‘ಈಗ ನೋಡಿ ಅಸಲೀ ಝಗಡ ಷುರೂ. ಹಾವು ಮುಂಗೂಸ್ ಝಗಡʼ ಅಂದ. ಬುಟ್ಟಿ ಮುಚ್ಚಳ ತೆಗೆದ. ಹಾವು ಹೆಡೆ ಎತ್ತಿತು. ಪುಂಗಿ ಊದುತ್ತಾ ಮುಷ್ಠೀನ ಹಿಡಿದು, ಕಚ್ಚಲಿ ಅನ್ನೋ ಥರ ಆಡಿಸಿದ. ಅದು ಕಚ್ಚೋಕೆ ಬಂದರೆ ಮುಷ್ಠೀನ್ನ ಹಿಂದಕ್ಕೆಳೆದುಕೋತಾ ಇದ್ದ. ಇವನು ಹಾವು ಮುಂಗುಸಿ ಜಗಳ ತೋರಿಸ್ತಾ ಇಲ್ಲವಲ್ಲ. ಜಗಳ ತೋರಿಸ್ರೀ ಅಂತ ಕೇಳ್ಳಾ? ಬೇಡಪ್ಪಾ. ಆಮೇಲೆ ನನಗಿನ್ನೇನಾದರೂ ಮಾಡಿಬಿಟ್ಟರೆ ಕಷ್ಟ. ಅವನ ಸಹವಾಸಾನೇ ಬೇಡ. ಕಾಯ್ತಾ ನಿಂತೆ. ‘ಜೋರ್‌ ಸೇ ತಾಲಿ ಬಜಾವೋʼ ಅಂದ. ಎಲ್ಲರೂ ಚಪ್ಪಾಳೆ ತಟ್ಟಿದರು. ನಾನೂ ಜೋರಾಗಿ ತಟ್ಟಿದೆ.
ಎಸ್. ರಾಮಮೂರ್ತಿ ಬರೆದ ಈ ಭಾನುವಾರದ ಕತೆ “ಜಾದೂ” ನಿಮ್ಮ ಓದಿಗೆ

ಈಗ್ಯೆ ಅರವತ್ತು ವರ್ಷಗಳ ಹಿಂದಿನ ಒಂದು ದಿನ.

ಹವಾಯ್‌ ಚಪ್ಪಲಿಗಳಲ್ಲಿ ಕಾಲುಗಳನ್ನ ತೂರಿಸುತ್ತ ‘ಅಮ್ಮಾ… ಹೋಗ್ತೀನೀʼ ಅಂದೆ.
‘ಅದೆಷ್ಟು ಸಲ ಹೇಳಬೇಕೋ ನಿನಗೇ, ಹೋಗ್ತೀನಿ ಅನ್ನಬೇಡ ಹೋಗಿಬಿಟ್ಟು ಬರ್ತೀನಿ ಅಂತ ಹೇಳೋ ಅಂತಾʼ ಅಂತ ಬೈಯ್ಯುತ್ತಲೇ ಆಚೆ ಬಂದಳು ಅಮ್ಮ.
‘ಹುʼ ಅಂದೆ.
‘ಹು ಅಂದುಬಿಟ್ರೆ? ಹೋಗಿಬಿಟ್ಟು ಬರ್ತೀನಿ ಅಂತ ಬಾಯಿಬಿಟ್ಟು ಹೇಳುʼ.
‘ಹೋಗಿಬಿಟ್ಟು ಬರ್ತೀನಿʼ ಅಂತ ಗೊಣಗಿ ಹೊರಟೆ. ‘ಹುಷಾರೂʼ ಅಂತ ಅಮ್ಮ ಎಚ್ಚರಿಸೋದನ್ನ ಮರೀಲಿಲ್ಲ.

