ಒಮ್ಮೆ ಸೀರಿಯಸ್ಸಾಗಿ ನೋಟ್ಸ್ ಕರೆಕ್ಷನ್ ಮಾಡುತ್ತಾ ಕುಳಿತಿದ್ದೆ. ಆಗ ಇದ್ದಕ್ಕಿದ್ದಂತೆ ಜಗದೀಶ, ಜೋರು ಧ್ವನಿಯಲ್ಲಿ ಟೇಬಲ್ ಬಡಿಯುತ್ತಾ “ಚೆಲ್ಲಿದರೂ ಮಲ್ಲಿಗೆಯಾ… ಬಾಣಾಸೂರೇರೀ ಮ್ಯಾಲೆ…” ಅಂತ ಹಾಡತೊಡಗಿದ. ತಲೆ ಎತ್ತಿ ನೋಡಿದರೆ, ಅವ ಈ ಲೋಕದಲ್ಲಂತು ಇರಲಿಲ್ಲ. ಇದ್ದಕ್ಕಿದ್ದಂತೆ ಅವ ಪೆಚ್ಚಾದ. ಮಕ್ಕಳೆಲ್ಲ ಗೊಳ್ ಎಂದು ನಗತೊಡಗಿದರು. ಬಹುಶಃ ಬೇರೆಯ ಹೊತ್ತಾಗಿದ್ದರೆ ನಾನೂ ಅವನೊಂದಿಗೆ ಸೇರಿ ಯುಗಳ ಗೀತೆ ಹಾಡುತ್ತಿದ್ದೆನೇನೋ. ಆದರೆ ಈಗಿನ ಸಂದರ್ಭ ಅದಕ್ಕೆ ಪೂರಕವಾಗಿರಲಿಲ್ಲವಾಗಿ ಅವನನ್ನು ಸುಮ್ಮನಿರಿಸಿ ತೆಪ್ಪಗೆ ಕೂರುವಂತೆ ಮಾಡಿದೆ. ಪಾಪ ಈ ಮಕ್ಕಳನ್ನ ತೆಪ್ಪಗೆ ಕೂರುವಂತೆ ಮಾಡಬೇಕಾದ ಈ ಶಿಕ್ಷಕ ವೃತ್ತಿಯ ಕೆಲ ಕ್ಷಣಗಳ ಬಗ್ಗೆ ಒಮ್ಮೊಮ್ಮೆ ಬೇಸರ ಮೂಡುತ್ತದೆ.
ಶಾಲಾ ಮಕ್ಕಳ ಜೊತೆಗಿನ ಅನುಭವದ ಕುರಿತು ಆಶಾ ಜಗದೀಶ್‌ ಪ್ರಬಂಧ ನಿಮ್ಮ ಓದಿಗೆ

ಒಮ್ಮೆ ಶಾಲೆಯಲ್ಲಿ ಮಾಂಸಾಹಾರಿ ಮತ್ತು ಸಸ್ಯಾಹಾರಿ ಪ್ರಾಣಿಗಳ ಬಗ್ಗೆ ಪಾಠ ನಡೆಯುತ್ತಿತ್ತು. ಮಕ್ಕಳಿಗೆ ನಿಮಗೆ ತಿಳಿದಿರುವ ಸಸ್ಯಾಹಾರಿ ಪ್ರಾಣಿಗಳನ್ನು ಹೆಸರಿಸಿ ಎಂದು ಕೇಳಿದೆ. ಆಗ ಮಕ್ಕಳು ಜಿಂಕೆ, ಕುರಿ, ಮೇಕೆ, ಹಸು… ಅಂತೆಲ್ಲಾ ಹೆಸರಿಸತೊಡಗಿದರು. ಆಗ ಸುಹಾಸ ಎದ್ದು ನಿಂತು ಮಿಸ್ ಮಿಸ್ ಅನ್ನತೊಡಗಿದ. ಏನಪ್ಪಾ ಎಂದು ಕೇಳಿದಾಗ, ‘ಮಿಸ್ ನಾನು ಒಂದು ಕುರಿ ಸಾಕಿದ್ದೆ ಮಿಸ್’ ಅಂತ ತನ್ನ ಕತೆ ಶುರುಮಾಡಿದ. “ಮಿಸ್ ನಮ್ಮನೇಲಿ ಮೂವತ್ತು ಕುರಿಗಳಿದಾವೆ, ನಾನು ಒಂದ್ಸಾರಿ ನನ್ನ ಹತ್ರ ಇದ್ದ ಪಾಕೆಟ್ ಮನೆಯಲ್ಲಿ ಒಂದು ಸಣ್ಣ ಕುರಿಮರಿಯನ್ನ ಕೊಂಡ್ಕೊಂಡಿದ್ದೆ ಮಿಸ್, ಅದನ್ನ ನಾನೇ ಚೆನ್ನಾಗಿ ಬೆಳ್ಸಿದ್ದೆ ಮಿಸ್. ಅದು ದೊಡ್ಡದಾದ ಮೇಲೆ ಅದುನ್ನ ನಾಲ್ಕು ಸಾವಿರಕ್ಕೆ ಮಾರಿದ್ದೆ, ಅದರಿಂದ ಬಂದ ದುಡ್ಡಲ್ಲಿ ನಮ್ಮಪ್ಪಗೇಳಿ ಸೈಕಲ್ ಕೊಡಿಸ್ಕೊಂಡಿದ್ದೆ ಮಿಸ್” ಅಂದ. ನನಗೋ ಆಶ್ಚರ್ಯವೋ ಆಶ್ಚರ್ಯ. ಈ ಮಧ್ಯಮ ವರ್ಗದ ಮನೆಗಳಲ್ಲಿ ಮಕ್ಕಳಿಗೆ ದುಡ್ಡು ಎಲ್ಲಿಂದ ಬರುತ್ತದೆ ಗೊತ್ತಿಲ್ಲ, ಕೊಟ್ಟರೆ ಖರ್ಚು ಮಾಡುವುದು ಮಾತ್ರ ಗೊತ್ತು. ಅಂಥದ್ದರಲ್ಲಿ ಹಳ್ಳಿಗಳಿಂದ ಅದರಲ್ಲೂ ಬಡತನವೇ ತುಂಬಿ ತುಳುಕುತ್ತಿರುವ ಮನೆಗಳಿಂದ ಬರುವ ಈ ಮಕ್ಕಳು ಇಷ್ಟು ಸಣ್ಣ ವಯಸ್ಸಿನಲ್ಲಿ ಅದೆಷ್ಟು ವ್ಯವಹಾರ ಜ್ಞಾನ ಹೊಂದಿರುತ್ತಾರಲ್ಲ ಅನಿಸಿ ಖುಷಿಯಾಯಿತು.

