ಕವಿಯಾಗಿ ಅವಳ ಯಶಸ್ಸಿನ ಭಾಗವು ಅವಳ ಸಹಾನುಭೂತಿ, ಅನುಭವದ ಮಿತಿಗಳನ್ನು ಎಂದಿಗೂ ತಗ್ಗಿಸದಿದ್ದರೂ, ಅವಳ ಸ್ವಭಾವದ ಈ ಎರಡು ತೋರಿಕೆಯಲ್ಲಿ ವಿರೋಧಾತ್ಮಕ ಬದಿಗಳನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಯಿತು. ಅವಳ ಪದ್ಯದಲ್ಲಿ ಭಾವನಾತ್ಮಕ ಮತ್ತು ನೀತಿಬೋಧೆಯ ಧಾಟಿಯಿದೆ. ಆದರೆ ಕಾವ್ಯವೂ ಅಷ್ಟೇ ಪ್ರಬಲ, ಸರಳವಾಗಿದೆ. ಭೌತಿಕ ವಸ್ತುಗಳ ಅಸ್ಥಿರತೆಯು ಅವಳ ಕವಿತೆಯ ಉದ್ದಕ್ಕೂ ಮರುಕಳಿಸುವ ಒಂದು ವಿಷಯವಾಗಿದೆ. ಲೌಕಿಕದಿಂದ ವಿಮುಕ್ತಳಾಗುತ್ತಿದ್ದ ಕ್ರಿಸ್ಟೀನಾ ಕ್ರೀಮಿಯಾದ ಯುದ್ಧ ಸಂದರ್ಭದಲ್ಲಿ ಗಾಯಾಳುಗಳ ಶುಶ್ರೂಷೆಗೆ ಸ್ವಯಂ ಸೇವಕಿಯಾಗಿಯೂ ದುಡಿದಳು.
ಚೈತ್ರಾ ಶಿವಯೋಗಿಮಠ ಬರೆಯುವ ವಿಶ್ವ ಮಹಿಳಾ ಕಾವ್ಯದ ಕುರಿತ ಸರಣಿ “ಲೋಕ ಸ್ತ್ರೀ-ಕಾವ್ಯ ಲಹರಿ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ, ನಿಮ್ಮ ಕೆಂಡಸಂಪಿಗೆಯಲ್ಲಿ

ಬೈಗಿರದ ಬೆಳಗಿರದ ನಸುಕು

ಕ್ರಿಸ್ಟಿನಾ ರೊಸೆಟ್ಟಿ (1830-1894): ಲಂಡನ್‌ನಲ್ಲಿ ಜನಿಸಿದ ಕ್ರಿಸ್ಟಿನಾರ ತಂದೆ ತಾಯಿ ಮೂಲತಃ ಇಟಲಿಯವರು. ಇವರ ಮೊದಲ ಪದ್ಯಗಳು ಮುದ್ರಣಗೊಂಡಿದ್ದು ಅವರ ತಾತನ ಖಾಸಗಿ ಮುದ್ರಣಾಲಯದಲ್ಲಿ. ಅನುಭವ – ಅನುಭಾವ ಪದ್ಯಗಳು, ಮಕ್ಕಳ ಪದ್ಯಗಳನ್ನು ಮೊದಲುಗೊಂಡು ಬರೆದ ಕ್ರಿಸ್ಟೀನಾರವರ ಬಾಲ್ಯ ತಂದೆ ತಾಯಿ ಅಣ್ಣ ಅಕ್ಕಂದಿರ ಪ್ರೀತಿ ವಾತ್ಸಲ್ಯಗಳಿಂದ, ಕ್ರಿಸ್ಟೀನಾಳ ತುಂಟತನ, ಹಠಮಾರಿತನಗಳಿಂದ ಸಮೃದ್ಧವಾಗಿತ್ತು. ಬೆಳೆದಂತೆ ಕ್ರಿಸ್ಟೀನಾ ಅತ್ಯಂತ ಕಟ್ಟುನಿಟ್ಟಿನ, ಸಂಯಮದ ಯುವತಿಯಾದಳು. ಹದಿನಾರು ವರುಷ ತುಂಬುವುದರೊಳಗೆ 50ಕ್ಕೂ ಹೆಚ್ಚು ಪದ್ಯಗಳು ಬರೆದು ಮೊದಲ ಸಂಕಲನ ಮುದ್ರಣ ಕಂಡಿತು. “ಗಾಬ್ಲಿನ್ ಮಾರ್ಕೆಟ್” ಇವರ ಬಹುಚರ್ಚಿತ ದೀರ್ಘ ಪದ್ಯ.