ಯಾವೋನು ಮಾಡಿದನೋ ಈ ಸ್ಕೂಲು. ಬೇಜಾರು ಹೋಗೋಕೆ. ಕಾಲಿಗೆ ಸಿಕ್ಕ ಕಲ್ಲನ್ನು ಕೋಪದಿಂದ ಜೋರಾಗಿ ಒದ್ದೆ. ಅದು ರೋಡು ದಾಟಿ ಆ ಕಡೆ ಫುಟ್‌ಪಾತಲ್ಲಿ ಹೋಗ್ತಿದ್ದವನ ಪೈಜಾಮಕ್ಕೆ ಬಡಿದು ನೆಲದ ಮೇಲೆ ಬಿತ್ತು. ಅವನು ಹಿಂದೆ ತಿರುಗಿ ಸುತ್ತಲೂ ನೋಡೋಷ್ಟರಲ್ಲಿ ನಾನು ಬೇರೆ ಕಡೆ ಮುಖ ತಿರುಗಿಸಿ ವಾರೆನೋಟದಿಂದ ಅವನನ್ನು ನೋಡಿದೆ. ಒದ್ದವನು ನಾನು ಅಂತ ಅವನಿಗೆ ಗೊತ್ತಾಗಲಿಲ್ಲ ಸದ್ಯ. ಮತ್ತೆ ಅವನನ್ನ ನೋಡಿದೆ. ಹೆಗಲ ಮೇಲೆ ಉದ್ದನೆಯ ಕೋಲಿಟ್ಟುಕೊಂಡಿದ್ದ. ಆ ಕೋಲಿನ ಮುಂದಿನ ತುದಿಯಲ್ಲಿ ಬುಟ್ಟಿಗಳು. ಹಿಂದೆ, ಒಂದು ದೊಡ್ಡ ಬಟ್ಟೆ ಗಂಟು ನೇತಾಡ್ತಾ ಇದ್ದವು. ಅವನು ನಡೀತಾ ಇದ್ದರೆ ಅವು ಮೇಲಕ್ಕೂ ಕೆಳಕ್ಕೂ ಜಗ್ಗತಾ ಇದ್ದವು. ಅರೆ, ಅವನು ಹಾವಾಡಿಸೋನು! ಮುಂದೆ ಕಟ್ಟಿಕೊಂಡಿರೋದು ಹಾವಿನ ಬುಟ್ಟಿಗಳು. ಒಂದರಲ್ಲಿ ಹಾವಿರತ್ತೆ. ಇನ್ನೊಂದರಲ್ಲಿ ಮುಂಗುಸಿ. ಇನ್ನೊಂದರಲ್ಲಿ? ಏನೋ ಯಾರಿಗ್ಗೊತ್ತು. ಅವನು ಇಲ್ಲೇ ಆಟ ಶುರು ಮಾಡಿದರೆ ಎಷ್ಟು ಚೆನ್ನಾಗಿರತ್ತೆ? ಹಾವು ಮುಂಗುಸಿ ಜಗಳ ಆಡೋದನ್ನ ನೋಡೇ ಇಲ್ಲ. ಅವತ್ತೊಂದಿನ ಹೀಗೇ ಇನ್ನೇನು ಆಟ ಶುರು ಆಗತ್ತೆ ಅನ್ನೋಷ್ಟರಲ್ಲಿ ಅದೆಲ್ಲಿದ್ದರೋ ಕನ್ನಡ ಮೇಷ್ಟ್ರು ನನ್ನ ಹಿಂದೆ ನಿಂತುಕೊಂಡು ‘ಕ್ಲಾಸಿಗೆ ಚಕ್ಕರ್‌ ಹೊಡೆದು ಇಲ್ಲೇನು ಮಾಡ್ತಾ ಇದ್ದೀಯೋ? ನಡಿಯೋ ಕ್ಲಾಸಿಗೆʼ ಅಂತ ಕಿವಿ ಹಿಡಿದು ಎಳಕೊಂಡುಹೋದರು. ಇವತ್ತು ಯಾರಿಗೂ ಕಾಣಿಸದ ಹಾಗೆ ಗುಂಪಿನೊಳಗೆ ಸೇರಿಕೊಂಡುಬಿಡಬೇಕು. ಹಾವಾಡಿಸೋ ಹಾವಾಡಿಗ ಅಲ್ಲೇ ನಿಂತ. ಸುತ್ತ ಮುತ್ತ ನೋಡಿದ. ಓ, ಇಲ್ಲೇ ಶುರು ಆಗತ್ತೆ ಈಗಾ! ಮೆಲ್ಲಗೆ ಚಪ್ಪಾಳೆ ತಟ್ಟಿದೆ. ನಾನೂ ಅಲ್ಲೇ ನಿಂತೆ. ಹಾವಾಡಿಗ ನಿಧಾನಕ್ಕೆ ಮೊಣಕಾಲುಗಳನ್ನು ಮುಂದಕ್ಕೆ ಬಗ್ಗಿಸಿದ. ಬುಟ್ಟಿ ಗಂಟುಗಳು ನೆಲದ ಮೇಲೆ ಕೂತವು. ಕೋಲನ್ನು ಹೆಗಲಿನಿಂದ ಪಕ್ಕಕ್ಕೆ ಸರಿಸಿ ಕೆಳಗಿಟ್ಟ. ಬುಟ್ಟಿ ಗಂಟುಗಳನ್ನ ಬೊಂಬಿನಿಂದ ಈಚೆಗೆ ತೆಗೆದ. ಗಂಟನ್ನ ಬಿಚ್ಚಿ ಅದರಿಂದ ಒಂದು ಪುಂಗಿ, ಬುಡುಬುಡುಕೆ, ಒಂದು ಚಿಕ್ಕ ಕೋಲು ತೆಗೆದು ಪಕ್ಕಕ್ಕಿಟ್ಟ. ಒಂದರ ಮೇಲೆ ಒಂದಿದ್ದ ಬುಟ್ಟಿಗಳನ್ನು ಒಂದರ ಪಕ್ಕ ಒಂದಿಟ್ಟ. ಒಬ್ಬೊಬ್ಬರಾಗಿ ಜನ ಅವನ ಸುತ್ತಲೂ ನಿಂತುಕೊಳ್ತಾ ಹೋದರು. ಕೈಗಡಿಯಾರ ಕಟ್ಟಿದ್ದವರೊಬ್ಬರ ಪಕ್ಕ ನಿಂತು ತಲೆಯನ್ನು ಸೊಟ್ಟಗೆ ಮಾಡಿ ಟೈಂ ನೋಡಿಕೊಂಡೆ. ಇನ್ನೂ ಟೈಮಿದೆ ಕ್ಲಾಸಿಗೆ. ಎಡಗೈಲಿ ಬುಡುಬುಡುಕೆ ಹಿಡಿದು ಬುಡುಬುಡುಬುಡು ಬಾರಿಸೋಕೆ ಶುರು ಮಾಡಿದ. ಆಗಲೇ ಒಂದಿಪ್ಪತ್ತು ಜನ ಸೇರಿದ್ದರೇನೋ. ಬುಡುಬುಡು ಶಬ್ದ ಕೇಳಿಕೊಂಡು ಇನ್ನಷ್ಟು ಜನ ಸೇರಿದರು.

