ಹಾಗವರು ಹೊಸ ಊರುಗಳನ್ನು ಕಟ್ಟುತ್ತಾ ಹೊಸ ಹೆಸರುಗಳನ್ನೂ ಕೊಟ್ಟಾಗ ಆದ ಪ್ರಮಾದ ಬಹು ದೊಡ್ಡ ಮಟ್ಟದ್ದು. ಸ್ಥಳೀಯ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿ ಜನರ ಅಸ್ಮಿತೆಗಳು ಸಂಪೂರ್ಣವಾಗಿ ಅಳಿಸಿಹೋದವು. ಮೂಲನಿವಾಸಿಗಳಾದ ಅವರ ಸ್ಥಳ-ನಾಮ, ಸಂಸ್ಕೃತಿ, ಭಾಷೆಗಳ ಮೇಲೆ ಅಧಿಕಾರ ಮತ್ತು ನಿಯಂತ್ರಣ ಸಾಧಿಸುವ ಬ್ರಿಟಿಷರ ಪ್ರಯತ್ನಗಳಿಗೆ ಕೊನೆಯಿಲ್ಲವಾಗಿತ್ತು. ಮೂಲನಿವಾಸಿಗಳ ಮಕ್ಕಳನ್ನು ಬಲವಂತವಾಗಿ ಅವರ ಕುಟುಂಬಗಳಿಂದ, ಸಮುದಾಯಗಳಿಂದ ಬೇರ್ಪಡಿಸಿ ಅವರಿಗೆ ಇಂಗ್ಲಿಷ್ ಭಾಷೆ ಕಲಿಸುತ್ತಾ, ಬ್ರಿಟಿಷ್ ಜೀವನ ರೀತಿಗಳಿಗೆ ಒಗ್ಗುವಂತೆ ಮಾಡಲಾಗಿತ್ತು. ಅವರ ಹೆಸರುಗಳ ಜೊತೆ ಅವರ ನೆಲೆಗಳ ಹೆಸರುಗಳೂ ಮರೆಯಾದವು.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

ಮತ್ತೆ ಹುಟ್ಟಿವೆ ಅಬೊರಿಜಿನಲ್ ಹೆಸರುಗಳು

ಇತ್ತೀಚೆಗೆ ಬೆಂಗಳೂರಿಗೆ ಹೋದಾಗ ಬಾಲ್ಯದ ಗೆಳತಿಯೊಂದಿಗೆ ಹರಟುತ್ತಾ ಚಿಕ್ಕಂದಿನಲ್ಲಿ ಅವಳಿಗಿದ್ದ ಅಡ್ಡ ಹೆಸರನ್ನು ನೆನಪಿಸಿಕೊಂಡು ನಕ್ಕೆವು. ಅದರೊಂದಿಗೆ ಬಾಲ್ಯದ ಒಂದಷ್ಟು ನೆನಪುಗಳು ಮರುಜೀವ ಪಡೆದು, ಜೀವನವೊಂದು ವೃತ್ತ ಅಲ್ಲವೇ ಎಂದುಕೊಂಡೆವು. ಅವಳಂತೆಯೇ ನನಗೂ ಕೂಡ ಇದ್ದ, ಅಜ್ಜಿ ಕರೆಯುತ್ತಿದ್ದ ನನ್ನ ಅಡ್ಡಹೆಸರು ನೆನಪಿಗೆ ಬಂತು. ಒಂದು ಹೆಸರಿಗಿರುವ ನೆನಪು ಎಂದರೆ ಸದಾ ಹರಿಯುವ ಜೀವನ ನದಿಯಲ್ಲಿ ಆಗಾಗ ತಾಕುವ ಬಂಡೆಗಳಂತೆ ಅಚ್ಚಳಿಯದ ಟೈಮ್ ಲೈನ್ ಎಂದೆನಿಸಿತು.