ಮತ್ತೊಮ್ಮೆ ಹೀಗೆ ತರಗತಿಯಲ್ಲಿ ಜೀರ್ಣಾಂಗವ್ಯೂಹದ ಬಗ್ಗೆ ಪಾಠ ಮಾಡುತ್ತಿರುವಾಗ ಮಾನವ ಜೀರ್ಣಾಂಗ ವ್ಯೂಹಕ್ಕಿಂತ ಹಸುವಿನ ಜೀರ್ಣಾಂಗ ವ್ಯೂಹ ಭಿನ್ನವಾಗಿರುತ್ತದೆ. ಹಸುವಿನ ಜೀರ್ಣಾಂಗ ವ್ಯೂಹದೊಳಗೆ ರುಮೆನ್ ಮತ್ತು ಸೀಕಮ್ ಎನ್ನುವ ಎರಡು ವಿಶಿಷ್ಟ ಭಾಗಗಳು ಇರುತ್ತವೆ ಎಂದು ತಿಳಿಸಿಯಾದ ಮೇಲೆ, ಮೆಲುಕು ಹಾಕುವ ಪ್ರಾಣಿಗಳಿಗೂ ಮೆಲುಕು ಹಾಕದ ಪ್ರಾಣಿಗಳಿಗೂ ಇರುವ ವ್ಯತ್ಯಾಸಗಳೇನು ಎಂದು ಕೇಳಿದೆ. ಮಕ್ಕಳು ಈ ಪ್ರಶ್ನೆಗೆ ಉತ್ತರ ಹೇಳುವರೆನ್ನುವ ಅಂದಾಜೂ ಸಹ ನನಗಿರಲಿಲ್ಲ. ಅವರಿಂದ ಹೇಗೂ ಉತ್ತರ ಬರುವುದಿಲ್ಲ ನಾನೇ ನಂತರ ವಿವರಿಸಿದರೆ ಆಯ್ತು ಎನ್ನುವುದು ನನ್ನ ಎಣಿಕೆಯಾಗಿತ್ತು. ಆದರೆ ನನ್ನ ಎಣಿಕೆ ತಪ್ಪಾಗಿತ್ತು. “ಮಿಸ್ ಅವು ಹುಲ್ಲನ್ನ ಅರ್ಧಂಬರ್ಧ ಜಗಿದು ದವಡೆಯಲ್ಲೇ ಇಟ್ಕಂಡಿರ್ತವೆ, ಆಮೇಲೆ ಇಡೀ ದಿನ ಮೆಲುಕು ಹಾಕ್ತಾ ಹಾಕ್ತಾ ಚನ್ನಾಗಿ ಅಗೆದು ತಿನ್ನುತ್ತವೆ ಮಿಸ್” ಎಂದರು. ನನ್ನ ಉತ್ತರ ಸಹ ಇದೇ ಆಗಿತ್ತು, ಹಾಗಾಗಿ ನನಗೆ ಖುಷಿಯಾಯಿತು. ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. “ಮಿಸ್ ಹಸುಗಳು ಹುಷಾರಿಲ್ಲ ಅಂದ್ರೆ ಮೆಲುಕು ಹಾಕಲ್ಲ ಮಿಸ್. ಯಾವ್ದಾದ್ರು ಹಸು ಮೆಲುಕು ಹಾಕದೆ ಹಾಗೇ ಬಿದ್ಕೊಂಡಿದ್ರೆ ಅವುಕ್ಕೆ ಅರಾಮಿಲ್ಲ ಅಂತನೇ ಅರ್ಥ ಮಿಸ್. ಅವಾಗ ಮನೇಲಿ ದೊಡ್ಡೋರು ಅವನ್ನ ದನಗಳ ಆಸ್ಪತ್ರೆಗೆ ಕರ್ಕೊಂಡು ಹೋಗ್ತಾರೆ ಮಿಸ್. ಮೊನ್ನೆ ನಮ್ಮೂರಲ್ಲಿ ಹೀಗೇ ಒಂದು ದನ ಮೆಲುಕು ಹಾಕುವುದನ್ನೇ ಬಿಟ್ಟುಬಿಟ್ಟಿತ್ತು ಮಿಸ್. ಆಮೇಲೆ ಆ ಹಸು ಸತ್ತೇ ಹೋಯ್ತು” ಎಂದರು. ಅವರ ಈ ಎಕ್ಸ್ಟ್ರಾ ಇನ್ಫರ್ಮೇಶನ್ ಕೇಳಿ ನಾನೇ ಸುಸ್ತು ಹೊಡೆದೆ. ಕೃಷಿಕ ಕುಟುಂಬದಿಂದ ನಮ್ಮ ಸರ್ಕಾರಿ ಶಾಲೆಗೆ ಬರುವ ನಮ್ಮ ಮಕ್ಕಳಿಗೆ ಅದೆಷ್ಟು ವಿಷಯಗಳು ಗೊತ್ತಿರ್ತವೆ ಅಂದ್ರೆ ಎಷ್ಟೋ ಸಾರಿ ನಮಗೇ ಅದರ ಬಗ್ಗೆ ಕಿಂಚಿತ್ತೂ ಜ್ಞಾನವಿರುವುದಿಲ್ಲ. ಆದರೆ ಅವರ ಜ್ಞಾನಕ್ಕೆ ಮಿತಿ ಇರುವುದಿಲ್ಲ.

