ನನಗೂ ಒಳಗೊಳಗೇ ಗಾಭರಿ; ಮದುವೆಗೂ ಮುಂಚೆ ಡಜನ್ ಗಟ್ಟಲೆ ಬಳೆ ತುಂಬಿಕೊಂಡು ಒಂದೂ ಒಡೆಯದಂತೆ ಇಟ್ಟುಕೊಳ್ಳುತ್ತಿದ್ದೆನಲ್ಲ.. ಈಗ ಏನಾಯ್ತು. ಗಡಿಬಿಡಿಯಲ್ಲಿ ಕೆಲಸ ಮಾಡಿದ್ರೆ ಬಳೆ ಒಡದೆ ಹೋಗ್ತದೆ ನೋಡು ಅಂದ ಅಮ್ಮನ ಮಾತು ನೆನಪಾಗಿ ಸಮಾಧಾನವಾಗುತ್ತಿತ್ತಾದರೂ ಈ ಅಪಶಕುನ ಎನ್ನುವ ಭಯದಿಂದ ತಪ್ಪಿಸಿಕೊಳ್ಳಲು ಗಾಜಿನ ಬಳೆ ತೊಡುವುದನ್ನು ಕ್ರಮೇಣ ಬದಲಿಸಿದ್ದೆ. ಆತ ಕೊಟ್ಟು ಹೋದ ಬಳೆಗಳ, ಆ ಸಂಜೆ ಜೋಡಿಸುತ್ತಾ ಎಷ್ಟೆಲ್ಲಾ ನೆನಪುಗಳು ತೆರೆದುಕೊಂಡವು.
ಬಳೆಗಾರ ಮತ್ತು ಬಳೆಗಳ ಕುರಿತು ಸ್ಮಿತಾ ರಾಘವೇಂದ್ರ ಕಲ್ಲೇಶ್ವರ ಬರಹ ನಿಮ್ಮ ಓದಿಗೆ

ಬಳೆಗಳು ಸದ್ದು ಮಾಡುತ್ತವೆ ಆಗಾಗ, ಬಾಲ್ಯದ್ದು, ಯೌವನದ್ದು, ಬದುಕಿನ ಮುಸ್ಸಂಜೆಯದ್ದು ಕೂಡಾ. ಹಸಿರು ಗಾಜಿನ ಬಳೆಗಳೇ ಹಾಡು ಕೇಳುತ್ತ ಬಳೆಗಳ ಜೋಡಿಸಿಡುತ್ತಿದೆ. ಕೈ ತಪ್ಪಿ ಬಿದ್ದು ಬಳೆ ಒಡೆಯಿತು. ಏನೋ ಅಪಶಕುನ ಅನ್ನುವ ಮಾತು ತೇಲಿ ಬಂತು.

ಮದುವೆಯಾದ ಹೊಸತರಲ್ಲಿ ಕೂಡಾ, ಕೈಗಿಟ್ಟ ಗಾಜಿನ ಬಳೆಗಳೆಲ್ಲ ಒಡೆದು ಹೋಗುತ್ತಿತ್ತು. ಆಗಲೂ ಹೀಗೆ ತೇಲಿ ಬಂದ ಮಾತಿನಿಂದ ನೋಯುತ್ತಿದ್ದೆ. ಏನೋ ದೇವರ ಶಾಪವೇ ಇರಬೇಕು. ಊರ ದೇವಿಗೆ ಬಳೆಯ ಉಡಿ ತುಂಬ್ಕೊಂಡು ಬಾ ಅಂದಿದ್ದ ಅತ್ತೆ, ಹಾಗೆ ಮಾಡಿದ್ದೆ ಕೂಡಾ. ಆದರೂ ಒಡೆಯುವ ಬಳೆಗಳು ಮಾತ್ರ ನಿಲ್ಲಲಿಲ್ಲ ಅದನ್ನು ತೆಗೆದಿಟ್ಟು ಬೇರೆ ಬಳೆಗಳ ಹಾಕಿಕೊಳ್ಳೋಣ ಎನ್ನುವ ಮನಸಾದರೂ, ಗಾಜಿನ ಬಳೆಗಳನ್ನೇ ತೊಡಬೇಕು ಮುತ್ತೈದೆಯರು ಅನ್ನುವ ಮಾತಿನಿಂದ ಮೌನವಾಗಿದ್ದೆ.

ನನಗೂ ಒಳಗೊಳಗೇ ಗಾಭರಿ; ಮದುವೆಗೂ ಮುಂಚೆ ಡಜನ್ ಗಟ್ಟಲೆ ಬಳೆ ತುಂಬಿಕೊಂಡು ಒಂದೂ ಒಡೆಯದಂತೆ ಇಟ್ಟುಕೊಳ್ಳುತ್ತಿದ್ದೆನಲ್ಲ.. ಈಗ ಏನಾಯ್ತು. ಗಡಿಬಿಡಿಯಲ್ಲಿ ಕೆಲಸ ಮಾಡಿದ್ರೆ ಬಳೆ ಒಡದೆ ಹೋಗ್ತದೆ ನೋಡು ಅಂದ ಅಮ್ಮನ ಮಾತು ನೆನಪಾಗಿ ಸಮಾಧಾನವಾಗುತ್ತಿತ್ತಾದರೂ ಈ ಅಪಶಕುನ ಎನ್ನುವ ಭಯದಿಂದ ತಪ್ಪಿಸಿಕೊಳ್ಳಲು ಗಾಜಿನ ಬಳೆ ತೊಡುವುದನ್ನು ಕ್ರಮೇಣ ಬದಲಿಸಿದ್ದೆ. ಆತ ಕೊಟ್ಟು ಹೋದ ಬಳೆಗಳ, ಆ ಸಂಜೆ ಜೋಡಿಸುತ್ತಾ ಎಷ್ಟೆಲ್ಲಾ ನೆನಪುಗಳು ತೆರೆದುಕೊಂಡವು.

