ಚಾಮಿ ಸಸಿಗಳತ್ತ ಗಮನ ಹರಿಸಿರಲಿಲ್ಲ. ಜೀವ ತುಂಬಿಕೊಂಡಿದ್ದ ಹಚ್ಚ ಹಸಿರು ಎಲೆಗಳು ಸೊರಗಿ ನೆಲನೋಡುತ್ತಿವೆ. ಮನಸ್ಸು ಉದ್ವಿಗ್ನಗೊಂಡಿತು. ಇರುಳೊತ್ತಿನಲ್ಲಿ ಏನೂ ಮಾಡಲಾಗದು ಎಂದು ಹತಾಶನಾಗಿ ಮೊಬೈಲ್ತೆಗೆದ. ಇಲ್ಲಿ ನೆಟ್ವರ್ಕಿಗು ಭಂಗ. ಮಹಡಿ ಮೇಲತ್ತಿ ನಾಲಕ್ಕೂ ಮೂಲೆ ನಿಂತು ತಡಕಾಡಿದ. ಕೊನೆಗೊಂಚೂರು ಕೊಂಡಿ ಸಿಕ್ಕಿತು. ಕೆರೆ ಕೋಡಿ ಒಡೆದಂತೆ ಮೆಸೇಜುಗಳು ಹರಿಯಲಾರಂಭಿಸಿದವು.
ಮಧುಸೂಧನ್ ವೈ ಎನ್ ಬರೆದ ವಾರದ ಕತೆ.
ತನ್ನೆರಡು ಒಂಟೆಗಳನ್ನು ಅಕ್ಕಪಕ್ಕ ಕೂರಿಸಿ ಚಾಮಿಯ ಕೈಕಾಲು ಆಡದಂತೆ ಕಟ್ಟಿಹಾಕಿದ್ದಳು ಪ್ರೆಪ್. ಮುಂದಿನ ನಡೆಗೆಂದು ಮಾನಿಟರನ್ನೆ ದಿಟ್ಟಿಸುತ್ತ ಕುಳಿತಿದ್ದ ಚಾಮಿಯ ಕ್ಲಾಕ್ ಐಸಿಯೂ ನಲ್ಲಿರುವವನ ಉಸಿರಿನಂತೆ ಜರ್ರನೆ ಇಳಿದುಹೋಗುತ್ತಿತ್ತು. ಅವನಿಗೇನು ಇಡಲು ಬೇರೆ ಅವಕಾಶಗಳೇ ಇಲ್ಲವಂತೇನಿಲ್ಲ, ಎರಡು ಮೂರು ದಿಕ್ಕುಗಳಿಂದ ಆಲೋಚಿಸಿದರೆ ಪ್ರೆಪ್ ಳನ್ನೇ ಗಪ್ಪೆನಿಸುವಂತ ಸ್ಟೆಪ್ಪುಗಳಿದ್ದವು. ಆದರೆ ಸಮಯ ಯಾರಪ್ಪನದು? ಬದುಕೇ ಹಾಗಲ್ಲವೇ. ಸೃಷ್ಟಿ ನಮಗೆಂದು ಮೀಸಲಿಟ್ಟಿರುವ ಸಮಯದೊಳಗೆ ಅತ್ಯುತ್ತಮ ಆಟ ಆಡುವ ಒತ್ತಡ ಎಲ್ಲರಿಗೂ. ಅಗತ್ಯವಾಗಿ ಐವತ್ತು ಓವರಿನ ಆಟದಂತೆ. ಯಾವ ಓಟದಲ್ಲಾದರೂ ಎಲ್ಲಾ ಸ್ಪರ್ಧಿಗಳು ಕೈಕೈ ಹಿಡಿದು ಒಟ್ಟಿಗೆ ಗುರಿ ತಲುಪಿದ ನಿದರ್ಶನ ಉಂಟೇ?. ಸಮತಾವಾದಿಗಳು ಹಾಗನ್ನುತ್ತಾರೆ, ನಮ್ಮೊಡನೆ ಬನ್ನಿ, ಅಂತಹ ಸ್ಪರ್ಧೆ ಏರ್ಪಡಿಸುತ್ತೇವೆಂದು. ಸ್ಪರ್ಧಾವಾದಿಗಳನ್ನು ಕೇಳಿನೋಡಿ. ಅದೆಂತ ಸ್ಪರ್ಧೆ? ಯಾರೂ ಓಡೋದೇ ಇಲ್ಲ ಅವಾಗ, ಎಂದುಬಿಡುತ್ತಾರೆ.
“ಸೋಲ್ತೀನಿ ಅಂತ ಗೊತ್ತಿದ್ರೂ ಯಾಕೆ ಆಡ್ತಿದಿಯ”, ಪ್ರೆಪ್, ಅರ್ಥಾತ್ ಪ್ರಫುಲ್ಲಿಕಾ ಚಾಮಿಯ ಕಾಲೆಳೆದಳು. ಒಂದು ವೇಳೆ ಅವನು ಇದನ್ನು ಹೀಯಾಳಿಕೆಯ ಧನಿಯಲ್ಲಿ ಓದಿಕೊಂಡುಬಿಟ್ಟರೆ? ಕಳವಳ. ಆನ್ ಲೈನ್ ಚಾಟಿಂಗಿನ ಸಮಸ್ಯೆಯೆ ಇದು. ಸಂವಹನದ ಮುಕ್ಕಾಲುಭಾಷೆಯನ್ನು ಕಣ್ಣು, ಹಣೆ, ಹುಬ್ಬು, ತುಟಿ, ಕೆನ್ನೆಮಾತಾಡುತ್ತವೆ. ಇಲ್ಲಿ ಅದೇ ಇಲ್ಲ. ಹಿಂದಗುಂಟಲೆ ಮೂರು ನಗುವಿನ ಸ್ಮೈಲಿಗಳು ಜೊತೆಗೊಂದು ಕಣ್ಣೊಡೆಯುವ ಸ್ಮೈಲಿ ಲಗತ್ತಿಸಿದಳು. ಡಿಜಿಟಲ್ ಸ್ಮೈಲಿಗಳು ಎಂದಿಗೂ ಜೈವಿಕ ಅಂಗಗಳನ್ನು ಯಥಾವತ್ತಾಗಿ ಅನುಕರಿಸಲು ಸಾಧ್ಯವಿಲ್ಲ. ಹಂಗೆಲ್ಲ ಅನುಕರಣೆ ಮಾಡುವಂತಿದ್ದರೆ ಸೃಷ್ಟಿಯ ಕಲೆಗೆಲ್ಲಿ ಬೆಲೆ?
“ಗೆಲ್ಲೋಕಂತಲೇ ಆಡ್ತೀನಿ ಪ್ರೆಪ್. ಆದರೆ ಈ ಸೋಲು ನನಗಿಷ್ಟ”, ವಿಂಕಿಂಗ್ ಅಟ್ಯಾಚಡ್.
ಆ ಕಡೆಯಿಂದ ಮುಯ್ಯಿಯಾಗಿ ಮುತ್ತು. ಪ್ರತಿ ಸಲವೂ ಆ ಮುತ್ತಿನ ಮೂತಿ ಅದೇ ದಿಕ್ಕಿನಲ್ಲಿ ತಿರುಗಿರುತ್ತದೆ. ಪ್ರೆಪ್ ಹೆಣ್ಣೆಂಬುದು ಖಚಿತ. ವಯಸ್ಸು, ರೂಪ, ಮದುವೆಯೋ, ಮಕ್ಕಳೋ, ಕುರುಡಿಯೋ ಕುಂಟಿಯೋ – ಊಹ್ಞೂ. ಬಂಗಾಳದವಳು ಅಂತಾಳೆ, ಎಷ್ಟು ನಿಜವೋ ಎಷ್ಟು ಸುಳ್ಳೋ. ಆದರೆ ಚೆಸ್ ಮಾತ್ರ ಚನ್ನಾಗಿ ಆಡ್ತಾಳೆ. ಸೋತರೆ ಬೆನ್ನತ್ತಿ ಇನ್ನೊಂದು ಆಟ ಆಡಿಸಿ – ಇವನನ್ನ ಸೋಲಿಸೋವರೆಗೂ ನಿದ್ದೆ ಮಾಡಲು ಬಿಡಳು. ಇಸ್ಪೀಟಿನ ಬಗೆಯಚಟ. ಸಕ್ಕತ್ತಾಗಿ ಆಡ್ತಾಳೆ ಎಂದಮಾತ್ರಕ್ಕೆ ಗ್ರಾಂಡ್ ಮಾಸ್ಟರ್ ಅಂತೇನು ಅಲ್ಲ, ಚಾಮಿಯ ಲೆವೆಲ್ಲಿಗೆ ಬಡಿದಾಡಲು ಸಮ ಇರುವಂತವಳು. ಒಂದೆಜ್ಜೆ ಮುಂದೆ. ಪರಿಣಾಮ, ಈ ಆಟ ಅವರ ಅದೆಷ್ಟೋ ಇರುಳುಗಳನ್ನು ನುಂಗಿಬಿಟ್ಟಿವೆ. ಚೆಸ್ ನಲ್ಲೆಂತ ರೊಮ್ಯಾನ್ಸ್ ಅಂತ ಚಾಮಿಯ ಹೆಂಡತಿಗೂ ತಾತ್ಸಾರ.
“ಯು ಮೀನ್, ನಾನು ಗೆಲ್ಲಲಿ ಅಂತ ಸೋಲ್ತೀಯಾ?”, ಹಂಗಂತಾಳೆ, ಆದರೆ, ಅದು ತಮಾಷೆಗೆ ಮಾತ್ರ. ರೊಮಾಂಟಿಕ್ಸ್ಟೇಟ್ ಮೆಂಟ್. ತನ್ನ ಶ್ರಮದಿಂದಲೇ ತಾನು ಗೆದ್ದಿರುವುದು ಎಂಬ ಆಂತರ್ಯದ ಹಠ ಇದ್ದೇ ಇದೆ.
“ನೋ ನೋ. ನಾನು ಸೋತಿದ್ದು ದಿಟವೇ. ಆದರೆ ಈ ಸೋಲು ನನ್ನ ಬದುಕಿನ ಮಹತ್ವದ ಆಟಗಳ ಗೆಲುವಿಗೆ ಸಹಾಯಮಾಡುತ್ತದೆ. ಬದುಕು ಸಂಕೀರ್ಣ ಅನ್ನೋದು ಎಲ್ಲರಿಗೂ ತಿಳಿದಿರುವಂತದ್ದೇ. ಆದರೆ ಅದಕ್ಕೊಂದು ಚೀಟ್ ಶೀಟ್ ಉಂಟು. ನಾವು ಚೀಟ್ ಶೀಟ್ ಅಂತೀವಿ, ನೀವೇನಂತಿರೋ ಗೊತ್ತಿಲ್ಲ. ಒಂತರ ಬದುಕಿಗೇನೆ ಚಳ್ಳೆಹಣ್ಣು ತಿನ್ನಿಸುವ ಸೂತ್ರಗಳು ಅಂತಿಟ್ಟುಕೋ. ಯಾರೂ ಯಾವತ್ತೂ ಎಲ್ಲಾನೂ ಗೆಲ್ಲೋಲ್ಲ ಅನ್ನೋದು ಸಾರ್ವತ್ರಿಕ ಸತ್ಯ ಅಲ್ವಾ? ಅಂತಹ ಮಹಾನ್ ಆಟಗಾರರೂ ಕೂಡ ಪ್ರತಿ ಮ್ಯಾಚಿನಲ್ಲು ಸೆಂಚುರಿ ಹೊಡಿಲಿಲ್ಲ. ಅಂತಂತ ಬಲಿಷ್ಠ ತಂಡಗಳೂ ಕೂಡ ಎಲ್ಲಾ ಮ್ಯಾಚ್ ಗೆಲ್ಲಲಾಗಲಿಲ್ಲ. ತುಂಬಾ ಜನಕ್ಕೆ ಗೊತ್ತಿರದ ಸತ್ಯ ಅಂದರೆ ಸೋಲು ಗೆಲುವು ಮನಸ್ಥಿತಿಗೆ ಸಂಬಂಧಪಟ್ಟಿದ್ದು. ಆಟಕ್ಕಲ್ಲ. ಅದಕ್ಕೇಂತ ನಾನು ಏಕಕಾಲಕ್ಕೆ ಎರಡು ಮೂರು ಆಟಗಳನ್ನ ಆಡ್ತಿರ್ತೀನಿ. ಅದರಲ್ಲಿ ಚೆಸ್ ಕೂಡ ಒಂದು. ಈ ಆಟದ ಸೋಲನ್ನ ಬೇರೊಂದು ಆಟದ ಲೆಕ್ಕಕ್ಕೆ ಸೇರಿಸ್ತೀನಿ. ಅಲ್ಲಿರೋ ನನ್ನ ಪಾಲಿನ ಗೆಲುವನ್ನ ನಾನು ದಕ್ಕಿಸಿಕೊಳ್ತೀನಿ….”.
ಡಿಸ್ ಲೈಕ್. ತಡರಾತ್ರಿ ಮೂರು ಗಂಟೆ. ಹಾಗೇ ರೊಮಾನ್ಸ್ ನತ್ತ ಜಾರುವ ಹೊತ್ತಲ್ಲಿ ಗಂಭೀರ ವಿಷಯತಂದು ಮೂಡ್ ಹಾಳು ಮಾಡಿಬಿಡುತ್ತಾನೆ. ಸ್ಖಲನಕ್ಕೆ ಭಂಗ ತಂದಷ್ಟು ಕೋಪ. ಅನ್ ರೊಮಾಂಟಿಕ್ ಬಾಸ್ಟರ್ಡ್. ಎಲ್ಲ ಹಾಳು ಮಾಡಿಬಿಟ್ಟ. ಚೆಸ್ ಆಡಿ ಇವನನ್ನ ಸೋಲಿಸೋದೇ ನನ್ನ ಜೀವನದ ಮೂಲ ಉದ್ದೇಶ ಅಂತ ತಿಳಕೊಂಡಿದಾನೆ, ಗೂಬೆ. ಪಟ್ಟಾಗಿ ಕೂತರೆ ಸಾಲು ಸಾಲಾಗಿ ಮಣ್ಣು ಮುಕ್ಕಿಸಿ, ಇನ್ನೆಂದೂ ಇತ್ತ ತಿರುಗಿ ನೋಡಬಾರದು ಹಾಗೆ ಮಾಡ್ತೀನಿ.