ಮಕ್ಕಳೇ ಹಾಗೆ. ಅವರ ಆಸಕ್ತಿ ಅದಮ್ಯ. ಮಕ್ಕಳೆಂದರೆ ಪುಟಿಯುವ ಪಾದರಸವಿದ್ದಂತೆ ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ. ನಮ್ಮ ಶಾಲೆಯ ಮಕ್ಕಳೂ ಹಾಗೇ. ಯಾವಾಗಲೂ ಏನಾದರೊಂದು ತುಂಟಾಟ ಮಾಡುತ್ತಲೇ ಇರುತ್ತಾರೆ. ಒಮ್ಮೆ ಸೀರಿಯಸ್ಸಾಗಿ ನೋಟ್ಸ್ ಕರೆಕ್ಷನ್ ಮಾಡುತ್ತಾ ಕುಳಿತಿದ್ದೆ. ಒಂದಷ್ಟು ಮಕ್ಕಳು ನನ್ನನ್ನು ಸುತ್ತುವರೆದು ನಿಂತಿದ್ದರು. ಹಾಗೇ ಸ್ಚಲ್ಪ ಹೊತ್ತು ಕಳೆದಿತ್ತು. ಆಗ ಇದ್ದಕ್ಕಿದ್ದಂತೆ ಜಗದೀಶ, ಜೋರು ಧ್ವನಿಯಲ್ಲಿ ಟೇಬಲ್ ಬಡಿಯುತ್ತಾ “ಚೆಲ್ಲಿದರೂ ಮಲ್ಲಿಗೆಯಾ… ಬಾಣಾಸೂರೇರೀ ಮ್ಯಾಲೆ…” ಅಂತ ಹಾಡತೊಡಗಿದ. ತಲೆ ಎತ್ತಿ ನೋಡಿದರೆ, ಅವ ಈ ಲೋಕದಲ್ಲಂತು ಇರಲಿಲ್ಲ. ನಾನವನನ್ನು ಪ್ರಶ್ನಾರ್ಥಕವಾಗಿ ದಿಟ್ಟಿಸಿ ನೋಡಿದೆ. ಇದ್ದಕ್ಕಿದ್ದಂತೆ ಅವ ಪೆಚ್ಚಾದ. ಮಕ್ಕಳೆಲ್ಲ ಗೊಳ್ ಎಂದು ನಗತೊಡಗಿದರು. ಅವನ ಹೃದಯ ಬಾಯಿಗೆ ಬಂದಿತ್ತು. ಬಹುಶಃ ಬೇರೆಯ ಹೊತ್ತಾಗಿದ್ದರೆ ನಾನೂ ಅವನೊಂದಿಗೆ ಸೇರಿ ಯುಗಳ ಗೀತೆ ಹಾಡುತ್ತಿದ್ದೆನೇನೋ. ಆದರೆ ಈಗಿನ ಸಂದರ್ಭ ಅದಕ್ಕೆ ಪೂರಕವಾಗಿರಲಿಲ್ಲವಾಗಿ ಅವನನ್ನು ಸುಮ್ಮನಿರಿಸಿ ತೆಪ್ಪಗೆ ಕೂರುವಂತೆ ಮಾಡಿದೆ. ಪಾಪ ಈ ಮಕ್ಕಳನ್ನ ತೆಪ್ಪಗೆ ಕೂರುವಂತೆ ಮಾಡಬೇಕಾದ ಈ ಶಿಕ್ಷಕ ವೃತ್ತಿಯ ಕೆಲ ಕ್ಷಣಗಳ ಬಗ್ಗೆ ಒಮ್ಮೊಮ್ಮೆ ಬೇಸರ ಮೂಡುತ್ತದೆ.

ಹಾಗಂತ ಶಿಕ್ಷಕರು ಶಿಕ್ಷೆಯನ್ನು ನೀಡಬಹುದು ಎಂದು ಯಾರಾದರೂ ಅಂದುಕೊಳ್ಳಬಾರದು. ಈಗಿನ ಕಾಲದ ಮಕ್ಕಳಿಗೆ ಹಿಂದಿನಂತೆ ಹೊಡೆಯುವ ಹಾಗಿಲ್ಲ. ಶಿಕ್ಷಕರಾಗುವ ಮೊದಲು ನಾವೆಲ್ಲ ಮನನ ಮಾಡಬೇಕಿರುವ ಮೊದಲ ಅಂಶವೇ ಇದು. ಮಕ್ಕಳ ಹಕ್ಕುಗಳು, ಶಿಕ್ಷಣದ ಹಕ್ಕು, ಮಕ್ಕಳ ಸಹಾಯವಾಣಿ, ಪೋಕ್ಸೋ ಕಾಯಿದೆ, ಬಾಲ ಕಾರ್ಮಿಕ ಕಾಯಿದೆ, ಆರ್ಟಿಕಲ್ಸ್ 45, 22 ಹೀಗೆ ಎಪ್ಪತ್ತಾರು ಕಾನೂನುಗಳಿವೆ. ಶಿಕ್ಷಕರು ಕೆಮ್ಮಿದರೆ ತಪ್ಪು, ಕ್ಯಾಕರಿಸಿದರಂತೂ ಅಪರಾಧವೇ. ಇದನ್ನೆಲ್ಲ ತಿಳಿದಿರುವ ಮಕ್ಕಳು, ನಿಜಕ್ಕೂ ಬಾಲವಿಲ್ಲದ ಕೋತಿಗಳೇ ಸೈ. ಕೋಪ ಮೂಗಿನ ತುದಿಗೆ ಬಂದು ತೊಟ್ಟಿಕ್ಕುತ್ತಿದ್ದರೂ, ಅದನ್ನು ಯಾರಿಗೂ ಕಾಣದಂತೆ ಒರೆಸಿಕೊಂಡು ಮುಖದ ಮೇಲೆ ಕೃತಕ ನಗುವನ್ನು ಲೇಪಿಸಿಕೊಂಡು, “ಹಾಗೆಲ್ಲ ಮಾಡಬಾರದಪ್ಪಾ, ಹೀಗೆಲ್ಲಾ ಮಾಡಬಾದಪ್ಪಾ” ಎನ್ನುತ್ತಾ ಓಲಾಡುತ್ತಿರುವ ಬಿಪಿಯನ್ನು ಹಿಡಿತಕ್ಕೆ ತಂದುಕೊಳ್ಳುವುದು ಶಿಕ್ಷಕರಿಗೂ ಹರ ಸಾಹಸವೇ.