ಆಗೆಲ್ಲಾ ಬಗೆ ಬಗೆಯಲ್ಲಿ ಸುಲಭದಲ್ಲಿ ಕೊಡಿಸುವ ಮತ್ತು ಸಿಗುವ ಆಭರಣ ಎಂದರೆ ಬಳೆ. ಅದನ್ನು ಧರಿಸಲೇಬೇಕು ಎನ್ನುವ ರಿವಾಜು. ಮಣಿ ಸರ, ಬಣ್ಣದ ಕ್ಲಿಪ್ಪು ರಿಬ್ಬನ್ನು, ಮಿನುಗುವ ಬಿಂದಿ, ಏನೇ ಇದ್ದರೂ ಅದಕ್ಕೆಲ್ಲ ಎರಡನೆಯ ಸ್ಥಾನ. ಬಳೆ ಇಲ್ಲದ ಬೋಳು ಕೈಯಲ್ಲಿ ಹೆಣ್ಮಕ್ಕಳು ಬಿಲ್ ಕುಲ್ ಇರಲಿಕ್ಕಿಲ್ಲವಾದ ಕಾರಣ, ಬಳೆ ಕೊಡಿಸುವ ಬಗ್ಗೆ ತಕರಾರು ಕೂಡಾ ಇರುತ್ತಿರಲಿಲ್ಲ. ಮಕ್ಕಳಾದ ನಾವು ಅದರ ಸದುಪಯೋಗವನ್ನೂ ಚೆನ್ನಾಗೇ ತೆಗೆದುಕೊಳ್ಳುತ್ತಿದ್ದೆವು.

ಗಾಜಿನ ಬಳೆಗಳಿಗೇ ಹೆಚ್ಚು ಪ್ರಾಶಸ್ತ್ಯವಿದ್ದರೂ ಮಕ್ಕಳಿಗೆ ವಿಧ ವಿಧ ಬಣ್ಣದ ಬಳೆಗಳಿಗೆ ಮುಕ್ತ ಸ್ವಾತಂತ್ರ್ಯವಿತ್ತು. ಉಳ್ಳವರಾದರೆ ಬೆಳ್ಳಿಯದ್ದೋ ಚಿನ್ನದ್ದೋ ಹಾಕಿ ಕೈ ಕುಣಿಸುತ್ತಿದ್ದರು. ನಾವೆಲ್ಲ ಆಗ ಚಿನ್ನ ಬೆಳ್ಳಿಯ ಬಳೆಗಳತ್ತ ಕಣ್ಣು ಮಿಟುಕಿಸಿ ನಮ್ಮ ಕೈ ಬಳೆಗಳನ್ನು ಸವರಿಕೊಳ್ಳುತ್ತಿದ್ದೆವು ಅಷ್ಟೇ. ಅದರೆ ಬಂಗಾರದ ಬಳೆಗಳೂ ಗಾಜಿನ ಬಳೆಗಳ ಅಂದ, ನಿನಾದ ನೋಡಿ ನಾಚಿದ್ದೂ ಇದೆ ಬಿಡಿ.

ಹೆಣ್ಣೆಂದರೆ ಶೃಂಗಾರವೆನ್ನುವುದು ಹೆಜ್ಜೆಹಾಕುವ ಮೊದಲ ದಿನದಿಂದಲೇ ಪಡೆದುಕೊಂಡ ವರವಾದ್ದರಿಂದ ಆ ವರವನ್ನು ಅಷ್ಟೇ ಚಂದಗೆ ಕಾಪಾಡಿಕೊಳ್ಳುತ್ತಿದ್ದದ್ದು ಪ್ರಪ್ರಥಮವಾಗಿ ಬಳೆಯೆಂಬ ಬಲದಿಂದ.

ವರುಷಕ್ಕೆ ಒಂದೋ ಎರಡೋ ಬಾರಿ ಎಲ್ಲೆಲ್ಲಿಂದಲೋ ಬಳೆಗಾರ ಬಳೆಯ ಹೊತ್ತು ಮನೆ ಬಾಗಿಲಗೆ ಬಂದು ಮಾರಿ ಹೋಗುವ ಕಾಲವೊಂದಿತ್ತು. ಬಳೆಗಾರ ಬರುವವನಿದ್ದಾನೆ ಎಂದೇ ಪೈಸೆ ಪೈಸೆ ಒಟ್ಟುಗೂಡಿಸುತ್ತಿದ್ದೆವು. ಬಳೆಗಾರನಿಗಾಗಿ ಅದೆಷ್ಟು ಆಸ್ಥೆಯಿಂದ ಕಾಯುತ್ತಿದ್ದೆವು. ಕೇವಲ ಮಕ್ಕಳು ಮಾತ್ರ ಅಲ್ಲ ಊರ ಹೆಂಗಸರು ಯುವತಿಯರು ಕೂಡಾ ಪುಟ್ಟ ಮಕ್ಕಳಂತೆ ಬಳೆಗಾರನಿಗಾಗಿ ಕಾಯುವುದು ಸರ್ವೇ ಸಾಮಾನ್ಯವಾಗಿತ್ತು.

ಅಷ್ಟೊ ಇಷ್ಟೋ ಕೂಡಿಟ್ಟ ಹಣ, ಸ್ವಂತ ಖುಷಿಗೆ ಏನಾದರೂ ಕೊಳ್ಳಬೇಕು ಅಂದರೆ ಬಳೆಗಾರನೇ ಬರಬೇಕು. ಹಾಗಾಗಿ ಯಾರಿಗಿಲ್ಲದ ಭವ್ಯ ಸ್ವಾಗತ ಬಳೆಗಾರನಿಗಿತ್ತು. ದೊಡ್ಡೆಜಮಾನಿ ಚಿಕ್ಕೆಜಮಾನಿ ಅನ್ನುತ್ತಲೇ ಬರುವ ಬಳೆಗಾರ ತನ್ನ ಮಾತಿನ ಪ್ರಾವೀಣ್ಯತೆಯಿಂದ ಅಂದುಕೊಂಡಿದ್ದಕ್ಕಿಂತ ಸ್ವಲ್ಪ ಜಾಸ್ತಿಯೇ ಬಳೆ ತೊಡಿಸಿ ನಗುತ್ತಿದ್ದ. ಮನೆಯಲ್ಲಿ ಅಮ್ಮ, ಚಿಕ್ಕಮ್ಮ, ಅಜ್ಜಿ ಇವರ ಸರದಿಯೆಲ್ಲ ಮುಗಿದ ಮೇಲೆ ಮಕ್ಕಳ ಸರದಿ. ಹರಡಿಕೊಂಡ ಬಳೆಯ ಗಂಟಿನಿಂದ ಬಿಚ್ಚಿಕೊಳ್ಳುವ ಕನಸು. ಅದು ಇದು ಎಂದು ಆರಿಸಿಕೊಳ್ಳುತ್ತ ಅದರಲ್ಲಿ ಏನಿದೆ? ಇದರಲ್ಲಿ ಏನಿದೆ? ಎನ್ನುತ್ತ, ಕ್ಲಿಪ್ಪು, ಪಿನ್ನು, ಪಳ ಪಳನೇ ಹೊಳೆವ ಓಲೆಗಳು, ಜಾತ್ರೆಯೊಂದು ಮನೆಬಾಗಿಲಿಗೆ ಬಂದಂತೆ ಖರೀದಿ ಶುರುವಾಗುತ್ತಿತ್ತು.

