫಲಿತಾಂಶದ ಬಗ್ಗೆ ಅವರಿಗಾಗಲೇ ಒಂದು ಮುನ್ಸೂಚನೆ ದೊರೆತಿತ್ತೆಂಬ ಅಂಶ ನನ್ನಲ್ಲಿ ಒಂದು ಬಗೆಯ ವಿಸ್ಮಯವನ್ನು ಉಂಟುಮಾಡಿತು. ಕತ್ತೆತ್ತಿ ನೇರವಾಗಿ ದಿಟ್ಟಿಸುತ್ತಾ, ತುಂಬಾ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದ ಚಿತ್ತಾಲರನ್ನು ಸುಮಾರು ಅರ್ಧ ಗಂಟೆ ಕಾಲ ಕಾಣುತ್ತಾ ಹೋದೆ.
(ಎ.ಎನ್. ಮುಕುಂದ ಅವರ ‘ಮುಖಮುದ್ರೆ’ ಪುಸ್ತಕದಿಂದ.ಈ ಪುಸ್ತಕವನ್ನು ನವ ಕರ್ನಾಟಕ ಪುಸ್ತಕದಂಗಡಿಯ ಮಳಿಗೆಗಳಿಂದ ಕೊಳ್ಳಬಹುದು. ಅಥವಾ MUP@MANIPAL.EDU ಈ ಮೇಲ್ ವಿಳಾಸಕ್ಕೆ ಬರೆದು ತರಿಸಿಕೊಳ್ಳಬಹುದು)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