ಅದೇನೇ ಇರಲಿ ಮಕ್ಕಳು ಮತ್ತು ಶಿಕ್ಷಕರ ಬಾಂಧವ್ಯ ನಿಜಕ್ಕೂ ಅಪೂರ್ವವಾದದ್ದು. ಒಬ್ಬ ಶಿಕ್ಷಕನನ್ನು ಮಗು ನಂಬುತ್ತದಲ್ಲ ಅದಕ್ಕಿಂತ ದೊಡ್ಡ ಗೌರವ, ಪದವಿ ಆ ಶಿಕ್ಷಕನಿಗೆ ಬೇರೇನೂ ಇರಲು ಸಾಧ್ಯವೇ ಇಲ್ಲ. ಒಂದು ಮಗುವಿಗೆ ತನ್ನ ಎಲ್ಲ ಸಮಸ್ಯೆಗಳಿಗೂ ತನ್ನ ಶಿಕ್ಷಕನಲ್ಲಿ ಉತ್ತರವಿದೆ ಎನಿಸಿಬಿಟ್ಟರೆ ಸಾಕು ಯಾವ ಮಕ್ಕಳೂ ತಮ್ಮ ಜೀವನದಲ್ಲಿ ಸೋಲು ಎನ್ನುವುದನ್ನೇ ಕಾಣಲಾರರು. ಹಾಗೆಯೇ ಪೋಷಕರೂ ಸಹ ಈ ಬಾಂಧವ್ಯವನ್ನ ಕಾಪಿಡುವ ಜವಾಬ್ದಾರಿಯನ್ನು ಅರಿತಿರಬೇಕು. ಮಕ್ಕಳ ಗುರುವಿನ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಒಮ್ಮೆ ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಶಿಕ್ಷಕರೊಬ್ಬರು ಗಣಿತದ ಲೆಕ್ಕ ಹೇಳಿಕೊಡುತ್ತಿರುವಾಗ ಕೋಪದ ಭರದಲ್ಲಿ ಲೆಕ್ಕವನ್ನು ಮಾಡದ ಮಗುವೊಂದಕ್ಕೆ ಸರಿಯಾಗಿ ಹೊಡೆದುಬಿಟ್ಟಿದ್ದಾರೆ. ಮರುದಿನ ಶಾಲೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದುಹೋಯಿತು. ಆ ಮಗುವಿನ ಕುಡುಕ ಅಪ್ಪ ಅಮ್ಮ ಬಂದವರೇ ಅವಾಚ್ಯ ಶಬ್ದಗಳಿಂದ ಆ ಶಿಕ್ಷಕರನ್ನು ನಿಂದಿಸಿ, ವಾಚಾಮಗೋಚರ ಬೈದರು. ಯಾರೂ ಇಲ್ಲದೇ ಹೋಗಿದ್ದಿದ್ದರೆ ಮ್ಯಾನ್ ಹ್ಯಾಂಡ್ಲಿಂಗ್ ಸಹ ನಡೆದಿರುತ್ತಿತ್ತೇನೋ. ಮುಖ್ಯಶಿಕ್ಷಕರು ಮತ್ತು ಇತರ ಪೋಷಕರ ಮಧ್ಯಸ್ಥಿಕೆಯಿಂದ ಅದು ತಪ್ಪಿತ್ತು.