ಬಳೆಗಾರನ ಗಂಟಿಗೆ ಕೈ ಹಾಕಿ ಒಂದೋದೇ ಆಯ್ದುಕೊಳ್ಳುವಷ್ಟು ಧೈರ್ಯ ಮತ್ತು ಆಪ್ತತೆ. ನಿಂಗೆ ಏನ್ ಬೇಕು ಅಂತ ನನಗೆ ಗೊತ್ತಿದೆ ಕೂಸೆ, ಎನ್ನುತ್ತ ಮಣಿ ಸರದ ಡಬ್ಬದ ಮುಚ್ಚಳ ತೆರೆಯುತ್ತಿದ್ದ. ಬಣ್ಣದ ಚಿಟ್ಟೆಯೊಂದು ರೆಕ್ಕೆ ಬಡಿಯುತ್ತ ಹಾರುವಾಗ ಹಿಡಿಯಲು ಹೋಗುತ್ತೀವಲ್ಲ ಥೇಟ್ ಅದೇ ಭಾವ. ಪಟ್ ಅಂತ ಕೈ ಹಾಕಿ ತೆಗೆದು ಹಿಂದೆ ಮುಂದೆ ಹಿಡಿದು ನೋಡಿ, ಇದು ಬೇಕೇ ಬೇಕು ಎಷ್ಟಿದೆ ಇದಕ್ಕೆ, ಅವನು ಹೇಳಿದ ಹಣಕ್ಕೂ ನಮ್ಮ ಹಿಡಿಯೊಳಗಿನ ಹಣಕ್ಕೂ ಸರಿ ಹೊಂದುತ್ತದಾ ಎಂದು ಮರೆಯಲ್ಲಿ, ಮುಷ್ಟಿ ಚೂರೇ ಚೂರು ಬಿಡಿಸಿ ನೋಡಿ, ಇನ್ನಷ್ಟು ನಾಣ್ಯಗಳ ಬೇಡಿಕೆ ಹೊತ್ತು ಅಮ್ಮನ ಬಳಿಗೆ ಓಡುತ್ತಿದ್ದದ್ದು. ಕಷ್ಟಪಟ್ಟು ಕೊಂಡ ಬಳೆ ಸರಗಳನ್ನು, ರಾತ್ರಿ ಹಗಲು ಹಾಕಿ ಕನ್ನಡಿಯ ಮುಂದೆ ನಿಂತು ವೈಯಾರದಲಿ ನೋಡಿ ನೋಡಿ ಸಂಭ್ರಮಿಸುತ್ತಿದ್ದ ಸುಖ ಅದು. ಆದರೆ ಈಗ ಜಗಮಗಿಸುವ ಅಂಗಡಿಯೊಳಗೆ ಗ್ಲಾಸಿನೊಳಗಿಟ್ಟ ಬಳೆಗಳ, ಬೆರಳು ಮಾಡಿ ತೋರಿಸುತ್ತ ಹಾ, ಅದಲ್ಲ ಇದು, ಇದಲ್ಲ ಅದು ಎನ್ನುವಾಗ ಸಿಂಡರಿಸಿಕೊಂಡ ಮುಖವೊಂದು, ಆರಿಸಿಕೊಳ್ಳಿ ಬೇಗ ಬೇಗ, ಎಲ್ಲ ಕವರಿನಿಂದ ತೆಗಿಬೇಡಿ ಮೇಡಂ. ಎನ್ನುವಾಗ, ಸದ್ದಿಲ್ಲದೇ ಬಳೆಗಾರ ನೆನಪಾಗುತ್ತಾನೆ. ಅವನೆದುರು ಹರಡಿಕೊಂಡ ಬಳೆಗಳು ನೆನಪಾಗುತ್ತವೆ. ಯಾವುದೋ ಒಂದು ಆರಿಸಿ ತಂದರೂ, ಅಂಥ ಸಮಾಧಾನವೇನೂ ಇರುವುದಿಲ್ಲ. ಒಮ್ಮೆಯೂ ಅದನ್ನು ಧರಿಸದೇ ಉಳಿದು ಹೋಗುವುದೂ ಇದೆ. ಅದಕ್ಕೆ ಒಂದು ಭಾವದ ಸ್ಪರ್ಶ ಇರುವುದೇ ಇಲ್ಲ.

ಚಿಕ್ಕ ವಯಸ್ಸಿನಲ್ಲೇ ಗಂಡನ ಕಳೆದುಕೊಂಡ ಚಿಕ್ಕಮ್ಮನೋ ದೊಡ್ಡಮ್ಮನೋ ಅತ್ತಿಗೆಯೋ ಯಾರಾದರೂ ಇದ್ದರೆ ದೂರದಲ್ಲೇ ಕುಳಿತು, ಬಳೆ ತೊಡಲಾಗದ ತನ್ನ ಕೈಗಳನ್ನು ನೋಡಿಕೊಂಡು ವ್ಯಥೆ ಪಡುತ್ತಿದ್ದರು, ಕೆಲವರು ಬಳೆಗಾರನ ಕಡೆ ಕೂಡಾ ನೋಡುತ್ತಿರಲಿಲ್ಲ. ಅದರ ಅರ್ಥವೇ ಗೊತ್ತಿಲ್ಲದ ನಾವು ಅವರ ಕೈ ಹಿಡಿದು ಬಳೆಯ ಗಂಟಿನತ್ತ ಎಳೆದು ತಂದರೆ, ಅಪರಾಧಿ ಭಾವನೆಯಲ್ಲಿ ಕೊಸರಿಕೊಂಡು ಓಡುತ್ತಿದ್ದರು. ಆಗ ಅಲ್ಲೇ ಕೂತಿದ್ದ ಹಿರಿಯರ ಕೆಂಪು ಕಣ್ಣು, ಎಲ್ಲರೂ ಒಳಮನೆಗೆ ಸೇರುವಂತೆ ಮಾಡಿಬಿಡುತ್ತಿತ್ತು ಕೆಲವೊಮ್ಮೆ.

