ಈ ಮಳೆಯೋ ಜೀವ ಸಂಕುಲವನ್ನು ಉಳಿಸಲೆಂದೇ ದೇವರು ಬಂದಂತೆ ಪ್ರತೀ ವರ್ಷ ನಮ್ಮ ಮೇಲೆ ನಂಬಿಕೆಯಿಟ್ಟು ಬರುತ್ತದೆ. ಅದು ಕೊಡುವ ಖುಷಿಯಿಂದ ಕವನವೊಂದು ಮೊಳಕೆಯೊಡೆದರೆ ಆ ಸಾಲುಗಳನ್ನು ಯಾರೊಡನೆ ಹಂಚಿಕೊಳ್ಳಬೇಕು ಎಂದು ತಿಳಿಯದೇ ಮನಸ್ಸು ತಬ್ಬಿಬ್ಬಾಗುತ್ತದೆ. ಎಲ್ಲಿಯೂ ಹರಿದು ಹೋಗಲು ಒಂದಿಷ್ಟು ಜಾಗವಿಲ್ಲದೇ, ಬಂಧಿಯಾದಂತೆ ಚಡಪಡಿಸುವ ಮಳೆನೀರಿಗೆ ‘ಪ್ರವಾಹ’ವೆಂಬ ನಾಮಕರಣವಾಗಿದೆ. ಆದರೂ ಈ ಮಳೆಯೋ ನಿಸ್ವಾರ್ಥಿ ಪ್ರೇಮಿಯಂತೆ ನಮ್ಮನ್ನು ಹಚ್ಚಿಕೊಂಡು, ಮುದ್ದಿಸುತ್ತ ಸುಮ್ಮನೇ ಸುರಿಯುತ್ತಿದೆ. ನಮ್ಮ ಬೈಗುಳಗಳನ್ನು ಆಲಿಸುತ್ತಾ ಬೇಸರದಿಂದ ಮಳೆಯು ಕೇಳುತ್ತಿರುವ ಪ್ರಶ್ನೆಗಳು ಕಿವಿಗೆ ಬೀಳುತ್ತಿವೆಯೇ. ಅವು ತಣ್ಣಗೆ ಇರಿದಂತೆ ಭಾಸವಾಗುತ್ತಿದೆಯಲ್ಲ..
ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ನಿಮ್ಮ ಇಂದಿನ ಓದಿಗಾಗಿ.

ಖುಷಿಯಾಗಿರುವುದು ಹೇಗೇ..

ದೊಡ್ಡಪ್ಪನ ಜೊತೆಗೆ ನದಿ ಬದಿಗೆ ಹೋಗಿ ವಿಡಿಯೊಗಳನ್ನು ಮಾಡಿಕೊಂಡು ಬಂದಿದ್ದ ಅಶ್ವಿನಿ ಯೋಚಿಸುತ್ತಿದ್ದಳು. ನದಿಯು ತುಂಬಿ ಸಮಾಧಿ ಕಲ್ಲಿನ ಗದ್ದೆಗೆ ಪ್ರವಾಹದ ನೀರು ಬಂದ ಕೂಡಲೇ ಊರಿನವರೆಲ್ಲ ನದಿ ಪ್ರವಾಹಕ್ಕೆ ಹೂವುಗಳನ್ನು ಅರ್ಪಿಸಿ ದೀಪ ಹಚ್ಚಿ ನಮಸ್ಕರಿಸಿ ಬರುತ್ತಿದ್ದರು. ಬೆಂಗಳೂರಿನಲ್ಲಿ ಒಂದೇ ದಿನದ ಮಳೆಗೆ ರಸ್ತೆಯಿಂದ ನೀರು ಮನೆಯೊಳಗೆ ನುಗ್ಗುವುದನ್ನು ನೋಡುತ್ತಿದ್ದ ಅಶ್ವಿನಿಗೆ ಈ ಪರಿಪಾಠದ ಅರಿವಿರಲಿಲ್ಲ. ಇಷ್ಟು ವರ್ಷವೂ ‘ಊರಲ್ಲಿ ಮಳೆ ಹೇಗೆ’ ಎಂದು ಫೋನ್ ನಲ್ಲಿ ಕೇಳುತ್ತ, ಮಳೆಗಾಲದಲ್ಲಿ ಹಬ್ಬವೋ, ಕಾರ್ಯವೋ ಇದ್ದರಷ್ಟೇ ಊರಿಗೆ ಬರುತ್ತಿದ್ದ ಅವಳಿಗೆ ಈ ಬಾರಿ ವರ್ಕ್ ಫ್ರಮ್ ಹೋಮ್ ಎಂಬ ಅವಕಾಶ ದೊರೆತಿತ್ತು. ಆದ್ದರಿಂದ ಇದನ್ನೆಲ್ಲ ಗಮನಿಸುವಷ್ಟು ಪುರುಸೊತ್ತು ಸಿಕ್ಕಂತಾಗಿದೆ. ಕಳೆದ ವರ್ಷವೂ ಹೀಗೆಯೇ ಮಳೆಯನ್ನು ಗಮನಿಸಿದ್ದಳು. ಹಳೆ ಫೋಟೊಗಳು, ವಿಡಿಯೊಗಳು ಮತ್ತು ಹೊಸದಾಗಿ ಮಾಡಿಕೊಂಡ ವಿಡಿಯೊಗಳನ್ನೆಲ್ಲ ನೋಡುತ್ತಖುಷಿಯ ಕುರಿತು ಯೋಚನೆಗಳು ಹಾದು ಹೋಗುತ್ತಿದ್ದವು. ‘ಖುಷಿಯಾಗಿ ಇರುವುದು ಹೇಗೆ, ದೊಡ್ಡಪ್ಪ ಈ ಮಳೆ ನೋಡಿ ಇಷ್ಟೊಂದು ಸಂಭ್ರಮ ಪಡುತ್ತಿದ್ದಾರಲ್ಲಾ..’ ಎಂದುಕೊಳ್ಳುತ್ತ ವಿಡಿಯೊಗಳನ್ನು ಪುಟ್ಟದಾಗಿ ಕತ್ತರಿಸಿ ಅವುಗಳನ್ನು ಇನ್ ಸ್ಟಗ್ರಾಂಗೆ ಅಪ್ ಲೋಡ್ ಮಾಡುತ್ತಿದ್ದಳು.

ದೊಡ್ಡಪ್ಪ ಮನೆಯಲ್ಲಿ ನ್ಯೂಸ್ ಚಾನೆಲ್ ನೋಡಲು ಬಿಡುತ್ತಿರಲಿಲ್ಲ.’ಅಲ್ಲಿ ಬೆಂಗಳೂರಲ್ಲಿ ಏನು ಅವಾಂತರವಾಗಿದೆಯೋ ಏನೋ.. ನ್ಯೂಸ್ ಹಾಕಿ ದೊಡ್ಡಪ್ಪ’ ಎಂದರೂ, ‘ಅದನ್ನೆಲ್ಲ ಪೇಪರ್ ನಲ್ಲೋ ಮೊಬೈಲ್ ನಲ್ಲೋ ತಿಳಕೋ. ಮಳೆಗೆ ಅಷ್ಟೊಂದು ಬೈಯ್ಯುವ ಪದಗಳು ನಮ್ಮ ಮನೆಯಲ್ಲಿ ಮೊಳಗುವುದೇ ಬೇಡಪ್ಪಾ’ ಎಂದು ಸೀರಿಯಲ್ ಬರುತ್ತಿದ್ದ ಚಾನೆಲ್ ಹಾಕಿದರು. ಒಟ್ಟಾರೆ ಈ ಮಳೆ ಬಂದರೆ ಒಬ್ಬರಿಗೆ ಕಷ್ಟ,ಮತ್ತೊಬ್ಬರಿಗೆ ನಷ್ಟ, ಮಗದೊಬ್ಬರಿಗೆ ಇಷ್ಟ.

