ಉರಿಗಣ್ಣಿನ ನಕ್ಷತ್ರಗಳು

ಬನ್ನಿಮರದ ಅಷ್ಟೂ ಆಯುಧಗಳೀಗ
ರೆಕ್ಕೆ ಕಟ್ಟಿಕೊಂಡು
ವೈರಿಯ ಹುಡುಕುವಾಗ
ಕೊಳದ ಹಂಸದ ಕಾಲಿನಲಿ
ಗಾಜು ಚುಚ್ಚಿದ ನೋವು
ಸಾಮ್ರಾಜ್ಯ ಸೋತ ಕಥೆಯ ಹೇಳುತಿದೆ

ಹಸ್ತಿನಾಪುರದ ಸಹೋದರಿಯರ ಮೈಯಲೆಲ್ಲಾ ದ್ರೌಪದಿಯ ದುಪ್ಪಟದ ಕುರುಹುಗಳು
ಬದಲಾಯಿತೆ ಸಾಮ್ರಾಜ್ಯ
ಛೇ!
ದಾರಿಯಲೆಲ್ಲಾ ಜೂಜಿನ ದಾಳಗಳ ಹೋಮ
ಜಗುಲಿಯ ಮೇಲೆಲ್ಲಾ ಶಕುನಿ ಉಗುಳಿದ
ಉಗುಳಿನ ಗುರುತುಗಳು

ಎಷ್ಟು ಜನ ಕರ್ಣಂದಿರು ಬೀದಿಯಲಿ
ದಾನಕ್ಕೆಂದು ನಿಂತಿದ್ದಾರೆ
ಊರೋ ಕೇರಿಯೋ ಇಲ್ಲ ರಾಜಬೀದಿಯಲೋ
ಲೈಟು ಹೊತ್ತಿಸಿದ ಛಾವಡಿಯಲಿ
ಸಖರ ಆಗಮನಕಾಗಿ ದ್ರೌಪದಿಯರು
ಪುಷ್ಪ ಹಿಡಿದು ನಿಂತಿದ್ದಾರೆ

ದ್ರೋಣನ ಚಕ್ರವ್ಯೂಹಕೆ ಹದ್ದುಗಳು ಮುತ್ತಿ
ಸೈನ್ಯದ ತೊಡೆಯ ಮೇಲೆಲ್ಲಾ
ರಕ್ತ ಕಲೆಗಳ ಅಂಟಿಸಿ
ಸೋಲಿಗೆ ಶರಣು ಎನ್ನುವಂತೆ ದಿಕ್ಕೆಡಿಸಿವೆ
ಕುಮಾರನೀಗ ಹೊರಗೆ ಬರಲೂ ದಾರಿಗಳು
ಕಾಣುತ್ತಿವೆ

ಕೇಳು ಪಾರ್ಥ
ಕೆಂಗಣ್ಣನು ಅರಳಿಸದ ಮಾತ್ರಕೆ ನೀವು ಯುದ್ಧ
ಗೆಲ್ಲರಾರಿರಿ
ರಾಜಧಾನಿಯಲಿ ತುತ್ತಿಗೆ ಬಿಕ್ಕಳಿಸುವ ಅವ್ವಂದಿರ
ಉರಿಗಣ್ಣಿನ ನಕ್ಷತ್ರಗಳು
ಬೆಳಕಿನೊಟ್ಟಿಗೆ ಬೆಂಕಿಯನೂ ಉಗುಳಿದರೆ

ಕಟ್ಟಿಬಿಟ್ಟಿದ್ದಾರೆ ಈಗಲೂ
ಅಂಗನೆಯರ ಕೊಲ್ಲಲು ಅರಗಿನ ಅರಮನೆಗಳನು
ಚಿಂತೆಯಲಿ ಬಿದ್ದಿದ್ದಾರೆ ಬೆಂಕಿ ತಾಗಿಸುವ
ಅಣ್ಣಂದಿರು
ಯಾವ ದೊರೆಮಕ್ಕಳು ಮಂಚದಲಿ
ಮಲಗಿಹರೋ ಎಂದು

ಈಗ
ದ್ವಾಪರದ ಗಂಧಗಾಳಿಗಳು ಅಲ್ಲಲ್ಲಿ
ಮೈಮೆತ್ತಿಕೊಂಡಂತೆ
ಒಂದೊಂದೇ ಪರ್ವದ ಸಾಕ್ಷ್ಯ ಕೇಳುತ್ತವೆ
ಸೋತವರ ಬತ್ತಳಿಕೆಯಲಿ ಖಾಲಿಯಾದ ಬಿಲ್ಲುಗಳು
ಅಧರ್ಮದ ಪಾಠ ಹೇಳುವಾಗ

ಇಲ್ಲಿ ಎಲ್ಲವನು ತ್ಯಾಗ ಮಾಡಲು ಮತ್ತೊಬ್ಬ
ಭೀಷ್ಮನೂ ಹುಟ್ಟುವುದಿಲ್ಲ
ಮರಣಶಯ್ಯೆಯಲಿ ನೀಳವಾಗಿ ಮಲಗಿ
ಆಶೀರ್ವದಿಸಲು ಕಾಲವೂ ನಿಂತುಬಿಡುವುದಿಲ್ಲ
ಸೋತವರ ಹೆಗಲ ಮೇಲೆ ಕೂತಿರುವ ಹೆಳವ
ಇನ್ನೊಂದು ಕಥೆಯನೂ ಹೇಳುವುದಿಲ್ಲ..