ಅಮ್ಮ, ನಿಮ್ಮ ಕೈ ಗಟ್ಟಿಯಾಗಿದೆ ಬಹಳ ಕೆಲಸ ಮಾಡ್ತೀರಿ ನೀವು ಅನ್ಸುತ್ತೆ. ಅಡಿಕೆ ಸುಲಿತೀರಾ! ಅದಕ್ಕೆ ಬಹಳ ಗಟ್ಟಿಯಾಗಿದೆ. ನಿಧಾನಕ್ಕೆ ಹಾಕಬೇಕು, ಎನ್ನುತ್ತ ಕೈ ಗಂಟುಗಳನ್ನೆಲ್ಲ ಒತ್ತಿ ಹಿಡಿದು ನೋವಾಗದಂತೆ, ನೋವಾದರೂ ಹೇಳಲಾಗದಂತೆ ಬಳೆತುಂಬುವ ಬಳೆಗಾರನ ಜಾದೂ ವಿದ್ಯೆ ಅಚ್ಚರಿಯ ವಿಷಯ. ಕೆಲವೊಮ್ಮೆ ಬಳೆ ಒಡೆದು ತಾಗಿ ರಕ್ತ ಬಂದರೆ ಅದಕ್ಕೆ ಔಷಧ ಕೂಡ ಅವನೇ ಹಚ್ಚುತ್ತಿದ್ದ.

ಇದೆಲ್ಲ ಕಾರಣಕ್ಕೆ ಬಳೆಗಾರನೆಂದರೆ ಅಲ್ಲೊಂದು ಬಾಂದವ್ಯ ಬೆಸೆಯುತ್ತಿತ್ತ ಗೊತ್ತಿಲ್ಲ. ಬಳೆ ತಂದಿಟ್ಟರೂ ತುಂಬಿಕೊಳ್ಳಲಾಗದೇ ಒದ್ದಾಡುವ, ಬಳೆಗಾರನ ಹುಡುಕಿಕೊಂಡು ಹೋಗಿ ಬಳೆ ತುಂಬಿಸಿಕೊಂಡು ಬರುವ ಬಹಳಷ್ಟು ಹೆಂಗಸರು ನಮ್ಮೂರಲ್ಲಿ ಇಂದಿಗೂ ಇದ್ದಾರೆ. ಒಡೆಯದೇ ನೋವಿಲ್ಲದೇ ಚಕಚಕನೇ ಬಳೆ ತುಂಬುವ ಜಾದುವಿಗೆ ಮನಸೋತು.

ಆಗೆಲ್ಲ ದೂರ ದೂರದ ಊರುಗಳಿಂದ ಬಸ್ಸು ಹಿಡಿದು ಹಳ್ಳಿಗೆ ಬರುವ ಎಲ್ಲರಿಗೂ ಊಟ ವಸತಿ ವ್ಯವಸ್ಥೆ ಮಾಡುವುದು ಪದ್ದತಿ ಇತ್ತು. ಸೂರ್ಯ ಮುಳುಗಿದಮೇಲೆ ಬಂದಿದ್ದಾರೆ ಅಂದರೆ ಉಳಿದು ಹೋಗ್ತಾರೆ ಅಂತಲೇ ಅರ್ಥ. ಯಾಕೆಂದರೆ ಮಲೆನಾಡಿನ ಒಂಟಿ ಒಂಟಿ ಮನೆಗಳು. ಗುಡ್ಡ ಬೆಟ್ಟಗಳ ದಾಟಿ ಸಾಗುವದು ದುಸ್ತರ. ವಾರಗಳ ಕಾಲ ಮನೆ ಮನೆ ತಿರುಗಿ ಬಳೆ ಮಾರಿ ಹೋಗುವಾಗ ತಂಗಲೊಂದು ಜಾಗ ಬೇಕಾಗಿತ್ತು. ಅಪ್ಪನಂತೂ ಕನಿಕರ ಚೂರು ಹೆಚ್ಚಾಗಿ ಕೆಲವೊಮ್ಮೆ ಎಲ್ಲ ದಿನಗಳೂ ನಮ್ಮ ಮನೆಯಲ್ಲೇ ಉಳಿದು ಬಿಡುತ್ತಿದ್ದರು.

ಕಷ್ಟಪಟ್ಟು ಕೊಂಡ ಬಳೆ ಸರಗಳನ್ನು, ರಾತ್ರಿ ಹಗಲು ಹಾಕಿ ಕನ್ನಡಿಯ ಮುಂದೆ ನಿಂತು ವೈಯಾರದಲಿ ನೋಡಿ ನೋಡಿ ಸಂಭ್ರಮಿಸುತ್ತಿದ್ದ ಸುಖ ಅದು. ಆದರೆ ಈಗ ಜಗಮಗಿಸುವ ಅಂಗಡಿಯೊಳಗೆ ಗ್ಲಾಸಿನೊಳಗಿಟ್ಟ ಬಳೆಗಳ, ಬೆರಳು ಮಾಡಿ ತೋರಿಸುತ್ತ ಹಾ, ಅದಲ್ಲ ಇದು, ಇದಲ್ಲ ಅದು ಎನ್ನುವಾಗ ಸಿಂಡರಿಸಿಕೊಂಡ ಮುಖವೊಂದು, ಆರಿಸಿಕೊಳ್ಳಿ ಬೇಗ ಬೇಗ, ಎಲ್ಲ ಕವರಿನಿಂದ ತೆಗಿಬೇಡಿ ಮೇಡಂ. ಎನ್ನುವಾಗ, ಸದ್ದಿಲ್ಲದೇ ಬಳೆಗಾರ ನೆನಪಾಗುತ್ತಾನೆ.