ಹೀಗೆ ಆ ಊರಿನ ಸಂಭ್ರಮನ್ನು ಕಂಡು ತಾನೂ ಖುಷಿಯಾಗಿದ್ದೇನೆ ಎಂದು ಅವಳಿಗೆ ಅನಿಸಿತು. ಪುಟಾಣಿ ಕವನಗಳಂತಹ ಸಾಲುಗಳನ್ನು ತನ್ನ ಮೊಬೈಲ್ ನೋಟ್ಸ್ ನಲ್ಲಿ ಟೈಪಿಸಿದಳು. ತಂತಿಯ ಮೇಲೆ ಸಾಲಾಗಿ ವಜ್ರದ ಹರಳುಗಳಂತೆ ಹೊಳೆಯುತ್ತಿರುವ ಹನಿಗಳ ಕುರಿತು ಬರೆದ ಕವನವನ್ನು ಕಾಪಿ ಮಾಡಿ, ವಾಟ್ಸಾಪ್ ನಲ್ಲಿ ಗೆಳತಿಗೆ ಕಳಿಸಿದರೆ, ಅವಳು ತನ್ನಮನೆಯಿರುವ ಕಾಲೊನಿಯಲ್ಲಿ ತುಂಬಿರುವ ಕೆಂಪು ನೀರಿನ ಫೋಟೋ ಹಾಕಿದಳು. ಅಶ್ವಿನಿಗೆ ಎದೆ ಧಸಕ್ಕೆಂದಿತು. ಪಾರ್ಕ್ ಮಾಡಿದ್ದ ಸ್ಕೂಟಿ ಅಷ್ಟು ದೂರ ತೇಲಿ ಹೋಗಿತ್ತು. ಸಹಜೀವಿಗಳು, ಸ್ನೇಹಿತರು ಅಲ್ಲೆಲ್ಲೋ ಪಡಿಪಾಟಲು ಪಡುತ್ತಿರುವಾಗ, ತಾನು ಖುಷಿಯಾಗಿರುವುದು ತಪ್ಪಾಯಿತೇನೋ ಎಂದು ಒಂದು ಕ್ಷಣ ಮನದೊಳಗೆ ಯೋಚನೆ ಹಾದು ಹೋಯಿತು.

‘ದೇಶ ಕಾಲ ಯಾವುದೆ ಇರಲಿ, ಜಗತ್ತಿನಲ್ಲಿ ಕೆಲವು ವಿಚಾರಗಳು ಸಮಾನವಾಗಿರುತ್ತದೆ. ಸರಳ ಸತ್ಯವಾಗಿರುತ್ತವೆ. ಅವುಗಳನ್ನು ಮನುಷ್ಯನೇ ಕ್ಲಿಷ್ಟಗೊಳಿಸಿಕೊಂಡು, ಕೊನೆಗೆ ಬದುಕನ್ನೂ ಕಷ್ಟವಾಗಿಸಿಕೊಳ್ಳುತ್ಥಾನೆ’ ಎಂದು ದೊಡ್ಡಪ್ಪ ಮಾತು ಶುರು ಮಾಡಿದರು: ಮನೆಗೆ ಬರುವವರಿಗೆ ಕುಳಿತುಕೊಳ್ಳುವುದಕ್ಕೆ ತುಸು ಅವಕಾಶ, ಕುಡಿಯಲು ತಿನ್ನಲು ತಿನಿಸು, ನೀರು ಕೊಡುವುದಿಲ್ಲವೇ. ಈ ಮಳೆಯೋ ನಮ್ಮ ಜೀವ ಸಂಕುಲವನ್ನು ಉಳಿಸಲೆಂದೇ ದೇವರು ಬಂದಂತೆ ಪ್ರತೀ ವರ್ಷ ನಮ್ಮ ಮೇಲೆ ನಂಬಿಕೆಯಿಟ್ಟು ಬರುತ್ತದೆ. ಹಾಗಾದರೆ ಮಳೆನೀರು ಹರಿದು ಹೋಗುವುದಕ್ಕೆ ಒಂದಿಷ್ಟು ಜಾಗವನ್ನುಕಲ್ಪಿಸಿದ ಬಳಿಕ ನಾವು ಮನೆ ಮಠ ಮಾಡಿಕೊಳ್ಳಬೇಕಲ್ಲವೇ. ಈಗಿನ ಪರಿಸ್ಥಿತಿ ನೋಡಿ ನಾನು ಬೇಡದ ಅತಿಥಿಯೇ. ಎಂದು ಮಳೆಗೆ ಅನಿಸಿರಬಹುದಲ್ಲ?’ ಎಂದು ಪ್ರಶ್ನಿಸಿದರು. ಪ್ರಶ್ನೆಯೆಂದರೆ ಅದಕ್ಕಾಗಿ ಉತ್ತರದ ನಿರೀಕ್ಷೆಯಲ್ಲೇನೂ ಅವರು ಇರಲಿಲ್ಲ.