ಉದ್ದನೆ ಕೋಲಿನಿಂದ ನೆಲದ ಮೇಲೆ ಒಂದು ಸರ್ಕಲ್‌ ಎಳೆದ.

ಹಾವಾಡಿಗ ಸುತ್ತಲೂ ನೋಡಿದ. ‘ತಾಯಿ ತಂದೇರೇ, ಅಕ್ಕ ತಂಗೀರೇ, ಅಣ್ಣ ತಂಗೀರೇ ಎಲ್ರಿಗೂ ಸಲಾಂ ಸಲಾಂ ಸಲಾಂ. ನಮಸ್ಕಾರ ನಮಸ್ಕಾರ ನಮಸ್ಕಾರʼ ಅಂತ ಸುತ್ತಲೂ ತಿರುಗಿ ಎಲ್ಲರಿಗೂ ಸಲಾಮು ನಮಸ್ಕಾರ ಮಾಡಿದ.

‘ಯಾರೂ ಈ ಗೆರೆ ದಾಟಿ ಒಳಗೆ ಬರಬಾರದುʼ ಅಂತ ಹೇಳ್ತಾ ಒಳಗಿದ್ದವರನ್ನು ಹೊರಗೆ ಹೋಗಲು ಕೈ ತೋರಿಸಿದ. ‘ನೋಡಿ ಇವತ್ತೂ ಶುಕ್ಕರ್‌ವಾರ. ಈಗ ಜಾದೂ ಶುರು ಮಾಡ್ತೀನಿ. ಹಿಮಾಲಯಾದಲ್ಲಿ ನಮ್ಮ ಬಾಬಾ ಇದ್ದಾರೆ. ಅವರಿಂದ ನಾನು ಈ ಜಾದು ಕಲ್ತುಕೊಂಡೆʼ ಅಂತ ಹೇಳಿ ಯಾವುದೋ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಿದ. ಇಷ್ಟಾಗೋಷ್ಟು ಹೊತ್ತಿಗೆ ಇನ್ನಷ್ಟು ಜನ ಸೇರಿದರು. ‘ಇವತ್ತಿನ ಇಸ್ಪೆಷಲ್‌ ಆಟ ಅಂದ್ರೆ ಹಾವು ಮುಂಗೂಸ್‌ ಝಗಡʼ ಅಂತಂದು ತನ್ನ ಮಂತ್ರದಂಡದಿಂದ ಬುಟ್ಟಿಯ ಮೇಲೆ ಒಂದು ಏಟು ಹಾಕಿ ಬುಟ್ಟಿ ಮುಚ್ಚಳ ತೆಗೆದ. ಒಂದು ಕೈಯಲ್ಲಿ ಪುಂಗಿ ಊದುತ್ತಾ ಇನ್ನೊಂದು ಕೈಯಲ್ಲಿ ದಂಡದಿಂದ ಹಾವಿಗೆ ಚುಚ್ಚಿದ. ಅದು ಹೆಡೆ ಎತ್ತಿತು. ಭಯದಿಂದ ಪಕ್ಕದಲ್ಲಿದ್ದವರ ಕೈ ಹಿಡಕೊಂಡೆ. ಅವರು ನನ್ನನ್ನು ನೋಡಿದರು. ನಾನು ಅವರನ್ನು ನೋಡಿದೆ. ನಾಚಿಕೆಯಾಯಿತು. ಕೈ ಬಿಟ್ಟೆ. ಬುಟ್ಟಿ ಮುಚ್ಚಿ ಇನ್ನೊಂದು ಬುಟ್ಟಿಯ ಮುಚ್ಚಳ ತೆಗೆದ. ಮುಂಗುಸಿ ಮಲಗಿತ್ತು. ಎರಡಕ್ಕೂ ಜಗಳಕ್ಕೆ ಬಿಟ್ಟರೆ ಮಜ ಇರತ್ತೆ ಅಂತ ಮೈಯೆಲ್ಲಾ ಕಣ್ಣಾಗಿಸಿಕೊಂಡೆ.