ಊರಿಗೆ ಬರುವ ಸಿದ್ದಣ್ಣ, ಬಳೆಗಾರ, ಗಿಳಿ ಶಾಸ್ತ್ರದವರಿಂದ ಹಿಡಿದು ಬೀಸುವ ಕಲ್ಲಿಗೆ ಚಾಣ ಹಾಕುವವರವರೆಗೆ, ಎಲ್ಲರೂ ಅಪ್ಪನಿಗೆ ಪರಿಚಿತರು. ವರುಷಕ್ಕೆ ಎರಡೋ ಮೂರೋ ಬಾರಿ ಇವರೆಲ್ಲ ಬರುತ್ತಿದ್ದರು. ಬಂದಾಗೆಲ್ಲ ನಮ್ಮ ಮನೆಯೇ ಇವರ ತಂಗುದಾಣ. ಅವರೊಂತರ ಸುದ್ದಿ ವಾಹಿನಿಯಂತೆ ಕೆಲಸಮಾಡುತ್ತಿದ್ದರು, ಪ್ರತೀ ಊರಿನ ಪೇಟೆ ಪಟ್ಟಣಗಳ ಸುದ್ದಿ, ಅವರ ಜೋಳಿಗೆಯಲ್ಲಿ ಕಲಸು ಮೇಲೋಗರ. ಅಷ್ಟೇ ಅಲ್ಲ ಅವರದ್ದೇ ಮನೆಯ ಕಥೆಗಳನ್ನೂ ಅಪ್ಪನ ಎದುರು ಬಿಚ್ಚಿಟ್ಟು ಹಗುರಾಗುತ್ತಿದ್ದರು.

ನಾಲ್ಕು ಗಂಡು ಮಕ್ಕಳು, ನೋಡಿಕೊಳ್ಳೋರು ಮಾತ್ರ ಯಾರೂ ಇಲ್ಲ ಅನ್ನುವುದು ಒಬ್ಬನ ನೋವಾದರೆ, ಇನ್ನೊಬ್ಬ, ಮಕ್ಕಳು ಹೋಗೋದು ಬ್ಯಾಡಾ ಈ ವಯಸ್ಸಿನಾಗ ತಿರುಗಬ್ಯಾಡ ಅಂತಾರೆ ಆದ್ರೆ ನಮ್ಮ ಕಸುಬು ಪುಕ್ಸಟ್ಟೆ ಮನಿ ಒಳಗ ಕೂರ್ಲಿಕ್ಕೆ ಮನಸು ಬರಂಗಿಲ್ಲ ಅನ್ನುತ್ತಿದ್ದ. ಹೆಂಡತಿ ಯಾರ್ದೋ ಜೊತೆ ಮಕ್ಕಳ ಸಮೇತ ಹೋಗ್ಬಿಟ್ಲು ಅಂತ ಒಬ್ಬನ ಗೋಳಾದ್ರೆ, ನಮಗೆ ಮಕ್ಕಳೇ ಆಗಿಲ್ಲ ಸ್ವಾಮೀ ಅನ್ನೋನು ಇನ್ನೊಬ್ಬ. ಹೀಗೆ ಹತ್ತು ಹಲವು ಕಥೆಗಳು ಬಿಚ್ಚಿ ಹಗುರಾಗಿ ಮತ್ತೆ ಕಟ್ಟಿಕೊಂಡು ಹೋಗುವ ಅವರ ಪರಿ ನಿಜಕ್ಕೂ ಆಶ್ಚರ್ಯವೆಂದು ಅನ್ನಿಸುತ್ತಿತ್ತು.

ಊರಿನ ತರಹೇವಾರಿ ಕಥೆಗಳು ನಮಗೆ ಸಿಗುತ್ತಿದ್ದದ್ದು ಅಲ್ಲಿಯೇ. ಆವತ್ತಿನ ಬದುಕಿನ ಭಾವಗಳೆಲ್ಲ ಅದೆಷ್ಟು ಆಪ್ಯಾಯಮಾನವಾಗಿದ್ದವು. ರಾತ್ರಿ ತೂಕಡಿಸುತ್ತಲೇ ಅವರ ಕಥೆಗಳಿಗೆ ಕಿವಿಯಾಗಿ ಕೂತು ಬಿಡುತ್ತಿದ್ದೆವು. ಮರುಗುತ್ತಿದ್ದೆವು ಕಣ್ಣೀರಾಗುತ್ತಿದ್ದೆವು. ಇವನು ಹೇಗೋ ಏನೋ ಎಂದು ಅನುಮಾನಿಸುವ ಪ್ರಸಂಗ ಬರುತ್ತಲೇ ಇರಲಿಲ್ಲ. ಬದುಕಿಗಾಗಿ ಬೆವರು ಸುರಿಸುವ ಒಳ್ಳೆಯ ಮನಸ್ಥಿತಿಯವರೇ ಇರುತ್ತಿದ್ದರಾ, ಅಥವಾ ಬದುಕಿನಲ್ಲೊಂದು ನಿಯತ್ತು ಇತ್ತಾ ಗೊತ್ತಿಲ್ಲ. ಈಗ ಮನೆಗೆ ಬಂದವರನ್ನು ಬನ್ನಿ ಕುಳಿತುಕೊಳ್ಳಿ ಹೇಳಲೂ ಭಯ. ತೀರಾ ಅಪರಿಚಿತರಾದರಂತೂ ಕಿಟಕಿಯಿಂದಲೇ ವ್ಯವಹಾರ ಮುಗಿಸಿಬಿಡಬೇಕು ಎಂದೆನ್ನಿಸುತ್ತದೆ.

ಯಾಕೆಂದರೆ ಮನಸ್ಥಿತಿ ಬದಲಾಗಿದೆ. ಯಾವಾಗ ಏನು ಬೇಕಾದರೂ ಘಟಿಸಿಬಿಡುತ್ತದೆ. ಒಳ್ಳೆಯವರು ಯಾರು ಕೆಟ್ಟವರು ಯಾರು ಅರಿಯುವುದಾದರೂ ಹೇಗೆ? ಯಾವ ರಗಳೆಯೇ ಬೇಡವೆಂದು ಎಲ್ಲರನ್ನೂ ದೂರ ಇಟ್ಟು ಬಿಡುವುದೇ ಉತ್ತಮ ಅನ್ನಿಸುತ್ತದೆ.