1875ರಲ್ಲಿ ಒಂದು ಕವನ ಸಂಕಲನವನ್ನು ಮತ್ತು 1881ರಲ್ಲಿ ಎ ಪೇಜೆಂಟ್ ಮತ್ತು ಇತರ ಕವನಗಳನ್ನು ಬಿಡುಗಡೆ ಮಾಡಿದರು. ಆದರೆ ಅವರ ಅನಾರೋಗ್ಯ ಶುರುವಾದ ನಂತರ ಹೆಚ್ಚಾಗಿ ಭಕ್ತಿಯ ಗದ್ಯ ಬರಹಗಳ ಮೇಲೆ ಗಮನ ಕೇಂದ್ರೀಕರಿಸಿದರು. ಕ್ರಿಸ್ಟಿನಾ ಅವರು ಆಲ್ಫ್ರೆಡ್, ಲಾರ್ಡ್ ಟೆನ್ನಿಸನ್, ಕವಿ ಪ್ರಶಸ್ತಿ ವಿಜೇತರ ಸಂಭಾವ್ಯ ಉತ್ತರಾಧಿಕಾರಿ ಎಂದು ಪರಿಗಣಿಸಲ್ಪಟ್ಟರು. ಸ್ವಯಂ ನಿರಾಕರಣೆಯನ್ನು ಬೇಡುವ ಆಧ್ಯಾತ್ಮಿಕ ಪರಿಶುದ್ಧತೆಯ ಆದರ್ಶ ಅವಳನ್ನು ಕಾಡುತ್ತಿದ್ದರೂ, ಕ್ರಿಸ್ಟಿನಾ ಕೆಲವು ರೀತಿಯಲ್ಲಿ ತನ್ನ ಸಹೋದರ ಡಾಂಟೆ ಗೇಬ್ರಿಯಲ್ ಅನ್ನು ಹೋಲುತ್ತಿದ್ದ. ಏಕೆಂದರೆ ಅವಳ ನಮ್ರತೆ, ಅವಳ ಭಕ್ತಿ ಮತ್ತು ಶಾಂತ ಸ್ವಭಾವ, ಸಂತನಂತಹ ಜೀವನ, ಗ್ರಹಿಕೆ, ಉತ್ಸಾಹಭರಿತ ಹಾಸ್ಯ ಪ್ರಜ್ಞೆ ಹೀಗೆ ಎಲ್ಲವನ್ನೂ ಒಳಗೊಂಡಿದ್ದಳು.