ಆ ಶಿಕ್ಷಕರಾದರೂ ಬಹಳ ಸಭ್ಯ ಮನುಷ್ಯ. ನಿಜಕ್ಕು ಪಾಪದವರು. ಯಾವ ಅಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ಕೆಲಸಮಾಡುವಂಥವರು. ಅಂತಹ ಮನುಷ್ಯ ಒಂದು ಕ್ಷಣ ಕೋಪದ ಕೈಗೆ ಬುದ್ಧಿ ಕೊಟ್ಟದಕ್ಕೆ ಈ ಮಟ್ಟಿಗಿನ ಬಲೆ ತೆರಬೇಕಾಗಿ ಬಂದದ್ದು ಎಲ್ಲರಿಗೂ ನೋವಿನ ಸಂಗತಿಯಾಗಿತ್ತು. ಕೊನೆಗೆ ಆ ಶಿಕ್ಷಕರು ಏನನ್ನೋ ನಿರ್ಧಾರ ಮಾಡಿದವರಂತೆ ಎದ್ದು ಶಾಲಾ ಆವರಣದಲ್ಲಿದ್ದ ಗಣೇಶನ ಗುಡಿ ಮುಂದೆ ಬಂದು ನಿಂತು ತಮ್ಮ ಮಕ್ಕಳ ಮೇಲೆ ಪ್ರಮಾಣ ಮಾಡಿ, ತಾನು ಇನ್ಯಾವತ್ತೂ ಯಾವ ಮಕ್ಕಳನ್ನೂ ಹೊಡೆಯುವುದಿಲ್ಲ ಎಂದು ಆಣೆ ಮಾಡಿ ಹೊರಟೇ ಹೋದರು. ಆ ಘಟನೆಯಿಂದಾದ ಕಹಿಯಿಂದ ಹೊರ ಬರಲು ಆ ಶಿಕ್ಷಕರಿಗೆ ಅದೆಷ್ಟೋ ತಿಂಗಳುಗಳೇ ಬೇಕಾದವು. ಈ ಘಟನೆಯಾನಂತರ ಆ ಶಿಕ್ಷಕರು ಆ ಮಗುವನ್ನು ಮಾತಾಡಿಸುವುದಿರಲಿ ಕಣ್ಣೆತ್ತಿ ನೋಡಲೂ ಅಂಜುತ್ತಿದ್ದರು. ಇದರಿಂದ ಏನಾಯಿತು?! ಆ ಮಗು ಸುಮ್ಮನೇ ಶಾಲೆಗೆ ಬಂದು ತರಗತಿಯ ಮೂಲೆಯಲ್ಲಿ ಆರಾಮಾಗಿ ಕೂತು ಮನೆಗೆ ಹೋಯಿತು. ಈ ಕತೆಯ ಸಾರಾಂಶ ಏನು ಹೇಳಿ?! ಶಿಕ್ಷಕರನ್ನು ಅವಮಾನಿಸುವ ಮತ್ತು ನಮ್ಮ ಮುದ್ದು ಪ್ರೀತಿಯ ಹೆಚ್ಚುಗಾರಿಕೆಯನ್ನು ಪ್ರದರ್ಶಿಸುವ ಭರದಲ್ಲಿ ಮಗುವಿನ ಕಲಿಕೆಯನ್ನು ಮತ್ತು ಶಿಕ್ಷಕರ ಆತ್ಮವಿಶ್ವಾಸವನ್ನು ಹಾಳುಮಾಡುವುದು ಎಷ್ಟರ ಮಟ್ಟಿಗೆ ಸರಿ?! ಶಿಕ್ಷಕರಾದವರೂ ಕೋಪದ ಕೈಗೆ ಬುದ್ಧಿ ಕೊಡುವ ಮುನ್ನ ಸ್ವಲ್ಪ ಆಲೋಚಿಸುವಂತಾದರೆ?! ಕೋಪವನ್ನೇ ನಿಯಂತ್ರಣದಲ್ಲಿಟ್ಟರೆ?!

ಕೋಪ ಮೂಗಿನ ತುದಿಗೆ ಬಂದು ತೊಟ್ಟಿಕ್ಕುತ್ತಿದ್ದರೂ, ಅದನ್ನು ಯಾರಿಗೂ ಕಾಣದಂತೆ ಒರೆಸಿಕೊಂಡು ಮುಖದ ಮೇಲೆ ಕೃತಕ ನಗುವನ್ನು ಲೇಪಿಸಿಕೊಂಡು, “ಹಾಗೆಲ್ಲ ಮಾಡಬಾರದಪ್ಪಾ, ಹೀಗೆಲ್ಲಾ ಮಾಡಬಾದಪ್ಪಾ” ಎನ್ನುತ್ತಾ ಓಲಾಡುತ್ತಿರುವ ಬಿಪಿಯನ್ನು ಹಿಡಿತಕ್ಕೆ ತಂದುಕೊಳ್ಳುವುದು ಶಿಕ್ಷಕರಿಗೂ ಹರ ಸಾಹಸವೇ.

ಕೆಲಸದ ಹೊರತಾಗಿಯೂ ಏನೆಲ್ಲಾ ಮಾಡುವ ಶಿಕ್ಷಕರ ಬಗ್ಗೆ ಸಮಾಜಕ್ಕಾದರೂ ಒಳ್ಳೆಯ ಅಭಿಪ್ರಾಯವಿದೆಯಾ?! ಅದೂ ಇಲ್ಲ. ಶಿಕ್ಷಕರೆಂದರೆ ಸುಮ್ಮನೇ ಕೂತು ತಿನ್ನುವವರು, ಬೇಸಿಗೆ ರಜೆ, ದಸರಾ ರಜೆ, ಹಬ್ಬಗಳ ರಜೆ ಅಂತ ನಾನಾ ಬಗೆಯ ರಜೆಗಳನ್ನು ಪಡೆಯುವವರು ಅಂತೆಲ್ಲಾ ಅಸಡ್ಡೆ. ಒಮ್ಮೆ ಒಂದು ಅಂಗಡಿಯಲ್ಲಿ ಪ್ಲಾಸ್ಟಿಕ್ ಬಕೆಟ್ ಕೊಳ್ಳಲು ಹೋಗಿದ್ದೆ. ಆಗ ಅಂಗಡಿಯವನು “ಮೇಡಮ್ ನೋಡಿ, ಇದು ಒಳ್ಳೇ ಕ್ವಾಲಿಟಿಯದಿದೆ, ಬಾಳಿಕೆಯೂ ಬರುತ್ತದೆ” ಎಂದ. ಮತ್ತೊಂದು ತೋರಿಸಿ “ಇದು ನೋಡಿ, ಇದು ನಾನ್ ಬ್ರೇಕಬಲ್. ನೀವೇ ಇದರ ಮೇಲೆ ನಿಂತು ಡ್ಯಾನ್ಸ್ ಮಾಡಿದರೂ ಇದು ಮುರಿಯುವುದಿಲ್ಲ” ಎಂದ. ನಾನು, “ಅದು ಬೇಡ ಬಿಡಿ, ನನಗೆ ಡ್ಯಾನ್ಸ್ ಬರುವುದಿಲ್ಲ…” ಅಂತ ಹೇಳಬೇಕೆನಿಸಿದರೂ, “ಇರಲಿ ಬಿಡಿ ನಮಗೆ ಬ್ರೇಕಬಲ್ಲೇ ಇರಲಿ, ಮುರಿದರೆ ಮತ್ತೆ ಹೊಸದು ಕೊಳ್ಳಬಹುದು. ಈ ನಾನ್ ಬ್ರೇಕಬಲ್ ಗಳು ಬಣ್ಣ ಮಾಸಿಹೋದರೂ ಮುರಿಯುವುದಿಲ್ಲ. ಇದನ್ನು ಇಟ್ಟುಕೊಂಡು ಹೊಸದನ್ನು ತರಲು ಮನಸೂ ಬರುವುದಿಲ್ಲ. ಹಾಗಾಗಿ ಬೇಡ” ಎಂದೆ. ಯಸ್ ಮೇಡಮ್ ಸರ್ಯಾಗಿ ಹೇಳಿದ್ರಿ. ಈ ನಾನ್ ಬ್ರೇಕಬಲ್ ತಗೊಂಡು ಹೋಗೋ ಮೆಂಟಾಲಿಟಿ ಎಲ್ಲ ಮೇಷ್ಟ್ರುಗಳ ಮೆಂಟಾಲಿಟಿ ಮೇಡಮ್. ತಗೊಂಡು ಹೋಗಿ ಹತ್ತು ವರ್ಷವಾದ್ರೂ ಅದನ್ನೇ ಬಳಸ್ತಿರ್ತಾರೆ” ಅಂದ. ಅಷ್ಟಕ್ಕೆ ಮುಗಿಸದೆ “ಈ ಬಸ್‌ಗಳಲ್ಲಿ ಒಂದು ರೂಪಾಯಿ ಚೇಂಜನ್ನು ಸಹ ಬಿಡದೆ ಯಾರಾದ್ರೂ ಕಂಡಕ್ಟರ್ ಹತ್ರ ಕೇಳಿ ಇಸ್ಕೊತಿದಾರೆ ಅಂದ್ರೆ, ಡೌಟೆ ಬೇಡ ಮೇಡಮ್ ಅವ್ರು ಟೀಚರ್ರೇ ಆಗಿರ್ತಾರೆ” ಎನ್ನುತ್ತಾ ಗೊಳ್ ಎಂದು ನಕ್ಕ. ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಎನ್ನುವ ಹಾಗಿತ್ತು ನನ್ನ ಸ್ಥಿತಿ. ಉಗುಳುವಂತಿಲ್ಲ ನುಂಗುವಂತಿಲ್ಲ. ಕೊನೆಗೆ ಅಷ್ಟೆಲ್ಲಾ ಮಂಗಳಾರತಿ ಎತ್ತಿದ ಅವನಿಂದ ಬಕೆಟ್ ಕೊಳ್ಳಲು ಮನಸಾಗದೆ ನಯವಾಗಿ “ಬಕೆಟ್ ಕಲರ್ಸ್ ಯಾಕೋ ಇಷ್ಟ ಆಗ್ತಿಲ್ಲ. ನೆಕ್ಸ್ಟ್ ವೀಕ್ ಮತ್ತಷ್ಟು ತರಿಸಿ ಬರ್ತೀನಿ” ಅಂತ ಹೇಳಿ ಹೊರಟು ಬಂದೆ.

ಮತ್ತೊಮ್ಮೆ ಹೀಗೇ ಬಸ್ಸಿನಲ್ಲಿ ಯಾರೋ ಒಬ್ಬ ಟೀಚರ್ ಯಾವುದೋ ಸ್ಟಾಪಿನಲ್ಲಿ ಇಳಿಯುತ್ತೇನೆಂದು ಟಿಕೆಟ್ ಪಡೆದಿದ್ದಾರೆ. ಆದರೆ ಸ್ಟಾಪ್ ಬಂದಾಗ ಇಳಿಯದೆ, ಬಸ್ ಸ್ವಲ್ಪ ಮುಂದೆ ಬಂದ ಮೇಲೆ ಸ್ಟಾಪ್ ಕೊಡಿ ಎಂದು ಒತ್ತಾಯಿಸತೊಡಗಿದ್ದಾರೆ. ಕಂಡಕ್ಟರ್ ಇಲ್ಲವೇ ಇಲ್ಲ ಎಂದಾಗ ದಬಾಯಿಸತೊಡಗಿದ್ದಾರೆ. ಈಗ ಕಡಕ್ಟರನಿಗೆ ಕೋಪ ನೆತ್ತಿಗೇರಿ, “ಹತ್ತಬೇಕಾದ್ರೆ ಮೆತ್ತಗೆ ಹತ್ತುತ್ತೀರಾ, ಇಳಿಬೇಕಾದ್ರೆ ದಬಾಯಿಸಲು