ಇಂಥದ್ದೇ ಒಂದು ಸಂದರ್ಭದಲ್ಲಿ ತೀರಾ ಇತ್ತೀಚಿಗೆ ಬಳೆಗಾರನೊಬ್ಬ ಮನೆಯ ಬಳಿ ಬಂದ. ಸೂರ್ಯ ಆಗಷ್ಟೇ ಮುಳುಗಿದ್ದ. ನನಗೆ ಅವನನ್ನು ಕಂಡಿದ್ದೇ ಈ ಕಾಲದಲ್ಲೂ ಬಳೆಗಾರ ಇದ್ದಾರ ಎಂದು ಆಶ್ಚರ್ಯ. ಅರೇ ಬಳೆಗಾರ ಎನ್ನುತ್ತ ಅದೇ ಹಳೆಯ ಆಪ್ಯಾಯತೆಯಲ್ಲಿ ಬನ್ನಿ ಒಳಗೆ ಎನ್ನುತ್ತಾ ಗೇಟು ತೆಗೆದಿದ್ದೆ. ಆ ಕ್ಷಣಕ್ಕೆ ಯಾವ ಅನುಮಾನಗಳೂ ನನ್ನ ಆವರಿಸಲೇ ಇಲ್ಲ. ಅವನೂ ಬರುತ್ತಲೇ ಅಂದ. ನನಗೆ ಈ ಊರು ಹೊಸದು ಯಾರೋ ಇಲ್ಲಿ ಹೋಗು ಬಳೆ ಖರೀದಿ ಮಾಡ್ತಾರೆ ಅಂದರಂತೆ. ಅದ್ಯಾವ ಪುಣ್ಯಾತ್ಮನೋ ಇಲ್ಲಿ ಬಳೆ ಖರೀದಿ ಮಾಡ್ತಾರೆ ಅಂದಿದ್ದು. ಬರೆದು ಕೊಟ್ಟ ಅಡ್ರೆಸ್ ಚೀಟಿ ತೆಗೆದು ಕೊಟ್ಟ. ಇದೇ ಊರಾ ಇದು ತಾಯೀ ಅಂದ. ಈ ಊರಿನ ಹೆಸರನ್ನು ಬರೆದು ಕೊಟ್ಟಿದ್ದು ಹೌದು. ಯಾರು ಎಂದು ಕೇಳಿದರೆ ಅವನಿಗೂ ಗೊತ್ತಿಲ್ಲ. ಕೇಳ್ಕೋತ್ತಾ ಕೇಳ್ಕೋತ್ತಾ ಬಂದೆ ಬಸ್ಸಿನವರು ಇಲ್ಲಿ ಇಳಿಸಿ ಹೋದ್ರು. ಅಲ್ಲೇ ಬಸ್ಟಾಂಡ್ ನಾಗೆ ಮಕ್ಕೊಂಡೆ. ಎನ್ನುತ್ತ, ತನ್ನ ಹಳೆಯ ನೆನಪುಗಳ ಹರವಿಕೊಂಡು ಗಂಟಿನೊಳಗಿನ ಬಳೆಯ ಸದ್ದಿನಷ್ಟೇ ಒತ್ತೊತ್ತಾಗಿ ಒಂದೇ ಸಮನೇ ಬಡಬಡಿಸತೊಡಗಿದ.

ನಾನು ಹಿಂದೆ ಬಳೆ ಮಾರೋವಾಗ ಇಷ್ಟು ಇಷ್ಟು ಚಿಕ್ಕವು ಇದ್ವು ಮಕ್ಕಳೆಲ್ಲ ಅಂತ ಕೈ ಎತ್ತರ ಹಿಡಿದು ತೋರಿಸುತ್ತಾ, ಈಗೆಲ್ಲ ಈಷ್ಟಿಟ್ಟೂದ್ದ ಬೆಳೆದು ಎರಡು ಮೂರು ಮಕ್ಕಳ ಹಡ್ದಾವೆ. ನಮ್ಮ ಕಾಲ್ದಾಗಿನೋರು ಯಾರಿಲ್ಲ ಅವ್ರ ಮಕ್ಕಳು ಅದಾರೆ. ಅಪ್ಪ ಇದ್ದಾಗ ಬರ್ತಿದ್ಯಾ ಅಂತ ಪ್ರೀತಿ ತೋರ್ಸಿತ್ತಾರೆ ಕೆಲವರು. ಇನ್ನೂ ಕೆಲವರು ಈಗ ಅವರ್ಯಾರಿಲ್ಲ ಹೋಗು ಎಂದು ದಬ್ಬ್ ನೇ ಬಾಗಿಲು ಹಾಕ್ತಾರೆ. ಎಲ್ಲೋ ಉಳಿದ ಆ ಒಂದು ಹಳೆಯ ಭಾಂದವ್ಯಕ್ಕೋಸ್ಕರ ಹೋಗ್ಬೇಕು ಅನ್ಸತೈತಿ. ಅವ್ರೇ ಈ ಕಡೆ ಹೋಗು ಯಾಪಾರ ಅಗ್ತದೆ ಅಂದ್ರು ಅದ್ಕೆ ಬಂದೆ, ಏನ್ ಮಾಡೋದು.
ಹಿಂಗೇ ಊರೂರು ಸುತ್ತೋದು ಯಾಪಾರ ಮಾಡೋದು ಇದೇ ಬದುಕು ನಮ್ದು ಅಂದ. ಸರಿ, ಕತ್ತಲಾಗಿದೆ ಇಲ್ಲೇ ಊಟಾ ಮಾಡಿ ಮಲ್ಕೋ ಬೆಳಿಗ್ಗೆ ಹೋಗುವಿಯಂತೆ ಅಂದೆ. ಈಗ ಶುರುವಾಗಿದ್ದು ನನ್ನ ಅಸಲೀ ಪರಿಸ್ಥಿತಿ.