ಒಮ್ಮೊಮ್ಮೆ ಹೆಸರುಗಳು ಮರೆಯಾಗುತ್ತವೆ. ಅವನ್ನು ಕೆಲವರು ತಾವಾಗಿಯೇ ಬಿಟ್ಟುಬಿಡುತ್ತಾರೆ ಇಲ್ಲವೇ ಇತರರು ಅಳಿಸಿಬಿಡುತ್ತಾರೆ. ಕಾರಣಗಳು ಅವರವರಿಗೇ ಸೇರಿದ್ದು. ಆದರೆ ತಮ್ಮಿಚ್ಛೆಗೆ ವಿರುದ್ಧವಾಗಿ ಬಲವಂತದಿಂದ ಒಬ್ಬರ ಹೆಸರನ್ನು ಅಳಿಸುವುದು ಎಂದರೆ ಅದು ಸರಿಯಲ್ಲ. ಹಾಗೆ ಮಾಡುವುದರಲ್ಲಿ ಅಧಿಕಾರ, ಮತ್ತೊಬ್ಬರನ್ನು ನಿಯಂತ್ರಿಸುವ ಮನೋಭಾವ ಮತ್ತು ಹತೋಟಿ ಸಾಧಿಸುವ ಪ್ರಯತ್ನಗಳು ಇರುತ್ತವೆ.

ಅಂತಹ ಮನೋಭಾವದ ಸ್ಪಷ್ಟತೆಯ ಗುರುತು ಸಿಗುವುದು ವಸಾಹತುಶಾಹಿ ದೇಶಗಳಲ್ಲಿ. ಉದಾಹರಣೆಗೆ ಆಸ್ಟ್ರೇಲಿಯಾ. ಇಲ್ಲಿ ಯಾರೂ ಮನುಷ್ಯರೇ ವಾಸವಿಲ್ಲ ಎಂದು ಹೇಳುತ್ತಾ ಬ್ರಿಟಿಷರು ಈ ನೆಲವನ್ನು ಆಕ್ರಮಿಸುವ ಹಂತಗಳಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸುತ್ತಾ ಅವುಗಳಿಗೆ ತಮ್ಮ ತವರು ಬ್ರಿಟನ್ನಿನ ಊರುಗಳ ಹೆಸರುಗಳನ್ನೇ ಇಟ್ಟರು.

ಹಾಗವರು ಹೊಸ ಊರುಗಳನ್ನು ಕಟ್ಟುತ್ತಾ ಹೊಸ ಹೆಸರುಗಳನ್ನೂ ಕೊಟ್ಟಾಗ ಆದ ಪ್ರಮಾದ ಬಹು ದೊಡ್ಡ ಮಟ್ಟದ್ದು. ಸ್ಥಳೀಯ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿ ಜನರ ಅಸ್ಮಿತೆಗಳು ಸಂಪೂರ್ಣವಾಗಿ ಅಳಿಸಿಹೋದವು. ಮೂಲನಿವಾಸಿಗಳಾದ ಅವರ ಸ್ಥಳ-ನಾಮ, ಸಂಸ್ಕೃತಿ, ಭಾಷೆಗಳ ಮೇಲೆ ಅಧಿಕಾರ ಮತ್ತು ನಿಯಂತ್ರಣ ಸಾಧಿಸುವ ಬ್ರಿಟಿಷರ ಪ್ರಯತ್ನಗಳಿಗೆ ಕೊನೆಯಿಲ್ಲವಾಗಿತ್ತು. ಮೂಲನಿವಾಸಿಗಳ ಮಕ್ಕಳನ್ನು ಬಲವಂತವಾಗಿ ಅವರ ಕುಟುಂಬಗಳಿಂದ, ಸಮುದಾಯಗಳಿಂದ ಬೇರ್ಪಡಿಸಿ ಅವರಿಗೆ ಇಂಗ್ಲಿಷ್ ಭಾಷೆ ಕಲಿಸುತ್ತಾ, ಬ್ರಿಟಿಷ್ ಜೀವನ ರೀತಿಗಳಿಗೆ ಒಗ್ಗುವಂತೆ ಮಾಡಲಾಗಿತ್ತು. ಅವರ ಹೆಸರುಗಳ ಜೊತೆ ಅವರ ನೆಲೆಗಳ ಹೆಸರುಗಳೂ ಮರೆಯಾದವು.