ಶುರುಮಾಡ್ತೀರಾ?! ಭಾರೀ ಜನಾ ಕಣ್ರೀ ನೀವು.. ನಿಮ್ಗೆ ದುಡ್ಡೂ ಕಡಿಮೆ ಆಗ್ಬೇಕು, ಬೇಕಿರೋ ಜಾಗದಲ್ಲಿ ಸ್ಟಾಪೂ ಕೊಡ್ಬೇಕು…” ಅಂತ ಬಯ್ಯತೊಡಗಿದೆ. ಆ ಟೀಚರ್ ಸಹ ಏನೇನೋ ಬಡಬಡಿಸುತ್ತಾ ಇಳಿದರು. ಬಸ್ ಚೂರು ಮುಂದೆ ಹೋದರೂ ಕಂಡಕ್ಟರನ ಆವೇಶ ಕಡಿಮೆ ಆಗಿರಲಿಲ್ಲ. ಅದಕ್ಕೆ ಉಪ್ಪು ಸುರಿಯುವವನಂತೆ, ನನ್ನ ಪಕ್ಕವೇ ಕುಳಿತಿದ್ದವನೊಬ್ಬ, “ಹೌದು ನೋಡಿ ಈ ಟೀಚರ್‌ಗಳೇ ಇಷ್ಟು” ಎನ್ನುವುದೇ… ಅಲ್ಲ ಈ ಥರ ಬೇರೆ ಯಾವ ಪ್ಯಾಸೆಂಜರ್ಸೂ ಮಾಡೋದೇ ಇಲ್ಲವೇ?! ಈ ಒಬ್ಬ ಟೀಚರ್ ಹೀಗೆ ಮಾಡಿದ್ರು ಅಂತ ಇಡೀ ಟೀಚರ್ಸ್ ಸಮೂಹವೇ ಹೀಗೆ ಅಂತ ಹೇಳುವುದು ಅತ್ಯಂತ ಡ್ಯಾಮೇಜಿಂಗ್ ಸ್ಟೇಟ್ಮೆಂಟ್ ಆಗುವುದಿಲ್ಲವಾ… ಅನ್ನಿಸಿ ಯೋಚನೆ ಮಾಡತೊಡಗಿದೆ. ಅಲ್ಲಾ ನಾವು ಶಿಕ್ಷಕರು ಅದೇನು ಮಾಡಿರ್ತೀವಿ ಇವರಿಗೆ ಅಂತ. ನ್ಯಾಯವಾಗಿ ದುಡಿದು ಬರೋ ಸಂಬಳದಲ್ಲಿ ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ಬದುಕು ನಡೆಸುತ್ತೇವೆ. ನಾವು ಮುಖ್ಯರೂ ಅಲ್ಲ, ಅಮುಖ್ಯರೂ ಅಲ್ಲ. ಯಾವತ್ತೋ ಒಂದು ದಿನ ಆದ್ರೆ ಒಂದಲ್ಲ ಹತ್ತು ರೂಪಾಯಿ ಬೇಕಾದ್ರೂ ಬಿಟ್ಟು ಇಳಿಯಬಹುದು. ದಿನಾ ಹತ್ತಿ ಇಳಿಯೋ ಟೀಚರ್ಸ್ ರೂಪಾಯಿನೂ ಲೆಕ್ಕ ಇಟ್ಟರೆ ತಪ್ಪೇನು? ದುಬಾರಿ ಕಾಯಿಲೆಗಳು ಬರದೆ ಹೋದರೆ, ಮಕ್ಕಳು ಚೆನ್ನಾಗಿ ಓದಿಕೊಂಡರೆ ಮಾತ್ರ ಒಂದು ಮಟ್ಟಿಗೆ ಜೀವನ ನಡೆಯುತ್ತದೆ. ಇಲ್ಲವಾದರೆ ಯಾವುದಕ್ಕೂ ಹಣವಿಲ್ಲದೆ ಒದ್ದಾಡುವ ಅದೆಷ್ಟು ಶಿಕ್ಷಕರನ್ನು ನಾವು ನೋಡಿಲ್ಲ. ಇದು ಯಾಕೆ ಯಾರಿಗೂ ಅರ್ಥವಾಗಲ್ಲ…

ನನ್ನ ತರಗತಿಯಲ್ಲಿ ಪುಟ್ಟ ದೇವತೆಯಂತಹಾ ಮಗುವೊಂದಿದೆ. ಅವಳೊಂದು ಮುದ್ದು ಹುಡುಗಿ. ಹನ್ನೆರೆಡು ವರ್ಷದ ಹುಡುಗಿಯಾದರೂ ಅವಳ ಆಟ ಪಾಠಗಳೆಲ್ಲ ಸಣ್ಣ ಮಗುವಿನಂತೆ. ನೋಡಲಿಕ್ಕೂ ಪುಟ್ಟ ಗೊಂಬೆಯೇ ಅವಳು. ಅವಳ ಮಾತು ನಗು ತುಂಟತನ ಎಲ್ಲವೂ ಚಂದ. ಪ್ರತಿನಿತ್ಯ ತಪ್ಪಿಸದೆ ಶಾಲೆಗೆ ಬರುತ್ತಾಳೆ. ಯಾರಿಗೂ ತೊಂದರೆ ಕೊಡದೆ ಕೂತಿರುತ್ತಾಳೆ. ಪಾಠ ಅವಳಿಗೆ ಅರ್ಥವಾಗುವುದಿಲ್ಲ. ಅಕ್ಷರಗಳನ್ನು ಮಾತ್ರ ಕಲಿತಿದ್ದಾಳೆ. ಆದರೆ ಕೆಲವೊಮ್ಮೆ ಅವಳು ಮಾಡುವ ತುಂಟಾಟಗಳು ಇಡೀ ತರಗತಿಯನ್ನೇ ನಗೆಗಡಲಲ್ಲಿ ತೇಲಿಸಿಬಿಡುತ್ತವೆ. ಒಮ್ಮೆ ಅವಳು ಒಂದು ಸುಂದರವಾದ ಬೊಂಬೆ ತಂದಿದ್ದಳು. ಇದರಿಂದ ತರಗತಿಯಲ್ಲಿ ಜೋರು ಗಲಾಟೆ. ಎಲ್ಲರಿಗೂ ಅದರ ಕಡೆಯೇ ಲಕ್ಷ್ಯ. “ಹಾಗೆಲ್ಲ ಗೊಂಬೆಯನ್ನು ಶಾಲೆಗೆ ತರಬಾರದು ಆಯ್ತಾ. ಕೊಡು ಅದನ್ನ ಎತ್ತಿಟ್ಟಿರ್ತೀನಿ. ನಂತರ ಮನೆಗೆ ಹೋಗುವಾಗ ಕೊಡ್ತೀನಿ…” ಎಂದರೂ ಕೇಳಲಿಲ್ಲ ಅವಳು. “ಊ ಕೊಡಲ್ಲ ನಂದಿದು” ಎನ್ನುತ್ತಾ ಗೊಂಬೆಯನ್ನು ಮತ್ತಷ್ಟು ಎದೆಗೆ ಒತ್ತಿಕೊಂಡು ಕೂತಳು. ಮತ್ತೊಂದು ದಿನ ಅದೇ ತರಗತಿಯ ಹುಡುಗನೊಬ್ಬ ವಾಶ್ ರೂಮಿಗೆ ಹೋದಾಗ ಇವಳು ಮೆತ್ತಗೆ ಹೊರಗಿನಿಂದ ಚಿಲಕ ಹಾಕಿ ಓಡಿ ಬಂದು ತರಗತಿಯಲ್ಲಿ ಕೂತುಬಿಟ್ಟಿದ್ದಾಳೆ. ಅವ ಅಲ್ಲಿ ಬೊಬ್ಬೆ ಹಾಕತೊಡಗಿದ್ದಾನೆ. ಇನ್ಯಾರೋ ಮಕ್ಕಳು ಅವನ ಧ್ವನಿ ಕೇಳಿ ಬಾಗಿಲು ತೆಗೆದಿದ್ದಾರೆ. ಕೊನೆಗೆ ಇವಳೇ ಆ ಕೆಲಸ ಮಾಡಿದ್ದು ಅಂತ ಗೊತ್ತಾದಾಗ ಬಯ್ಯಲೂ ಮನಸು ಬಾರದೆ ನಕ್ಕು ಸುಮ್ಮನಾಗಿದ್ದೆವು. ಅಂತಹ ಅವಳು ಒಮ್ಮೊಮ್ಮೆ ತಾನೇ ಟೀಚರ್ ಆಗಿ ಕೋಲು ಹಿಡಿದು ನಿಂತುಬಿಡುತ್ತಾಳೆ. ಒಮ್ಮೊಮ್ಮೆ ಪುಸ್ತಕದ ತುಂಬ ಗೀಚಿಕೊಂಡು ಕರೆಕ್ಷನ್ನಿಗೆ ಬರುತ್ತಾಳೆ. ಒಮ್ಮೊಮ್ಮೆ ಅದೆಂತಹಾ ನಗು ಬರುತ್ತದೆಯೋ ಅವಳಿಗೆ, ಅದೂ ಕಾರಣವೇ ಇಲ್ಲದೆ. ಒಮ್ಮೊಮ್ಮೆ ಸಣ್ಣ ಮಗುವಿನ ಹಾಗೆ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗುತ್ತಾಳೆ. ನಮ್ಮ ಕಣ್ಣುಗಳಿಗೆ ಅವಳು ಅದೆಷ್ಟು ಅಭ್ಯಾಸವಾಗಿಬಿಟ್ಟಿದ್ದಾಳೆ ಎಂದರೆ ಅವಳೊಂದು ದಿನ ಶಾಲೆಗೆ ಬಂದಿಲ್ಲವೆಂದರೆ ನಮಗೆಲ್ಲ ಎಂಥದೋ ಕಳೆದುಕೊಂಡ ಭಾವ…

ಮಕ್ಕಳೇ ಹಾಗೆ. ಅವರಿಗೆ ಮಾತ್ರವೇ ಅಷ್ಟೊಂದು ಪ್ರೀತಿಯನ್ನು ತುಂಬಿ ತುಂಬಿ ಕೊಡಲು ಸಾಧ್ಯ. ಮತ್ತದನ್ನು ಉಣ್ಣುವ ಅವಕಾಶ ನಮ್ಮದು. ಅಲ್ಲೊಂದು ಅವಿನಾಭಾವ ಸಂಬಂಧವಿರುತ್ತದೆ. ಇಂದಿಗೂ ಸಹ ನಮ್ಮ ಶಾಲೆಯಿಂದ ತೇರ್ಗಡೆ ಹೊಂದಿ ವರ್ಗಾಣೆಯಾಗಿರುವ ಹಿರಿಯ ವಿದ್ಯಾರ್ಥಿಗಳು ಸಮಯ ಸಿಕ್ಕರೆ ಸಾಕು ನಮ್ಮ ಶಾಲೆಯ ಬಳಿ ಓಡಿಬರುತ್ತಾರೆ. ನಮಗೂ ಸಹ ಅವರ ಮುಖ ಕಾಣುತ್ತಲೇ ಎಂಥದೋ ಸಂಭ್ರಮ, ಪ್ರೀತಿ, ಮಮಕಾರ. ಎಷ್ಟು ಚಂದ ಆ ಭಾವ… ಬೇವು ಬೆಲ್ಲದಂತಹ ಈ ವೃತ್ತಿ ಬದುಕಿನ ನಿಜ ಅರ್ಥವನ್ನು ಮನದಟ್ಟು ಮಾಡಿಸುತ್ತಾ ಸಾರ್ಥಕತೆ ಮೂಡಿಸುತ್ತಿರುವ ಈ ಹೊತ್ತಿನಲ್ಲಿ ಧನ್ಯತೆ ಹೃದಯವನ್ನು ತುಂಬಿಕೊಳ್ಳುತ್ತಿದೆ…