ಹೊರಗೆ ಹೋದ ಯಜಮಾನ್ರು ಬಂದವರೇ, ಏನು ನಿಂದು ಯಾರ್ಯಾನೊ ಒಳಗೆ ಸೇರಿಸಬೇಡ ಅಂತ ಎಷ್ಟು ಸಲ ಹೇಳೋದು? ಆ ಕಾಲ ಅಲ್ಲ ಇದು ತಿಳ್ಕೋ ಅಂತ ಬೈದ್ರು. ನನಗೆ ಹೌದೆನ್ನಿಸಿದರೂ ಬಳೆಗಾರ ಎನ್ನುವ ಸಣ್ಣ ವ್ಯಾಮೋಹ ನನ್ನ ಅನಿವಾರ್ಯತೆಗೆ ದೂಡಿತ್ತು. ಎಲ್ಲವರೂ ಕೆಟ್ಟವರು ಅಂತ ನಾನು ಹೇಳ್ತಿಲ್ಲ ಅವನ ವಯಸ್ಸೆಷ್ಟು ಗೊತ್ತಾ ನಿಂಗೆ? ಈ ಚಳಿಗೆ ರಾತ್ರಿ ಏನಾದ್ರೂ ಉಸಿರು ನಿಂತ್ರೆ ಏನ್ ಮಾಡ್ತೀಯಾ.. ಹುಚ್ಚಲ್ವ ಇದು. ಏನಾದ್ರೂ ಮಾಡ್ಕೋ ಅಂತ ಅಸಹನೆ ತೋರಿಸಿ ಒಳನಡೆದರು. ಪುಣ್ಯ ಅವನಿಗೆ ಸರಿಯಾಗಿ ಕಿವಿ ಕೇಳಿಸ್ತಾ ಇರಲಿಲ್ಲ. ಅವರು ಬೈದಿದ್ದು ನನಗಷ್ಟೇ ಕೇಳಿಸಿತ್ತು. ಆತ ಅದೇ ಪೆದ್ದು ನೋಟದಲ್ಲಿ ಈಗ ಚಾ ಎಲ್ಲ ಬ್ಯಾಡಾ ಯಜಮಾನ್ರೆ ಅಂದ. ಇನ್ನಷ್ಟು ಕನಿಕರ ಉಕ್ಕಿ ಕಣ್ಣು ಹನಿ ಗೂಡಿತ್ತು.

ಆದ್ರೆ ಈಗ ನನಗೆ ಒಳಗೊಳಗೇ ನಡುಕ ಶುರುವಾಗಿತ್ತು. ಊಟ ಹಾಕ್ದೆ ಬಿಸಿನೀರು ಕೊಟ್ಟೆ. ಬೆಚ್ಚಗೆ ಮಲಗಲಿ ಅಂತ ಕಂಬಳಿ ಕೊಟ್ಟೆ. ಏನಾದ್ರೂ ಗುಳಿಗೆ ತಗೋಳೋದು ಇದ್ಯಾ ಅಂತ ಸನ್ನೆಯಲ್ಲೇ ಕೇಳಿದೆ. ಇಲ್ಲ ಅಂದ. ರಾತ್ರಿ ನಮ್ಮಿಬ್ಬರಿಗೂ ನಿದ್ದೆ ಇಲ್ಲ. ಯಾವಾಗ ಬೆಳಗಾಗುತ್ತದೋ ಇವನನ್ನು ಯಾವಾಗ ಕಳುಹಿಸುತ್ತೇನೋ ಅನ್ನುವ ಚಿಂತೆ. ನಾನೂ ನಮ್ಮನೆಯವರೂ ಎದ್ದೆದ್ದು ಹೋಗಿ ನೋಡ್ಕೊಂಡು ಬರ್ತಾ ಇದ್ವಿ, ಉಸಿರಾಟದ ಚಲನೆ ಇದೆಯಾ ಅಂತ. ಈಗ ಮಾನವೀಯತೆಗೂ ಕಾನೂನು ಬೇಕು. ಸುಮ್ ಸುಮ್ನೆ ಯಾರ್ಯಾಗೋ ಸಹಾಯ ಮಾಡ್ತಾ ಹೋಗೋದಲ್ಲ ಅದನ್ನು ಮೊದ್ಲು ತಿಳ್ಕೋ. ರಾತ್ರಿ ಎಲ್ಲ ಉಪದೇಶದ ಸುರಿಮಳೆ ಜೊತೆಗೆ ಭಯ.

ಅಂತೂ ಬೆಳಕು ಹರಿದಿತ್ತು. ಆಗಲೇ ಬಳೆಯ ಸದ್ದು. ಒಹ್ ಬಳೆಗಾರ ಎದ್ದಿದ್ದಾನೆ ಸದ್ಯ ಅಂತ ನಿಟ್ಟುಸಿರು ಬಿಟ್ಟೆ. ಚಹಾ ತಿಂಡಿ ಎಲ್ಲ ತಿಂದು ಹೊರಡುವಾಗ ಬಳೆ ತಗೋಳಿ ಅಂದ. ಅವಳ ಕೈಗೆ ಬಳೆ ನಿಲ್ಲೋದಿಲ್ಲ ಎನ್ನುವ ಮಾತು ಮತ್ತೆ ಬಂತು. ನಾ ತುಂಬಿದ್ರೆ ನಿಲ್ತದೆ ಅಂದ. ಇಲ್ಲ ನಾನು ಒಡೆಯದೇ ಇರೋ ಬಳೆ ಹಾಕೊಳ್ತೀನಿ ಈಗ ಅಂದೆ, ಈಸಲ ಅಷ್ಟೇನೂ ತಲೆ ಕೆಡಿಸಿಕೊಳ್ಳಲಿಲ್ಲ. ನಾನು ನನಗೆ ಬೇಕಾದ ಬಳೆಗಳನ್ನೆಲ್ಲ ಆರಿಸಿಕೊಳ್ಳುತ್ತಿದ್ದೆ. ದೂರದಲ್ಲಿ ಕುಳಿತು ಯಜನಮಾನರ ನೋಟ ಇತ್ತಲೇ ಇತ್ತು.