ಅಶ್ವಿನಿ ಮೊಬೈಲ್ ನಲ್ಲಿ ಮುಳುಗಿ ಇನ್ ಶಾರ್ಟ್ ನಲ್ಲಿ ಸುದ್ದಿಯನ್ನು ಓದುತ್ತಿದ್ದಳು. ಅಸ್ಸಾಂನಲ್ಲಿ ಭಾರೀ ಮಳೆಯಾಗಿ ಲಕ್ಷಗಟ್ಟಲೆ ಜನರು ನೆಲೆ ಕಳೆದುಕೊಂಡ ಸುದ್ದಿಯಿತ್ತು. ಅವಳು ಹಿಂದೊಮ್ಮೆ ಭೇಟಿ ನೀಡಿದ್ದ ಮಟ್ಮೋರಾ ಎಂಬ ಪ್ರದೇಶವದು. ಮಿಶಿಂಗ್ ಎಂಬ ಬುಡಕಟ್ಟುಸಮುದಾಯದವರೇ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಿಶಿಂಗ್, ಅಹೋಮ್ ಮತ್ತು ಚುಟಿಯಾ ಸಮುದಾಯದ ಜನರಿಗೆ ಪ್ರತೀ ವರ್ಷ ಪ್ರವಾಹದಿಂದ ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂಬ ಕೌಶಲ ಅವರ ಜೀವನ ಪದ್ಧತಿಯಲ್ಲಿಯೇ ಸೇರಿ ಹೋಗಿದೆ.

‘ಖುಷಿಯಾಗಿ ಇರುವುದು ಹೇಗೆ, ದೊಡ್ಡಪ್ಪ ಈ ಮಳೆ ನೋಡಿ ಇಷ್ಟೊಂದು ಸಂಭ್ರಮ ಪಡುತ್ತಿದ್ದಾರಲ್ಲಾ..’ ಎಂದುಕೊಳ್ಳುತ್ತ ವಿಡಿಯೊಗಳನ್ನು ಪುಟ್ಟದಾಗಿ ಕತ್ತರಿಸಿ ಅವುಗಳನ್ನು ಇನ್ ಸ್ಟಗ್ರಾಂಗೆ ಅಪ್ ಲೋಡ್ ಮಾಡುತ್ತಿದ್ದಳು.

ಈಶಾನ್ಯ ರಾಜ್ಯಗಳ ಜೈವಿಕ ಪರಿಸರದ ಕುರಿತು ಕೆಲಸ ಮಾಡುವ ‘ಅರಣ್ಯಕ್’ ಎಂಬ ಸಂಘಟನೆಯು ಈ ಸಮುದಾಯಗಳಿಗೆ ಒಲಿದಿರುವ ಕೌಶಲದ ಬಗ್ಗೆ ಅಧ್ಯಯನ ನಡೆಸಿದೆ. ಮಿಶಿಂಗ್ ಸಮುದಾಯದವರು ಮನೆ ಕಟ್ಟುವ ವಿಧಾನದ ಕೇಂದ್ರ ಬಿಂದುವೇ ಪ್ರವಾಹ. ಪ್ರವಾಹ ಬಂದರೆ ಮನೆ ಹೇಗೆ ಭದ್ರವಾಗಿರಬೇಕು, ಅಥವಾ ನಷ್ಟ ಕಡಿಮೆಯಾಗಿರಬೇಕು- ಎಂದು ಆಲೋಚಿಸಿ ಪ್ಲಾನ್ ಮಾಡುತ್ತಾರೆ. ಮಕ್ಕಳಿಗೆ ಊಟ ಸ್ನಾನ ಮುಂತಾದವುಗಳನ್ನು ಕಲಿಸಿದಂತೆಯೇ ಈಜುವುದು ಕೂಡ ಬದುಕಿನ ಅವಿಭಾಜ್ಯ ಅಂಗ ಎಂದು ತಿಳಿಸಿಕೊಡುತ್ತಾರೆ. ಒಬ್ಬರು ಈಜುತ್ತ ಇತರರನ್ನು ಹೇಗೆ ಬಚಾವ್ ಮಾಡಬೇಕು ಎಂಬುದನ್ನುಕಲಿಸುತ್ತಾರೆ. ಮಳೆಗಾಲಕ್ಕೆ ಮುನ್ನವೇ ಬಾಳೆದಿಂಡಿನ ತೆಪ್ಪಗಳನ್ನು ಸಿದ್ಧಪಡಿಸಿಕೊಂಡು, ತೇಲುವ ಮರದ ಹಲಗೆಗಳನ್ನು ಸಿದ್ಧವಿಟ್ಟುಕೊಂಡು, ನೀರು ಹರಿದು ಹೋಗಲು ಸೂಕ್ತ ಕಾಲುವೆಗಳನ್ನು ಮಾಡಿಕೊಂಡು, ಮಳೆಗಾಲವನ್ನು ಬರಮಾಡಿಕೊಳ್ಳುತ್ತಾರೆ. ಪ್ರಕೃತಿ ವಿಕೋಪದ ಕುರಿತು ತಮ್ಮದೇ ಆದ ಜ್ಞಾನ ಹೊಂದಿದ್ದಾರೆ.

ಹೆಚ್ಚು ಸಂವಹನ ಸಂಪರ್ಕ ಇಲ್ಲದ ಊರಾದ್ದರಿಂದ, ಪ್ರವಾಹದ ಉಪಗ್ರಹ ಆಧರಿಸಿ ನೀಡುವ ಪ್ರವಾಹ ಮುನ್ನೆಚ್ಚರಿಕೆ ಅಲ್ಲಿಗೆ ಬೇಗನೇ ತಲುಪುವುದಿಲ್ಲ. ಅವರು ಮಾವಿನ ಮರದಲ್ಲಿ ಹೂಬಿಡುವುದನ್ನು ಗಮನಿಸಿ ಪ್ರವಾಹದ ಮುನ್ಸೂಚನೆ ನಿರ್ಧರಿಸಬಲ್ಲರು. ಮಾಘ ಮಾಸದ ಅಷ್ಟಮಿಯ ಸಂದರ್ಭ ಅಂದರೆ ಜನವರಿ ಮೂರನೇ ವಾರದ ಸುಮಾರಿಗೆ, ಬೀಳುವ ಮಳೆಯು ಪ್ರವಾಹದ ಮುನ್ಸೂಚನೆ ಎಂದು ನಂಬುತ್ತಾರೆ. ಅಷ್ಟೇ ಅಲ್ಲ, ಕೊಟ್ಟಿಗೆಯಲ್ಲಿ ಕಟ್ಟಿದ ಹಸುಗಳು ಯದ್ವಾತದ್ವಾ ವರ್ತಿಸಿದರೆ ಬಿರುಗಾಳಿಯೋ, ಪ್ರವಾಹವೋ ಬರಲಿದೆ ಎಂದು ಗೊತ್ತಾಗುವುದು. ಗುರುಬಿಹು ಅಥವಾ ಬೊಹಾಗ್ ತಿಂಗಳ ಮೊದಲ ದಿನ ,ಅಂದರೆ ನಮ್ಮ ಸೌರಯುಗಾದಿಯ ಸಂದರ್ಭದಲ್ಲಿ ಕೊಟ್ಟಿಗೆಯಲ್ಲಿ ಹಸುಕರುಗಳ ವರ್ತನೆಯನ್ನು ಅವರು ಸೂಕ್ಷ್ಮವಾಗಿ ಗಮನಿಸಿ ಮಳೆಗಾಲದ ಭರಾಟೆ ಹೇಗಿರಬಹುದು ಎಂದು ಅಂದಾಜು ಮಾಡುತ್ತಾರೆ. ಅಂದು ಹಸುಗಳು ಸಮಾಧಾನದಿಂದ ಮಲಗಿ ಮೆಲುಕು ಹಾಕುತ್ತಾ ಇದ್ದರೆ ಪ್ರವಾಹದ ಚಿಂತೆಯಿಲ್ಲ ಎಂದರ್ಥ. ಇನ್ನು ನಮ್ಮ ಹಳ್ಳಿಗಳಲ್ಲಿರುವಂತೆಯೇ, ಕಪ್ಪೆಯ ಕೂಗನ್ನು ಗಮನಿಸಿ ಮಳೆಯನ್ನು ಲೆಕ್ಕ ಹಾಕುತ್ತಾರೆ. ಆದರೆ ಹೀಗೆ ಅಧ್ಯಯನದಲ್ಲಿ ದಾಖಲಾದ ಅಂಶಗಳನ್ನು ಹಿರಿಯ ತಲೆಮಾರಿನವರು ಮಾತ್ರ ಬಲ್ಲರು.

ಸಮುದಾಯದ ಹೊಸ ತಲೆಮಾರಿನವರು ಹೆಚ್ಚು ಶಿಕ್ಷಣ ಪಡೆದಿದ್ದಾರೆ. ಆದ್ದರಿಂದ ಈ ನಂಬಿಕೆಗಳನ್ನು ನೆನಪಿಸಿಕೊಳ್ಳುವ ಗೊಡವೆಗೆ ಹೋಗುತ್ತಿಲ್ಲ. ಮಟ್ಮೋರಾ ಪ್ರದೇಶದಲ್ಲಿ ಮೊಬೈಲ್ ಗಳು ಪ್ರವೇಶಿಸಿದ ಬಳಿಕ, ಪ್ರವಾಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಎದುರಿಸಲು ಜನರೆಲ್ಲ ಸೇರಿ ತಂಡಗಳನ್ನು ಕಟ್ಟಿಕೊಂಡಿದ್ದಾರೆ.

ಹಾಗೆ ನೋಡಿದರೆ ಈ ನಂಬಿಕೆಗಳೆಲ್ಲ ಪ್ರಕೃತಿಯ ಜೊತೆಗೆ ಬದುಕುವ ಎಲ್ಲರ ಬಳಿ ಈಗಲೂ ಜೀವಂತವಾಗಿದೆ. ಹಕ್ಕಿಯ ಉಲಿಯನ್ನು ಆಲಿಸಿ, ದೂರದಲ್ಲಿ ಹುಲಿರಾಯ ಬರುತ್ತಿದ್ದಾನೋ ಇಲ್ಲವೋ ಎಂದು ಹೇಳುವ ಜ್ಞಾನವನ್ನು ಅರಣ್ಯದ ಆಸುಪಾಸಿನಲ್ಲಿರುವ ಜನರು ಇಂದಿಗೂ ಅರಿತಿಲ್ಲವೇ.