ಆದರೆ ನೋಡಿ, ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿ ಜನರು ಈ ನೆಲ-ನಾಡಿನಲ್ಲಿ ೬೦,೦೦೦ ವರ್ಷಗಳಿಗೂ ಹೆಚ್ಚಿನ ಕಾಲದಿಂದ ಬದುಕಿಬಾಳಿದ್ದಾರೆ. ಅವರನ್ನು, ಅವರ ಅಸ್ಮಿತೆಗಳನ್ನು ಗುರುತಿಲ್ಲದಂತೆ ಅಳಿಸಿ ಹಾಕುವುದು ಅಷ್ಟೊಂದು ಸುಲಭದ ಮಾತಲ್ಲ. ವಸಾಹತುಶಾಹಿಗಳು ಅವರನ್ನು ಅದೆಷ್ಟೇ ತುಳಿದುಹಾಕಿದರೂ ಈ ಮೂಲನಿವಾಸಿಗಳು ಪುಟಿದೆದ್ದು ಬದುಕುಳಿದರು.

ಆಸ್ಟ್ರೇಲಿಯಾದಲ್ಲಿ ಜನರು ಈಗೀಗ, ಇಪ್ಪತ್ತೊಂದನೇ ಶತಮಾನದಲ್ಲಿ, ಅಬೊರಿಜಿನಲ್ ಜನರಿಗೆ ಸಂಬಂಧಿಸಿದ ಇತಿಹಾಸದ ತುಣುಕುಗಳು, ಅವರ ಭಾಷೆಗಳು, ಸಂಸ್ಕೃತಿಗಳ ಬಗ್ಗೆ ಗೌರವದಿಂದ ಮಾತನಾಡುತ್ತಿದ್ದಾರೆ. ಹಳೆತಲೆಮಾರಿನ ಅನೇಕ ಬ್ರಿಟಿಷ್ ಬಿಳಿಯರಲ್ಲಿ ಅದೇ ರೀತಿಯ ರೇಸಿಸಮ್ ಮನೋಭಾವವಿದೆ. ತಾವುಗಳೇ ಬಂದು ಈ ದೇಶವನ್ನು ಕಟ್ಟಿ ಇಲ್ಲಿನ ಮೂಲನಿವಾಸಿಗಳನ್ನು ಉದ್ಧಾರ ಮಾಡಿದ್ದು ಎಂದು ಯಾವುದೇ ಹಿಂಜರಿಕೆಯಿಲ್ಲದೆ ಬಾಯ್ಬಿಟ್ಟು ಹೇಳುತ್ತಾರೆ. ತಮ್ಮಿಂದಲೇ ಆಸ್ಟ್ರೇಲಿಯಾ ಹುಟ್ಟಿದ್ದು ಎಂದೂ ಕೂಡ ಹೇಳಿಕೊಳ್ಳುತ್ತಾರೆ. ಈ ಹೇಳಿಕೊಳ್ಳುವಿಕೆಯಲ್ಲಿ ಅವರುಗಳು ಗರ್ವದಿಂದ ಹೇಗೆ ಆಸ್ಟ್ರೇಲಿಯಾದ ನಗರಗಳ, ಪಟ್ಟಣಗಳ ಹೆಸರುಗಳು ತಮ್ಮ ತವರಿನಿಂದ ಬಂದದ್ದು, ಇಲ್ಲಿಗೂ ತವರಿಗೂ ಇರುವ ನಂಟು ಎಷ್ಟು ಚೆಂದ ಎಂದೆಲ್ಲಾ ಹೇಳುತ್ತಾರೆ. ಅದನ್ನು ಕೇಳುವಾಗ ಭಾರತವೆಂಬ ಪೋಸ್ಟ್-ಕಲೋನಿಯಲ್ ದೇಶದಿಂದ ಬಂದಿರುವ ನನ್ನಂಥಾ ವಲಸಿಗಳ ಮನಸ್ಸಿನಲ್ಲಿ ಇವರು ಬರುವ ಮುಂಚೆ ಈ ಊರಿಗಿದ್ದ ಹೆಸರೇನು ಎನ್ನುವ ಪ್ರಶ್ನೆ ಮೂಡುವುದು ಸಹಜವೇ.

ಕಿರಿಯ ತಲೆಮಾರಿನ ಜನರಲ್ಲಿ ಎಷ್ಟೋ ಜನರಿಗೆ ವಸಾಹತುಶಾಹಿಗಳ ಚರಿತ್ರೆ ತಿಳಿದಿಲ್ಲ. ಇಪ್ಪತ್ತನೇ ಶತಮಾನದಲ್ಲಿ ಕೂಡ ಬಲವಂತವಾಗಿ ಅಬೊರಿಜಿನಲ್ ಮಕ್ಕಳನ್ನು ಅವರ ತಂದೆತಾಯಂದಿರಿಂದ ಬೇರೆ ಮಾಡಿ ವಸತಿಶಾಲೆಗಳಲ್ಲಿ, ಅನಾಥಾಲಯಗಳಲ್ಲಿ ಬೆಳೆಸಲಾಗುತ್ತಿತ್ತು ಎನ್ನುವುದು ತಿಳಿದುಬಂದಾಗ ಈಗಿನ ಕಿರಿಯರು ‘ಹೌದಾ, ಅದೆಲ್ಲಾ ನಿಜವಾ’ ಎನ್ನುತ್ತಾರೆ.

ನಾನು ೨೦೦೨ ನೇ ಇಸವಿಯಲ್ಲಿ ಇಲ್ಲಿನ ಕ್ಯಾನ್ಬೆರ್ರಾ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದಾಗ ಒಮ್ಮೆ ತರಗತಿಯಲ್ಲಿ ಒಂದು ಘಟನೆ ನಡೆಯಿತು. ಆ ದಿನ ವಿದ್ಯಾರ್ಥಿಗಳ ಗುಂಪು ಪ್ರಾತ್ಯಕ್ಷಿಕೆ ಇತ್ತು. ಒಂದು ಗುಂಪು ತಮ್ಮ ನಿರೂಪಣೆಯ ಸಮಯದಲ್ಲಿ ಕ್ಯಾನ್ಬೆರ್ರಾ ನಗರದ ಹೆಸರನ್ನು ಕುರಿತು ಸಮರ್ಥಿಸಿದರು. ಅದಕ್ಕೆ ಪ್ರತಿಯಾಗಿ ಮತ್ತೊಂದು ವಿದ್ಯಾರ್ಥಿಗಳ ಗುಂಪು ಕ್ಯಾನ್ಬೆರ್ರಾ ಹೆಸರು ವಸಾಹತುಶಾಹಿ ಕ್ರಮವನ್ನು ನೆನಪಿಸುತ್ತದೆ ಎಂದು ಹೇಳುತ್ತಾ, ಈ ಸ್ಥಳದ ಅಬೊರಿಜಿನಲ್ ಜನಸಮುದಾಯದವರು ಗಮ್ಬ್ರಿ (Ngambri) ಎಂದು ಗುರುತಿಸಿಕೊಳ್ಳುತ್ತಾರೆ, ಇದು ನನವಾಲ್ (Ngunnawal) ಕುಲದ ಜನರು ಇರುವ ಪ್ರದೇಶ, ಎಂದರು. ಇದನ್ನು ಒಪ್ಪದ ಮೊದಲ ವಿದ್ಯಾರ್ಥಿ ಗುಂಪು ಇದೆಂದೆಂದಿಗೂ ನಾವು ಬಿಳಿಯರು ಕಟ್ಟಿದ ನಾಡು ಮತ್ತು ಇದರ ಹೆಸರು ಕ್ಯಾನ್ಬೆರ್ರಾ ಎಂದೇ ಇರುತ್ತದೆ. ಅಬೊರಿಜಿನಲ್ ಜನರೂ ಇಲ್ಲ, ಅವರ ಭಾಷೆ ಮತ್ತೇನೂ ಇಲ್ಲ. ಅವೆಲ್ಲವನ್ನೂ ನಾವು ನೆನಪಿಸಿಕೊಳ್ಳುವ ಅಗತ್ಯವೂ ಇಲ್ಲ, ಎಂದು ಕೂಗಾಡಿದರು. ಅವರ ಮನೋಭಾವ ಮತ್ತು ಆಕ್ರಮಣಕಾರಿ ವಾದದಿಂದ ನೊಂದ ಕೆಲ ವಿದ್ಯಾರ್ಥಿಗಳು ತರಗತಿಯಿಂದ ಹೊರನಡೆದರು. ಆಗಿನ್ನೂ ಆಸ್ಟ್ರೇಲಿಯಾಕ್ಕೆ ಹೊಸಬಳಾಗಿಯೇ ಇದ್ದಿದ್ದ ನಾನು ಕಣ್ಣುಬಾಯಿ ಬಿಟ್ಟುಕೊಂಡು ಸುಮ್ಮನಿದ್ದೆ.