ಮನಸ್ಸು ತಿಳಿಗೊಂಡಾಗ ಅನಿಸುತ್ತೆ, ಏನೋ ಹೇಳಿದನಲ್ಲ, ಚೀಟ್ ಶೀಟ್ ಅಂತ. ಹಾಗನ್ನೋದೂ ಒಂದು ಇದೆಯಾ? ನಾನೂ ಬಳಸಬಹುದಾ? ಪ್ರಯೋಗ ಇವನ ಮೇಲೆಯೆ ಯಾಕಾಗಬಾರದು? ಸೋತು ಹಿಮ್ಮೆಟ್ಟುತ್ತಿರುವ ಕುದುರೆ ಹಿಂದೆಸರಿಯುತ್ತ ಕಡೆಗಳಿಗೆಯಲ್ಲಿ ಚಮಕ್ ಕೊಟ್ಟಂತ ರೋಮಾಂಚನ. ಎಲ್ ಓ ಎಲ್. ಲಾಟ್ಸ್ ಆಫ್ ಲೈಕ್ಸ್. ಅರ್ಥಕೆಡಿಸೋದರಲ್ಲು ಅರ್ಥವಿದೆ.
***
ಚಾಮರಾಜೇಂದ್ರ ಸುಮಾರು ವರ್ಷಗಳಿಂದ ಹೀಗೊಂದು ಆಲೋಚನೆಯನ್ನು ಮೆಲುಕುತ್ತಲೇ ಇದ್ದ, ಏನೂ ಬ್ಯಾಡಾ, ಕನಿಷ್ಟ ಮರವಳಿ ಮಾಡಿಸಿ ಬಿಟ್ಟುಬಿಡಾನ, ಊರಿಗೆಲ್ಲಾ ದೇಶೋದ್ಧಾರದ ಪುಂಗಿ ಊದ್ತೀನಿ, ಪೋಷ್ಟ್ ಹಾಕ್ತೀನಿ, ಕಮೆಂಟು ಮಾಡ್ತೀನಿ, ಫಾರ್ವರ್ಡ್ ಮಾಡ್ತೀನಿ, ನಂದೇ ಜಮೀನನ್ನ ಬರಡು ಬಿಟ್ಟಿದ್ದೀನಿ. ಒಂದು ಪುಟ್ಟತೋಟ ಅಂತಾದರೆ ಹೋಗಿ ಬತ್ತ ಒಳ್ಳೆ ಗಾಳಿ ನೆರಳು ತಂಪು, ಮನೆ ಮಕ್ಕಳಿಗೆಲ್ಲ ತಿನ್ನೋಕಂತ ಹಣ್ಣು, ಕಷ್ಟಕಾಲಕ್ಕೆಆಸರೆ. ನಡುವೆ ತೋಟದಮನೆ ಅಂತ ಇದ್ದರೆ ಅದು ಇನ್ನೂ ಚಂದ. ಮೈನೊಂದಾಗ ಮಣ್ಣಿನ ಕಾವು ಕೊಟ್ಟುಕೊಳ್ಳಬೋದು. ಮನನೊಂದಾಗ ಆಕಾಶನೆ ಹೊದ್ದುಕೊಂಡು ಮಲಗಬೋದು. ಹಾಗೆಲ್ಲ ಕನಸು ಕಾಣ್ತಿದ್ದೋನಿಗೆ ಗ್ಯಾನ ಕೂಡಿ ಬಂದದ್ದು ಈ ಮಳೆಗಾಲಕ್ಕೆ. ಇಪ್ಪತ್ತು ವರ್ಷಗಳಾಗಿದ್ದವು ಹೊಲದೊಳಗೆ ಕಾಲಿಕ್ಕಿ. ಯಾರಿಗಾದರೂ ತೋರಿಸಿದರೆ ಇಲ್ಲಿ ಹೊಲಾನೇ ಇಲ್ಲ ಎಂಬಷ್ಟು ಬಂಜರಾಗಿ ತಗ್ಗುದಿಬ್ಬಗಳ ಆಗರವಾಗಿತ್ತು ಭೂಮಿ.
“ಸಾಯೇಬ್ರೆ ಇಗ ಇಲ್ಲಿಂದ ಇಲ್ಲಿಗೆ. ಆಮ್ಯಾಕೆ ಇದುನ್ನ ನೋಡು, ನಿಮ್ಮ ತಾತನ ಕಾಲದಾಗೆ ಊಣಿರೋಕಲ್ಲು. ಯೋಸೊರ್ಸ ಆತೋ ಗೇದು. ನಿಮ್ಮಪ್ನು ಗೇಲಿಲ್ಲ. ನೀನು ಗೇಲಿಲ್ಲ. ಅದಿಕ್ಕೆ ಕಾಮಲ್ಲ. ಈ ಕಲ್ಲಿನನ್ಯಾರಕ್ಕೆ ನಿಮ್ಮೊಲ”. ಯಾವ ಕಾಲಕ್ಕೋ ಬರೆಸಿದ್ದ ಚೆಕ್ ಬಂದಿ ತರಿಸಿ ಅಕ್ಕ ಪಕ್ಕ ಯಾರಿದಾರೆ ಅಂತ ತಿಳಕೊಂಡು, ಅವರನ್ನು ಕರೆಸಿ ತನ್ನ ಹೊಲ ಹುಡುಕಿಕೊಂಡಿದ್ದ ಚಾಮಿ.
“ಇನ್ನು ಉಡುಗನ ವೈಸು. ಯೋಳದೋರ ಮಾತು ಕ್ಯೋಳಬಕು. ಯಂಗು ಬಂದಿದಿಯ ಸುಮ್ಕೆ ಉಣಸೆ ಸಸಿ ಊಣಿಸಿ ಯಾರ ಕೈಗಾನ ಒಂದೀಟು ಕಾಸು ಕೊಟ್ಟು ಒಂದೆಲ್ಡು ವರ್ಸ ನೀರೊಯ್ದು ಸಾಕಕೇಳು. ನಿನ್ ಕೈನಾಗೆ ಜಲದ ಗೆರೆ ಕಾಮಂಗಿಲ್ಲ. ದುಡ್ಡು ಕರ್ಸು ಮಾಡಕೆ ಉಪಾಯವ ಕ್ಯೋಳು ಬೇಕಾದ್ರೆ ಸಾವ್ರ ಕೊಡ್ತೀವಿ”. ಬರಗಾಲದ ಬಟ್ಟಲೆನಿಸಿರುವಂತ ಪ್ರದೇಶದಲ್ಲಿ ಅವನ ಗ್ರಹಚಾರಕೆಟ್ಟಿತ್ತೋ, ಹಳ್ಳಕ್ಕೆ ಬೀಳಿಸಲೆಂದೆ ಹಾಗಾಯಿತೋ, ಸುತ್ತ ಮುತ್ತಲಿನವರ ಕಣ್ಣಾಗುವಂತೆ ಅಂತರ್ಜಲವು ಉಕ್ಕಿ ಊರವರು ಕಣ್ಣು ಬಾಯಿ ಬಿಡುವಂತಾಯಿತು. ಇಲ್ಲದಿದ್ದರೆ ಈ ಕತೆಯೇ ಹುಟ್ಟುತ್ತಿರಲಿಲ್ಲ. ಹಂಗನ್ನಬಾರದು ರಾಜ, ಗಂಗೆ ಎಲ್ಲರಿಗೂ ಒಲಿಯಲ್ಲ ಅಂತಾರೆ ಜನ. ತರುವಾಯ ಜೇಸಿಬಿಯ ಪಾದಾರ್ಪಣೆಯಾಗಿ ಅದು ತನ್ನಕಾಲುಗಳನ್ನು ಊರಗಲ ಅಗಲಿಸಿ ನಿಂತು, ಜಾಲಿ, ಬೇಲಿ, ಕತ್ತಾಳೆ, ತಂಗಟೆಕುಲ-ನೆಲೆ ನೋಡದೆ ಸಕಲ ಗಿಡಗೆಂಟೆಗಳನ್ನು ತನ್ನಕೊಕ್ಕಿನಿಂದ ಒಂದೇಟಿಗೆ ತರದು ಬುಡಸಮೇತ ಎಬ್ಬಿಸಿ, ತದನಂತರ ಎರಡು ಸಾಲು ಟ್ರಾಕ್ಟರಿನಿಂದ ಗೆಯ್ಯಿಸಿ, ಹೆಂಟೆಗಳನ್ನು ಒಡೆಸಿ, ಅಕ್ಕಪಕ್ಕದ ಜಮೀನಿನೊಳಗೆ ಕರಗಿಹೋಗಿದ್ದ ಬದುಗಳನ್ನು ಪುನರ್ ಸ್ಥಾಪಿಸಿ ಒಂದುಮಟ್ಟಕ್ಕೆ ಸಮ ಮಾಡಿ ಮೋಟರು ಇಳಿಸಿ ಪೈಪುಗಳನ್ನು ಹೂಣಿಸಿ ನೀರೆತ್ತಿ ನೆತ್ತಿಗೆ ಸೋಕಿಸಿಕೊಳ್ಳುವುದರೊಳಗೆ ಚಾಮಿಯ ನೀರಿಳಿದಿತ್ತು. ಎಲಾ ಎಲಾ ಅದುಮ್ಕಂಡು ಬೆಂಗಳೂರ್ನಾಗೆ ಬಿದ್ದಿದ್ದರೆ ಚೆನ್ನಾಗಿತ್ತೇನೋ, ಎಂಜಿನಿಯರ್ ಕ್ಯಾಮೆಗೆ ತಾನು ಲಾಯಕ್ಕು, ಬೇಸಾಯ ಶೋಕಿಗಲ್ಲ ಎಂಬ ಬುದ್ಧೋದಯವಾಗುತ್ತಿದ್ದಂತೆ ಆಸಾಮಿ ನಾಪತ್ತೆ,
“ನಿಮಿಗ್ಯಾಕೆ ಬೇಕಿತ್ತು ಸಾ. ತಿಂಗಳ ತಿಂಗಳ ಸಂಬಳ ಎಣಿಷ್ಕಮದು ಬಿಟ್ಟು ಉರಿಯೋ ಬಿಸಿಲ್ನಾಗೆ”.
“ಮಾಡೋರೇ ಮಾಡಾಕಾಗದೆ ಊರು ಬಿಟ್ಟವರೆ. ನೀವು ನೋಡಿದರೆ…”.
“ಡ್ಯೂಟಿ ಎಲ್ಲಿ ಸಾ, ಪ್ರವೀಟೋ ಗೋರ್ಮೆಂಟೋ”
“ಸಿವಿಲ್ಲೋ?”
“ತಿಂಗಳಿಗೆ ಲಕ್ಸನೋ ಎರಡು ಲಕ್ಸಾನೋ?”.
ಬದುಕು ಸಂಕೀರ್ಣ ಅನ್ನೋದು ಎಲ್ಲರಿಗೂ ತಿಳಿದಿರುವಂತದ್ದೇ. ಆದರೆ ಅದಕ್ಕೊಂದು ಚೀಟ್ ಶೀಟ್ ಉಂಟು. ನಾವು ಚೀಟ್ ಶೀಟ್ ಅಂತೀವಿ, ನೀವೇನಂತಿರೋ ಗೊತ್ತಿಲ್ಲ. ಒಂತರ ಬದುಕಿಗೇನೆ ಚಳ್ಳೆಹಣ್ಣು ತಿನ್ನಿಸುವ ಸೂತ್ರಗಳು ಅಂತಿಟ್ಟುಕೋ. ಯಾರೂ ಯಾವತ್ತೂ ಎಲ್ಲಾನೂ ಗೆಲ್ಲೋಲ್ಲ ಅನ್ನೋದು ಸಾರ್ವತ್ರಿಕ ಸತ್ಯ ಅಲ್ವಾ?
ಊರಿಗೆ ಚಾಮಿ ಮೇಲೆ ಒಂಥರ ಕುತೂಹಲ, ಇನ್ನೊಂಥರ ಅನುಕಂಪ. ದಪ್ಪನಾಗಿ ಮಾಡಿಕ್ಕಿರಬೇಕು. ಅಲ್ಲಿಖರ್ಚು ಮಾಡಿ ತುಳುಕಿದ್ದನ್ನ ಇಲ್ಲಿ ಸುರಿಯಾಕೆ ಬಂದಿರಬೇಕು. ಮಾಡಲಿ ಬಿಡಿ. ನಾಲ್ಕಾರು ಜನಕ್ಕೆ ಹಂಚಿಕೆಯಾದರೆ ಸಾಹೇಬರೇನು ಸಣ್ಣ ಆಗೋದಿಲ್ಲ ಅಂತಾರೆ.
“ಎಲ್ಲಿ ಸಾ, ನಿಮ್ಮ ಎಂಗುಸ್ರು ಬರ್ಲಿಲ್ವ್ಯಾ”.