ಹಾವಾಡಿಗ ಮೇಲೆದ್ದು ‘ನೋಡಿ, ಈ ನಾಗಪ್ಪ ದೇವ್ರು ಒಳ್ಳೆವ್ರಿಗೆ ಒಳ್ಳೆವ್ನು, ಕೆಟ್ಟೋರಿಗೆ ಕೆಟ್ಟೋನು. ಇದರ ದ್ವೇಷ ಹನ್ನೆಲ್ಡು ವರ್ಷ ಅಂತೆ. ನೋಡಿ, ಇದೂ ಬಾಬಾ ಮಂತ್ರಿಸಿ ಕೊಟ್ಟಿರೋ ತಾಯಿತ. ನನ್ನ ಹತ್ರ ಇರೋದೇ ಹತ್ತು. ಇದನ್ನ ಕಟ್ಟಿಕೊಂಡರೆ ಯಾವ ಹಾವು ಕಚ್ಚಿದರೂ ಏನೂ ಆಗೋಕಿಲ್ಲ. ಇದರ ಬೆಲೆ ಸೌ ರೂಪ್ಯಾ ಅಲ್ಲ ಹಜಾರ್‌ ರೂಪ್ಯಾನೂ ಅಲ್ಲ. ಕೇವಲ ಐದು ರುಪಾಯಿ. ಸಿರ್ಫ್‌ ಪಾಂಚ್‌ ರೂಪ್ಯಾ. ಒಂದು ಮಸಾಲೆದೋಸೆ ದುಡ್ಡು. ತೊಗೊಳ್ಳಿ. ಅಂತ ಎಲ್ಲರಿಗೂ ಕೊಡೋಕೆ ಹೋದ. ಕೆಲವರು ತೊಗೊಂಡರು. ಕೆಲವರು ಬೇಡ ಅಂದರು. ನನ್ನ ಹತ್ತಿರ ಬಂದಾಗ ನಾನು ಬೇರೆ ಕಡೆ ಮುಖ ಮಾಡಿಕೊಂಡೆ. ‘ಯಾರೂ ನನಗೆ ದುಡ್ಡು ಕೊಡಬೇಡಿ. ಎಲ್ಲರಿಗೂ ಇದು ಮುಫ್ತುʼ

ಅವನು ಇಲ್ಲೇ ಆಟ ಶುರು ಮಾಡಿದರೆ ಎಷ್ಟು ಚೆನ್ನಾಗಿರತ್ತೆ? ಹಾವು ಮುಂಗುಸಿ ಜಗಳ ಆಡೋದನ್ನ ನೋಡೇ ಇಲ್ಲ. ಅವತ್ತೊಂದಿನ ಹೀಗೇ ಇನ್ನೇನು ಆಟ ಶುರು ಆಗತ್ತೆ ಅನ್ನೋಷ್ಟರಲ್ಲಿ ಅದೆಲ್ಲಿದ್ದರೋ ಕನ್ನಡ ಮೇಷ್ಟ್ರು ನನ್ನ ಹಿಂದೆ ನಿಂತುಕೊಂಡು ‘ಕ್ಲಾಸಿಗೆ ಚಕ್ಕರ್‌ ಹೊಡೆದು ಇಲ್ಲೇನು ಮಾಡ್ತಾ ಇದ್ದೀಯೋ? ನಡಿಯೋ ಕ್ಲಾಸಿಗೆʼ ಅಂತ ಕಿವಿ ಹಿಡಿದು ಎಳಕೊಂಡುಹೋದರು.