ಅದನ್ನು ಈಗ ಮತ್ತೆಮತ್ತೆ ನೆನಪಿಸಿಕೊಳ್ಳುವ ಸಮಯ ಬಂದಿದೆ. ಹೋದ ವರ್ಷ ಹೊಸ ಸರ್ಕಾರ ಬಂದಾಗಲಿಂದಲೂ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿ ಜನರ ಹಕ್ಕುಗಳ ಬಗ್ಗೆ, ಅಸ್ಮಿತೆಗಳ ಮತ್ತು ಅವರ ‘ದನಿ’ ಯ ಕುರಿತು ನನ್ನಂಥ ವಲಸಿಗರು ಬಾಯ್ಬಿಟ್ಟು ಮಾತನಾಡಲು ಸಾಧ್ಯವಾಗಿದೆ.

೨೦೦೨ ನೇ ಇಸವಿಯಲ್ಲಿ ನಾನು ಕಂಡ ಮನೋಭಾವವನ್ನು ಈ ವರ್ಷ ೨೦೨೩ರಲ್ಲಿ ಕಾಣುತ್ತಿರುವ ಆರೋಗ್ಯಕರ ಬದಲಾವಣೆಗಳ ಜೊತೆಗಿಟ್ಟು ವಿಮರ್ಶಿಸುವ ಸಮಯಕ್ಕೆ ನಾನು ಶರಣು ಹೇಳಬೇಕು. ಏಕೆಂದರೆ ಆಸ್ಟ್ರೇಲಿಯಾದಲ್ಲಿರುವ ಜನಾಂಗ-ವಿಭಜಿತ ಎರಡು ವಿಭಿನ್ನ ಪ್ರಪಂಚಗಳಲ್ಲಿ ಇಂತಹ ಬದಲಾವಣೆಗಳನ್ನು ನಾನು ಕಾಣುತ್ತೀನಿ ಎನ್ನುವ ಆಸೆಯನ್ನೇ ಬಿಟ್ಟುಬಿಟ್ಟಿದ್ದೆ. ಆದರೆ ಅದೀಗ ಸಾಧ್ಯವಾಗಿದೆ ಎನ್ನುವುದು ಎಷ್ಟೋ ಸಮಾಧಾನ ತಂದಿದೆ.