ಕವಿಯಾಗಿ ಅವಳ ಯಶಸ್ಸಿನ ಭಾಗವು ಅವಳ ಸಹಾನುಭೂತಿ, ಅನುಭವದ ಮಿತಿಗಳನ್ನು ಎಂದಿಗೂ ತಗ್ಗಿಸದಿದ್ದರೂ, ಅವಳ ಸ್ವಭಾವದ ಈ ಎರಡು ತೋರಿಕೆಯಲ್ಲಿ ವಿರೋಧಾತ್ಮಕ ಬದಿಗಳನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಯಿತು. ಅವಳ ಪದ್ಯದಲ್ಲಿ ಭಾವನಾತ್ಮಕ ಮತ್ತು ನೀತಿಬೋಧೆಯ ಧಾಟಿಯಿದೆ. ಆದರೆ ಕಾವ್ಯವೂ ಅಷ್ಟೇ ಪ್ರಬಲ, ಸರಳವಾಗಿದೆ. ಭೌತಿಕ ವಸ್ತುಗಳ ಅಸ್ಥಿರತೆಯು ಅವಳ ಕವಿತೆಯ ಉದ್ದಕ್ಕೂ ಮರುಕಳಿಸುವ ಒಂದು ವಿಷಯವಾಗಿದೆ. ಲೌಕಿಕದಿಂದ ವಿಮುಕ್ತಳಾಗುತ್ತಿದ್ದ ಕ್ರಿಸ್ಟೀನಾ ಕ್ರೀಮಿಯಾದ ಯುದ್ಧ ಸಂದರ್ಭದಲ್ಲಿ ಗಾಯಾಳುಗಳ ಶುಶ್ರೂಷೆಗೆ ಸ್ವಯಂ ಸೇವಕಿಯಾಗಿಯೂ ದುಡಿದಳು. ಲೌಕಿಕದ ಕ್ಷಣಭಂಗುರತೆ ಮತ್ತು ಗಾಢ ಅನುರಾಗ, ಭಗ್ನ ಪ್ರೇಮದ ಎಳೆಗಳು ಇವರ ಕವಿತೆಗಳಲ್ಲಿ ಪ್ರಬಲವಾಗಿ ಕಂಡು ಬರುತ್ತವೆ.

1. ಪ್ರತಿಧ್ವನಿ
(Echo)

ಬಾ…
ಈ ನೀರವ ರಾತ್ರಿಯಲ್ಲಿ
ಮೌನವೇ ಮಾತನಾಡುವ ಸ್ವಪ್ನದಲ್ಲಿ
ಬಾ
ದುಂಡು ದುಂಡು ಮಿದು ಗಲ್ಲ
ಹೊಳೆಯ ಮೇಲೆ ಹೊಳೆವ
ಬಿಸಿಲಂತೆ ಹೊಳೆವ ಕಣ್ಣಿನೊಂದಿಗೆ
ಬಾ ಕಣ್ಣಲಿಳಿವ ಹನಿಯಾಗಿ
ಓ ನೆನಪೇ, ಭರವಸೆಯೇ,
ಕಳೆದು ಹೋದ ವಸಂತಗಳ ಪ್ರೇಮವೇ

ಓ ಕನಸೇ,
ಎಷ್ಟು ಮಧುರ ನೀನು,
ಆಹಾ… ಸಿಹಿ
ಅದೆಷ್ಟು ಸಿಹಿಯೆಂದರೆ ಒಗರೊಗರು
ಸುರಲೋಕದಲ್ಲೇ ಆ ಕನಸು ಕಣ್ತೆರೆಯಲಿ
ಅಲ್ಲಿ ಪ್ರೀತಿಯನೇ ಹರಿಸುವ
ಅಮರಾತ್ಮಗಳ ಭೇಟಿ ಆಗುವುದು
ಅಲ್ಲಿ ಸದಾ ನೀರಡಿಕೆ ಕಂಗಳಿಗೆ
ಒಳಗಿಳಿಯಲು ಮಾತ್ರ ತೆರೆದ ಕದ
ಎಂದೂ ಹೊರ ಹೋಗದಂತೆ ಮುಚ್ಚುವುದು

ನನ್ನ ಕನಸುಗಳಿಗಾದರೂ ಬಾ
ಮರಗಟ್ಟುವೀ ಸಾವಿನಲಿ
ಮತ್ತೆ ಜೀವಿಸುವೆ
ಮರಳಿ ಬಾ ನನ್ನ ಕನಸುಗಳಿಗೆ
ಜೀವಕ್ಕೆ ಜೀವ, ಮಿಡಿತಕ್ಕೆ ಮಿಡಿತ
ಉಸಿರಿಗೆ ಉಸಿರು ಕೊಡುವೆ
ಮೆಲ್ಲನುಸುರು, ಮೆಲ್ಲನೊರಗು
ನನ್ನೊಲವೆ
ಇದು ಯಾವ ಜನ್ಮದ ಮೈತ್ರಿಯೋ