ಒಬ್ಬೊಬ್ಬರೇ ಬತ್ತಾರೆ, ಹೋಗ್ತಾರೆ. ಹೆಂಡತಿ ಮಕ್ಕಳ ಸುದ್ದಿಯಿಲ್ಲ. ಕೇಳಿದರೆ ಏನೋ ಒಂದು ಹಾರಿಕೆ ಉತ್ತರ. ದೇಶಾಂತರ ಹೋದೋರಿಗೆ ಇದ್ಕಿದಂಗೆ ಊರಿನ ನೆನಪಾಗೈತೆ ಅಂದರೆ, ಏನೋ ಕೊರೆ ಇರಬೇಕು. ಬಿಟ್ಟರೂ ಬಿಟ್ಟಿರಬೋದೇನೋ ಯಾರಿಗ್ಗೊತ್ತು.
“ನೀವು ಈ ಕಡೆಕೆ ಬಂದಾಗ ಮೇಡಮ್ಮು ಮನ್ಯಾಗೆ ಒಬ್ರೆ ಇರ್ತಾರೋ”. ಕಾಳಜಿ ಎಂತದು.
ಚಾಮಿಯ ಆಗಮನದಿಂದ ಕೆಲಕಾಲ ಸಂಚಲನ ಉಂಟಾಗಿದ್ದರೂ ನಾಪತ್ತೆಯಾದ ನಂತರ ಇನ್ನು ಸಾಹೇಬರು ಇತ್ತಕಡಿಕೆ ತಲೆ ಹಾಕಲ್ಲ ಅಂತ ನಸುನಕ್ಕ ಊರು ದವಡೆಯಲ್ಲಿದ್ದ ಹೊಗೆಸೊಪ್ಪಿನ ಉಂಡೆಯನ್ನು ಇನ್ನೊಂದು ಮಗ್ಗುಲಿಗೆ ವರ್ಗಾಯಿಸಿ ಬೆಳದಿಂಗಳನ್ನು ಮೇಲೆರಚಿಕೊಂಡು ಮೈನೀವಿ, “ಕಾಪಾಡು ರಂಗಾ” ಎನ್ನುತ್ತ ಅಂಗಳದಲ್ಲಿ ಮೈಚೆಲ್ಲಿತು.
***
“ಯಾಕೋ ಇಷ್ಟು ಕೋಪ? ಈ ಕೋಪನೆಲ್ಲ ನಿನ್ನ ಔಟ್ ಡೋರ್ ಗೇಮ್ಸ್ ನಲ್ಲಿ ಇಟ್ಕೊ. ನನ್ನತ್ರ ತರಬೇಡ..”, ಪ್ರೆಪ್ ಟೈಪಿಸುತ್ತ ಮುಂದೆ ಯಾವ ನಡೆ ಇಡಲಿ ಎಂದು ಯೋಚಿಸುತ್ತಿದ್ದಳು. ಪೋಲಿಯೋದಿಂದ ವೀಲ್ ಚೇರಿಗೆ ಸೀಮಿತಗೊಂಡಿರುವಳನ್ನು ಕಂಡರೆ ಸೋಲಿಸಬಾರದೆನ್ನುವಷ್ಟು ಮನ ಕರಗುತ್ತೆ. ಆದರೆ, ಆಟ ಅಂದಮೇಲೆ ಆಟ. ಚೆಕ್ಮೇಟ್.
“ಅಯ್ಯೋ ಮನೆಹಾಳ. ಸೋಲಿಸಿಬಿಟ್ಯ?”
“ಇಲ್ಲಿ ಗೆಲ್ತಿದಿಯ ಅಂತಂದರೆ ಔಟ್ ಡೋರ್ ಗೇಮ್ಸ್ ಗಳೆಲ್ಲ ಗೋತಾನಾ?”, ಸೊಟ್ಟ ನಾಲಿಗೆಯ ಸ್ಮೈಲಿ. ಪ್ರತ್ಯುತ್ತರವಿಲ್ಲ. ಹಸಿರು ಬೊಟ್ಟಿನ ಡಿಜಿಟಲ್ ಚಾಮಿ ಕಂದುಬಣ್ಣಕ್ಕೆ ತಿರುಗಿದ. ಪ್ರಫುಲ್ಲಿಕಾ ಕಳಿಸಿದ ಢಬ್ ಢಬ್ ಹೊಡೆದುಕೊಳ್ಳುವ ಕಡುಗೆಂಪು ಹೃದಯವು ಹಿಪ್ಪೀಯಂತೆ ಹೋಗಿ ಜೋಂಬಿಯಂತೆ ಮರಳಿತು. ಸಣ್ಣ ಸಣ್ಣ ಆಸೆಗಳಿಗೂ ತೊಡಕಾಗಬಾರದೆಂದು ಪ್ರೆಪ್ ಏನೆಲ್ಲ ಆಟಾಟೋಪ ನಡೆಸಿದರೂ ಚಾಮಿ ಸುಮ್ಮನಿರುತ್ತಾನೆ. ಅಕಸ್ಮಾತ್ ಆಕೆಗೆ ಪೋಲಿಯೋ ಇರದಿದ್ದರೆ ಇಷ್ಟೇ ಉದಾಸೀನ ತೋರಿಸುತ್ತಿದ್ದನೋ, ಹೇಳಲಾಗದು. ಮನುಷ್ಯನಿಗೆ ಸಹಜವಾಗಿ ಒಲಿಯೋದೆಂದರೆ ಸಣ್ಣ ಬುದ್ದಿ. ದೊಡ್ಡ ಮನಸ್ಸು ಒಳ್ಳೆ ಗುಣಗಳನ್ನು ಕಷ್ಟಪಟ್ಟು ಬೆಳೆಸಿಕೊಳ್ಳಬೇಕಾಗುತ್ತದೆ.
ನಗರದೊಳಗೆ ಕಳೆದುಹೋಗುವುದು ತಂತಾನೆ ಆಗುವಂತದು. ಅದರಲ್ಲೂ ಎರಡು ಬಗೆಯುಂಟು. ಹೋದ ಸಲ ಅಲೆದಾಡಿದ್ದ ಬೀದಿಯಲ್ಲಿ ಈ ಸಲ ಪರಪಟ್ಟಾಗುವುದು ಒಂದು ಬಗೆ. ಮನೆಯಿಂದ ಹೊರಟು ಆಫೀಸು ತಲುಪಿದೊಡನೆ, ಇದೇನಿದು ಬಂದದ್ದು ಗೊತ್ತೇ ಆಗಲಿಲ್ಲವಲ್ಲ, ಯಾವ ದಾರಿ ಬಳಸಿ ಹೇಗೆ ಬಂದೆ, ಅದೂ ಕಿಕ್ಕಿರಿಯೊ ಟ್ರಾಫಿಕ್ಕಿನ ನಡುವೆ… ಎಂದೆಲ್ಲ ಸೋಜಿಗಪಡುವುದು ಇನ್ನೊಂದು ಬಗೆ. ಚಾಮಿಯದು ಇದ್ಯಾವುದೂ ಅಲ್ಲದ್ದು. ಇದೆಲ್ಲವು ಬೆರೆತದ್ದು. ಸಂತನು ಬಿರುಬಯಲಿನ ನಡುವೆ ಕಳೆದುಹೋಗುವಂತೆ. ಪ್ರತಿಯೊಂದೂ ಧ್ಯಾನ. ಇಲ್ಲೇ ಇದ್ದೂ ಇಲ್ಲವಾಗುತ್ತಾನೆ. ಎಲ್ಲೋಇದ್ದೂ ಇಲ್ಲೇ ಇರುತ್ತಾನೆ. ಪಕ್ಕಾ ವ್ಯಾಪಾರಿಯೂ ಲೋಭಿಯೂ ಕಾಮಿಯೂ ಧ್ಯಾನಿಯೂ, ಇದ್ಯಾವುದರೊಂದಿಗೂ ತನಗೆ ಸಂಬಂಧವೆ ಇಲ್ಲವೆಂಬಂತೆ ಜೋಗಿಯೂ ಆಗಿರುತ್ತಾನೆ.
ಸಹದ್ಯೋಗಿಗಳು ಅಚ್ಚರಿ ಪಡುವಂತೆ ಆಫೀಸಿನ ಕೆಲಸದೊಳಗೆ ಮುಳುಗಿರುತ್ತಾನೆ. ಇಂತಹ ಗೃಹಸ್ಥನನ್ನು ಮತ್ತೆಲ್ಲೂ ಕಂಡಿಲ್ಲವೆಂಬಂತೆ ಸಂಸಾರದೊಳಗೆ ಇಳಿದಿರುತ್ತಾನೆ. ಎಲ್ಲ ಜಂಜಡಗಳ ನಡುವೆ ಕೋಳಿ ಕುಕ್ಕಿದಂತೆ ಮೊಬೈಲನ್ನು ಕುಕ್ಕುತ್ತ ಆಗಾಗ್ಗೆ ಜೇಸಿಬಿ ಕಾಲಿಕ್ಕೋಕೂ ಮುಂಚಿನ ಆಮೇಲಿನ ಸೆರೆಹಿಡಿದ ಪಟಗಳನ್ನು ಎಡ ಬಲ ಸ್ವಾಯಿಪ್ ಮಾಡುತ್ತಿರುತ್ತಾನೆ. ಹಕ್ಕಿಪಿಕ್ಕಿನೋರ ಹುಡುಗನನ್ನು ಹಿಡಕೊಂಬಂದು ಕಟಿಂಗ್ ಮಾಡಿಸಿ ಸೋಪಚ್ಚಿ ಸ್ನಾನ ಮಾಡಿಸಿ ಒಗದಿರೋ ಅಂಗಿ ಚಡ್ಡಿ ಹಾಕಿಸಿ, ಎಣ್ಣೆ ಹಚ್ಚಿ ತಲೆ ಬಾಚಿ ಕ್ರಾಪು ತೆಗೆದು ಕನ್ನಡಿ ಮುಂದೆ ನಿಲ್ಲಿಸಿದಂಗೆ ಶಿಸ್ತಾಗಿ ನಿಂತಿದೆ ಹೊಲ. ಮಾಡಿದ್ದ ಕಸುಬಿನಿಂದ ಸಾರ್ಥಕ ಮನೋಭಾವ. ಕಾಸುಕೊಟ್ಟು ಗುಡ್ಡಗಾಡಿನ ಮ್ಯಾರಥಾನ್ ಓಟ ಮುಗಿಸಿದಾಗ ಉಂಟಾಗುವಸಿರಿಗಿಂತಲೂ ನೂರು ಪಟ್ಟು ಹೆಚ್ಚು. ಎಲ್ಲೋ ಮೂಲೇಲಿ ಇದು ನನ್ನ ಬದುಕಾಯಿತು ಎಂಬ ನೆಮ್ಮದಿ. ಮರಳಿಬಾ ಎನ್ನುತ್ತದೆ ಗಾಳಿ.