‘ಈಗ ನೋಡಿ ಹಾವು ಮುಂಗೂಸ್‌ ಝಗಡ. ಆದರೆ ಅದಕ್ಕೂ ಮುಂಚೆ ಈ ಆಟ ನೋಡಿʼ ಅಂತ ಆಟ ನೋಡ್ತಾ ಇದ್ದ ಒಬ್ಬನನ್ನ ‘ನೀನು ಬಾಣ್ಣʼ ಅಂತ ಕರೆದ. ಇಲ್ಲಿ ಮಲಕ್ಕೋ ಅಂದ. ಅವನು ಅಂಗಾತ ಮಲಗಿದ. ಮುಖ ಮುಚ್ಚೋ ಹಾಗೆ ಅವನ ಮೇಲೆ ಒಂದು ಪಂಚೆ ಹೊದ್ದಿಸಿದ. ‘ಯಾರೂ ಹೋಗಬಾರದು. ಹೋದರೆ ಈ ಮನ್‌ಷ ಲಾಶ್‌ ಆಗ್ಬಿಡ್ತದೆʼ ಅಂದ. ನಿಂತಿದ್ದ ಒಬ್ಬರ ಮುಂದೆ ಹೋಗಿ ನಿಂತು ಮಲಗಿದ್ದವನನ್ನು ಕೇಳಿದ. ‘ನನ್ನ ಮುಂದೆ ನಿಂತಿರೋದು ಗಂಡಸಾ ಹೆಂಗಸಾ?ʼ ‘ಗಂಡಸುʼ. ಅರೆ ಹೇಗೆ ಗೊತ್ತಾಯ್ತು ಅವನಿಗೆ? ‘ಇವನ ಜೋಬಲ್ಲಿ ಎಷ್ಟು ದುಡ್ಡಿದೆ?ʼ ‘ಇಪ್ಪತ್ತು ರುಪಾಯಿʼ. ಹಾವಾಡಿಗ ಅವನ ಷರಟು ಜೋಬಿಗೆ ಕೈ ಹಾಕಿ ತೆಗೆದು ಎಣಿಸಿದ. ಇಪ್ಪತ್ತು ರುಪಾಯಿ. ಅಬ್ಬ! ಎಂಥ ಕಮಾಲು! ‘ಈಗ ನೋಡೀ, ಈ ಮಲಗಿರೋನು ಹಂಗೇ ಗಾಳೀಲಿ ಮೇಲಕ್ಕೆ ಏಳ್ತಾನೇʼ ಅಂದ. ಹೌದಾ? ಮಂತ್ರದಂಡಾನ್ನ ಅವನ ಸುತ್ತಲೂ ಆಡಿಸುತ್ತ ಮಣಮಣ ಅನ್ನುತ್ತಾ ಅವನಿಗೆ ಪ್ರದಕ್ಷಿಣೆ ಹಾಕಿದ. ‘ಯಾರೂ ಸದ್ದು ಮಾಡಬಾರದು. ಜೋರಾಗಿ ಮಾತಾಡಬಾರದು. ಶಬ್ದ ಆದರೆ ಇವನು ಇಲ್ಲೇ ಖಲಾಸ್‌ʼ ಅಂತ ಎಚ್ಚರಿಸಿ ಅವನ ಮುಖದ ಸುತ್ತ ಕೋಲನ್ನ ಆಡಿಸಿದ. ಮಲಗಿದ್ದ ದೇಹ ಸ್ವಲ್ಪ ಅಲ್ಲಾಡಿತು. ನನ್ನ ಎದೆ ಹೊಡಕೊಳ್ತು. ಮತ್ತೆ ಆ ದೇಹದ ಮುಂದೆ ನಿಂತು ಕಣ್ಣು ಮುಚ್ಚಿ ಜೋರಾಗಿ ‘ಬಾಬಾʼ ಅಂತ ಹೇಳಿ ಮೆಲ್ಲಗೆ ಏನೋ ಮಾತಾಡಿಕೊಳ್ಳೋಕೆ ಶುರು ಮಾಡಿದ. ಅಷ್ಟರಲ್ಲಿ ಯಾವನೋ ಏನನ್ನೋ ಬೀಳಿಸಿದ. ನಿಶ್ಶಬ್ದದಲ್ಲಿ ಅದು ತುಂಬಾ ಜೋರಾಗಿ ಕೇಳಿಸಿತು. ಹಾವಾಡಿಗ ತಲೆ ಮೇಲೆ ಕೈ ಹೊತ್ತು ‘ಹೋ ಅಲ್ಲಾ. ಕ್ಯಾ ಹೋಗಯಾ. ನೋಡಿ ಶಬ್ದ ಮಾಡಿಬಿಟ್ಟಿರಿ. ಅಷ್ಟೇ ಇನ್ನು ಇವತ್ತು ಇವನು ಏಳಲ್ಲ ಮೇಲೆʼ ಅಂತಂದ. ಹೌದಾ? ಸತ್ತೇಹೋದನಾ ಇವನೂ. ನನಗೆ ತುಂಬ ಭಯ ಆಯ್ತು. ಮೊಣಕಾಲ ಮೇಲೆ ಕೂತು ‘ಬಾಬಾʼ ಅಂತ ಕೂಗಿ ಏನೋ ಬೇಡಿಕೊಂಡ. ಮಲಗಿದ್ದವನು ಅಲ್ಲಾಡಿದ. ‘ಅಲ್ಲಾ ದೊಡ್ಡೋನು. ಸಾಲಾ ಬಚ್‌ ಗಯಾʼ ಅಂತಂದು ‘ತಾಲಿ ಬಜಾವೋʼ ಅಂದ. ಎಲ್ಲರೂ ಚಪ್ಪಾಳೆ ತಟ್ಟಿದರು. ‘ಇನ್ನೊಂದು ತಮಾಷೆ ಮಾಡ್ತೀನಿ ನೋಡಿʼ ಅಂತ ಹೇಳ್ತಾ ನನ್ನ ಹತ್ತಿರ ಬಂದ. ‘ಚೋಟ ಸರ್ಕಾರ್‌, ನಿನ್ನ ಹೆಸರೇನು?ʼ ಕೇಳಿದ. ‘ಪ್ರತಾಪ್‌ʼ ಅಂದು ಸುತ್ತಲೂ ಇದ್ದ ಎಲ್ಲರನ್ನೂ ನೋಡಿ, ಎದೆ ಉಬ್ಬಿಸಿ ‘ಆರ್‌ ಪ್ರತಾಪ್‌ ಸಿಂಹʼ ಅಂದೆ. ಹಾವಾಡಿಗ ‘ಅಂದ್ರೆ ರಾಣಾ ಪ್ರತಾಪ್ ಸಿಂಹʼ ಅನ್ನುತ್ತಾ ನನ್ನ ಎದೆ ಮೇಲೆ ತಟ್ಟಿ ‘ತುಂಬ ಧೈರ್ಯವಂತʼ ಅಂತನ್ನುತ್ತಾ ನನ್ನ ಮುಂದೆ ಬಗ್ಗಿ ಕೂತ. ನನ್ನ ಚಡ್ಡಿಯ ಮುಂದೆ ಅವನ ಮಂತ್ರದಂಡವನ್ನು ಚಕ್ರಾಕಾರದಲ್ಲಿ ಆಡಿಸುತ್ತ ‘ನೋಡೀ ಈ ಸಿಂಹದ ಗಿಣೀಮರೀನ್ನ ಮಾಯ ಮಾಡಿಬಿಡ್ತೀನಿʼ ಅಂತ ವೇಗವಾಗಿ ಕೈಯ್ಯನ್ನ ಮುಂದೆ ತಂದು ‘ಅದನ್ನʼ ಹಿಡಿದುಬಿಟ್ಟವನಂತೆ ಮಾಡಿ ಕೈಯ್ಯನ್ನ ಮೇಲಕ್ಕೆ ಎಸೆಯುತ್ತಾ ಬಿಚ್ಚುತ್ತಾ ‘ನೋಡು ಮರದ ಮೇಲೆ ನೇತಾಡ್ತಾ ಇದೆ ನಿನ್ನ ಗಿಣೀಮರೀʼ ಅಂತ ಎತ್ತರದ ಮರದ ಕಡೆ ಬೆರಳು ಮಾಡಿ ತೋರಿಸಿದ, ಹೌದಾ? ನಿಜವಾಗಲೂ ಇಲ್ಲವಾ ನನಗೇ.

ಮುಟ್ಟಿನೋಡಿಕೊಳ್ಳೋಕೆ ನಾಚಿಕೆ. ಮನೇಲಿ ಅಮ್ಮ ಕೇಳಿದರೆ ಏನು ಹೇಳೋದು. ಭಯ ಶುರು ಆಯಿತು. ಅಳೂನೂ ಬರ್ತಾ ಇದೆ. ಆದರೆ ನಾನು ರಾಣಾ ಪ್ರಾತಾಪ್‌ ಸಿಂಹ. ನಾನು ಅಳಕೂಡದು. ಹಾವಾಡಿಗ ಎಡಗೈ ಕಿರುಬೆರಳನ್ನು ಮಾತ್ರ ಮೇಲಕ್ಕೆತ್ತಿ ತೋರಿಸುತ್ತಾ ‘ಇದಕ್ಕೇನು ಮಾಡ್ತೀಯಾ ಇನ್ಮೇಲೆ?ʼ ಅಂದ. ನನ್ನ ಮುಖ ಹೇಗಾಗಿತ್ತೋ ಏನೋ. ಸಾಬೀನೇ ತನ್ನ ಕೈಯ್ಯನ್ನ ಮರದತ್ತ ಚಾಚಿ ‘ಅದನ್ನʼ ಹಿಡಿದುಕೊಳ್ಳೋ ಹಾಗೆ ಕೈಯ್ಯನ್ನು ಮುಚ್ಚಿ ಕಿತ್ತುಕೊಳ್ಳುವಂತೆ ಮುಷ್ಟಿಯನ್ನು ಹಿಂದಕ್ಕೆಳೆದುಕೊಂಡು ನನ್ನ ಚೆಡ್ಡಿ ಕಡೆ ಬಿಸಾಡುವಂತೆ ಎಸೆದ. ‘ಗಿಣಿಮರಿ ವಾಪಸ್‌ ಬಂತಾ ನೋಡಿಕೋ ಮರೀʼ ಅಂದ. ಕೈಯಿಂದ ನೋಡಿಕೊಳ್ಳೋಕೆ ಈಗಲೂ ನಾಚಿಕೆ. ‘ತಾಲಿ ಬಜಾವೋʼ ಅಂದ. ಚಪ್ಪಾಳೆ ತಟ್ಟಿದರು ಎಲ್ಲರೂ.