ಉದಾಹರಣೆಗೆ ಈಗ SBS ಟಿವಿ ವಾಹಿನಿಯಲ್ಲಿ ಹವಾಮಾನ ವರದಿ ನೀಡುವಾಗ ಆಸ್ಟ್ರೇಲಿಯಾದ ನಗರಗಳ ಇಂಗ್ಲಿಷ್ ಹೆಸರುಗಳಿರುವ ನಕ್ಷೆಯನ್ನು ತೋರಿಸುತ್ತಾರೆ. ನಂತರ ಅದೇ ನಕ್ಷೆಯ ಮೇಲೆ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿ ಜನಕುಲಗಳ ಸಾಂಪ್ರದಾಯಿಕ ಹೆಸರುಗಳನ್ನೂ ತೋರಿಸುತ್ತಾರೆ. ನಮ್ಮ ಬ್ರಿಸ್ಬೇನ್ ನಗರದ ಹೆಸರು ಮಿಆಂಜಿನ್ (Meanjin); ಮೆಲ್ಬೋರ್ನ್ ನಗರದ ಹೆಸರು Naarm. ಈ ಬೆಳವಣಿಗೆಯನ್ನು ನೋಡಿದಾಗ ‘ಪುನರಪಿ ಜನನಂ’ ಸಾಧ್ಯತೆಗಳ ಬಗ್ಗೆ ನಂಬಿಕೆ ಮೂಡುತ್ತದೆ. ಈಗೀಗ ಅಂತಹ ನಂಬಿಕೆ ದೃಢವಾಗುತ್ತಿದೆ.

ಆಸ್ಟ್ರೇಲಿಯಾದಲ್ಲಿ ಮತ ಚಲಾವಣೆ ಕಡ್ಡಾಯ. ಈ ವರ್ಷ ಆಸ್ಟ್ರೇಲಿಯನ್ ಪಾರ್ಲಿಮೆಂಟಿನಲ್ಲಿ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿ ಜನರ ಒಂದು ಸಮಿತಿಯನ್ನು ಸ್ಥಾಪಿಸಲು ಪ್ರಯತ್ನ ನಡೆದಿದೆ. ಇದನ್ನು ಆಸ್ಟ್ರೇಲಿಯನ್ ಸಂವಿಧಾನದಲ್ಲಿ ಸೇರಿಸಬೇಕು. ಅದಾದಾಗ, ಮುಂದೆ ಯಾವುದೇ ಪಕ್ಷದ ಸರ್ಕಾರ ಬಂದರೂ ಈ ಸಮಿತಿಯನ್ನು ತೆಗೆದುಹಾಕಲು ಬರುವುದಿಲ್ಲ. ಹಾಗಾಗಿ, ಎಲ್ಲಾ ಆಸ್ಟ್ರೇಲಿಯನ್ ಪ್ರಜೆಗಳು ಈ ವರ್ಷ Referendum ಪರವಾಗಿಯೋ, ವಿರುದ್ಧವಾಗಿಯೋ ತಮ್ಮ ಮತ ಚಲಾಯಿಸಲಿದ್ದಾರೆ. ಮೊನ್ನೆ ಬುಧವಾರ ಸಂಜೆ ಆಸ್ಟ್ರೇಲಿಯಾದ ಇಪ್ಪತ್ತಮೂರು ವಿಶ್ವವಿದ್ಯಾಲಯಗಳಲ್ಲಿ ಏಕಕಾಲಕ್ಕೆ ನೇರಪ್ರಸಾರವಾದದ್ದು ‘Voice Referendum ೨೦೨೩’ ವಿಷಯದ ಬಗ್ಗೆ ಏರ್ಪಟ್ಟಿದ್ದ ಚರ್ಚೆ. ಇದನ್ನು ಆಯೋಜಿಸಿದ್ದು ಕ್ಯಾನ್ಬೆರ್ರಾ ನಗರದಲ್ಲಿರುವ ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ. ದೇಶದಾದ್ಯಂತ ಚರ್ಚೆಯಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿತ್ತು. ಅನೇಕರು ‘ವಾಯ್ಸ್ ಟು ದಿ ಪಾರ್ಲಿಮೆಂಟ್’ ಪರವಾಗಿ ವಿಶ್ವಾಸ ವ್ಯಕ್ತಪಡಿಸಿದ್ದು ಬಹಳ ಆಶಾದಾಯಕವಾಗಿತ್ತು.