ಚಕ್ಕಲಮಕ್ಕಲ ಕೂತು ಕಾದು ಬರಿಸಿಕೊಳ್ಳುವ ನೆಮ್ಮದಿಗಿಂತ ಅಗೆದು ಬಗೆದು ದೊರಕಿಸಿಕೊಳ್ಳುವ ನೆಮ್ಮದಿ ಅತ್ಯಂತ್ಯ ಹಿರಿದು, ಹಿತವಾದದ್ದು. ಬಹಳ ಕಾಲ ನಿಲ್ಲುವಂತದ್ದು. ಪಂಡಿತರು ಹೇಳಬಹುದು, ಮನಸ್ಸನ್ನ ದುಡಿಸಿಕೊಳ್ಳಬೇಕು ಅಂತ. ಅಲ್ಲಲ್ಲ, ನೆಮ್ಮದಿ ಬೇಕೆಂದರೆ ಮೈಯನ್ನು ದುಡಿಸಿಕೊಳ್ಳಬೇಕು. ತನ್ಮೂಲಕ ಮನಸ್ಸು. ಗಣ ಗಣ ಕಾಯುವ ಕಲ್ಲುಮಣ್ಣುಗಳ ಮೇಲೆ ಅಂಗಾಲು ಊರಿ ಸುಟ್ಟು ಬರೆ ಹಾಕುವ ಬಿಸಿಲಿಗೆ ಬೆತ್ತಲೆ ಬೆನ್ನೊಡ್ಡಿ ಸಲಿಕೆ ಹಿಡಿದು ಅಂಗೈಲಿ ಬಬ್ಬೆ ಒಡೆಯುವವರೆಗೂ ಬದು ಕಟ್ಟಿ ನೋಡು. ಕಾರ್ಯವು ಯಕಃಶ್ಚಿತ್ ಮಂಕರಿ ಮಣ್ಣನ್ನು ಅತ್ತಿಂದ ಇತ್ತ ಎತ್ತಿ ಹಾಕುವುದು. ಯಾವ ಸಾಧನೆಗಾಗಿ? ಖಾಯಿಲೆಗೆ ಔಷಧಿ ಕಂಡುಹಿಡಿಯುವಂತದೇ? ಗ್ರಹಗಳು ಎಂಟೋ ಒಂಭತ್ತೋ ಶೋಧಿಸಿದಂತೆಯೇ? ಅಣೆಕಟ್ಟು ಕಟ್ಟಿದಂತೆಯೇ? ಹಸಿರುಕ್ರಾಂತಿಯೇ ಕ್ಷೀರಕ್ರಾಂತಿಯೇ? ಇದಾವುದೂ ಅಲ್ಲದ ಕ್ಷುಲ್ಲಕವೆಂಬಂತ ಇದು ನನ್ನದು ಅದು, ನಿನ್ನದು ಎಂಬ ಗೆರೆ ಹೊಡೆಯುವ ಬದು ಕಟ್ಟು, ಆಧ್ಯಾತ್ಮವು ಗೋಚರಿಸುತ್ತದೆ. ಚಾಮಿ ಅಂಗೈ ನೋಡಿಕೊಂಡ. ಒಡೆದ ಬಬ್ಬೆಗಳು ಕೂಡಿಕೊಂಡು ಅಂಗೈ ನಯಸ್ಸಾಗಿದೆ. ನೆನೆಸಿಕೊಂಡರೆ ತೊಡೆ ಮೊಣಕಾಲು ಮೀನಖಂಡ ರೆಟ್ಟೆಗಳಲ್ಲಿ ಕರೆಂಟು ಹರಿದಂತಾಗುತ್ತದೆ. ವಾಪಸ್ಸು ಬಂದಾಗಿಂದ ತನ್ನೊಳಗೆ ಸಾಕಷ್ಟು ಬದಲಾವಣೆ ಗಮನಿಸಿದ್ದಾನೆ. ಇದು ಹೀಗೆ, ಜಗತ್ತು ಇರೋದೆ ಹೀಗೆ. ಮೈ ಪರಚಿಕೊಂಡು ಪ್ರಯೋಜನವಿಲ್ಲ. ಹಾಗಂತ ನಿರಾಶಾವಾದಿಯಲ್ಲ. ಲೌಕಿಕದೊಳಗೆ ಬದುಕುತ್ತಲೇ ಅಲೌಕಿಕದ ಪ್ರಜ್ಞೆಯಿರುವುದು. ಸಮಯಕ್ಕೆ ಬೆಲೆಯುಂಟೇ ಎಂಬ ಜಿಜ್ಞಾಸೆಯಿರುವಾಗಲೆ ಇಷ್ಟವಾದ ವಾಚು ಕೊಂಡುಕೊಳ್ಳುವುದು. ಬಚ್ಚಲು ಬೆಡ್ರೂಮಿನಲ್ಲೂ ಬಿಚ್ಚಿಡದಷ್ಟು ಉತ್ಕಟ ಅನುಭವಿಸುವುದು. ಯಾವುದೋ ದುಷ್ಟ ಗಳಿಗೆಯಲ್ಲಿ(ದುಷ್ಟ?) ಬಿದ್ದುಒಡೆದು ವಿರೂಪಗೊಂಡಾಗ, ವಿರೂಪದ ಸ್ವರೂಪವನ್ನೆ ಬಿಡಿಸಿ ಬಿಡಿಸಿ ನೋಡುತ್ತ ಕಲಾತ್ಮಕ ವಿಜ್ಞಾನಿಯಂತೆ ಮಾರ್ಪಡುವುದು, ಕ್ಷೋಭೆಗೆ ಅವಕಾಶವೇ ಇಲ್ಲದಂತೆ. ಮನಸ್ಸು ಮಾಗಿದೆ. ಮೈಯಿಂದ ಮನಸ್ಸೋ. ಮನಸ್ಸಿಂದ ಮೈಯೋ. ಜಟಿಲವು. ಹೊಟ್ಟೆಪಾಡಿನ ತಪಸ್ಸಿನಿಂದ ಹೊರಬಂದೊಡನೆ ಫೋನಿನ ಮೂಲಕ, ಜೇಸಿಬಿ ಕರೆಸಿದ್ದೂ ತಡವಾಗಲಿಲ್ಲ. ಗುಂಡಿ ಹೊಡೆಸಿದ್ದೂ ತಡವಾಗಲಿಲ್ಲ. ರಾತ್ರೋ ರಾತ್ರಿ ಕಸಿ ಕಟ್ಟಿದ ಮಾವಿನ ಸಸಿಗಳು ಅಂಗಳದಲ್ಲಿ ಇಳಿಸಿದ್ದೂ ತಡವಾಗಲಿಲ್ಲ. ಎಂಜಿನಿಯರ್ ಸಾಹೇಬರ ಸ್ಪೀಡಿಗೆ ಊರಿಗೆ ಊರೇ ಕಕ್ಕಾಬಿಕ್ಕಿ. ಅಡ್ಡ ಮಳೆ ಜಡಿದಂತೆ ಅಂದುಕೊಂಡಿತು.
“ಅಲ್ಲಾ ಸಾ. ಆಗ ಬಂದ್ರಿ. ನೆಲ ಅಚ್ ಕಟ್ ಮಾಡಿಸಿ ಹೋದ್ರಿ. ಆಮ್ಯಾಕೆ ಸುಳಿವೆ ಇಲ್ಲ. ಈಗ ಬಂದ್ರಿ. ಬತ್ತಾನೆ ಟ್ಯಾಕುಟ್ರಿ ತುಂಬ ಸಸಿ ಒತ್ಕಂಬಂದಿದೀರ. ರಾತ್ರಿಕೆ ಗಿಡ ಊಣನ ಅಂತ ಮಾಡಿದಿರೇನು?”
“ರಾತ್ರಿ ಬೇಡ. ನಾಳೆ ಆದರೂ ಪರವಾಗಿಲ್ಲ”.
“ಒಂದಿನ ರಜ ಆಕಿ ಬಂದಿದಿರೋ”.
“ಹೌದು”
“ಅರ್ಥವಾತು ಬುಡಿ”. ಏನೋ ಎಡವಟ್ಟಾಗಿದೆ, ಅರ್ಥವಾಗುತ್ತಿಲ್ಲ.
“ರವೆಪ್ಪ, ನಿನ್ ಕ್ಲಾಸ್ ಮೆಂಟು ಅಮ್ತೀಯ. ರವಷ್ಟು ಬಿಡಿಸಿ ಯೇಳಪ್ಪ. ಪಾರಂ ಸಸಿ ಅಮ್ತಾರೆ. ಸಾನೆದುಡ್ನವಿರಬಕು. ಅನ್ನೇಯವಾಗಿ ತಿಪ್ಪೆ ಪಾಲಾಗ್ತವೆ”.
ರವಿ, ಪ್ರೈಮರಿ ಸ್ಕೂಲಿನ ಕ್ಲಾಸಮೇಟು. ಆಗಿನ ಕಾಲಕ್ಕೆ ತೋಟ ಗೀಟ, ಟ್ಯಾಕ್ಟರು, ಬುಲೆಟ್ಟು ಮಡಗಿದ್ದಂತ ಕುಟುಂಬ. ‘ನಮ್ ತ್ವಾಟ ಪಾಟ ನೋಡ್ಕಮಕೆ ಮೂರಾಳು ಬೇಕು’ ಎಂಬ ಹಿನ್ನೆಲೆಯಲ್ಲಿ ಓದಿಗೆ ತಿಲಾಂಜಲಿ ಹಾಡಿದ್ದವನಿಗೆ ಕಾಲಾನಂತರ ಮಳೆಯು ಮರೀಚಿಕೆಯಾಗಿ ಬೋರ್ ವೆಲ್ಲುಗಳು ಒಣಗಿ, ತೋಟ ಉಳಿಸಿಕೊಳ್ಳಲು ಜಮೀನಿನ ಉದ್ದಗಲ ತೂತಿಕ್ಕಿ ಉಳಿತಾಯವೆಲ್ಲ ಹರಣವಾಗಿ, ಈಗ ಮದುವೆಯಾಗಿದೆ, ಎರಡು ಮಕ್ಕಳು. ಮೆತ್ತಗಾಗಿದ್ದಾನೆ. ಅಂಗೈಯಗಲ ತೋಟ ಬದುಕುಳಿದಿದೆ.
“ಅಪ್ಪಿ, ಗಿಡ ಊಣಕು ಮುಂಚೆ ಗುಂಡಿಗೆ ಗೊಬ್ಬರ ಹೊಡಿಬೇಕು. ಮಣ್ಣು ಮುಚ್ಚಿಸಬೇಕು. ನೀರಿಕ್ಕಿನೆನಾಕಬೇಕು. ಆಮೇಕೆ ಸಸಿ ಊಣದು.. ಇದುಕ್ಕೆಲ್ಲ ಆಳುಕಾಳು.. ಸುಮ್ನೆನಾ”.
“ಇದೆಲ್ಲ ನಾಳೆ ಮುಗಿಸಿ, ನಾಡಿದ್ದು ಊಣಬಹುದಲ್ಲ?”.
“ಇದು ಕಂಪ್ಲೀಟ್ರು ಮೊಬೈಲು ಪಟಪಟ ಒತ್ತಿದಂಗಲ್ಲಪ್ಪಿ. ಕಷ್ಟ ಐತೆ”.
ರವಿ ಕಷ್ಟದ ವಿವರಣೆ ಕೊಟ್ಟ. ತುರ್ತಾಗಿ ತಿಪ್ಪೆ ಗೊಬ್ಬರ ಬೇಕು. ನೋಡಿದರೆ ಊರಿಗೂರೆ ಬಣ ಬಣ ಅಂತಿದೆ. ತನ್ನ ಮನೆಯ ಹಿಂದೆಯೆ ಇದ್ದ ಸಣ್ಣೋನಿದ್ದಾಗ ಕೂರುತ್ತಿದ್ದ ತಿಪ್ಪೆ ಹುಡುಕಿದ. ಅಲ್ಲೀಗ ಶಾಲೆ, ಪಕ್ಕದೇವರ ಗುಡಿ ಎದ್ದಿವೆ. ಪೈಪೋಟಿಗಳಿದು ಫಲವತ್ತಾಗಿ ಬೆಳೆಯುತ್ತಿವೆ. ಎದುರುಮನೆಯ ಹಜಾರದಲ್ಲಿ ಪ್ರವಾಹೋಪಾದಿಯಲ್ಲಿ ಇಳಿಯುತ್ತಿದ್ದ ಬೆವರಿಗೆ ಬೀಸಣಿಗೆ ಕೊಟ್ಟು ತಡೆಹಿಡಿಯುವ ವ್ಯರ್ಥ ಪ್ರಯತ್ನದಲ್ಲಿದ್ದ ಸುಗ್ಗಜ್ಜಿ –
“ದನ ಕರ ಯಾರು ಸಾಕ್ತಾರೆ ಮಗ ಈಗಿನ ಕಾಲದಾಗೆ. ಒಂದಿಂದರೊಂದು ಅಮ್ತ ಬರಗಾಲ ಬಂದು ಜನವೆಲ್ಲ ತಿಕಸುಡಿಷ್ಕಂಡು.. ನಮ್ಮಪ್ಪ ಬ್ಯಾಡಾ ಬ್ಯಾಸಾಯದ ಗೋಳು. ದೇವ್ರು ಅಂಬೋನು ಇಗಾ ಈ ಪಾಪ್ರು ಕಣ್ಣುಗಳನ್ನ ಇನ್ನೂ ಯಾವ ಸುಕಕ್ಕೆ ಉಳಿಸೆವ್ನೋ. ನೀರು ನಿಡಿಯಿಲ್ದೆನಾ.. ಉಲ್ಲು ಸೊಪ್ಪು ಇಲ್ದೆನಾ.. ಉಳ ಉಳ ಒದ್ದಾಡದಂಗೆ ಒದ್ದಾಡ್ತನ ಸತೋದ್ವು. ”.
“ಬಿಡು, ಪ್ಯಾಕೆಟ್ ಗೊಬ್ಬರನೆ ಹಾಕಿದರಾಯಿತು”, ಎಂದ ಚಾಮಿ.
“ಇನ್ನು ಸಣ್ಣ ಸಸಿ ಕಣಪ. ಎಳೆ ಮಗಿನ ಬೆಳ್ಳುಗಳಿದ್ದಂಗೆ ಬೇರು.. ಸುಟ್ಟೋಗ್ತವೆ, ಯಂಗು ನಿಮ್ಮೊಲದಾಕೆ ಮಡ್ಕೆ ಇಳಿಸಿ ಸ್ಯಾನೆ ವರ್ಸ ಆಗೆತೆ. ಗೊಬ್ಬರ ಆಕದಿದ್ದರು ನಡಿತೆತೆ“.
“ಸಾಯೇಬ್ರೆ, ಈವಜ್ಜಿ ಮಾತು ಕಟ್ಕ್ಯ. ಮುಣುಗೋಗ್ತಿಯ. ಯಂಗನ ಮಾಡಿ ಗೊಬ್ರ ಉಡುಕಬಕು, ಗಿಡ ಆಗ್ಲೆಬಾಡ್ಕಂಡೆವೆ, ಸೊಣಮಣ ಅಮ್ತ ಕೂಕಂಡ್ರೆ ದೇವ್ರೇ ಗತಿ”.
ಚಾಮಿ ಸಸಿಗಳತ್ತ ಗಮನ ಹರಿಸಿರಲಿಲ್ಲ. ಜೀವ ತುಂಬಿಕೊಂಡಿದ್ದ ಹಚ್ಚ ಹಸಿರು ಎಲೆಗಳು ಸೊರಗಿ ನೆಲನೋಡುತ್ತಿವೆ. ಮನಸ್ಸು ಉದ್ವಿಗ್ನಗೊಂಡಿತು. ಇರುಳೊತ್ತಿನಲ್ಲಿ ಏನೂ ಮಾಡಲಾಗದು ಎಂದು ಹತಾಶನಾಗಿ ಮೊಬೈಲ್ತೆಗೆದ. ಇಲ್ಲಿ ನೆಟ್ವರ್ಕಿಗು ಭಂಗ. ಮಹಡಿ ಮೇಲತ್ತಿ ನಾಲಕ್ಕೂ ಮೂಲೆ ನಿಂತು ತಡಕಾಡಿದ. ಕೊನೆಗೊಂಚೂರು ಕೊಂಡಿ ಸಿಕ್ಕಿತು. ಕೆರೆ ಕೋಡಿ ಒಡೆದಂತೆ ಮೆಸೇಜುಗಳು ಹರಿಯಲಾರಂಭಿಸಿದವು.
“ಯಾಕೆ ಆಫ್ ಲೈನ್?”
“ಏನಾದರೂ ತಪ್ಪು ಮಾತಾಡಿದ್ನ”
“ತಲೆ ಸಿಡಿದೋಗ್ತಿದೆ. ಈ ಕೂಡಲೆ ಚೆಸ್ ಆಡಬೇಕು. ಆನ್ ಲೈನ್ ಬಾ”. ಸಣ್ಣ ಹುಡುಗಿಯಂತೆ ವರ್ತಿಸುತ್ತಾಳೆ.