2. ನನ್ನ ಅಚ್ಚುಮೆಚ್ಚು
(When I am gone my dearest)

ನನ್ನ ಅಚ್ಚುಮೆಚ್ಚು
ನಾ ಮಡಿದ ಮೇಲೆ ಹಾಡಬೇಡ
ನನಗಾಗಿ ಶೋಕ ಗೀತೆಗಳ
ನೆತ್ತಿ ಹತ್ತಿರ ನೆಡದಿರು
ಗುಲಾಬಿ ಹೂ ಕಂಟಿಯ
ಅಥವಾ ನೆರಳೀವ ಸೈಪ್ರಸ್ ಮರವ
ತುಂತುರು, ಇಬ್ಬನಿಯ ತೇವ
ಧರಿಸಿದ ಹಸಿರು ಹುಲ್ಲಾಗು
ಬೇಕಾದರೆ ನೆನಪಿಡು,
ಇಲ್ಲಾ ಮರೆತು ಬಿಡು

ನಾನು
ನೆರಳ ನೋಡುವವಳಲ್ಲ
ಮಳೆಯಲ್ಲಿ ಮೀಯುವವಳೂ ಅಲ್ಲ
ಕೇಳಿಸದು ನನಗೆ
ನೈಟಿಂಗೇಲಿನ ನೋವಿನ ಹಾಡು
ಕನಸು ಕಾಣುವೆ
ಬೈಗಿರದ ಬೆಳಗಿರದ ನಸುಕಿನಲಿ

ಒಂದು ವೇಳೆ
ನಾ ನೆನೆದರೆ ನೆನೆದೇನು
ಮರೆತರೂ ಮರೆತೇನು
*

3. ದೂರ ಹೊರಟು ಬಿಡುವೆ
(Remember me when I am gone away)

ದೂರ ಹೊರಟು ಬಿಡುವೆ;
ಆಗ ನೆನೆಸು ನನ್ನ
ಹೊರಟು ಬಿಡುವೆ
ಬಹುದೂರ ನೆಮ್ಮದಿಯ ಊರಿಗೆ

ಈ ಕೈಗಳ ಇನ್ನೆಂದೂ
ಹಿಡಿಯಲಾರೆ
ಹೊರಳಿ ಮರಳಿ ಬರಲಾರೆ ನಾನು
ದಿನವೂ ಒಡಗೂಡಿ ಕಂಡ
ನಾಳೆಯ ಕನಸುಗಳ
ನನಸಿನಲ್ಲಿ ನಾ ಇಲ್ಲದಿರುವಾಗ ನೆನೆಸು

ನನ್ನ ನೆನೆಯಲೇಬೇಕೆಂದಾಗ
ನಿನಗೆ ತಿಳಿಯುವುದು
ಹೇಳಲಿಕ್ಕೂ ಕೇಳಲಿಕ್ಕೂ
ಪ್ರಾರ್ಥಿಸುವುದಕ್ಕೂ ಆಗ
ಭಾಳ ತಡವಾಗಿ ಹೋಗಿರುವುದೆಂದು

ಹಾಂ!
ಅಕಸ್ಮಾತ್ ತುಸು ಹೊತ್ತು
ನನ್ನ ಮರೆತು
ಆಮೇಲೆ ನೆನೆಯಬೇಕೆಂದರೆ
ದುಃಖಿಸಬೇಡ

ಈ ಕಾವಳ ಕಳವಳ
ನಿನ್ನ ಮೇಲೆ
ನನ್ನ ಚಿಂತೆಯ ಬುಟ್ಟಿಯನ್ನೇ ಹೊರಿಸುವಾಗ
ನೆನೆದು ಮರುಗುವುದಕ್ಕಿಂತ

‘ಮರೆತಾರೆ ಮರೆತು ಬಿಡು ಒಮ್ಮೆ;
ನಕ್ಕಾರೆ ನಕ್ಕು ಬಿಡು!’