ಹಳ್ಳಿಗಳ ಜ್ಞಾನದ ಬಗ್ಗೆ ಗೌರವ ಹೊಂದಿದವರು ದೆಹಲಿಯ ಸರಕಾರೇತರ ಸಂಸ್ಥೆ ಹಝಾರ್ಡ್ಸ್ ಕೇಂದ್ರದ ದುನು ರಾಯ್. ಬಾಂಬೇ ಐಐಟಿಯಲ್ಲಿ ಅವರು ಓದುತ್ತಿದ್ದಾಗ, 1967ರಲ್ಲಿ ಮಹಾರಾಷ್ಟ್ರದ ಕೊಯ್ನಾ ನಗರದಲ್ಲಿ ಭೂಕಂಪ ಸಂಭವಿಸಿತು. ಪರಿಹಾರ ಕಾರ್ಯಾಚರಣೆಯಲ್ಲಿ ಸ್ವಯಂಸೇವಕರಾಗಿ ಭಾಗವಹಿಸಲು ಐಐಟಿ ವಿದ್ಯಾರ್ಥಿಗಳ ತಂಡ ಭೂಕಂಪದಿಂದ ಕುಸಿದು ಹೋಗಿದ್ದ ಆ ಊರಿಗೆ ಭೇಟಿ ನೀಡಿತು. ಅದೇ ತಂಡದಲ್ಲಿ ದುನು ರಾಯ್ ( ಆಗ ಅವರ ಹೆಸರು ಅನುಬ್ರೊಟ್ಟೊ ಕುಮಾರ್ ರಾಯ್) ಕೂಡ ಇದ್ದರು. ವಿಜ್ಞಾನದ ಪ್ರಗತಿಯನ್ನು, ಭೂಕಂಪ ಆದಾಗ ಮನೆಮಠ ಜೀವ ಹಾನಿಯಾಗದಂತೆ ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ತಂತ್ರಗಾರಿಕೆಯನ್ನು ಆ ಊರಿನವರಿಗೆ ಬೋಧಿಸಲು ಅವರ ತಂಡ ಉತ್ಸಾಹದಿಂದ ಸಜ್ಜಾಗಿತ್ತು. ಆದರೆ ಅಲ್ಲಿ ಗ್ರಾಮಸ್ಥರನ್ನು ಭೇಟಿಯಾಗಿದ್ದೇ ಅವರ ಉತ್ಸಾಹವೆಲ್ಲ ಜರ್ರನೆ ಇಳಿದು ಹೋಗಿತ್ತು. ಯಾಕೆಂದರೆ ಭೂಕಂಪದ ಬಗ್ಗೆ, ಮಳೆಯ ಹುಚ್ಚಾಟದ ಬಗ್ಗೆ, ನೀರು ಮಾಡಬಹುದಾದ ಯಡವಟ್ಟುಗಳ ಬಗ್ಗೆ ಗ್ರಾಮಸ್ಥರಿಗೆ ಚೆನ್ನಾಗಿ ತಿಳಿದಿತ್ತು. ನಮ್ಮದೇ ಮನೆಯ ಮಕ್ಕಳು ಹುಚ್ಚಾಪಟ್ಟೆ ಕುಣಿದು ಕುಪ್ಪಳಿಸಿದಾಗ ಸುಮ್ಮನಿರುವ ದೊಡ್ಡವರಂತೆ, ಆ ಗ್ರಾಮಸ್ಥರು ಮಳೆಯ ಭರಾಟೆಯನ್ನು ಪ್ರವಾಹದ ಅಬ್ಬರವನ್ನು, ಭೂಕಂಪದ ನಷ್ಟವನ್ನು ಗ್ರಹಿಸಬಲ್ಲವರಾಗಿದ್ದರು. ಮಳೆಯನ್ನು, ಭೂಮಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಆರಾಧಿಸುತ್ತಿದ್ದರು. ನಿಜಕ್ಕೂ ಅಲ್ಲಿಗೆ ಬಂದ ಸ್ವಯಂ ಸೇವಕರಿಗೆ ಗ್ರಾಮಸ್ಥರ ಬಳಿಯಿದ್ದ ಜ್ಞಾನವೇ ಪಾಠವಾಯಿತು. ದುನುರಾಯ್ ತಮ್ಮ ಜೀವನವನ್ನು ಗ್ರಾಮಗಳ ಅಭಿವೃದ್ಧಿ ಚಟುವಟಿಕೆಗಳಿಗೆ ಮೀಸಲಿಟ್ಟರು.