***
“ಸಾಯೇಬ್ರೇ..”
ಇಂಜಿರ್ ಸಾಯೇಬ್ರೇ..”
ಸಣ್ಣ ಸಣ್ಣ ಆಸೆಗಳಿಗೂ ತೊಡಕಾಗಬಾರದೆಂದು ಪ್ರೆಪ್ ಏನೆಲ್ಲ ಆಟಾಟೋಪ ನಡೆಸಿದರೂ ಚಾಮಿ ಸುಮ್ಮನಿರುತ್ತಾನೆ. ಅಕಸ್ಮಾತ್ ಆಕೆಗೆ ಪೋಲಿಯೋ ಇರದಿದ್ದರೆ ಇಷ್ಟೇ ಉದಾಸೀನ ತೋರಿಸುತ್ತಿದ್ದನೋ, ಹೇಳಲಾಗದು. ಮನುಷ್ಯನಿಗೆ ಸಹಜವಾಗಿ ಒಲಿಯೋದೆಂದರೆ ಸಣ್ಣ ಬುದ್ದಿ. ದೊಡ್ಡ ಮನಸ್ಸು ಒಳ್ಳೆ ಗುಣಗಳನ್ನು ಕಷ್ಟಪಟ್ಟು ಬೆಳೆಸಿಕೊಳ್ಳಬೇಕಾಗುತ್ತದೆ.
ಮಾಳಿಗೆ ಮೇಲೆ ಚಾಪೆ ಹಾಸಿಕೊಂಡು ಮಲಗಿದ್ದ ಚಾಮಿ ಧಿಗ್ಗನೆ ಎದ್ದು ಕುಳಿತ. ಮಬ್ಬು ಮಬ್ಬು ಬೆಳಕು. ಆಕಾಶದಲ್ಲಿ ಅಲ್ಲೊಂದು ಇಲ್ಲೊಂದು ಚುಕ್ಕಿ. ಸುತ್ತ ಕೆರ ಪರ ಕೆರೆವ ಪೊರಕೆಗಳ ಸದ್ದು. ಹುಂಜ ಹ್ಯಾಟೆಗಳ ಪರದಾಟ. ಅಲ್ಲೊಂದು ಇಲ್ಲೊಂದು ಪಾತಾಳವನ್ನೆ ಬಗೆದುಬಿಡುವಂತ ಕೆಮ್ಮು ಕಫಗಳು. ರಸ್ತೆಯಲ್ಲಿ ನಿಂತುಯಾರೋ ಕೂಗಿದಂತೆ. ಮಧ್ಯರಾತ್ರಿ ಎಬ್ಬಿಸಿದಂತಹ ಇರುಸುಮುರುಸು.
ರಸ್ತೆಯಲ್ಲಿ ಎಂದುಕೊಳ್ಳುತ್ತಿರುವಾಗಲೇ ಎದುರಿಗೆ ಪ್ರತ್ಯಕ್ಷನಾಗಿದ್ದ ಅನಿಲ. ತನ್ನ ಸಹೋದರ ಸಂಬಂಧಿ. ಹಳ್ಳಿಗರಿಗೆ ಪ್ರೈವಸಿಯ ಪರಿಜ್ಞಾನವಿರುವುದಿಲ್ಲ ಎಂಬುದು ಥಟ್ಟನೆ ಹೊಳೆದು ಬೆಡ್ ಶೀಟಿನ ಮರೆಯಲ್ಲಿ ಚಡ್ಡಿಯ ಲಾಡಿಯನ್ನು ಗಂಟು ಬಿಗಿಯುತ್ತಿರಲು,
“ಎಂಟ್ಗಂಟೆ ತಂಕ ಮನಿಕಮರಲ್ವ ನೀವ್ಯಲ್ಲ.…”, ನಸುಕಿನ ನಿಶ್ಯಬ್ಧದಲಿ ಅನಿಲನ ಗಂಟಲು ಊರಿಗೆಲ್ಲ ಸಾರಿ ಪಿಚ್ಚೆನಿಸಿತು.
ಒತ್ತಾಯದಿಂದ ಕಣ್ಣ ರೆಪ್ಪೆಗಳನ್ನು ಬಿಡಿಸುತ್ತ “ಎಂಟಲ್ಲ, ಹತ್ತು..” ಅಂತ ಗೊಣಗಿದ್ದು ತನಗೆ ಮಾತ್ರ ಕೇಳಿಸಿತು.
“ಇಂಗಾದ್ರೆ ಬದ್ಕು ಸಾಗದೆಂಗೆ.. ಯೋಳಬಕು ಯೋಳಬಕು.. ಕಾಪಿ ಕುಡ್ದು ರಡಿಯಾಗು. ಎಲ್ಗೊ ಒಂತಕೆ ಕರ್ಕಂಡೋಗ್ತಿನಿ. ಮೆಟ್ಟು ಆಕ್ಯಂಡು ಬಾ. ಮಣ್ಣಗೆ ಓಡಾಡ ಸಿರಿ ಆಮೇಕೆ ತೀರಿಸ್ಕಮಿವಂತೆ”. ಅಶರೀರವಾಣಿ ನುಡಿದಷ್ಟು ವೇಗದಲ್ಲಿ ಅನಿಲ ಮಾಯವಾಗಿದ್ದ. ಬೇಜಾರಿಂದ ಮಲಗಿದ್ದವನಿಗೆ ಎಲ್ಲೋ ಕರಕೊಂಡು ಹೋಗ್ತೀನಿ ಎಂಬ ನಿಗೂಢಯುಕ್ತ ಆಮಂತ್ರಣ ಮುದ ನೀಡಿತಾದರೂ ತಕ್ಷಣ ಎದೆ ಒತ್ತಿದಂತಾಗಿ ಹಿತ್ತಲಿನಲ್ಲಿ ಇಳಿಸಿದ್ದ ಸಸಿಗಳತ್ತ ಧಾವಿಸಿದರೆ, ಸಸಿಗಳು ರಾತ್ರಿಗಿಂತ ಹೆಚ್ಚು ನಿತ್ರಾಣಗೊಂಡಿವೆ. ಹಾಲಿನ ಕ್ಯಾನು ಹಿಡಿದು ಸಾಗುತ್ತಿದ್ದ ‘ಅರುಣಪ್ಪ’, “ನೀಯೋನು ಯದರ್ಕಬ್ಯಾಡಣ. ಜೀವ ಯಲೆಯಾಗಲ್ಲ ಇರದು. ಬೇರ್ನಾಗೆ”, ಎಂದಾಗ ವೈದ್ಯನ ಭರವಸೆಯಂತೆ ಕೇಳಿಸಿತು. ಅರುಣ ತನಗಿಂತ ಎರಡು ಮೂರು ಕ್ಲಾಸು ಚಿಕ್ಕವನಿರಬೇಕು, ಒಂದೇ ಕ್ಲಾಸುರೂಮಿನಲ್ಲಿ ಕೂರುತ್ತಿದ್ದ ನೆನಪು. ಶಾಲೆ ಬಿಟ್ಟೊಡನೆ ಅಪ್ಪಯ್ಯನ ಮಗ್ಗುಲಿಗೆ ಅಂಟಿಕೊಂಡು ಲಟ ಲಟ ಮಡಕೆ ತಟ್ಟುವುದ ಕಲಿಯುತ್ತಿದ್ದ.
ಜೇಡಿಮಣ್ಣಿಗೆ ನೀರೊಯ್ಯುತ್ತಿದ್ದ. ಸಣ್ಣ ಸಣ್ಣ ಹೂಜಿಯಂತವನ್ನು ತಟ್ಟುವುದು ಎಂತ ಮೋಜಿನ ಕೆಲಸ ಎಂದು ತಾನು ಕರುಬುತ್ತಿದ್ದುದುಂಟು. ಅಪ್ಪನ ವಿದ್ಯೆಯೇನೋ ಕಲಿತ, ಪ್ರಯೋಜನಕ್ಕೆ ಬರಲಿಲ್ಲ. ಈಗ ಸೀಮೆ ಹಸುಕಟ್ಟಿದ್ದಾನಂತೆ. ಗೊಬ್ಬರ ಕೊಡು ಅಂದರೆ, “ಇದ್ಯಾತುಕೆ ಬತ್ತದೇಳಣ. ಇಂಡಿ ಇಕ್ಕದು ನಾವು” ಅಂತಾನೆ. ಹಸಿ ಹುಲ್ಲು ತಿಂದು ಕೊಡೋ ಹಾಲು ಉತ್ತಮ ಅಲ್ಲವೇನೋ ಅಂದರೆ, “ಅವುಕ್ಕೆ ಮೇವೆಲ್ಲಿ ಒಂದಿಸೋದೂ, ಆಪಾಟಿಮೇವು ತಿಂದರೂ ಅವು ಕೊಡೋ ಆಲೆಷ್ಟು..” ಎಂದು ರಾಗ ಎಳೆಯುತ್ತಾನೆ. ಹೈಬ್ರಿಡ್ ಸಸಿಗಳನ್ನು ತಂದಿರುವತಾನು, ರಸಗೊಬ್ಬರ ಹೊಡೆಸಲಿರುವ ತಾನು ಈ ಪ್ರಶ್ನೆ ಕೇಳಬಾರದಿತ್ತು ಅಂದುಕೊಂಡ ಚಾಮಿ.
***
“ಇದ್ಯಾವೂರ್ಲ ಅನೀಲ”,
“ಇದುನ್ನ ಗೊಲ್ಲರಟ್ಟಿ ಅಮ್ತಾರೆ”
“ಈ ಹೆಸರಿನ ಊರುಗಳು ತುಂಬಾನೆ ಇದಾವಲ್ವ”
“ನೀನು ಸಣ್ಣೋನಿದ್ದಾಗ್ಲೆ ಊರು ಬಿಟ್ಟೆ ನೋಡು, ಅದಿಕ್ಕೆ ಈಪಾಟಿ ರಾಮಾಯ್ಣ”. ಅಮೇರಿಕಾದಿಂದ ಬಂದಿರುವವರಿಗೆ ಹಳ್ಳಿ ತೋರಿಸಿದಂತೆನಿಸಿತು ಅನಿಲನಿಗೆ.
ಅಲ್ಲೊಂದು ಇಲ್ಲೊಂದು ಗುಡಿಸಲುಗಳು ಬಿಟ್ಟರೆ ಎಲ್ಲ ಆಧುನಿಕ ಸಿಮೆಂಟಿನ ಮನೆಗಳೆ. ಮನೆಗೊಂದು ಕುರಿದೊಡ್ಡಿ. ಮನೆಯೆದುರು ಹೆಂಗಸರು ಕಾಫಿ ಟೀ ಕುಡಿದ ಪಾತ್ರೆಗಳನ್ನು ರಾತ್ರಿಯ ಅಡಿಗೆ ಪಾತ್ರೆಗಳನ್ನು ತಟ್ಟೆ ಲೋಟಗಳನ್ನು ಗುಡ್ಡೆ ಹಾಕಿಕೊಂಡು ಬೆಳಗುವುದರಲ್ಲಿ ತೊಡಗಿಸಿಕೊಂಡಿದ್ದರು. ತೊಳೆದ ಮಸಿ ಮುಸುರೆಯ ಹೊಂಡು ನೇರ ರಸ್ತೆಗೆ ಇಳಿಯುತ್ತಿತ್ತು. ಹಟ್ಟಿಯ ತುಂಬ ಕುರಿಗಳೋ ಕುರಿಗಳು. ಮೇಕೆಗಳೋ ಮೇಕೆಗಳು. ದೊಡ್ಡವು ಸಣ್ಣವು. ಇನ್ನೂ ಕಾಲೂರಲು ತಟ್ಟಾಡುತ್ತಿರುವಂತವು. ಹಗ್ಗ ಕಟ್ಟಿ ನೇತಾಕಿರುವ ಶೆಡೆಸೊಪ್ಪಿನ ಬ್ರೇಕ್ ಫಾಸ್ಟನ್ನು ಸವಿಯುತ್ತಿರುವ ಕುರಿಗಳು. ತೂಗುಯ್ಯಾಡುವ ಮೊಲೆಗಳಿಗೆ ಜೋತುಬಿದ್ದಿರುವ ಮರಿಗಳು. ಮ್ಯಾ ಬ್ಯಾ…. ಬ್ಯಾ ಮ್ಯಾ… ಎಂಬ ನಿರಂತರ ರಣ ಕಹಳೆ ಊರ ತುಂಬ. ಹೆಜ್ಜೆ ಇಟ್ಟಲ್ಲೆಲ್ಲ ಮೆತ್ತಿಕೊಳ್ಳುವ ಹಸಿ ಹಸಿ ಪಿಚಿಕೆ. ಆಘ್ರಾಣಿಸಲು ಸವಾಲೆಸೆಯುವಂತಹ ನಾತ. ಸರ್ವವೂ ಹಟ್ಟಿಯೊಳಗೆ ಬೆರೆತು ಸರ್ವೇ ಸಾಮಾನ್ಯ ದೃಶ್ಯದಂತೆ ಗೋಚರಿಸುತ್ತಿತ್ತು.
ಅವರು ದೊಡ್ಡ ಹಟ್ಟಿಯೊಂದರ ಎದುರು ನಿಂತರು.
“ನಿಂಗೋ”, ಕೂಗಿದ ಅನಿಲ.
“ಯಾರೂ?”,
“ಎಲಾ ಬಾರ್ಲ ಒರೀಕೆ ಎಂಗಸರ ಸೆರಗು ಬಿಟ್ಟು. ಒಳಗೆ ಕೂಕಂಡು ಯಾರು ಅಂದ್ರೆ?”
“ಓ, ನೀನ್ಯಾ, ಏನಣ?”