4. ಮಡಿದ ಮೇಲೆ
(After Death)

ಅರ್ಧಂಬರ್ಧ ಸರಿಸಿದ ಪರದೆಗಳು
ಶುಚಿ ಮಾಡಿ ಸಾರಿಸಿದ ನೆಲ
ಚಟ್ಟವನ್ನು ಹೆಣೆದಿದ್ದರು
ದವನ ಸೇರಿಸಿ ಪೋಣಿಸಿದ
ಹೂಗಳ ಒತ್ತಾಗಿ ಹರಡಿದ್ದರು
ನಾ ಮಲಗಿದ್ದ ಆ ಮೆತ್ತೆಯ ಮೇಲೆ
ಮೇಲ್ತಡಿಕೆಯ ಜಾಲರಿಯಾಸಿ
ಹಸುರು ಬಳ್ಳಿಯ ಕೌನೆರಳು
ನಾನು ಮಲಗಿರಬಹುದು ಅಂದುಕೊಂಡು
ಮೆಲ್ಲ ಬಾಗಿದ ನನ್ನ ಮುಖದ ಮೇಲೆ
ಸರಿಯಾಗಿ ಕೇಳಲಿಲ್ಲ ಅವನಂದದ್ದು
ಆದರೆ ಇಷ್ಟು ಮಾತ್ರ ಕೇಳಿತು
ಮುಖ ತಿರುಗಿಸಿ ಮೇಲೇಳುವಾಗ
“ಪ್ಚ್! ಪಾಪ ಕೂಸು, ಪಾಪ ಕೂಸು”

ಆಮೇಲೊಂದು ದೀರ್ಘ ಮೌನ
ಗೊತ್ತು ನನಗೆ ಅವ ಅಳುತ್ತಿದ್ದ
ನನ್ನ ಮುಖ ಮುಚ್ಚಿದ್ದ
ಮುಸುಕು ಮುಟ್ಟಲಿಲ್ಲ
ಹೊದಿಕೆ ಮಡಿಕೆ ಸರಿಸಲಿಲ್ಲ
ನನ್ನ ಅಂಗೈಯನ್ನು ಮಿದುವಾಗಿ ಒತ್ತಲಿಲ್ಲ
ತಲೆಯ ಬಳಿಯಿದ್ದ
ಮೆತ್ತನೆಯ ದಿಂಬನ್ನೂ ನೇವರಿಸಲಿಲ್ಲ
ಉಸಿರಾಡುವಾಗಲಂತೂ ಪ್ರೀತಿಸಲಿಲ್ಲ
ಉಸಿರು ನಿಂತಾಗ ಅದೆಷ್ಟು ಮರುಗಿದ!

ಪ್ಚ್!
ಎಂಥಾ ಮಧುರಯಾತನೆ
ನಾನು ಮರಗಟ್ಟಿರುವಾಗ
ಅವನಿನ್ನೂ ಬೆಚ್ಚಗಿದ್ದ

5. ವಸಂತ (May)

ಹೇಳಲಾರೆ ನಿಮಗೆ ಹೇಗಿತ್ತೆಂದು;
ಇಷ್ಟು ಮಾತ್ರ ಗೊತ್ತು
ಮರೆಯಾಗಲು ಬಂತು
ಒಂದು ಉರಿಯುವ ಬಿರುಬಿಸಿಲಿನ ಹಗಲು
ವಸಂತ ಆಗ ಇನ್ನೂ ಹುಡುಗ
ಆಹ್!
ಹಾಯಾದ ವಸಂತ
ಎಳೆ ಜೋಳದ ಹಸಿ ರೌದಿಯ ನಡುವೆ
ಪೋಪಿ* ಇನ್ನೂ ಮೊಗ್ಗೊಡೆದಿಲ್ಲ
ಮಿಕ್ಕಿದ ಕಡೆಯ ಮೊಟ್ಟೆ
ಒಡೆದು ಇನ್ನೂ ಮರಿಯಾಗಿಲ್ಲ
ಯಾವ ಹಕ್ಕಿಯೂ
ತನ್ನ ಪ್ರಿಯ ಸಂಗಾತಿಯನ್ನು ತೊರೆದಿಲ್ಲ