‘ಈಗ ನೋಡಿ ಅಸಲೀ ಝಗಡ ಷುರೂ. ಹಾವು ಮುಂಗೂಸ್ ಝಗಡʼ ಅಂದ. ಬುಟ್ಟಿ ಮುಚ್ಚಳ ತೆಗೆದ. ಹಾವು ಹೆಡೆ ಎತ್ತಿತು. ಪುಂಗಿ ಊದುತ್ತಾ ಮುಷ್ಠೀನ ಹಿಡಿದು, ಕಚ್ಚಲಿ ಅನ್ನೋ ಥರ ಆಡಿಸಿದ. ಅದು ಕಚ್ಚೋಕೆ ಬಂದರೆ ಮುಷ್ಠೀನ್ನ ಹಿಂದಕ್ಕೆಳೆದುಕೋತಾ ಇದ್ದ. ಇವನು ಹಾವು ಮುಂಗುಸಿ ಜಗಳ ತೋರಿಸ್ತಾ ಇಲ್ಲವಲ್ಲ. ಜಗಳ ತೋರಿಸ್ರೀ ಅಂತ ಕೇಳ್ಳಾ? ಬೇಡಪ್ಪಾ. ಆಮೇಲೆ ನನಗಿನ್ನೇನಾದರೂ ಮಾಡಿಬಿಟ್ಟರೆ ಕಷ್ಟ. ಅವನ ಸಹವಾಸಾನೇ ಬೇಡ. ಕಾಯ್ತಾ ನಿಂತೆ. ‘ಜೋರ್‌ ಸೇ ತಾಲಿ ಬಜಾವೋʼ ಅಂದ. ಎಲ್ಲರೂ ಚಪ್ಪಾಳೆ ತಟ್ಟಿದರು. ನಾನೂ ಜೋರಾಗಿ ತಟ್ಟಿದೆ. ಇನ್ನೊಂದು ಬುಟ್ಟಿ ಹತ್ತಿರ ಹೋಗಿ ಮುಂಗುಸಿ ಇದ್ದ ಬುಟ್ಟಿ ಮುಂದೆ ಕುಕ್ಕರಗಾಲಲ್ಲಿ ಕೂತ. ‘ಈಗ ತೋರಿಸ್ತೀನಿ ನೋಡೀ. ಯಾರೂ ನೋಡಿಲ್ಲ ಈ ಹಾವು ಮುಂಗೂಸ್‌ ಝಗಡ. ಹೋಷಿಯಾರ್. ಝಗಡ ಆಡ್ತಾ ಆಡ್ತಾ ನಿಮ್ಮ ಕಡೆಗೆ ನುಗ್‌ಬುಟ್ರೆ ಕಷ್ಟ. ಹ್ಹುಷಾರುʼ. ಅಂತ ಇನ್ನೊಂದು ಸಲ ಎಚ್ಚರಿಸಿದ. ಇನ್ನೇನು ಶುರು ಆಗತ್ತೆ. ಆಕೆ ಈ ಕಡೆ ನೋಡಿದೆ. ದೊಡ್ಡ ದೊಡ್ಡ ಗಂಡಸರು ನಿಂತಿದ್ದರು. ಸ್ವಲ್ಪ ಧೈರ್ಯ ಬಂತು.

ಹಾವಾಡಿಗ ಇದ್ದಕ್ಕಿದ್ದ ಹಾಗೇ ಸುಮ್ಮನೆ ನಿಂತುಬಿಟ್ಟ. ಏನಾಯ್ತು ಅಂತ ಗೊತ್ತಾಗಲಿಲ್ಲ. ನಿಂತಿದ್ದ ಹಾಗೇನೇ ನಮಾಜು ಮಾಡೋ ಥರ ಕೂತು ಎಲ್ಲರ ಕಡೆ ತಿರುಗಿ ಅವನ ತುಟಿಗಳ ಮೇಲೆ ಬೆರಳನ್ನಿಟ್ಟುಕೊಂಡು ದೀರ್ಘವಾಗಿ ‘ಶ್‌ʼ ಅಂದ. ಎಲ್ಲರೂ ಸುಮ್ಮನೆ ನಿಂತರು ಗೊಂಬೆಗಳ ಥರ. ಆಕಾಶ ನೋಡುತ್ತಾ ‘ಹಾ ಬಾಬಾ, ಹಾ ಬಾಬಾʼ ಅಂತ ಎರಡು ಸಲ ಹೇಳಿ ಎರಡೂ ಕೈಗಳನ್ನು ಕಣ್ಣಿಗೊತ್ತಿಕೊಂಡು ‘ತಾಯಿ ತಂದೇರೇ, ನನ್ನನ್ನ ಮಾಫ್‌ ಮಾಡಿಬಿಡಿ. ಬಾಬಾ ಹೇಳಿದರು. ಇವತ್ತು ಶುಕ್ಕರ್‌ವಾರಾ, ಬಾಬಾದು ಜನಮ್‌ ದಿನಾ, ಇವತ್ತು ಹಾವು ಮುಂಗೂಸ್‌ ಝಗಡ ತೋರಿಸಬಾರ್ದಂತೆ. ತೋರಿಸಿದರೆ ಎರಡೂ ಸತ್ತುಹೋಗತ್ತಂತೆ. ಮಾಫ್‌ ಮಾಡ್ಬಿಡೀʼ ಅಂತ ಎಲ್ಲರ ಮುಂದೆಯೂ ಸಲಾಂ ಮಾಡುತ್ತಾ ಒಂದು ಸುತ್ತು ಬಂದ. ಬೋಗುಣಿ ಹಿಡಿದು ಮತ್ತೆ ಎಲ್ಲರ ಮುಂದೇನೂ ಸುತ್ತು ಹಾಕುತ್ತ ‘ನಾಗಪ್ಪ ದೇವರಿಗೆ ಹಾಲಿಗೆ ಕಾಸು ಹಾಕಿ. ನಿಮಗೆ ನಾಗಪ್ಪ ವರ ಕೊಡ್ತಾನೆʼ ಕೇಳಿದ. ಕಾಸು ಹಾಕೋರು ಹಾಕ್ತಾ ಇದ್ದರು ಇಲ್ಲದೋರು ಇಲ್ಲ.