“ನಿಂದು ತಿಪ್ಪೆ ರೇಟೇಳು”,
“ಯಾರಿಗೆ?”.
“ನಮ್ ಇಂಜಿನಿರ್ ಸಾಯೇಬ್ರಿಗೆ”.
“ನೀನು ಕೇಳದೆಚ್ಚ ನಾ ಕೊಡದೆಚ್ಚ. ಕೊಡಸಣ ಎಷ್ಟೋ ಒಂದಿಷ್ಟ.”.
“ಬಾಯಿ ಬುಟ್ಟು ಯೋಳೋ ಒಂದು ರೇಟು”
“ಯಂಟು ಸಾವ್ರ ಕೊಡೋಗು”
“ಯಾಕೆ ಯಾರ್ದನ ಬುಲ್ಡೆ ಒಡ್ದು ತತ್ತರೇಳು. ಯಂಟು ಸಾವ್ರಂತೆ. ಏಳ ನಿಮ್ಮೈನ ತು*ಳ. ಯೇಳಕೊಂದು ಲೆಕ್ಕಾಚಾರ ಬ್ಯಾಡ್ವ್ಯ. ಮೂರು ಸಾವ್ರ ತಕ. ನಮ್ದೆ ಟ್ಯಾಕ್ಟ್ರಿ ಬಂದು ತುಂಬಕಂಡೋಗ್ತೆತೆ”.
“ಅಲ್ಲಲೆ , ಮೊದಲೇ ಗೊಬ್ಬರಕ್ಕೆ ಬಂಗ, ಅಂಗ ಗದುರ್ಕಮದು. ಅವನು ಕೊಡಲ್ಲ ಹೋಗು ಅಂದಿದ್ರೆ..?”
“ಯಾಕ ಕೊಡಲ್ಲ ಅಮ್ತನೆ?”, ಅಬ್ಬರ ಕೇಳಿ ಚಾಮಿ ತೆಪ್ಪಗಾದ. ಎಲಾ ಇವನ, ಹೆಂಗಪ್ಪ ಅಂತ ತಲೆ ಮೇಲೆಕೈಹೊತ್ತು ಕುಳಿತಿದ್ದೆ, ಇವನು ಜೊತೆಗಿದ್ದರೆ ಕೆಲಸ ಇಷ್ಟು ಸಲೀಸ?.
“ಹಂಗೆನ ಒಂದಷ್ಟು ಜನ ಆಳುಗಳನ್ನು ಹೊಂದಿಸ್ಕೊಡೋ, ಲೇಟಾದಷ್ಟು ಸಸಿ ಹಾಳಾಗ್ತವೆ”.
“ಆಳಿಗೇನು ಬರವ್ಯ, ಇಲ್ಲೇ ಮಾದಿಗರಟ್ಟೆಕೆ ಓಗು. ಯಾರಾನ ಕರುದ್ರೆ ಸಾಕು ಅಮ್ತ ಕಾಯ್ತಿರ್ತರೆ”.
“ದೊಡ್ಡ ಮನುಸ್ನಂಗೆ ಪಸ್ಟೆ ದುಡ್ಡು ಬಿಚ್ಚಬುಟ್ಯ ಉಸಾರು. ಬ್ಯಳ ಬ್ಯಳಿಗ್ಗೆನೆ ಕುಡುದು ಮನಿಕಮ್ತರೆ ಸೂಳೆಮಕ್ಳು. ಅಮೇಕೆ ನೆಕ್ಕಬಕು”.
***
ಊರುಗಳು, ಹಟ್ಟಿಗಳು, ಮನುಷ್ಯರು. ಸೌಲಭ್ಯಗಳು. ನಾಗರೀಕತೆ. ಸಂಪತ್ತು. ಎಲ್ಲ ಒಂದಕ್ಕೊಂದು ಹೇಗೆ ಸಂಕೀರ್ಣವಾಗಿ ನೇಯ್ದುಕೊಂಡಿವೆ. ಈಗ ಬಲವಂತದಿಂದ ಬೆರೆಸಲಾಗದಿದ್ದರೂ ಮುಖ್ಯ ಊರಿಂದ ಹಟ್ಟಿಗಳಿನ್ನೂ ದೂರ ದೂರ. ಊರೊಳಗೆ ಮಹಡಿ ಮನೆಗಳು ಏಳುತ್ತಿದ್ದರೆ ಇಲ್ಲಿನ್ನೂ ಗುಡಿಸಲುಗಳು ತಿಣುಕಿ ಪಣುಕಿ ಸಿಮೆಂಟಿನ ಗೋಡೆಗಳಾಗಿ ಮಾರ್ಪಡುತ್ತಿವೆ. ಅಲ್ಲಿ ಮನೆಮನೆಗೆ ನಲ್ಲಿಗಳು ಬರುವ ಕಾಲ. ಇಲ್ಲಿ ಮುಸುರೆ ತೊಳೆದ ನೀರುರಸ್ತೆ ಮಧ್ಯದಲ್ಲಿ ಹರಿಯುತ್ತಿದೆ. ಚಾಮಿ ಹಿಂದೆಂದೂ ಆ ಹಟ್ಟಿಗೆ ಕಾಲಿಟ್ಟಿರಲಿಲ್ಲ. ಅಂತ ಪ್ರಮೇಯವೇ ಬಂದಿರಲಿಲ್ಲವೆಂಬುದು ಸೋಜಿಗವೆನಿಸಿತು. ಒಂದಷ್ಟು ಸರ್ಕಾರಿ ಗೋಡೆಗಳು. ಒಂದಷ್ಟು ಗುಡಿಸಲುಗಳು. ಹಟ್ಟಿ ನಡುವೆ ಬೆಳ್ಳಗೆ ಹೊಳೆಯುತ್ತಿರುವ ಸಿಮೆಂಟಿನ ರಸ್ತೆ. ಹಟ್ಟಿಯ ಹೆಬ್ಬಾಗಿಲಲ್ಲೆ ನೀರಿನ ಟ್ಯಾಂಕು. ಸುತ್ತ ನಲ್ಲಿಗಳು. ನೀರಿಡಿಯಲು ಹೆಂಗಸರು, ಮಕ್ಕಳುಮರಿ… ಅಲ್ಲೊಬ್ಬ ಒಂಟಿಕಾಲಿನ ಅಂಗವಿಕಲ. ಇವನನ್ನು ಎಲ್ಲೋ ನೋಡಿದ್ದೀನಲ್ಲ?
“ಏನು ಚಾಮಿ, ಅಪರೂಪ?”, ಅಂದ ಅವನು. ಹ್ಞಾ, ನನ್ನ ಕ್ಲಾಸ್ ಮೇಟು. ಹೆಸರೂ.. ?
“ನಾನು ಉಮೇಶ..”,
“ಹೇ, ಸಾರಿ, ತಕ್ಷಣಕ್ಕೆ ಗುರುತು ಸಿಕ್ಕಲಿಲ್ಲ..” ಎನ್ನುತ್ತ ಹಸ್ತ ಲಾಘವಕ್ಕೆಂದು ಕೈಚಾಚಿದ. ಉಮೇಶ ಒದ್ದೆ ಕೈಗಳನ್ನು ಒರೆಸಿಕೊಂಡು ಕೈ ನೀಡಿದ. ಉಭಯ ಕುಶಲೋಪರಿ ಜರುಗಿತು. ಅಷ್ಟರಲ್ಲಿ ಅವನ ಬಿಂದಿಗೆತುಂಬಿ, ಇವನು ಸಹಾಯ ಮಾಡಲೆಂದು ಮುಂದಾದರೂ ಉಮೇಶ ಒಪ್ಪದೆ, ಮಾಂತ್ರಿಕ ರೀತಿಯಲ್ಲಿ ಬಿಂದಿಗೆಯನ್ನು ಎತ್ತಿ ಹೆಗಲ ಮೇಲಿಟ್ಟುಕೊಂಡು ಊರುಗೋಲನ್ನು ಊರಿಕೊಂಡು, “ಬಾ ಮನ್ತಕೋಗನ”, ಎಂದು ಮುನ್ನಡೆದ. ಇದೇ ಊರುಗೋಲು ಹಿಡಿದು ‘ಮಾನಿಟರ್’ ಗಿರಿ ಮಾಡುತ್ತಿದ್ದವನು ಇವನೇ ಅಲ್ಲವೇ?. ಎಷ್ಟು ಜಾಣನಿದ್ದ.
ಬಿಂದಿಗೆ ಇಳಿಸುತ್ತ “ಇವರು ನಮ್ಮ ಮಿಸ್ಸಸ್ಸು”, ಅಂದ ಉಮೇಶ.
ಆಕೆ ಅಂಗಳದಲ್ಲಿ ಪಾತ್ರೆ ತೊಳೆಯುತ್ತಿದ್ದಳು. ಚಾಮಿ ಸೂಕ್ಷವಾಗಿ ಅವಳ ಕೈ, ಕಾಲು, ಕಣ್ಣು… ಮುಖ್ಯವಾದುವೆಲ್ಲ ಸರಿಯಾಗಿವೆಯಾ ಗಮನಿಸಿ… ತನ್ನ ಆಲೋಚನೆಗೆ ತಾನೆ ಹೇಸಿಗೆಪಟ್ಟುಕೊಂಡ. ಮನುಷ್ಯನ ಇತಿಮಿತಿಗಳು ಎಲ್ಲೆಲ್ಲಿ ಹೇಗೆಲ್ಲ ಪ್ರಕಟಗೊಳ್ಳುತ್ತವೆ!. ಅವನ ಒಳನುಡಿಯನ್ನು ಆಲಿಸಿದನೋ ಅಥವಾ ಬಂದವರೆಲ್ಲರ ವರ್ತನೆಗಳಿಂದ ಕಂಡುಕೊಂಡಿದ್ದನೋ, “ನಮ್ಮ ಸಂಬಂದದಾಗೆ ಮದುವೆ ಮಾಡಿಕೊಟ್ಟರು”, ಎಂದ ಉಮೇಶ.
“ಯೋ ಬಾಣ, ಬಾರ್ಲ ಚಾಮಿ ಬಂದವ್ನೆ..”, ಅಗೋ ಮತ್ತೊಬ್ಬ ಕ್ಲಾಸ್ ಮೇಟು. ಎಲ್ಲ ಎಷ್ಟು ದೊಡ್ಡವರಾಗಿಬಿಟ್ಟಿದ್ದಾರೆ?. ವಾಟ್ ನಾನ್ಸೆನ್ಸ್. ನಾನೂ ಆದೇ ವಯಸ್ಸಿನೋನಲ್ಲವೆ. ಬಾಣನ ಹಿಂದೆ ಮೇಕೆ ಮರಿಯಂತೆ ಜಿಗಿದು ಬಂದವು ಎರಡುಸಣ್ಣ ಹೆಣ್ಣುಮಕ್ಕಳು. “ನನ್ನ ಮಕ್ಕಳು..” ಎಂದು ಕೆಂಪಾನೆ ಕೆಂಪು ಹಲ್ಲು ಬೀರಿದ ಬಾಣ. ಅವನು ಪಂಚೆಕಟ್ಟುವುದ ನೀವು ನೋಡಬೇಕು. ಬೆಂಗಳೂರಿನ ಹೆಂಗಸರು ಕೂಡ ಚಡ್ಡಿಯನ್ನು ಇನ್ನು ತುಸು ಕೆಳಕ್ಕೆ ಉಡುತ್ತಾರೆ. ಅವನು ಇತ್ತ ನಡೆದು ಬರುವಾಗ ಪಂಚೆಯ ನಟ್ಟನಡುವಿರುವ ಅವನ ಬಿದಿರು ಕಡ್ಡಿಯಂತ ಕಾಲುಗಳು ದೇವಸ್ಥಾನದ ಗಂಟೆಯನ್ನು ನೆನಪಿಸಿದವು.
ಬೇಜಾರಿಂದ ಮಲಗಿದ್ದವನಿಗೆ ಎಲ್ಲೋ ಕರಕೊಂಡು ಹೋಗ್ತೀನಿ ಎಂಬ ನಿಗೂಢಯುಕ್ತ ಆಮಂತ್ರಣ ಮುದ ನೀಡಿತಾದರೂ ತಕ್ಷಣ ಎದೆ ಒತ್ತಿದಂತಾಗಿ ಹಿತ್ತಲಿನಲ್ಲಿ ಇಳಿಸಿದ್ದ ಸಸಿಗಳತ್ತ ಧಾವಿಸಿದರೆ, ಸಸಿಗಳು ರಾತ್ರಿಗಿಂತ ಹೆಚ್ಚು ನಿತ್ರಾಣಗೊಂಡಿವೆ. ಹಾಲಿನ ಕ್ಯಾನು ಹಿಡಿದು ಸಾಗುತ್ತಿದ್ದ ‘ಅರುಣಪ್ಪ’, “ನೀಯೋನು ಯದರ್ಕಬ್ಯಾಡಣ. ಜೀವ ಯಲೆಯಾಗಲ್ಲ ಇರದು. ಬೇರ್ನಾಗೆ”, ಎಂದಾಗ ವೈದ್ಯನ ಭರವಸೆಯಂತೆ ಕೇಳಿಸಿತು.
ಹೆಗಲಮೇಲಿದ್ದ ಟವೆಲ್ಲಿಂದ ಬಾಯಿ ಮುಚ್ಚಿಕೊಂಡು “ವೋ ಯೇನಣ ಸಮಚರ?”, ಎಂದು ಆಶ್ಚರ್ಯ ಸೂಚಿಸಿದ ಬಾಣ.
“ಯಲ, ಗಿಡ ಊಣಕೆ ಒಂದೈದಾರು ಆಳು ಬೇಕಂತೆ..” ಉಮೇಶ ಅಡ್ಡ ಬಾಯಿ ಹಾಕಲು, ಬಾಣ ತಲೆ ಕೆರೆದುಕೊಳ್ಳುತ್ತ…” ನಮ್ಮ ಓನರನ್ನ ಬೆಂಗ್ಳೂರ್ಗೆ ಬಿಟ್ಟು ಬರ್ಬಕು. ಆಮ್ಯಾಕೆ ಬತ್ತೀನೇಳು.”