ಪ್ರವಾಹಗಳ ಬಗ್ಗೆ ದುನುರಾಯ್ ಹೇಳುವ ಮಾತು ಸಾಂದರ್ಭಿಕವೆನಿಸುತ್ತದೆ: ಪ್ರವಾಹ ಪೀಡಿತ ಪ್ರದೇಶದಲ್ಲಿ ವಾಸಿಸುವ ಜನರು ಪ್ರವಾಹ, ಮಳೆ, ಮತ್ತು ನದಿಯ ಏರಿಳಿತವನ್ನು ಅರ್ಥ ಮಾಡಿಕೊಂಡಿರುತ್ತಾರೆ. ಈ ಜ್ಞಾನವು ಅವರಿಗೆ ತಲೆತಲಾಂತರದಿಂದ ಬಂದಿರುವುದು. ತಮ್ಮ ಜನ ಜಾನುವಾರು ರಕ್ಷಣೆಯ ಮಾರ್ಗಗಳನ್ನು ಅವರು ಹಿರಿಯರಿಂದ ಅರ್ಥ ಮಾಡಿಕೊಂಡಿದ್ದಾರೆ. ಹಿಂದೆಲ್ಲ ಅವರು ಹಲವಾರು ವರ್ಷಗಳಿಂದ ನೆರೆ ಬರಲಿ ಎಂದು ವರ್ಷವಿಡೀ ಹಾರೈಸುತ್ತಿದ್ದರು. ಯಾಕೆಂದರೆ ಪ್ರವಾಹದ ಜತೆಗೆ ಹೊಸ ಹೂಳು ಮಣ್ಣು ಬಂದುಫಲವತ್ತತೆ ಹೆಚ್ಚಿಸುತ್ತದೆ. ಅವು ಹೆಚ್ಚು ದಿನಗಳ ಕಾಲ ಉಳಿಯುವ ಪ್ರವಾಹ ಆಗಿರಲಿಲ್ಲ. ಅತಿಥಿಯಂತೆ ಬಂದು ಒಂದೆರಡು ದಿನಗಳಷ್ಟೇ ಉಳಿದು,ಬಳಿಕ ಇಳಿದು ಹೋಗುತ್ತಿದ್ದವು. ಇನ್ನೂ ಹೇಳಬೇಕೆಂದರೆ ಗ್ರಾಮಸ್ಥರು ಈ ಪ್ರವಾಹವನ್ನು ವಿಕೋಪ ಎಂದು ಪರಿಗಣಿಸುತ್ತಲೇ ಇರಲಿಲ್ಲ. ಆದರೆ ಇತ್ತೀಚೆಗೆ ಪ್ರವಾಹವನ್ನು ನಿರೀಕ್ಷಿಸುವ ಮತ್ತು ಅದು ಬಂದಾಗ ಅದನ್ನು ನಿಭಾಯಿಸುವ ಸಾಂಪ್ರದಾಯಿಕ ಜ್ಞಾನವನ್ನು ಹೆಚ್ಚಿನ ಜನರು ಕಳೆದುಕೊಂಡಿದ್ದಾರೆ. ಪ್ರವಾಹ ಬಂದಾಗ ಅವರೆಲ್ಲ ಸುರಕ್ಷತೆಯ ಜಾಗಕ್ಕೆ ಹೋಗಲು ಯತ್ನಿಸಿ ಸರಕಾರದ ಪರಿಹಾರ ಮತ್ತು ಪುನರ್ವಸತಿಗಾಗಿ ಕಾಯುತ್ತಾ ಕೂರುತ್ತಾರೆ. ಕಾರಣವನ್ನು ಗುರುತಿಸಿ ಬಗೆಹರಿಸುವ ಗೊಡವೆಗೆ ಹೋಗುವುದಿಲ್ಲ.

ಹೌದು. ಯಾಕೆಂದರೆ ಬಂದ ಪ್ರವಾಹವು ಇಳಿದು ಹೋಗಲು ಜಾಗವಾದರೂ ಎಲ್ಲಿದೆ ?