ಈ ಬಳೆಯ ಸದ್ದಿಗೆ ಋಷಿ ಮುನಿಗಳೂ ಮೋಹಗೊಂಡಿದ್ದಾರೆ. ಕವಿಗಳು ಬಳೆಯನ್ನೂ, ಬಳೆಗಾರನನ್ನೂ ಹಾಡಿ ಹೊಗಳಿದ್ದಾರೆ. ಹೆಣ್ಮಕ್ಕಳಷ್ಟೇ ಅಲ್ಲ ಗಂಡು ಮಕ್ಕಳೂ ತಮ್ಮ ಅಕ್ಕನಿಗೋ, ತಂಗಿಗೋ, ತಾಯಿಗೋ, ಪ್ರೇಯಸಿಗೋ ಮೊದಲ ಉಡುಗೊರೆಯಾಗಿ ತಂದು ಕೊಡುವುದು ಬಳೆಗಳನ್ನೇ ಅಂತೆ. ಹೆಂಡತಿ ಬಳೆ ಕೊಳ್ಳುವಾಗ ಬಹಳ ಆಸಕ್ತಿಯಿಂದಲೂ, ಅಪ್ಪ ತೀರಿಕೊಂಡಾಗ ಅಮ್ಮನ ಖಾಲಿ ಕೈಗಳನ್ನು ನೋವಿನಿಂದಲೂ, ಮಗಳು ಬಳೆ ಧರಿಸದೇ ನಡೆದಾಗ ಬದಲಾದ ಕಾಲವನ್ನು ಅಚ್ಚರಿಯಿಂದಲೂ, ನೋಡುವಂಥ ಹತ್ತು ಹಲವು ಭಾವ ಗಂಡಸರಲ್ಲೂ ಬಳೆಯ ಬಗ್ಗೆ ಇದೆ ಎನ್ನುವುದು ಸತ್ಯ ಅನ್ನಿಸಿತು. ಇದು ಕೇವಲ ಬಳೆಯಲ್ಲ ಬದುಕಿನ ಪ್ರೀತಿ. ಎಂದು ಇನ್ನಷ್ಟು ಆರಿಸಿಕೊಂಡೆ.

ಕೈಲಾಗದೇ ಇದ್ರೆ ಬಳೆ ತೊಟ್ಕೊಂಡು ಬಾ ಅನ್ನೋ ಹಂಗಿಸುವ ಮಾತಿಗೆ ಈಗ ಅರ್ಥ ಇಲ್ಲ ಬಿಡಿ. ಬಳೆ ಒಂದು ಭಾವ, ಬಳೆ ಒಂದು ಶಕ್ತಿ, ಬಳೆ ಒಂದು ಸೌಜನ್ಯ, ಶೃಂಗಾರ. ಕೆ ಎಸ್ ಎನ್ ಅವರ ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಹಾಡು ಗುನುಗಿಕೊಂಡಿತು ಮನಸು. ಆಗಲೇ ಅವನು ಪ್ರಶ್ನೆ ಎತ್ತಿದ್ದು. ನಿನ್ನ ತವರು ಮನೆ ಎಲ್ಲಿ ಎಂದು. ನಾನು ಹೇಳುತ್ತಿದ್ದಂತೆ ಓಹ್, ಮೊದ್ಲು ಕಾಯಂ ಹೋಗ್ತಿದ್ದೆ. ನೀವೆಲ್ಲ ಸಣ್ಣ ಸಣ್ಣ ಇದ್ರಿ. ಅಪ್ಪಾರು ಬಾಳ್ ಒಳ್ಳೆ ಜನ ಅಲ್ಲೇ ನಾನು ಉಳಿತಿದ್ದಿದ್ದು ಅಂದ. ನಿಜವೋ ಸುಳ್ಳೋ ಅದನ್ನು ಪರಿಶೀಲಿಸೋಕೆ ಹೋಗಲಿಲ್ಲ. ಸೀದಾ ಮನೆಗೆ ಹೋಗು ಮತ್ತೆ ತಿರುಗಬೇಡ ಅಂದೆ. ಆಯ್ತು ಅಂತ ಹೊರಟ‌. ನಾಲ್ಕು ವರ್ಷ ಸತತವಾಗಿ ಬಂದ. ಬರುವಾಗಲೇ ತವರಿಗೆ ಹೋಗಿದ್ದೆ ಅನ್ನುವುದೇ ಅವನ ಮೊದಲ ಮಾತು. ಅದಕ್ಕೆ ಸೋತು ನಾನೂ ಒಳಗೆ ಬಿಟ್ಟುಕೊಳ್ಳುವುದು. ಮತ್ತದೇ ಭಯ, ಮತ್ತೆ ಬೈಸಿಕೊಳ್ಳುವುದು.

ಒಂದಿನ ಅವನು ಹೊರಟಾಗ ಸ್ವಲ್ಪ ಗಟ್ಟಿಯಾಗಿ ನಾನೂ ಅವರೂ ಹೇಳಿದ್ದಾಯ್ತು. ಮತ್ತೆ ಹೀಗೆ ಬರಬೇಡಾ, ನಿನಗೆ ವಯಸ್ಸಾಗಿದೆ ಬಳೆ ಮಾರಿದ್ದು ಸಾಕು, ಏನಾದರೂ ಹೆಚ್ಚು ಕಮ್ಮಿ ಆದ್ರೆ ಏನು ಗತಿ. ನಿಮ್ಮನೆಯಲ್ಲಿ ಯಾರದ್ದಾದರೂ ನಂಬರ್ ಕೊಡು ಫೋನ್ ಮಾಡಿ ಹೇಳ್ತೀನಿ ಅಂದರು ರಾಯರು

ಕೂತು ಉಣ್ಬಾರ್ದು, ಕೂತ್ಕೊಂಡ್ಬಿಟ್ರೆ ಶರೀರ ಹಿಡ್ಕೊಂಡು ಬಿಡ್ತದೆ. ಹಿಡ್ಕೊಂಡ್ಮೆಲೇ ಹಿಡಿ ಮಣ್ಣು ಹಾಕೋದೆ ಅಂತ ಎದ್ದು ಹೋದ. ಮತ್ತೆ ಬರಲೇ ಇಲ್ಲ ಆತ. ಬಳೆಯ ರಿಂಗಣದಲೀಗ ಕದಲದ ನೆನಪು.