“ಯಲ ಅರ್ಜೆಂಟಂತೆ ಕಣಲ”.
“ನಾನು ಬಂದ್ರುನು ಇನ್ನಾರಾಳು ಎಲ್ಲಿ ಅಮ್ತ ಉಡುಕ್ಕಂಬತ್ತಿಯ.. ಆ…” ಎಂದು ತಲೆ ಕೆರೆದುಕೊಂಡು “ಒಂದು ಕೆಲ್ಸ ಮಾಡಣ. ದಿನಗೂಲಿಗಿಂತ ಸುಮ್ಕೆ ಇಷ್ಟುಕ್ಕಮ್ತ ಒಪ್ಪರಿಸು. ನಾನೆ ಆಳು ಕರಕಬಂದು ನಾಳಿಕಿಂದಕೆಲ್ಸ ಸುರು ಮಾಡ್ತಿನಿ”.
ಇದು ಮೂವರಿಗೂ ಒಪ್ಪಿಗೆಯಾಯಿತು. ಬೆಳಗ್ಗೆ ಮಾಳಿಗೆಯಿಂದ ಇಳಿದವನು ಲೋಟ ನೀರು ಕುಡಿಯದೆ ತಿಂಡಿತಿನ್ನದೆ ಹೊಟ್ಟೆ ಹಸಿದು ಒಬ್ರಾನ ಟೀಗೆ ಕರಿಲಿಲ್ಲ ಎಂದು ಮನಸ್ಸಿನಲ್ಲೆ ಬೈದುಕೊಂಡ ಚಾಮಿ.
***
ಬೆಳಗ್ಗೆ ಹನ್ನೊಂದರ ಸಮಯ. ಚಾಮಿ ಭರ್ತಿ ತಿಂಡಿ ತಿಂದು ಬಿಂದಿಗೆ ನೀರಿನೊಂದಿಗೆ ಹೊಲದೊಳಗೆ ಕಾಲಿಟ್ಟಿದ್ದ. ಬೆಳಗ್ಗೆ ಆರು ಗಂಟೆಯಿಂದಲೇ ಕೂಲೇರು ಕೆಲಸವನ್ನು ಶುರು ಮಾಡಿದ್ದಾರೆ ಎಂಬ ಸುದ್ದಿ ಮುಟ್ಟಿತ್ತು. ಕುಡಿಯಲು ನೀರು ತರಲು ಹೇಳಿದ್ದರು. ಪಕ್ಕದೂರಿನ ಕಾಯನ್ನು ಬೂತಿಗೆ ಹೊರಟಿದ್ದವನನ್ನು ನಿಲ್ಲಿಸಿ, “ಕೂಲೇರಿಗ್ಯಾಕೆಪಿಲ್ಟ್ರು ನೀರು” ಎಂದು ಉಗಿದು ವಾಪಸ್ಸು ಕಳಿಸಿದ್ದರು ಜನ. ಅದಾಗಲೇ ಸಾಕಷ್ಟು ವ್ಯತಿರಿಕ್ತ ನಡವಳಿಕೆಯಿಂದ ಹಳ್ಳಿಯ “ಎಕೋ ಸಿಸ್ಟಂ” ಅನ್ನು ಕೆಡಿಸುವವನಂತೆ ಅವರ ಕೆಂಗಣ್ಣಿಗೆ ಗುರಿಯಾಗಿದ್ದ ಚಾಮಿ ಇನ್ನೊಂದು ಎದುರು ಮಾತಾಡಲು ಹಿಂಜರಿದು ಟ್ಯಾಂಕಿನ ನೀರಿಗೆ ಶರಣಾಗಿದ್ದ. ರಸ್ತೆ ಬದಿಯ ತುಂಡದ ಕೆಲಸ ಮುಗಿದಿತ್ತು. ಬಾಣ, ಉಮೇಶನ ಮಿಸ್ಸೆಸ್ಸು, ನಾಗ, ಮತ್ತು ಇನ್ನೊಬ್ಬ ಅಜ್ಜ. ಉಳಿದಂತೆ ಮೂವರು ಸಣ್ಣ ಮಕ್ಕಳು. ಆರಾಳು ಅಂದಿದ್ದ, ಬರೇ ನಾಲ್ಕಾಳು ಬಂದಿದ್ದಾರೆ, ಇನ್ನಿಬ್ಬರು ಒದಗಲಿಲ್ಲವಾ ಅಥವಾ ಕುಡಿದು ಮಲಗಿಬಿಟ್ಟರಾ?. ಇವರು ಇಷ್ಟೊಂದು ಗುಂಡಿಗಳನ್ನು ಬದ್ಧವಾಗಿ ಮುಚ್ಚಬಲ್ಲರೇ? ಚಾಮಿಗೆ ಊರಿನೋರು ಹೆದರಿಸಿದ್ದು ಭೂತವಾಗಿ ಪರಿಣಮಿಸಿತ್ತು. ಅದರಲ್ಲೂ ಕಟ್ಟುಮಸ್ತಾಗಿದ್ದುದು ಎರಡಾಳು ಮಾತ್ರ. ಉಳಿದಂತೆ ಮುದುಕ, ಹೆಂಗಸು.ಮಕ್ಕಳು. ಇವರನ್ನು ನೆಚ್ಚಿಕೊಂಡರೆ ಸಸಿಗಳನ್ನು ಒಣಗಿಸಿಬಿಡುತ್ತಾರೇನೋ ಎಂದು ದಿಗಿಲಾಯಿತು. ಬಾಣ, ನಾಗ ಜೆಸಿಬಿಯನ್ನು ನಾಚಿಸುವಂತೆ ಮಣ್ಣೆಳೆಯುತ್ತಿದ್ದರು. ಉಮೇಶನ ಮಿಸ್ಸೆಸ್ಸು ಸ್ವಲ್ಪ ನಿಧಾನ. ಆದರೆ ನಿರಂತರ.
ಇನ್ನು ಅಜ್ಜ. ಯಾಕಪ್ಪ ಬಾಣ ಇವನನ್ನು ಕರೆತಂದೆ ಎಂದು ಕೇಳಬೇಕೆನಿಸಿತು. ಬೆಳ್ಳನೆ ಎದೆಗೂದಲು. ಹಂಚಿಕಡ್ಡಿಯಂತ ಕೈಕಾಲು. ಬೆತ್ತಲೆ ಬೆನ್ನು ಬಿಸಿಲಿಗೆ ಪ್ರತಿಫಲಿಸುತ್ತಿತ್ತು. ಪುರಾತನ ಪಳಯುಳಿಕೆಯಂತಿದ್ದ ಅಜ್ಜ. ಬಿಲಿಸಿನ ಝಳದಲ್ಲಿ ಎದೆಯ ದಮ್ಮು ಕಟ್ಟಿ “ಹ್ರಾ..ಹ್ರಾ” ಎನ್ನುತ್ತ ಸಲಿಕೆ ಆಡಿಸುತ್ತಿದ್ದ. ಸಲಿಕೆಯೆ ಅವನಿಗಿಂತ ದೊಡ್ಡದಾಗಿ ಕಾಣಿಸುತ್ತಿತ್ತು. ಯಾವಕ್ಷಣದಲ್ಲಿ ಬೇಕಾದರೂ ಅಜ್ಜ ಮುಂದಕ್ಕುರುಳಿ ಗುಂಡಿಯಲ್ಲಿ ಬಿದ್ದು.. ಹೋಗಿಬಿಡಬಹುದು ಎಂಬಷ್ಟು ಭಯವಾಯಿತು ಚಾಮಿಗೆ. ಅಕಸ್ಮಾತ್ ಈತ ಈ ಕ್ಷಣದಲ್ಲಿ ಇಲ್ಲಿ ಸತ್ತರೆ ಅದಕ್ಕೆ ಹೊಣೆ ಯಾರು? ಬಾಣನಾ ನಾನಾ? ಇವರಿಗೆಲ್ಲ ಇನ್ಶುರೆನ್ಸ್ ಇಲ್ಲ ಏನಿಲ್ಲ. ಕಲ್ಪನೆಯ ಪರಿಣಾಮ ನೆನೆಸಿಕೊಂಡು ಸಣ್ಣ ಭಯ ದೊಡ್ಡದಾಗಿ ಅಜ್ಜನನ್ನು ವಾಪಸ್ಸು ಕಳಿಸುವುದೇ ಒಳಿತು ಎನ್ನುವ ತೀರ್ಮಾನಕ್ಕೆ ಬಂದ. “ಅಜ್ಜ ನೀರು ಕುಡಿತ್ಯಾ?”, ಎನ್ನಲು ಉಸಿರುಹೊರಡದೆ ತಾ ಎನ್ನುವಂತೆ ತಲೆದೂಗಿದ ಅಜ್ಜ. ಚಾಮಿ ಲೋಟ ತರುವುದನ್ನೆ ಮರೆತಿದ್ದ. ಬೊಗಸೆಗೆ ಹೊಯ್ಯಲಾ? ಎಷ್ಟು ಅನಾಗರೀಕವಾಗಿ ಕಾಣಿಸುತ್ತೆ ಎಂದು ಚಿಂತಿಸುತ್ತಿರಲು ಅಜ್ಜ ಮರದ ಬುಡದಲ್ಲಿಟ್ಟಿದ್ದ ತನ್ನ ಚೊಂಬುತಂದ. ಚೊಂಬು ಬಹಳಷ್ಟು ನೊಂದಿರುವಂತೆ, ಅವನ ವೃತ್ತಿಯ ಒಂದು ಆಯುಧದಂತೆ ಕಂಡಿತು ಚಾಮಿಗೆ. “ಟ್ಯಾಂಕಿನ ನೀರು, ಪರವಾಗಿಲ್ವ?”, ಹೇಳಬಾರದೆಂದುಕೊಂಡಿದ್ದರೂ ಬಾಯಿಗೆ ಬಂದುಬಿಟ್ಟಿತು. “ನಮಗೆಂತ ಕಾಯಿಲೆ ಕಸಾಲೆ. ತತ್ತ ತತ್ತ ಸೋಮೇ” ಎಂದು ನೀರೊಯ್ಯಲು ಒತ್ತಾಯಪಡಿಸಿದ ಅಜ್ಜ.
ಚಾಮಿ ಬಾಣನನ್ನು ಮರೆಗೆ ಕರೆದು ಮೊದಲು ಅಜ್ಜನನ್ನು ಮಕ್ಕಳನ್ನು ಕಳಿಸು ಮತ್ತು ಮಾತು ಕೊಟ್ಟಂತೆ ಆರಾಳು ಹೊಂದಿಸಿ ಕೆಲಸ ಮುಗಿಸು ಎಂದು ತಾಕೀತು ಮಾಡಿದ. ನೋಡೋಕೆ ಅಂಗಿದ್ರು ಅಜ್ಜ ಜಬರ್ದಸ್ತ್ ಆಳು .ಗಟ್ಟಿ ಕುಳ ಅದು. ಇಷ್ಟು ಸುಲಬನಾಗಿ ಪ್ರಾಣ ಬಿಡಲ್ಲ. ಮಕ್ಕಳು ಹೊಟ್ಟೆಪಾಡಿಗೆ ಬೆಂಗಳೂರು ಸೇರ್ಕಂಡವ್ರೆ. ಹೆಂಡತಿ ಟಿಬಿ ತಗುಲಿ ಸತ್ತೋಗೆತೆ. ವಾರಕ್ಕೊಂದೋ ಎಲ್ಡೋ ಕೂಲಿ ಸಿಕ್ಕದು. ಹೊಟ್ಟೆಗು ಬಟ್ಟೆಗು ನ್ಯಾರ. ಮಿಕ್ಕಿದ್ರೆ ಚೂರು ಯಂಡ. ಎಚ್ಚು ಕಮ್ಮಿ ಆದರೆ ನಾನಿದೀನಿ ಅಂದ ಬಾಣ. ಮತ್ತೆ ಮಕ್ಕಳು? ಸಣ್ಣೋರು ಅಮ್ತ ತಾಚ್ಚಾರ ಮಾಡಬ್ಯಾಡಿ. ನನ್ನ ವಯ್ಸು ಮುಟ್ಟವಷ್ಟತ್ತಿಗೆ ನನ್ನೆರಡರಷ್ಟು ಬದುಕು ಮಾಡ್ತವೆ ಅವು ಎಂದು ತುಸು ಜೋರಾಗೆ ಹೊಗಳಿ, ಮಕ್ಕಳು ಅದನ್ನು ಕೇಳಿಸಿಕೊಂಡು ಸಲಿಕೆಯನ್ನು ಇನ್ನಷ್ಟು ಬಿರುಸಾಗಿ ಆಡಿಸಿದವು. ಹೀಗೆಲ್ಲ ಹೇಳಿದರೆ ಮತ್ತೆಂತ ಮಾತು. ಚಾಮಿಗೆ ಇಕ್ಕಟ್ಟೆನಿಸಿತು. ದಸರಾ ರಜ ಇದ್ದಿರಬೇಕು. ಅಥವಾ ಶಾಲೆಯನ್ನೆ ಬಿಟ್ಟಿದ್ದಾರೋ ಏನೋ. ಏನು ಹೇಳಲೂ ಕೇಳಲೂ ಹಿಂಜರಿಕೆ. ಮೌಲ್ಯಗಳನ್ನು ಬಾಯಲ್ಲಿ ಆಡುವುದು ಸುಲಭ. ಕ್ರಿಯೆಯಲ್ಲಿ ಅಳವಡಿಸಿಕೊಳ್ಳುವುದು ಕಷ್ಟ. ಕ್ರಾಂತಿಗೆ ದನಿಗೂಡಿಸುವುದು ಸುಲಭ. ಮುಂದೆ ನಿಂತು ಶಕ್ತಿಯುತವಾಗಿ ಧನಿಯೆತ್ತುವುದು ಕಷ್ಟ. ಸಾಮಾನ್ಯರಿಗೂ ಅಸಾಮಾನ್ಯರಿಗೂ ಇರೋ ವ್ಯತ್ಯಾಸವು ಇದೇ ಅನ್ನಿಸುತ್ತದೆ. ಜನರ ಬಾಯಿಗೆ ಹೆದರಿ ಶುದ್ಧಕುಡಿಯುವ ನೀರು ತರಲಾಗದವನು ಏನು ಮಾತಾಡಿ ಏನು ಪ್ರಯೋಜನ?.