ಅದೇನೆಂದು ನಿಮಗೆ ಹೇಳಲಾರೆ;
ಇಷ್ಟು ಮಾತ್ರ ಗೊತ್ತು
ವಸಂತನ ಬಿರುಬಿಸಿಲಿನೊಡನೆ ಸರಿದು ಮರೆಯಾಯಿತು
ಎಲ್ಲಾ ಮಧುರ ಘಳಿಗೆಗಳಂತೆ ಜಾರಿ ಹೋಯಿತು
ನನ್ನನ್ನು ಹೀಗೆ ನೆರೆತು,
ಬಿಸುಪಿಲ್ಲದೆ,
ಮುದಿಯಾಗಲು ಬಿಟ್ಟು ಕೊಟ್ಟು

*ಪೋಪಿ: ಗಸಗಸೆ ಗಿಡ

6. ಬದುಕು ಮತ್ತು ಸಾವು
(Life and death)

ಬದುಕು ಸಾಧು ಅಲ್ಲ
ಒಂದಿನ ಹೀಗೆ‌ ಭಾರಿ ಸಾಧು ಆಗಿಬಿಡುತ್ತೆ

ಕಣ್ಣು ಮುಚ್ಚಿ ಸಾಯಿ ಹೊಡೆಯಲು
ಗಾಳಿಗೆ ತೊನೆಯುವ ಕಾಡು ಹೂಗಳು
ಸರಕ್ಕನೆ ಸರಿಯುವ ಚಿಟ್ಟೆಗಳೊಂದಿಗೆ
ಫಕ್ಕನೆ ಹಾರುವ ಹಕ್ಕಿಗಳ ನೇವರಿಸಲು
ನೆತ್ತಿ ಪಾದಗಳು ಉದ್ದುದ್ದ ಹುಲ್ಲು ಧರಿಸಲು
ಎತ್ತರಕೆ ಆಕಾಶದೆದೆ ಸೀಳಿ
ಸಿಳ್ಳೆ ಹಾಕುವ
ಟುವ್ವಿ ಹಕ್ಕಿ ಹಾಡು ಕೇಳಲು
ಈ ಚೈತ್ರ ವೈಶಾಖಗಳು
ಕ್ಷಣಿಕವೆಂದು ನಿಡುಸುಯ್ಯಲು
ಗೋಧಿ ತೆನೆ ಕಾಳುಗಟ್ಟುವುದನು ಕಣ್ತುಂಬಲು
ನಮ್ಮ ಖಾಯಂ ಸೀಟಿನಲ್ಲಿ
ಕೂರುವವರನು ಗುರುತಿಸಲು

ಬದುಕು ಅಂಥಾ ಸಾಚಾ ಏನಲ್ಲ
ಒಂದಿನ ಸಾಚಾ ಆದೀತು
ಅಳಿದು ಮತ್ತೆ ಉಳಿಯಲು
ಹಾಗೇ ಸುಮ್ಮನೆ ಕಣ್ಣು ಮುಚ್ಚಿ ಮಲಗಲು
ಕಾಡಿನಲ್ಲೆಲ್ಲೋ ಹಗೂರ
ಉದುರುವ ಹಣ್ಣೆಲೆಗಳಿಗಾಗಿ ಮರುಗದಿರಲು
ನೊರೆಗಡಲು ಅಪ್ಪಳಿಸುವಾಗ ಕಿವಿಯಾಗಲು
ಸಾಲು ಸಾಲು ಬಂಗಾರದ ತೆನೆಕಾಳು ನಿಂತಲ್ಲಿ
ಕರಕಲಾದ ಹುರುಳಿ ಹೊಲಕ್ಕೆ ಸಾಕ್ಷಿಯಾಗಲು
ಬಯಲಿಗೆ ಸ್ವಾಗಿಯ ಬಟ್ಟೆ ತೊಡೆಸಿದರೆ
ಅಳಿದವರಿಗೇನು ನಷ್ಟ ಯಾತನೆ
ಎಲ್ಲವೂ ಗಾಢ ನಿದಿರೆ