ಥತ್ತೇರಿ, ಇವತ್ತೂ ಇಲ್ಲವಾ ಹಾವು ಮುಂಗಿಸಿ ಆಟಾ. ನಿರಾಸೆಯಿಂದ ಕಾಲೆಳೀತಾ ಆಚೆಗೆ ಬಂದೆ.

*****

ಮುವ್ವತ್ತುಮೂರು ವರ್ಷ ಆಯ್ತು, ಇದ್ದ ಒಬ್ಬನೇ ಮಗ ಓಡಿಹೋಗಿ. ಪರೀಕ್ಷೇಲಿ ಫೇಲಾಗಿದ್ದಕ್ಕೆ ಬೈದೆ ಅಂತ ಓಡಿ ಹೋಗಿದ್ದು. ನೆಂಟರಿಷ್ಟರ ಮನೆಗಳಿಗೆ ಹೋಗಿ ಹುಡುಕಿಯಾಯ್ತು. ಪೋಲೀಸ್‌ ಕಂಪ್ಲೈಂಟ್‌ ಕೊಟ್ಟಾಯ್ತು. ಪೇಪರಲ್ಲಿ ಹಾಕಿಸಿಯಾಯ್ತು. ಕರಪತ್ರ ಪ್ರಿಂಟ್‌ ಮಾಡಿ ಹಂಚಿದ್ದಾಯ್ತು. ಹರಕೆ ಹೊತ್ತದ್ದಾಯ್ತು. ಏನೇನು ಮಾಡಬೋದೋ ಎಲ್ಲಾನೂ ಮಾಡಿದೆವು. ಉಹುಂ… ಸಿಗಲಿಲ್ಲ. ಮಗ ಬರ್ತಾನೆ ಅಂತ ಐದು ವರ್ಷ ಕಾದೆವು. ಇನ್ನು ಸಿಗಲ್ಲ ಅನ್ನಿಸ್ತೋ ಏನೋ, ಅದೇ ಕೊರಗಲ್ಲಿ ಇವಳು ಸತ್ತಳು.

ಗೇಟು ಶಬ್ದ ಆಯ್ತು. ತಕ್ಷಣ ಎದ್ದು ಬಾಗಿಲು ತೆಗೆದು ಗೇಟಿನ ಕಡೆ ನೋಡಿದೆ. ಯಾವನೋ ಚಂದಾ ಕೇಳೋಕೆ ಬಂದಿದ್ದ, ಕೈಲೊಂದು ಪುಸ್ತಕ ಹಿಡಕೊಂಡು. ‘ಹೋಗಯ್ಯ, ಇವ್ನೊಬ್ಬʼ ಅಂತ ಗೊಣಗಿಕೊಂಡು ಬಾಗಿಲು ಹಾಕಿಕೊಂಡೆ.

‘ನಾಳೆʼ ಅನ್ನೋದೊಂದಿದೆ ಅನ್ನೋದು ನೆನಪಿಗೆ ಬಂತು, ಪ್ರತಿನಿತ್ಯ ಬರೋ ಹಾಗೆ. ಮಹಾಭಾರತವನ್ನ ಕೈಗೆತ್ತಿಕೊಂಡು, ಗುರುತಿಗೇಂತ ಮಗನ ಫೋಟೋ ಇಟ್ಟಿದ್ದ ಪುಟ ತೆರೆದು ಅದನ್ನೇ ನೋಡುತ್ತ ಕೂತೆ.