ಏನಾದರೂ ಮಾಡಿಕೊಳ್ಳಿ ಎನ್ನುತ್ತ ಚಾಮಿ ಕೂರಲು ನೆರಳಿಗಾಗಿ ಹುಡುಕಾಡಲು ಪಕ್ಕದ ಜಮೀನಲ್ಲಿ ಹುಣಸೆಕಾಯಿ ಆಯುತ್ತಿದ್ದ ಸೋಮಪ್ಪ ಕಂಡು ಅವರ ಜೊತೆಗೂಡಿದ. ಸ್ವಲ್ಪ ಮಾತಿಗೆ ಸಿಕ್ಕಿದರೆ ಸಾಕು ಎಲ್ಲರೂ ಏನಾದರೊಂದು ಹೇಳುವವರೇ ಎಂದು ನೆನಪಾಗಿ ಸುತ್ತ ಏಕಾಂತ ಸ್ಥಳ ಹುಡುಕುವಷ್ಟರಲ್ಲಿ-
“ಅಲ್ವಲ ಅಪಯ, ಆಟೋಂದು ದುಡ್ಡಿಗೆ ಒಪ್ಪರಿಸಿದಿಯಲ, ನಿನಿಗೇನು ಬುದ್ದಿ ಐತಾ ಇಲ್ವಾ?” ಎಂದು ಬೈಯ್ಯುವ ಧನಿಯಲ್ಲಿ ಸೋಮಪ್ಪ ಪ್ರಶ್ನಿಸಿದ.
ಪಕ್ಕದಲ್ಲೇ ಮಣ್ಣೆಳೆಯುತ್ತಿದ್ದ ನಾಗ ಕೇಳಿಸಿಕೊಂಡು – “ಆಟೋಂದಂತೆ ಆಟೋಂದು. ಯೋಟೋಂದು ಕೊಟ್ಬುಟವ್ರೊ. ಸುಮ್ಮುಕ ಕೂಕಳಪ ದೊಡ್ಡ ಮನ್ಸ ನೀನೇನು ಎತ್ತಿಕೊಡಬ್ಯಾಡ” ಎಂದು ಗದರಿದ.
“ಮುನ್ನೋಡಕಂಡು ಬದ್ಕು ಮಾಡೋ ಅಲಾಲಕೋರ ನನ ಮಗನೆ. ಗೊತ್ತೇನೋ ಅತ್ತು ಸಾವ್ರುಕ್ಕೆ ಎಷ್ಟು ಸೊನ್ನೆ ಅಮ್ತನ?”.
“ಈಗೇನು ಬಾರಪ. ಆ ಸೊನ್ನೆಗುಳನ್ನೆಲ್ಲ ನೀನೆ ಮಡಿಕ್ಕಂಡು ಗುಂಡಿ ಮುಚ್ಕೊಟ್ಟೋಗು…” ಎಂದು ನಾಗಪುನಃ ವಟ್ಟರಿಸಲು ಸೋಮಪ್ಪ ಇವನ ಹತ್ತಿರ ಮಾತೇನು ಎಂದು ಸುಮ್ಮನಾದ. ನಾಗ ಬಹಳ ಜೋರು. ಪ್ರತಿಯೊಂದಕ್ಕೂ ದಬಾಯಿಸುತ್ತಾನೆ ಎಂದು ಜನ ಎಚ್ಚರಿಸಿದ್ದು ನೆನಪಾಯಿತು ಚಾಮಿಗೆ.
“ನೀನು ಕೊಟ್ಟಿರದ್ರಾಗೆ ಅರ್ದ ಕೊಟ್ಟಿದ್ರು ಸಾಕಿತ್ತು ಈ ನನ ಮಗ ಒಬ್ನೆ ಬಂದು ಹಗ್ಲು ಇಳ್ಳುಅಮ್ದಂಗೆ ಮುಚ್ಕೊಟ್ಟೋಗಿರೋನು”, ಇದೇನು ಸೋಮಪ್ಪ ಇದ್ದಕಿದ್ದಂಗೆ ನಾಗನನ್ನು ಹೊಗಳಲಾರಂಭಿಸಿದ? ಅಥವಾಸೂಕ್ಷ್ಮವಾಗಿ ಅರ್ಧ ದುಡ್ಡಿನ ಕೆಲಸ ಅಂತ ಹೇಳುತ್ತಿದ್ದಾನಾ ತಿಳಿಯಲಿಲ್ಲ. “ಅಂಗ ಮಾಡಣ. ಮುಂದಿನ ಸತಿ ನಂಗೊಬ್ನಿಗೆ ಒಪ್ಪರಿಸು. ನೀನೇಳಿದ ಟೈಮಿಗೆ ಮುಗುಸಿಕೊಟ್ಟೋಗ್ತೀನಿ..”. ನಾಗ ಮೆಲ್ಲಗೆ ಉಸುರಿದ. ನಾಲ್ಕುಜನ ಒಟ್ಟು ಕೆಲಸ ಮುಗಿಸಲು ಮೂರು ದಿವಸ ಹಿಡಿದದ್ದು ನೆನೆಸಿಕೊಂಡರೆ ನಾಗ ಒಬ್ಬನೇ ದುಡಿಯುವ ಆಸೆಗೆ ಎಂತಹ ರಿಸ್ಕಿನ ಒಪ್ಪಂದದ ಮಾತಾಡಿದ್ದ ಎಂದು ಚಾಮಿಗೆ ಮೂರು ದಿನಗಳ ತರುವಾಯ ತಿಳಿಯಿತು. ಹಸಿವೆ ಬಡತನ ಅವುಗಳ ಮೇಲೆ ಬರೆ ಎಳೆದಂತೆ ಜಗತ್ತು ಒಡ್ಡುವ ಸ್ಪರ್ಧೆ. ಬಡತನ ಸರಿದೂಗಿಸುತ್ತ ಸ್ಪರ್ಧೆಗೆ ಎದುರಾಗುವುದೆಲ್ಲಿಂದಸಾಧ್ಯ?. ಇವನು ಮಹಾತ್ವಾಕಾಂಕ್ಷಿಯಾಗಿದ್ದಾನೆ. ಉದ್ಯೋಗ ಕೂಲಿ. ತನ್ನ ವೃತ್ತಿಯಿಂದ ಅದೆಷ್ಟುತಾನೆ ದುಡಿಯಬಲ್ಲ? ತನ್ನ ಪಾಡು ಬಿಡು, ತನ್ನ ಮಕ್ಕಳಿಗಾದರು ಉಳ್ಳವರ ಮಕ್ಕಳಷ್ಟೇ ಉತ್ತಮ ಶಿಕ್ಷಣ ಪೌಷ್ಠಿಕ ಆಹಾರ ಕೊಡಿಸಲು ಸಾಧ್ಯವೇ?. ವೇದಿಕೆ ಮೇಲೆ ಪ್ರೈಜ್ ಹಿಡಿದು ಮೈಕಿನಲ್ಲಿ ಭಾಷಣ ಕುಟ್ಟುವ ಪ್ರತಿಯೊಂದು ಮಗುವೂ ಯೋಚಿಸಬೇಕು, ತಾನು ಎಲ್ಲರೊಂದಿಗೆ ಸ್ಪರ್ಧಿಸಿ ಜಯಿಸಿದೆನೋ ಅಥವಾ ಸೀಮಿತ ಮಂದಿಯೊಂದಿಗೆ ಮಾತ್ರ ಹೊರಾಡಿ ಗೆದ್ದೆನೋ ಎಂದು. ಯಾಕೆಂದರೆ ಅದೇ ಭಾಷಣ ಕುಟ್ಟುವ ಮಂದಿಯನ್ನು ಅವಕಾಶವೇ ಇಲ್ಲದ ಲಕ್ಷಾಂತರ ಮಂದಿ ಟಿವಿಯೆದುರು ಕುಳಿತು ಆಲಿಸುತ್ತ ಕನಸು ಕಾಣುತ್ತಿರುತ್ತಾರೆ, ಅಥವಾ ಪರಿಸ್ಥಿತಿಯ ಅರಿವಾಗಿ ಕನಸೇ ಕಾಣದಷ್ಟು ಕುರುಡರಾಗುತ್ತಿರುತ್ತಾರೆ.
ಚಾಮಿ ನಾಗನ ಪಿಸಪಿಸಕ್ಕೆ ನಕ್ಕು ಸುಮ್ಮನಾದ.
***
ಮನುಷ್ಯ ಹುಟ್ಟಾ ಲಾಭಕೋರ ಮನಸ್ಥಿತಿಯವನು ಅನ್ನಿಸುತ್ತೆ. ಹುಟ್ಟಿಸೋ ಮಕ್ಕಳನ್ನೂ ಕೂಡ ಮುಂದೆ ನಮ್ಮನ್ನು ಸಾಕಲಿ ಎಂದೇ ಅವರ ದೇಹ ಬುದ್ಧಿ ಬೆಳವಣಿಗೆಗಳಲ್ಲಿ ಹೂಡಿಕೆ ಮಾಡುತ್ತಿರುತ್ತಾನೆ. ಹಾಗಲ್ಲದಿರುವವರು ಬಹಳ ವಿರಳ. ಅಂತೂ ಇಂತೂ ಚಾಮಿ ಮಾವಿನ ಸಸಿ ನೆಡಿಸಿದ್ದ. ಒಂದಷ್ಟು ಸಸಿಗಳು ಮಣ್ಣಿನಲ್ಲಿ ಹೂತನಂತರ ಕೊನೆಯುಸಿರೆಳೆದಿದ್ದವು. ‘ಪ್ರಯಾಸಕರ ಗೆಲುವು’ ಎಂದು ನಿಟ್ಟುಸಿರು ಬಿಟ್ಟಿದ್ದನ್ನು ಪ್ರೆಪ್ ಳಿಂದ ಮುಚ್ಚಿಟ್ಟಿದ್ದ. ಆನಂತರ ದಿಢೀರನೆ ಒಂದು ರಾತ್ರಿ ಕಾಡುಹಂದಿಗಳು ಧಾಳಿಯಿಟ್ಟು ಹಸಿ ಮಣ್ಣನ್ನು ದೊಗೆದು ಬೇರನ್ನು ಗಾಯಗೊಳಿಸಿ ಮುಕ್ಕಾಲು ಭಾಗ ಸಸಿಗಳು ಒಣಗಿ ಪುನಃ ಅತ್ತ ತಿರುಗಲೂ ಆಗದಂತೆ ಆಫೀಸಿನಲ್ಲಿ ಸಿಕ್ಕಿಹಾಕಿಕೊಂಡು ನೆಲ ಚನ್ನಾಗಿ ಹದಗೊಂಡಿದ್ದರಿಂದ ಕಳೆಯು ಕಾಡಿನಂತೆ ದಟ್ಟವಾಗಿ ಬೆಳೆದು ನಾಗನ ನೆನಪನ್ನು ತರಿಸಿತ್ತು. ನಾಗನೊಂದಿಗೆ ಫೋನಿನಲ್ಲೆ ಜಮೀನಿನ ಸಂಪೂರ್ಣ ಜವಾಬ್ಧಾರಿ ವಹಿಸಿ ಏನಾದರು ಬೆಳೆದುಕೋ ಬೆಳೆದಿದ್ದರಲ್ಲಿ ಒಂಚೂರು ನನಗೆ ಕೊಡು ಎಂಬಲ್ಲಿಗೆ ನಿಲ್ಲಿಸಿ ಮನುಷ್ಯನ ಇತಿಮಿತಿಗಳ ಪರಾಮರ್ಶೆಯಲ್ಲಿ ತೊಡಗಿದ ಚಾಮಿ.
ಮಧುಸೂಧನ್ ವೈ ಎನ್ ಮೂಲತಃ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಯರಗುಂಟೆ ಗ್ರಾಮದವರು. ವೃತ್ತಿ ಸಾಫ್ಟವೇರ್ ಎಂಜಿನಿಯರ್. ಬೆಂಗಳೂರಿನಲ್ಲಿ ವಾಸ. ಸಾಹಿತ್ಯದ ಓದು, ವಿಶ್ವ ಸಿನಿಮಾಗಳ ವೀಕ್ಷಣೆ ಹವ್ಯಾಸವಿರುವ ಇವರಿಗೆ ತತ್ವಶಾಸ್ತ್ರದಲ್ಲಿಯೂ ಆಸಕ್ತಿ. ಇವರ “ಕಾರೇಹಣ್ಣು” ಕಥಾ ಸಂಕಲನಕ್ಕೆ ಈ ಹೊತ್ತಿಗೆಯ ಪ್ರಶಸ್ತಿ ಲಭಿಸಿದೆ.
ಈ ಕಾಲಮಾನದ ಕತೆಗಳಲ್ಲಿ ಒಂದು ಇದು. ಇಷ್ಟವಾಯ್ತು. ಪದಗಳ ಜೊತೆಗೆ ಅದೆಷ್ಟು ಸಹಜ ಸರಸ ಮಧುಸೂದನ್ ಅವರದ್ದು!